ಕೂವೆ ಮರ
ಕೂವೆ ಮರವು ಗಟ್ಟಿಫೆರೀ ಅಥವಾ ಕ್ಲೂಸಿಯೇಸೀ ಕುಟುಂಬಕ್ಕೆ ಸೇರಿದ ಕ್ಯಾಲೊಫಿಲಂ ಏಲೇಟಂ ಎಂಬ ಶಾಸ್ತ್ರೀಯ ಹೆಸರಿನ ಮರ. ಕ್ಯಾಲೊಫಿಲಂ ಟೊಮೆಂಟೋಸಂ ಇದರ ಪರ್ಯಾಯ ನಾಮ. ಇದರ ಕಾಂಡವನ್ನು ಹಡಗಿನ ಪಟವನ್ನು ಕಟ್ಟಲು ಸ್ತಂಭ ಅಥವಾ ಕೂವೆಯಾಗಿಸುವುದರಿಂಗ ಇದಕ್ಕೆ ಈ ಹೆಸರು ಬಂದಿದೆ.
ಭಾರತ ಮತ್ತು ಸಿಂಹಳಗಳ ಮೂಲವಾಸಿಯಾದ ಇದು ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದ ಪಶ್ಚಿಮ ಘಟ್ಟಗಳಲ್ಲಿ 000' - 5000' ಎತ್ತರದ ನಿತ್ಯಹರಿದ್ವರ್ಣದ ಕಾಡುಗಳಲ್ಲಿದು ಹೇರಳ. ಬೃಹದ್ ಗಾತ್ರಕ್ಕೆ ಬೆಳೆಯುವ ಈ ಮರದಲ್ಲಿ 150' - 160' ಎತ್ತರಕ್ಕೆ ನೇರವಾಗಿ ಕಂಬದಂತೆ ಬೆಳೆಯುವ ಅಚ್ಚುಕಟ್ಟಾದ ಕಾಂಡವಿದೆ. ಕಾಂಡದ ಸುತ್ತಳತೆ ಸುಮಾರು 15'. ಮರದ ತೊಗಟೆ ಉದ್ದುದ್ದವಾಗಿ ಸೀಳಿದೆ. ತೊಗಟೆಯ ಬಣ್ಣ ಹಳದಿ. ಸೀಳಿರುವ ತೊಗಟೆಯಿಂದ ಮರವನ್ನು ಸುಲಭವಾಗಿ ಗುರುತಿಸಬಹುದು. ಮರ ಬಲುಗಟ್ಟಿ. ಮರದ ತುದಿಯಲ್ಲಿ ಮಾತ್ರ ರೆಂಬೆಗಳಿರುವುದು ಈ ಮರದ ವೈಶಿಷ್ಟ್ಯ. ಕೂವೆ ಮರದ ಎಲೆಗಳು ಸರಳ ಮಾದರಿಯವು; ಅಭಿಮುಖವಾಗಿ ಜೋಡಣೆಗೊಂಡಿವೆ. ಹೂಗಳು ರೆಂಬೆಗಳು ತುದಿಯಲ್ಲಿನ ಇಲ್ಲವೆ ಎಲೆಗಳ ಕಂಕುಳಲ್ಲಿನ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಏಕಲಿಂಗಿಗಳಾಗಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿರಬಹುದು. ಎರಡು ಬಗೆಯವೂ ಒಂದೇ ಮರದಲ್ಲಿರುತ್ತವೆ. ಪುಷ್ಪಪತ್ರಗಳು 4. ದಳಗಳು 4. ಕೇಸರಗಳು ಅಸಂಖ್ಯಾತವಾಗಿವೆ. ಉಚ್ಚಸ್ಥಾನದ ಅಂಡಾಶಯವಿದೆ. ಇದರ ಅಂಡಕೋಶದಲ್ಲಿ ಒಂದೇ ಕೋಣೆಯಿದ್ದು ಒಳಗೆ ಒಂದೇ ಅಂಡಕವಿದೆ. ಕಾಯಿ ಅಷ್ಟಿಫಲ ಮಾದರಿಯದು.
ಕೂವೆ ಮರದ ಚೌಬೀನೆ ನಸುಗೆಂಪುಬಣ್ಣದ್ದಾಗಿದ್ದು ಗಂಟುಗಳಿಲ್ಲದೆ ನಯವಾಗಿರುವುದರಿಂದ ಗೃಹನಿರ್ಮಾಣದ ಕೆಲಸಗಳಿಗೆ ಪೀಠೋಪಕರಣಗಳಿಗೆ ಬಹಳ ಉತ್ತಮವಾದ ಮರ ಎನಿಸಿದೆ. ಇದರ ಎಳೆಗಳು ಅಡ್ಡಡ್ಡವಾಗಿ ಹೆಣೆದುಕೊಂಡಿರುವುದರಿಂದ ಇದು ಬಲು ಗಟ್ಟಿಯಾಗಿದೆ. ಅಲ್ಲದೆ ಇದಕ್ಕೆ ಚೆನ್ನಾಗಿ ಹೊಳಪು ಕೊಡಬಹುದು. ಚೌಬೀನೆಯನ್ನು ಹದಕ್ಕೆ ತರಲು ಇದರ ದಿಮ್ಮಿಗಳನ್ನು ಕಡಿಮೆ ಉಷ್ಣತೆಯಲ್ಲಿ ಸಂಸ್ಕತಿಸುತ್ತಾರೆ. ಕೆಲವು ವೇಳೆ ನೀರಿನಲ್ಲಿ ನೆನೆಹಾಕಿ ಮರವನ್ನು ಮತ್ತಷ್ಟು ಗಟ್ಟಿಮಾಡಿ, ಚೇಗುಮರ ಬಿರುಕು ಬಿಡದಂತೆ ತಡೆಗಟ್ಟಬಹುದಾಗಿದೆ.
ಕಾಂಡ ಉದ್ದವಾಗಿಯೂ ಇರುವುದರಿಂದ ಹಡಗುಗಳ ಪಟಗಳ ಆಧಾರಕ್ಕಾಗಿ ಬಳಸುವ ದೂಲ ಅಥವಾ ಪಟಸ್ತಂಭವಾಗಿ ಕೂವೆ ಮರವನ್ನು ಯಥಾವತ್ ಉಪಯೋಗಿಸಲಾಗುತ್ತದೆ. ಅನೇಕ ಶತಮಾನಗಳ ಹಿಂದೆ ರೋಮನರು ಭಾರತಕ್ಕೆ ಬಂದು ಕೂವೆಮರಗಳನ್ನು ಕಡಿದು ಹಡಗುಗಳನ್ನು ಕಟ್ಟಲು ಕೊಂಡೊಯ್ಯುತ್ತಿದ್ದರು. ವಿದ್ಯುತ್ ಕಂಬಗಳಾಗಿಯೂ ಗೂಡಾರದ (ಡೇರೆಯ) ಆಧಾರಸ್ತಂಭಗಳಾಗಿಯೂ ಕೂವೆ ಮರದ ಬಳಕೆ ಇದೆ. ಚಾವಣಿಗಳಿಗೆ ತೊಲೆಯಾಗಿ, ಯುದ್ಧದಲ್ಲಿ ಗುರಾಣಿಯಾಗಿ, ಗಣಿತಶಾಸ್ತ್ರದಲ್ಲಿ ಸಲಕರಣೆಯಾಗಿ ಇದು ರಾರಾಜಿಸಿದೆ. ಬ್ರಿಟಿಷರ ಕಾಲದಲ್ಲಿ ಕೂವೆ ಮರದಿಂದ ಕಟ್ಟಿದ ಸಣ್ಣಸಣ್ಣ ಸೇತುವೆಗಳು ಈಗಲೂ ಭಾರತದ ಪೂರ್ವ ಮತ್ತು ಪಶ್ಚಿಮಘಟ್ಟಗಳಲ್ಲಿ ಭದ್ರವಾಗಿವೆ. ವಿಮಾನದ ಮರದ ಭಾಗಗಳಿಗೂ ಇದು ಸೂಕ್ತವೆನಿಸಿದೆ. ಕೂವೆ ಮರದಿಂದ ಅನೇಕ ಆದಿವಾಸಿಗಳು, ಕಾಡು ಜನಾಂಗದವರು ಮಡಕೆಗಳನ್ನು ಮಾಡಿಕೊಂಡಿದ್ದರೆಂಬುದೂ ಬೆಳಕಿಗೆ ಬಂದಿದೆ. ಅಲ್ಲದೆ, ಕೂವೆ ಮರದ ಕಾಂಡದಲ್ಲಿ ದೊಡ್ಡದಾದ ಸ್ರಾವ ಕಾಲುವೆಗಳಲ್ಲಿ ಹರಿಯುವ ದ್ರವದಿಂದ ಅಂಟು ಪದಾರ್ಥಗಳನ್ನು ಪಡೆಯಲಾಗುತ್ತದೆ. ಕೂವೆಬೀಜದೊಳಗಿರುವ ಭ್ರೂಣ ದೊಡ್ಡದಾಗಿದ್ದು ಅದರಲ್ಲಿ 70% ರಷ್ಟು ಕೆಂಪುವರ್ಣದ ಎಣ್ಣೆ ಇದೆ. ಕೂವೆ ಎಣ್ಣೆ ಎನ್ನಲಾಗುವ ಇದನ್ನು ದೀಪದ ಬುಡ್ಡಿಗಳನ್ನು ಉರಿಸಲು ಬಳಸಲಾಗುತ್ತದೆ. ಬೀಜ ವಿಷಪೂರಿತವೆಂದು ಹೇಳಲಾಗಿದೆ.