ಸಿರಿಸ ಮರ ವು ಫ್ಯಾಬೇಸೀ (ಲೆಗ್ಯುಮಿನೇಸೀ) ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದ ಮರ. ಅಲ್ಬೀಜಿಯ ಲೆಬಕ್ ಇದರ ವೈಜ್ಞಾನಿಕ ಹೆಸರು. ಭಾರತವೇ ಇದರ ತವರು ಎಂದು ಭಾವಿಸಲಾಗಿದೆ. ಶಿರೀಷ ಇದರ ಸಂಸ್ಕೃತ ಹೆಸರು. ಇಂಗ್ಲಿಷ್‍ನಲ್ಲಿ ಇದನ್ನು ಸಿರಿಸ್ ಟ್ರೀ ಎಂದು ಕರೆಯುತ್ತಾರೆ. ದಕ್ಷಿಣ ಭಾರತದ ಮೈದಾನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉಪ ಹಿಮಾಲಯ ಭಾಗಗಳಲ್ಲಿ 5,000 ಅಡಿ ಎತ್ತರದವರೆಗೆ ಕಾಣಸಿಗುತ್ತದೆ. ಈಜಿಪ್ಟ್‍ನಲ್ಲಿ ಹಾಗೂ ಸಮಶೀತೋಷ್ಣ ವಲಯದ ದೇಶಗಳಲ್ಲೂ ಉಂಟು. ಬೌದ್ಧರಿಗೆ ಪವಿತ್ರವೆನಿಸುವ ಮರಗಳಲ್ಲಿ ಇದೂ ಒಂದು. ಕನ್ನಡದಲ್ಲಿ ಇದನ್ನು ಬಾಗೆ ಮರ ಎಂದೂ ಕರೆಯುತ್ತಾರೆ.

ಸಿರಿಸ ಮರ
ಸಿರಿಸ
Scientific classification
ಸಾಮ್ರಾಜ್ಯ:
ಪ್ಲಾಂಟೇ
Division:
ಟ್ರಾಕಿಯೋಫೈಟ್ಸ್
ವರ್ಗ:
ಆಂಜಿಯೋಸ್ಪರ್ಮ್ಸ್
ಗಣ:
ಫೇಬಲ್ಸ್
ಕುಟುಂಬ:
ಫ್ಯಾಬೇಸಿ
ಕುಲ:
ಅಲ್ಬಿಜಿಯಾ
ಪ್ರಜಾತಿ:
ಲೆಬ್ಬೆಕ್
Binomial name
ಅಲ್ಬಿಜಿಯಾ ಲೆಬ್ಬೆಕ್
ಕರೋಲಸ್ ಲಿನ್ನೆಯಸ್ ಲಿ.

ಸಿರಿಸ ಮರ ಎತ್ತರಕ್ಕೆ ಬೆಳೆಯುತ್ತದೆ. ಇದರ ತೊಗಟೆ ಬೂದು ಅಥವಾ ಕಂದು ಬಣ್ಣದ್ದು, ಎಲೆಗಳು ಸಂಯುಕ್ತ ರೀತಿಯವು. ಒತ್ತೊತ್ತಾಗಿರುವ ಚೆಂಡಿನಾಕಾರದ ಪುಷ್ಟಗುಚ್ಛಗಳಿವೆ. ಹೂಗಳು ಮಾಸಲು ಬಿಳಿಬಣ್ಣದವು; ಹೆಚ್ಚು ಆಕರ್ಷಕವಲ್ಲ. ಹೂಗಳಲ್ಲಿ ಉದ್ದವಾದ ಕೇಸರಗಳಿವೆ. ಹೂ ಬಿಡುವ ಸಮಯ ಏಪ್ರಿಲ್ - ಮೇ. ಹೂಗಳು ಪರಿಮಳಯುಕ್ತ. ಸಾಧಾರಣ ಸೆಪ್ಟೆಂಬರ್ — ಅಕ್ಟೋಬರ್ ವೇಳೆಗೆ ಮರದಲ್ಲಿ ಫಲಗಳು ಮಾಗುವುವು. ಆಗ ಮರ ಎಲೆಗಳನ್ನು ಉದುರಿಸಿರುತ್ತದೆ. ಫಲಗಳು ಪಾಡ್ ರೀತಿಯವು. ಶುಷ್ಕ ಫಲಗಳು ಗಾಳಿಯಲ್ಲಿ ಅಲ್ಲಾಡಿದಾಗ ಮಾಂಸವನ್ನು ಹುರಿವ ಶಬ್ದವನ್ನು ಹೋಲುವ ಸದ್ದು ಉಂಟಾಗುವುದರಿಂದ ಈ ಮರಕ್ಕೆ ಫ್ರೈಟ್ರೀ ಎಂಬ ಹೆಸರು ಬಂದಿದೆ.

ಸಿರಿಸ ಬೇಗನೆ ಬೆಳೆಯುವ ಮರವಾದುದರಿಂದ ರಸ್ತೆಯ ಬದಿಗಳಲ್ಲಿ ಸಾಲುಮರವಾಗಿ ಬೆಳೆಸಲು ಬಲು ಯೋಗ್ಯ. ಇದನ್ನು ಗೆಲ್ಲುಗಳಿಂದ ಬೆಳೆಸಬಹುದು. ಕಾಫಿ, ಟೀ ಪ್ಲಾಂಟೇಷನ್‍ಗಳಲ್ಲಿ ನೆರಳು ಮರವಾಗಿ ಸಹ ಇದನ್ನು ಬೆಳಸುವುದಿದೆ. ಸಿರಿಸ ಮರದಿಂದ ಸಾಧಾರಣ ದರ್ಜೆಯ ಚೌಬೀನೆ ದೊರೆಯುತ್ತದೆ. ಮನೆಗಳ ಒಳ ಅಲಂಕಾರಗಳಲ್ಲಿ, ಚಕ್ರ, ಕಬ್ಬುಗಾಣ, ಎಣ್ಣೆ ಮಿಲ್ಲು, ರೈಲ್ವೆ ಕ್ಯಾರಿಯೇಜ್, ಕೃಷಿ ಮತ್ತು ಉದ್ಯಮ ಹತ್ಯಾರುಗಳಲ್ಲಿ ಕಿಟಕಿ ಹಾಗೂ ಬಾಗಿಲುವಾಡಗಳಲ್ಲಿ ಇದು ಉಪಯುಕ್ತ. ಮರದಿಂದ ಉದುರುವ ತರಗೆಲೆಗಳು ಒಳ್ಳೆಯ ಗೊಬ್ಬರ. ಮರದಿಂದ ಒಂದು ತರದ ಅಂಟು ದೊರೆಯುತ್ತದೆ. ತೊಗಟೆ ಪುಡಿಯನ್ನು ಸಾಬೂನು ಬದಲು ಬಳಸುವುದುಂಟು. ತೊಗಟೆಯಿಂದ ಟ್ಯಾನಿನ್ ವಸ್ತು ಮತ್ತು ಔಷಧಿ ದೊರೆಯುತ್ತವೆ. ಈ ಟ್ಯಾನಿನ್ನಿನಿಂದ ಮೀನಿನ ಬಲೆಗಳನ್ನು ಟ್ಯಾನ್ ಮಾಡುವುದಿದೆ. ಎಲೆ ಗೆಲ್ಲುಗಳು ಜಾನುವಾರುಗಳಿಗೆ ಒಳ್ಳೆಯ ಮೇವೂ ಹೌದು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಿರಿಸ&oldid=1228807" ಇಂದ ಪಡೆಯಲ್ಪಟ್ಟಿದೆ