ಕೊಲ್ಕಾತಾ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ , ಭಾರತದ ಪ್ರಧಾನ ನಗರ, ಮಹಾವಾಣಿಜ್ಯಕೇಂದ್ರ, ಸಂಸ್ಕೃತಿ ರಂಗ. . ೧೯೧೧ಕ್ಕೆ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ 1773ರಿಂದ 1912ರ ವರೆಗೆ-ಭಾರತಕ್ಕೂ 1947ರ ವರೆಗೆ ಬಂಗಾಳಕ್ಕೂ ರಾಜಧಾನಿಯಾಗಿತ್ತು. ಕಲ್ಕತ್ತ ಇದರ ಹಿಂದಿನ ಹೆಸರು

ಕೊಲ್ಕಾತಾ
কলকাতা
ಕೊಲ್ಕಾತಾ কলকাতা ನಗರದ ಪಕ್ಷಿನೋಟ
ಕೊಲ್ಕಾತಾ
কলকাতা ನಗರದ ಪಕ್ಷಿನೋಟ
ವಿಕ್ಟೋರಿಯ ಮೆಮೊರಿಯಲ್

ಕೊಲ್ಕಾತಾ
কলকাতা
ರಾಜ್ಯ
 - ಜಿಲ್ಲೆ
ಪಶ್ಚಿಮ ಬಂಗಾಳ
 - ಕೊಲ್ಕತ್ತ
ನಿರ್ದೇಶಾಂಕಗಳು 22.5726723° N 88.3638815° E
ವಿಸ್ತಾರ
 - ಎತ್ತರ
1887 km²
 - 9 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
 - Agglomeration (೨೦೦೧)
4,580,544
 - 9920/ಚದರ ಕಿ.ಮಿ.
 - 14,681,589
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 700 xxx
 - +91 (33)
 - 
ಅಂತರ್ಜಾಲ ತಾಣ: www.kolkatamycity.com
 The Kolkata urban agglomeration also includes portions of North 24 Parganas and South 24 Parganas districts.

ಭೌಗೋಳಿಕ ಮಾಹಿತಿ

ಬದಲಾಯಿಸಿ

ಇದು ಗಂಗಾನದಿಯ ಶಾಖೆಗಳಲ್ಲೊಂದಾದ ಹೂಗ್ಲಿಯ ಪೂರ್ವ ದಂಡೆಯ ಮೇಲಿದೆ. ಬಂಗಾಳ ಕೊಲ್ಲಿಯ ಅಗ್ರಭಾಗದಿಂದ ಸು.80 ಮೈಲಿ ದೂರದಲ್ಲಿರುವ ಈ ನಗರ ಸು.39 ಚ. ಮೈ. ಪ್ರದೇಶದಲ್ಲಿ ಹರಡಿದೆ.

ಕಲ್ಕತ್ತದ ಪ್ರಾಮುಖ್ಯಕ್ಕೆ ಅದರ ಸನ್ನಿವೇಶವೇ ಪ್ರಧಾನ ಕಾರಣ. ಪಕ್ಕದಲ್ಲಿ ಹರಿಯುವ ಹೂಗ್ಲಿ ನದಿ ತಕ್ಕಮಟ್ಟಿಗೆ ಆಳವಾಗಿದೆ. ಸಾಗರಗಾಮಿ ಹಡಗುಗಳು ನದಿಯ ಮೇಲೆ ನಗರದ ಮುಖದ ವರೆಗೂ ಸುಲಭವಾಗಿ ಬರಬಹುದು. ಕಲ್ಕತ್ತಕ್ಕೆ ಉತ್ತರದಲ್ಲಿ ಚಿತ್ಪುರ ಕೊರಕಲೂ ಪೂರ್ವದಲ್ಲಿ ವಿಶಾಲವಾದ ಚೌಳುಮಣ್ಣಿನ ಜವುಗು ನೆಲವೂ ದಕ್ಷಿಣದಲ್ಲಿ ಆದಿಗಂಗಾ ನದಿಯೂ ಇರುವುದರಿಂದ ಪ್ರಕೃತಿಯೇ ಇದಕ್ಕೆ ರಕ್ಷಣೆಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿತ್ತು. ಕಲ್ಕತ್ತದ ಬೆಳವಣಿಗೆಗೆ ಇದಕ್ಕಿಂತ ಹೆಚ್ಚು ಮುಖ್ಯವಾದ ಕಾರಣವೆಂದರೆ ವಿಶಾಲವೂ ಸಂಪದ್ಭರಿತವೂ ಜನನಿಬಿಡವೂ ಆದ ಹಿನ್ನಾಡು. ಗಂಗಾನದಿಯ ಬಯಲು, ಅಸ್ಸಾಂ ಕಣಿವೆಯ ಪ್ರದೇಶ, ಖನಿಜ ತುಂಬಿರುವ ಬಿಹಾರ ಒರಿಸ್ಸ ಮಧ್ಯಪ್ರದೇಶಗಳು-ಇವೆಲ್ಲ ಕಲ್ಕತ್ತದ ಹಿನ್ನಾಡಿನಲ್ಲಿವೆ. ಇದು ಭಾರತದ ಪ್ರಧಾನ ವಾಣಿಜ್ಯ ಕ್ಷೇತ್ರವಾಗಿ ಬೆಳೆಯಲು ಇದರ ಸನ್ನಿವೇಶ ಮುಖ್ಯ ಕಾರಣ.

ಕಲ್ಕತ್ತದ ಮಧ್ಯಕ ಎತ್ತರ ಸಮುದ್ರಮಟದಿಂದ 20'. ನದೀ ದಂಡೆಯಿಂದ ಪೂರ್ವದ ಲವಣ ಸರೋವರದ ಕಡೆಗೆ ನೆಲ ಸ್ವಲ್ಪ ಇಳಿಜಾರಾಗಿದೆ. ಅಲ್ಲಲ್ಲಿ ಹೆಚ್ಚು ಆಳವಿಲ್ಲದ ವಿಶಾಲ ಕೊಳ್ಳಗಳುಂಟು. ಮಳೆಗಾಲದಲ್ಲಿ ಇವೆಲ್ಲ ನೀರಿನಿಂದ ತುಂಬಿರುತ್ತವೆ.

ಹವಾಗುಣ

ಬದಲಾಯಿಸಿ

ಮಾರ್ಚಿಯಿಂದ ಸೆಪ್ಟೆಂಬರ್‍ವರೆಗೆ ಕಲ್ಕತ್ತದ ಹವ ಅಧಿಕ ತಾಪಯುಕ್ತವಾದದ್ದು. ಆಗಿನ ಮಧ್ಯಕ ಮಾಸಿಕ ಉಷ್ಣತೆ 81' ಫ್ಯಾ .ನಿಂದ 87' ಫ್ಯಾ .ಗಳ ನಡುವೆ ಹೊಯ್ದಾಡುತ್ತದೆ. ಗಾಳಿಯಲ್ಲಿ ತೇವದ ಅಂಶ ಹೆಚ್ಚು. ಆದ್ದರಿಂದ ಹವ ಅತ್ಯಂತ ಅಹಿತಕರ. ಹೂಗ್ಲಿಯ ಸಮುದ್ರಸಂಗಮದ ಎಡೆಯಿಂದ ಸಂಜೆಯ ವೇಳೆ ಸಾಮಾನ್ಯವಾಗಿ ಬೀಸುವ ಕಡಲ್ಗಾಳಿ ತಂಪೆರೆಯುತ್ತದೆ. ಆಗಿಂದಾಗ್ಗೆ ಇದು ಮಳೆಯನ್ನೂ ತರುವುದುಂಟು. ಜೂನ್ ತಿಂಗಳ ಉತ್ತರಾರ್ಧದಲ್ಲಿ ಮಳೆಗಾಲ ಆರಂಭ. ಮುಂದೆ ಮೂರು ತಿಂಗಳ ಕಾಲ ಆಗಿಂದಾಗ್ಗೆ ಮುಸಲಧಾರೆಯಾಗಿ ಮಳೆ ಸುರಿಯುತ್ತದೆ. ನಡುನಡುವೆ ಸ್ವಲ್ಪ ಕಡಿಮೆಯಾಗುವುದುಂಟು. ಅನಂತರದ ಮೂರು ತಿಂಗಳುಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುವುದುಂಟು. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಮಾಸಿಕ ಮಳೆಯ ಪರಿಮಾಣ ಸಾಮಾನ್ಯವಾಗಿ 10" ರಿಂದ 13" ವರೆಗೆ ವ್ಯತ್ಯಾಸವಾಗುತ್ತದೆ. ಹಿಂಗಾರು ಕಾಲದ ಅನಂತರ ಮಳೆಯಾಗುವುದು ವಿರಳ. ಅಕ್ಟೋಬರ್‍ನಿಂದ ಫೆಬ್ರುವರಿಯವರೆಗಿನ ಹವ ಹಿತಕರ. ನಡುವಣ ಎರಡು ತಿಂಗಳುಗಳಲ್ಲಿ ರಾತ್ರಿಯ ವೇಳೆ ಕೊರೆಯುವ ಚಳಿ ಇರುತ್ತದೆ.

ಜನಸಂಖ್ಯೆ

ಬದಲಾಯಿಸಿ

ಕಲ್ಕತ್ತದ ಜನಸಂಖ್ಯೆ ಇಪ್ಪತ್ತನೆಯ ಶತಮಾನದಲ್ಲಿ ಬಲು ವೇಗವಾಗಿ ವರ್ಧಿಸಿದೆ. 1901ರಲ್ಲಿ ಇದ್ದ ಸಂಖ್ಯೆ 10,00,000. 1951ರ ವೇಳೆಗೆ ಇದು 15,00,000ದಷ್ಟು ಅಧಿಕವಾಯಿತು. ಮುಂದಿನ ಹತ್ತು ವರ್ಷಗಳಲ್ಲಿ ಇದು 29,26,498ಕ್ಕೆ ಹೆಚ್ಚಿತು. ಈ ಅವಧಿಯಲ್ಲಿ ನಗರದ ಪ್ರದೇಶ ಸು. ಸೇ. 50ರಷ್ಟು ಮಾತ್ರ ವಿಸ್ತರಿಸಿದೆ. ಆದ್ದರಿಂದ ನಗರದಲ್ಲಿಯ ಜನಸಂದಣಿ ಅತ್ಯಧಿಕ. ನಗರದ ಜನರ ಮೂರನೆಯೆರಡರಷ್ಟು ಮಂದಿ ಬಂಗಾಳಿಗಳು. ಉಳಿದವರಲ್ಲಿ ಹಿಂದಿ ಆಡುವವರೇ ಹೆಚ್ಚು. ಇಲ್ಲಿರುವ ಐರೋಪ್ಯರಲ್ಲಿ ಬ್ರಿಟಿಷರು ಬಹುಸಂಖ್ಯಾತರು.

ನೋಡತಕ್ಕ ಸ್ಥಳಗಳು

ಬದಲಾಯಿಸಿ

ಕಲ್ಕತ್ತದ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ವೈದಾನ. ಇದರ ವಿಸ್ತೀರ್ಣ 1,238 ಎಕರೆ. ಫೋರ್ಟ್ ಮಿಲಿಯಂ (ಕೋಟೆ) ಇದರ ಪಶ್ಚಿಮಕ್ಕೆ ಹೂಗ್ಲಿಗೆದುರಾಗಿ ನಿಂತಿದೆ. ಸುಮಾರು 10,000 ಸೈನಿಕರು ಇರಬಹುದಾದ ಈ ಕೋಟೆ ಸ್ಥೂಲವಾಗಿ ಅಷ್ಟ ಕೋನಾಕೃತಿಯಲ್ಲಿದೆ. ಇದು ಕಲ್ಕತ್ತ ನಗರದ ಕೇಂದ್ರಸ್ಥಳವೆನ್ನಬಹುದು. ವಿಕ್ಟೋರಿಯ ಸ್ಮಾರಕಭವನ ಕಲ್ಕತ್ತದ ಅತ್ಯಂತ ಸುಂದರವಾದ ಕಟ್ಟಡ. ಇದು ಕುದುರೆ ಪಂದ್ಯ ಸ್ಥಳಕ್ಕೆ ಕೂಡಿದಂತಿರುವ ಮೈದಾನದ ಆಗ್ನೇಯಕ್ಕಿದೆ. ಇಲ್ಲೊಂದು ಚಿತ್ರಾಲಯವೂ ವಸ್ತುಸಂಗ್ರಹಾಲಯವೂ ಇವೆ. ಸೇಂಟ್ ಪಾಲನ ಕೆಥೆಡ್ರಲ್ ಇಂಡೊ-ಗಾಥಿಕ್ ಶೈಲಿಯ ಕಟ್ಟಡ. ಇದನ್ನು 1839-41ರಲ್ಲಿ ನಿರ್ಮಿಸಲಾಯಿತು. ಈಡನ್ ತೋಟ ಕಲ್ಕತ್ತದ ಇನ್ನೊಂದು ಚೆಲುವುದಾಣ. ಆಕಾಶವಾಣಿ ಕಟ್ಟಡವೂ ರಣಜಿ ಕ್ರೀಡಾಂಗಣವೂ ಇಲ್ಲಿವೆ. ರಾಜಭವನ, ವಿಧಾನ ಸಭಾಭವನ, ಉಚ್ಚ ನ್ಯಾಯಾಲಯ, ಪುರಭವನ ಇವು ಇತರ ಮುಖ್ಯ ಕಟ್ಟಡಗಳು. ಪುರಭವನವನ್ನು ಕಟ್ಟಲಾದದ್ದು 1813ರಲ್ಲಿ. ಅರಮನೆಗಳಂಥ ಸೌಧಗಳಿರುವಂಥ ಚೌರಿಂಘಿ ಒಮ್ಮೆ ಶ್ರೀಮಂತರ ವಾಸಸ್ಥಳವಾಗಿತ್ತು. ಈಗ ಅಲ್ಲಿ ಹೋಟಲುಗಳೂ ಅಂಗಡಿಗಳೂ ಕಚೇರಿಗಳೂ ವಸ್ತುಸಂಗ್ರಹಾಲಯಗಳೂ ಇವೆ. ಸುಪ್ರಸಿದ್ಧವಾದ ಭಾರತೀಯ ವಸ್ತುಸಂಗ್ರಹಾಲಯ (ಇಂಡಿಯನ್ ಮ್ಯೂಸಿಯಂ) ಇರುವುದು ಅಲ್ಲಿ.

ಇತರ ಮುಖ್ಯ ಸ್ಥಳಗಳೆಂದರೆ ಹೌರಾ ಸೇತುವೆ - ಹೌರಾ ರೈಲುನಿಲ್ದಾಣದಿಂದ ಹೊರಬಂದು ಅಲ್ಲಿಂದ ಕಣ್ಣು ಹಾಯಿಸಿದರೆ ಎಡಗಡೆ ಕಣ್ಣಳತೆಯ ದೂರದಲ್ಲೇ ಹೌರಾ ಸೇತುವೆ ಕಂಡುಬರುತ್ತದೆ; ವಿವೇಕಾನಂದರ ದೀಕ್ಷಾಸ್ಥಳ ಹಾಗೂ ನಿವಾಸವಿರುವ ಬೇಲೂರುಮಠ, ರಾಮಕೃಷ್ಣ ಪರಮಹಂಸರ ಕ್ಷೇತ್ರವಾದ ದಕ್ಷಿಣೇಶ್ವರ, ರವೀಂದ್ರಸೇತು ಎಂಬ ಕೇಬಲ್ ಸೇತುವೆ, ಅಮೆರಿಕಾದ ವೈಟ್ ಹೌಸ್ ಪ್ರತಿರೂಪವಾದ ವಿಕ್ಟೋರಿಯಾ ಹಾಲ್, ಈಜಿಪ್ಟ್ ಮಮ್ಮಿಯನ್ನು ಇಟ್ಟಿರುವ ಇಂಡಿಯಾ ಮ್ಯೂಸಿಯಂ, ಪುರಾತನ ಸಂತ ಪೌಲನ ಚರ್ಚ್, ಕೊಲ್ಕಾತಾ ಎಂಬ ಹೆಸರು ಬರಲು ಕಾರಣವಾದ ಕಾಳಿಘಾಟ್ ಬಳಿಯ ಕಾಳಿಗುಡಿ, ಪುಟ್ಟ ಪುಟ್ಟ ಕನ್ನಡಿಗಳಿಂದ ಕಟ್ಟಲಾದ ಜೈನಗುಡಿ, ಇಂಡಿಯಾದ ಪ್ರಪ್ರಥಮ ತ್ವರಿತಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸುರಂಗರೈಲು, ರಸ್ತೆ ಮೇಲಿನ ರೈಲು ಹಳಿಯ ಟ್ರ್ಯಾಮ್‌ಕಾರ್, ಕೂಲಿಗಳು ಎಳೆದುಕೊಂಡು ಓಡುತ್ತಾ ಸಾಗುವ ಕೈ ರಿಕ್ಷಾ, ಧರ್ಮತಲ (ಈಗಿನ ಎಸ್ಪ್ಲಾನೆಡ್ ), ಸೈನ್ಸ್ ಮ್ಯೂಸಿಯಂ, ಮೃಗಾಲಯ ಇತ್ಯಾದಿಗಳು.

ಕಲ್ಕತ್ತದ ಹೃದಯ ಸ್ಥಾನ ವಾಣಿಜ್ಯ ಪ್ರಧಾನವಾದದ್ದು . ನಗರದ ವಾಣಿಜ್ಯ ಸಂಸ್ಥೆಗಳೂ ಆಡಳಿತ ಕಚೇರಿಗಳೂ ರಾಜಭವನದ ಉತ್ತರಕ್ಕೆ ಡಾಲ್ ಹೌಸಿ ಚೌಕದ ಸುತ್ತ ಗೊಂಚಲುಗೊಂಚಲಾಗಿವೆ. ಪಶ್ಚಿಮ ಬರಾಳಗಾ ಸರ್ಕಾರದ ಆಡಳಿತ ಕಚೇರಿ ಇಲ್ಲಿದೆ. ನೇತಾಜಿ ಸುಭಾಷ್ ರಸ್ತೆಯ ಉದ್ದಕೂ ಕಲ್ಕತ್ತದ ಅನೇಕ ಮುಖ್ಯವಾಣಿಜ್ಯ ಸಂಸ್ಥೆಗಳಿವೆ. ನಖುದಾ ಮಸೀದಿ, ಮಹಾಜಾತಿ ಸದನ, ಅಮೃತಶಿಲೆಯ ಅರಮನೆ ಇವು ಮಧ್ಯ ಕಲ್ಕತ್ತದ ಮುಖ್ಯ ಕಟ್ಟಡಗಳು. ಶಿಕ್ಷಣ ಸಂಸ್ಥೆಗಳಿರುವುದು ಉತ್ತರ ಕಲ್ಕತ್ತದಲ್ಲಿ. ಕಲ್ಕತ್ತ ವಿಶ್ವವಿದ್ಯಾಲಯ ಅಲ್ಲಿದೆ. ಉತ್ತರದ ಉಪನಗರಗಳಾದ ಕಾಸಿಪುರ ಚಿತ್ಪುರಗಳಲ್ಲಿ ಸಣಬು ಒತ್ತುವ, ಹತ್ತಿ ಹಿಂಜುವ ಕಾರ್ಖಾನೆಗಳಿವೆ. ಪೂರ್ವದ ಉಪನಗರವಾದ ಮಣಿಕ್ ತಲದ ಬಳಿಯ ಜೈನಮಂದಿರ ಅತ್ಯಂತ ಪ್ರಸಿದ್ಧವಾದದ್ದು. ಈ ಕಡೆಯಲ್ಲಿ ಅನೇಕ ಕಾರ್ಖಾನೆಗಳೂ ಗಿರಣಿಗಳೂ ಇವೆ. ಪ್ರಾಣಿವನವೂ ಸಸ್ಯಶಾಸ್ತ್ರೀಯ ಉದ್ಯಾನವೂ ಇರುವುದು ಆಲಿಪುರದಲ್ಲಿ. ರಾಷ್ಟೀಯ ಗ್ರಂಥಾಲಯವೂ ಅಲ್ಲೇ ಇದೆ. ಭವಾನಿಪುರ ದಕ್ಷಿಣದ ಅತ್ಯಂತ ಜನನಿಬಿಡ ಪ್ರದೇಶ.

ಕಾಳಿಘಾಟಿನ ಪ್ರಸಿದ್ಧ ಕಾಳಿಮಂದಿರ ಆದಿಗಂಗೆಯ ಮೇಲಿದೆ. ನಗರದ ಎಲ್ಲೆಯ ಹೊರಗೆ ಹೂಗ್ಲಿಯ ಉದ್ದಕ್ಕೂ ಸುಮಾರು 78 ಚ.ಮೈ. ವಿಸ್ತಾರದಲ್ಲಿ ವಿಶಾಲ ಕಲ್ಕತ್ತ ಬೆಳೆಯುತ್ತಿದೆ. ಹೂಗ್ಲಿ ನದಿಗೆ ಅಡ್ಡಲಾಗಿರುವ ಹೌರಾ ಸೇತುವೆ ಅತ್ಯಂತ ಪ್ರಸಿದ್ಧವಾದದ್ದು. ಇದು ಕಲ್ಕತ್ತದ ಹೆಗ್ಗುರುತುಗಳಲ್ಲೊಂದು.

ಇಲ್ಲಿನ ದುರ್ಗಾಪೂಜೆ

ಬದಲಾಯಿಸಿ

ದಸರೆಯನ್ನು ಇಲ್ಲಿ ದುರ್ಗಾ ಪೂಜೆ ಎಂದು ವೈಭದಿದಂದ ಆಚರಿಸುತ್ತಾರೆ . ಈ ವೇಳೆಯಲ್ಲಂತೂ ಕೊಲ್ಕಾತಾ ನೋಡಲು ತುಂಬಾ ಚೆನ್ನಾಗಿರುತ್ತದೆ. ಆ ದಿನಗಳಲ್ಲಿ ಈ ನಗರವು ಮಲಗುವುದೇ ಇಲ್ಲ. ನಗರದ ತುಂಬಾ ಜನವೋ ಜನ. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗೆಯ ಮೂರ್ತಿಗಳು, ತಳಿರುತೋರಣ, ಸಂತಸದ ಕಳೆಯಿಂದ ನಗುನಗುತ್ತಾ ವ್ಯವಹರಿಸುವ ಜನಜಂಗುಳಿ, ಸರ್ವವಸ್ತುಗಳಿಂದ ತುಂಬಿದ ವ್ಯಾಪಾರಮಳಿಗೆಗಳು ನೋಡುಗರ ಕಣ್ಮನ ತುಂಬುತ್ತವೆ.

ಕೈಗಾರಿಕೆಗಳು

ಬದಲಾಯಿಸಿ

ಹಳೆಯ ಕಲ್ಕತ್ತದ ನೆರೆಯ ಹೌರಾದಲ್ಲಿ ಕೈಗಾರಿಕೆಗಳಿವೆ. ಹೂಗ್ಲಿಯ ದಂಡೆಗುಂಟ ದೂರದಲ್ಲಿ ತಲೆಯೆತ್ತಿರುವ ಟಿಟಾಘರ್ ಮತ್ತು ಭಾತ್‍ಪಾರಗಳು ಕೈಗಾರಿಕ ಕೇಂದ್ರಗಳು. ಅಲ್ಲಿಯ ಜನರಲ್ಲಿ ಸೇ. 65-85 ಮಂದಿ ಕಾರ್ಮಿಕರು ಮತ್ತು ಅವರ ಆಶ್ರಿತರು. ಬಜ್ ಬಜ್ ನಿಂದ ನೈಹಾತಿಯ ವರೆಗೆ ಸಣಬು ಗಿರಣಿಗಳು ಉದ್ದಕ್ಕೂ ಹಬ್ಬಿವೆ. ಹತ್ತಿ ಜವಳಿ, ಹೆಣಿಕೆ ವಸ್ತ್ರ, ರೇಷ್ಮೆ ಇವುಗಳ ಕೆಲವು ಗಿರಣಿಗಳುಂಟು. ಅಸನ್ಸೋಲ್-ರಾಣಿಗಂಜ್ ಕಲ್ಲಿದ್ದಲು ಮತ್ತು ಜಮ್‍ಷೆಡ್‍ಪುರದ ಕಬ್ಬಿಣ-ಉಕ್ಕುಗಳಿಂದ ಅನೇಕ ಎಂಜಿನಿಯರಿಂಗ್ ಮತ್ತು ಲೋಹವಸ್ತು ಕೈಗಾರಿಕೆಗಳು ಸಮೃದ್ಧಿಯಾಗಿ ಬೆಳೆದಿವೆ. ಈ ಕೈಗಾರಿಕೆಗಳು ಬಹುತೇಕ ಕಲ್ಕತ್ತದಲ್ಲೂ ಅದರ ಉಪನಗರಗಳಲ್ಲೂ ಹೌರಾದಲ್ಲೂ ಇವೆ. ಸಣಬು ಗಿರಣಿಗಳಿಗೆ ಬೇಕಾಗುವ ಯಂತ್ರದ ಭಾಗಗಳೂ ಹಗುರ ಯಂತ್ರಗಳೂ ತಯಾರಾಗುತ್ತವೆ. ಅಲ್ಯೂಮಿನಿಯಂ ಗಟ್ಟಿಗಳಿಂದ ತಗಡುಗಳನ್ನೂ ಸರಳುಗಳನ್ನೂ ತಯಾರಿಸುವ ಕೈಗಾರಿಕೆ ಈಚೆಗೆ ಬೇಲೂರಿನಲ್ಲಿ ಬೆಳೆದಿದೆ. ರೈಲ್ವೆ ಕಾರ್ಯಾಗಾರ, ಹಡಗು ದುರಸ್ತಿ, ಮೋಟಾರು ಜೋಡಣೆ_ಮುಂತಾದ ಅನೇಕ ಕೈಗಾರಿಕೆಗಳಿಗೆ ಕಲ್ಕತ್ತವೊಂದು ಮುಖ್ಯ ಕೇಂದ್ರ.

ವಿಶಾಲ ಕಲ್ಕತ್ತದಲ್ಲಿ ಅನೇಕ ಅನುಭೋಗ ವಸ್ತುಗಳ ಕೈಗಾರಿಕೆಗಳಿವೆ. ರಬ್ಬರ್ ಮತ್ತು ರಾಸಾಯನಿಕ ಕೈಗಾರಿಕೆಗಳು, ಅಕ್ಕಿ ಗಿರಣಿಗಳು, ಕಾಗದ ತಯಾರಿಕೆ, ಪಾದರಕ್ಷೆಯ ಕೈಗಾರಿಕೆ, ಗಾಜಿನ ವಸ್ತು ಮತ್ತು ಬೆಂಕಿಕಡ್ಡಿ ತಯಾರಿಕೆ ಇವು ಇತರ ಮುಖ್ಯವಾದ ಕೆಲವು ಕೈಗಾರಿಕೆಗಳು. ಇಷ್ಟೇ ಅಲ್ಲ. ಪಶ್ಚಿಮ ಬಂಗಾಳದ ಚಹತೋಟಗಳು, ಕಲ್ಲಿದ್ದಲು ಗಣಿಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಆಡಳಿತ ಕಚೇರಿಗಳು ಇರುವುದು ಕಲ್ಕತ್ತದಲ್ಲೇ.

ಕಲ್ಕತ್ತದಲ್ಲೂ ಅದರ ಸುತ್ತಲೂ ಕೈಗಾರಿಕೆಗಳು ಕೇಂದ್ರೀಕರಿಸಿರುವುದರಿಂದ ಆಗಿರುವ ದುಷ್ಟರಿಣಾಮ ಅಲ್ಪವೇನಲ್ಲ. ಕಲ್ಕತ್ತ ನಗರಗುಚ್ಛದ ಒಟ್ಟು ಜನಸಂಖ್ಯೆ ಅರವತ್ತು ಲಕ್ಷಕ್ಕಿಂತ ಹೆಚ್ಚು. ಕಲ್ಕತ್ತದ ಸುತ್ತಮುತ್ತಣ ಸಣ್ಣ ಪಟ್ಟಣಗಳ ಜನ ಸಂಖ್ಯೆ ಐವತ್ತು ವರ್ಷಗಳಲ್ಲಿ ಸೇ. 500ಕ್ಕಿಂತ ಹೆಚ್ಚಾಗಿ ಬೆಳೆದಿದೆ.

ವಾಣಿಜ್ಯ ಮತ್ತು ಸಂಪರ್ಕ

ಬದಲಾಯಿಸಿ

ಕಲ್ಕತ್ತದ ವಾಣಿಜ್ಯ ಪ್ರಾಮುಖ್ಯಕ್ಕೆ ಅದರ ಉತ್ತಮ ಬಂದರೇ ಕಾರಣ. ರೈಲು, ನದಿ ಮತ್ತು ವಿಮಾನ ಮಾರ್ಗಗಳು ಇಲ್ಲಿ ಸಂಧಿಸುತ್ತವೆ. ಗೋಣಿಚೀಲ, ಹೆಂಪ್, ಚಹ, ಲಿನ್ಸೀಡ್, ಕಲ್ಲಿದ್ದಲು, ಬೀಡುಕಬ್ಬಿಣ, ಕಬ್ಬಿಣದ ಮತ್ತು ಮ್ಯಾಂಗನೀಸಿನ ಅದುರುಗಳು, ಕಾಗೆಬಂಗಾರ, ಜಮಖಾನೆ, ಚರ್ಮ ಇವು ಮುಖ್ಯ ನಿರ್ಯಾತಗಳು. ಉಪ್ಪು, ಆಹಾರಧಾನ್ಯ, ಪೆಟ್ರೋಲಿಯಂ, ಕಬ್ಬಿಣ, ಉಕ್ಕು, ಯಂತ್ರ ಮುಂತಾದವು ಆಯಾತಗಳು. 16,000 ಟನ್ ತೂಕದ ಹಡಗುಗಳು ಕಲ್ಕತ್ತದ ವರೆಗೂ ಬರುತ್ತವೆ. ನದೀ ಪಾತ್ರದ ಆಳದಲ್ಲಿ ಆಗಾಗ್ಗೆ ಬದಲಾವಣೆಯಾಗುವುದರಿಂದ ಹಡಗು ಸಂಚಾರ ಅಪಾಯಕಾರಿಯಾಗದಂತೆ ಬಂದರು_ಆಡಳಿತ ಎಚ್ಚರಿಕೆ ವಹಿಸುತ್ತದೆ. ಆಳ ಕಡಿಮೆಯಾಗದಂತೆ ಕ್ರಮ ಕೈಕೊಳ್ಳಲಾಗುತ್ತದೆ. ಬಂದರಿಗೆ ವಿಶಿಷವಾದ ರೈಲ್ವೆ ವ್ಯವಸ್ಥೆಯಿದೆ. ಪೂರ್ವ ಮತ್ತು ಆಗ್ನೇಯ ರೈಲ್ವೆಗಳಿಗೆ ಇದು ಕೊನೆ ನಿಲ್ದಾಣ. ಬೇರೆ ಕಡೆಗಳಿಂದ ಕಲ್ಕತ್ತಕ್ಕೆ ಬರುವ ಪ್ರಯಾಣಿಕರು ನಗರದ ಹೊರ ನಿಲ್ದಾಣಗಳಾದ ಹೌರಾ ಅಥವಾ ಸಿಯಲ್ದದಲ್ಲಿ ಇಳಿಯಬೇಕು. ವಿಶ್ವದ ಎಲ್ಲ ಮುಖ್ಯ ನಗರಗಳೊಂದಿಗೆ ಕಲ್ಕತ್ತದ ವಿಮಾನ ಸಂಪರ್ಕವಿದೆ. ಕಲ್ಕತ್ತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಡಂಡಂನಲ್ಲಿ.

ಶಿಕ್ಷಣ ಮತ್ತು ಸಂಶೋಧನೆ

ಬದಲಾಯಿಸಿ

ಕಲ್ಕತ್ತ ವಿಶ್ವವಿದ್ಯಾಲಯ (1857) ಆಧುನಿಕ ಭಾರತದ ಅತ್ಯಂತ ಹಳೆಯ ವಿಶ್ವವಿದಾನಿಲಯ (ನೋಡಿ- ಕಲ್ಕತ್ತ-ವಿಶ್ವವಿದ್ಯಾಲಯ) ರಬೀಂದ್ರ ಭಾರತಿ ವಿಶ್ವವಿದ್ಯಾಲಯ 1962ರಲ್ಲಿ ಸ್ಥಾಪಿತವಾಯಿತು. ಕಲ್ಕತ್ತದ ಉಪನಗರಗಳಲ್ಲೊಂದಾದ ಜಾದವಪುರದಲ್ಲಿ ಅದೇ ಹೆಸರಿನ ವಿಶ್ವವಿದ್ಯಾನಿಲಯವಿದೆ (ಸ್ಥಾಪಿತ: 1955). ಕಲ್ಕತ್ತದಲ್ಲಿ ಅನೇಕ ಸಂಶೋಧನಾಲಯಗಳಿವೆ.

ಕಲ್ಕತ್ತದ ಪೌರಾಡಳಿತಕ್ಕೆ ಚುನಾಯಿತ ಸದಸ್ಯರನ್ನೊಳಗೊಂಡ ಕಾರ್ಪೋರೇಷನ್ ಇದೆ. ಹೂಗ್ಲಿಯಿಂದ ನಗರಕ್ಕೆ ನೀರು ಸರಬರಾಜಾಗುತ್ತದೆ. ಜೊತೆಗೆ 1,500ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ನಗರದಲ್ಲಿ ಅಲ್ಲಲ್ಲಿ ತೆಗೆಯಲಾಗಿದೆ. ನಗರದ ಸಾರವನ್ನು ಕೊಂಡು 22 ಮೈಲಿಗಳಾಚೆಗಿರುವ ಕುಲ್ಟಿ ನದಿಗೆ ಸಾಗಿಸಲು ಮೂರು ಮುಖ್ಯ ಪಂಪುದಾಣಗಳಿವೆ.

ಇತಿಹಾಸ

ಬದಲಾಯಿಸಿ

ಆಧುನಿಕ ಕಾಲದಲ್ಲಿ ಅತ್ಯಂತ ಪ್ರಖ್ಯಾತಿ, ಪ್ರಾಮುಖ್ಯ ಗಳಿಸಿರುವ ಕಲ್ಕತ್ತ ಭಾರತದ ಪ್ರಾಚೀನ ನಗರಗಳಲ್ಲೊಂದಲ್ಲ. ಕಲ್ಕತ್ತಕ್ಕಿಂತ ನದೀಮುಖಜ ಭೂಮಿಯ ಶಿರಪ್ರದೇಶವೇ ಹಿಂದೆ ಹೆಚ್ಚು ಪ್ರಸಿದ್ಧವಾಗಿತ್ತು. ಈಗ ಕಾಡು ನುಂಗಿರುವ ಸ್ಥಳಗಳಾದ ಗೌರ್, ಟಂಡ, ಪಾಂಡುವ, ರಾಜ್ ಮಹಲ್ ಮುಂತಾದ ಪ್ರಾಚೀನ ಮುಖ್ಯ ಪಟ್ಟಣಗಳು ಇದ್ದುದು ಅಲ್ಲಿ. 15 ಮತ್ತು 16ನೆಯ ಶತಮಾನಗಳಲ್ಲಿ ಕಾಳಿಕಾಟ ಸುಣ್ಣ ಸುಡುವವರ, ಬೆಸ್ತರ ಮತ್ತು ನೇಕಾರರ ಹಳ್ಳಿಯಾಗಿತ್ತು. ಆಗಿನ ಕಾಳಿಕಾಟ-ಗೋವಿಂದಪುರ-ಸುತನಾತಿ ರಸ್ತೆ ದುರ್ಗಮವಾದದ್ದು. ಕ್ರಮೇಣ ಅದು ಉಚ್ಛ್ರಾಯ ಸ್ಥಿತಿಗೆ ಬಂದು ಚೌರಿಂಘಿ ರಸ್ತೆಯೆಂದು ಪ್ರಸಿದ್ಧವಾಯಿತು. ಈಗ ಅದು ಜವಾಹರ್‍ಲಾಲ್ ನೆಹರು ರಸ್ತೆಯೆಂಬ ಹೆಸರು ಪಡೆದಿದೆ. 1600ರ ವೇಳೆಗೆ ಕಾಳಿಕಾಟ ಹಳ್ಳಿ ಹತ್ತಿಯ ವ್ಯಾಪಾರ ಕೇಂದ್ರವಾಯಿತು. ಆರ್ಮೇನಿಯನ್ ವರ್ತಕರು ಪರ್ಷಿಯದಿಂದ ಇಲ್ಲಿಗೆ ವ್ಯಾಪಾರಕ್ಕಾಗಿ ಬರತೊಡಗಿದರು. ಸುತ್ತಮುತ್ತಿನ ಗ್ರಾಮಗಳಲ್ಲಿ ತಯಾರಾಗುತ್ತಿದ್ದ ಮಸ್ಲಿನ್ ಬಟ್ಟೆಗಳನ್ನು ಕೊಂಡು ಇಲ್ಲಿ ಶೇಖರಿಸಿ ತಮ್ಮ ಸ್ಥಳಗಳಿಗೆ ರವಾನಿಸುತ್ತಿದ್ದರು. ಅನಂತರ ಪೋರ್ಚುಗೀಸ್ ಮತ್ತು ಇಂಗ್ಲಿಷ್ ವರ್ತಕರೂ ಆರ್ಮೇನಿಯನರೊಡನೆ ಕಲ್ಕತ್ತಕ್ಕೆ ಬಂದರು. ಕಲ್ಕತ್ತದ ಹೆಸರು ಐನೇ ಅಕ್ಬರಿಯಲ್ಲಿ ಉಲ್ಲೇಖವಾಗಿದೆ.

ಈಸ್ಟ್ ಇಂಡಿಯ ಕಂಪನಿಯ ಏಜೆಂಟನಾಗಿದ್ದ ಜಾಬ್ ಚಾರ್ನಾಕ್ ಹೂಗ್ಲಿ ನದಿಯ ಮೇಲೆ_ಈಗಿನ ಹೂಗ್ಲಿ ಪಟ್ಟಣಕ್ಕೆ 15 ಮೈ. ದೂರದಲ್ಲಿ_ಸುತನಾತಿಯಲ್ಲಿ ಒಂದು ಕೋಠಿ ಸ್ಥಾಪಿಸಿದ. ಅದರ ಸುತ್ತಲೂ ಜೌಗು ನೆಲ. ಮುಂದೆ ನಗರವಾಗಿ ಬೆಳೆಯುವ ಯಾವ ಸೂಚನೆಗಳೂ ಅಲ್ಲಿ ಕಾಣುತ್ತಿರಲಿಲ್ಲ. ಆದರೆ ಡಚ್ಚರ ಚಿನ್ಸುರಾ ಮತ್ತು ಫ್ರೆಂಚರ ಚಂದ್ರನಗರಗಳಿಗಿಂತ ಇದು ಹಡಗು ಸಂಚಾರಕ್ಕೆ ಅನುಕೂಲಕರವಾಗಿತ್ತು. 1698ರಲ್ಲಿ ಈಸ್ಟ್ ಇಂಡಿಯ ಕಂಪನಿ ಸುತನಾತಿ, ಕಾಳಿಕಾಟ ಮತ್ತು ಗೋವಿಂದಪುರಗಳನ್ನು ಬಂಗಾಳದ ನವಾಬನಾಗಿದ್ದ ಅಸಿಮನಿಂದ ಕೊಂಡು ಕ್ರಮೇಣ ಸಣ್ಣಪುಟ್ಟ ಕೋಠಿಗಳನ್ನು ಸ್ಥಾಪಿಸಿತು. ಅಂದಿನಿಂದ ಜನಸಂಖ್ಯೆ ಏರತೊಡಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಸದ ಮನೆಗಳು ತಲೆಯೆತ್ತಿದುವು. ಕಾಳಿಕಾಟವೆಂಬ ಹೆಸರು ಮಾರ್ಪಾಡು ಹೊಂದಿ ಕಲ್ಕತ್ತವಾಯಿತು. ಅಲ್ಲಿ ಸೇಂಟ್ ವಿಲಿಯಂ ಕೋಟೆ ಕಟ್ಟಲಾದ್ದು 1716ರಲ್ಲಿ. ಆಗ ಸಮೀಪದ ಪ್ರಸಿದ್ಧವಾದ ಮೈದಾನವೂ ಅಸ್ತಿತ್ವಕ್ಕೆ ಬಂತು. 1757ರಲ್ಲಿ ಬಂಗಾಳದ ನವಾಬ ಸಿರಾಜುದ್ದೌಲನಿಗೂ ಕಂಪನಿಗೂ ಪ್ಲಾಸಿಯ ಬಳಿ ನಡೆದ ಕದನದ ಪರಿಣಾಮವಾಗಿ ಬಂಗಾಳದ ಮೇಲೆ ಕಂಪನಿಯ ಆಡಳಿತ ಸ್ಥಾಪಿತವಾಯಿತು. ಈ ಸಂದರ್ಭದಲ್ಲಿ ನಡೆದುದೆಂದು ಹಾಲ್ ವೆಲ್ ಪ್ರಚಾರ ಮಾಡಿದ ಕಲ್ಕತ್ತದ ಕತ್ತಲೆ ಕೋಣೆಯ ದುರಂತ ಸತ್ಯದೂರವಾದುದೆಂದು ಸಂಶೋಧನೆಗಳಿಂದ ತಿಳಿದುಬಂದಿದೆ.

1772ರಲ್ಲಿ ರಚಿತವಾದ ರೆಗ್ಯುಲೇಟಿಂಗ್ ಕಾಯಿದೆಯ ಪ್ರಕಾರ ಈಸ್ಟ್ ಇಂಡಿಯ ಕಂಪನಿಯ ಇತರ ಆಧಿಪತ್ಯಗಳ ಮೇಲ್ವಿಚಾರಣೆಯನ್ನು ಬಂಗಾಳ ಆಧಿಪತ್ಯಕ್ಕೆ ಕೇಂದ್ರೀ ಕರಿಸಲಾಯಿತು. 1773ರಿಂದ 1912ರ ವರೆಗೂ ಕಲ್ಕತ್ತ ಭಾರತದ ರಾಜಧಾನಿಯಾಗಿತ್ತು. ಉಚ್ಚನ್ಯಾಯಾಲಯವೂ ಸ್ಥಾಪಿತವಾಯಿತು. ವಿಲಿಯಂ ಜೋನ್ಸ್ ಇಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಯೆಂಬ ಸಂಸ್ಥೆಯನ್ನು ಸ್ಥಾಪಿಸಿದ (1794). ಕಲ್ಕತ್ತ ವಿಶ್ವವಿದ್ಯಾಲಯ ಆರಂಭವಾದದ್ದು 1857ರಲ್ಲಿ.

ಆಧುನಿಕ ಭಾರತದ ನಿರ್ಮಾಣದಲ್ಲಿ ಕಲ್ಕತ್ತ ವಹಿಸಿದ ಪಾತ್ರ ಮಹತ್ತ್ವದ್ದು. ಪ್ರಸಿದ್ಧ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್, ಸುಪ್ರಸಿದ್ಧ ವಿದ್ವಾಂಸ ಹರಪ್ರಾದ ಶಾಸ್ತ್ರಿ, ರಾಜಕೀಯ ಮುಖಂಡ ಬಿಪಿನ್ ಚಂದ್ರ ಪಾಲ್, ವಿಜ್ಞಾನಿಗಳಾದ ಜಗದೀಶ್ ಚಂದ್ರ ಬೋಸ್ ಮತ್ತು ಪ್ರಫುಲ್ಲ ಚಂದ್ರ ರಾಯ್, ರಾಷ್ಟ್ರಕವಿ ರವೀಂದ್ರನಾಥ ಠಾಕೂರ್, ದಾರ್ಶನಿಕ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಾಷ್ಟ್ರದ ಬಿಡುಗಡೆಗಾಗಿ ಸಾಹಸದಿಂದ ಹೋರಾಡಿದ ಸುಭಾಷ್ ಚಂದ್ರ ಬೋಸ್ ಮೊದಲಾದ ಅನೇಕ ಮಹಾವ್ಯಕ್ತಿಗಳು ಕಲ್ಕತ್ತ ನಗರದ ಇತಿಹಾಸ ಸೃಷ್ಟಿಸುವುದರಲ್ಲಿ ಪಾಲ್ಗೊಂಡಿದ್ದಾರೆ. 1947ರಿಂದ ಇದು ಪಶ್ಚಿಮ ಬಂಗಾಳದ ರಾಜಧಾನಿಯಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ

[] [] []

  1. https://en.m.wikipedia.org/wiki/Climate_of_Kolkata
  2. "ಆರ್ಕೈವ್ ನಕಲು". Archived from the original on 2020-05-30. Retrieved 2020-05-24.
  3. https://en.m.wikipedia.org/wiki/Kolkata