ಪ್ಲಾಸ್ಟಿಕ್ ಎಂದರೆ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ದೊರೆಯುವ ಅಥವಾ ಕೃತಕವಾಗಿ ತಯಾರಿಸಿರುವ ಮತ್ತು ಶಾಖಪ್ರಯೋಗದಿಂದ ಮೆದುವಾಗಿ ಅಚ್ಚು ಹೊಯ್ಯಲು ಒದಗುವ ಮೆದುಪದಾರ್ಥ. ಇವನ್ನು ರಾಳ, ಮರವಜ್ರ ಎಂದೂ ಕರೆಯವುದುಂಟು. ಕೆಲವು ಸೂಕ್ಷ್ಮಾಣುಗಳು ತಮ್ಮೊಳಗೆ ಸಂಯೋಗಹೊಂದಿ ದೈತ್ಯಾಣುಗಳಾಗುತ್ತವೆ. ಈ ಪ್ರಕ್ರಿಯೆಗೆ ಪಾಲಿಮರೀಕರಣವೆಂದು ಹೆಸರು. ಇದರಲ್ಲಿಯ ಮೂಲಾಣುಗಳಿಗೆ ಮಾನೋಮರುಗಳೆಂದೂ ಫಲಿತ ದೈತ್ಯಾಣುವಿಗೆ ಪಾಲಿಮರೆಂದೂ ಹೆಸರು. ಪಾಲಿಮರುಗಳು ಉದ್ದ ಆಕಾರದ ಸರಪಣಿ ಮಾದರಿಯ ಅಣುಗಳು. ರಾಸಾಯನಿಕ ಬಂಧಗಳು ಈ ಸರಪಣಿ ಅಣುಗಳನ್ನು ಒಂದಕ್ಕೊಂದು ಬಂಧಿಸುತ್ತವೆ. ಈ ಬಂಧಗಳಿಗೆ ಅಡ್ಡಕೊಂಡಿಗಳೆಂದು ಹೆಸರು. ಪಾಲಿಮರುಗಳ ಗುಣಗಳು ವಿಶೇಷವಾಗಿ ಅವುಗಳ ಅಣುರಚನೆಯನ್ನು ಅವಲಂಬಿಸಿವೆ. ಇವು ಬಹುತೇಕ ಅಗ್ರ್ಯಾನಿಕ್ ವಸ್ತುಗಳು. ಹಲವು ಇನಾಗ್ರ್ಯಾನಿಕ್ ಪ್ಲಾಸ್ಟಿಕ್ಕುಗಳೂ ಇವೆ. ಕೆಲವು ಲೋಹದ ಮತ್ತು ಎಲ್ಲ ಮರದ ಪೀಠೋಪಕರಣಗಳಿಗೆ ಬದಲಾಗಿ ಇವನ್ನು ಉಪಯೋಗಿಸಬಹುದು. ಬಹುಶಃ ಮಾನವ ಮೊದಲು ತಯಾರಿಸಿದ ಪ್ಲಾಸ್ಟಿಕ್ ಎಂದರೆ ಸೆಲ್ಯೂಲಾಯಿಡ್. ಈ ಶತಮಾನದ ಪ್ರಾರಂಭದಿಂದಲೂ ಉಪಯೋಗದಲ್ಲಿರುವ ಮತ್ತೊಂದು ಪ್ಲಾಸ್ಟಿಕ್ ಎಂದರೆ ಬೇಕಲೈಟ್.

ಪ್ಲಾಸ್ಟಿಕ್‍ನಿಂದ ತಯಾರಿಸಿದ ಗೃಹೋಪಯೋಗಿ ವಸ್ತುಗಳು

ವರ್ಗೀಕರಣ

ಬದಲಾಯಿಸಿ

ಪ್ಲಾಸ್ಟಿಕ್ಕುಗಳನ್ನು ಅವುಗಳ ಗುಣಕ್ಕೆ ಅನುಸಾರವಾಗಿ ಥರ್ಮೊ ಪ್ಲಾಸ್ಟಿಕ್ಕುಗಳು, ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು, ಎಲಾಸ್ಟೊಮರುಗಳು ಎಂಬುದಾಗಿ ವಿಂಗಡಿಸಬಹುದು. ಶಾಖಕ್ಕೆ ಮೆದುವಾಗುವ, ಅಚ್ಚುಹೊಯ್ದ ಬಳಿಕ ಗಡುಸಾಗುವ, ಪುನಃ ಶಾಖಕ್ಕೆ ಮೆದುವಾಗಿ ಅಚ್ಚುಹೊಯ್ಯಲು ಯೋಗ್ಯವಾಗುವ ಗುಣವಿರವವು ಥರ್ಮೊಪ್ಲಾಸ್ಟಿಕ್ಕುಗಳು. ಉತ್ತತ್ತಿ ಸ್ಥಿತಿಯಲ್ಲಿ ಮೆದುವಾಗಿದ್ದು ಅಚ್ಚುಹೊಯ್ದ ತರುವಾಯ ಪುನಃ ಮೆದುವಾಗದ, ಗಡಸು ಪ್ಲಾಸ್ಟಿಕ್ಕುಗಳು ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು, ರಬ್ಬರಿನಂತೆ ಸ್ಥಿತಿಸ್ಥಾಪಕ ಗುಣವಿರುವವು ಎಲಾಸ್ಟೊಮರುಗಳು, ರಾಸಾಯನಿಕ ಕ್ರಿಯೆಯ ಮೂಲಕ ಅಚ್ಚು ಹೊಯ್ಯಬಹುದಾದಂಥವು ಕೆಮಿಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು, ಇವನ್ನು ಅತಿಕಡಿಮೆ ಉಷ್ಣತೆಯಲ್ಲಿ ಅಚ್ಚುಹೊಯ್ಯಬಹುದು. ಇವುಗಳ ಉತ್ಪತ್ತಿಯಲ್ಲಿ ಕಂಡುಬರುವ ರಾಸಾಯನಿಕ ಕ್ರಿಯೆಗಳಿಗೆ ಅನುಸಾರವಾಗಿಯೂ ಇವನ್ನು ವಿಂಗಡಿಸುವ ಪದ್ಧತಿ ಉಂಟು.

ಅಣುರಚನೆ ಮತ್ತು ಭೌತಗುಣಗಳು

ಬದಲಾಯಿಸಿ

ಪಾಲಿಮರುಗಳ ಭೌತಗುಣಗಳು ವಿಶೇಷವಾಗಿ ಅವುಗಳ ಅಣುರಚನೆಯನ್ನು ಅವಲಂಬಿಸಿವೆ. ಈ ಉದ್ದ ಸರಪಣಿ ಅಣುಗಳು ಸಮಾಂತರವಾಗಿರುವುವು. ಅಣುಗಳು ಭೌತ ಅಥವಾ ರಾಸಾಯನಿಕ ಶಕ್ತಿಗಳಿಂದ ಅಡ್ಡಕೊಂಡಿಯಂತೆ ಜೋಡಿಕೊಂಡಿರುತ್ತವೆ. ಅಡ್ಡಕೊಂಡಿಗಳೇ ಪಾಲಿಮರುಗಳ ಸ್ಥಿತಿಸ್ಥಾಪಕಗುಣಕ್ಕೆ ಕಾರಣ. ಇವು ಹೆಚ್ಚಿದಂತೆಲ್ಲ ಅಣುತೂಕವೂ ಹೆಚ್ಚುತ್ತದೆ. ಅಲ್ಲದೆ ಎರಡು ಅಣುಗಳ ನಡುವೆ ಪರಸ್ಪರ ಚಲನೆಗೆ ಅಡಚಣೆಯೂ ಉಂಟಾಗುತ್ತದೆ. ಇದರಿಂದ ಅವುಗಳ ದ್ರಾವ್ಯಶೀಲತೆ ಕಡಿಮೆಯಾಗಿ ದ್ರವನ ಬಿಂದು ಏರುತ್ತದೆ. ಆದಾಗ್ಯೂ ಈ ಪಾಲಿಮರುಗಳು ದ್ರಾವಕಗಳನ್ನು ಹೀರಿಕೊಂಡು ಉಬ್ಬುತ್ತವೆ. ಈ ಗುಣವಾದರೂ ಅಡ್ಡ ಕೊಂಡಿಗಳು ಹೆಚ್ಚಿದಂತೆಲ್ಲ ಕಡಿಮೆಯಾಗುತ್ತದೆ. ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳು ಈ ಗುಂಪಿನವು. ಥರ್ಮೊಪ್ಲಾಸ್ಟಿಕ್ ಮತ್ತು ಎಲಾಸ್ಟೊಮರುಗಳಲ್ಲಿ ಅಡ್ಡಕೊಂಡಿಗಳು ಅತಿವಿರಳ, ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್ಕುಗಳನ್ನು ಅತಿಕಡಿಮೆ ಅಣುತೂಕದ, ಅತಿವಿರಳಕೊಂಡಿಗಳಿರುವ ಪಾಲಿಮರ್ ಅಥವಾ ಎಲಾಸ್ಟೊಮರುಗಳಿಂದ ತಯಾರಿಸುವರು. ಇವು ಅರ್ಧತರಲಗಳು (ಸೆಮಿಫ್ಲೂಯಿಡ್ಸ್). ಇವನ್ನು ಕಾಸಿದಾಗ ಆ ಅಣುಗಳಲ್ಲಿ ಪರಮಾಣುಗಳು ಅಥವಾ ಪರಮಾಣು ತಂಡಗಳು ಪರಸ್ಪರ ಸ್ಥಾನವಿನ್ಯಾಸಹೊಂದಿ ದೈತ್ಯಾಣುಗಳಾಗುತ್ತವೆ. ಇವುಗಳಲ್ಲಿ ಅನೇಕ ಅಡ್ಡಕೊಂಡಿಗಳಿರುವುದರಿಂದ, ಇವು ದ್ರಾವ್ಯಶೀಲತೆ ಇಲ್ಲದ, ಸುಲಭವಾಗಿ ದ್ರವಿಸದ ಗಡಸು ಪ್ಲಾಸ್ಟಿಕ್ಕುಗಳಾಗುತ್ತವೆ. ಈ ಅಣುರಚನೆ ಪ್ಲಾಸ್ಟಿಕ್ಕುಗಳ ದ್ರವನ ಬಿಂದುವಿನ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತವೆ. ಅತಿ ಉದ್ದವಾದ ಅಣುಗಳಲ್ಲಿ -ಅಊ2 -ರಂಥ ಪರಮಾಣು ಪುಂಜಗಳು ಸಮಾಂಗೀಯವಾಗಿ (ಸಿಮೆಟ್ರಿಕಲ್) ಆಗಲಿ ಯಾದೃಚ್ಛಿಕವಾಗಿ (ರ್ಯಾಂಡಮ್) ಆಗಲಿ ರಚಿತವಾಗಿರಬಹುದು. ಸಮಾನತೆಯಿಂದ ಕೂಡಿದ ಅಣುಗಳ ಭಾಗ ಸ್ಫಟಿಕೀಯ ರಚನೆಯುಳ್ಳದ್ದು. ಉಳಿದ ಭಾಗಗಳು ಅಸ್ಫಟಿಕೀಯ (ಆಮಾರ್ಫಸ್) ರಚನೆಯದು. ನಿರ್ದಿಷ್ಟ ದ್ರವನ ಬಿಂದುವಿಗೆ ಕಾರಣ ಸ್ಫಟಿಕ ರಚನೆ. ಪಾಲಿಸ್ಟಿರೀನ್ ಪ್ಲಾಸ್ಟಿಕ್ಕಿನಲ್ಲಿ ಈ ಗುಣವನ್ನು ಚೆನ್ನಾಗಿ ಕಾಣಬಹುದು. ಈ ಅಣುವಿನ ಮನೋಮರಿನಲ್ಲಿ ಒಂದು ಫಿನೈಲ್ ಪುಂಜವಿದೆ. ಪಾಲಿಸ್ಪಿರೀನ್ ಪಾಲಿಮರಿನಲ್ಲಿ ಈ ಪುಂಜ ಗೊತ್ತು ಗುರಿ ಇಲ್ಲದೆ ಇದ್ದ ಪಕ್ಷದಲ್ಲಿ ಈ ಪ್ಲಾಸ್ಟಿಕ್ಕು 85°C ನಲ್ಲಿ ದ್ರವಿಸುತ್ತದೆ. ಈ ರಚನೆಗೆ ಅಟ್ಯಾಕ್ಟಿಕ್ ಎಂದು ಹೆಸರು. ಪುಂಜಗಳು ಅಣುವಿನ ಒಂದೇ ಪಕ್ಕದಲ್ಲಿ ಸಮಾನರೂಪತೆಯಲ್ಲಿದ್ದರೆ ಐಸೊಅಟಾಕ್ಟಿಕ್ ಎನ್ನುತ್ತಾರೆ. ಈ ಪ್ಲಾಸ್ಟಿಕ್ 250°C ನಲ್ಲಿ ದ್ರವಿಸುತ್ತದೆ. ಪುಂಜಗಳು ಅಣುವಿನ ಎರಡೂ ಪಕ್ಕಗಳಲ್ಲಿ ಸಮಾನ ರೂಪತೆಯಲ್ಲಿದ್ದರೆ ಸಿನ್ ಡೈಯೊಟ್ಯಾಕ್ಟಿಕ್ ಎನ್ನುತ್ತಾರೆ. ಪ್ಲಾಸ್ಟಿಕ್ಕನ್ನು ತಯಾರಿಸುವಾಗ ಈ ಗುಣವನ್ನು ಗಮನದಲ್ಲಿಟ್ಟು ಅನುಕೂಲವಾದ ಪ್ಲಾಸ್ಟಿಕ್ಕನ್ನು ತಯಾರಿಸುತ್ತಾರೆ.

ಅಸ್ಫಟಿಕ ಅಣುಗಳು: ಈ ರಚನೆಯುಳ್ಳ ಪ್ಲಾಸ್ಟಿಕ್ಕಿನ ಅಣುವಿನ ಯಾವ ಭಾಗದಲ್ಲೂ ಸ್ಫಟಿಕ ರಚನೆ ಕಾಣುವುದಿಲ್ಲ. ಎರಡು ಸರಪಣಿ ಅಣುಗಳ ಮಧ್ಯೆ ಇರವ ಬಂಧಶಕ್ತಿ ಕಡಿಮೆ. ಇಂಥ ಪ್ಲಾಸ್ಟಿಕ್ಕನ್ನು ಕಡಿಮೆ ಶಕ್ತಿಯಿಂದ ಹಿಗ್ಗಿಸಬಹುದು.

ಸ್ಫಟಿಕ ರೂಪದ ಪ್ಲಾಸ್ಟಿಕ್: ಸ್ಫಟಿಕ ಪ್ಲಾಸ್ಟಿಕ್ಕುಗಳಲ್ಲಿ ಎರಡು ವಿಧ. ಸಂಕೀರ್ಣ ಅಣುಗಳಲ್ಲಿ ಸ್ಫಟಿಕರಚಿತ ಭಾಗಗಳು ಗೊತ್ತುಗುರಿ ಇಲ್ಲದೆ ಇದ್ದರೆ ಅವುಗಳಿಗೆ ಪರಸ್ಪರ ಸ್ಥಾನ ವಿನ್ಯಾಸ ಹೊಂದದ ಅಣುಗಳೆನ್ನುತ್ತಾರೆ. ಪರಸ್ಪರ ಸ್ಥಾನ ವಿನ್ಯಾಸ ಹೊಂದಿದ ಅಣುಗಳು ವಿನ್ಯಾಸಿತ ಅಣುಗಳು. ಸ್ಫಟಿಕ ರೂಪದ ಪ್ಲಾಸ್ಟಿಕ್ಕುಗಳಿಗೆ ಕಡಿದು ದ್ರವನಬಿಂದು (ಶಾರ್ಪ್ ಮೆಲ್ಟಿಂಗ್ ಪಾಯಿಂಟ್) ಇದೆ. ಇದಕ್ಕೂ ಹೆಚ್ಚಿನ ಉಷúತೆಯಲ್ಲಿ ಇವು ಅಸ್ಫಟಿಕ. ಇವನ್ನು ಮತ್ತೆ ಮತ್ತೆ ಅಚ್ಚುಹೊಯ್ಯಬಹುದು. ಪರಸ್ಪರ ಸ್ಥಾನವಿನ್ಯಾಸ ಹೊಂದಿದ ಅಣುಗಳಿಗೆ ಅಧಿಕ ಹಿಗ್ಗು ಶಕ್ತಿ ಇರುತ್ತದೆ. ಸ್ಥಾನವಿನ್ಯಾಸ ಹೊಂದದ ಅಣುವನ್ನು ಅದರ ದ್ರವನಬಿಂದುವಿಗಿಂತ ಹೆಚ್ಚಿನ ಉಷúತೆಯಲ್ಲಿ ಸಮತಲದ ದಿಕ್ಕಿನಲ್ಲಿ ಒತ್ತಡಕ್ಕೆ ಒಳಪಡಿಸಿದರೆ ಅಣುಗಳು ಉದ್ದವಾಗಿ ಪರಸ್ಪರ ಸ್ಥಾನವಿನ್ಯಾಸ ಹೊಂದುತ್ತವೆ. ಈ ಅಣುಗಳು ಉತ್ತಮ ಕರ್ಷಕತ್ರಾಣ (ಟೆನ್ಸೈಲ್ ಸ್ಟ್ರೆಂತ್) ಉಳ್ಳವು. ಕೆಲವು ಪ್ಲಾಸ್ಟಿಕ್ಕುಗಳನ್ನು ಈ ಉಷ್ಣತೆಗೆ ಕಾಸಿದರೆ ಅಣುಗಳು ವಿರೂಪಗೊಂಡು ಅನೇಕ ಗುಣಗಳನ್ನು ಕಳೆದು ಕೊಳ್ಳುತ್ತವೆ. ಅಣುಗಳನ್ನು ಶೀತ ಎಳೆತದಿಂದ ಸ್ಥಾನವಿನ್ಯಾಸಗೊಳಿಸಬಹುದು. ಸಾಮಾನ್ಯವಾಗಿ ಅರ್ಲಾನ್ ಎನ್ನುವ ಪಾಲಿಅಕ್ರಿಲೊ ನೈಟ್ರೈಟ್ ಪ್ಲಾಸ್ಟಿಕ್ಕಿಗೆ ಈ ಗುಣವಿದೆ. ಅರ್ಲಾನನ್ನು ಒಂದು ದ್ರಾವಕದಲ್ಲಿ ವಿಲೀನಗೊಳಿಸಿ ಫಲಿತ ದ್ರಾವಣವನ್ನು ಸೂಕ್ಷ್ಮ ರಂಧ್ರಗಳ ಮೂಲಕ ಹೆಚ್ಚು ಉಷ್ಣತೆಯ ವಾತಾವರಣಕ್ಕೆ ಹಾಯಿಸುವರು. ಈ ಉಷ್ಣತೆಯಲ್ಲಿ ದ್ರಾವಕ ಅವಿಯಾಗಿ ಅರ್ಲಾನನ್ನು ಎಳೆಯ ರೂಪದಲ್ಲಿ ಬಿಡುವುದು. ಈ ಉಷ್ಣತೆ ಅದರ ಕುದಿಬಿಂದುವಿಗಿಂತ ಕಡಿಮೆ ಇರುವುದರಿಂದ ಅಣುಗಳು ವಿರೂಪಗೊಳ್ಳದೆ ಸಮತಲದಿಕ್ಕಿನ ಒತ್ತಡದಿಂದ ವಿನ್ಯಾಸ ಹೊಂದುತ್ತವೆ. ಹೀಗೆ ಅರ್ಲಾನಿಗೆ ಹೆಚ್ಚಿನಾಕರ್ಷಕ ತ್ರಾಣ ಉಂಟಾಗುತ್ತದೆ.

ಈ ಮೇಲಿನ ತತ್ತ್ವಗಳನ್ನು ಅನುಸರಿಸಿ ತಕ್ಕ ಕ್ರಿಯೆಗಳಿಂದ ಮಾನವ ತನ್ನ ಉಪಯೋಗಕ್ಕೆ ತಕ್ಕ ನೂರಾರು ಪ್ಲಾಸ್ಟಿಕ್ಕುಗಳನ್ನು ತಯಾರಿಸಿದ್ದಾನೆ. ಅವುಗಳ ಪೈಕಿ ಜನಸಾಮಾನ್ಯವಾದ ಕೆಲವನ್ನು ಇಲ್ಲಿ ಉದಾಹರಿಸಿವೆ.

ಉದಾಹರಣೆಗಳು

ಬದಲಾಯಿಸಿ

ಸೆಲ್ಯೂಲಾಯಿಡ್: ಇದು ಸುಮಾರಾಗಿ ಹತ್ತೊಂಬತ್ತನೆಯ ಶತಮಾನದ ಮಧ್ಯದಿಂದ ಉಪಯೋಗದಲ್ಲಿದೆ. ಸೆಲ್ಯುಲೋಸ್ ಎಂಬುದು ಮರ ಮತ್ತು ಹತ್ತಿಯಲ್ಲಿ ಇರುವ ಒಂದು ಪದಾರ್ಥ. ಇದರಿಂದಲೇ ಕಾಗದವನ್ನು ತಯಾರಿಸುವುದಾಗಿದೆ. ಸಾರ ಸಲ್ಫ್ಯೂರಿಕ್ ಮತ್ತು ನೈಟ್ರಿಕ್ ಆಮ್ಲಗಳೊಡನೆ ಸೆಲ್ಯುಲೋಸ್ ಕ್ರಿಯೆ ಹೊಂದಿ ಸೆಲ್ಯುಲೋಸ್ ನೈಟ್ರೇಟ್ ಮತ್ತು ಪೈರಾಕ್ಸಿಲಿನ್ ದೊರೆಯುತ್ತವೆ. ಪೈರಾಕ್ಸಿಲೀನನ್ನು ಈಥರ್-ಇಥನಾಲ್ ಮಿಶ್ರಣದಲ್ಲಿ ವಿಲೀನಿಸಿದಾಗ ಕಲೋಡೈ ಆನ್ ದೊರೆಯುತ್ತದೆ. ಇದರಿಂದ ಸೆಲ್ಯೂಲಾಯಿಡನ್ನು ತಯಾರಿಸುತ್ತಾರೆ. ಪಿಂಗ್ ಪಾಂಗ್ ಚಂಡುಗಳನ್ನೂ ಗೊಂಬೆಗಳನ್ನೂ ಸೆಲ್ಯೂಲಾಯಿಡಿನಿಂದ ತಯಾರಿಸುತ್ತಿದ್ದರು. ಈ ಆಟಿಕೆಗಳಿಗೆ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವುದರಿಂದ ಈಚೆಗೆ ಇವುಗಳ ಬಳಕೆ ಇಲ್ಲ. ಬೇಕಲೈಟ್: ಇದನ್ನು ತಯಾರಿಸಿದ (1907) ವ್ಯಕ್ತಿ ಎಲ್. ಎಚ್. ಬೇಕಲೆಂಡ್ ಎಂಬಾತ. ಎಂದೇ ಈ ಹೆಸರು. ಫಿನಾಲ್ ಮತ್ತು ಫಾರ್ಮಾಲ್ಡಿಹೈಡುಗಳು ಒಂದು ಪ್ರತ್ಯಾಮ್ಲಗುಣದ ವೇಗವರ್ಧಕದ ಸಹಾಯದಿಂದ ಸಂಯೋಗಿಸಿ ಈ ಪ್ಲಾಸ್ಟಿಕ್ಕನ್ನು ಕೊಡುತ್ತವೆ. ಬೇರೆ ಬೇರೆ ಅಲ್ಡಿಹೈಡುಗಳೊಡನೆ ವಿಧವಿಧ ಬೇಕಲೈಟುಗಳನ್ನು ಪಡೆಯಬಹುದು. ಇವು ಗಡುಸಾದ ವಿದ್ಯುದ್ವಾಹಕಗಳು. ವಿದ್ಯುದುಪಕರಣ, ಸಾಬೂನು ಡಬ್ಬಿ, ಬಾಚಣಿಗೆ ಮುಂತಾದವುಗಳ ತಯಾರಿಕೆಯಲ್ಲಿ ಇದರ ಉಪಯೋಗ ಹೇರಳ.

ಪಾಲಿಥೀನ್: ಈಗ ಬಳಕೆಯಲ್ಲಿರುವ ಪ್ಲಾಸ್ಟಿಕ್ಕುಗಳ ಪೈಕಿ ಇದು ಪ್ರಮುಖವಾದದ್ದು. ಎಥಿಲೀನ್ ಅನಿಲವನ್ನು ಆಕ್ಸಿಜನ್ ವೇಗವರ್ಧಕದೊಡನೆ ಹೆಚ್ಚು ಒತ್ತಡದಲ್ಲಿ ಕಾಸಿದರೆ ಅದರ ಅಣುಗಳು ಪಾಲಿಮರೀಕರಿಸಿ ಪಾಲಿಎಥಿಲೀನ್ ಅಥವಾ ಪಾಲಿಥೀನ್ ಲಭಿಸುತ್ತದೆ:

ಇದು ಅನೇಕ ಕಾರ್ಬನ್ ಪರಮಾಣುಗಳುಳ್ಳ ಅತಿ ದೊಡ್ಡ ಸರಪಣಿ ಅಣು. ಕೆಲವು ವೇಳೆ ಈ ಅಣುವಿಗೆ ಅಕ್ಕಪಕ್ಕ ಸಣ್ಣ ಕೊಂಬೆಗಳಂತಿರುವ ಪರಮಾಣು ಗುಂಪುಗಳಿರುತ್ತವೆ. ಈ ಪಕ್ಕ ಕೊಂಬೆಗಳಿರುವ ಫಾಲಿಥೀನುಗಳು ತೀರ ಕಡಿಮೆ ಉಷ್ಣತೆಯಲ್ಲಿ ದ್ರವಿಸುತ್ತವೆ (ಔ(ಅ). ಇವನ್ನು ಕಾರ್ಲ್ ಜೀಗ್ಲರನ ವಿಧಾನದಿಂದ ಕೋಪಾಲಿಮರೀಕರಿಸಿದರೆ 100°C ಗಿಂತ ಹೆಚ್ಚಿನ ಉಷ್ಣಯಲ್ಲಿ ದ್ರವಿಸುತ್ತವೆ; ಮತ್ತು ಈ ವಿಧಾನದಿಂದ ಪಾಲಿಥೀನನ್ನು ಕಡಿಮೆ ಒತ್ತಡ ಮತ್ತು ಉಷ್ಣತೆಗಳಲ್ಲಿ ಪಡೆಯಬಹುದು. ಇವು ಅಗ್ಗದ ರಬ್ಬರಿನಂಥ ಗುಣವುಳ್ಳ ಪ್ಲಾಸ್ಟಿಕ್ಕುಗಳು. ಆಮ್ಲ ಪ್ರತ್ಯಾಮ್ಲಗಳೊಡನೆ ವರ್ತಿಸುವುದಿಲ್ಲ. ಇವನ್ನು ಪ್ರಯೋಗಶಾಲೆಯ ಉಪಕರಣಗಳು ಕೊಳವೆಗಳು ಫಿಲ್ಮುಗಳು ಪ್ಯಾಕಿಂಗ್ ವಸ್ತುಗಳು ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಪಾಲಿಸ್ಟಿರೀನ್: ಎಥಿಲೀನ್ ಮತ್ತು ಫಿನಾಲುಗಳ ಕೋಪಾಲಿಮರೀಕರಣದಿಂದ ಈ ಪ್ಲಾಸ್ಟಿಕ್ ಆಗುತ್ತದೆ, ಇದು 85(ಅ ನಲ್ಲಿ ದ್ರವಿಸುವ ಆಟ್ಯಾಕ್ಟಿಕ್ ಪ್ಲಾಸ್ಟಿಕ್. ಕೋ ಆರ್ಡಿನೇಷನ್ ಪಾಲಿಮರೀಕರಣದಿಂದ ಐಸೊಅಟ್ಯಾಕ್ಟಿಕ್ ಪಾಲಿಸ್ಟಿರೀನ್ ದೊರೆಯುತ್ತದೆ. ಇದರ ದ್ರವನಬಿಂದು 250°C ಇದನ್ನು ಅಚ್ಚು ಹೊಯ್ಯಬಹುದು. ಬುರುಗುರಬ್ಬರುಗಳಲ್ಲಿ (ಫೋಮ್ ರಬ್ಬರ್) ಇದರ ಉಪಯೋಗ ಹೇರಳ.

ಲ್ಯೂಸೈಟ್ ಮತ್ತು ಪ್ಲೆಕ್ಸಿಗ್ಲಾಸ್: ಅಪರ್ಯಾಸ್ತ ಎಸ್ಟರುಗಳಿಂದ ತಯಾರಿಸಿದ ಪ್ಲಾಸ್ಟಿಕ್. ಮೀಥೈಲ್ ಅಕ್ರಿಲೇಟ್ ಪಾಲಿಮರೀಕರಣದಿಂದ ತಯಾರಾಗುತ್ತದೆ. ಇದಕ್ಕೆ ಉತ್ತಮ ಅಂಟುಗುಣ ಉಂಟು. ಪಾರಕ. ಆದ್ದರಿಂದ ಇದನ್ನು ನುಚ್ಚುನೂರಾಗದ ಗಾಜಿನ ತಯಾರಿಯಲ್ಲಿ ಉಪಯೋಗಿಸುತ್ತಾರೆ. ಕೃತಕ ಹಲ್ಲುಗಳು, ವಾಹನಗಳ ಕಿಟಕಿಗಾಜು, ಕನ್ನಡಕ ಮುಂತಾದವುಗಳ ತಯಾರಿಕೆಯಲ್ಲಿ ಇವುಗಳ ಬಳಕೆ ಉಂಟು, ಇದೇ ಜಾತಿಯ ಮತ್ತೊಂದು ಪ್ಲಾಸ್ಟಿಕ್ ಪಾಲಿವಿನೈಲ್ ಬ್ಯೂಟರಾಲ್. ಇದು ಬಲು ಜಿಗಟು. ಇದನ್ನು ಪದರು ರೂಪದ ಸಂರಕ್ಷಣಾ ಗಾಜಿನಲ್ಲಿ ಬಳಸುತ್ತಾರೆ.

ಐಫ್ಲಾನ್, ಡಕ್ರಾನ್, ಟೆರಿಲೀನ್ : ಟೆಟ್ರಾಫ್ಲೂರೊ ಎಥಿಲಿನ್ ಪಾಲಿಮರೈಸ್ ಆಗಿ ಸಿಗುವ ಪ್ಲಾಸ್ಟಿಕ್ಕೇ ಟಫ್ಲಾನ್ (ಪಾಲಿಥೀನಿನೊಡನೆ ಹೋಲಿಸಿ): ಟಿ (ಅಈ2 = ಅಈ2 )((-ಅಈ2 - ಅಈ2 -) ಟಿ

ಕೆಲವು ಪಾಲಿಮದ್ಯಸಾರಗಳು ಪಾಲಿ ಬೇಸಿಕ್ ಆಮ್ಲಗಳೊಡನೆ ಪಾಲಿಎಸ್ಟರುಗಳನ್ನು ಕೊಡುತ್ತವೆ. ಇವು ಪಾಲಿಮರೀಕರಿಸಿದಾಗ ಸಿಗುವ ಪ್ಲಾಸ್ಟಿಕ್ಕುಗಳು ಡಕ್ರಾನ್ ಮತ್ತು ಟೆರಿಲೀನ್, ಇವನ್ನು ಎಥಿಲೀನ್ ಗ್ಲೈಕಾಲ್ ಮತ್ತು ಮೀಥೈಲ್ ಟೆಟ್ರಪ್ಥಾಲೇಟುಗಳ ಸಂಯೋಗದಿಂದ ತಯಾರಿಸಬಹುದು. ಇದನ್ನು ದಿನಬಳಕೆಯಲ್ಲಿರುವ ನೂಲು ಮತ್ತು ನೇಯ್ದ ವಸ್ತ್ರಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ರೇಯಾನ್ ಕೃತಕ ರೇಷ್ಮೆ: ಇದನ್ನು ಹತ್ತಿ ಮತ್ತು ಕಾಗದಗಳಲ್ಲಿರುವ ಸೆಲ್ಯೂಲೋಸಿನಿಂದ ಪಡೆಯುವರು. ಚೆನ್ನಾಗಿ ಅರೆದ ಹತ್ತಿ ಅಥವಾ ಕಾಗದವನ್ನು ಮೊದಲು ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಚೆನ್ನಾಗಿ ತೊಳೆದು ಅನಂತರ ದ್ರವ ಕಾರ್ಬನ್ ಡೈಸಲ್ಫೈಡಿನಲ್ಲಿ ಚೆನ್ನಾಗಿ ನೆನೆಸಬೇಕು. ಆಗ ಜಿಗಟು ಶ್ಯಾನ ಮಾದರಿಯ ಸೆಲ್ಯೂಲೋಸ್ ಕ್ಸಾಂಥೈಟ್ ದ್ರಾವಣ ದೊರೆಯುತ್ತದೆ. ಇದನ್ನು ಸಣ್ಣ ರಂಧ್ರಗಳ ಮೂಲಕ ಆಮ್ಲದ್ರಾವಣದಲ್ಲಿ ಹರಿಸಿದಾಗ ಎಳೆಮಾದರಿಯ ವಿಸ್‍ಕೋಸ್ ರೇಯಾನ್ ಕೃತಕರೇಷ್ಮೆ ದೊರೆಯುತ್ತದೆ. ಇದೇ ರೀತಿಯಲ್ಲಿ ಸೆಲ್ಯೂಲೋಸನ್ನು ಅಸಿಟಿಕ್ ಆಮ್ಲದೊಡನೆ ವರ್ತಿಸಿದಾಗ ಸೆಲ್ಯೂಲೋಸ್ ರೇಯಾನ್ ದೊರೆಯುತ್ತದೆ. ಈ ಪ್ಲಾಸ್ಟಿಕ್ಕುಗಳನ್ನು ನೂಲುವಸ್ತ್ರ, ಫೋಟೋಗ್ರಫಿಫಿಲ್ಮುಗಳಲ್ಲಿ ಉಪಯೋಗಿಸುತ್ತಾರೆ.

ನೈಲಾನ್: ಪೂರ್ಣ ಸಂಶ್ಲೇಷಣೆಯಿಂದಲೇ ತಯಾರಿಸಿದ ಪ್ರಥಮ ಪ್ಲಾಸ್ಟಿಕ್. ಹೆಕ್ಸಮೆಥಿಲೀನ್ ಡೈಅಮೈನ್ ಮತ್ತು ಅಡಿಪಿಕ್ ಆಮ್ಲಗಳನ್ನು 280°C ಉಷ್ಣತೆಗೆ ಕಾಸಿದಾಗ ಅವು ನೀರಿನ ಅಣುಗಳನ್ನು ಕಳೆದುಕೊಂಡು ನೈಲಾನ್ 66 ಎಂಬ ಪಾಲಿಮರ್ ಆಗುತ್ತದೆ. ಈ ಸಂಖ್ಯೆ 66ಕ್ಕೆ ಬಹಳ ಮಹತ್ತ್ವವಿದೆ. ಮೊದಲಿನ 6 ಅಮೈನಿನಲ್ಲಿರುವ ಕಾರ್ಬನ್ ಪರಮಾಣುಗಳ ಸಂಖ್ಯೆಯನ್ನೂ ಎರಡನೆಯ 6 ಆಮ್ಲದಲ್ಲಿರುವ ಕಾರ್ಬನ್ ಪರಮಾಣುಗಳ ಸಂಖ್ಯೆಯನ್ನೂ ಸೂಚಿಸುತ್ತವೆ. 10 ಕಾರ್ಬನ್ ಪರಮಾಣುಗಳುಳ್ಳ ಸೈಬಾಸಿಕ್ ಆಮ್ಲವನ್ನು ಉಪಯೋಗಿಸಿದಾಗ ದೊರೆಯುವುದು ನೈಲಾನ್ 610, ಹೀಗೆ 6 ಕಾರ್ಬನ್ ಪರಮಾಣುಗಳುಳ್ಳ ( - ಕಾಪ್ರೋಲಾಕ್ಟಮ್ ಅಣುಗಳ ಪಾಲಿಮರೀಕರಣದಿಂದ (ಇದರಲ್ಲಿ ಬೇರೆ ಅಣುಗಳಿಲ್ಲ) ದೊರಕುವುದು ನೈಲಾನ್ 6. ಈ ಪ್ಲಾಸ್ಟಿಕನ್ನು ನೂಲು ಬಟ್ಟೆಗಳು, ಹಗ್ಗಗಳು, ಮತ್ತು ರಬ್ಬರ್ ಚಕ್ರಗಳ ಒಳಗೆ ಉಪಯೋಗಿಸುವ ರಜ್ಜುಗಳಿಗೆ ಬಳಸುತ್ತಾರೆ.

ಸಿಲಿಕೋನ್: ಇನಾಗ್ರ್ಯಾನಿಕ್ ಪ್ಲಾಸ್ಟಿಕ್ಕುಗಳು. ಕಾರ್ಬನ್ ಗುಣವುಳ್ಳ ಸಿಲಿಕಾನ್ ಧಾತು ಕೂಡ ಉದ್ದನೆಯ ಸರಪಣಿ ಅಣುಗಳನ್ನು ರಚಿಸಿಕೊಳ್ಳುತ್ತದೆ. ಈ ಸರಪಣಿ ಅಣುಗಳಲ್ಲಿ-ಅಊ3,ಅ2,ಊ5 ಮಾದರಿಯ ಕೊಂಬೆಗಳಿರಬಹುದು. ಇಂಥ ಪಾಲಿಮರ್ ಅಣುಗಳಿಗೆ ಸಿಲಿಕೋನುಗಳೆಂದು ಹೆಸರು.

ಇಲ್ಲಿ ಖ=ಅಊ3 ಅಥವಾ ಅ2ಊ5 ಇತ್ಯಾದಿ ಈ ಅಣುಗಳು ಕೆಲವು ವೇಳೆ ಅಡ್ಡ ಕೊಂಡಿಯ ಬಂಧನಕ್ಕೆ ಒಳಪಟ್ಟಿರುತ್ತವೆ. ಅಣುವಿನ ಉದ್ದ, ಖ ಪರಮಾಣು ಗುಂಪುಗಳು ಮತ್ತು ಅಡ್ಡಕೊಂಬೆ ಇವನ್ನು ಅವಲಂಬಿಸಿ ಈ ಪಾಲಿಮರುಗಳು ದ್ರವ, ಶ್ಯಾನ, ತರಲ ಮತ್ತು ರಬ್ಬರಿನಂಥ ಘನ ರೂಪಗಳನ್ನು ಪಡೆಯಬಹುದು. ಇವು ರಾಸಾಯನಿಕ ದೃಷ್ಟಿಯಿಂದ ಜಡವಸ್ತುಗಳು. ಅತಿಕಡಿಮೆ ಉಷ್ಣತೆಯಲ್ಲೂ -40°C ಇವು ತಮ್ಮ ಶ್ಯಾನತೆಯನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ ಇವನ್ನು ಅತಿಶೀತ ಯಂತ್ರಗಳಲ್ಲಿ ಜಾರುವಂತೆ ಮಾಡಲು, ಅಂದರೆ ಸ್ನೇಹಕವಾಗಿ, ಉಪಯೋಗಿಸಬಹುದು.

ಸ್ವಾಭಾವಿಕ ಪ್ಲಾಸ್ಟಿಕ್ಕುಗಳು: ರಬ್ಬರ್ ರಾಳ (ಮರವಜ್ರ) ರೇಷ್ಮೆ ಮೊದಲಾದವು ಪ್ರಕೃತಿಯಿಂದ ಸ್ವಾಭಾವಿಕ ಪ್ಲಾಸ್ಟಿಕ್ಕುಗಳು.

ಉಳಿದ ಪ್ಲಾಸ್ಟಿಕ್ಕುಗಳು: ನೂರಾರು ಬಗೆಯ ಪ್ಲಾಸ್ಟಿಕ್ಕುಗಳು ಬಳಕೆಯಲ್ಲಿವೆ. ಅವನ್ನು ತಯಾರಿಸುವ ಕಂಪನಿ, ಉಪಯೋಗ, ವಿಜ್ಞಾನಿಯ ಹೆಸರು ಮುಂತಾದವನ್ನು ಗಮನಿಸಿ ಅವುಗಳಿಗೆ ಹೆಸರಿಟ್ಟಿದ್ದಾರೆ : ಬೈಗಾನ್, ಮಿನಿಲೈಟ್ ಅರಾಲ್‍ಡೈಟ್ ಸೆಲೆಕ್ಟ್ರಾನ್, ಡೊನೆಕ್ಸ್, ಮೈಕಾಲೆಕ್ಸ್ ಇತ್ಯಾದಿ.

ನಿರ್ವಹಣೆ

ಬದಲಾಯಿಸಿ

ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಜೈವಿಕ ಹಾಗೂ ಪ್ಲಾಸ್ಟಿಕ್ ಗಳನ್ನು ಬೇರೆ ಬೇರೆ ತ್ಯಾಜ್ಯವಾಗಿ ಸಂಗ್ರಹಿಸುವುದು, ಘನ ತ್ಯಾಜ್ಯದ ಸೂಕ್ತ ವಿಲೇವಾರಿ, ಪ್ಲಾಸ್ಟಿಕನ್ನು ಸುಡದಿರುವುದು, ನೀರಿಗೆ ಎಸೆಯದಿರುವುದು, ಸಂಘ ಸಂಸ್ಥೆಗಳ ಸಹಾಯದಿಂದ ಹೂಳುವಿಕೆ, ಪ್ಲಾಸ್ಟಿಕ್ ಫ್ಯಾಕ್ಟರಿಗಳಿಗೆ ರವಾನೆ, ಮರುಬಳಕೆಯ- ಉಪ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನ, ಇವು ಕೆಲವು ಉಪಾಯಗಳು. ಎಲ್ಲ ನಗರಸಭೆಗಳು, ಪುರಸಭೆಗಳಲ್ಲಿ ಇದನ್ನು ಅಳವಡಿಸಬೇಕು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: