ಬ್ಯಾಕ್ಟೀರಿಯ ಬೀಜಕಣವಿಲ್ಲದ ಒಂದೇ ಜೀವಕೋಶವುಳ್ಳ, ಸೂಕ್ಷ್ಮ ಜೀವಿಗಳ ಒಂದು ವರ್ಗ. ಬ್ಯಾಕ್ಟೀರಿಯಗಳು ವರ್ತುಲಾಕಾರ ಅಥವಾ ದಂಡಾಕಾರದಲ್ಲಿದ್ದು ಸುಮಾರು ೦.೫ - ೫ ಮೈಕ್ರಾನ್‍ಗಳಷ್ಟು ಉದ್ದವಿರುತ್ತವೆ. ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ "ಬ್ಯಾಕ್ಟೀರಿಯ ವಿಜ್ಞಾನ" ಎನ್ನುತ್ತಾರೆ.

ಎಸ್ಚೆರೀಶಿಯ ಕೋಲಿ ಬ್ಯಾಕ್ಟೀರಿಯ

ಪರಿಸರದ ಎಲ್ಲ ವಾತಾವರಣಗಳಲ್ಲಿಯೂ ವಿವಿಧ ರೀತಿಯ ಬ್ಯಾಕ್ಟೀರಿಯಗಳು ಇರುತ್ತವೆ. ನೀರಿನಲ್ಲಿ, ಮಣ್ಣಿನಲ್ಲಿ, ಗಾಳಿಯಲ್ಲಿ - ಅಷ್ಟಲ್ಲದೆ ಸಲ್ಫ್ಯೂರಿಕ್ ಆಮ್ಲ ಮತ್ತು ವಿಕಿರಣಶೀಲ ವಸ್ತುಗಳ ಒಳಗೆಯೂ ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಸಾಧಾರಣವಾಗಿ, ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು ೧೦೦೦ ಕೋಟಿ, ಹಾಗೂ ಮಿ.ಲೀ. ಸಮುದ್ರ ನೀರಿನಲ್ಲಿ ಒಂದು ಲಕ್ಷ ಬ್ಯಾಕ್ಟೀರಿಯಗಳು ಇರುತ್ತವೆ.

ಮಾನವರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ.[] ಮಾನವರ ಆರೋಗ್ಯದ ದೃಷ್ಟಿಯಿಂದ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ಮಾನವ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ,[] ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, ಕುಷ್ಠ, ಪ್ಲೇಗ್ ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. ಆಂಟಿಬಯಾಟಿಕ್ಗಳ ಆವಿಷ್ಕಾರದ ನಂತರ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.

ಚರಿತ್ರೆ

ಬದಲಾಯಿಸಿ

ಬ್ಯಾಕ್ಟೀರಿಯಗಳ ಶಾಸ್ತ್ರೀಯ ಅಧ್ಯಯನವನ್ನು ಮೊದಲ ಬಾರಿಗೆ ನಡೆಸಿದ ವಿಜ್ಞಾನಿ ಆಂಟನ್ ವಾನ್ ಲೀವನ್‍ಹಾಕ್. ೧೬೭೪ರಲ್ಲಿ ತಮ್ಮದೇ ರಚನೆಯ ಸೂಕ್ಷ್ಮದರ್ಶಕದ ಮೂಲಕ ಬ್ಯಾಕ್ಟೀರಿಯಗಳನ್ನು ಇವರು ಗಮನಿಸಿದರು. "ಬ್ಯಾಕ್ಟೀರಿಯ" ಪದವನ್ನು ಬಳಕೆಗೆ ತಂದವರು ಎರೆನ್‍ಬರ್ಗ್ ಎಂಬ ವಿಜ್ಞಾನಿ (೧೮೨೮ ರಲ್ಲಿ).

ಜೈವಿಕ ರಚನೆ

ಬದಲಾಯಿಸಿ
 
ವಿವಿಧ ಬ್ಯಾಕ್ಟೀರಿಯಗಳ ಜೈವಿಕ ರಚನೆ

ವಿವಿಧ ಬ್ಯಾಕ್ಟೀರಿಯಗಳು ಸುರುಳಿ, ಹುರುಳಿಬೀಜ, ಕೊಳವೆ ಸೇರಿದಂತೆ ಅನೇಕ ಆಕಾರ-ಗಾತ್ರಗಳಲ್ಲಿ ಕಂಡು ಬಂದರೂ, ಬಹುಪಾಲು ಬ್ಯಾಕ್ಟೀರಿಯಗಳು ವರ್ತುಲ/ದಂಡಾಕಾರದಲ್ಲಿ ಇದ್ದು ೦.೫-೫ ಮೈಕ್ರಾನ್ ಉದ್ದ ಇರುತ್ತವೆ. ಕೆಲ ಬ್ಯಾಕ್ಟೀರಿಯಗಳು ೦.೫ ಮಿ.ಮೀ. ಉದ್ದವಿದ್ದು ಬರಿಗಣ್ಣಿಗೆ ಕಂಡರೆ, ಇನ್ನು ಕೆಲವು ೦.೨ ಮೈಕ್ರಾನ್ ಅಷ್ಟೇ ಇರುವದೂ ಉಂಟು. ಗಾತ್ರದಲ್ಲಿ ಇಷ್ಟು ವೈವಿಧ್ಯವಿದ್ದರೂ, ಆಕಾರದಲ್ಲಿ ಪ್ರಮುಖವಾಗಿ ದುಂಡು (ಕಾಕಸ್) ಅಥವ ಕೋಲಿನಾಕಾರ (ಬ್ಯಾಸಿಲಸ್) ಹೊಂದಿರುತ್ತವೆ.[]

ಇವುಗಳಿಗೆ ಚಲಿಸಲು ಸಹಾಯಕವಾಗುವ ಚಾವಟಿಯಂಥ ಚಲನಾಂಗಗಳಿವೆ. ಬ್ಯಾಕ್ಟೀರಿಯಗಳು ಸಾಮಾನ್ಯವಾಗಿ ನಿರ್ಲಿಂಗರೀತಿಯ ಸಂತಾನೋತ್ಪತ್ತಿಯಿಂದ ವೃದ್ಧಿಯಾಗುತ್ತವೆ.[] ಉದಾಹರಣೆಗೆ ಎಶ್ಚರೀಷಿಯ ಕೋಲಿ ಅಡ್ಡವಿಭಜನೆಯಿಂದ ಪ್ರತಿ 20 ಮಿನಿಟುಗಳಲ್ಲಿ ದ್ವಿಗುಣಗೊಳ್ಳುತ್ತದೆ.[] ವಾಯುಮಂಡಲದ ವೈಪರೀತ್ಯಗಳಿಂದ ಪಾರಾಗುವ ಸಲುವಾಗಿ ದಂಡಾಕಾರದ ಬ್ಯಾಕ್ಟೀರಿಯ ಕೋಶಗಳ ಒಳಗೆ ಗಟ್ಟಿ ಪೊರೆ ರೂಪುಗೊಳ್ಳುತ್ತದೆ. ಇಂಥವಕ್ಕೆ ಸ್ಪೋರ್‌ಗಳೆಂದು ಹೆಸರು. ಹಿತಕರ ಪರಿಸರ ಒದಗಿದಾಗ ಇವು ಮೊಳೆತು ಬ್ಯಾಕ್ಟೀರಿಯಗಳು ಮೈದಳೆಯುತ್ತವೆ.

ಸರಳ ಜೀವರಚನೆಯಿದ್ದರೂ, ಕೆಲವೊಮ್ಮೆ ಅನೇಕ ಬ್ಯಾಕ್ಟೀರಿಯಾಗಳು ಸಂಯೋಗದಲ್ಲಿ ಕ್ಲಿಷ್ಟ ವಿನ್ಯಾಸಗಳಲ್ಲಿ ಕಂಡುಬರುತ್ತವೆ. ಉದಾಹರಣೆಗೆ, ಮಿಕ್ಸೋಬ್ಯಾಕ್ಟೀರಿಯ ತಳಿಯು ಆಹಾರ ಅಲಭ್ಯತೆ ಸಮಯಗಳಲ್ಲಿ ಸುಮಾರು ೧೦೦,೦೦೦ ಜೀವಿಗಳ ೦.೫ ಸೆಂಟಿಮೀಟರ್‌ಗಳಷ್ಟು ಗಾತ್ರದ ಸಂಯೋಗಗಳನ್ನು ಹೊಂದುತ್ತವೆ. ಇನ್ನು ಕೆಲವು ತಳಿಗಳು (ಉದಾ. ಕ್ಲ್ಯಾಮೀಡಿಯ) ಬೀಜಕಣವುಳ್ಳ ಇತರ ಜೀವಿಗಳ ಜೀವಕೋಶದ ಒಳಗೆ ಮಾತ್ರ ಜೀವಿಸಬಲ್ಲವು.

ಸೈಯನೊಬ್ಯಾಕ್ಟೀರಿಯ: ಬ್ಯಾಕ್ಟೀರಿಯ ಗುಂಪಿನಲ್ಲಿ ಸೈಯನೊಬ್ಯಾಕ್ಟೀರಿಯ ಎಂಬ ಮತ್ತೊಂದು ಸಣ್ಣ ವರ್ಗವಿದೆ. ಇವುಗಳಲ್ಲಿ ಕೋಶಗಳನ್ನು ಸುತ್ತುವರಿದಿರುವ ಗಟ್ಟಿ ಬಹುಪೊರೆಯ ಗೋಡೆಯಿದೆ. ಕೋಶಭಿತ್ತಿಯ ಸುತ್ತಲೂ ಜಿಲಾಟಿನಸ್ ಕವಚ ಉಂಟು.[] ಕೋಶದ್ರವ್ಯದಲ್ಲಿ ಥೈಲಾಕಾಯಿಡ್‌ಗಳೆಂಬ ಚೀಲಗಳೂ[][] ಫೈಕೊಸೈಯನಿನ್ ಮತ್ತು ಫೈಕೊಎರಿಥ್ರಿನ್ ಎಂಬ ವರ್ಣದ್ರವ್ಯಗಳೂ ಇವೆ.

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Sender R, Fuchs S, Milo R (2016-08-19). "Revised Estimates for the Number of Human and Bacteria Cells in the Body". PLOS Biology (in ಇಂಗ್ಲಿಷ್). 14 (8): e1002533. doi:10.1371/journal.pbio.1002533. ISSN 1545-7885. PMC 4991899. PMID 27541692.
  2. McCutcheon JP (October 2021). "The Genomics and Cell Biology of Host-Beneficial Intracellular Infections". Annual Review of Cell and Developmental Biology. 37 (1): 115–142. doi:10.1146/annurev-cellbio-120219-024122. PMID 34242059. S2CID 235786110.
  3. Dusenbery, David B (2009). Living at Micro Scale (in ಇಂಗ್ಲಿಷ್). Cambridge, Massachusetts: Harvard University Press. pp. 20–25. ISBN 978-0-674-03116-6.
  4. Koch AL (2002). "Control of the bacterial cell cycle by cytoplasmic growth". Critical Reviews in Microbiology. 28 (1): 61–77. doi:10.1080/1040-840291046696. PMID 12003041. S2CID 11624182.
  5. "Bacteria". Microbiologyonline. Archived from the original on 27 February 2014. Retrieved 27 February 2014.
  6. Singh V, Pande PC, Jain DK (eds.). "Cyanobacteria, Actinomycetes, Mycoplasma, and Rickettsias". Text Book of Botany Diversity of Microbes And Cryptogams. Rastogi Publications. p. 72. ISBN 978-8171338894.
  7. Liberton M, Pakrasi HB (2008). "Chapter 10. Membrane Systems in Cyanobacteria". In Herrero A, Flore E (eds.). The Cyanobacteria: Molecular Biology, Genomics, and Evolution. Norwich, United Kingdom: Horizon Scientific Press. pp. 217–287. ISBN 978-1-904455-15-8.
  8. Liberton M, Page LE, O'Dell WB, O'Neill H, Mamontov E, Urban VS, Pakrasi HB (February 2013). "Organization and flexibility of cyanobacterial thylakoid membranes examined by neutron scattering". The Journal of Biological Chemistry. 288 (5): 3632–3640. doi:10.1074/jbc.M112.416933. PMC 3561581. PMID 23255600.

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: