ಓಕ್: ಫೇಗೇಸಿ ಕುಟುಂಬದ ಕ್ವರ್ಕಸ್ ಜಾತಿಗೆ ಸೇರಿದ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಖ್ಯೆಯ ಪ್ರಭೇದಗಳನ್ನುಳ್ಳ ಮರಗಳು ಮತ್ತು ಪೊದರುಗಳು. ಈ ಜಾತಿ ಪ್ರಪಂಚದ ಉತ್ತರಾರ್ಧಗೋಳದ ಸಮಶೀತೋಷ್ಣ ವಲಯದಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದರೂ ಏಷ್ಯ ಹಾಗೂ ಅಮೆರಿಕ ಖಂಡಗಳ ಉಷ್ಣವಲಯದ ಪ್ರದೇಶಗಳಲ್ಲೂ ಎತ್ತರವಾದ ಮತ್ತು ತಂಪಾದ ಹವೆಯುಳ್ಳ ಸ್ಥಳಗಳಲ್ಲಿ ಮುಖ್ಯವಾಗಿ, ಉತ್ತರ ಅಮೆರಿಕ, ಮೆಕ್ಸಿಕೋ, ಯುರೋಪ್, ರಷ್ಯದ ಕಾಕಸಸ್ ಪರ್ವತಗಳು, ಮೆಡಿಟರೇನಿಯನ್ ಪ್ರದೇಶ ಮುಂತಾದುವುಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದಲ್ಲಿ ಮುಖ್ಯವಾಗಿ ಹಿಮಾಲಯ ಪ್ರದೇಶದಲ್ಲಿ ಸುಮಾರು 23 ಪ್ರಭೇದಗಳು ಬೆಳೆಯುತ್ತವೆ. ಇದರಿಂದ ದೊರೆಯುವ ನಾಟ ಮತ್ತು ಚರ್ಮ ಹದ ಮಾಡುವುದಕ್ಕೆ ಉಪಯೋಗಿಸುವ ಟ್ಯಾನಿನುಗಳಿಗಾಗಿ ಇದನ್ನು ಅಮೆರಿಕ ಮತ್ತು ಇಂಗ್ಲೆಂಡುಗಳಲ್ಲಿ ವಿಶೇಷವಾಗಿ ಕಾಡುಗಳಲ್ಲಿ ಬೆಳೆಸುತ್ತಾರೆ.

ದೊಡ್ಡ ಮರವಾಗಿ ಬೆಳೆಯುವ ಓಕ್ ಸಾಮಾನ್ಯವಾಗಿ 60-80 ಅಡಿಗಳ ಎತ್ತರಕ್ಕೆ ಬೆಳೆಯುತ್ತದೆ. ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ 100-150 ಅಡಿಗಳವರೆಗೂ ಬೆಳೆಯುವುದುಂಟು. ಕೆಲವು ಪ್ರಭೇದಗಳು ಮಾತ್ರ ದೊಡ್ಡ ಪೊದೆಯಂತೆ ಬೆಳೆಯುತ್ತವೆ. ಎತ್ತರದಲ್ಲಿ ಅದ್ವಿತೀಯವೆನಿಸದಿದ್ದರೂ ಒರಟೊರಟಾದ, ಭಾರಿ ಸುತ್ತಳತೆಯ, ಬುಡವನ್ನೂ ಅಂಕುಡೊಂಕಾದ ರೆಂಬೆಗಳನ್ನೂ ಉಳ್ಳ ಈ ಮರಗಳು ನಿಜಕ್ಕೂ ಭವ್ಯವಾಗಿರುತ್ತವೆ. ಸಾಧಾರಣವಾಗಿ ಮೆಕ್ಕಲುಮಣ್ಣಿನ ನೆಲದಲ್ಲಿ ಅಥವಾ ಜೇಡಿಮಣ್ಣಿನ ನೆಲದಲ್ಲಿ ಇವು ಸಮೃದ್ದವಾಗಿ ಬೆಳೆಯುತ್ತವೆ. ಆದರೆ ಕೆಲವು ಬಗೆಯವು ಮರಳು ಅಥವಾ ಕಲ್ಲುನೆಲಗಳಿಗೇ ಸೀಮಿತಗೊಂಡಿದ್ದು ಸಣ್ಣ ಪೊದೆ ಅಥವಾ ಕುರುಚಲು ಗಿಡಗಳಂತೆ ಬೆಳೆಯುವುದುಂಟು. ಓಕ್ ಜಾತಿಯ ಕೆಲವು ಪ್ರಭೇದಗಳು ಚಳಿಗಾಲದಲ್ಲಿ ಎಲೆಗಳುದುರುವ ಮತ್ತೆ ಕೆಲವು ನಿತ್ಯಹರಿದ್ವರ್ಣದ ಮರಗಳ ಗುಂಪಿಗೆ ಸೇರಿವೆ. ಭಾರತದ ಪ್ರಭೇದಗಳಲ್ಲಿ ಬಹುಪಾಲು ಸಸ್ಯಗಳು ನಿತ್ಯಹರಿದ್ವರ್ಣದ ಗುಂಪಿಗೆ ಸೇರಿವೆ.

ಈ ಮರದ ಎಲೆಗಳು ಪರ್ಯಾಯ ಜೋಡಣೆ ಹೊಂದಿದ್ದು, ಸಾಮಾನ್ಯ ಪತ್ರಗಳಾಗಿರುತ್ತವೆ. ಅವುಗಳ ಅಂಚು ನಯವಾಗಿರಬಹುದು, ಹಲ್ಲಿನಂಥ ಏಣುಗಳನ್ನು ಹೊಂದಿರಬಹುದು ಅಥವಾ ಹಾಲೆಗಳಾಗಿ ಸೀಳಾಗಿರಬಹುದು. ಕಾಂಡದ ತೊಗಟೆಯ ಮೇಲ್ಮೈವಿನ್ಯಾಸವೂ ಒಂದೊಂದು ಪ್ರಭೇದದಲ್ಲೂ ಬೇರೆ ಬೇರೆಯಾಗಿರುತ್ತದೆ. ಅದು ನಯವಾಗಿರಬಹುದು, ಶಲ್ಕಗಳಿಂದ ಕೂಡಿರಬಹುದು, ಸಣ್ಣ ಫಲಕಗಳಿಂದ ಕೂಡಿರಬಹುದು ಅಥವಾ ಅಸಮರೂಪದ ಏಣುಗಳನ್ನು ಹೊಂದಿರಬಹುದು. ಈ ಮರದ ಹೂಗಳು ಏಕಲಿಂಗಿಗಳು. ಒಂದೇ ಮರದಲ್ಲಿ ಬೇರೆ ಬೇರೆ ಹೂಗೊಂಚಲುಗಳಲ್ಲಿ ಬಿಡುತ್ತವೆ. ಗಂಡು ಹೂಗೊಂಚಲುಗಳು ರೆಂಬೆಗಳಿಂದ ಕೆಳಮುಖನಾಗಿ ತೂಗಾಡುತ್ತಿದ್ದು ಪ್ರತಿಯೊಂದರಲ್ಲಿಯೂ ಅನೇಕ ಹೂವುಗಳಿರುತ್ತವೆ. ಒಂದೊಂದು ಹೂವಿನಲ್ಲಿಯೂ 4-7 ಹಾಲೆಗಳುಳ್ಳ ಪುಷ್ಪಪತ್ರಗಳು, 4-12 ಕೇಸರಗಳು ಇರುತ್ತವೆ. ಹೆಣ್ಣುಹೂ ಗೊಂಚಲು ಕದಿರುಗೊಂಚಲು (ಸ್ಪೈಕ್) ಮಾದರಿಯದು. ಒಂದೊಂದು ಹೂವಿನಲ್ಲಿಯೂ 6 ಹಾಲೆಗಳ ಪುಷ್ಪಪತ್ರವೂ 3-5 ಕೋಶಗಳುಳ್ಳ ಅಂಡಾಶಯವೂ ಇರುತ್ತವೆ. ಪ್ರತಿ ಕೋಶದಲ್ಲಿರುವ ಅಂಡಕಗಳ ಸಂಖ್ಯೆ ಎರಡು, ಅಂಡಾಶಯವನ್ನು ಸುತ್ತುವರಿದಂತೆ ಅನೇಕ ಉಪಪತ್ರಗಳ (ಬ್ರ್ಯಾಕ್ಟ್‌್ಸ) ಇನ್ವಲ್ಯೂಕರ್ ಇರುತ್ತವೆ. ಕಾಯಿ ವಿಶಿಷ್ಟ ಬಗೆಯದಾಗಿದ್ದು ಒಂದೇ ಬೀಜವನ್ನು ಹೊಂದಿರುತ್ತದೆ. ಅದನ್ನು ಎಕಾರ್ನ್ ಎನ್ನುತ್ತಾರೆ.

ಕೆಲವು ಶಾಸ್ತ್ರೀಯ ಗುಣಗಳ ಆಧಾರದ ಮೇಲೆ ಓಕ್ ಜಾತಿಯನ್ನು ಸೈಕ್ಲೊ ಬಲಾನಸ್, ಲ್ಯೂಕೊಬಲಾನಸ್ ಮತ್ತು ಎರಿತ್ರೊಬಲಾನಸ್ ಎಂಬ ಮೂರು ಉಪಜಾತಿಗಳನ್ನಾಗಿ ವಿಂಗಡಿಸಿದ್ದಾರೆ.

ಸೈಕ್ಲೊಬಲಾನಸ್ ಗುಂಪಿನ ಓಕ್ಗಳಲ್ಲಿ ಅಂಡಾಶಯವನ್ನು ಸುತ್ತುವರಿದಿರುವ ಉಪಪತ್ರಗಳು ಪರಸ್ಪರ ಕೂಡಿಕೊಂಡು ಉಂಗುರಗಳಂಥ ಇನ್ವಲ್ಯೂಕರ್ಗಳಾಗಿರುತ್ತವೆ.

ಲ್ಯೂಕೊಬಾಲಾನಸ್ ಗುಂಪಿನ ಓಕುಗಳಲ್ಲಿ ಅಂಡಾಶಯದ ಸುತ್ತ ಇರುವ ಉಪಪತ್ರಗಳು ಬಿಡಿಬಿಡಿಯಾಗಿದ್ದು, ಸುರುಳಿಯಾಕಾರದಲ್ಲಿ ಜೋಡಿಸಿಕೊಂಡಿರುತ್ತವೆ. ಕಾಯಿಗಳು ಒಂದೇ ಬೆಳೆವಣಿಗೆಯ ಕಾಲದಲ್ಲಿ (ಗ್ರೋಯಿಂಗ್ ಸೀಸನ್) ಪಕ್ವವಾಗುತ್ತವಲ್ಲದೆ, ಮರದಿಂದ ಉದುರಿದ ಕೆಲವೇ ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಈ ಉಪಜಾತಿಯ ಓಕ್ಗಳಿಗೆ ಬಿಳಿಯ ಓಕ್ಗಳೆಂದು ಹೆಸರು.

ಎರಿತ್ರೊಬಲಾನಸ್ ಉಪಜಾತಿಯ ಓಕ್ಗಳನ್ನು ಕೆಂಪು ಅಥವಾ ಕಪ್ಪು ಓಕ್ಗಳೆನ್ನುತ್ತಾರೆ. ಇವುಗಳಲ್ಲಿಯೂ ಅಂಡಾಶಯದ ಸುತ್ತ ಇರುವ ಉಪಪತ್ರಗಳು ಬಿಡಿಬಿಡಿಯಾಗಿದ್ದು ಸುರುಳಿಯಕಾರದಲ್ಲೇ ಜೋಡಿಸಲ್ಪಟ್ಟಿರುತ್ತವೆ. ಕಾಯಿಗಳು ಪಕ್ವವಾಗುವುದಕ್ಕೆ ಎರಡು ಬೆಳೆವಣಿಗೆಯ ಕಾಲವನ್ನು ತೆಗೆದುಕೊಳ್ಳುತ್ತವೆ. ಮೊಳಕೆಯೊಡೆಯುವುದು ಚಳಿಗಾಲ ಕಳೆದು, ಮತ್ತೆ ವಸಂತಕಾಲ ಬಂದಾಗ ಮಾತ್ರ.

ಓಕ್ ಮರಗಳು ದೀರ್ಘಕಾಲ ಬದುಕುವುವೆಂದು ಹೇಳುತ್ತಾರೆ. ಇಂಗ್ಲೆಂಡಿನಲ್ಲಿರುವ ಕೆಲವು ಓಕ್ ವೃಕ್ಷಗಳು 1,500ಕ್ಕೂ ಹೆಚ್ಚು ವಯಸ್ಸಿನವೆಂದು ತಿಳಿದಿದೆ. ಯಾರ್ಕ್ಶೈರಿನ ಹಳ್ಳಿಯೊಂದರಲ್ಲಿರುವ ಓಕ್ಮರ ಕ್ರೈಸ್ತಮತದ ಉದಯಕ್ಕೂ ಮುಂಚಿನದೆಂದು ಹೇಳುತ್ತಾರೆ. ಎಪಿರಸ್ ಬೆಟ್ಟಗಳಲ್ಲಿರುವ ಡೋಡೋನಾದ ಓಕ್ ಮರದಡಿ ಗ್ರೀಕರ ಮುಖ್ಯದೇವತೆಯಾದ ಜ್ಯೂಸ್ ತನ್ನ ಆರಾಧಕರಿಗೆ ಬೋಧನೆ ಮಾಡಿದನೆಂದು ಪ್ರತೀತಿಯಿದೆ.

ಉಪಯುಕ್ತತೆಯ ದೃಷ್ಟಿಯಿಂದ ಓಕ್ ಮರದ ಪ್ರಭೇದಗಳು ಬಹಳ ಮುಖ್ಯವಾದವು. ಹಲವಾರು ಬಗೆಯ ಕೆಲಸಗಳಿಗೆ ಈ ಮರ ಉಪಯೋಗವಾಗುತ್ತದೆ. ಇದು ಅತ್ಯಂತ ಗಟ್ಟಿಮರಗಳಲ್ಲೊಂದಾಗಿ ದೃಢತೆಗೂ ಬಾಳಿಕೆಗೂ ಹೆಸರಾಗಿದೆ. ಇದರಲ್ಲಿನ ಎಳೆಗಳ ವಿನ್ಯಾಸ ತುಂಬ ಸೊಗಸಾಗಿರುವುದರಿಂದ ಉತ್ತಮ ತರದ, ಸುಂದರವಾದ ಮರದ ಸಾಮಾನುಗಳನ್ನು ಮಾಡಬಹುದು. ಒಂದು ಕಾಲದಲ್ಲಿ, ಉಕ್ಕು ಮತ್ತಿತರ ಲೋಹಗಳ ಬಳಕೆ ಬರುವುದಕ್ಕೆ ಮುನ್ನ, ಹಡಗು, ದೋಣಿಗಳ ನಿರ್ಮಾಣದಲ್ಲಿ ಈ ಮರ ಬಹುವಾಗಿ ಉಪಯೋಗವಾಗುತ್ತಿತ್ತು. ಅಲ್ಲದೆ ಪೀಪಾಯಿಗಳು, ಪೀಠೋಪಕರಣಗಳು, ವ್ಯವಸಾಯದ ಉಪಕರಣಗಳು, ಪೆಟ್ಟಿಗೆ, ಬೀರು, ಸಂಪುಟಗಳು, ಹಿಡಿಗಳು, ಗಣಿಗಳಲ್ಲಿ ಉಪಯೋಗಿಸುವ ಆಸರೆಗಂಬಗಳು, ಬೇಲಿಯ ಕಂಬಗಳು, ಮನೆ ಕಟ್ಟಲು ಉಪಯೋಗಿಸುವ ಹಲಗೆಗಳು, ತೊಲೆಗಳು, ರೈಲೆ ಸ್ಲೀಪರುಗಳು, ಕೊಡೆಗಳ ಹಿಡಿಗಳು, ಮರದ ಸೇತುವೆಗಳು ಇವೆಲ್ಲಕ್ಕೂ ಓಕ್ ಮರ ಬಳಕೆಯಾಗುತ್ತದೆ. ಮೇಲೆ ಹೇಳಿದ ಕೆಲಸಗಳಿಗೆ ಕೆಂಪು ಮತ್ತು ಬಿಳಿಯ ಬಗೆಯ ಓಕುಗಳೆರಡೂ ಬಳಕೆಯಾಗುತ್ತಿದ್ದರೂ ಬಿಳಿಯ ಓಕ್ ಉತ್ತಮ ದರ್ಜೆಯದೆಂದು ಹೆಸರಾಗಿದ್ದು ಅದರ ಉಪಯೋಗ ಹೆಚ್ಚಾಗಿದೆ. ಮುಖ್ಯವಾಗಿ ಬಿಳಿಯ ಓಕುಗಳಾದ ಕ್ವ.ಆಲ್ಬ, ಕ್ವ.ಸ್ಟೆಲ್ಲೇಟ, ಕ್ವ.ವರ್ಜಿನಿಯಾನ, ಕ್ವ.ಮ್ಯಾಕ್ರೊಕಾರ್ಪ, ಕ್ವ.ಮಾಂಟಾನ ಹಾಗೂ ಕೆಂಪು ಓಕ್ಗಳಾದ ಕ್ವ.ವೆಲುಟಿನ, ಕ್ವ.ಬೋರಿಯಾಲಿಸ್, ಕ್ವ.ಶುಮಾರ್ಡಿಯೈ, ಕ್ವ.ನೈಗ್ರ, ಕ್ವ.ಕಾಕ್ಸಿನಿಯ ಮತ್ತು ಭಾರತದ ಕ್ವ. ಡೈಲೆಟೇಟ ಪ್ರಭೇದಗಳನ್ನು ಈ ಕೆಲಸಗಳಿಗೆ ಉಪಯೋಗಿಸುತ್ತಾರೆ. ಇಂಗ್ಲೆಂಡಿನಲ್ಲಿ ಬೆಳೆಯುವ ಕ್ವ.ರೋಬರ್ ಮತ್ತು ಕ್ವ.ಪೆಟ್ರಿಯ ಇವನ್ನೂ ಬಳಸುತ್ತಾರೆ.

ಆರ್ಥಿಕವಾಗಿ ಅತಿಮುಖ್ಯವಾದ ಇನ್ನೊಂದು ಪ್ರಭೇದವೆಂದರೆ ಕ್ವ.ಸೂಬರ್ ಎಂಬುದು, ಕಾರ್ಕ್ ಓಕ್ ಎಂಬ ಸಾಮಾನ್ಯ ಹೆಸರುಳ್ಳ ಈ ಮರದಿಂದ ಕಾರ್ಕನ್ನು ತೆಗೆಯುತ್ತಾರೆ. ಸೀಸೆಗಳಿಗೆ ಬಿರಟೆಗಳು, ಪಾದರಕ್ಷೆಗಳ ತಳಗಳು, ಕೃತಕ ಕೈಕಾಲುಗಳು ಮತ್ತು ಲಿನೋಲಿಯಂ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಬಹಳವಾಗಿ ಉಪಯೋಗಿಸುತ್ತಾರೆ. ಈ ಮರವನ್ನು ಯುರೋಪಿನ ಪೋರ್ಚುಗಲ್, ಸ್ಪೇನ್, ಫ್ರಾನ್ಸ್‌, ಇಟಲಿಗಳಲ್ಲಿ ಮತ್ತು ಉತ್ತರ ಆಫ್ರಿಕ ದೇಶಗಳಾದ ಆಲ್ಜೀರಿಯ ಮೊರಕೊ ಮತ್ತು ಟ್ಯೂನಿಸಿಯಗಳಲ್ಲಿ ವಿಸ್ತಾರವಾಗಿ ಬೆಳೆಸುತ್ತಾರೆ. ಈ ದೇಶಗಳಲ್ಲಿನ ಕಾರ್ಕ್ ಮರಗಳ ಕಾಡುಗಳು ವಿಸ್ತೀರ್ಣ ಸುಮಾರು 2 ದಶಲಕ್ಷ ಹೆಕ್ಟೇರುಗಳು ಮತ್ತು ಕಾರ್ಕಿನ ವಾರ್ಷಿಕ ಉತ್ಪನ್ನ ಸುಮಾರು 3,40,000 ಮೆಟ್ರಿಕ್ ಟನ್ನುಗಳು. ಇದರಲ್ಲಿನ ಸುಮಾರು ಅರ್ಧಪಾಲು ಪೋರ್ಚುಗಲ್ಲಿನಿಂದ ಬರುತ್ತವೆ. ಭಾರತ ವರ್ಷಕ್ಕೆ ಸುಮಾರು 2-3 ಮಿಲಿಯನ್ ರೂಪಾಯಿಗಳ ಬೆಲೆಬಾಳುವ 3,000 ಟನ್ ಕಾರ್ಕನ್ನು ಆಮದು ಮಾಡಿಕೊಳ್ಳುತ್ತದೆ. ಇಷ್ಟು ಮುಖ್ಯವಾದ ಕಾರ್ಕ್ ಓಕ್ ಮರವನ್ನು ಭಾರತದ ನೀಲಗಿರಿಯಲ್ಲಿ ಬೆಳೆಸುವ ಪ್ರಯತ್ನ ನಡೆಸಿದ್ದಾರೆ (ನೋಡಿ- ಕಾರ್ಕ್).

ಇನ್ನು ಕೆಲವು ಪ್ರಭೇದಗಳಾದ ಕ್ವ.ಏಜಿಲೋಪ್ಸ್‌, ಕ್ವ.ಮಾಂಟಾನ, ಕ್ವ.ವೆಲುಟಿನ ಹಾಗೂ ಭಾರತದಲ್ಲಿ ಬೆಳೆಯುವ ಕ್ವ.ಇನ್ಕಾನ, ಕ್ವ.ಇನ್ಫೆಕ್ಟೋರಿಯ ಹಾಗೂ ಕ್ವ.ಲ್ಯಾಮೆಲ್ಲೋಸ ಇವುಗಳ ತೊಗಟೆಯಿಂದ ಚರ್ಮ ಹದ ಮಾಡುವುದಕ್ಕೆ ಉಪಯೋಗಿಸುವ ಟ್ಯಾನಿನ್ ಎಂಬ ವಸ್ತುವನ್ನು ತೆಗೆಯುತ್ತಾರೆ.

ಓಕ್ ಮರದ ಕಾಯಿಗಳು ಕಾಡಿನ ಸಣ್ಣಪುಟ್ಟ ಮೃಗಗಳ ಪ್ರಧಾನವಾದ ಆಹಾರ; ಅಲ್ಲದೆ ಅವುಗಳಲ್ಲಿನ ಅಧಿಕ ಪೌಷ್ಟಿಕಾಂಶದಿಂದಾಗಿ ಹಂದಿಗಳಿಗೆ ಆಹಾರವಾಗಿಯೂ ಉಪಯೋಗಿಸುತ್ತಾರೆ.

ಹಲವಾರು ಪ್ರಭೇದಗಳನ್ನು ನೆರಳಿಗಾಗಿ ಮತ್ತು ಶೋಭೆಗೆಂದು ಇಂಗ್ಲೆಂಡು, ಅಮೆರಿಕಗಳಲ್ಲಿ ಉದ್ಯಾನಗಳಲ್ಲೂ ರಸ್ತೆಗಳ ಅಂಚಿನಲ್ಲೂ ಬೆಳಸುತ್ತಾರೆ. ಈ ರೀತಿ ಬೆಳೆಸುವ ಓಕ್ ಮರಗಳಲ್ಲಿ ಕ್ವ.ಇಲೆಕ್ಸ್‌, ಕ್ವ.ಸೆರ್ರಿಸ್, ಕೆವ.ಬೋರಿಯಾಲಿಸ್, ಕ್ವ.ಅಗ್ರಪೋಲಿಯ, ಕ್ವ.ಕಾಕ್ಸಿನಿಯ, ಕ್ವ.ಪಾಲುಸ್ಟ್ರಿಸ್, ಕ್ವ.ಕ್ರೈಸೋಲೆಪಿಸ್, ಕ್ವ.ಮ್ಯಾಕ್ರೊಕಾರ್ಪ, ಕ್ವ.ನೈಗ್ರ ಮತ್ತು ಕ್ವ.ವೆಲುಟಿನ ಇವು ಮುಖ್ಯ ಪ್ರಭೇದಗಳು.

ಭಾರತದಲ್ಲಿ ಬೆಳೆಯುವ ಕ್ವಕ್ಸ್‌ ಇನ್ಫೆಕ್ಟೋರಿಯ ಎಂಬ ಓಕ್ ಪ್ರಭೇದದ ರೆಂಬೆಗಳಲ್ಲಿ ಒಂದು ಜಾತಿಯ ಕೀಟ ಮೊಟ್ಟೆಗಳನ್ನಿಟ್ಟು. ಆ ರೆಂಬೆಗಳಲ್ಲಿ ಒಂದು ಬಗೆಯ ಸಣ್ಣ ಚೆಂಡಿನಂಥ ಗಂಟುಗಳು ಏಳುವಂತೆ ಮಾಡುತ್ತದೆ. ಈ ಗಂಟುಗಳಿಂದ ಟ್ಯಾನಿನ್ ಮತ್ತು ಹಳದಿ ಬಣ್ಣವನ್ನು ತೆಗೆಯುತ್ತಾರೆ. ಈ ಗಂಟುಗಳನ್ನು ಮೂಲವ್ಯಾಧಿ ರೋಗಕ್ಕೆ ಮುಲಾಮಿನ ತಯಾರಿಕೆಯಲ್ಲೂ ಅಜೀರ್ಣರೋಗಗಳ ಔಷಧಗಳಿಗೂ ಉಪಯೋಗಿಸುತ್ತಾರೆ.

ಓಕ್ ಮರದ ಹಲವಾರು ಕಳಪೆ ಭಾಗಗಳನ್ನು ಉರುವಲಾಗಿಯೂ ಇದ್ದಲಿನ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಕೆಲವು ಬಗೆಯ ಓಕ್ ಎಲೆಗಳನ್ನು ದನಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಕ್ವರ್ಕಸ್ ಇನ್ಕಾನ ಪ್ರಭೇದದ ಕಾಯಿಗಳನ್ನು ಔಷಧಿಯಾಗಿ, ಗುಹ್ಯರೋಗ ಚಿಕಿತ್ಸೆಯಲ್ಲಿಯೂ ಅಜೀರ್ಣರೋಗಗಳ ಚಿಕಿತ್ಸೆಯಲ್ಲಿಯೂ ಮೂತ್ರೋತ್ತೇಜಕವಾಗಿಯೂ ಉಪಯೋಗಿಸುತ್ತಾರೆ.

ಗ್ರೀಷ್ಮ ಋತುವಿನಲ್ಲಿ ಬಹುಪಾಲು ಬಗೆಯ ಓಕುಗಳು ತಮ್ಮ ಎಲೆಗಳ ಬಣ್ಣವನ್ನು ಬದಲಿಸುತ್ತವೆ. ಅಲ್ಲಿಯವರೆಗೂ ಹಸಿರು ಬಣ್ಣದಿಂದ ಕೂಡಿದ್ದ ಎಲೆಗಳು ಕಿತ್ತಳೆ, ಕಡುಗೆಂಪು, ಹಳದಿ, ನೇರಿಳೆ, ಕಂದು ಹೀಗೆ ಹಲವಾರು ಬಣ್ಣಗಳನ್ನು ತಾಳುತ್ತ ಹೋಗುತ್ತವೆ. ಈ ನೋಟವಂತೂ ಅತಿರಮ್ಯವಾಗಿರತ್ತದೆ.

ಬೀಜಗಳನ್ನು ಅಥವಾ ತುಂಡುಗಳನ್ನು ನೆಟ್ಟು ಓಕ್ ಮರಗಳನ್ನು ಅಭಿವೃದ್ಧಿಗೊಳಿಸುತ್ತಾರೆ. ಅಲ್ಲದೆ ತೋಟಗಳಲ್ಲಿ ಬೆಳೆಸುವುದಕ್ಕೆ ಬೇಕಾದ ಕೆಲವು ತಳಿಗಳನ್ನು ಗ್ರಾಫ್ಟ್‌ ಮಾಡಿಯೊ ಲೇಯರುಗಳ ಮೂಲಕವೊ ಪಡೆದು ಬೆಳೆಸುತ್ತಾರೆ.

ಓಕ್ ಮರಗಳಿಗೆ ಹಲವಾರು ಬಗೆಯ ರೋಗಗಳು, ಪೀಡೆಗಳು ಅಂಟುತ್ತವೆ, ಮೈಕ್ರೋಸ್ಫೀರ ಕ್ವರ್ಸಿನ ಎಂಬ ಬೂಷ್ಟು ರೋಗ ತಗುಲಿ ಎಲೆಗಳ ಮೇಲೆ ಬಿಳಿಯ ಚುಕ್ಕಿಗಳನ್ನು, ಮಚ್ಚೆಗಳನ್ನು ಉಂಟುಮಾಡುತ್ತವೆ. ಕೆಲವು ಬಾರಿ ರೋಗ ಉಲ್ಬಣಗೊಂಡು ಓಕ್ ಮರಗಳು ಸಾಯುವುದೂ ಉಂಟು, ಈ ರೋಗವನ್ನು ಬೋರ್ಡೊ ಮಿಶ್ರಣವನ್ನು ಸಿಂಪಡಿಸುವುದರಿಂದ ತಡೆಯಬಹುದು. ಕೆಲವು ಓಕ್ ಮರಗಳ ಬೇರಿಗೆ ರೊಸೆಲಿನ ಕ್ವರ್ಸಿನ ಎಂಬ ಇನ್ನೊಂದು ಬಗೆಯ ಬೂಷ್ಟು ರೋಗವೂ ಅಂಟುತ್ತದೆ.

ಕೆಲವು ಜಾತಿಯ ಪತಂಗಗಳ ಕಂಬಳಿಹುಳುಗಳು, ಡಿಂಭಗಳು ಎಲೆಗಳನ್ನು ಸಂಪುರ್ಣವಾಗಿ ತಿಂದುಹಾಕಿ ಮರಗಳಿಗೆ ವಿಶೇಷ ಹಾನಿಯನ್ನುಂಟುಮಾಡುತ್ತವೆ. ಟಾಟಿರ್ರ್‌ಕ್ಸ್‌ ವಿರಿಡಾನ ಎಂಬ ಪತಂಗ ಬ್ರಿಟನ್ನಲ್ಲಿ ಓಕ್ ಮರಗಳಿಗೆ ತಗುಲಿ ಅವುಗಳ ಎಲೆಗಳು ಸುರುಟಿಕೊಳ್ಳುವಂತೆ ಮಾಡಿ ನಷ್ಟವನ್ನುಂಟುಮಾಡುತ್ತದೆ. ಇವೆಲ್ಲವನ್ನೂ ವಿಮಾನಗಳ ಮೂಲಕ ಕೀಟರೋಧಕಗಳನ್ನು ಸಿಂಪಡಿಸುವುದರಿಂದ ತಡೆಗಟ್ಟಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಓಕ್&oldid=1241545" ಇಂದ ಪಡೆಯಲ್ಪಟ್ಟಿದೆ