ಕರೀಜಾಲಿ

ಹುರುಳಿ ಕಾಯಿ ಕುಟುಂಬಕ್ಕೆ (Fabaceae) ಸೇರಿದ ಹೂಬಿಡುವ ಸಸ್ಯ
Vachellia nilotica
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
V. nilotica
Binomial name
Vachellia nilotica
(L.) P.J.H.Hurter & Mabb.[]
subspecies[][]
Range of Vachellia nilotica
Synonyms[]
  • Acacia arabica (Lam.) Willd.
  • Acacia nilotica (L.) Willd. ex Delile
  • Acacia scorpioides W.Wight
  • Mimosa arabica Lam.
  • Mimosa nilotica L.
  • Mimosa scorpioides L.

ಕರೀಜಾಲಿ ಸಾಧಾರಣ ಎತ್ತರದ ಮುಳ್ಳುಮರ. ಪಾಕಿಸ್ತಾನದ ಸಿಂಧ್, ಆಫ್ರಿಕದ ಉಷ್ಣಪ್ರದೇಶಹಾಗೂ ದಕ್ಷಿಣಭಾರತಗಳು ಇದರ ಜನ್ಯಸ್ಥಳಗಳೆಂದು ಹೇಳಲಾಗಿದೆ. ಭಾರತಾದ್ಯಂತ ಮೆಕ್ಕಲುಮಣ್ಣು ಮತ್ತು ಎರೆಮಣ್ಣಿನ ಭೂಮಿಯಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಧಾರಣವಾಗಿ ಶುಷ್ಕವಾತಾವರಣದಲ್ಲಿ ಚೆನ್ನಾಗಿ ಬೆಳೆದರೂ ಅತಿ ಒಣಹವೆಯನ್ನು ತಡೆದುಕೊಳ್ಳಲಾರದು. ಹಾಗೆಯೇ ಹೆಚ್ಚು ಚಳಿಯನ್ನೂ ಸಹಿಸದು. ತೋಪುಗಳಲ್ಲಿ ಈ ಮರ ಬೆಳೆದಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಬಿಸಿಲು ಹೆಚ್ಚಾಗಿದ್ದರೆ ಬೆಳೆವಣಿಗೆಗೆ ಅನುಕೂಲ.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ

ಲೆಗ್ಯುಮಿನೋಸೀ ಕುಟುಂಬಕ್ಕೆ ಸೇರಿದ ಅಕೇಸಿಯ ಅರ್ಯಾಬಿಕ ಎಂಬ ವೈಜ್ಞಾನಿಕ ಹೆಸರಿನ ಈ ಮರಕ್ಕೆ ಕರೀಗೊಬ್ಬಳೀ, ಜಾಲಿ, ಗೊಬ್ಬಳಿ ಮುಂತಾದುವು ಇದರ ಪರ್ಯಾಯನಾಮಗಳು.

ಲಕ್ಷಣಗಳು

ಬದಲಾಯಿಸಿ

ಈ ಮರದ ಎತ್ತರದಲ್ಲೂ ಕಾಂಡದ ಗಾತ್ರದಲ್ಲೂ ವೈವಿಧ್ಯವಿದೆ. ಕೆಲವೆಡೆ ದೊಡ್ಡ ಪೊದೆಸಸ್ಯವಾಗಿ ಬೆಳೆದರೆ ಇನ್ನು ಕೆಲವು ಪ್ರದೇಶಗಳಲ್ಲಿ 50'-50' ಎತ್ತರದ ಮರವಾಗಿ ಬೆಳೆಯುತ್ತದೆ. ಕಾಂಡದ ಗಾತ್ರದಲ್ಲಿ 1ಳಿ'-10'ವರೆಗೂ ವ್ಯತ್ಯಾಸವಿದೆ. ತೊಗಟೆ ಕಂದು ಅಥವಾ ಕಪ್ಪು ಬಣ್ಣದ್ದು. ಏಪ್ರಿಲ್ ತಿಂಗಳಿನಲ್ಲಿ ಸ್ವಲ್ಪಕಾಲ ಬಿಟ್ಟು ವರ್ಷದ ಮಿಕ್ಕೆಲ್ಲ ಕಾಲಗಳಲ್ಲಿಯೂ ಎಲೆಗಳಿರುತ್ತವೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಸಂಯುಕ್ತ ಮಾದರಿಯ ಇವುಗಳಲ್ಲಿ ಅಭಿಮುಖ ಜೋಡಣೆಯ ಹಲವಾರು ಕಿರುಎಲೆಗಳಿವೆ. ಮುಳ್ಳುಗಳಾಗಿ ಪರಿವರ್ತಿತವಾಗಿರುವ ವೃಂತಪರ್ಣಗಳಿವೆ (ಸ್ಟಿಪ್ಯುಲುಗಳು). ಜೂನ್-ಜುಲೈ ತಿಂಗಳಿನ ಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳು ರೆಂಬೆಗಳ ತುದಿಗಳಲ್ಲೊ ಎಲೆಗಳ ಕಂಕುಳಲ್ಲೊ ಇವೆ. ಹೂಗಳು ದ್ವಿಲಿಂಗಿಗಳು. ಪುಷ್ಪಪತ್ರಗಳ ಹಾಗೂ ಹೂದಳಗಳ ಸಂಖ್ಯೆ ಐದೈದು, ಕೇಸರಗಳು ಅಸಂಖ್ಯಾತ. ಅಂಡಾಶಯ ಉಚ್ಚಸ್ಥಾನದ್ದು; ಒಂದೇ ಕಾರ್ಪೆಲಿನಿಂದ ಕೂಡಿದೆ. ಒಂದೇ ಕೋಣೆಯಿದ್ದು ಅದರಲ್ಲಿ ಹಲವಾರು ಅಂಡಕಗಳಿವೆ. ಫಲ ಒಡೆಯುವ ಒಣಫಲ. ಪಾಡ್ ಎಂಬ ಹೆಸರಿನಿಂದ ಕರೆಯಲಾಗುವ ಇದು ಹಲವಾರು ಬೀಜಗಳನ್ನೊಳಗೊಂಡು ಮಣಿ ಕಟ್ಟಿನಂತಿದೆ. ಅದರ ಬಣ್ಣ ಬಿಳಿ.

ಉಪಯೋಗಗಳು

ಬದಲಾಯಿಸಿ
 
Spring blossoms at Hodal in Faridabad District of ಹರಿಯಾಣ, India

ಹಣ್ಣನ್ನು ದನಗಳು, ಮೇಕೆಗಳು ತಿನ್ನುತ್ತವೆ. ಕರೀಜಾಲಿಮರ ಚೌಬೀನೆಗಾಗಿಯೂ ಗೋಂದಿಗಾಗಿಯೂ ಚರ್ಮ ಹದಮಾಡಲು ಬಳಸುವ ಟ್ಯಾನಿನ್ ಎಂಬ ವಸ್ತುವಿಗಾಗಿಯೂ ಪ್ರಾಮುಖ್ಯಪಡೆದಿದೆ. ಇದರ ಚೌಬೀನೆ ಬಹಳ ಗಡುಸಾದುದು (ತೇಗದ ಚೌಬೀನೆಗಿಂತ ಎರಡರಷ್ಟು ಗಟ್ಟಿಯೆನ್ನುತ್ತಾರೆ). ಅಲ್ಲದೆ ದೀರ್ಘಕಾಲ ಬಾಳಿಕೆ ಬರುತ್ತದೆ. ರಸಕಾಷ್ಠ (ಸ್ಯಾಪ್ವುಡ್) ಹಳದಿಮಿಶ್ರಿತ ಬಿಳಿಯ ಬಣ್ಣದ್ದಾಗಿಯೂ ಮೆದುವಾಗಿಯೂ ಇದೆ. ಚೇಗು (ಹಾರ್ಟ್ವುಡ್) ಹೊಸದಾಗಿ ಕತ್ತರಿಸಿದಾಗ ತಿಳಿಗೆಂಪು ಬಣ್ಣದ್ದು. ಕೊಂಚ ಕಾಲಾನಂತರ ಕೆಂಗಂದು ಬಣ್ಣಕ್ಕೆ ತಿರುಗುತ್ತದೆ. ಚೌಬೀನೆಯನ್ನು ನೇರವಾಗಿಯೇ ಉಪಯೋಗಿಸಬಹುದಾದರೂ ಪರಿಷ್ಕರಿಸಿ ಬಳಸಿದರೆ ಒಳ್ಳೆಯದು. ಪರಿಷ್ಕಾರಕ್ಕೆ ವಿಶೇಷ ಸಾಧನಗಳಾಗಲಿ, ವಿಧಾನಗಳಾಗಲಿ ಬೇಕಿಲ್ಲ. ಗಟ್ಟಿಯಾದ ಹಾಗೂ ದೃಢವಾದ ಚೌಬೀನೆ ಬೇಕಾಗುವಂಥ ಕೆಲಸಗಳಿಗೆ ಕರೀಜಾಲಿಯ ಮರ ಅತ್ಯಂತ ಉತ್ತಮವಾದದ್ದು. ವ್ಯವಸಾಯದ ಉಪಕರಣಗಳು, ಗಾಡಿಯ ಅಚ್ಚು, ಅರೆಕಾಲು, ಎಣ್ಣೆ ಮತ್ತು ಬೆಲ್ಲದ ಗಾಣಗಳು, ದೋಣಿಯ ಹುಟ್ಟುಗಳು, ಆಯುಧಗಳ ಹಿಡಿಗಳು, ಗಣಿಗಳ ಆಸರೆಗಂಬಗಳು ಮುಂತಾದುವನ್ನು ಮಾಡಲು ಈ ಮರವನ್ನು ಉಪಯೋಗಿಸುತ್ತಾರೆ. ಕರೀಜಾಲಿಯಮರದಿಂದ ಉತ್ತಮ ದರ್ಜೆಯ ಗೋಂದನ್ನು ತೆಗೆಯಬಹುದು. ಮಾರ್ಚ್-ಮೇ ತಿಂಗಳುಗಳಲ್ಲಿ ತೊಗಟೆಯ ಮೇಲೆ ಚಾಕುವಿನಿಂದ ಗಾಯಮಾಡಿ ಗೋಂದನ್ನು ತೆಗೆಯುತ್ತಾರೆ. ಅಂಟು ತಿಳಿಹಳದಿಯಿಂದ ಕಂದುಮಿಶ್ರಿತ ಕಪ್ಪು ಬಣ್ಣದ ವರೆಗಿದೆ. ನೀರಿನಲ್ಲಿ ಪುರ್ಣವಾಗಿ ಕರಗುತ್ತದೆ. ಒಳ್ಳೆಯದರ್ಜೆಯ ಅಂಟನ್ನು ಕ್ಯಾಲಿಕೊ ಮುದ್ರಣ ಮತ್ತು ಬಣ್ಣಕಟ್ಟುವಿಕೆಯಲ್ಲೂ ಕೆಲವು ಬಗೆಯ ಸಿಹಿತಿಂಡಿಮಾಡುವುದಕ್ಕೂ ಔಷಧಿಯಾಗಿಯೂ ಬಳಸುತ್ತಾರೆ.

 
Trunk at Hodal in Faridabad District of ಹರಿಯಾಣ, India

ಕರೀಜಾಲಿಮರದ ತೊಗಟೆಯಿಂದ ಪಡೆಯಲಾಗುವ ಟ್ಯಾನಿನನ್ನು ಚರ್ಮಹದ ಮಾಡಲು ಉಪಯೋಗಿಸುತ್ತಾರೆ. ಟ್ಯಾನಿನಿಗಾಗಿಯೇ ಮರಗಳನ್ನು ಕಡಿಯದಿದ್ದರೂ ಸೌದೆಗಾಗಿಯೋ ಚೌಬೀನೆಗಾಗಿಯೋ ಕಡಿದ ಮರಗಳನ್ನು ಮರದ ಸುತ್ತಿಗೆಗಳಿಂದ ಬಡಿದು ತೊಗಟೆಯನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಿ ತುಂಡುಗಳಾಗಿ ಕತ್ತರಿಸಿ ಟ್ಯಾನಿನ್ ತೆಗೆಯಲು ಪರಿಷ್ಕರಿಸುತ್ತಾರೆ. ತೊಗಟೆಯಲ್ಲಿ ಸು. ಶೇ.12 ಟ್ಯಾನಿನ್ ಇದೆಯೆಂದು ತಿಳಿದುಬಂದಿದೆ. ಕೆಲವು ಬಗೆಯ ಚರ್ಮ ಹದ ಮಾಡುವುದಕ್ಕೆ ಈ ಟ್ಯಾನಿನ್ ಅತ್ಯುತ್ತಮವೆಂದು ಹೇಳಲಾಗಿದೆ. ಕಾಯಿಯಿಂದಲೂ ಟ್ಯಾನಿನ್ ದೊರೆಯುತ್ತದೆ. ಆದರೆ ಭಾರತದಲ್ಲಿ ಕಾಯಿಗಳನ್ನು ಚರ್ಮಹದಮಾಡಲು ಬಳಸುತ್ತಿಲ್ಲ. ತೊಗಟೆ, ಎಲೆ ಮತ್ತು ಕಾಯಿಗಳಿಂದ ತೆಗೆಯಲಾಗುವ ರಸವನ್ನು ಕೆಲವು ರೀತಿಯ ಲೋಹ ಸಂಯುಕ್ತಗಳ ಜೊತೆಗೆ ಸೇರಿಸಿ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಕಂದು, ಕಾಕಿ, ಕಪ್ಪು ಮುಂತಾದ ಬಣ್ಣಹಾಕುವುದಕ್ಕೂ ಬಳಸುತ್ತಾರೆ. ಕೆಳದರ್ಜೆಯ ಮರವನ್ನು ಸೌದೆಯಾಗಿ ಉಪಯೋಗಿಸುವುದೂ ಉಂಟು.

ಉಲ್ಲೇಖಗಳು

ಬದಲಾಯಿಸಿ
  1. "Phylogenetic position and revised classification of Acacia s.l. (Fabaceae: Mimosoideae) in Africa, including new combinations in Vachellia and Senegalia". Bot J Linn Soc. 172 (4): 500–523. 2013. doi:10.1111/boj.12047. {{cite journal}}: Cite uses deprecated parameter |authors= (help)
  2. ಉಲ್ಲೇಖ ದೋಷ: Invalid <ref> tag; no text was provided for refs named fao
  3. USDA, ARS, National Genetic Resources Program. "Acacia nilotica". USDA Germplasm Resources Information Network (GRIN).{{cite web}}: CS1 maint: multiple names: authors list (link)
  4. "Acacia nilotica". LegumeWeb. International Legume Database & Information Service.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕರೀಜಾಲಿ&oldid=1195917" ಇಂದ ಪಡೆಯಲ್ಪಟ್ಟಿದೆ