Bears
Temporal range: 38–0 Ma Late Eocene – Recent
Captive brown bear at the Polar Zoo.
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಉಪಗಣ:
ಕುಟುಂಬ:
Ursidae

Genera

ಕರಡಿ(Sloth bear)Melursus ursinus ಇದು ಭಾರತ,ಶ್ರೀಲಂಕಾ,ನೇಪಾಳ,ಬಾಂಗ್ಲಾದೇಶಗಳಲ್ಲಿ ಕಂಡು ಬರುವ ಕರಡಿಗಳ ಒಂದು ಪ್ರಭೇದ.ಕರ್ನಾಟಕದಲ್ಲಿ ಅರಣ್ಯಗಳಲ್ಲಿ ಹಾಗೂ ಬಂಡೆಗಳಿರುವ ಬೆಟ್ಟಸಾಲಿನಲ್ಲಿ ಕಂಡುಬರುವುದು.

ವೈಜ್ಞಾನಿಕ ವರ್ಗೀಕರಣ ಬದಲಾಯಿಸಿ

ಕಾರ್ನಿವೊರ ಗಣದ ಅರ್ಸಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಪ್ರಪಂಚದಲ್ಲಿ ಸು. 7 ಜಾತಿ ಹಾಗೂ 9 ಪ್ರಭೇದಗಳಿಗೆ ಸೇರಿದ ಕರಡಿಗಳಿವೆ. ಇವು ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿರುವುದೇ ಹೆಚ್ಚು. ಉತ್ತರ ಶೀತವಲಯದಲ್ಲೂ ಒಂದು ಜಾತಿಯ ಕರಡಿ ಇದೆ (ಆಫ್ರಿಕ, ಮಡಗಾಸ್ಕರ್ ದ್ವೀಪ, ಆಸ್ಟ್ರೇಲಿಯ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಮಾತ್ರ ಕರಡಿ ಇಲ್ಲ).

ಲಕ್ಷಣಗಳು ಬದಲಾಯಿಸಿ

ಬಹುಭಾರವಾದ ದೇಹ, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕವಾದ ಆದರೆ ಬಲಯುತವಾದ ಕಾಲುಗಳು, ಪುಟ್ಟಬಾಲ, ದೊಡ್ಡ ಗಾತ್ರದ ತಲೆ, ದೇಹದ ಮೇಲೆಲ್ಲ ಉದ್ದನೆಯ ಹಾಗೂ ಪೊದೆಯಂಥ ಕೂದಲುಗಳು-ಇವು ಕರಡಿಯ ಪ್ರಮುಖವಾದ ಸಾಮಾನ್ಯ ಲಕ್ಷಣಗಳು. ಸಾಮಾನ್ಯವಾಗಿ ಕರಡಿಗಳ ಕಣ್ಣು ಮತ್ತು ಕಿವಿಗಳು ಬಲು ಚಿಕ್ಕವು-ಕಿವಿಗಳು ಗುಂಡಗಿದ್ದು ನೆಟ್ಟಗೆ ನಿಂತಂತಿವೆ. ಮೂತಿ ಉದ್ದವಾಗಿದೆ. ತುಟಿಗಳು ದವಡೆಗಳಿಗೆ ಅಂಟಿಲ್ಲ. ಎರಡು ಜೊತೆ ಕಾಲುಗಳಲ್ಲೂ ಐದೈದು ಬೆರಳುಗಳಿವೆ. ಇವುಗಳಲ್ಲಿ ಚೂಪಾದ ಬಾಗಿದ ಹಾಗೂ ಗಡುಸಾದ ಉಗುರುಗಳಿವೆ (ಪಂಜ), ಇವು ಆಹಾರವನ್ನು ಸಿಗಿಯಲು ಗುಳಿ ತೋಡಲೂ ಸಹಕಾರಿಯಾಗಿವೆ. ಕರಡಿಗಳು ಊರುಗಾಲಿಗಳು (ಪ್ಲಾಂಟಿಗ್ರೇಡ್). ನಡೆಯುವಾಗ ಅಂಗಾಲನ್ನು ಅದರಲ್ಲೂ ಹಿಮ್ಮಡಿಯನ್ನು ನೆಲಕ್ಕೆ ಊರುವುದರಿಂದ ಇವುಗಳ ನಡಿಗೆ ವಿಚಿತ್ರವಾಗಿದ್ದು ತೊನೆಯುತ್ತ ನಡೆಯುವಂತೆ ಕಾಣುತ್ತದೆ. ಸಾಮಾನ್ಯವಾಗಿ ನಾಲ್ಕು ಕಾಲುಗಳನ್ನು ಊರಿ ನಡೆಯುವುವಾದರೂ ಕೆಲವೊಮ್ಮೆ ಬರಿಯ ಹಿಂಗಾಲುಗಳ ಮೇಲೆ ನಡೆಯುವುದೂ ಉಂಟು. ನಡಿಗೆ ವಿಚಿತ್ರವಾದರೂ ಕರಡಿಗಳು ವೇಗವಾಗಿ ಹಾಗೂ ಅತ್ಯಂತ ಜಾಗರೂಕತೆಯಿಂದ ನಡೆಯಬಲ್ಲವು. ನೆಲದ ಮೇಲೆಯೇ ಸಂಪೂರ್ಣವಾಗಿ ತಮ್ಮ ಚಟುವಟಿಕೆಗಳನ್ನು ನಿರ್ವಹಿಸುವ ಕರಡಿಗಳ ಅಂಗಾಲಿನ ಮೇಲೆ ಕೂದಲು ಇದೆ. ಆದರೆ ಮಲಯದಲ್ಲಿ ಕಂಡುಬರುವ ಬಿಸಿಲು ಕರಡಿಯ ಅಂಗಾಲಿನಲ್ಲಿ ಕೂದಲಿಲ್ಲ. ಇದರ ಕಾರಣ ಬಹುಶಃ ಈ ಕರಡಿ ಸಾಮಾನ್ಯವಾಗಿ ಮರಗಳಲ್ಲೇ ಕಾಲ ಕಳೆಯುವುದಾಗಿರಬಹುದು. ದೇಹದ ಗಾತ್ರದಲ್ಲೂ ತೂಕದಲ್ಲೂ ಬೇರೆ ಬೇರೆ ಬಗೆಯ ಕರಡಿಗಳಲ್ಲಿ ವೈವಿಧ್ಯವಿದೆ. ಕೆಲವು ಸು. 3 ಮೀ ಉದ್ದವಿದ್ದು, ಸು.780 ಕಿಗ್ರಾಂ ತೂಗಿದರೆ (ಉದಾಹರಣೆಗೆ ಅಲಾಸ್ಕದ ಕಂದು ಕರಡಿ) ಇನ್ನು ಕೆಲವು ಕೇವಲ 1 ಮೀ. ಉದ್ದವಿದ್ದು 27-40 ಕಿಗ್ರಾಂ. ತೂಗುತ್ತವೆ (ಉದಾಹರಣೆಗೆ ಮಲಯದ ಬಿಸಿಲು ಕರಡಿ). ದೇಹದ ಬಣ್ಣದಲ್ಲೂ ವೈವಿಧ್ಯವನ್ನು ಕಾಣಬಹುದು, ಕಂದು, ಕಪ್ಪು, ನೀಲಿಮಿಶ್ರಿತ ಕಪ್ಪು, ಬೂದು, ಬಿಳಿ ಇತ್ಯಾದಿ. ಕೆಲವು ಕರಡಿಗಳಲ್ಲಿ ಎದೆಯ ಮೇಲೆ ಅರ್ಧ ಚಂದ್ರಾಕೃತಿಯ ಅಥವಾ ಚಕ್ರದಂಥ ಬಿಳಿಯ ಬಣ್ಣದ ಗುರುತುಗಳುಂಟು. ಕರಡಿಗಳಿಗೆ ದೃಷ್ಟಿ ಹಾಗೂ ಶ್ರವಣ ಶಕ್ತಿಗಳು ಕಡಿಮೆ. ಆದರೆ ಘ್ರಾಣಶಕ್ತಿ ಅತ್ಯಂತ ಚುರುಕು. ಆಹಾರ ಮತ್ತು ಶತ್ರುಗಳ ಸುಳಿವನ್ನು ವಾಸನೆಯಿಂದಲೇ ಪತ್ತೆಹಚ್ಚುತ್ತವೆ. ಇವುಗಳ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಶಿಶಿರಸ್ವಾಪತೆ (ಹೈಬರ್ನೇಷನ್) ಬಹುಪಾಲು ಜಾತಿಯ ಕರಡಿಗಳು ಚಳಿಗಾಲದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಯಾವುದಾದರೂ ಗುಹೆಯಲ್ಲಿ 2-3 ತಿಂಗಳ ಕಾಲ ನಿದ್ದೆ ಹೋಗುತ್ತವೆ. ಈ ಕಾಲದಲ್ಲಿ ಉಸಿರಾಡುವುದೊಂದನ್ನು ಬಿಟ್ಟರೆ ಉಳಿದೆಲ್ಲ ದೈಹಿಕವ್ಯಾಪಾರಗಳೂ ನಿಂತಂತೆಯೇ ಇರುತ್ತವೆ. ಅದರೆ ಕೆಲವು ವಿಜ್ಞಾನಿಗಳ ಪ್ರಕಾರ ಈ ಬಗೆಯ ನಿದ್ದೆ ಕೀಟಗಳು ಮುಂತಾದ ಪ್ರಾಣಿಗಳಲ್ಲಿರುವಂತೆ ನಿಜವಾದ ಶಿಶಿರಸ್ವಾಪತೆಯಲ್ಲ. ಏಕೆಂದರೆ ಈ ಕಾಲದಲ್ಲಿ ಕರಡಿಗಳು ಎಚ್ಚರಗೊಳ್ಳುವುದೂ ಗುಹೆಯಿಂದ ಹೊರಬಂದು ಮತ್ತು ಬಂದಂತೆ ನಡೆದಾಡುವುದೂ ಕಂಡುಬಂದಿದೆ. ಶೀತವಲಯದ ಕರಡಿಗಳು (ಗರ್ಭಧರಿಸಿದ ಹೆಣ್ಣುಗಳನ್ನು ಬಿಟ್ಟು), ಮಲಯದ ಬಿಸಿಲು ಕರಡಿ ಮತ್ತು ಭಾರತದ ಕರಡಿ (ಸ್ಲಾತ್ ಬೇರ್)-ಇವು ಶಿಶಿರಸ್ವಾಪತೆ ಮಾಡುವುದಿಲ್ಲ ಎಂದು ಹೇಳಲಾಗಿದೆ.

ವಾಸ ಮತ್ತು ಆಹಾರ ಬದಲಾಯಿಸಿ

ಕರಡಿ ನಿಶಾಚರಿ. ಹಗಲೆಲ್ಲ ಗುಡ್ಡಬೆಟ್ಟಗಳಲ್ಲಿನ ಗವಿಗಳಲ್ಲೊ, ದಟ್ಟವಾದ ಪೊದೆಗಳಲ್ಲೊ, ದೊಡ್ಡ ದಿಮ್ಮಿಗಳ ಪೊಟರೆಗಳಲ್ಲೋ ಅಥವಾ ನೆಲವನ್ನು ತೋಡಿ ಮಾಡಿಕೊಂಡ ಬಿಲಗಳಲ್ಲೊ ನಿದ್ರಿಸುತ್ತ ಕಾಲ ಕಳೆಯುತ್ತಿದ್ದು, ಆಹಾರಾರ್ಜನೆಗಾಗಿ ಸಂಜೆ ಅಥವಾ ರಾತ್ರಿ ಹೊರ ಹೊರಡುತ್ತದೆ. ಶೀತವಲಯದ ಕರಡಿ ಮಾತ್ರ ಹಗಲಿನಲ್ಲೆ ತನ್ನ ಚಟುವಟಿಕೆಗಳಲ್ಲಿ ನಿರತವಾಗಿರುತ್ತದೆ. ಸಾಮಾನ್ಯವಾಗಿ ಕರಡಿಗಳೆಲ್ಲ ಅಹಾರವನ್ನು ಹುಡುಕಿಕೊಂಡು ತಾವು ವಾಸಿಸುವ ಸ್ಥಳದಿಂದ ಬಹುದೂರ ಹೋಗುತ್ತವೆ. ಅದಕ್ಕೇ ಬಹಳ ಅಲೆಮಾರಿ ಪ್ರಾಣಿಗಳೆಂದು ಇವು ಹೆಸರಾಗಿವೆ. ಕರಡಿಗಳು ಸರ್ವಭಕ್ಷಕ ಪ್ರಾಣಿಗಳು. ಹುಲ್ಲು, ಎಲೆ, ಬೇರು, ಹಣ್ಣು, ಹಂಪಲು, ಜೇನುತುಪ್ಪ ಮುಂತಾದ ಸಸ್ಯಾಹಾರವನ್ನೂ ಕೀಟಗಳು, ಸಣ್ಣಪುಟ್ಟ ಸ್ತನಿಗಳು ಮುಂತಾದ ಮಾಂಸಾಹಾರವನ್ನೂ ತಿನ್ನುತ್ತವೆ. ಮೀನನ್ನು ಹಿಡಿದು ತಿನ್ನುವುದೂ ಉಂಟು. ಅಹಾರಪ್ರಾಣಿಗಳನ್ನು ತಮ್ಮ ಬಲವಾದ ಪುಂಜಗಳಿಂದ ಹೊಡೆದು ಕೊಂದು ತಿನ್ನುವುದೇ ವಾಡಿಕೆ.

ಬೇಟೆ ಬದಲಾಯಿಸಿ

ಕರಡಿಗಳು ಸ್ವಾಭಾವಿಕವಾಗಿ ಶಾಂತಸ್ವಭಾವದ ಪ್ರಾಣಿಗಳು. ತಾವಾಗಿಯೇ ಇತರ ಪ್ರಾಣಿಗಳ ಮೇಲೆ (ಆಹಾರ ಪ್ರಾಣಿಗಳನ್ನು ಬಿಟ್ಟು) ಬಿದ್ದು ಆಕ್ರಮಣ ಮಾಡುವುದಿಲ್ಲ. ಆದಷ್ಟು ಮಟ್ಟಿಗೆ ಬೇರೆ ಪ್ರಾಣಿಗಳೊಂದಿಗೆ ಹೋರಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತವೆ. ಆದರೆ ಸ್ವಂತ ಹಾಗೂ ಮರಿಗಳ ರಕ್ಷಣೆಗಾಗಿ, ಆಹಾರಕ್ಕಾಗಿ, ಇಕ್ಕಟ್ಟಗೆ ಸಿಲುಕಿದಾಗ, ಬಹುಕ್ರೂರವಾಗಿ, ಅಪಾಯಕರವಾಗಿ ಹೋರಾಡಬಲ್ಲವು.

ಸಂತಾನಾಭಿವೃದ್ಧಿ ಬದಲಾಯಿಸಿ

ಇವು ಸಾಮಾನ್ಯವಾಗಿ ಒಂಟಿಜೀವನ ನಡೆಸುತ್ತವೆ. ಸಂತಾನಾಭಿವೃದ್ದಿಯ ಕಾಲದಲ್ಲಿ ಮಾತ್ರ ಒಟ್ಟೊಟ್ಟಿಗೆ ಇರುತ್ತವೆ. ಪ್ರತಿವರ್ಷದ ಅಕ್ಟೋಬರ್ ಮಾರ್ಚ್ ತಿಂಗಳುಗಳ ನಡುವಣ ಕಾಲ ಕರಡಿಗಳು ಮರಿ ಹಾಕುವ ಕಾಲ. 6-9 ತಿಂಗಳುಗಳ ಅವಧಿಯ ಗರ್ಭಧಾರಣೆಯ ಅನಂತರ ಒಂದೊಂದು ಹೆಣ್ಣೂ 1-4 ಮರಿಗಳನ್ನು ಹೆರುತ್ತದೆ. ಆಗತಾನೇ ಹುಟ್ಟಿದ ಮರಿಗಳು ಬಹಳ ಚಿಕ್ಕವಾಗಿದ್ದು ಸು. 230-560 ಗ್ರಾಂ. ಮಾತ್ರ ತೂಗುತ್ತವೆ. ಹುಟ್ಟಿದಾಗ ಕಣ್ಣು ತೆರೆದೇ ಇರುವುದಿಲ್ಲ, ಮರಿಗಳ ಪಾಲನೆಯನ್ನು ತಾಯಿಕರಡಿ ಮಾಡುತ್ತದೆ. 1-2 ವರ್ಷ ತಾಯಿಯೊಡನೆಯೇ ಇದ್ದು ಆಮೇಲೆ ಮರಿಗಳು ತಮ್ಮ ಬದುಕನ್ನು ಸ್ವತಂತ್ರವಾಗಿ ನಡೆಸಲಾರಂಭಿಸುತ್ತವೆ. 2-6 ವರ್ಷಗಳಲ್ಲಿ ಪ್ರೌಢಾವಸ್ಥೆ ತಲಪುತ್ತವೆ. ಕರಡಿಗಳ ಆಯಸ್ಸು ಸು. 15-30 ವರ್ಷಗಳು, ಸಾಕಿದ ಕರಡಿಗಳು ಇನ್ನೂ ಹೆಚ್ಚುಕಾಲ ಬದುಕಿರುವ ದಾಖಲೆಗಳುಂಟು.

ಪ್ರಬೇಧಗಳು ಬದಲಾಯಿಸಿ

ಪ್ರಪಂಚದಲ್ಲಿ ಕಾಣಬರುವ ಏಳು ಜಾತಿಯ ಕರಡಿಗಳು ಇವು-ಅಮೆರಿಕದ ಕಪ್ಪು ಕರಡಿ, ಅಲಾಸ್ಕದ ಕಂದು ಕರಡಿ, ಏಷ್ಯದ ಕಪ್ಪು ಕರಡಿ, ಬಿಸಿಲು ಕರಡಿ, ಭಾರತದ ಕರಡಿ, ಮಚ್ಚೆ ಕರಡಿ ಮತ್ತು ಶೀತವಲಯದ ಕರಡಿ.

  1. ಅಮೆರಿಕದ ಕಪ್ಪು ಕರಡಿ : ಇದರ ಶಾಸ್ತ್ರೀಯ ನಾಮ ಯುಆಕರ್ಟ್‌ಸ್ ಅಮೆರಿಕಾನಸ್ ಎಂದು. ಉತ್ತರ ಅಮೆರಿಕದ ದಟ್ಟವಾದ ಕಾಡುಗಳಲ್ಲಿ ವಿಶೇಷವಾಗಿ ಕಾಣಬರುತ್ತದೆ. ಸು.1.5-1.8 ಮೀ. ಉದ್ದವಿರುವ ಇದರ ಭಾರ ಸು. 150 ಕಿಗ್ರಾಂ. ದೇಹದ ಬಣ್ಣ ಕಪ್ಪು, ಕಂದು, ನೀಲಿಮಿಶ್ರಿತ ಕಪ್ಪು, ಬಿಳಿ ಇತ್ಯಾದಿ ವಿವಿಧ ಬಗೆಯದು. ಬಹಳ ಚೆನ್ನಾಗಿ ಮರ ಹತ್ತಬಲ್ಲುದು. ಸಹಜವಾಗಿ ಸಾಧುಪ್ರಾಣಿ. ಹಣ್ಣುಹಂಪಲು, ಮೀನು ಇತ್ಯಾದಿ ಇದರ ಅಹಾರ, ಪ್ರೌಢ ಕರಡಿಗಳನ್ನು ಪಳಗಿಸುವುದು ಕಷ್ಟವಾದರೂ ಮರಿಗಳನ್ನು ಹಿಡಿದು ಪಳಗಿಸಿ ಕೆಲವು ಮೋಜಿನ ಅಟಗಳನ್ನು ಕಲಿಸುವುದು ಸಾಧ್ಯ. ಕೆಲವು ಕಡೆ ಇದರ ಮಾಂಸವನ್ನು ತಿನ್ನುವ ರೂಢಿ ಇದೆ.
  2. ಅಲಾಸ್ಕದ ಕಂದು ಕರಡಿ : ಅರ್ಸಸ್ ಅಕರ್ಟ್‌ಸ್ ಎಂಬ ಶಾಸ್ತ್ರೀಯ ಹೆಸರಿನ ಈ ಕರಡಿ ಅಲಾಸ್ಕದ ಅರಣ್ಯವಾಸಿ. ಒಂದು ಕಾಲದಲ್ಲಿ ಉತ್ತರ ಅಮೆರಿಕ, ಯುರೋಪು ಹಾಗೂ ಏಷ್ಯದ ಕಾಡುಗಳಲ್ಲಿ ಹೇರಳವಾಗಿ ಕಾಣಬರುತ್ತಿದ್ದ ಇದು ಇಂದು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಯೆಲ್ಲೊಸ್ಟೋನ್ ಮತ್ತು ಗ್ಲೇಸಿಯರ್ ರಾಷ್ಟ್ರೀಯ ಉದ್ಯಾನಗಳಲ್ಲಿ, ಅಲಾಸ್ಕ ಹಾಗೂ ಕೆನಡಗಳ ಕಾಡುಗಳಲ್ಲಿ ಮಾತ್ರ ವಾಸಿಸುತ್ತದೆ. ಜೀವಂತ ಕರಡಿಗಳಲ್ಲೆಲ್ಲ ಅತ್ಯಂತ ದೊಡ್ಡದೂ ಬಲಶಾಲಿಯೂ ಎಂದು ಹೆಸರಾಗಿದೆ. ಸು. 2.8 ಮೀ. ಉದ್ದವಿದ್ದು 780 ಕಿ.ಗ್ರಾಂ ವರೆಗೂ ಭಾರವಿರುತ್ತದೆ. ತನ್ನಪಂಜದ ಪ್ರಹಾರದಿಂದ ತನಗಿಂತಲೂ ಭಾರವಾದ ಕಾಡುಕೋಣಗಳನ್ನು ಕೊಂದಿರುವ ನಿದರ್ಶನಗಳಿವೆ. ಇದು ಸರ್ವಭಕ್ಷಕ. ಇದನ್ನು ಸುಲಭವಾಗಿ ಪಳಗಿಸಬಹುದು. ತಾಳ, ಲಯಕ್ಕನುಗುಣವಾಗಿ ಕುಣಿಯುವುದನ್ನು ಕಲಿಸಿ ಸರ್ಕಸ್ಸುಗಳಲ್ಲಿ ಪ್ರದರ್ಶಿಸುತ್ತಾರೆ.
  3. ಏಷ್ಯದ ಕಪ್ಪು ಕರಡಿ : ಹಿಮಾಲಯದ ಕರಡಿಯೆಂದೂ ಕರೆಯಲಾಗುವ ಇದು ಬಲೂಚಿಸ್ತಾನ, ಹಿಮಾಲಯ, ಚೀನ, ಜಪಾನ್ ಮತ್ತು ಕೊರಿಯ ದೇಶಗಳ ಕಾಡುಗಳಲ್ಲೆಲ್ಲ ಹರಡಿದೆ. ಸೆಲೆನಾಕರ್ಟ್‌ಸ್ ತಿಬೆಟಾನಸ್ ಎಂಬುದು ಇದರ ವೈಜ್ಞಾನಿಕನಾಮ. ಇದು ಸು.1.6 ಮೀ. ಉದ್ದವುಳ್ಳದ್ದೂ ಸು. 120 ಕಿಗ್ರಾಂ. ತೂಕವುಳ್ಳದ್ದೂ ಆಗಿದೆ. ಇದರ ಬಣ್ಣ ಕಪ್ಪು. ಎದೆಯ ಮೇಲೆ ಅರ್ಧ ಚಂದ್ರಾ ಕೃತಿಯ ಬಿಳಿಯ ಅಥವಾ ಮಾಸಲು ಹಳದಿ ಬಣ್ಣದ ಮಚ್ಚೆ ಇದೆ. ಉಳಿದ ಜಾತಿಯ ಕರಡಿಗಳಿಗಿಂತ ಹೆಚ್ಚು ಅಪಾಯಕಾರಿ ಹಾಗೂ ಆಕ್ರಮಣಕಾರಿ. ವನ್ಯ ಪ್ರಾಣಿಗಳನ್ನಲ್ಲದೆ ಕುರಿ, ಮೇಕೆ, ದನಕರು ಮುಂತಾದ ಸಾಕುಪ್ರಾಣಿಗಳನ್ನೂ ಕೊಂದು ತಿನ್ನುವುದೆಂದು ಹೇಳುತ್ತಾರೆ. ಇದರ ಮಾಂಸದಲ್ಲಿ ಔಷಧೀಯ ಗುಣಗಳಿವೆಯೆಂದು ಚೀನೀಯರು ನಂಬುತ್ತಾರೆ.
  4. ಬಿಸಿಲು ಕರಡಿ (ಸನ್ ಬೇರ್) : ಮಯನ್ಮಾರ್, ಮಲಯ, ಸುಮಾತ್ರ, ಬೋರ್ನಿಯೊಗಳ ಗುಡ್ಡಗಾಡುಗಳಲ್ಲಿ ಕಾಣಬರುವ ಇದರ ಶಾಸ್ತ್ರೀಯ ನಾಮ ಹೆಲಾಕರ್ಟ್‌ಸ್ ಮಲಯಾನಸ್. ಕರಡಿಗಳಲ್ಲೆಲ್ಲ ಅತ್ಯಂತ ಚಿಕ್ಕದು ; 1.1-1.4 ಮೀ. ಉದ್ದವಿದ್ದು ಸು.27-65 ಕಿಗ್ರಾಂ ಭಾರವಿದೆ. ಬಣ್ಣ ಕಪ್ಪು, ಎದೆಯಮೇಲೆ ಕಿತ್ತಳೆ ಅಥವಾ ಬಿಳಿಯ ಮಚ್ಚೆಯಿದೆ. ಮೂತಿ ಬೂದು ಬಣ್ಣದ್ದು ತುಂಬ ಚೆನ್ನಾಗಿ ಮರ ಹತ್ತಬಲ್ಲ ಇದರ ವಾಸ ಬಹುಪಾಲು ಮರದ ಮೇಲೆಯೇ ಬಹಳ ಬುದ್ದಿವಂತ ಪ್ರಾಣಿಯೆಂದು ಹೆಸರಾಗಿದೆ. ಈ ಕರಡಿಯ ಮರಿಗಳನ್ನು ಮಾತ್ರ ಪಳಗಿಸಬಹುದು.
  5. ಭಾರತದ ಕರಡಿ (ಸ್ಲಾತ್ ಬೇರ್): ಭಾರತ ಮತ್ತು ಶ್ರೀಲಂಕ ದೇಶಗಳು ಇದರ ತವರು. ಇದರ ವ್ಶೆಜ್ಞಾನಿಕ ನಾಮ ಮೆಲರ್ಸಸ್ ಅರ್ಸಿನಸ್. ಜೇನು ಕರಡಿ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಗುಡ್ಡಗಾಡುಗಳಲ್ಲಿ ವಾಸಿಸುತ್ತದೆ. ಸು. 1.4-1.8 ಮೀ. ಉದ್ದ. 55-136 ಕಿ ಗ್ರಾಂ ಭಾರ ಇದೆ. ದೇಹದ ಬಣ್ಣ ಕಪ್ಪು. ಎದೆಯ ಮೇಲೆ ಗಿ ಅಥವಾ ಙ ಅಕಾರದ ಬಿಳಿಯ ಮಚ್ಚೆಯಿದೆ. ಇದರ ಮೂತಿ ಬಹಳ ಉದ್ದ. ತುಟಿಗಳು ಸರಾಗವಾಗಿ ಅಡ್ಡಡ್ಡವಾಗಿ ಚಲಿಸಬಲ್ಲುವು. ಮೂಗಿನ ಹೊಳ್ಳೆಗಳನ್ನು ಬೇಕೆನಿಸಿದಾಗ ಮುಚ್ಚಿಕೊಳ್ಳಬಲ್ಲುದು. ಬಾಚಿಹಲ್ಲುಗಳಿಲ್ಲ. ಗೆದ್ದಲುಗಳನ್ನು ಹಿಡಿದು ತಿನ್ನಲು ಇವೆಲ್ಲ ಲಕ್ಷಣಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತದೆ. ಹುತ್ತವನ್ನು ಕೆಡವಿ, ಮಣ್ಣನ್ನೂ ಕೊಳೆಯನ್ನೂ ಊದಿ ಹಾರಿಸಿ, ಮೂತಿಯನ್ನು ಕೊಳವೆಯಂತೆ ಮಾಡಿಕೊಂಡು ಹುಳುಗಳನ್ನು ಬಾಯೊಳಕ್ಕೆ ಎಳೆದು ಕೊಳ್ಳುತ್ತದೆ. ಜೇನು ಕಂಡರೂ ಇದಕ್ಕೆ ಬಲು ಇಷ್ಟ. ಜೇನುಗೂಡನ್ನು ಹುಡುಕಿಕೊಂಡು ಹಲವಾರು ಮೈಲಿಗಳು ಅಲೆಯುವುದುಂಟು. ಈ ಕರಡಿಯನ್ನು ಪಳಗಿಸಿ ಸಾಕಬಹುದಲ್ಲದೆ ಇದಕ್ಕೆ ಹಲವಾರು ಆಟಗಳನ್ನು ಕಲಿಸಬಹುದು.
  6. ಮಚ್ಚೆ ಕರಡಿ : ದಕ್ಷಿಣ ಅಮೆರಿಕದ ವೆನಿಜೇ಼್ವಲ, ಕೊಲಂಬಿಯ, ಎಕ್ವಡಾರ್, ಪೆರು, ಬೊಲೀವಿಯ ಮುಂತಾದ ಪ್ರದೇಶಗಳ ನಿವಾಸಿ. ಶಾಸ್ತ್ರೀಯವಾಗಿ ಇದನ್ನು ಟ್ರೆಮಾಕರ್ಟ್‌ಸ್ ಆರ್ನೇಟಸ್ ಎಂದು ಕರೆಯುತ್ತಾರೆ. ಇದರ ಉದ್ದ ಸು. 1.5-1.8 ಮೀ; ತೂಕ ಸು. 70 ಕಿಗ್ರಾಂ. ಕಣ್ಣುಗಳ ಸುತ್ತ ಕನ್ನಡಕದ ಆಕೃತಿಯ ಬಿಳಿಯ ಮಚ್ಚೆಯಿರುವುದು ಇದರ ವಿಶಿಷ್ಟ ಲಕ್ಷಣ.
  7. ಶೀತವಲಯದ ಕರಡಿ (ಪೋಲಾರ್ ಬೇರ್) : ಥಲಾರ್ಕ್ಷಸ್ ಮ್ಯಾರಿಟಿ ಮಸ್ ಎಂಬ ಶಾಸ್ತ್ರೀಯ ಹೆಸರಿನ ಈ ಕರಡಿ ಉತ್ತರ ಶೀತವಲಯದಲ್ಲಿ ಹೇರಳವಾಗಿದೆ. ಹಿಮಕರಡಿ ಇದರ ಪರ್ಯಾಯ ನಾಮ. ಅಚ್ಚ ಬಿಳಿಯ ಬಣ್ಣ, ನೀಳವಾದ ಕುತ್ತಿಗೆ, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕದಾಗಿರುವ ತಲೆ, ರೋಮ ಪೂರಿತ ಅಂಗಾಲು-ಇವು ಇದರ ಮುಖ್ಯ ಲಕ್ಷಣಗಳು. ಇದು ಸು. 2.2-2.5 ಮೀ. ಉದ್ದ ಹಾಗೂ ಸು. 720 ಕಿಗ್ರಾಂ ಭಾರ ಇದೆ. ಕರಡಿಗಳಲ್ಲೆಲ್ಲ ಅತ್ಯಂತ ಹೆಚ್ಚಿನ ಅಲೆಮಾರಿ ಪ್ರಾಣಿ ಇದು. ನೆಲದ ಮೇಲೆ ವೇಗವಾಗಿ ಚಲಿಸಬಲ್ಲುದಲ್ಲದೆ ನೀರಿನಲ್ಲೂ ಸರಾಗವಾಗಿ ಈಜಬಲ್ಲುದು. ಮೀನು, ಸೀಲ್ಪ್ರಾಣಿ, ಸಾಗರದ ವಿವಿಧ ಬಗೆಯ ಹಕ್ಕಿಗಳು, ಹಿಮಸಾರಂಗ ಮುಂತಾದುವು ಇದರ ಪ್ರಧಾನ ಆಹಾರ. ಹಣ್ಣು, ಎಲೆ ಇತ್ಯಾದಿ ತಿನ್ನುವ ರೂಢಿಯೂ ಉಂಟು. ಇದರ ಚರ್ಮಕ್ಕಾಗಿ ಮತ್ತು ರುಚಿಕರವಾದ ಮಾಂಸಕ್ಕಾಗಿ ಎಸ್ಕಿಮೋ ಜನ ಇದನ್ನು ಬೇಟೆಯಾಡುತ್ತಾರೆ. ಅದರೆ ಇದರ ಯಕೃತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಎ ಜೀವಾತು ಇರುವುದರಿಂದ ಇದು ವಿಷಪೂರಿತವೆಂದು ಹೇಳುತ್ತಾರೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕರಡಿ&oldid=1124455" ಇಂದ ಪಡೆಯಲ್ಪಟ್ಟಿದೆ