ಅತಿನೇರಳೆ ವಿಕಿರಣ

[ಸೂಕ್ತ ಉಲ್ಲೇಖನ ಬೇಕು]

ಓಝೋನ್ ಅತಿನೇರಳೆ ವಿಕಿರಣದ ರೇಖಾನಕ್ಷೆ

ಅತಿನೇರಳೆ ಕಿರಣಗಳು (UV Ray) ದೃಷ್ಟಿಗೆ ಗೋಚರಿಸುವ ಬೆಳಕಿಗಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುತ್ತವೆ. ಈ ಕಿರಣಗಳ ತರಂಗಾಂತರವು ದೃಶ್ಯ ತರಂಗಗಳಿಗಿಂತ ಕಡಿಮೆಯಿದ್ದು ಕ್ಷ-ಕಿರಣಗಳಿಗಿಂತ ಹೆಚ್ಚಿದ್ದು 400nmರಿಂದ 10nmರ ವ್ಯಾಪ್ತಿಯಲ್ಲಿರುತ್ತದೆ. ಇವುಗಳ ಆವೃತ್ತಿಯು ಮನುಷ್ಯರು ನೇರಳೆ ಎಂದು ಗುರುತಿಸುವ ತರಂಗಗಳಿಗಿಂತ ಹೆಚ್ಚಿರುವುದರಿಂದ ಇವುಗಳಿಗೆ ಅತಿನೇರಳೆ ಎಂಬ ಹೆಸರು ಬಂದಿದೆ. ಇವು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಹಲವು ಕೀಟಗಳು ಮತ್ತು ಪಕ್ಷಿಗಳಿಗೆ ಈ ಕಿರಣಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ. ಸೂರ್ಯನ ವರ್ಣಪಟಲದಲ್ಲಿ ಇವುಗಳ ಇರುವಿಕೆಯನ್ನು ಗುರುತಿಸಲಾಗಿದೆ. ವಿದ್ಯುತ್ ಕಂಸಗಳು, ಪಾದರಸದ ದೀಪಗಳು ಹಾಗೂ ಅತಿನೇರಳೆ ದೀಪಗಳು ಅತಿನೇರಳೆ ಕಿರಣಗಳನ್ನು ಹೊರಸೂಸುತ್ತವೆ.ಈ ವಿಕಿರಣಗಳನ್ನು ಹಲವಾರು ರಾಸಾಯನ ಕ್ರಿಯೆಗಳಲ್ಲಿ ಬಳಸಿಕೊಳ್ಳುತ್ತಾರೆ. ಇವು ಕೆಲವು ವಸ್ತುಗಳನ್ನು ಬೆಳಗುವಂತೆ ಮಾಡುತ್ತವೆ. ಸೂರ್ಯನಿಂದ ಭೂಮಿಯನ್ನು ತಲುಪುವ ಹೆಚ್ಚಿನ ಅತಿನೇರಳೆ ಕಿರಣಗಳು ಅಯಾನೀಕರಣ ಮಾಡದಂತಹ ಕಿರಣಗಳು. ಅಯಾನೀಕರಣ ಮಾಡುವ ಕಿರಣಗಳು 120nmರಿಂದ 10nmರವರೆಗೆ ತರಂಗಾಂತರವನ್ನು ಹೊಂದಿದ್ದು ಉತ್ಕಟ ಅತಿನೇರಳೆ ಕಿರಣಗಳೆಂದು ಕರೆಯಲ್ಪಡುತ್ತವೆ. ಈ ರೀತಿಯ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ ಸಾರಜನಕ ಮತ್ತು ಆಮ್ಲಜನಕದಿಂದ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಭೂಮಿಯನ್ನು ತಲುಪುವ ಸಾಧ್ಯತೆ ಕಡಿಮೆ.