26 ಮ್ಯಾಂಗನೀಸ್ಕಬ್ಬಿಣಕೊಬಾಲ್ಟ್
-

Fe

Ru
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಕಬ್ಬಿಣ, Fe, 26
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 8, 4, d
ಸ್ವರೂಪಲೋಹದ ಹೊಳಪು
ಅಣುವಿನ ತೂಕ 55.845(2) g·mol−1
ಋಣವಿದ್ಯುತ್ಕಣ ಜೋಡಣೆ [Ar] 4s2 3d6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 14, 2
ಭೌತಿಕ ಗುಣಗಳು
ಹಂತಘನ
ದ್ರವಸಾಂದ್ರತೆ at ಕ.ಬಿ.6.98 g·cm−3
ಕರಗುವ ತಾಪಮಾನ1811 K
(1538 °C, 2800 °ಎಫ್)
ಕುದಿಯುವ ತಾಪಮಾನ3134 K
(2862 °C, 5182 °F)
ಸಮ್ಮಿಲನದ ಉಷ್ಣಾಂಶ13.81 kJ·mol−1
ಭಾಷ್ಪೀಕರಣ ಉಷ್ಣಾಂಶ340 kJ·mol−1
ಉಷ್ಣ ಸಾಮರ್ಥ್ಯ(25 °C) 25.10 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1728 1890 2091 2346 2679 3132
ಅಣುವಿನ ಗುಣಗಳು
ಸ್ಪಟಿಕ ಸ್ವರೂಪbody-centered cubic
a=286.65 pm;
face-centered cubic
between 1185–1667 K
ಆಕ್ಸಿಡೀಕರಣ ಸ್ಥಿತಿಗಳು6, 5 [೧], 4, 3, 2, 1 [೨]
(amphoteric oxide)
ವಿದ್ಯುದೃಣತ್ವ1.83 (Pauling scale)
ಅಣುವಿನ ತ್ರಿಜ್ಯ140 pm
ಅಣುವಿನ ತ್ರಿಜ್ಯ (ಲೆಖ್ಕಿತ)156 pm
ತ್ರಿಜ್ಯ ಸಹಾಂಕ125 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆferromagnetic
{{{ಕ್ಯೂರಿ ಬಿಂದು}}} K
ವಿದ್ಯುತ್ ರೋಧಶೀಲತೆ(20 °C) 96.1 nΩ·m
ಉಷ್ಣ ವಾಹಕತೆ(300 K) 80.4 W·m−1·K−1
ಉಷ್ಣ ವ್ಯಾಕೋಚನ(25 °C) 11.8 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) (electrolytic)
5120 m·s−1
ಯಂಗ್ ಮಾಪಾಂಕ211 GPa
ವಿರೋಧಬಲ ಮಾಪನಾಂಕ82 GPa
ಸಗಟು ಮಾಪನಾಂಕ170 GPa
ವಿಷ ನಿಷ್ಪತ್ತಿ 0.29
ಮೋಸ್ ಗಡಸುತನ4.0
Vickers ಗಡಸುತನ608 MPa
ಬ್ರಿನೆಲ್ ಗಡಸುತನ490 MPa
ಸಿಎಎಸ್ ನೋಂದಾವಣೆ ಸಂಖ್ಯೆ7439-89-6
ಉಲ್ಲೇಖನೆಗಳು

ಕಬ್ಬಿಣ (Iron)ಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳಿಗೆ ತರಬಹುದು. ಹೆಚ್ಚಿನ ಮೂಲವಸ್ತುಗಳೊಂದಿಗೆ ರಾಸಾಯನಿಕವಾಗಿ ಸುಲಭವಾಗಿ ಬೆರೆಯುವುದರಿಂದ ವ್ಯಾಪಕವಾಗಿ ಬಳಕೆಯಲ್ಲಿದೆ.

ಇದು ಆವರ್ತಕೋಷ್ಟಕದಲ್ಲಿ 8ನೆಯ ಗುಂಪಿನ ಸಂಕ್ರಾಂತಿಲೋಹ. ಪರಮಾಣು ತೂಕ 55.847±0.003. ರಾಸಾಯನಿಕ ಸಂಕೇತ Fe (ಲ್ಯಾಟಿನ್ನಿನಲ್ಲಿ Ferrum). ನೈಸರ್ಗಿಕವಾಗಿ ದೊರೆಯುವ ಸಮಸ್ಥಾನಿಗಳು 54, 56, 57, 58. ಎಲೆಕ್ಟ್ರಾನಿಕ್ ವಿನ್ಯಾಸ ಅಯಾನಿಕ್ ತ್ರಿಜ್ಯ Fe+2 0.80 Å ; Fe+3 0.67 Å ಲೋಹ ತ್ರಿಜ್ಯ 1.2412 Å ಪ್ರಥಮ ಅಯಾನೀಕರಣ ವಿಭವ 7.896 eಗಿ; ದ್ವಿತೀಯ 16.5 eಗಿ.

ವಿಪುಲತೆಯಲ್ಲಿ ಲೋಹಗಳ ಪೈಕಿ ಕಬ್ಬಿಣಕ್ಕೆ ಎರಡನೆಯ ಸ್ಥಾನ (ಮೊದಲನೆಯದು ಅಲ್ಯೂಮಿನಿಯಮ್). ಭೂಮಿಯ ತಿರುಳಿನ ಬಹ್ವಂಶವೂ ಕಬ್ಬಿಣ ಲೋಹದಿಂದ ಕೂಡಿದೆ. ಹೊರಕವಚಕ್ಕೆ ಬಂದಂತೆ ಈ ಲೋಹ ಇತರ ಪದಾರ್ಥಗಳೊಡನೆ ಬೆರೆತು ರಾಸಾಯನಿಕ ಕ್ರಿಯೆಗಳು ಜರುಗಿ ಶುದ್ಧ ಕಬ್ಬಿಣವೆಂಬುದೊಂದು ವಿರಳ ವಸ್ತು ಎನ್ನಿಸಿದೆ. ಬಾಹ್ಯಾಕಾಶದಿಂದ ಭೂಮಿಗೆ ಕೆಡೆಯುವ ಉಲ್ಕಾಪಿಂಡಗಳೇ ಪ್ರಾಚೀನ ಮಾನವನಿಗೆ ಶುದ್ಧ ಕಬ್ಬಿಣ ಲೋಹದ ಮೂಲಗಳಾಗಿದ್ದುವು. ಆದ್ದರಿಂದ ಮಾನವ ಮೊತ್ತಮೊದಲು ಬಳಸಿದ ಕಬ್ಬಿಣ ಪ್ರಾಯಶಃ ಉಲ್ಕಾಪಿಂಡ ಮೂಲದ್ದಾಗಿರಬೇಕು. ಭೂಮಿಯಲ್ಲಿ ನಮಗೆ ದೊರೆಯುವ ಕಬ್ಬಿಣ ಸಂಯುಕ್ತ ರೂಪದಲ್ಲಿದೆ. ಕಬ್ಬಿಣದ ಪ್ರಮಾಣ ಹೆಚ್ಚಾಗಿರುವ ಕಬ್ಬಿಣದ ಅದಿರುಗಳ ನಿಕ್ಷೇಪಗಳು ಸಾಕಷ್ಟು ಇವೆ. ಇವುಗಳಿಂದ ಲೋಹವನ್ನು ಸುಲಭವಾಗಿಯೂ ಅಗ್ಗವಾಗಿಯೂ ಪಡೆಯುವ ಸಾಧ್ಯತೆಯೂ ಕಬ್ಬಿಣವನ್ನು ಇಂಗಾಲ ಮತ್ತು ಇತರ ವಿಶೇಷ ಲೋಹಗಳೊಡನೆ ಸೂಕ್ತ ಪ್ರಮಾಣಗಳಲ್ಲಿ ಮಿಶ್ರಿಸುವುದರಿಂದ ಮತ್ತು ಉಷ್ಣ ನಿಯಂತ್ರಣದಿಂದ ಅಪೇಕ್ಷಿತ ದೃಢತೆ, ಕಾಠಿನ್ಯ ಮತ್ತು ಇತರ ಗುಣಗಳಿರುವ ವಿವಿಧ ರೀತಿಯ ಉಕ್ಕುಗಳ ತಯಾರಿಕೆಯ ಸೌಲಭ್ಯವೂ ಕಬ್ಬಿಣಕ್ಕೆ ಲೋಹಗಳ ಪೈಕಿ ಅಗ್ರಸ್ಥಾನವನ್ನು ತಂದುಕೊಟ್ಟಿವೆ.

ಕಬ್ಬಿಣದ ಅದಿರುಗಳು ಬದಲಾಯಿಸಿ

ಅದಿರುಗಳಾಗಿ ಉಪಯೋಗಿಸಲು ಯೋಗ್ಯವಾದ ಕಬ್ಬಿಣದ ಖನಿಜಗಳಲ್ಲಿ ಈ ಕೆಳಗಿನವು ಮುಖ್ಯವಾದವು- ಹೆಮಟೈಟ್ Fe2O3 (ಕಬ್ಬಿಣದ ಅಂಶ 70%); ಮ್ಯಾಗ್ನಟೈಟ್ Fe3O4 (ಕಬ್ಬಿಣದ ಅಂಶ 72.4%); ಸಿಡರೈಟ್ FeCO3 (ಕಬ್ಬಿಣದ ಅಂಶ 48.38%). ಈ ಅದಿರುಗಳು ಬೃಹತ್ ಪ್ರಮಾಣದಲ್ಲಿ ಶುದ್ಧರೂಪದಲ್ಲಿ ದೊರಕುವುದು ವಿರಳ. ಸಾಮಾನ್ಯವಾಗಿ ಇದರೊಡನೆ ಕಲ್ಲುಮಣ್ಣುಗಳು-ವಿಶೇಷವಾಗಿ ಸಿಲಿಕೇಟುಗಳು ಮಿಶ್ರಿತವಾಗಿರುವುವು. ಅನೇಕ ವೇಳೆ ಸಲ್ಫೈಡುಗಳು, ಫಾಸ್ಫೇಟುಗಳು ಈ ಅದಿರುಗಳಲ್ಲಿ ಅಪದ್ರವ್ಯಗಳಾಗಿರುವುದುಂಟು. ಹೇರಳವಾಗಿ ದೊರೆಯುವ ಆದರೆ ಕಬ್ಬಿಣದ ತಯಾರಿಕೆಗೆ ಉಪಯೋಗವಲ್ಲದ ಇನ್ನೊಂದು ಖನಿಜ ಪಿರೈಟೀಸ್ FeS2. ಸಲ್ಫ್ಯೂರಿಕ್ ಆಮ್ಲದ ತಯಾರಿಕೆಗೆ ಅವಶ್ಯವಾದ ಸಲ್ಫರ್ ಡೈ ಆಕ್ಸೈಡಿನ ತಯಾರಿಕೆಗೆ ಇದನ್ನು ಉಪಯೋಗಿಸುವರು. ಬ್ಯಾಕೋನೈಟ್ ಎಂಬ ಸಿಲಿಕೇಟ್ ಅದಿರು ಭಾರಿ ಪ್ರಮಾಣದಲ್ಲಿ ಸಂಯುಕ್ತ ಸಂಸ್ಥಾನದಲ್ಲಿರುವ ಇನ್ನೊಂದು ಕಬ್ಬಿಣದ ಅದಿರು. ಆದರೆ ಇದರಲ್ಲಿ ಕಬ್ಬಿಣದ ಅಂಶ ಶೇ.20-30 ಆಗಿದ್ದು, ಇದರಿಂದ ಲೋಹವನ್ನು ಲಾಭದಾಯಕ ರೀತಿಯಲ್ಲಿ ಪಡೆಯುವ ವಿಧಾನವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ. ಪ್ರಾಯಶಃ ಭವಿಷ್ಯದಲ್ಲಿ ಇದು ಕಬ್ಬಿಣದ ಮುಖ್ಯ ಮೂಲಗಳಲ್ಲಿ ಒಂದಾಗಬಹುದು.

ಕಬ್ಬಿಣದ ತಯಾರಿಕೆ ಬದಲಾಯಿಸಿ

ಈಗ್ಗೆ ಸು. 4,000 ವರ್ಷಗಳ ಹಿಂದೆಯೇ ಮಾನವ ಕಬ್ಬಿಣವನ್ನು ಉಪಯೋಗಿಸುತ್ತಿದ್ದನೆಂಬುದಕ್ಕೆ ಸಾಕ್ಷ್ಯಗಳು ದೊರಕಿವೆ. ಪ್ರಾಚೀನರು ಕಬ್ಬಿಣವನ್ನು ಅದಿರುಗಳಿಂದ ಒಂದು ರೀತಿಯ ಒರಟು ಕುಲುಮೆಗಳಲ್ಲಿ ತಯಾರಿಸುತ್ತಿದ್ದರು. ಕಬ್ಬಿಣದ ಅದಿರನ್ನು ಇದ್ದಲಿನೊಡನೆ ಮಿಶ್ರಮಾಡಿ ಈ ರಾಶಿಯ ಮೂಲಕ ಗಾಳಿ ಬೀಸುವಂತೆ ತಳದಲ್ಲಿ ಒಂದು ರಂಧ್ರ ಮತ್ತು ಮೇಲ್ಭಾಗದಲ್ಲಿ ಒಂದು ರಂಧ್ರವನ್ನಿಟ್ಟು ಅನಂತರ ಇದ್ದಲನ್ನು ಹೊತ್ತಿಸುತ್ತಿದ್ದರು. ಒಂದು ಭಾಗ ಇದ್ದಲು ಉರಿದು ಕಾರ್ಬನ್ ಡೈ ಆಕ್ಸೈಡ್ ಆಗುತ್ತಿತ್ತು. ಇದು ಮೇಲೇರಿ ಇದ್ದಲಿನಿಂದ ಅಪಕರ್ಷಿತವಾಗಿ ಕಾರ್ಬನ್ ಮಾನಾಕ್ಸೈಡ್ ಆಗಿ ಕಬ್ಬಿಣದ ಆಕ್ಸೈಡನ್ನು ಕಬ್ಬಿಣವಾಗಿ ಅಪಕರ್ಷಿಸುತ್ತಿತ್ತು. ಆಧುನಿಕ ರೀತಿಯಲ್ಲಿ ಕಬ್ಬಿಣದ ತಯಾರಿಕೆ 1620ರಿಂದ ಆರಂಭವಾಯಿತೆನ್ನಬಹುದು. ಈಗ ಕಬ್ಬಿಣದ ಅದಿರುಗಳನ್ನು ಊದು ಕುಲುಮೆಗಳಲ್ಲಿ ಕರಗಿಸಿ ಕಬ್ಬಿಣವನ್ನು ತಯಾರಿಸುವರು.

ಕುಲುಮೆಯಲ್ಲಿ ಅನೇಕ ರಾಸಾಯನಿಕ ವರ್ತನೆಗಳಾಗುವ ಪರಿಣಾಮವಾಗಿ ಕರಗಿದ ಕಬ್ಬಿಣ ಮತ್ತು ಕರಗಿದ ಕಿಟ್ಟಗಳು (ಸ್ಲ್ಯಾಗ್) ಉತ್ಪನ್ನವಾಗುವುವು. ಹೆಚ್ಚು ಸಾಂದ್ರವಾದ ಕರಗಿದ ಕಬ್ಬಿಣ ಕುಲುಮೆಯ ತಳದಲ್ಲಿ ಶೇಖರವಾಗುವುದು. ಇದರ ಮೇಲ್ಭಾಗದಲ್ಲಿ ಕಿಟ್ಟ ಶೇಖರವಾಗುವುದು. ನಿರ್ದಿಷ್ಟ ಅವಧಿಗಳಲ್ಲಿ ಕುಲುಮೆಯ ತಳದಲ್ಲಿರುವ ಲೋಹದ್ವಾರವನ್ನು ತೆರೆದು ಕಬ್ಬಿಣವನ್ನು ಈಚೆಗೆ ಹರಿಸಿ ಇದನ್ನು ಮರಳಿನಿಂದ ಮಾಡಿದ ಅಚ್ಚುಗಳಿಗೆ ಹಾಯಿಸಿ ಕಬ್ಬಿಣದ ತುಂಡುಗಳನ್ನಾಗಿ ಮಾಡುವರು. ಸ್ವಲ್ಪ ಮೇಲಿರುವ ಇನ್ನೊಂದು ರಂಧ್ರದ ಮೂಲಕ ಕಿಟ್ಟ ಸಂತತವಾಗಿ ಹೊರಹರಿಯುವುದು.

ಕುಲುಮೆಯಲ್ಲಿ ನಡೆಯುವ ರಾಸಾಯನಿಕ ವರ್ತನೆಗಳು ಬದಲಾಯಿಸಿ

ತಳದಿಂದ ಕುಲುಮೆಯನ್ನು ಪ್ರವೇಶಿಸುವ ಗಾಳಿ ಕೋಕ್ನ ಒಂದು ಭಾಗವನ್ನು ಉರಿಸಿ ಕಾರ್ಬನ್ ಡೈ ಆಕ್ಸೈಡಿಗೆ ಪರಿವರ್ತಿಸುವುದು. ಈ ಪ್ರದೇಶದಲ್ಲಿ ಉಷ್ಣತೆ ಸು. 16000 sಸೆಂ. ಇಲ್ಲಿಂದ ಮೇಲಕ್ಕೆ ಹೋದಂತೆಲ್ಲ ಉಷ್ಣತೆ ಕಡಿಮೆಯಾಗುತ್ತ ಹೋಗುವುದು. ಅದು 13000- ಸೆಂ. ಇರುವ ಭಾಗದಲ್ಲಿ ಸುಣ್ಣ ಕಲ್ಲು ವಿಭಜಿಸಿ ಸುಟ್ಟ ಸುಣ್ಣ (CaO) ಮತ್ತು ಕಾರ್ಬನ್ ಡೈ ಆಕ್ಸೈಡುಗಳು (CO2) ಉಂಟಾಗುವುವು. ಈ ಪ್ರದೇಶದಲ್ಲಿಯೂ ಇಲ್ಲಿಂದ ಕೆಳಗೂ ಅದಿರಿನ ಅಪದ್ರವ್ಯಗಳಾದ ಮರಳು ಮತ್ತು ಫಾಸ್ಫೇಟುಗಳು ಸುಟ್ಟಸುಣ್ಣದೊಡನೆ ವರ್ತಿಸಿ, ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಫಾಸ್ಫೇಟುಗಳಾಗಿ ಪರಿವರ್ತಿತವಾಗುವುವು. ಸುಮಾರು ಇದೇ ಪ್ರದೇಶದಲ್ಲಿ ಕಾರ್ಬನ್ ಡೈ ಆಕ್ಸೈಡ್ ಕೋಕ್ ನಿಂದ ಕಾರ್ಬನ್ ಮಾನಾಕ್ಸೈಡಿಗೆ ಅಪಕರ್ಷಿತವಾಗುವುದು. ಕಬ್ಬಿಣದ ಆಕ್ಸೈಡನ್ನು ಕಬ್ಬಿಣಕ್ಕೆ ಅಪಕರ್ಷಿಸುವ ಮುಖ್ಯ ಅಪಕರ್ಷಣಾಕಾರಿ ಕಾರ್ಬನ್ ಮಾನಾಕ್ಸೈಡ್. ಕಬ್ಬಿಣದ ಮಾನಾಕ್ಸೈಡಿನ ಅಪಕರ್ಷಣ ಕಾರ್ಯ ಉಷ್ಣತೆ ಸು. 400-ಸೆಂ. ಇರುವ ಕುಲುಮೆಯ ಮೇಲ್ಭಾಗದಲ್ಲಿಯೇ ಆರಂಭವಾಗುವುದು. ಕಾರ್ಬನ್ ಮಾನಾಕ್ಸೈಡ್ ಫೆರಿಕ್ ಆಕ್ಸೈಡನ್ನು ಮೊದಲು ಫೆರಸ್ ಆಕ್ಸೈಡಿಗೂ ಅನಂತರ ಕಬ್ಬಿಣಕ್ಕೂ ಅಪಕರ್ಷಿಸುವುದು. ಈ ವರ್ತನೆಗಳು ಹಿಮ್ಮರುಳುವ ವರ್ತನೆಳಾಗಿದ್ದು, ಪರಿವರ್ತನಾನಂತರವೂ ಗಣನೀಯ ಪ್ರಮಾಣದಲ್ಲಿ ಕಾರ್ಬನ್ ಮಾನಾಕ್ಸೈಡ್ ಇರುವುದು. ಅಲ್ಪ ಭಾಗ ಫೆರಿಕ್ ಆಕ್ಸೈಡ್ ಇದ್ದಲಿನಿಂದ ನೇರವಾಗಿ ಅಪಕರ್ಷಿತವಾಗುವುದು. ಹೀಗೆ ಉಂಟಾದ ಕಬ್ಬಿಣದ ಮೇಲೆ ಇಂಗಾಲ ಶೇಖರಿಸುವುದು. ಈ ಇಂಗಾಲ ಶೇಖರಣೆ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಮತ್ತು ಕಾರ್ಬನ್ ಆಗಿ ವಿಭಜಿಸುವುದರಿಂದ ಆದದ್ದು. ಈ ಕಬ್ಬಿಣ ಸು. 12000- ಸೆಂ. ಉಷ್ಣತೆಯ ಪ್ರದೇಶಕ್ಕೆ ಬಂದಾಗ ಕರಗಿ ದ್ರವವಾಗುವುದು. ಕರಗಿದ ಕಬ್ಬಿಣದಲ್ಲಿ ಶೇ. 3-4 ಭಾಗ ಇಂಗಾಲ ವಿಲೀನವಾಗುವುದು. ಕುಲುಮೆಯಲ್ಲಿ ನಡೆಯುವ ಮುಖ್ಯ ರಾಸಾಯನಿಕ ಕ್ರಿಯೆಗಳನ್ನು ಕೆಳಗಿನ ಸಮೀಕರಣಗಳು ಸೂಚಿಸುತ್ತವೆ.

ತಾಂಡವಾಳ (ಕ್ಯಾಸ್ಟ್‌ ಐರನ್) ಬದಲಾಯಿಸಿ

ಊದು ಕುಲುಮೆಯಿಂದ ಹೊರಬಂದ ಕಬ್ಬಿಣಕ್ಕೆ ತಾಂಡವಾಳವೆಂದು ಹೆಸರು. ಇದರಲ್ಲಿ ಶೇ.3-4.5 ಭಾಗದಷ್ಟು ಇಂಗಾಲವೂ ಅಲ್ಪಪ್ರಮಾಣದಲ್ಲಿ ಸಿಲಿಕಾನ್, ಮ್ಯಾಂಗನೀಸ್, ಸಲ್ಫರ್ ಮತ್ತು ಫಾಸ್ಫರಸುಗಳೂ ಇವೆ. ಕರಗಿದ ತಾಂಡವಾಳವನ್ನು ದೊಡ್ಡ ದೊಡ್ಡ ಮೂಸೆಗಳಿಗೆ ಹಾಯಿಸಿ ಅದನ್ನು ನೇರವಾಗಿ ಉಕ್ಕಿನ ತಯಾರಿಕೆಗೆ ಉಪಯೋಗಿಸುವರು. ಅಥವಾ ಇದನ್ನು ಕಬ್ಬಿಣದ ತುಂಡುಗಳಾಗಿ ಅಚ್ಚು ಹಾಕಿ ಅದನ್ನು ಇತರ ಕಾರ್ಯಗಳಿಗೆ ಉಪಯೋಗಿಸುವರು.

ತಾಂಡವಾಳದಲ್ಲಿ ಎರಡು ವಿಧಗಳು : 1. ಬೂದು ತಾಂಡವಾಳ, 2. ಬಿಳಿಯ ತಾಂಡವಾಳ. ಮರಳಿನ ಅಚ್ಚುಗಳಲ್ಲಿ ಅಚ್ಚು ಹಾಕಿ ಪಡೆದ ತಾಂಡವಾಳ ಬೂದು ತಾಂಡವಾಳ. ಇದನ್ನು ಬೆಸೆಯಲಾಗಲಿ ತಗಡಾಗಿ ಮಾಡಲಾಗಲಿ ಸಾಧ್ಯವಿಲ್ಲ. ಇದು ತುಂಬ ಪೆಡಸು (ಬ್ರಿಟಲ್) ಆಗಿರುವುದು. ಅಚ್ಚು ಹಾಕಿ ತಯಾರಿಸುವ ಕಬ್ಬಿಣದ ಒಲೆಗಳು, ಗ್ರೇಟಿಂಗುಗಳು ಮುಂತಾದ ಸಾಮಾನುಗಳನ್ನು ಮಾತ್ರ ಇದರಿಂದ ತಯಾರಿಸಬಹುದು. ಕರಗಿದ ಕಬ್ಬಿಣ ಘನವಾದಾಗ ಇದರಲ್ಲಿರುವ ಇಂಗಾಲದ ಬಹುಭಾಗ ಸಿಮೆಂಟೈಟ್ ಎಂಬ ಕಬ್ಬಿಣದ ಕಾರ್ಬೈಡ್ ರೂಪದಲ್ಲಿರುವುದು. ಕಾದ ಕಬ್ಬಿಣ ನಿಧಾನವಾಗಿ ತಣ್ಣಗಾದಾಗ, ಈ ಕಾರ್ಬೈಡು ವಿಭಜಿಸಿ, ಇಂಗಾಲವು ಗ್ರಾಫೈಟ್ ರೂಪದಲ್ಲಿ ಹೊರಸೂಸುವುದು. ಬೂದು ತಾಂಡವಾಳ ಬಣ್ಣ ಮತ್ತು ಅದರ ಇತರ ಗುಣಗಳಿಗೆ ಹೀಗೆ ಉಂಟಾದ ಗ್ರಾಫೈಟು ಮುಖ್ಯ ಕಾರಣ. ಕಬ್ಬಿಣ ನಿಧಾನವಾಗಿ ತಣ್ಣಗಾಗುವುದನ್ನು ತಡೆದು ಥಟ್ಟನೆ ಶೈತ್ಯಗೊಳಿಸಿದರೆ ಅದರಲ್ಲಿರುವ ಇಂಗಾಲದ ಬಹುಭಾಗ ಸಿಮೆಂಟೈಟ್ ರೂಪದಲ್ಲಿಯೇ ಇರುವುದು. ಇದೇ ಬಿಳಿಯ ತಾಂಡವಾಳ. ಇದಕ್ಕೆ ಹೆಚ್ಚಿನ ಕಾಠಿಣ್ಯ ಮತ್ತು ಪೆಡಸುತನವಿದ್ದು ಇದು ಸವೆತವನ್ನು ನಿರೋಧಿಸುತ್ತದೆ. ಬಿಳಿಯ ತಾಂಡವಾಳವನ್ನು 50-70 ಗಂಟೆಗಳವರೆಗೆ ಕೆಂಗಾವಿನಲ್ಲಿಟ್ಟು ನಿಧಾನವಾಗಿ ತಣಿಸಿದರೆ, ಮೆದು ತಾಂಡವಾಳ (ಮ್ಯಾಲಿಯೇಬಲ್ ಕ್ಯಾಸ್ಟ್‌ ಐರನ್) ಉಂಟಾಗುವುದು. ಈ ವಿಧವಾದ ತಾಂಡವಾಳದಲ್ಲಿ ಭಾರಿ ಪ್ರಮಾಣದ ಯಂತ್ರಗಳ ಕೆಲವು ಭಾಗಗಳ ಮತ್ತು ಕೃಷಿ ಸಾಧನಗಳ ತಯಾರಿಕೆಗೆ ಅಪೇಕ್ಷಣೀಯವಾದ ಗುಣಗಳು ಇವೆ. ಇದು ಅಷ್ಟೊಂದು ಕಠಿಣವಾಗಿಲ್ಲ, ಆದರೂ ಹೆಚ್ಚು ಬಲಯುತವಾಗಿದೆ. ಇದನ್ನು ಬೆಸೆಯಲಾಗುವುದಿಲ್ಲ. ತಾಂಡವಾಳದ ಕರಗುವ ಉಷ್ಣತೆ ಶುದ್ಧ ಕಬ್ಬಿಣದ ಕರಗುವ ಉಷ್ಣತೆಗಿಂತ ಕಡಿಮೆ. ತಾಂಡವಾಳವನ್ನು ಕರಗಿಸಿ ಅಚ್ಚು ಹಾಕುವುದು ಸುಲಭ.

ಮೆದು ಕಬ್ಬಿಣ (ರಾಟ್ ಐರನ್) ಬದಲಾಯಿಸಿ

ಇದು ತಕ್ಕ ಮಟ್ಟಿಗೆ ಶುದ್ಧವಾಗಿರುವ ಕಬ್ಬಿಣ. ಊದು ಕುಲುಮೆಯ ಉತ್ಪನ್ನದ ಕಬ್ಬಿಣದಲ್ಲಿರುವ ಅಪದ್ರವ್ಯಗಳನ್ನು ಉರಿಸಿ ತೆಗೆದು ಇದನ್ನು ತಯಾರಿಸುವರು. ಇದರ ತಯಾರಿಕೆಗೆ ಪ್ರತಿವರ್ತಕ ಕುಲುಮೆಯನ್ನು ಉಪಯೋಗಿಸುತ್ತಾರೆ. ಹೀಗೆ ತಯಾರಿಸಿದ ಕಬ್ಬಿಣದಲ್ಲಿ ಇಂಗಾಲ ಶೇ. 0.2 ಕ್ಕಿಂತ ಕಡಿಮೆ ಇರುವುದು. ಇದು ನಾರಾಗಿದ್ದು, ತಾಂಡವಾಳಕ್ಕಿಂತ ಬಿಗಿಯಾಗಿಯೂ ಮೆದುವಾಗಿಯೂ ಇರುವುದು. ಆದರೆ ಇದು ಉಕ್ಕಿನಷ್ಟು ಬಲವಾಗಿಲ್ಲ. ಇದನ್ನು ಕೊಡತಿಯಿಂದ ತಟ್ಟಬಹುದು, ಬೆಸೆಯಬಹುದು, ತಗಡಾಗಿ ಮಾಡಬಹುದು. ಕೆಂಗಾವಿನಲ್ಲಿ ತಟ್ಟಿ ಮಾಡಬಹುದಾದಂಥ ನೇಗಿಲಕುಳ, ಕುದುರೆಯ ಲಾಳ ಮುಂತಾದ ಸಾಮಾನುಗಳನ್ನು ಇದರಿಂದ ತಯಾರಿಸುತ್ತಾರೆ.

ಶುದ್ಧ ಕಬ್ಬಿಣ ಬದಲಾಯಿಸಿ

ಶುದ್ಧ ಕಬ್ಬಿಣವನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸುವುದಿಲ್ಲ. ಪ್ರಯೋಗಶಾಲೆಗಳಲ್ಲಿಯೂ ಇದೇನೂ ಹೆಚ್ಚಿನ ಬಳಕೆಯಲ್ಲಿಲ್ಲ. ಶುದ್ಧವಾದ ಫೆರಿಕ್ ಆಕ್ಸೈಡನ್ನು ಕಾಯಿಸಿ ಅದನ್ನು ಹೈಡ್ರೋಜನಿನಿಂದ ಅಪಕರ್ಷಿಸಿ ಶುದ್ಧವಾದ ಕಬ್ಬಿಣವನ್ನು ಪಡೆಯಬಹುದು. ಮಾರಿಕೆಯ ಕಬ್ಬಿಣಗಳ ಪೈಕಿ ಮೆದುಕಬ್ಬಿಣ ಶುದ್ಧ ಕಬ್ಬಿಣಕ್ಕೆ ಅತಿ ನಿಕಟವರ್ತಿಯಾಗಿರುವುದು. ಶುದ್ಧ ಕಬ್ಬಿಣ 15300ಸೆಂ. ನಲ್ಲಿಯೂ ಮೆದು ಕಬ್ಬಿಣ 15000 ಸೆಂ.ನಲ್ಲಿಯೂ, ತಾಂಡವಾಳ 11000 ಸೆಂ.ನಲ್ಲಿಯೂ ಕರಗುತ್ತವೆ. ಶುದ್ಧ ಕಬ್ಬಿಣಕ್ಕೆ ಬೆಳ್ಳಿಯ ಬಿಳುಪಿನ ಪ್ರಕಾಶ ಇದೆ. ಇದು ತಕ್ಕಮಟ್ಟಿಗೆ ಮೃದುವಾಗಿದೆ. ಇದನ್ನು ತಗಡಾಗಿ ತಟ್ಟಬಹುದು, ತಂತಿಯಾಗಿ ಎಳೆಯಬಹುದು. ಮಾರಿಕೆಯ ಯಾವ ಕಬ್ಬಿಣಕ್ಕಿಂತಲೂ ಹೆಚ್ಚಿನ ಕಾಂತತ್ವಗುಣ ಇದಕ್ಕೆ ಉಂಟು.

ಶುದ್ಧ ಕಬ್ಬಿಣದ ಆಲ್ಫ ಮತ್ತು ಗ್ಯಾಮ ಎಂಬ ಎರಡು ಭಿನ್ನ ಭೌತರೂಪಗಳಿವೆ. ಕಬ್ಬಿಣ ಮತ್ತು ಉಕ್ಕುಗಳ ಗುಣಗಳು ಅವುಗಳಲ್ಲಿ ಕಬ್ಬಿಣ ಯಾವ ಭೌತರೂಪದಲ್ಲಿದೆ ಮತ್ತು ಅದರಲ್ಲಿರುವ ಇಂಗಾಲ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ಅವಲಂಬಿಸಿವೆ; ಸಾಮಾನ್ಯ ಉಷ್ಣತೆಗಳಲ್ಲಿ ದೃಢವಾದ ಕಬ್ಬಿಣದ ರೂಪವನ್ನು ಆಲ್ಫ ಕಬ್ಬಿಣ ಅಥವಾ ಫೆರೈಟ್ ಎನ್ನುತ್ತಾರೆ. ಫೆರೈಟ್ ಮೃದುವಾದದ್ದು ಮತ್ತು ಇದರಲ್ಲಿ ಇಂಗಾಲ ಅದ್ರಾವ್ಯ. 9000 ಸೆಂ. ಉಷ್ಣತೆಗಿಂತ ಮೇಲಿನ ಉಷ್ಣತೆಗಳಲ್ಲಿ ಆಲ್ಫ ಕಬ್ಬಿಣ ಗ್ಯಾಮ ಕಬ್ಬಿಣವೆಂಬ ಇನ್ನೊಂದು ರೂಪಕ್ಕೆ ಪರಿವರ್ತಿತವಾಗುತ್ತದೆ. ಮೇಲಿನ ಉಷ್ಣತೆಗೆ ಕಾಯಿಸಿದ ಉಕ್ಕುಗಳಲ್ಲಿ ಗ್ಯಾಮ ಕಬ್ಬಿಣವಿದೆ. ಗ್ಯಾಮ ಕಬ್ಬಿಣದಲ್ಲಿ ಇಂಗಾಲ ಶೇ. 1.5-2 ರಷ್ಟು ದ್ರಾವ್ಯ. ಹೀಗೆ ಮೇಲಿನ ಅಥವಾ ಎಣ್ಣೆಯಲ್ಲಿ ಅದ್ದಿ ಶೈತ್ಯಗೊಳಿಸಿದರೆ ಉಂಟಾಗುವ ಕಬ್ಬಿಣ ಸಿಮೆಂಟೈಟ್ Fe3C ಎಂಬ ಕಬ್ಬಿಣದ ಕಾರ್ಬೈಡ್ ವಿಲೀನವಾದ ಗ್ಯಾಮ ಕಬ್ಬಿಣ. ಸಿಮೆಂಟೈಟ್ ವಿಲೀನವಾದ ಗ್ಯಾಮ ಕಬ್ಬಿಣಕ್ಕೆ ಆಸ್ಟನೈಟ್ ಎಂದು ಹೆಸರು. ಥಟ್ಟನೆ ಶೈತ್ಯಗೊಳಿಸುವುದರಿಂದ ಕಬ್ಬಿಣದ ರಚನೆಯಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಏಕೆಂದರೆ ಗ್ಯಾಮ ಕಬ್ಬಿಣ ಆಲ್ಫ ಕಬ್ಬಿಣವಾಗಿ ಪರಿವರ್ತಿಸುವ ಕ್ರಿಯೆ ಬಹಳ ನಿಧಾನವಾಗಿ ನಡೆಯುತ್ತದೆ. ಥಟ್ಟನೆ ಶೈತ್ಯಗೊಳಿಸಿದಾಗ ಗ್ಯಾಮ ಕಬ್ಬಿಣ ಆಲ್ಫ ಕಬ್ಬಿಣವಾಗಿ ಪರಿವರ್ತನೆ ಹೊಂದಲು ಮತ್ತು ಇಂಗಾಲದ ಸ್ಥಿತಿ ಮಾರ್ಪಾಡಾಗಲು ಕಾಲಾವಕಾಶವಿರುವುದಿಲ್ಲ. 900ಲಿಸೆಂ.ಗಿಂತ ಮೇಲಿನ ಉಷ್ಣತೆಗೆ ಉಕ್ಕನ್ನು ಕಾಯಿಸಿ ಅನಂತರ ನಿಧಾನವಾಗಿ ಅದನ್ನು ಶೈತ್ಯಗೊಳಿಸಿದರೆ ಆಲ್ಫ ರೂಪದ ಕಬ್ಬಿಣ ಉಂಟಾಗುವುದು. ಇನ್ನು 1400ಲಿ ಸೆಂ.ಗಿಂತ ಮೇಲಿನ ಉಷ್ಣತೆಯಲ್ಲಿ ದೃಢವಾದ ಡೆಲ್ಟರೂಪ ಬರುತ್ತದೆ.

ಹೋಲಿಕೆಯ ದೃಷ್ಟಿಯಿಂದ ಕಬ್ಬಿಣ ರಾಸಾಯನಿಕವಾಗಿ ಪಟುವಾದ ಲೋಹ. ತೇವದ ಗಾಳಿಯಲ್ಲಿ ಇದಕ್ಕೆ ತುಕ್ಕುಹಿಡಿಯುವುದು. ಅಂದರೆ ನೀರು, ಆಕ್ಸಿಜನ್ ಕಾರ್ಬನ್ ಡೈ ಆಕ್ಸೈಡ್ ಇವುಗಳ ವರ್ತನೆಯಿಂದ ಕಬ್ಬಿಣ ಅಂತ್ಯದಲ್ಲಿ ಹೈಡ್ರೇಟೆಡ್ ಫೆರಿಕ್ ಆಕ್ಸೈಡ್ ಆಗಿ ಕೊರೆದುಕೊಂಡು ಹೋಗುವುದು. ಕಬ್ಬಿಣಕ್ಕೆ ತುಕ್ಕು ಹಿಡಿಯುವುದರಿಂದ ಕೋಟ್ಯಂತರ ರೂಪಾಯಿಗಳ ನಷ್ಟ ಆಗುವುದೆಂದು ಅಂದಾಜು ಮಾಡಲಾಗಿದೆ. ಇದನ್ನು ತಪ್ಪಿಸಲು ಅನೇಕ ಕ್ರಮವನ್ನು ಕೈಗೊಂಡಿರುತ್ತಾರೆ. ಇವುಗಳ ಪೈಕಿ ಕಬ್ಬಿಣದ ಮೇಲೆ ಸತುವಿನ ಅಥವಾ ತವರದ ಒಂದು ತೆಳ್ಳನೆಯ ಪದರದ ಲೇಪ ಕೊಡುವುದು ಮುಖ್ಯವಾದದ್ದು. ಸಣ್ಣ ಕಣರೂಪದಲ್ಲಿ ಅಥವಾ ತೆಳ್ಳನೆಯ ತಂತಿರೂಪದಲ್ಲಿ ಇದು ಆಕ್ಸಿಜನಿನಲ್ಲಿ ಉರಿಯುವುದು. ಕೆಂಗಾವಿಗೆ ಕಾದ ಕಬ್ಬಿಣದ ಮೇಲೆ ನೀರಿನ ಹಬೆಯನ್ನು ಹಾಯಿಸಿದರೆ, ಕಬ್ಬಿಣದ ಆಕ್ಸೈಡು (Fe3O4) ಮತ್ತು ಹೈಡ್ರೊಜನುಗಳುಂಟಾಗುವುವು. ಹೈಡ್ರೊಕ್ಲೋರಿಕ್ ಆಮ್ಲ ಮತ್ತು ಸಾರರಿಕ್ತ ಸಲ್ಫ್ಯೂರಿಕ್ ಆಮ್ಲಗಳು ಇದರ ಮೇಲೆ ವರ್ತಿಸಿ ಹೈಡ್ರೊಜನ್ ಬಿಡುಗಡೆಯಾಗುವುದು. ಧೂಮಿಸುವ (ಫ್ಯೂಮಿಂಗ್) ನೈಟ್ರಿಕ್ ಆಮ್ಲದಲ್ಲಿ ಕಬ್ಬಿಣವನ್ನು ಅದ್ದಿದರೆ ಅದು ನಿಷ್ಕ್ರಿಯಗೊಳ್ಳುವುದು. ಅದನ್ನು ಕೊಡತಿಯಿಂದ ಹೊಡೆದರೆ ಅಥವಾ ಮೇಲ್ಮೈಯನ್ನು ಕೆರೆದರೆ ಪುನಃ ಪಟುವಾಗುವುದು. ಒದ್ದೆಯಾದ ಕಬ್ಬಿಣದ ಪುಡಿಯೊಡನೆ ಕ್ಲೋರಿನ್, ಬ್ರೋಮಿನ್ ಮತ್ತು ಅಯೊಡೀನುಗಳು ವರ್ತಿಸಿ ಕ್ರಮವಾಗಿ ಫೆರಿಕ್ ಕ್ಲೋರೈಡ್, ಬ್ರೋಮೈಡ್ ಮತ್ತು ಅಯೊಡೈಡುಗಳನ್ನು ಕೊಡುವುದು. ಕಾದ ಕಬ್ಬಿಣ ಗಂಧಕದೊಡನೆ ವರ್ತಿಸಿ ಫೆರಸ್ ಸಲ್ಫೈಡನ್ನು ಕೊಡುವುದು.

ಕಬ್ಬಿಣದ ಸಂಯುಕ್ತಗಳು ಬದಲಾಯಿಸಿ

ಸಂಯುಕ್ತಗಳಲ್ಲಿ ಕಬ್ಬಿಣ Fe2+ ಮತ್ತು Fe3+ ಉತ್ಕರ್ಷಣ ಸ್ಥಿತಿಯಲ್ಲಿರುವುದು. ಇವನ್ನು ಫೆರಸ್ ಮತ್ತು ಫೆರಿಕ್ ಸಂಯುಕ್ತಗಳೆನ್ನುವರು.

ಕಬ್ಬಿಣದ ಆಕ್ಸೈಡುಗಳು ಮತ್ತು ಹೈಡ್ರಾಕ್ಸೈಡುಗಳು ಫೆರಸ್ FeO ಬದಲಾಯಿಸಿ

ಇದೊಂದು ಕಪ್ಪು ಬಣ್ಣದ ಪುಡಿ. ಫೆರಿಕ್ ಆಕ್ಸೈಡನ್ನು 300ಲಿ ಸೆಂ. ಉಷ್ಣತೆಗಿಂತ ಕಡಿಮೆ ಉಷ್ಣತೆಯಲ್ಲಿ ಹೈಡ್ರೋಜನಿನಿಂದ ಅಪಕರ್ಷಿಸುವುದರಿಂದ ಅಥವಾ ಫೆರಸ್ ಆಕ್ಸಲೇಟನ್ನು (FeC2O4) ಕಾಯಿಸುವುದರಿಂದ ತಯಾರಿಸಬಹುದು. ಇದು ಗಾಳಿಯಲ್ಲಿ ಉರಿದು ಫೆರಿಕ್ ಆಕ್ಸೈಡು ಆಗುವುದು. ಫೆರಸ್ ಹೈಡ್ರಾಕ್ಸೈಡು Fe(OH)2 ಇದಕ್ಕೆ ಅನುಗುಣವಾದ ಹೈಡ್ರಾಕ್ಸೈಡು. ಫೆರಸ್ ಲವಣದ ದ್ರಾವಣಕ್ಕೆ ಸೋಡಿಯಂ ಹೈಡ್ರಾಕ್ಸೈಡನ್ನು ಗಾಳಿಯ ರಾಹಿತ್ಯದಲ್ಲಿ ಹಾಕಿದರೆ ಇದು ಒತ್ತರಿಸುವುದು. ಇದೊಂದು ಬಿಳಿಯ ಘನವಸ್ತು. ಗಾಳಿಯಲ್ಲಿ ಬಿಟ್ಟರೆ ಉತ್ಕರ್ಷಣ ಹೊಂದಿ ಮೊದಲು ಹಸಿರು ಬಣ್ಣಕ್ಕೂ ಆಮೇಲೆ ಕಂದುಬಣ್ಣಕ್ಕೂ ತಿರುಗುವುದು. ಗಾಳಿಯು ಫೆರಸ್ ಹೈಡ್ರಾಕ್ಸೈಡನ್ನು ಫೆರಿಕ್ ಹೈಡ್ರಾಕ್ಸೈಡಿಗೆ (Fe2O3.xH2O) ಉತ್ಕರ್ಷಿಸುವುದು.

ಫೆರಿಕ್ ಆಕ್ಸೈಡ್ Fe2O3: ಪಿರೈಟೀಸನ್ನು (FexS2) ಉರಿಸಿದಾಗ ಇದು ಉಂಟಾಗುವುದು. ಫೆರಿಕ್ ಲವಣದ ದ್ರಾವಣಕ್ಕೆ ಸೋಡಿಯಂ ಹೈಡ್ರಾಕ್ಸೈಡ್ ಹಾಕಿ ಬಂದ ಒತ್ತರವನ್ನು ಕಾಯಿಸಿ ಇದನ್ನು ಪಡೆಯಬಹುದು. ಇದು ಕೆಂಪುಪುಡಿ. ಪ್ರಕೃತಿಯಲ್ಲಿ ಇದು ಹಿಮಟೈಟ್ ಎಂಬ ಒಂದು ಪ್ರಮುಖ ಕಬ್ಬಿಣದ ಅದುರಾಗಿ ದೊರೆಯುವುದು. ಕಬ್ಬಿಣದ ತುಕ್ಕು ಮತ್ತು ಲಿಮೊನೈಟ್ ಎಂಬ ಕಬ್ಬಿಣದ ಅದುರು ಈ ಆಕ್ಸೈಡಿನ ಹೈಡ್ರೇಟುಗಳು (Fe2O3.xH2O).

ಅತಿಶುದ್ಧವಾದ ಸ್ವಲ್ಪವೂ ತರಕಲಿಲ್ಲದ ನಯವಾಗಿರುವ ಫೆರಿಕ್ ಆಕ್ಸೈಡನ್ನು ಸ್ವರ್ಣಕಾರರು ಚಿನ್ನಬೆಳ್ಳಿಗೆ ಹೊಳಪು ಕೊಡಲು ಉಪಯೋಗಿಸುವರು. ಇದನ್ನು ವಿನೀಷಿಯನ್ ಕೆಂಪು ಎಂಬ ಹೆಸರಿನಿಂದ ವರ್ಣದ್ರವ್ಯವಾಗಿ ಧಾನ್ಯದ ಕಣಜಗಳು, ಸೇತುವೆಗಳು, ಸಾಗಣೆಯ ರೈಲುಗಾಡಿಗಳು, ಮಣ್ಣಿನ ಪಾತ್ರೆಗಳು, ರಬ್ಬರ್ ಮುಂತಾದುವುಗಳಿಗೆ ಕೆಂಪು ಕಂದು ಬಣ್ಣಕೊಡಲು ಉಪಯೋಗಿಸುವರು. ಫೆರಿಕ್ ಲವಣಗಳ ದ್ರಾವಣಕ್ಕೆ ಸೋಡಿಯಂ ಹೈಡ್ರಾಕ್ಸೈಡನ್ನು ಹಾಕಿದರೆ, ಹೆಚ್ಚು ಗಾತ್ರದ ಲೋಳೆಯಂಥ (ಜಿಲೇಟಿನಸ್) ಕೆಂಪು-ಕಂದು ಬಣ್ಣದ ಒತ್ತರ ಬರುವುದು. ಇದಕ್ಕೆ ಫೆರಿಕ್ ಹೈಡ್ರಾಕ್ಸೈಡ್ ಎಂದು ಹೆಸರು. ಇದರ ಸಂಕೇತ Fe(OH)3. ಪ್ರಾಯಶಃ ಇದು Fe(OH)3 ಎಂಬ ನಿರ್ದಿಷ್ಟ ಸಂಯುಕ್ತವಾಗಿರದೆ ಅನಿಶ್ಚಿತ ಜಲಹೊಂದಿದ ಹೈಡ್ರೇಟೆಡ್ ಫೆರಿಕ್ ಆಕ್ಸೈಡ್ ಆಗಿರುವುದು. ಇದು ಆಮ್ಲಗಳಲ್ಲಿ ಸುಲಭವಾಗಿ ದ್ರಾವ್ಯ, ಕ್ಷಾರಗಳಲ್ಲಿ ಅದ್ರಾವ್ಯ.

ಇವಲ್ಲದೆ ಪ್ರಕೃತಿಯಲ್ಲಿ ಮ್ಯಾಗ್ನಟೈಟ್ Fe3O4 ಎಂಬ ಇನ್ನೊಂದು ಕಬ್ಬಿಣದ ಖನಿಜ ದೊರೆಯುವುದು. ಇದರ ರಚನೆ FeOFe2O3. ಕಬ್ಬಿಣವು ಆಕ್ಸಿಜನಿನಲ್ಲಿ ಉರಿದಾಗ, ನೀರಿನ ಹಬೆಯನ್ನು ಕೆಂಗಾವಿಗೆ ಕಾದ ಕಬ್ಬಿಣದ ಮೇಲೆ ಕಾಯಿಸಿದಾಗ ಈ ಆಕ್ಸೈಡ್ ಉಂಟಾಗುವುದು.

ಫೆರಸ್ ಸಲ್ಫೇಟ್ (FeSO4) ಬದಲಾಯಿಸಿ

ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುವ ಸಂಯುಕ್ತ. ಕಬ್ಬಿಣವನ್ನು ಸಜಲ ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಗೊಳಿಸಿ ದ್ರಾವಣವನ್ನು ಇಂಗಿಸಿ ಇದನ್ನು ತಯಾರಿಸುವರು. ಇದಕ್ಕೆ ಕಳಪೆ ಕಬ್ಬಿಣದ ಚೂರುಗಳನ್ನು ಉಪಯೋಗಿಸುವರು. ಕಬ್ಬಿಣಕ್ಕೆ ಸತು ಮತ್ತು ತವರಗಳ ಲೇಪ ಕೊಡುವ ಮುಂಚೆ ಕಬ್ಬಿಣದ ತಗಡುಗಳನ್ನು ಶುದ್ಧಮಾಡಲು ಸಲ್ಫ್ಯೂರಿಕ್ ಆಮ್ಲದಲ್ಲಿ ಅದ್ದುವರು. ಈ ದ್ರಾವಣದಿಂದಲೂ ಗಣನೀಯ ಪ್ರಮಾಣ ಫೆರಸ್ ಸಲ್ಫೇಟನ್ನು ತಯಾರಿಸುವರು. ಕಬ್ಬಿಣದ ಪಿರೈಟೀಸ್ (FeS2) ಒದ್ದೆಮಾಡಿ ಗಾಳಿಯ ಸಂಪರ್ಕದಲ್ಲಿ ಫೆರಸ್ ಸಲ್ಫೇಟಾಗಿ ಇದನ್ನು ಉತ್ಕರ್ಷಿಸಿ, ಅನಂತರ ಅದನ್ನು ನೀರಿನಲ್ಲಿ ವಿಲೀನಗೊಳಿಸಿ ಪಡೆಯುವರು. ದ್ರಾವಣಗಳಿಂದ ಇದು FeSO4.7H2O ಎಂಬ ಹೈಡ್ರೇಟ್ ರೂಪದಲ್ಲಿ ಸ್ಫಟಿಕೀಕರಿಸುವುದು. ಗಾಳಿಯ ಸಂಪರ್ಕದಲ್ಲಿ ಇದು ಸ್ಫಟಿಕ ಜಲವನ್ನು ಕಳೆದುಕೊಂಡು ಗಾಳಿಯಿಂದ ಉತ್ಕರ್ಷಿತವಾಗಿ ಕಂದು ಬಣ್ಣಕ್ಕೆ ತಿರುಗುವುದು. ಫೆರಸ್ ಸಲ್ಫೇಟಿನ ದ್ರಾವಣ ಗಾಳಿಯ ಸಂಪರ್ಕದಲ್ಲಿ Fe(OH)SO4 ಆಗಿ ಉತ್ಕರ್ಷಿತವಾಗುವುದು. ಇದರ ದ್ರಾವಣ ಉತ್ಕರ್ಷಿತವಾಗದೆ ಇರಲು ದ್ರಾವಣವನ್ನು ಸಲ್ಫ್ಯೂರಿಕ್ ಆಮ್ಲ ಮಿಶ್ರಮಾಡಿ ದ್ರಾವಣದಲ್ಲಿ ಸ್ವಲ್ಪ ಕಬ್ಬಿಣದ ಚೂರನ್ನು ಹಾಕಿಡಬೇಕು. ಫೆರಸ್ ಸಲ್ಫೇಟನ್ನು ನೀರಿನ ಶುದ್ಧೀಕರಣದಲ್ಲಿಯೂ ಕಪ್ಪುಮಸಿ ಮತ್ತು ಕೆಲವು ವರ್ಣದ್ರವ್ಯಗಳ ತಯಾರಿಕೆಯಲ್ಲಿಯೂ ಔಷಧದಲ್ಲಿಯೂ ಕಳೆನಾಶಕ ಮತ್ತು ಮರದ ರಕ್ಷಕವಾಗಿಯೂ ಉಪಯೋಗಿಸುವರು. ಮಸಿಯ ತಯಾರಿಕೆಯಲ್ಲಿ ಫೆರಸ್ ಸಲ್ಫೇಟಿನ ದ್ರಾವಣಕ್ಕೆ ಸ್ವಲ್ಪ ಟ್ಯಾನಿನ್ ಮತ್ತು ಒಂದು ನೀಲಿವರ್ಣದ್ರವ್ಯ, ಸ್ವಲ್ಪ ಗಮ್ ಅರ್ಯಾಬಿಕ್ಗಳನ್ನು ಹಾಕುವರು. ಈ ಮಸಿಯಿಂದ ಬರೆದಾಗ ಅಕ್ಷರ ವರ್ಣದ್ರವ್ಯದ ನೀಲಿಬಣ್ಣವಾಗಿರುವುದು. ಗಾಳಿಯ ಸಂಪರ್ಕದಲ್ಲಿ ಫೆರಸ್ ಟ್ಯಾನೇಟು ಫೆರಿಕ್ ಟ್ಯಾನೇಟು ಆಗುವುದು. ಫೆರಿಕ್ ಟ್ಯಾನೇಟಿನ ಬಣ್ಣ ಕಪ್ಪು. ಆದ್ದರಿಂದ ಅಕ್ಷರ ಕಪ್ಪು ಬಣ್ಣಕ್ಕೆ ತಿರುಗುವುದು.

ಸಮಾನ ಅಣುಪ್ರಮಾಣ ಫೆರಸ್ ಸಲ್ಫೇಟ್ ಮತ್ತು ಅಮೋನಿಯಂ ಸಲ್ಫೇಟ್ ಇರುವ ದ್ರಾವಣದಿಂದ ನಸುಹಸಿರು ಬಣ್ಣದ ಫೆರಸ್ ಅಮೋನಿಯಂ ಸಲ್ಫೇಟು FeSO4(NH4)SO46H2O ಸ್ಫಟಿಕೀಕರಿಸುವುದು. ಇದು ಗಾಳಿಯಲ್ಲಿ ಉತ್ಕರ್ಷಿಸುವುದಿಲ್ಲ. ಈ ಕಾರಣಕ್ಕಾಗಿ ಪರಿಮಾಣಾತ್ಮಕ ವಿಶ್ಲೇಷಣಗಳಲ್ಲಿ ಇದನ್ನು ವಿಶೇಷವಾಗಿ ಬಳಸುವರು.

ಫೆರಿಕ್ ಸಲ್ಫೇಟ್ Fe(SO4)3 ಬದಲಾಯಿಸಿ

ಫೆರಸ್ ಸಲ್ಫೇಟನ್ನು ಉತ್ಕರ್ಷಿಸಿ ಇದನ್ನು ಪಡೆಯಬಹುದು. ದ್ರಾವಣದಿಂದ ಇದು ಸುಲಭವಾಗಿ ಸ್ಫಟಿಕೀಕರಿಸುವುದಿಲ್ಲವಾದ್ದರಿಂದ ಇದನ್ನು ಸಾಮಾನ್ಯವಾಗಿ ಪಟಿಕದ ರೂಪದಲ್ಲಿ-ಫೆರಿಕ್ ಅಮೋನಿಯಂ ಸಲ್ಫೇಟ್ (NH4)2SO4 Fe2(SO4)3.24H2O ಅಥವಾ ಫೆರಿಕ್ಆಲಂ Fe2SO4 Fe2(SO4)3.24H2O ಆಗಿ ಸ್ಫಟಿಕೀಕರಿಸುವರು.

ಫೆರಸ್ ಕ್ಲೋರೈಡ್ FeCl2 ಬದಲಾಯಿಸಿ

ಕಬ್ಬಿಣವನ್ನು ಹೈಡ್ರೊಕ್ಲೋರಿಕಾಮ್ಲದಲ್ಲಿ ವಿಲೀನಮಾಡಿದ ದ್ರಾವಣದಿಂದ FeCl2.4H2O ಸ್ಫಟಿಕೀಕರಿಸುವುದು. ಶುದ್ಧವಾದ ಹೈಡ್ರೇಟೆಡ್ ಫೆರಸ್ ಕ್ಲೋರೈಡಿನ ಬಣ್ಣ ನೀಲಿ. ಇದು ಗಾಳಿಯ ಸಂಪರ್ಕದಲ್ಲಿ ಉತ್ಕರ್ಷಣಹೊಂದಿ ಹಸಿರು ಬಣ್ಣಕ್ಕೆ ತಿರುಗುವುದು. ಈ ಲವಣವನ್ನು ಅಪಕರ್ಷಣಕಾರಿಯಾಗಿಯೂ ಅಲ್ಪ ಪ್ರಮಾಣದಲ್ಲಿ ಬಣ್ಣಗಚ್ಚಾಗಿಯೂ ಉಪಯೋಗಿಸುವರು.

ಫೆರಿಕ್ ಕ್ಲೋರೈಡ್ FeCl3 ಬದಲಾಯಿಸಿ

ಇದು ಅತ್ಯಂತ ಮುಖ್ಯವಾದ ಫೆರಿಕ್ ಲವಣ. ಕಬ್ಬಿಣದ ಮೇಲೆ ಕ್ಲೋರಿನ್ನಿನ ವರ್ತನೆಯಿಂದ ಇದನ್ನು ತಯಾರಿಸುವರು. ಈ ಪರಿವರ್ತನೆ ವಿಜಲ ಫೆರಿಕ್ ಕ್ಲೋರೈಡಿನ ಕಪ್ಪು ಹರಳುಗಳನ್ನು ಕೊಡುವುದು. ಈ ಲವಣ ಕರ್ಪುರೀಕರಿಸುವುದು (ಸಬ್ಲೈಮ್ಸ್‌). ನೀರಿನಲ್ಲಿ ಇದು ವಿಶೇಷ ದ್ರವ್ಯ. ಇದರ ದ್ರಾವಣದಿಂದ ಅನೇಕ ಹೈಡ್ರೇಟುಗಳನ್ನು ಪಡೆಯಬಹುದು. ಇವುಗಳ ಪೈಕಿ FeCl3.6H2O ಸುಪರಿಚಿತವಾದುದು. ನೀರಿನಲ್ಲಿ ಇದು ಜಲವಿಶ್ಲೇಷಣ ಹೊಂದುವುದು. ಈ ಲವಣವನ್ನು ಬಣ್ಣಗಚ್ಚಾಗಿಯೂ ರಾಸಾಯನಿಕ ವಿಶ್ಲೇಷಣಗಳಲ್ಲಿಯೂ ಔಷಧಗಳಲ್ಲಿಯೂ (ಕ್ರಿಮಿನಾಶಕ ಮತ್ತು ರಕ್ತಸ್ರಾವಬಂಧಕ) ಉಪಯೋಗಿಸುವರು.

ಕಬ್ಬಿಣದ ಸಂಕೀರ್ಣ ಸಯನೈಡುಗಳು ಬದಲಾಯಿಸಿ

ಪೊಟ್ಯಾಸಿಯಂ ಫೆರೊಸಯನೈಡು ಫೆರಿಕ್ ಲವಣಗಳೊಡನೆ ವರ್ತಿಸಿ ಪ್ರಷ್ಯನ್ ನೀಲಿ ಎಂಬ ದಟ್ಟನೀಲಿಯನ್ನು ಕೊಡುವುದು.

3K4[Fe(CN)6] + 4FeCl3 → Fe4[Fe(CN)6]3 + 12KCl ಇದನ್ನು ವರ್ಣದ್ರವ್ಯವನ್ನಾಗಿಯೂ ಮತ್ತು ಬಟ್ಟೆ ಒಗೆಯುವ ನೀಲಿಯನ್ನಾಗಿಯೂ ಉಪಯೋಗಿಸುವರು. ಈ ಸಂಯುಕ್ತ ಫೆರಿಕ್ ಫೆರೊಸಯನೈಡ್. ಪೊಟಾಸಿಯಂ ಫೆರಿಸಯನೈಡು ಫೆರಸ್ ಲವಣಗಳೊಡನೆ ವರ್ತಿಸಿ ಟರ್ನ್‌ಬುಲ್ ನೀಲಿ ಎಂಬ ದಟ್ಟ ನೀಲಿಯ ಇನ್ನೊಂದು ಒತ್ತರವನ್ನು ಕೊಡುವುದು. ಇದು ಫೆರಸ್ ಫೆರಿಸಯನೈಡ್.

2K3[Fe(CN)6] + 3FeSO4 → Fe3[Fe(CN)6]2 + 3K2SO4 ಈ ಪರಿವರ್ತನೆಗಳನ್ನು ಫೆರಸ್ ಮತ್ತು ಫೆರಿಕ್ ಲವಣಗಳ ಗುಣಾತ್ಮಕ ವಿಶ್ಲೇಷಣೆಗಳಲ್ಲಿ ಉಪಯೋಗಿಸುವರು.

ಫೆರಿಕ್ ಲವಣಗಳು ಪೊಟ್ಯಾಸಿಯಂ ಥಯೋಸಯನೇಟಿನೊಡನೆ ವರ್ತಿಸಿ ದ್ರಾವ್ಯವಾದ ರಕ್ತಗೆಂಪಿನ K3Fe(CNS)6 ಎಂಬ ಸಂಯುಕ್ತವನ್ನು ಕೊಡುವುದು. ಈ ಪರಿವರ್ತನೆ ಯನ್ನು ಸಹ ಫೆರಿಕ್ ಲವಣಗಳನ್ನು ಗುರುತಿಸಲು ಉಪಯೋಗಿಸಬಹುದು.

ನೀಲಿನಕ್ಷೆಗಳು (ಬ್ಲೂಪ್ರಿಂಟ್ಸ್‌) ಬದಲಾಯಿಸಿ

ಇವನ್ನು ಮಾಡುವ ಕಾಗದಗಳನ್ನು ಫೆರಿಕ್ ಅಮೋನಿಯಂ ಸಿಟ್ರೇಟ್ ಮತ್ತು ಪೊಟ್ಯಾಸಿಯಂ ಫೆರಿಸಯನೈಡುಗಳನ್ನು ಒಳಗೊಂಡ ದ್ರಾವಣದಲ್ಲಿ ಅದ್ದಿ ಕತ್ತಲೆಯಲ್ಲಿ ಒಣಗಿಸುವರು. ಈ ಕಾಗದದ ಮೇಲೆ ಇವೆರಡು ಲವಣಗಳೂ ಫೆರಿಕ್ ಫೆರಿಸಯನೈಡೂ ಇರುವುವು. ಕೊನೆಯ ಲವಣ ಕಾಗದಕ್ಕೆ ಹಸಿರು ಬಣ್ಣ ಕೊಡುವುದು. ಈ ರೀತಿ ಸಿದ್ಧಮಾಡಿದ ಒಂದು ಕಾಗದದ ಹಾಳೆಯ ಮೇಲೆ ನೀಲನಕ್ಷೆ ತಯಾರಿಸಬೇಕಾದ ಆಕೃತಿಗಳನ್ನು ಚಿತ್ರಿಸಿರುವ ಟ್ರೇಸಿಂಗ್ ಬಟ್ಟೆಯನ್ನಿಟ್ಟು ಇದನ್ನು ಬಿಸಿಲಿನಲ್ಲಿಡುವರು. ಆಗ ಬೆಳಕು ಬಿದ್ದಜಾಗದಲ್ಲೆಲ್ಲ ಫೆರಿಕ್ ಲವಣ ಫೆರಸ್ ಲವಣವಾಗಿ ಅಪಕರ್ಷಿತವಾಗುವುದು. ಕಪ್ಪು ಗೆರೆಗಳ ತಳಭಾಗದಲ್ಲಿ ಈ ಪರಿವರ್ತನೆ ಆಗುವುದಿಲ್ಲ. ಅನಂತರ ಕೆಳಗಿನ ಕಾಗದವನ್ನು ನೀರಿನಲ್ಲಿ ಅದ್ದಿದಾಗ ಕಾಗದದ ಮೇಲೆ ಬಿಸಿಲು ಬಿದ್ದ ಜಾಗದಲ್ಲಿ ಆದ ಫೆರಸ್ ಲವಣ ಫೆರಿಸಯನೈಡಿ ನೊಡನೆ ವರ್ತಿಸಿ ಅದ್ರಾವ್ಯವಾದ ಟರ್ನ್ಬುಲ್ ನೀಲಿಯನ್ನು ಕೊಡುವುದು. ಬಿಸಿಲು ಬೀಳದಿರುವ ಕಪ್ಪು ಗೆರೆಗಳ ಕೆಳಗೆ ಯಾವ ವರ್ತನೆಯೂ ಆಗದೆ, ಅಲ್ಲಿರುವ ಲವಣಗಳು ನೀರಿನಲ್ಲಿ ವಿಲೀನವಾಗಿ ಹೋಗುವುವು. ಹೀಗೆ ನೀಲಿ ಹಿನ್ನೆಲೆಯಲ್ಲಿ ಬಿಳಿಯ ರೇಖೆಯ ಚಿತ್ರವಾಗುವುದು.

ಭಾರತದಲ್ಲಿ ಕಬ್ಬಿಣ ಬದಲಾಯಿಸಿ

ಭಾರತದಲ್ಲಿ ಹೇರಳವಾಗಿ ದೊರೆಯುವ ಕಬ್ಬಿಣದ ಖನಿಜವೆಂದರೆ ಹಿಮಟೈಟ್. ಕಬ್ಬಿಣ ನಿಕ್ಷೇಪಗಳಲ್ಲಿ ಮೂರು ಮುಖ್ಯ ವರ್ಗಗಳನ್ನು ಗುರುತಿಸಬಹುದು.

1. ಭೂಮಿಯ ಒಳಗಿನ ಉಷ್ಣದಿಂದ ಕರಗಿ ಶಿಲಾಪಾಕದ ಅವಸ್ಥೆಯಲ್ಲಿದ್ದು ಕೆನೆಗಟ್ಟುತ್ತ ಹೋದಂತೆ ತೂಕವಾದ ಕಬ್ಬಿಣದ ಖನಿಜ ಕೆಳಗೆ ದಟ್ಟೈಸಿ ರೂಪುಗೊಂಡ ಕಬ್ಬಿಣದ ನಿಕ್ಷೇಪ ಮೊದಲ ವರ್ಗದ್ದು. ಈ ರೀತಿ ರೂಪುಗೊಂಡ ಅದಿರಿನಲ್ಲಿ ಟೈಟೇನಿಯಂ ಮತ್ತು ವೆನೆಡಿಯಂ ಲೋಹಾಂಶಗಳು ಸೇರಿರುತ್ತವೆ. ಟೈಟೇನಿಯಂ ಬೆರೆತಿರುವ ಅದಿರನ್ನು ಕರಗಿಸುವುದಕ್ಕೆ ಅತಿ ಹೆಚ್ಚು ಉಷ್ಣತೆ ಬೇಕಾಗುವುದರಿಂದ ಈ ಬಗೆಯ ಅದಿರುಗಳು ಕಬ್ಬಿಣ ಕೈಗಾರಿಕೆಯಲ್ಲಿ ಈವರೆಗೂ ಉಪಯೋಗಕ್ಕೆ ಬಂದಿಲ್ಲ.

2.ಪ್ರಕೃತಿ ವ್ಯಾಪಾರಗಳಾದ ಮಳೆ, ಬಿಸಿಲು, ಗಾಳಿ-ಇವುಗಳ ಹೊಡೆತಕ್ಕೆ ಸಿಕ್ಕಿ ಕಲ್ಲುಗಳು ಬೀಳುಬಿದ್ದು, ಪುಡಿಯೆದ್ದು ಮಣ್ಣಾಗಿ, ನೀರಿನಲ್ಲಿ ಬಹುದೂರ ಸಾಗಿ ಸಾಗರದ ಪಾಲಾಗುತ್ತವೆ. ಆಗ ಕಲ್ಲಿನಲ್ಲಿದ್ದ ಕಬ್ಬಿಣದ ಅಂಶವೇ ಬೇರೆಯಾಗಿ ಸಮುದ್ರದ ತಳದಲ್ಲಿ ಕೆನೆಯಂತೆ ಪದರಪದರವಾಗಿ ನಿಕ್ಷೇಪಗೊಳ್ಳುತ್ತದೆ. ಅನೇಕ ವರ್ಷಕಾಲ ತಡೆಯಿಲ್ಲದ ಈ ಬಗೆಯ ವ್ಯಾಪಾರದಿಂದ ಕಬ್ಬಿಣದ ಒಂದು ಸ್ತರಪಂಕ್ತಿಯೇ ಸಾಗರದ ತಲದಲ್ಲಿ ಶೇಖರವಾಗುತ್ತದೆ. ಕ್ರಮೇಣ ಭೂವ್ಯಾಪಾರಗಳ ದೆಸೆಯಿಂದ ನೆಲ ಜಲವಾಗಿ, ಜಲ ನೆಲವಾದಾಗ ನೀರಿನಲ್ಲಿ ಶೇಖರಗೊಂಡ ಕಬ್ಬಿಣದ ಸ್ತರಗಳು ನೆಲದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ರೀತಿ ರೂಪು ಹೊಂದಿದ ಕಬ್ಬಿಣದ ಸ್ತರಗಳು ಮುಖ್ಯವಾಗಿ ಕರ್ನಾಟಕ, ಗೋವ, ಬಿಹಾರ, ಒರಿಸ್ಸ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮೈಲಿಗಟ್ಟಲೆ ಹರಡಿವೆ. ಭಾರತದ ಮುಖ್ಯ ಕಬ್ಬಿಣ ನಿಕ್ಷೇಪಗಳಿರುವುದು ಈ ಬಗೆಯ ಜಲದಲ್ಲಿ ನಿಕ್ಷೇಪಗೊಂಡ ಸ್ತರಗಳಲ್ಲಿ.

3 ಜಲದಲ್ಲಿ ನಿಕ್ಷೇಪಗೊಂಡ ಸ್ತರಪಂಕ್ತಿ ನೇರವಾಗಿ ಮೇಲೆದ್ದು ನಿಂತಾಗ, ಮಳೆಗಾಳಿಗಳ ಹೊಡೆತಕ್ಕೆ ಸಿಕ್ಕುತ್ತದೆ. ಕಲ್ಲಿನಲ್ಲಿದ್ದ ಸುಲಭವಾಗಿ ಕರಗಿಹೋಗುವಂಥ ವಸ್ತುವೆಲ್ಲವೂ ಹೋಗಿ, ಕಬ್ಬಿಣ ಅಂಶ ಮಾತ್ರ ಕೆನೆಗಟ್ಟಿ ಹೆಪ್ಪುಹೆಪ್ಪಾಗಿ ಶೇಖರವಾಗುತ್ತದೆ. ಈ ರೀತಿ ಸಂಗ್ರಹವಾದ ನಿಕ್ಷೇಪಗಳು ಕಬ್ಬಿಣದ ಅದಿರಿಗೆ ಮುಖ್ಯ ಆಕರಗಳು.

ಈ ಬಗೆಯ ನಿಕ್ಷೇಪಗಳು ಬೆಟ್ಟದ ನೆತ್ತಿಯ ಮೇಲಿರುತ್ತವೆ. ಬಹು ದೊಡ್ಡದಾಗಿರುತ್ತವೆ; ಇವುಗಳಲ್ಲಿನ ಕಬ್ಬಿಣದ ಅಂಶ ಶೇ.60 ಕ್ಕೂ ಹೆಚ್ಚಿರುತ್ತದೆ. ಪ್ರಪಂಚದ ಮುಖ್ಯ ಕಬ್ಬಿಣದ ನಿಕ್ಷೇಪಗಳೆಲ್ಲವೂ ಈ ರೀತಿಯವು.

ಇವು ಸುಮಾರಾಗಿ ಎಲ್ಲ ರಾಜ್ಯಗಳಲ್ಲಿಯೂ ಇವೆ. ಆದರೆ ದೊಡ್ಡ ಪ್ರಮಾಣದವು ಮಧ್ಯ ಪ್ರದೇಶದ ಶ್ರೇಣಿ, ಒರಿಸ್ಸ, ಸುಂದರಘಡ್ ಜಿಲ್ಲೆಯ ಬೋನಾಯ ಶ್ರೇಣಿ. ಕಟಕ್ ಜಿಲ್ಲೆಯ ದಯತೌರಿ, ಗಂಧಮಾದನ ಪರ್ವತಗಳು, ಬಿಹಾರದ ಸಿಂಗ್ಭೂಂ ಜಿಲ್ಲೆ, ಕರ್ನಾಟಕದ ಹೊಸಪೇಟೆ, ಕುದುರೆಮುಖ, ಬಾಬಾಬುಡನ್ ಶ್ರೇಣಿಗಳು, ಪಶ್ಚಿಮ ಕರಾವಳಿಯ ಗೋವ-ಈ ಪ್ರದೇಶಗಳಲ್ಲಿವೆ. ದೊಡ್ಡ ಪ್ರಮಾಣದಲ್ಲಿ ಗಣಿ ಕೆಲಸ ನಡೆಯುತ್ತಿರುವುದು ಸಹ ಇವೇ ಸ್ಥಳಗಳಲ್ಲಿ.

ಮಧ್ಯಪ್ರದೇಶ ಬೈಲದಿಲ : ಮಧ್ಯಪ್ರದೇಶದ ಬಸ್ತರ್ ಜಿಲ್ಲೆಯ ಒಳಭಾಗದಲ್ಲಿರುವ ಈ ಶ್ರೇಣಿಯ ನೆತ್ತಿಯ ಮೇಲೆ ಪ್ರಪಂಚದಲ್ಲೇ ಅತಿ ದೊಡ್ಡದೆಂದು ಪರಿಗಣಿಸಲಾದ ಕಬ್ಬಿಣ ನಿಕ್ಷೇಪವಿದೆ. ಸು. 64 ಕಿಮೀ ಗಳಷ್ಟು ದೂರ ಹಬ್ಬಿರುವ ಈ ಬೆಟ್ಟದ ಸಾಲಿನಲ್ಲಿ 14 ಮುಖ್ಯ ನಿಕ್ಷೇಪಗಳನ್ನು ಗುರುತಿಸಿದ್ದಾರೆ. ಒಂದೊಂದೂ ಸು. 3.2 ಕಿಮೀ ಉದ್ದ, ಸಾವಿರ 303.33 ಮೀ ಗಳಷ್ಟು ಅಗಲವಿದೆ. ಕೆಲವು ಕಡೆಗಳಂತೂ 100-200 ಅಡಿಯವರೆಗೂ ಕಡಿದಾಗಿ ನಿಂತಿರುವ ದರಿಗಳು ಪುರ್ತಿಯಾಗಿ ಕಬ್ಬಿಣದ ಅದಿರನ್ನೇ ತೋರಿಸುತ್ತವೆ.

ಇಲ್ಲಿನ ಅದಿರು ಅತ್ಯುತ್ತಮವಾದದ್ದು. ಕಬ್ಬಿಣದ ಅಂಶ ಸರಾಸರಿ ಶೇ. 65ಕ್ಕೂ ಮೇಲಿದೆ. ನಿರ್ಜನವಾದ ಈ ಪ್ರದೇಶಕ್ಕೆ ಸಂಬಂಧ ಕಲ್ಪಿಸಲು ಹೊಸದೊಂದು ರೈಲುಮಾರ್ಗವನ್ನು ಹಾಕಿದ್ದಾರೆ. ಇದರ ಮೂಲಕ ಬೈಲದಿಲ ಅದಿರನ್ನು ವಿಶಾಖಪಟ್ಟಣ ಬಂದರಿಗೆ ಕಳುಹಿಸುತ್ತಾರೆ. ಅಲ್ಲಿಂದ ಅದು ಜಪಾನಿಗೆ ರಫ್ತಾಗುತ್ತದೆ. ಈ ಪ್ರದೇಶದಲ್ಲಿ 1000 ಮಿಲಿಯನ್ ಟನ್ಗಳಷ್ಟು ಉತ್ತಮವಾದ ಕಬ್ಬಿಣದ ಅದಿರು ದೊರೆಯುವುದೆಂದು ಅಂದಾಜು ಮಾಡಲಾಗಿದೆ.

ಬಿಹಾರ ಮತ್ತು ಒರಿಸ್ಸ ಜಿಲ್ಲೆ : ಪಕ್ಕಪಕ್ಕದಲ್ಲಿರುವ ದಕ್ಷಿಣ ಸಿಂಗ್ಭೂಂ, ಸುಂದರಘಡ್, ಕೆಯಾಂಜಾರ್ ಜಿಲ್ಲೆಗಳು ಕಬ್ಬಿಣದ ಅದಿರಿನ ನಿಕ್ಷೇಪಗಳಿಗೆ ಪ್ರಸಿದ್ಧಿಯಾಗಿವೆ. ಎರಡು ರಾಜ್ಯಗಳಲ್ಲಿಯೂ ಹರಡಿರುವ ಬೊನಾಯ್ ಶ್ರೇಣಿ ಸು. 48 ಕಿಮೀ ದೂರ ಹಬ್ಬಿದೆ. ಈ ಉದ್ದಕ್ಕೂ ಗುಡ್ಡದ ನೆತ್ತಿಯಲ್ಲಿ ಹೇರಳವಾಗಿ ಕಬ್ಬಿಣದ ಅದಿರು ದೊರೆಯುತ್ತದೆ. ದೇಶದ ಮುಖ್ಯವಾದ ಗಣಿಗಳಿರುವುದು ಈ ಸರಹದ್ದಿನಲ್ಲಿ. ಜಮ್ಷಡ್ಪುರದಲ್ಲಿರುವ ತಾತಾ ಕಬ್ಬಿಣ ಕಂಪನಿ, ದುರ್ಗಾಪುರ, ಬೊಕಾರೊ ಇವುಗಳಲ್ಲಿ ಅಗಾಧ ಪ್ರಮಾಣದ ಕಬ್ಬಿಣ ಕೈಗಾರಿಕೆಗಳು ಬೊನಾಯ್ ಶ್ರೇಣಿಯ ಅದಿರನ್ನು ಅವಲಂಬಿಸಿವೆ. ಇವಲ್ಲದೆ ಕಟಕ್ ಜಿಲ್ಲೆಯಲ್ಲಿನ ದಯತಾರಿ, ಗಂಧಮಾದನ ಶ್ರೇಣಿಯಲ್ಲಿ ಮತ್ತು ಬನಸಪಾಣಿಯ ಸುತ್ತಮುತ್ತ ಅನೇಕ ಸಣ್ಣ ಪ್ರಮಾಣದ ಕಬ್ಬಿಣದ ಗಣಿಗಳಿವೆ. ಇಲ್ಲಿ ಉತ್ಪತ್ತಿಯಾಗುವ ಅದಿರು ಕೊಲ್ಕತ್ತ ಮತ್ತು ಪರದೀಪ ಬಂದರುಗಳ ಮೂಲಕ ಜಪಾನ್ ದೇಶಕ್ಕೆ ರಫ್ತಾಗುತ್ತದೆ. ಗೋವ : 1300 ಚ.ಮೈ ಪಶ್ಚಿಮ ಕರಾವಳಿಗೆ ಅಂಟಿಕೊಂಡಿರುವ ಈ ಪ್ರದೇಶದಲ್ಲಿ ಪ್ರಧಾನವಾದದ್ದು ಕಬ್ಬಿಣ ಕೈಗಾರಿಕೆಯೊಂದೇ. ಇಲ್ಲಿನ ನಿಕ್ಷೇಪಗಳು ಬಂದರಿಗೆ ಅತಿ ಸಮೀಪವಾಗಿರುವುದರಿಂದಲೂ ನದಿಗಳು, ಕಾಲುವೆಗಳ ಮೂಲಕ ಅದಿರನ್ನು ಸಾಗಿಸಲು ಸೌಲಭ್ಯ ಇರುವುದರಿಂದಲೂ ಲಾಭದಾಯಕವಾಗಿ ಅದುರು ವ್ಯಾಪಾರವನ್ನು ಮಾಡಲು ಸಾಧ್ಯವಾಗಿದೆ. ಅದಿರಿನಲ್ಲಿರುವ ಕಬ್ಬಿಣದ ಅಂಶಹೆಚ್ಚೇನೂ ಅಲ್ಲ; ಶೇ. 58-60ರ ವರೆಗೆ ಮಾತ್ರ. ನವೀನ ಯಂತ್ರೋಪಕರಣಗಳ ಸಹಾಯದಿಂದ ಹೇರಳ ಪ್ರಮಾಣದಲ್ಲಿ ಅದಿರನ್ನು ಉತ್ಪಾದಿಸಿ ದೂರ ದೇಶಗಳಿಗೆ ಕಳುಹಿಸುತ್ತಾರೆ. 300 ಮಿಲಿಯನ್ ಟನ್ಗಳಷ್ಟು ಕಬ್ಬಿಣದ ಅದಿರು ಇಲ್ಲಿದೆಯೆಂದು ಅಂದಾಜು. ವರ್ಷಂಪ್ರತಿ ಐದಾರು ದಶಲಕ್ಷ ಟನ್ಗಳು ಜಪಾನ್ ದೇಶಕ್ಕೆ ರಫ್ತಾಗುತ್ತವೆ.

ಕರ್ನಾಟಕದಲ್ಲಿ ಕಬ್ಬಿಣ ಬದಲಾಯಿಸಿ

ಕಬ್ಬಿಣ ನಿಕ್ಷೇಪಗಳು ಈ ಕೆಳಕಂಡ ಜಿಲ್ಲೆಗಳಲ್ಲಿವೆ : ಬಳ್ಳಾರಿ ... ಹೊಸಪೇಟೆ, ಬಳ್ಳಾರಿ ಬಿಜಾಪುರ ... ಬಾಗಲಕೋಟೆ ಬಳಿಯಿರುವ ಕಮತಗಿ ಚಿಕ್ಕಮಗಳೂರು ... ಬಾಬಾಬುಡನ್ ಶ್ರೇಣಿಯ ಕೆಮ್ಮಣ್ಣುಗುಂಡಿ, ಕುದುರೆಮುಖ, ಗಂಗಮೂಲ ಚಿತ್ರದುರ್ಗ ... ವಜ್ರ, ಸಾಸಲು, ಹೊಸದುರ್ಗ ಉತ್ತರಕನ್ನಡ ... ಅನಮೋಚು, ಸೂಪ, ಹೊನ್ನಾವರ ದಕ್ಷಿಣ ಕನ್ನಡ ... ಸುಬ್ರಹ್ಮಣ್ಯ, ಪುತ್ತೂರು ಶಿವಮೊಗ್ಗ ... ಕುಂಸಿ, ಶಂಕರಗುಡ್ಡ ತುಮಕೂರು ... ಚಿಕ್ಕನಾಯಕನ ಹಳ್ಳಿ

ಬಳ್ಳಾರಿ-ಹೊಸಪೇಟೆ : ಕರ್ನಾಟಕ ರಾಜ್ಯದಲ್ಲಿ ಮುಖ್ಯವಾದ ಕಬ್ಬಿಣದ ಅದಿರು ವಲಯದಲ್ಲಿದೆ. ಪ್ರಪಂಚದ ಅತ್ಯುತ್ತಮ ಕಬ್ಬಿಣದ ಅದಿರು ಇಲ್ಲಿನದೆಂದು ಹೆಸರುವಾಸಿ ಯಾಗಿದೆ. 1952ರಲ್ಲಿ ವರ್ಷಕ್ಕೆ ಹತ್ತು ಸಾವಿರ ಟನ್ ಮಾತ್ರ ಉತ್ಪಾದನೆಯಿತ್ತು. ಅಲ್ಲಿಂದೀಚೆಗೆ ಉತ್ಪಾದನೆ ವರ್ಷವರ್ಷವೂ ಹೆಚ್ಚುತ್ತಹೋಗಿ ಈಗ 30 ಲಕ್ಷಟನ್ ಮುಟ್ಟಿದೆ. ಜಂಬುನಾಥನ ಹಳ್ಳಿ, ಪಾಪನಾಯಕನ ಹಳ್ಳಿ, ಎತ್ತಿನಹಟ್ಟೆ, ಉಬ್ಬಲಗಂಡಿ, ದೋಣಿಮಲೆ, ದೇವದಾರ ಗುಡ್ಡ, ರಾಮನ ದುರ್ಗ, ಕುಮಾರಸ್ವಾಮಿ ಈ ಗುಡ್ಡ ಸಾಲುಗಳಲ್ಲಿ 10,000 ಟನ್ ಅದಿರನ್ನು ವಾರ್ಷಿಕ ಉತ್ಪಾದಿಸುತ್ತಿದ್ದುದು ಈಗ ಅದು 86,000 ಟನ್ಗಳಿಗೆ ಏರಿದೆ. ಅತ್ಯುತ್ತಮವಾದ ಅದಿರು ಹೇರಳವಾಗಿ ದೊರೆಯುವುದ ರಿಂದಲೂ ರೈಲು, ನೀರು, ವಿದ್ಯುಚ್ಛಕ್ತಿ ಸೌಕರ್ಯಗಳಿರುವುದರಿಂದಲೂ ಹೊಸಪೇಟೆಯಲ್ಲಿ ದೊಡ್ಡ ಪ್ರಮಾಣದ ಉಕ್ಕಿನ ಯಂತ್ರಾಗಾರವನ್ನು ನಿರ್ಮಿಸುವುದು ಸಾಧ್ಯ. ಸಂಡೂರಿಗೆ ಸಮೀಪದಲ್ಲಿರುವ ದೋಣಿಮಲೆಯ ಬಳಿ ಬೃಹತ್ ಪ್ರಮಾಣದಲ್ಲಿ ಗಣಿ ಉದ್ಯಮ ಪ್ರಾರಂಭವಾಗಿದೆ. ವರ್ಷಂಪ್ರತಿ ಸು. 4 ಮಿಲಿಯನ್ ಟನ್ಗಳಷ್ಟು ಅದಿರನ್ನು ಈ ಗುಡ್ಡಸಾಲಿನಲ್ಲಿ ತೆಗೆದು ಚೆನ್ನೈ ಬಂದರಿಗೆ ಸಾಗಿಸಲಾಗುತ್ತದೆ. ಇಷ್ಟು ಹೇರಳವಾದ ಪ್ರಮಾಣದಲ್ಲಿ ಅದಿರನ್ನು ಪಡೆಯಲು ಅತ್ಯಾಧುನಿಕವಾದ ಯಂತ್ರೋಪಕರಣಗಳು ಆವಶ್ಯಕ.

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿ : ಈ ಜಿಲ್ಲೆಯಲ್ಲಿರುವ ಬಾಬಾಬುಡನ್ ಶ್ರೇಣಿ ಪ್ರಸಿದ್ಧಿಯಾದುದು. ಈ ಪರ್ವತಪಂಕ್ತಿಯ ನೆತ್ತಿಯ ಪ್ರದೇಶವೆಲ್ಲ ಕಬ್ಬಿಣದ ಅದಿರಿನಿಂದ ಕೂಡಿದೆ. ಕೆಮ್ಮಣ್ಣುಗುಂಡಿಯ ಬಳಿ ದೊರೆಯುವ ಅದಿರನ್ನು ಭದ್ರಾವತಿಗೆ ಸಾಗಿಸಿ ಕಬ್ಬಿಣ ಉಕ್ಕನ್ನು ತಯಾರಿಸಲಾಗುತ್ತದೆ.

ಕುದುರೆಮುಖ : ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಕುದುರೆಮುಖ ಗಂಗಮೂಲ ಪರ್ವತಶ್ರೇಣಿ ಮೈಸೂರು ದೇಶದಲ್ಲಿ ಹೆಸರುವಾಸಿಯಾಗಿದೆ. ಪ್ರಕೃತಿ ಸಂಪತ್ತಿನ ತವರಾದ ಈ ಶ್ರೇಣಿಯ ಉದ್ದಕ್ಕೂ ಕಬ್ಬಿಣದ ಸ್ತರ ಪಂಕ್ತಿಯಿದೆ. ಕಬ್ಬಿಣದ ಅಂಶ ಕಡಿಮೆ ಇದ್ದುದರಿಂದ ಇವುಗಳನ್ನು ಈವರೆಗೆ ಗಣನೆಗೆ ತಂದು ಕೊಂಡಿರಲಿಲ್ಲ. ಬೆಳೆಯುತ್ತಿರುವ ಮಂಗಳೂರು ಬಂದರಿಗೆ ಕುದುರೆಮುಖ ಸಮೀಪವಾಗಿರುವುದರಿಂದ ಹೆಚ್ಚು ಖರ್ಚಿಲ್ಲದೆ ಅದುರನ್ನು ಅಲ್ಲಿಗೆ ಸಾಗಿಸುತ್ತಾರೆ. ಇಲ್ಲಿ ದೊರೆಯುವ ಅದಿರಿಗೆ ಅಯಸ್ಕಾಂತಶಕ್ತಿ ಇರುವುದರಿಂದ ಅದಿರನ್ನು ಶುದ್ಧಿಮಾಡಿ ಉತ್ತಮ ದರ್ಜೆಯ ಅದಿರನ್ನು ವಿಂಗಡಿಸಲು ಸಾಧ್ಯವಾಗಿದೆ. ಸುಮಾರು ಅರುವತ್ತು ಕೋಟಿ ರೂಪಾಯಿ ಬಂಡವಾಳ ಹೂಡಿ ಇಲ್ಲಿನ ನಿಕ್ಷೇಪಗಳನ್ನು ರೂಢಿಸುವ ಬೃಹತ್ ಯೋಜನೆಯೊಂದು ಸಿದ್ಧವಾಗಿ, 1987ರಲ್ಲೇ ಕಬ್ಬಿಣದ ಅದಿರನ್ನು ಉಂಡೆರೂಪಕ್ಕೆ ತರುವ 3 ದಶಲಕ್ಷ ಟನ್ನು ಸಾಮಥರ್ಯ್‌ದ ಸ್ಥಾವರನ್ನು ಇಲ್ಲಿ ಸ್ಥಾಪಿಸಲಾಯಿತು. ನಿರ್ಜನವಾದ, ದುರ್ಗಮವಾದ ಈ ಪ್ರದೇಶ ಅನೇಕ ಬಗೆಯ ಕಾರ್ಯಚಟುವಟಿಕೆಗಳಿಂದ ಜೀವಂತವಾಗಿದೆ. ವಾರ್ಷಿಕ ಅದಿರು ಉತ್ಪಾದನೆ ಒಂದು ಲಕ್ಷ ಟನ್ನುಗಳು.

ಚಿತ್ರದುರ್ಗ ಜಿಲ್ಲೆ : ಮುಖ್ಯವಾದ ಕಬ್ಬಿಣದ ನಿಕ್ಷೇಪಗಳು ಹುಲಿಯೂರಿನ ಬಳಿಯ ವಜ್ರ, ಕುದುರೆಕಣಿವೆ, ಮಾರಿಕಣಿವೆ ಬಳಿಯ ಲಕ್ಕಿಹಳ್ಳಿ, ಕೆಂಕೆರೆ, ಚಿತ್ರದುರ್ಗ ಬಳಿಯ ಭೀಮಸಮುದ್ರ, ಸಿರಿಗೆರೆ ಬಳಿಯ ಮದಕರಿಪುರ ಇವುಗಳ ಹತ್ತಿರ ಇವೆ. ಇಲ್ಲಿನ ನಿಕ್ಷೇಪಗಳು ಚೆನ್ನೈ ಬಂದರಿಗೆ ದೂರವಾಗಿರುವುದರಿಂದ ದೊರೆಯುವ ಹಣವೆಲ್ಲವೂ ಅದಿರು ಸಾಗಾಣಿಕೆಗೇ ವ್ಯಯವಾಗುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಇಲ್ಲೆಲ್ಲೂ ಕೆಲಸ ನಡೆಯುತ್ತಿಲ್ಲ. ಉದ್ದೇಶಿತ ಉಕ್ಕಿನ ಕಾರ್ಖಾನೆಗಳು. 1.ಹೊಸಪೇಟೆ, 2.ಸೇಲಂ, 3.ವಿಶಾಖಪಟ್ಟಣ 4.ಬೊಕಾರೊ ಶಿವಮೊಗ್ಗ ಜಿಲ್ಲೆ : ಇಲ್ಲಿ ಕಬ್ಬಿಣದ ಅದಿರು ಕುಂಸಿ, ಶಂಕರಗುಡ್ಡ, ಚಟ್ಟನಹಳ್ಳಿ, ಗಂಗೂರು, ಸಿದ್ಧರಹಳ್ಳಿ, ಆಗುಂಬೆ, ನಿಶಾನಿಗುಡ್ಡ, ಹೊಸದುರ್ಗದ ಕೊಡಚಾದ್ರಿ ಈ ಬಳಿ ದೊರೆಯುತ್ತದೆ. ಆದರೆ ಇವುಗಳೆಲ್ಲವೂ ರೈಲುಮಾರ್ಗಗಳಿಗೆ ಅತಿ ದೂರವಿರುವುದರಿಂದ ಇದುವರೆವಿಗೆ ಎಲ್ಲಿಯೂ ಕೆಲಸ ನಡೆದಿಲ್ಲ. ಕೊಡಚಾದ್ರಿ ಕೋಟೆ ನಿಕ್ಷೇಪಗಳು ಕುದುರೆಮುಖದ ನಿಕ್ಷೇಪಗಳಂತೆಯೇ ಕುಂದಾಪುರ ಬಂದರಿಗೆ ಅತಿ ಸಮೀಪವಾದವು. ದಕ್ಷಿಣ ಕನ್ನಡ ಜಿಲ್ಲೆ : ಕಬ್ಬಿಣದ ಸ್ತರಗಳು ಪುತ್ತೂತು ತಾಲ್ಲೂಕಿನ ಆರ್ಬದ ಗುಡ್ಡದಲ್ಲಿವೆ. ಈ ಗುಡ್ಡದ ಸಾಲು ಸುಬ್ರಹ್ಮಣ್ಯದಿಂದ ಧರ್ಮಸ್ಥಳದವರೆಗೂ ಹರಡಿದೆ. ಹಾಸನ-ಮಂಗಳೂರು ರೈಲುಮಾರ್ಗ ಈ ನಿಕ್ಷೇಪಗಳ ಬಳಿಯೇ ಹಾದುಹೋಗುವುದರಿಂದ ಇನ್ನು ಕೆಲವು ವರ್ಷಗಳಲ್ಲೇ ಇವುಗಳಿಗೂ ಬೆಲೆ ಬರಬಹುದು.

ಉತ್ತರಕನ್ನಡ ಜಿಲ್ಲೆ : ಗೋವೆಯ ಅಂಚಿಗಿರುವ ಅನಮೋಡಸೂಪ, ದಾಂಡೇಲಿ, ಎಲ್ಲಾಪುರ, ತಲಗಿನಕೇರಿ, ಮಾವಿನಗುಂಡಿ, ಈ ಸ್ಥಳಗಳಲ್ಲಿ ಕಬ್ಬಿಣದ ನಿಕ್ಷೇಪಗಳಿವೆ. ಎಲ್ಲೆಲ್ಲೂ ದಟ್ಟವಾದ ಕಾಡು ಹಬ್ಬಿರುವುದರಿಂದಲೂ ಮಾರ್ಗಾನುಕೂಲತೆಗಳು ಇಲ್ಲದಿರುವುದರಿಂದಲೂ ಇವುಗಳಿಗೆ ಪ್ರಾಮುಖ್ಯ ಬಂದಿಲ್ಲ. ಕಾರವಾರ ಬಂದರು ಅಭಿವೃದ್ಧಿಗೊಂಡು ಸೇತುವೆಗಳು, ರೈಲುಮಾರ್ಗಗಳು ನಿರ್ಮಿತವಾದರೆ ಉತ್ತರಕನ್ನಡ ಜಿಲ್ಲೆಯ ಅದಿರು ನಿಕ್ಷೇಪಗಳು ಪ್ರಾಮುಖ್ಯಕ್ಕೆ ಬರುತ್ತವೆ.

ತುಮಕೂರು ಜಿಲ್ಲೆ : ದಕ್ಷಿಣದಲ್ಲಿ ಹತ್ಯಾಳಿನಿಂದ ಹಿಡಿದು, ಹುಳಿಯಾರಿನವರೆಗೆ ಚಿಕ್ಕನಾಯಕನಹಳ್ಳಿಯ ಪುರ್ವಕ್ಕೆ ಹಬ್ಬಿರುವ ಗುಡ್ಡಸಾಲಿನಲ್ಲಿ ಕಬ್ಬಿಣದ ನಿಕ್ಷೇಪಗಳು ಹಲವಾರಿವೆ. ಸಣ್ಣಪ್ರಮಾಣದಲ್ಲಿ ಅದಿರನ್ನು-ಮಂಗಳೂರು ಬಂದರಿಗೂ ಭದ್ರಾವತಿಯ ಉಕ್ಕಿನ ಕಾರ್ಖಾನೆಗೂ ಕಳುಹಿಸಲಾಗುತ್ತಿದೆ.

ದೊರೆಯಬಹುದಾದ ಅದಿರಿನ ಪ್ರಮಾಣದ ಅಂದಾಜು : ಭಾರತದಲ್ಲಿ ದೊರೆಯಬಹುದಾದ ಕಬ್ಬಿಣದ ಅದಿರಿನ ಒಟ್ಟು ಪರಿಮಾಣ 20,000 ಮಿಲಿಯನ್ ಟನ್ಗಳೆಂದು ಅಂದಾಜು. ಇದರಲ್ಲಿ ಸಿದ್ಧಪಡಿಸಿ ತೋರಿಸಿದ ಹಾಗೂ ಇರಬಹುದೆಂದು ಅನುಮಾನಿಸಿದ ಅದಿರಿನ ಮೊತ್ತಗಳೆರಡೂ ಸೇರಿವೆ. ವರ್ಷಂಪ್ರತಿ ನಡೆಯುತ್ತಿರುವ ಅನ್ವೇಷಣೆಗಳಿಂದ ಹೊಸ ನಿಕ್ಷೇಪಗಳು ಗಮನಕ್ಕೆ ಬಂದು ನಿಕ್ಷೇಪಗಳ ಒಟ್ಟು ಅಂದಾಜು ಹೆಚ್ಚುತ್ತ ಹೋಗುತ್ತಿದೆ. ನಮ್ಮ ಬಳಕೆಗೆ ಸಾಕಾಗಿ ಬೇರೆ ದೇಶಗಳಿಗೆ ನಾವು ಅದಿರನ್ನು ರಫ್ತು ಮಾಡಬಹುದಾಗಿದೆ. ಇತ್ತೀಚೆಗೆ ನಡೆಸಿರುವ ಶೋಧನೆಗಳ ಪ್ರಕಾರ ಬಳ್ಳಾರಿ ಹೊಸಪೇಟೆ ಪ್ರಾಂತದಲ್ಲಿ ದೊರೆಯಬಹುದಾದ ಅದಿರಿನ ಮೊತ್ತ 1500 ಮಿಲಿಯನ್ ಟನ್ಗಳು ಎಂದು ಪರಿಗಣಿಸಲಾಗಿದೆ. ಇದೇ ರೀತಿ ಕುದುರೆಮುಖದ ಬಳಿ ಮ್ಯಾಗ್ನಟೈಟ್ ಅದಿರಿನ ಪ್ರಮಾಣ 3000 ಮಿಲಿಯನ್ ಟನ್ಗಳಿಗೂ ಹೆಚ್ಚಿದೆಯೆಂದು ಅಂದಾಜುಮಾಡಲಾಗಿದೆ (ನೋಡಿ- ಕರ್ಣಾಟಕದ ಖನಿಜ ನಿಕ್ಷೇಪಗಳು).

ಕಬ್ಬಿಣದ ಮಿಶ್ರಲೋಹಗಳು ಬದಲಾಯಿಸಿ

ಕಬ್ಬಿಣವನ್ನು ಬೇರೆ ಬೇರೆ ಧಾತುಗಳೊಡನೆ ಲೀನ ಮಾಡಿ ತಯಾರಿಸಿದ ಮಿಶ್ರಲೋಹಗಳು (ಫೆರ್ರೊಅಲಾಯ್ಸ್‌). ಲೀನ ವಸ್ತುಗಳು ಮುಖ್ಯವಾದವು ಮ್ಯಾಂಗನೀಸ್, ನಿಕ್ಕಲ್, ಕ್ರೋಮಿಯಂ, ಟಂಗ್ ಸ್ಟನ್, ಸಿಲಿಕಾನ್, ತಾಮ್ರ, ವೆನೇಡಿಯಂ ಮತ್ತು ಮಾಲಿಬ್ಡಿನಂ. ಸಾಧಾರಣವಾಗಿ ಕಬ್ಬಿಣದ ಎಲ್ಲ ಮಿಶ್ರಲೋಹಗಳಲ್ಲಿಯೂ ಇಂಗಾಲ ಇದ್ದೇ ಇರುತ್ತದೆ. ಅದರ ಅಂಶ ಶೇ. 0.1ಕ್ಕಿಂತ ಹೆಚ್ಚು ಇರುವಾಗ ಆ ಮಿಶ್ರಲೋಹವನ್ನು ಉಕ್ಕಿನ ಮಿಶ್ರಲೋಹವೆಂದೂ ಕಡಿಮೆ ಇರುವಾಗ ಮಾತ್ರ ಕಬ್ಬಿಣದ ಮಿಶ್ರಲೋಹವೆಂದೂ ಕರೆಯುವುದು ವಾಡಿಕೆ. ಕಬ್ಬಿಣದ ಮಿಶ್ರಲೋಹದಲ್ಲಿರುವ ಧಾತುಗಳು ಕಬ್ಬಿಣದಲ್ಲಿ ಇಲ್ಲವೇ ಕಬ್ಬಿಣದ ಕಾರ್ಬೈಡಿನಲ್ಲಿ ವಿಲೀನಗೊಂಡು ಅಥವಾ ಕಬ್ಬಿಣದಲ್ಲಿರುವ ಇಂಗಾಲದ ಜೊತೆ ವಿಲೀನಗೊಂಡು ಮಿಶ್ರಲೋಹಗಳಾಗುತ್ತವೆ. ಕೋಬಾಲ್ಟ್‌ ಮತ್ತು ನಿಕ್ಕಲುಗಳು ಸ್ವಂತರೂಪದಲ್ಲಿಯೇ ಕಬ್ಬಿಣದಲ್ಲಿ ವಿಲೀನಗೊಂಡಿರುವುವು. ಮ್ಯಾಂಗನೀಸ್, ಕ್ರೋಮಿಯಂ, ಟಂಗ್ಸ್ಟನ್, ವೆನೆಡಿಯಂ ಮತ್ತು ಮಾಲಿಬ್ಡಿನಂಗಳು ಸ್ವಂತರೂಪದಲ್ಲಿ ಅಥವಾ ಕಾರ್ಬೈಡುಗಳಾಗಿ ಕಬ್ಬಿಣ ಅಥವಾ ಕಬ್ಬಿಣದ ಕಾರ್ಬೈಡಿನಲ್ಲಿ ವಿಲೀನಗೊಳ್ಳುತ್ತವೆ.

ಉಕ್ಕು ಮತ್ತು ಅದರ ಮಿಶ್ರಲೋಹಗಳನ್ನು ತಯಾರಿಸುವುದರ ಸಲುವಾಗಿ ಕಬ್ಬಿಣದ ಮಿಶ್ರಲೋಹಗಳನ್ನು ಉಪಯೋಗಿಸುತ್ತಾರೆ. ಉಕ್ಕಿನ ಮಿಶ್ರಲೋಹಗಳ ತಯಾರಿಕೆಯಲ್ಲಿ ಮೇಲೆ ಹೇಳಿರುವ ಮ್ಯಾಂಗನೀಸ್ ಮುಂತಾದ ಧಾತುಗಳನ್ನು ದ್ರವಿಸಿದ ಉಕ್ಕಿನೊಡನೆ ನೇರವಾಗಿ ಲೀನಗೊಳಿಸುವಂತಿಲ್ಲ. ಇಲ್ಲಿ ಕಬ್ಬಿಣದ ಮಿಶ್ರಲೋಹ ಅತ್ಯುಪಯುಕ್ತವಾಗುವುದು.

ಉಕ್ಕಿನೊಡನೆ ನಿಕ್ಕಲನ್ನು ಲೀನಗೊಳಿಸಿ ತತ್ಸಂಬಂಧ ಉಕ್ಕಿನ ಮಿಶ್ರಲೋಹವನ್ನು ತಯಾರಿಸಬೇಕೆಂದು ಭಾವಿಸೋಣ. ಆಗ ದ್ರವಿಸಿದ ಉಕ್ಕಿಗೆ ಕಬ್ಬಿಣದ (ನಿಕ್ಕಲ್) ಮಿಶ್ರಲೋಹವನ್ನು ಲೀನಗೊಳಿಸುತ್ತಾರೆ. ಈ ಕ್ರಿಯೆಯಲ್ಲಿ ಕಬ್ಬಿಣದ ಮತ್ತು ಉಕ್ಕಿನಲ್ಲಿ ಸಹಜವಾಗಿಯೇ ಇರುವ ಕಲ್ಮಷಗಳೊಡನೆ ಧಾತುವಿನ (ನಿಕ್ಕಲ್) ಸ್ವಲ್ಪಾಂಶ ಬೆರೆತು ಕಿಟ್ಟರೂಪದಲ್ಲಿ ಪ್ರತ್ಯೇಕಗೊಂಡು ಹೊರಬರುತ್ತದೆ. ಉಳಿದ ಅಂಶ ಉಕ್ಕಿನೊಡನೆ ಲೀನಗೊಂಡು ಅದು ಘನೀಭವಿಸುವಾಗ ನಮಗೆ ಬೇಕಾದ ಉಕ್ಕಿನ ಮಿಶ್ರಲೋಹ ದೊರೆಯುವುದು.

ದೋಷಗಳು ಮತ್ತು ಅವುಗಳ ನಿರ್ಮೂಲನೆ ಬದಲಾಯಿಸಿ

ಕಬ್ಬಿಣ ಮತ್ತು ಉಕ್ಕು ಇವುಗಳಲ್ಲಿ ಇಂಗಾಲದ ಜೊತೆಗೆ ಗಂಧಕ, ರಂಜಕ, ಆಮ್ಲಜನಕಗಳು ಕಲ್ಮಷ ರೂಪದಲ್ಲಿರುತ್ತವೆ. ಇದರಿಂದಾಗಿ ಕಬ್ಬಿಣ ಮತ್ತು ಉಕ್ಕಿನ ಯಾಂತ್ರಿಕ ಗುಣಲಕ್ಷಣಗಳಲ್ಲಿ ಬದಲಾವಣೆ ಗಳುಂಟಾಗುವುವು. ಆಮ್ಲಜನಕದಿಂದ ಉತ್ಪನ್ನವಾಗುವ ದೋಷಗಳನ್ನು ಮ್ಯಾಂಗನೀಸ್ ಅಥವಾ ಸಿಲಿಕಾನನ್ನು ಲೀನಗೊಳಿಸುವುದರಿಂದ ನಿರ್ಮೂಲಿಸಬಹುದು. ಈ ಎರಡೂ ಧಾತುಗಳು ಆಯಾ ಧಾತುಗಳ ಕಬ್ಬಿಣದ ಮಿಶ್ರಲೋಹಗಳ ರೂಪದಲ್ಲಿ ಉಕ್ಕಿನಲ್ಲಿ ಲೀನವಾಗುತ್ತದೆ. ಗಂಧಕ ಮತ್ತು ರಂಜಕಗಳಿಂದ ಉಕ್ಕಿನಲ್ಲಿ ಪೆಡಸುತನ ಉಂಟಾಗುವುದು. ಗಂಧಕದ ದೋಷಗಳನ್ನು ನಿರ್ಮೂಲಿಸಲು ಮ್ಯಾಂಗನೀಸನ್ನೂ ರಂಜಕದ ದೋಷಗಳನ್ನು ನಿರ್ಮೂಲಿಸಲು ಮ್ಯಾಂಗನೀಸ್, ನಿಕ್ಕಲ್, ತಾಮ್ರ, ಟಂಗ್ಸ್ಟನ್ ಸಿಲಿಕಾನ್ ಇವುಗಳ ಪೈಕಿ ಯಾವುದೇ ಎರಡನ್ನೂ ಕಬ್ಬಿಣದ ಮಿಶ್ರಲೋಹದ ರೂಪದಿಂದ ಉಕ್ಕಿನಲ್ಲಿ ಲೀನಗೊಳಿಸುತ್ತಾರೆ.

ತಯಾರಿಕೆಯ ವಿಧಾನಗಳು ಬದಲಾಯಿಸಿ

ಕಬ್ಬಿಣದ ಮಿಶ್ರಲೋಹಗಳನ್ನು ತಯಾರಿಸುವ ವಿಧಾನಗಳಲ್ಲಿ ಕೆಳಗಿನವು ಮುಖ್ಯವಾದವು.

1. ಕಬ್ಬಿಣ ಮತ್ತು ಬೇಕಾದ ಧಾತು ಇವೆರಡನ್ನು ಬೇಕಾದ ಭಾಗದಲ್ಲಿ ತೂಕಮಾಡಿ ಒಟ್ಟು ಗೂಡಿಸಿ ಮೂಸೆಯಲ್ಲಿ ಕರಗಿಸುವುದು. 2. ಹೆಚ್ಚು ಉಷ್ಣತೆಗೆ ಕರಗುವ ಧಾತುವನ್ನು ಕರಗಿಸಿ ಅದಕ್ಕೆ ಕಡಿಮೆ ಉಷ್ಣತೆಗೆ ಕರಗುವ ಧಾತುವನ್ನು ಲೀನಗೊಳಿಸಿ ಮಿಶ್ರಲೋಹವನ್ನು ತಯಾರಿಸುವುದು. 3. ಕಬ್ಬಿಣದ ಅದಿರು ಮತ್ತು ಬೇರೆ ಧಾತುವಿನ ಅದಿರು ಇವನ್ನು ಮಿಶ್ರಣಮಾಡಿ ಅವನ್ನು ಒಟ್ಟುಗೂಡಿಸಿ ಅಪಕರ್ಷಿಸಿ ಮಿಶ್ರಲೋಹವನ್ನು ತಯಾರಿಸುವುದು. 4. ಕಬ್ಬಿಣದ ಒಂದು ಸಂಯುಕ್ತದ ದ್ರಾವಣ ಮತ್ತು ಬೇರೆ ಒಂದು ಧಾತುವಿನ ಸಂಯುಕ್ತದ ದ್ರಾವಣ ಮಿಶ್ರಣವನ್ನು ತಯಾರಿಸಿ ಈ ಮಿಶ್ರಣದಿಂದ ಎರಡೂ ಧಾತುಗಳ ವಿದ್ಯುನ್ನಿಕ್ಷೇಪ ಮಾಡಿ ಮಿಶ್ರಲೋಹವನ್ನು ತಯಾರಿಸುವುದು.

ಗುಣಲಕ್ಷಣಗಳು ಮತ್ತು ಉಪಯೋಗಗಳು ಬದಲಾಯಿಸಿ

ಕೆಲವು ಮುಖ್ಯವಾದ ಕಬ್ಬಿಣದ ಮಿಶ್ರಲೋಹಗಳು ಅವುಗಳ ಗುಣಲಕ್ಷಣಗಳು ಮತ್ತು ಕೈಗಾರಿಕೆಯ ಕ್ಷೇತ್ರದಲ್ಲಿ ಅವುಗಳ ಉಪಯೋಗಗಳನ್ನು ಮುಂದೆ ಬರೆದಿವೆ.

1.ಫೆರೊ ಬೊರಾನ್ : ಉಕ್ಕಿನ ತಯಾರಿಕೆಯಲ್ಲಿ ಅಮ್ಲಜನಕವನ್ನು ನಿರ್ಮೂಲಿಸಲು ಮತ್ತು ಉಕ್ಕಿನ ಕಾಠಿನ್ಯವನ್ನು ಹೆಚ್ಚಿಸಲು ಇದರ ಉಪಯೋಗವಿದೆ. 2. ಫೆರೊ ಕ್ರೋಮಿಯಂ: ಉಕ್ಕಿಗೆ ಕ್ರೋಮಿಯಮನ್ನು ಲೀನಗೊಳಿಸುವುದರ ಸಲುವಾಗಿ ಇದರ ಉಪಯೋಗವಿದೆ. ಇದರಿಂದ ಉಕ್ಕಿನ ಕಾಠಿನ್ಯ ಹೆಚ್ಚಾಗಿ ಅದು ತುಕ್ಕು ನಿರೋಧಕವಾಗುತ್ತದೆ. ಇಂಥ ಉಕ್ಕನ್ನು ತಿಜೋರಿ, ಜೆಜ್ಜುವ ಯಂತ್ರ ಮುಂತಾದ ಔದ್ಯೋಗಿಕ ಉಪಕರಣಗಳನ್ನು ಮತ್ತು ಸ್ಟೇನ್ಲೆಸ್ ಸ್ಟೀಲ್ ತಯಾರಿಸಲು ಉಪಯೋಗಿಸುತ್ತಾರೆ. 3. ಫೆರೊ ಮ್ಯಾಂಗನೀಸ್ : ಉಕ್ಕಿಗೆ ಮ್ಯಾಂಗನೀಸನ್ನು ಲೀನಗೊಳಿಸುವುದರ ಸಲುವಾಗಿ ಇದನ್ನು ಉಪಯೋಗಿಸುತ್ತಾರೆ. ಇದು ಉಕ್ಕಿನಲ್ಲಿಯ ಗಂಧಕ ಮತ್ತು ಆಮ್ಲಜನಕದಿಂದ ಉಂಟಾದ ದೋಷಗಳನ್ನು ನಿರ್ಮೂಲಿಸುತ್ತದೆ. ಇದನ್ನು ಉಕ್ಕಿಗೆ ಲೀನ ಮಾಡುವುದರಿಂದ, ಉಕ್ಕಿನ ಕಾಠಿನ್ಯ ಮತ್ತು ಧಾರಣಸಾಮಥರ್ಯ್‌ ಬೆಳೆಯುತ್ತವೆ. ಇಂಥ ಉಕ್ಕನ್ನು ಶಿರಸ್ತ್ರಾಣ, ಯುದ್ಧಕವಚ ಮುಂತಾದುವುಗಳನ್ನು ತಯಾರಿಸುವುದಕ್ಕಾಗಿ ಉಪಯೋಗಿಸುತ್ತಾರೆ. 4. ಫೆರೊ ಟಂಗ್ಸ್ಟನ್ ಮತ್ತು ಫೆರೊ ಮಾಲಿಬ್ಡಿನಂ : ಉಕ್ಕಿಗೆ ಟಂಗ್ಸ್ಟನ್ ಮತ್ತು ಮಾಲಿಬ್ಡಿನಮ್ ಲೀನಗೊಳಿಸುವುದರ ಸಲುವಾಗಿ ಇವನ್ನು ಉಪಯೋಗಿಸುತ್ತಾರೆ. ಇವುಗಳ ಮಿಶ್ರಣದಿಂದ ಉಕ್ಕಿಗೆ ಕಾಠಿನ್ಯ ಬರುತ್ತದೆ. ಇಂಥ ಉಕ್ಕನ್ನು ಕೊಯ್ಯುವ ಉಪಕರಣ ಮತ್ತು ಬೈರಿಗೆಗಳನ್ನು ಮಾಡಲು ಉಪಯೋಗಿಸುತ್ತಾರೆ. 5. ಫೆರೊ ಕೊಬಾಲ್ಟ್‌ : ಉಕ್ಕಿಗೆ ಕೊಬಾಲ್ಟನ್ನು ಲೀನಮಾಡುವುದರ ಹಾಗೂ ಶಾಶ್ವತಕಾಂತತೆ ನೀಡುವುದರ ಸಲುವಾಗಿ ಈ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಫೆರೊ ಸಿಲಿಕಾನ್ : ಈ ಮಿಶ್ರಲೋಹದ ಮೇಲೆ ಆಮ್ಲದ ಕ್ರಿಯೆ ಆಗುವುದಿಲ್ಲ. ಆಮ್ಲಗಳನ್ನು ಇಡುವ ಪಾತ್ರೆಗಳನ್ನು ಮಾಡುವುದರ ಸಲುವಾಗಿ ಇದನ್ನು ಉಪಯೋಗಿಸುತ್ತಾರೆ.

ಗ್ರಂಥಸೂಚಿ ಬದಲಾಯಿಸಿ

  • ಟೆಂಪ್ಲೇಟು:Greenwood&Earnshaw2nd
  • Weeks, Mary Elvira; Leichester, Henry M. (1968). "Elements known to the ancients". Discovery of the elements. Easton, PA: Journal of Chemical Education. pp. 29–40. ISBN 0-7661-3872-0. LCCN 68-15217.

ಹೆಚ್ಚಿನ ಓದಿಗೆ ಬದಲಾಯಿಸಿ

  • H.R. Schubert, History of the British Iron and Steel Industry ... to 1775 AD (Routledge, London, 1957)
  • R.F. Tylecote, History of Metallurgy (Institute of Materials, London 1992).
  • R.F. Tylecote, "Iron in the Industrial Revolution" in J. Day and R.F. Tylecote, The Industrial Revolution in Metals (Institute of Materials 1991), 200–60.

ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಬ್ಬಿಣ&oldid=1113602" ಇಂದ ಪಡೆಯಲ್ಪಟ್ಟಿದೆ