ಮೇಘಾಲಯ

ಭಾರತದ ರಾಜ್ಯ

ಮೇಘಾಲಯ (ಉಚ್ಚಾರಣೆ [meːˈɡʱaːləjə]) ಈಶಾನ್ಯ ಭಾರತದಲ್ಲಿರುವ ಒಂದು ಸಣ್ಣ ರಾಜ್ಯ. ಶಾಸ್ತ್ರೀಯವಾಗಿ, "ಮೇಘಾಲಯ " ಎಂಬ ಶಬ್ದವು, ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ "ಮೋಡಗಳ ನಿವಾಸ " ಎಂದರ್ಥ. ಮೇಘಾಲಯವು ದೇಶದ ಈಶಾನ್ಯಭಾಗದಲ್ಲಿರುವ ಬೆಟ್ಟ-ಗುಡ್ಡಗಳುಳ್ಳ ಪಟ್ಟೆಯಿದ್ದಂತಿದೆ. ಪೂರ್ವದಿಂದ ಪಶ್ಚಿಮಕ್ಕೆ ೩೦೦ ಕಿಲೋಮೀಟರ್‌ ಹಾಗೂ ೧೦೦ ಕಿಲೋಮೀಟರ್‌ ಅಗಲಕ್ಕೆ ವ್ಯಾಪಿಸಿದೆ. ಇದರ ಒಟ್ಟು ವಿಸ್ತೀರ್ಣ ೮,೭೦೦ ಚದರ ಮೈಲ್‌ಗಳು (೨೨,೭೨೦ ಚದರ ಕಿಲೋಮೀಟರ್‌ಗಳು). ಇಸವಿ ೨೦೦೦ದಲ್ಲಿ ಜನಸಂಖ್ಯೆಯು ೨,೧೭೫,೦೦೦ದಷ್ಟಿತ್ತು. ರಾಜ್ಯದ ಉತ್ತರ ಭಾಗದಲ್ಲಿ ಆಸ್ಸಾಂ‌ ರಾಜ್ಯ ಹಾಗೂ ದಕ್ಷಿಣ ಭಾಗದಲ್ಲಿ ಬಾಂಗ್ಲಾ ದೇಶವಿದೆ. ಪೂರ್ವದ ಸ್ಕಾಟ್ಲೆಂಡ್‌ ಎಂದು ಕರೆಯಲಾದ ಶಿಲ್ಲಾಂಗ್‌, ಮೇಘಾಲಯದ ರಾಜಧಾನಿ. ಈ ನಗರದ ಜನಸಂಖ್ಯೆ ೨೬೦,೦೦೦ದಷ್ಟಿದೆ.ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ. ಮೇಘಾಲಯದ ಉಪ-ಉಷ್ಣ ಅರಣ್ಯಗಳ ಪರಿಸರ ವಲಯವು ರಾಜ್ಯಾದ್ಯಂತ ವ್ಯಾಪಿಸಿದೆ. ಇದರ ಬೆಟ್ಟ-ಗುಡ್ಡ ಕಾಡುಗಳು, ಉತ್ತರ ಹಾಗೂ ದಕ್ಷಿಣದಲ್ಲಿರುವ ತಗ್ಗುಪ್ರದೇಶ ಉಷ್ಣವಲಯ ಕಾಡುಗಳಿಗಿಂತಲೂ ಭಿನ್ನವಾಗಿವೆ. ಮೇಘಾಲಯದ ಕಾಡುಗಳು ಸಸ್ತನಿ ಹಾಗೂ ಪಕ್ಷಿವರ್ಗ, ಪ್ರಾಣಿಗಳ ಹಾಗೂ ಸಸ್ಯಗಳ ಜೀವವೈವಿಧ್ಯಕ್ಕೆ ಖ್ಯಾತಿಯಾಗಿದೆ.

ಮೇಘಾಲಯ
Meghalaya
state
 • Rank22nd
Population
 • Total೨೩,೦೬,೦೬೯
 • Rank23rd
Websitemeghalaya.nic.in

ಇತಿಹಾಸ

ಬದಲಾಯಿಸಿ

ಆಸ್ಸಾಂ‌ ರಾಜ್ಯದ ಮೂರು ಜಿಲ್ಲೆಗಳಾದ ಏಕೀಕೃತ ಖಾಸಿ ಹಿಲ್ಸ್‌, ಜೈನ್ ತಿಯಾಗಳ ಹಿಲ್ಸ್‌ ಹಾಗೂ ಗಾರೊ ಹಿಲ್ಸ್‌ ಜಿಲ್ಲೆಗಳನ್ನು ಜನವರಿ ೧೯೭೨ರಲ್ಲಿ ಬೇರ್ಪಡಿಸುವುದರ ಮೂಲಕ ಮೇಘಾಲಯ ರಾಜ್ಯವನ್ನು ಸ್ಥಾಪಿಸಲಾಯಿತು. ಪೂರ್ಣಪ್ರಮಾಣದ ರಾಜ್ಯವಾಗುವ ಮುಂಚೆ, ಮೇಘಾಲಯಕ್ಕೆ ೧೯೭೦ರಲ್ಲಿ ಅರೆ-ಸ್ವಾಧಿಕಾರದ ಸ್ಥಿತಿ ನೀಡಲಾಗಿತ್ತು.ಖಾಸಿ, ಗಾರೊ ಮತ್ತು ಜೈನ್ ತಿಯಾಗಳು ಬುಟಕಟ್ಟು ಜನಾಂಗಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ಹೊಂದಿದ್ದವು. ಹತ್ತೊಂಬತ್ತನೆಯ ಶತಮಾನದಲ್ಲಿ ಅವು ಬ್ರಿಟಿಷ್‌ ಆಳ್ವಿಕೆಗೆ ಒಳಗಾದವು. ಆನಂತರ, ಬ್ರಿಟಿಷ್‌ ಆಡಳಿತವು ೧೮೩೫ರಲ್ಲಿ ಮೇಘಾಲಯವನ್ನು ಆಸ್ಸಾಂ‌ನೊಂದಿಗೆ ಏಕೀಕರಣಗೊಳಿಸಿತು. ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಒಪ್ಪಂದದ ಫಲವಾಗಿ, ಈ ವಲಯ ತನ್ನ ಅರೆ-ಸ್ವಾಧಿಕಾರ ಸ್ಥಿತಿಯ ಅನುಕೂಲ ಪಡೆದಿತ್ತು.ಕಳೆದ ೧೬ ಅಕ್ಟೋಬರ್‌ ೧೯೦೫ರಂದು ಲಾರ್ಡ್‌ ಕರ್ಜನ್‌ ಬಂಗಾಳವನ್ನು ಇಬ್ಭಾಗಿಸಿದಾಗ, ಮೇಘಾಲಯವು, 'ಪೂರ್ವ ಬಂಗಾಳ ಹಾಗೂ ಆಸ್ಸಾಂ‌' ಹೊಸ ಪ್ರಾಂತ್ಯದ ಅಂಶವಾಯಿತು. ಆದರೂ, ೧೯೧೨ರಲ್ಲಿ ಬಂಗಾಳವನ್ನು ಪುನಃ ಏಕೀಕರಣರಣಗೊಳಿಸಿದಾಗ, ಮೇಘಾಲಯ ಆಸ್ಸಾಂ‌ ಪ್ರಾಂತ್ಯದ ಅಂಗವಾಯಿತು.ಭಾರತ ಸರ್ಕಾರ ಕಾಯಿದೆ ೧೯೧೯ರ ವಿಧಿ ೫೨ಎರಂತೆ, ೩ ಜನವರಿ ೧೯೨೧ರಂದು ಪರಿಷತ್ತಿನಲ್ಲಿರುವ ರಾಜ್ಯಪಾಲರು ಖಾಸಿ ರಾಜ್ಯಗಳನ್ನು(ಗುಡ್ಡಗಾಡು ಜನಾಂಗವಿರುವ ಬೆಟ್ಟಪ್ರದೇಶಗಳ) ಹೊರತುಪಡಿಸಿ, ಮೇಘಾಲಯದ ಉಳಿದೆಲ್ಲ ವಲಯಗಳನ್ನು 'ಹಿಂದುಳಿದ ಪ್ರದೇಶಗಳು' ಎಂದು ಘೋಷಿಸಿದರು. ಆದರೂ, ಅಂತಿಮವಾಗಿ, ೧೯೩೫ರಲ್ಲಿ ಜಾರಿಗೊಳಿಸಲಾದ ಭಾರತ ಸರ್ಕಾರ ಕಾಯಿದೆಯಡಿ, ಸರ್ಕಾರವು, ಹಿಂದುಳಿದ ಪ್ರದೇಶಗಳನ್ನು 'ಹೊರತುಪಡಿಸಿದ' ಹಾಗೂ 'ಭಾಗಶಃ ಹೊರತುಪಡಿಸಿದ' ಪ್ರದೇಶಗಳನ್ನಾಗಿ ಮರುವಿಂಗಡಿಸಿತು.ಇಸವಿ ೧೯೪೭ರಲ್ಲಿ ಭಾರತ ಸ್ವತಂತ್ರಗೊಂಡಾಗ, ಇಂದಿನ ಮೇಘಾಲಯದಲ್ಲಿ, ಆಸ್ಸಾಂ‌ನ ಎರಡು ಜಿಲ್ಲೆಗಳಿದ್ದು, ಅಸೊಮ್‌ ರಾಜ್ಯದೊಳಗೇ ಸೀಮಿತ ಸ್ವಾಯತ್ತತೆ ಪಡೆದಿದ್ದವು.ಆಸೊಮ್‌ ಪುನಸ್ಸಂಘಟನಾ ಕಾಯಿದೆ ೧೯೬೯ರಡಿ, ಮೇಘಾಲಯ ರಾಜ್ಯಕ್ಕೆ ಸ್ವಯಮಾಧಿಕಾರ ನೀಡಲಾಯಿತು. ಈ ಕಾಯಿದೆಯು ೨ ಏಪ್ರಿಲ್‌ ೧೯೭೦ರಂದು ಜಾರಿಗೆ ಬಂದಿತು. ಆಸ್ಸಾಂ‌ ರಾಜ್ಯದೊಳಗೇ ಮೇಘಾಲಯ ಸ್ವತಂತ್ರ ರಾಜ್ಯವನ್ನಾಗಿ ಸ್ಥಾಪಿಸಲಾಯಿತು. ಸಂವಿಧಾನದ ಆರನೆಯ ಕಲಮ್‌ ಪ್ರಕಾರ ಈ ರಾಜ್ಯವು ಶಾಸನ ಅಧಿಕಾರ ಹೊಂದಿತ್ತು. ಶಾಸನದಲ್ಲಿ ೩೭ ಸದಸ್ಯರಿದ್ದರು.ಈಶಾನ್ಯ ವಲಯದ (ಪುನಸ್ಸಂಘಟನೆ) ಕಾಯಿದೆ ೧೯೭೧ನ್ನು 1971ರಲ್ಲಿ ಸಂಸತ್ತಿನಲ್ಲಿ ಮಂಜೂರು ಮಾಡಲಾಯಿತು. ಇದರಂತೆ ಸ್ವಾಯತ್ತ ರಾಜ್ಯ ಮೇಘಾಲಯಕ್ಕೆ ಪೂರ್ಣಪ್ರಮಾಣದ ಸ್ವತಂತ್ರ ಲಭಿಸಿತು. ದಿನಾಂಕ ೨೧ ಜನವರಿ ೧೯೭೨ರಂದು ಮೇಘಾಲಯ ರಾಜ್ಯತ್ವ ಪಡೆಯಿತು. ತನ್ನದೇ ಆದ ಶಾಸಕಾಂಗವನ್ನೂ ಹೊಂದಿತು.

ಜನಸಂಖ್ಯಾಶಾಸ್ತ್ರ

ಬದಲಾಯಿಸಿ
 
ಒಬ್ಬ ಖಾಸಿ ಜನಾಂಗದ ವ್ಯಕ್ತಿ

ಮೇಘಾಲಯದ ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರದ್ದೇ ಬಹುಪಾಲು ಆಗಿದೆ. ಅದರಲ್ಲೂ ಖಾಸಿ ಜನಸಮೂಹ ಅತಿದೊಡ್ಡ ಗುಂಪಾಗಿದೆ; ನಂತರ ಗಾರೊಸಮುದಾಯ. ಬ್ರಿಟಿಷರು ಬೆಟ್ಟ-ಗುಡ್ಡದ ಜನಾಂಗದವರು ಎಂದು ಕರೆಯಲಾಗುತ್ತಿದ್ದ ಗುಂಪುಗಳಲ್ಲಿ ಇವೂ ಸಹ ಸೇರಿವೆ. ಜೈನ್ ತಿಯಾರು, ಕೊಚ್‌, ಹಜೋಂಗ್‌, ದಿಮಾಸಾ, ಹ್ಮಾರ್‌, ಕುಕಿ, ಲಖರ್‌, ಮಿಕಿರ್‌, ರಭಾ ಮತ್ತು ನೇಪಾಳಿ ಸೇರಿದಂತೆ ಇತರೆ ಬುಡಕಟ್ಟು ಗುಂಪುಗಳೂ ಸಹ ಮೇಘಾಲಯದಲ್ಲಿ ವಾಸಿಸುತ್ತವೆ. ಭಾರತದಲ್ಲಿ ಕ್ರಿಶ್ಚಿಯನ್‌ ಜನಸಂಖ್ಯೆ ಅಧಿಕ ಇರುವ ಮೂರು ರಾಜ್ಯಗಳಲ್ಲಿ ಮೇಘಾಲಯವವೂ ಒಂದು. ಇಲ್ಲಿನ ಜನಸಂಖ್ಯೆಯ 70.3%ರಷ್ಟು ಕ್ರಿಶ್ಚಿಯನ್‌ ಧರ್ಮದವರಾಗಿದ್ದಾರೆ.[] ಇತರೆ ಎರಡು ರಾಜ್ಯಗಳೆಂದರೆ ನಾಗಾಲೆಂಡ್‌ ಮತ್ತು ಮಿಜೊರಾಮ್‌. ಇವರಡೂ ರಾಜ್ಯಗಳು ಭಾರತದ ಈಶಾನ್ಯ ಭಾಗದಲ್ಲಿವೆ. ಈ ವಲಯದಲ್ಲಿ ಹಿಂದೂ ಧರ್ಮದವರು ಎರಡನೆಯ ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ. ಜನಸಂಖ್ಯೆಯಲ್ಲಿ ಸುಮಾರು 13.3%ರಷ್ಟು ಹಿಂದೂ ಧರ್ಮದವರಾಗಿದ್ದಾರೆ.[] ಗಮನಾರ್ಹ ಅಲ್ಪಸಂಖ್ಯಾತ, ಎಂದರೆ ಜನಸಂಖ್ಯೆಯ 11.5%ರಷ್ಟು ಸಾಂಪ್ರದಾಯಿಕ ಅನಿಮಿಸ್ಟ್‌ ಧಾರ್ಮಿಕತೆಯನ್ನು ಅನುಸರಿಸುತ್ತವೆ. (ಜನಗಣತಿ ಪ್ರಕಾರ 'ಇತರೆ' ಎಂದು ವಿಂಗಡಿಸಲಾಗಿದೆ.[] ಜನಸಂಖ್ಯೆಯಲ್ಲಿ 4.3%ರಷ್ಟು ಮುಸ್ಲಿಮರಿದ್ದಾರೆ.[] ಇಸವಿ 1991ರಲ್ಲಿ ಮೇಘಾಲಯ ರಾಜ್ಯ ಜನಸಂಖ್ಯೆಯಲ್ಲಿ 65%ರಷ್ಟು ಕ್ರಿಶ್ಚಿಯನ್ನರಿದ್ದಾಗ, 1.1 ದಶಲಕ್ಷ (11 ಲಕ್ಷ) ಜನ ಕ್ರಿಶ್ಚಿಯನ್‌ರು, ಈಶಾನ್ಯ ಭಾರತದ ಈ ರಾಜ್ಯವನ್ನು ಅತಿ ಹೆಚ್ಚು ಕ್ರಿಶ್ಚಿಯನ್ನರು ವಾಸಿಸುವ ವಲಯವನ್ನಾಗಿಸಿದರು.[] ಆ ಸಮಯದಲ್ಲಿ, ಮಿಜೊರಾಮ್‌ಗಿಂತಲೂ ಮೇಘಾಲಯದಲ್ಲಿ ಹೆಚ್ಚು ಕ್ರಿಶ್ಚಿಯನ್ನರಿದ್ದರು ಇಸವಿ 2001ರಲ್ಲಿ ಭಾರತದ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಪ್ರತಿ 1000 ಪುರುಷರಿಗೆ 975 ಸ್ತ್ರೀಯರಿದ್ದು, ರಾಷ್ಟ್ರೀಯ ಸರಾಸರಿ 933ಕ್ಕಿಂತಲೂ ಬಹಳ ಹೆಚ್ಚಾಗಿತ್ತು. ಅದು ಇಸವಿ 1981ರಲ್ಲಿ 954 ಇದ್ದದ್ದು, ನಿಧಾನವಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕವಾಗಿ, ಗ್ರಾಮಾಂತರ ಪ್ರಧೇಶಗಳಲ್ಲಿ ಲಿಂಗ ಅನುಪಾತವು ನಗರ ವಲಯಕ್ಕಿಂತಲೂ ಹೆಚ್ಚಾಗಿದೆ. ಆದರೂ, 2001ರ ಜನಗಣತಿ ಪ್ರಕಾರ, ನಗರವಲಯದಲ್ಲಿ ಪ್ರಮಾಣವು 985 ಇದ್ದದ್ದು, ಸಾಮಾನ್ಯ ಅಂತರಕಿಂತಲೂ 972ರಷ್ಟು ಹೆಚ್ಚಾಗಿರುತ್ತದೆ. ಇದರ ಹಿಂದಿನ ಕಾರಣ, ಭಾರತದ ಇತರೆಡೆಗಿಂತಲೂ ಭಿನ್ನವಾಗಿ, ಮೇಘಾಲಯದಲ್ಲಿ ಗಂಡುಮಕ್ಕಳಿಗಾಗಿ ವಿಶೇಷ ಆದ್ಯತೆ ಇಲ್ಲದಿರುವುದು ಎಂದು ಹೇಳಲಾಗಿದೆ.

ಭಾಷೆಗಳು

ಬದಲಾಯಿಸಿ

ಇಂಗ್ಲಿಷ್ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಖಾಸಿ ಮತ್ತು ಗಾರೊ ಮೇಘಾಲಯದಲ್ಲಿನ ಪ್ರಮುಖ ಭಾಷೆಗಳಾಗಿವೆ.[] ಖಾಸಿ ಭಾಷೆ ಮೇಘಾಲಯದ ಪ್ರಮುಖ ಭಾಷೆಗಳಲ್ಲೊಂದು. Khasia, Khassee, Cossyah ಅಥವಾ Kyi ಎಂದೂ ಅಕ್ಷರಶಃ ಬರೆಯಲಾದ ಖಾಸಿ ಭಾಷೆಯು ಆಸ್ಟ್ರೊ-ಏಷ್ಯಾಟಿಕ್‌ ಗುಂಪಿನ ಮೊನ್‌-ಖ್ಮೆರ್‌ ಕುಟುಂಬದ ಒಂದು ಅಂಗ. ಮೇಘಾಲಯದಲ್ಲಿ ವಾಸಿಸುವ ಸುಮಾರು ೯೦೦,೦೦೦ ಜನರು ಈ ಭಾಷೆ ಮಾತನಾಡುತ್ತಾರೆ. ಖಾಸಿ ಭಾಷೆಯಲ್ಲಿ ಬಳಸಲಾದ ಹಲವು ಪದಗಳನ್ನು ಬಂಗಾಳಿ ಮತ್ತು ಅಸೊಮಿಸ್‌ನಂತಹ ಭಾರತೀಯ-ಆರ್ಯನ್‌ ಭಾಷೆಗಳಿಂದ ಎರವಲು ಪಡೆಯಲಾಗಿದೆಯೆನ್ನಲಾಗಿದೆ. ಖಾಸಿ ಭಾಷೆ ತನ್ನ ಆರಂಭಿಕ ದಿನಗಳಿಂದಲೂ ತನ್ನದೇ ಆದ ಅಕ್ಷರಲಿಪಿ ಹೊಂದಿರಲಿಲ್ಲ. ಮೊನ್‌-ಖ್ಮೆರ್‌ ಕುಟುಂಬದಲ್ಲಿ ಭಾರತದಲ್ಲಿ ಉಳಿದಿರುವ ಕೆಲವೇ ಭಾಷೆಗಳಲ್ಲಿ ಖಾಸಿ ಭಾಷೆ ಸಹ ಒಂದು.ಗಾರೊ ಭಾಷೆ ಬೊಡೊ ಭಾಷೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಜನಸಂಖ್ಯೆಯಲ್ಲಿ ಬಹುಪಾಲು ಜನರು ಮಾತನಾಡುವ ಗಾರೊ ಭಾಷೆ, ಆ'ವೆ, ಚಿಸಾಕ್‌, ಆ'ಬೆಂಗ್‌, ಗಾಂಚಿಂಗ್‌, ಕಾಮರೂಪ್‌, ಆ'ಚಿಕ್‌, ಡಾಕಾ ಮತ್ತು ಮಾಟ್ಚಿಯಂತಹ ಹಲವಾರು ಭಾಷಾಪ್ರಬೇಧಗಳನ್ನು ಬಳಸಿ ಮಾತನಾಡಬಹುದಾಗಿದೆ.ಮೇಘಾಲಯದಲ್ಲಿ ಇನ್ನೊಂದು ಭಾಷೆ, ಜೈನ್ ತಿಯಾಗಳು ಹಿಲ್ಸ್‌ ಜನರು ಮಾತನಾಡುವ ಭಾಷೆಯಾಗಿದೆ. ಈ ಭಾಷೆಯು ಸಾಮಾನ್ಯ ಖಾಸಿ ಭಾಷೆಯ ಪರಿವರ್ತಿತ ರೂಪವಾಗಿದೆ. ಖಾಸಿ ಭಾಷೆಯೊಂದಿಗೆ ಜೈನ್ ತಿಯಾ ಭಾಷೆ ಸಹ ಖಿನ್ರಿಯಮ್‌, ಭೊಯಿ, ಪನಾರ್‌ ಮತ್ತು ವಾರ್‌ ಬುಡಕಟ್ಟು ಜನಾಂಗದವರಲ್ಲಿ ಬಳಕೆಯಾಗುತ್ತದೆ.

ಸಂಸ್ಕೃತಿ ಮತ್ತು ಸಮಾಜ

ಬದಲಾಯಿಸಿ

ಜೈನ್ ತಿಯಾಗಳು, ಖಾಸಿಗಳು ಹಾಗೂ ಗಾರೊಗಳು ಮೇಘಾಲಯದ ಪ್ರಮುಖ ಬುಡಕಟ್ಟು ಜನಾಂಗಗಳು. ಮೇಘಾಲಯದಲ್ಲಿರುವ ಬುಡಕಟ್ಟು ಜನಸಂಖ್ಯೆಯಲ್ಲಿ ಬಹಳಷ್ಟು ಜನರು(ಮಾತೃ ಪ್ರಧಾನ ಸಂಸ್ಕೃತಿ) ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಂತೆ, ವಂಶ ಮತ್ತು ಅನುವಂಶೀಯತೆಗಳನ್ನು ಮಹಿಳೆಯರ ಮೂಲಕ ಗುರುತಿಸಲಾಗುತ್ತದೆ. ಖಾಸಿ ಮತ್ತು ಜೈನ್ ತಿಯಾ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಲ್ಲಿ ಖಾ ಖದುಹ್‌ (ಅತಿ ಕಿರಿಯ ಮಗಳು) ಎಲ್ಲಾ ಸ್ವತ್ತಿನ ವಾರಸುದಾರಳಾಗುತ್ತಾಳೆ, ವೃದ್ಧಾಪ್ಯ ತಲುಪಿರುವ ಹೆತ್ತವರ ಮತ್ತು ವಿವಾಹವಾಗಿಲ್ಲದ ಸಹೋದರ-ಸಹೋದರಿಯರ ಪಾಲನೆ ಮಾಡುತ್ತಾಳೆ. ಆದರೂ, ವಂಶದಲ್ಲಿ ಪುರುಷರು, ಅದರಲ್ಲೂ ವಿಶೇಷವಾಗಿ ತಾಯಿಯ ಸಹೋದರ, ಪಿತ್ರಾರ್ಜಿತ ಆಸ್ತಿಯ ಮೇಲೆ ಪರೋಕ್ಷ ನಿಯಂತ್ರಣ ಮಾಡುತ್ತಾರೆ. ಏಕೆಂದರೆ, ಸ್ವತ್ತಿನ ಮಾರಾಟ ಹಾಗೂ ಇತರೆ ವಿಚಾರಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಆತನೂ ಒಳಗೊಂಡಿರುತ್ತಾನೆ. ಆದ್ದರಿಂದ, ಮೇಘಾಲಯದ ಬುಡಕಟ್ಟು ಜನಾಂಗದವರು ವಿಶ್ವದಲ್ಲೇ ಅತಿದೊಡ್ಡ ಮ್ಯಾಟ್ರಿಲೈನಿಯಲ್‌ ಸಂಸ್ಕೃತಿಯ ಅಂಗವಾಗಿದ್ದಾರೆ.[] ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಮೇಘಾಲಯ ರಾಜ್ಯದಲ್ಲಿ ಹೆತ್ತವರು ಗಂಡು ಮಗುವಾಗಲೆಂದು ಆಶಿಸುವುದು ರಾಷ್ಟ್ರೀಯ ಸರಾಸರಿಗಿಂತಲೂ 73%ರಷ್ಟು ಕಡಿಮೆ.[]

ಆಧ್ಯಾತ್ಮಿಕತೆ

ಬದಲಾಯಿಸಿ

ಪುರಾತನ ಕಥೆಗಳ ಪ್ರಕಾರ, ೧೩ನೆಯ ಶತಮಾನದಲ್ಲಿ, ರಾಣೀ ಸಿಂಗಾ ಅಳ್ವಿಕೆಯಲ್ಲಿ, 'ಹತಕೇಶ್ವರತ್‌' ಎನ್ನಲಾದ ಶಿವಲಿಂಗವು ಜೈನ್ ತಿಯಾಗಳು ಹಿಲ್ಸ್‌ನಲ್ಲಿದೆಯೆಂಬುದು ನಂಬಿಕೆ.[] ಜೈನ್ ತಿಯಾಗಳ ಬುಡಕಟ್ಟು ಜನಾಂಗವು ಕೆಲವೊಮ್ಮೆ ಶಿವರಾತ್ರಿ Night of Lord Shiva ) ಎಂಬ ಹಿಂದೂ ಹಬ್ಬಗಳಲ್ಲಿ ಭಾಗವಹಿಸುತ್ತಾರೆ.[] ಪುರಾತನ ಮೇಘಾಲಯ ವಾಸಿಗಳು ಆನಿಮಿಸಮ್‌ ಹಾಗೂ ತಮ್ಮ ಪೂರ್ವಜ-ಪೂಜೆಯ ಅಧ್ಯಾತ್ಮಿಕ ನಂಬಿಕೆಗಳನ್ನು ಹಿಂದೂ ಧರ್ಮದೊಂದಿಗೆ ಸೇರಿಸಿದರು.[] ಗುಹೆಗಳಲ್ಲಿ ಶಿವ ಹಾಗೂ ದುರ್ಗಾ ವಿಗ್ರಹಗಳು ಕಾಣಸಿಗುತ್ತವೆ.[೧೦]

ಭೂಗೋಳಶಾಸ್ತ್ರ

ಬದಲಾಯಿಸಿ
 
ಶಿಲಾಂಗ್‌ ಬಳಿಯಿರುವ ಉಮಿಯಮ್‌ ಕೆರೆ

ಮೇಘಾಲಯ ರಾಜ್ಯವನ್ನು 'ಮೇಘಾಲಯ ಪ್ರಸ್ಥಭೂಮಿ'ಯೆಂದೂ ಕರೆಯಲಾಗುತ್ತದೆ. ಇದರಲ್ಲಿ ಬಹುಪಾಲು ಆರ್ಷೇಯ ಕಲ್ಪದ ಶಿಲಾ ಬಂಡೆಗಳ ರೂಪಗಳಿವೆ. ಈ ಶಿಲಾ ರೂಪಗಳು ಇದ್ದಿಲು, ಸುಣ್ಣಕಲ್ಲು, ಯುರೆನಿಯಮ್‌ ಹಾಗೂ ಸಿಲಿಮನೈಟ್‌ನಂತಹ ಅಮೂಲ್ಯ ಖನಿಜಗಳ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುತ್ತವೆ. ಮೇಘಾಲಯದಲ್ಲಿ ಹಲವು ನದಿಗಳಿವೆ. ಇವುಗಳಲ್ಲಿ ಹಲವು ಮಳೆಯನ್ನು ಆಧರಿಸಿರುವ ಕಾರಣ ಕಾಲಕ್ಕನುಗುಣವಾಗಿ ಕಾಣಿಸಿಕೊಳ್ಳುತ್ತವೆ. ಡೇರಿಂಗ್‌, ಸಾಂಡಾ, ಬಾಂದ್ರಾ, ಭೋಗೈ, ಡಾರೆಂಗ್‌, ಸಿಂಸಾಂಗ್‌, ನಿತೈ ಹಾಗೂ ಭೂಪೈ - ಇವು ಗಾರೊ ಹಿಲ್ಸ್‌ ವಲಯದಲ್ಲಿ ಪ್ರಮುಖ ನದಿಗಳು. ಉಮ್‌ಖ್ರಿ, ಉಮಿಯಮ್‌, ಕಿಂಚಿಯಾಂಗ್‌ (ಜಾಡುಕಾಟ), ಮಾವ್ಪಾ, ಉಮಿಯಿವ್‌ (ಅಥವಾ ಬಾರಾಪಾನಿ), ಮೈನ್ಗೋಟ್‌ ಹಾಗೂ ಮೈಂಟ್ಡು, ಪ್ರಸ್ಥಭೂಮಿಯ ಕೇಂದ್ರೀಯ ಮತ್ತು ಪೂರ್ವ ವಿಭಾಗದಲ್ಲಿ ಪ್ರಮುಖ ನದಿಗಳು. ದಕ್ಷಿಣ ಖಾಸಿ ಹಿಲ್ಸ್‌ ವಲಯದಲ್ಲಿ, ಈ ನದಿಗಳು ಆಳವಾದ ಕಂದರಗಳು ಮತ್ತು ಸುಂದರ ಜಲಪಾತಗಳನ್ನು ಸೃಷ್ಟಿಸಿವೆ.ಪ್ರಸ್ಥಭೂಮಿಯ ಉನ್ನತ ಶ್ರೇಣಿಯು ೧೫೦ರಿಂದ ೧೯೬೧ ಮೀಟರ್‌ಗಳ ವರೆಗೂ ಇದೆ. ಖಾಸಿ ಹಿಲ್ಸ್‌ ಇರುವ ಪ್ರಸ್ಥಭೂಮಿಯ ಕೇಂದ್ರ ಭಾಗವು ಹೆಚ್ಚು ಎತ್ತರ ಹೊಂದಿದೆ. ನಂತರ,ಜೈನ್ ತಿಯಾ ಹಿಲ್ಸ್‌ ವಲಯವಿರುವ ಪೂರ್ವ ವಲಯವು ಎರಡನೆಯ ಅತಿ ದೊಡ್ಡ ಎತ್ತರವೆನಿಸಿದೆ. ಶಿಲಾಂಗ್‌ ಶಿಖರವು ಮೇಘಾಲಯದಲ್ಲಿರುವ ಅತ್ಯುನ್ನತ ಶಿಖರವಾಗಿದೆ. ಖಾಸಿ ಹಿಲ್ಸ್‌ನಲ್ಲಿರುವ ಅದು ಒಂದು ಪ್ರಮುಖ IAF ಕೇಂದ್ರಸ್ಥಾನವನ್ನೂ ಸಹ ಹೊಂದಿದೆ. ಇದು ಶಿಲಾಂಗ್‌ ನಗರಕ್ಕಿಂತಲೂ ಮೇಲ್ಮಟ್ಟದಲ್ಲಿದೆ. ಇದು ೧೯೬೧ ಮೀಟರ್‌ಗಳಷ್ಟು ಎತ್ತರವಿದೆ. ಪ್ರಸ್ಥಭೂಮಿಯ ಪಶ್ಚಿಮ ವಿಭಾಗದಲ್ಲಿರುವ ಗಾರೊ ಹಿಲ್ಸ್‌ ವಲಯವು ಹೆಚ್ಚು ಕಡಿಮೆ ಸಮತಟ್ಟಾಗಿದೆ. ಗಾರೊ ಹಿಲ್ಸ್‌ನ ಅತಿ ಎತ್ತರದ ಸ್ಥಳವು ನೊಕ್ರೆಕ್‌ ಶಿಖರವಾಗಿದ್ದು, ಇದರ ಎತ್ತರ ೧೫೧೬ ಮೀಟರ್‌ಗಳು.

ಜಿಲ್ಲೆಗಳು

ಬದಲಾಯಿಸಿ
 
ಜೈನ್ ತಿಯಾಗಳು ಹಿಲ್ಸ್‌ ಇದ್ದಿಲುಗಣಿಯ ಹೊರಗೆ ಕಾರ್ಮಿಕರು

ಮೇಘಾಲಯದಲ್ಲಿ ಸದ್ಯಕ್ಕೆ ಏಳು ಜಿಲ್ಲೆಗಳಿವೆ. ಅವು ಪೂರ್ವ ಗಾರೊ ಹಿಲ್ಸ್‌, ಪೂರ್ವ ಖಾಸಿ ಹಿಲ್ಸ್‌, ಜೈನ್ ತಿಯಾಗಳು ಹಿಲ್ಸ್‌, ರೀ-ಭೊಯಿ, ದಕ್ಷಿಣ ಗಾರೊ ಹಿಲ್ಸ್‌, ಪಶ್ಚಿಮ ಗಾರೊ ಹಿಲ್ಸ್‌ ಹಾಗೂ ಪಶ್ಚಿಮ ಖಾಸಿ ಹಿಲ್ಸ್‌.ಪೂರ್ವ ಗಾರೊ ಹಿಲ್ಸ್‌ ಜಿಲ್ಲೆ ೧೯೭೬ರಲ್ಲಿ ರಚನೆಯಾಯಿತು. ಇಸವಿ ೨೦೦೧ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆಯು ೨೪೭,೫೫೫ರಷ್ಟಿದೆ. ಇದರ ವಿಸ್ತೀರ್ಣ ೨೬೦೩ ಚದರ ಕಿಲೊಮೀಟರ್‌ಗಳು. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ವಿಲಿಯಂನಗರದಲ್ಲಿದೆ. (ಅಂದು ಈ ಸ್ಥಳಕ್ಕೆ ಸಿಂಸನ್‌ಗಿರಿ ಎನ್ನಲಾಗಿತ್ತು).ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯನ್ನು ೨೮ ಅಕ್ಟೋಬರ್‌ ೧೯೭೬ರಂದು ಖಾಸಿ ಹಿಲ್ಸ್‌ ಜಿಲ್ಲೆಯಿಂದ ಬೇರ್ಪಡಿಸಿ ರಚಿಸಲಾಯಿತು. ಜಿಲ್ಲೆಯ ವಿಸ್ತೀರ್ಣ ೨,೭೪೮ ಚದರ ಕಿಲೋಮೀಟರ್‌. ಇಸವಿ ೨೦೦೧ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 660,923ರಷ್ಟಿದೆ. ಪೂರ್ವ ಖಾಸಿ ಹಿಲ್ಸ್‌ನ ಕೇಂದ್ರ ಕಾರ್ಯಸ್ಥಾನ ಶಿಲಾಂಗ್‌ನಲ್ಲಿದೆ.ಜೈನ್ ತಿಯಾಗಳು ಹಿಲ್ಸ್‌ ಜಿಲ್ಲೆಯು ೨೨ ಫೆಬ್ರವರಿ ೧೯೭೨ರಂದು ರಚನೆಯಾಯಿತು. ಇದರ ಭೌಗೋಳಿಕ ವಿಸ್ತೀರ್ಣ ೩೮೧೯ ಚದರ ಕಿಲೋಮೀಟರ್‌ಗಳು. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯು 295,692ರಷ್ಟು ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ಜೊವೈನಲ್ಲಿದೆ. ಜೈನ್ ತಿಯಾಗಳು ಹಿಲ್ಸ್‌ ರಾಜ್ಯದಲ್ಲಿಯೇ ಅತಿ ಹೆಚ್ಚು ಇದ್ದಿಲು ತಯಾರಿಸುವ ಜಿಲ್ಲೆಯಾಗಿದೆ. ರಾಜ್ಯಾದ್ಯಂತ ಇದ್ದಿಲು ಗಣಿಗಳನ್ನು ಕಾಣಬಹುದಾಗಿದೆ.ದಿನಾಂಕ ೪ ಜೂನ್‌ ೧೯೯೨ರಂದು ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯನ್ನು ವಿಭಜಿಸಿ ರಿ-ಭೊಯಿ ಜಿಲ್ಲೆಯನ್ನು ರಚಿಸಲಾಯಿತು. ಇದರ ವಿಸ್ತೀರ್ಣ 2448 ಚದರ ಕಿಲೋಮಿಟರ್‌ಗಳು. ಇಸವಿ 2001ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆಯು 192,795ರಷ್ಟಿತ್ತು. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ನೊಂಗ್ಪೊಹ್‌ನಲ್ಲಿದೆ. ಇಲ್ಲಿ ಬೆಟ್ಟ-ಗುಡ್ಡಗಳ ಭೂಪ್ರದೇಶವಿದ್ದು, ಹೆಚ್ಚುಪಾಲು ಕಾಡು ವ್ಯಾಪಿಸಿದೆ. ರಿ-ಭೊಯಿ ಜಿಲ್ಲೆಯು ಅನಾನಸ್‌ ಫಲಗಳಿಗಾಗಿ ಬಹಳ ಖ್ಯಾತವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅನಾನಸ್‌ ಬೆಳೆಯುವ ಸ್ಥಳವಾಗಿದೆ.ಪಶ್ಚಿಮ ಗಾರೊ ಹಿಲ್ಸ್‌ ಜಿಲ್ಲೆಯು ೧೮ ಜೂನ್‌ 1992ರಂದು ವಿಭಜನೆಗೊಂಡು ದಕ್ಷಿಣ ಗಾರೊ ಹಿಲ್ಸ್‌ ಜಿಲ್ಲೆ ರಚನೆಯಾಯಿತು. ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣವು 1850 ಚದರ ಕಿಲೊಮೀಟರ್‌ಗಳಷ್ಟಿದೆ. ಇಸವಿ ೨೦೦೧ರ ಜನಗಣತಿಯ ಪ್ರಕಾರ ಜಿಲ್ಲೆಯ ಜನಸಂಖ್ಯೆಯು 99,100ರಷ್ಟಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಬಾಘ್ಮಾರಾದಲ್ಲಿದೆ.ಪಶ್ಚಿಮ ಗಾರೊ ಹಿಲ್ಸ್‌ ಜಿಲ್ಲೆಯು ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇದರ ಭೌಗೋಳಿಕ ವಿಸ್ತೀರ್ಣ 3714 ಚದರ ಕಿಲೋಮೀಟರ್‌ಗಳಷ್ಟಿದೆ. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 515,813ರಷ್ಟಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಟುರಾದಲ್ಲಿದೆ.ಪಶ್ಚಿಮ ಖಾಸಿ ಹಿಲ್ಸ್‌ ಜಿಲ್ಲೆ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ಇದರ ಭೌಗೋಳಿಕ ವಿಸ್ತೀರ್ಣವು ೫೨೪೭ ಚದರ ಕಿಲೋಮೀಟರ್‌ಗಳಷ್ಟಿವೆ. ಖಾಸಿ ಹಿಲ್ಸ್‌ ಜಿಲ್ಲೆಯಿಂದ ದಿನಾಂಕ ೨೮ ಅಕ್ಟೋಬರ್‌ ೧೯೭೬ರಂದು ಪಶ್ಚಿಮ ಖಾಸಿ ಹಿಲ್ಸ್‌ ಎಂಬ ಜಿಲ್ಲೆಯನ್ನು ರಚಿಸಲಾಯಿತು. ಜಿಲ್ಲೆಯ ಪ್ರಧಾನ ಕಾರ್ಯಸ್ಥಾನ ನೊಂಗ್‌ಸ್ಟೊಯಿನ್‌ನಲ್ಲಿದೆ.

ಹವಾಗುಣ

ಬದಲಾಯಿಸಿ
 
ಚೆರಾಪುಂಜಿಯಲ್ಲಿ ಒಂದು ಫಲಕ

ರಾಜ್ಯದ ಕೆಲವು ವಲಯಗಳಲ್ಲಿ ಸರಾಸರಿ ವಾರ್ಷಿಕ ಮಳೆ ೧೨೦೦ ಸೆಂಟಿಮೀಟರ್‌ಗಳಷ್ಟು ಅಧಿಕವಿರುವ ಕಾರಣ, ಮೇಘಾಲಯವು ಭಾರತದಲ್ಲೇ ಅತಿ ತೇವವಾಗಿರುವ ರಾಜ್ಯವಾಗಿದೆ. ಕಡಿಮೆ ಎತ್ತರವುಳ್ಳ ಗಾರೊ ಹಿಲ್ಸ್‌ ವಲಯವನ್ನು ಹೊಂದಿರುವ ಪ್ರಸ್ಥಭೂಮಿಯ ಪಶ್ಚಿಮ ಭಾಗವು ವರ್ಷದ ಬಹಳಷ್ಟು ಕಾಲ ಹೆಚ್ಚಿನ ಉಷ್ಣಾಂಶ ಹೊಂದಿರುತ್ತವೆ. ಅತಿ ಹೆಚ್ಚು ಎತ್ತರ ಹೊಂದಿರುವ ಶಿಲಾಂಗ್‌ ವಲಯದಲ್ಲಿ ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುತ್ತದೆ. ಈ ವಲಯದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ (ಸೆಲ್ಸಿಯಸ್‌ ಮಾಪನ) ದಾಟುವುದು ಬಹಳ ಅಪರೂಪ. ಚಳಿಗಾಲದಲ್ಲಿ ಉಷ್ಣಾಂಶ ಸೊನ್ನೆಗಿಂತಲೂ ಕೆಳಗಿಳಿಯುವುದು ಸಾಮಾನ್ಯ. ರಾಜಧಾನಿ ಶಿಲಾಂಗ್‌ನ ದಕ್ಷಿಣದ ಖಾಸಿ ಹಿಲ್ಸ್‌ನಲ್ಲಿರುವ ಚೆರಾಪುಂಜಿ ಪಟ್ಟಣವು ಋತುವಿನಲ್ಲಿಯೇ ಅತಿ ಹೆಚ್ಚು ಮಳೆ ಪಡೆವ , ವಿಶ್ವದಾಖಲೆ ಹೊಂದಿದೆ. ಚೆರಾಪುಂಜಿಯಿಂದ 16 ಕಿಲೋಮಿಟರ್‌ ಪಶ್ಚಿಮದಲ್ಲಿರುವ ಮಾಸಿನ್ರಾಮ್‌ ಗ್ರಾಮದಲ್ಲಿ ಅತಿ ಹೆಚ್ಚು ವಾರ್ಷಿಕ ಮಳೆಯಾಗುವ ವಿಶ್ವದಾಖಲೆ ಹೊಂದಿದೆ. ಮೇಘಾಲಯಕ್ಕೆ ಪ್ರವಾಸ ಹೋಗಲು ಸೂಕ್ತ ಕಾಲ ಮಾರ್ಚ್‌ನಿಂದ ಜುಲೈ ತಿಂಗಳ ವರೆಗೆ. ಭಾರತದ ಬಯಲುಸೀಮೆ ಪ್ರದೇಶದಲ್ಲಿ ವಿಪರೀತ ತಾಪಮಾನದಿಂದ ಪಾರಾಗಲು ಬ್ರಿಟಿಷ್‌ ಮತ್ತು ಆಸ್ಸಾಂ‌ ಟೀ ಎಸ್ಟೇಟ್‌ ಮಾಲೀಕರು ಬೇಸಿಗೆ ಕಾಲದಲ್ಲಿ ಮೇಘಾಲಯಕ್ಕೆ ಸ್ಥಳಾಂತರಗೊಳ್ಳುವುದು ಸಾಮಾನ್ಯ.

ಆರ್ಥಿಕತೆ

ಬದಲಾಯಿಸಿ

ಮೇಘಾಲಯದಲ್ಲಿ ಆರ್ಥಿಕತೆಯು ಪ್ರಮುಖವಾಗಿ ಭೂಸಂಪತ್ತನ್ನು ಅಧರಿಸಿದೆ. ಮೇಘಾಲಯದ ಒಟ್ಟು ಕಾರ್ಮಿಕ ಸಮೂಹದ ಮೂರರಲ್ಲಿ ಇಬ್ಬರು ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ರಾಜ್ಯದ NSDPಗಾಗಿ ಈ ಕ್ಷೇತ್ರದ ಕೊಡುಗೆ ಮೂರನೆಯ ಒಂದು ಭಾಗಕ್ಕಿಂತಲೂ ಕಡಿಮೆ. ರಾಜ್ಯದಲ್ಲಿನ ಕೃಷಿಯು ಬಹಳ ಕಡಿಮೆ ಇಳುವರಿ ಮತ್ತು ಅಸಮರ್ಪಕ ಬೇಸಾಯ ಪದ್ಧತಿಗಳಿಂದ ಕೂಡಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಬಡತನವಿದೆ. ಇದರ ಫಲವಾಗಿ, ಜನಸಂಖ್ಯೆಯಲ್ಲಿ ಹೆಚ್ಚುಪಾಲು ಕೃಷಿಯಲ್ಲಿ ತೊಡಗಿದ್ದರೂ, ಮಾಂಸ, ಮೊಟ್ಟೆ, ದವಸ-ಧಾನ್ಯಗಳು ಇತ್ಯಾದಿಗಾಗಿ ಮೇಘಾಲಯ ಇತರೆ ರಾಜ್ಯಗಳಿಂದ ಆಮುದುಗಳನ್ನು ಅವಲಂಬಿಸಿದೆ. ಮೂಲಭೂತ ಸೌಲಭ್ಯಗಳ ವ್ಯವಸ್ಥೆಯ ನ್ಯೂನತೆಗಳ ಕಾರಣ, ರಾಜ್ಯದ ಆರ್ಥಿಕತೆಯು ದೇಶದ ಇತರೆಡೆಯ ಆರ್ಥಿಕತೆಗಿಂತಲೂ ಹಿಂದುಳಿಯುವಂತಾಗಿದೆ.ಮೇಘಾಲಯ ಪ್ರಕೃತಿಯ ಸಂಪನ್ಮೂಲಗಳ ಸಮೃದ್ಧ ಆಗರವಾಗಿದೆ. ಇವುಗಳಲ್ಲಿ ಇದ್ದಿಲು, ಸುಣ್ಣಕಲ್ಲು, ಸಿಲಿಮೆನೈಟ್‌, ಕವೊಲಿನ್‌ ಹಾಗೂ ಗ್ರಾನೈಟ್‌ ಕಲ್ಲು ಸಹ ಸೇರಿವೆ. ಮೇಘಾಲಯದಲ್ಲಿ ವಿಶಾಲ ಕಾಡುಪ್ರದೇಶ, ಸಮೃದ್ಧ ಜೈವಿಕ ವೈವಿಧ್ಯ ಮತ್ತು ಹಲವು ಕೆರೆ-ಕೋಡಿಗಳಿವೆ. ಕೈಗಾರಿಕೀಕರಣವು ಸೂಕ್ತ ಮಟ್ಟ ತಲುಪಿಲ್ಲ. ಜೊತೆಗೆ, ಕಳಪೆ ಮಟ್ಟದ ಮೂಲಭೂತ ಸೌಲಭ್ಯವು ಈ ಸಮೃದ್ಧ ಪೃಕೃತಿಯ ಸಂಪನ್ಮೂಲಗಳ ಬಳಕೆ ಮತ್ತು ರಾಜ್ಯದ ಆರ್ಥಿಕತೆಗೆ ತೊಡಕಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡು ದೊಡ್ಡ ಪ್ರಮಾಣದ ಗಾರೆ ತಯಾರಿಕಾ ಘಟಗಳು ಜೈನ್ ತಿಯಾಗಳು ಹಿಲ್ಸ್‌ ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ. ಇವುಗಳ ಉತ್ಪಾದನಾ ಸಾಮರ್ಥ್ಯ 900 MTDಗಿಂತಲೂ ಹೆಚ್ಚು. ಈ ಜಿಲ್ಲೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಸುಣ್ಣಕಲ್ಲಿನ ಸಮೃದ್ಧ ನಿಕ್ಷೇಪಗಳನ್ನು ಬಳಸಿಕೊಳ್ಳಲು ಇನ್ನಷ್ಟು ಗಾರೆ ತಯಾರಿಕಾ ಘಟಕಗಳ ಆರಂಭಕ್ಕೆ ಕಾರಣವಾಗಬಹುದು. ಮೇಘಾಲಯ ರಾಜ್ಯವು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಇಲ್ಲಿನ ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಭದ್ರತಾ ಸಮಸ್ಯೆಗಳ ಕಾರಣ ಮೇಘಾಲಯ ರಾಜ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಕಾಗಿದೆ.

 
ಜೈನ್ ತಿಯಾಗಳು ಹಿಲ್ಸ್‌ನ ಲಮ್ಷ್‌ನಾಂಗ್‌ನಲ್ಲಿ ಥಾಂಗ್ಸ್‌ಕಾಯ್‌ P.O.ನಲ್ಲಿರುವ MCL ಸಿಮೆಂಟ್‌ ಕೈಗಾರಿಕೆಯ ಒಂದು ನೋಟ

ಭಾರಿ ಆರ್ಥಿಕತೆಯ ಪ್ರವೃತ್ತಿಗಳು

ಬದಲಾಯಿಸಿ

ಅಂಕಿ-ಅಂಶಗಳು ಮತ್ತು ಯೋಜನೆಯ ಅನುಷ್ಟಾನ ಸಚಿವಾಲಯ ವು ಮಾರುಕಟ್ಟೆ ಬೆಲೆಯಲ್ಲಿ ಅಂದಾಜು ಮಾಡಿರುವ ರಾಜ್ಯದ ಸಮಗ್ರ ಸ್ಥಳೀಯ ಉತ್ಪನ್ನದ ಆಗುಹೋಗುಗಳ ಪಟ್ಟಿ ಕೆಳಕಂಡಂತಿದೆ.

ಸಮಗ್ರ ರಾಜ್ಯ ಸ್ಥಳೀಯ ಉತ್ಪನ್ನ
1980 2,000
1985 3,930
1990 8,900
1995 19,950
2000 37,280

ಇಸವಿ 2004ರಲ್ಲಿ ಮೇಘಾಲಯದ ಸಮಗ್ರ ರಾಜ್ಯ ಸ್ಥಳೀಯ ಉತ್ಪನ್ನವು ಇಂದಿನ ದರಗಳಲ್ಲಿ $1.6 ಶತಕೋಟಿ ಎಂದು ಅಂದಾಜು ಮಾಡಲಾಗಿದೆ.

ಬಡತನದ ಪ್ರಮಾಣ

ಬದಲಾಯಿಸಿ

ಭಾರತ ಸರ್ಕಾರದಡಿ ಸರ್ವೋಚ್ಚ ಯೋಜನಾ ಇಲಾಖೆಯಾಗಿರುವ ಯೋಜನಾ ಆಯೋಗದ ಪ್ರಕಾರ, ೨೦೦೦ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೆಯ ಒಂದು ಭಾಗದಷ್ಟು ಬಡತನದ ರೇಖೆಯ ಕೆಳಗಿದ್ದಾರೆ, ಎಂದು ಅಂದಾಜು ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಡತನ 55%ರಷ್ಟಿದ್ದು, ನಗರವಲಯದಲ್ಲಿನ ಬಡತನಕ್ಕಿಂತಲೂ ಎರಡರಷ್ಟಿದೆ.

ಮೇಘಾಲಯದ ಒಟ್ಟು ಭೌಗೋಳಿಕ ವಲಯದಲ್ಲಿ ಸುಮಾರು 10%ರಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಈ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಸೀಮಿತ ಹಾಗೂ ಉತ್ಪಾದಕತೆ ಕಡಿಮೆ. ಇದರ ಫಲವಾಗಿ, ಜನಸಂಖ್ಯೆಯ ಬಹುಪಾಲು ಕೃಷಿಯಲ್ಲಿ ಮಗ್ನರಾಗಿದ್ದರೂ, ರಾಜ್ಯದ GDPಗಾಗಿ ಕೃಷಿಯ ಉತ್ಪಾದನೆಯು ಬಹಳ ಕಡಿಮೆ ಹಾಗೂ ಕೃಷಿಕಾರ್ಯದಲ್ಲಿ ತೊಡಗುವ ಜನತೆಯಲ್ಲಿ ಬಹುಪಾಲು ಬಡವರಾಗಿಯೇ ಉಳಿದುಕೊಂಡಿದ್ದಾರೆ. ಕೃಷಿ ಕಾರ್ಯ ನಡೆಯುವ ವಲಯಗಳಲ್ಲಿ ಗಮನಾರ್ಹ ಪಾಲು, ಸಾಂಪ್ರದಾಯಿಕ ಕೃಷಿ ರೀತ್ಯಾ ನಡೆಯುತ್ತದೆ. (ಇದಕ್ಕೆ ಸ್ಥಳೀಯವಾಗಿ [ಭರಾಟೆಯ]ಝೂಮ್‌ ಕೃಷಿ ಎನ್ನಲಾಗಿದೆ). ಮೇಘಾಲಯದಲ್ಲಿ ಆಹಾರ ಧಾನ್ಯಗಳು ಪ್ರಮುಖ ಬೆಳೆಗಳಾಗಿವೆ. ಇವುಗಳನ್ನು ಸುಮಾರು ೧,೩೩೦ ಚದರ ಕಿಲೋಮೀಟರ್‌ಗಳಲ್ಲಿ, ಅರ್ಥಾತ್‌ ರಾಜ್ಯದ ಕೃಷಿಕಾರ್ಯ ಪ್ರದೇಶದ 60%ರಷ್ಟು ಭಾಗದಲ್ಲಿ ಬೆಳೆಯಲಾಗುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆಯು ೨೩೦ ಸಾವಿರ ಟನ್‌ಗಳಿಗಿಂತಲೂ ಹೆಚ್ಚಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಧಾನ್ಯ ಉತ್ಪಾದನೆಯಲ್ಲಿ ಅಕ್ಕಿಯದು 80%ರಷ್ಟು ಪಾಲು. ಮೆಕ್ಕೆ ಜೋಳ, ಗೋಧಿ ಮತ್ತು ಇತರೆ ಕೆಲವು ಏಕ-ದಳ ಧಾನ್ಯ-ಬೇಳೆಕಾಳುಗಳು ಸಹ ಈ ರಾಜ್ಯದ ಪ್ರಮುಖ ಖಾದ್ಯ ಫಸಲುಗಳಾಗಿವೆ.ರೇಪ್‌ಸೀಡ್‌, ಸಾಸಿವೆ, ನಾರಗಸೆ, ಸೋಯ್ಬೀನ್‌, ಹರಳುಗಿಡ ಮತ್ತು ಎಳ್ಳು ಎಣ್ಣೆಕಾಳುಗಳನ್ನು ಸುಮಾರು 100 ಚದರ ಕಿಲೋಮೀಟರ್‌ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ರೇಪ್‌ಸೀಡ್‌ ಮತ್ತು ಸಾಸಿವೆ ಈ ರಾಜ್ಯದಲ್ಲಿ ಬಹಳ ಪ್ರಮುಖ ಎಣ್ಣೆಬೀಜಗಳಾಗಿವೆ. ಸುಮಾರು 6.5 ಸಾವಿರ ಟನ್‌ಗಳಷ್ಟು ಖಾದ್ಯ ಎಣ್ಣೆಬೀಜ ಉತ್ಪನ್ನದಲ್ಲಿ ಇವೆರಡದ್ದು ಮೂರರಲ್ಲಿ ಎರಡರಷ್ಟು ಪಾಲು. ಕೇವಲ ಹತ್ತಿ, ಜೂಟ್ ಹಾಗೂ ಮೆಸ್ಟಾ ಮಾತ್ರ ಮೇಘಾಲಯ ರಾಜ್ಯದ ವಾಣಿಜ್ಯ ಬೆಳೆಯಾಗಿವೆ. ಈ ಬೆಳೆಗಳನ್ನು ವಿಶಿಷ್ಟವಾಗಿ ಗಾರೊ ಹಿಲ್ಸ್‌ನಲ್ಲಿ ಬೆಳಸಲಾಗುತ್ತವೆ. ಅವುಗಳ ಉತ್ಪನ್ನ ಮತ್ತು ಕೃಷಿಕಾರ್ಯ ನಡೆಸುವ ವಿಸ್ತೀರ್ಣವು ಕಡಿಮೆಯಾಗುತ್ತಿದೆ. ಕೆಲವು ಇಳುವರಿ ಇಲ್ಲದ ಬೆಳೆಗಳು ಜನಪ್ರಿಯತೆ ಕಳೆದುಕೊಳ್ಳುತ್ತಿವೆ.ಮೇಘಾಲಯದಲ್ಲಿರುವ ಹವಾಗುಣ, ಹಣ್ಣು-ತರಕಾರಿ, ಹೂವು, ಮೆಣಸು ಮತ್ತು ಔಷಧ ಗಿಡಗಳು ಸೇರಿದಂತೆ ವಿವಿಧ-ರೀತಿಯ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ನೀಡುತ್ತದೆ. ಅಧಿಕ ಮೌಲ್ಯದ ಬೆಳೆಗಳು ಎಂದು ಇವನ್ನು ಪರಿಗಣಿಸಲಾಗಿದೆ, ಆದರೆ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಹಾರ ಭದ್ರತಾ ವಿಷಯಗಳು ಇವುಗಳನ್ನು ಬೆಳೆಸುವುದರಲ್ಲಿ ರೈತರಿಗೆ ಕೆಲಮಟ್ಟಿಗೆ ಅಡ್ಡಿಪಡಿಸುತ್ತವೆ.ಮೇಘಾಲಯ ರಾಜ್ಯದಲ್ಲಿ ಬೆಳೆಸಲಾದ ಪ್ರಮುಖ ಫಲಗಳಲ್ಲಿ ನಿಂಬೆಜಾತಿಯ ಹಣ್ಣುಗಳು, ಅನಾನಸ್‌, ಪರಂಗಿಹಣ್ಣು, ಬಾಳೆಹಣ್ಣು ಇತ್ಯಾದಿ ಸೇರಿವೆ. ಮೇಘಾಲಯದಲ್ಲಿ ಬೆಳೆಸಲಾದ ಮ್ಯಾಂಡರಿನ್‌ ಕಿತ್ತಳೆ ಹಣ್ಣುಗಳು ಬಹಳ ಉನ್ನತ ಗುಣಮಟ್ಟದ್ದೆಂದು ಹೇಳಲಾಗಿದೆ. ಇದರ ಜೊತೆಗೆ, ಹೂಕೋಸು, ಎಲೆಕೋಸು ಮತ್ತು ಮೂಲಂಗಿ ಸೇರಿದಂತೆ, ಮೇಘಾಲಯದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಲಾಗುತ್ತದೆ.ರಾಜ್ಯಾದ್ಯಂತ ಅಡಕೆ ತೋಟಗಳನ್ನು ಕಾಣಬಹುದು; ಅದರಲ್ಲೂ ವಿಶಿಷ್ಟವಾಗಿ ಗುವಾಹಾಟಿಯಿಂದ ಶಿಲಾಂಗ್‌ ಕಡೆಗೆ ಹೋಗುವ ಮಾರ್ಗದಲ್ಲಿ ಈ ರೀತಿಯ ತೋಟಗಳು ಹೇರಳವಾಗಿವೆ. ಇತ್ತೀಚೆಗೆ, ಚಹಾ, ಕಾಫಿ ಮತ್ತು ಗೋಡಂಬಿಯಂತಹ ಫಸಲುಗಳನ್ನು ಪರಿಚಯಿಸಲಾಗುತ್ತಿದ್ದು, ಅವು ಜನಪ್ರಿಯಗಾಗುತ್ತಿವೆ. ವಿವಿಧ ರೀತಿಯ ಮೆಣಸು, ಹೂವು, ಔಷಧೀಯ ಸಸ್ಯ ಮತ್ತು ಅಣಬೆಗಳನ್ನೂ ಸಹ ರಾಜ್ಯದಲ್ಲಿ ಬೆಳೆಸಲಾಗುತ್ತದೆ.

ಸಾರಿಗೆ ವ್ಯವಸ್ಥೆ

ಬದಲಾಯಿಸಿ

ದೇಶದ ಇಬ್ಭಾಗವಾದಾಗಿನಿಂದ ಈಶಾನ್ಯ ವಲಯದಲ್ಲಿ ಮೂಲಭೂತ ಸೌಲಭ್ಯ ಇಲ್ಲದ್ದರಿಂದ ತೀವ್ರ ಸಮಸ್ಯೆಗಳಿಗೆ ಕಾರಣವಾಗಿದೆ. ವಲಯದಲ್ಲಿ ಕೇವಲ 2%ರಷ್ಟು ಮಾತ್ರ ದೇಶದ ಉಳಿದ ಭಾಗಗಳೊಂದಿಗೆ ಸಂಬಂಧ ಹೊಂದಿದೆ. ಈ ವಲಯವು ಸಿಲಿಗುರಿ ಕಾರಿಡಾರ್‌ ಅಥವಾ ಚಿಕನ್ಸ್‌ ನೆಕ್‌ ಎನ್ನಲಾದ ಇಕ್ಕಟ್ಟು ದಾರಿಯ ಮೂಲಕ ಪಶ್ಚಿಮ ಬಂಗಾಳ ರಾಜ್ಯದೊಂದಿಗೆ ಸಂಪರ್ಕ ಹೊಂದಿದೆ. ಮೇಘಾಲಯವು ಸಂಪೂರ್ಣವಾಗಿ ಭೂ ಆವೃತ್ತ ರಾಜ್ಯವಾಗಿದೆ. ದೂರ-ದೂರದ ಬಿಡಿ ಬಿಡಿಯಾದ ಸ್ಥಳಗಳಲ್ಲಿ ಸಣ್ಣ-ಪ್ರಮಾಣದ ಜನವಸತಿಗಳಿವೆ. ರಾಜ್ಯದೊಳಗೆ ರಸ್ತೆ ಸಾರಿಗೆಯೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ರಾಜಧಾನಿ ಶಿಲಾಂಗ್‌ನಲ್ಲಿ ರಸ್ತೆ ವ್ಯವಸ್ಥೆ ಚೆನ್ನಾಗಿದ್ದರೂ, ಇತರೆ ವಲಯಗಳಲ್ಲಿ ವ್ಯವಸ್ಥೆ ಸೂಕ್ತವಾಗಿಲ್ಲ. ರಾಜ್ಯದ ಹೆಚ್ಚಿನ ರಸ್ತೆಗಳಲ್ಲಿ ಡಾಂಬರು ಹಾಕಿಲ್ಲ. ಮೇಘಾಲಯಕ್ಕೆ ಬರುವವರಲ್ಲಿ ಬಹುಪಾಲು ನೆರೆಯ ರಾಜ್ಯ ಆಸ್ಸಾಂ‌ನ ಗುವಾಹಾಟಿ ಕಡೆಯಿಂದ ಬರುತ್ತಾರೆ. ಗುವಾಹಟಿಯು ರಾಜ್ಯದಿಂದ ಸರಿಸುಮಾರು 103 ಕಿಲೋಮೀಟರ್‌ ದೂರದಲ್ಲಿದೆ. ಆಸ್ಸಾಂ‌ ಪ್ರಮುಖ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಹೊಂದಿದೆ. ದೇಶದ ಇತರೆಡೆಗೆ ಇಲ್ಲಿಂದ ಹಲವು ರೈಲು ಹಾಗು ವಿಮಾನ ಮಾರ್ಗಗಳಿವೆ. ರಾಜ್ಯದಲ್ಲಿ ಹಳೆಯ ಮರದ ಸೇತುವೆಗಳು ಇನ್ನೂ ಇವೆ.ಮೇಘಾಲಯದಲ್ಲಿ ಯಾವುದೇ ರೈಲು ಕೊನೆಗೊಳ್ಳುವ ತುತ್ತತುದಿಗಳಿಲ್ಲ. ಶಿಲಾಂಗ್‌ನಿಂದ 40 ಕಿಲೋಮೀಟರ್‌ ದೂರದಲ್ಲಿ, ಗುವಾಹಟಿ ಕಡೆಗೆ ಹೋಗುವ ಹೆದ್ದಾರಿಯಲ್ಲಿರುವ ಉಮ್ರೊಯಿಯಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣ ಚಿಕ್ಕದಾಗಿರುವ ಕಾರಣ, ದೊಡ್ಡ ವಿಮಾನಗಳು ಇಲ್ಲಿ ಬಂದಿಳಿಯಲಾಗುವುದಿಲ್ಲ. ಕೋಲ್ಕತ್ತಾ ಹಾಗೂ ನೆರೆಯ ರಾಜ್ಯ ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ಕೇವಲ ಸಣ್ಣ ವಿಮಾನಗಳು ವಾಯು ಸಾರಿಗೆ ಸೇವೆ ಸಲ್ಲಿಸುತ್ತವೆ.

ಸಸ್ಯಸಂಪತ್ತು ಮತ್ತು ಪ್ರಾಣಿ ವೈವಿಧ್ಯ

ಬದಲಾಯಿಸಿ

ಇಸವಿ 2003ರಲ್ಲಿ ಭಾರತೀಯ ಅರಣ್ಯ ಸಂಸ್ಥೆ ಪ್ರಕಟಿಸಿದ ರಾಜ್ಯ ಅರಣ್ಯ ವರದಿ ಪ್ರಕಾರ, ಮೇಘಾಲಯದಲ್ಲಿ 9,496 ಚದರ ಕಿಲೋಮೀಟರ್‌ಗಳಷ್ಟು ಅರಣ್ಯವ್ಯಾಪ್ತಿಯಿದೆ. ಇದು ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 42.34%ದಷ್ಟಿದೆ. ಮೇಘಾಲಯದ ಉಪ-ಉಷ್ಣವಲಯ ಕಾಡುಗಳು ಏಷ್ಯಾದ ಅತಿ ಸಮೃದ್ಧ ಸಸ್ಯತಾಣಗಳಲ್ಲಿ ಒಂದು. ಈ ಕಾಡುಗಳಲ್ಲಿ ಬಹಳಷ್ಟು ಮಳೆಯಾಗಿ, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಜೀವವೈವಿಧ್ಯಕ್ಕೆ ಆಧಾರವಾಗಿವೆ. ಮೇಘಾಲಯದ ಕಾಡು ವಲಯದ ಸಣ್ಣ ಭಾಗವನ್ನು 'ಪವಿತ್ರ ತೋಪುಗಳು' ಎನ್ನಲಾಗಿದೆ. (ಭಾರತದಲ್ಲಿ ಪವಿತ್ರ ತೋಪುಗಳು ನೋಡಿ). ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಆಧಾರದ ಮೇಲೆ, ಹಲವು ಸಮುದಾಯಗಳು ಈ ಪ್ರಾಚೀನ ಕಾಡುಗಳ ಸಣ್ಣ ಗುಂಪುಗಳನ್ನು ನೂರಾರು ವರ್ಷಗಳಿಂದಲೂ ಸಂರಕ್ಷಿಸುತ್ತಾ ಬಂದಿವೆ. ಧಾರ್ಮಿಕ ಕಾರ್ಯಗಳಿಗಾಗಿ ಈ ಕಾಡುಗಳನ್ನು ಸಂರಕ್ಷಿಸಲಾಗಿದ್ದು, ಸಾಮಾನ್ಯವಾಗಿ ಯಾವುದೇ ರೀತಿಯ ನಾಶಮಾಡುವಿಕೆಯಿಂದ ರಕ್ಷಿಸಲಾಗಿವೆ. ಈ ಪವಿತ್ರ ತೋಪುಗಳು ಅಪರೂಪವೆನಿಸಿದ ಹಲವು ಗಿಡ ಮತ್ತು ಪ್ರಾಣಿ ಪ್ರಭೇದಗಳ ತಾಣವಾಗಿವೆ. ಪಶ್ಚಿಮ ಗಾರೊ ಹಿಲ್ಸ್‌ನಲ್ಲಿರುವ ನೊಕ್ರೆಕ್‌ ಜೀವಗೋಳ ಅರಣ್ಯ ಮತ್ತು ಬಲಫಕ್ರಮ್‌ ರಾಷ್ಟ್ರೀಯ ಉದ್ಯಾನಗಳನ್ನು 'ಮೇಘಾಲಯದ ಬಹಳಷ್ಟು ಜೀವವೈವಿಧ್ಯ ಹೊಂದಿದ ಸಮೃದ್ಧ ತಾಣಗಳು' ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಮೇಘಾಲಯದಲ್ಲಿ ಮೂರು ವನ್ಯಜೀವಿಧಾಮಗಳಿವೆ. ಇವು ನೊಂಗ್ಖಿಲೆಮ್‌ ಅಭಯಾರಣ್ಯ, ಸಿಜು ಅಭಯಾರಣ್ಯ ಮತ್ತು ಭಾಗ್ಮಾರಾ ಅಭಯಾರಣ್ಯ. ಇವು ಕೀಟಭಕ್ಷಕ ಹೂಜಿ ಗಿಡ ನೆಪೆಂತೆಸ್‌ ಖಾಸಿಯಾನಾ ಗೆ ತಾಣವಾಗಿದೆ.

 
ನೆಪೆಂಥೆಸ್‌ ಖಾಸಿಯಾನಾ

ವೈವಿಧ್ಯಮಯ ಹವಾಗುಣ ಮತ್ತು ಭೂಸ್ವರೂಪ ಹೊಂದಿರುವ ಕಾರಣ, ಮೇಘಾಲಯ ಕಾಡುಗಳು ವಿಶಾಲವಾದ ಸಸ್ಯ ವೈವಿಧ್ಯಕ್ಕೆ ಆಧಾರವಾಗಿವೆ. ಇದರಲ್ಲಿ ಪರಾವಲಂಬಿಗಳು, ಅಧಿಸಸ್ಯಗಳು, ರಸಭರಿತ ಗಿಡಗಳು ಮತ್ತು ಪೊದೆಸಸ್ಯಗಳು ಸೇರಿವೆ. ಪ್ರಮುಖ ಮರಗಳ ವಿಧಗಳಲ್ಲಿ ಶೊರಿಯಾ ರೊಬಸ್ಟಾ ( ) ಮತ್ತು ಟೆಕ್ಟೊನಾ ಗ್ರ್ಯಾಂಡಿಸ್‌ (ಸಾಗುವಾನಿ ಮರ) ಸಹ ಸೇರಿವೆ. ಮೇಘಾಲಯದಲ್ಲಿ ಭಾರಿ ಪ್ರಮಾಣದ ವೈವಿಧ್ಯದ ಹಣ್ಣು-ತರಕಾರಿಗಳು, ಮೆಣಸು ಮತ್ತು ಔಷಧೀಯ ಸಸ್ಯಗಳಿವೆ. ಇಲ್ಲಿರುವ 325 ವಿಧಗಳ ಸೀತೆಹೂವಿನ ಗಿಡಗಳಿಗೂ ಸಹ ಮೇಘಾಲಯ ಖ್ಯಾತಿಯಾಗಿದೆ. ಇವುಗಳಲ್ಲಿ ಅತಿ ದೊಡ್ಡ ಪ್ರಭೇದವು, ಖಾಸಿ ಬೆಟ್ಟಗಳಲ್ಲಿರುವ ಮಾವ್ಸ್‌ಮಾಯಿ, ಮಾವ್‌ಮ್ಲುಹ್‌ ಮತ್ತು ಸೊಹ್ರಾರಿಮ್‌ ಕಾಡುಗಳಲ್ಲಿವೆ.ವಿವಿಧ ಜಾತಿಗಳ ಸಸ್ತನಿಗಳು, ಪಕ್ಷಿಗಳು, ಸರಿಸೃಪಗಳು ಹಾಗೂ ಕೀಟಗಳು ಮೇಘಾಲಯದಲ್ಲಿವೆ. ಪ್ರಮುಖ ಸಸ್ತನಿ ಪ್ರಭೇದಗಳಲ್ಲಿ ಆನೆಗಳು, ಕರಡಿಗಳು, ಪುನುಗು ಬೆಕ್ಕುಗಳು, ಮುಂಗುಸಿಗಳು, ವೀಸೆಲ್‌ಗಳು (ಮುಂಗುಸಿ ಜಾತಿಯ ಚತುಷ್ಪಾದಿ), ದಂಶಕಗಳು,(ಕೋರೆ ಹಲ್ಲಿರುವ ಪ್ರಾಣಿ) ಕಾಡೆತ್ತುಗಳು, ಕಾಡುಕೋಣಗಳು, ಜಿಂಕೆಗಳು, ಕಾಡು ಹಂದಿಗಳು ಹಾಗೂ ಹಲವು ಮಂಗನ ಜಾತಿಗೆ ಸೇರಿದ ಪ್ರಾಣಿಗಳು ಸೇರಿವೆ. ವಿವಿಧ ಬಾವಲಿಗಳೂ ಸಹ ಮೇಘಾಲಯದಲ್ಲಿವೆ. ಸಿಜು ಗುಹೆಗಳೂ ಸೇರಿದಂತೆ ಮೇಘಾಲಯದಲ್ಲಿರುವ ಹಲವು ಸುಣ್ಣದಕಲ್ಲಿನ ಗುಹೆಗಳಲ್ಲಿ ಬಹಳ ಅಪರೂಪ ಪ್ರಭೇದದ ಬಾವಲಿಗಳು ವಾಸಿಸುತ್ತವೆ.ಮಡಿವಾಳ ಹಕ್ಕಿ, ರಾಬಿನ್‌ ಹಕ್ಕಿ, ಬುಲ್ಬುಲ್‌, ಬೆಟ್ಟದ ಮೈನಾ ಸೇರಿದಂತೆ ಪ್ರಮುಖ ಹಕ್ಕಿ ಪ್ರಭೇದಗಳು ಜೋಡಿಯಾಗಿಯೋ ಅಥವಾ ಗುಂಪುಗಳಲ್ಲಿ ಮೇಘಾಲಯದ ಬೆಟ್ಟಕಾಡುಗಳಲ್ಲಿ ವಾಸಿಸುತ್ತವೆ. ಕೊಂಬುಕೊಕ್ಕಿನ ಹಕ್ಕಿಯು ಮೇಘಾಲಯದಲ್ಲಿರುವ ಅತಿದೊಡ್ಡ ಹಕ್ಕಿಯಾಗಿದೆ. ಇತರೆ ಹಕ್ಕಿಗಳಲ್ಲಿ ನವಿಲು ಜೀವಂಜೀವ (ಫೆಸೆಂಟ್‌ ಹಕ್ಕಿ), ದೊಡ್ಡ ಭಾರತೀಯ ಉದ್ದ ತೋಕೆಯ ಸಣ್ಣ ಗಿಳಿ, ಹಸಿರು ಪಾರಿವಾಳ ಹಾಗೂ ಬ್ಲೂ ಜೇ ಹಕ್ಕಿಗಳೂ ಸೇರಿವೆ. ಸುಮಾರು 250ಕ್ಕಿಂತಲೂ ಹೆಚ್ಚು ಪ್ರಭೇದಗಳ ಚಿಟ್ಟೆಗಳು, ಅದರಲ್ಲೂ ವಿಶೇಷವಾಗಿ, ಭಾರತದಲ್ಲಿ ಕಂಡುಬಂದ ಒಟ್ಟು ಪ್ರಭೇದಗಳಲ್ಲಿ ನಾಲ್ಕನೆಯ ಒಂದರಷ್ಟು ಮೇಘಾಲಯದಲ್ಲಿವೆ.ಮೇಘಾಲಯದಲ್ಲಿ ಕಂಡುಬರುವ ಸಾಮಾನ್ಯ ಸರೀಸೃಪಗಳೆಂದರೆ ಹಲ್ಲಿಗಳು, ಮೊಸಳೆಗಳು ಹಾಗೂ ಆಮೆಗಳು. ಹೆಬ್ಬಾವು, ತಾಮ್ರಶೀರ್ಷಿ ಹಾವು, Green Tree Racer, ಭಾರತೀಯ ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು ಹಾಗೂ ಮಂಡಲದ ಹಾವು ಸೇರಿದಂತೆ ಹಲವು ಬಗೆಯ ಹಾವುಗಳು ಮೇಘಾಲಯದಲ್ಲಿವೆ.

ಶಿಕ್ಷಣ

ಬದಲಾಯಿಸಿ
 
IIM ಶಿಲಾಂಗ್‌

ಶಿಲಾಂಗ್‌ ನಗರದಲ್ಲಿ ಹಲವು ಪ್ರಸಿದ್ಧ ಶಾಲೆ ಮತ್ತು ಕಾಲೇಜುಗಳಿವೆ. ಈಶಾನ್ಯ ಭಾರತದ ಅಬಿವೃದ್ಧಿ ಯೋಜನೆಯ ಅಂಗವಾಗಿ, ಮಾನವ ಸಂಪನ್ಮೂಲ ಸಚಿವಾಲಯವು ಏಳನೆಯ ಭಾರತೀಯ ಆಡಳಿತ ನಿರ್ವಹಣಾ ಕೌಶಲ್ಯ ಸಂಸ್ಥೆಯ (ಐಐಎಂ) ಏಳನೆಯ ವಿದ್ಯಾಲಯವನ್ನು ಶಿಲಾಂಗ್‌ನಲ್ಲಿ ಆರಂಭಿಸಿತು. ಇದಕ್ಕೆ ರಾಜೀವ್‌ ಗಾಂಧಿ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ಎನ್ನಲಾಗಿದೆ. ಈ ವಿದ್ಯಾಲಯವು ಶೈಕ್ಷಣಿಕ ವರ್ಷ 2008ರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿತು.

ಪ್ರವಾಸೋದ್ಯಮ

ಬದಲಾಯಿಸಿ
 
ಶಿಲಾಂಗ್‌ ಪರ್ವತಶ್ರೇಣಿಯಿಂದ ಶಿಲಾಂಗ್‌ನಗರದ ನೋಟ

ಮುಂಚೆ, ಇಂದಿನ ಮೇಘಾಲಯಕ್ಕೆ ಸೇರಿದ ವಲಯಗಳನ್ನು ಪ್ರವೇಶಿಸಲು ವಿದೇಶೀ ಪ್ರವಾಸಿಗರಿಗೆ ವಿಶೇಷ ಪ್ರವೇಶಾನುಮತಿಯ ಅಗತ್ಯವಿತ್ತು. ಆದರೆ, ೧೯೫೫ರಲ್ಲಿ ಈ ನಿರ್ಬಂಧಗಳನ್ನು ತೆರವುಗೊಳಿಸಲಾಯಿತು. ದೇಶದಲ್ಲಿ ಅತ್ಯಂತ ಸುಂದರ ಪ್ರಕೃತಿ ಭೂಸೌಂದರ್ಯ ಹೊಂದಿರುವ ರಾಜ್ಯಗಳಲ್ಲಿ ಮೇಘಾಲಯವೂ ಒಂದು. ವಿವಿಧ ಅಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸಲು ಮೇಘಾಲಯ ಸಾಕಷ್ಟು ಪ್ರವಾಸೀ ತಾಣಗಳನ್ನು ಹೊಂದಿದೆ.

ಪ್ರವಾಸೋದ್ಯಮದ ಅಂಶಗಳು

ಬದಲಾಯಿಸಿ

ರಾಷ್ಟ್ರದಲ್ಲಿ ಉಳಿದುಕೊಂಡಿರುವ ಅತ್ಯಂತ ದಟ್ಟ ಕಾಡುಗಳ ಪೈಕಿ ಗಮನಾರ್ಹ ಅಂಶವು ಮೇಘಾಲಯದಲ್ಲಿದೆ. ಇದರಿಂದಾಗಿ ಇದು ರಾಷ್ಟ್ರದಲ್ಲಿನ ಪ್ರಮುಖ ಪರಿಸರೀಯ ಪ್ರವಾಸೀ ತಾಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಮೇಘಾಲಯದಲ್ಲಿರುವ ಉಪ-ಉಷ್ಣ ಕಾಡುಗಳು ಹಲವು ಬಗೆಯ ಸಸ್ಯ-ವನ್ಯಜೀವಿಗಳಿಗೆ ಆಸರೆಯಾಗಿವೆ. ಮೇಘಾಲಯದಲ್ಲಿ ಎರಡು ರಾಷ್ಟ್ರೀಯ ಉದ್ಯಾನಗಳು ಹಾಗೂ ಮೂರು ಅಭಯಾರಣ್ಯಗಳಿವೆ.

 
ಭಾರತದ ಅತಿ ಹಳೆಯ ಗಾಲ್ಫ್‌ ಅಂಕಣಗಳಲ್ಲಿ ಒಂದಾದ ಶಿಲಾಂಗ್‌ ಗಾಲ್ಫ್‌ ಕೋರ್ಸ್‌

ಪರ್ವತಾರೋಹಣ, ಗುಡ್ಡ ಹತ್ತುವುದು, ಟ್ರೆಕಿಂಗ್‌, ಹೈಕಿಂಗ್‌, ಜಲ-ಸಾಹಸ ಕ್ರೀಡೆಗಳು (ವಾಟರ್‌ ಸ್ಪೋರ್ಟ್ಸ್‌) ಇತ್ಯಾದಿ ಸೇರಿದಂತೆ ವಿವಿಧ ಸಾಹಸ-ಪ್ರವಾಸಗಳಿಗೆ ಮೇಘಾಲಯ ಪ್ರಸಿದ್ಧ ತಾಣವಾಗಿದೆ. ಮೇಘಾಲಯ ರಾಜ್ಯದಲ್ಲಿ ಹಲವು ಟ್ರೆಕಿಂಗ್‌ ಮಾರ್ಗಗಳಲ್ಲಿ ಸಾಗುವಾಗ, ಕಾಡುಪಾಪಗಳು (ಸ್ಲೋ ಲೊರಿಸ್‌), ವಿವಿಧ ಬಗೆಯ ಜಿಂಕೆಗಳು ಹಾಗೂ ಕರಡಿಗಳಂತಹ ಅಪರೂಪದ ಪ್ರಾಣಿಗಳನ್ನು ನೋಡಬಹುದಾಗಿದೆ. ಉಮಿಯಮ್‌ ಕೆರೆಯಲ್ಲಿ ಜಲಕ್ರೀಡೆಯ ಅಂಕಣಗಳಿವೆ. ಇಲ್ಲಿ ಮಾನವ-ಚಾಲಿತ ದೋಣಿಗಳು (ರೋ-ಬೋಟ್‌ಗಳು), ಪಾದ-ಚಾಲಿತ ದೋಣಿಗಳು (ಪ್ಯಾಡ್ಲ್‌ ಬೋಟ್‌ಗಳು), ತೇಲುವ ದೋಣಿಗಳು (ಸೇಯ್ಲಿಂಗ್‌ ಬೋಟ್‌ಗಳು), ಸ್ಕೂಟರ್‌-ದೋಣಿಗಳು (ವಾಟರ್‌ ಸ್ಕೂಟರ್‌ಗಳು) ಹಾಗೂ ವೇಗದ ದೋಣಿಗಳ ಸೌಲಭ್ಯಗಳಿವೆ.ಇಡೀ ರಾಜ್ಯಾದ್ಯಂತ ಸುಮಾರು 500 ಸುಣ್ಣದಕಲ್ಲು ಹಾಗೂ ಮರಳುಗಲ್ಲಿನ ಗುಹೆಗಳಿವೆಯೆಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಕೆಲವು ಇಡೀ ಉಪಖಂಡದಲ್ಲೇ ಅತಿ ಉದ್ದನೆಯ ಹಾಗೂ ಅತಿ ಆಳವಾದ ಗುಹೆಗಳೂ ಇವೆ. ಕ್ರೆಮ್‌ ಲಿಯಟ್‌ ಪ್ರಾಹ್‌ ಅತಿ ಉದ್ದನೆಯ ಗುಹೆ ಹಾಗೂ ಸಿನ್ರಾಂಗ್‌ ಪಮಿಯಾಂಗ್‌ ಅತಿ ಆಳವಾದ ಗುಹೆಯಾಗಿದೆ. ಇವೆರಡೂ ಗುಹೆಗಳು ಜೈನ್ ತಿಯಾಗಳು ಹಿಲ್ಸ್‌ನಲ್ಲಿವೆ. ಯೂನೈಟೆಡ್‌ ಕಿಂಗ್ಡಮ್‌, ಜರ್ಮೆನಿ, ಆಸ್ಟ್ರಿಯಾ, ಐರ್ಲೆಂಡ್‌ ಹಾಗೂ US ದೇಶಗಳಿಂದ ಆಗಮಿಸುವ ಗುಹೆ ಪ್ರವಾಸಿಗರು, ಸುಮಾರು ಒಂದು ದಶಕದಿಂದಲೂ ಮೇಘಾಲಯಕ್ಕೆ ಭೇಟಿ ನೀಡಿ ಇಲ್ಲಿನ ಗುಹೆಗಳನ್ನು ವೀಕ್ಷಿಸಲು ಬರುವರಿದ್ದಾರೆ. ಇವುಗಳಲ್ಲಿ ಹಲವು ಗುಹೆಗಳನ್ನು ಇನ್ನೂ ಅಭಿವೃದ್ಧಿ ಪಡಿಸುವುದಾಗಲೀ, ಪ್ರಮುಖ ಪ್ರವಾಸೀ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿಲ್ಲ.

ಪ್ರಮುಖ ಪ್ರವಾಸೀ ತಾಣಗಳು

ಬದಲಾಯಿಸಿ
 
ನೊಹ್ಕಾಲಿಕೈ ಜಲಪಾತ
 
ಚೆರಾಪುಂಜಿ ಕೆಳಗಿರುವ ನಿಂತ ಬೃಹತ ಕಲ್ಲುಗಳು (ಮಾ ಬಿನ್‌ ನಾಹ್‌)

ಚೆರಾಪುಂಜಿ ಈಶಾನ್ಯ ಭಾರತದಲ್ಲೇ ಅತಿ ಜನಪ್ರಿಯ ಪ್ರವಾಸೀ ತಾಣವಾಗಿದೆ. ಇದು ರಾಜಧಾನಿ ಶಿಲಾಂಗ್‌ನ ದಕ್ಷಿಣಕ್ಕಿದೆ. ಈ ಪಟ್ಟಣವು ಈಗ ಬಹಳ ಚಿರಪರಿಚಿತವಾಗಿದ್ದು ಯಾವುದೇ ಪರಿಚಯದ ಅಗತ್ಯವಿಲ್ಲ. ರಮಣೀಯ ಭೂಚಿತ್ರಣವುಳ್ಳ, 50 ಕಿಲೋಮೀಟರ್‌ ಉದ್ದದ ರಸ್ತೆಯು ಚೆರಾಪುಂಜಿ ಮತ್ತು ಶಿಲಾಂಗ್‌ ನಗರಗಳ ನಡುವೆ ಸಂಪರ್ಕವೇರ್ಪಡಿಸುತ್ತದೆ.ರಾಜ್ಯದಲ್ಲಿ ಚಿರಪರಿಚಿತ ಜಲಪಾತಗಳ ಪೈಕಿ ಎಲಿಫೆಂಟ್‌ ಫಾಲ್ಸ್‌‌, ಶಾದ್ಥುಮ್‌ ಫಾಲ್ಸ್‌, ವೇಯ್ನಿಯಾ ಫಾಲ್ಸ್‌, ಬಿಷಪ್‌ ಪಾಲ್ಸ್‌, ನೊಹ್ಕಾಲಿಕೇಯ್‌ ಫಾಲ್ಸ್‌, ಲ್ಯಾಂಗ್ಷಿಯಾಂಗ್‌ ಫಾಲ್ಸ್‌ ಹಾಗೂ ಸ್ವೀಟ್‌ ಫಾಲ್ಸ್‌‌ ಸೇರಿವೆ. ಮಾಸಿನ್ರಾಮ್‌ ಬಳಿ ಜಾಕ್ರೆಮ್‌ನ ಬಿಸಿ ನೀರಿನ ಕಾರಂಜಿಗಳು ರೋಗಗಳನ್ನು ವಾಸಿಮಾಡುವ ಹಾಗೂ ಔಷಧೀಯ ಗುಣಗಳನ್ನು ಹೊಂದಿವೆಯೆಂದು ನಂಬಲಾಗಿದೆ.ಮೇಘಾಲಯದಲ್ಲಿ ಹಲವು ನೈಸರ್ಗಿಕ ಹಾಗೂ ಮಾನವನಿರ್ಮಿತ ದೊಡ್ಡಕೆರೆಗಳಿವೆ. ಗುವಾಹಾಟಿ-ಶಿಲಾಂಗ್‌ ರಸ್ತೆಯಲ್ಲಿರುವ ಉಮಿಯಮ್‌ ಕೆರೆಯು 'ಬಡಾ ಪಾನಿ' (ದೊಡ್ಡ ಪ್ರಮಾಣದ ನಿರುಳ್ಳ ಕೆರೆ) ಎಂದು ಖ್ಯಾತವಾಗಿದೆ. ಇದು ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ. ಮೇಘಾಲಯದಲ್ಲಿ ಹಲವು ಉದ್ಯಾನಗಳಿವೆ; ಥಂಗ್‌ಖಾರಂಗ್‌ ಉದ್ಯಾನ, ಇಕೊ-ಪಾರ್ಕ್‌, ಸಸ್ಯಶಾಸ್ತ್ರೀಯ ತೋಟ ಹಾಗೂ ಲೇಡಿ ಹೈದರಿ ಉದ್ಯಾನವು ಇವುಗಳಲ್ಲಿ ಹೆಸರುವಾಸಿ. ಶಿಲಾಂಗ್‌ನಿಂದ 96 ಕಿಲೊಮೀಟರ್‌ ದೂರದಲ್ಲಿರುವ ಡಾಕಿ ಪಟ್ಟಣವು ಬಾಂಗ್ಲಾದೇಶದ ಪ್ರವೇಶ ದ್ವಾರವಾಗಿದೆ. ಇದು ಮೇಘಾಲಯದ ಅತ್ಯುನ್ನತ ಪರ್ವತಶ್ರೇಣಿಗಳು ಹಾಗೂ ಬಾಂಗ್ಲಾದೇಶದ ಗಡಿ ನೆಲೆಗಳ ರಮಣೀಯ ಭೂಚಿತ್ರಣ ಹೊಂದಿದೆ.

ಸಮಸ್ಯೆಗಳು ಮತ್ತು ಇತಿಮಿತಿಗಳು

ಬದಲಾಯಿಸಿ

ರಾಜ್ಯದಲ್ಲಿ ರಸ್ತೆ ಮತ್ತು ಸಂವಹನ ಜಾಲಗಳು ಕಳಪೆ ಮಟ್ಟದ್ದಾಗಿವೆ. ಶಿಲಾಂಗ್‌-ಜೊವಾಯಿ, ಶಿಲಾಂಗ್‌-ಟುರಾ ಮತ್ತು ಶಿಲಾಂಗ್‌-ಸೊಹ್ರಾ ದಂತಹ ಪ್ರಮುಖ ಮಾರ್ಗಗಳ ಗುಣಮಟ್ಟವು ಚೆನ್ನಾಗಿದ್ದರೂ, ಆಂತರಿಕ ರಸ್ತೆ ಜಾಲಗಳು ಬಹಳ ಕಳಪೆ ಮಟ್ಟದ್ದಾಗಿದ್ದು ಅಸಮರ್ಪಕವಾಗಿ ನಿರ್ವಹಿಸಲಾಗಿವೆ. ರಾಜ್ಯದ ರಾಜಧಾನಿ ಶಿಲಾಂಗ್‌ನ ಹೊರಗೆ ಮಾರುಕಟ್ಟೆಗಳಿರುವುದು ಬಹಳ ವಿರಳ. ಬ್ಯಾಂಕಿಂಗ್ ಸೌಲಭ್ಯಗಳು ಸಹ ಬಹಳ ನಿಯಮಿತವಾಗಿದ್ದು, ಕೇವಲ ಕೆಲವೇ ಅಂಗಡಿ ಮಳಿಗೆಗಳಲ್ಲಿ ಮಾತ್ರ ಕ್ರೆಡಿಟ್‌ ಕಾರ್ಡ್‌ಗಳು ಸ್ವೀಕೃತವಾಗುತ್ತವೆ. ರಾಜ್ಯದ ಅತಿ ಪ್ರಮುಖ ಪ್ರವಾಸೀ ತಾಣಗಳು ಗಾರೊ ಹಿಲ್ಸ್‌ನಲ್ಲಿವೆ. ಆದರೂ, ಈ ತಾಣಗಳು ರಾಜ್ಯದ ಇತರೆ ಭಾಗಗಳೊಂದಿಗೆ ಅಷ್ಟು ಸಮರ್ಪಕ ಸಂಪರ್ಕ ಹೊಂದಿಲ್ಲ. ಒಟ್ಟಾರೆ, ಈಶಾನ್ಯ ಭಾರತದಲ್ಲಿ ಹಲವು ವರ್ಷಗಳಿಂದ ಆತಂಕವಾದದ ಸಮಸ್ಯೆ ಹಾಗೂ ಇದರಿಂದಾಗಿರುವ ಭದ್ರತಾ ಸಮಸ್ಯೆಗಳ ಕಾರಣ, ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ. ಭಾರತ ಪ್ರವಾಸ ಕೈಗೊಳ್ಳುವ ವಿದೇಶೀಯರಿಗೆ ತಮ್ಮ ಸರ್ಕಾರಗಳು ಈಶಾನ್ಯ ಭಾರತದ ಕಡೆ ಪ್ರಯಾಣಿಸಬೇಡಿ, ಎಂದು ಸಲಹೆ ನೀಡಿರುವುದು ಭದ್ರತೆಯ ಕುರಿತ ಪರಿಕಲ್ಪನೆಯನ್ನು ಇನ್ನಷ್ಟು ಬಿಗುವಾಗಿಸಿದೆ. ಆದರೂ, ಮೇಘಾಲಯ ರಾಜ್ಯದ ಮೇಲೆ ಈಶಾನ್ಯ ವಲಯದಲ್ಲಿನ ಆತಂಕವಾದದ ಸಮಸ್ಯೆಯ ಪ್ರಭಾವ ಕಡಿಮೆಯೆಂದು ಹೇಳಲಾಗಿದೆ. ಶಿಲಾಂಗ್‌ನಲ್ಲಿರುವ ಸದ್ಯದ ಸ್ಥಿತಿಯಲ್ಲಿ ಪ್ರವಾಸಿಗರು ಮೇಘಾಲಯಕ್ಕೆ ಬಂದು ಅದರ ಸುಂದರ ಭೂಚಿತ್ರಣವನ್ನು ನೋಡಿ ಆನಂದಿಸಬಹುದು.

ಸರ್ಕಾರ ಮತ್ತು ರಾಜಕೀಯ

ಬದಲಾಯಿಸಿ

ರಾಜ್ಯ ಸರ್ಕಾರ

ಬದಲಾಯಿಸಿ

ಭಾರತದ ಇತರೆ ರಾಜ್ಯಗಳಂತೆ, ಮೇಘಾಲಯದಲ್ಲಿಯೂ ಸಹ ಒಂದೇ ಸಭೆಯುಳ್ಳ ಶಾಸನವಿದೆ. ರಾಜ್ಯ ಶಾಸನ ಸಭೆಯಲ್ಲಿ ಸದ್ಯಕ್ಕೆ 60 ಜನ ಸದಸ್ಯರಿದ್ದಾರೆ. ಮೇಘಾಲಯ ರಾಜ್ಯದಿಂದ ಇಬ್ಬರು ಲೋಕಸಭಾ (ಭಾರತ ಸಂಸತ್ತಿನ ಕೆಳಮನೆ) ಸದಸ್ಯರಿದ್ದಾರೆ. ಶಿಲಾಂಗ್‌ ಮತ್ತು ಟುರಾ ಸಂಸದೀಯ ಕ್ಷೇತ್ರಗಳಿಂದ ತಲಾ ಒಬ್ಬೊಬ್ಬ ಚುನಾಯಿತ ಸಂಸದರಿದ್ದಾರೆ. ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ ಒಬ್ಬ ಪ್ರತಿನಿಧಿಯಿದ್ದಾರೆ. ಭಾರತ ಸರ್ಕಾರದಿಂದ ಆಯ್ಕೆ ಮಾಡಲಾದ ರಾಜ್ಯಪಾಲರು ರಾಜ್ಯದ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ. ಆದರೆ, ನೈಜ ಸಂಪೂರ್ಣ ಕಾರ್ಯಕಾರೀ ಅಧಿಕಾರ ರಾಜ್ಯದ ಮುಖ್ಯಮಂತ್ರಿಗಳೊಂದಿಗಿರುತ್ತವೆ.ಮೇಘಾಲಯ ತನ್ನದೇ ಆದ ಉಚ್ಚನ್ಯಾಯಾಲಯ ಹೊಂದಿಲ್ಲ. ಮೇಘಾಲಯ ರಾಜ್ಯವು ಗುವಾಹಟಿ ಉಚ್ಚನ್ಯಾಯಾಲಯದ ವ್ಯಾಪ್ತಿಯೊಳಗಿದೆ. ಗುವಾಹಟಿ ಉಚ್ಚ ನ್ಯಾಯಾಲಯದ ಸಂಚಾರೀ ಪೀಠವು ಶಿಲಾಂಗ್‌ ನಗರದಲ್ಲಿ 1974ರಿಂದಲೂ ಕಾರ್ಯ ನಿರ್ವಹಿಸುತ್ತಿದೆ.

ಇವನ್ನೂ ಗಮನಿಸಿ

ಸ್ವಾಯತ್ತ ಜಿಲ್ಲಾ ಪರಿಷತ್ತುಗಳು

ಬದಲಾಯಿಸಿ

ದೇಶದ ಗ್ರಾಮಾಂತರ ಜನತೆಗೆ ಸ್ವಾಯತ್ತತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ಭಾರತ ಸಂವಿಧಾನದಲ್ಲಿ ನಿಯಮಗಳನ್ನು ಮಾಡಲಾಯಿತು. ಇದರಂತೆ, ಪಂಚಾಯತಿ ರಾಜ್‌ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಆದರೂ, ಮೇಘಾಲಯ ಹಾಗೂ ಈಶಾನ್ಯ ಭಾಗದ ಅಂಶವಾಗಿದ್ದ ಅಂದಿನ ಆಸ್ಸಾಂ‌ ರಾಜ್ಯದಲ್ಲಿ ಅಪೂರ್ವ ಸಂಪ್ರದಾಯಗಳು ಚಾಲ್ತಿಯಲ್ಲಿದ್ದ ಕಾರಣ, ಆಸ್ಸಾಂ‌ನಲ್ಲಿ ಪ್ರತ್ಯೇಕ ರಾಜಕೀಯ ಮತ್ತು ಆಡಳಿತ ರೂಪಕ್ಕೆ ಚಾಲನೆ ನೀಡುವ ಅಗತ್ಯವಿತ್ತು. ಇನ್ನೂ ಹೆಚ್ಚಾಗಿ, ವಲಯದಲ್ಲಿರುವ ಕೆಲವು ಬುಡಕಟ್ಟು ಸಮುದಾಯಗಳೂ ಸಹ ತಮ್ಮದೇ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಗಳನ್ನಿಟ್ಟುಕೊಂಡಿದ್ದವು. ಹಾಗಾಗಿ ಈ ಪಂಚಾಯತಿ ರಾಜ್‌ ಸಂಸ್ಥೆಗಳು ಈ ಸಾಂಪ್ರದಾಯಿಕ ಪದ್ದತಿಗಳೊಂದಿಗೆ ಘರ್ಷಣೆ ಸಂಭವಿಸಬಹುದಾಗಿತ್ತು. ಗೋಪಿನಾಥ್‌ ಬೊರ್ಡೊಲೊಯಿ ನೇತೃತ್ವದ ಉಪಸಮಿತಿಯೊಂದರ ಶಿಫಾರಸಿನ ಮೇರೆಗೆ, ಬುಡಕಟ್ಟು ಜನಾಂಗದವರಿಗೆ ಸರಳ ಹಾಗೂ ಕಡಿಮೆ ಖರ್ಚಿನ ಸ್ಥಳೀಯ ಸ್ವಾಯತ್ತತೆ ನೀಡಲು, ಸಂವಿಧಾನಕ್ಕೆ ಆರನೆಯ ವಿಧಿಯನ್ನು ಸೇರಿಸಲಾಗಿತ್ತು. ಆರನೆಯ ವಿಧಿಯ ಪ್ರಕಾರ, ಇಂದಿನ ಮೇಘಾಲಯದಲ್ಲಿರುವ ವಲಯಗಳು ಸೇರಿದಂತೆ, ಈಶಾನ್ಯ ಭಾರತದ ಕೆಲವು ವಲಯಗಳಲ್ಲಿ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆಗಾಗಿ ಅವಕಾಶ ಒದಗಿಸಿತು. ಆರನೆಯ ವಿಧಿಯಡಿ ಈ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆ ಮತ್ತು ನಿರ್ವಹಣೆಯ ರೀತಿಯನ್ನು ವಿಸ್ತೃತವಾಗಿ ನಮೂದಿಸಿ, ADCಗಳ ಅಧಿಕಾರ ವ್ಯಾಪ್ತಿಯನ್ನು ಸಹ ನಮೂದಿಸಲಾಯಿತು. ಸದ್ಯಕ್ಕೆ ಮೇಘಾಲಯದಲ್ಲಿ ಮೂರು ADCಗಳಿವೆ: ಖಾಸಿ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌, ಗಾರೊ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌ ಹಾಗೂ ಜೈನ್ ತಿಯಾಗಳು ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌.

ಸಾಂಪ್ರದಾಯಿಕ ರಾಜಕೀಯ ಸಂಸ್ಥೆಗಳು

ಬದಲಾಯಿಸಿ

ಮೂರೂ ಪ್ರಮುಖ ಜನಾಂಗೀಯ ಬುಡಕಟ್ಟು ಗುಂಪುಗಳಾದ ಖಾಸಿಗಳು, ಜೈನ್ ತಿಯಾಗಳುಗಳು ಹಾಗೂ ಗಾರೊಗಳು ತಮ್ಮದೇ ಆದ ಸಾಂಪ್ರದಾಯಿಕ ರಾಜಕೀಯ ಸಂಸ್ಥೆಗಳನ್ನು ಹೊಂದಿವೆ. ಇವು ನೂರಾರು ವರ್ಷಗಳಿಂದಲೂ ಚಾಲ್ತಿಯಲ್ಲಿವೆ. ಈ ಮೂರೂ ರಾಜಕೀಯ ಸಂಸ್ಥೆಗಳು ತಕ್ಕ ಮಟ್ಟಿಗೆ ಸಮರ್ಪಕವಾಗಿ ಅಭಿವೃದ್ದಿ ಹೊಂದಿದ್ದು, ಗ್ರಾಮ ಮಟ್ಟ, ಪಂಗಡ ಮಟ್ಟ ಹಾಗೂ ರಾಜ್ಯ ಮಟ್ಟ ಸೇರಿದಂತೆ ಹಲವು ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಖಾಸಿಗಳ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ, ಪ್ರತಿಯೊಂದು ಸಮುದಾಯವು ತನ್ನದೇ ಆದ ಪರಿಷತ್‌ ಹೊಂದಿದೆ. ಇದಕ್ಕೆ 'ದರ್ಬಾರ್‌ ಕುರ್‌ ಎನ್ನಲಾಗಿದೆ. ಮುಖ್ಯಸ್ಥನು ಇದರ ಅಧ್ಯಕ್ಷತೆ ವಹಿಸುತ್ತಿದ್ದನು. ಆ ಪಂಗಡದ ಆಂತರಿಕ ವಿಚಾರಗಳನ್ನು ದರ್ಬಾರ್‌ ಅಥವಾ ಪರಿಷತ್‌ ನಿರ್ವಹಿಸುತ್ತಿತ್ತು. ಇದೇ ರೀತಿ, ಪ್ರತಿಯೊಂದು ಗ್ರಾಮಕ್ಕೂ 'ಡರ್ಬನ್‌ ಷ್ನಾಂಗ್‌' (ಗ್ರಾಮ ದರ್ಬಾರ್‌ ಅಥವಾ ಪರಿಷತ್‌) ಎಂಬ ಒಂದು ಸ್ಥಳೀಯ ಶಾಸನವಿತ್ತು. ಗ್ರಾಮದ ಮುಖ್ಯಸ್ಥರು ಇದರ ಅಧ್ಯಕ್ಷತೆ ವಹಿಸುತ್ತಿದ್ದರು. ಈ ಪರಿಷತ್‌ಗಳು ಅಥವಾ ದರ್ಬಾರ್‌ಗಳು, ನೈರ್ಮಲ್ಯ, ನೀರು ಸರಬರಾಜು, ಆರೋಗ್ಯ, ರಸ್ತೆಗಳು, ಶಿಕ್ಷಣ ಮತ್ತು ವ್ಯಾಜ್ಯಗಳ ಇತ್ಯರ್ಥದಂತಹ ಸಾಮಾನ್ಯ ವಿಚಾರಗಳಲ್ಲಿ ಆಡಳಿತದ ಪಾತ್ರ ಮುಖ್ಯವಾಗಿತ್ತು. ಆದರೂ, ಅಂತರ-ಗ್ರಾಮ ವ್ಯಾಜ್ಯಗಳನ್ನು ಅಕ್ಕಪಕ್ಕದ ಖಾಸಿ ಗ್ರಾಮಗಳನ್ನು ಒಳಗೊಂಡ ಒಂದು ರಾಜಕೀಯ ಘಟಕದ ಮೂಲಕ ಇತ್ಯರ್ಥಗೊಳಿಸಲಾಗುತ್ತಿತ್ತು. ಈ ರಾಜಕೀಯ ಘಟಕಕ್ಕೆ (ಬಲಾಢ್ಯ ಸಂಸ್ಥೆ) ರೇಯ್ಡ್‌ ಎಂದು ಕರೆಯಲಾಗುತ್ತಿತ್ತು. ರೇಯ್ಡ್‌ ತನ್ನದೇ ಆದ ರೇಯ್ಡ್‌ ದರ್ಬಾರ್‌ ಎಂಬ ಪರಿಷತ್ತನ್ನು ಹೊಂದಿತ್ತು. ಬಸನ್‌ರು, ಲಿಂಗ್ಡೊಹ್‌ಗಳು ಅಥವಾ ಸರ್ದಾರ್‌ಗಳು ಎಂಬ ಚುನಾಯಿತ ಮುಖ್ಯಸ್ಥರು ಈ ರೇಯ್ಡ್‌ ದರ್ಬಾರ್‌ನ ಅಧ್ಯಕ್ಷತೆ ವಹಿಸುತ್ತಿದ್ದರು. ರೇಯ್ಡ್‌ಗಿಂತಲೂ ಮೇಲಾಗಿ, ಸಯೀಮ್ಷಿಪ್‌ ಎಂಬ ಸರ್ವೊನ್ನತ ರಾಜಕೀಯ ಪ್ರಾಧಿಕಾರವಿತ್ತು. ಸಯೀಮ್ಷಿಪ್‌ ಹಲವಾರು ರೇಯ್ಡ್‌ಗಳ ಸಮ್ಮಿಲನವಾಗಿತ್ತು. ಸಯೀಮ್‌ (ರಾಜ) ಇದರ ಅಧ್ಯಕ್ಷತೆ ವಹಿಸುವವನಾಗಿದ್ದನು. ಸಯೀಮ್‌ 'ದರ್ಬಾರ್‌ ಹಿಮ' ಎಂಬ ರಾಜ್ಯ ಶಾಸನದ ಮೂಲಕ ಖಾಸಿ ರಾಜ್ಯವನ್ನು ಆಳುತ್ತಿದ್ದರು. ಚುನಾವಣೆ ಬಹುಪಾಲು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಜೈನ್ ತಿಯಾಗಳುಗಳು ಖಾಸಿಗಳನ್ನು ಭಾಗಶಃ ಹೋಲುವಂತೆ ಮೂರು ಹಂತಗಳ ರಾಜಕೀಯ ವ್ಯವಸ್ಥೆ ಹೊಂದಿದ್ದರು. ಸಯೀಮ್‌ ಇದರ ಸರ್ವೋನ್ನತ ರಾಜಕೀಯ ಪ್ರಾಧಿಕಾರವಾಗಿದ್ದರು. ಈ ರಚನೆಯ ಎರಡನೆಯ ಮಟ್ಟದಲ್ಲಿ 'ರೇಯ್ಡ್‌ಗಳು' ಎಂಬ ಜೈನ್ ತಿಯಾಗಳ ಗ್ರಾಮಗಳ ಸಮ್ಮಿಲನವಿತ್ತು. ಡೊಲೊಯ್‌ಗಳು ಇವುಗಳ ಮುಖ್ಯಸ್ಥರಾಗಿದ್ದರು. ಇವರು ರೇಯ್ಡ್‌ ಮಟ್ಟದಲ್ಲಿ, ಕಾರ್ಯಕಾರಿಯ, ದಂಡಾಧಿಕಾರಿಯ, ಧಾರ್ಮಿಕ ಹಾಗೂ ವಿಧ್ಯುಕ್ತ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅತಿ ಕೆಳಗಿನ ಮಟ್ಟದಲ್ಲಿ, ಗ್ರಾಮದ ಮುಖ್ಯಸ್ಥರಿದ್ದರು. ಪ್ರತಿಯೊಂದು ಆಡಳಿತ ಮಟ್ಟವೂ ತನ್ನದೇ ಆದ ಪರಿಷತ್‌ ಅಥವಾ ದರ್ಬಾರ್‌ಗಳನ್ನು ಹೊಂದಿತ್ತು. ಬಹಳಷ್ಟು ಚುನಾವಣೆಗಳನ್ನು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಗಾರೊಗಳ ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ, ಗಾರೊ ಗ್ರಾಮಗಳ ಸಮೂಹವು ಸೇರಿ ಒಂದು A·king ಆಗಿತ್ತು. ಗಾರೊಗಳ ರಾಜಕೀಯ ಸಂಸ್ಥೆಯಲ್ಲಿ ಏಕೈಕ ರಾಜಕೀಯ ಮತ್ತು ಆಡಳಿತ ಪ್ರಾಧಿಕಾರವಾದ ನೊಕ್ಮಾಗಳ ಮೇಲ್ವಿಚಾರಣೆಯಲ್ಲಿ A·king ಕಾರ್ಯನಿರ್ವಹಿಸುತ್ತಿತ್ತು. ನೊಕ್ಮಾ ನ್ಯಾಯಾಂಗ ಹಾಗೂ ಶಾಸನದ ಕಾರ್ಯ ನಿರ್ವಹಿಸುತ್ತಿದ್ದರು. A·king ಸಂಬಂಧಿತ ವಿಚಾರಗಳನ್ನು ಚರ್ಚಿಸಿ ಬಗೆಹರಿಸಲು ನೊಕ್ಮಾಗಳು ಸಭೆ ಸೇರುತ್ತಿದ್ದರು. ಗಾರೊಗಳಲ್ಲಿ ಸಮರ್ಪಕವಾಗಿ ಸಂಘಟಿತ ಪರಿಷತ್‌ಗಳಾಗಲಿ ದರ್ಬಾರ್‌ಗಳಾಗಲೀ ಇರಲಿಲ್ಲ.ಕಳೆದ 3 ಮಾರ್ಚ್‌ 2008ರಂದು, ದೂರದ ಈಶಾನ್ಯ ಭಾರತದ ರಾಜ್ಯ ಮೇಘಾಲಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ವಿಚತ್ರ ಹೆಸರುಗಳುಳ್ಳ ಅಭ್ಯರ್ಥಿಗಳ ಪೈಕಿ ಫ್ರಾಂಕೆನ್ಸ್ಟೀನ್‌ ಮೊಮಿನ್‌, ಬಿಲ್ಲಿ ಕಿಡ್‌ ಸಂಗ್ಮಾ ಹಾಗೂ ಅಡೊಲ್ಫ್‌ ಲು ಹಿಟ್ಲರ್‌ ಮಾರಾಕ್‌ ಎಂಬ ಮೂವರು ಪುರುಷರಿದ್ದರು. ಕಳೆದ, 5 ಫೆಬ್ರವರಿ 2008ರಂದು ವರದಿಯಾದಂತೆ, 60 ಚುನಾವಣಾ ಕ್ಷೇತ್ರಗಳಿಗಾಗಿ 331 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿದ್ದರು. ಇವರಲ್ಲಿ ವಿಚಿತ್ರ ಹೆಸರುಗಳಿಗೆ ಯಾವುದೇ ಬರವಿರಲಿಲ್ಲ. ಹಿಟ್ಲರ್‌, ಫ್ರಾಂಕೆನ್ಸ್ಟೀನ್‌ ಬ್ಯಾಟ್ಲ್‌ ಫಾರ್‌ ವೋಟ್ಸ್‌ ಇನ್‌ ಇಂಡಿಯಾ.

ಅಂಕಿ-ಅಂಶಗಳು

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "Census Population" (PDF). Census of India. Ministry of Finance India. Archived from the original (PDF) on 2008-12-19. Retrieved 2008-12-18.
  2. ೨.೦ ೨.೧ ೨.೨ ೨.೩ ಭಾರತೀಯ ಜನಗಣತಿ
  3. ಅಮೃತ್‌ ಕುಮಾರ್‌ ಗೋಲ್ಡ್‌ಸ್ಮಿತ್‌. ಕ್ರಿಶ್ಚಿಯಾನಿಟಿ ಇನ್‌ ನಾರ್ತ್‌-ಈಸ್ಟ್‌ ಇಂಡಿಯಾ ಇನ್‌ ಎ ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್‌
  4. "ಆರ್ಕೈವ್ ನಕಲು". Archived from the original on 2009-05-15. Retrieved 2010-06-14.
  5. "ಆರ್ಕೈವ್ ನಕಲು". Archived from the original on 2009-05-06. Retrieved 2010-06-14.
  6. "ಆರ್ಕೈವ್ ನಕಲು". Archived from the original on 2009-05-24. Retrieved 2010-06-14.
  7. ಪಿ. 139 ಎ ಟ್ರೈಬ್‌ ಇನ್‌ ಟ್ರಾನ್ಸಿಷನ್‌ ಲೇಖಕರು: ಹಿರಾ ಲಾಲ್‌ ದೇಬ್‌ ರಾಯ್‌
  8. ಪಿ. 132 'ಎ ಟ್ರೈಬ್‌ ಇನ್‌ ಟ್ರಾನ್ಸಿಷನ್‌ ಲೇಖಕರು: ಹಿರಾ ಲಾಲ್‌ ದೇಬ್‌ ರಾಯ್‌
  9. P. 25 ಎ ಟ್ರೈಬ್‌ ಇನ್‌ ಟ್ರಾನ್ಸಿಷನ್‌‌ ಲೇಖಕರು: ಹಿರಾ ಲಾಲ್‌ ದೇಬ್‌ ರಾಯ್
  10. P. 169 ಎ ಟ್ರೈಬ್‌ ಇನ್‌ ಟ್ರಾನ್ಸಿಷನ್‌ ಲೇಖಕರು: ಹಿರಾ ಲಾಲ್‌ ದೇಬ್‌ ರಾಯ್‌
  11. "GIS ಹೌಸ್ಹೋಲ್ಡ್‌ ಜನಗಣತಿ". Archived from the original on 2010-07-06. Retrieved 2010-06-14.


  • ಗೋಪಾಲಕೃಷ್ಣನ್‌ ಆರ್‌, ಮೇಘಾಲಯ - ಲ್ಯಾಂಡ್‌ ಅಂಡ್‌ ಪೀಪಲ್‌, ISBN 81-7117-146-X
  • ಥಾಮಸ್‌ ಯುಜೀನ್‌ ಡಿ. – ಪಾವರ್ಟಿ ಅಂಡ್‌ ರುರಲ್‌ ಡೆವೆಲಪ್ಮೆಂಟ್‌ ಇನ್‌ ಮೇಘಾಲಯ
  • ಪಾವರ್‌ ಟು ದಿ ಪೀಪಲ್‌ ಇನ್‌ ಮೇಘಾಲಯ, ರೀಜೆನ್ಸಿ ಪಬ್ಲಿಷರ್ಸ್‌.
  • ಡಿ.ಟಿ. ಜಿಂಬಾ. - ಜಿಯೊಗ್ರಫಿ ಆಫ್‌ ಮೇಘಾಲಯ
  • ಡಾ. ಎಸ್‌. ಆರ್‌. ಜೋಶಿ ಹಾಗೂ ಶ್ರೀಮತಿ ಎನ್‌. ಜೋಶಿ - ಮ್ಯಾನ್‌ ಅಂಡ್‌ ಹಿಸ್‌ ಎನ್ವಿರಾನ್ಮೆಂಟ್‌ (ಹಿಮಾಲಯ ಬುಕ್‌ ಹೌಸ್‌, ಶಿಲಾಂಗ್‌)
  • ಡಾ. ಬಿ. ಆರ್‌. ಖರ್ಲುಖಿ - ಕಾ ರೀತಿ ಸೈನ್ಷಾರ್‌ ಜೋಂಗ್‌ ಕಾ ರಿ ಇಂಡಿಯಾ. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌)
  • ಡಾ. ಕಿನ್ಫಾಮ್‌ ಸಿಂಗ್‌ ನೊನ್ಕಿನ್ರಿಹ್‌ - Ban Sngewthuh ia ka poitri. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌)
  • ಡಾ. ಎಸ್‌. ಎಂ. ಸುಂಗೊಹ್‌ - ಎಜುಕೇಷನಲ್‌ ಎವ್ಯಾಲ್ಯುಯೇಷನ್‌ ಅಂಡ್‌ ಟೆಸ್ಟಿಂಗ್‌. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌)
  • ಡಾ. ಜೇಯ್ನಾಲ್‌ ಯು. ಅಹ್ಮದ್‌ - ಬ್ಯುಸಿನೆಸ್‌ ಎನ್ವಿರಾನ್ಮೆಂಟ್‌. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌)
  • ಡಾ. ಅರ್‌. ಎಂ. ಲಿಂಗ್ದೊಹ್‌ - ka kot pule Shaphang ka Jinghikai ia ka Jingkoit Jingkhiah Bynta (1\2\3\4)(H B H)

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಮೇಘಾಲಯ&oldid=1254077" ಇಂದ ಪಡೆಯಲ್ಪಟ್ಟಿದೆ