ಇಂಗ್ಲೆಂಡ್

ಉತ್ತರ ಯುರೋಪ್ ಖಂಡದಲ್ಲಿರುವ ಯುನೈಟೆಡ್ ಕಿಂಗ್ಡಮ್ ಓಕ್ಕೂಟದಲ್ಲಿರುವ ಒಂದು ರಾಷ್ಟ್ರ
ವಾಯುವ್ಯ ಯುರೋಪ್ ಖಂಡದಲ್ಲಿರುವ ಬ್ರಿಟಿಷ್ ದ್ವೀಪಗಳ ಹಲವು ವಿಂಗಡನೆಗಳ ವಿವರಣೆಗೆ ಈ ಲೇಖನವನ್ನು ನೋಡಿ
ಇಂಗ್ಲೆಂಡ್ ದೇಶವನ್ನು ಒಳಗೊಂಡ ರಾಜಕೀಯ ಸಂಘಟನೆಯಾದ ಯುನೈಟೆಡ್ ಕಿಂಗ್ಡಮ್ ಬಗ್ಗೆ ಮಾಹಿತಿಗೆ ಈ ಲೇಖನವನ್ನು ನೋಡಿ


ಯುನೈಟೆಡ್ ಕಿಂಗ್ಡಮ್ ರಾಜಕೀಯ ಸಂಘಟನೆಯ ನಾಲ್ಕು ದೇಶಗಳಲ್ಲಿ ಅತಿ ದೊಡ್ಡ ಮತ್ತು ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ ಇಂಗ್ಲೆಂಡ್.[][][] ಯೂರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಬ್ರಿಟಿಷ್ ದ್ವೀಪಗಳಲ್ಲಿ ಆತಿ ದೊಡ್ಡದಾದ ಗ್ರೇಟ್ ಬ್ರಿಟನ್ ದ್ವೀಪದ ಮೂರು ಘಟಕಗಳಲ್ಲಿ ಅತ್ಯಂತ ವಿಸ್ತಾರವಾದ ದೇಶ.

ಇಂಗ್ಲೆಂಡ್
Vertical red cross on a white background
Flag
Motto: 
Anthem: 
Location of England (dark green)

– in Europe (green & dark grey)
– in the United Kingdom (green)

Capitalಲಂಡನ್
Largest cityರಾಜಧಾನಿ
Official languagesEnglish (de facto)
Recognised regional languagesCornish
Ethnic groups
Demonym(s)English
Area
• Total
130,395 km2 (50,346 sq mi)
Population
• 2011 census
53,012,456[]
• Density
407/km2 (1,054.1/sq mi)
GDP (nominal)2009 estimate
• Total
$2.68 trillion
• Per capita
$50,566
Currencyಪೌಂಡ್ ಸ್ಟರ್ಲಿಂಗ್ (GBP)
Time zoneUTC0 (GMT)
• Summer (DST)
UTC+1 (BST)
Date formatdd/mm/yyyy (AD)
Driving sideleft
Calling code+44
Internet TLD.uk

ಭೌಗೋಳಿಕ ನಿವೇಶನ

ಬದಲಾಯಿಸಿ

ಇದರ ದಕ್ಷಿಣಕ್ಕೆ ಇಂಗ್ಲಿಷ್ ಕಡಲ್ಗಾಲುವೆ ಮತ್ತು ಡೋವರ್ ಜಲಸಂಧಿ ; ಪೂರ್ವಕ್ಕೆ ಉತ್ತರ ಸಮುದ್ರ ; ಉತ್ತರಕ್ಕೆ ಸ್ಕಾಟ್ಲೆಂಡ್ ; ಪಶ್ಚಿಮಕ್ಕೆ ಐರಿಷ್ ಸಮುದ್ರ ಹಾಗೂ ವೇಲ್ಸ್ ಸಂಸ್ಥಾನ, ಬ್ರಿಸ್ಟಲ್ ಕಡಲ್ಗಾಲುವೆ ಮತ್ತು ಅಟ್ಲಾಂಟಿಕ್ ಮಹಾಸಾಗರ.

ವಿಸ್ತೀರ್ಣ

ಬದಲಾಯಿಸಿ

ಇದರ ವಿಸ್ತೀರ್ಣ 1.30.360 ಚ,ಕಿ.ಮೀ. (50,869 ಚ.ಮೈ.) ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತರಾಜ್ಯದಲ್ಲೇ (ಯುನೈಟೆಡ್ ಕಿಂಗ್‍ಡಮ್) ಅತ್ಯಂತ ದೊಡ್ಡ ಘಟಕವಾದ ಇಂಗ್ಲೆಂಡು ಉಳಿದ ಎಲ್ಲ ಘಟಕಗಳಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೆ ಕೈಗಾರಿಕೆಯಲ್ಲೂ ಹೆಚ್ಚು ಮುಂದುವರಿದಿದೆ. ಲಂಡನ್ ಇದರ ರಾಜಧಾನಿ. ಯೂರೋಪ್ ಖಂಡಕ್ಕೂ ಇಂಗ್ಲೆಂಡಿಗೂ ನಡುವೆ ಕಡಲಿರುವುದಾದರೂ ಇದರ ದಕ್ಷಿಣ ಹಾಗೂ ನೈಋತ್ಯತೀರಕ್ಕೂ ಯೂರೋಪ್ ಖಂಡಪ್ರದೇಶದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸಿಗೂ ಬಹಳ ಸಮೀಪ. ಡೋವರ್ ಜಲಸಂಧಿಯಂತೂ ಬಹಳ ಕಿರಿದು. ಇದರ ಅಗಲ ಕೇವಲ 21 ಮೈಲಿ. ಆದರೆ ಈ ಪ್ರದೇಶದಲ್ಲಿ ಬೀಸುವ ಕ್ಲುಪ್ತ ಮಾರುತಗಳೂ ಸಮುದ್ರದ ಉಬ್ಬರವಿಳಿತಗಳೂ ಶತ್ರುನೌಕೆಗಳಿಗೆ ಪ್ರತಿಕೂಲಕರವೆನಿಸಿದೆ. ಇಂಗ್ಲೆಂಡನ್ನು ಆಕ್ರಮಿಸಲೆಳಿಸಿದ ಫ್ರಾನ್ಸ್, ಸ್ಪೇನ್ ಮುಂತಾದ ದೇಶಗಳ ಪ್ರಯತ್ನಗಳು ಈ ಹಿಂದೆ ವಿಫಲವಾಗಲು ಈ ಸಮುದ್ರವೇ ಅಡ್ಡಿ ಆದರೆ ಇತರ ದೇಶಗಳೊಂದಿಗೆ ವಾಣಿಜ್ಯವೇ ಮುಂತಾದ ಸ್ನೇಹಸಂಬಂಧಗಳನ್ನು ಬೆಳೆಸುವುದಕ್ಕೂ ಸಾಮ್ರಾಜ್ಯ ಕಟ್ಟುವುದಕ್ಕೂ ಈ ಸಮುದ್ರ ಅಡ್ಡಿಯಾಗುವ ಬದಲು ಅನುಕೂಲಕರವಾಗಿಯೇ ಪರಿಣಮಿಸಿದೆ.

ಪ್ರಾಕೃತಿಕ ಭೂವಿವರಣೆ

ಬದಲಾಯಿಸಿ
 
Skiddaw massif, seen from Walla Crag in the Lake District

ಇಂಗ್ಲೆಂಡಿನ ಏಳಿಗೆಗೆ ಇದರ ಹಿತಕರ ವಾಯುಗುಣವೂ ಒಂದು ಕಾರಣ ಯಾವ ಪ್ರದೇಶವೂ ಸಮುದ್ರಕ್ಕಿಂತ ತುಂಬ ದೂರದಲ್ಲಿಲ್ಲ. ಪಶ್ಚಿಮತೀರದ ಹತ್ತಿರ ಗಲ್ಫ್ ಸ್ಟ್ರೀಂ ಎಂಬ ಉಷ್ಣೋದಕ ಪ್ರವಾಹ ಹರಿಯುತ್ತದೆ. ಚಳಿಗಾಲದಲ್ಲಿ ನೈಋತ್ಯದಿಂದಲೂ ಬೇಸಗೆಯಲ್ಲಿ ಪಶ್ಚಿಮದಿಂದಲೂ ಬೀಸುವ ಮಾರುತಗಳು ಬೇಸಗೆಯ ಸೆಕೆಯನ್ನೂ ಚಳಿಗಾಲದ ಚಳಿಯನ್ನೂ ತಗ್ಗಿಸುತ್ತವೆ. ಪೂರ್ವಕ್ಕಿಂತ ಪಶ್ಚಿಮದ ಕಡೆಯ ಪ್ರದೇಶ ಹೆಚ್ಚು ಹಿತಕರ. ಪಶ್ಚಿಮದ ಮಾರುತಗಳು ವಾಯುಗುಣವನ್ನು ಸಮಧಾತುವಾಗಿ ಇಡುವುದರ ಜೊತೆಗೆ ಪಶ್ಚ್ಚಿಮತೀರಕ್ಕೆ ಹೆಚ್ಚು ಮಳೆ ಬೀಳಿಸುತ್ತವೆ. ಇಂಗ್ಲೆಂಡು ಸಾಮಾನ್ಯವಾಗಿ ತಗ್ಗುಪ್ರದೇಶವಾದ್ದರಿಂದ ಒಟ್ಟಿನಲ್ಲಿ ಇಲ್ಲಿ ಮಳೆ ಕಡಿಮೆ ಪೂರ್ವದಲ್ಲಿ ವರ್ಷಕ್ಕೆ 30" ಗಿಂತ ಕಡಿಮೆ ಮಳೆ ಬೀಳುತ್ತದೆ. ಇದರಿಂದ ಗೋಧಿ ಮುಂತಾದ ಧಾನ್ಯಗಳು ಮಾಗುವುದು ಸಾಧ್ಯ. ಥೇಮ್ಸ್ ಆಳಿವೆಯ ಬಳಿ ಬೀಳುವ ಮಳೆಯ ಪ್ರಮಾಣವೇ ಕನಿಷ್ಠ. ಅಲ್ಲಿ ವರ್ಷಕ್ಕೆ 13" ಮಳೆ ಬೀಳುತ್ತದೆ ಲಂಡನ್ನಿನಿಂದ ಪಶ್ಚಿಮಕ್ಕೂ ದಕ್ಷಿಣಕ್ಕೂ ಕೆಲವೇ ಮೈಲಿಗಳಾಚೆಗೆ ವರ್ಷಕ್ಕೆ 30" ಮಳೆ ಆಗುತ್ತದೆ. ಪರ್ವತಪ್ರದೇಶಗಳಲ್ಲಿ 40"-45" ನೈಋತ್ಯ ಪರ್ಯಾಯ ದ್ವೀಪದ ಡಾರ್ಟ್ ಮೂರ್ ಎಂಬಲ್ಲಿ 60" ಮಳೆಯಾಗುತ್ತದೆ. ಉತ್ತರದ ಪನ್ನೈನ್ ಪರ್ವತ ಪ್ರದೇಶವೇ ಅತ್ಯಂತ ಹೆಚ್ಚಿನ ಮಳೆಯಾಗುವ ಪ್ರದೇಶ. ಹೆಚ್ಚು ಉಷ್ಣತೆ ಇಲ್ಲದ್ದರಿಂದ ಮಳೆಯ ನೀರು ಬೇಗ ಆವಿಯಾಗದೆ ನೆಲದಲ್ಲೇ ಊರುತ್ತದೆ. ಇದರಿಂದ ಸಸ್ಯಗಳ ಬೆಳವಣಿಗೆಗೆ ಅನುಕೂಲ. ಇಂಗ್ಲೆಂಡಿನ ದಕ್ಷಿಣಭಾಗದಲ್ಲಿ ದಿನಕ್ಕೆ ಸುಮಾರು ಐದು ಗಂಟೆ ಬಿಸಿಲಿರುತ್ತದೆ. ಉತ್ತರದಲ್ಲೂ ಮಧ್ಯಪ್ರದೇಶದಲ್ಲೂ ನಾಲ್ಕು ಗಂಟೆಗಿಂತ ಕಡಿಮೆ. ಪಶ್ಚಿಮದಲ್ಲಿ ಚಳಿಗಾಲದಲ್ಲಿ ಕೊದರೆಯುವ ಚಳಿಯಿರುವುದಿಲ್ಲ. ಉತ್ತರಕ್ಕಿಂತ ದಕ್ಷಿಣದಲ್ಲಿ ಬೇಸಗೆಯ ಚುರುಕು ಜಾಸ್ತಿ.

 
Terrain of Dartmoor, Devon

ಇಂಗ್ಲೆಂಡಿನಲ್ಲಿ ವ್ಯಾಪಕವಾದ ಪರ್ವತಪ್ರದೇಶಗಳಿಲ್ಲ. ಆದರೆ ಅಲ್ಲಿ ಮಟ್ಟಸವಾದ ಬಯಲುಗಳೂ ಇಲ್ಲ. ದೇಶದ ಬಹುಭಾಗ ಸ್ವಲ್ಪ ಇಳಿಜಾರಾಗಿದೆ. ಇಡೀ ಬ್ರಿಟನ್ನಿನ ಕರಾವಳಿಯಂತೆ ಇಂಗ್ಲೆಂಡಿನ ಕರಾವಳಿಯೂ ವೈವಿಧ್ಯಮಯ. ನದಿಗಳು ತಮ್ಮ ಮುಖದ ಬಳಿ ತಂದು ತುಂಬುವ ಮಣ್ಣನ್ನು ಕಡಲಿನ ಉಬ್ಬರವಿಳಿತಗಳು ಕೊಚ್ಚಿಹಾಕುತ್ತಿರುತ್ತವೆ. ಆದ್ದರಿಂದ ನದಿಗಳು ಸಮುದ್ರವನ್ನು ಕೂಡುವೆಡೆಗಳಲ್ಲಿ ಅಳಿವೆಗಳಾಗಿವೆ. ಇವು ಬಂದರುಗಳಿಗೆ ಬಹಳ ಅನುಕೂಲಕರ. ಪೂರ್ವತೀರದಲ್ಲಿ ಉತ್ತರದ ಟೈನ್ ನದಿಯ ಮುಖದ ಬಳಿಯಲ್ಲಿ ನ್ಯೂಕ್ಯಾಸಲ್ ಎಂಬ ರೇವುಪಟ್ಟಣವಿದೆ. ವೇರ್ ನದಿಯ ಮುಖದಲ್ಲಿ ಸಂಡರ್‍ಲೆಂಡ್ ಎಂಬ ಪಟ್ಟಣವಿದೆ. ಟೀಸ್ ಮುಖದ ಬಳಿಯಲ್ಲಿ ಮಿಡ್ಲ್ಸ್ ಬರೊ ಎಂಬ ಪಟ್ಟಣವಿದೆ. ಇದು ಬಹಳ ದೊಡ್ಡದಾದ ಕಬ್ಬಿಣ-ಉಕ್ಕು ಕೈಗಾರಿಕೆಯ ಕೇಂದ್ರ. ಈಚೆಗೆ ಈ ಪ್ರದೇಶದಲ್ಲಿ ಅನೇಕ ರಾಸಾಯನಿಕ ಕೈಗಾರಿಕೆಗಳ ನಗರಗಳು ಎದ್ದಿವೆ. ಇವುಗಳಲ್ಲಿ ಬಿಲ್ಲಿಂಗ್ ಹ್ಯಾಂ ಎಂಬುದು ಮುಖ್ಯ. ಹಂಬರ್ ನದಿಯ ಮುಖದಲ್ಲಿ ಹಲ್ ರೇವುಪಟ್ಟಣವಿದೆ. ಢೇಮ್ಸ ನದಿಯ ಅಳಿವೆಯ ಮೇಲಂತೂ ಬ್ರಿಟನ್ನಿನ ಅತ್ಯಂತ ದೊಡ್ಡ ನಗರ ಹಾಗೂ ರೇವುಪಟ್ಟಣವಾದ ಲಂಡನ್ ಇದೆ. ಬಂಡೆಗಳಿಲ್ಲದ ಈ ನದಿಯ ಪಾತ್ರದ ಉದ್ದಕ್ಕೂ ಸದಾ ಹೂಳು ತೆಗೆಸುತ್ತ್ತಿರುವುದರಿಂದ ಸಾಗರಗಾಮಿ ಹಡಗುಗಳು ಲಂಡನ್ನಿನ ಹೊರ ರೇವುಪಟ್ಟಣವಾದ ಟಿಲ್‍ಬರಿಯವರೆಗೂ ಬರುತ್ತವೆ. ಸಾಗರಕ್ಕೆ ಕೊಂಡೊಯ್ಯುವ ಹಡಗುಗಳು ಲಂಡನ್ನಿನ ವಕ್ಷಸ್ಥಲವನ್ನೇ ಪ್ರವೇಶಿಸುತ್ತವೆ. ದಕ್ಷಿಣದಲ್ಲಿ ಕೆಲವು ಕಿರಿ ಆಳದ ಕೊಲ್ಲಿಗಳಿವೆ. ಇವುಗಳಲ್ಲಿ ಎರಡರ ಮೇಲೆ ಪೋತ್ರ್ಸ್‍ಮತ್ ಮತ್ತು ಲ್ಯಾಂಗ್ಸ್‍ಟನ್ ರೇವುಗಳಿವೆ. ಸೌತಾಂಪ್ಟನ್ ವಾಟರ್ ಎಂಬಲ್ಲಿರುವ ಸೌತಾಂಪ್ಟನ್ ಬಂದರು ಬಲು ದೊಡ್ಡದು. ಪ್ಲಿಮತ್ ಮತ್ತು ಡೇವನ್‍ಪೋರ್ಟ್ ಇನ್ನೆರಡು ರೇವುಗಳು. ವಾಯುವ್ಯದಲ್ಲಿ ಡೀನದಿಯ ಅಳಿವೆ ಆಳವಿಲ್ಲ. ಇಲ್ಲಿನ ಚೆಸ್ಟರ್ ಎಂಬ ರೇವುಪಟ್ಟಣ ರೋಮನ್ ಆಧಿಪತ್ಯದ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಮರ್ಸಿನದಿಯ ಮುಖದಲ್ಲಿ ಲಿವರ್‍ಪೂಲ್, ಬರ್ಕನ್‍ಹೆಡ್ ಬಂದರಿವೆ. ಇವು ಲಂಡನ್ನಿಗೂ ಸವಾಲು ಹಾಕುವಷ್ಟು ಉತ್ತಮವಾಗಿವೆ.

ಭೂ ಇತಿಹಾಸ

ಬದಲಾಯಿಸಿ
 
Stonehenge, a Neolithic monument

ಭೂ ಇತಿಹಾಸದ ಅಧ್ಯಯನದಲ್ಲಿ ಇಂಗ್ಲೆಂಡಿಗೆ (ವೇಲ್ಸ್ ಸಹ ಸೇರಿ) ಒಂದು ವಿಶಿಷ್ಟ ಸ್ಥಾನವಿದೆ. ಭೂ ಇತಿಹಾಸದ ವಿವಿಧ ಘಟ್ಟಗಳ ಎಲ್ಲ ಶಿಲಾಪ್ರಸ್ತರಗಳನ್ನು ನಾವಿಲ್ಲಿ ನೋಡಬಹುದು. ಬಹುಶ: ಇತರ ಯಾವ ಭಾಗದಲ್ಲೂ ಈ ಬಗೆಯ ಶಿಲಾಶ್ರೇಣಿಗಳನ್ನು ನೋಡಲಾರೆವು. ಆಂಗ್ಲಿಸಿಯಿಂದ ಲಂಡನ್ನಿಗೆ ನೇರ ಹಾದುಹೋದಲ್ಲಿ ಆರ್ಷೇಯ (ಆರ್ಕೀಯನ್) ಶಿಲೆಗಳಿಂದ ಮೊದಲಾಗಿ ಅನುಕ್ರಮವಾಗಿ ಎಲ್ಲ ಭೂಯುಗಗಳ ಶಿಲಾಪ್ರಸ್ತರಗಳು-ಮೆಯೊಸೀನ್ ಕಲ್ಪವನ್ನು ಬಿಟ್ಟು (ಆಗ ಇಡೀ ಇಂಗ್ಲೆಂಡ್ ಭೂ ಪ್ರದೇಶವಾಗಿತ್ತು). ಒಂದಾದ ಮೇಲೊಂದು ಗೋಚರಗೊಳ್ಳುತ್ತ ಇಡೀ ಭೂ ಇತಿಹಾಸದ ಎಲ್ಲ ಪುಟಗಳನ್ನೂ ಒಂದೂ ತಪ್ಪಿಹೋಗದಂತೆ ತಿರುವಿ ಹಾಕಿದ ಅನುಭವವಾಗುತ್ತದೆ. ಹೀಗೆ ಕಂಡು ಬರುವ ವಿವಿಧ ಭೂಯುಗಗಳ ಶಿಲಾಶ್ರೇಣಿಗಳ ಸೂಕ್ಷ್ಮ ಪರಿಚಯವನ್ನಿಲ್ಲಿ ಕೊಟ್ಟಿದೆ.

ಪ್ರಿಕೇಂಬ್ರಿಯನ್ ಕಲ್ಪ (600 ದಶಲಕ್ಷ ವರ್ಷಗಳಿಂದಲೂ ಹಿಂದೆ)

ಬದಲಾಯಿಸಿ

ಈ ಕಲ್ಪದ ಶಿಲೆಗಳನ್ನು ಆಂಗ್ಲಿಸಿ, ವೇಲ್ಸಿನ ನೆವಿನ್ ಮತ್ತು ಬಾಡ್ರ್ಸೆ ದ್ವೀಪಗಳ ನಡುವಿನ ಲೆನ್ ಪರ್ಯಾಯದ್ವೀಪ, ಲಾಂಗ್‍ಮಿಂಡ್ ಶ್ರೇಣಿ. ಶೆಕಿನ್ ಬೆಟ್ಟಗಳು, ಚಾರ್ನ್‍ವುಡ್ ಮತ್ತು ಮಾಲ್‍ವೆರ್ನುಗಳಲ್ಲಿ ನೋಡಬಹುದು. ಇವುಗಳಲ್ಲಿ ಬಹುಭಾಗ ನೈಸ್ (ಗೀರು) ಶಿಲೆಗಳು. ಇವು ಶ್ರೇಣಿಯ ಅತ್ಯಂತ ಹಿರಿದಾದ ಶಿಲೆಗಳೂ ಹೌದು. ಮುಂದೆ ತಲೆದೋರಿದ ಭೂ ಚಟುವಟಿಕೆಗಳಿಗೆ ಒಳಗಾಗಿ ನೈಸುಗಳು ಅಲ್ಲಲ್ಲೆ ಮಡಿಸಿ ಹೋಗಿವೆ. ಸವೆದ ಶಿಲೆಗಳ ಮೇಲೆ ಚಾರ್ನ್‍ವುಡ್, ಮಾಲ್‍ವೆರ್ನ್ ಮುಂತಾದ ಕಡೆಗಳಲ್ಲಿ ಜ್ವಾಲಾಮುಖಜ ಶಿಲಾಪ್ರಸ್ತರಗಳಿವೆ. ಲಾಂಗ್‍ಮಿಂಡ್ ಮತ್ತು ಇತರ ಕೆಲವಡೆಗಳಲ್ಲಿ ಕಂಡುಬರುವ ಗ್ರೀಟ್ ಮತ್ತು ಜೇಡು ಶಿಲಾಪ್ರಸ್ತರಗಳು ಈ ಯುಗದ ಜಲಜಶಿಲೆಗಳು ಸ್ಕಾಟ್ಲೆಂಡಿನ ಟಾರಿಡೋನಿಯನ್ ಜಲಜಶಿಲೆಗಳಿಗೆ ಸರಿಸಮವೆಂದು ಪರಿಗಣಿತವಾಗಿವೆ. ಒಟ್ಟಿನಲ್ಲಿ ಈ ಕಲ್ಪದ ಶಿಲೆಗಳು ಇಡೀ ಇಂಗ್ಲೆಂಡ್-ವೇಲ್ಸ್ ಉದ್ದಕ್ಕೂ ಅಂತರ್ಗತವಾಗಿದ್ದು ಅವುಗಳ ಮೇಲೆ ಇತರ ಭೂಯುಗಗಳ ಶಿಲಾಪ್ರಸ್ತರಗಳು ನಿಕ್ಷೇಪಗೊಂಡುವೆಂದೂ ಅಭಿಪ್ರಾಯಪಡಲಾಗಿದೆ. ಬಹುಶಃ ಈ ಭೂಭಾಗ ಉತ್ತರದಲ್ಲಿನ ಶಾಶ್ವತ ಭೂಖಂಡವಾಗಿದ್ದ ಅಟ್ಲಾಂಟಿಸ್ಸಿನ ಆಗ್ನೇಯ ತೀರಪ್ರದೇಶವಾಗಿತ್ತೆಂದೂ ಭೂ ವಿಜ್ಞಾನಿಗಳ ಊಹೆ. ಈ ವಿಶೇಷ ಸನ್ನಿವೇಶದ ಪರಿಣಾಮವಾಗಿಯೇ ಇಂಗ್ಲೆಂಡಿನಲ್ಲಿ ಭೂ ಇತಿಹಾಸದ ಎಲ್ಲ ಹಂತಗಳ ಶಿಲೆಗಳನ್ನೂ ನೋಡಲು ಸಾಧ್ಯವಾಗಿದೆ. ಕೇಂಬ್ರಿಯನ್ ಕಲ್ಪ (500-600 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಪ್ರಿಕೇಂಬ್ರಿಯನ್ ಕಲ್ಪದ ಭೂಭಾಗದ ಸವೆತ ಮತ್ತು ಭೂ ಚಟುವಟಿಕೆಗಳ ಪ್ರಭಾವದಿಂದ ಈ ಕಲ್ಪದಲ್ಲಿ ಇಂಗ್ಲೆಂಡ್ ಅಷ್ಟು ಆಳವಿರದ ಸಮುದ್ರವಾಗಿ ಮಾರ್ಪಟ್ಟಿತು. ಇಲ್ಲಿ ಎಂದಿನಂತೆ ವಿವಿಧ ಜನಜಶಿಲೆಗಳ ಸಂಚಯನ ಮೊದಲಾಯಿತು. ಬಲು ವಿಸ್ತಾರವಾದ ಪ್ರದೇಶದಲ್ಲಿ ದಪ್ಪ ಮರಳು ಶಿಲೆಗಳೂ ಮತ್ತು ಪೆಂಟಿ ಶಿಲೆಗಳೂ ಕೊಂಚ ಆಳವಾದ ಭಾಗಗಳಲ್ಲಿ ಸುಣ್ಣ ಶಿಲೆಯೂ ಶೇಖರಗೊಂಡು ಸಮುದ್ರದ ತಳ ಕ್ರಮೇಣ ಕುಗ್ಗುತ್ತ ಹೋಯಿತು. ಮುಂದೆ ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡುವು. ಈ ಬಗೆಯ ಜಲಜಶಿಲಾಪರಂಪರೆ ಮುಂದೆ ಅನೇಕ ಹಂತಗಳಲ್ಲಿ ತಲೆದೋರಿತು. ಹೀಗಾಗಿ ಯುಗ ಮುಂದುವರೆದಂತೆಲ್ಲ ವೇಲ್ಸ್ ಮತ್ತು ಇಂಗ್ಲೆಂಡಿನ ಬಹುಭಾಗ ಜಲಾಶಯವಾಗಿ ಪರಿವರ್ತಿತವಾಗಿ ನಿಕ್ಷೇಪಗಳು ತಲೆದೋರಿದುವು. ಮೆರಿಯೊನೆತ್ ಮತ್ತು ಡೆನ್‍ಬಿಗ್‍ಷೈರುಗಳ ಕೇಂಬ್ರಿಯನ್ ಶಿಲಾಶ್ರೇಣಿಗಳ ಮುಂದೆ 16,000' ಗಳನ್ನೂ ಮೀರಿದೆ. ಮೆರಿಯೊನೆತ್ತಿನ ಹಾರ್ಲೆಕ್ ಉಬ್ಬಿನಲ್ಲಿ ಈ ಕಲ್ಪದ ಶಿಲೆಗಳು ಬಲು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿವೆ.

ಆರ್ಡೊವಿಶಿಯನ್ ಮತ್ತು ಸೈಲೂರಿಯನ್ ಕಲ್ಪಗಳು (400-500 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಈ ಕಲ್ಪಗಳಲ್ಲಿ ವಿಸ್ತಾರವಾದ ಜಿಯೊಸಿಂಕ್ಲೈನಲ್ ಸಮುದ್ರವಿತ್ತು. ಇದರ ವಾಯವ್ಯದತ್ತ ಉತ್ತರ ಅಟ್ಲಾಂಟಿಕ್ ಶಾಶ್ವತ ಭೂಖಂಡ ಮತ್ತು ಫೆನೊಸ್ಕಾಂಡಿಯಾಗಳಿದ್ದವು. ಈ ಭೂಭಾಗಗಳನ್ನು ನದಿಗಳು ಸವೆಯಿಸಿ ಆ ಮೂಲಕ ಹೊತ್ತು ತಂದ ಶಿಲಾಕಣಗಳನ್ನು ಸಮುದ್ರದಲ್ಲಿ ಕಲೆಹಾಕಿದವು. ನೀರಿನ ಮಟ್ಟದಲ್ಲಿ ಮತ್ತು ಭೂ-ಜಲಗಳ ಹರವಿನಲ್ಲಿ ವ್ಯತ್ಯಾಸಗಳು ಆಗಾಗ ತಲೆದೋರಿ ಶಿಲಾಪ್ರಸ್ತರಗಳಲ್ಲೂ ವೈವಿದ್ಯ ಉಂಟಾಯಿತು. ಆರ್ಡೊವಿಶಿಯನ್ ಕಲ್ಪದ ಅತ್ಯಂತ ಹಳೆಯ ಎರೆನಿಗ್ ಶಿಲಾಶ್ರೇಣಿಯಲ್ಲಿ ಅನುಕ್ರಮವಾಗಿ ಅಡಿಯಿಂದ ದಪ್ಪ ಹರಳಿನ ಗ್ರಿಟ್, ಮರಳುಶಿಲೆ, ಮರುಳುಯುಕ್ತ ಜೇಡು ಶಿಲೆ ಮತ್ತು ಕಟ್ಟಕಡೆಗೆ ಕರಿಯ ಜೇಡಿನ ಶಿಲಾಪ್ರಸ್ತರಗಳನ್ನು; ನೋಡಬಹುದು. ಇವುಗಳ ಅಧ್ಯಯನದಿಂದ ಜಲಾಶಯದ ಆಳ ಹೆಚ್ಚಿದಂತೆಲ್ಲ ಅದರ ಕರಾವಳಿ ದೂರ ದೂರ ಸರಿಯಿತೆಂದು ವ್ಯಕ್ತವಾಗಿದೆ. ಅಲ್ಲದೆ ಮಧ್ಯ ಅರ್ಡೊವಿಶಿಯನ್ ಕಲ್ಪದಲ್ಲಿ ಭೂಭಾಗ ತೀವ್ರಗತಿಯಲ್ಲಿ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ದಪ್ಪ ಕಣಗಳ ಗ್ರಿಟ್ಟುಗಳು ಶೇಖರವಾದುವು. ಮುಂದೆ ಬಾಲಾಹಂತದಲ್ಲಿ ನಯಕಣ ರಚನೆಯ ಮರಳುಶಿಲೆ ಮತ್ತು ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡವು. ಈ ವೇಳೆಗೆ ಮಧ್ಯ ಇಂಗ್ಲೆಂಡಿನ ಭಾಗ ಬಹುಪಾಲು ನೆಲವಾಗಿತ್ತು. ಸೈಲೂರಿಯನ್ ಕಲ್ಪದ ಆದಿಯಲ್ಲಿ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಅವಿರ್ಭಾವ ಮೊದಲಾಯಿತು. ಸಮುದ್ರದ ನಡುವೆ ನೀಳ ದಿಬ್ಬವೊಂದು ಉದ್ಬವಿಸಿ ಜಲಾಶಯ ಎರಡು ಪಾಲಾಯಿತು. ಹೊಸ ಬೆಟ್ಟಗಳ ಸಾಲೂ ಕಾಣಿಸಿಕೊಂಡಿತು. ಈ ದಿಬ್ಬ ಬೆರ್ವಿಕ್ಕಿನಿಂದ ಮೊದಲಾಗಿ ಸಾಲ್ವೆ ಮೂಲಕ ಹಾದು ವೆಕ್ಸ್ ಫರ್ಡಿನಲ್ಲಿ ಕೊನೆಮುಟ್ಟಿತು. ಸಮುದ್ರದಲ್ಲಿ ಅತಿ ಸೂಕ್ಷ್ಮಕಣಗಳು ಸಂಚಿತವಾದುವು. ಕ್ರಮೇಣ ಸಮುದ್ರದ ಉತ್ತರಾರ್ದ ನೆಲಭಾಗವಾಗಿ ಮಾರ್ಪಟ್ಟಾಗ ಮರುಳುಶಿಲೆಗಳು ನಿಕ್ಷೇಪಗೊಂಡುವು. ಕಾರ್ಡಿಗನ್‍ಷೈರಿನ ಲ್ಯಾಂಡೋವರಿಯನ್ ಶಿಲಾಶ್ರೇಣಿಯಲ್ಲಿ ಗ್ರೇ ವ್ಯಾಕ್ ಮತ್ತು ಜೇಡುಶಿಲಾಪ್ರಸ್ತರಗಳು ಒಂದಾದ ಮೇಲೊಂದು ಕಂಡು ಬಂದಿವೆ. ಆರ್ಡೊವಿಶಿಯನ್ ಕಲ್ಪದ ಉತ್ತರಾರ್ಧದಲ್ಲಿ ಲೇಕ್ ಜಿಲ್ಲೆಯಲ್ಲಿ ಅಗ್ನಿಪರ್ವತಗಳ ಚಟುವಟಿಕೆಯಿಂದ ಲಾವಾ, ಟಫ್, ಅಗ್ಲಾಮರೇಟ್ ಶಿಲಾಪ್ರಸ್ತರಗಳು ತಲೆದೋರಿ ಬಾರೊಡೇಲ್ ಶ್ರೇಣಿ ಉಂಟಾಯಿತು. ತದನಂತರ ಜೇಡು ಮತ್ತು ಗ್ರಿಟ್ ಪ್ರಸ್ತರಗಳು ಶೇಖರವಾಗಿ ಮುಂದೆ ರೂಪಾಂತರ ಹೊಂದಿ ಸ್ಕಿಡಾವಾ ಜೇಡುಶಿಲಾ ಶ್ರೇಣಿಗಳೆನಿಸಿದುವು.

ಅಷ್ಟು ತೀವ್ರವಲ್ಲದ ಭೂ ಚಟುವಟಿಕೆಗಳ ದೆಸಿಯಿಂದ ಶಿಲಾಪ್ರಸ್ತರಗಳು ಮಡಿಕೆ ಬಿದ್ದು ಕಲ್ಪದ ಅಂತ್ಯದಲ್ಲಿ ನೆಲಭಾಗ ಮತ್ತೆ ಕುಸಿದು ಸಮುದ್ರವಾಗಿ ಮಾರ್ಪಟ್ಟಿತು. ಈಗಿನ ವಾಯುವ್ಯ ಇಂಗ್ಲೆಂಡಿನಲ್ಲಿರುವ ಆಷ್‍ಗಿಲನ್ ಮತ್ತು ಸೈಲೂರಿಯನ್ ಶಿಲಾಪ್ರಸ್ತರಗಳ ನಿಕ್ಷೇಪ ಮೊದಲಾಯಿತು. ಉತ್ತರ ಭಾಗದಲ್ಲಿ ತಲೆದೋರಿದ್ದ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಇಂಗ್ಲೆಂಡ್, ವೇಲ್ಸುಗಳಿಗೂ ಹಬ್ಬಿತು. ಈ ಕಾಲದಲ್ಲೇ ಲೇಕ್ ಜಿಲ್ಲೆಯ ಉಬ್ಬು ಉಂಟಾಯಿತು. ಉತ್ತರ ಮತ್ತು ಪಶ್ಚಿಮ ವೇಲ್ಸನಲ್ಲಿ ಅಸಂಖ್ಯಾತ ಪರಸ್ಪರ ಸಮಾಂತರ ಮೇಲ್ಮಡಿಕೆಗಳೂ ಕೆಳಮಡಿಕೆಗಳೂ ತಲೆದೋರಿದುವು.

ಡಿವೋನಿಯನ್ ಕಲ್ಪ (350-400 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಈ ವೇಳೆಗೆ ಇಂಗ್ಲಿಂಡಿನ ಲೇಕ್ ಜಿಲ್ಲೆ ಮತ್ತು ಉತ್ತರ ವೇಲ್ಸಿನ ಬಹುಭಾಗ ಭೂಖಂಡವಾಗಿ ಉಳಿದಿತ್ತು. ಅಸಂಖ್ಯಾತ ನೂತನ ಪರ್ವತಶ್ರೇಣಿಗಳಿಂದ ಕೂಡಿದ ಉತ್ತರ ಅಟ್ಲಾಂಟಿಸ್ ಶಾಶ್ವತ ಭೂಖಂಡವೂ ಇತ್ತು. ಫೆನೊಸ್ಕಾಂಡಿಯಾ ಹೆಚ್ಚು ವಿಸ್ತಾರಗೊಂಡು ಉತ್ತರ ಸಮುದ್ರದ ದಕ್ಷಿಣ ಭಾಗವನ್ನು ಅತಿಕ್ರಮಿಸಿತ್ತು. ಉತ್ತರ ಇಂಗ್ಲೆಂಡ್, ವೇಲ್ಸ್ ಮತ್ತು ಮಧ್ಯ ಐರ್ಲ್‍ಂಡುಗಳನ್ನೊಳಗೊಂಡ ದೊಡ್ಡ ಪರ್ಯಾಯದ್ವೀಪ ತಲೆದೋರಿತು. ಕಲ್ಪದ ಉದ್ದಕ್ಕೂ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಕ್ರಮೇಣ ಕುಂದುತ್ತ ಪರ್ಯಾಯದ್ವೀಪದ ವಿಸ್ತೀರ್ಣ ಮತ್ತು ರಚನೆಯಲ್ಲಿ ಅನೇಕ ಬದಲಾವಣೆಗಳು ಕಂಡುಬಂದವು. ಉತ್ತರ ಅಟ್ಲಾಂಟಿಸ್ ಮತ್ತು ಪರ್ಯಾಯದ್ವೀಪದ ನಡುವೆ ಅಸಂಖ್ಯಾತ ಖಾರಿಗಳೂ ದಿಬ್ಬಗಳೂ ಇದ್ದು ಶಿಲಾ ನಿಕ್ಷೇಪದ ಕಾರ್ಯಗತಿಯನ್ನು ಬಹುಮಟ್ಟಿಗೆ ಪ್ರಚೋದಿಸಿದುವು.

ವೇಲ್ಸಿನ ಕೆಳ ಡಿವೋನಿಯನ್ ಕಲ್ಪದ ಮರಳುಶಿಲಾ ಪ್ರಸ್ತರಗಳು ದಕ್ಷಿಣ ಭಾಗದಲ್ಲಿ ನದೀಮುಖಜ ಭೂಮಿಯೋಪಾದಿ ನಿಕ್ಷೇಪಗೊಂಡುವು. ಮಧ್ಯ ಮತ್ತು ಮೇಲಿನ ಡಿವೋನಿಯನ್ ಕಲ್ಪಗಳಲ್ಲಿ ಉತ್ತರ ಮತ್ತು ಮಧ್ಯ ವೇಲ್ಸ್ ಭೂಪ್ರದೇಶ ಉತ್ತರ ದಿಕ್ಕಿನತ್ತ ವಿಸ್ತಾರಗೊಂಡು ಅಟ್ಲಾಂಟಿಸ್ ಭೂಖಂಡದೊಡನೆ ಸೇರಿ ಹೋಯಿತು. ಹೀಗೆಯೇ ದಕ್ಷಿಣದ ಕಡೆಯೂ ವಿಸ್ತಾರಹೊಂದಿ ಇಡೀ ದಕ್ಷಿಣ ವೇಲ್ಸನ್ನು ಆಕ್ರಮಿಸಿತು. ಬಹುಶ: ಈ ಹಂತದಲ್ಲೇ ಡೆವಾನ್ ಪ್ರಾಂತ್ಯದ ಡಿವೋನಿಯನ್ ಶಿಲಾಪ್ರಸ್ತರಗಳು ನಿಕ್ಷೇಪಗೊಂಡವು.

ಕಾರ್ಬೊನಿಫೆರಸ್ ಕಲ್ಪ (280-350 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಡಿವೋನಿಯನ್ ಕಲ್ಪದಲ್ಲೇ ಉತ್ತರ ಅಟ್ಲಾಂಟಿಸಿನ ಬಹುಭಾಗ ಸವೆತಕ್ಕೆ ಒಳಗಾಗಿತ್ತು. ಈ ಬೃಹತ್ ಖಂಡದ ಅಳಿದುಳಿದ ಭಾಗಗಳು ಮಧ್ಯ ಸ್ಕಾಟ್ಲೆಂಡ್ ಮತ್ತು ಐಸ್ಲೆಂಡುಗಳ ನಡುವೆ ಅಲ್ಲಲ್ಲೇ ಚದರಿಹೋಗಿದ್ದುವು. ಸ್ಕಾಂಡಿನೇವಿಯ ಭೂಖಂಡವಾಗಿತ್ತು. ಯೂರೋಪು ಖಂಡದ ಬಹುಬಾಗ ನೀರಿನಲ್ಲಿ ಮುಳುಗಿ ಅಲ್ಲಲ್ಲೇ ಸಣ್ಣಪುಟ್ಟ ದ್ವೀಪಗಳಾದುವು. ಇವುಗಳಲ್ಲಿ ಸೇಂಟ್‍ಜಾರ್ಜ್ ಲ್ಯಾಂಡ್, ಈಸ್ಟ್ ಜಾರ್ಜ್ ಛಾನೆಲ್ ಮತ್ತು ವೇಲ್ಸನ ಬಹುಭಾಗ ದ್ವೀಪಗಳೋಪಾದಿಯಲ್ಲಿದ್ದವು. ಸಮುದ್ರಭಾಗಗಳಲ್ಲಿ ಬಗೆಬಗೆಯ ಶಿಲಾಕಣಗಳು ನಿಕ್ಷೇಪಗೊಳ್ಳುತ್ತಿದ್ದವು. ಸಮುದ್ರ ಅಷ್ಟು ಆಳವಿರದಿದ್ದರೂ ಅದರ ತಳ ಕುಗ್ಗುತ್ತಲೇ ಇತ್ತು. ಇಂಗ್ಲೆಂಡಿನಲ್ಲಿ ಕೆಳ ಕಾರ್ಬೊನಿಫೆರಸ್ ಶ್ರೇಣಿಗಳನ್ನು ಆವೋನಿಯನ್ ಶ್ರೇಣಿಗಳೆಂದೂ ಹೆಸರಿಸಿದ್ದಾರೆ. ಇವುಗಳ ಮುಖ್ಯ ಪ್ರಸ್ತರಗಳು ಅಸಂಖ್ಯಾತ ಜೀವಾವಶೇಷಗಳಿಂದ ಕೂಡಿದ ಸುಣ್ಣಶಿಲೆ. ಇವನ್ನು ಆಧರಿಸಿ ಇಡೀ ಶ್ರೇಣಿಯನ್ನು ಕೆಳ ಆವೋನಿಯನ್ (ಟೂರ್ನೇಸಿಯನ್) ಮತ್ತು ಮೇಲಿನ ಆವೋನಿಯನ್ (ವೈಸಿಯನ್) ಎಂದು ವಿಭಜಿಸಲಾಗಿದೆ. ಕೆಲವಡೆ ಕಾರಲ್ ದಿಬ್ಬಗಳಿದ್ದ ದಾಖಲೆಗಳಿವೆ. ಉತ್ತರ ಇಂಗ್ಲೆಂಡ್, ಲೇಕ್ ಜಿಲ್ಲೆ, ವಾಯವ್ಯ ಮತ್ತು ದಕ್ಷಿಣ ವೇಲ್ಸ್ ಮತ್ತು ಕೆಂಟ್-ಇಲ್ಲೆಲ್ಲ ಸುಣ್ಣಶಿಲಾಪ್ರಸ್ತರಗಳು ವ್ಯಾಪಿಸಿದ್ದುವು. ವೈಸಿಯನ್ ಹಂತದಲ್ಲಿ ವಾಯವ್ಯ ಇಂಗ್ಲೆಂಡಿನತ್ತ ನೀರಿನ ಮಟ್ಟದಲ್ಲಿ ಏರು ಪೇರುಗಳಾಗಿ ಜೌಗು ಮತ್ತು ಸಮುದ್ರ ಪ್ರದೇಶಗಳು ಅನುಕ್ರಮವಾಗಿ ಆವಿರ್ಭವಿಸುತ್ತ್ತಿದ್ದುವು. ಹೀಗಾಗಿ ಮರಳು ಶಿಲಾಪ್ರಸ್ತರಗಳ ನಡುವೆ ಅಲ್ಲಲ್ಲೆ ಕಲ್ಲಿದ್ದಲಿನ ತೆಳುವಾದ ಸಿರಗಳು ನಿಕ್ಷೇಪವಾದುವು. ನಡುವೆ ಸುಣ್ಣಶಿಲಾ ಪ್ರಸ್ತರಗಳೂ ಜೇಡು ಯೋರ್‍ಡೇಲ್ ಶ್ರೇಣಿಗಳೆಂದು ಕರೆಯಲಾಗಿದೆ. ಮೇಲಿನ ಕಾರ್ಬೊನಿಫೆರಸ್ (ನಮೂರಿಯನ್) ಶಿಲಾಪ್ರಸ್ತರಗಳನ್ನು ಕೆಳಗಿನ ಕಾರ್ಬೊನಿಫೆರಸ್ (ಆವೋನಿಯನ್) ಪ್ರಸ್ತರಗಳಿಂದ ಸುಲಭವಾಗಿ ಗುರುತಿಸಬಹುದು.

ಈ ಹಂತಗಳ ನಡುವೆ ಮಂದಗತಿಯ ಭೂ ಚಟುವಟಿಕೆಗಳು ತಲೆದೋರಿ ಆ ಕಾಲದ ಸಮುದ್ರಗಳಲ್ಲಿನ ನಿಕ್ಷೇಪ ಕಾರ್ಯವಿಧಾನವೇ ಬಲುಮಟ್ಟಿಗೆ ಬದಲಾಯಿತು. ಸೇಂಟ್ ಜಾರ್ಜ್‍ಲ್ಯಾಂಡ್ ಮತ್ತು ಪೂರ್ವ ಆಂಗ್ಲಿಯ ಒಂದಾಗಿ ಕ್ರಮೇಣ ಬ್ರಂಬಟ್ ದ್ವೀಪದೊಡನೆ ಐಕ್ಯವಾಗಿ ದಕ್ಷಿಣ ಇಂಗ್ಲೆಂಡ್ ವಿಸ್ತಾರಗೊಂಡಿತು. ಬ್ರಿಸ್ಟಲ್ ಕಾಲುವೆ ಇನ್ನೂ ವಿಸ್ತಾರವಾಗಿತ್ತು. ಇಲ್ಲಿ ಜೇಡು ಮತ್ತು ಮರಳು ಶಿಲಾಪ್ರಸ್ತರಗಳಿಂದಾದ ಕಲ್ಮ್ ಮೆಷರ್ಸ್ ಎಂಬ ಶಿಲಾಶ್ರೇಣಿ ನಿಕ್ಷೇಪಗೊಂಡಿತು. ಪೆನ್ನೈನ್ ಪ್ರದೇಶಗಳಲ್ಲಿ ವಿಸ್ತಾರವಾದ ನದೀಮುಖಜ ಭೂಮಿ ಉಂಟಾಗಿ ಇಡೀ ಉತ್ತರ ಇಂಗ್ಲೆಂಡ್ ಮತ್ತು ಈಶಾನ್ಯ ವೇಲ್ಸನ್ನೂ ಕ್ರಮೇಣ ಆಕ್ರಮಿಸಿಕೊಂಡು ಬಹು ವಿಸ್ತಾರವಾದ ಭೂಭಾಗ ತಲೆದೋರಿತು. ಇದು ನಮ್ಮ ದೇಶದ ಗಂಗಾ-ಬ್ರಹ್ಮಪುತ್ರ ಬಯಲಿನಷ್ಟು ವಿಸ್ತಾರವಾಗಿತ್ತೆಂದು ಊಹಿಸಲಾಗಿದೆ. ಇದರ ಶಿಲಾಸಂಯೋಜನೆ ಏಕರೀತಿಯದಾಗಿರದೆ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಯಿಸುತ್ತಿತ್ತು. ಆಗ ಶೇಖರವಾದ ದಪ್ಪ ಕಣ ರಚನೆಯ ಮರಳು ಶಿಲೆಗಳನ್ನು ಮಿಲ್‍ಸ್ಟೋನ್‍ಗ್ರಿಟ್ ಎಂದು ಹೆಸರಿಸಿದ್ದಾರೆ. ಭೂಭಾಗದ ಅನೇಕ ಕಡೆ ಕಾಡುಗಳಿದ್ದವು. ಆಗಾಗ ತೋರಿದ ಭೂ ಕುಸಿತಗಳ ಪರಿಣಾಮವಾಗಿ ಸಸ್ಯರಾಶಿ ಆಳದಲ್ಲಿ ಹುದುಗಿ ಮರಳಿನಿಂದ ಮುಚ್ಚಿಹೋಗಿ ಕಲ್ಲಿದ್ದಲ ಪ್ರಸ್ತರಗಳಾಗಿ ಮಾರ್ಪಟ್ಟಿತು. ಇಂದಿನ ಅನೇಕ ಕಲ್ಲಿದ್ದಲ ಗಣಿಗಳು ಈ ಭಾಗದಲ್ಲೇ ಇವೆ. ಕಲ್ಪದ ಅಂತ್ಯದಲ್ಲಿ ತೀವ್ರಗತಿಯ ಭೂ ಚಟುವಟಿಕೆಗಳು ಮತ್ತೆ ತಲೆದೋರಿದುವು, ಇದಕ್ಕೆ ಸಂಬಂಧಿಸಿದ ಪರ್ವತಜನ್ಯ ಶಕ್ತಿಗಳನ್ನು ಆರ್ವೊರಿಕನ್, ಹರ್ಸಿನಿಯನ್, ಆಲ್ಟಾಯಿಡ್ ಮತ್ತು ವಾರ್ಸಿಕನ್ ಎಂದು ವಿವಿಧ ಘಟ್ಟಗಳಾಗಿ ಹೆಸರಿಸಲಾಗಿದೆ. ಇದು ಬಹುಮಟ್ಟಿಗೆ ಭೂಭಾಗಗಳ ಮೇಲ್ಮೈ ಲಕ್ಷಣಗಳನ್ನೇ ಬದಲಾಯಿಸಿದವು. ಯೂರೋಪು ಖಂಡದಲ್ಲಂತೂ ಇವುಗಳ ಹಾವಳಿ ಬಹು ತೀವ್ರವಾಗಿತ್ತು. ಬಹುಶ: ಪ್ಲಿಯೊಸೀನ್ ಕಲ್ಪಕ್ಕೆ ಕೊಂಚ ಮೊದಲು ಈ ಶಕ್ತಿಗಳು ಕುಗ್ಗಿದುವು.

ಪರ್ಮಿಯನ್ ಮತ್ತು ಟ್ರಯಾಸಿಕ್ ಕಲ್ಪಗಳು : ರ್(10-280 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಕಾರ್ಬೊನಿಫೆರಸ್ ಕಲ್ಪದ ಅನಂತರ ಮತ್ತು ಪರ್ವತ ಜನ್ಯ ಕಲ್ಪದಲ್ಲಿ ಇಡೀ ಬ್ರಿಟನ್ನಿನಲ್ಲಿ ಉಷ್ಣವಲಯದ ಮರಳುಗಾಡಿನ ವಾತಾವರಣವಿತ್ತು. ಮರಳು ಶಿಲೆಗಳು ನಿಕ್ಷೇಪಗೊಂಡವು. ಹಲವಾರು ಸರೋವರಗಳಲ್ಲಿ ಲವಣಗಳು ಶೇಖರವಾದುವು. ಚೆಷೈರ್ ಪ್ರಾಂತ್ಯದ ಸಮುದ್ರ ಭಾಗಗಳು ಭೂಮಧ್ಯ ಸಮುದ್ರವಾದ ಟೆಥಿಸಿನೊಡನೆ ಸಂಪರ್ಕ ಹೊಂದಿತ್ತು.

ಟ್ರಯಾಸಿಕ್ ಶಿಲಾಪ್ರಸ್ತರಗಳು ಮೀಸೋಜೋಯಿಕ್ ಯುಗದ ಮೊದಲ ಹಂತಕ್ಕೆ ಸೇರಿವೆ. ಪೆನ್ನೈನ್ ಶ್ರೇಣಿ ಈಡನ್ ಮತ್ತು ಕ್ಲಡ್ ಕಣಿವೆಗಳಲ್ಲಿ ಇವು ಅಷ್ಟು ಮಂದವಲ್ಲದ ಪ್ಲಿಸ್ಟೋಸೀನ್ ಹಿಮಕಲ್ಪದ ಪ್ರಸ್ತರಗಳಿಂದ ಆವೃತವಾಗಿದೆ. ಜೂರಾಸಿಕ್ ಕಲ್ಪ (135ರ್-10 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಈ ಕಲ್ಪದ ಶ್ರೇಣಿಯಲ್ಲಿ ಮರಳು ಶಿಲೆ ಮತ್ತು ಜೇಡು ಶಿಲಾಪ್ರಸ್ತರಗಳಿವೆ. ಇವು ನೀಳವಾದ ಜಾಡಿನಲ್ಲಿ ಡಾಸ್ರ್ಟೆಟ್ ತೀರದಲ್ಲಿ ಪ್ರಾರಂಭವಾಗಿ ನಾರ್ಥ್ಯಾಂಪ್ಟನ್ ಷೈರ್, ಹಂಬರ್ ಕಣಿವೆ. ಪಿಕರಿಂಗ್ ಕಣಿವೆ, ಕ್ಲೀವ್‍ಲ್ಯಾಂಡ್ ಬೆಟ್ಟಗಳು ಮತ್ತು ಉತ್ತರ ಯಾರ್ಕ್‍ಷೈರ್ ಮೈದಾನಗಳಲ್ಲಿ ವಿಸ್ತಾರಗೊಂಡಿವೆ. ಕಲ್ಪದಲ್ಲಿ ಇಂಗ್ಲೆಂಡಿನ ಬಹುಭಾಗ ಭೂಪ್ರದೇಶವಾಗಿತ್ತು.

ಕ್ರಿಟೇಷಿಯಸ್ ಕಲ್ಪ (65-135 ದಶ ಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ನೆಲದ ಮಟ್ಟ ಕುಗ್ಗುತ್ತ ಟೆಥಿಸ್ ಸಮುದ್ರ ಹೆಚ್ಚು ವಿಸ್ತಾರವಾಗುತ್ತ ಹೋಯಿತು ಕ್ರಿಟೇಷಿಯಸ್ (ವೀಲ್ಡನ್) ಪ್ರಸ್ತರಗಳು ಆಗ್ನೇಯ ಇಂಗ್ಲೆಂಡಿನ ತೀರದುದ್ದಕ್ಕೂ ನಿಖರವಾದುವು. ಕಡಲ ತೀರ ಕ್ರಮೇಣ ವೇಲ್ಸಿನತ್ತ ಸರಿಯಿತು. ವೀಲ್ಡ್‍ಜೊಡುಶಿಲೆ ಮತ್ತು ಹಸಿರು ಮರಳುಶಿಲೆ ಈ ಕಾಲದ ಮುಖ್ಯ ನಿಕ್ಷೇಪಗಳು. ಮೇಲಿನ ಕ್ರಿಟೇಷಿಯಸ್ ಕಲ್ಪದ ವೇಳೆಗೆ ಯೂರೋಪಿನ ಬಹುಭಾಗ (ಬ್ರಿಟನ್ನೂ ಸೇರಿ) ಮುಳುಗಡೆಯಾಗಿತ್ತು. ಇದಕ್ಕೆ ಮೂಲಕಾರಣ ಆಲ್ಬಿಯನ್ ಮತ್ತು ಸೈನೊಮೇನಿಯನ್ ಸಮುದ್ರದ ಆಕ್ರಮಣಗಳು. ಹೀಗೆ ಆವೃತವಾದ ಭೂಭಾಗಗಳಲ್ಲಿ ಗಾಲ್ಪ್ ಜೇಡು ಮತ್ತು ಚಾಕ್ (ಸೀಮೆಸುಣ್ಣ) ಶಿಲಾಪ್ರಸ್ತರಗಳು ನಿಕ್ಷೇಪ ಕೊಂಡುವು, ಚಾಕ್ ಪ್ರಸ್ತರಗಳನ್ನು ಸ್ಯಾಲಿಸ್ ಬರಿ, ಡಾರ್ಸೆಟ್, ಚಿಲ್ಟರ್ನ್ ಬೆಟ್ಟಗಳು, ಡೋವರ್ ಮತ್ತು ಉತ್ತರಕ್ಕೆ ಯಾರ್ಕ್‍ಷೈರ್ ವೋಲ್ಡುಗಳ ತನಕ ಗುರುತಿಸಬಹುದು. ಹೀಗೆ ಚಾಕ್ ಬ್ರಿಟನ್ನಿನ ಬಹುಭಾಗವನ್ನು ಆವರಿಸಿತ್ತು.

ಕಲ್ಪದ ಅಂತ್ಯದಲ್ಲಿ ಇಂಗ್ಲೆಂಡಿನ ಬಹುಭಾಗ ಮಟ್ಟಸವಾದ ಚಾಕ್ ಪ್ರಸ್ತರಗಳಿಂದ ಆವೃತವಾಗಿತ್ತು. ಆಲ್ಪಾನ್ ಪರ್ವತಜನ್ಯ ಕಲ್ಪವೂ ಮೊದಲಾಗಿ ಮುಂದೆ ಇಡೀ ಟರ್ಷಿಯರಿ ಯುಗದ ಉದ್ದಕ್ಕೂ ಪಸರಿಸಿತು. ಇದು ಯೂರೋಪಿನಲ್ಲಿ ಬಹು ತೀವ್ರವಾಗಿದ್ದು ಇಂಗ್ಲೆಂಡಿನಲ್ಲಿ ಅದರ ಬಿಸಿ ಮಾತ್ರ ತಟ್ಟಿತ್ತು. ವೀಲ್ಡ್ ಉಬ್ಬು ಮತ್ತು ಥೇಮ್ಸ್ ತಗ್ಗು ಈ ಕಾಲದಲ್ಲೇ ತಲೆದೋರಿದುವು.

ಪೇಲಿಯೊಸೀನ್, ಇಯೋಸಿನ್, ಮತ್ತು ಅಲಿಗೋಸಿನ್ ಕಲ್ಪಗಳು (25-65 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಇಯೋಸಿನ್ ಕಲ್ಪದಲ್ಲಿ ಇಳಿಕಲು ಜಲಾಶಯದ ತುಂಬ ವಿವಿಧ ಬಗೆಯ ಮರಳು ಮತ್ತು ಜೇಡಿಮಣ್ಣು ಶೇಖರವಾದುವು. ಈ ಕಲ್ಪದ ಉತ್ತಮ ಉದಾಹರಣೆ ಹ್ಯಾಂಪ್‍ಷೈರ್ ತಗ್ಗು.ಆಲಿಗೊಸೀನ್ ಯುಗದಲ್ಲಿ ಶೇಖರಣೆ ಬಹುಮಟ್ಟಿಗೆ ಹೀಗೆಯೇ ಮುಂದುರಿಯಿತಾದರೂ ಆಗಾಗ ಕಡಲಿನ ಮತ್ತು ಸರೋವರ ಸನ್ನಿವೇಶಗಳು ಉಂಟಾಗುತ್ತಿದ್ದುವು.

ಮಯೊಸೀನ್ ಕಲ್ಪ (12-25 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ನೆಲಭಾಗ ವಿಸ್ತಾರವಾಯಿತು. ಇದಕ್ಕೆ ಕಾರಣ ಭೂಭಾಗ ಮೇಲಕ್ಕೆ ಒಯ್ಯಲ್ಪಟ್ಟಿತು ಅಥವಾ ನೀರಿನ ಮಟ್ಟ ಕುಗ್ಗುತ್ತ ಹೋಯಿತು. ಹೀಗಾಗಿ ಈಗಿನ ಇಡೀ ಇಂಗ್ಲೆಂಡ್ ರೂಪುಗೊಂಡಿತೆನ್ನಬಹುದು ಯಾವ ಬಗೆಯ ಜಲಜನಿಕ್ಷೇಪಗಳೂ ಶೇಖರವಾಗಲಿಲ್ಲ ನೆಲಭಾಗದಲ್ಲಿ ಭೂಸವೆತ ಮುಖ್ಯವಾಗಿತ್ತು ಪಶ್ಷಿಮ ಭಾಗಗಳಲ್ಲಿದ್ದ ಚಾಕ್ ಪ್ರಸ್ತರಗಳು ನಶಿಸಿ ವೇಲ್ಸಿನ ಬೆಟ್ಟಗಳು ಪೆನ್ನೈನ್ ಬೆಟ್ಟಗಳು ಲೇಕ್ ಜಿಲ್ಲೆಯ ಮತ್ತು ಇತರ ಬೆಟ್ಟಗಳ ಸಾಲು ರೂಪುಗೊಂಡುವು. ಟ್ರಯಾಸಿಕ್ ಶ್ರೇಣಿಗಳು ಸವೆತಕ್ಕೊಳಗಾಗಿ ಪ್ರಸ್ಥಭೂಮಿ ತಲೆದೋರಿತು. ಒಟ್ಟಿನಲ್ಲಿ ಈಗಿನ ಮೇಲ್ಮೈ ಲಕ್ಷಣ ರೂಪುಗೊಂಡಿತು.

ಪ್ಲಿಯೊಸೀನ್ ಕಲ್ಪ (1-11 ದಶಲಕ್ಷ ವರ್ಷಗಳ ಹಿಂದಿನ ಕಾಲ)

ಬದಲಾಯಿಸಿ

ಇಂಗ್ಲೆಂಡಿನ ಸಣ್ಣಪುಟ್ಟ ಪ್ರದೇಶಗಳಲ್ಲಿ ಅದರಲ್ಲೂ ಪೂರ್ವ ಆಂಗ್ಲಿಯ ಮತ್ತು ಥೇಮ್ಸ್ ತಗ್ಗುಗಳಲ್ಲಿ ನೀರು ತುಂಬಿತು ಸಮುದ್ರದ ನೀರಿನ ಮಟ್ಟದಲ್ಲೂ ಕೊಂಚ ಏರುಪೇರಾಯಿತು. ಹೀಗಾಗಿ ಕ್ರ್ಯಾಗ್ ಎಂಬ ವಿಶೇಷ ರೀತಿಯ ಮರಳು, ಜೇಡು ಮತ್ತು ಕಪ್ಪೆಚಿಪ್ಪಿನ ಚೂರುಗಳಿಂದ ಕೂಡಿದ ಜಲಜಶಿಲೆ ಪೂರ್ವ ಆಂಗ್ಲಿಯದ ಕರಾವಳಿಯುದ್ದಕ್ಕೂ ನಿಕ್ಷೇಪಗೊಂಡಿತು.

ಪ್ಲಿಸ್ಟೊಸೀನ ಕಲ್ಪ (1 ದಶಲಕ್ಷ ವರ್ಷಗಳನ್ನು ಹಿಂದಿನವರಗೆ)

ಬದಲಾಯಿಸಿ

ಪ್ಲಿಯೊಸೀನ್ ಕಲ್ಪದ ಅಂತ್ಯದಲ್ಲಿ ಶೀತವಾಯುಗುಣ ತಲೆದೋರಿ ಇಂಗ್ಲೆಂಡಿನ ಅನೇಕ ಭಾಗಗಳು ನೀರ್ಗಲ್ಲಿನ ಪ್ರವಾಹಗಳಿಂದ ಆವೃತವಾದುವು. ಅಲ್ಲದೆ, ಇವುಗಳ ಕಾರ್ಯಚರಣೆ ಈಗಿನ ಇಂಗ್ಲೆಂಡಿನ ನೈಸರ್ಗಿಕ ಚೆಲುವಿಗೆ ಮೂಲಕಾರಣವಾಯಿತು.

ಖನಿಜ ಸಂಪತ್ತು

ಬದಲಾಯಿಸಿ

ವೇಲ್ಸ್ ಭೂಭಾಗವೂ ಸೇರಿದ ದಕ್ಷಿಣ ಬ್ರಿಟನ್ನಿನ ಭೂಪ್ರದೇಶವನ್ನು ಉತ್ತರ-ಪಶ್ಚಿಮಗಳು ಎತ್ತರ ಪ್ರದೇಶವೆಂದೂ ದಕ್ಷಿಣ-ಪೂರ್ವಗಳು ತಗ್ಗು ಪ್ರದೇಶವೆಂದೂ ವಿಂಗಡಿಸುವುದು ಸಾಧ್ಯ ಇದೇ ಆಧಾರದ ಮೇಲೆ ಇದರ ಭೂಗುಣವನ್ನೂ ವಿಂಗಡಿಸಬಹುದು. ಉತ್ತರ-ಪಶ್ಚಿಮ ಪ್ರದೇಶದ ಮಣ್ಣು ಆಮ್ಲಮಯ. ಅದರ ಫಲವತ್ತು ಕಡಿಮೆ. ಅಧಿಕವಾಗಿ ಬೀಳುವ ಮಳೆಯಿಂದ ಅದರ ಸಾರ ಕೊಚ್ಚ್ಚಿಹೋಗಿದೆ ದಕ್ಷಿಣ ಪೂರ್ವ ಪ್ರದೇಶದಲ್ಲಿ ಆಮ್ಲತ್ವವಿಲ್ಲ: ಕ್ಷಾರಗುಣವಿದೆ ಒಟ್ಟಾರೆ ಇಲ್ಲಿ ಕಲ್ಲು ನೆಲದಿಂದ ಜೇಡಿಮಣ್ಣಿನವರೆಗೆ ಅನೇಕ ಬಗೆಯ ಭೂಗುಣಗಳಿವೆ ಮಳೆ ತೊಳೆದ ಪರ್ವತಪ್ರದೇಶಗಳಿಂದ ಹಿಡಿದು, ಮೆಕ್ಕಲು ಮಣ್ಣಿನ ನದೀಪ್ರದೇಶದವರೆಗೆ ಉದ್ದಕ್ಕೂ ಮೇಲುಮಣ್ಣಿನ ಪದರದ ಗಾತ್ರವೂ ವ್ಯತ್ಯಾಸವಾಗುತ್ತದೆ. ದಕ್ಷಿಣ-ಪೂರ್ವದ ಇಳಿ ನೆಲದಲ್ಲಿ ವ್ಯವಸಾಯ ಹೆಚ್ಚು ಸುಸೂತ್ರ. ಈ ಪ್ರದೇಶದಲ್ಲಿ ವೈವಿಧ್ಯ ಪೂರಿತವಾದ ಖನಿಜಸಂಪತ್ತು ಸಾಕಷ್ಟು ಹರಡಿದೆ. ಖನಿಜಗಳಲ್ಲಿ ಕಲ್ಲಿದ್ದಲು ಮುಖ್ಯ. ಇದು ಅನೇಕ ಕಡೆಗಳಲ್ಲಿ ದೊರಕುತ್ತದೆ. ಪೆನ್ನೈನ್ ಪರ್ವತಶ್ರೇಣಿಯ ಪೂರ್ವ ಪಾಶ್ರ್ವದಲ್ಲಿ ಯಥೇಷ್ಟವಾಗಿದೆ. ಇದನ್ನು ಕಿಟ್ಟವಾಗಿ ಪರಿವರ್ತಿಸಿ ಲೋಹಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. ಯಾರ್ಕ್‍ಷೈರಿನ ಈಶಾನ್ಯದಲ್ಲಿರುವ ಕ್ಲೀವ್‍ಲ್ಯಾಂಡಿನಲ್ಲೂ ಉತ್ತರ ಲ್ಯಾಂಕಷೈರಿನ ಫರ್ನಿಸ್ ಜಿಲ್ಲೆಯಲ್ಲೂ ಕಬ್ಬಿಣ ಸಿಕ್ಕುತ್ತದೆ. ದೇಶಕ್ಕೆ ಅಗತ್ಯವಾದ್ದಕ್ಕಿಂತ ಹೆಚ್ಚು ಕಲ್ಲಿದ್ದಲು ದೊರಕುವುದರಿಂದ ಅಧಿಕವಾದದ್ದನ್ನು ನಿರ್ಯಾತ ಮಾಡುವುದು ಸಾಧ್ಯ. ಆದರೆ ದೊರಕುವ ಕಬ್ಬಿಣ ದೇಶಕ್ಕೆ ಸಾಲದು. ಇದನ್ನು ಹೊರಗಿನಿಂದಲೂ ತರಿಸಿಕೊಳ್ಳಬೇಕಾಗುತ್ತದೆ. ದಕ್ಷಿಣ ಬ್ರಿಟನ್ನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಖನಿಜವಸ್ತುಗಳೂ ಪಿಂಗಾಣಿ ಕ್ಯೆಗಾರಿಕೆಗೆ ಅಗತ್ಯವಾದ ಜೇಡಿಮಣ್ಣೂ ದೊರಕುತ್ತವೆ. ಸುಣ್ಣಕಲ್ಲು, ಮರಳುಗಲ್ಲು, ಗ್ರ್ರಾವೆಲ್ ಇವು ಎಲ್ಲೆಲ್ಲೂ ಸಿಗುತ್ತವೆ. ಒಳ್ಳೆಯ ಗ್ರಾನೈಟ್ ಶಿಲೆ ಕಾರ್ನ್ ವಾಲ್ ಲೀಸೆಸ್ಟರುಗಳಲ್ಲೂ ಕಡಪಾಕಲ್ಲು ಕಾರ್ನ್ ವಾಲ್ ಮತ್ತು ಡೇವನ್ನಿನಲ್ಲೂ ಸೀಮೆಸುಣ್ಣದ ಕಲ್ಲು ಕೆಂಟಿನಲ್ಲೂ ಜಿಪ್ಸಂ, ಕಲ್ಲುಪ್ಪು, ಕಬ್ಬಿಣಕಲ್ಲು ಚಕಮಕಿ ಕಲ್ಲು ಇವು ದಕ್ಷಿಣ ಬ್ರಿಟನ್ನಿನಲ್ಲೂ ಇವೆ. ಕಾರ್ನ್‍ವಾಲ್ ಒಂದಾನೊಂದು ಕಾಲದಲ್ಲಿ ತವರಕ್ಕೆ ಪ್ರಖ್ಯಾತವಾಗಿತ್ತು. ಆದರೆ ಅದೆಲ್ಲವೂ ಮುಗಿದಿದೆ ಚಿನ್ನ ಬೆಳ್ಳಿಗಳೂ ಅಲ್ಲಲ್ಲಿವೆ. ಆದರೆ ಸಾಕಷ್ಟು ಪ್ರಮಾಣದಲ್ಲಿಲ್ಲವಾದ್ದರಿಂದ ಅವನ್ನು ತೆಗೆಯುವ ಪ್ರಯತ್ನ ಲಾಭದಾಯಕವಲ್ಲ.

ವನಸಂಪತ್ತು

ಬದಲಾಯಿಸಿ

ಈ ದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ ಐದಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಕಾಡುಗಳಿವೆ. ಆದರೆ ಮರಗಳಿಲ್ಲದ ಸ್ಥಳವೇ ಬಹಳ ವಿರಳ ಅತ್ಯಂತ ಎತ್ತರದ ಪರ್ವತ ಶಿಖರದ ಕೋಡುಗಲ್ಲಿನ ಮೇಲ್ಬಾಗವನ್ನೂ ಅತಿ ತಗ್ಗಿನ ಜೌಗುನೆಲವನ್ನೂ ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲೂ ಮರಗಳು ಅಸಂಖ್ಯಾತವಾಗಿವೆ. ಬೇಸಾಯದ ನೆಲವನ್ನು ವಿಸ್ತರಿಸುವುದಕ್ಕಾಗಿಯೂ ಮರದ ದಿಮ್ಮಿಗಳಿಗಾಗಿಯೂ ಹಿಂದಿನ ಕಾಲದ ಕಾಡುಗಳು ಬೇಗ ಕರಗುತ್ತಿವೆ. ಲೋಹ ಕೈಗಾರಿಕೆಗೆ ಅಗತ್ಯವಾದ ಇದ್ದಲಿಗೂ ಮರಗಳನ್ನು ಧಾರಾಳವಾಗಿ ಕಡಿಯಲಾಗುತ್ತಿತ್ತು. ಈಗ ಕಲ್ಲಿದ್ದಲ ಕಿಟ್ಟವನ್ನು ಇದಕ್ಕಾಗಿ ಉಪಯೋಗಿಸುತ್ತಿರುವುದರಿಂದ ಈ ಕಾರಣಕ್ಕಾಗಿ ಮರಗಳು ನಾಶವಾಗುತ್ತಿಲ್ಲ. ಈಚೆಗೆ ಮರದ ದಿಮ್ಮಿಗಳನ್ನೂ ಹೆಚ್ಚಾಗಿ ಆಯಾತ ಮಾಡಿಕೊಳ್ಳಲಾಗುತ್ತಿದೆ. ಹೊಸದಾಗಿ ಮರನೆಡುವ ಕಾರ್ಯವೂ ಸಾಗುತ್ತಿದೆ. ಹ್ಯಾಂಪ್‍ಷೈರಿನಲ್ಲೂ ಗ್ಲಾಸೆಸ್ಟರಿನಲ್ಲೂ ಎರಡು ಕಾಡುಗಳನ್ನು ಮಧ್ಯಯುಗದಿಂದಲೂ ರಕ್ಷಿಸಿಡಲಾಗಿದೆ. ಹಳೆಯ ಕಾಲದ ವನವೈಭವವನ್ನೂ ಸ್ವಲ್ಪಮಟ್ಟಿಗೆ ಇಲ್ಲಿ ಕಾಣಬಹುದು. ಉಳಿದ ಕಡೆಗಳಲ್ಲಿ ಕಾಡುಗಳು ಹೆಚ್ಚು ಕಡಿಮೆ ಅದೃಶ್ಯವಾಗಿವೆ. ದಕ್ಷಿಣದಲ್ಲಿ ಮರಗಳು ಹೊರವಾಗಿ ಬೆಳೆಯುತ್ತವೆ. ಆದರೆ ಇವುಗಳಲ್ಲಿ ಹೆಚ್ಚು ವೈವಿಧ್ಯವಿಲ್ಲ. ಬಹಳ ಹಿಂದೆ, ಹಿಮಯುಗದ ಹಿಂದಿನ ಕಾಲದಲ್ಲಿ ಇಲ್ಲಿದ್ದ ಅನೇಕ ಜಾತಿಯ ಮರಗಳು ಹಿಮಾಚ್ಛಾದದಿಂದ ನಾಶವಾದವು. ಹಿಮದ ಕವಚ ಕರಗುವ ವೇಳೆಗೆ ಅಲ್ಲಿ ಇಂಗ್ಲಿಷ್ ಕಡಲ್ಗಾಲುವೆ ಉದ್ಭವವಾಯಿತು. ಬ್ರಿಟಿಷ್ ಓಕ್, ಬರ್ಚ್, ಬೀಚ್, ಆಷ್, ವಿಲ್ಲೊ, ಆಸ್ಪೆನ್, ಆಲ್ಡರ್ ಮುಂತಾದ, ಚಳಿಗಾಲದಲ್ಲಿ ಎಲೆ ಉದುರುವ ಜಾತಿಯ ಮರಗಳು ಸಾಮಾನ್ಯವಾದುವು. ಈ ಜಾತಿಗೆ ಸೇರದ ಮರಗಳೂ ಉಂಟು. ವಾಲ್ನಟ್, ಚೆಸ್‍ನಟ್, ಪೈನ್ ಮತ್ತು ಬಾಕ್ಸ್ ಮರಗಳನ್ನು ಹೊರಗಿನಿಂದ ತಂದು ಇಲ್ಲಿ ಬೆಳೆಸಲಾಗಿದೆ. ದಕ್ಷಿಣ ಬ್ರಿಟನ್ನಿನಲ್ಲಿ ಮರಗಳಿಗಿಂತ ಕುರುಚಲುಗಳು ಅಧಿಕ. ಗ್ರಾಮ ಪ್ರದೇಶದಲ್ಲಿ ಬೇಲಿಗಾಗಿ ಬೆಳೆಸುವ ಹಥಾರ್ನ್ ಅಲ್ಲದೆ ಹನಿಸಕ್ಲ್, ಹೇಜೆಲ್, ಬ್ರಿಯರ್, ಹಾಲಿಗಾರ್ಸ್ ಮತ್ತು ಹೀದರ್ ಮುಂತಾದವು ಬೆಳೆಯುತ್ತದೆ. ಇನ್ನೂ ನಾನಾ ಗಿಡ ಮೂಲಿಕೆಗಳೂ ಉಂಟು. ಇಲ್ಲಿನ ಸಾಹಿತ್ಯದಲ್ಲೂ ಇವುಗಳ ಉಲ್ಲೇಖವಿದೆ. ಅನೆಮೊನೆ, ಬ್ಲೂಬೆಲ್, ಪ್ರಿಮ್‍ರೋಸ್, ಹೈಯಸಿಂಥ್, ಐರಿಸ್, ವೂಡ್ರಫ್, ಸ್ಟ್ರಾಬೆರಿ, ಬಟರ್‍ಕಪ್, ಡೇಯ್ಸಿ, ಡಾಂಡೆಲಿಯನ್, ಕಾಡು ಜಿರೇನಿಯಂ, ಸ್ಕಾರ್ಲೆಟ್ ಪಾಪಿ, ಮೆಡೋಸ್ವೀಟ್, ಕೋಲ್ಟ್ಸ್‍ಫೂಟ್, ಸ್ಪೀಡ್‍ವೆಲ್, ಪೆನ್ನಿವಾರ್ಟ್ ಮುಂತಾದುವು ಇಂಥ ಕೆಲವು ಸಸ್ಯಗಳು. ಹುಲ್ಲೂ ಧಾರಾಳ. ಜೌಗು ನೆಲದಲ್ಲಿ ಫರ್ನ್ ಮತ್ತು ಸೆಡ್ಜ್ ಬೆಳೆಯುತ್ತದೆ. ಇಲ್ಲಿದ್ದ ಅನೇಕ ಸಸ್ತನಿ ಪ್ರಾಣಿಗಳು ಈ ನಾಡಿನ ದೀರ್ಘ ಭೂಇತಿಹಾಸ ಕಾಲದಲ್ಲಿ ನಶಿಸಿ ಹೋಗಿವೆ. ಈಚಿನವರೆಗೂ ಇದ್ದ ತೋಳ ಈಗಿಲ್ಲ. ಕೆಂಪು ಜಿಂಕೆಯೂ ಹೆಚ್ಚು ಕಡಿಮೆ ಸಾಕುಪ್ರಾಣಿಯಾಗಿದೆ. ನರಿಯೂ ಮೊಲವೂ ಬೇಟೆಗಾರನ ಸ್ವಾರ್ಥಮೂಲವಾದ ಕೃಪೆಯಿಂದ ಇನ್ನೂ ಉಳಿದಿವೆ. ಕುಂದಿಲಿಯೂ ಅಳಿಲೂ ಸ್ವಬುದ್ಧಿಬಲದಿಂದ ಪುರೋಭಿವೃದ್ಧಿ ಹೊಂದುತ್ತಿವೆ. ಜೌಗು ನೆಲಗಳೂ ಹಳ್ಳ ಕೊಳ್ಳಗಳೂ ಬತ್ತಿರುವುದುರಿಂದಲೂ ರಕ್ಷಣೆಯ ಅಭಾವದಿಂದಲೂ ಅನೇಕ ಹಕ್ಕಿಗಳು ಕಣ್ಮರೆಯಾಗಿವೆ. ಇಂಗ್ಲಿಷ್ ಗುಬ್ಬಚ್ಚಿಯೂ ಪಾರಿವಾಳವೂ ರೆಡ್‍ಬ್ರೆಸ್ಟ್ ಪಕ್ಷಿಯೂ ಉಳಿದುಕೊಂಡಿವೆ. ಬ್ಲಾಕ್‍ಬರ್ಡ್, ಕಕ್ಕೂ, ಲಾರ್ಕ್, ನೈಟಿಂಗೇಲ್, ಟಿಟ್‍ಮೌಸ್, ಫೆಸೆಂಟ್ ಮುಂತಾದವು ಇನ್ನೂ ಬದುಕಿವೆ.

ಜನಸಾಂದ್ರತೆ, ಜನಜೀವನ

ಬದಲಾಯಿಸಿ
 
King Henry VIII became Supreme Head of the Church of England
 
Cotton mills in Manchester, the world's "first industrial city", circa 1820.[]

ಇಂಗ್ಲೆಂಡಿನ ಜನಸಂಖ್ಯೆ ಒಂದೇ ರೀತಿಯಾಗಿ ಹರಡಿಲ್ಲ. ನಗರ ಪ್ರದೇಶದಲ್ಲಿ ಎಕರೆಗೆ 200 ಜನರಿದ್ದರೆ ಪರ್ವತ ಪ್ರದೇಶದಲ್ಲಿ ನೂರು ಎಕರೆಗೆ ಒಬ್ಬನಂತೆಯೂ ಇಲ್ಲ. ಕಲ್ಲಿದ್ದಲ ಗಣಿಗಳ ಬಳಿಯ ಕೈಗಾರಿಕಾ ಕೇಂದ್ರಗಳಲ್ಲೂ ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಗ್‍ಹ್ಯಾಂ ಮುಂತಾದ ಕೈಗಾರಿಕಾ ನಗರಗಳಲ್ಲೂ ಜನಸಾಂದ್ರತೆ ಹೆಚ್ಚು. ವ್ಯವಸಾಯ ಪ್ರದೇಶಗಳಲ್ಲಿ ಸಾಂದ್ರತೆ ಕಮ್ಮಿ. ಕಳೆದ ಕೆಲವು ಶತಮಾನಗಳಲ್ಲಿ ವಿವಿಧ ಪ್ರದೇಶಗಳ ಜನಸಾಂದ್ರತೆ ವ್ಯತ್ಯಾಸವಾಗುತ್ತಿದೆ. ಮೊದಲು ಹಳ್ಳಿಗಳಿಂದ ಪಟ್ಟಣಗಳ ಕಡೆಗೆ ಜನಪ್ರವಾಹವಿತ್ತು. ಹೊಲಕ್ಕೆ ಆವರಣ ಹಾಕುವ ಚಳುವಳಿಯ ಫಲವಾಗಿ ಅನೇಕರು ನೆಲ ಕಳೆದುಕೊಂಡು ಪಟ್ಟಣಗಳಿಗೆ ಬಂದರು. ಹದಿನೆಂಟನೆಯ ಶತಮಾನದ ಕೊನೆಯಲ್ಲೂ ಹತ್ತೊಂಬತ್ತನೆಯ ಶತಮಾನದಲ್ಲೂ ಸಂಭವಿಸಿದ ಕೈಗಾರಿಕಾ ಕ್ರಾಂತಿಯಿಂದ ಪಟ್ಟಣಗಳು ಬೆಳೆದುವು. ಮೊದಲು ಕಲ್ಲಿದ್ದಲ ಗಣಿಗಳ ಬಳಿ ಜನದಟ್ಟಣೆ ಹೆಚ್ಚಿತು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಿಂದ ಕೈಗಾರಿಕೆಗಳು ಕಲ್ಲಿದ್ದಲನ್ನೇ ನೇರವಾಗಿ ಅವಲಂಬಿಸುವುದು ಕಮ್ಮಿಯಾಗಿ ಇತರ ಕಡೆಗಳಲ್ಲೂ ಕೈಗಾರಿಕೆಗಳು ಬೆಳೆದುವು. ಅನೇಕ ನಗರಗಳು ಅತಿಯಾಗಿ ಬೆಳೆದುವು. ಕೈಗಾರಿಕಾ ಜನಸಂಖ್ಯೆಯ ಭೌಗೋಲಿಕ ವಿತರಣೆಯನ್ನು ಕುರಿತ ಬಾರ್ಲೊ ಸಮಿತಿಯ ಸಲಹೆಯಂತೆ ಲಂಡನ್ನಿನ ಸುತ್ತಲೂ ವಾಯವ್ಯ ಇಂಗ್ಲೆಂಡಿನಲ್ಲೂ ಡರ್‍ಹ್ಯಾಮಿನಲ್ಲೂ ಹೆಚ್ಚುವರಿ ಜನಸಂಖ್ಯೆಗಾಗಿ ಹೊಸ ನಗರಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಯಿತು.[][] . 1944ರಲ್ಲಿ ರಚಿತವಾಗಿದ್ದ ವಿಚಾರಣಾ ಸಮಿತಿಯವರು 1949ರಲ್ಲಿ ನೀಡಿದ ವರದಿಯ ಪ್ರಕಾರ ಅಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಜನಸಂಖ್ಯೆಯ ಬೆಳವಣಿಗೆ ಹತ್ತೊಂಬತ್ತನೆಯ ಶತಮಾನದಲ್ಲಿದ್ದ ಬೆಳೆವಣಿಗೆಗಿಂತ ಕಮ್ಮಿ. ನಲವತ್ತೈದು ವರ್ಷಗಳ ಕೆಳಗಿನವರ ಮರಣ ಪ್ರಮಾಣ ಇಳಿಯುತ್ತಿದೆ. ಆಯುಃಪ್ರಮಾಣ ವಿಸ್ತರಿಸುತ್ತಿದೆ. ಜನನ ಪ್ರಮಾಣ 1920-22 ರಿಂದ 1933ರ ವರೆಗಿನ ಅವಧಿಯಲ್ಲಿ ಬಹಳಮಟ್ಟಿಗೆ ಇಳಿಯಿತು; 1933ರಿಂದ 1941ರ ವರೆಗೆ ಹೆಚ್ಚು ಕಡಿಮೆ ಸ್ಥಿರವಾಗಿತ್ತು; ೪೧-೪೨ರಿಂದ ಏರಲಾರಂಭಿಸಿತು. 1920 ರಿಂದ 1941ರ ವರೆಗೆ ಜನನ ಪ್ರಮಾಣ ಇಳಿದಿದ್ದರಿಂದ 1950ರ ಹಾಗೂ 1960ರ ದಶಕಗಳಲ್ಲಿ ಹದಿನೈದರಿಂದ ಹತ್ತೊಂಬತ್ತು ವಯಸ್ಸಿನ ವರೆಗಿನವರ ಪ್ರಮಾಣ ಇಳಿಯುವುದೆಂದೂ ಅರುವತ್ತೈದಕ್ಕಿಂತ ಹೆಚ್ಚು ವಯಸ್ಸಿನವರ ಪ್ರಮಾಣ ಏರುವುದೆಂದೂ ಆ ಸಮಿತಿ ಅಭಿಪ್ರಾಯಪಟ್ಟಿತ್ತು. ಇಂಗ್ಲೆಂಡಿನಲ್ಲಿ ಬಹಳ ಹಿಂದಿನಿಂದಲೂ ಗಂಡಸರಿಗಿಂತ ಹೆಂಗಸರ ಸಂಖ್ಯೆಯೇ ಹೆಚ್ಚಾಗಿದೆ; ಆದರೆ ಜನಿಸುವ ಶಿಶುಗಳಲ್ಲಿ ಗಂಡುಮಕ್ಕಳದೇ ಹೆಚ್ಚಿನ ಸಂಖ್ಯೆ. ಗಂಡಸರಲ್ಲಿ ಸಾವಿನ ಪ್ರಮಾಣ ಹೆಚ್ಚು. 1953ರಲ್ಲಿ ಪ್ರತಿಸಾವಿರ ಜನಸಂಖ್ಯೆಗೂ 12.2 ಮಂದಿ ಪುರುಷರೂ 10.7 ಮಂದಿ ಸ್ತ್ರೀಯರೂ ಸತ್ತರು.

 
2009 estimates of ethnic groups in England[೧೦]

ಇಂಗ್ಲೆಂಡಿನ ಜನರು ನಾನಾ ಬುಡಕ್ಕಟುಗಳಿಗೆ ಸೇರಿದವರಾದರೂ ಸಮಾನ ಲಕ್ಷಣ ಹೊಂದಿದ್ದಾರೆ. ಹಿಂದೆ ಇಲ್ಲಿದ್ದ ಪುರಾತನ ಶಿಲಾಯುಗದ ಜನರದಾಗಲಿ ಕಂದುಕಂಚಿನ ಯುಗದ ಜನರದಾಗಲಿ ಕುರುಹುಗಳು ಈಗಿನ ಜನರಲ್ಲಿ ಕಾಣಿಸುವುದಿಲ್ಲ. ಕೆಲ್ಟಿಕ್ ಮಾತಾಡುತ್ತಿದ್ದ ಒರಟಾದ, ಉದ್ದನೆಯ, ಉದ್ದತಲೆಯ, ನಸು ಹೊಂಬಣ್ಣದ ಬ್ರಿಟನ್ ಜನರ ಛಾಯೆ ಬಹುಮಟ್ಟಿಗೆ ವೇಲ್ಸಿನಲ್ಲೂ ಕೆಲಮಟ್ಟಿಗೆ ಇಂಗ್ಲೆಂಡಿನಲ್ಲೂ ಉಳಿದಿದೆ. ನಾಲ್ಕು ಶತಮಾನಗಳ ಕಾಲ ರೋಮನ್ನರು ಈ ದೇಶವನ್ನಾಕ್ರಮಿಸಿದ್ದರೆ ಫಲವಾಗಿ ನಿರೀಕ್ಷಿಸಿದಷ್ಟಿಲ್ಲದಿದ್ದರೂ ಅಷ್ಟಿಷ್ಟು ಮಟ್ಟಿಗಾದರೂ ಇಲ್ಲಿ ಮೆಡಿಟರೇನಿಯನ್ ಜನರ ಲಕ್ಷಣಗಳು ಬೆರೆತಿವೆ. ಆಂಗ್ಲ, ಸ್ಯಾಕ್ಸನ್, ಜೂಟ್ ಮತ್ತು ಡೇನ್ ವಲಸೆಗಾರರ ಗುಣಗಳು ಬಹಳಮಟ್ಟಿಗೆ ಮಿಶ್ರವಾಗಿವೆ. ನಾರ್ಮನ್ ಆಕ್ರಮಣವಾದ ಬಹುಕಾಲದ ಮೇಲೆ ಐರಿಷ್ ವಲಸೆಗಾರರೂ ಇಲ್ಲಿ ಮಿಶ್ರಗೊಂಡಿದ್ದಾರೆ. ಆದರೆ ನಾರ್ಮನ್ನರ ಪ್ರಭಾವ ತುಂಬ ಹೆಚ್ಚು. ಯಹೂದಿ ಹಾಗೂ ಹ್ಯೂಗನಾಟ್‍ಗಳ ರಕ್ತಗಳೂ ಸ್ವಲ್ಪ ಮಟ್ಟಿಗೆ ಬೆರೆತಿವೆ.

 
Westminster Abbey is a notable example of English Gothic architecture. The coronation of the British monarch traditionally takes place at the Abbey

1851ರಿಂದೀಚೆಗೆ ಬ್ರಿಟಿಷ್ ಜನಗಣತಿಯಲ್ಲಿ ಪ್ರಜೆಗಳ ಮತಸಂಬಂಧವಾದ ಅಂಕಿ ಅಂಶಗಳನ್ನು ಸೂಚಿಸುತ್ತಿಲ್ಲ. ಆಂಗ್ಲಿಕನ್ ಚರ್ಚಿಗೆ ಸೇರಿದವರಿಗಿಂತ ರೋಮನ್ ಕೆಥೋಲಿಕ್ ಚರ್ಚಿಗೆ ಸೇರಿದವರ ಸಂಖ್ಯೆಯೇ ಸ್ವಲ್ಪ ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಈ ಎರಡು ಪಂಗಡಗಳವರ ಸಂಖ್ಯೆಯನ್ನು ಸೇರಿಸಿದರೆ ಅದು ಇತರ ಎಲ್ಲ ಪ್ರಾಟೆಸ್ಟಂಟ್ ಪಂಗಡಗಳಿಗಿಂತ ಸ್ವಲ್ಪ ಹೆಚ್ಚು. ಆದರೂ ಇಂಗ್ಲೆಂಡಿನಲ್ಲೂ (ವೇಲ್ಸಿನಲ್ಲೂ) ನೆರವೇರುವ ಎಲ್ಲ ವಿವಾಹಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ಮದುವೆಗಳು ಆಂಗ್ಲಿಕನ್ ಚರ್ಚಿನಲ್ಲಿ ನಡೆಯುತ್ತವೆ. ನೂರಕ್ಕೆ ಹತ್ತಕ್ಕಿಂತ ಕಡಿಮೆ ಸಂಖ್ಯೆಯ ವಿವಾಹಗಳು ರೋಮನ್ ಕೆಥೋಲಿಕ್ ಚರ್ಚಿನಲ್ಲಿ ನಡೆಯುತ್ತವೆ. ಶೇಕಡಾ 30ರಷ್ಟು ಶಾಸನಿಕ ವಿವಾಹಗಳು ನಡೆಯುತ್ತವೆ. ಆಂಗ್ಲಿಕನ್ ಚರ್ಚಿಗೆ ವಿಧಿಬದ್ದವಾಗಿ ಸೇರದಿದ್ದರೂ ಇಂಗ್ಲೆಂಡಿನಲ್ಲಿ ಹೆಚ್ಚು ಸಂಖ್ಯೆಯ ಜನ ಆ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆಂಬುದು ಈ ಅಂಕಿಗಳಿಂದ ವ್ಯಕ್ತವಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Marden 2003, p. 460.
  2. Brewer 2006, p. 340.
  3. 2011 Census - Population and household estimates for England and Wales, March 2011. Accessed 31 May 2013.
  4. Office for National Statistics. "The Countries of the UK". statistics.gov.uk. Archived from the original on 20 December 2008. Retrieved 1 February 2009.
  5. "Countries within a country". number-10.gov.uk. Archived from the original on 9 February 2008. Retrieved 1 February 2009.
  6. "Changes in the list of subdivision names and code elements (Page 11)" (PDF). International Organization for Standardization. Retrieved 1 February 2009.
  7. "Manchester – the first industrial city". Entry on Sciencemuseum website. Archived from the original on 9 ಮಾರ್ಚ್ 2012. Retrieved 17 March 2012. {{cite web}}: Unknown parameter |deadurl= ignored (help)
  8. McNeil & Nevell 2000, p. 9.
  9. Birmingham City Council. "Heritage". visitbirmingham.com. Archived from the original on 26 April 2012. Retrieved 4 October 2009.
  10. "ONS: Population Estimates by Ethnic Group 2002–2009" (PDF). Archived from the original (PDF) on 26 June 2011. Retrieved 20 August 2011.


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: