ಎಲೆ
ಸಾಮಾನ್ಯವಾಗಿ ಎಲ್ಲ ಬಗೆಯ ಸಸ್ಯಗಳ ಕಾಂಡ, ರೆಂಬೆ, ಕೊಂಬೆಗಳಲ್ಲಿ ವಿವಿಧ ವರ್ಣಗಳಲ್ಲಿ ಬೆಳೆಯುವ ಸಸ್ಯಗಳ ಪ್ರಮುಖ ಭಾಗ ಎಲೆ (ಲೀಫ್)[೧]. ಕಾಂಡದ ಮೇಲೆ ಹಸಿರಾಗಿ ಬೆಳೆಯುವ ಎಲ್ಲ ಸಸ್ಯಭಾಗಗಳನ್ನೂ ವಾಡಿಕೆಯಾಗಿ ಎಲೆ ಎಂದು ಕರೆಯುತ್ತಾರೆ. ಆದರೆ ಎಲೆಯಂತೆ ತೋರದ ಇನ್ನೂ ಅನೇಕ ಭಾಗಗಳೂ ಎಲೆಗಳೇ ಆಗಿವೆಯೆಂದು ಸಂಶೋಧನೆಗಳಿಂದ ತಿಳಿಯಬಂದಿದೆ. /
ಗೆಡ್ಡೆಯ ಮೇಲಿನ ಪದರಗಳು, ಹೂವಿನ ಕೆಲ ಭಾಗಗಳು ಇದಕ್ಕೆ ಒಳ್ಳೆಯ ಉದಾಹರಣೆ. ಪಾಚಿಯಂಥ ಕೆಳವರ್ಗದಸಸ್ಯದಲ್ಲಿ ಎಲೆ ಕಾಂಡ ಬೇರುಗಳನ್ನು ಪ್ರತ್ಯೇಕವಾಗಿ ಕಾಣುವುದು ಅಸಾಧ್ಯ. ಕೋಲುಗಳ್ಳಿಯಲ್ಲಿನ ಎಲೆಗಳು ಆಗಲೇ ಬಿದ್ದುಹೋಗಿರುತ್ತವೆ. /ಪಾಪಾಸುಕಳ್ಳಿಯಲ್ಲಿ ಹಸ್ತದಂತೆ ದಪ್ಪನಾಗಿರುವ ಭಾಗ ಎಲೆಯಂತೆ ಕಂಡರೂ ಅದು ಎಲೆಯಲ್ಲ, ಅದು ಅದರ ಕಾಂಡ. ಆ ಹಸ್ತದ ಮೇಲೆ ಚೂಪಾಗಿ ನಿಮಿರಿ ನಿಂತಿರುವ ಮುಳ್ಳುಗಳೇ ಗಿಡದ ಎಲೆಗಳು. ಎಲೆಗಳು ಕಾಂಡ ಅಥವಾ ಅದರ ಕವಲುಗಳ ಮೇಲೆ ತೆಳುವಾಗಿ, ಅಗಲವಾಗಿ ಇದ್ದು ಗಿಣ್ಣುಗಳಿರುವ ಜಾಗದಲ್ಲಿ ಉದ್ಭವಿಸುವುವು. ಕಾಂಡಕ್ಕೂ ಎಲೆಗಳಿಗೂ ಇರುವ ಮೇಲುಗಡೆಯ ಕಂಕುಳಲ್ಲಿ (ಆಕ್ಸಿಲ್) ಒಂದೊಂದು ಎಲೆ ಮೊಗ್ಗು ಇರುತ್ತದೆ. ಇದರ ಬೆಳೆವಣಿಗೆಯಿಂದ ಕಾಂಡದ ಹೊಸಕೊನೆಗಳು ಉತ್ಪತ್ತಿಯಾಗುವುವು. ಕೊನೆ ಬೆಳೆದಂತೆ ಎಳೆಯ ಎಲೆಗಳು ಮೇಲಾಗಿ ಹಳೆಯ ಎಲೆಗಳು ಕೆಳಗಾಗುತ್ತವೆ. ಕಾಂಡಗಳ ಮೇಲೆ ಈ ರೀತಿ ಎಲೆಗಳು ಇರುವುದನ್ನು ಊಧರ್ವ್ ವೃದ್ಧಿ (ಆಕ್ರೊಪೆಟಲ್ ಸಕ್ಸೆಷನ್) ಎನ್ನುತ್ತಾರೆ. ಎಲೆ ಉತ್ಪತ್ತಿಯಾಗುತ್ತಿರುವಾಗ, ಅದು ತನ್ನ ತುದಿಯಲ್ಲಿ ಮೊದಲು ಸ್ವಲ್ಪ ಬೆಳೆಯುತ್ತದೆ. ಕೆಲವು ಜರಿಗಿಡಗಳಲ್ಲಿ ಬಹು ಕಾಲ ಈ ರೀತಿಯ ಬೆಳೆವಣಿಗೆಯನ್ನು ಕಾಣಬಹುದು. ಉದಾ: ಲೈಗೋಡಿಯಂ. ಅನಂತರ ಅದು ತನ್ನ ಬುಡದಲ್ಲಿಯೂ ಸಾಧಾರಣವಾಗಿ ಮಧ್ಯ ಪ್ರದೇಶದಲ್ಲಿಯೂ ವೃದ್ಧಿಯಾಗುತ್ತದೆ. ಏಕದಳ ಸಸ್ಯಗಳಲ್ಲಿ, ಎಲೆ ಬುಡದಲ್ಲಿ ಬಹುಕಾಲ ಬೆಳೆಯುತ್ತದೆ. ಆಮೇಲೆ, ಎಲೆಗಳು ತಮ್ಮೊಳಗೆ ಹೊಸ ಜೀವಕೋಶಗಳನ್ನು ನಿರ್ಮಿಸದೆ ಕೇವಲ ಗಾತ್ರದಲ್ಲಿ ದೊಡ್ಡವಾಗುತ್ತವೆ. ಸರಳವಾದ ವಿಕಾಸವನ್ನು ಹೊಂದಿರುವ ಥ್ಯಾಲೋಫೈಟ ಎನ್ನುವ ಒಂದು ದೊಡ್ಡ ಗುಂಪಿನ ಸಸ್ಯಗಳಲ್ಲಿ ಎಲೆಗಳಾಗಲಿ, ಕಾಂಡವಾಗಲಿ, ಸಾಧಾರಣವಾಗಿ ಕಂಡುಬರುವುದಿಲ್ಲ. ಈ ಗುಂಪಿಗಿಂತ ಹೆಚ್ಚು ವಿಕಾಸವನ್ನು ತೋರಿಸುವ ಬ್ರಯೊಫೈಟ್ ಗುಂಪಿನ ಹಾವಸೆಗಳಲ್ಲಿ ಕಾಣಬರುವ ಎಲೆಗಳೇ ಅತ್ಯಂತ ಸರಳವೂ ಸೂಕ್ಷ್ಮವೂ ಆದ ಎಲೆಗಳು. ಇವು ಒಂದು ಜೀವಕೋಶದಷ್ಟು ಮಾತ್ರ ದಪ್ಪನಾಗಿರುವುವು. ಆದರೆ ಒಂದು ವಿಶೇಷ ಜಾತಿಯ ತಾವರೆಯಾದ ವಿಕ್ಟೋರಿಯ ರೀಜಿಯ ಎಂಬ ಅಮೆರಿಕದ ಗಿಡದ ಎಲೆ ಎರಡು ಮೀಟರಿನಷ್ಟು ಅಗಲವಾಗಿರಬಹುದು.
ಎಲೆಗಳ ರಚನೆ
ಬದಲಾಯಿಸಿದಾಸವಾಳದಂಥ ಒಂದು ಸಾಮಾನ್ಯ ರೀತಿಯ ಎಲೆಗೆ ಒಂದು ಬುಡವೂ ಒಂದು ತೊಟ್ಟೂ ಒಂದು ಪತ್ರ ಭಾಗವೂ ಇವೆ. ಬುಡದ ಇಕ್ಕೆಲದಲ್ಲೂ ವೃಂತಪರ್ಣಗಳು (ಸ್ಟಿಫ್ಯೂಲ್) ಕಾಣಬರುತ್ತವೆ. ಪತ್ರದ ಉದ್ದಕ್ಕೂ ಮಧ್ಯದಲ್ಲಿ ಒಂದು ದೊಡ್ಡ ನಾಳವೂ ಇದರ ಎರಡು ಕಡೆಗಳಲ್ಲಿಯೂ ಸಣ್ಣ ನಾಳಗಳೂ ಇವುಗಳ ಕವಲುಗಳೂ ಇರುವುವು. ಎಲಚಿಯಂಥ ಎಲೆಗಳಲ್ಲಿ, ಮೂರು ಮುಖ್ಯವಾದ ನಾಳಗಳಿರುತ್ತವೆ. ಇಂಥ ಎಲೆಗೆ ಮಲ್ಟಿಕಾಸ್ಟೇಟ್ ಎನ್ನುವರು. ಕಾವಿನ ಒಳಗೂ ನಾಳಗಳಿದ್ದು, ಇವು ಕಾಂಡದಲ್ಲಿರುವ ನೀರಿನ ಮತ್ತು ಆಹಾರದ ಕೊಳವೆಗಳ ಸಮೂಹವನ್ನು ಸೇರಿಕೊಳ್ಳುತ್ತವೆ. ಎಲೆಯ ನಾಳಸಮೂಹ ದ್ವಿದಳ ಸಸ್ಯಗಳಲ್ಲಿ ಬಲೆಯ ರೂಪದಲ್ಲಿಯೂ ಏಕದಳಸಸ್ಯಗಳಲ್ಲಿ ಸಮಾನಾಂತರವಾಗಿಯೂ ಜರಿಗಿಡಗಳಲ್ಲಿ ಕವಲೊಡೆಯುವ ರೀತಿಯಲ್ಲಿಯೂ ಇರುತ್ತದೆ. ಆದರೆ ಈ ಸೂತ್ರಕ್ಕೆ ವಿರೋಧ ವಾಗಿ ಕೆಸವಿನ ದಂಟು ಮುಂತಾದ ಏಕದಳ ಸಸ್ಯಗಳಲ್ಲಿ ಬಲೆಯ ರೀತಿಯ ನಾಳಜಾಲವೂ ಸುರಹೊನ್ನೆಯಂಥ ದ್ವಿದಳ ಸಸ್ಯಗಳಲ್ಲಿ ಸಮಾನಾಂತರ ರೀತಿಯ ನಾಳಸಮೂಹವೂ ಇರುವುದುಂಟು. ಗೊಡ್ಡೀಚಲಿನ (ಸೈಕಾಸ್) ಪತ್ರ ಭಾಗಗಳಲ್ಲಿ ಮಧ್ಯದ ನಾಳ ಎಡಬಲಕ್ಕೆ ಕವಲೊಡೆಯುವುದೇ ಇಲ್ಲ. ಹರಳೆಲೆಯಲ್ಲಿ, ಮುಖ್ಯವಾದ ನಾಳಗಳು ಹಸ್ತದ ಬೆರಳುಗಳನ್ನು ಹೋಲುವ ರೀತಿಯಲ್ಲಿ ಇರುತ್ತವೆ. ನಾಳಸಮೂಹಗಳಿಂದ ಎಲೆಯ ಹಸಿರು ಜೀವಕಣಗಳಿಗೆ ನೀರೂ ಲವಣಗಳೂ ಒದಗುವುದಲ್ಲದೆ, ಇವುಗಳಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಗಿಡದ ಇತರ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಾಳ ಸಮೂಹಗಳು ಎಲೆಯ ರಚನೆಗೆ ಆಧಾರವಾಗಿದ್ದು, ತೆಳುವಾಗಿದ್ದರೂ ಅವು ಗಾಳಿಯ ಹೊಡೆತವನ್ನು ತಡೆಯುವ ಶಕ್ತಿಯನ್ನು ಕೊಡುತ್ತವೆ. ಆದರೆ ಬಾಳೆಯ ಎಲೆಯ ಅಂಚಿನಲ್ಲಿ ಈ ತರಹ ರಚನೆ ಇಲ್ಲದ ಕಾರಣ ಅದು ಬೇಗನೆ ಹರಿದುಹೋಗುತ್ತದೆ. ಕೆಲವು ಎಲೆಯ ಮೈಮೇಲೆ ಕೂದಲುಗಳೂ ಹೂವರ್ಚಿಯಲ್ಲಿರುವಂತೆ ಸಣ್ಣಸಣ್ಣ ಪೊರೆಗಳೂ ಇರುವುದುಂಟು. ಇವುಗಳಿಂದ ಎಲೆಗಳ ಆವಿ ಹೊರಹೊಮ್ಮುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಎಲೆಯ ಅಂಚಿನಲ್ಲಿ ಮುಳ್ಳುಗಳಿದ್ದು (ಉಮ್ಮತ್ತಿ) ಅಥವಾ ಎಲೆಯ ವೃಂತಪರ್ಣಗಳು ಮುಳ್ಳುಗಳಾಗಿದ್ದು (ಎಲಚಿ) ಅಥವಾ ಪುರ್ಣ ಎಲೆಯೇ ಮುಳ್ಳಿನ ರೀತಿಯಲ್ಲಿದ್ದು (ಪಾಪಸುಕಳ್ಳಿ) ಆಡು ಮುಂತಾದ ಪ್ರಾಣಿಗಳಿಂದ ಈ ಗಿಡಗಳಿಗೆ ರಕ್ಷಣೆಯನ್ನು ದೊರಕಿಸುತ್ತದೆ. ನಿಂಬೆ, ನಾಗದಾಳಿ, ಯೂಕಲಿಪ್ಟಸ್, ವೀಳೆಯದೆಲೆ, ಕರಿಬೇವಿನ ಸೊಪ್ಪು ಮುಂತಾದ ಗಿಡಗಳ ಎಲೆಗಳಲ್ಲಿ, ತೈಲವಿರುತ್ತದೆ. ಅಲ್ಲದೆ, ಮುಟ್ಟಿನೋಡುವುದಕ್ಕೆ ಕೆಲವು ಎಲೆಗಳು ಮೃದುವಾಗಿಯೂ ಮತ್ತೆ ಕೆಲವು ಚರ್ಮದ ಹಾಗೆಯೂ ಇನ್ನು ಕೆಲವು ಸುಲಭವಾಗಿ ಪುಡಿಯಾಗುವ ಹಾಗೆಯೂ (ಪಾರಿಜಾತ) ಇರುವುವು. ದೊಡ್ಡ ಪತ್ರೆ ಎಲೆ ತುಂಬ ರಸವತ್ತಾಗಿರುತ್ತದೆ. ಕ್ಷೀಣ ಎಲೆಗಳು ಪೊರೆಯಂತೆ ಇರುವುದೂ ಉಂಟು.
ಎಲೆಯ ಬಗೆಗಳು
ಬದಲಾಯಿಸಿಎಲೆಗಳಲ್ಲಿ ಸರಳ ಪತ್ರವೆಂದೂ ಭಿನ್ನಪತ್ರವೆಂದೂ (ಕಾಂಪೌಂಡ್) ಎರಡು ಬಗೆಯುಂಟು. ಆದರೆ ಕೆಲವು ಸರಳ ಪತ್ರಗಳಲ್ಲಿನ ಭಾಗಗಳು ಅರ್ಧ ಮಾತ್ರ ಕತ್ತರಿಸಲ್ಪಟ್ಟಂತೆ ಇರಬಹುದು. (ಹರಳೆಲೆ). ಭಿನ್ನಪತ್ರಗಳ ಉಪಪತ್ರಗಳು ಮತ್ತೊಂದು ಸಲ ಭಿನ್ನವಾಗಿದ್ದು, ದ್ವಿಭಿನ್ನಪತ್ರಗಳಾಗಬಹುದು (ಗೋಲ್ಡ್ ಮೊಹರ್). ಹೆಚ್ಚಾಗಿ ಭಿನ್ನವಾದ ಪತ್ರಗಳನ್ನು ನಾವು ನುಗ್ಗೆ ಗಿಡದಲ್ಲಿ ಕಾಣಬಹುದು. ಮೇಲೆ ಹೇಳಿರುವ ಎರಡು ಉದಾಹರಣೆಗಳಲ್ಲಿ ಉಪಪತ್ರಗಳು ಗರಿಯ ಮಾದರಿಯಲ್ಲಿ ಜೋಡಣೆಗೊಂಡಿರುತ್ತವೆ. ಎಲೆಯ ತುದಿಯ ಮಧ್ಯದಲ್ಲಿ ಉಪಪತ್ರವಿದ್ದರೆ ಅದಕ್ಕೆ ಇಂಪ್ಯಾರಿಪಿನ್ನೇಟ್ (ಬೇವು) ಎಂದೂ ಹಾಗಿಲ್ಲದಿದ್ದರೆ ಪ್ಯಾರಿಪಿನ್ನೇಟ್ (ಹುಣಿಸೆ) ಎಂದೂ ಕರೆಯುತ್ತಾರೆ. ಬೂರುಗದ ಮರದಲ್ಲಿರುವ ಭಿನ್ನ ಪತ್ರಗಳು ಹಸ್ತದ ಮಾದರಿಯವು. ಭಿನ್ನಪತ್ರದ ಮಧ್ಯದ ಅಕ್ಷಕ್ಕೆ ರೇಕಿಸ್ ಎಂದು ಹೆಸರು. ಕಿತ್ತಳೆ ಎಲೆಯಲ್ಲಿ ಒಂದೇ ಉಪಪತ್ರವಿರುವ ಭಿನ್ನಪತ್ರ ಉತ್ಪತ್ತಿಯಾಗಿರುವುದು ಒಂದು ವಿಶೇಷ. ಭಿನ್ನಪತ್ರಗಳು ಗಾಳಿಯ ಹೊಡೆತದಿಂದ ಬೇಗ ಹರಿಯುವುವು. ಅಲ್ಲದೆ ಪತ್ರಗಳ ನಡುನಡುವೆ ಹೆಚ್ಚಿನ ಗಾಳಿ ಮತ್ತು ಬೆಳಕು ಆಡುವ ಸಾಧ್ಯತೆ ಹೆಚ್ಚು. ಭಾರತದ ಕಾಡಿನ ಕೆಲವು ಮರಗಳಲ್ಲಿ ಒಂದೇ ಒಂದು ಭಿನ್ನಪತ್ರ ನಾಲ್ಕೈದು ಅಡಿಗಳಷ್ಟು ಉದ್ದವಿದ್ದು, ಅದರ ಉಪಪತ್ರಗಳು ಅಂಗೈಯಷ್ಟು ಅಗಲವಾಗಿರುವುದುಂಟು. ಇಂಥ ಸಂದರ್ಭದಲ್ಲಿ ಆ ದೊಡ್ಡ ಭಿನ್ನಪತ್ರವನ್ನು ಒಂದು ಕಾಂಡದ ಕೊಂಬೆಯೆಂದು ತಪ್ಪಾಗಿ ಭಾವಿಸಬಹುದು. ಆದರೆ ಆ ಎಲೆಯ ತುದಿಯಲ್ಲಿ ಎಲೆ ಮೊಗ್ಗು ಇರುವುದಿಲ್ಲ. ಉಪಪತ್ರ ಕೊಂಕುಳಲ್ಲಿಯೂ ಎಲೆಮೊಗ್ಗು ಇರುವುದಿಲ್ಲ. ಎಲ್ಲ ಉಪ ಪತ್ರಗಳೂ ಒಂದೇ ದಿಕ್ಕಿನಲ್ಲಿ ಹರಡಿಕೊಂಡಿರುವುವು. ಆ ದೊಡ್ಡ ಎಲೆಯ ಬುಡದ ಕೊಂಕುಳಲ್ಲಿ ಮಾತ್ರ ಎಲೆಮೊಗ್ಗು ಇರುತ್ತದೆ.
ಎಲೆಗಳಲ್ಲಿ ವೈವಿಧ್ಯ
ಬದಲಾಯಿಸಿಎಲೆಯ ಪತ್ರದ ಭಾಗ (ಅಥವಾ ಉಪಪತ್ರ) ನಾನಾ ಆಕಾರಗಳನ್ನು ಹೊಂದಿರುತ್ತದೆ. ಸೂಜಿಯಂತೆ ಉದ್ದನಾದ ಪಟ್ಟಿಯಂತೆ (ಹುಲ್ಲು). ಭರ್ಜಿಯಂತೆ (ಕಣಗಿಲೆ). ಉದ್ದವಾದ ಕೊಳವೆಯಂತೆ (ಈರುಳ್ಳಿ), ಹೃದಯದಂತೆ (ವೀಳೆಯದ ಎಲೆಬಳ್ಳಿ), ಬಾಣದ ಅಲುಗಿನಂತೆ (ಕೆಸವಿನ ದಂಟು), ವೃತ್ತಾಕಾರದಲ್ಲಿ (ತಾವರೆ), ಮೂತ್ರ ಪಿಂಡದಂತೆ (ಒಂದೆಲಗ), ಆಯತವಾಗಿ (ಬಾಳೆ), ಅಂಡಾಕಾರವಾಗಿ (ಆಲ)-ಹೀಗೆ ನಾನಾ ಬಗೆಯ ಆಕಾರಗಳನ್ನು ನೋಡಬಹುದು. ಬೀಜಮೊಳೆತು ಸಸಿಯಾದಾಗ ಕಾಂಡದ ಮೊದಲನೆಯ ಎಲೆಗಳು ಆಕಾರದಲ್ಲಿ ಸರಳವಾಗಿದ್ದು, ಅನಂತರ ಹುಟ್ಟುವ ಎಲೆಗಳಿಗಿಂತ ಬೇರೆ ತರಹ ಇರುವುದನ್ನು ಅವರೆ ಮುಂತಾದ ಗಿಡಗಳಲ್ಲಿ ಕಾಣಬಹುದು. ಯೂಕಲಿಪ್ಟಸ್ ಗಿಡ ಎಳೆಯದಾಗಿರುವಾಗ ಎಲೆಗಳು ಅಗಲವಾಗಿದ್ದು ಗಿಡ ಬಲಿತಂತೆ, ಉದ್ದವಾಗಿ ಕುಡುಗೋಲಿನ ಆಕಾರವನ್ನು ತಾಳುತ್ತವೆ. ಹಲಸಿನ ಮರದ ಎಲೆಗಳು ವಿವಿಧ ಆಕಾರಗಳಲ್ಲಿರುತ್ತವೆ. ನೀರಿನಲ್ಲಿ ಅರ್ಧ ಮುಳುಗಿ ಬೆಳೆಯುವ ಲಿಮ್ನೊಫೈಲ ಮುಂತಾದ ಗಿಡಗಳಲ್ಲಿ, ಮುಳುಗಿರುವ ಎಲೆಗಳು ಬಹಳ ಛಿದ್ರವಾಗಿ ಮೇಲಿರುವ ಎಲೆಗಳು ಅಗಲವಾಗಿಯೇ ಉಳಿಯುವುವು. ಈ ರೀತಿಗೆ ಹೆಟೆರೊಫಿಲಿ ಎಂದು ಕರೆಯುತ್ತಾರೆ. ಸೆಲಾಜಿನೆಲ್ಲ ಗಿಡದಲ್ಲಿ ದೊಡ್ಡ ಎಲೆಗಳ ಸಾಲೂ ಚಿಕ್ಕ ಎಲೆಗಳ ಸಾಲು ಇವೆ; ಇದಕ್ಕೆ ಅನೈಸೋಫಿಲಿ ಎಂದು ಹೆಸರು. ಎಲೆಯ ಅಂಚಿನಲ್ಲೂ ವೈವಿಧ್ಯವುಂಟು. ಹಲ್ಲಿನಂತೆಯೂ ಗರಗಸದ ಅಂಚಿನಂತೆಯೂ ಮುಳ್ಳಿನಂತೆಯೂ ಕಮಾನುಗಳಂತೆಯೂ (ಒಂದೆಲಗ) ಅಲೆಗಳೋಪಾದಿಯಲ್ಲಿಯೂ (ಅಶೋಕ) ಇರುವುದುಂಟು. ಆದ್ದರಿಂದ ಆಯಾ ಎಲೆಯ ಮಾದರಿಯಿಂದ ಹಲವು ಸಸ್ಯಗಳನ್ನು ಗುರುತಿಸಬಹುದು.
ಎಲೆತೊಟ್ಟು
ಬದಲಾಯಿಸಿಕೆಲವು ತೆಂಗಿನ ಜಾತಿಯ ಗಿಡದಲ್ಲಿ 15 ಅಡಿಯಷ್ಟು ಉದ್ದದ ತೊಟ್ಟು ಇರುವುದುಂಟು. ನಿಂಬೆಯ ಎಲೆಯಲ್ಲಿ ತೊಟ್ಟಿಗೆ ರೆಕ್ಕೆಗಳು ಅಗಲವಾಗಿ ಬೆಳೆದಿರುವುವು. ಆಸ್ಟ್ರೇಲಿಯದ ಜಾಲಿಗಿಡಗಳಲ್ಲಿ, ಎಲೆ ತೊಟ್ಟು ಅಗಲವಾಗಿದ್ದು, ಎಲೆ ಪತ್ರದ ಕೆಲಸವನ್ನೇ ಮಾಡುತ್ತದೆ. ಇದಕ್ಕೆ ಫಿಲ್ಲೋಡ್ ಎಂದು ಹೆಸರು, ಇದು ಸೂರ್ಯನ ಬೆಳಕಿಗೆ ತನ್ನ ಅಂಚನ್ನು ತೋರಿಸುವುದು. ಈ ಎಲೆಯ ಭಿನ್ನಪತ್ರದ ಇತರ ಭಾಗಗಳು ಬೇಗನೆ ಉದುರಿ ಹೋಗುವುವು. ಸಾರಸೆನಿಯ ಎನ್ನುವ ಕೀಟಾಹಾರಿ ಸಸ್ಯದಲ್ಲಿ ಎಲೆತೊಟ್ಟು ಹೂಜಿಯ ಆಕಾರದಲ್ಲಿದೆ. ಟ್ರೋಪಿಯೋಲು ಗಿಡದಲ್ಲಿನ ತೊಟ್ಟು ನುಲಿಬಳ್ಳಿಯಂತೆ ಇರುವುದು. ಎಲೆತೊಟ್ಟಿನ ಬುಡದಲ್ಲಿ ಉಬ್ಬಿದ್ದರೆ ಆ ಭಾಗಕ್ಕೆ ಪಲ್ವೈನಸ್ ಎಂದು ಹೆಸರು. ಹರಳು ಮುಂತಾದ ಎಲೆಗಳ ಕಾವು ಪತ್ರದ ಮಧ್ಯಭಾಗದಲ್ಲಿ ಸೇರಿಕೊಂಡಿದೆ. ಮುಟ್ಟಿದರೆ ಮುನಿಯಲ್ಲಿ ಈ ಪಲ್ವೈನಸಿನ ಸಹಾಯದಿಂದ ಎಲೆಯ ಭಾಗಗಳು ಚಲಿಸುವುವು. ಇದರಂತೆಯೆ ಬಂiೆÆೕಫೈಟಂ ಸಸ್ಯದ ಎಲೆಗಳೂ ಮುಟ್ಟಿದರೆ ಅಥವಾ ಶಾಖವನ್ನು ತೋರಿಸಿದರೆ, ಮುಚ್ಚಿಕೊಳ್ಳುವುವು. ಆದರೆ ಡೆಸ್ಮೋಡಿಯ ಗೈರಾನ್ಸಿನ (ಟೆಲಿಗ್ರಾಫ್ ಸಸ್ಯ) ಎಲೆಯ ಉಪಪತ್ರಗಳು ತಮ್ಮಷ್ಟಕ್ಕೆ ತಾವೇ ಸದಾ ಚಲಿಸುತ್ತಿರುವುವು. ಮತ್ತೆ ಕೆಲವು ಗಿಡಗಳ ಉಪಪತ್ರಗಳು ರಾತ್ರಿಯಾಗುತ್ತಲೇ ಮುಚ್ಚಿಕೊಂಡು, ನಿದ್ರಿಸುವಂತೆ ತೋರುವುವು. ಜಾನ್ ಗೋಟು ಬೆಡ್ ಎಟ್ ನೂನ್ ಎಂದು ಕರೆಯುವ ಇಂಗ್ಲೆಂಡಿನ ಸಸ್ಯದಲ್ಲಿ ಈ ರೀತಿ ಮಧ್ಯಾಹ್ನದ ತಾಪಕ್ಕೆ ಉಪಪತ್ರಗಳು ಮುಚ್ಚಿಕೊಳ್ಳುವುವಂತೆ. ಅದರೆ ಅಮೆರಿಕದ ಹುಲ್ಲುಗಾವಲಿನಲ್ಲಿ ಬೆಳೆಯುವ ಸಿಲ್ಫಿಯಂ ಎಂಬ ಗಿಡದ ಎಲೆಗಳು ಮಧ್ಯಾಹ್ನದ ಸೂರ್ಯನ ಕಡೆಗೆ ತಮ್ಮ ಅಂಚನ್ನೇ ತೋರಿಸಿಟ್ಟುಕೊಂಡು ಬಿಸಿಲಿನ ತಾಪದಿಂದ ಪಾರಾಗುವುವಂತೆ.
ಎಲೆಯ ಬುಡ
ಬದಲಾಯಿಸಿಇದು ಹುಲ್ಲು, ಕೊತ್ತಂಬರಿ ಜಾತಿಗಳ ಎಲೆಗಳಲ್ಲಿ ಕೊಳವೆಯಂತೆ ಇರುವುದು. ಹುಲ್ಲು, ಶುಂಠಿ, ಸೆಲಾಜಿನೆಲ್ಲ, ಗಿಡಗಳ ಎಲೆಗಳಲ್ಲಿ ಲಿಗ್ಯೂಲ್ ಎಂದು ಕರೆಯುವ ನಾಲಗೆಯಂಥ ಚಿಕ್ಕ ಭಾಗ ಎಲೆಯ ಬುಡದಲ್ಲಿ ಬೆಳೆದಿರುವುದು ಒಂದು ವಿಶೇಷವಾಗಿದೆ.
ಎಲೆಗಳಲ್ಲಿ ಮಾರ್ಪಾಟು
ಬದಲಾಯಿಸಿಎಲೆಯ ಭಾಗಗಳು ಬಹುವಾಗಿ ಮಾರ್ಪಾಟು ಹೊಂದಿ, ಕೆಲವು ವಿಶೇಷ ಕಾರ್ಯಗಳನ್ನು ಮಾಡಬೇಕಾದ ಸಂದರ್ಭಗಳೂ ಇವೆ. ಬೀಜದಳ ಗಳನ್ನೂ ಹೂವಿನ ದಳಗಳನ್ನು ಮಾರ್ಪಾಡಾದ ಎಲೆಗಳೆಂದು ಭಾವಿಸುವರು.
ಎಲೆಮುಳ್ಳುಗಳು ಮತ್ತು ಸುಳಿಬಳ್ಳಿಗಳು
ಬದಲಾಯಿಸಿವೃಂತಪರ್ಣಗಳು ಎಲಚಿಯಲ್ಲಿ ಮುಳ್ಳಿನಂತೆಯೇ ಇದ್ದು, ಆಡು ಮುಂತಾದ ಪ್ರಾಣಿಗಳ ಬಾಯಿಗೆ ಗಿಡ ತುತ್ತಾಗದಂತೆ ರಕ್ಷಣೆ ನೀಡುವುವು. ಪಾಪಾಸುಕಳ್ಳಿಯಲ್ಲಂತೂ ಎಲೆಗಳೇ ದಪ್ಪ ಮುಳ್ಳುಗಳಾಗಿ ರಕ್ಷಣೆ ನೀಡುತ್ತದೆ. ಒಂದು ಜಾತಿಯ ಜಾಲಿಗಿಡದಲ್ಲಿ ವೃಂತಪರ್ಣಗಳು ಟೊಳ್ಳಾಗಿದ್ದು ಇರುವೆಗಳಿಗೆ ಆಶ್ರಯಕೊಡುತ್ತವೆ. ಈ ಎಲೆಗಳ ತೊಟ್ಟಿನ ಮೇಲೂ ಇತರ ಕಡೆಗಳಲ್ಲಿಯೂ ಒಂದು ತರಹ ಆಹಾರ ಉತ್ಪತ್ತಿಯಾಗಿ, ಇರುವೆಗಳಿಗೆ ಒದಗುವುದು. ಇರುವೆಗಳಿಗೂ ಎಲೆಗಳಿಗೂ ಇರುವ ಇಂಥ ಪರಸ್ಪರ ಸಂಬಂಧಕ್ಕೆ ಮರ್ಮಿಕೋಫೈಲಿ ಎನ್ನುತ್ತಾರೆ. ಬಟಾಣಿಯಲ್ಲಿ ವೃಂತಪರ್ಣಗಳು ಅಗಲವಾಗಿ ಬೆಳೆದು ಎಲೆಯ ಪತ್ರಭಾಗದ ಕೆಲಸಗಳನ್ನು ಮಾಡುತ್ತವೆ. ಎಲೆಯ ತುದಿಯೇ ನುಲಿಬಳ್ಳಿಯಾಗಿರುವುದನ್ನು ಗ್ಲೋರಿಯೋಸ ಗಿಡದಲ್ಲಿ ಕಾಣಬಹುದು. ಅರಳಿ ಎಲೆಯ ತುದಿ ಚೂಪಾಗಿ ಎಳೆದಂತೆ ಇದ್ದು, ಮಳೆಯ ನೀರು ಅಲ್ಲಿಂದ ಹರಿದು ಹೋಗಲು ಅನುಕೂಲವಾಗಿರುವುದರಿಂದ ಅದನ್ನು ಡ್ರಿಪ್ಟಿಪ್ ಎನ್ನುವರು. ಬಟಾಣಿ, ಬಿಗ್ನೋನಿಯಗಳಲ್ಲಿ ಭಿನ್ನಪತ್ರದ ಉಪಪತ್ರಗಳು ನುಲಿಬಳ್ಳಿಗಳಾಗಿ ಮಾರ್ಪಾಡಾಗಿವೆ. ಸ್ಮಯ್ಲ್ಯಾಕ್ಸ್‌ನಲ್ಲಿ ವೃಂತಪರ್ಣಗಳೇ ನುಲಿಬಳ್ಳಿಗಳಾಗಿವೆ.
ಕ್ಷೀಣ ಎಲೆಗಳು
ಬದಲಾಯಿಸಿಶುಂಠಿ ಮುಂತಾದ ನೆಲದೊಳಗೆ ಬೆಳೆಯುವ ಕಾಂಡಗಳಲ್ಲಿಯೂ ಪೈನಸ್, ಸೈಕಾಸ್, ಸರ್ವೆ (ಕ್ಯಾಸ್ಯುಯರೈನ) ಗಳಲ್ಲಿಯೂ ಪುರ್ಣಪರಾವಲಂಬಿ ಗಿಡ ಗಳಲ್ಲಿಯೂ (ಆಕಾಶಬಳ್ಳಿ) ಇವು ಇರುವುವು. ಸಾಧಾರಣವಾಗಿ ಇವುಗಳಲ್ಲಿ ಹರಿತ್ತು ಇಲ್ಲ. ಎಲೆ ಮೊಗ್ಗುಗಳನ್ನು ವಾತಾವರಣದ ವ್ಯತ್ಯಾಸಗಳಿಂದ ರಕ್ಷಿಸುವ ಕಾರ್ಯವನ್ನು ಇವು ಮಾಡುವುವು. ಆದರೆ ನೀರುಳ್ಳಿಯಂಥ ಗೆಡ್ಡೆಗಳಲ್ಲಿ ಇವು ಆಹಾರವನ್ನು ಸಂಗ್ರಹಿಸಿಟ್ಟಿರುವುವು. ಬ್ರಯೋಫಿಲ್ಲಂ, ಬೆಗೋನಿಯಗಳ ಎಲೆಯ ಚೂರುಗಳನ್ನು ಭೂಮಿಯಲ್ಲಿ ನೆಟ್ಟು ಹೊಸ ಗಿಡಗಳನ್ನು ಬೆಳೆಸಬಹುದು. ಈ ಎಲೆಗಳು ಹೀಗೆ ನಿರ್ಲಿಂಗ ರೀತಿಯಲ್ಲಿ ವಂಶೋತ್ಪತ್ತಿ ಮಾಡಲು ಸಹಾಯಕವಾಗಿವೆ. ಇನ್ನೊಂದು ತರದ ನಿರ್ಲಿಂಗ ರೀತಿಯಲ್ಲಿ ವಂಶೋತ್ಪತ್ತಿ ಮಾಡುವ ಬೀಜಗಳು (ಸ್ಟೋರ್ಸ್) ಜರೀಗಿಡದ ಎಲೆಗಳಲ್ಲಿನ ಸಣ್ಣ ಚೀಲಗಳಲ್ಲಿ (ಸ್ಪೊರ್ಯಾಂಜಿಯ) ಹೇರಳವಾಗಿ ಬೆಳೆಯುವುವು.
ಬೀಜಗಳಲ್ಲಿರುವ ಎಲೆಗಳು
ಬದಲಾಯಿಸಿಮೊಳಕೆಯಲ್ಲಿನ ಬೀಜದಳಗಳನ್ನು ಎಲೆಗಳೆನ್ನುತ್ತಾರೆ. ಸಾಕಷ್ಟು ದಪ್ಪನಾಗಿದ್ದಾಗ (ಅವರೆ) ಅವೇ ಸಸಿಯ ಬೆಳೆವಣಿಗೆಗೆ ಆಹಾರವಾಗುತ್ತವೆ. ಅವು ತೆಳುವಾಗಿದ್ದರೆ ಸುತ್ತಲಿನ ಆಹಾರವನ್ನು ಹೀರಿಕೊಂಡು ಬೆಳೆಯುತ್ತವೆ (ಹರಳು). ಅನಂತರ ಈ ಎಲೆಗಳು ಕೆಲವು ಕಾಲ ಭೂಮಿಯ ಮೇಲೆ ಬೆಳೆದು ತಮ್ಮ ಕಾರ್ಯವನ್ನು ನಿರ್ವಹಿಸಬಹುದು. ಆದರೆ ಬಟಾಣಿ, ಕಡಲೆಗಳಲ್ಲಿ ಬೀಜದಳಗಳು ಭೂಮಿಯ ಒಳಗೇ ಉಳಿಯುವುವು. ಇದರಂತೆಯೆ ಮುಸುಕಿನ ಜೋಳದಲ್ಲಿಯೂ ಬೀಜದಳ ಭೂಮಿಯ ಒಳಗೇ ಇರುತ್ತದೆ (ಹೈಪೊಜಿಯಲ್). ಇದು ಏಕದಳ ಸಸ್ಯ. ಹೀಗೆ, ಹೂ ಬಿಡುವ ಗಿಡಗಳನ್ನು ಏಕದಳ ಸಸ್ಯಗಳನ್ನಾಗಿ, ದ್ವಿದಳ ಸಸ್ಯಗಳನ್ನಾಗಿ ವಿಂಗಡಿಸಲು ಮುಖ್ಯವಾಗಿ ಈ ಬೀಜದಳಗಳ ಸಂಖ್ಯೆಯೇ ನೆರವಾಗುತ್ತದೆ. ಹೊಗೊಂಚಲುಗಳ ನಡುವೆ ಬೆಳೆದಿರುವ ಎಲೆಗಳಿಗೆ ಬ್ರ್ಯಾಕ್ಟುಗಳು ಎಂದು ಹೆಸರು. ಇವು ಹೂವಿನ ಬುಡದಲ್ಲಿಯೂ ಇನ್ನೂ ಚಿಕ್ಕದಾಗಿರುವ ಬ್ರ್ಯಾಕ್ಟಿಯೋಲುಗಳು ಹೂವಿನ ಎರಡು ಪಕ್ಕದಲ್ಲಿಯೂ ಇರಬಹುದು. ಇವುಗಳಿಂದ ಮೊಗ್ಗುಗಳಿಗೆ ಕೊಂಚ ರಕ್ಷಣೆ ದೊರೆಯುತ್ತದೆ. ಕೆಲವು ಗಿಡಗಳಲ್ಲಿ ಈ ಬ್ರ್ಯಾಕ್ಟುಗಳೂ ಬಣ್ಣಗಳಿಂದ ಕೂಡಿರುವುದುಂಟು (ಪಾಯಿನ್ಸೆಟಿಯಾ ಮತ್ತು ಬೋಗನ್ವಿಲಿಯ). ಹೂಜಿಗಿಡ (ನೆಪೆಂತೆಸ್) ಮುಂತಾದ ಕೀಟಾಹಾರಿ ಸಸ್ಯಗಳಲ್ಲಿ, ಎಲೆಗಳು ಒಂದು ವಿಶೇಷ ರೀತಿಯಲ್ಲಿ ಆಹಾರವನ್ನು ಒದಗಿಸಿಕೊಳ್ಳುವುದಕ್ಕೋಸ್ಕರ ಮಾರ್ಪಾಡಾಗಿವೆ. ಡಿಸ್ಕಿಡಿಯ ಎನ್ನುವ ಅಪ್ಪುಗಿಡದಲ್ಲಿ ಕೆಲವು ಎಲೆಗಳು ಹೂಜಿಯಂತೆ ಮಾರ್ಪಾಟಾಗಿವೆ. ಈ ಹೂಜಿಗಳಲ್ಲಿ ನೀರೂ ಕಸವೂ ಸ್ವಲ್ಪ ಮಣ್ಣೂ ಸೇರಿಕೊಂಡಿರುತ್ತವೆ. ಕೆಲವು ಬೇರುಗಳು ಇವುಗಳಲ್ಲಿ ಬೆಳೆದುಕೊಂಡು ಬಂದು, ತಮಗೆ ಆವಶ್ಯಕವಾದ ಪದಾರ್ಥಗಳನ್ನು ಹೀರಿಕೊಳ್ಳುವುವು. ಮೊಗ್ಗಿನ ಅವಸ್ಥೆಯಲ್ಲಿ ಎಲೆಗಳು: ಎಲೆಗಳು ಎಳೆಯವಾಗಿರುವಾಗ ಮೊಗ್ಗಿನಲ್ಲಿರುವ ಅಲ್ಪಸ್ಥಳದಲ್ಲಿಯೇ ನಾನಾ ರೀತಿಯಲ್ಲಿ, ಪರಸ್ಪರ ಸಂಬಂಧವಿರುವಂತೆ ಜೋಡಿಸಿಕೊಂಡಿ ರುವುದಕ್ಕೆ ವರ್ನೇಷನ್ ಎಂದು ಹೆಸರು. ಇವುಗಳನ್ನು ಮೊಗ್ಗುಗಳ ಅಡ್ಡ ಸೀಳಿಕೆಯಲ್ಲಿ ಕಾಣಬಹುದಾಗಿದೆ. ಒಂದು ಎಲೆಯ ಅಂಚು ಮತ್ತೊಂದರ ಅಂಚನ್ನು ಮುಚ್ಚದಿರಬಹುದು. ಇಲ್ಲವೆ ಒಂದು ಎಲೆ ಹೊರಗೂ ಮತ್ತೊಂದು ಒಳಗೂ ಇದ್ದು ಉಳಿದ ಎಲೆಗಳು ಒಂದನ್ನೊಂದು ಒಂದು ಕಡೆಯ ಅಂಚನ್ನು ಮುಚ್ಚುವಂತಿರಬಹುದು. ಎಲೆಗಳು ತಿರುಚಿಕೊಂಡಿರುವುದೂ ಉಂಟು. ಕೆಲವು ವೇಳೆ ಎಲೆಗಳು ಒಂದನ್ನೊಂದು ಪುರ್ತಿ ಮುಚ್ಚಿರದ ಮಾದರಿಗಳೂ ಇವೆ. ಸಾಮಾನ್ಯವಾಗಿ ಪ್ರತಿಯೊಂದು ಎಲೆಯೂ ತನ್ನ ಅಕ್ಷದ ಮೇಲೆ ಮಡಿಚಿಕೊಂಡಿರುತ್ತದೆ.
ಎಲೆಯ ಒಳರಚನೆ
ಬದಲಾಯಿಸಿಎಲೆಯ ಮುಖ್ಯ ಕಾರ್ಯ ದ್ಯುತಿಸಂಶ್ಲೇಷಣ. ಆದ್ದರಿಂದ ಎಲೆಯ ಆಕಾರದಂತೆ ಒಳರಚನೆಯೂ ಈ ಕಾರ್ಯಕ್ಕೆ ಬಹು ಅಂದವಾಗಿ ಹೊಂದಿಕೊಂಡಿರುತ್ತದೆ. ಒಂದು ಸಾಮಾನ್ಯವಾದ ಎಲೆ ಒಂದು ಸೀಸದ ಕಡ್ಡಿಯ ಗೀಟಿನಷ್ಟು ಮಾತ್ರ ದಪ್ಪಗಿದ್ದರೂ ಅದರಲ್ಲಿ 7-8 ಜೀವಕೋಶಗಳ ಪದರಗಳಾದರೂ ಇರುವುವು. ಎಲೆಯ ಮೇಲಿನ ಮತ್ತು ಕೆಳಗಡೆಯ ಚರ್ಮಗಳ ಮೇಲೆ ಒಂದು ತರಹ ಮೇಣದಂಥ ಪದಾರ್ಥ (ಕ್ಯುಟಿನ್) ಹರಡಿಕೊಂಡಿರುತ್ತದೆ. ಎಲೆ ಬೇಗ ಒಣಗದಂತೆ ಇದು ಕಾಪಾಡುತ್ತದೆ. ಎಲೆಯ ಮಧ್ಯಭಾಗದಲ್ಲಿರುವ ಜೀವ ಕೋಶಗಳು ಎರಡು ಬಗೆಯವು. ಮೇಲಿನ ಅರ್ಧದಷ್ಟು ಇವುಗಳಲ್ಲಿ ಕಂಬದೋಪಾದಿಯಲ್ಲಿದ್ದು ಹರಿತ್ತಿನ ಕಣಗಳಿಂದ ಹೆಚ್ಚಾಗಿ ತುಂಬಿರುತ್ತವೆ. ಈ ಭಾಗವೇ ದ್ಯುತಿಸಂಶ್ಲೇಷಣೆ ಮಾಡುವುದರಲ್ಲಿ ಮುಖ್ಯಪಾತ್ರವನ್ನು ಹೊಂದಿದೆ. ಇದರ ಕೆಳಭಾಗದ ಜೀವಕೋಶಗಳ ಮಧ್ಯೆ ಗಾಳಿ ಇರಲು ಹೆಚ್ಚು ಅವಕಾಶವಿದ್ದು, ಇದು ಸ್ಪಂಜಿನೋಪಾದಿಯಲ್ಲಿರುವುದು. ಇದರಿಂದ ಆವಿಹೊರಹೊಮ್ಮುವಿಕೆ ಹೆಚ್ಚಾಗಿ ಆಗುವುದು. ಈ ಎರಡು ತರಹದ ಅಂಗಾಂಶಗಳ ಮಧ್ಯೆನಾಳ ಗಳು ಇರುತ್ತವೆ. ಈ ನಾಳಗಳಿಂದ ತೆಳವಾಗಿರುವ ಎಲೆಗೆ ಆಧಾರವೂ ನೀರು, ಲವಣ ಸಕ್ಕರೆಗಳನ್ನು ಸಾಗಿಸಲು ಮಾರ್ಗವೂ ಒದಗುವುವು. ಅನಿಲಗಳು ಎಲೆಯ ಒಳಗೂ ಹೊರಗೂ ಸಂಚರಿಸಲು ಸಾವಿರಾರು ಪತ್ರರಂಧ್ರಗಳು (ಸ್ಟೊಮೇಟ) ಕೆಳಚರ್ಮದಲ್ಲಿರುವುವು. ಒಂದು ಚದುರ ಮಿಲಿಮೀಟರಿನಷ್ಟು ಜಾಗದಲ್ಲಿ ಸಾಮಾನ್ಯವಾಗಿ ಇಂಥ 300 ರಂಧ್ರಗಳು ಇರುವುವು. ಪ್ರತಿ ರಂಧ್ರವೂ ಎರಡು ರಕ್ಷಕ ಜೀವಕೋಶಗಳ ಮಧ್ಯೆ ಇರುತ್ತದೆ: ಪತ್ರರಂಧ್ರಗಳು ತೆರೆಯುವ ಅಥವಾ ಮುಚ್ಚುವ ಬಗೆ: ರಕ್ಷಕ ಜೀವಕೋಶಗಳಲ್ಲಿ ಮಾತ್ರ ಹರಿತ್ತಿನ ಕಣಗಳು ಇರುತ್ತವೆಯಲ್ಲದೆ ಹೊರ ಚರ್ಮದ ಇತರ ಜೀವಕೋಶಗಳಲ್ಲಿರುವುದಿಲ್ಲ. ಆದ್ದರಿಂದ ಈ ರಕ್ಷಕ ಜೀವಕೋಶಗಳಲ್ಲಿ ಹಗಲು ದ್ಯುತಿ ಸಂಶ್ಲೇಷಣವಾದಾಗ ಸಕ್ಕರೆ ಉತ್ಪತ್ತಿಯಾಗುವುದು. ಆಗ ಇವುಗಳ ಅಕ್ಕಪಕ್ಕದ ಜೀವಕೋಶಗಳಿಂದ ನೀರು ಈ ರಕ್ಷಕ ಜೀವಕೋಶಗಳೊಳಗೆ ವಿನಿಮಯ ಕಾರ್ಯದಿಂದ (ಆಸ್ಮಾಸಿಸ್) ತುಂಬಿಕೊಳ್ಳುವುದು, ಹೀಗಾದಾಗ, ಇವುಗಳ ಮಧ್ಯೆ ಇರುವ ರಂಧ್ರ ಅಗಲವಾಗಿ ತೆರೆಯುವುದು. ಅಂತೆಯೆ ರಕ್ಷಕ ಜೀವಕೋಶಗಳಲ್ಲಿ ಪಿಷ್ಠ ತಯಾರಾಗಿ ನೀರು ಕಡಿಮೆಯಾದಾಗ ರಂಧ್ರ ಮುಚ್ಚಿಕೊಳ್ಳುವುದು. ಏಕೆಂದರೆ, ರಕ್ಷಕ ಜೀವಕೋಶಗಳ ಆವರಣದಲ್ಲಿ ಕೆಲವು ಭಾಗಗಳು ಮಾತ್ರ ತೆಳುವಾಗಿದ್ದು, ಸ್ಥಿತಿಸ್ಥಾಪಕತ್ವವನ್ನು ಹೊಂದಿರುವುವು.
ಎಲೆಗಳ ಬಣ್ಣಗಳು
ಬದಲಾಯಿಸಿಎಲೆಗಳು ಹಸುರಾಗಿ ಕಾಣುವುದಕ್ಕೆ ಅವುಗಳಲ್ಲಿರುವ ಹರಿತ್ತೇ (ಕ್ಲೋರೋಫಿಲ್) ಕಾರಣ. ಈ ಹರಿತ್ತು ಎಲೆಯ ಜೀವಕೋಶಗಳಲ್ಲಿರುವ ಹರಿತ್ತಿನ ಕಣಗಳಲ್ಲಿ (ಕ್ಲೋರೊಪ್ಲಾಸ್ಟ್) ಮಾತ್ರ ಇರುತ್ತದೆ. ಗ್ರಾನ ಎನ್ನುವ ಕೆಲವು ಭಾಗಗಳಲ್ಲಿ ಮಾತ್ರ ಹರಿತ್ತು ತುಂಬಿರುತ್ತದೆ. ಹರಿತ್ತಿನ ಕಣಗಳ ಬಣ್ಣ ರಹಿತ ಭಾಗಕ್ಕೆ ಸ್ಟ್ರೋಮ ಎಂದು ಹೆಸರು. ಗ್ರಾನಗಳಲ್ಲಿ ಹರಿತ್ತು, ಜಿಡ್ಡು ಮತ್ತು ನೈಟ್ರೋಜನ್À ಪದಾರ್ಥಗಳು ಪದರಗಳಾಗಿ ಜೋಡಣೆಗೊಂಡಿವೆ. ಹರಿತ್ತಿನ ಕಣಗಳು ಜೀವರಸದೊಡನೆ ಚಲಿಸುವುದನ್ನು ವ್ಯಾಲಿಸ್ನೇರಿಯ ಗಿಡದ ಎಲೆಗಳಲ್ಲಿ ನೋಡಬಹುದು. ಬೆಳಕಿನ ತೀಕ್ಷ್ಣತೆಯನ್ನು ತಪ್ಪಿಸಿಕೊಳ್ಳಲು, ಹರಿತ್ತಿನ ಕಣಗಳು ಜೀವಕೋಶದ ಮೇಲ್ಭಾಗವನ್ನು ಬಿಟ್ಟು ಇಕ್ಕೆಲಗಳಲ್ಲಿಯೂ ಒಟ್ಟುಗೂಡುವುದನ್ನು ಬೇರೆ ಕೆಲವುಗಿಡದ ಎಲೆಯಲ್ಲಿ ನೋಡಬಹುದು. ಎಲೆಯನ್ನು ನೀರಿನಲ್ಲಿ ಕುದಿಸಿ, ಮದ್ಯಸಾರದಲ್ಲಿ ಹಾಕಿದರೆ, ಹರಿತ್ತೆಲ್ಲವೂ ಕರಗಿ ಈಚೆಗೆ ಬರುವುದು. ನಾವು ಸಾಧಾರಣವಾಗಿ ಹರಿತ್ತು ಎಂದು ಕರೆಯುವ ಪದಾರ್ಥದಲ್ಲಿ ಎರಡು ಬಗೆಗಳಿವೆ. ಅಲ್ಲದೆ ಹಳದಿಯ ಬಣ್ಣದ ಕ್ಸಾಂತೋಫಿಲ್ ಮತ್ತು ಕೆಂಪು ಬಣ್ಣದ ಕೆರೊಟೀನ್ ಎಂಬ ಬಣ್ಣದ ಪದಾರ್ಥವೂ ಮಿಶ್ರಣರೂಪದಲ್ಲಿರುತ್ತವೆ.
- ಕ್ಲೋರೊಫಿಲ್ ಎ - ಅ55 ಊ72 ಔ5 ಓ4 ಒg
- ಕ್ಲೋರೊಫಿಲ್ ಬಿ - ಅ55 ಊ70 ಔ6 ಓ4 ಒg
- ಕೆರೊಟೀನ್ - ಅ40 ಊ56
- ಕ್ಸಾಂತೋಫಿಲ್ - ಅ40 ಊ56 ಔ2
ಆದರೆ ದ್ಯುತಿಸಂಶ್ಲೇಷಣ ಕಾರ್ಯಕ್ಕೆ ಮೊದಲ ಎರಡು ಬಣ್ಣದ ಪದಾರ್ಥಗಳೇ ಸಾಕು. ಎಲೆಯಲ್ಲಿ ಹರಿತ್ತು ಉತ್ಪತ್ತಿಯಾಗಬೇಕಾದರೆ, ಅದಕ್ಕೆ ಬೆಳಕೂ ಕಬ್ಬಿಣ, ಮೆಗ್ನೀಸಿಯಂ ಮುಂತಾದವೂ ಅತ್ಯಾವಶ್ಯಕ. ಹಳೆಯ ಎಲೆಗಳಲ್ಲಿ ಕ್ಲೋರೊಫಿಲ್ಲುಗಳು ಕಡಿಮೆಯಾಗಿ ಹಳದಿಯ ಕ್ಸಾಂತೋಫಿಲ್ಲಿನ ಪ್ರಮಾಣ ಹೆಚ್ಚುವುದು. ಚಳಿಗಾಲದಲ್ಲಿ ಉದುರುವುದಕ್ಕೆ ಮುಂಚೆ ಸಮಶೀತೋಷ್ಣವಲಯದ ಗಿಡಗಳ ಎಲೆಗಳು ಕೆಂಪುಬಣ್ಣದ ಅಂಥೋಸಯನಿನನ್ನು ತಮ್ಮ ಜೀವಕೋಶದ ಮಧ್ಯದಲ್ಲಿರುವ ರಸದಲ್ಲಿ ಸಂಗ್ರಹಿಸುವುವು. ಅನಂತರ ಕಂದುಬಣ್ಣದ ಟ್ಯಾನಿನು ಗಳೂ ಹೆಚ್ಚಾಗಿ ಉತ್ಪತ್ತಿಯಾಗುವುವು. ಅನೇಕ ಜಾತಿಯ ಗಿಡಗಳಲ್ಲಿ ಹರಿತ್ತು ಎಲೆಯ ಕೆಲವು ಭಾಗಗಳಲ್ಲಿ ಮಾತ್ರ ಇರುತ್ತದೆ. ಇದು ಅವುಗಳ ಹುಟ್ಟುಗುಣ. ಹರಿತ್ತನ್ನು ತಯಾರಿಸುವ ಶಕ್ತಿಯನ್ನು ಕಳೆದುಕೊಂಡ ಬಣ್ಣರಹಿತ ಸಸಿಗಳು (ಆಲ್ಬಿನೋಸ್) ಬೇಗ ಸಾಯಬೇಕಾಗುತ್ತವೆ.
ದ್ಯುತಿಸಂಶ್ಲೇಷಣೆ
ಬದಲಾಯಿಸಿಗಿಡದ ಎಲೆಗಳು ಹಗಲಿನಲ್ಲಿ ಸೂರ್ಯ ರಶ್ಮಿಯ ಸಹಾಯದಿಂದ ಗಾಳಿ ಯಲ್ಲಿನ ಇಂಗಾಲಾಮ್ಲವನ್ನು ಬಳಸಿ ಕೊಂಡು ನೀರಿನೊಂದಿಗೆ ಶರ್ಕರ ಷಿಷ್ಠಾದಿಗಳನ್ನು ತಯಾರು ಮಾಡುವ ವಿಧಾನಕ್ಕೆ ಈ ಹೆಸರಿದೆ. (ನೋಡಿ- ದ್ಯುತಿಸಂಶ್ಲೇಷಣೆ) ಇಲ್ಲಿ ದ್ಯುತಿ ಸಂಶ್ಲೇಷಣೆಯಿಂದ ಜಗತ್ತಿಗಾಗುವ ಉಪಕಾರಗಳನ್ನು ಮಾತ್ರ ತಿಳಿಸಿದೆ. ನಮ್ಮ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಗೆ ಆಹಾರವೇ ಮೂಲ. ಅಂಥ ಆಹಾರ ತಯಾರಿಕೆಯಲ್ಲಿ ಹರಿತ್ತಿನ ಪಾತ್ರ ಬಹು ಮುಖ್ಯವಾದುದು. ಅಲ್ಲದೆ ಪುರಾತನ ಕಾಲದ ಸಸ್ಯಗಳು ಈ ಕಾರ್ಯದ ಮೂಲಕ ಸಂಗ್ರಹಿಸಿದ ಸೂರ್ಯನ ಶಕ್ತಿಯೇ ನಾವು ಈಗ ಬಳಸುವ ಕಲ್ಲಿದ್ದಲು, ಪೆಟ್ರೋಲ್ ಮುಂತಾದುವುಗಳಲ್ಲಿ ಅಡಗಿರುತ್ತದೆ. ಇವುಗಳ ಬಳಕೆ ಯಂತ್ರಯುಗದ ಶ್ರೇಯಸ್ಸಿಗೆ ಆಧಾರವಾಗಿದೆ. ಹಾಗೂ ಪಟ್ಟಣಗಳಲ್ಲಿ ಹೆಚ್ಚಾಗಿ ಇಂಗಾಲದ ಡೈಆಕ್ಸೈಡೂ ಇತರ ಅನಾರೋಗ್ಯಕರವಾದ ಅನಿಲಗಳೂ ಉತ್ಪತ್ತಿಯಾಗುತ್ತವೆ. ಗಿಡಮರಗಳು, ದ್ಯುತಿಸಂಶ್ಲೇಷಣೆ ಯಲ್ಲಿ ಆಮ್ಲಜನಕವನ್ನು ಉತ್ಪತ್ತಿಮಾಡಿ, ವಾಯುವನ್ನು ಶುದ್ಧಿಗೊಳಿಸಿರುವುದರಿಂದ ಈ ಕಾರಣದಿಂದಲೂ ಮರಗಳನ್ನು ಬೆಳೆಸುವುದು ಅತ್ಯಾವಶ್ಯಕವಾಗಿದೆ. ಪ್ರತಿವರ್ಷವೂ ದ್ಯುತಿಸಂಶ್ಲೇಷಣೆಯಿಂದ ತಯಾರಾಗುವ ಸಾವಯುವ ಪದಾರ್ಥಗಳು, ಪ್ರಪಂಚದಲ್ಲಿರುವ ಎಲ್ಲ ಹೊಲಗೆ ಫ್ಯಾಕ್ಟರಿ ಮುಂತಾದವುಗಳಲ್ಲಿ ಉತ್ಪತ್ತಿಯಾಗುವ ಪದಾರ್ಥಗಳ ಪ್ರಮಾಣಕ್ಕಿಂತ 100ರಷ್ಟು ಹೆಚ್ಚಾಗಿರುತ್ತದೆ. ಈ ಕಾರ್ಯದಲ್ಲಿ ಸಸ್ಯಗಳು 470 ಬಿಲಿಯನ್ ಟನ್ನುಗಳಷ್ಟು ಸಾವಯವ ಪದಾರ್ಥಗಳನ್ನು ತಯಾರಿಸುವುದರಲ್ಲಿ, 690 ಬಿ.ಟನ್ನು ಇಂಗಾಲದ ಡೈಆಕ್ಸೈಡನ್ನೂ 280 ಬಿ.ಟನ್ನು ನೀರನ್ನೂ ಉಪಯೋಗಿಸಿಕೊಂಡು, 500 ಬಿ.ಟನ್ನು ಆಮ್ಲಜನಕವನ್ನೂ ಈಚೆಗೆ ಬಿಡುತ್ತವೆ. ದ್ಯುತಿಸಂಶ್ಲೇಷಣೆಯಿಲ್ಲದಿದ್ದರೆ ಗಾಳಿಯಲ್ಲಿ ಇಷ್ಟು ಆಮ್ಲಜನಕವಿರುತ್ತಿರಲಿಲ್ಲ.
ಎಲೆಗಳಲ್ಲಿ ಉಸಿರಾಟ
ಬದಲಾಯಿಸಿಹಗಲು ಹೊತ್ತಿನಲ್ಲಿ ಎಲೆಗಳು ಹೆಚ್ಚು ರಭಸದಿಂದ ದ್ಯುತಿಸಂಶ್ಲೇಷಣೆಯನ್ನು ಮಾಡುವುದರಿಂದ, ಎಲೆಗಳು ಉಸಿರಾಡುತ್ತಿದ್ದರೂ ಅದು ಗೋಚರವಾಗುವುದಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ಎಲೆಗಳ ಉಸಿರಾಟವೊಂದೇ ನಡೆಯುವುದರಿಂದ, ಆಗ ಅವು ಇಂಗಾಲದ ಡೈಆಕ್ಸೈಡನ್ನು ತಮ್ಮ ರಂಧ್ರಗಳಿಂದ ಈಚೆಗೆ ಬಿಡುವುದು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಸೂರ್ಯನ ಬೆಳಕು ಬೆಳಗಿನ ಜಾವದಲ್ಲಿ ಇನ್ನೂ ಕಡಿಮೆಯಾಗಿರುವಾಗ ಉಸಿರಾಡುವಿಕೆಯಿಂದ ಹೊರಗೆ ಬರುವ ಇಂಗಾಲದ ಡೈಆಕ್ಸೈಡ್ ದ್ಯುತಿಸಂಶ್ಲೇಷಣೆಗೆ ಮಾತ್ರ ಸಾಕಾಗುವಷ್ಟಿರುತ್ತದೆ. ದ್ಯುತಿಸಂಶ್ಲೇಷಣೆ ಆಹಾರವನ್ನು ತಯಾರುಮಾಡುವ ಕಾರ್ಯವಾದರೆ, ಉಸಿರಾಡುವ ಕಾರ್ಯ ಆಹಾರವನ್ನು ವಿಭಜನೆಮಾಡಿ ಅದರಿಂದ ಶಕ್ತಿಯನ್ನು ಬಿಡುಗಡೆ ಮಾಡುವ ಕಾರ್ಯವಾಗಿದೆ. ಹೀಗೆ ಇವೆರಡು ಕಾರ್ಯಗಳೂ ಒಂದಕ್ಕೊಂದು ವಿರೋಧವಾದುವು.
ಆವಿ ಹೊರಹೊಮ್ಮುವಿಕೆ
ಬದಲಾಯಿಸಿಎಲೆಗಳ ರಚನೆ ದ್ಯುತಿಸಂಶ್ಲೇಷಣೆಗೆ ಮುಖ್ಯವಾಗಿ ಹೊಂದಿಕೊಂಡಿರುವುದರಿಂದ, ಇವುಗಳಿಂದ ಆವಿ ಹೊರಹೊಮ್ಮಬೇಕಾಗಿರುವುದು ಅನಿವಾರ್ಯ. ಆದರೆ, ಆವಿ ಹೊರಹೊಮ್ಮುವಿಕೆ ಹೆಚ್ಚಾದರೆ, ಗಿಡ ಬಾಡಿಹೋಗಿ ಅಪಾಯಕ್ಕೆ ತುತ್ತಾಗಬಹುದು. ಬಿಸಿಲು, ಉಷ್ಣತೆ ಮತ್ತು ಗಾಳಿ ಹೆಚ್ಚಾಗಿದ್ದು, ಭೂಮಿಯಲ್ಲಿ ನೀರು ಕಡಿಮೆ ಇರುವ ಪ್ರದೇಶಗಳಲ್ಲಿ ಈ ಅಪಾಯ ಹೆಚ್ಚಾಗಿರುವುದು. ಅಲ್ಲಿ ಬೆಳೆಯುವ ಗಿಡಗಳಿಗೆ ಕ್ಸೀರೋಫೈಟ್ಸ್ ಎನ್ನುತ್ತಾರೆ. ಇದರಲ್ಲಿ ಎಲೆಯ ಮೇಲೂ ಕೆಳಗೂ ಮೇಣದಂಥ ವಸ್ತು ದಪ್ಪನಾಗಿ ಹರಡಿಕೊಂಡಿದೆ. ಬ್ರೆಜಿಲ್ ದೇಶದ (ಕಾರ್ನುಕೋಪಿಯ) ಮೇಣದ ಮರದ ಎಲೆಗಳಿಂದ ಮೇಣವನ್ನು ಸಂಗ್ರಹಿಸುತ್ತಾರೆ. ಹೊರಚರ್ಮವೂ ಅನೇಕ ಪದರಗಳಿಂದ ಕೂಡಿದೆ. ರಕ್ಷಕಜೀವಕೋಶಗಳು ಗುಳಿಗಳಲ್ಲಿ ಅಡಗಿವೆ. ಈ ಗುಳಿಗಳಲ್ಲಿ ಕೂದಲು ತುಂಬಿಕೊಂಡಿದೆ. ಎಲೆಯಲ್ಲಿ ಒಳಗೆ ಕಂಬದಂಥ ಜೀವಕೋಶಗಳು ಹೆಚ್ಚಾಗಿದ್ದು, ಇವು ದಟ್ಟವಾಗಿ ಜೋಡಣೆಗೊಂಡಿವೆ. ಸ್ಪಂಜಿನಂತಿರುವ ಜೀವಕೋಶಗಳು ಅಲ್ಪ ಪ್ರಮಾಣದಲ್ಲಿವೆ. ಈ ತರಹ ವಿಶೇಷ ರಚನೆಯಿಂದ, ಈ ಎಲೆಗಳು ಆವಿ ಹೊರಬೀಳುವ ಪ್ರಮಾಣವನ್ನು ನಿಯಂತ್ರಿಸಿಕೊಳ್ಳುತ್ತವೆ. ಕೆಲವು ಜಾತಿಯ ಹುಲ್ಲಿನಲ್ಲಿ, ಮಧ್ಯಾಹ್ನ ವೇಳೆಯಲ್ಲಿ ಎಲೆ ಸುರುಳಿಯಂತೆ ಸುತ್ತಿಕೊಳ್ಳುವುದರಿಂದಲೂ ಇದೇ ಪರಿಣಾಮವಾಗುವುದು ಕೆಲವು ಗಿಡಗಳಲ್ಲಿ ಎಲೆಗಳೇ ಬಹಳ ಚಿಕ್ಕವಾಗಿರಬಹುದು ; ಬೇಗ ಉದುರಿಹೋಗಬಹುದು; ಮತ್ತೆ ಕೆಲವು ಗಿಡಗಳ ಎಲೆಗಳು ಮಳೆಯಾದಾಗ ಹೆಚ್ಚಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ (ಕತ್ತಾಳೆ). ನೆರಳಿನಲ್ಲಿ ಬೆಳೆಯುವ ಗಿಡಗಳ ಎಲೆಗಳಾದರೊ ಅಗಲವಾಗಿ ತೆಳುವಾಗಿದ್ದು, ಮೇಲಿರುವ ಮೇಣದ ಪೊರೆ ಬಹಳ ತೆಳ್ಳಗಿರುತ್ತದೆ. ನೀರಿನಲ್ಲಿ ಬೆಳೆಯುವ ಗಿಡಗಳ ಎಲೆಗಳಲ್ಲಿ ವಾಯು ಹೆಚ್ಚಾಗಿ ಸಂಗ್ರಹವಾಗಲು ಅನುಕೂಲವಾಗುವಂಥ ರಚನೆ ಇದೆ. ಎಲೆ ತೇಲುತ್ತಿದ್ದರೆ, ರಂಧ್ರಗಳು ಮೇಲುಭಾಗದ ಚರ್ಮದಲ್ಲಿಯೇ ಇರುವುವು. ಮುಳುಗಿರುವ ಎಲೆಗಳಲ್ಲಿ ರಂಧ್ರಗಳೇ ಇರುವುದಿಲ್ಲ. ಅಲ್ಲದೆ ಈ ಎಲೆಗಳು ಬಹುವಾಗಿ ಚೂರು ಚೂರಾಗಿರುತ್ತವೆ. ನೀರು ಹೆಚ್ಚಾಗಿ ದೊರೆಯುವ ತಂಪು ಜಾಗದಲ್ಲಿ ಬೆಳೆಯುವ ಕೆಸವಿನದಂಟು, ಟ್ರೋಪಿಯೋಲಂ ಮುಂತಾದ ಗಿಡಗಳಲ್ಲಿ ನೀರು ಆವಿಯ ರೂಪದಲ್ಲಿಲ್ಲದೆ, ತನ್ನ ದ್ರವರೂಪದಲ್ಲಿಯೇ ಹೊರಹೊಮ್ಮುತ್ತದೆ. ಇದು ಎಲೆಗಳ ಮುಖ್ಯ ನಾಳಗಳ ತುದಿಯಲ್ಲಿರುವ ಕೆಲವು ಜೀವಕೋಶಗಳ ಮೂಲಕ ಈಚೆಗೆ ಬರುವುದು. ಕೆಲವು ವೇಳೆ, ಒಂದು ನಿಮಿಷಕ್ಕೆ ನೂರುತೊಟ್ಟುಗಳು ಬೀಳಬಹುದು. ರಾತ್ರಿ ಉದ್ದವಾಗಿದ್ದು, ನೆಲದಲ್ಲಿ ನೀರು ಹೆಚ್ಚಾಗಿದ್ದರೆ, ಮರುದಿವಸ ಮಂಜಿನ ಹನಿಯಂತೆ ಹುಲ್ಲಿನ ಎಲೆಯ ತುದಿಯಲ್ಲಿ ಈ ರೀತಿ ನೀರು ಹೊರಹೊಮ್ಮುವುದು. ಈ ಕಾರ್ಯಕ್ಕೆ ಉಗುಳುವಿಕೆ (ಗಟ್ಟೇಷನ್) ಎಂದು ಹೆಸರು.
ಎಲೆ ಉದುರುವಿಕೆ
ಬದಲಾಯಿಸಿಎಲೆಗಳು ಬೇಗನೆ ಉದುರಬಹುದು ಅಥವಾ ಒಂದು ಋತುವಿನ ಕೊನೆಯಲ್ಲಿ ಉದುರಬಹುದು. ಚಳಿಗಾಲಕ್ಕೆ ಮುಂಚೆ ಸಮಶೀತೋಷ್ಣ ವಲಯಗಳಲ್ಲಿ ಅನೇಕ ಗಿಡಗಳು ತಮ್ಮ ಎಲೆಗಳನ್ನು ಕಳೆದುಕೊಳ್ಳುವುವು. ಏಕೆಂದರೆ, ಆಗ ಆ ಗಿಡಗಳು ಎಂದಿನಂತೆ ಹೆಚ್ಚು ನೀರನ್ನು ಹೀರಿಕೊಳ್ಳುವುದು ಕಷ್ಟವಾಗುವುದು. ಆದರೆ ಕೆಲವು ಗಿಡಗಳಲ್ಲಿ ಎಲೆಗಳು ಬಹಳ ಕಾಲವಿದ್ದು ಏಕಕಾಲದಲ್ಲಿ ಎಲ್ಲ ಉದುರುವುದಿಲ್ಲ. ಉದುರುವುದಕ್ಕೆ ಮುಂಚೆ ಎಲೆಗಳು ಹಳದಿ, ಕೆಂಪು ಬಣ್ಣಗಳಿಗೆ ತಿರುಗಿ, ತಮ್ಮಲ್ಲಿರುವ ಸಾರವನ್ನು ಕಾಂಡಕ್ಕೆ ಕೊಟ್ಟುಬಿಡುವುವು. ಅಂಥ ಎಲೆಯ ಬುಡದಲ್ಲಿ, ಒಂದು ಹೊಸ ತರಹ ಜೀವಕೋಶಗಳ ಪದರ ಅಡ್ಡವಾಗಿ ಬೆಳೆದುಕೊಂಡು ಬರುತ್ತದೆ. ಅನಂತರ ಈ ಪದರದಲ್ಲಿ ತಕ್ಕಷ್ಟು ಶಕ್ತಿ ಇಲ್ಲದಂತಾಗಿ ಎಲೆ ಉದುರಲು ಅನುಕೂಲವಾಗುತ್ತದೆ. ಗಾಳಿಯಿಂದ ಎಲೆಯ ಮಧ್ಯದ ನಾಳ ಮುರಿಯುವುದೇ ತಡ, ಎಲೆ ಉದುರುತ್ತದೆ. ಸತ್ತ ಕೊಂಬೆಗಳಿಂದ ಎಲೆಗಳು ಈ ರೀತಿ ಉದುರುವುದಿಲ್ಲ. ಎಲೆ ಉದುರಿದ ಜಾಗದಲ್ಲಿ, ಬುಡದಲ್ಲಿ ಕಾರ್ಕ್ ಎಂಬ ಅಂಗಾಂಶ ಉತ್ಪತ್ತಿಯಾಗಿರುವುದ ರಿಂದ, ಇಲ್ಲಿ ಯಾವ ಗಾಯವೂ ಉಂಟಾಗದಂತೆ ರಕ್ಷಣೆ ಇರುತ್ತದೆ. ಆದರೆ ಓಕ್ನಂಥ ಮರಗಳಲ್ಲಿ ಸತ್ತ ಎಲೆಗಳು ಬಹಳ ಕಾಲ ಗಿಡಕ್ಕೆ ಅಂಟಿಕೊಂಡಿರುವುವು.
ಎಲೆಗಳ ವಿಕಾಸ
ಬದಲಾಯಿಸಿಬಹು ಪುರಾತನ ಡಿವೋನಿಯನ್ ಕಾಲದ ರೈನಿಯ ಮುಂತಾದ ಗಿಡಗಳ ಅವಶೇಷಗಳಿಂದ ತೋರಿ ಬರುವಂತೆ, ಆದಿಕಾಲದ ಸಸ್ಯಗಳಲ್ಲಿ ಎಲೆಗಳೇ ಇರಲಿಲ್ಲ. ಅವುಗಳ ಕೆಲಸವನ್ನು ಕಾಂಡದ ಕವಲುಗಳೇ ಮಾಡಬೇಕಾಗಿತ್ತು. ಅನಂತರದ ವಿಕಾಸದಲ್ಲಿ ಕಾಂಡಗಳ ಮೇಲೆ ಸಣ್ಣ ಸಣ್ಣ ಎಲೆಗಳು ಉದ್ಭವಿಸಿದುವು-ಎಂಬುದು ಕೆಲವರ ಮತ. ಕಾಂಡದ ಸಣ್ಣ ಸಣ್ಣ ಕೊಂಬೆಗಳೇ ಅಗಲವಾಗುತ್ತ ಬಂದು, ಉದ್ದವಾಗಿ ಬೆಳೆಯುವುದನ್ನು ನಿಲ್ಲಿಸಿ, ಎಲೆಗಳಾಗಿ ಮಾರ್ಪಾಡಾದುವು ಎಂಬುದು ಮತ್ತೆ ಕೆಲವರ ವಾದ. ದೊಡ್ಡ ಎಲೆಗಳ ಉತ್ಪತ್ತಿಯ ವಿಕಾಸ ಈ ರೀತಿಯಲ್ಲಿ ಕಾಂಡದ ಕವಲು ಕೊನೆಗಳ ಜೋಡಣೆಯಿಂದ ಆಯಿತೆಂಬುದನ್ನೂ ಅನೇಕರು ಒಪ್ಪಿರುವರು. ಆದರೆ ಸಣ್ಣ ಎಲೆಗಳ ವಿಕಾಸ ಮುಂಚೆ ಏನೂ ಬೆಳೆಯದೇ ಇದ್ದ ಕಾಂಡದ ಮೇಲ್ಮೈಯ ಮೇಲೆ, ಹೊಸದಾಗಿ ಉದ್ಭವಿಸಿದುದರಿಂದ ಆಯಿತೆಂದು ಕೆಲವರು ವಾದಿಸುವರು.
ಎಲೆಗಳ ಉಪಯೋಗಗಳು
ಬದಲಾಯಿಸಿಹಲವು ಎಲೆಗಳನ್ನು ತರಕಾರಿಯಾಗಿ ಉಪಯೋಗಿಸುತ್ತೇವೆ. ಕರಿಬೇವು, ಕೊತ್ತಂಬರಿ, ಪುದೀನ ಮುಂತಾದವು ಆಹಾರಕ್ಕೆ ತಕ್ಕ ವಾಸನೆಯನ್ನು ಕೊಟ್ಟು, ಜೀರ್ಣ ಶಕ್ತಿಯನ್ನೂ ಹೆಚ್ಚಿಸುವುವು. ಟೀ ಗಿಡದ ಎಲೆಗಳನ್ನು ಪಾನೀಯಕ್ಕೆ ಬಳಸುವುದು ಸಾಮಾನ್ಯವಾಗಿದೆ. ಹೊಗೆಸೊಪ್ಪು, ಗಾಂಜಾ ಮುಂತಾದ ಎಲೆಗಳನ್ನು ಹೊಗೆಬತ್ತಿಯಾಗಿ ಸೇವಿಸುತ್ತಾರೆ. ವೀಳೆಯದೆಲೆಗಳಿಗೆ ಸಮಾಜದಲ್ಲಿರುವ ಪ್ರಾಮುಖ್ಯ ಎಲ್ಲರಿಗೂ ತಿಳಿದಿದೆ. ಬಾಳೆ, ಮುತ್ತುಗ ಕಂಚುವಾಳ-ಇವುಗಳನ್ನು ಊಟಮಾಡಲು ತಟ್ಟೆಗೆ ಬದಲಾಗಿ ಉಪಯೋಗಿಸುತ್ತೇವೆ. ಕತ್ತಾಳೆ, ಬಾಳೆಗಳಿಂದ ಬರುವ ನಾರನ್ನು ದಾರ ದಂತೆ ಉಪಯೋಗಿಸುತ್ತಾರೆ. ಇಷ್ಟಲ್ಲದೆ, ಅನೇಕ ಜಾತಿಯ ಗಿಡಗಳ ಎಲೆಗಳನ್ನು ಔಷಧಿ ಯಾಗಿ ಎಲ್ಲ ದೇಶಗಳಲ್ಲಿಯೂ ಬಳಸುತ್ತಾರೆ. ಬೆಲ್ಲಡೋನ, ಡಿಜಿಟ್ಯಾಲಿಸ್, ಅಟ್ರೋಪೀನ್ ಮುಂತಾದವು ಪರ್ಣಜನ್ಯ ಔಷಧಿಗಳೇ. ಯೂಕಲಿಪ್ಟಸ್ ಮತ್ತು ಮಜ್ಜಿಗೆ ಹುಲ್ಲಿನಿಂದ ಎಣ್ಣೆಯನ್ನು ತೆಗೆಯುವರು. ಅಲ್ಲದೆ ಎಲೆಯ ಹರಿತ್ತನ್ನು ದಂತಧಾವನ ಸರಿಗಳಲ್ಲೂ ಕೆಲವು ಪದಾರ್ಥಗಳಿಗೆ ಬಣ್ಣ ಕಟ್ಟುವುದಕ್ಕೂ ಉಪಯೋಗಿಸುವುದುಂಟು. ಹೊಂಗೆ, ಗ್ಲಿರಿಸಿಡಿಯ ಎಲೆಗಳು ಒಳ್ಳೆಯ ಹಸಿರುಗೊಬ್ಬರವಾಗುವುದು. ಹಬ್ಬದ ದಿವಸಗಳಲ್ಲಿ ಮಾವಿನ ಎಲೆಗಳಿಂದ ಮನೆಗೆ ತೋರಣವನ್ನು ಕಟ್ಟುತ್ತೇವೆ. ಉಗಾದಿ ಹಬ್ಬದಲ್ಲಿ ಬೇವಿಗೆ ಪ್ರಾಧಾನ್ಯವಿದೆ.
ಎಲೆಗಳ ವಿನ್ಯಾಸ
ಬದಲಾಯಿಸಿಕಾಂಡದ ಮೇಲಿರುವ ಎಲೆಗಳು ಕೆಳಗಿನ ಎಲೆಗಳನ್ನು ಪುರ್ತಿ ಮುಚ್ಚಿಕೊಂಡರೆ ಆ ಎಲೆಗಳಿಗೆ ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಬೆಳಕು ದೊರೆಯದೆ ಹಾನಿಯಾಗುತ್ತದೆ. ಆದುದರಿಂದ ಎಲೆಗಳು ಕಾಂಡದ ಮೇಲೆ ಒಂದು ನಿರ್ದಿಷ್ಟವಾದ ರೀತಿಯಲ್ಲಿ ಬೆಳೆದು ಎಲ್ಲ ಎಲೆಗಳಿಗೂ ತಕ್ಕಷ್ಟು ಬೆಳಕು ದೊರೆಕುವಂತೆ ಜೋಡಣೆಗೊಂಡಿರುತ್ತವೆ. ಎಲೆಗಳ ಜೋಡಣೆಯ ಈ ವಿನ್ಯಾಸಕ್ಕೆ ಸಂಯೋಜನೆ (ಫಿಲ್ಲೊಟ್ಯಾಕ್ಸಿ) ಎಂದು ಹೆಸರು. ಕೆಲವು ಗಿಡಗಳಲ್ಲಿ ಕಾಂಡ ಚಿಕ್ಕದಾಗಿದ್ದು, ಎಲೆಗಳೆಲ್ಲ ನೆಲದ ಮೇಲೆಯೇ ಹರಡಿಕೊಂಡಿರುವುವು. ಸೆಂಪರ್ವೈವಂ ಮುಂತಾದ ಗಿಡಗಳಲ್ಲಿ ಎಲೆಗಳು ಹೂವಿನ ದಳಗಳೋಪಾದಿಯಲ್ಲಿ ಕಾಣುತ್ತವೆ. ಒಂದು ಗಿಣ್ಣಿನಲ್ಲಿ ಎರಡು ಎಲೆಗಳಿದ್ದರೆ, ಅದಕ್ಕೆ ಅಭಿಮುಖ ಜೋಡಣೆ ಎನ್ನುವರು. ಎಲೆಗಳು ಅಭಿಮುಖವಾಗಿದ್ದು, ಎರಡೇ ಸಾಲುಗಳಲ್ಲಿರಬಹುದು ಅಥವಾ ನಾಲ್ಕು ಸಾಲುಗಳಲ್ಲಿರಬಹುದು (ಎಕ್ಕ), ದ್ವಿದಳ ಸಸ್ಯಗಳ ಸಸಿಗಳಲ್ಲಿ ಎರಡು ಬೀಜದಳಗಳೂ ಯಾವಾಗಲೂ ಅಭಿಮುಖವಾಗಿಯೇ ಇರುವುವು. ಕಾಫಿ ಗಿಡದ ಕುಟುಂಬದ (ರೂಬಿಯೇಸಿ) ಎಲೆಗಳೂ ಹೀಗೆಯೇ ಇರುವುವು. ಒಂದೇ ಗಿಣ್ಣಿನಲ್ಲಿ ಎರಡಕ್ಕಿಂತ ಹೆಚ್ಚಾಗಿ ಎಲೆಗಳು ಇದ್ದರೆ ಅದಕ್ಕೆ ವರ್ತುಳ ವಿನ್ಯಾಸ (ಹೋರ್ಲ್ಡ್) ಎನ್ನಬಹುದು (ಕಣಗಿಲೆ). ಒಂದು ಗಿಣ್ಣಿನಿಂದ ಒಂದು ಎಲೆಮಾತ್ರ ಉದ್ಬವಿಸಿದರೆ ಅದು ಪರ್ಯಾಯ ವಿನ್ಯಾಸವಾಗುತ್ತದೆ (ಆಲ್ಟರ್ನೇಟ್). ಉದಾಹರಣೆಗೆ ಆಲ, ಕಂಚುವಾಳ, ಎಲೆಯ ಮೇಲಿನ ಗಿಣ್ಣಿನ ಅಥವಾ ಕೆಳಗಿನ ಗಿಣ್ಣಿನ ಎಲೆ ಇದರ ಎದುರು ದಿಕ್ಕಿನಲ್ಲಿರುತ್ತದೆ. ಈ ವಿನ್ಯಾಸ ಒಂದು ಸೂತ್ರವನ್ನು ಅವಲಂಬಿಸಿದೆ. ಹುಲ್ಲಿನಲ್ಲಿರುವಂತೆ, ಕಾಂಡದ ಒಂದು ಸುತ್ತಿನಲ್ಲಿ ಎರಡು ಎಲೆಗಳಿದ್ದು ಒಟ್ಟು ಉದ್ದದ ಎರಡು ಸಾಲುಗಳಿರುತ್ತವೆ. ಇದನ್ನು ಳಿ ವಿನ್ಯಾಸವೆನ್ನುವರು. ಜೊಂಡುಗಿಡದಲ್ಲಿ (ಸೈಪೆರಸ್) - ವಿನ್ಯಾಸವಿರುತ್ತದೆ. ಇವೆರಡು ವಿನ್ಯಾಸಗಳ ಅಂಶಗಳನ್ನೂ ಛೇದಗಳನ್ನು ಕೂಡಿದರೆ 2/5 ವಿನ್ಯಾಸವಾಗುವುದು. ಉದಾ: ಹೂವರ್ಚಿಗಿಡ. ಇನ್ನೂ ಮುಂದುವರಿದ ವಿನ್ಯಾಸವೆಂದರೆ ಪ್ಲಾಂಟಾಗೊ ಗಿಡದಲ್ಲಿರುವಂತೆ ಅನೇಕವೇಳೆ, ಎಲೆಗಳ ತೊಟ್ಟುಗಳು ತಿರುವಿಕೊಂಡಿರುವುದ ರಿಂದ, ಅವುಗಳ ವಿನ್ಯಾಸವನ್ನು ಸರಿಯಾಗಿ ಕಂಡು ಹಿಡಿಯಲು ಕಷ್ಟವಾಗುವುದು. ಗಿಡದ ಎಲೆಗಳು ಸಾಧ್ಯವಾದಷ್ಟು ಒಂದನ್ನು ಮತ್ತೊಂದು ಮುಚ್ಚಿದಂತೆ ಇದ್ದು ಬೆಳಕನ್ನು ಸಂಪುರ್ಣವಾಗಿ ಉಪಯೋಗಿಸಿಕೊಳ್ಳುವಂತಿರಬೇಕು ಎಂಬುದನ್ನು ಆಗಲೇ ತಿಳಿಸಿದೆ. ಇದಕ್ಕಾಗಿಯೋ ಎನ್ನುವಂತೆ ಕೆಲವು ಗಿಡಗಳಲ್ಲಿ ಎಲೆತೊಟ್ಟುಗಳು ಉದ್ದವಾಗುತ್ತ ಬಂದಿವೆ. ಉದಾಹರಣೆಗೆ: ಅಕ್ಯಾಲಿಫದಲ್ಲಿರುವ ಮೊಸೈಕ್ ರೀತಿ. (ಕೆ.ಎಲ್.ಎಂ.)
ಪಿಡುಗುಗಳು
ಬದಲಾಯಿಸಿಪೈರಿಗೆ ಹೇಗೋ ಹಾಗೆ ಗಿಡದ ಎಲ್ಲ ಭಾಗಗಳನ್ನು ಕೊರೆದು ಎಲೆ ತಿನ್ನುವ ಹುಳು, ಕೀಟಗಳಿವೆ, ಮಿಡತೆ, ಚಿಟ್ಟೆಗಳು, ಕಂಬಳಿ ಹುಳುಗಳು, ಕೊಂಡಿ ಹುಳು, ಜೀರುಂಡಿ, ಕಣಜದ ಹುಳು-ಮುಂತಾದವು ಎಲೆಯನ್ನು ಸಂಪುರ್ಣವಾಗಿ ಅಥವಾ ಭಾಗಶಃ ಕೊರೆದುಹಾಕುತ್ತವೆ. ಈ ಪಿಡುಗಿನಿಂದ ಗಿಡವನ್ನು ರಕ್ಷಿಸಲು ಅನೇಕ ರಾಸಾಯನಿಕ ಮದ್ದುಗಳಿವೆ. ಇಂಥ ಹುಳುಕೀಟಗಳ ವಿವರಗಳನ್ನೂ ಆಯಾ ಹುಳುಕೀಟಗಳ ಶೀರ್ಷಿಕೆಯಲ್ಲಿ ಕೊಟ್ಟಿದೆ.
ಉಲ್ಲೇಖ
ಬದಲಾಯಿಸಿ- ↑ Katherine, Esau. Esau's Plant Anatomy: Meristems, Cells, and Tissues of the Plant Body: Their Structure, Function, and Development. John Wiley & Sons. p. 624. ISBN 9780470047378.