ಅವಗೆಂಪು

(ಅವಕೆಂಪು ಇಂದ ಪುನರ್ನಿರ್ದೇಶಿತ)

ಅವಗೆಂಪು ವಿಕಿರಣ (ಅವಕೆಂಪು) ಅಥವಾ ಇನ್‌ಫ್ರಾರೆಡ್ ರೇಡಿಯೇಶನ್ (ಐಆರ್) ಎನ್ನುವುದು ೦.೭ ಮತ್ತು ೩೦೦ ಮೈಕ್ರೊಮೀಟರ್ ತರಂಗಾಂತರದಲ್ಲಿ ಇರುವ ವಿದ್ಯುತ್ಕಾಂತೀಯ ವಿಕಿರಣವಾಗಿದೆ. ಇದು ಅಂದಾಜು ೧ ಮತ್ತು ೪೩೦ THz ನಡುವಿನ ಆವರ್ತನ ಶ್ರೇಣಿಗೆ ಸಮನಾಗಿರುತ್ತದೆ.[]

ಮಧ್ಯ-ಅವಗೆಂಪು ("ಉಷ್ಣ") ಬೆಳಕಿನಲ್ಲಿ ಎರಡು ಮಾನವ ದೇಹಗಳ ಚಿತ್ರಗಳು (ಹುಸಿ-ಬಣ್ಣ)

ಹಲವು ಸಾಮಾನ್ಯ ಗುಣಗಳನ್ನುಳ್ಳ ವಿದ್ಯುದ್ಕಾಂತ ಸೂತ್ರವನ್ನು ಪರಿಪಾಲಿಸುವ ಹಲವು ರಶ್ಮಿಪುಂಜಗಳನ್ನು ಒಂದು ಪಂಗಡಕ್ಕೆ ಸೇರಿಸಿ ಇವನ್ನು ವಿದ್ಯುದಯಸ್ಕಾಂತ ರಶ್ಮಿಪುಂಜಗಳೆಂದು ಹೆಸರಿಸುತ್ತೇವೆ. ಈ ಹಲವು ರಶ್ಮಿಗಳ ಮೂಲವೂ, ಕಂಡು ಹಿಡಿಯುವ ಸಾಧನಗಳಲ್ಲಿ ಕೆಲವು ಗುಣಗಳೂ ಬೇರೆ ಬೇರೆಯಾಗಿದ್ದರೂ ಇವೆಲ್ಲ ಒಂದೇ ಬಗೆಯ ಅಲೆಗಳಾಗಿವೆ. ಅಲೆಗಳ ತರಂಗದೂರದ ವ್ಯತ್ಯಾಸವೇ ಹಲವು ರಶ್ಮಿಗಳ ಗುಣಗಳ ವೈವಿಧ್ಯಕ್ಕೆ ಕಾರಣ. ಅತಿ ಹ್ರಸ್ವತರಂಗದೂರದ ರಶ್ಮಿಪುಂಜಗಳು ಗ್ಯಾಮ ರಶ್ಮಿಪುಂಜಗಳಾಗಿದ್ದು, ಅತಿ ದೀರ್ಘ ತರಂಗಮಾನದವು ರೇಡಿಯೋ ರಶ್ಮಿಪುಂಜಗಳಾಗಿರುತ್ತವೆ. ಈ ಎರಡು ತುದಿಗಳ ನಡುವೆ ಎಕ್ಸ್-ಕಿರಣ, ಅತಿನೇರಿಳೆ ವಿಕಿರಣ, ದೃಷ್ಟಿಗೋಚರ ಬೆಳಕು, ಅವಗೆಂಪುವಿಕಿರಣ, ರೇಡಿಯೋ ಅಲೆಗಳು ಕ್ರಮವಾಗಿ ಬರುತ್ತವೆ.[]

ಅವಗೆಂಪು ವಿಕಿರಣದ ತರಂಗಾಂತರವು ಗೋಚರ ಬೆಳಕಿನ ತರಂಗಾಂತರಕ್ಕಿಂತ ದೀರ್ಘವಾಗಿದೆ (ಮತ್ತು ಆವರ್ತನವು ಕಡಿಮೆ), ಆದರೆ ಟೆರಾ ಹರ್ಟ್ಜ್ ಸೂಕ್ಷ್ಮ ತರಂಗಗಳ ವಿಕಿರಣಕ್ಕಿಂತಲೂ ಕಡಿಮೆಯಾಗಿರುತ್ತದೆ (ಮತ್ತು ಆವರ್ತನವು ಹೆಚ್ಚು). ಸಮುದ್ರಮಟ್ಟದಲ್ಲಿ ಪ್ರಖರವಾದ ಸೂರ್ಯನ ಬೆಳಕು ಪ್ರತಿ ಒಂದು ಚದರ ಕಿಲೋಮಿಟರ್ ವ್ಯಾಪ್ತಿಯಲ್ಲಿ ೧ ಕಿಲೋ ವ್ಯಾಟ್ ಪೂರೈಸುತ್ತದೆ. ಇದರಲ್ಲಿ ೫೨೭ ವ್ಯಾಟ್ ಇನ್‌ಫ್ರಾರೆಡ್ ವಿಕಿರಣ ಆಗಿರುತ್ತದೆ, ೪೪೫ ವ್ಯಾಟ್ ಗೋಚರ ಬೆಳಕಾಗಿದ್ದು, ಮತ್ತು ೩೨ ವ್ಯಾಟ್ ಅತಿನೆರಳೆ ವಿಕಿರಣವಾಗಿರುತ್ತದೆ.[]

ಅವಗೆಂಪುರಶ್ಮಿಪುಂಜ ಚರ್ಮದ ಮೇಲೆ ಬಿದ್ದಾಗ ಶಾಖದ ಅನುಭವವುನ್ನುಂಟುಮಾಡುತ್ತದೆ. ದೃಷ್ಟಿಗೋಚರ ರಶ್ಮಿಗಳಿಗೆ ಇರುವ ಗುಣಗಳೆಲ್ಲವೂ ಅವಗೆಂಪು ರಶ್ಮಿಗಳಿಗೂ ಇರುತ್ತವೆ; ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಇದರ ಚಲಿಸುವ ವೇಗವೂ ಬೆಳಕಿನ ವೇಗದಷ್ಟೇ. ಅಂದರೆ 3x1010ಸೆಂ.ಮೀ./ಸೆ. ಈ ಕಿರಣಗಳೂ ಕೆಲವು ಪಾರಕ ವಸ್ತುಗಳ ಮೂಲಕ ಹಾಯಬಲ್ಲುವು. ಅಪಾರಕ ವಸ್ತುಗಳು ಇವನ್ನು ಪ್ರತಿಫಲಿಸುತ್ತವೆ. ಆದರೆ ಬೆಳಕಿಗೆ ಪಾರಕವಾದ ವಸ್ತುಗಳು ಅವಗೆಂಪುರಶ್ಮಿಪುಂಜಕ್ಕೆ ಅಪಾರಕವಾಗಿಯೂ ಬೆಳಕಿಗೆ ಅಪಾರಕವಾದ ವಸ್ತುಗಳು ಅವಗೆಂಪುರಶ್ಮಿಪುಂಜಕ್ಕೆ ಪಾರಕವಾಗಿಯೂ ಇರುವುದೂ ಉಂಟು.

ಸ್ಥೂಲ ಅವಲೋಕನ

ಬದಲಾಯಿಸಿ

ಅವಗೆಂಪು ಚಿತ್ರಣವನ್ನು ವ್ಯಾಪಕವಾಗಿ ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳಿಗೆ ಉಪಯೋಗಿಸಲಾಗುತ್ತಿದೆ. ಮಿಲಿಟರಿ ಅನ್ವಯಗಳಲ್ಲಿ ಗುರಿ ಅರ್ಜನೆ, ಸರ್ವೇಕ್ಷಣೆ, ರಾತ್ರಿ ದರ್ಶನ, ಶೋಧನೆ ಮತ್ತು ಜಾಡು ಶೋಧನೆ ಸೇರಿವೆ. ಮಿಲಿಟರಿಯೇತರ ಉಪಯೋಗಗಳಲ್ಲಿ ಉಷ್ಣತೆಯ ದಕ್ಷತೆಯ ವಿಶ್ಲೇಷಣೆ, ದೂರಸ್ಥ ತಾಪಮಾನ ಗ್ರಹಣ, ಅಲ್ಪವ್ಯಾಪ್ತಿಯ ನಿಸ್ತಂತು ಸಂಪರ್ಕ, ರೋಹಿತ ದರ್ಶನ ಮತ್ತು ಹವಾಮಾನ ಮುನ್ಸೂಚನೆ ಸೇರಿವೆ. ಅವಗೆಂಪು ಖಗೋಳವಿಜ್ಞಾನವು ಆಣ್ವಿಕ ಮೋಡಗಳಂತಹ ಬಾಹ್ಯಾಕಾಶದ ಧೂಳುಳ್ಳ ಪ್ರದೇಶಗಳನ್ನು ಭೇದಿಸುವುದಕ್ಕೆ; ಗ್ರಹಗಳಂತಹ ಕಾಯಗಳನ್ನು ಪತ್ತೆ ಹಚ್ಚುವುದಕ್ಕೆ, ವಿಶ್ವದ ಆರಂಭಿಕ ದಿನಗಳಿಂದ ಬಹಳವಾಗಿ ಕೆಂಪುಸರಿತವಾದ ಕಾಯಗಳನ್ನು ನೋಡುವುದಕ್ಕೆ, ಸಂವೇದಕವನ್ನು ಅಳವಡಿಸಲಾಗಿರುವ ದೂರದರ್ಶಕಗಳನ್ನು ಬಳಸುತ್ತದೆ.[]

ವೀನ್‍ನ ಸ್ಥಾನಪಲ್ಲಟ ನಿಯಮದಲ್ಲಿ ಹೇಳಿರುವ ಪ್ರಕಾರ, ಸಾಧಾರಣ ಉಷ್ಣತೆಯಲ್ಲಿ ಮಾನವರು ೧೨ μm (ಮೈಕ್ರೊಮೀಟರ್) ತರಂಗಾಂತರದಲ್ಲಿ ವಿಕಿರಣವನ್ನು ಹೊರಸೂಸುತ್ತಾರೆ.

ಪರಮಾಣು ಮಟ್ಟದಲ್ಲಿ, ಅವಗೆಂಪು ಶಕ್ತಿಯು ದ್ವಿಧ್ರುವ ಭ್ರಮಣಾಂಕದಲ್ಲಿನ ಬದಲಾವಣೆಯ ಮೂಲಕ ಒಂದು ಅಣುವಿನಲ್ಲಿ ಕಂಪನ ಮಾದರಿಗಳನ್ನು ಹೊರಹೊಮ್ಮಿಸುತ್ತದೆ. ಹಾಗಾಗಿ, ಸರಿಯಾದ ಸಮ್ಮಿತಿಯುಳ್ಳ ಅಣುಗಳ ಈ ಶಕ್ತಿ ಸ್ಥಿತಿಗಳನ್ನು ಅಧ್ಯಯನ ಮಾಡುವುದಕ್ಕೆ ಅವಗೆಂಪು ಶ್ರೇಣಿಯು ಉಪಯುಕ್ತವಾದ ಆವರ್ತನ ಶ್ರೇಣಿಯಾಗಿದೆ. ಅವಗೆಂಪು ರೋಹಿತದರ್ಶನವು ಅವಗೆಂಪು ಶಕ್ತಿಯ ವ್ಯಾಪ್ತಿಯಲ್ಲಿ ವರ್ಗಾವಣೆಯಾಗುವ, ಸ್ಥಾನಾಂತರವಾಗುವ ಫೋಟಾನ್‌ಗಳ ಹೀರಿಕೊಳ್ಳುವಿಕೆಯನ್ನು ಅವುಗಳ ತರಂಗಾಂತರ ಮತ್ತು ತೀವ್ರತೆಯ ಆಧಾರದ ಮೇಲೆ ಪರೀಕ್ಷಿಸುತ್ತದೆ.[]

ಪದದ ಮೂಲ

ಬದಲಾಯಿಸಿ

ಈ ಹೆಸರಿನ ಅರ್ಥವು ಕೆಂಪು ಬಣ್ಣದ ಕೆಳಗಿನದ್ದು ಎಂದಾಗಿದೆ. ಲ್ಯಾಟಿನ್‌ ಶಬ್ಧ ಇನ್ಫ್ರಾ ದ ಅರ್ಥವು ’ಕೆಳಗೆ’ ಎಂದಾಗಿದೆ. ಕೆಂಪು ಎಂದರೆ ಕಣ್ಣಿಗೆ ಕಾಣುವ ಬೆಳಕಿನಲ್ಲಿಯ ಅತಿ ಉದ್ದವಾದ ತರಂಗಾಂತರವುಳ್ಳ ಬೆಳಕು ಎಂದಾಗುತ್ತದೆ. ಅವಗೆಂಪು ಮನುಷ್ಯರಿಗೆ ಕಾಣುವ ಕೆಂಪು ಬೆಳಕಿಗಿಂತ ದೀರ್ಘವಾದ ತರಂಗಾಂತರವನ್ನು (ಮತ್ತು ಹಾಗಾಗಿ ಕಡಿಮೆ ಆವರ್ತನವನ್ನು) ಹೊಂದಿದೆ. ಹೀಗಾಗಿ ಯಥಾವತ್ ಅರ್ಥವು ಕೆಂಪು ಬಣ್ಣದ ಬೆಳಕಿನ ಕೆಳಗಿನದ್ದು ಎಂದಾಗುತ್ತದೆ.

ಅವಗೆಂಪು ವಿಕಿರಣದ ಮೂಲಗಳು

ಬದಲಾಯಿಸಿ
  • ಕೃಷ್ಣ ವಸ್ತುವಿನ ರಶ್ಮಿಪುಂಜ ಮತ್ತು ಸೂರ್ಯರಶ್ಮಿಪುಂಜದಲ್ಲಿ ಅವಗೆಂಪು ರಶ್ಮಿಗಳು ಹೇರಳವಾಗಿವೆ. ಬಿಸಿಯಾದ (ಎಂದರೆ 00Κ ಉಷ್ಣತೆಗಿಂತ ಹೆಚ್ಚಾದ ಉಷ್ಣತೆಯನ್ನುಳ್ಳ) ಎಲ್ಲ ವಸ್ತುಗಳೂ ಅವಗೆಂಪುವಿಕಿರಣವನ್ನು ಉತ್ಸರ್ಜಿಸುತ್ತವೆ. ವಸ್ತುವಿನ ಉಷ್ಣತೆಯನ್ನು ಅವಲಂಬಿಸಿ ಹಾಗೂ ಅದರ ಮೇಲ್ಮೈಯ ಗುಣಗಳಿಗೆ ಹೊಂದಿಕೊಂಡು ರಶ್ಮಿಗಳು ಯಾವ ಯಾವ ತರಂಗದೂರದಲ್ಲಿ ಯಾವ ಯಾವ ಪ್ರಮಾಣದಲ್ಲಿ ಇರುತ್ತವೆಯೆಂಬುದು ನಿಶ್ಚಿತವಾಗುತ್ತದೆ. ಸಂಪೂರ್ಣ ಕೃಷ್ಣ ವಸ್ತುವಿನ ಉತ್ಸರ್ಜನೆಯೇ ಈ ವಸ್ತುಗಳ ಉತ್ಸರ್ಜನೆಗೆಲ್ಲ ಮಾದರಿಯಾಗಿರುತ್ತದೆ. ಉಷ್ಣತೆ ಹೆಚ್ಚಾಗಿದ್ದಾಗ ಅತಿನೇರಿಳೆ ರಶ್ಮಿಗಳು ಮತ್ತು ದೃಷ್ಟಿಗೋಚರ ರಶ್ಮಿಗಳು ಅಧಿಕವಾಗಿದ್ದು ಅವಗೆಂಪುರಶ್ಮಿಗಳ ಪ್ರಮಾಣ ಸ್ವಲ್ಪವಾಗಿರುತ್ತದೆ. ಉಷ್ಣತೆ ಕಡಿಮೆಯಾದ ಹಾಗೆಲ್ಲ ಹೆಚ್ಚು ಹೆಚ್ಚು ಪ್ರಮಾಣದ ಶಕ್ತಿ ಅವಗೆಂಪುರಶ್ಮಿಗಳ ರೂಪದಲ್ಲಿ ಉತ್ಸರ್ಜಿತವಾಗುತ್ತದೆ. ಸುಮಾರು 1000Κ ಗಿಂತ ಕಡಿಮೆ ಉಷ್ಣತೆಯ ವಸ್ತುವಿನಲ್ಲಿ ದೃಷ್ಟಿಗೋಚರ ಶಕ್ತಿ ಅತ್ಯಲ್ಪವಾಗಿದ್ದು ಅವಗೆಂಪುರಶ್ಮಿಪುಂಜವೇ ಹೆಚ್ಚಾಗಿ ಹೊರ ಬೀಳುತ್ತದೆ.
  • ಆದ್ದರಿಂದ ಕಾದ ವಸ್ತುಗಳೆಲ್ಲವೂ ಅವಗೆಂಪುರಶ್ಮಿಪುಂಜದ ಮೂಲವಾಗಿ ಪರಿಣಮಿಸುತ್ತವೆ. ಉದಾಹರಣೆಗೆ, ನರ್ನ್‍ಸ್ಟ್ ಫಿಲಮೆಂಟ್ ದೀಪದಲ್ಲಿ ವಿದ್ಯುಚ್ಫಕ್ತಿಯಿಂದ ಕಾಯಿಸಲಾದ ಒಂದು ತಂತಿ ಅವಗೆಂಪುರಶ್ಮಿಪುಂಜದ ಮೂಲವಾಗಿರುತ್ತದೆ. ಮಾನವನ ಶರೀರವೂ ಅವಗೆಂಪುರಶ್ಮಿಪುಂಜಗಳನ್ನು ಹೊರಸೂಸುತ್ತದೆ.
  • ಉಷ್ಣತೆಯಿಂದೊಡಗೂಡಿದ ಘನವಸ್ತುಗಳಲ್ಲದೆ ಹಲವು ಅನಿಲಗಳೂ ತಮ್ಮಲ್ಲಿರುವ ಅಣುಗಳು ಉದ್ರಿಕ್ತಗೊಂಡಾಗ ನಿರ್ದಿಷ್ಟತರಂಗದೂರದ ಅವಗೆಂಪುರಶ್ಮಿಪುಂಜವನ್ನು ಹೊರಸೂಸುತ್ತವೆ.
  • ಲೇಜ಼ರ್ ಉಪಕರಣಗಳು ಏಕವರ್ಣೀಯವಾದ (ಎಂದರೆ ಒಂದೇ ತರಂಗದೂರದ) ಅವಗೆಂಪುರಶ್ಮಿಪುಂಜದ ಪ್ರಬಲಮೂಲಗಳಾಗಿವೆ.

ವಾತಾವರಣದಲ್ಲಿ ಅವಗೆಂಪು ರಶ್ಮಿಪುಂಜದ ಪ್ರಸಾರ

ಬದಲಾಯಿಸಿ

ಬೆಳಕಿನಂತೆಯೇ ಅವಗೆಂಪು ರಶ್ಮಿಗಳೂ ವಾತಾವರಣದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಆದರೆ ವಾತಾವರಣದಲ್ಲಿರುವ ನೀರಿನ ಹಬೆ ಅವಗೆಂಪು ರಶ್ಮಿಯ ಕೆಲವು ಭಾಗಗಳನ್ನು ಹೀರುವುದರಿಂದ ಅವಗೆಂಪು ರಶ್ಮಿಗಳ ಕೆಲವು ತರಂಗದೂರಗಳು ಮಾತ್ರ ವಾತಾವರಣದ ಮೂಲಕ ಪ್ರಸಾರವಾಗುತ್ತವೆ. ಇವನ್ನು ವಿಕಿರಣ ಪಾರಕ ಕಿಟಕಿಗಳೆಂದು ಕರೆಯುತ್ತಾರೆ. ಇತರ ಯಾವ ತರಂಗಾಂತರಗಳೂ ಪ್ರಸಾರವಾಗದೆ ಜೀರ್ಣವಾಗಿ ಹೋಗುತ್ತವೆ. ಉದಾಹರಣೆಗೆ, Sμ-13 μ ಮಧ್ಯೆ ಇಂಥ ಮುಖ್ಯವಾದ ಒಂದು ಕಿಟಕಿ ಇದೆ.

ಪಾರಕತೆ ಮತ್ತು ಅವಗೆಂಪು ವಿಕಿರಣ

ಬದಲಾಯಿಸಿ

ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಅವಗೆಂಪುಕಿರಣಗಳು ಮತ್ತು ಬೆಳಕು ಪ್ರಸಾರವಾಗಲು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ಬೆಳಕಿಗೆ ಪೂರ್ಣಪಾರಕವಾದ ಸಾಧಾರಣವಾದ ಗಾಜು ಅವಗೆಂಪುಕಿರಣಗಳ ಮುಖ್ಯಾಂಶಗಳಿಗೆ ಅಪಾರಕವಾಗಿದೆ; ಬೆಳಕಿಗೆ ಅಪಾರಕವಾದ ಜರ್ಮೇನಿಯಂ ಧಾತು ಪಾರಕವಾಗಿದೆ. ಈ ಗುಣಗಳನ್ನು ಪಾರಗಮ್ಯತೆ (ಟ್ರಾನ್ಸ್‌ಮಿಟೆನ್ಸ್) ಮತ್ತು ಹೀರುವ ಶಕ್ತಿ (ಅಬ್ಸಾರ್ಬೆನ್ಸ್) ಎಂಬ ಮಾನಗಳಿಂದ ಅಳೆಯಬಹುದು.

ಅವಗೆಂಪುವಿಕಿರಣವನ್ನು ಗುರುತಿಸುವಿಕೆ

ಬದಲಾಯಿಸಿ

ಎರಡು ಮುಖ್ಯವಾದ ತತ್ತ್ವಗಳನ್ನು ಉಪಯೋಗಿಸಿಕೊಂಡು ಅವಗೆಂಪುವಿಕಿರಣವನ್ನು ಪತ್ತೆಮಾಡಬಹುದು ಹಾಗೂ ಅಳೆಯಬಹುದು.

  • ಉಷ್ಣತೆಯ ತತ್ತ್ವವನ್ನು ಉಪಯೋಗಿಸಿಕೊಂಡು ಹಲವು ಯಂತ್ರಗಳು ಅವಗೆಂಪುವಿಕಿರಣವನ್ನು ಪತ್ತೆಮಾಡಿ ಅಳೆಯುತ್ತವೆ. ಇವುಗಳಲ್ಲಿ ವಿಕಿರಣದಿಂದ ಉಂಟಾದ ಉಷ್ಣತೆಯನ್ನು ವಿವಿಧ ವಿಧಾನಗಳಿಂದ ಅಳೆಯಲಾಗುತ್ತದೆ.

ರಶ್ಮಿಪುಂಜ ಥರ್ಮೋಪೈಲ್

ಬದಲಾಯಿಸಿ
  • ಎರಡು ವಿವಿಧ ಲೋಹಗಳ ಕಂಬಿಗಳನ್ನು ತುದಿಗಳಲ್ಲಿ ಸೇರಿಸಿ ಆ ಎರಡು ಸಂಗಮಗಳ(ಜಾಯಿಂಟ್ಸ್) ನಡುವಿನ ಉಷ್ಣತೆಯನ್ನು ವ್ಯತ್ಯಾಸ ಮಾಡಿದರೆ ಸಂಗಮಗಳ ನಡುವೆ ವಿದ್ಯುತ್‍ಪ್ರವಾಹ ಉಂಟಾಗುತ್ತದೆ. ಇದನ್ನು ಥರ್ಮೋಕಪಲ್ ಎಂದು ಕರೆಯುತ್ತೇವೆ. ಹಲವು ಥರ್ಮೋಕಪಲ್‍ಗಳನ್ನು ಅವುಗಳ ತಂಪು ಸಂಗಮಗಳು ಹಾಗೂ ತಪ್ತ ಸಂಗಮಗಳು ಸಮನಾದ ಉಷ್ಣತೆಗಳಲ್ಲಿ ಇರುವಂತೆ ಮಾಡಿದರೆ ಆಗ ವಿದ್ಯುತ್ಪ್ರವಾಹ ಇನ್ನೂ ಅಧಿಕವಾಗುತ್ತದೆ. ಈ ಥರ್ಮೋಕಪಲ್‍ಗಳ ಸಮೂಹವನ್ನು ಥರ್ಮೊಪೈಲ್ ಎಂದು ಕರೆಯುತ್ತೇವೆ. ತಪ್ತ ಸಂಗಮಗಳೆಲ್ಲಾ ಒಳಬರುವ ರಶ್ಮಿಪುಂಜಕ್ಕೆ ಎದುರಾಗಿದ್ದರೆ ರಶ್ಮಿಪುಂಜದಿಂದುಂಟಾದ ಉಷ್ಣತೆಯನ್ನು ಅಳೆಯಬಹುದು. ಇದರ ಪ್ರಭಾವ ಹೆಚ್ಚಾಗಬೇಕಾದರೆ ಬಿಸಿಸಂಗಮಗಳಿಗೆ ಕಪ್ಪು ಬಣ್ಣವನ್ನು ಬಳಿಯಬಹುದು. ಕಪ್ಪುಬಣ್ಣ ರಶ್ಮಿಪುಂಜವನ್ನೆಲ್ಲ ಚೆನ್ನಾಗಿ ಹೀರಿ ಉಷ್ಣತೆಯನ್ನು ಹೆಚ್ಚಾಗಿ ಒದಗಿಸುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಈ ಯಂತ್ರ ಸೂಕ್ಷ್ಮವಾದ ರಶ್ಮಿಪುಂಜವನ್ನು ಪತ್ತೆ ಹಚ್ಚುತ್ತದೆ.

ಬೋಲೋಮೀಟರ್

ಬದಲಾಯಿಸಿ
  • ಉಷ್ಣತೆಯಿಂದ ಸೂಕ್ಷ್ಮವಾದ ಪ್ರತಿರೋಧ ತಂತಿಯಲ್ಲಿ ವಿದ್ಯುತ್‍ಪ್ರತಿರೋಧ ಹೆಚ್ಚಾದುದನ್ನು ಅಳೆಯುವುದರಿಂದ ರಶ್ಮಿಪುಂಜದ ಶಕ್ತಿಯನ್ನು ಅಳೆಯಬಹುದು.[][] ಇದು ಬಹು ಸುಟಿಯಾದ ಸಣ್ಣ ಉಪಕರಣ. ಉಷ್ಣತೆಯಿಂದ ವ್ಯತ್ಯಾಸವಾಗುವ ಥರ್ಮಿಸ್ಟರ್ ಎಂಬ ವಿದ್ಯುತ್‍ಪ್ರತಿರೋಧ ಸಲಕರಣೆಗಳನ್ನೂ ಈ ಯಂತ್ರದಲ್ಲಿ ಉಪಯೋಗಿಸಲಾಗಿದೆ.[]

ಕ್ವಾಂಟಂ ಸಾಧನಗಳು

ಬದಲಾಯಿಸಿ

ಅವಗೆಂಪುರಶ್ಮಿಪುಂಜಶಕ್ತಿಯ ಕ್ವಾಂಟಂಗಳು (ಶಕ್ತಿಯ ಅತಿಸಣ್ಣವಾದ ರೂಪ, ಶಕಲ) ಒಂದು ವಿಶೇಷ ಸಾಧನದಿಂದ ವಿದ್ಯುತ್ಪ್ರವಾಹವಾಗಿ ಪರಿಣಮಿಸುತ್ತವೆ. ವಿದ್ಯುತ್ಪ್ರವಾಹದ ಶಕ್ತಿ ರಶ್ಮಿಪುಂಜದ ಶಕ್ತಿಯನ್ನು ಅಳೆಯುತ್ತದೆ. ಈಚೆಗೆ ಇವುಗಳ ಬಳಕೆ ಹೆಚ್ಚಿದೆ.

ಪೋಟೋವೊಲ್ಟಾಯಿಕ್ ಕೋಶಗಳು

ಬದಲಾಯಿಸಿ
  • ಈ ಕೋಶಗಳಲ್ಲಿರುವ ಲೆಡ್ ಸಲ್ಫೈಡ್, ಲೆಡ್ ಸೆಲೆನೈಡ್ ಮೊದಲಾದ ವಸ್ತುಗಳ ಮೇಲೆ ಬೆಳಕು ಅಥವಾ ಅವಗೆಂಪುರಶ್ಮಿಪುಂಜ ಬಿದ್ದರೆ ವಿದ್ಯುತ್ಪ್ರವಾಹ ಉತ್ಪತ್ತಿಯಾಗುತ್ತದೆ.[] ಈ ಕ್ರಮದಿಂದಲೂ ಅವಗೆಂಪುರಶ್ಮಿಪುಂಜವನ್ನು ಗುರುತಿಸಬಹುದು.

ಅರೆವಾಹಕಗಳು

ಬದಲಾಯಿಸಿ
  • ಜರ್ಮೇನಿಯಂ, ಸಿಲಿಕಾನ್ ಮೊದಲಾದ ಅರೆವಾಹಕಗಳನ್ನು (ಸೆಮಿಕಂಡಕ್ಟರ್) ಉಪಯೋಗಿಸಿ ತಯಾರಿಸಿದ ಡಯೋಡ್ ಮತ್ತು ಟ್ರಾನ್ಸಿಸ್ಟರುಗಳಲ್ಲಿನ ವಿದ್ಯುತ್ ಪ್ರತಿರೋಧದ ಮೇಲೆ ಅವಗೆಂಪುರಶ್ಮಿಪುಂಜಗಳು ಪರಿಣಾಮಬೀರುತ್ತವೆ. ಈ ಪರಿಣಾಮದಿಂದಾಗಿ ಅವಗೆಂಪುರಶ್ಮಿಪುಂಜಗಳನ್ನು ಪತ್ತೆ ಮಾಡುವಲ್ಲಿ ಅರೆವಾಹಕಗಳನ್ನು ಉಪಯೋಗಿಸಲಾಗುತ್ತಿದೆ.

ಅತಿಗೆಂಪಿನಲ್ಲಿನ ಭಿನ್ನವಾದ ಪ್ರದೇಶಗಳು

ಬದಲಾಯಿಸಿ

ಸಾಮಾನ್ಯವಾಗಿ, ವಸ್ತುಗಳು ತರಂಗಾಂತರಗಳ ವ್ಯಾಪಕ ಶ್ರೇಣಿಯಲ್ಲಿ ಅವಗೆಂಪು ವಿಕಿರಣವನ್ನು ಹೊರಸೂಸುತ್ತವೆ. ಆದರೆ ರೋಹಿತದ ನಿರ್ದಿಷ್ಟ ಪ್ರದೇಶ ಮಾತ್ರ ಆಸಕ್ತಿಯುಳ್ಳದ್ದಾಗಿದೆ. ಎಕೆಂದರೆ ಸಾಮಾನ್ಯವಾಗಿ ಸಂವೇದಕಗಳನ್ನು ಒಂದು ನಿರ್ದಿಷ್ಟ ತರಂಗಾತರದೊಳಗೆ ವಿಕಿರಣವನ್ನು ಸಂಗ್ರಹಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದರ ಪರಿಣಾಮವಾಗಿ ಅವಗೆಂಪು ಪಟ್ಟಿಯನ್ನು ಕೆಲವೊಂದು ಬಾರಿ ಸಣ್ಣ ವಿಭಾಗಗಳಾಗಿ ವಿಭಜಿಸಲಾಗುತ್ತದೆ.

ಸಿಐಇ ವಿಭಾಗ ಯೋಜನೆ

ಬದಲಾಯಿಸಿ

ಇಂಟರನ್ಯಾಷನಲ್ ಕಮಿಷನ್ ಆನ್ ಇಲ್ಯೂಮಿನೇಷನ್, ಕೆಳಗಿನ ಮೂರು ಬ್ಯಾಂಡ್‍ಗಳಾಗಿ ಬೆಳಕಿನ ವಿಕಿರಣದ ವಿಭಜನೆಗೆ ಶಿಫಾರಸು ಮಾಡುತ್ತದೆ:[೧೦]

  • ಐಆರ್-ಎ ೭೦೦ µm-೧೪೦೦ µm (೦.೭ µm-೧.೪ µm)
  • ಐಆರ್-ಬಿ ೧೪೦೦ µm-೩೦೦೦ µm (೧.೪ µm-೩ µm)
  • ಐಆರ್-ಸಿ ೩೦೦೦ µm-೧ ಎಂಎಂ (೩ µm-೧೦೦೦ µm)

ಸಾಮಾನ್ಯವಾಗಿ ಉಪಯೋಗಿಸಲಾಗುವ ಉಪವಿಭಾಗ ಯೋಜನೆಯೆಂದರೆ:[೧೧]

  • ಸಮೀಪದ ಅವಗೆಂಪು (ಎನ್ಐಆರ್, ಐಆರ್-ಎ ಡಿಐಎನ್): ೦.೭೫-೧.೪ µm ತರಂಗಾಂತರದಲ್ಲಿರುತ್ತದೆ. ನೀರಿನ ಹೀರಿಕೆಯಿಂದ ವ್ಯಾಖ್ಯಾನ ಮಾಡಲಾಗುತ್ತದೆ. SiO2 ಗಾಜಿನ (ಸಿಲಿಕಾ) ಮಾಧ್ಯಮದಲ್ಲಿ ಕಡಿಮೆ ತನೂಕರಣ ನಷ್ಟಗಳ ಕಾರಣದಿಂದ ಸಾಮಾನ್ಯವಾಗಿ ತಂತು ದೃಗ್ವಿಜ್ಞಾನ ದೂರಸಂವಹನದಲ್ಲಿ ಉಪಯೋಗಿಸಲ್ಪಡುತ್ತದೆ. ರೋಹಿತದ ಈ ಪ್ರದೇಶಕ್ಕೆ ಚಿತ್ರ ತೀವ್ರಕಾರಿಗಳು ಸಂವೇದನಾಶೀಲವಾಗಿರುತ್ತವೆ. ಉದಾಹರಣೆಗಳಲ್ಲಿ ರಾತ್ರಿ ದರ್ಶನ ಉಪಕರಣಗಳಾದ ನೈಟ್ ವಿಜನ್ ಗಾಗಲ್‍ಗಳು ಸೇರಿವೆ.
  • ಕಡಿಮೆ ತರಂಗಾಂತರದ ಅವಗೆಂಪು (ಎಸ್‍ಡಬ್ಲ್ಯೂಐಆರ್, ಐಆರ್-ಬಿ ಡಿಐನ್): ೧.೪-೩ µm, ನೀರು ಹೀರಿಕೆಯು ೧,೪೫೦ µmನಲ್ಲಿ ಗಮನಾರ್ಹವಾಗಿ ಏರಿಕೆಯಾಗುತ್ತದೆ. ೧,೫೩೦ ದಿಂದ ೧,೫೬೦ವರೆಗಿನ ವ್ಯಾಪ್ತಿಯು ಅತಿದೂರದ ದೂರಸಂವಹನಕ್ಕೆ ಪ್ರಧಾನ ರೋಹಿತ ಪ್ರದೇಶವಾಗಿದೆ.
  • ಮಧ್ಯಮ ಅವಗೆಂಪು ತರಂಗಾಂತರ (ಎಂಡಬ್ಲ್ಯೂಐಆರ್, ಐಆರ್-ಸಿ ಡಿಐಎನ್), ನಡುವಣ ಅವಗೆಂಪು (ಐಐಆರ್) ಎಂದೂ ಕರೆಯಲ್ಪಡುತ್ತದೆ. ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನದಲ್ಲಿ ಈ ಬ್ಯಾಂಡಿನ ೩.೫ µm ಭಾಗವು ವಾತಾವರಣದ ಕಿಟಕಿಯಂತಿದ್ದು, ಇದರಲ್ಲಿ ನಿಷ್ಕ್ರಿಯ ಐಆರ್ ಉಷ್ಣ ಅರಸುವ ಕ್ಷಿಪಣಿಗಳ ಹೋಮಿಂಗ್ ಹೆಡ್‍ಗಳು ಕೆಲಸ ಮಾಡುವುದಕ್ಕೆ ವಿನ್ಯಾಸಗೊಂಡಿರುತ್ತವೆ. ಇದು ಉದ್ದಿಷ್ಟ ವಿಮಾನದ ಐಆರ್ ಸಿಗ್ನೇಚರ್‌ಗೆ, ವಿಶಿಷ್ಟವಾಗಿ ಜೆಟ್ ಇಂಜಿನ್ ನಿಷ್ಕಾಸ ಗರಿಗೆ ಗುರಿಯಿಡುತ್ತದೆ.
  • ದೀರ್ಘ ಅವಗೆಂಪು ತರಂಗಾಂತರ (ಎಲ್‍ಡಬ್ಲ್ಯೂಐಆರ್, ಐಆರ್-ಸಿ ಡಿಐಎನ್): ೮-೧೫ µm. ಇದು ಉಷ್ಣಚಿತ್ರಣ ಪ್ರದೇಶವಾಗಿದ್ದು, ಇದರಲ್ಲಿ ಸಂವೇದಕಗಳು ಉಷ್ಣ ಹೊರಸೂಸುವಿಕೆಯನ್ನು ಮಾತ್ರ ಆಧರಿಸಿ ಹೊರ ಜಗತ್ತಿನ ಪೂರ್ಣವಾಗಿ ಜಡ ಚಿತ್ರವನ್ನು ಪಡೆಯಬಲ್ಲವು. ಇಲ್ಲಿ ಸೂರ್ಯ ಅಥವ ಚಂದ್ರ ಅಥವಾ ಅವಗೆಂಪು ದೀಪಕಗಳಂತಹ ಯಾವುದೇ ಬಾಹ್ಯ ದೀಪ ಅಥವಾ ಉಷ್ಣಮೂಲದ ಅಗತ್ಯವಿಲ್ಲ. ಈ ರೋಹಿತ ಪ್ರದೇಶವನ್ನು ಫಾರ್ವರ್ಡ್ ಲುಕಿಂಗ್ ಇನ್‍ಫ್ರಾರೆಡ್ ಸಿಸ್ಟಮ್‍ಗಳು ಬಳಸುತ್ತವೆ. ಕೆಲ ಬಾರಿ ಇದನ್ನು "ಫಾರ್ ಇನ್‍ಫ್ರಾರೆಡ್" ಎಂದೂ ಕರೆಯಲಾಗುತ್ತದೆ.
  • ಫಾರ್ ಇನ್‍ಫ್ರಾರೆಡ್ (ಎಫ್ಐಆರ್): ೧೫-೧-೧,೦೦೦ µm

ಎನ್ಐಆರ್ ಮತ್ತು ಎಸ್‍ಡಬ್ಲ್ಯೂಐರ್ ಅನ್ನು ಕೆಲ ಬಾರಿ “ಪ್ರತಿಫಲಿತ ಇನ್‍ಫ್ರಾರೆಡ್” ಎಂದೂ ಕರೆಯಲಾಗುತ್ತದೆ. ಇದೇ ವೇಳೆ ಎಂಡಬ್ಲ್ಯೂಐಆರ್ ಮತ್ತು ಎಲ್‍ಡಬ್ಲ್ಯೂಐಆರ್ ಅನ್ನು ಕೆಲವೊಮ್ಮೆ “ಥರ್ಮಲ್ ಇನ್‍ಫ್ರಾರೆಡ್ ” ಎಂದೂ ಕರೆಯಲಾಗುತ್ತದೆ. ಕೃಷ್ಣಕಾಯ ವಿಕಿರಣ ವಕ್ರರೇಖೆಗಳ ಸ್ವರೂಪದ ಕಾರಣ, ನಿಷ್ಕಾಸ ಪೈಪ್‍ಗಳಂತಹ ಬಿಸಿ ವಸ್ತುಗಳು ಎಲ್‍ಡಬ್ಯ್ಲೂನಲ್ಲಿ ನೋಡಿದಾಗ ಕಾಣುವುದಕ್ಕಿಂತ ಎಂಡಬ್ಲ್ಯೂನಲ್ಲಿ ನೋಡಿದಾಗ ಹಲವುವೇಳೆ ಹೆಚ್ಚು ಪ್ರಖರವಾಗಿ ಗೋಚರಿಸುತ್ತವೆ.

ಖಗೋಳವಿಜ್ಞಾನ ವಿಭಾಗ ಯೋಜನೆ

ಬದಲಾಯಿಸಿ

ಅವಗೆಂಪು ರೋಹಿತವನ್ನು ಖಗೋಳಶಾಸ್ತ್ರಜ್ಞರು ಕೆಳಗಿನ ಮಾದರಿಯಲ್ಲಿ ವಿಭಾಗಿಸಿದ್ದಾರೆ.[೧೨]

  • ಸಮೀಪ (೦.೭-೧) ದಿಂದ ೫ µm
  • ಮಧ್ಯಮ: ೫ ರಿಂದ (೨೫-೪೦) µm
  • ದೀರ್ಘ: (೨೫-೪೦) ದಿಂದ (೨೦೦-೩೫೦) µm.

ಈ ವಿಭಜನೆಯು ಕರಾರುವಾಕ್ಕಾಗಿಲ್ಲ ಮತ್ತು ಪ್ರಕಟಣೆಯನ್ನು ಆವಲಂಬಿಸಿ ಇವುಗಳು ಭಿನ್ನವಾಗಬಹುದು. ಈ ಮೂರು ಪ್ರದೇಶಗಳನ್ನು ಭಿನ್ನ ಉಷ್ಣಾಂಶ ವ್ಯಾಪ್ತಿಗಳ, ಮತ್ತು ಹಾಗಾಗಿ ಬಾಹ್ಯಾಕಾಶದಲ್ಲಿನ ಭಿನ್ನ ಪರಿಸರಗಳ ವೀಕ್ಷಣೆಗೆ ಬಳಸಲಾಗುತ್ತದೆ.

ಸಂವೇದಕ ಪ್ರತಿಕ್ರಿಯೆ ಆಧಾರಿತ ವಿಭಾಗ ಯೋಜನೆ

ಬದಲಾಯಿಸಿ
 
ಅವಗೆಂಪು ಪ್ರದೇಶದ ಭಾಗದಲ್ಲಿ ವಾತಾವರಣ ಪ್ರೇಷಣದ ನಕ್ಷೆ.

ವಿವಿಧ ಶೋಧಕಗಳ ಪ್ರತಿಕ್ರಿಯೆಗಳ ಆಧಾರದ ಮೇಲೆ ಮೂರನೇ ಯೋಜನೆಯು ಬ್ಯಾಂಡ್‍ಗಳನ್ನು ವಿಭಜಿಸುತ್ತದೆ:[೧೩]

  • ಸಮೀಪದ ಅವಗೆಂಪು: ೦.೭ ದಿಂದ ೧ ಮೈಕ್ರೊಮೀಟರ್ ವರೆಗೆ (ಮನುಷ್ಯನ ಕಣ್ಣಿನ ಪ್ರತಿಕ್ರಿಯೆಯ ಅಂದಾಜು ಕೊನೆಯಿಂದ ಸಿಲಿಕಾನ್‍ನ ಕೊನೆವರೆಗೆ)
  • ಕಡಿಮೆ-ತರಂಗದ ಅವಗೆಂಪು:೧.೦ ದಿಂದ ೩ ಮೈಕ್ರೋಮೀಟರ್‌ವರೆಗೆ (ಸಿಲಿಕಾನ್‌ನ ಸ್ಥಗನ ಬಿಂದುವಿನಿಂದ ಎಮ್‌ಡಬ್ಲುಐಆರ್ ವಾಯುಮಂಡಲ ಕಿಟಕಿಯ ಸ್ಥಗನ ಬಿಂದುವರೆಗೆ. ಇನ್‌ಗ್ಯಾಸ್ ಸುಮಾರು ೧.೮ ಮೈಕ್ರೋಮೀಟರ್‌ವರೆಗೆ ಆವರಿಸುತ್ತದೆ; ಕಡಿಮೆ ಸೂಕ್ಷ್ಮಸಂವೇದನೆಯ ಸೀಸದ ಲವಣಗಳು ಈ ವಲಯವನ್ನು ಆವರಿಸುತ್ತವೆ.
  • ಮಧ್ಯ-ತರಂಗ ಅವಗೆಂಪು: ೩ ರಿಂದ ೫ ಮೈಕ್ರೋಮೀಟರ್‌ಗಳವರೆಗೆ (ವಾಯುಮಂಡಲದ ಕಿಟಕಿಯಿಂದ ವ್ಯಾಖ್ಯಿಸಲ್ಪಡುತ್ತದೆ ಮತ್ತು ಇಂಡಿಯಮ್ ಆಂಟಿಮೊನೈಡ್ [InSb] ಮತ್ತು HgCdTe ಹಾಗೂ ಭಾಗಶಃ ಸೀಸದ ಸೆಲನೈಡ್‌ಗಳಿಂದ [PbSe] ಆವರಿಸಲ್ಪಟ್ಟಿರುತ್ತದೆ).
  • ದೀರ್ಘ-ತರಂಗ ಅವಗೆಂಪು: ೮ ರಿಂದ ೧೨ ಮೈಕ್ರೋಮೀಟರ್‌ವರೆಗೆ, ಅಥವಾ ೭ ರಿಂದ ೧೪ ಮೈಕ್ರೋಮೀಟರ್‌ವರೆಗೆ: ವಾಯುಮಂಡಲದ ಕಿಟಕಿ (HgCdTe ಮತ್ತು ಮೈಕ್ರೋಬೋಲೋಮೀಟರ್‌ಗಳಿಂದ ಆವರಿಸಿಲ್ಪಡುತ್ತದೆ)
  • ಅತಿ-ದೀರ್ಘ ತರಂಗ ಅವಗೆಂಪು (ವಿಎಲ್‌ಡಬ್ಲುಐಆರ್): ೧೨ ರಿಂದ ಸುಮಾರು ೩೦ ಮೈಕ್ರೋಮೀಟರ್‌ವರೆಗೆ, ಉತ್ತೇಜಿತ ಸಿಲಿಕಾನ್‌ನಿಂದ ಆವರಿಸಲ್ಪಟ್ಟಿರುತ್ತದೆ.

ಈ ವಿಭಾಗಗಳು ಈ ವಿಕಿರಣಗಳಿಗೆ ಮಾನವನ ವಿಭಿನ್ನ ಪ್ರತಿಕ್ರಿಯೆಯಿಂದ ಸಮರ್ಥಿಸಲ್ಪಡುತ್ತವೆ: ಸಮೀಪದ ಅವಗೆಂಪು ತರಂಗಾಂತರದಲ್ಲಿ ಮನುಷ್ಯನ ಕಣ್ಣಿನಿಂದ ವಿಕಿರಣವನ್ನು ಪತ್ತೆಹಚ್ಚುವುದಕ್ಕೆ ಹತ್ತಿರದಲ್ಲಿರುವ ಪ್ರದೇಶವಾಗಿರುತ್ತದೆ, ಮಧ್ಯ ಮತ್ತು ದೂರದ ಅವಗೆಂಪುಗಳು ಗೋಚರ ವರ್ಣಪಟಲದಿಂದ ಮುಂದಿರುವಂತೆ ಕಂಡುಬರುತ್ತವೆ. ಇತರ ವ್ಯಾಖ್ಯಾನಗಳು ವಿಭಿನ್ನ ಭೌತಿಕ ಕಾರ್ಯರೀತಿಗಳನ್ನು ಅನುಸರಿಸುತ್ತವೆ (ಉತ್ಸರ್ಜನ ಶೃಂಗಗಳು, ವಿರುದ್ಧ ಪಟ್ಟಿಗಳು, ನೀರಿನ ಹೀರಿಕೆ) ಮತ್ತು ಅತಿ ಹೊಸದಾದವುಗಳು ತಾಂತ್ರಿಕ ಕಾರಣಗಳನ್ನು ಅನುಸರಿಸುತ್ತವೆ (ಸಾಮಾನ್ಯ ಸಿಲಿಕಾನ್ ಶೋಧಕಗಳು ಸುಮಾರು ೧,೦೫೦ ಎನ್‌ಎಮ್‌ಗಳಿಗೆ ಸೂಕ್ಷ್ಮಗ್ರಾಹಿಗಳಾಗಿರುತ್ತವೆ, ಹಾಗೆಯೇ ಇನ್‌ಗ್ಯಾಸ್‌ಗಳ ಸೂಕ್ಷ್ಮಗ್ರಾಹಕತೆಯು ಸುಮಾರು ೯೫೦ ಎನ್‌ಎಮ್‌ಗಳಿಂದ ಪ್ರಾರಂಭವಾಗುತ್ತದೆ ಮತ್ತು ೧,೭೦೦ ಮತ್ತು ೨,೬೦೦ ಎನ್‌ಎಮ್‌ಗಳ ಮಧ್ಯದಲ್ಲಿ, ನಿರ್ದಿಷ್ಟ ರೂಪುರೇಖೆಗಳಿಗೆ ಅನುಗುಣವಾಗಿ ಕೊನೆಯಾಗುತ್ತದೆ). ದುರದೃಷ್ಟವಶಾತ್, ಈ ನಿರ್ದಿಷ್ಟ ವಿವರಣೆಗಳಿಗೆ ಅಂತಾರಾಷ್ಟ್ರೀಯ ಮಾನದಂಡಗಳು ಪ್ರಸ್ತುತದಲ್ಲಿ ಲಭ್ಯವಿಲ್ಲ.

ಗೋಚರ ಮತ್ತು ಅವಗೆಂಪು ಬೆಳಕುಗಳ ನಡುವಣ ಸೀಮಾರೇಖೆಯು ನಿಖರವಾಗಿ ವ್ಯಾಖ್ಯಾನಿಸಲ್ಪಟ್ಟಿಲ್ಲ. ಮಾನವನ ಕಣ್ಣು ಸ್ಪಷ್ಟವಾಗಿ ೭೦೦ ಎನ್‌ಎಮ್ ತರಂಗಾಂತರವನ್ನು ಹೊಂದಿರುವ ಬೆಳಕಿಗೆ ಕಡಿಮೆ ಸೂಕ್ಷ್ಮಗ್ರಾಹಿಯಾಗಿರುತ್ತದೆ. ಆದ್ದರಿಂದ ಕಡಿಮೆ ಆವರ್ತನಗಳು ಸಾಮಾನ್ಯ ಬೆಳಕಿನ ಮೂಲಗಳಿಂದ ಪ್ರಕಾಶಿಸಲ್ಪಟ್ಟ ದೃಶ್ಯಗಳಿಗೆ ಅತ್ಯಲ್ಪ ಕೊಡುಗೆಯನ್ನು ನೀಡುತ್ತವೆ. ಆದರೆ ವಿಶೇಷವಾಗಿ ತೀವ್ರವಾಗಿರುವ ಬೆಳಕು (ಉದಾಹರಣೆಗೆ, ಲೇಸರ್‌ಗಳಿಂದ, ಅಥವಾ ಪ್ರಕಾಶಮಾನ ದಿನದ ಬೆಳಕಿನಿಂದ. ಬಣ್ಣಗಳ ಅರೆ ಘನರೂಪದ ದ್ರಾವಣ (ಜೆಲ್)ಗಳು ಗೋಚರ ಬೆಳಕನ್ನು ತೆಗೆಯುತ್ತವೆ) ಗಳನ್ನು ಸರಿಸುಮಾರಾಗಿ ೭೮೦ ಎನ್‌ಎಮ್‌ಗಳವರೆಗೆ ಪತ್ತೆಹಚ್ಚಬಹುದು (ಇವುಗಳು ಕೆಂಪು ಬೆಳಕುಗಳಾಗಿ ಗ್ರಹಿಸಲ್ಪಡುತ್ತವೆ). ೮೦೦ ಎನ್‌ಎಮ್‌ನ ವರೆಗಿನ ಮೂಲಗಳು ತೀಕ್ಷ್ಣ ಮೂಲಗಳಲ್ಲಿ ಮಂದ ಕೆಂಪು ಬೆಳಕಾಗಿ ಗೋಚರಿಸುತ್ತವೆ. ಅತಿಗೆಂಪಿನ ಪ್ರಾರಂಭವನ್ನು (ವಿವಿಧ ಮಾನದಂಡಗಳಿಗೆ ಅನುಗುಣವಾಗಿ) ಸಾಮಾನ್ಯವಾಗಿ ೭೦೦ ಎನ್‌ಎಮ್ ಮತ್ತು ೮೦೦ ಎನ್‌ಎಮ್ ಗಳ ನಡುವಿನ ವಿಭಿನ್ನ ಮೌಲ್ಯಗಳಲ್ಲಿ ವ್ಯಾಖ್ಯಾನಿಸಲಾಗುತ್ತದೆ.

ಅತಿಗೆಂಪಿನಲ್ಲಿ ದೂರಸಂಪರ್ಕ ಬ್ಯಾಂಡ್‍ಗಳು

ಬದಲಾಯಿಸಿ

ದೃಗ್ವಿಜ್ಞಾನ ಸಂವಹನಗಳಲ್ಲಿ ಬಳಸಲ್ಪಡುವ ಅವಗೆಂಪು ವರ್ಣಪಟಲದ ಭಾಗವನ್ನು ಬೆಳಕಿನ ಮೂಲಗಳ ಪ್ರಸಾರಣ/ಹೀರಿಕೊಳ್ಳುವ ಮೂಲವಸ್ತುಗಳ (ತಂತು) ಮತ್ತು ಶೋಧಕಗಳ ಲಭ್ಯತೆಯನ್ನು ಆಧರಿಸಿ ಏಳು ಗುಂಪುಗಳಾಗಿ ವಿಭಾಗಿಸಲಾಗುತ್ತದೆ:[೧೪]

ಬ್ಯಾಂಡ್ ವಿವರಕ ತರಂಗಾಂತರದ ವ್ಯಾಪ್ತಿ
ಒ ಬ್ಯಾಂಡ್ ಮೂಲ ೧೨೬೦-೧೩೬೦ nm
ಇ ಬ್ಯಾಂಡ್ ವಿಸ್ತರಿಸಲ್ಪಟ್ಟ ೧೩೬೦-೧೪೬೦ nm
ಎಸ್ ಬ್ಯಾಂಡ್ ಕಡಿಮೆ ತರಂಗಾಂತರ ೧೪೬೦-೧೫೩೦ nm
ಸಿ ಬ್ಯಾಂಡ್ ಸಾಂಪ್ರದಾಯಿಕ ೧೫೩೦-೧೫೬೫ nm
ಎಲ್ ಬ್ಯಾಂಡ್ ದೀರ್ಘ ತರಂಗಾಂತರ ೧೫೬೨-೧೬೨೫ nm
ಯು ಬ್ಯಾಂಡ್ ತುಂಬಾ ದೀರ್ಘ ತರಂಗಾಂತರ ೧೬೨೫-೧೬೭೫ nm

ಸಿ-ಗುಂಪು ದೀರ್ಘ-ದೂರದ ದೂರಸಂಪರ್ಕ ವ್ಯವಸ್ಥೆಗೆ ಪ್ರಧಾನವಾದ ಗುಂಪಾಗಿದೆ. ಎಸ್ ಮತ್ತು ಎಲ್ ಗುಂಪುಗಳು ಕಡಿಮೆ ಸುಸ್ಥಾಪಿತ ತಂತ್ರಜ್ಞಾನದ ಮೇಲೆ ಆಧಾರಿತವಾಗಿವೆ, ಮತ್ತು ಇವು ಅಷ್ಟು ವ್ಯಾಪಕವಾಗಿ ನಿಯೋಜಿಸಲ್ಪಡುವುದಿಲ್ಲ.

ಅವಗೆಂಪು ವಿಕಿರಣವು ಜನಪ್ರಿಯವಾಗಿ "ಶಾಖ" ಎಂದು ಪರಿಚಿತವಾಗಿದೆ, ಅಥವಾ ಕೆಲವು ವೇಳೆ "ಶಾಖದ ವಿಕಿರಣ" ಎಂದು ಕರೆಯಲ್ಪಡುತ್ತದೆ. ಹಲವಾರು ಜನರು ಎಲ್ಲಾ ವಿಕಿರಣಾತ್ಮಕ ಶಾಖವನ್ನು ಅವಗೆಂಪು ಬೆಳಕಿನ ಸಹಜಗುಣಕ್ಕೆ ಮತ್ತು/ಅಥವಾ ಎಲ್ಲ ಅವಗೆಂಪು ವಿಕಿರಣವನ್ನು ಶಾಖಕ್ಕೆ ಹೋಲಿಸುತ್ತಾರೆ. ಇದು ವ್ಯಾಪಕವಾಗಿ ಹರಡಿರುವ ತಪ್ಪುಕಲ್ಪನೆ. ಬೆಳಕು ಮತ್ತು ಯಾವುದೇ ಆವರ್ತನದ ವಿದ್ಯುದ್ಕಾಂತೀಯ ತರಂಗಗಳು ಶಾಖವನ್ನು ಹೀರಿಕೊಳ್ಳುವ ಶಾಖದ ಮೇಲ್ಮೈಯನ್ನು ಹೊಂದಿರುತ್ತವೆ. ಭೂಮಿಯ ಶಾಖದ ೪೯%[೧೫] ನಷ್ಟು ಸೂರ್ಯನೊಬ್ಬನಿಂದಲೇ ಬರುವ ಅವಗೆಂಪು ಬೆಳಕಿನಿಂದ ಉಂಟಾಗುತ್ತದೆ, ಉಳಿದವುಗಳು ಹೀರಿಕೊಳ್ಳಲ್ಪಟ್ಟು, ನಂತರ ಹೆಚ್ಚು ದೀರ್ಘ ತರಂಗಾಂತರಗಳಲ್ಲಿ ಮರು ಹೊರಸೂಸಲ್ಪಟ್ಟ ಗೋಚರ ಬೆಳಕಿನಿಂದ ಉಂಟಾಗುತ್ತವೆ. ಗೋಚರ ಬೆಳಕು ಅಥವಾ ನೇರಳಾತೀತ ವಿಸರ್ಜಕ ಲೇಸರ್‌ಗಳು ಕಾಗದವನ್ನು ಸೀದುಹೋಗುವಂತೆ ಮಾಡುತ್ತವೆ ಮತ್ತು ಪ್ರಕಾಶಮಾನವಾಗಿರುವ ಬಿಸಿ ವಸ್ತುಗಳು ಗೋಚರ ಬೆಳಕನ್ನು ಹೊರಸೂಸುತ್ತವೆ. ಹೆಚ್ಚಾಗಿ ೮ ರಿಂದ ೨೫ ಮೈಕ್ರೋಮೀಟರ್ ಬ್ಯಾಂಡ್‍ನಲ್ಲಿ ಕೇಂದ್ರೀಕೃತವಾಗಿರುವ ಕೋಣೆಯ ಉಷ್ಣಾಂಶದಲ್ಲಿರುವ ವಸ್ತುಗಳು ವಿಕಿರಣವನ್ನು ಹೊರಸೂಸುತ್ತವೆ ಎಂಬುದು ಸತ್ಯ. ಆದರೆ ಇದು ಪ್ರಕಾಶಮಾನ ವಸ್ತುಗಳು ಹೊರಸೂಸುವ ಗೋಚರ ಬೆಳಕು ಮತ್ತು ಅದಕ್ಕಿಂತಲೂ ಬಿಸಿಯಾಗಿರುವ ನೇರಳಾತೀತ ವಸ್ತುಗಳ ಬೆಳಕುಗಳಿಗಿಂತ ಭಿನ್ನವಾಗಿಲ್ಲ.[೧೬]

ಶಾಖವು ಉಷ್ಣಾಂಶದ ವ್ಯತ್ಯಾಸದಿಂದಾಗಿ ಪ್ರವಹಿಸುವ ಅಸ್ಥಿರ ವಿಧದ ಶಕ್ತಿ. ಉಷ್ಣವಹನ ಅಥವಾ ಉಷ್ಣಸಂವಹನಗಳಿಂದ ಪ್ರಸಾರವಾಗುವ ಶಾಖಗಳಂತಲ್ಲದೇ, ವಿಕಿರಣವು ನಿರ್ವಾತದ ಮೂಲಕ ಪ್ರಸರಿಸಬಲ್ಲದು.

ಉತ್ಸರ್ಜಕತೆಯ ಪರಿಕಲ್ಪನೆಯು ವಸ್ತುಗಳ ಅವಗೆಂಪು ಹೊರಸೂಸುವಿಕೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಖ್ಯವಾಗಿದೆ. ಇದು ಮೇಲ್ಮೈಯ ಗುಣವಾಗಿದ್ದು ಅದರ ಶಾಖದ ಹೊರಸೂಸುವಿಕೆಯು ಹೇಗೆ ಆದರ್ಶಯುತ ಕೃಷ್ಣಕಾಯಗಳಿಂದ ವಿಪಥಗೊಳ್ಳುತ್ತದೆ ಎಂಬುದನ್ನು ವರ್ಣಿಸುತ್ತದೆ. ಇನ್ನೂ ಹೆಚ್ಚು ವಿವರಿಸಬೇಕೆಂದರೆ, ಎರಡು ಭೌತಿಕ ವಸ್ತುಗಳು ವಿಭಿನ್ನ ಉತ್ಸರ್ಜಕತೆಗಳನ್ನು ಹೊಂದಿದ್ದರೆ, ಒಂದೇ ಭೌತಿಕ ಉಷ್ಣಾಂಶದಲ್ಲಿ ಹೇಗೆ ’ಕಾಣಿಸು’ತ್ತವೆಯೋ ಅದೇ ರೀತಿಯಾಗಿ ಅತಿಗೆಂಪಿನ ಚಿತ್ರದಲ್ಲಿ ಒಂದೇ ರೀತಿಯ ಉಷ್ಣಾಂಶವಿರುವಂತೆ ಕಂಡುಬರುವುದಿಲ್ಲ

ಉಪಯೋಗಗಳು

ಬದಲಾಯಿಸಿ

ಬಿಸಿಲಿನ ಉಪಯೋಗಗಳು

ಬದಲಾಯಿಸಿ

ಸೂರ್ಯನ ಬಿಸಿಲನ್ನು ಲೆಕ್ಕವಿಲ್ಲದಷ್ಟು ವಿಧಗಳಲ್ಲಿ ಉಪಯೋಗಿಸಲಾಗುತ್ತದೆ. ಬಿಸಿಲಿನ ಶಾಖದಿಂದ ಬಟ್ಟೆಗಳನ್ನು ಒಗೆದ ಅನಂತರ ಅವುಗಳನ್ನು ಒಣಗಿಸಲು, ತರಕಾರಿಗಳನ್ನು ಒಣಗಿಸಿ ಬಾಳಕಮಾಡಲು, ಹಪ್ಪಳ, ಸಂಡಿಗೆಗಳನ್ನು ತಯಾರಿಸಲು ಅಥವಾ ಸೌರ ಒಲೆ ಮೊದಲಾದ ಉಪಕರಣಗಳಲ್ಲಿ ನೀರನ್ನು ಕಾಯಿಸಲು ಶಾಖ ನೀಡುವ ಅವಗೆಂಪು ವಿಕಿರಣಗಳ ಬಳಕೆಯಾಗುತ್ತದೆ.

ಅವಗೆಂಪು ಸೋಸುಕಗಳು

ಬದಲಾಯಿಸಿ

ಅವಗೆಂಪು (ಪ್ರಸಾರಕ/ದಾಟುವುದು) ಸೋಸುಕಗಳನ್ನು ಹಲವಾರು ವಿಭಿನ್ನ ಮೂಲವಸ್ತುಗಳಿಂದ ತಯಾರಿಸಬಹುದು. ಒಂದು ವಿಧವನ್ನು ಪಾಲಿಸಲ್ಫೋನ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿರುತ್ತದೆ. ಅದು ತಾಪಜ್ವಲನ ಫಿಲಮೆಂಟ್ ಬಲ್ಬುಗಳಂತಹ "ಬಿಳಿ" ಬೆಳಕಿನ ಮೂಲಗಳಿಂದ ಬರುವ ೯೯% ನಷ್ಟು ಗೋಚರ ಬೆಳಕಿನ ವರ್ಣಪಟಲವನ್ನು ತಡೆಯುತ್ತದೆ. ಅವಗೆಂಪು ಸೋಸುಕಗಳು ಅತಿ ಹೆಚ್ಚಿನ ಅವಗೆಂಪು ಉತ್ಪಾದನೆಯನ್ನು ಅನುಮತಿಸುತ್ತವೆ ಹಾಗೆಯೇ ವಿಪರೀತ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತವೆ. ಪ್ರಸ್ತುತ ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ ಅವಗೆಂಪು ಶೋಧಕಗಳನ್ನು ಮಿಲಿಟರಿಯಲ್ಲಿ, ಕಾನೂನು ಪ್ರವರ್ತನೆ, ಔದ್ಯಮಿಕ ಮತ್ತು ವಾಣಿಜ್ಯ ಅನ್ವಯಗಳಲ್ಲಿ ಬಳಸಲಾಗುತ್ತದೆ. ಪ್ಲಾಸ್ಟಿಕ್‌ನ ಅನನ್ಯ ವಿನ್ಯಾಸವು ಗರಿಷ್ಠ ಬಾಳಿಕೆ ಮತ್ತು ಶಾಖ ಪ್ರತಿರೋಧವನ್ನು ಒದಗಿಸುತ್ತದೆ. ಪ್ರಮಾಣಿತ ಬಲ್ಬ್ ಪರ್ಯಾಯಕ್ಕೆ ಹೋಲಿಸಿದರೆ ಅವಗೆಂಪು ಶೋಧಕಗಳು ಹೆಚ್ಚು ಬೆಲೆ ಪರಿಣಾಮಕಾರಿ ಮತ್ತು ಕಾಲ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತವೆ. ರಾತ್ರಿ ದರ್ಶನ ಸಾಧನಗಳ ಎಲ್ಲಾ ಪೀಳಿಗೆಗಳು ಅವಗೆಂಪು ಸೋಸುಕಗಳ ಬಳಕೆಯಿಂದಾಗಿ ಬಹಳವಾಗಿ ವರ್ಧಿಸಲ್ಪಟ್ಟಿವೆ.

ರಾತ್ರಿ ದರ್ಶನ

ಬದಲಾಯಿಸಿ
 
ಸಕ್ರಿಯ-ಅವಗೆಂಪು ರಾತ್ರಿ ದರ್ಶನ: ಕ್ಯಾಮರಾಮಾನವನ ಬರಿಗಣ್ಣಿಗೆ ಕಾಣದಂತಹ ಅವಗೆಂಪು ತರಂಗಾಂತರಗಳಲ್ಲಿ ದೃಶ್ಯವನ್ನು ಬೆಳಗಿಸುತ್ತದೆ. ಕಪ್ಪು, ಹಿಂದಿನಿಂದ ಬೆಳಗಿಸಿದ ದೃಶ್ಯದ ಹೊರತಾಗಿಯೂ, ಪ್ರದರ್ಶನ ಮಾನಿಟರ್‌ನಲ್ಲಿ ಕಾಣಿಸುತ್ತಿರುವಂತೆ, ಸಕ್ರಿಯ ಅವಗೆಂಪು ರಾತ್ರಿ ದರ್ಶನವು ಗುರುತಿಸಬಹುದಾದ ವಿವರಗಳನ್ನು ಮುಟ್ಟಿಸುತ್ತದೆ.

ನೋಡಲು ಗೋಚರ ಬೆಳಕಿನ ಅಭಾವವಿದ್ದಾಗ ಅವಗೆಂಪು ರಾತ್ರಿ ದರ್ಶನ ಸಾಧನಗಳನ್ನು ಬಳಸಲಾಗುತ್ತದೆ.[೧೭] ರಾತ್ರಿ ದರ್ಶನ ಸಾಧನಗಳು ಸುತ್ತಲಿರುವ ಬೆಳಕಿನ ಫೋಟಾನ್‌ಗಳನ್ನು ಎಲೆಕ್ಟ್ರಾನ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಮೂಲಕ ಕಾರ್ಯನಿರ್ವಹಿಸುತ್ತವೆ. ಆ ಎಲೆಕ್ಟ್ರಾನ್‌ಗಳು ನಂತರ ರಾಸಾಯನಿಕ ಮತ್ತು ವಿದ್ಯುತ್ ಪ್ರಕ್ರಿಯೆಗಳ ಮೂಲಕ ವರ್ಧಿಸಲ್ಪಡುತ್ತವೆ ಮತ್ತು ನಂತರ ಪುನಃ ಗೋಚರ ಬೆಳಕಾಗಿ ಪರಿವರ್ತಿಸಲ್ಪಡುತ್ತವೆ.[೧೭] ರಾತ್ರಿ ದರ್ಶನ ಸಾಧನಗಳಿಂದ ಪರಿವರ್ತನೆಗೆ, ಲಭ್ಯವಿರುವ ಸುತ್ತಲಿನ ಬೆಳಕನ್ನು ಹೆಚ್ಚಿಸಲು ಅವಗೆಂಪು ಬೆಳಕಿನ ಮೂಲಗಳನ್ನು ಬಳಸಬಹುದು. ಹೀಗೆ ವಾಸ್ತವವಾಗಿ ಯಾವುದೇ ಗೋಚರ ಬೆಳಕಿನ ಮೂಲವನ್ನು ಬಳಸದೆಯೇ ಕತ್ತಲಲ್ಲಿ ಗೋಚರತೆಯನ್ನು ಹೆಚ್ಚಿಸುತ್ತವೆ.[೧೭]

ಅವಗೆಂಪು ಬೆಳಕು ಮತ್ತು ರಾತ್ರಿ ದರ್ಶನ ಸಾಧನಗಳ ಉಪಯೋಗವನ್ನು ಉಷ್ಣಚಿತ್ರಣದೊಂದಿಗೆ ತಪ್ಪುತಿಳಿಯಬಾರದು. ವಸ್ತುಗಳು ಮತ್ತು ಅವುಗಳ ಸುತ್ತಲಿನ ಪರಿಸರದಿಂದ ಹೊರಬರುವ ಅವಗೆಂಪು ವಿಕಿರಣವನ್ನು ಪತ್ತೆಹಚ್ಚುವ ಮೂಲಕ ಉಷ್ಣಚಿತ್ರಣವು ಮೇಲ್ಮೈ ಉಷ್ಣಾಂಶದಲ್ಲಿನ ವ್ಯತ್ಯಾಸಗಳ ಆಧಾರದ ಮೇಲೆ ಚಿತ್ರಗಳನ್ನು ಸೃಷ್ಟಿಸುತ್ತದೆ.[೧೮]

ಕಳೆದ ಮಹಾಯುದ್ಧದಲ್ಲಿ ಕತ್ತಲಲ್ಲಿ ಶತ್ರುಗಳಿಗೆ ಗೊತ್ತಾಗದಂತೆಯೇ ಅವರನ್ನೂ ಅವರ ವಾಹನ ಶಸ್ತ್ರಾದಿಗಳನ್ನೂ ಕಂಡು ಹಿಡಿಯುವ ಮತ್ತು ಕತ್ತಲಲ್ಲಿ ಬೆಳಕಿನ ಉಪಯೋಗವಿಲ್ಲದೆಯೇ ವಾಹನಗಳನ್ನು ಓಡಿಸಲು ಸಹಾಯಮಾಡುವ ಯಂತ್ರಗಳನ್ನು ತಯಾರಿಸಲು ಈ ಪುಂಜವನ್ನು ಉಪಯೋಗಿಸಲಾಯಿತು. ಇವುಗಳಲ್ಲಿ ಸ್ನೂಪರ್‌ಸ್ಕೋಪ್ ಮತ್ತು ಸ್ನೈಪರ್‌ಸ್ಕೋಪ್ ಪ್ರಸಿದ್ಧವಾಗಿವೆ. ಈ ಯಂತ್ರಸಾಧನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಸಾಕ್ಷಿಯಂತ್ರಗಳು

ಬದಲಾಯಿಸಿ
  • ಈ ಯಂತ್ರಗಳು ಶತ್ರುಗಳೂ ಅವರ ವಾಹನಾದಿಗಳೂ ಹೊರಸೂಸುವ ಅವಗೆಂಪುಕಿರಣಗಳನ್ನು ಉಪಯೋಗಿಸಿಕೊಂಡು ಇವನ್ನು ವಿಶೇಷಸಾಧನಗಳಿಂದ ದೃಗ್ಗೋಚರ ಬೆಳಕಿಗೆ ಪರಿವರ್ತಿಸಿ ನೋಡುವುದಕ್ಕೆ ಅವಕಾಶವನ್ನುಂಟುಮಾಡುತ್ತವೆ. ಈ ಸಾಧನೆಯಲ್ಲಿನ ಮುಖ್ಯಭಾಗವೆಂದರೆ ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ.

ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ: ಇದು ಒಂದು ವಿಧವಾದ ಶೂನ್ಯ ನಳಿಕೆ. ಮೃದಂಗದ ಆಕಾರವನ್ನು ಹೊಂದಿದ ಈ ಸಣ್ಣ ಸಾಧನದ ಒಂದು ಪಾರ್ಶ್ವದ ಮೇಲೆ ಬಿದ್ದ ಅವಗೆಂಪುರಶ್ಮಿಗಳಿಂದ ಉಂಟಾದ ಚಿತ್ರ ಅದರ ಎದುರು ಪಾರ್ಶ್ವದ ಮೇಲೆ ದೃಗ್ಗೋಚರ ಬೆಳಕಿನ ಚಿತ್ರವಾಗಿ ಮಾರ್ಪಡುತ್ತದೆ. ಮೊದಲ ಪಾರ್ಶ್ವದ ಒಳಭಾಗದಲ್ಲಿನ ಅವಗೆಂಪುರಶ್ಮಿಪುಂಜಕ್ಕೆ ಪ್ರತಿಕ್ರಿಯೆ ತೋರುವ ವಸ್ತುವೊಂದನ್ನು ಲೇಪನಮಾಡಿರಲಾಗುತ್ತದೆ. ಅವಗೆಂಪುರಶ್ಮಿಪುಂಜಗಳು ಬಿದ್ದ ಎಲ್ಲ ಭಾಗಗಳಿಂದಲೂ ರಶ್ಮಿಗಳ ತೀವ್ರತೆಗೆ ಅನುಗುಣವಾದ ಸಂಖ್ಯೆಯ ಎಲೆಕ್ಟ್ರಾನ್‍ಗಳನ್ನು ಆ ವಸ್ತು ಹೊರದೂಡುತ್ತದೆ. ಹೊರಬಿದ್ದ ಎಲೆಕ್ಟ್ರಾನ್‍ಗಳನ್ನು ವಿದ್ಯುಚ್ಫಕ್ತಿಯಿಂದ ಆಕರ್ಷಿಸಿ ಎದುರು ಪಾರ್ಶ್ವದ ಮೇಲೆ ಬೀಳುವಂತೆ ಮಾಡಲಾಗುತ್ತದೆ. ಈ ಪಾರ್ಶ್ವದಲ್ಲಿ ಜಿಂಕ್ ಸಲ್ಫೈಡ್ ಮೊದಲಾದ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಪರದೆಯೊಂದು ಇರುತ್ತದೆ. ಎಲೆಕ್ಟ್ರಾನ್‍ಗಳು ತಗುಲಿದ ಭಾಗಗಳಲ್ಲೆಲ್ಲಾ ಎಲೆಕ್ಟ್ರಾನ್‍ಗಳ ಸಂಖ್ಯೆಗನುಗುಣವಾದ ತೀವ್ರತೆಯ ಬೆಳಕಿನ ಚುಕ್ಕೆಗಳು ಕಾಣಿಸುತ್ತವೆ. ಮೊದಲು ಪಾರ್ಶ್ವದ ಮೇಲೆ ಬಿದ್ದ ಈ ಚುಕ್ಕೆಗಳಿಂದಾದ ಅವಗೆಂಪುರಶ್ಮಿಪುಂಜದ ಚಿತ್ರವನ್ನು ಭೂತಗನ್ನಡಿಯ ಸಹಾಯದಿಂದ ದೊಡ್ಡದನ್ನಾಗಿಸಿ ನೋಡಬಹುದು. ಈ ಸಾಧನಕ್ಕೆ ಹೆಚ್ಚಿನ ವಿದ್ಯುತ್ಪ್ರವಾಹ ಅವಶ್ಯಕ.

ಕಾರ್ಯಕಾರಿ ಯಂತ್ರಗಳು

ಬದಲಾಯಿಸಿ
  • ಇವು ಸಾಕ್ಷಿಯಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಏಕೆಂದರೆ ಇವು ಅವಗೆಂಪುರಶ್ಮಿಪುಂಜ ದೀಪಗಳನ್ನು ಉಪಯೋಗಿಸಿ ನೋಡಬೇಕಾದ ಕ್ಷೇತ್ರವನ್ನು ಬೆಳಗುತ್ತವೆ. ದೀಪದ ಮುಂದೆ ಇರುವ ಒಂದು ಶೋಧಕ ಅವಗೆಂಪುಪುಂಜವನ್ನು ಮಾತ್ರ ಹೊರಸೂಸುತ್ತಿರುವುದರಿಂದ ಈ ಬೆಳಕು ಕಣ್ಣಿಗೆ ಕಾಣುವುದಿಲ್ಲ. ಆದರೆ ಪ್ರತಿಬಿಂಬ ಮಾರ್ಪಡಿಸುವ ಕೊಳವೆಗೆ ಮಾತ್ರ ಕಾಣಿಸುತ್ತದೆ. ಈ ಬಗೆಯ ಯಂತ್ರಗಳ ಉಪಯೋಗಗಳಲ್ಲಿ ಮೊದಲನೆಯದು-ಕತ್ತಲಲ್ಲಿಯೇ ವಾಹನಸಂಚಾರ. ವಾಹನದ ತಲೆದೀಪಗಳಲ್ಲಿ ಶೋಧಕಗಳನ್ನು (ಫಿಲ್ಟರ್) ಜೋಡಿಸಿ ಅವು ಅವಗೆಂಪುರಶ್ಮಿಪುಂಜವನ್ನು ಮಾತ್ರ ಹೊರಗೆಡಹುವಂತೆ ಮಾಡಿ ಚಾಲಕ ಪ್ರತಿಬಿಂಬ ಮಾರ್ಪಡಿಸುವ ಕೊಳವೆಗಳನ್ನೊಳಗೊಂಡ ಕನ್ನಡಕಗಳನ್ನು ಧರಿಸಿಕೊಂಡರೆ ಅವನಿಗೆ ರಸ್ತೆ ಚೆನ್ನಾಗಿ ಕಾಣುತ್ತದೆ. ಇತರರಿಗೆ ಕಾಣುವುದಿಲ್ಲ.

ಉಷ್ಣಲೇಖನ

ಬದಲಾಯಿಸಿ
 
ನಾಯಿಯ ಉಷ್ಣಲೇಖನ ಚಿತ್ರ

ಅವಗೆಂಪು ವಿಕಿರಣವನ್ನು ವಸ್ತುಗಳ ಉಷ್ಣಾಂಶವನ್ನು ದೂರದಿಂದಲೇ ಕಂಡುಹಿಡಿಯಲು ಬಳಸುತ್ತಾರೆ (ಹೊರಸೂಸುವುವಿಕೆಯು ತಿಳಿದಿದ್ದರೆ). ಇದು ಉಷ್ಣಲೇಖನ, ಅಥವಾ ಎನ್‌ಐಆರ್‌ನಲ್ಲಿನ ಅಥವಾ ಗೋಚರವಾಗಿರುವ ತುಂಬಾ ಬಿಸಿಯಾದ ವಸ್ತುಗಳ ವಿಷಯದಲ್ಲಿ ಇದು ಉತ್ತಾಪಮಾಪನ ಎಂದು ಕರೆಯಲ್ಪಡುತ್ತದೆ. ಉಷ್ಣಲೇಖನವನ್ನು (ಉಷ್ಣಚಿತ್ರಣ) ಹೆಚ್ಚಾಗಿ ಮಿಲಿಟರಿ ಮತ್ತು ಕೈಗಾರಿಕಾ ಅನ್ವಯಗಳಲ್ಲಿ ಬಳಸಲಾಗುತ್ತದೆ. ಆದರೆ ಇದರ ಉತ್ಪಾದನಾ ವೆಚ್ಚದ ಪರಿಣಾಮಕಾರಿ ತಗ್ಗುವಿಕೆಯ ಕಾರಣದಿಂದ ಕಾರುಗಳ ಮೇಲಿನ ಅವಗೆಂಪು ಕ್ಯಾಮರಾಗಳ ರೂಪದಲ್ಲಿ ಇದರ ತಂತ್ರಜ್ಞಾನವು ಸಾರ್ವಜನಿಕ ಮಾರುಕಟ್ಟೆಯನ್ನು ತಲುಪಿತು.

ಉಷ್ಣಲೇಖನ ಕ್ಯಾಮರಾಗಳು ವಿದ್ಯುತ್ಕಾಂತೀಯ ವರ್ಣಪಟಲದ (ಸರಿ ಸುಮಾರಾಗಿ ೯೦೦-೧,೪೦೦ ನ್ಯಾನೋಮೀಟರ್‌ಗಳು ಅಥವಾ ೦.೯-೧.೪ µm) ಅವಗೆಂಪು ಶ್ರೇಣಿಯಲ್ಲಿರುವ ವಿಕಿರಣವನ್ನು ಪತ್ತೆಹಚ್ಚುತ್ತವೆ ಮತ್ತು ಆ ವಿಕಿರಣದ ಚಿತ್ರವನ್ನು ಉತ್ಪತ್ತಿ ಮಾಡುತ್ತವೆ. ಅವಗೆಂಪು ವಿಕಿರಣವು ಅವುಗಳ ಉಷ್ಣಾಂಶಗಳ ಆಧಾರದ ಮೇಲೆ ಎಲ್ಲ ವಸ್ತುಗಳಿಂದ ಹೊರಸೂಸಲ್ಪಡುತ್ತದೆ. ಹಾಗಾಗಿ, ಕೃಷ್ಣಕಾಯ ವಿಕಿರಣ ನಿಯಮದ ಪ್ರಕಾರ, ಉಷ್ಣಲೇಖನವು ಒಬ್ಬರ ಪರಿಸರವನ್ನು ಗೋಚರ ಪ್ರಕಾಶದಿಂದ ಅಥವಾ ಅದು ಇಲ್ಲದೆಯೇ "ನೋಡು"ವುದನ್ನು ಸಾಧ್ಯವಾಗಿಸುತ್ತದೆ. ವಸ್ತುವು ಹೊರಸೂಸುವ ವಿಕಿರಣದ ಪ್ರಮಾಣ ಉಷ್ಣಾಂಶದ ಜೊತೆಗೆ ಹೆಚ್ಚಾಗುತ್ತ ಹೋಗುತ್ತದೆ, ಆದ್ದರಿಂದ ಉಷ್ಣಲೇಖನವು ಉಷ್ಣಾಂಶದಲ್ಲಿನ ಬದಲಾವಣೆಯನ್ನು ನೋಡಲು ಸಹಾಯ ಮಾಡುತ್ತದೆ.

ಇತರ ಚಿತ್ರಣಗಳು

ಬದಲಾಯಿಸಿ
 
ಅಂಕೀಯ ಕ್ಯಾಮರಾದಿಂದ ನೋಡಿದಾಗ ಒಂದು Xbox 360 ಯ ರಿಮೊಟ್‌ ಕಂಟ್ರೋಲ್‍ನ ಎಲ್‌ಇಡಿಯಿಂದ ಬರುವ ಅವಗೆಂಪು ಬೆಳಕು.

ಅವಗೆಂಪು ಛಾಯಾಚಿತ್ರಗ್ರಹಣದಲ್ಲಿ, ಹತ್ತಿರದ-ಅವಗೆಂಪು ವರ್ಣಪಟಲವನ್ನು ಸೆರೆಹಿಡಿಯಲು ಅವಗೆಂಪು ಸೋಸುಕಗಳನ್ನು ಬಳಸಲಾಗುತ್ತದೆ. ಡಿಜಿಟಲ್ ಕ್ಯಾಮರಾಗಳು ಅನೇಕ ವೇಳೆ ಅವಗೆಂಪು ಪ್ರತಿಬಂಧಕಗಳನ್ನು ಬಳಸುತ್ತವೆ. ಅಗ್ಗದ ಡಿಜಿಟಲ್ ಕ್ಯಾಮರಾಗಳು ಮತ್ತು ಕ್ಯಾಮರಾಫೋನ್‌ಗಳು ಕಡಿಮೆ ಪರಿಣಾಮಕಾರಿಯಾದ ಸೋಸುಕಗಳನ್ನು ಹೊಂದಿರುತ್ತವೆ ಮತ್ತು ಕಾಂತಿಯುತ ನೇರಳೆ-ಬಿಳಿ ಬಣ್ಣವಾಗಿ ಕಾಣುವ ಹತ್ತಿರದ-ಅತಿಗೆಂಪಿನ ತೀವ್ರತೆಯನ್ನು ನೋಡಬಲ್ಲವು. ಇದು ವಿಶೇಷವಾಗಿ ಅವಗೆಂಪು ಕಾಂತಿಯುತವಾದ ಪ್ರದೇಶಗಳ (ಒಂದು ದೀಪದ ಬಳಿಯಲ್ಲಿರುವಂತೆ) ಹತ್ತಿರದಲ್ಲಿರುವ ವಸ್ತುಗಳ ಚಿತ್ರಗಳನ್ನು ತೆಗೆಯುವಾಗ ಎದ್ದುಕಾಣುತ್ತದೆ. ಅಲ್ಲಿನ ಪರಿಣಾಮರೂಪಿ ಅವಗೆಂಪು ವ್ಯತಿಕರಣವು ಚಿತ್ರವನ್ನು ಅಳಿಸಿ ಹಾಕುತ್ತದೆ. ಟಿ-ರೇ ಚಿತ್ರಣ ಎಂದು ಕರೆಯಲ್ಪಡುವ ಒಂದು ತಂತ್ರವೂ ಇದೆ. ಟಿ-ರೇ ಅಂದರೆ ದೂರದ ಅವಗೆಂಪು ಅಥವಾ ಟೆರಾಹರ್ಟ್ಸ್ ವಿಕಿರಣವನ್ನು ಬಳಸುವ ಚಿತ್ರಣ. ಪ್ರಕಾಶಮಾನ ಮೂಲಗಳ ಕೊರತೆಯು ಟೆರಾಹರ್ಟ್ಸ್ ಛಾಯಾಚಿತ್ರಗ್ರಹಣವನ್ನು ಇತರ ಅವಗೆಂಪು ಚಿತ್ರಣ ತಂತ್ರಗಳಿಗಿಂತ ತಾಂತ್ರಿಕವಾಗಿ ಹೆಚ್ಚು ಸವಾಲಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಟಿ-ರೇ ಚಿತ್ರಣವು ಟೆರಾಹರ್ಟ್ಸ್ ಸಮಯ-ಕ್ಷೇತ್ರ ರೋಹಿತದರ್ಶನದಂತಹ ಹೊಸ ಬೆಳವಣಿಗೆಗಳ ಕಾರಣದಿಂದಾಗಿ ಗಣನೀಯ ಕುತೂಹಲವನ್ನು ಪಡೆದುಕೊಂಡಿದೆ.

ಹಿಂಬಾಲಿಸುವುದು

ಬದಲಾಯಿಸಿ

ಅವಗೆಂಪು ಗುರಿಯಿಡುವಿಕೆ ಎಂದೂ ಕರೆಯಲ್ಪಡುವ ಅವಗೆಂಪು ಹಿಂಬಾಲಿಸುವಿಕೆಯು ಒಂದು ನಿಷ್ಕ್ರಿಯ ಕ್ಷಿಪಣಿ ಮಾರ್ಗದರ್ಶನ ವ್ಯವಸ್ಥೆಯನ್ನು ಸೂಚಿಸುತ್ತದೆ. ಅದು ವಸ್ತುವನ್ನು ಕಂಡುಹಿಡಿಯಲು ಒಂದು ಗುರಿಯಿಂದಾಗುವ ವರ್ಣಪಟಲದ ಅವಗೆಂಪು ಭಾಗದಲ್ಲಿನ ವಿದ್ಯುದ್ಕಾಂತೀಯ ವಿಕಿರಣದ ಉತ್ಸರ್ಜನವನ್ನು ಬಳಸುತ್ತದೆ. ಅವಗೆಂಪು ಅರಸುವಿಕೆಯನ್ನು ಬಳಸುವ ಕ್ಷಿಪಣಿಗಳನ್ನು ಅನೇಕ ವೇಳೆ "ಶಾಖದ-ಅನ್ವೇಷಕಗಳು" ಎಂದು ಕರೆಯಲಾಗುತ್ತದೆ. ಏಕೆಂದರೆ ಆವರ್ತನದಲ್ಲಿ ಅವಗೆಂಪು ಬೆಳಕಿನ ಗೋಚರ ವರ್ಣಪಟಲದ ಸ್ವಲ್ಪ ಮಾತ್ರ ಕೆಳಗಿರುತ್ತದೆ ಮತ್ತು ಬಿಸಿಯಾದ ಕಾಯಗಳು ಇದನ್ನು ಬಲವಾಗಿ ಹೊರಸೂಸುತ್ತವೆ. ಜನರು, ವಾಹನಗಳ ಇಂಜಿನ್‍ಗಳು ಮತ್ತು ವಿಮಾನಗಳಂತಹ ಅನೇಕ ವಸ್ತುಗಳು ಶಾಖವನ್ನು ಉತ್ಪಾದಿಸಿ ಹಿಡಿದಿಟ್ಟುಕೊಳ್ಳುತ್ತವೆ. ಹಾಗಾಗಿ ಇವುಗಳು ಹಿನ್ನೆಲೆಯಲ್ಲಿನ ವಸ್ತುಗಳಿಗೆ ಹೋಲಿಸಿದರೆ ಬೆಳಕಿನ ಅವಗೆಂಪು ತರಂಗಾಂತರಗಳಲ್ಲಿ ವಿಶೇಷವಾಗಿ ಗೋಚರವಾಗುತ್ತವೆ.[೧೯]

ಉದಾಹರಣೆಗೆ, ವಿಮಾನದಿಂದ ವಿಮಾನಕ್ಕೆ ಹಾರುವ ಸೈಡ್‍ವೈಂಡರ್ ಎಂಬ ಅಮೆರಿಕದ ಶಸ್ತ್ರ; ಹಿಂದೆ ರಷ್ಯದಲ್ಲಿ ಅಮೆರಿಕದ ಯು-2 ವಿಮಾನವನ್ನು ಹೊಡೆದುರುಳಿಸಿದ--ನೆಲದಿಂದ ವಿಮಾನಕ್ಕೆ ಹಾರುವ ಶಸ್ತ್ರ. ಈ ಶಸ್ತ್ರಗಳಲ್ಲಿ ಅವಗೆಂಪುರಶ್ಮಿಪುಂಜವನ್ನು ಪತ್ತೆಮಾಡುವ ಸಾಧನವಿರುತ್ತದೆ. ವಿಮಾನ ಮೊದಲಾದ ಗುರಿಗಳು ಅವಗೆಂಪುರಶ್ಮಿಪುಂಜದ ಆಕರಗಳಾಗಿರುವುದರಿಂದ ಅವುಗಳನ್ನು ಇಂಥ ಶಸ್ತ್ರಗಳು ಗುರುತಿಸುತ್ತವೆ. ಶಸ್ತ್ರದಲ್ಲಿರುವ ಯಂತ್ರವಿಶೇಷಗಳು ಅದರ ಚಲನೆಯ ಗತಿಯನ್ನು ಗುರಿಯ ದಿಕ್ಕಿಗೇ ತಿರುಗಿಸುತ್ತವೆ. ಶಸ್ತ್ರದ ವೇಗ ಗುರಿಯ ವೇಗಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ಚಲನೆಯ ಗತಿ ಶೀಘ್ರವಾಗಿ, ಎಡೆಬಿಡದೆ ಗುರಿಯನ್ನೇ ಅನುಸರಿಸುವುದರಿಂದ ಗುರಿಗೆ ಪೆಟ್ಟು ಬಿದ್ದೇ ಬೀಳುತ್ತದೆ.

ಅವಗೆಂಪು ವಿಕಿರಣವನ್ನು ಉದ್ದೇಶಪೂರ್ವಕ ತಾಪನ ಮೂಲವಾಗಿ ಬಳಸಬಹುದು. ಉದಾಹರಣೆಗೆ, ಅವಗೆಂಪು ಆವಿ ಸ್ನಾನ ಕೊಠಡಿಗಳಲ್ಲಿ ಅಲ್ಲಿರುವವರಿಗೆ ಶಾಖವನ್ನು ನೀಡಲು, ಮತ್ತು ವಿಮಾನದ ರೆಕ್ಕೆಗಳಿಂದ ಮಂಜುಗಡ್ಡೆಯನ್ನು ತೆಗೆಯಲು (ಡಿ-ಐಸಿಂಗ್) ಅದನ್ನು ಬಳಸಲಾಗುತ್ತದೆ. ಎಫ್‌ಐ‌ಆರ್ ಕೂಡ ಸ್ವಾಭಾವಿಕ ಆರೋಗ್ಯ ರಕ್ಷಣೆ ಮತ್ತು ಭೌತಚಿಕಿತ್ಸೆಯ ಒಂದು ಸುರಕ್ಷಿತ ವಿಧಾನವಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ದೂರದ ಅವಗೆಂಪು ಉಷ್ಣತಾಮಾಪಕ ಚಿಕಿತ್ಸೆಯ ಉಡುಪುಗಳು (ಸಂಧಿವಾತ, ಗಾಯ ಮತ್ತು ನೋವುಗಳ ರೋಗಲಕ್ಷಣಗಳನ್ನು ನಿಗ್ರಹಿಸಲು ನೆರವಾಗುವ ಸಲುವಾಗಿ) ಸಂಕೋಚಕ ಆಧಾರ ನೀಡಲು ಮತ್ತು ರೋಗನಿವಾರಣಾ ಶಾಖವನ್ನು ನೀಡಲು ಉಷ್ಣ ತಂತ್ರಜ್ಞಾನವನ್ನು ಬಳಸುತ್ತವೆ. ಅತಿಗೆಂಪನ್ನು ಅಡುಗೆ ಮಾಡಲು ಮತ್ತು ಆಹಾರವನ್ನು ಬಿಸಿಮಾಡಲು ಬಳಸಬಹುದು. ಏಕೆಂದರೆ ಅದು ಪ್ರಮುಖವಾಗಿ ತನ್ನ ಸುತ್ತಲಿರುವ ಗಾಳಿಯನ್ನು ಬಿಸಿ ಮಾಡುವುದರ ಬದಲು, ಅಪಾರದರ್ಶಕ, ಹೀರಿಕೊಳ್ಳುವ ವಸ್ತುಗಳನ್ನು ಬಿಸಿ ಮಾಡುತ್ತದೆ.

ಅವಗೆಂಪು ತಾಪನವು ಕೈಗಾರಿಕಾ ಉತ್ಪಾದನಾ ಪ್ರಕ್ರಿಯೆಗಳಲ್ಲೂ ಜನಪ್ರಿಯವಾಗುತ್ತಿದೆ, ಉದಾಹರಣೆಗೆ ಲೇಪನಗಳನ್ನು ಹದಗೊಳಿಸುವುದು, ಪ್ಲಾಸ್ಟಿಕ್‌ಗಳ ತಯಾರಿಕೆ, ತಾಪಾನುಶೀತನ, ಪ್ಲಾಸ್ಟಿಕ್ ಬೆಸುಗೆ, ಮುದ್ರಣ ಒಣಗಿಸುವಿಕೆ ಇತ್ಯಾದಿ. ಈ ಅನ್ವಯಗಳಲ್ಲಿ, ಅವಗೆಂಪು ತಾಪಕಗಳು ಸಾಂಪ್ರದಾಯಿಕ ಗೂಡೊಲೆ ಮತ್ತು ಸಂಪರ್ಕ ತಾಪನಕ್ಕೆ ಬದಲಾಗಿ ಬಳಸಲ್ಪಡುತ್ತವೆ. ಅವಗೆಂಪು ತಾಪಕದ ತರಂಗಾಂತರವನ್ನು ಮೂಲವಸ್ತುವಿನ ಹೀರಿಕೆ ಗುಣಗಳಿಗೆ ಸರಿಹೊಂದಿಸುವುದರ ಮೂಲಕ ಕಾರ್ಯಪಟುತ್ವವನ್ನು ಸಾಧಿಸಲಾಗುತ್ತದೆ.

ಅವಗೆಂಪು ಮಾಹಿತಿ ಪ್ರಸಾರಣೆಯನ್ನು ಕಂಪ್ಯೂಟರ್ ಬಾಹ್ಯೋಪಕರಣಗಳು ಮತ್ತು ಪರ್ಸನಲ್ ಡಿಜಿಟಲ್ ಅಸಿಸ್ಟಂಟ್‌‍ಗಳಲ್ಲಿ ಸಣ್ಣ-ವ್ಯಾಪ್ತಿಯ ಸಂವಹನದಲ್ಲಿ ಉಪಯೋಗಿಸಲಾಗುತ್ತದೆ. ಈ ಸಾಧನಗಳು ಸಾಮಾನ್ಯವಾಗಿ ಐಆರ್‌ಡಿಎದಿಂದ ಪ್ರಕಟಿಸಲ್ಪಟ್ಟ ಮಾನದಂಡಕ್ಕೆ ಅನುಗುಣವಾಗಿರುತ್ತವೆ. ದೂರ ನಿಯಂತ್ರಕಗಳು ಮತ್ತು ಐಆರ್‌ಡಿಎ ಸಾಧನಗಳು ಅವಗೆಂಪು ವಿಕಿರಣವನ್ನು ಹೊರಸೂಸಲು ಅವಗೆಂಪು ಬೆಳಕು ವಿಸರ್ಜಕ ಡಯೋಡ್‍ಗಳನ್ನು (ಎಲ್‌ಇಡಿ) ಬಳಸುತ್ತವೆ. ಅದು ಪ್ಲಾಸ್ಟಿಕ್ ಮಸೂರದಿಂದ ಕೇಂದ್ರೀಕರಿಸಲ್ಪಟ್ಟಾಗ ಕಿರಿದಾದ ರಶ್ಮಿಯಾಗುತ್ತದೆ. ರಶ್ಮಿಯನ್ನು ಸಮನ್ವಯಗೊಳಿಸಲಾಗುತ್ತದೆ, ಅಂದರೆ ಮಾಹಿತಿಯನ್ನು ಸಂಕೇತೀಕರಿಸಲು ಆನ್ ಮತ್ತು ಆಫ಼್‍ಗೆ ಬದಲಾಯಿಸಲಾಗುತ್ತದೆ. ಗ್ರಾಹಕವು ಅವಗೆಂಪು ವಿಕಿರಣವನ್ನು ವಿದ್ಯುತ್ ಪ್ರವಾಹವನ್ನಾಗಿ ಬದಲಾಯಿಸಲು ಒಂದು ಸಿಲಿಕಾನ್ ಫೊಟೊಡಯೋಡ್ ಅನ್ನು ಬಳಸುತ್ತದೆ. ಇದು ಪ್ರಸಾರಕಗಳಿಂದ ನಿರ್ಮಿತವಾದ ಜೋರಾಗಿ ಕಂಪಿಸುವ ಸಂಕೇತಗಳಿಗೆ ಮಾತ್ರ ಪ್ರತಿಸ್ಪಂದಿಸುತ್ತದೆ ಮತ್ತು ನಿಧಾನವಾಗಿ ಅವಗೆಂಪು ವಿಕಿರಣವನ್ನು ಸುತ್ತಲಿನ ಬೆಳಕಿನಿಂದ ಸೋಸಿ ಹೊರತೆಗೆಯುತ್ತದೆ. ಅವಗೆಂಪು ಸಂವಹನವು ಹೆಚ್ಚಿನ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಆಂತರಿಕ ಬಳಕೆಗೆ ಬಹಳ ಉಪಯುಕ್ತವಾಗಿದೆ. ಅವಗೆಂಪು ವಿಕಿರಣ ಗೋಡೆಯನ್ನು ಭೇದಿಸುವುದಿಲ್ಲ ಮತ್ತು ಆದ್ದರಿಂದ ಕೋಣೆಗಳನ್ನು ಒಂದುಗೂಡಿಸುವ ಇತರ ಸಾಧನಗಳೊಂದಿಗೆ ಅಡ್ಡಿಬರುವುದಿಲ್ಲ. ಅವಗೆಂಪು ಯಂತ್ರೋಪಸಾಧನಗಳಿಗೆ ಆದೇಶ ನೀಡಲು ದೂರ ನಿಯಂತ್ರಣದ ಒಂದು ಸಾಮಾನ್ಯ ಮಾರ್ಗವಾಗಿದೆ.

ಅವಗೆಂಪು ಲೇಸರನ್ನು ಬಳಸುವ ಮುಕ್ತ ಸ್ಥಳ ದೃಗ್ವಿಜ್ಞಾನ ಸಂವಹನವು ನಗರ ಪ್ರದೇಶದಲ್ಲಿ ಸಂವಹನ ಕೊಂಡಿಯನ್ನು ಪ್ರತಿಷ್ಠಾಪಿಸಲು ತುಲನಾತ್ಮಕವಾಗಿ ಅಗ್ಗದ ಮಾರ್ಗವಾಗಿರಬಹುದು. ತಂತು ದೃಗ್ವಿಜ್ಞಾನ ಕೇಬಲ್‍ ಅನ್ನು ಹೂಳುವ ವೆಚ್ಚಕ್ಕೆ ಹೋಲಿಸಿದಾಗ ಇದು ೪ ಗಿಗಾಬೈಟ್ಸ್‌ಗಳ ತನಕ ಕೆಲಸ ಮಾಡುತ್ತದೆ ಮತ್ತು ಅಗ್ಗವಾಗಿರುತ್ತದೆ.

ಅವಗೆಂಪು ಲೇಸರ್‌ಗಳು ದೃಗ್ವಿಜ್ಞಾನ ತಂತು ಸಂವಹನ ವ್ಯವಸ್ಥೆಗೆ ಬೆಳಕನ್ನು ಒದಗಿಸಲು ಬಳಸಲ್ಪಡುತ್ತವೆ. ಸುಮಾರು ೧,೩೩೦ ಎನ್‍ಎಮ್ (ಕಡಿಮೆ ಪ್ರಸರಣ) ಅಥವಾ ೧,೫೫೦ ಎನ್‌ಎಮ್ (ಅತ್ಯುತ್ತಮ ಪ್ರಸಾರಣ) ತರಂಗಾಂತರದ ಅವಗೆಂಪು ಬೆಳಕು ಪ್ರಮಾಣಿತ ಸಿಲಿಕಾ ತಂತುಗಳ ಅತ್ಯುತ್ತಮ ಆಯ್ಕೆಗಳಾಗಿವೆ.

ಆರ್‌ಐಎ‌ಎಸ್ (ರಿಮೋಟ್ ಇನ್‌ಫ್ರಾ‌ರೆಡ್‌ ಆಡಿಬಲ್ ಸೈನೇಜ್) ಯೋಜನೆಯ ಮೂಲಕ ಮುದ್ರಿತ ಚಿಹ್ನೆಗಳ ಸಂಕೇತೀಕರಿಸಿದ ಶ್ರವ್ಯ ಆವೃತ್ತಿಗಳ ಅವಗೆಂಪು ಮಾಹಿತಿ ಪ್ರಸಾರಣವು ದೃಷ್ಟಿ ದುರ್ಬಲ ಜನರಿಗೆ ನೆರವಾಗಬಲ್ಲದೇ ಎಂದು ಸಂಶೋಧಿಸಲಾಗುತ್ತಿದೆ.

  • ಟಿವಿಯ ರಿಮೋಟ್ ಇದರ ಅತಿ ಹೆಚ್ಚು ಬಳಕೆಯ ಸಾಧನ.
  • ಮೊದಲ ವಿಶ್ವಯುದ್ಧದಲ್ಲಿ ಜರ್ಮನಿಯ ಸೈನ್ಯ ಆಫ್ರಿಕಾದಲ್ಲಿ ಅವಗೆಂಪುರಶ್ಮಿಪುಂಜವನ್ನು ಸಂಪರ್ಕಸಾಧನಗಳ ತಯಾರಿಕೆಗೆ ಉಪಯೋಗಿಸಿತ್ತು. ಸುದ್ದಿಯ ಪ್ರೇಷಕಸ್ಥಾನದಲ್ಲಿ ಅವಗೆಂಪುದ ಒಂದು ಪ್ರಬಲವಾದ ದೀಪದಿಂದ ಕಿರಣವೊಂದನ್ನು 4-5 ಮೈಲಿ ದೂರದಲ್ಲಿದ್ದ ಗ್ರಾಹಕ ಸ್ಥಾನಕ್ಕೆ ಕಳುಹಿಸಿ ಅಲ್ಲಿ ಅದನ್ನು ಪತ್ತೆ ಮಾಡುವ ಯಂತ್ರಗಳಿಂದ ಸ್ವೀಕರಿಸಲಾಯಿತು.[೨೦] ಕಳುಹಿಸಬೇಕಾದ ಸಂಕೇತದ ರೂಪದಂತೆಯೇ ಕಿರಣದ ಶಕ್ತಿಯನ್ನೂ ಬದಲಿಸಿದರೆ ಗ್ರಾಹಕಸ್ಥಾನದಲ್ಲಿ ಕಿರಣದ ಬದಲಾಗುವ ರೂಪಗಳಿಂದ ಸಂಕೇತವನ್ನು ಪಡೆಯಬಹುದು. ಸಂಕೇತ ಸಂಜ್ಞೆಗಳು ಧ್ವನಿಯ ರೂಪವನ್ನು ತಳೆದಿದ್ದರೆ, ಸ್ವೀಕೃತವಾದ ಕಿರಣದಲ್ಲಿಯೂ ಧ್ವನಿಸಂಕೇತಗಳು ದೊರೆಯುತ್ತವೆ. ಧ್ವನಿಯ ಸಂಕೇತವನ್ನು ವಿದ್ಯುಚ್ಫಕ್ತಿಯ ಸಂಕೇತವಾಗಿ ಪರಿವರ್ತಿಸಲು ಸೂಕ್ಷ್ಮ ಧ್ವನಿವರ್ಧಕವನ್ನು ಉಪಯೋಗಿಸಬಹುದು. ಈ ವಿದ್ಯುಚ್ಫಕ್ತಿಯ ಸಂಕೇತವನ್ನೇ ದೀಪದಲ್ಲಿ ಉಪಯೋಗವಾಗುತ್ತಿರುವ ವಿದ್ಯುಚ್ಫಕ್ತಿಯ ಜೊತೆಗೆ ಸೇರಿಸಿದರೆ ಧ್ವನಿಸಂಕೇತ ಕಿರಣದ ಮೇಲೆ ಹೇರಲ್ಪಡುತ್ತದೆ. ಗ್ರಾಹಕ ಕೇಂದ್ರದಲ್ಲಿ ಅವಗೆಂಪುರಶ್ಮಿಗಳನ್ನು ಸ್ವೀಕರಿಸುವ ಶಕ್ತಿಯನ್ನುಳ್ಳ ದ್ಯುತಿವಿದ್ಯುತ್ತಾಗಿ ಮಾರ್ಪಡಿಸಬಹುದು. ವಿದ್ಯುತ್ಪ್ರವಾಹವನ್ನು ಧ್ವನಿವರ್ಧಕದ ಮೂಲಕ ಧ್ವನಿಯನ್ನಾಗಿ ಬದಲಾಯಿಸಬಹುದು. ವಿದ್ಯುತ್ಪ್ರವಾಹಗಳು ಸೂಕ್ಷ್ಮವಾಗಿದ್ದಾಗ ಅವುಗಳ ಶಕ್ತಿಯನ್ನು ಹೆಚ್ಚಿಸಲು ಸೂಕ್ತರೀತಿಯ ಪ್ರವರ್ಧಕಗಳನ್ನು ಉಪಯೋಗಿಸಬಹುದು.

ಅವಗೆಂಪು ಟೆಲಿವಿಷನ್

ಬದಲಾಯಿಸಿ
  • ಅವಗೆಂಪುರಶ್ಮಿಪುಂಜವನ್ನುಪಯೋಗಿಸುವ ಟೆಲಿವಿಷನ್ ಬಿಂಬಗ್ರಾಹಿಯನ್ನು (ಕ್ಯಾಮರ) ಉಪಯೋಗಿಸಿ ರಾತ್ರಿ ವೇಳೆಯೂ ಬೆಳಕಿನ ಸಹಾಯವಿಲ್ಲದೆಯೇ ಟೆಲಿವಿಷನ್ ಚಿತ್ರಗಳನ್ನು ಪಡೆಯಲು ಅವಕಾಶವಾಗಿದೆ.

ರೋಹಿತದರ್ಶನ

ಬದಲಾಯಿಸಿ

ಅವಗೆಂಪು ಕಂಪನಶೀಲ ರೋಹಿತದರ್ಶನವು ಅಣುಗಳ ಘಟಕವಾಗಿರುವ ಬಂಧಗಳ ವಿಶ್ಲೇಷಣೆಯಿಂದ ಅವುಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಬಳಸುವ ಒಂದು ತಂತ್ರವಾಗಿದೆ. ಒಂದು ಅಣುವಿನಲ್ಲಿನ ಪ್ರತಿ ರಾಸಾಯನಿಕ ಬಂಧವು ಆ ಬಂಧದ ವಿಶಿಷ್ಟಗುಣದ ಆವರ್ತನದಲ್ಲಿ ಕಂಪಿಸುತ್ತದೆ. ಒಂದು ಅಣುವಿನಲ್ಲಿನ ಪರಮಾಣುಗಳ ಒಂದು ಗುಂಪು (ಉದಾಹರಣೆಗೆ CH2) ಆಂದೋಲನದ ಬಹು ರೀತಿಗಳನ್ನು ಹೊಂದಿರಬಹುದು. ಇದು ಒಟ್ಟಾರೆಯಾಗಿ ಗುಂಪಿನ ಹಿಗ್ಗಿಸುವಿಕೆ ಮತ್ತು ಬಾಗುವಿಕೆ ಚಲನೆಗಳಿಂದ ಉಂಟಾಗುತ್ತದೆ. ಆಂದೋಲನವು ಅಣುವಿನಲ್ಲಿನ ದ್ವಿಧ್ರುವದಲ್ಲಿ ಬದಲಾವಣೆಗೆ ಕಾರಣವಾದರೆ, ಅದು ಸಮಾನ ಆವರ್ತನವನ್ನು ಹೊಂದಿರುವ ಫೋಟಾನ್ ಅನ್ನು ಹೀರಿಕೊಳ್ಳುತ್ತದೆ. ಹೆಚ್ಚಿನ ಅಣುಗಳ ಕಂಪನಶೀಲ ಆವರ್ತನಗಳು ಅವಗೆಂಪು ಬೆಳಕಿನ ಆವರ್ತನಗಳಿಗೆ ಸಂಬಂಧಿಸಿರುತ್ತವೆ. ಸಾಮಾನ್ಯವಾಗಿ, ಮಧ್ಯಮ ಅವಗೆಂಪು ಆಗಿರುವ 4000 ದಿಂದ 400 ಸಿಎಮ್−೧ ನಲ್ಲಿರುವ ಬೆಳಕಿನ ವಿಕಿರಣವನ್ನು ಬಳಸಿ ಸಾವಯವ ಸಂಯುಕ್ತಗಳನ್ನು ಅಭ್ಯಸಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಒಂದು ಮಾದರಿಯಲ್ಲಿನ ಹೀರಿಕೆಯ ಎಲ್ಲಾ ಆವರ್ತನಗಳ ಒಂದು ವರ್ಣಪಟಲವನ್ನು ದಾಖಲಿಸಲಾಗುತ್ತದೆ. ಇದನ್ನು ಮಾದರಿ ಸಂಯೋಜನೆ ಬಗ್ಗೆ ಮಾಹಿತಿಯನ್ನು ಪಡೆಯಲು (ಅಸ್ತಿತ್ವದಲ್ಲಿರುವ ರಾಸಾಯನಿಕ ಗುಂಪುಗಳು ಮತ್ತು ಅದರ ಪರಿಶುದ್ಧತೆಯ ವಿಷಯವಾಗಿ - ಉದಾಹರಣೆಗೆ ಒಂದು ಒದ್ದೆಯಾದ ಮಾದರಿಯು 3200 cm−1 ಸುತ್ತಲು ವಿಶಾಲ O-H ಹೀರುವಿಕೆಯನ್ನು ತೋರಿಸುತ್ತದೆ) ಬಳಸಬಹುದು.

ಇಪ್ಪತ್ತನೆಯ ಶತಮಾನದ ಮೊದಲಲ್ಲಿ ನಿರ್ಮಿಸಲಾದ ಈ ಯಂತ್ರ ರಸಾಯನಶಾಸ್ತ್ರದ ಅತಿಪ್ರಬಲ ಮತ್ತು ಪ್ರಚಲಿತ ಯಂತ್ರಗಳಲ್ಲೊಂದಾಗಿದೆ. ರಸಾಯನ ವಸ್ತುಗಳನ್ನು ಪತ್ತೆಮಾಡುವುದರಲ್ಲಿ, ಅವುಗಳ ಪ್ರಮಾಣಗಳನ್ನು ಅಳೆಯುವುದರಲ್ಲಿ ಇದು ಸಹಾಯಕಾರಿಯಾಗಿದೆ. ಯಂತ್ರದ ಮುಖ್ಯಭಾಗಗಳೆಂದರೆ--ಅವಗೆಂಪುದ ಮೂಲಭೂತ ವಿಶೇಷದೀಪ. ಇದು ವಿದ್ಯುತ್ಪ್ರವಾಹದಿಂದ ಕಾದ ತಂತಿ. ಮೂಲದಿಂದ ಹೊರಟ ರಶ್ಮಿಪುಂಜವನ್ನು ಒಂದೇ ದಿಕ್ಕಿನಲ್ಲಿ ಹೋಗುವ ಕಿರಣವನ್ನಾಗಿ ಪರಿವರ್ತಿಸುವ ಭೂತಕನ್ನಡಿಗಳು. ರಶ್ಮಿಪುಂಜದ ವಿವಿಧ ಅಲೆಯುದ್ದದ ಶಕ್ತಿಯನ್ನು ವಿವಿಧ ದಿಕ್ಕುಗಳಲ್ಲಿ ವಿಂಗಡಿಸುವ ಜಾಳಿಗೆ (ಗ್ರೇಟಿಂಗ್). ಪರಿಶೀಲನೆಗೊಳಗಾದ ವಸ್ತುವನ್ನು ಧರಿಸಿದ ಪಾರಕ ಪಾತ್ರೆ. ವಸ್ತುವಿನ ಮೂಲಕ ಹಾಯ್ದ ರಶ್ಮಿಯನ್ನು ಅಳೆಯುವ ಪತ್ತೇದಾರ (ಥರ್ಮೋಪೈಲ್ ಅಥವಾ ಥರ್ಮಿಸ್ಟರ್). ಪತ್ತೇದಾರಕ ವಿದ್ಯುತ್ಪ್ರವಾಹವನ್ನು ವರ್ಧಿಸುವ ಪ್ರವರ್ಧಕ. ರಶ್ಮಿಯ ಶಕ್ತಿಯನ್ನು ಬರೆದಿಡುವ ಲೇಖಕ. ನಾಳಿ (ಡ್ರಮ್) ಜಾಳಿಗೆಯನ್ನು ಮತ್ತು ಲೇಖಕನಾಳಿಯನ್ನು ನಿಧಾನವಾಗಿ ತಿರುಗಿಸುವ ಮೋಟರ್ ಯಂತ್ರಗಳು.

ಪವನಶಾಸ್ತ್ರ

ಬದಲಾಯಿಸಿ
 
15ನೇ ಅಕ್ಟೋಬರ್‌ 2006ರಂದು 1315 Z ತೆಗೆದ ಐಆರ್‌ ಉಪಗ್ರಹ ಚಿತ್ರ. ನಾಟಿರುವ ಕ್ಯುಮುಲೊನಿಂಬಸ್ ಮೋಡದಿಂದ ಕೂಡಿದ ಮುಂಭಾಗದ ವ್ಯೂಹವನ್ನು ಮೆಕ್ಸಿಕೊದ ಕೊಲ್ಲಿಯಲ್ಲಿ ನೋಡಬಹುದು. ಹೆಚ್ಚು ತೆಟ್ಟೆಯಾದ ಕ್ಯುಮುಲಸ್ ಮೋಡಗಳು ಮತ್ತು ಸ್ಟ್ರ್ಯಾಟೊಕ್ಯುಮುಲಸ್ ಮೋಡಗಳನ್ನು ಪೂರ್ವ ದಿಕ್ಕಿನ ಕರಾವಳಿಯಲ್ಲಿ ನೋಡಬಹುದು.

ಸ್ಕ್ಯಾನಿಂಗ್ ರೇಡಿಯೋಮಾಪಕಗಳಿಂದ ಸಜ್ಜುಗೊಂಡಿರುವ ಹವಾಮಾನ ಕೃತಕ ಉಪಗ್ರಹಗಳು ಉಷ್ಣ ಅಥವಾ ಅವಗೆಂಪು ಚಿತ್ರಗಳನ್ನು ಉತ್ಪತ್ತಿ ಮಾಡುತ್ತವೆ. ಇವುಗಳು ನಂತರ ತರಬೇತಿ ಪಡೆದ ಒಬ್ಬ ವಿಶ್ಲೇಷಕನಿಗೆ ಮೋಡದ ಎತ್ತರ ಮತ್ತು ವಿಧಗಳನ್ನು ನಿರ್ಧರಿಸಲು, ಭೂಮಿ ಮತ್ತು ಮೇಲ್ಮೈ ನೀರಿನ ಉಷ್ಣಾಂಶವನ್ನು ಲೆಕ್ಕಹಾಕಲು, ಮತ್ತು ಸಮುದ್ರ ಮೇಲ್ಮೈಗಳ ಲಕ್ಷಣಗಳನ್ನು ಕಂಡುಹಿಡಿಯುವುದನ್ನು ಸಾಧ್ಯವಾಗಿಸುತ್ತವೆ. ಸ್ಕ್ಯಾನಿಂಗ್ ಸಾಮಾನ್ಯವಾಗಿ ೧೦.೩-೧೨.೫ µm (IR೪ ಮತ್ತು IR೫ ಚಾನೆಲ್‍ಗಳು)ನ ವ್ಯಾಪ್ತಿಯಲ್ಲಿರುತ್ತವೆ.

ಎತ್ತರದ, ಸಿರಸ್ ಅಥವಾ ಕ್ಯುಮುಲೋನಿಂಬಸ್‌ಗಳಂತಹ ಶೀತಲ ಮಂಜುಗಡ್ಡೆ ಮೋಡಗಳು ಬಿಳಿ ಬಣ್ಣವಾಗಿ ತೋರುತ್ತವೆ, ಸ್ಟ್ರಾಟಸ್ ಅಥವಾ ಸ್ಟ್ರಾಟೋಕ್ಯುಮುಲಸ್‌ಗಳಂತಹ ಕೆಳಗಿರುವ ಹೆಚ್ಚು ಬೆಚ್ಚಗಿನ ಮೋಡಗಳು ಬೂದು ಬಣ್ಣವಾಗಿ ತೋರುತ್ತವೆ. ಮಧ್ಯದ ಮೋಡಗಳನ್ನು ಛಾಯೆಗೆ ಅನುಗುಣವಾಗಿ ತೋರಿಸಲಾಗುತ್ತದೆ. ಬಿಸಿ ಭೂ ಮೇಲ್ಮೈಗಳು ದಟ್ಟ ಬೂದು ಬಣ್ಣ ಅಥವಾ ಕಪ್ಪು ಬಣ್ಣವಾಗಿ ತೋರುತ್ತವೆ. ಅವಗೆಂಪು ಚಿತ್ರಣದ ಒಂದು ಅನಾನುಕೂಲವೆಂದರೆ ಸ್ಟ್ರಾಟಸ್‍ನಂತಹ ಕೆಳಗಿನ ಮೋಡ ಅಥವಾ ಮಂಜು, ಸುತ್ತುವರೆದ ನೆಲ ಅಥವಾ ಸಮುದ್ರದ ಮೇಲ್ಮೈಯನ್ನು ಹೋಲುವ ಉಷ್ಣಾಂಶವನ್ನು ಹೊಂದಿರಬಹುದು, ಹಾಗಾಗಿ ಕಾಣಿಸುವುದಿಲ್ಲ. ಆದಾಗ್ಯೂ, IR೪ ಚಾನೆಲ್‌ (೧೦.೩-೧೧.೫ µm) ಮತ್ತು ಹತ್ತಿರದ ಅವಗೆಂಪು ಚಾನೆಲ್ (೧.೫೮-೧.೬೪ µm) ಗಳ ಭಿನ್ನತೆಯನ್ನು ಬಳಸಿಕೊಂಡು ಕೆಳಗಿನ ಮೋಡದ ವ್ಯತ್ಯಾಸವನ್ನು ತೋರಿಸಬಹುದು ಮತ್ತು ಮಂಜು ಉಪಗ್ರಹ ಚಿತ್ರ ಉತ್ಪತ್ತಿಯಾಗುತ್ತದೆ. ಅತಿಗೆಂಪಿನ ಪ್ರಮುಖ ಅನುಕೂಲವೇನೆಂದರೆ ಹವಾಮಾನದ ನಿರಂತರ ಅನುಕ್ರಮವನ್ನು ಅಭ್ಯಸಿಸುವುದಕ್ಕೆ ಅನುಮತಿಸುವುದರ ಮೂಲಕ ಚಿತ್ರಗಳನ್ನು ರಾತ್ರಿಯಲ್ಲಿಯೂ ಉತ್ಪತ್ತಿ ಮಾಡಬಹುದು.

ಈ ಅವಗೆಂಪು ಚಿತ್ರಗಳು ಸಮುದ್ರ ಸುಳಿ ಅಥವಾ ಜಲಾವರ್ತಗಳನ್ನು ಚಿತ್ರಿಸಬಲ್ಲವು ಮತ್ತು ನೌಕಾ ಉದ್ಯಮಕ್ಕೆ ಉಪಯುಕ್ತವಾದ ಗಲ್ಫ್ ಸ್ಟ್ರೀಮ್‌ನಂತಹ ಹರಿವುಗಳನ್ನು ಭೂಪಟದಲ್ಲಿ ತೋರಿಸಬಲ್ಲವು. ಮೀನುಗಾರರು ಮತ್ತು ಕೃಷಿಕರು ಅವರ ಬೆಳೆಗಳನ್ನು ಹಿಮದಿಂದ ಅಥವಾ ಸಮುದ್ರದಿಂದ ರಕ್ಷಿಸಲು ನೆಲದ ಮತ್ತು ನೀರಿನ ಉಷ್ಣಾಂಶದ ಬಗ್ಗೆ ತಿಳಿಯಲು ಆಸಕ್ತರಾಗಿರುತ್ತಾರೆ. ಎಲ್ ನಿನೋ ವಿಷಯವನ್ನೂ ಕೂಡ ಕಾಣಬಹುದು. ಬಣ್ಣ ಅಂಕೀಕರಣ ತಂತ್ರಗಳನ್ನು ಬಳಸಿ, ಉದ್ದೇಶಿತ ಮಾಹಿತಿಯನ್ನು ಸುಲಭವಾದ ಕಂಡುಹಿಡಿಯಲು ಬೂದು ಛಾಯೆಯ ಉಷ್ಣಚಿತ್ರಗಳನ್ನು ಬಣ್ಣದ ಚಿತ್ರಗಳಾಗಿ ಬದಲಾಯಿಸಬಹುದು.

ವಾಯುಗುಣ ಶಾಸ್ತ್ರ

ಬದಲಾಯಿಸಿ

ವಾಯುಗುಣ ಶಾಸ್ತ್ರದ ಕಾರ್ಯಕ್ಷೇತ್ರದಲ್ಲಿ, ಭೂಮಿ ಮತ್ತು ವಾತಾವರಣದ ನಡುವೆ ಶಕ್ತಿಯ ವಿನಿಮಯದ ಒಟ್ಟಾರೆ ಗತಿಯನ್ನು ಕಂಡುಹಿಡಿಯುವುದಕ್ಕೆ ವಾತಾವರಣದ ಅವಗೆಂಪು ವಿಕಿರಣವನ್ನು ಪರಿವೀಕ್ಷಿಸಲಾಗುತ್ತದೆ. ಈ ಒಟ್ಟಾರೆ ಗತಿಗಳು ಭೂಮಿಯ ವಾಯುಗುಣದಲ್ಲಿನ ದೀರ್ಘಾವಧಿಯ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುತ್ತವೆ. ಇದು ಸೌರ ವಿಕಿರಣದ ಜೊತೆ ಜಾಗತಿಕ ಬಿಸಿಯೇರುವಿಕೆಯ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗುವ ಪ್ರಾಥಮಿಕ ಮಾನದಂಡಗಳಲ್ಲಿ ಒಂದಾಗಿದೆ.

ಈ ವಿಭಾಗದ ಸಂಶೋಧನೆಗೆ ಅವಿರತ ಹೊರಾಂಗಣ ಅಳತೆಗಳನ್ನು ಮಾಡಲು ಪೈರ್‌ಜಿಯೋಮಿಟರ್ ಅನ್ನು ಬಳಸಲಾಗುತ್ತದೆ. ಇದು ಸರಿಸುಮಾರು ೪.೫ µm ಮತ್ತು ೫೦ µm ಗಳ ನಡುವಿನ ಅವಗೆಂಪು ವಿಕಿರಣಕ್ಕೆ ಸೂಕ್ಷ್ಮಗ್ರಾಹಕತೆಯುಳ್ಳ ಒಂದು ವಿಶಾಲಪಟ್ಟಿಯ ಅವಗೆಂಪು ರೇಡಿಯೊಮಾಪಕವಾಗಿದೆ.

ಖಗೋಳಶಾಸ್ತ್ರ

ಬದಲಾಯಿಸಿ

ಖಗೋಳಶಾಸ್ತ್ರಜ್ಞರು ಕನ್ನಡಿಗಳು, ಮಸೂರಗಳು ಮತ್ತು ಘನ ಸ್ಥಿತಿಯ ಅಂಕೀಯ ಶೋಧಕಗಳು ಸೇರಿದಂತೆ ದೃಗ್ವಿಜ್ಞಾನ ಘಟಕಗಳನ್ನು ಬಳಸಿ ವಿದ್ಯುದ್ಕಾಂತೀಯ ವರ್ಣಪಟಲದ ಅವಗೆಂಪು ಭಾಗದಲ್ಲಿನ ವಸ್ತುಗಳನ್ನು ವೀಕ್ಷಿಸುತ್ತಾರೆ. ಈ ಕಾರಣಕ್ಕಾಗಿ ಇದನ್ನು ದೃಗ್ವಿಜ್ಞಾನ ಖಗೋಳಶಾಸ್ತ್ರದ ಭಾಗವಾಗಿ ವಿಭಾಗಿಸಲಾಗುತ್ತದೆ. ಒಂದು ಚಿತ್ರವನ್ನು ರೂಪಿಸಲು, ಅವಗೆಂಪು ದೂರದರ್ಶಕದ ಘಟಕಗಳನ್ನು ಬಿಸಿ ಮೂಲಗಳಿಂದ ಎಚ್ಚರಿಕೆಯಿಂದ ರಕ್ಷಿಸಬೇಕು ಮತ್ತು ಶೋಧಕಗಳನ್ನು ದ್ರವ ಹೀಲಿಯಂ ಬಳಸಿ ತಣ್ಣಗಾಗಿಸಲಾಗುತ್ತದೆ.

ಭೂಮಿ ಮೇಲೆ ಸ್ಥಾಪಿತವಾದ ಅವಗೆಂಪು ದೂರದರ್ಶಕಗಳ ಸೂಕ್ಷ್ಮಗ್ರಾಹಕತೆಯು ವಾತಾವರಣದಲ್ಲಿನ ನೀರಿನ ಆವಿಯಿಂದ ಗಮನಾರ್ಹವಾಗಿ ನಿರ್ಬಂಧಿತವಾಗಿರುತ್ತದೆ. ಅದು ಆಯ್ದ ವಾತಾವರಣದ ಕಿಟಕಿಗಳ ಹೊರಗಿನ ಪ್ರದೇಶದಿಂದ ಬರುವ ಅವಗೆಂಪು ವಿಕಿರಣದ ಒಂದು ಭಾಗವನ್ನು ಹೀರಿಕೊಳ್ಳುತ್ತದೆ. ಈ ಇತಿಮಿತಿಯನ್ನು ಒಂದು ಎತ್ತರದ ಪ್ರದೇಶದಲ್ಲಿ ದೂರದರ್ಶಕ ವೀಕ್ಷಣಾಲಯವನ್ನು ಸ್ಥಾಪಿಸುವುದರ ಮೂಲಕ ಭಾಗಶಃ ತಗ್ಗಿಸಬಹುದು ಅಥವಾ ದೂರದರ್ಶಕವನ್ನು ಒಂದು ಬಲೂನಿನ ಅಥವಾ ಒಂದು ವಿಮಾನದ ಜೊತೆಗೆ ತೆಗೆದುಕೊಂಡು ಹೋಗುವುದರ ಮೂಲಕ ತಗ್ಗಿಸಬಹುದು. ಅಂತರಿಕ್ಷ ದೂರದರ್ಶಕಗಳು ಈ ತೊಂದರೆಯನ್ನು ಅನುಭವಿಸುವುದಿಲ್ಲ, ಮತ್ತು ಆದ್ದರಿಂದ ಅವಗೆಂಪು ಖಗೋಳಶಾಸ್ತ್ರಕ್ಕೆ ಅಂತರಿಕ್ಷವು ಯೋಗ್ಯವಾಗಿದೆ ಎಂದು ತಿಳಿಯಲಾಗುತ್ತದೆ.

ವರ್ಣಪಟಲದ ಅವಗೆಂಪು ಭಾಗವು ಖಗೋಳಶಾಸ್ತ್ರಜ್ಞರಿಗೆ ಹಲವಾರು ಉಪಯೋಗಗಳನ್ನು ಹೊಂದಿದೆ. ನಮ್ಮ ಗೆಲೆಕ್ಸಿಯಲ್ಲಿನ ಅನಿಲ ಮತ್ತು ಧೂಳಿನ ಶೀತಲ, ಗಾಢ ಆಣ್ವಿಕ ಮೋಡಗಳು ಸ್ಥಾಪಿತವಾದ ನಕ್ಷತ್ರಗಳಿಂದ ವಿಕಿರಣಿಸಲ್ಪಟ್ಟಾಗ ಹೊರಸೂಸಲ್ಪಟ್ಟ ಶಾಖದಿಂದ ಹೊಳೆಯುತ್ತವೆ. ಆದಿನಕ್ಷತ್ರಗಳು ಗೋಚರ ಬೆಳಕನ್ನು ಹೊರಸೂಸಲು ಆರಂಭಿಸುವ ಮೊದಲು ಅವುಗಳನ್ನು ಪತ್ತೆಹಚ್ಚಲು ಅತಿಗೆಂಪನ್ನು ಬಳಸಬಹುದು. ನಕ್ಷತ್ರಗಳು ಅವುಗಳ ಶಕ್ತಿಯ ಒಂದು ಚಿಕ್ಕ ಭಾಗವನ್ನು ಅವಗೆಂಪು ವರ್ಣಪಟಲದಲ್ಲಿ ಹೊರಸೂಸುತ್ತವೆ. ಆದ್ದರಿಂದ ಹತ್ತಿರದಲ್ಲಿರುವ ಗ್ರಹಗಳಂತಹ ಶೀತಲ ವಸ್ತುಗಳನ್ನು ಬಹಳ ವೇಗವಾಗಿ ಪತ್ತೆಹಚ್ಚಬಹುದು. (ಗೋಚರ ಬೆಳಕಿನ ವರ್ಣಪಟಲದಲ್ಲಿ, ನಕ್ಷತ್ರದಿಂದ ಬರುವ ಪ್ರಜ್ವಲಿಸುವ ಬೆಳಕು ಒಂದು ಗ್ರಹದ ಪ್ರತಿಫಲಿತ ಬೆಳಕನ್ನು ಮಂಕಾಗಿಸುತ್ತದೆ.)

ಅವಗೆಂಪು ಬೆಳಕು ಸಕ್ರಿಯ ಗ್ಯಾಲಕ್ಸಿಗಳ ಮಧ್ಯ ಭಾಗವನ್ನು ವೀಕ್ಷಿಸಲೂ ಕೂಡ ಉಪಯುಕ್ತವಾಗಿದೆ. ಅವುಗಳು ಅನೇಕವೇಳೆ ಅನಿಲ ಮತ್ತು ಧೂಳುಗಳಲ್ಲಿ ಬಂಧಿತವಾಗಿರುತ್ತವೆ. ಹೆಚ್ಚು ಕೆಂಪುಸರಿತವುಳ್ಳ ಅತಿದೂರದ ಗ್ಯಾಲಕ್ಸಿಗಳು ದೀರ್ಘ ತರಂಗಾಂತರಗಳ ಕಡೆಗೆ ಸ್ಥಳಾಂತರಿಸಲ್ಪಟ್ಟ ಅವುಗಳ ವರ್ಣಪಟಲದ ತುದಿಯ ಭಾಗವನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ಅತಿಗೆಂಪಿನಲ್ಲಿ ಬಹು ವೇಗವಾಗಿ ವೀಕ್ಷಿಸಬಹುದು.[]

ಕಲೆಯ ಇತಿಹಾಸ

ಬದಲಾಯಿಸಿ
 
ಜಾನ್‌ ವಾನ್‌ ಐಕೆಯ, ಲಂಡನ್ನಿನಲ್ಲಿರುವ ರಾಷ್ಟ್ರೀಯ ಗ್ಯಾಲರಿಯ ಆರ್ನೊಲ್‌ಫಿನಿಯ ಚಿತ್ರ.

ಚಿತ್ರದ ಕೆಳಗಿನ ಪದರವನ್ನು ತೋರಿಸಲು, ವಿಶೇಷವಾಗಿ ಕಲಾವಿದರು ಮಾರ್ಗದರ್ಶನಕ್ಕಾಗಿ ಬಿಡಿಸುವ ಅಂಡರ್‌ಡ್ರಾಯಿಂಗ್ ಅಥವಾ ಹೊರಗೆರೆಯನ್ನು ತೋರಿಸಲು, ಕಲಾ ಇತಿಹಾಸಕಾರರು ಅವಗೆಂಪು ರಿಫ್ಲೆಕ್ಟೋಗ್ರಾಮ್‌ಗಳು ಎಂದು ಕರೆಯಲ್ಪಡುವ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ.[೨೧] ಇದು ರಿಫ್ಲೆಕ್ಟೊಗ್ರಾಮ್‍ಗಳಲ್ಲಿ ಕಾರ್ಬನ್ ಮಸಿಯನ್ನು ಉಪಯೋಗಿಸಿದಾಗ ಚೆನ್ನಾಗಿ ಕಂಡುಬರುತ್ತದೆ. ಪೂರ್ಣ ವರ್ಣಚಿತ್ರದ ಕೆಳಗಿರುವ ನೆಲದಲ್ಲಿ ಇದನ್ನು ಉಪಯೋಗಿಸದಿರುವವರೆಗೆ ಇದು ಉಪಯುಕ್ತ. ಕಲಾ ಇತಿಹಾಸಕಾರರು ಚಿತ್ರದ ಪದರದಿಂದ ಅಂಡರ್‌ಡ್ರಾಯಿಂಗ್- ಅಥವಾ ಪದರದ ಮಧ್ಯದಲ್ಲಿ ವ್ಯತ್ಯಾಸ ಕಂಡುಬಂದದ್ದನ್ನು ನೋಡಿದರೆ -ಅಂತಹ ಮಾರ್ಪಾಡುಗಳನ್ನು ಮೂಲ ಕಲಾವಿದನು ಮಾಡಿದ ಪೆಂಟಿಮೆಂಟಿ ಎಂದು ಕರೆಯುತ್ತಾರೆ. ಇದು ಮೂಲ ಕಲಾವಿದನ ಮುಖ್ಯ ಆವೃತ್ತಿಯೋ ಅಥವಾ ನಕಲೋ, ಮತ್ತು ಹೆಚ್ಚು-ಕುತೂಹಲದಿಂದ ಪುನಃಸ್ಥಾಪನೆ ಮಾಡಿದ ಮಾರ್ಪಾಡಾದ ಕೃತಿಯೋ ಎಂದು ನಿರ್ಧರಿಸಲು ಉಪಯುಕ್ತ ಮಾಹಿತಿಯಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಪೆಂಟಿಮೆಂಟಿ ಇದ್ದರೆ, ವರ್ಣಚಿತ್ರಗಳು ಮೂಲ ರೂಪದ್ದೇ ಆಗಿರುವ ಸಾಧ್ಯತೆ ಹೆಚ್ಚು. ಕಾರ್ಯಾಭ್ಯಾಸಗಳಲ್ಲಿ ಇದು ಉಪಯುಕ್ತ ಒಳನೋಟಗಳನ್ನೂ ನೀಡುತ್ತದೆ.[೨೨]

೧೪೩೪ ರ ಆರ್ನೊಲ್ಫಿನಿ ಪೋರ್ಟ್ರೆಟ್‍ನ ಇಂತಹ ಹಲವಾರು ಬದಲಾವಣೆಗಳ ಪೈಕಿ, ಅವನ ಕಣ್ಣಿನ ಎತ್ತರಕ್ಕಿಂತ ಅವನ ಮುಖ ಎತ್ತರದಲ್ಲಿತ್ತು, ಅವಳ ಕಣ್ಣು ಹೆಚ್ಚು ಮುಂದಕ್ಕೆ ನೋಡುತ್ತಿತ್ತು. ಅವನ ಪ್ರತಿಯೊಂದು ಪಾದವನ್ನು ಒಂದು ಸ್ಥಾನದಲ್ಲಿ ಅಂಡರ್‌ಡ್ರಾ ಮಾಡಲಾಗಿತ್ತು, ಬೇರೆಯದರಲ್ಲಿ ಬಣ್ಣ ಬಳಿಯಲಾಗಿತ್ತು, ಮತ್ತು ಮೂರನೇಯದರಲ್ಲಿ ಪುನಃ ಬಣ್ಣ ಬಳಿಯಲಾಗಿತ್ತು. ಈ ಬದಲಾವಣೆಗಳು ಅವಗೆಂಪು ರಿಫ್ಲೆಕ್ಟೋಗ್ರಾಮ್‌ಗಳಲ್ಲಿ ಕಂಡುಬರುತ್ತವೆ.[೨೩]

ಇತಿಹಾಸಕಾರರು ಬೇರೆ ಬೇರೆ ವಿಧಗಳ ವಸ್ತುಗಳ ಮೇಲೆ ಅತಿಗೆಂಪಿನ ಉಪಯೋಗ ಮಾಡಿದ್ದಾರೆ. ಮುಖ್ಯವಾಗಿ ಡೆಡ್ ಸೀ ಸ್ಕ್ರಾಲ್ಸ್, ರೋಮನ್ ಕೃತಿ ವಿಲ್ಲಾ ಆಫ್ ದ ಪ್ಯಾಪಿರಿಯಲ್ಲಿ, ಮತ್ತು ದನ್‌ಹಾಂಗ್ ಗವಿಗಳಲ್ಲಿ ಪತ್ತೆಯಾದ ಸಿಲ್ಕ್ ರೋಡ್ ಪಠ್ಯಗಳಂತಹ ಹಳೆಯ ಲಿಖಿತ ದಾಖಲೆಗಳಲ್ಲಿ ಬಳಸಿದ್ದಾರೆ.[೨೪] ಶಾಯಿಯಲ್ಲಿ ಕಾರ್ಬನ್ ಮಸಿ ಬಳಸಿದಾಗ ಇನ್ನೂ ಚೆನ್ನಾಗಿ ಕಂಡುಬರುತ್ತದೆ.

ಜೈವಿಕ ವ್ಯವಸ್ಥೆಗಳು

ಬದಲಾಯಿಸಿ
 
ಇಲಿಯನ್ನು ಹಾವು ತಿನ್ನುವ ಉಷ್ಣಲೇಖನ ಚಿತ್ರ
 
ಹಣ್ಣುಬಾವಲಿಯ ಉಷ್ಣಲೇಖನ ಚಿತ್ರ.

ಕುಳಿಮೂತಿ ಹಾವು ತನ್ನ ತಲೆಯ ಮೇಲೆ ಒಂದು ಜೊತೆ ಅವಗೆಂಪು ಸಂವೇದನಾವಾಹಕ ಕುಳಿಗಳನ್ನು ಹೊಂದಿದೆ. ಈ ಜೈವಿಕ ಅವಗೆಂಪು ಪತ್ತೆ ವ್ಯವಸ್ಥೆಯ ನಿಖರವಾದ ಉಷ್ಣ ಸೂಕ್ಷ್ಮಗ್ರಾಹಕತೆ ಬಗ್ಗೆ ಅನಿಶ್ಚಿತತೆಯಿದೆ.[೨೫][೨೬]

ಉಷ್ಣಗ್ರಾಹಿ ಅಂಗ ಹೊಂದಿರುವ ಇತರ ಪ್ರಾಣಿಗಳೆಂದರೆ ಹೆಬ್ಬಾವುಗಳು (ಪೈನಾನಿಡೆ ಕುಟುಂಬ), ಕೆಲವು ಬೋವಾಗಳು (ಬೈಯೊಡೆ ಕುಟುಂಬ), ಸಾಮಾನ್ಯ ರಕ್ತ ಹೀರುವ ಬಾವಲಿ (ಡೆಸ್ಮೊಡಾಸ್ ರೊಟಾಂಡಸ್), ಜೀರ್ ದುಂಬಿಗಳ ಒಂದು ವಿಧ (ಮೆಲಾನೊಪಿಲಾ ಆಕ್ಯುಮಿನೆಟಾ ),[೨೭] ಕಪ್ಪು ವರ್ಣದ್ರವ್ಯ ಹೊಂದಿರುವ ಚಿಟ್ಟೆಗಳು (ಪ್ಯಾ‍ಚಿಲೊಪ್ಟಾ ಅರಿಸ್ಟೋಲೋಕಿಯೀ ಮತ್ತು ಟ್ರಾಯ್ಡೆಸ್ ರಡಾಮ್ಯಾಂಟಸ್ ಪ್ಲಟೇನಿ), ಮತ್ತು ಸಂಭಾವ್ಯವಾಗಿ ರಕ್ತ ಹೀರುವ ತಿಗಣೆಗಳು (ಟ್ರೈಯಾಟೋಮಾ ಇನ್‌ಫೆಸ್ಟಾನ್ಸ್ ).[೨೮]

ಫೋಟೊಬಯೊಮಾಡ್ಯುಲೇಷನ್

ಬದಲಾಯಿಸಿ

ಸಮೀಪ ಅವಗೆಂಪು ಬೆಳಕು, ಅಥವಾ ಫೋಟೊಬಯೊಮಾಡ್ಯುಲೇಷನ್ ಅನ್ನು, ಕೀಮೊಥೆರಪಿ ಚಿಕಿತ್ಸೆಯಿಂದ ಉಂಟಾದ ಬಾಯಿ ಹುಣ್ಣು ಮತ್ತು ಗಾಯ ವಾಸಿ ಮಾಡಲು ಬಳಸಲಾಗುತ್ತದೆ. ಹರ್ಪಿಸ್ ವೈರಸ್ ವಿರುದ್ಧ ಚಿಕಿತ್ಸೆಯಲ್ಲೂ ಕೆಲವು ಸಂಬಂಧಿತ ಕೆಲಸಗಳಿವೆ.[೨೯] ಸಂಶೋಧನಾ ಪರಿಯೋಜನೆಗಳು ಸೈಟೊಕ್ರೋಮ್ ಸಿ ಆಕ್ಸಿಡೇಸ್ ಅಪ್‌ರೆಗ್ಯುಲೇಶನ್ ಮತ್ತು ಇತರ ಸಂಭಾವ್ಯ ಕಾರ್ಯರೀತಿಗಳ ಮೂಲಕ ಕೇಂದ್ರ ನರಮಂಡಲದ ವಾಸಿಮಾಡುವಿಕೆ ಪರಿಣಾಮಗಳ ಮೇಲೆ ಕಾರ್ಯಪ್ರವೃತ್ತವಾಗಿವೆ.

ವೈದ್ಯಕೀಯ ಉಪಯೋಗಗಳು

ಬದಲಾಯಿಸಿ

ಆಧುನಿಕ ವೈದ್ಯಶಾಸ್ತ್ರದಲ್ಲಿ ಈ ರಶ್ಮಿಪುಂಜವನ್ನು ಉಳುಕಿದ ಅಥವಾ ಹೊರಳಿದ ಮಾಂಸಖಂಡಗಳ ಮತ್ತು ನರಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದಕ್ಕಾಗಿ ವಿಶೇಷ ದೀಪಗಳ ರಚನೆಯಾಗಿದೆ. ಲೇಜ಼ರ್ ಉಪಕರಣದಿಂದ ಈ ರಶ್ಮಿಪುಂಜವನ್ನು ತೀವ್ರವಾದ ಹಾಗೂ ಪ್ರಬಲ ಕಿರಣವನ್ನಾಗಿ ಪರಿವರ್ತಿಸಬಹುದು. ರಕ್ತ ವಿಕಿರಣವನ್ನು ಶಸ್ತ್ರಕ್ರಿಯೆಗಳಲ್ಲಿ ಉಪಯೋಗಿಸಿ ಪರಿವರ್ತಿಸಬಹುದು. ಇಂಥ ಕಿರಣವನ್ನು ಶಸ್ತ್ರಕ್ರಿಯೆಗಳಲ್ಲಿ ಉಪಯೋಗಿಸಿ ಅಪಾಯಕಾರಿಯಾದ ದುರ್ಮಾಂಸದಿಂದ ದೇಹದ ಇತರ ಪ್ರದೇಶಗಳ ಆರೋಗ್ಯಯುತವಾದ ಅವಯವಗಳಿಗೆ ಯಾವ ಕುಂದೂ ಆಗದಂತೆ ಕತ್ತರಿಸಿ ಹಾಕಬಹುದು.

ಆರೋಗ್ಯ ಹಾನಿ

ಬದಲಾಯಿಸಿ

ಕೆಲವು ಕೈಗಾರಿಕೆಗಳಲ್ಲಿನ ಪ್ರಬಲ ಅವಗೆಂಪು ವಿಕಿರಣದಿಂದ ಉಂಟಾದ ಅತಿ ಉಷ್ಣವು ಕಣ್ಣುಗಳ ಮತ್ತು ದೃಷ್ಟಿಯ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು, ಏಕೆಂದರೆ ವಿಕಿರಣವು ಅಗೋಚರವಾಗಿದೆ. ಅಂತಹ ಸ್ಥಳಗಳಲ್ಲಿ ವಿಶಿಷ್ಟವಾದ ಐಆರ್ ನಿರೋಧಕ ಕನ್ನಡಕವನ್ನು ರಕ್ಷಣೆಯಾಗಿ ಬಳಸಬೇಕು.[೩೦]

ಅವಗೆಂಪು ಉತ್ಸರ್ಜಕವಾಗಿ ಭೂಮಿ

ಬದಲಾಯಿಸಿ
 
ಹಸಿರುಮನೆ ಪರಿಣಾಮವನ್ನು ವಿವರವಾಗಿ ತೊರಿಸುವ ಚಿತ್ರ.

ಭೂಮಿಯ ಮೇಲ್ಮೈ ಮತ್ತು ಮೋಡಗಳು ಸೂರ್ಯನಿಂದ ಬರುವ ಗೋಚರ ಮತ್ತು ಅಗೋಚರ ವಿಕಿರಣಗಳನ್ನು ಹೀರಿಕೊಂಡು ಹೆಚ್ಚಿನ ಶಕ್ತಿಯನ್ನು ಅವಗೆಂಪು ರೂಪದಲ್ಲಿ ಪುನಃ ಉತ್ಸರ್ಜಿಸಿ ಮತ್ತೆ ವಾತಾವರಣಕ್ಕೆ ಹಿಂದಿರುಗಿಸುತ್ತವೆ. ವಾತಾವರಣದಲ್ಲಿನ ವಿಶಿಷ್ಟವಾದ ವಸ್ತುಗಳು, ಮುಖ್ಯವಾಗಿ ಮೋಡದ ಸಣ್ಣಹನಿಗಳು ಮತ್ತು ನೀರಿನ ಆವಿ, ಜೊತೆಗೆ ಕಾರ್ಬನ್ ಡೈಯಾಕ್ಸೈಡ್, ಮೀಥೇನ್, ನೈಟ್ರೆಸ್ ಆಕ್ಸೈಡ್, ಸಲ್ಫರ್ ಹೆಕ್ಸಾಫ್ಲೋರೈಡ್,ಮತ್ತು ಕ್ಲೋರೋಫ್ಲೂರೋಕಾರ್ಬನ್‌ಗಳು ಕೂಡ,[೩೧] ಅತಿಗೆಂಪನ್ನು ಹೀರಿಕೊಂಡು ಇದನ್ನು ಭೂಮಿಯನ್ನು ಒಳಗೊಂಡಂತೆ ಎಲ್ಲಾ ದಿಕ್ಕುಗಳಲ್ಲೂ ಪುನಃ ಪ್ರಸರಿಸುತ್ತವೆ. ಅವಗೆಂಪು ಹೀರುಗಗಳು ವಾತಾವರಣದಲ್ಲಿ ಇರದಿದ್ದ ಸಂದರ್ಭಕ್ಕೆ ಹೋಲಿಸಿದರೆ ಹಸಿರುಮನೆ ಪರಿಣಾಮವು ವಾತಾವರಣ ಮತ್ತು ಮೇಲ್ಮೈಯಲ್ಲಿ ಹೆಚ್ಚಿನ ಉಷ್ಣತೆ ಉಂಟುಮಾಡುತ್ತದೆ.[೩೨]

ಅವಗೆಂಪು ವಿಜ್ಞಾನದ ಇತಿಹಾಸ

ಬದಲಾಯಿಸಿ

ಹತ್ತೊಂಬತ್ತನೇಯ ಶತಮಾನದ ಮೊದಲಲ್ಲಿ ವಿಲಿಯಂ ಹರ್ಶೆಲ್‌ ಎಂಬ ಖಗೋಳವಿಜ್ಞಾನಿ ಅವಗೆಂಪು ವಿಕಿರಣವನ್ನು ಸಂಶೋಧಿಸಿದರು. ೧೮೦೦ ರಲ್ಲಿ ಹರ್ಶೆಲ್‌‍ ತನ್ನ ಫಲಿತಾಂಶವನ್ನು ರಾಯಲ್ ಸೊಸೈಟಿ ಆಫ್ ಲಂಡನ್‍ನಲ್ಲಿ ಮೊದಲಿಗೆ ಪ್ರಕಟಿಸಿದನು. ಹರ್ಷೆಲ್‌ ಸೂರ್ಯನಿಂದ ಬೆಳಕಿನ ಕಿರಣವನ್ನು ಪಟ್ಟಕದ ಮೂಲಕ ವಕ್ರೀಭವಿಸುವಂತೆ ಮಾಡಿ ಅವಗೆಂಪು ಕಂಡುಹಿಡಿದನು, ರೋಹಿತದಿಂದ ಹೊರಬಂದ ಕೆಂಪು ಭಾಗ, ತಾಪಮಾನದಲ್ಲಿ ಹೆಚ್ಚಿದ್ದುದನ್ನು ಉಷ್ಣಮಾಪಕದ ಮೇಲೆ ದಾಖಲು ಮಾಡಲಾಯಿತು. ಫಲಿತಾಂಶವನ್ನು ನೋಡಿ ಆಶ್ಚರ್ಯ ಪಟ್ಟನು ಮತ್ತು ಇವನ್ನು "ಕರೊಲಿಫಿಕ್ ರೇಸ್" ಎಂದು ಕರೆದನು. ಬಿಳಿ ಬೆಳಕಿನ ರೋಹಿತದಲ್ಲಿ ನೀಲಿಯಿಂದ ರಕ್ತ ಬಣ್ಣದವರೆಗೂ ವಿವಿಧ ವರ್ಣಗಳು ಕಾಣಿಸುತ್ತವೆ. ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅವಗೆಂಪುವಿಕಿರಣಗಳು (ಇನ್‍ಫ್ರಾರೆಡ್ ರೇಡಿಯೇಷನ್) ಎಂದು ಕರೆದ. ”ಅವಗೆಂಪು" ಎನ್ನುವ ಶಬ್ದವು ಹತ್ತೊಂಬತ್ತನೇಯ ಶತಮಾನದವರೆಗೂ ಕಾಣಿಸಿಕೊಂಡಿರಲಿಲ್ಲ.[೩೩]

ಇತರ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:[೧೩]

  • ೧೮೩೫: ಮೆಕೆಡೊನಿಯೊ ಮೆಲ್ಲೊನಿ ಮೊದಲ ಥರ್ಮೊಪೈಲ್ ಐಆರ್ ಶೋಧಕವನ್ನು ತಯಾರಿಸಿದನು;
  • ೧೮೬೦ ಗುಸ್ತವ್ ಕಿರ್ಚಾಫ್‌ ಕೃಷ್ಣಕಾಯ ಸಿದ್ಧಾಂತವನ್ನು ಸೂತ್ರೀಕರಿಸಿದನು  ;
  • ೧೮೭೩: ವಿಲ್ಲೊಗ್ಬಿ ಸ್ಮಿತ್ ಸೆಲೇನಿಯಮ್‍ನ ದ್ಯುತಿವಾಹಕತೆನ್ನು ಕಂಡುಹಿಡಿದನು;
  • ೧೮೭೯: ಸ್ಟೇಫಾನ್-ಬೊಲ್ಟ್ಜ್‌ಮ್ಯಾನ್ ನಿಯಮವು ಕೃಷ್ಣಕಾಯದಿಂದ ಹೊರಬರುವ ಶಕ್ತಿಯು   ಗೆ ಅನುಗುಣವಾಗಿರುತ್ತದೆ ಎಂದು ಪ್ರಾಯೋಗಿಕವಾಗಿ ತೋರಿಸಿತು.
  • ೧೮೮೦ರ ದಶಕ ಮತ್ತು ೧೮೯೦ರ ದಶಕ: ಲಾರ್ಡ್ ರೇಲಿ ಮತ್ತು ವಿಲ್‌ಹೆಲ್ಮ್ ವೀನ್ ಇಬ್ಬರು ಸೇರಿ ಕೃಷ್ಣಕಾಯ ಸಮೀಕರಣದ ಭಾಗವನ್ನು ಪರಿಹರಿಸಿದರು, ಅದರೆ ಎರಡು ಪರಿಹಾರಗಳು ಅದರ ಉಪಯುಕ್ತ ವ್ಯಾಪ್ತಿಗಿಂತ ಹೊರಗೆ "ದೊಡ್ಡದು ಮಾಡಿದ" ಅಂದಾಜುಗಳಾಗಿದ್ದವು. ಈ ಸಮಸ್ಯೆಯನ್ನು "ಯುವಿ ದುರಂತ ಮತ್ತು ಅವಗೆಂಪು ದುರಂತ " ಎಂದು ಕರೆಯಲಾಗುತ್ತದೆ.
  • ೧೯೦೧: ಮ್ಯಾಕ್ಸ್ ಪ್ಲಾಂಕ್ ಕೃಷ್ಣಕಾಯ ಸಮೀಕರಣ ಮತ್ತು ಸಿದ್ಧಾಂತವನ್ನು ಪ್ರಕಟಿಸಿದನು. ಅವನು ಸಮ್ಮತಿಸಬಲ್ಲ ಶಕ್ತಿ ಪರಿವರ್ತನೆಗಳನ್ನು ಕ್ವಾಂಟೀಕರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದನು.
  • ೧೯೦೫: ಅಲ್ಬರ್ಟ್ ಐನ್‌ಸ್ಟೀನ್ ಫೋಟಾನ್ ಅನ್ನು ಕಂಡುಹಿಡಿಯಲು ದ್ಯುತಿವಿದ್ಯುತ್ ಪರಿಣಾಮದ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದನು. ವಿಲಿಯಂ ಕೊಬ್ಲೆಂಟ್ಜ್ ರೋಹಿತದರ್ಶನ ಮತ್ತು ರೇಡಿಯೊಮಾಪನದಲ್ಲಿಯೂ ಕೊಡುಗೆ ನೀಡಿದನು.
  • ೧೯೧೭: ಥಿಯೊಡೋರ್ ಕೇಸ್ ಥ್ಯಾಲಸ್ ಸಲ್ಫೈಡ್ ಶೋಧಕವನ್ನು ಅಭಿವೃದ್ಧಿಪಡಿಸಿದನು; ಮೊದಲ ಜಾಗತಿಕ ಯುದ್ಧದಲ್ಲಿ ಬ್ರಿಟಿಷರು ಮೊದಲ ಅವಗೆಂಪು ಸರ್ಚ್ ಮತ್ತು ಟ್ರ್ಯಾಕ್ ( ಐಆರ್‌ಎಸ್‌ಟಿ) ಅಭಿವೃದ್ಧಿಪಡಿಸಿದರು ಮತ್ತು ಒಂದು ಮೈಲಿ ವ್ಯಾಪ್ತಿಯಲ್ಲಿ ಬರುವ ವಿಮಾನವನ್ನು ಪತ್ತೆಹಚ್ಚಿದರು (೧.೬ ಕಿ.ಮೀ);
  • ೧೯೩೫: ಸೀಸದ ಲವಣಗಳು - ಎರಡನೆಯ ಜಾಗತಿಕ ಯುದ್ಧದಲ್ಲಿ ಮೊದಲ ಕ್ಷಿಪಣಿ ಮಾರ್ಗದರ್ಶಿ;
  • ೧೯೩೮: ಟಿಯು ಟಾ -ತಾಪವಿದ್ಯುತ್‍ ಪರಿಣಾಮವನ್ನು ಅವಗೆಂಪು ವಿಕಿರಣ ಕಂಡುಹಿಡಿಯಲು ಉಪಯೋಗಿಸಬಹುದೆಂದು ಪ್ರತಿಪಾದಿಸಿದನು.
  • ೧೯೪೫: ಜ಼ೀಲ್‍ಗೆರಾಟ್ 1229 "ವ್ಯಾಂಪೈರ್" ಅವಗೆಂಪು ಆಯುಧ ವ್ಯವಸ್ಥೆಯು ಪರಿಚಯಿಸಿಲ್ಪಟ್ಟಿತು, ಮಿಲಿಟರಿ ಉದ್ದೇಶಕ್ಕಾಗಿ ಉಪಯೋಗಿಸಿದ ಮೊದಲ ವ್ಯಕ್ತಿ ಸಾಗಿಸಬಲ್ಲ ಅವಗೆಂಪು ಸಲಕರಣೆ.
  • ೧೯೫೨: ಎಚ್. ವೆಲ್ಕರ್ InSb ಅನ್ನು ಸಂಶೋಧಿಸಿದನು;
  • ೧೯೫೦ರ ದಶಕ: ಪೌಲ್ ಕ್ರೂಸ್ (ಹನಿವೆಲ್‌ನಲ್ಲಿ) ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ೧೯೫೫ರ ಮೊದಲಿಗೆ ಅವಗೆಂಪು ಚಿತ್ರಗಳನ್ನು ರೂಪಿಸಿದವು;
  • ೧೯೫೦ರ ದಶಕ ಮತ್ತು ೧೯೬೦ರ ದಶಕ: ಅಭಿದಾನ ಮತ್ತು ರೇಡಿಯೋಮಾಪಕ ಘಟಕಗಳನ್ನು ಫ್ರೆಡ್ ನಿಕೊಡೇಮೆನಸ್, ಜಿ.ಜೆ. ಜಿಸ್ಸಿಸ್, ಮತ್ತು ಆರ್. ಕ್ಲಾರ್ಕ್ ವ್ಯಾಖ್ಯಾನಿಸಿದರು, ಜೋನ್ಸ್ ಡಿ * ಅನ್ನು ವಿವರಿಸಿದರು;
  • ೧೯೫೮: ಡಬ್ಲ್ಯೂ.ಡಿ ಲಾಸನ್ (ಮಾಲ್ವೆರ್‌ನಲ್ಲಿ ರಾಯಲ್ ರೇಡಾರ್ ಎಸ್ಟಾಬ್ಲಿಷ್ಮೆಂಟ್) HgCdTe ಯ ಐಆರ್ ಪತ್ತೆ ಗುಣಲಕ್ಷಣಗಳನ್ನು ಕಂಡುಹಿಡಿದರು;
  • ೧೯೫೮: ಫಾಲ್ಕನ್ ಮತ್ತು ಸೈಡ್‌ವಿಂಡರ್ ಅವಗೆಂಪು ಬಳಸಿ ಅಭಿವೃದ್ಧಿ ಪಡಿಸಿದ ಕ್ಷಿಪಣಿಗಳು ಮತ್ತು ಪೌಲ್ ಕ್ರೂಸ್ ಹಾಗೂ ಇತರರ ಅವಗೆಂಪು ಸಂವೇದಕಗಳ ಮೇಲೆ ಮೊದಲ ಪಠ್ಯಪುಸ್ತಕ ಪ್ರಕಟವಾಯಿತು.
  • ೧೯೬೧: ಜೆ. ಕೂಪರ್ ತಾಪವಿದ್ಯುತ್ ಪತ್ತೆಯನ್ನು ಪ್ರಸ್ತುತಪಡಿಸಿದರು;
  • ೧೯೬೨: ಕ್ರೂಸ್ ಮತ್ತು ? ರೋಡಾಟ್ HgCdTe ಯನ್ನು ಮುಂದುವರಿಸಿದರು; ಸಿಗ್ನಲ್ ಎಲೆಮೆಂಟ್ ಮತ್ತು ರೇಖಾತ್ಮಕ ವ್ಯೂಹಗಳು ಲಭ್ಯವಾದವು;
  • ೧೯೬೫: ಮೊದಲ ಐಆರ್ ಹ್ಯಾಂಡ್‌ಬುಕ್; ಮೊದಲ ವಾಣಿಜ್ಯ ಇಮೇಜರ್‌ಗಳು (ಬಾರ್ನ್ಸ್, ಅಜೆಮಾ (ಈಗ ಎಫ್‌ಎಲ್‌ಐಆರ್ ಸಿಸ್ಟಮ್ಸ್ ಇನ್ಕ್ ನ ಭಾಗವಾಗಿದೆ.) ರಿಚರ್ಡ್ ಹಡ್ಸನ್‌ರ ಬಹುಮುಖ್ಯ ಪುಸ್ತಕ; ಹ್ಯೂಸ್‍ರಿಂದ ಎಫ್೪ ಟಿಆರ್‌ಎ‌ಎಮ್ ಎಫ್‌ಎಲ್‌ಐಆರ್; ಫ್ರೆಡ್ ಸಿಮನ್ಸ್ ಮತ್ತು ಎ.ಟಿ.ಸ್ಟೇರ್ ಇವರುಗಳು ಫಿನಾಮಿನೊಲಾಜಿಯ ಆದ್ಯಪ್ರವರ್ತಕರಾದರು; ಯು.ಎಸ್ ಸೈನ್ಯದ ರಾತ್ರಿ ದರ್ಶನ ಪ್ರಯೋಗಾಲಯದ ರಚನೆಯಾಯಿತು (ಈಗ ರಾತ್ರಿ ದರ್ಶನ ಮತ್ತು ಇಲೆಕ್ಟ್ರಾನಿಕ್ ಸಂವೇದಕ ನಿರ್ದೇಶನಾಲಯ (ಎನ್‌ವಿಇಎಸ್‌ಡಿ) ಎಂದು ಕರೆಯಲ್ಪಡುತ್ತದೆ ಮತ್ತು ಅಲ್ಲಿ ರ್‍ಯಾಚೆಟ್ಸ್‌‍ ಪತ್ತೆ, ಗುರುತಿಸುವಿಕೆ ಮಾಡೆಲಿಂಗ್ ಅನ್ನು ಅಭಿವೃದ್ಧಿಪಡಿಸಿತು.
  • ೧೯೭೦: ವಿಲಾರ್ಡ್ ಬಾಯ್ಲ್ ಮತ್ತು ಜಾರ್ಜ್ ಇ.ಸ್ಮಿತ್ ಅವರು ಸಿಸಿಡಿಯನ್ನು ಬೆಲ್‌ಲ್ಯಾಬ್‌ನಲ್ಲಿ ಪಿಚ್ಛರ್ ಫೋನ್‌ಗಾಗಿ ಬಳಸಿದರು.
  • ೧೯೭೨: ಕಾಮನ್ ಮಾಡ್ಯುಲ್ ಪ್ರೋಗ್ರಾಮ್‍ನ್ನು ಎನ್‌ವಿಇಎಸ್‌ಡಿ ಪ್ರಾರಂಭಿಸಿತು;
  • ೧೯೭೮: ಅವಗೆಂಪು ಛಾಯಾಚಿತ್ರ ಖಗೋಳಶಾಸ್ತ್ರವು ಹಲವು ವರ್ಷಗಳನ್ನು ದಾಟಿಕೊಂಡು ಬಂದಿದೆ. ಮೌನಾ ಕೀನ IRTFನಲ್ಲಿ ವೀಕ್ಷಣಾಲಯಗಳನ್ನು ಸ್ಥಾಪಿಸಲಾಯಿತು. ೩೨X೩೨ ಮತ್ತು ೬೪X೬೪ ಅಳತೆಯ ವ್ಯೂಹಗಳನ್ನು InSb, HgCdTe ಮತ್ತು ಇತರ ವಸ್ತುಗಳಲ್ಲಿ ರಚಿಸಲಾಯಿತು.

ಆಕರಗಳು

ಬದಲಾಯಿಸಿ
  1. Dr. S. C. Liew. "Electromagnetic Waves". Centre for Remote Imaging, Sensing and Processing. Retrieved 2006-10-27.
  2. * Browne, Michael (2013). Physics for Engineering and Science, p427 (2nd ed.). McGraw Hill/Schaum, New York. ISBN 978-0-07-161399-6.; p319: "For historical reasons, different portions of the EM spectrum are given different names, although they are all the same kind of thing. Visible light constitutes a narrow range of the spectrum, from wavelengths of about 400-800 nm.... ;p 320 "An electromagnetic wave carries forward momentum... If the radiation is absorbed by a surface, the momentum drops to zero and a force is exerted on the surface... Thus the radiation pressure of an electromagnetic wave is (formula)."
  3. "Reference Solar Spectral Irradiance: Air Mass 1.5". Retrieved 2009-11-12.
  4. ೪.೦ ೪.೧ "IR Astronomy: Overview". NASA Infrared Astronomy and Processing Center. Archived from the original on 2006-12-08. Retrieved 2006-10-30.
  5. Reusch, William (1999). "Infrared Spectroscopy". Michigan State University. Archived from the original on 2007-10-27. Retrieved 2006-10-27.
  6. "Langley's Bolometer, 1880-1890". Science Museum Group. Retrieved 20 March 2022.
  7. See, for example, bolometers – Definition from the Merriam-Webster Online Dictionary
  8. https://circuitglobe.com/bolometer.html
  9. Solar Cells. chemistryexplained.com
  10. Henderson, Roy. "Wavelength considerations". Instituts für Umform- und Hochleistungs. Archived from the original on 2007-10-28. Retrieved 2007-10-18.
  11. Byrnes, James (2009). Unexploded Ordnance Detection and Mitigation. Springer. pp. 21–22. ISBN 9781402092527.
  12. IPAC Staff. "Near, Mid and Far-Infrared". NASA ipac. Archived from the original on 2012-05-29. Retrieved 2007-04-04.
  13. ೧೩.೦ ೧೩.೧ Miller, Principles of Infrared Technology (Van Nostrand Reinhold, 1992), and Miller and Friedman, Photonic Rules of Thumb, 2004. ISBN 9780442012106[page needed]
  14. Ramaswami, Rajiv (2002). "Optical Fiber Communication: From Transmission to Networking" (PDF). IEEE. Retrieved 2006-10-18. {{cite web}}: Unknown parameter |month= ignored (help)
  15. "Introduction to Solar Energy". Passive Solar Heating & Cooling Manual. Rodale Press, Inc. 1980. Archived from the original (DOC) on 2009-03-18. Retrieved 2007-08-12.
  16. McCreary, Jeremy (October 30, 2004). "Infrared (IR) basics for digital photographers-capturing the unseen (Sidebar: Black Body Radiation)". Digital Photography For What It's Worth. Archived from the original on 2008-12-18. Retrieved 2006-11-07.
  17. ೧೭.೦ ೧೭.೧ ೧೭.೨ "How Night Vision Works". American Technologies Network Corporation. Retrieved 2007-08-12.
  18. Bryant, Lynn (2007-06-11). "How does thermal imaging work? A closer look at what is behind this remarkable technology". Archived from the original on 2007-07-28. Retrieved 2007-08-12.
  19. Mahulikar, S.P., Sonawane, H.R., & Rao, G.A.: (2007) "Infrared signature studies of aerospace vehicles", Progress in Aerospace Sciences, v. 43(7-8), pp. 218-245.
  20. https://encyclopedia.1914-1918-online.net/article/communication_technology
  21. "IR Reflectography for Non-destructive Analysis of Underdrawings in Art Objects". Sensors Unlimited, Inc. Archived from the original on 2008-12-08. Retrieved 2009-02-20.
  22. "The Mass of Saint Gregory: Examining a Painting Using Infrared Reflectography". The Cleveland Museum of Art. Archived from the original on 2009-01-13. Retrieved 2009-02-20.
  23. National Gallery Catalogues: The Fifteenth Century Netherlandish Paintings by Lorne Campbell, 1998, ISBN 185709171[page needed]
  24. International Dunhuang Project An Introduction to digital infrared photography and its application within IDP -paper pdf 6.4 MB
  25. B. S. Jones; W. F. Lynn; M. O. Stone (2001). "Thermal Modeling of Snake Infrared Reception: Evidence for Limited Detection Range". Journal of Theoretical Biology. 209 (2): 201–211. doi:10.1006/jtbi.2000.2256.{{cite journal}}: CS1 maint: multiple names: authors list (link)
  26. V. Gorbunov; N. Fuchigami; M. Stone; M. Grace; V. V. Tsukruk (2002). "Biological Thermal Detection: Micromechanical and Microthermal Properties of Biological Infrared Receptors". Biomacromolecules. 3 (1): 106–115. doi:10.1021/bm015591f.{{cite journal}}: CS1 maint: multiple names: authors list (link)
  27. Evans, W.G. (1966). "Infrared receptors in Melanophila acuminata De Geer". Nature. 202: 211. doi:10.1038/202211a0.
  28. A.L. Campbell, A.L. Naik, L. Sowards, M.O. Stone (2002). "Biological infrared imaging and sensing". Micrometre. 33 (2): 211–225. doi:10.1016/S0968-4328(01)00010-5.{{cite journal}}: CS1 maint: multiple names: authors list (link)
  29. Hargate G. A randomised double-blind study comparing the effect of 1072-nm light against placebo for the treatment of herpes labialis. Clin Exp Dermatol. 2006 Sep;31(5):638-41.PMID 16780494
  30. https://books.google.com/books?id=E7-9unTgJrwC&pg=PA33&lpg=PA33&dq=ಇನ್‌ಫ್ರಾ‌ರೆಡ್‌+protective+goggles
  31. "Global Sources of Greenhouse Gases". Emissions of Greenhouse Gases in the United States 2000. Energy Information Administration. 2002-05-02. Archived from the original on 2012-08-01. Retrieved 2007-08-13.
  32. "Clouds & Radiation". Retrieved 2007-08-12.
  33. "Herschel Discovers Infrared Light". Archived from the original on 2012-02-25. Retrieved 2010-06-17.

ಬಾಹ್ಯ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅವಗೆಂಪು&oldid=1259268" ಇಂದ ಪಡೆಯಲ್ಪಟ್ಟಿದೆ