ಭಾರತದ ಸಸ್ಯಸಂಪತ್ತು

ಉತ್ತರ ಅಕ್ಷಾಂಶ 80-37’ ಮತ್ತು ಪೂರ್ವರೇಖಾಂಶ 680-98’ ವರೆಗೆ ವ್ಯಾಪಿಸಿರುವ ಭಾರತದ ಸಸ್ಯಸಂಪತ್ತು ವಿಶಿಷ್ಟವಾದ್ದು ವೈವಿಧ್ಯಮಯವಾದ್ದು. ಹಿಮಾಲಯದ ಉನ್ನತ ಪರ್ವತ ಶ್ರೇಣಿಗಳ ವಲಯದಲ್ಲಿ ಶೀತವಲಯ ಹವೆ ಇದೆಯಾದರೆ ದೇಶದ ಉಳಿದ ಭಾಗಗಳಲ್ಲಿ ಉಷ್ಣವಲಯದ ವಿವಿಧತೆರನ ಹವೆ ಇದೆ. ಇಲ್ಲಿ ಚಿರಾಪುಂಜಿಯಂಥ ಅತ್ಯಂತ ಹೆಚ್ಚು ಮೊತ್ತದ ಮಳೆಬೀಳುವ ಪ್ರದೇಶವೂ ಉಂಟು, ಅತ್ಯಂತ ಕನಿಷ್ಠ ಮಳೆಬೀಳುವ ರಾಜಸ್ಥಾನದ ಮರುಭೂಮಿಯೂ ಉಂಟು. ಎಂದೇ ಸಸ್ಯಸ್ವರೂಪ ದೇಶದ ವಿಭಿನ್ನ ಭಾಗಗಳಲ್ಲಿ ವಿಭಿನ್ನರೀತಿಯದು.

ಭಾರತದ ವನಗಳ ಆವರಣ, ೨೦೧೫ ರ ವೇಳೆ

ಇತಿಹಾಸ

ಬದಲಾಯಿಸಿ

ಭಾರತ ಬಲು ಪ್ರಾಚೀನಕಾಲದಿಂದಲೂ ಸಸ್ಯಸಮೃದ್ಧಿಗೆ ಹೆಸರಾಗಿತ್ತು. ಸಸ್ಯಪಳೆಯುಳಿಕೆಗಳ ಆಧಾರದ ಮೇಲೆ ಸುಮಾರು 35-22 ಕೋಟಿ ವರ್ಷಗಳಷ್ಟು ಹಿಂದೆಯೇ ಭಾರತ ಅರಣ್ಯದಿಂದ ತುಂಬಿತ್ತೆಂದೂ ಈಗಿನ ಅಸ್ಸಾಮ್, ಬಂಗಾಳ, ಬಿಹಾರ ಪ್ರದೇಶಗಳೆಲ್ಲವೂ ಅನೇಕ ಬಗೆಯ ಸಸ್ಯಗಳಿಂದ ಕೂಡಿದ್ದವೆಂದೂ ಅಂದಾಜು ಮಾಡಲಾಗಿದೆ. ಸಿಂಧೂಬಯಲಿನ ಹರಪ್ಪ, ಮೊಹೆಂಜೋದಾರೋ ಸಂಸ್ಕೃತಿಯ ಕಾಲದಲ್ಲೂ (ಕ್ರಿ. ಪೂ. ಸು. 2500-1500) ಅರಣ್ಯ ಸಂಪತ್ತು ಚೆನ್ನಾಗಿಯೇ ಇತ್ತೆನ್ನಲಾಗಿದೆ. ಭಾರತದ ಕಾಡುಗಳು, ಸಸ್ಯಸಮೃದ್ಧಿಯ ಬಗ್ಗೆ ವೇದಗಳಲ್ಲಿ ರಾಮಾಯಣ ಮಹಾಭಾರತಗಳಲ್ಲಿ ಅಭಿಜ್ಞಾನ ಶಾಕುಂತಲ ಮುಂತಾದ ಸಾಹಿತ್ಯಕೃತಿಗಳಲ್ಲಿ ಉಲ್ಲೇಖಗಳಿವೆ. ಚಿತ್ರಕೂಟ, ದಂಡಕಾರಣ್ಯ, ಕಿಷ್ಕಿಂಧೆ, ನೈಮಿಷಾರಣ್ಯ, ಮಧುವನ-ಇವು ಅಂದಿನ ಅರಣ್ಯಪ್ರದೇಶಗಳ ಪೈಕಿ ಕೆಲವು. ಆ ಕಾಲದಲ್ಲಿ ಕಾಡುಗಳನ್ನು ಕುಂಜರವನ (ಆನೆಗಳಿಂದ ಕೂಡಿರುವ ದಟ್ಟಕಾಡು) ಮತ್ತು ಕಂಟಕವನ (ಮುಳ್ಳುಪೊದೆಗಳ ಕಾಡು) ಎಂಬ ಎರಡು ಬಗೆಯ ವನಗಳನ್ನಾಗಿ ವಿಂಗಡಿಸಲಾಗಿತ್ತು. ಮೌರ್ಯರ ಕಾಲದಲ್ಲಿ ಅರಣ್ಯಗಳನ್ನು ನೋಡಿಕೊಳ್ಳುವ ಪ್ರತ್ಯೇಕ ಅರಣ್ಯ ಇಲಾಖೆಯೇ ಇತ್ತು. ಅರಣ್ಯ ಇಲಾಖೆಯ ಮುಖ್ಯಸ್ಥನಿಗೆ ಕುಪ್ಯಾಧ್ಯಕ್ಷ ಎಂಬ ಹೆಸರಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಕ್ರಿ.ಪೂ.221) ಕುಪ್ಯಾಧ್ಯಕ್ಷನ ಹಾಗೂ ವನಪಾಲಕರ ಕರ್ತವ್ಯಗಳು ಮುಂತಾದವುಗಳ ಬಗ್ಗೆ ವಿವರಗಳಿವೆ. ಚೀನ ಯಾತ್ರಿಕ ಹ್ಯೂಯೆನ್‌ತ್ಸಾಂಗ್ ತನ್ನ ಭಾರತ ಪ್ರವಾಸಕಾಲದಲ್ಲಿ (ಕ್ರಿ.ಶ. 629-645) ಹಿಮಾಲಯದ ತಪ್ಪಲು, ಉತ್ತರಪ್ರದೇಶ, ಬಿಹಾರ, ಬಂಗಾಳ, ಅಸ್ಸಾಮ್‌ಗಳಲ್ಲಿ ದಟ್ಟಕಾಡುಗಳಿದ್ದುದನ್ನು ಕಂಡು ವಿವರಿಸಿದ್ದಾನೆ. ಕ್ರಿ.ಶ. 800 ರಿಂದ 1400ರ ತನಕ ಭಾರತದ ಸಸ್ಯಸಂಪತ್ತಿನ ಬಗ್ಗೆ ಹೆಚ್ಚಿನ ಏನೂ ವಿವರಗಳು ಸಿಕ್ಕುವುದಿಲ್ಲ.

ಭಾರತದ ಸಸ್ಯಗಳ ವೈಜ್ಞಾನಿಕ ಅಧ್ಯಯನ ಆರಂಭವಾದ್ದು ಹತ್ತೊಂಬತ್ತನೆಯ ಶತಮಾನದ ಮಧ್ಯದ ವೇಳೆಗೆ. ಇಂಗ್ಲೆಂಡಿನ ಸಸ್ಯವರ್ಗೀಕರಣ ತಜ್ಞ ಜೋಸೆಫ್ ಡಾಲ್ಟನ್ ಹೂಕರ್ (1817-1911) ಕಳೆದ ಶತಮಾನದ ಆದಿಯಲ್ಲಿ ಭಾರತಕ್ಕೆ ಬಂದು ಇಲ್ಲಿಯ ಗಿಡಮರಗಳ ಅನೇಕ ನಮೂನೆಗಳನ್ನು ಸಂಗ್ರಹಿಸಿ ಪರಿಶಿಲಿಸಿ 1872-97 ಅವಧಿಯಲ್ಲಿ ಫ್ಲೋರಾ ಆಫ್ ಬ್ರಿಟಿಷ್ ಇಂಡಿಯ ಎಂಬ ಗ್ರಂಥ ರಚಿಸಿ ಭಾರತದ ಸಸ್ಯಸಂಪತ್ತಿನ ವಿವರಕೊಟ್ಟರು. ಏಳು ಸಂಪುಟಗಳ ಈ ಗ್ರಂಥದಲ್ಲಿ ಸುಮಾರು 15,000 ಸಸ್ಯಗಳ ವಿವರಣೆ ಇದೆ. ಈ ಸಂಪುಟಗಳಲ್ಲಿ ಭಾರತ ಎನ್ನುವುದರ ಭೌಗೋಳಿಕ ವಿಸ್ತಾರ ಈಗಿನ ಭಾರತವಷ್ಟೇ ಅಲ್ಲದೆ ಬರ್ಮ ಮುಂತಾದ ನೆರೆಹೊರೆಯ ಪ್ರದೇಶಗಳನ್ನೂ ಒಳಗೊಂಡಿದೆ. ಏಳು ವರ್ಷಗಳ ತರುವಾಯ ಪ್ರಕಟವಾದ ಎ ಸ್ಕೆಚ್ ಆಫ್ ದಿ ಫ್ಲೋರ ಆಫ್ ಬ್ರಿಟಿಷ್ ಇಂಡಿಯ (1904) ಪುಸ್ತಕದಲ್ಲಿ ಸಸ್ಯಸಂಪತ್ತಿನ ವೈವಿಧ್ಯದ ದೃಷ್ಟಿಯಿಂದ ಭಾರತವನ್ನು ಪೂರ್ವ ಹಿಮಾಲಯ, ಪಶ್ಚಿಮ ಹಿಮಾಲಯ, ಸಿಂಧೂನದಿಯ ಮೈದಾನ ಪ್ರದೇಶ, ಗಂಗಾನದಿಯ ಮೈದಾನ ಪ್ರದೇಶ, ಮಲಬಾರ್ (ಪಶ್ಚಿಮ ಘಟ್ಟವೂ ಸೇರಿದಂತೆ), ಡೆಕನ್ ಪ್ರಸ್ಥಭೂಮಿ, ಸಿಲೋನ್-ಮಾಲ್ಡೀವ್ ದ್ವೀಪಗಳು, ಬರ್ಮ ಮತ್ತು ಮಲಯ ಪರ್ಯಾಯ ದ್ವೀಪ ಎಂಬ ಒಂಬತ್ತು ವಿಭಾಗಗಳಾಗಿ ಹೂಕರ್ ವಿಂಗಡಿಸಿದ್ದ.

ಸಸ್ಯವರ್ಗದ ಆಧಾರದ ಮೇಲೆ ವರ್ಗೀಕರಣ

ಬದಲಾಯಿಸಿ

ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸ್ವಾಭಾವಿಕ ಸಸ್ಯವರ್ಗದ ಆಧಾರದ ಮೇಲೆ ಈ ಮುಂದಿನಂತೆ ವಿಭಾಗಿಸಲಾಗಿದೆ:

  1. ಪಶ್ಚಿಮ ಹಿಮಾಲಯ
  2. ಪೂರ್ವ ಹಿಮಾಲಯ ಮತ್ತು ಅಸ್ಸಾಮ್ ಕ್ಷೇತ್ರ
  3. ಪಂಜಾಬ್ ಮೈದಾನ ಪ್ರದೇಶ
  4. ಗಂಗಾನದಿ ಮೈದಾನ ಪ್ರದೇಶ
  5. ರಾಜಸ್ಥಾನ ಮತ್ತು ಅಕ್ಕಪಕ್ಕದ ಮರುಭೂಮಿ ಪ್ರದೇಶ
  6. ಪಶ್ಚಿಮ ಘಟ್ಟ (ತಪತಿ ನದಿಯ ದಕ್ಷಿಣದಿಂದ ತೊಡಗಿ ಕೇರಳದ ತುದಿಯವರೆಗೆ)
  7. ಪೂರ್ವಘಟ್ಟ (ಮಹಾನದಿಯ ದಕ್ಷಿಣದಿಂದ ಹಿಡಿದು ತಮಿಳುನಾಡಿನ ತುದಿಯವರೆಗೆ)
  8. ದಖನ್ ಪ್ರಸ್ಥಭೂಮಿ (ವಿಂಧ್ಯಪರ್ವತ ಶ್ರೇಣಿಯ ದಕ್ಷಿಣಕ್ಕಿರುವ ಭಾಗ)
  9. ಕರಾವಳಿ ಪ್ರದೇಶ (ಪಶ್ಚಿಮ ಮತ್ತು ಪೂರ್ವ ಭಾಗಗಳ ಕರಾವಳಿಗಳು)
  10. ದ್ವೀಪಗಳ ಪ್ರದೇಶ (ಅಂಡಮಾನ್, ನಿಕೊಬಾರ್ ಹಾಗೂ ಲಕ್ಷದ್ವೀಪಗಳು)[]

ಮೇಲೆ ಹೇಳಿದ ಪ್ರದೇಶಗಳ ಸಸ್ಯವರ್ಗಗಳು ಈ ಮುಂದಿನಂತಿವೆ:

1. ಪಶ್ಚಿಮ ಹಿಮಾಲಯ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶದಲ್ಲಿರುವ (ನೇಪಾಳದ ಗಡಿಯವರೆಗೆ) ಹಿಮಾಲಯದ ಭಾಗಗಳನ್ನು ಇದು ಒಳಗೊಂಡಿದೆ. ಹಿಮಾಲಯದ ತಪ್ಪಲಿನಲ್ಲಿರುವ ತೆರಾಯ್ ಪ್ರದೇಶ ಪರ್ಣಪಾತಿ ವೃಕ್ಷಗಳ ಕಾಡಿನಿಂದ ಆವೃತವಾಗಿದೆ. ಜಮ್ಮು ಪ್ರಾಂತ್ಯದ ಪೂರ್ವಕ್ಕೆ ಬಿಹಾರ್, ಒರಿಸ್ಸವರೆಗೂ ಈ ತೆರನ ಕಾಡನ್ನು ಕಾಣಬಹುದು. ಇಲ್ಲಿಯ ಸಸ್ಯಗಳ ಪೈಕಿ ಅತಿ ಮುಖ್ಯವಾದ್ದು ಬಿಳೇಭೋಗಿ (ಸಾಲ್-ಶೋರಿಯ ರೊಬ್ಬಸ್ಟ). ಉಪಯುಕ್ತತೆಯ ಸೃಷ್ಟಿಯಿಂದಲೂ ಇದು ಬಹುಮುಖ್ಯ. ಇತರ ವೃಕ್ಷಗಳು ಶಿಷ್ಟಬಾಗೆ (ಶೇಷಮ್-ಡಾಲ್‌ಬರ್ಜಿಯ ಸಿಸ್ಸು). ಚೆನ್ನಂಗಿ (ಲ್ಯಾಗರ್‌ಸ್ಟ್ರೋಮಿಯ ಪಾರ್ವಿಫ್ಲೋರ), ಬೆಂಡೆಮರ (ಕೈಡಿಯ ಕ್ಯಾಲಿಸಿನ), ಮತ್ತಿಜಾತಿಯ ಮರಗಳು (ಟರ್ಮಿನೇಲಿಯ ಪ್ರಭೇದಗಳು) ಮತ್ತು ದಿಂಡಿಗ ಬಳ್ಳಿಗಳೂ ಇಲ್ಲುಂಟು. ಉದಾಹರಣೆಗೆ ಕಂಚವಾಳ ಜಾತಿಯ ಲತೆ (ಬಾಹಿನಿಯವಾಹ್ಲಿ). ಇಲ್ಲಿಯ ಚಿಕ್ಕಮರಗಳಲ್ಲಿ ಮುಖ್ಯವಾದುವು ಕುಂಕುಮದ ಮರ (ಮ್ಯಾಲೋಟಸ್ ಫಿಲಿಪೆನ್ಸಿಸ್) ಮತ್ತು ಕರಿಬೇವು (ಮರಯ ಕೀನಿಗೈ).

ಹಿಮಾಲಯ ಪರ್ವತಗಳ 1300-2000 ಮೀ ಎತ್ತರದ ಪ್ರದೇಶಗಳಿಗೆ ಬಾಹ್ಯವಲಯಗಳೆಂದು ಹೆಸರು. ಪೀತದಾರುವರ್ಗದ (ಕಾನಿಫರ್ಸ್) ಪೈನ್ ಕಾಡುಗಳು ಇಲ್ಲಿಯ ವಿಶೇಷ.[] ಪೈನ್ ಮರಗಳ ಪೈಕಿ ಇಲ್ಲಿ ಬೆಳೆಯುವಂಥದು ಹಿಮಾಲಯದ ಕೆಳಸ್ತರದ ಚೀರ್ ಪೈನ್ (ಪೈನಸ್ ರಾಕ್ಸೆಬರ್ಗಿಯೈ). ಇದು ಬಹಳ ಉಪಯುಕ್ತಮರ. ಇದರ ಚೌಬೀನೆ ಹಲವಾರು ರೀತಿಯಲ್ಲಿ ಬಳಕೆಗೆ ಒದಗುತ್ತದಲ್ಲದೆ ಇದರಿಂದ ಪಡಿಯಲಾಗುವ ರಾಳವಸ್ತು (ರೆಸಿನ್) ಟರ್ಪೆಂಟೈನ್ ತಯಾರಿಕೆಗೆ ಕಚ್ಚಾಸಾಮಗ್ರಿ. ಚೀರ್ ಪೈನಿನ ಜೊತೆಗೆ ಓಕ್ (ಮಾಚೀಕಾಯಿ) ಮತ್ತು ರೋಡೊಡೆಂಡ್ರಾನ್ ಸಸ್ಯಗಳೂ ಬಲು ಸಾಮಾನ್ಯ. ಇಲ್ಲಿಯ ಓಕ್ ಮರ ಬನ್ ಓಕ್ (ಕ್ವರ್ಕಸ್ ಲ್ಯೂಕೊಟ್ರೈಕೊಫೋರ) ಎಂದು ಪ್ರಸಿದ್ಧ. ಇದರ ಎಲೆಗಳ ತಳಭಾಗ ಬಿಳಿಬಣ್ಣದ್ದು. ಇಲ್ಲಿಯ ರೋಡೊಡೆಂಡ್ರಾನ್ ವೃಕ್ಷರೂಪಿ (ರೋ. ಆರ್ಬೋರಿಯಮ್); ಸುಂದರವಾದ ಕೆಂಪುಬಣ್ಣದ ಹೂಗಳಿಂದ ಕೂಡಿದ ಇದು ಬಲು ಆಕರ್ಷಕ. ಓಕ್ ಮರಗಳ ಕೊಂಬೆಗಳ ಮೇಲೆ ಹಾವಸೆಗಳನ್ನೂ (ಮಾಸ್). ಜರೀಗಿಡಗಳನ್ನೂ ಅನೇಕ ಬಗೆಯ ಅಪ್ಪುಸಸ್ಯಗಳನ್ನೂ ಕಾಣಬಹುದು. ಉತ್ತರಪ್ರದೇಶದ ಕುಮಾಂವ್ ವಿಭಾಗದ ಓಕ್ ಮರಗಳ ಮೇಲೆ ಸೀತಾಳೆಗಿಡಗಳು (ಆರ್ಕಿಡ್ಸ್) ವಿಪುಲ. ಇಲ್ಲಿಯ ಕಾಡಿನ ನೆಲವೂ ಹಲವಾರು ಬಗೆಯ ಸಸ್ಯಗಳಿಗೆ ಆಸರೆ. ಮರಗಳಿಂದ ಕಳಚಿ ಬೀಳುವ ಎಲೆಗಳು ಕೊಳೆತು ಜೈವಿಕವಸ್ತುಗಳನ್ನು ಸಮೃದ್ಧವಾಗಿ ಒದಗಿಸುವುರಿಂದ ಇಂಥ ಸಸ್ಯ ಬೆಳೆವಣಿಗೆ ಸಹಜವೇ. ಹಲವು ಅಪೂರ್ವ ಕೊಳೆತಿನಿ ಸಸ್ಯಗಳೂ (ಸ್ಯಾಪ್ರೊಫೈಟ್ಸ್) ಇಲ್ಲಿ ಬೆಳೆಯುವುವು. ಉದಾಹರಣೆಗೆ ಪತ್ರಹರಿತ್ತು ಕೊಂಚವೂ ಇಲ್ಲದ ಮೊನೊಟೋಪ, ಹೈಪೊಪಿಟಿಸ್ ಮತ್ತು ಸೀತಾಳೆಜಾತಿಯ ಎಪಿಪೋಗಿಯಮ್, ಪರಾವಲಂಬಿಗಳಾಗಿ ಬೆಳೆಯುವ ಸಸ್ಯಗಳನ್ನೂ ಈ ಕಾಡುಗಳಲ್ಲಿ ಕಾಣಬಹುದು. ರೋಡೊಡೆಂಡ್ರಾನ್ ಮರಗಳ ಬೇರಿನೊಂದಿಗೆ ಸಂಪರ್ಕ ಬಳೆಸಿ ಅಲ್ಲಿಂದ ನೀರನ್ನೂ ಖನಿಜಗಳನ್ನೂ ಪಡೆಯುವ ಇವುಗಳಲ್ಲಿ ಕಾಂಡವಾಗಲೀ ಎಲೆಗಳಾಗಲೀ ಇಲ್ಲ. ಉದಾಹರಣೆಗೆ ಬಲನೊಫೊರ ಮತ್ತು ಬೋಷ್ನಿಯಾಕಿಯ. ಒಣಹವೆಯುಳ್ಳ ಇಳಿಜಾರುಗಳ ಮೇಲೆ ಅನೇಕ ಕಡೆ ಯೂಪೋರ್ಬಿಯ ರಾಯ್ಲಿಯಾನ ಎಂಬ ಕಳ್ಳಿ ಗಿಡಗಳನ್ನು ನೋಡಬಹುದು.

2000-3500 ಮೀ ಎತ್ತರದ ಪ್ರದೇಶಗಳಲ್ಲಿ ಬೆಳೆಯುವ ಪೀತದಾರು ವೃಕ್ಷಗಳೇ ಬೇರೆ. ದೇವದಾರು (ಸೆಡ್ರಸ್ ದೇವದಾರ), ನೀಲಿಪೈನ್ (ಪೈನಸ್ ವಾಲಿಚಿಯಾನ), ತಾಳೇಶಪತ್ರೆ (ಏಬೀಸ್ ಪಿನ್‌ಡ್ರೋ ಮತ್ತು ಏಬೀಸ್ ಸ್ಪೆಕ್ಟಾಬಿಲಿಸ್), ಪೈಸಿಯ (ಸ್ಪ್ರೂಸ್), ಪದ್ಮಬೀಜದಗಿಡ (ಜೂನಿಪರ್ ಪ್ರಭೇದಗಳು) ಮುಂತಾದವು ಮುಖ್ಯವೆನಿಸಿವೆ. ಸುಣ್ಣಕಲ್ಲು ಹೆಚ್ಚಾಗಿರುವೆಡೆಗಳಲ್ಲಿ ವಿರಳವಾಗಿ ಸೈಪ್ರಸ್ (ಕ್ಯೂಪ್ರೆಸಸ್ ಟರ‍್ಯುಲೋಸ) ಮರಗಳು ಕಾಣಸಿಗುವುವು. ಎಲ್ಲ ಪೀತದಾರುಗಳೂ ಒಂದಲ್ಲ ಒಂದು ರೀತಿ ಉಪಯುಕ್ತ. ಓಕ್ ಜಾತಿಯ ಕೆಲವು ಪ್ರಭೇದಗಳ ರೋಡೊಡೆಂಡ್ರಾನಿನ ಹಲವು ಬಗೆಗಳ ಕಾಡುಗಳೂ ಇಲ್ಲುಂಟು. ಕ್ವರ್ಕಸ್ ಫ್ಲಾರಿಬಂಡ ಎಂಬ ಇಲ್ಲಿಯ ಓಕ್ ತುಂಬ ಆಕರ್ಷಕ ವೃಕ್ಷಗಳಲ್ಲೊಂದು. ಇದರ ಎಲೆಗಳ ಎರಡು ಪಾರ್ಶ್ವಗಳೂ ಕಡುಹಸುರಾಗಿರುವುದರಿಂದ ಇಡೀ ಮರ ದಟ್ಟ ಹಸುರಾಗಿ ನೋಡಲು ಬಲು ಅಂದವಾಗಿದೆ. 3300-3500 ಮೀ ಎತ್ತರದ ಸ್ಥಳಗಳಲ್ಲಿ ಖರ್ಸು ಓಕ್ (ಕ್ವರ್ಕಸ್ ಸೆಮಿಕಾರ್ಪಿಫೋಲಿಯ) ಎಂಬ ಪ್ರಭೇದ ಬೆಳೆಯುತ್ತದೆ. ಇದರ ಎಲೆಗಳ ತಳಭಾಗ ಕಂದುಬಣ್ಣಕ್ಕಿದೆ. ಕೊಂಚ ಮೇಲಿನ ಸ್ತರದಲ್ಲಿ ಭೋಜಪತ್ರ (ಬೆಟುಲಯೂಟಿಲಿಸ್) ಮುಂತಾದ ಅಗಲ ಎಲೆಗಳ ಮರಗಳು ಕಾಣಲು ದೊರೆಯುವುವು. ಇನ್ನೂ ಮೇಲಕ್ಕೆ ಸಾಗಿದರೆ (ಸುಮಾರು 3600 ಮೀಗಿಂತ ಉನ್ನತ ಸ್ಥಳಗಳಲ್ಲಿ) ಎತ್ತರದ ಮರಗಳು ಕಾಣೆಯಾಗುವುವು. ಬರೀ ಕೊಂಟು ಕೊಂಟಾಗಿ ಬೆಳೆಯುವ ಕುಬ್ಜವೃಕ್ಷಗಳು, ಪೊದೆಗಳು ಮಾತ್ರ ಇಲ್ಲಿಯ ಸಸ್ಯರೂಪಗಳು. ಈ ಸ್ತರಕ್ಕೆ ವೃಕ್ಷರೇಖೆ (ಟ್ರೀ ಲೈನ್, ಟಿಂಬರ್ ಲೈನ್) ಎಂದು ಹೆಸರು. ಭೋಜಪತ್ರ, ಬಿಳಿಹೂವಿನ ರೋಡೊಡೆಂಡ್ರಾನ್ (ರೋ. ಕಂಪ್ಯಾನ್ಯುಲೇಟಮ್) ಜೂನಿಪರ್, ಬಾರ್ಬೆರಿ, ಲೋನಿಸರ (ಹನಿಸಕಲ್), ಎಫಿಡ್ರ ಜೆರಾರ್ಡಿಯನ ಮುಂತಾದವು ಇಲ್ಲಿಯ ಸಸ್ಯಗಳ ಪೈಕಿ ಕೆಲವು. ಮತ್ತೂ ಮೇಲಕ್ಕೇರಿದರೆ, ಅಂದರೆ ಹಿಮರೇಖೆಯ ವರೆಗೆ (ಸ್ನೋಲೈನ್-4800 ಮೀ) ಏರಿದರೆ ಗೋಚರಿಸುವುದು ಅತ್ಯಂತ ಆಕರ್ಷಣೀಯವಾದ ಬಣ್ಣಬಣ್ಣದ ಹೂಗಳ ಶೀತವಲಯ ಮೂಲಿಕೆಗಳು (ಆಲ್ಪೈನ್ ಹರ್ಬ್ಸ್). ಇವುಗಳಲ್ಲಿ ಗಮನಾರ್ಹವಾದವು ವತ್ಸನಾಭಿ, ಅತಿವಿಷ, ಕಟುವಿಷ (ಅಕೊನಿಟಮ್ ಪ್ರಭೇದಗಳು), ಆನಿಮೊನಿ, ಕೊಲಂಬೈನ್ (ಆಕ್ವಿಲೀಜಿಯ ಪ್ರಭೇದ), ಲಾರ್ಕಸ್ಪರ್ (ಡೆಲ್ಫಿನಿಯಮ್ ಪ್ರಭೇದಗಳು) ನೀಲಿಪಾಪಿ (ಬ್ಲೂ ಪಾಪಿ-ಮೆಕನೋಪ್ಸಿಸ್ ಅಕ್ಯೂಲಿಯೇಟ). ಜೆನ್ಸಿಯಾನ ಪ್ರಭೇದಗಳು, ಸುಗಂಧಮಸ್ತೆ (ನಾರ್ಡೊಸ್ಟ್ಯಾಕಿಸ್ ಜಟಾಮಾನ್ಸಿ) ಮುಂತಾದವು. ನೀಲಿಪಾಪಿ ಅತ್ಯಂತ ಸುಂದರವಾದ ನೀಲಿ ಹೂಗಳಿಂದ ಕೂಡಿ ಹಿಮಾಲಯದ ಹೂಗಳ ರಾಣಿ ಎಂದು ಪ್ರಸಿದ್ಧವಾಗಿದೆ. ಸುಗಂಧಮಸ್ತೆ ನರೋತ್ತೇಜಕ, ಹುಳು ನಿವಾರಕ, ಕೇಶವರ್ಧಕ ಎಂದು ಆಯುರ್ವೇದದಲ್ಲಿ ಹೆಸರುವಾಸಿ. ಗುಲಾಬಿ ಕುಟುಂಬಕ್ಕೆ ಸೇರಿದ ಹಲವಾರು ತೆರನ ಪೊಟೆಂಟಿಲ್ಲಗಳು, ಸೂರ್ಯಕಾಂತಿ ಬಳಗದ ಆಸ್ಟರ್, ಸೆನಿಷಿಯೊ, ಅನಫಾಲಿಸ್, ಬ್ರಹ್ಮಕಮಲ (ಸಾಸೂರಿಯ ಆಬ್‌ವೆಲೇಟ), ಖೇಮಕಮಲ (ಸಾಸೂರಿಯ ಸಿಂಪ್‌ಸೋನಿಯಾನ ಮತ್ತು ಸಾ. ಗಾಸಿಪಿಫೊರ), ಕೊತ್ತಂಬರೀ ಬಳಗದ ಸುವಾಸನಾಯುಕ್ತ ಗಿಡಗಳು. ತುಳಸಿ ಕುಟುಂಬದ ತೈಮಸ್ ಮತ್ತು ಹಿಮಾಲಯಕ್ಕೇ ಸೀಮಿತವಾಗಿರುವ ಪ್ರಿಮ್ಯೂಲಗಳೂ ಈ ವಲಯದ ಇನ್ನಿತರ ಮುಖ್ಯ ಜಾತಿಗಳು. ಬ್ರಹ್ಮಕಮಲ ಮತ್ತು ಖೇಮಕಮಲದ ಹೂಗೊಂಚಲಿನ ಮೇಲೆ ಉದ್ದಕೂದಲಿನಂಥ ಎಳೆಗಳ ತುಪ್ಪಟ ಇದ್ದು ಬಲು ಸೋಜಿಗದ ಹೂಗಳೆನಿಸಿವೆ. ಒಣಗದೇ ಬಹುಕಾಲ ಹೊಸದಾಗಿ ಉಳಿಯುವ ಇವನ್ನು ಬದರೀನಾಥ, ಕೇದಾರನಾಥ ದೇವಾಲಯಗಳಲ್ಲಿ ಪೂಜೆಗಾಗಿ ಬಳಸುತ್ತಾರೆ.

4800 ಮೀಟಿರಿಗೂ ಮೀರಿದ ಉನ್ನತ ಪ್ರದೇಶಗಳಲ್ಲಿ ಸಸ್ಯಗಳು ಬಲುವಿರಳ. ಅಲ್ಲಲ್ಲಿ ಅನುಕೂಲವಿರುವ ಸ್ಥಳಗಳಲ್ಲಿ ಕೆಲವು ಗಿಡಗಳನ್ನು ಕಾಣಬಹುದಷ್ಟೆ. ಇಂಥ ಸ್ಥಳಗಳಲ್ಲಿ ಅಧಿಕ ಹಿಮ ಮತ್ತು ಬಿರುಸಿನ ಗಾಳಿ ಹಾಗು ಅತ್ಯಂತ ಕಡಿಮೆ ಉಷ್ಣತೆ ಇರುವುದರಿಂದ ಇಲ್ಲಿಯ ಗಿಡಗಳು ಗುಂಪುಗುಂಪಾಗಿ ಮೆತ್ತೆಗಳಂತೆ (ಕುಷನ್) ಬೆಳೆಯುತ್ತವೆ. 5400 ಮೀಟರಿಗಿಂತ ಮೇಲಿನ ಸ್ತರಗಳಲ್ಲಿ ಗಿಡಗಳೇ ದುರ್ಲಭ. ಕಾಮೆಟ್ ಪರ್ವತದ ಹಾದಿಯಲ್ಲಿ ಸುಮಾರು 6300 ಮೀ ಎತ್ತರದಲ್ಲಿ ಸಾಸುವೆ ಕುಟುಂಬಕ್ಕೆ ಸೇರಿದ ಕ್ರಿಸ್ಟೋಲಿಯ ಹಿಮಾಲಯೆನ್ಸಿಸ್ ಎಂಬ ಕುಳ್ಳಿ ಸಸ್ಯವೊಂದನ್ನು ಸಂಗ್ರಹಿಸಲಾಗಿದೆ. ಪ್ರಪಂಚದಲ್ಲೇ ಇಂಥ ಗಿಡಗಳು ಅಪೂರ್ವವಾಗಿದ್ದು ಅತ್ಯಂತ ಎತ್ತರ ಪ್ರದೇಶಗಳಲ್ಲಿ ಬೆಳೆಯುವ ಗಿಡಗಳಿಗೆ ಇದು ಒಂದು ದಾಖಲೆಯಾಗಿದೆ. ಎವರೆಸ್ಟ್ ಪರ್ವತಾರೋಹಿಗಳು 6000 ಮೀ ಎತ್ತರದಲ್ಲಿ ಗಿಡಗಳು ಬೆಳೆದಿರುವುದನ್ನು ಕಂಡಿದ್ದಾರೆ.

ಕಾಶ್ಮೀರದ ಉತ್ತರಭಾಗ, ಲಡಾಖ್ ಪ್ರಾಂತ್ಯ ಹಾಗೂ ಹಿಮಾಚಲ ಪ್ರದೇಶದ ಕೆಲವೆಡೆಗಳಲ್ಲಿ ಮಳೆಯ ಮೊತ್ತ ಬಲು ಕಡಿಮೆ; ವರ್ಷದ ಮುಕ್ಕಾಲು ಸಮಯ ಮಂಜು ಕವಿದಿರುತ್ತದೆ. ಚಳಿಯೂ ವಿಪರೀತ. ಈ ಕಾರಣಗಳಿಂದಾಗಿ ಗಿಡಗಳ ಬೆಳೆವಣಿಗೆಗೆ ನೀರೇ ದೊರೆಯದು. ಶೀತಮುರುಭೂಮಿಗಳೆಂದು ಕರೆಸಿಕೊಳ್ಳುವ ಇಂಥ ಜಾಗಗಳ ನೆಲದಲ್ಲಿ ಉಪ್ಪಿನ ಅಂಶವೂ ಅಧಿಕ. ಹೀಗಾಗಿ ಇಲ್ಲಿ ಸಸ್ಯಗಳು ಮರಗಳ ಗಾತ್ರಕ್ಕೆ ಬೆಳೆಯವುದೇ ಇಲ್ಲ. ಮೆತ್ತೆಗಳ ಆಕಾರದವು, ಚೂಪುತುದಿಯ ಎಲೆಗಳುಳ್ಳಂಥವು, ಬಂಡೆಗಳಿಗೆ ಬಲವಾಗಿ ಅಂಟಿಕೊಂಡು ಬೆಳೆಯುವಂಥವು, ಮೈಮೇಲೆ ತುಪ್ಪಳದ ಹೊದಿಕೆ ಇರುವಂಥವು ಇಲ್ಲಿಯ ಸಸ್ಯ ವಿಶೇಷಗಳು. ಮಧ್ಯ ಏಷ್ಯಾದ ಮರುಭೂಮಿಯಲ್ಲಿ ಹಾಗೂ ಟಿಬೆಟ್ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳನ್ನು ಇವು ಹೋಲುತ್ತದೆ.

ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ದಕ್ಷಿಣ ಭಾಗದಲ್ಲಿ ಸಮಶೀತೋಷ್ಣ ಹವೆ ಇರುವುದರಿಂದ ಇದಕ್ಕೆ ತಕ್ಕ ಸಸ್ಯವರ್ಗವನ್ನು ಇಲ್ಲಿ ಕಾಣಬಹುದು. ಅಲ್ಲದೆ ಸೇಬು, ಪೇರು, ಪೀಚ್, ಬಾದಾಮಿ, ಅಕ್ರೊಟ್, ಚೆರಿ, ಸಕ್ಕರೆ ಬಾದಾಮಿ ಮುಂತಾದ ಹಣ್ಣಿನ ಗಿಡಗಳನ್ನು ಕೇಸರಿಯನ್ನೂ (ಕ್ರೋಕಸ್ ಸೇಟಿವಸ್) ಇಲ್ಲಿ ಕೃಷಿ ಮಾಡಲಾಗುತ್ತದೆ.

2. ಪೂರ್ವ ಹಿಮಾಲಯ ಮತ್ತು ಅಸ್ಸಾಮ್ ವಲಯ: ಇಲ್ಲಿಯ ಅತಿ ಉನ್ನತ ಪ್ರದೇಶಗಳಲ್ಲಿ ಬೆಳೆಯುವ ಗಿಡಮರಗಳು ಚೀನದವುಗಳನ್ನು ಹೋಲುವುವು. ಪ್ರಪಂಚದ ಮುಖ್ಯ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನದು ಹಿಮಾಲಯ. ಬಹಳ ಪ್ರಾಚೀನವಾದದ್ದು ಚೀನದೇಶದ ಪರ್ವತಾವಳಿ, ಹಿಂದೆ ಖಂಡಗಳ ಅಲೆತದಿಂದ ಭಾರತಭೂಭಾಗ ಚಲಿಸಿ ಏಷ್ಯದ ಭೂರಾಶಿಯನ್ನು ಅಪ್ಪಳಿಸಿದಾಗ ರೂಪುಗೊಂಡ ಹಿಮಾಲಯ ಪರ್ವತ ಶ್ರೇಣಿಯ ಪೂರ್ವ ಭಾಗವನ್ನು ಚೀನದ ಹಲವಾರು ಗಿಡಗಳು ಪ್ರವೇಶಿಸಿರಬೇಕು, ಎಂದೇ ಪೂರ್ವ ಹಿಮಾಲಯದ ಸಸ್ಯಗಳು ಚೀನದವನ್ನು ಹೋಲುತ್ತಿರುವುದು ಪೂರ್ವ ಹಿಮಾಲಯದ ವಿವಿಧಸ್ತರಗಳು ಪಶ್ಚಿಮ ಹಿಮಾಲಯದವಕ್ಕಿಂತ ಕೊಂಚ ಭಿನ್ನವಾಗಿದೆ. ಉದಾಹರಣೆಗೆ ಇಲ್ಲಿಯ ಹಿಮರೇಖೆ ಪಶ್ಚಿಮದ್ದಕ್ಕಿಂತ ಕೊಂಚ ಹೆಚ್ಚಿನ ಎತ್ತರದಲ್ಲಿದೆ. ಆದ್ದರಿಂದ ಸಸ್ಯವರ್ಗದಲ್ಲೂ ವಿಭಿನ್ನತೆ ಉಂಟು. ಪೂರ್ವ ಹಿಮಾಲಯದಲ್ಲಿ ವೃಕ್ಷರೇಖೆಯವರೆಗೂ ದಟ್ಚ ಕಾಡುಗಳನ್ನು ಕಾಣಬಹುದು. ಇಲ್ಲಿಯ ಪೀತದಾರು ವನಗಳಲ್ಲಿ ಮುಖ್ಯವಾಗಿ ಗಮನಿಸಬಹುದಾದ ಮರಗಳು; ತಾಳೆಶಪತ್ರೆ, ಪೈಸಿಯಾದ ಸ್ಟೈನುಲೋಸ (ಸಿಕ್ಕಿಮ್ ಸ್ಪ್ರೂಸ್) ಮತ್ತು ಸ್ಮಿತಿಯಾನ ಪ್ರಭೇದಗಳು, ಹೆಮ್ಲಕ್ (ಸೂಗ ಡ್ಯೂಮೊಸ), ಲಾರ್ಚ್ (ಲ್ಯಾರಿಕ್ಸ್ ಗ್ರಿಫಿತಿಯಾನ) ಮತ್ತು ನೀಲಿ ಪೈನ್. ಪಶ್ಚಿಮ ಹಿಮಾಲಯದ ಪೀತದಾರು ಕಾಡುಗಳ ಮುಖ್ಯ ಮರವಾದ ದೇವದಾರು ಇಲ್ಲಿ ಕಾಣದು. ಹಾಗೆಯೇ ಅಲ್ಲಿ ಇಲ್ಲದ ಲಾರ್ಚ್ ಇಲ್ಲಿಯ ಪ್ರಧಾನ ಸಸ್ಯಗಳ ಪೈಕಿ ಒಂದು. ಲಾರ್ಚ್ ಪೀತದಾರು ವೃಕ್ಷವಾದರೂ ಆ ಗುಂಪಿಗೆ ಅಪವಾದವೆನ್ನುವಂತೆ ಇದು ಪರ್ಣಪಾತಿಯಾಗಿದೆ. (ಉಳಿದೆಲ್ಲವುಗಳಲ್ಲಿ ಸೂಜಿಯಂಥ ಎಲೆಗಳಿದ್ದು ವರ್ಷ ಪೂರ್ತಿ ಹಸುರಾಗಿರುವುವು. ಆದ್ದರಿಂದಲೇ ಇವಕ್ಕೆ ನಿತ್ಯಹರಿದ್ವರ್ಣ ವೃಕ್ಷಗಳೆಂದು ಹೆಸರು. ಇತ್ತೀಚಿನ ವರ್ಷಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಟೆಟ್ರಿಸೆಂಟ್ರಾನ್ ಎಂಬ ಅಪರೂಪದ ಮರವನ್ನು ಪತ್ತೆಹಚ್ಚಲಾಗಿದೆ. ಚೀನದಲ್ಲಿ ಮಾತ್ರ ಬೆಳೆಯುತ್ತದೆ ಎಂದು ಹೆಸರುವಾಸಿಯಾಗಿದ್ದ ಈ ಮರ ಈಗ ಇಲ್ಲೂ ಪತ್ತೆಯಾಗಿರುವುದು ಚೀನಕ್ಕೂ ಭಾರತಕ್ಕೂ ಇರುವ ಸಸ್ಯಬಾಂಧವ್ಯವನ್ನು ಸೂಚಿಸುತ್ತದೆ. ಈ ಮರ ವೆಸಲ್‌ರಹಿತ ಪುಷ್ಪವಂತಸಸ್ಯ ಎಂದು ಸಸ್ಯವಿಜ್ಞಾನಿಗಳ ಗಮನ ಸೆಳೆದಿದೆ. ಎಂದರೆ ಇದರ ಕಾಂಡದ ಕ್ಸೈಲಮ್ ಊತಕದಲ್ಲಿ ವೆಸಲ್‌ಕೋಶಗಳೇ ಇಲ್ಲ. ಪೂರ್ವ ಹಿಮಾಲಯದ ಅರಣ್ಯಗಳ ಇನ್ನೊಂದು ವಿಶೇಷವೆಂದರೆ ರೋಡೊಡೆಂಡ್ರಾನ್ ಸಸ್ಯಗಳ ಪ್ರಾಧಾನ್ಯ. ಸಿಕ್ಕಿಮ್, ಡಾರ್ಜಲಿಂಗ್ ವಲಯಗಳಲ್ಲಿ ಇವು ವಿಪುಲ. 50ಕ್ಕೂ ಹೆಚ್ಚು ಮಿಕ್ಕ ಪ್ರಭೇದಗಳು ಇಲ್ಲಿ ಬೆಳೆಯುವುವು. ಹೂಗಳ ವರ್ಣವೈವಿಧ್ಯದಲ್ಲಿ ಗಿಡಗಳ-ಗಾತ್ರ-ಆಕಾರ ವಿಭಿನ್ನತೆಯಲ್ಲಿ ಇವನ್ನು ಮೀರಿಸುವ ಬೇರಾವ ಸಸ್ಯಗಳೂ ಇಲ್ಲಿಲ್ಲ. ಪರಿಮಳಯುಕ್ತ ಹೂವುಳ್ಳ ರೋಡೊಡೆಂಡ್ರಾನ್‌ಗಳೂ ಇಲ್ಲುಂಟು. 4800-5000 ಮೀ. ಎತ್ತರ ಪ್ರದೇಶಗಳಲ್ಲಿ ಇವು ಬೆಳೆಯುತ್ತಿದ್ದು ಹೂ ಬಿಟ್ಟಿಶ್ರಾಯದಲ್ಲಿ ಅತ್ಯಂತ ಆಕರ್ಷಕ ಹಾಗೂ ಅಪೂರ್ವ ದೃಶ್ಯವನ್ನು ಒದಗಿಸುವುವು. ಚೀನದಿಂದ ಬಂದಿರುವ ಇಲ್ಲಿಯ ಇನ್ನೊಂದು ಪ್ರಧಾನಜಾತಿಯ ಸಸ್ಯ ಮ್ಯಾಗ್ನೋಲಿಯ. ಪಶ್ಚಿಮ ಹಿಮಾಲಯದಲ್ಲಿ ಇದು ಬೆಳೆಯದು. ಇದರ ಹಲವಾರು ಪ್ರಭೇದಗಳು ಪೂರ್ವ ಹಿಮಾಲಯದಲ್ಲಿ ಅರುಣಾಚಲ ಪ್ರದೇಶದಿಂದ ಹಿಡಿದು ಪಶ್ಚಿಮಕ್ಕೆ 830 ಪೂರ್ವ ರೇಖಾಂಶದವರೆಗೂ ಕಾಣಸಿಗುತ್ತದೆ. ಇವುಗಳ ಪೈಕಿ ತುಂಬ ಆಕರ್ಷಕವಾದ್ದು ಮ್ಯಾ. ಕೆಂಬಲೈ ಮೂಲಿಕೆ ಸಸ್ಯಗಳಲ್ಲಿ ಮಾತ್ರ ಪಶ್ಚಿಮ ಹಿಮಾಲಯಕ್ಕೂ ಪೂರ್ವಹಿಮಾಲಯಕ್ಕೂ ಸಾಮ್ಯ ಉಂಟು.

ಪೂರ್ವ ಹಿಮಾಲಯದ ತಪ್ಪಲು ಮತ್ತು ಅಸ್ಸಾಮ್ ಭಾಗಗಳಲ್ಲಿ ಪಶ್ಚಿಮ ಹಿಮಾಲಯಕ್ಕಿಂತ ಅಧಿಕ ಮಳೆ ಬೀಳುವುದರಿಂದ ಜೌಗುಭೂಮಿ, ಹುಲ್ಲುಗಾವಲು ಹೆಚ್ಚು. ಮುಂಗಾರು ಮಳೆಯ ಆಧಿಕ್ಯ ಇಲ್ಲಿಯ ಸಸ್ಯವರ್ಗದ ಸ್ವರೂಪದ ಮೇಲೆ ಪ್ರಭಾವ ಬೀರಿದೆ. ಅಲ್ಲಿಯ ಮರಗಿಡಗಳಿಗೂ ದಕ್ಷಣಿ ಭಾರತದ ಪಶ್ಚಿಮ ಘಟ್ಟದವಕ್ಕೂ ಬಹಳ ಹೋಲಿಕೆಯುಂಟು. ಇಲ್ಲೂ ನಿತ್ಯ ಹರಿದ್ವರ್ಣದ ಕಾಡುಗಳಿವೆ. ಇಂಥ ವನಗಳಲ್ಲಿ ಕಾಣಸಿಗುವ ಮರಗಳ ಪೈಕಿ ಮುಖ್ಯವಾದವು: ಅತಿ ಎತ್ತರಕ್ಕೆ ಬೆಳೆಯುವ ಧೂಮ (ಡಿಪ್ಟಿರೊಕಾರ್ಪಸ್ ಟರ್ಬಿನೆ ಟಸ್) ಹಾಲುದುಡ್ಡಿ (ಕೆನ್ಭೆರಿಯಮ್ ರೆಸಿನಿಫೆರಮ್) ಹಲಸಿನ ಒಂದು ಬಗೆ (ಆರ್ಟೊಕಾರ್ಪಸ್ ಚಪ್ಲಾಶ), ಅಳಲೆ (ಟರ್ಮಿನೇಲಿಯ ಚಬುಲ), ನಾಗಸಂಪಿಗೆ (ಮೆಸುವ ಫರಿಯ), ಕಲ್ತೆಂಗ (ಡಿಲೆನಿಯ ಇಂಡಿಕ), ಕಂಡಗರಿಗೆ (ಟೂನ ಸಿಲಿಯೇಟ), ಮತ್ತು ಸಂಪಿಗೆ ವಿವಿಧ ಪ್ರಭೇಧಗಳು (ಮೈಕೇಲಿಯ). ಪಶ್ಚಿಮ ಹಿಮಾಲಯದಲ್ಲಿ ಕಾಣದಿರುವ ಆದರೆ ಇಲ್ಲಿ ಬೆಳೆಯುವ ಮರಗಳೆಂದರೆ ದುವಾಬಾಂಗ ಗ್ರ್ಯಾಂಡಿಪ್ಲೋರ ಮತ್ತು ಶೀಮ ವಾಲಿಚಿಯೈ. ಇಲ್ಲಿಯ ಬೃಹದ್‌ಗಾತ್ರದ ಬಳ್ಳಿಗಳಲ್ಲಿ ಪ್ರಧಾನವಾದವು ಕಂಚವಾಳ (ಬಾಹಿನಿಯ ಪ್ರಭೇದಗಳು), ಡೆರಿಸ್, ವೈಟಿಸ್ ಮತ್ತು ನೀಟಮ್ ಊಲ. ಬೆತ್ತದ ಅನೇಕ ಪ್ರಭೇದಗಳು (ಕೆಲಾಮಸ್), ತಾಳವೃಕ್ಷಗಳಾದ ಬಗನಿ (ಕ್ಯಾರಿಯೋಟ ಯೂರೆನ್ಸ್), ಜಂಡರಿಗೆ (ಪಿನಂಗ ಪ್ರಭೇದ), ಡಡ್ಸಾಲ (ಅರೆಂಗ ಪ್ರಭೇದಗಳು), ಲಿಕುವಾಲಗಳೂ ಇಲ್ಲಿ ಕಾಣದೊರೆಯುವುವು. ಕಾಡುಬಾಳೆ (ಮ್ಯೂಸ), ಬಿದಿರು-ಬಂಬು (ಬ್ಯಾಂಬೂಸ, ಡೆಂಡ್ರೊಕೆಲಾಮಸ್ ಪ್ರಭೇದಗಳು), ವೃಕ್ಷರೂಪಿ ಜರೀಸಸ್ಯಗಳು (ಟ್ರೀ ಫರ್ನ್ಸ್) ಇಲ್ಲಿ ಸಾಮಾನ್ಯ ಹಳ್ಳಹೊಳೆಗಳ ಅಂಚಿನಲ್ಲಿ ಕೇದಗೆ (ಪ್ಯಾಂಡನಸ್) ಬೆಳೆಯುತ್ತದೆ. ಇಲ್ಲಿಯ ಮೂಲಿಕೆಗಳ ಪೈಕಿ ಸೀತಾಳೆಗಳದ್ದೇ ಪ್ರಮುಖಸ್ಥಾನ. ಅರುಣಾಚಲ ಪ್ರದೇಶ, ಸಿಕ್ಕಿಮ್, ಡಾರ್ಜಲಿಂಗ್‌ಗಳ ವಿಪಿನಗಳು ಸೀತಾಳೆಗಳ ಸಂಖ್ಯಾಬಾಹುಳ್ಳಕ್ಕೂ ವೈವಿಧ್ಯಕ್ಕೂ ಹೆಸರುವಾಸಿಯಾಗಿದೆ. ಅಪ್ಪುಗಿಡಗಳಾಗಿ ಬೆಳೆಯುವ ಇವನ್ನು ಅಧಿಕ ಪ್ರಮಾಣದಲ್ಲಿ ಸಂಗ್ರಹಿಸಿ ಪರದೇಶಗಳಿಗೆ ಕಳಿಸಲಾಗುತ್ತಿದೆ. ಹೀಗೆ ಸಂಗ್ರಹಿಸುವುದರಲ್ಲಿ ಅಗತ್ಯವನ್ನು ಮೀರಿ ಕೀಳುವುದರಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತ ಸಸ್ಯ ಸರ್ವೇಕ್ಷಣ ಸಂಸ್ಥೆ ಷಿಲಾಂಗಿನಲ್ಲಿ ರಾಷ್ಟ್ರೀಯ ಆರ್ಕಿಡೇರಿಯಮ್ ತೋಟವನ್ನು ಸ್ಥಾಪಿಸಿ ಸೀತಾಳೆಗಳ ಕೃಷಿಯನ್ನು ವೈಜ್ಞಾನಿಕವಾಗಿ ನಡೆಸುತ್ತಿದೆಯಾಗಿ ಈ ಗಿಡಗಳಿಗೆ ರಕ್ಷಣೆ ದೊರೆತಿದೆ.

ಅಸ್ಸಾಮ್ ವಲಯದ ಪರ್ಣಪಾತಿ ಕಾಡುಗಳಲ್ಲಿ ಬಿಳೇಭೋಗಿ, ಕವುಲು (ಕ್ಯಾರೀಯ ಆರ್ಬೋರಿಯ), ಬೆಂಡೆಮರ, ಬಿಳಿನಾರು (ಸ್ಟರ್ಕ್ಯೂಲಿಯವಿಲೋಸ), ಬೂರುಗ (ಬಾಂಬ್ಯರ್ಸ್ ಸೈಬ), ಕಂಚವಾಳ ಜಾಲ ಅಥವಾ ಗೊಬ್ಬಳಿಯ ವಿವಿಧ ಪ್ರಭೇದಗಳು (ಅಕೇಸಿಯ), ಹಳದಿತೇಗ (ಅಡೀನ ಕಾರ್ಡಿಫೋಲಿಯ) ಮುಂತಾದವು ಮುಖ್ಯ. ದೊಡ್ಡಗಾತ್ರದ ಹಂಬುಗಳಲ್ಲಿ ಹೆಪ್ಪರಿಗೆ (ಬಿಳೀಕಂಚವಾಳ-ಬಾಹಿನಿಯ ವಾಹ್ಲಿ) ಪ್ರಮುಖವಾದ್ದು. ವೃಕ್ಷರೂಪಿ ಜರೀಗಿಡಗಳೂ ಮೂಲಿಕೆಗಳ ಪೈಕಿ ಕಲ್ಲುಶುಂಠಿ (ಜಿಂಜಿಬರ್ ಬೆರುಂಬೆಟ್), ಕೆಸವು (ಕಾಲೋಕೇಶಿಯ ಆಂಟಿಕ್ವೋರಮ್), ಚಂಗಲಕೋಷ್ಠಗಳೂ (ಕಾಸ್ಟಸ್ ಸ್ವೀಷಿಯೋಸಸ್) ಬಲು ಸಾಮಾನ್ಯ.

ಬ್ರಹ್ಮಪುತ್ರ ನದಿಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಕೆಸರು ತುಂಬಿದ ಹುಲ್ಲುಗಾವಲುಗಳುಂಟು. ಇಲ್ಲಿಯ ಹುಲ್ಲು ತುಂಬ ಎತ್ತರಕ್ಕೆ ಬೆಳೆಯುತ್ತದೆ. ಭಾರತದ ಒಂಟಿ ಕೊಂಬಿನ ಖಡ್ಗಮೃಗ ಕಾಣಸಿಗುವುದು ಇಲ್ಲೇ.

ಮೇಘಾಲಯದ ಖಾಸಿ ಮತ್ತು ಜಯಂತಿಯ ಪರ್ವತಶ್ರೇಣಿ ಅನೇಕ ಸೋಜಿಗದ ಗಿಡಮರಗಳ ತಾಣವೆನಿಸಿದೆ. ವಿಚಿತ್ರರೂಪದ ಕೀಟಭಕ್ಷಿ ಸಸ್ಯ ಹೂಜಿಗಿಡ (ಪಿಚರ್ ಪ್ಲಾಂಟ್-ನೆಪೆಂತಿಸ್ ಖಾಸಿಯಾನ), ಸಂಪೂರ್ಣ ಪರಾವಲಂಬಿಯಾದ ಸ್ಯಾಪ್ರಿಯ ಹಿಮಾಲಯಾನ (ರಫ್ಲೀಸಿಯೇಸೀ ಕುಟುಂಬಕ್ಕೆ ಸೇರಿದೆ), ರಕ್ತಬಿಂದು (ಮ್ಯಾಂಡ್ರೇಕ್-ಮ್ಯಾಂಡ್ರಗೋರ ಕಾಲೆಸೆನ್ಸ್) ಮುಂತಾದವು ಇಲ್ಲಿ ಬೆಳೆಯುವುವು. ರಕ್ತಬಿಂದುವಿಗೆ ಇಂದ್ರಜಾಲ ಎಂಬ ಹೆಸರೂ ಉಂಟು. ಇದಕ್ಕೆ ಅನೇಕ ಮಾಂತ್ರಿಕ ಗುಣಗಳನ್ನು ಆರೋಪಿಸಲಾಗಿದೆ, ಔಷಧೀಯ ಮಹತ್ತ್ವವೂ ಇದಕ್ಕೆ ಇದೆ.

3. ಪಂಜಾಬಿನ ಮೈದಾನ ಪ್ರದೇಶ: ಪಂಜಾಬ್, ಹರಿಯಾಣ, ದೆಹಲಿಯ ಆಸುಪಾಸು-ಇವು ಈ ಪ್ರದೇಶದಲ್ಲಿ ಒಳಪಡುವ ವಲಯಗಳು. ಈ ಪ್ರದೇಶದ ನೈಋತ್ಯ ಹಾಗೂ ದಕ್ಷಿಣ ಭಾಗಗಳು ಅರೆಮರುಭೂಮಿ. ಈಶಾನ್ಯ ಮತ್ತು ಉತ್ತರದಕಡೆ ಸಿವಾಲಿಕ್ ಬೆಟ್ಟಗಳುಂಟು. ಕೃಷಿ ಪ್ರಧಾನ ಮೈದಾನ ಸೀಮೆಯಾಗಿರುವುದರಿಂದ ಕಾಡುಗಳಿಗಿಂತ ಹೊಲ ಗದ್ದೆಗಳೇ ಪ್ರಧಾನ. ದಕ್ಷಿಣ ಬಂಜರು ಭೂಮಿಯಲ್ಲಿ ಉಪ್ಪಿಗಿಡ (ಕೆಪ್ಪಾರಿಸ್ ಡೆಸಿಡ್ಯುವ) ಕಿರಿಗೋಣಿ ಪ್ರಭೇದಗಳು (ಸ್ಯಾಲ್ವಡೋರ), ಗೊಬ್ಬಳಿ ಪ್ರಭೇಧಗಳು, ಎಲಚಿ (ಜಿಜಿ಼ಫಸ್) ಮುಂತಾದವು ಸ್ವಾಭಾವಿಕವಾಗಿ ಬೆಳೆಯುವುವು. ಗದ್ದೆಗಳ ಅಂಚುಗಳಲ್ಲಿ ನೆಟ್ಟು ಬೆಳೆಸಿರುವ ಫರಾಷ್‌ಗಳೂ (ಸೀರೇಗಿಡ-ಟ್ಯಾಮರಿಕ್ಸ್ ಆರ್ಟಿಕ್ಯುಲೇಟ), ರಸ್ತೆಗಳ ಪಾರ್ಶ್ವಗಳಲ್ಲಿ ಶಿಷ್ಟಬಾಗೆ, ಅತ್ತಿ, ಟೂನ್ ಮರಗಳೂ ಉಂಟು. ಇತ್ತೀಚಿಗೆ ನೀಲಗಿರಿ ಮರಗಳನ್ನು ಬೆಳೆಸಲಾಗುತ್ತಿದೆ.

4. ಗಂಗಾನದಿ ಮೈದಾನ ಪ್ರದೇಶ: ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳನ್ನು ಇದು ಒಳಗೊಂಡಿದೆ. ಗಂಗಾ ಮತ್ತಿತರ ದೊಡ್ಡನದಿಗಳ ಹರಿವಿನ ಪ್ರದೇಶವಾಗಿರುವ ಇದು ಹಿಂದಿನಿಂದಲೂ ಕೃಷಿಗೆ ಪ್ರಸಿದ್ಧವಾಗಿದೆ. ಜನ ಸಂದಣಿಯೂ ಅಧಿಕ. ಈ ಪ್ರದೇಶದ ಉತ್ತರ ಭಾಗದಲ್ಲಿ ತೆರಾಯಿ ಕಾಡುಗಳೂ ದಕ್ಷಿಣದಲ್ಲಿ ವಿಂಧ್ಯಪರ್ವತ ಶ್ರೇಣಿಯ ಕಾಡುಗಳೂ ಪ್ರಧಾನ. ನಡುವಣ ಪ್ರದೇಶ ಮೈದಾನಸೀಮೆ; ಇಲ್ಲಿ ಹೊಲಗದ್ದೆಗಳೇ ಹೆಚ್ಚು, ಮನುಷ್ಯ ಬೆಳೆಸಿದ ಮರಗಿಡಗಳನ್ನು ಹೆಚ್ಚಾಗಿ ಕಾಣಬಹುದು. ಉದಾಹರಣೆಗೆ ಮಾವು, ಆಲ, ಅರಳಿ, ಅತ್ತಿ ಅಲ್ಲದೆ ಅಲ್ಲಲ್ಲಿ ಸರೋವರಗಳು, ಕೆರೆಕಟ್ಟಿಗಳು, ಕೊಳಗಳು ಇದೆಯಾಗಿ ಇವುಗಳಲ್ಲಿ ಕಮಲ, ತಾವರೆ ಮುಂತಾದ ಜಲಸಸ್ಯಗಳೂ ಇಡೀ ರಾಷ್ಟ್ರಕ್ಕೆ ಪಿಡುಗಾಗಿರುವ ಪಿಶಾಚಿತಾವರೆಯೂ (ವಾಟರ್ ಹೈಯಾಸಿಂತ್-ಐಕಾರ್ನಿಯ ಕ್ರಾಸಿಪಸ್) ಬೆಳೆಯುವುವು. ದಕ್ಷಿಣಭಾಗದಲ್ಲಿ ಹಲವೆಡೆ ಮುಳ್ಳುಭರಿತ ಕುರುಚಲು ಗಿಡಗಳಿವೆಯಾದರೆ ಉಳಿದೆಡೆಗಳಲ್ಲಿ (ಮಧೂಕ ಲ್ಯಾಟಿಫೊಲೀಯ), ಕೆಂಪುದಾಳೆ (ಸ್ಟರ್ಕ್ಯೂಲಿಯ ಯುರೆನ್ಸ್) ಸಾಂಬ್ರಾಣಿ (ಬಾಸ್‌ವೆಲಿಯ ಗ್ಲಾಬ್ರ), ದಿಂಡಿಗ ಮುಂತಾದ ಪರ್ಣಪಾತಿ ವೃಕ್ಷಗಳುಂಟು.

5. ರಾಜಸ್ಥಾನ ಮತ್ತು ಅಕ್ಕಪಕ್ಕದ ಮರುಭೂಮಿ ಪ್ರದೇಶ: ಮಳೆಯ ಅಭಾವ, ಪಶ್ಚಿಮದಿಂದ ಬೀಸುವ ಬಿಸಿಗಾಳಿ, ಬೇಸಗೆಯ ಉಷ್ಣತೆಯ ಆಧಿಕ್ಯ, ಚಳಿಗಾಲದ ಕಡುಚಳಿ-ಇವು ಈ ಪ್ರದೇಶದ ಸಸ್ಯವರ್ಗವನ್ನು ರೂಪಿಸಿರುವ ಕಾರಕಗಳು. ಇಲ್ಲಿಯ ಪೂರ್ವಭಾಗದಲ್ಲಿ ಮಳೆ ಸ್ವಲ್ಪ ಹೆಚ್ಚು ಬೀಳುವುದರಿಂದ ಪರ್ಣಪಾತಿ ಅರಣ್ಯಗಳನ್ನು ನೋಡಬಹುದು. ಆದರೆ ಪಶ್ಚಿಮದ ಜಿಲ್ಲೆಗಳಾದ ಜೈಸಲ್ಮೇರ್, ಬಿಕಾನರ್‌ಗಳಲ್ಲಿ ಎಲ್ಲೆಲ್ಲೂ ಮರಳುಗುಡ್ಡೆಗಳೇ ಇದ್ದು ಗಿಡಗಳ ಬೆಳವಣಿಗೆ ಅತಿ ವಿರಳವಾಗಿದೆ. ಪೆರುಂಬೆ (ಪ್ರೋಸೊಪಿಸ್ ಸಿನರೇರಿಯ), ಉಪ್ಪಿಗಿಡ ಮತ್ತು ಮುಳ್ಳು ಎಲಚಿ (ಜಿಜಿ಼ಫಸ್ ನಮುಲೇರಿಯ) ಮರಳು ಗುಡ್ಡೆಗಳಲ್ಲಿ ಬೆಳೆಯುವ ಸಸ್ಯಗಳ ಪೈಕಿ ಕೆಲವು. ಮಳೆಯ ಮೊತ್ತ ಹೆಚ್ಚಾಗಿರುವೆಡೆ ಗೊಬ್ಬಳಿ, ಕಿರಿಗೋಣಿ ಮರಗಳನ್ನು ಕಾಣಬಹುದು. ಎಕ್ಕದ ಗಿಡ ಬಲು ಸಾಮಾನ್ಯ. ಕಲ್ಲುಪ್ರದೇಶಗಳಲ್ಲಿ ಯೂಫೋರ್ಬಿಯ ಕ್ಯಾಡುಸಿಫೋಲಿಯ ಎಂಬ ಕಳ್ಳಿ ಮತ್ತು ದಿಂಡಿಗ ಹಾಗೂ ಗುಗ್ಗುಳಮರ (ಕಾಮಿಫೊರ ಮುಕುಲ್) ಉಂಟು. ಕ್ಯಾಲಿಗೋನಮ್ ಪಾಲಿಗೊನಯ್ಡಿಸ್, ಗೆಜ್ಜೇಗಿಡ (ಕ್ರೊಡಲೇರಿಯ ಪ್ರಭೇದ) ಪ್ಲೂಚಿಯ, ದೊಡ್ಡಹಿಂಡಿಗಿಡ (ಈರುವ ಟೊಮೆಂಟೋಸ್) ಮೊದಲಾದವು ಇನ್ನಿತರ ಗಿಡಗಳು. ಹಳ್ಳಿಯ ಆಸುಪಾಸಿನಲ್ಲಿ ಬೇವು, ಹುಣಸೆ ಅರಳಿ ಮುಖ್ಯವೆನಿಸಿದೆ.

6. ಪಶ್ಚಿಮ ಘಟ್ಟ: ಅತ್ಯಂತ ವೈವಿಧ್ಯಮಯ ಸಸ್ಯಗಳಿಂದ ಕೂಡಿದ ಈ ವಲಯ ಭಾರತದ ಸ್ವಾಭಾವಿಕ ಸಸ್ಯಸಂಪತ್ತಿನ ಪ್ರದೇಶಗಳ ಪೈಕಿ ಬಲು ಮುಖ್ಯವಾದದ್ದೇನಿಸಿದೆ. ಇಲ್ಲಿ ಉಷ್ಣವಲಯ ನಿತ್ಯ ಹರಿದ್ವರ್ಣದ ಕಾಡುಗಳೂ ಅರೆನಿತ್ಯಹಸುರಿನ ಅರಣ್ಯಗಳೂ ಪರ್ಣಪಾತಿ ವೃಕ್ಷಾರಣ್ಯಗಳೂ ಉಂಟು. ಇಂಥ ಸಸ್ಯವೈವಿಧ್ಯವನ್ನು ರೂಪಿಸಿರುವುದು ಮೂಲತಃ ಮುಂಗಾರು ಮಳೆಯ ಮೊತ್ತ: ವರ್ಷಕ್ಕೆ ಸರಾಸರಿ 250-500 ಸೆಂಮೀ ಮಳೆ ಬೀಳುವಂಥ ಪ್ರದೇಶಗಳಲ್ಲಿ (ಉದಾಹರಣೆಗೆ ಕರ್ನಾಟಕದ ಆಗುಂಬೆ, ಶರಾವತಿ, ಕಾಳೀನದೀ ಹರಿವಿನ ಕ್ಷೇತ್ರಗಳಲ್ಲಿ) ನಿತ್ಯಹರಿದ್ವರ್ಣದ ಕಾಡುಗಳನ್ನು ನೋಡಬಹುದು. ಸರಾಸರಿ 500-2000 ಮೀ ಎತ್ತರದ ಪ್ರದೇಶಗಳಲ್ಲಿ ಇಂಥ ಅರಣ್ಯ ಸಾಮಾನ್ಯ. ಮೂರು ಮಜಲಿನ ಮರಗಿಡಗಳನ್ನು ಇಲ್ಲಿ ಗಮನಿಸಬಹುದು. ಮೊದಲ ಮಜಲಿನ ವೃಕ್ಷಗಳು 30-45 ಮೀ ಎತ್ತರಕ್ಕೆ ಬೆಳೆಯುವುವು. ಉದಾಹರಣೆಗೆ ಗೂಗ ಅಥವಾ ಚಲ್ಲಾನೆ (ಡಿಪ್ಟಿರೊಕಾರ್ಪಸ್ ಇಂಡಿಕಸ್), ಕೂವೆ (ಕ್ಯಾಲೊಫಿಲಮ್ ಟೊಮೆಂಟೋಸಮ್), ನಾಗಸಂಪಿಗೆ, ಎರ‍್ನಾಲ್ (ಟೆಟ್ರಮೆಲಿಸ್ ನ್ಯೂಡಿಫ್ಲೋರ), ಸಟಗ (ಎಲಿಯೊ ಕಾರ್ಪಸ್ ಟ್ಯೂಬರ್‌ಕ್ಯುಲೇಟಸ್), ಬಿಳೀದೇವದಾರು (ಡೈಸೊಕ್ಸೈಲಮ್ ಮಲಬಾರಿಕಮ್), ಪಂಚೋಟಿ ಅಥವಾ ಹಡಸಾಲೆ (ಪಲೇಕ್ವಿಯಮ್ ಎಲಿಪ್ಟಿಕಮ್). ಈ ಮರಗಳ ಬೇರು ಮರದ ಸುತ್ತ ಹಲಗೆಗಳ ಮಾದರಿಯಲ್ಲಿ (ಬಟ್ರೆಸ್) ಹರಡಿಕೊಂಡಿರುತ್ತದೆ. ಕಿರಲ್ ಬೋಗಿ (ಹಾಪಿಯ ಪಾರ್ವಿಫ್ಲೋರ), ಹೈಗ (ಹಾಪಿಯ ವೆಟಿಯಾನ), ಅಜ್ಜನಪಟ್ಟೆ (ಆಂಟೀಯೇರಿಸ್ ಟಾಕ್ಸಿಕೇರಿಯ), ನೀಲಿಮರ (ಬಿಸ್ಕೊಪಿಯ ಜವಾನಿಕ), ನಂದಿ, ಬಾಲೆಮರ (ಡಯೊಸ್ಪೈರಾಸ್ ಎಬಿನಮ್-ಎಬೊನಿ), ಸಾಲುಧೂಪ (ವ್ಯಾಟೇರಿಯ ಇಂಡಿಕ) ಹಾಗೂ ಧೂಪ (ವ್ಯಾಟಿಕ ಇಂಡಿಕ) ಇಲ್ಲಿ ಕಾಣಸಿಕ್ಕುವ ಇನ್ನಿತರ ದೊಡ್ಡಮರಗಳು. ಕರ್ನಾಟಕದ ದಕ್ಷಿಣಭಾಗದ ಕಾಡುಗಳಲ್ಲಿ ಬಲ್ಲಗಿ ಹಾಗೂ ಬಲ್ಲಂಗಿ ಎಂಬ ಹೆಸರಿನ ಎರಡು ರೀತಿಯ ಮರಗಳು ಬೆಳೆಯುವುವು. ಪ್ಯುಸಿಲೊನ್ಯೂರಾವ್ ಜಾತಿಯ ಇಂಡಿಕಮ್ ಮತ್ತು ಪಾಸಿಫ್ಲೋರಮ್ ಪ್ರಭೇದಗಳಾದ ಇವು ಪ್ರಪಂಚದಲ್ಲಿ ಇನ್ನೆಲ್ಲೂ ಬೆಳೆಯುವು. ಹೀಗಾಗಿ ಇವು ಪಶ್ಚಿಮಘಟ್ಟದ ಸ್ಥಾನಿ (ಎಂಡೆಮಿಕ್) ಪ್ರಭೇದಗಳೆನಿಸಿದವೆ.

ಎರಡನೆಯ ಮಜಲಿನ ಮರಗಳು 15-25 ಮೀ ಎತ್ತರಕ್ಕೆ ಬೆಳೆಯುವಂಥವು. ಇವುಗಳ ಪೈಕಿ ಪ್ರಧಾನವಾದವು ಮದ್ದಾಲೆ ಅಥವಾ ಸಪ್ತರ್ಣ (ಆಲ್ಸ್‌ಟೋನಿಯ ಸ್ಕಾಲರಿಸ್), ರಾಕಾಚಿ (ಹಾರ್ಡ್‌ವಿಕಿಯ ಬೈನೇಟ), ನಂಜಿನಕೊರಡು (ಸ್ಟ್ರಿಕ್ನಾಸ್ ನಕ್ಸ್-ವಾಮಿಕ), ಜಂಬೆ (ಕ್ಸೈಲಿಯ ಕ್ಸೈಲೊಕಾರ್ಪ), ವಂಟೆಮರ (ಆರ್ಟೊಕಾರ್ಪಸ್ ಲಕೂಚ) ಮತ್ತು ನೇರಿಳೆ (ಸಿಜಿಜಿಯಮ್ ಕ್ಯೂಮಿನೈ).

ಮೂರನೆಯ ಮಜಲಿನವು ಚಿಕ್ಕಗಾತ್ರದವು: ಇವು 15 ಮೀ ಗಿಂತ ಹೆಚ್ಚು ಎತ್ತರ ಬೆಳೆಯಲಾರವು. ಆಟುರಕ (ಫ್ಲಕೂರ್ಶಿಯ ಮಾಂಟಾನ), ತಣ್ಣುಣಕ (ಲೀಯ ಇಂಡಿಕ), ಗಂಡುಕೇಪಳ ಮತ್ತು ಅಲಮರ್‌ಮರ (ಮೆಮಿಸಿಲಾನ್ ಪ್ರಭೇದಗಳು), ಉಮೆ (ಸೈಕಾಟ್ರಿಯ) ಮೂಂತಾದವು ಇವುಗಳ ಪೈಕಿ ಕೆಲವು. ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಮರಗಳನ್ನು ತಬ್ಬಿ ಬೆಳೆಯುವ ದೊಡ್ಡ ಹಂಬುಗಳೂ ಉಂಟು. ಉದಾಹರಣೆ: ಹಲ್ಲೇಕಾಯಿ ಬಳ್ಳಿ (ಎಂಟಾಡ ಪರ್ಸೀತ), ಸೊಗದೇ ಬೇರು (ಹೆಮಿಡೆಸ್ಮನ್ ಇಂಡಿಕಸ್), ನವುರುಕಟ್ಟೆ (ನೀಟಮ್ ಊಲ), ಮೆಣಸು (ಪೈಪರ್ ನೈಗ್ರಮ್).

ಸಮುದ್ರಮಟ್ಟದಿಂದ ಸುಮಾರು 1600 ಮೀ ಎತ್ತರದ ಬೆಟ್ಟಸೀಮೆಗಳಲ್ಲಿ (ನೀಲಗಿರಿ, ಪಳನಿ, ಆನೆಮಲೈ, ಬಾಬಾಬುಡನ್‌ಬೆಟ್ಟ ಮುಂತಾದೆಡೆ) ಷೋಲಾ ಎಂಬ ವಿಶಿಷ್ಟರೀತಿಯ ಕಾಡುಗಳನ್ನು ನೋಡಬಹುದು. ಈ ಪ್ರದೇಶಗಳ ಬೆಟ್ಟಗುಡ್ಡಗಳ ನೆತ್ತಿ ಯಾವ ಮರಗಿಡಗಳಿಲ್ಲದೆ ಬೋಳಾಗಿರುವುದು.; ಆದರೆ ಗಾಳಿಯಿಂದ ರಕ್ಷಣೆ ದೊರೆಯುವಂಥ ಹಾಗೂ ಆರ್ದ್ರತೆ ಹೆಚ್ಚಾಗಿರುವಂಥ ಬೆಟ್ಟ ಸೆರಗುಗಳಲ್ಲಿ, ಇಳಕಲುಗಳಲ್ಲಿ ಮಾತ್ರ ದಟ್ಟವಾದ ಕಾಡುಗಳನ್ನು ಕಾಣಬಹುದು. ಇವೇ ಷೋಲಾ ಅರಣ್ಯಗಳು. ನೀಲಗಿರಿಯ ಷೋಲಾಗಳಲ್ಲಿ ಸಾಮಾನ್ಯವಾಗಿ ನೀಲಗಿರಿ, ಸಂಲಿಗೆ (ಮೈಕೇಲಿಯ ನೀಲಗಿರಿಕ), ತೊರತಿ (ಹಿಡ್ನೊಕಾರ್ಪಸ್ ಆಲ್ಪೈನ), ಬಾಗಿಸೂತ್ರ (ಬರ್ಬೆರಿಸ್ ಟಿಂಕ್ಟೋರಿಯ), ತಾರಿಕೆ (ಮ್ಯಾಹೋನಿಯ ಲೆಶೇನಾಲ್ಟಿಯೈ), ಅರದಳ (ಗಾರ್ಸೀನಿಯ ಕಾಂಬೋಗಿಯ), ಹುರುಲು (ಐಲೆಸ್ಸ್ ವೈಟಿಯಾನ), ಕಾಡುದಾಲ್ಚಿನ್ನಿ (ಸಿನಮೋಮಮ್ ವೈಟಯೈ) ಮುಂತಾದವನ್ನು ನೋಡಬಹುದು. ಇಲ್ಲಿ ಸೀತಾಳೆಗಳು ವಿಪುಲ. ಪಶ್ಚಿಮ ಘಟ್ಟಗಳ ಷೋಲಾಗಳಲ್ಲೆಲ್ಲ ಸಾಮಾನ್ಯವಾಗಿ ದೊರೆಯುವ ಸಸ್ಯಗಳೆಂದರೆ ಕೂರಿಗೆ ಪ್ರಭೇದಗಳು (ಸ್ಟ್ರೊಬೈಲ್ಯಾಂತಸ್). ಸ್ಫಟಿಕದ ಕುಟುಂಬಕ್ಕೆ ಸೇರಿದ ಇವು ಪ್ರತಿವರ್ಷ ಹೂಬಿಡುವುದಿಲ್ಲ. ಬದಲಿಗೆ 5-12 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಹೂಬಿಡುವುವು. ರೋಡೊಡೆಂಡ್ರಾನ್ ಪ್ರಭೇದಗಳೂ ಕಾಡುಹೊಗೆಸೊಪ್ಪೂ (ಲೊಬೀಲಿಯ) ಇಲ್ಲಿಯ ಇನ್ನಿತರ ಪ್ರಧಾನ ಸಸ್ಯಗಳು. ನೀಲಗಿರಿ, ಕೊಡೈಕೆನಾಲ್ ಮುಂತಾದೆಡೆ ಸುಮಾರು 2000 ಮೀ ಎತ್ತರದ ಸ್ಥಳಗಳಲ್ಲಿ ಹಿಮಾಲಯ ಸಸ್ಯಗಳಾದ ಆನಿಮೊನಿ, ಗೇಲಿಯಮ್, ಗಾಲ್ತೀರಿಯ, ಪಾರ್‌ನಾಸಿಯ, ತ್ಯಾಲಿಕ್ಟ್ರಮ್, ಕಾಟನೀಸ್ಟರ್ ಮೊದಲಾದವನ್ನು ನೋಡಬಹುದು. ಪೀತದಾರು ಕುಟುಂಬದ ಒಂದೇ ಒಂದು ಜಾತಿ ಇಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದಾಹರಣೆಗೆ ಪೋಡೊಕಾರ್ಪಸ್ (ಡೆಕಸೊಕಾರ್ಪಸ್ ವಾಲಿಚಿಯಾನಸ್).

ಸಮುದ್ರ ಮಟ್ಟದಿಂದ 650-1000 ಮೀ ಎತ್ತರದ ಪ್ರದೇಶಗಳಲ್ಲಿ ಮಿಶ್ರಪರ್ಣಪಾತಿ ಕಾಡುಗಳುಂಟು. ಇಲ್ಲಿ ಮುಂಗಾರು ಮಳೆಯ ಸಮಯದಲ್ಲಿ 150-200 ಸೆಂಮೀ ಮಳೆ ಸುರಿದು ಆಮೇಲೆ ಅನೇಕ ತಿಂಗಳುಗಳ ಕಾಲ ಮಳೆಯೇ ಇರುವುದಿಲ್ಲ. ಇಂಥ ಪರಿಸ್ಥಿತಿಯಿರುವಲ್ಲಿ ಚಳಿಗಾಲದಲ್ಲಿ ಮರಗಳಿಂದ ಎಲೆಗಳು ಉದುರುವುವು. ಆದರೆ ಅಲ್ಲಲ್ಲಿ ನಿತ್ಯಹಸುರಿನ ಮರಗಳಿರುವುದೂ ಉಂಟು. ಹಳದಿತೇಗ ಅಥವಾ ಹೆತ್ತೇಗ (ಅಡೀನ ಕಾರ್ಡಿಫೋಲಿಯ), ಮುತ್ತುಗ (ಬ್ಯೂಟಿಯ ಮಾನೊಸ್ಪರ್ಮ), ಬಾಗೆ (ಆಲ್‌ಬಿಜಿಯ), ಕಂಚವಾಳ, ಬೀಟೆ (ಡಾಲ್‍ಬರ್ಜಿಯ ಲ್ಯಾಟಿಫೋಲಿಯ), ಕೋಲುತೇಗ (ಡಿಲೆನಿಯ ಪೆಂಟಗೈನ), ಕಲ್ನಂದಿ (ಡೈಯೊಸ್ಪೈರಾಸ್ ಮಾಂಟಾನ), ಅವಕ್ ಅಥವಾ ಹಾಟಪ್ಪೆ (ಎರೀಟಿಯ ಲೀವಿಸ್), ಅತ್ತಿ ಪ್ರಭೇದಗಳು, ಬೆಂಡೆಮರ, ನಂದಿ, ಗೋಜಲ್ (ಲ್ಯಾನಿಯ ಕೋರೊಮ್ಯಾಂಡೆಲಿಕ), ಕುಂಕುಮ, ಹೊನ್ನೆ, ತೇಗ (ಎಟೆಕ್ಟೋನ ಗ್ರ್ಯಾಂಡಿಸ್), ಮತ್ತಿ (ಟರ್ಮಿನೇಲಿಯ ಪ್ರಭೇದಗಳು) ಮುಂತಾದವು ಇಲ್ಲಿಯ ವೃಕ್ಷಗಳು ಚಿಕ್ಕಗಾತ್ರದ ಮರಗಳೂ ಪೊದೆಗಳೂ ಇಲ್ಲುಂಟು. ಉದಾಹರಣೆ: ಕಾರೆ (ಕೆರಿಸ ಕಂಜೆಸ್ಟ), ಕರಿಬೇವು, ಕುರ್ಚಿ (ಕೊಡ ಮುರುಕ-ಹೊಲೇರಿನ ಆಂಟಿಡಿಸೆAಟ್ರಿಕ), ಎಲಚಿ, ಕಾಡುಬದನೆ (ಸೋಲೇನಮ).

ಕಡಿಮೆ ಮಳೆಬೀಳುವ ವಲಯಗಳಲ್ಲಿ ಮುಳ್ಳುಕಂಟಿಗಳನ್ನೂ ಕುರುಚಲುಗಳನ್ನೂ ನೋಡಬಹುದು. ಜಾಲಿ, ಕತ್ತರಿಮುಳ್ಳಿನಗಿಡ (ಕೆಪಾರಿಸ್ ಸ್ಪೈನೋಸ), ಕವಳಿ, ಗೊರಜಿ (ಫ್ಲಕೂರ್ಷಿಯ ಇಂಡಿಕ), ಕರಿಕಾರೆ (ಕ್ಸೀರಾಂಫಿಕ್ ಸ್ಪೈನೋಸ) ಇತ್ಯಾದಿ ಇಲ್ಲಿಯ ಮುಖ್ಯ ಸಸ್ಯಗಳು. ದಿಂಡಿಗ, ಕೊಳೆಮಾವು ಅಥವಾ ಮುರ್ಕಲಿ (ಬುಕನಾನಿ ಲಂಜಾನ್), ಗೌಜಲು, ಅರಿಶಿಣಬೂರುಗ (ಕಾಕ್ಲೋಸ್ಪರ್ಮಮ್ ಲಿಜಿಯೋಸಮ್), ಹೊನ್ನೆ ಕರಿಗೇರು (ಸೆಮಿಕಾರ್ಪಸ್ ಅನಕಾರ್ಡಿಯಮ್) ಮುಂತಾದವನ್ನೂ ಇಲ್ಲಿ ಕಾಣಬಹುದು. ಬಯಲುಜಾಗಗಳಲ್ಲಿ ಶ್ರೀಗಂಧ (ಸ್ಯಾಂಟಲಮ್ ಆಲ್ಬಮ್) ಬೆಳೆಯುತ್ತದೆ. ಈಚಲು ಪ್ರಭೇದಗಳೂ, ಬೊಂಬಿನ ವಿವಿಧ ಬಗೆಗಳೂ ಇಲ್ಲುಂಟು. ಹುಲ್ಲುಗಾವಲುಗಳನ್ನು ಸಹ ನೋಡಬಹುದು.

7. ಪೂರ್ವ ಘಟ್ಟ: ಇಲ್ಲಿರುವ ಬೆಟ್ಟಗಳು ಪಶ್ಚಿಮಘಟ್ಟದವಕ್ಕಿಂತ ಕಡಿಮೆ ಎತ್ತರದವು. ಅಲ್ಲದೆ ಬೆಟ್ಟಗಳು ಅಲ್ಲಲ್ಲಿ ಚದರಿದಂತಿವೆಯೇ ವಿನಾ ಅಖಂಡ ಶ್ರೇಣಿಯಾಗಿ ರೂಪಿತವಾಗಿಲ್ಲ. ಇಲ್ಲಿಯ ಮುಕ್ಕಾಲುಪಾಲು ಕಾಡುಗಳು ಪರ್ಣಪಾತಿ ಹಾಗೂ ಕುರುಚಲು ಬಗೆಯವು. ಈ ವಲಯದ ಉತ್ತರದಲ್ಲಿ ಮಾತ್ರ ಅಂದರೆ ಒರಿಸ್ಸದಲ್ಲಿ ಬಿಳೆಭೋಗಿಯ ಅರಣ್ಯಗಳವೆ. ದಕ್ಷಿಣದ ಕಡೆಗೆ ಸಾಗುತ್ತ ಬಂದಂತೆ ರಕ್ತಚಂದನ (ಟೀರೊಕರ್ಪಸ್ ಸ್ಯಾಂಟಲೈನಸ್), ಕೆಂಪುಮತ್ತಿ (ಟರ್ಮಿನೇಲಿಯ ಪ್ಯಾಲಿಡ), ನಾಗ (ಸೈಜೀಜಿಯಮ್ ಆಲ್ಟರ್ನಿಫೋಲಿಯಮ್) ಮತ್ತು ಗಂಧದ ಮರಗಳನ್ನು ನೋಡಬಹುದು. ದಖನ್ ಪ್ರಸ್ಥಭೂಮಿಯ ಬೆಟ್ಟಗಳಲ್ಲಿ ಜಾಲಿ, ತಂಗಡಿ (ಕ್ಯಾಸಿಯ ಪ್ರಭೇದಗಳೂ), ಹೊಂಗೆ (ಪೊಂಗೇಮಿಯ ಪಿನ್ನೇಟ), ಬೇವು, ಹೆತ್ತೆಗ, ಕಾರೆ (ಕ್ಯಾಂತಿಯಮ್ ಪ್ರಭೇದ), ಬಕುಳ (ಮಾನಿಲ್ಕಾರ ಹೆಕ್ಸಾಮಡ್ರ), ಬಾಲೆಮರ, ಚಳ್ಳೆ (ಕಾರ್ಡಿಯ ಡೈಕಾಟೊಮ) ಹಾಗೂ ಕಳ್ಳಿ ಜಾತಿಯ ವಿವಿಧ ಪ್ರಭೇದಗಳು (ಯೂಫೋರ್ಬಿಯ) ಬೆಳೆಯುವುವು. ಇನ್ನೂ ದಕ್ಷಿಣಕ್ಕೆ ಸಾಗಿದರೆ ಸಾಗವಾನಿ (ತೇಗ), ದಿಂಡಿಗಳು ಹೇರಳ. ಶುಷ್ಕಪ್ರದೇಶಗಳಲ್ಲಿ ಮುಳ್ಳುಗಳಿರುವ ಕುರುಚಲು ಗಿಡಗಳೇ ಪ್ರಧಾನ.

8. ದಖನ್ ಪ್ರಸ್ಥಭೂಮಿ: ವಿಂಧ್ಯಪರ್ವತ ಶ್ರೇಣಿಯ ದಕ್ಷಿಣಕ್ಕೆ ಇರುವ ಪ್ರದೇಶವೆಂದು ಸ್ಥೂಲವಾಗಿ ಹೇಳಬಹುದು. ಒಂದು ಕಡೆ ಪಶ್ಚಿಮ ಘಟ್ಟಗಳೊಂದಿಗೂ ಇನೊಂದು ಕಡೆ ಪೂರ್ವ ಘಟ್ಟಗಳೊಂದಿಗೆ ಸೇರಿಕೊಳ್ಳುವುದೂ ಇದರ ಎಲ್ಲೆಗಳು ಸ್ಪಷ್ಟವಾಗಿಲ್ಲ. ಈ ಕ್ಷೇತ್ರದ ಅಧಿಕಾಂಶ ಪರ್ಣಪಾತಿ ಅರಣ್ಯಗಳಿಂದ ಕೂಡಿದೆ. ಉಳಿದಂತೆ ಬರಿಯ ಕುರುಚಲು ಕಾಡೇ. ತೇಗ ಅಥವಾ ಸಾಗವಾನಿ ಇದರ ಪ್ರಮುಖ ಸಸ್ಯ.

9. ಕರಾವಳಿ ಪ್ರದೇಶ: ಪಶ್ಚಿಮದಲ್ಲಿ ಗುಜರಾತಿನ ದ್ವಾರಕೆಯಿಂದಲೂ ಪೂರ್ವದಲ್ಲಿ ಕಲ್ಕತೆಯಿಂದಲೂ ಆರಂಭಗೊಂಡು ದಕ್ಷಿಣದ ತುದಿ ಕನ್ಯಾಕುಮಾರಿಯವರೆಗಿನ ಸಮುದ್ರತೀರ ಪ್ರದೇಶಗಳು ಅನುಕ್ರಮವಾಗಿ ಪಶ್ಚಿಮ ಕರಾವಳಿ ಮತ್ತು ಪೂರ್ವಕರಾವಳಿಗಳಾಗಿದ್ದು ವಿಶಿಷ್ಟರೀತಿಯ ಸಸ್ಯವರ್ಗಕ್ಕೆ ನೆಲೆಗಳಾಗಿವೆ. ದಕ್ಷಿಣಕ್ಕೆ ಸಾಗಿದಂತೆ ಕರಾವಳಿಯುದ್ದಕ್ಕೂ ಪ್ರಧಾನವಾಗಿ ಕಾಣುವ ಸಸ್ಯಗಳು ತೆಂಗು (ಕೋಕೋಸ್ ನ್ಯೂಸಿಫರ) ಮತ್ತು ತಾಟಿನುಂಗು (ಬರ‍್ಯಾಸಸ್ ಫ್ಲಾಬೆಲಿಫರ್). ತೀರಪ್ರದೇಶದಲ್ಲಿ, ವಿಶೇಷವಾಗಿ ಪೂರ್ವಕರಾವಳಿಯಲ್ಲಿ, ನದಿಗಳು ಸಮುದ್ರವನ್ನು ಸೇರುವ ಜಾಗಗಳಲ್ಲಿ ಮ್ಯಾಂಗ್ರೋವ್ ತೋಪುಗಳನ್ನು ಕಾಣಬಹುದು. ಇವು ವಿಶಿಷ್ಟ ತೆರನ ಸಸ್ಯಗಳು. ಇಂಥ ತೋಪುಗಳ ಪೈಕಿ ಬಲು ವಿಸ್ತಾರವಾದ್ದು ಹಾಗೂ ಪ್ರಸಿದ್ಧವಾದ್ದು ಪಶ್ಚಿಮ ಬಂಗಾಳದ ಸುಂದರವನ (ಸುಂದರ್‌ಬನ್ಸ್) ಮ್ಯಾಂಗ್ರೋವ್ ಕಾಡುಗಳು. ಪ್ರಧಾನ ಸಸ್ಯಗಳೆಂದರೆ ರೈಜೋಫೋರ, ಬ್ರಗ್ವೀರ, ಸೀರಿಯಾಪ್ಸ್, ಕರಾಲಿಯ, ಅವಿಸೆನ್ನಿಯ, ಈಜಿಯಾಲೈಟಿಸ ಮತ್ತು ಲುಮ್ನಿಟ್ಸೆರ. ಚೌಬೀನೆಗೆ ಮತ್ತು ಚರ್ಮಹದಮಾಡಲು ಬಳಸುವ ಟ್ಯಾನಿನ್ ತಯಾರಿಕೆಗೆ ಈ ಸಸ್ಯಗಳು ಉಪಯುಕ್ತವೆನಿಸಿವೆ.

ತೀರಪ್ರದೇಶದ ಮರಳುದಿಬ್ಬಗಳ (ಸ್ಯಾಂಡ್ ಡ್ಯೂನ್ಸ್) ಮೇಲೆ ಮುಳ್ಳಿಚುಳ್ಳಿ (ಅಕ್ಯಾಂತಸ್ ಇಲಿಸಿಫೋಲಿಯಸ್), ಆಡುಬಳ್ಳಿ (ಐಫೋಮಿಯ ಪೆಸ್-ಕ್ಯಾಪ್ರೀ ಮತ್ತು ಐ,ಬೈಲೋಬ), ರಾವಣವಮೀಸೆಹುಲ್ಲು (ಸ್ಟೇನಿಫಿಕ್ಸ್ ಸ್ಕ್ವಾರೋಸಸ್) ಮುಂತಾದವು ಬೆಳೆಯುತ್ತವೆ. ನೆಲದಲ್ಲಿ ಉಪ್ಪಿನ ಆಧಿಕ್ಯ ಇರುವೆಡೆ ಗಂಟುಗಂಟು ಕಾಂಡವಿರುವ ಸ್ಯಾಲಿಕಾರ್ನಿಯ ಮತ್ತು ಸುಯೇಡ ಗಿಡಗಳಿವೆ. ಇನ್ನೂ ಕೆಲವೆಡೆ ಸರ್ವೆಮರ ಅಥವಾ ಗಾಳಿಮರಗಳನ್ನು (ಕ್ಯಾಸುರಿನ ಈಕ್ವಿಸಿಟಿಫೋಲಿಯ) ನೋಡಬಹುದು. ಗಾಳಿಯನ್ನು ಹಾಗೂ ಮರಳಿನ ಚಲನೆಯನ್ನು ತಡೆಯಲು ಮತ್ತು ಉರುವಲಾಗಿ ಬಳಸಲು ಈ ಮರ ಬಹಳ ಉಪಯುಕ್ತ. ಇದು ಇಲ್ಲಿಯ ಸ್ವಾಭಾವಿಕ ಸಸ್ಯವಲ್ಲ; ಆಸ್ಟ್ರೇಲಿಯದಿಂದ ತಂದು ನೆಟ್ಟಿರುವ ವಿದೇಶೀ ಮರ. ಕಡಲಕಿನಾರೆಗಳ ಬಂಡೆಗಳ್ಲುಗಳ ಮೇಲೆ ಹಸುರು, ಕಂದು, ಕೆಂಪು, ಆಲ್ಜೀಗಳು ಬೆಳೆಯುವುವು.

10. ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪ ಸಮೂಹ: ಭಾರತದ ಮುಖ್ಯನೆಲದಿಂದ ನೂರಾರು ಕಿಲೊಮೀಟರ್ ದೂರದಲ್ಲಿದ್ದು ಕಾಲಾಂತರದಿಂದ ಇತರ ಭೂಸಂಪರ್ಕವಿಲ್ಲದಿರುವುದರಿಂದ ಇಲ್ಲಿಯ ಅನೇಕ ಗಿಡಮರಗಳು ಇಲ್ಲಿಗೆ ಮಾತ್ರ ಸೀಮಿತವಾಗಿವೆ. ಎಂದೇ ಇವನ್ನು ಇಲ್ಲಿಯ ಸ್ಥಾನಿಕ (ಎಂಡೆಮಿಕ್) ಪ್ರಭೇದಗಳು ಎನ್ನಲಾಗುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕರಾವಳಿ ಅರಣ್ಯಗಳೂ (ಬೀಚ್ ಫಾರೆಸ್ಟ್) ಮ್ಯಾಂಗ್ರೋವ್ ತೋಪುಗಳೂ ನಿತ್ಯಹರಿದ್ವರ್ಣದ ಕಾಡುಗಳೂ ಪರ್ಣಪಾತಿ ಕಾಡುಗಳೂ ಉಂಟು. ಇಲ್ಲಿ ಬೆಳೆಯುವ ಸಸ್ಯಜಾತಿಗಳಲ್ಲಿ ಬಹುತೇಕ ಪ್ರಭೇದಗಳು ಪಶ್ಚಿಮ ಘಟ್ಟ ಹಾಗೂ ಅಸ್ಸಾಮ್ ಪ್ರದೇಶದವನ್ನು ಹೋಲುತ್ತವಾದರೂ ಹಲಕೆಲವು ಬಗೆಗಳು ಮಾತ್ರ ಇಲ್ಲಿಗೆ ವಿಶಿಷ್ಟ. ಅಲ್ಲದೆ ಇಲ್ಲಿ ಕೆಲವು ತೆನ ಸಸ್ಯಗಳಿಗೂ ಮಲಯ ಇಂಡೋನೇಷ್ಯದ ಇದೇ ಜಾತಿಯವಕ್ಕೂ ಸಂಬಂಧವುಂಟು.

ಲಕ್ಷದ್ವೀಪದಲ್ಲಿ ಹೊರಗಿನಿಂದ ತಂದು ಬೆಳೆಸಲಾಗಿರುವ ಸಸ್ಯಗಳೇ ಹೆಚ್ಚು. ಇವು ಇಲ್ಲಿಯ ಹವೆಗೆ ಒಗ್ಗಿಕೊಂಡು ಬೆಳೆಯುತ್ತಿದ್ದು ದೇಶಿಕೃತ (ನ್ಯಾಚುರಲೈಸ್ಡ್) ಪರಕೀಯ ಸಸ್ಯಗಳೆನಿಸಿಕೊಂಡಿವೆ. ಭಾರತದ ದಕ್ಷಿಣಭಾಗದ ತೀರಪ್ರದೇಶಗಳಲ್ಲಿ ಬೆಳೆಯುವ ಅನೇಕ ಗಿಡಮರಗಳೂ ಇಲ್ಲುಂಟು.

ಈ ಲೇಖನದಲ್ಲಿ ವಿವರಿಸಿರುವ, ಹೆಸರಿಡುವ ಗಿಡಮರಗಳು ಬೀಜಯುಕ್ತ ಸಸ್ಯಗಳು ಮಾತ್ರ. ಇವುಗಳ ಪ್ರಭೇದಗಳ ಸಂಖ್ಯೆ 13000-14000 ಎನ್ನಲಾಗಿದೆ. ಇವಲ್ಲದೆ ದೇಶದಲ್ಲಿ ಹಲವಾರು ಸಾವಿರ ಅಬೀಜ ಸಸ್ಯಗಳೂ ಜರೀಗಿಡಗಳೂ ಹಾವಸೆ, ಶಿಲೀಂಧ್ರ, ಪಾಚಿ, ಕಲ್ಲುಹೂ ಜಾತಿಗಳೂ ಉಂಟು. ಜೊತೆಗೆ ಹಲವಾರು ಕಾರಣಗಳಿಗಾಗಿ ಪರದೇಶಗಳಿಂದ ತಂದು ಬೆಳೆಸಿದ ನೂರಾರು ಸಸ್ಯಪ್ರಭೇದಗಳನ್ನೂ ಭಾರತದಲ್ಲಿ ಕಾಣಬಹುದು. ಉದಾಹರಣೆ ಆಸ್ಟ್ರೇಲಿಯದ ನೀಲಗಿರಿ (ಯೂಕೆಲಿಪ್ಪಸ್), ನಾಟಿಓಕ್ (ಗ್ರೆವಿಲಿಯರೊಬಸ್ಟ), ಅಕೇಸಿಯ, ಕ್ಯಾಲಿಸ್ಟೀಮಾನ್ (ಬಾಟಲ್ ಬ್ರಷ್), ಅಮೆರಿಕದ ಉಷ್ಣವಲಯದ ಜಕರಾಂಡ, ಟ್ಯಾಬಿಬುಯ, ಟೆಕೋಮ. ಬೋಗನ್‌ವಿಲ್ಯ, ಆಫ್ರಿಕ ಮತ್ತು ಮ್ಯಾಲಗ್ಯಾಸೀಗಳ ನಿರುಕಾಯಿ (ಸ್ಟ್ಯಾತೋಡಿಯ), ಮರಸೌತೆ (ಕೈಜೀಲಿಯ ಪಿನ್ನೆಟ), ಗುಲ್‌ಮೊಹರ್ (ಡೆಲೊನಿಕ್ಸ್ ರೀಜಿಯ) ಕಾಫಿ, ರಬ್ಬರ್, ಕೋಕೋ ಮುಂತಾದವು. ಅನಪೇಕ್ಷಿತವಾಗಿ ಭಾರತಕ್ಕೆ ಬಂದಿರುವ ಸಸ್ಯಗಳೂ ಉಂಟು. ನೆಗ್ಗಿಲು (ಟ್ರಿಬ್ಯುಲಸ್‌ಟೆ ರೆಸ್ಟ್ರಿಸ್), ಲಂಟಾನ, ಕ್ಸಾಂತಿಯಮ್, ಯುಪಟೊರಿಯಮ್, ಮೈಕಾನಿಯ, ಪಾರ್ತೀನಿಯಮ್, ಐಕಾರ್ನಿಯ ಇಂಥವು ಮುಖ್ಯವೆನಿಸಿವೆ. ಇಲ್ಲಿಯ ಪರಿಸರಕ್ಕೆ ಅದ್ಭುತವಾಗಿ ಹೊಂದಿಕೊಂಡು ದೇಶೀಕೃತವಾಗಿರುವ ಈ ಪರಕೀಯ ಸಸ್ಯಗಳು ಭಾರತದ ಸಸ್ಯವರ್ಗದ ಮೇಲೆ ತಕ್ಕಮಟ್ಟಿನ ಪ್ರಭಾವಬೀರಿವೆ.

ಉಲ್ಲೇಖಗಳು

ಬದಲಾಯಿಸಿ
  1. Majid, Husain (2014-01-01). Geography of India (in ಇಂಗ್ಲಿಷ್). McGraw-Hill Education. p. 5.2. ISBN 9789351343578.
  2. Nag, Prithvish; Sengupta, Smita (1992-01-01). Geography of India (in ಇಂಗ್ಲಿಷ್). Concept Publishing Company. p. 79. ISBN 9788170223849.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: