ಖಂಡಗಳ ಅಲೆತ
ಖಂಡಗಳ ಅಲೆತವು[ಟಿಪ್ಪಣಿ ೧] ಖಂಡಗಳು ಇಂದು ಇರುವ ಸ್ಥಾನಕ್ಕೂ ಭಿನ್ನವಾದ ಸ್ಥಾನದಲ್ಲಿದ್ದು ಕಾಲ ಕಳೆದಂತೆ ಚಲಿಸಿ ಈಗಿನ ಸ್ಥಿತಿಗೆ ಬಂದವು (ಖಂಡಗಳು ಸಾಪೇಕ್ಷವಾಗಿ ಚಲಿಸುತ್ತಿವೆ) ಎಂಬ ಆಧಾರಕಲ್ಪನೆ. ಫಲಕ ಭೂರಚನಾಶಾಸ್ತ್ರ ಹುಟ್ಟುವುದಕ್ಕೆ ಮುಂಚೆಯೇ ಕೆಲವರು ಖಂಡಗಳು ಈಗ ಇದ್ದಂತೆ ಹಿಂದೆ ಇರಲಿಲ್ಲವೆಂದು ಭಾವಿಸುತ್ತಿದ್ದರು. ೧೫೯೬ ರಲ್ಲಿ ಡಚ್ ನಕಾಶೆ ತಯಾರಕ ಅಬ್ರಹಾಮ್ ಆರ್ಟೆಲಿಯಸ್ ತನ್ನ ಕೃತಿ ಥೆಸಾರಸ್ ಜಿಯಾಗ್ರಾಫಿಕಸ್‌ನಲ್ಲಿ ಅಮೆರಿಕ (ಖಂಡಗಳು) ಯುರೋಪು ಮತ್ತು ಏಶಿಯಾದಿಂದ ಭೂಕಂಪ ಮತ್ತು ಪ್ರವಾಹಗಳ ಕಾರಣಕ್ಕೆ ಸಿಡಿದು ಹೋಗಿವೆ ಎಂದು ಸೂಚಿಸಿದ. ೧೮೫೮ ರಲ್ಲಿ ಆಂಟಾನಿಯೊ ಸ್ನೈಡರ್ ಪೆಲ್ಲೆಗ್ರಿನಿ ಆಫ್ರಿಕಾ ಮತ್ತು ಅಮೆರಿಕ ಖಂಡಗಳ ನಕಾಶೆಗಳು ಹೇಗೆ ಹೊಂದಿಕೊಳ್ಳುತ್ತವೆ ಎಂದು ತೋರಿಸಿ ಕೊಟ್ಟ. ಈ ಬಗೆಗೆ ವಿಸೃತ ಪುರಾವೆಗಳ ಆಧಾರದ ಮೇಲೆ ಮೊದಲು ಊಹನ (ಹೈಪೊಥೀಸಿಸ್) ಮಂಡಿಸಿದುದು (೧೯೧೨ರಲ್ಲಿ) ಜರ್ಮನಿಯ ಅಲ್‌ಫ್ರೆಡ್ ವೆಜೆನರ್. ಈ ಪ್ರಮೇಯದ ಪ್ರಮುಖ ಕೊರತೆ ಖಂಡಗಳನ್ನು ಚಲಿಸುವಂತೆ ಮಾಡುವ ಶಕ್ತಿಯನ್ನು ಸರಿಯಾಗಿ ಗುರುತಿಸದ ಕಾರಣಕ್ಕೆ ಬೇಗ ಸ್ವೀಕೃತವಾಗಲಿಲ್ಲ. ಇಂದು ಖಂಡಗಳ ಅಲೆತವು ಖಂಡಗಳ ಚಲನೆಯನ್ನು ವಿವರಿಸುವ ಭೂಫಲಕ ಸಿದ್ಧಾಂತದ (ಪ್ಲೇಟ್ ಟೆಕ್ಟೊನಿಕ್ಸ್) ಭಾಗವಾಗಿದೆ.[೧]
ಭೂಮಿಯ ನಕ್ಷೆಯನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಅಲ್ಲಿ ನೆಲಭಾಗ ಮತ್ತು ಜಲಭಾಗ ಎಂಬ ಎರಡು ವಿಭಾಗಗಳು ಎದ್ದುಕಾಣುತ್ತವೆ. ನೆಲಭಾಗವನ್ನು ಭೌತ ಮತ್ತು ಇತರ ಅನೇಕ ಕಾರಣಗಳಿಗಾಗಿ ಆರು ಪ್ರಮುಖ ಖಂಡಗಳಾಗಿ ವಿಭಾಗಿಸಿದ್ದಾರೆ. ಇವೇ ಏಷ್ಯ, ಯೂರೋಪ್, ಆಫ್ರಿಕ, ಅಮೆರಿಕ, ಆಸ್ಟ್ರೇಲಿಯ ಮತ್ತು ಅಂಟಾರ್ಕ್ಟಿಕ ಎಂಬ ಆರು ಭೂಖಂಡಗಳು. ಭೂಗ್ರಹದ ಹೊರಮೈಯ ಒಟ್ಟು ವಿಸ್ತೀರ್ಣದ ಸುಮಾರು ಮೂರನೆಯ ಒಂದು ಭಾಗದಷ್ಟು ಮಾತ್ರ ಖಂಡಗಳ ವ್ಯಾಪ್ತಿ; ಅವುಗಳ ದ್ರವ್ಯರಾಶಿಯೂ ಅಷ್ಟೇ, ಭೂಗ್ರಹದ ದ್ರವ್ಯರಾಶಿಯ ಮೂರನೆಯ ಒಂದು ಭಾಗದಷ್ಟು. ಆದ್ದರಿಂದ ವಿಸ್ತಾರವಾದ ನೀರಿನ ರಾಶಿಯ ಮೇಲೆ ಅಲ್ಲಿ ಇಲ್ಲಿ ಯಾದೃಚ್ಛಿಕವಾಗಿ ತೇಲುತ್ತಿರುವ ನೆಲಭಾಗಗಳೇ ಖಂಡಗಳು ಎಂದು ತರ್ಕಿಸಬಹುದು.
ಇತಿಹಾಸ
ಬದಲಾಯಿಸಿತೇಲುತ್ತಿರುವ ಖಂಡಗಳಿಗೆ, ನೀರಿನ ಮೇಲೆ ತೇಲಬಿಟ್ಟಿರುವ ಹಲವಾರು ಮರದ ದಿಮ್ಮಿಗಳು ಅಲೆತದಿಂದ ಕಾಲಾಂತರದಲ್ಲಿ ದೂರ ದೂರ ಆಗುವಂತೆ, ಅಲೆತವಿರಬಹುದೇ ಎಂಬ ಸಂದೇಹ ಬಹು ಕಾಲದಿಂದ ವಿಜ್ಞಾನಿಗಳಲ್ಲಿ ಇತ್ತು. ಇಂಥ ಒಂದು ವೈಜ್ಞಾನಿಕ ಸಂದೇಹವನ್ನು ಮುಂದಿಟ್ಟವನು 17ನೆಯ ಶತಮಾನದ ಇಂಗ್ಲಿಷ್ ರಾಜಕಾರಣಿ ಹಾಗೂ ತತ್ತ್ವಜ್ಞಾನಿ ಸರ್ ಫ್ರಾನ್ಸಿಸ್ ಬೇಕನ್. ಇವನು ಅಮೆರಿಕ ಮತ್ತು ಆಫ್ರಿಕ ಖಂಡಗಳ ಅಂಚಿನ ಭಾಗಗಳನ್ನು ಪರಿಶೀಲಿಸಿ ಅವೆಷ್ಟು ಚೆನ್ನಾಗಿ ಪರಸ್ಪರ ಪೂರಕವಾಗಿ ಹೊಂದಿಕೊಳ್ಳುತ್ತವೆ. ಆದ್ದರಿಂದ ಇವೆರಡು ಖಂಡಗಳೂ ಒಂದಾನೊಂದು ಕಾಲದಲ್ಲಿ ಪರಸ್ಪರ ಒಂದುಗೂಡಿದ್ದಿರಲೇಬೇಕು ಎಂಬ ಒಂದು ಊಹೆಯನ್ನು ಮಾಡಿದ್ದ. ಆ ತರುವಾಯ ಅನೇಕರು ಖಂಡಗಳ ಅಲೆತದ ವಿಷಯವನ್ನು ವೈಜ್ಞಾನಿಕ ಸಾಕ್ಷ್ಯಾಧಾರಗಳ ಸಮೇತ ಚರ್ಚಿಸಿ ವಿವಿಧ ವಿವರಣೆಗಳನ್ನೂ ವಾದಗಳನ್ನೂ ಮಂಡಿಸಿದ್ದಾರೆ. ಉದಾಹರಣೆಗೆ ರಚನಾಕ್ರಮ, ಕಾಂತಗುಣಗಳು, ಪ್ರಸ್ತರಗಳಲ್ಲಿ ಹುದುಗಿರುವ ಫಾಸಿಲುಗಳು ಇವೇ ಅತಿಮುಖ್ಯವಾದ ಸಾಕ್ಷ್ಯಾಧಾರಗಳು. ಇಂದಿನ ವಿವಿಧ ಭೂಖಂಡಗಳು ಹಿಂದೆ ಅಖಂಡವಾಗಿಯೇ ಇದ್ದು, ಕ್ರಮೇಣ ಒಡೆದು ಬೇರ್ಪಟ್ಟು, ಅಲೆದಾಡಿ ಇಂದಿನ ತಮ್ಮ ಸ್ಥಾನಗಳಿಗೆ ತಲಪುವವರೆಗೂ ಅವುಗಳಲ್ಲುಂಟಾದ ಬದಲಾವಣೆಗಳು ಮತ್ತು ಸುಧಾರಣೆಗಳು ಹಾಗೂ ಅಕ್ಷಾಂಶ ರೇಖಾಂಶಗಳಲ್ಲಾದ ಬದಲಾವಣೆಗಳಷ್ಟೇ ಅಲ್ಲದೆ ಮೇರುಗಳ ಅಲೆತವನ್ನು ಕುರಿತ ಅಧ್ಯಯನವೂ ನಡೆದಿದೆ.
ಅಬ್ರಹಾಂ ಓರ್ಟಿಲಿಯಸ್ (೧೫೯೬)[೨], ಥಿಯೊಡರ್ ಕ್ರಿಸ್ಟೋಫ್ ಲಿಲಿಯೆಂಥಾಲ್ (೧೭೫೬),[೩] ಅಲೆಗ್ಸಾಂಡರ್ ವೊನ್ ಹಂಬೋಲ್ಟ್ (೧೮೦೧ ಮತ್ತು ೧೮೪೫),[೩] ಅಂಟಾನಿಯೊ ಸ್ನೈಡರ್ ಪೆಲ್ಲಿಗ್ರಿನಿ (೧೮೫೮) ಮತ್ತು ಇತರರು ಅಟ್ಲಾಂಟಿಕ್ ಸಾಗರದ ವಿರುದ್ಧ ದಿಕ್ಕಿನಲ್ಲಿರುವ ಖಂಡಗಳನ್ನು (ವಿಶೇಷವಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ) ಒಂದಾಗಿ ಸೇರಿಸಬಹುದು ಎಂಬುದನ್ನು ಗಮನಿಸಿದ್ದರು.[೪] ಅಲ್ಲದೆ ಎಡುರ್ಡ್ ಸುಯೆಸ್ ೧೮೮೫ ರಲ್ಲಿ ಒಂದಾದ ಮಹಾಖಂಡದ ಹೆಸರನ್ನು ಗೊಂಡ್ವಾನ[೫] ಎಂತಲೂ ಮತ್ತು ಸಾಗರವನ್ನು ೧೮೯೩ರಲ್ಲಿ ಟೆಥಿಸ್ ಸಾಗರವೆಂತಲೂ[೬] ಹೆಸರುಗಳನ್ನು ಸೂಚಿಸಿದ.
ಅಲ್‌ಫ್ರೆಡ್ ರಸಲ್ ವಾಲೆಸ್ ಹಲವು ಭೂಗೋಳಶಾಸ್ತ್ರಜ್ಞರು ಸಣ್ಣ ಸಣ್ಣ ಆಯಾಮಗಳಲಿರಲಿ ತೀರ ದೊಡ್ಡ ಭೂಮಿಯ ಮೇಲಿನ ವೈಲಕ್ಷಣಗಳೂ ಸತತವಾಗಿ ಬದಲಾಗುತ್ತವೆ ಎಂದು ನಂಬುತ್ತಾರೆ ಎನ್ನುತ್ತಾನೆ. ಭೂಮಿಯ ಮೇಲಿನ ಭೂಭಾಗಗಳು ಮತ್ತು ಸಾಗರಗಳು ಸತತವಾಗಿ ಸ್ಥಾನ ಬದಲಿಸಿದವು ಎಂದು ಟಿಪ್ಪಣಿ ಮಾಡುತ್ತಾನೆ[೭] ಮತ್ತು ಚಾರ್ಲ್ಸ್ ಲಾಯೆಲೆಯನ್ನು ಹೀಗೆ ಉಲ್ಲೇಖಿಸುತ್ತಾನೆ.:"ಖಂಡಗಳು ನಿರ್ದಿಷ್ಟ ಭೂಗೋಳಿಕ ಕಾಲಮಾನದಲ್ಲಿ ಸ್ಥಿರವಾದರೂ ಹಲವು ಯುಗಗಳಲ್ಲಿ ಅವುಗಳ ಸ್ಥಾನ ಬದಲಿಯಾಗುತ್ತದೆ"[೮]
ದಕ್ಷಿಣ ಖಂಡಗಳ ಭೂಗೋಳಿಕ ಸಾಮ್ಯತೆಗಳನ್ನು ಗಮನಿಸಿದ ರಾಬರ್ಟೊ ಮಾಂಟೊವನಿ ೧೮೮೯ ಮತ್ತು ೧೯೦೯ರ ನಡುವೆ ಈ ದಕ್ಷಿಣದ ಎಲ್ಲಾ ಖಂಡಗಳೂ ಒಂದೇ ಭೂಭಾಗವಿಗಿದ್ದವು ಎಂದು ಊಹೆಯನ್ನು ಮಂಡಿಸಿದ. ಖಂಡಗಳ ಚಲನೆಗೆ ಕಾರಣವಾಗಿ ಹಿಗ್ಗುವ ಭೂಮಿ ಸಿದ್ಧಾಂತವನ್ನು ಪ್ರತಿಪಾದಿಸಿದ. ಅವನ ಹಿಗ್ಗುವ ಭೂಮಿ ಸಿದ್ಧಾಂತವು ತಪ್ಪು ಎಂದು ತೋರಿಸಿಕೊಡಲಾಗಿದೆ.[೯][೧೦][೧೧]
ಭೂಮಿಯ ಹಿಗ್ಗುವಿಕೆ ಇಲ್ಲದ ಖಂಡಗಳ ಅಲೆತವನ್ನು ಫ್ರಾಂಕ್ ಬುರ್ಸ್‌ಲೆ ಟೇಲರ್ ೧೯೦೮ರಲ್ಲಿ ಸೂಚಿಸಿದ (ಪ್ರಕಟನೆ ೧೯೧೦). ಅವನ ಚಿಂತನೆಯ ಪ್ರಕಾರ ಕ್ರೆಟೇಶಿಯಸ್ ಅವಧಿಯಲ್ಲಿ ಭೂಮಿಯ ಗುರುತ್ವದ ಚಂದ್ರನ ಬಂಧನದ ಕಾರಣಕ್ಕೆ ಉಂಟಾಗುವ ಅಲೆಗಳ ಶಕ್ತಿಯು ಖಂಡಗಳನ್ನು ಸಮಭಾಜಕ ವೃತ್ತದಲ್ಲಿ ತಳ್ಳಿತು. ಅವನ ಈ ಖಂಡಗಳ ಚಲನೆಗೆ ಕೊಟ್ಟ ಕಾರಣವನ್ನು ತಿರಸ್ಕರಿಸಲಾಗಿದೆಯಾದರೂ ಖಂಡಗಳ ಅಲೆತವು ಬೆಟ್ಟಗಳು ರೂಪಗೊಳ್ಳಲು ಕಾರಣ ಎಂದು ಗುರುತಿಸುವುದರಲ್ಲಿ ಅವನು ಮೊದಲಿಗ. ಹಿಮಾಲಯಗಳ ರೂಪಗೊಳ್ಳುವಿಕೆಗೆ ಭಾರತೀಯ ಉಪಖಂಡ ಏಶಿಯಕ್ಕೆ ಡಿಕ್ಕಿಹೊಡೆದುದು ಕಾರಣ ಎಂದು ಅವನು ಗುರುತಿಸಿದ.[೧೨]
ಭೂಮಿಯ ಮೇಲ್ಮೈಲಕ್ಷಣಗಳು
ಬದಲಾಯಿಸಿಭೂಖಂಡಗಳು ತ್ರಿಕೋನಾಕಾರದಲ್ಲಿವೆ ಮತ್ತು ಅವು ಉತ್ತರದ ಕಡೆಗೆ ಬಹು ವಿಶಾಲವಾಗಿಯೂ ದಕ್ಷಿಣದ ಕಡೆಗೆ ಬಹು ಕಿರಿದಾಗಿಯೂ ಇವೆ. ಅಂಥ ಕಿರಿದಾದ ಭೂಭಾಗಗಳು ಭೂಶಿರಗಳಲ್ಲೋ, ದ್ವೀಪಗಳಲ್ಲೋ, ದ್ವೀಪಸ್ತೋಮಗಳಲ್ಲೋ ಅಂತ್ಯಗೊಳ್ಳುತ್ತವೆ. ಉದಾಹರಣೆಗೆ ಆಫ್ರಿಕದ ದಕ್ಷಿಣಭಾಗ ಗುಡ್ ಹೋಪ್ ಭೂಶಿರ ಮತ್ತು ಮಡಗಾಸ್ಕರ್ ದ್ವೀಪಗಳಲ್ಲಿ ಅಂತ್ಯಗೊಳ್ಳುತ್ತದೆ. ದಕ್ಷಿಣ ಅಮೆರಿಕದ ಕಿರಿದಾದ ಭೂಭಾಗದಿಂದ ಹಾರ್ನ್ ಭೂಶಿರ ಹಾಗೂ ಟಿಯೆರ ಡೆಲ್ ಫೂಯೇಗೋ ಎಂಬ ದ್ವೀಪಸ್ತೋಮದ ರಚನೆಯಾಗಿದೆ. ಭಾರತ ಪರ್ಯಾಯದ್ವೀಪದ ದಕ್ಷಿಣಭಾಗ ಕನ್ಯಾಕುಮಾರಿ ಭೂಶಿರ ಮತ್ತು ಶ್ರೀಲಂಕಾ ದ್ವೀಪದಲ್ಲಿ ಅಂತ್ಯಗೊಂಡಿದೆ. ಆದರೆ ಆಸ್ಟ್ರೇಲಿಯದ ದಕ್ಷಿಣಭಾಗ ಮಾತ್ರ ವಿಶಾಲವಾದ ಕರಾವಳಿ ಪ್ರದೇಶವನ್ನೊಳಗೊಂಡಿದ್ದು ಟಾಸ್ಮೇನಿಯ ದ್ವೀಪದಲ್ಲಿ ಅಂತ್ಯಗೊಳ್ಳುತ್ತದೆ. ಸಾಗರಗಳು ಹೀಗಲ್ಲ. ಅವು ದಕ್ಷಿಣದ ಕಡೆಗೆ ಬಹು ವಿಶಾಲವಾಗಿಯೂ ಪೂರ್ವದ ಕಡೆಗೆ ಬಹುಕಿರಿದಾಗಿಯೂ ಇವೆ. ಖಂಡಗಳಂತೆ ಇವು ಕೂಡ ತ್ರಿಕೋನಾಕಾರವನ್ನೇ ತಳೆದಿರುವುದು ಗಮನಾರ್ಹ. ಸಾಗರಗಳು ಬಹುಪಾಲು ಭೂಭಾಗವನ್ನು ಆವರಿಸಿವೆ. ಸಾಗರಗಳಲ್ಲಿ ಪರಸ್ಪರ ಸಂಪರ್ಕ ಉಂಟು. ಆದರೆ ಭೂಖಂಡಗಳಲ್ಲಿ ಅಂಥ ಸಂಪರ್ಕಗಳಿಲ್ಲದೆ ಅವು ದೂರದೂರದಲ್ಲೇ ಉಳಿದಿವೆ. ಇಲ್ಲಿ ಕಂಡುಬರುವ ಮತ್ತೊಂದು ವೈಶಿಷ್ಟ್ಯವೆಂದರೆ ಭೂಖಂಡಗಳು ಮತ್ತು ಸಾಗರಗಳು ಭೂಗೋಳದ ಎರಡೂ ಪಾರ್ಶ್ವಗಳಲ್ಲಿ ಎದುರುಬದುರಾಗಿವೆ. ಉದಾಹರಣೆಗೆ ಅಂಟಾರ್ಕ್ಟಿಕ ಖಂಡ ಆರ್ಕ್ಟಿಕ್ ಸಾಗರಕ್ಕೆದುರಾಗಿದೆ. ಸೈಬೀರಿಯಾ ಅಟ್ಲಾಂಟಿಕ್ ಸಾಗರಕ್ಕೆದುರಾಗಿಯೂ ಇವೆ.
ಚತುಷ್ಫಲಕಸಿದ್ಧಾಂತ
ಬದಲಾಯಿಸಿವಿಶಿಷ್ಟ ಆಕಾರ ಮತ್ತು ಗುಣಲಕ್ಷಣಗಳನ್ನುಳ್ಳ ಭೂ ಮತ್ತು ಜಲಭಾಗಗಳಿಂದ ಕೂಡಿರುವ ಭೂಗೋಳವನ್ನು ವಿಜ್ಞಾನಿಗಳು ಒಂದು ಚತುಷ್ಫಲಕಕ್ಕೆ (ಟೆಟ್ರಹೆಡ್ರನ್) ಹೋಲಿಸಿದ್ದಾರೆ. ಇದನ್ನು ವಿವರಿಸಲು ಲೋತಿಯನ್ ಗ್ರೀನ್ ಎಂಬಾತ ಪ್ರತಿಪಾದಿಸಿದ ಚತುಷ್ಫಲಕ ಸಿದ್ಧಾಂತ ಪ್ರಾಯಶಃ ಅತ್ಯಂತ ಮೊದಲನೆಯದು.[೧೩] ಇದರ ಪ್ರಕಾರ ಭೂಸೃಷ್ಟಿಯ ಬಳಿಕ ಅದು ನಿಧಾನವಾಗಿ ಮತ್ತು ಕ್ರಮವಾಗಿ ತಣ್ಣಗಾಗಲಾರಂಭಿಸಿತು. ಅದರ ಹೊರಭಾಗ ಒಳಭಾಗಕ್ಕಿಂತಲೂ ಹೆಚ್ಚು ತಣ್ಣಗಾದ ಕಾರಣ ಹೊರಭಾಗ ಮತ್ತೂ ತಣ್ಣಗಾಗುವ ಸ್ಥಿತಿಯಲ್ಲಿರಲಿಲ್ಲ. ಆದರೆ ಒಳಭಾಗ ಮಾತ್ರ ಇನ್ನೂ ತಣ್ಣಗಾಗುತ್ತಲೇ ಮುಂದುವರಿಯಿತು. ಅಂಥ ಪರಿಸ್ಥಿತಿಯಲ್ಲಿ ಭೂಗೋಳ ಗುರುತ್ವದ ಅಧೀನಕ್ಕೊಳಗಾಗಿರಲಿಲ್ಲ. ಕ್ರಮೇಣ ನಡೆಸಿದ ಹಲವಾರು ಪ್ರಯೋಗಗಳ ಆಧಾರದ ಮೇಲೆ ಗ್ರೀನ್ ತನ್ನ ಹಿಂದಿನ ಅಭಿಪ್ರಾಯಗಳನ್ನು ಪುನರ್ವಿಮರ್ಶಿಸುತ್ತ ಕುಸಿಯುತ್ತಿದ್ದ ಗೋಲದಿಂದ ಚತುಷ್ಫಲಕಾಕಾರದ ಬೆಳೆವಣಿಗೆ ಆಗಿರುವುದು ಸಾಧ್ಯ ಎಂಬುದಾಗಿ ಅಭಿಪ್ರಾಯಪಟ್ಟ. ಭೂಮಿ ಇಂಥ ಆಕಾರಕ್ಕೆ ರೂಪಾಂತರ ಹೊಂದಿದಾಗ ಅದರಲ್ಲುಂಟಾದ ಸಂಕೋಚನದ ಬಗೆಗೆ ವಿಜ್ಞಾನಿಗಳು ಹಲವಾರು ರೀತಿಯಲ್ಲಿ ಊಹಿಸಿದ್ದಾರೆ. ಚತುಷ್ಫಲಕ ಸಿದ್ಧಾಂತದ ಪ್ರಕಾರ ಚತುಷ್ಫಲಕಾಕಾರದಲ್ಲಿರುವ ಭೂಮಿಯಲ್ಲಿ ನಾಲ್ಕು ಸಮಬಾಹು ತ್ರಿಭುಜಗಳಿವೆ, ನಾಲ್ಕು ಘನ ಕೋನಗಳಿವೆ; ಈ ತ್ರಿಭುಜಗಳ ಮುಖಗಳಲ್ಲಿ ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮತ್ತು ಆರ್ಕ್ಟಿಕ್ ಸಾಗರಗಳಿವೆ; ಮತ್ತು ಅದರ ಘನ ಕೋನಗಳಲ್ಲಿ ವಿವಿಧ ಭೂಖಂಡಗಳಿವೆ.
ತೀರಗಳ ಅಕಾರ ಮತ್ತು ಹೋಲಿಕೆಗಳು
ಬದಲಾಯಿಸಿಪ್ರಪಂಚದ ಭೂಪಟವನ್ನು ನೋಡಿದಾಗ ಒಂದು ಪ್ರಮುಖವಾದ ಅಂಶ ನಮ್ಮ ಗಮನ ಸೆಳೆಯುತ್ತದೆ. ಅದೆಂದರೆ ಅಟ್ಲಾಂಟಿಕ್ ಸಾಗರದ ಎರಡೂ ಪಾರ್ಶ್ವಗಳಲ್ಲಿರುವ ದಕ್ಷಿಣ ಅಮೆರಿಕದ ಪೂರ್ವತೀರಕ್ಕೂ ಆಫ್ರಿಕದ ದಕ್ಷಿಣತೀರಕ್ಕೂ ಆಕಾರದಲ್ಲಿ ಎದ್ದು ಕಾಣುವ ಹೋಲಿಕೆಗಳು. ಅಂಥ ಸುಸ್ಪಷ್ಟವಾದ ಹೋಲಿಕೆಗಳ ಆಧಾರದ ಮೇಲೆ ಹಿಂದೆ ಆ ಎರಡೂ ಭೂಭಾಗಗಳು ಒಂದಾಗಿಯೇ ಇದ್ದು ಯಾವುದೊ ಒಂದು ಬೃಹತ್ ಭೂಖಂಡದೊಂದಿಗೆ ಕತ್ತರಿಸಿದ ವಿವಿಧ ಆಕಾರಗಳುಳ್ಳ ಕಾಗದದ ಚೂರುಗಳನ್ನು ಒಂದಾಗಿ ಸೇರಿಸಿದಂತೆ (ಜಿಗ್‍ಸಾ ಪಜ಼ಲ್) ಕೂಡಿಕೊಂಡಿದ್ದು ಕಾಲಕ್ರಮದಲ್ಲಿ ಪರಸ್ಪರ ಬೇರ್ಪಟ್ಟಿರಬೇಕೆಂದು ತರ್ಕಿಸಬೇಕಾಗುತ್ತದೆ.
ಅಂಟೋನಿಯೊ ಸ್ನಿಡರ್ ಎಂಬಾತ 1858ರಲ್ಲಿ ಪ್ರಕಟಿಸಿದ ನಕ್ಷೆಯೊಂದರಲ್ಲಿ ದಕ್ಷಿಣ ಅಮೆರಿಕ ಮತ್ತು ಆಫ್ರಿಕಗಳ ತೀರಗಳ ಆಕಾರಗಳನ್ನು ಕುರಿತು ವಿಶೇಷವಾಗಿ ಪ್ರಸ್ತಾಪಿಸಿದ. ಅದಲ್ಲದೆ ಉತ್ತರ ಮತ್ತು ದಕ್ಷಿಣ ಅಮೆರಿಕಗಳು ಆಫ್ರಿಕ ಮತ್ತು ಯೂರೇಷ್ಯ (ಯೂರೋಪ್ ಮತ್ತು ಏಷ್ಯ) ಭೂಖಂಡಗಳು ಮೂಲತಃ ಒಂದು ಬೃಹತ್ ಭೂಖಂಡವೊಂದರಲ್ಲಿ ಅಡಕವಾಗಿದ್ದುವು ಎಂಬ ಅಂಶವನ್ನೂ ವಿವರಿಸಲು ಯತ್ನಿಸಿದ. ಆತ ಮತ್ತಷ್ಟು ಮುಂದುವರಿದು ಉತ್ತರಾರ್ಧ ಗೋಳದುದ್ದಕ್ಕೂ ರಚಿತವಾಗಿದ್ದ ಕಲ್ಲಿದ್ದಲು ನಿಕ್ಷೇಪಗಳಲ್ಲಿ ದೊರೆತ ಸಸ್ಯಗಳಲ್ಲಿರುವ ಹೋಲಿಕೆಗಳನ್ನು ಕೂಡ ವಿವರಿಸಿದ್ದ. ಆಸ್ಟ್ರಿಯದ ಭೂವಿಜ್ಞಾನಿ ಎಡ್ವರ್ಡ್ ಸೂಯೆಸ್ (1831-1941) ಎಂಬಾತ ಲಾರೇಶಿಯದ ದಕ್ಷಿಣದ ಗಡಿ ಇಂಡೋ ಆಫ್ರಿಕದ ಕಡೆಗೆ ಮಡಿಕೆಗಳಾಗಿ ಸಾಲುಸಾಲಾಗಿ ಮುಂದುವರಿಯುತ್ತಿವೆ ಎಂದು ವರ್ಣಿಸಿದ. ಅಲ್ಲದೆ ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಭೂರಚನೆಯಲ್ಲಿ ಅತಿ ನಿಕಟವಾದ ಸಂಬಂಧಗಳಿರುವುದನ್ನು ಗುರುತಿಸಿದ. ಅಷ್ಟೇ ಅಲ್ಲದೆ ಇಡೀ ದಕ್ಷಿಣಾರ್ಧಗೋಲದ ಭೂಭಾಗಗಳನ್ನೆಲ್ಲ ಅಂದರೆ ದಕ್ಷಿಣ ಅಮೆರಿಕ, ಆಫ್ರಿಕ, ಭಾರತ, ಆಸ್ಟ್ರೇಲಿಯ, ಅಂಟಾರ್ಕ್ಟಿಕ ಇತ್ಯಾದಿಗಳನ್ನೆಲ್ಲ ಒಂದುಗೂಡಿಸಿದರೆ ಅದೊಂದು ಬೃಹತ್ ಭೂಖಂಡವಾಗುವುದೆಂದು ಹೇಳಿ ಅದನ್ನು ಗೊಂಡ್ವಾನವೆಂದು ಕರೆದ (ಗೊಂಡ್ವಾನ ಎಂಬ ಹೆಸರು ಭಾರತದ ಮಧ್ಯ ಪ್ರದೇಶದಲ್ಲಿ ವಾಸಿಸುವ ಗೊಂಡ ಎಂಬ ಗುಡ್ಡಗಾಡಿನ ಜನರ ಹೆಸರು). ಎಫ್.ಬಿ. ಟೇಲರ್ ಎಂಬ ಅಮೆರಿಕದ ವಿಜ್ಞಾನಿ ಖಂಡಗಳ ಅಲೆತವನ್ನು ಕುರಿತು ಸ್ವತಂತ್ರವಾಗಿ ವಿಚಾರಮಾಡಲಾರಂಭಿಸಿದ (1908). ಈತನ ಪ್ರಕಾರ ಮೂಲತಃ ಉತ್ತರಾರ್ಧಗೋಲದಲ್ಲಿ ಎರಡು ಪ್ಲಾಸ್ಟಿಕ್ ಸದೃಶ ಭೂಭಾಗಗಳಿದ್ದುವು. ಕ್ರಮೇಣ ಅವು ಮೇರುವಿನಿಂದ ಸಮಭಾಜಕವೃತ್ತದ ಕಡೆಗೆ ಹೆಚ್ಚು ಕಡಿಮೆ ಎಲ್ಲ ದಿಕ್ಕಿಗೂ ಚದರಲಾರಂಭಿಸಿದವು. ಭೂಮಿಯಿಂದ ಚಂದ್ರ ತೀರ ವಿಳಂಬವಾಗಿ ಪ್ರತ್ಯೇಕಗೊಂಡನೆಂದು ಟೇಲರ್ ಅಭಿಪ್ರಾಯಪಟ್ಟ. ಈತ ಸಹ ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ತೀರಗಳಲ್ಲಿ ಕಂಡುಬರುವ ಸುಸ್ಪಷ್ಟವಾದ ಹೋಲಿಕೆಗಳನ್ನು ಗುರುತಿಸಿದ್ದ. ಅಲ್ಲದೆ ಅವುಗಳ ನಡುವೆ 3,000'-4,000' ಗಳಷ್ಟು ಎತ್ತರವಿದ್ದು ಸುದೀರ್ಘವಾಗಿ ಚಾಚಿನಿಂತಿರುವ ಡಾಲ್ವಿನ್ ಏಣಿನ (ರಿಡ್ಜ್) ವಕ್ರತೆ ಅದರ ಪೂರ್ವ-ಪಶ್ಚಿಮ ಕರಾವಳಿಗಳನ್ನು ಅನುಸರಿಸಿರುವುದನ್ನೂ ಪತ್ತೆಮಾಡಿದ. ಇದು ಭೂಖಂಡಗಳ ಮಾರ್ಗಚ್ಯುತಿಯಿಂದಾದುದೆಂದೂ ಅವುಗಳ ಪೈಕಿ ಒಂದು ಪೂರ್ವಕ್ಕೂ ಮತ್ತೊಂದು ಪಶ್ಚಿಮಕ್ಕೂ ಚಲಿಸಿದ ಕಾರಣ ಬ್ರಜ಼ಿಲ್ ಪಶ್ಚಿಮ ಆಫ್ರಿಕದಿಂದ ಪ್ರತ್ಯೇಕಗೊಂಡ ಬಳಿಕ ಕಂಡುಬರುವ ಅವಶೇಷವೆಂಬುದಾಗಿಯೂ ಅಭಿಪ್ರಾಯಪಟ್ಟ. ಜರ್ಮನಿಯ ಪವನಶಾಸ್ತ್ರಜ್ಞ ಆಲ್‌ಫ್ರೆಡ್ ವೆಗ್‌ನರ್ (1880-1930) ಸುಮಾರು 1912ರಲ್ಲಿ ಖಂಡಗಳ ಅಲೆತದ ಸಮಸ್ಯೆಯನ್ನು ಕುರಿತು ಕೂಲಂಕಷವಾದ ಅಧ್ಯಯನ ನಡೆಸಿ ತನ್ನ ಸಮಸ್ತ ಅಭಿಪ್ರಾಯಗಳನ್ನೂ ಒಂದು ಸಿದ್ಧಾಂತದ ರೂಪದಲ್ಲಿ ಪ್ರತಿಪಾದಿಸಿದ. ವೆಗ್‌ನರನ ಅಲೆತ ಸಿದ್ಧಾಂತ ಅಂದಿನ ವೈಜ್ಞಾನಿಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿತು. ಅನೇಕ ವಿಜ್ಞಾನಿಗಳು, ಅದರಲ್ಲೂ ಬಹುಮುಖ್ಯವಾಗಿ ಉತ್ತರಾರ್ಧಗೋಲದ ವಿಜ್ಞಾನಿಗಳು, ಇವನ ಅಭಿಪ್ರಾಯಗಳನ್ನು ಕಟುವಾಗಿ ಟೀಕಿಸಿದರು. ಆದರೆ ಇಂದು ವಿಜ್ಞಾನಿಗಳಿಗೆ ಲಭ್ಯವಾಗಿರುವ ಅನೇಕ ಉಪಯುಕ್ತವಾದ ವೈಜ್ಞಾನಿಕ ಮಾಹಿತಿಗಳು ವೆಗ್‌ನರನ ಅಂದಿನ ಅಭಿಪ್ರಾಯಗಳನ್ನು ಬಲವಾಗಿ ಸಮರ್ಥಿಸುತ್ತವೆ.
ವೆಜೆನರ್‌ನ ಖಂಡಗಳ ಅಲೆತ
ಬದಲಾಯಿಸಿಆಲ್ಪರ್ಡ್ ವೆಜೆನರ್ ತನ್ನ ಚಿಂತನೆಗಳನ್ನು ಜರ್ಮನ್ ಜಿಯಾಲಜಿಕಲ್ ಸೊಸಾಯಿಟಿ ಮುಂದೆ ಜನವರಿ ೬, ೧೯೧೨ರಂದು ಪ್ರಸ್ತುತಪಡಿಸಿದ.[೧೪] ಅವನ ಊಹನವು ಮೊಟ್ಟಮೊದಲು ಅಂದರೆ ಸುಮಾರು ಎರಡು ಸಾವಿರ ಮಿಲಿಯನ್ ವರ್ಷಗಳಿಗೂ ಮುಂಚೆ ಎಲ್ಲಾ ಖಂಡಗಳೂ ಒಂದೆಡೆ ಸೇರಿದ ಬೃಹತ್ ಖಂಡವಾಗಿತ್ತು ಮತ್ತು ಅದನ್ನು ಅವನು ಜರ್ಮನಿ ಹೆಸರಿನಲ್ಲಿ ಕರೆದ ಮತ್ತು ಇದನ್ನು ಗ್ರೀಕ್‌ನ ಪಾಂಗೇ ಎಂದು ಅನುವಾದಿಸಲಾಗುತ್ತದೆ. ಅದೇ ಕಾಲಕ್ಕೆ ಇಂದಿನ ಪೆಸಿಫಿಕ್ ಸಾಗರದ ಮೂಲವಾದ ಅಥವಾ ಪೂರ್ವಜ ಮಹಾಸಾಗರವೂ ಇತ್ತು. ಅದರ ಹೆಸರು ಪ್ಯಾಂತಾಲಾಸ್ಸಾ. ಕ್ರಮೇಣ ಈ ಪಾಂಗೇ ಇಬ್ಭಾಗವಾಗಿ ಅದರಿಂದ ಮತ್ತೆರಡು ಬೃಹತ್ ಭೂಖಂಡಗಳಾದುವು.[೧೫] ಅವುಗಳ ಪೈಕಿ ಒಂದು ಉತ್ತರಾರ್ಧಗೋಲಕ್ಕೂ ಮತ್ತೊಂದು ದಕ್ಷಿಣಾರ್ಧಗೋಲಕ್ಕೂ ಸರಿದು ಹೋದವು. ಈ ಎರಡು ಭೂಖಂಡಗಳ ನಡುವೆ ಇಂದಿನ ಮೆಡಿಟರೇನಿಯನ್ ಸಮುದ್ರದ ಮೂಲವಾದ ಟೆತಿಸ್ ಎಂಬ ದೊಡ್ಡ ಸಮುದ್ರವಿತ್ತು.
ಇಂದಿನ ಉತ್ತರ ಅಮೆರಿಕ, ಏಷ್ಯದ ಬಹುಭಾಗ ಮತ್ತು ಯೂರೋಪ್‌ಗಳನ್ನೊಳಗೊಂಡು ಉತ್ತರಾರ್ಧಗೋಲದಲ್ಲಿದ್ದ ಬೃಹತ್ ಭೂಖಂಡಕ್ಕೆ ಲಾರೇಶಿಯ ಎಂದು ಹೆಸರು. ದಕ್ಷಿಣ ಅಮೆರಿಕ, ಆಫ್ರಿಕ, ಅರೇಬಿಯ, ಮಡಗಾಸ್ಕರ್, ಭಾರತ, ಆಸ್ಟ್ರೇಲಿಯ ಮತ್ತು ಅಂಟಾರ್ಕ್ಟಿಕಗಳನ್ನೊಳಗೊಂಡು ದಕ್ಷಿಣಾರ್ಧಗೋಲದಲ್ಲಿದ್ದ ಬೃಹತ್ ಭೂಖಂಡಕ್ಕೆ ಗೊಂಡ್ವಾನವೆಂದೂ ವೆಗ್‌ನರ್ ಹೆಸರಿಸಿದ. ಅನಂತರ ಮಧ್ಯಜೀವಿಯುಗದಲ್ಲಿ ಈ ಲಾರೇಶಿಯ ಮತ್ತು ಗೊಂಡ್ವಾನ ಭೂಖಂಡಗಳು ಒಡೆದು ಅವುಗಳಿಂದ ಇಂದಿನ ವಿವಿಧ ಖಂಡಗಳ ರಚನೆಯಾಯಿತು. ತರುವಾಯ ಉತ್ತರ ಮತ್ತು ದಕ್ಷಿಣ ಅಮೆರಿಕಗಳನ್ನು ಬೇರ್ಪಡಿಸುವ ಜಲಭಾಗವಾಗಿ ಅಟ್ಲಾಂಟಿಕ್ ಸಾಗರದ ರಚನೆಯಾಯಿತು. ಅಂಟಾರ್ಕ್ಟಿಕ ಮತ್ತು ಆಸ್ಟ್ರೇಲಿಯ ಖಂಡಗಳ ನಡುವೆ ಹಿಂದೂ ಮಹಾಸಾಗರ ಪ್ರವೇಶಿಸಿತು. ಅಟ್ಲಾಂಟಿಕ್ ಸಾಗರದ ಏಣಿ ಅನಂತರ ಪ್ರತ್ಯೇಕಗೊಂಡ ದಕ್ಷಿಣ ಅಮೆರಿಕ ಮತ್ತು ಆಫ್ರಿಕಗಳ ನಡುವಣ ಸಂಪರ್ಕ ಅವಶೇಷವೆಂದು ಭಾವಿಸಲಾಯಿತು. ವೆಗ್‌ನರ್ ತರ್ಕದ ಪ್ರಕಾರ ಹಗುರವಾದ ಅಲ್ಯುಮಿನಿಯಂ ಸಿಲೆಕೇಟುಗಳಿಂದ ರಚಿತವಾದ ಖಂಡಗಳಿಗೆ ಸಯಾಲ್ ಎಂಬ ಹೆಸರು. ಅದರಂತೆ ಅವುಗಳ ತಳಭಾಗದಲ್ಲಿ ಅಧಿಕಸಾಂದ್ರತೆಯ ದ್ರವರೂಪಿ ಪದರವಿದ್ದು ಅದು ಸಿಲಿಕೇಟ್ ಮತ್ತು ಭಾರವಾದ ಖನಿಜಗಳಿಂದ ರಚಿತವಾದ ಕಾರಣ ಅದಕ್ಕೆ (ಕೆಳಭಾಗದ ಪದರ) ಸೈಮಾ ಎಂದು ಹೆಸರು.[೧೬][೧೭] ಆದ್ದರಿಂದ ಭೂಖಂಡಗಳು ಎಂದರೆ ಸಯಾಲುಗಳು, ನೀರಿನ ಮೇಲೆ ತೇಲಾಡುವ ಬರ್ಫಗಳಂತೆ, ಸೈಮಾ ಸಾಗರದ ಮೇಲೆ ತೇಲಾಡಲು ಸಾಧ್ಯ. ಭೂಖಂಡಗಳು ಪ್ರತ್ಯೇಕಗೊಂಡು ಚಲಿಸಿದ ವಿವಿಧ ಕಾಲಗಳು ಮತ್ತು ಹಂತಗಳನ್ನು ತನ್ನ ನಕ್ಷೆಗಳಲ್ಲಿ ವೆಗ್‌ನರ್ ಗುರುತಿಸಿದ್ದಾನಲ್ಲದೆ ಭೂಖಂಡಗಳ ಮಾರ್ಗಚ್ಯುತಿಯ ಬಗ್ಗೆ ಟೇಲರ್ ಮಂಡಿಸಿದ ವಾದಗಳನ್ನು ಮತ್ತಷ್ಟು ವಿವರಿಸಿದ್ದಾನೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಗಳ ತೀರಗಳಲ್ಲಿ ಕಂಡುಬಂದ ಸ್ಪಷ್ಟವಾದ ಹೋಲಿಕೆಗಳನ್ನು ಕ್ರಮವಾಗಿ ಪರಿಶೀಲಿಸಿದ್ದಾನೆ. ಅಲ್ಲದೆ ಆಫ್ರಿಕ, ಅರೇಬಿಯ, ಮಡಗಾಸ್ಕರ್, ಗ್ರೀನ್‌ಲೆಂಡ್, ಲ್ಯಾಬ್ರಡಾರುಗಳ ತೀರಗಳ ಸಮರೂಪತೆಗಳನ್ನು ವಿವರವಾಗಿ ಮಂಡಿಸಿದ್ದಾನೆ. ದಕ್ಷಿಣ ಅಮೆರಿಕ, ಆಫ್ರಿಕ, ಭಾರತ ಮತ್ತು ಟಾಸ್ಮೇನಿಯ ಇವುಗಳ ತ್ರಿಕೋನಾಕಾರವನ್ನು ಗಮನಿಸಿದರೆ ಅವೆಲ್ಲವೂ ಗೊಂಡ್ವಾನ ಭೂಭಾಗಗಳಾಗಿದ್ದು ದಕ್ಷಿಣ ಮೇರುವಿನಿಂದ ಕಂಡುಬರುವ ಬಿರುಕುಗಳ ಸಾಲುಗಳಲ್ಲಿ ತುಂಡಾಗಿ ಅನಂತರ ಸಮಭಾಜಕ ವೃತ್ತದ ಕಡೆಗೆ ಚಲಿಸಬಹುದೆಂದು ಅವನ ಅಭಿಪ್ರಾಯ. ಅನಂತರ ಆತ ಆಟ್ಲಾಂಟಿಕ್ ಸಾಗರದ ಪೂರ್ವ ಮತ್ತು ಪಶ್ಚಿಮತೀರಗಳಲ್ಲಿರುವ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಗಮನಿಸಿದ. ಅಮೆರಿಕಗಳ ಪಶ್ಚಿಮ ಪಾರ್ಶ್ವಗಳ ಪರ್ವತಶ್ರೇಣಿಗಳು ತೀರಗಳಿಗೆ ಸಮಾಂತರವಾಗಿ ಚಾಚಿನಿಂತಿವೆ. ಪೂರ್ವತಿರಗಳು ಈ ತೀರಗಳಿಗೆ ಓರೆಯಾಗಿ ಬಾಗಿಕೊಂಡಿವೆ. ಪಶ್ಚಿಮ ಭಾರತದಲ್ಲೂ, ಹಾರ್ನ್ ಭೂಶಿರದ ದಕ್ಷಿಣಕ್ಕೂ ದ್ವೀಪಸ್ತೋಮಗಳಿವೆ. ಏಷ್ಯದ ಪೂರ್ವ ತೀರದುದ್ದಕ್ಕೂ ಭೂವೈಜ್ಞಾನಿಕ ಮತ್ತು ಭೌಗೋಳಿಕ ಲಕ್ಷಣಗಳಲ್ಲಿ ಸಾಮ್ಯವುಳ್ಳ ದ್ವೀಪಮಾಲಿಕೆಗಳಿವೆ. ಪೆಸಿಫಿಕ್ ಸಾಗರದ ಮಧ್ಯೆಯಿರುವ ದ್ವೀಪಮಾಲಿಕೆಗಳು ಆಕಾರದಲ್ಲಿ ಸಮಾಂತರ ರೇಖೆಯಲ್ಲಿವೆ. ಮಾರ್ಷಲ್, ಹವಾಯಿ ಮುಂತಾದ ದ್ವೀಪಗಳು ಪಶ್ಚಿಮ ವಾಯವ್ಯ ಮುಖ್ಯರೇಖೆಗಳಿಗೆ ಹೊಂದಿಕೊಂಡಿವೆ. ಆಕಾರ ಮತ್ತು ವಿನ್ಯಾಸಗಳಿಗೆ ಸಂಬಂಧಿಸಿದ ಈ ವಿಚಿತ್ರ ಅಂಶಗಳೊಂದಿಗೆ ವೆಗ್‌ನರ್ ಅಟ್ಲಾಂಟಿಕ್ ಸಾಗರದ ಪೂರ್ವ ಮತ್ತು ಪಶ್ಚಿಮ ಖಂಡಗಳ ಭೂರಚನೆಯಲ್ಲಿ ಅನೇಕ ಸುಸ್ಪಷ್ಟವಾದ ಹೋಲಿಕೆಗಳಿರುವುದನ್ನು ಗುರುತಿಸಿದ್ದಾನೆ. ತನ್ನ ಸಿದ್ಧಾಂತವನ್ನು ಸಮರ್ಥಿಸಲು ಆತ ಅನೇಕ ವಿಧವಾದ ವೈಜ್ಞಾನಿಕ ವಿವರಗಳನ್ನು ಸಂಗ್ರಹಿಸಿದ. ಅವುಗಳ ಪೈಕಿ ಪರ್ಮೋಕಾರ್ಬಾನಿಫೆರಸ್ ಕಾಲದ ಹಿಮನದಿಗಳ ಕಾರ್ಯಗಳ ಬಗ್ಗೆ ಆತ ನೀಡಿದ ವಿವರಣೆ ಮುಖ್ಯವಾದದ್ದು. ಇಂದು ಈ ಕಾರ್ಯಗಳನ್ನು ಮುಖ್ಯವಾಗಿ ಮೇರುಪ್ರದೇಶಗಳಲ್ಲಿ ಮತ್ತು ಉನ್ನತಪರ್ವತಗಳ ಮೇಲೆ ಮಾತ್ರ ಕಾಣಬಹುದಾಗಿದೆ. ಪರ್ವೋಕಾರ್ಬಾನಿಫೆರಸ್ ಕಾಲದಲ್ಲಿ ವ್ಯಾಪಕವಾದ ಹಿಮದ ಮುಸುಕೊಂದು ದಕ್ಷಿಣ ಅಮೆರಿಕ, ದಕ್ಷಿಣ ಭಾರತದ ಕೆಲವು ಭಾಗಗಳು ಹಾಗೂ ಅಂಟಾರ್ಕ್ಟಿಕ ಖಂಡಗಳನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದಿತು. ಇಂದು ಅಂಟಾರ್ಕ್ಟಿಕವೊಂದನ್ನುಳಿದು ಬೇರೆಲ್ಲೂ ಯಾವೊಂದು ರೀತಿಯ ನೀರ್ಗಲ್ಲು ಕ್ರಿಯೆ ಕಾಣಸಿಗುವುದಿಲ್ಲ.
ಭೂ ಇತಿಹಾಸದ ಅತಿ ಹಿಂದಿನಿಂದಲೂ ಖಂಡಗಳು ಅಲೆಯುತ್ತ ಬಂದಿರುವುದು ತಿಳಿದಿದೆ. ಏಷ್ಯದ ಭೂಭಾಗ ಸಹ ನಿಧಾನವಾಗಿ ಪಶ್ಚಿಮಾಭಿಮುಖವಾಗಿ ಸರಿಯುತ್ತ ಬಂದಿರುವುದು ಕಂಡುಬಂದಿದೆ. ಈ ಭೂಚಲನೆಯಿಂದಾಗಿ ಪೂರ್ವತೀರದ ಸಣ್ಣ ಪುಟ್ಟ ಭಾಗಗಳು ಆಗಾಗ ಮುಖ್ಯ ಭೂಭಾಗದಿಂದ ಪ್ರತ್ಯೇಕಗೊಂಡು ಹಿಂದೆ ಉಳಿದಿವೆ. ಅಂಥ ಭೂಭಾಗಗಳು ಇಂದು ಪೆಸಿಫಿಕ್ ಸಾಗರದ ಮತ್ತು ಏಷ್ಯದ ದ್ವೀಪಸ್ತೋಮಗಳು. ದಕ್ಷಿಣ ಮೇರುವಿನಲ್ಲಿದ್ದ ಗೊಂಡ್ವಾನದಿಂದ ಕಾಲಕ್ರಮದಲ್ಲಿ ದಕ್ಷಿಣ ಅಮೆರಿಕ, ಆಫ್ರಿಕ, ಭಾರತ, ಆಸ್ಟ್ರೇಲಿಯ ಮತ್ತು ಮಡಗಾಸ್ಕರ್ ಹಾಗೂ ಅಂಟಾರ್ಕ್ಟಿಕಗಳ ರಚನೆಯಾಯಿತು. ಈ ಭೂಭಾಗಗಳು ಸಮಭಾಜಕವೃತ್ತದ ಕಡೆಗೆ ಚಲಿಸಿದುವು. ದಕ್ಷಿಣ ಅಮೆರಿಕ ಅತಿವೇಗವಾಗಿ ಚಲಿಸಿದ ಕಾರಣ ಮಧ್ಯಜೀವಿ ಕಲ್ಪದಲ್ಲಿ ಅಟ್ಲಾಂಟಿಕ್ ಸಾಗರದ ಉಗಮವಾಯಿತು. ಲಾರೇಶಿಯಿದಿಂದ ಉತ್ತರ ಅಮೆರಿಕ ಬೇರೆಯಾಗಿ ನೈಋತ್ಯಕ್ಕೆ ಚಲಿಸುತ್ತ ನಡುವೆಯೇ ಗ್ರೀನ್‌ಲೆಂಡನ್ನು ಬಿಟ್ಟಿತು. ಉತ್ತರ, ದಕ್ಷಿಣ ಅಮೆರಿಕಗಳು ಇತರ ಖಂಡಗಳಿಗಿಂತಲೂ ಅತಿ ವೇಗವಾಗಿ ಚಲಿಸಿದುದರಿಂದ ಈ ಭೂಖಂಡಗಳ ಮುಂದೊತ್ತುಗಳಿಂದ ರಾಕಿ[೧೮] ಮತ್ತು ಆಂಡೀಸ್ ಪರ್ವತ ಪಂಕ್ತಿಗಳ ರಚನೆಯಾಯಿತು. ಪೂರ್ವ ಅಂಚುಗಳಿಂದ ಪ್ರತ್ಯೇಕಗೊಂಡ ದ್ವೀಪಗಳು ಪಶ್ಚಿಮ ಭಾರತ ಮತ್ತು ಹಾರ್ನ್ ಭೂಶಿರದ ಆಗ್ನೇಯ ದ್ವೀಪಗಳಾದುವು. ಆಫ್ರಿಕ ಪಶ್ಚಿಮದ ಕಡೆಗೆ ಚಲಿಸುತ್ತ ಮುಂದುವರಿಯಿತು. ಆಗ ಮಡಗಾಸ್ಕರ್ ಹಿಂದೆಯೇ ಉಳಿಯಿತಲ್ಲದೆ ಕ್ರಮಕ್ರಮವಾಗಿ ಸ್ವಲ್ಪ ಉತ್ತರಕ್ಕೆ ಚಲಿಸಿತು. ಇದರಂತೆ ಭಾರತ ಉಪಖಂಡ ಸಹ ಶ್ರೀಲಂಕ ದ್ವೀಪವನ್ನು ಕಳಚಿಕೊಂಡಿತು. ಸಮಭಾಜಕ ವೃತ್ತದ ಕಡೆಗೆ ಚಲಿಸುತ್ತಿದ್ದ ಲಾರೇಶಿಯದ ಭಾಗವಾದ ಅಂಗಾರ ಪ್ರದೇಶ ಆಫ್ರಿಕ, ಭಾರತ ಮತ್ತು ಆಸ್ಟ್ರೇಲಿಯಗಳೊಂದಿಗೆ ಘರ್ಷಿಸಿದ ಪರಿಣಾಮವಾಗಿ ಅವೆರಡರ ನಡುವೆಯಿದ್ದ ಟೆತಿಸ್ ಸಮುದ್ರದ ಸಂಚಯನಗಳು ಬಲವಾದ ಒತ್ತಡಗಳಿಗೊಳಗಾಗಿ ಮೇಲಕ್ಕೊತ್ತಲ್ಪಟ್ಟು ಅದರಿಂದ ಇಂದಿನ ಉತ್ತುಂಗ ಶಿಖರಗಳಾದ ಆಲ್ಪ್ಸ್[೧೯] ಮತ್ತು ಹಿಮಾಲಯಗಳ ರಚನೆಯಾಯಿತು. ಇದಲ್ಲದೆ ಅಂಗಾರ ಪ್ರದೇಶ ಭಾರತ ಉಪಖಂಡದ ಮೇಲೆಯೇ ಸವಾರಿಮಾಡಿದ ಕಾರಣದಿಂದ ಅತ್ಯಂತ ಎತ್ತರವಾದ ಟಿಬೆಟ್ ಪ್ರಸ್ಥಭೂಮಿಯ ರಚನೆ ಸಾಧ್ಯವಾಯಿತೆಂದು ಇತರ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
"ಖಂಡಗಳ ಅಲೆತ" ನುಡಿಗಟ್ಟನ್ನು ಜರ್ಮನ್ನಿನಲ್ಲಿ ಮೊದಲು ಬಳಸಿದುದು ವೆಜೆನರ್ (೧೯೧೨ ಮತ್ತು ೧೯೧೫ರಲ್ಲಿ).[೧೪][೨೦] ಇಂತಹ ಅಲೆತಕ್ಕೆ ಭೂಮಿಯ ಪರಿಭ್ರಮಣ ಅಥವಾ ಅಕ್ಷಭ್ರಮಣದಿಂದ ಉಂಟಾದ ಕೇಂದ್ರಾಪಗಾಮಿ ಶಕ್ತಿಯು ಕಾರಣ ಎಂದು ಊಹನವನ್ನು (ಹೈಪೊಥಿಸಿಸ್) ವೆಜೆನರ್ ಮಂಡಿಸಿದ.
ಅವನು ಖಂಡಗಳ ಅಲೆತದ ಬಗೆಗೆ ಸಾಕಷ್ಟು ಪುರಾವೆಗಳನ್ನು ಮುಂದಿಟ್ಟಾಗ್ಯೂ ಇದಕ್ಕೆ ಕಾರಣವಾದ ಶಕ್ತಿಯ ಬಗೆಗಿನ ಮಾಹಿತಿಯು ದುರ್ಬಲವಾಗಿತ್ತು. ಭೂಮಿಯ ಭ್ರಮಣದ ಬಗೆಗಿನ ವೆಜೆನರ್‌ನ ಊಹನವನ್ನು ಪಾಲ್ ಸೋಫಸ್ ಎಪ್‍ಸ್ಟೈನ್ ಅಧ್ಯಯನ ಮಾಡಿ ೧೯೨೦ ರಲ್ಲಿ ತಿರಸ್ಕರಿಸಿದ. ಖಂಡಗಳ ಅಲೆತವನ್ನು ಹಲವು ವರುಷಗಳ ಕಾಲ ಸ್ವೀಕರಿಸಲಿಲ್ಲ. ಇದಕ್ಕೆ ಒಂದು ಕಾರಣ ಖಂಡಗಳ ಚಲನೆಯ ದೂಡುವ ಶಕ್ತಿಯ ಬಗೆಗಿನದಾದರೆ ಇನ್ನೊಂದು ಅವನು ಕೊಟ್ಟ ಚಲನೆಯ ಲೆಕ್ಕ. ಅದು ವರುಷಕ್ಕೆ ೨೫೦ ಸೆಂಮೀನಷ್ಟು ದೊಡ್ಡದಿತ್ತು[೨೧] (ಇಂದು ಅಮೆರಿಕಗಳು ಯುರೋಪು ಮತ್ತು ಆಫ್ರಿಕಾದಿಂದ ದೂರ ಸರಿಯುತ್ತಿರುವ ಒಪ್ಪಿತ ದರ ವರುಷಕ್ಕೆ ೨.೫ ಸೆಂಮೀ).[೨೨]
ವೆಗ್‌ನರ್ ಪ್ರತಿಪಾದಿಸಿದ ಅಲೆತ ಸಿದ್ಧಾಂತವನ್ನು ಸ್ವಾಗತಿಸಿ ಬೆಂಬಲಿಸಿದವರಲ್ಲಿ ದಕ್ಷಿಣ ಆಫ್ರಿಕದ ವಿಖ್ಯಾತ ಭೂವಿಜ್ಞಾನಿ ಅಲೆಗ್ಸಾಂಡರ್ ಡ್ಯೂಟಾಯಿಟ್ ಪ್ರಮುಖನಾದವ.[೨೩] ಈತ ಖಂಡಗಳ ಅಲೆತವನ್ನು ಸಮರ್ಥಿಸುವ ಅನೇಕ ವಿಧವಾದ ಸಾಕ್ಷ್ಯಾಧಾರಗಳನ್ನು ಅನೇಕ ವರ್ಷಗಳ ಕಾಲ, ಅತಿಮುಖ್ಯವಾಗಿ ಗೊಂಡ್ವಾನ ಭೂಖಂಡಗಳಲ್ಲಿ ಸಂಗ್ರಹಿಸಿದ್ದಾನೆ. ಅಟ್ಲಾಂಟಿಕ್ ಸಾಗರದ ಎರಡೂ ಬದಿಗಳಲ್ಲಿರುವ ಪ್ರಸ್ತರಗಳು, ಫಾಸಿಲುಗಳು, ಪ್ರಾಚೀನ ಹವಾಗುಣಗಳು ಮತ್ತು ಭೂಚಲನೆ ಇತ್ಯಾದಿಗಳನ್ನೂ ಸುಮಾರು 200 ಮಿಲಿಯನ್ ವರ್ಷಗಳಿಗೂ ಹಿಂದಿನ ಹಿಮಯುಗದಲ್ಲಿ ಯಥೇಚ್ಛವಾಗಿ ಹರಡಿದ್ದ ನೀರ್ಗಲ್ಲುನದಿಗಳ ಪ್ರವಾಹಗಳ ಬಗೆಗೆ ಇಂದು ಲಭ್ಯವಾಗಿರುವ ಅನೇಕ ವಿಧವಾದ ಸಾಕ್ಷ್ಯಾಧಾರಗಳನ್ನೂ ಕುರಿತು ವಿವರಿಸಿದ್ದಾನೆ. ಡ್ಯೂಟಾಯಿಟ್ ತಾನು ಗುರುತಿಸಿದ ಅನೇಕ ತೆರನಾದ ಹೋಲಿಕೆಗಳನ್ನು 'ನಮ್ಮ ಅಲೆದಾಡುವ ಭೂಖಂಡಗಳು' ಎಂಬ ತನ್ನ ಪುಸ್ತಕದಲ್ಲಿ ಅತಿಸ್ವಾರಸ್ಯವಾಗಿ ನಿರೂಪಿಸಿದ್ದಾನೆ.[೨೪] ಡ್ಯೂಟಾಯಿಟನ ಕನಿಷ್ಠ ಅಂದಾಜಿನ ಪ್ರಕಾರ ಮೂಲತಃ ದಕ್ಷಿಣ ಅಮೆರಿಕ ಮತ್ತು ಆಫ್ರಿಕ ತೀರಗಳು ಕೇವಲ 40 ಕಿಮೀ. ಅಂತರದಲ್ಲಿದ್ದುವು. 1961 ರಲ್ಲಿ ಎಚ್.ಮಾರ್ಟಿನ್ ಎಂಬಾತ್ ಡ್ಯೂಟಾಯಿಟ್ಟನ ಅಭಿಪ್ರಾಯಗಳನ್ನು ಪುನಃ ಪರಿಶೀಲಿಸಿದ. ಸೈಲೂರಿಯನ್ ಯುಗದಿಂದ ಹಿಡಿದು ಕ್ರಿಟೇಷಸ್ ಯುಗದವರೆಗೂ ಪದರಶಿಲೆಗಳು ಮತ್ತು ಇನ್ನೂ ಅನೇಕ ವಿಧವಾದ ಅಗ್ನಿಶಿಲೆಗಳಲ್ಲಿ ಕ್ರಮವಾಗಿ ಹೋಲಿಕೆಗಳು ಸ್ಪಷ್ಟಗೊಳ್ಳುತ್ತ ಹೋಗಿರುವುದನ್ನು ಗಮನಿಸಿದ. (ಇತ್ತೀಚೆಗೆ ಕ್ಯಾಲಿಫೋರ್ನಿಯ ಇನ್ಸ್‌ಟಿಟ್ಯೂಟಿನ ಭೂವಿಜ್ಞಾನ ಇಲಾಖೆಯ ಗಿಲ್ಬರ್ಟ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಭೂವಿಜ್ಞಾನ ಇಲಾಖೆಯ ಹ್ಯಾಲಮ್ ಎಂಬವರು ಗಣಕಯಂತ್ರಗಳ ನೆರವಿನಿಂದ 500 ಫ್ಯಾದಂಗಳ ಕೆಳಗೆ ಗೊಂಡ್ವಾನ ಭೂಖಂಡಗಳಲ್ಲಿ ಅತ್ಯಂತ ಸಮರ್ಪಕವಾದ ಜ್ಯಾಮಿತೀಯ ಜೋಡಣೆಗಳಿರುವುದನ್ನು ಕಂಡುಹಿಡಿದಿದ್ದಾರೆ.)
ಖಂಡಗಳ ಅಲೆತಕ್ಕೆ ಪುರಾವೆಗಳು
ಬದಲಾಯಿಸಿಇಂದು ಭೂಫಲಕಗಳ ಚಲನೆಯಿಂದ ಆದ ಖಂಡಗಳ ಚಲನೆಗೆ ಪುರಾವೆಗಳು ವಿಸ್ತೃತವಾಗಿವೆ. ಒಂದೇ ರೀತಿಯ ಸಸ್ಯ ಮತ್ತು ಪ್ರಾಣಿಗಳ ಪಳೆಯುಳಿಕೆಗಳು ಬೇರೆ ಬೇರೆ ಖಂಡಗಳಲ್ಲಿ ಕಂಡುಬಂದಲ್ಲಿ ಅವು ಒಮ್ಮೆ ಈ ಖಂಡದ ಭಾಗಗಳು ಸೇರಿಕೊಂಡಿದ್ದವು ಎಂದು ಸೂಚಿಸುತ್ತವೆ. ಮೆಸೊಸಾರಸ್ ಸಣ್ಣ ಮೊಸಳೆ ಗಾತ್ರದ ಅಳಿದ ಹಲ್ಲಿ ಗುಂಪಿಗೆ ಸೇರಿದ ಸಿಹಿನೀರಿನಲ್ಲಿ ವಾಸಿಸುತ್ತಿದ್ದ ಒಂದು ಪ್ರಾಣಿ. ಇದರ ಪಳಿಯುಳಿಕೆಗಳು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವುದು ಒಂದು ಉದಾಹರಣೆ. ಇಂದು ಅಳಿದ ಸಲಿಕೆ ಹಲ್ಲಿ ಎಂದು ಕರೆಯಲಾದ ಲಿಸ್ಟ್ರೊಸಾರಸ್‌ನ ಪಳಿಯುಳಿಕೆಗಳು ಆಫ್ರಿಕಾ, ಭಾರತ ಮತ್ತು ಅಂಟಾರ್ಕ್ಟಿಕದಲ್ಲಿ ದೊರೆಯುವುದು ಇನ್ನೊಂದು ಉದಾಹರಣೆ.[೨೫] ಜೀವಂತ ಪ್ರಾಣಿಗಳ ಸಾಕ್ಷಿಗಳು ಸಹ ಇವೆ. ಉದಾಹರಣೆಗೆ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾಗಳಲ್ಲಿ ಕಂಡು ಬರುವ ಒಂದೇ ಕುಟುಂಬದ ಎರೆಹುಳುಗಳು.
ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳ ಭಾಗಗಳು ಒಂದಕ್ಕೊಂದು ಪೂರಕವಾಗಿ ಕಂಡುಬರುತ್ತಿರುವುದು ಅಕಸ್ಮಿಕ. ಮುಂದೆ ಹಲವು ದಶಲಕ್ಷ ವರುಷಗಳಲ್ಲಿ ಈ ಖಂಡಗಳು ಬೇರೆ ರೀತಿಯಲ್ಲಿ ತಿರುಗಬಹುದು. ಈ ತಾತ್ಕಾಲಿಕ ಹೊಂದಾಣಿಕೆಯು ವೆಜೆನರನನ್ನು ಖಂಡಗಳ ಅಲೆತಗಳನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸಿತು. ಆದರೆ ಅವನು ತನ್ನ ಊಹನ ಸಾಮಾನ್ಯವಾಗಿ ಒಪ್ಪಿಗೆಯಾಗುವುದನ್ನು ಕಾಣಲು ಬದುಕಲಿಲ್ಲ.
ಬಹಳ ವಿಸೃತವಾಗಿ ಹರಡಿದ ಪರ್ಮೊ-ಕಾರ್ಬನಿಫೆರಸ್ ಹಿಮನದಿಯ ಸಂಚಯಗಳು ಖಂಡಗಳ ಅಲೆತಕ್ಕೆ ದೊಡ್ಡ ಸಾಕ್ಷಿ. ಈ ಸಂಚಯಗಳು ದಕ್ಷಿಣ ಅಮೆರಿಕ, ಆಫ್ರಿಕಾ, ಮಡಗಾಸ್ಕರ್, ಅರೇಬಿಯ, ಭಾರತ, ಅಂಟಾರ್ಕಿಟಿಕ ಮತ್ತು ಆಸ್ಟ್ರೇಲಿಯಗಳಲ್ಲಿ ಹರಡಿವೆ. ಆಸಕ್ತಿದಾಯಕ ಅಂಶವೆಂದರೆ ಭಾರತದಲ್ಲಿನ ಈ ಸಂಚಯಗಳು ಇಂದು ಹಿಮಾಲಯ ಇರುವ ದಿಕ್ಕಿನಿಂದ ಬಂದಿಲ್ಲ, ಬದಲಾಗಿ ದಕ್ಷಿಣದಿಂದ ಬಂದಿವೆ. ಇದು ಖಂಡಗಳ ಅಲೆತದ ಭಾಗವಾದ ಗೊಂಡ್ವಾನದ ಆಸ್ತಿತ್ತ್ವವನ್ನು ಸೂಚಿಸುತ್ತದೆ.[೨೦]
ನೀರ್ಗಲ್ಲು ನಿಕ್ಷೇಪಗಳು
ಬದಲಾಯಿಸಿಗೊಂಡ್ವಾನ ಭೂಖಂಡಗಳ ಅಸ್ತಿತ್ವದ ಬಗೆಗೆ ಲಭ್ಯವಾಗಿರುವ ಅನೇಕ ಸಾಕ್ಷ್ಯಾಧಾರಗಳ ಪೈಕಿ ಅವುಗಳಲ್ಲಿ ಕಂಡುಬರುವ ನೀರ್ಗಲ್ಲು ನಿಕ್ಷೇಪಗಳು ಬಹು ಮುಖ್ಯವಾಗಿವೆ. ಭೌಗೋಳಿಕವಾಗಿ ಈ ಭೂಖಂಡಗಳು ಪರಸ್ಪರ ದೂರ ದೂರದಲ್ಲಿದ್ದರೂ ಅವುಗಳಲ್ಲೆಲ್ಲ ಒಂದೇ ವಿಧವಾದ ನೀರ್ಗಲ್ಲು ನಿಕ್ಷೇಪಗಳಿವೆ. ಆದ್ದರಿಂದ ಈ ಭೂಭಾಗಗಳೆಲ್ಲವೂ ಹಿಂದೆ ಒಂದು ಬೃಹತ್ ಭೂಖಂಡವೊಂದರಲ್ಲಿ ಅಡಕವಾಗಿದ್ದು ಕಾಲಕ್ರಮದಲ್ಲಿ ಪ್ರತ್ಯೇಕಗೊಂಡು ದೂರದೂರಕ್ಕೆ ಸರಿದಿರಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಪ್ರಾಚೀನ ಜೀವಿಕಲ್ಪ ಕೊನೆಯಲ್ಲಿ ದಕ್ಷಿಣ ಅಮೆರಿಕ, ಆಫ್ರಿಕ, ಫಾಕ್ ದ್ವೀಪಗಳು, ಭಾರತ, ಆಸ್ಟ್ರೇಲಿಯ ಮತ್ತು ಆಫ್ರಿಕದ ನೈಋತ್ಯ ಭಾಗಗಳಲ್ಲಿ ಆದ ನೀರ್ಗಲ್ಲಿನ ನಿಕ್ಷೇಪಗಳು ಅತಿದಪ್ಪವಾಗಿವೆ. ಒಮ್ಮೆ ಅಲ್ಲಿದ್ದ ಹಿಮದ ಹಾಳೆಗಳೆಲ್ಲವೂ ಇಂದು ಕಣ್ಮರೆಯಾಗಿವೆ.
ಪ್ರಾಚೀನ ಉಪ್ಪು ನಿಕ್ಷೇಪಗಳು ಮತ್ತು ಹವಳಗಳು
ಬದಲಾಯಿಸಿಸಮುದ್ರದ ನೀರು ಆವಿಯಾಗುವುದರ ಮೂಲಕ ಕೆಲವು ಕಡೆಗಳಲ್ಲಿ ಉಪ್ಪು ಮತ್ತು ಜಿಪ್ಸಂ ಮುಂತಾದ ಲವಣಗಳ ನಿಕ್ಷೇಪಗಳಾಗಿವೆ. ಇದರಿಂದ ಆ ಪ್ರದೇಶಗಳಲ್ಲಿ ಹಿಂದೆ ಉಷ್ಣಪೂರಿತ ಮತ್ತು ಶುಷ್ಕವಾತಾವರಣ ಇದ್ದುದು ಸ್ಪಷ್ಟವಾಗುತ್ತದೆ. ಇಂದಿನ ಉಷ್ಣ ಮತ್ತು ಶುಷ್ಕ ವಲಯಗಳು ಸಮಭಾಜಕವೃತ್ತಕ್ಕೆ ಸುಮಾರು 23'/30' ಉತ್ತರಕ್ಕೂ ದಕ್ಷಿಣಕ್ಕೂ ಕೇಂದ್ರೀಕೃತವಾಗಿವೆ. ಉತ್ತರಾರ್ಧಗೋಲದಲ್ಲಿದ್ದ ಉಪ್ಪಿನ ವಲಯಗಳು ಅರ್ಡೋವಿಸಿಯನ್ ಮತ್ತು ಸೈಲೂರಿಯನ್ ಯುಗಗಳಲ್ಲಿ ಮೇರುಗಳ ಸಮೀಪದಿಂದ ಮರುಭೂಮಿಯಿರುವ ವಲಯಗಳಿಗೆ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಮೇರುಗಳ ಮತ್ತು ಭೂಖಂಡಗಳ ಸಾಪೇಕ್ಷ ಚಲನೆಗಳನ್ನು ಇಂದಿನ ಪರಿಸ್ಥಿತಿಗಳೊಂದಿಗೆ ಹೊಂದಿಸಲು ಇದರಿಂದ ಸಾಧ್ಯವಾಗುತ್ತದೆ. ಭೌಗೋಳಿಕವಾಗಿ ಬದಲಾದ ಹವಾಗುಣಗಳಿಗೆ ಹವಳಗಳು ಸೂಚಕವಾಗಿವೆ. ಇಂದು ಅವು ಬೆಚ್ಚನೆಯ, ಉಷ್ಣತೆ 25' ಸೆಂ.ಗೆ ಕಡಿಮೆಯಿಲ್ಲದ, ಶುದ್ಧವಾದ ಸಮುದ್ರದ ನೀರಿಗೆ ಮಾತ್ರ ಸಿಮಿತಗೊಂಡಿವೆ; ಅಂದರೆ ಸಮಭಾಜಕವೃತ್ತದ ಸುಮಾರು 23' 30' ಉತ್ತರ ಮತ್ತು ದಕ್ಷಿಣಕ್ಕೆ ದಿಬ್ಬಗಳನ್ನು ರಚಿಸುವ ಈ ಸೂಕ್ಷ್ಮಜೀವಿಗಳು ಮಧ್ಯಜೀವಿಯುಗದ ತಮ್ಮ ಹಂಚಿಕೆಯ ಅರ್ಧದಷ್ಟನ್ನು ಕೂಡ ಇಂದು ಸಮೀಪಿಸಲಾಗಿಲ್ಲವೆಂಬುದು ಅವುಗಳ ಬಗೆಗೆ ನಡೆಸಿದ ಅಧ್ಯಯನದಿಂದ ಕಂಡುಬರುತ್ತದೆ.
ಸಸ್ಯಗಳು ಮತ್ತು ಉರಗಗಳು
ಬದಲಾಯಿಸಿಗೊಂಡ್ವಾನದಿಂದ ಹಿಮದ ಹಾಳೆಗಳು ಕಣ್ಮರೆಯಾದ ಸ್ವಲ್ಪಕಾಲದಲ್ಲೇ ನೆಲದ ಮೇಲೆ ಪ್ರಪ್ರಥಮವಾಗಿ ಸಸ್ಯಗಳ ಗುಂಪೊಂದು ಕಾಣಿಸಿಕೊಂಡಿತು. ಈ ಸಸ್ಯವರ್ಗಕ್ಕೆ ಗ್ಲಾಸಾಪ್ಟರಿಸ್ ಎಂದು ಹೆಸರು. ಇದು ಗೊಂಡ್ವಾನದ ಎಲ್ಲ ಖಂಡಗಳಲ್ಲಿಯೂ ಪತ್ತೆಯಾಗಿದೆ.[೨೬][೨೭][೨೮][೨೯][೩೦][೩೧] ಅಲ್ಲದೆ ಇದನ್ನು ಸುಮಾರು 60 ವರ್ಷಗಳ ಹಿಂದೆಯೇ ದಕ್ಷಿಣ ಮೇರುವಿನಿಂದ ಸುಮಾರು 300 ಮೈಲಿ ದೂರದಲ್ಲಿದ್ದ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಸ್ಕಾಟ್ ಮತ್ತು ಅವನ ಸಂಗಡಿಗರು ಪತ್ತೆಮಾಡಿದ್ದರು. ಈ ಸಸ್ಯಗಳು ವಿಶಾಲವಾದ ಜಲಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದರೂ ಅವು ಎಲ್ಲ ವಿಧದಲ್ಲಿ ಒಂದೇ ರೀತಿಯಲ್ಲಿದ್ದು ಭೂಖಂಡಗಳ ಅಲೆತವನ್ನು ಸಮರ್ಥಿಸುವ ಪ್ರಬಲ ಸಾಕ್ಷ್ಯಗಳಾಗಿವೆ. ಗ್ಲಾಸಾಪ್ಟರಿಸ್ ಹಂಚಿಕೆಯಾಗಿರುವ ವಿವಿಧ ಭೂಭಾಗಗಳೆಲ್ಲವೂ ಹಿಂದೆ ಒಂದೇ ಒಂದು ಬೃಹತ್ ಭೂಖಂಡವೊಂದರಲ್ಲಿ ಅಡಕವಾಗಿದ್ದು ಕ್ರಮೇಣ ಆ ಭಾಗಗಳು ಪ್ರತ್ಯೇಕಗೊಂಡು ದೂರದೂರಕ್ಕೆ ಸರಿದುವು. ಇದರಿಂದ ಅವುಗಳ ವಿತರಣೆಯನ್ನು ಸುಲಭವಾಗಿ ವಿವರಿಸಬಹುದೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಜೀವಿಕಲ್ಪವನ್ನು ಉರಗಗಳ ಯುಗವೆಂದು ಕೂಡ ಕರೆದಿದ್ದಾರೆ. ಈ ಕಲ್ಪದಲ್ಲಿ ಅಸ್ತಿತ್ವದಲ್ಲಿದ್ದ ಗೊಂಡ್ವಾನ ಭೂಖಂಡದ ಬಗ್ಗೆ ಲಭ್ಯವಾಗಿರುವ ಅನೇಕ ವಿಧವಾದ ಸಾಕ್ಷ್ಯಾಧಾರಗಳ ಪೈಕಿ ಉರಗಗಳು ಅತಿ ಮುಖ್ಯವಾದವು. ಫಾನ್ ಹೂಯೆನ್ ಎಂಬ ವಿಜ್ಞಾನಿಯ ಅಭಿಪ್ರಾಯದಲ್ಲಿ ಭಾರತದಲ್ಲಿ ಜೀವಿಸಿದ್ದ ಡೈನೋಸಾರಸುಗಳಿಗೂ ಮಡಗಾಸ್ಕರ್, ಬ್ರಜ಼ಿಲ್, ಉರುಗ್ವೆ ಮತ್ತು ಆರ್ಜೆಂಟೀನದಲ್ಲಿ ಜೀವಿಸುತ್ತಿದ್ದ ಡೈನೋಸಾರಸುಗಳಿಗೂ ಅತಿ ನಿಕಟವಾದ ಸಂಬಂಧಗಗಳಿವೆ. ನೀರಿನಲ್ಲೇ ಜೀವಿಸುತ್ತ ಮೀನುಗಳನ್ನು ತಿನ್ನುತ್ತಿದ್ದ ಮೀಸೋಸಾರಸ್ ಎಂಬ ಸಣ್ಣ ಉರಗದ ಅವಶೇಷಗಳು ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಸರೋವರ ಸಂಚಯನಗಳಲ್ಲಿ ಪತ್ತೆಯಾಗಿವೆ. ಈ ಸ್ಥಳಗಳ ಹೊರತಾಗಿ ಬೇರೆಲ್ಲೂ ಇಂಥ ಅವಶೇಷಗಳು ಪತ್ತೆಯಾಗಿಲ್ಲದಿರುವುದು ಒಂದು ವಿಶೇಷದ ಸಂಗತಿ. ಈ ಮೀಸೋಸಾರಸ್ ಅಟ್ಲಾಂಟಿಕ್ ಸಾಗರದಂಥ ವಿಶಾಲವಾದ ಜಲಭಾಗವನ್ನು ಈಜಿಹೋಗಿರಬಹುದಾದ ಸಾಧ್ಯತೆಗಳು ತೀರ ಕಡಿಮೆಯೆಂದೂ ದಕ್ಷಿಣ ಅಮೆರಿಕ ಮತ್ತು ಆಫ್ರಿಕಗಳು ಹಿಂದೆ ಒಂದಾಗಿಯೇ ಇದ್ದುದಕ್ಕೆ ಈ ಮೀಸೋಸಾರಸ್ಸೇ ಸಾಕ್ಷಿಯೆಂದೂ ವಿಜ್ಞಾನಿಗಳ ಅಭಿಪ್ರಾಯ.[೩೨][೩೩] ಇದಷ್ಟೇ ಅಲ್ಲದೆ ಥೀಲೋಡಾಂಟ್ ಎಂಬ ಮತ್ಸ್ಯದ ಅವಶೇಷಗಳು ಕೆಲವು ಸೈಲೂರಿಯನ್ ಮತ್ತು ಡಿವೋನಿಯನ್ (ಸು. 425-390 ಮಿಲಿಯನ್ ವರ್ಷಗಳ ಹಿಂದೆ) ಶಿಲೆಗಳಲ್ಲಿ ಸಿಕ್ಕಿವೆ. ಭೂಖಂಡಗಳ ಅಲೆತವನ್ನು ಕುರಿತು ಅಧ್ಯಯನ ನಡೆಸುತ್ತಿರುವ ಭೂವಿಜ್ಞಾನಿಗಳಿಗೆ ಸಿಕ್ಕಿರುವ ಅತಿ ಹಿಂದಿನ ಕೆಲವು ಮತ್ಸ್ಯಗಳು ಅಲೆತದ ಕಾಲದ ಬಗ್ಗೆಯೂ ಸುಳುವು ನೀಡಿವೆ.
ಗೊಂಡ್ವಾನ ಶಿಲೆಗಳು
ಬದಲಾಯಿಸಿಭಾರತದ ಜಲಜಶಿಲೆಗಳಿಗೂ ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲೆಂಡ್ ಮತ್ತು ಟಾಸ್ಮೇನಿಯದ ಜಲಜಶಿಲೆಗಳಿಗೂ ನಡುವೆ ಸ್ಪಷ್ಟವಾದ ಹೋಲಿಕೆಗಳಿವೆ. ಇವುಗಳ ಪೈಕಿ ಪೆಂಟೆಶಿಲೆ, ಮರಳುಶಿಲೆ ಮತ್ತು ಅನೇಕ ವಿಧವಾದ ಸುಣ್ಣಶಿಲೆಗಳಿವೆ. ಇದಲ್ಲದೆ ಲೆಪಿಡೋಡೆಂಡ್ರಾನ್, ಸಿಜಿಲೇರಿಯ ಮುಂತಾದ ಸಸ್ಯಾವಶೇಷಗಳೂ ಅನೇಕ ವಿಧದ ಅಕಶೇರುಕಗಳೂ ಅಲ್ಲಿ ದೊರೆತಿವೆ. ಆಸ್ಟ್ರೇಲಿಯದ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಭಾರತದ ಬಿಹಾರ್ ಮತ್ತು ಉತ್ತರ ಪ್ರದೇಶಗಳಲ್ಲಿ ಸಿಗುವ ಗಂಗಮಾಪ್ಟರೀಸ್ ಮತ್ತು ಗ್ಲಾಸಾಪ್ಟರಿಸ್ ಸಸ್ಯಾವಶೇಷಗಳು ದೊರೆತಿವೆ. ಆಸ್ಟ್ರೇಲಿಯದಲ್ಲಿ ಸಿಗುವ ಕೇಂಬ್ರಿಯನ್ ಯುಗಕ್ಕೂ ಹಿಂದಿನ ಕಬ್ಬಿಣದ ಅದುರುಗಳು ಭಾರತದ ಸಿಂಗ್‌ಬಮ್ ಮತ್ತು ಬಸ್ತರ್‌ಗಳಲ್ಲಿ ದೊರಕಿವೆ. ಇವು 2,000-2,200 ಮಿಲಿಯನ್ ವರ್ಷಗಳಿಗೂ ಹಿಂದಿನವು. ಇದಲ್ಲದೆ ಪಶ್ಚಿಮ ಆಸ್ಟ್ರೇಲಿಯದ ಕಾಲ್ಗೂರ್ಲಿಯಲ್ಲಿಯೂ ಭಾರತದ ಕೋಲಾರದಲ್ಲಿಯೂ ಚಿನ್ನದ ನಿಕ್ಷೇಪಗಳುಳ್ಳ ಶಿಲೆಗಳು ಸರಿಸಮವಾಗಿರುವುದು ಕಂಡುಬಂದಿದೆ. ಸುಮಾರು 2,400 ಮಿಲಿಯನ್ ವರ್ಷಗಳ ಹಿಂದೆ ಈ ಎರಡೂ ಭೂಖಂಡಗಳಲ್ಲಿ ಚಿನ್ನದ ನಿಕ್ಷೇಪಗಳ ರಚನೆಯಾಯಿತೆಂದು ತಿಳಿದುಬಂದಿದೆ. ಅಲೆಗ್ಸಾಂಡರ್ ಡ್ಯೂಟಾಯಿಟ್ ಭಾರತ ಮತ್ತು ಆಫ್ರಿಕ ಖಂಡಗಳ ನಡುವೆ ಹಿಂದೆ ಇದ್ದ ಸಂಪರ್ಕವನ್ನು ಗುರುತಿಸಿದ್ದಾನೆ. ಈ ಎರಡೂ ಭೂಭಾಗಗಳಲ್ಲಿ ಪತ್ತೆಯಾಗಿರುವ ಒಂದೇ ರೀತಿಯ ಜಲಜಶಿಲೆಗಳು, ಫಾಸಿಲುಗಳು, ಅಲ್ಲಿನ ಭೂಚಲನೆಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳು ಅವುಗಳ ನಿಕಟ ಸಂಪರ್ಕಕ್ಕೆ ಸಾಕ್ಷಿಯಾಗಿವೆ.
ಶಿಲಾಶ್ರೇಣಿ
ಬದಲಾಯಿಸಿಕೇಂಬ್ರಿಯನ್ ಯುಗಕ್ಕೂ ಮುಂಚಿನ ಶಿಲೆಗಳು ಅತ್ಯಂತ ಕೆಳಗಿವೆ. ಕೆಲವೆಡೆ ನೀರ್ಗಲ್ಲು ಪ್ರವಾಹಕ್ಕೊಳಗಾದ ಗೀರುಗಳುಳ್ಳ ಶಿಲೆಗಳೂ ಇವೆ. ಇವುಗಳ ಮೇಲೆ ನೀರ್ಗಲ್ಲು ಸಂಚಯನಗಳಿವೆ. ಇನ್ನೂ ಮೇಲ್ಭಾಗದಲ್ಲಿ ಭೂಸಂಚಯನಗಳಾದ ಮರಳುಶಿಲೆ, ಜೇಡುಶಿಲೆಗಳು ಕಲ್ಲಿದ್ದಲು ನಿಕ್ಷೇಪಗಳನ್ನೊಳಗೊಂಡಿವೆ. ಇವಕ್ಕೂ ಮೇಲೆ ಮರುಭೂಮಿಯಲ್ಲಿ ರಚಿತವಾದ ಮರಳುಶಿಲೆಗಳು ಕಂಡುಬರುತ್ತವೆ. ಅವುಗಳ ಕೆಳಗೆ ಅಥವಾ ಮಧ್ಯಭಾಗದಲ್ಲಿ ಲಾವಾ ಹರವುಗಳಿವೆ. ಭಾರತದಲ್ಲಿ ಗೋಂಡ್ವಾನ ಗುಂಪಿನ ಶಿಲೆಗಳೆಂದು ಕರೆಯಲಾಗಿರುವ ಈ ಶಿಲಾ ಶ್ರೇಣಿಯ ದಪ್ಪ ಸುಮಾರು 20,000'. ಇದೇ ಮಾದರಿಯ ಶಿಲೆಗಳಿಗೆ ಆಫ್ರಿಕದಲ್ಲಿ ಕಾರೂ ಸಮುದಾಯದ ಶಿಲೆಗಳೆಂದು ಹೆಸರು. ಈ ಶಿಲಾಶ್ರೇಣಿಯ ದಪ್ಪ ಸುಮಾರು 35,000'. ಮಡಗಾಸ್ಕರಿನ ಕೆಲವು ಶಿಲೆಗಳು, ಪೂರ್ವ ಅಫ್ರಿಕದ ಶಿಲೆಗಳು ಮತ್ತು ಗುಜರಾತಿನ ಕಚ್ ಶಿಲೆಗಳು ಇವುಗಳ ನಡುವೆ ಹೋಲಿಕೆಗಳಿವೆ. ಇದಲ್ಲದೆ ಒಂದು ಕಡೆ ಕೀನ್ಯಾ ಮತ್ತು ಮಡಗಾಸ್ಕರಿಗೂ ನಡುವೆ, ಮತ್ತೊಂದು ಕಡೆ ಮಡಗಾಸ್ಕರ್ ಮತ್ತು ಕಚ್‌ಗೂ ನಡುವೆ ಹಿಂದೆ ಒಂದು ನಿರ್ದಿಷ್ಟವಾದ ಸಮುದ್ರ ಸಂಪರ್ಕವಿದ್ದುದಕ್ಕೆ ಸಾಕ್ಷ್ಯ ದೊರೆತಿದೆ. ಇಲ್ಲಿಯೂ ಅನೇಕ ವಿಧವಾದ ಅಕಶೇರುಕಗಳು ದೊರೆತಿವೆ. ಆಫ್ರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳಲ್ಲಿ ದೊರೆಯುವ ಜಲಜ ಶಿಲೆಗಳು ಆಳವಲ್ಲದ ನೀರಿನ ಸಂಚಯನಗಳಾಗಿವೆ. ಈ ಶಿಲೆಗಳು ಮತ್ತು ಅವುಗಳ ಫಾಸಿಲುಗಳಲ್ಲಿ ಒಂದೇ ರೀತಿಯ ಹೋಲಿಕೆಗಳಿವೆ: ಇಲ್ಲಿನ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಸಿಗುವ ಗ್ಲಾಸಾಪ್ಟರಿಸ್ ಸಸ್ಯಾವಶೇಷಗಳು ಈ ಭೂಖಂಡಗಳಿಗಿದ್ದ ಹಿಂದಿನ ಸಂಪರ್ಕಗಳಿಗೆ ಸಾಕ್ಷಿಯೆನಿಸಿವೆ. (ಮೂಲತಃ ಈ ಭೂಖಂಡಗಳ ತೀರಗಳ ಅಂತರ ಸುಮಾರು 40 ಕಿಮೀ. ಗಳಷ್ಟಿದ್ದಿರಬೇಕೆಂದು ಡ್ಯೂಟಾಯಿಟ್ ಒಂದು ಕನಿಷ್ಠ ಅಂದಾಜು ಮಾಡಿದ್ದಾನೆ.) ಹಿಮದ ಹಾಳೆಗಳು ಆಫ್ರಿಕದಿಂದ ದಕ್ಷಿಣ ಅಮೆರಿಕದ ಕಡೆಗೆ ಚಲಿಸಿರುವುದನ್ನು ತೋರುವ ಅನೇಕ ಕರುಹುಗಳು ಕಂಡುಬಂದಿವೆ. ದಕ್ಷಿಣ ಅಮೆರಿಕದ ಬ್ರಜ಼ಿಲಿನ ಉಬ್ಬು ಭಾಗದೊಂದಿಗೆ ಪಶ್ಚಿಮ ಆಫ್ರಿಕದ ಗಿನಿಕಂದರ ಒಂದೇ ಕಾಗದದ ಎರಡು ಸಿಕ್ಕಾಪಟ್ಟೆ ಕತ್ತರಿಸಿದ ಭಾಗಗಳು ಪರಸ್ಪರ ಸೇರುವಂತೆ ಕೂಡಿಕೊಳ್ಳುತ್ತವೆ.
ಅಂಟಾರ್ಕ್ಟಿಕ ಇಂದು ಒಂದು ನಿರ್ಜೀವ ಭೂಖಂಡವೆನ್ನಬಹುದು. ಹಲವಾರು ವರ್ಷಗಳಿಂದಲೂ ಇದು ಅಗಾಧವಾದ ಹಿಮದ ಹೊದಿಕೆಯಿಂದ ಮುಚ್ಚಿಹೋಗಿದೆ. ಸುಮಾರು ಅರ್ಧ ಶತಮಾನದಿಂದೀಚೆಗೆ ಇಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತ ಬರಲಾಗಿದೆ. ಅಂಟಾರ್ಕ್ಟಿಕದಲ್ಲಿ ಕೆಲವು ಕಲ್ಲಿದ್ದಲು ನಿಕ್ಷೇಪಗಳಿವೆ.[೩೪] ಅದರಲ್ಲಿ ಭಾರತದ ಗೊಂಡ್ವಾನ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಸಿಗುವಂಥ ಗ್ಲಾಸಾಪ್ಟರೀಸ್ ಸಸ್ಯಾವಶೇಷಗಳು ಸಿಕ್ಕಿವೆ. ಅಲ್ಲದೆ ಅನೇಕ ವಿಧವಾದ ಅಕಶೇರುಕಗಳೂ ದೊರೆತಿವೆ. ಶಿಲೆಗಳ ಪೈಕಿ ಪೆಂಟೆಶಿಲೆ, ಜೇಡುಶಿಲೆ ಮತ್ತು ಸುಣ್ಣಶಿಲೆಗಳು ಮುಖ್ಯವಾಗಿವೆ. ಇದರಿಂದ ಅಂಟಾರ್ಕ್ಟಿಕ ಹಿಂದೆ ಇನ್ನೂ ಉತ್ತರಕ್ಕಿದ್ದು ಅಂದರೆ ಜೀವಿಗಳ ಬದುಕಿಗೆ ಅನುಕೂಲವಾಗಿದ್ದ ಅಕ್ಷಾಂಶಗಳಲ್ಲಿದ್ದು ಕ್ರಮೇಣ ಇಂದಿನ ಸ್ಥಾನಕ್ಕೆ ಬಂದು ನಿಂತಿರಬೇಕೆಂದು ತರ್ಕಿಸಲಾಗಿದೆ.[೩೫] ಒಹಾಯೊ ಸ್ಟೇಟ್ ವಿಜ್ಞಾನಿಗಳ ತಂಡವೊಂದು ದಕ್ಷಿಣ ಮೇರುವಿಗೆ ಸುಮಾರು 500 ಕಿಮೀ. ದೂರದಲ್ಲಿ 200 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಟ್ರೈಯಾಸಿಕ್ ಕಾಲದ ಲಿಸ್ಟ್ರ್ರೋಸಾರಸ್ ಎಂಬ ದ್ವಿಚರ ಜೀವಿಯ ತಲೆಬುರುಡೆಯನ್ನು ಪತ್ತೆಮಾಡಿತು.[೩೬] ಹಿಂದೆ ಈ ಪ್ರಾಣಿ ದಕ್ಷಿಣ ಅಮೆರಿಕ ಮತ್ತು ಏಷ್ಯದ ಕೆಲವು ಭಾಗಗಳಲ್ಲಿ ಜೀವಿಸಿತ್ತೆಂದು ತಿಳಿದುಬಂದಿದೆ. ಭೂವಿಜ್ಞಾನಿಗಳ ಅಭಿಪ್ರಾಯದಲ್ಲಿ ಇದೊಂದು ಸೂಚಿ ಫಾಸಿಲ್ (ಇಂಡೆಕ್ಸ್ ಫಾಸಿಲ್). ಇದು ದೊರೆತ ನಿವೇಶನದಲ್ಲಿಯೇ ಇನ್ನೂ ಅನೇಕ ಬಗೆಯ ಪ್ರಾಣಿಗಳ ಅವಶೇಷಗಳೂ ದೊರೆತವು.
ಪ್ರಾಕ್ಕಾಂತತ್ವ (ಪೇಲಿಯೋ ಮ್ಯಾಗ್ನೆಟಿಸಂ)
ಬದಲಾಯಿಸಿಸುಮಾರು 1950 ರಿಂದೀಚೆಗೆ ಕಾಂತತ್ವದ ಬಗ್ಗೆ ಬ್ಲ್ಯಾಕೆಟ್ ಮತ್ತು ರಂಕಾರ್ನ್ ಮುಂತಾದವರು ವಿಶೇಷವಾಗಿ ಅಧ್ಯಯನ ನಡೆಸಿದ್ದಾರೆ. ಭೂಖಂಡಗಳ ಅಲೆತದ ಸಮಸ್ಯೆಗೆ ಇದರಿಂದ ಪರಿಹಾರ ಸೂಚಿಸಲು ಸಾಧ್ಯವಾಗಿದೆ.[೩೭][೩೮][೩೯] ಇಂದು ಪ್ರಪಂಚದಲ್ಲಿ ಹಂಚಿಕೆಯಾಗಿರುವ ಕಬ್ಬಿಣದ ನಿಕ್ಷೇಪಗಳಿಂದ ಹಿಂದಿನ ಕಾಂತಧ್ರುವಗಳಿದ್ದ (magnetic poles) ಸ್ಥಾನಗಳನ್ನು ನಿರ್ಧರಿಸಬಹುದು. ಇಂದಿನ ಕಾಂತಧ್ರುವಗಳ ಸ್ಥಾನಗಳಿಂದ ಅವುಗಳ ಹಿಂದಿನ ಸ್ಥಾನಗಳನ್ನು ಅರಿಯಲು ಸಾಧ್ಯವೆನಿಸಿದೆ. ಮೇರುಗಳೇ ಭ್ರಮಣಗೊಂಡುದರಿಂದ ಸಮಭಾಜಕ ವೃತ್ತದ ವಲಯಗಳಲ್ಲಿ ಬದಲಾವಣೆಯುಂಟಾಯಿತು. ಅಲ್ಲದೆ ಪ್ರಪಂಚದ ವಿವಿಧ ಭಾಗಗಳ ಹವಾಗುಣಗಳಲ್ಲಿ ಗಣನೀಯವಾದ ಬದಲಾವಣೆಗಳಾದುವು. ಭೂ ಇತಿಹಾಸವನ್ನು ಅರಿಯಲು ಪ್ರಾಚೀನ ಫಾಸಿಲುಗಳು ಸಹಕಾರಿಯಾಗಿವೆ. ಭೂಮಿಯ ಕಾಂತತ್ವದ ಇತಿಹಾಸವನ್ನು ತಿಳಿಯಲು ಕಾಂತತ್ವವಿರುವ ಫಾಸಿಲುಗಳು ಸಹಾಯಕಗಳು. ಸ್ತರಗಳಲ್ಲಿ ಅಡಗಿರುವ ಕಬ್ಬಿಣದ ಖನಿಜಗಳು ಮತ್ತು ಅವು ಘನೀಕರಿಸಿದ ಕಾಲ ಮತ್ತು ಪರಿಸ್ಥಿತಿಗಳನ್ನು ಈ ಫಾಸಿಲುಗಳು ಸೂಚಿಸುತ್ತವೆ. ಡೆಕ್ಕನ್ ಪ್ರಸ್ಥಭೂಮಿಯ ಲಾವಾಹರವುಗಳ ಪ್ರಾಕ್ಕಾಂತತ್ವದ ಅಧ್ಯಯನದಿಂದ ಕೆಲವು ಅಂಶಗಳು ತಿಳಿದುವು. ಸುಲಭವಾಗಿ ಹೋಲಿಸಲು ಮುಂಬಯಿ ಅಕ್ಷಾಂಶವನ್ನು ಆಧಾರವಾಗಿ ಇಟ್ಟುಕೊಂಡರೆ ಕ್ರಿಟೇಷಸ್ ಯುಗದ ಅಂತ್ಯದಿಂದ ಇಯೋಸೀನ್ ಯುಗದ ಪ್ರಾರಂಭದವರೆಗೂ ಭಾರತ 370 ದಕ್ಷಿಣದಿಂದ 130 ದಕ್ಷಿಣಕ್ಕೆ ಲಾವಾ ಹರವುಗಳ ರಚನೆಯ ಕಾಲದಲ್ಲಿ ಉತ್ತರಾಭಿಮುಖವಾಗಿ ಚಲಿಸಿತೆಂದು ತಿಳಿದು ಬಂದಿದೆ. ಕ್ರಿಟೇಷಸ್ ಯುಗದ ಅಂತ್ಯದಿಂದ ಭಾರತ ಉತ್ತರಕ್ಕೆ ಚಲಿಸಿ ಮುಂಬಯಿಯನ್ನು ಅದರ ಇಂದಿನ ಅಕ್ಷಾಂಶ 190 ಉತ್ತರಕ್ಕೆ ತಂದು ನಿಲ್ಲಿಸಿದೆ. ಅಂದರೆ ಅದು ತನ್ನ ಸ್ಥಾನದಲ್ಲಿ ಸುಮಾರು 560 ಗಳಷ್ಟು ಪಲ್ಲಟಗೊಂಡಿತು. ಅಂದರೆ 70 ಮಿಲಿಯನ್ ವರ್ಷಗಳ ಅವಧಿಯಲ್ಲಿ ಒಂದು ವರ್ಷಕ್ಕೆ ಸರಾಸರಿ 7 ಸೆಂಮೀ.ಗಳಷ್ಟು ಚಲಿಸಿದಂತಾಯಿತು. (ಮೂಲತಃ ಭಾರತ ಇಂದಿನ ಅಂಟಾರ್ಕ್ಟಿಕಕ್ಕೆ ಲಗತ್ತಾಗಿದ್ದು ಕ್ರಮೇಣ ಉತ್ತರಕ್ಕೆ ಚಲಿಸಲಾರಂಭಿಸಿತು.)
1967 ರಲ್ಲಿ ಬ್ರಜ಼ಿಲಿನ ಪುರಾತನ ಶಿಲೆಗಳಲ್ಲಿ ಪ್ರಮುಖ ಸ್ತರಭಂಗವೊಂದನ್ನು ಗುರುತಿಸಲಾಯಿತು. ಅದರ ಜಾಡು ಆಫ್ರಿಕದ ನೈಋತ್ಯ ತೀರದವರೆಗೂ ಮುಂದುವರಿದಿದ್ದುದು ವಿಜ್ಞಾನಿಗಳ ಗಮನಕ್ಕೆ ಬಂದಿತು. ಇದರಿಂದ ಆಫ್ರಿಕದ ಮತ್ತು ದಕ್ಷಿಣ ಅಮೆರಿಕದ ನಡುವೆ ಹಿಂದೆ ಇದ್ದ ನಿಕಟ ಸಂಪರ್ಕದ ಬಗೆಗೆ ವಿಜ್ಞಾನಿಗಳು ತಳೆದಿದ್ದ ಅಭಿಪ್ರಾಯಗಳಿಗೆ ಪುಷ್ಟಿ ದೊರೆತಂತಾಯಿತು.
ಭೂಖಂಡಗಳ ಅಲೆತವನ್ನು ಕುರಿತು ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಎಷ್ಟೇ ಸಮರ್ಪಕವಾಗಿ ಕಂಡುಬಂದರೂ ವೆಗ್‌ನರ್ ವಿವರಿಸಿದಂತೆ ಇಡೀ ಪಾಂಗೀ ಒಡೆದು ಅದರಿಂದ ಭೂಖಂಡಗಳ ಪ್ರತ್ಯೇಕಗೊಳ್ಳುವಿಕೆ ಹಾಗೂ ಅವುಗಳ ಅಲೆತಗಳಿಗೆ ಪ್ರೇರಕವಾದ ಶಕ್ತಿ ಯಾವುದು ಎಂಬುದೇ ಅತಿ ಮುಖ್ಯವಾದ ಪ್ರಶ್ನೆ.
ಖಂಡಗಳ ಅಲೆತಕ್ಕೆ ಪ್ರೇರಕ ಶಕ್ತಿ
ಬದಲಾಯಿಸಿಇಲ್ಲಿ ಒಂದೆರಡು ಸಾಧ್ಯತೆಗಳನ್ನು ಪರಿಶೀಲಿಸಬಹುದು. ಭೂಗರ್ಭದಲ್ಲಿ ಅಗಾಧವಾದ ಉಷ್ಣ ಇರುವುದು ತಿಳಿದಿದೆ. ಇದರಿಂದ ಅಲ್ಲಿನ ಘನವಸ್ತುಗಳು ಕೂಡ ಕರಗಿ ನೀರಾಗುತ್ತವೆ. ಇದಕ್ಕೆ ಶಿಲಾರಸವೆಂದು (lava) ಹೆಸರು. ಈ ಶಿಲಾರಸದಲ್ಲಿ ಉತ್ಪತ್ತಿಯಾದ ಉಷ್ಣೋದಕ ಪ್ರವಾಹಗಳು ಮತ್ತು ಅಲೆಗಳ ಸೆಳೆತಗಳು ಪಾಂಗೀಯನ್ನು ಬಿರಿದು ಅದರ ಭಾಗಗಳು ದೂರ ದೂರಕ್ಕೆ ಸರಿಯುವಂತೆ ಮಾಡುವ ಪ್ರೇರಕ ಶಕ್ತಿಯಾಯಿತೆಂದು ಜಾನ್ ಜಾಲಿ ಎಂಬ ವಿಜ್ಞಾನಿ ಅಭಿಪ್ರಾಯಪಡುತ್ತಾನೆ. ಇತ್ತೀಚೆಗೆ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವಿಜ್ಞಾನಿ ಹ್ಯಾರಿ ಹೆಸ್ ಎಂಬಾತ ಹೀಗೆ ಅಭಿಪ್ರಾಯಪಟ್ಟಿದ್ದಾನೆ. ಭೂಮಿಯ ಕವಚ ನಿಜಕ್ಕೂ ಒಂದು ವಿದ್ಯುತ್ ವಿಸರಣ ವ್ಯವಸ್ಥೆಯಂತಿದೆ. ಈ ಭೂಗರ್ಭದಲ್ಲಿ ವಿಕಿರಣಪಟು ಧಾತುಗಳಿಂದ ಉತ್ಪತ್ತಿಯಾಗುವ ಅಪಾರ ಉಷ್ಣ ಅಲ್ಲಿರುವ ಘನವಸ್ತುಗಳನ್ನು ಕರಗಿಸಿ ದ್ರವರೂಪಕ್ಕೆ ಪರಿವರ್ತಿಸುತ್ತದೆ. ಈ ದ್ರವವಸ್ತುವಾದ ಮ್ಯಾಗ್ಮ ಅಲ್ಲಿಂದ ನಿಧಾನವಾಗಿ ಮೇಲೇರುತ್ತ ಅದಕ್ಕಿಂತಲೂ ಸ್ವಲ್ಪ ಕಡಿಮೆ ದ್ರವರೂಪದ ಭೂಕವಚದ ಮೂಲಕ ಉಕ್ಕಿ ಹೊರಬರುತ್ತದೆ. ಇದರಿಂದ ಸಾಗರ ಮಧ್ಯದ ಏಣುಗಳಿಗೆ ಹರಿದುಬರುವ ಲಾವಗಳಲ್ಲಿ ಕಾದ ನೀರಿನ ವಲಯಗಳು ಉತ್ಪತ್ತಿಯಾಗುತ್ತವೆ. ಚಲಿಸುವ ಶಿಲಾಗೋಲ ಅದರ ಮಡ್ಡಿಗಳ ಸಮೇತ ಭೂಮಿಯೊಳಕ್ಕೆ ಕುಸಿದು ಭಾರಿ ಪ್ರಮಾಣದ ಕಂದಕಗಳನ್ನು ನಿರ್ಮಿಸುತ್ತದೆ. ಅಂಥ ಕಂದಕಗಳು ತೀರಗಳಿಗೆ ಅತಿದೂರದಲ್ಲಿರುತ್ತವೆ. ಹೆಸ್‌ನ ಪ್ರಕಾರ ಇಡೀ ಸಾಗರದ ತಳವೇ ಒಂದು ದೈತ್ಯಾಕಾರದ ಸಾಗುಪಟ್ಟಿಯಂತೆ (ಕನ್ವೇಯರ್ ಬೆಲ್ಟ್) ಚಲಿಸುತ್ತ ತಳಭಾಗದಿಂದ ದೊಡ್ಡ ದೊಡ್ಡ ಭೂಭಾಗಗಳನ್ನು ಮೇಲಕ್ಕೆತ್ತುತ್ತ ದೂರದೂರಕ್ಕೆ ಚದರಿಸಿತು.[೪೦] ಕೇಂಬ್ರಿಜ್ ವಿಶ್ವವಿದ್ಯಾಲಯದ ಎಫ್.ಜೆ.ವೈನ್ ಎಂಬಾತ ಸಾಗರ ಮಧ್ಯದ ಏಣುಗಳ ಲಾವ ಹರವುಗಳಿಂದ ಕಬ್ಬಿಣದ ಖನಿಜಗಳನ್ನು ಸಂಗ್ರಹಿಸಿ ಲಾವ ಘನೀಕರಿಸುವಾಗ ಇದ್ದ ಭೂಕಾಂತಕ್ಷೇತ್ರವನ್ನು ಅವುಗಳಿಂದ ನಿರ್ಧರಿಸಲು ಯತ್ನಿಸಿದ. ಪಟ್ಟೆಯಾಕಾರದ ಸಮುದ್ರತಳಗಳು ಅನುಕ್ರಮವಾಗಿ ಏಣುಗಳಿಂದ ಚದರುತ್ತ ಹೋಗಿರುವುದು ಕಂಡುಬಂದಿತು. ಇದನ್ನು ಪರೀಕ್ಷಿಸಲು ಭೂಕಂಪಶಾಸ್ತ್ರಜ್ಞರು ಕೂಡಲೇ ಕೆಲವು ಪ್ರಯೋಗಗಳನ್ನು ನಡೆಸಿದರು. ಅದರಿಂದ ಸಮುದ್ರದ ಏಣುಗಳಿಂದ ಮೇಲೇರುವುದೂ ಮತ್ತೆ ಪುನಃ ಕಲ್ಲಿನ ಭಾರಿ ಕಂದಕಗಳ ಮೂಲಕ ಕುಸಿಯುವುದೂ ಕಂಡುಬಂದಿತು. ಇತರ ಕಡೆಗಿಂತಲೂ ಈ ಸ್ಥಳದಲ್ಲೇ ಅಧಿಕವಾಗಿ ಭೂಕಂಪನಗಳಾಗುವುದೇ ಇದಕ್ಕೆ ಕಾರಣವೆಂದು ತರ್ಕಿಸಿದರು. ಅವರ ಶೋಧನೆಗಳು ಈ ವಾದವನ್ನು ಸಮರ್ಥಿಸಿದವು. ಗ್ಲೋಮರ್ ಚಾಲೆಂಜರ್ ಎಂಬ ಅಮೆರಿಕದ ನೌಕೆ ಸಮುದ್ರದ ತಳದಲ್ಲಿ ಸುಮಾರು 135 ರಂಧ್ರಗಳನ್ನು ಕೊರೆದು ಮಣ್ಣು, ಕಲ್ಲುಗಳ ಮಾದರಿಗಳನ್ನು ಸಂಗ್ರಹಿಸಿತು. ಸಾಗರಮಧ್ಯದ ಏಣುಗಳಿಂದ ದೂರ ದೂರಕ್ಕೆ ಕೊರೆದುಕೊಂಡು ಹೋದಂತೆಲ್ಲ ಅತಿ ಪ್ರಾಚೀನ ಶಿಲೆಗಳ ಮಾದರಿಗಳು ಕಂಡುಬಂದವು. ಭೂಭೌತವಿಜ್ಞಾನಿಗಳ ಪ್ರಕಾರ ಶಿಲಾಗೋಲದ ಸಾಗುಪಟ್ಟಿ ವ್ಯವಸ್ಥೆಯಲ್ಲಿ ಆರು ಪ್ರತ್ಯೇಕವಾದ ಫಲಕಗಳಿದ್ದು ಅವು ಭೂಕವಚದ ಮೇಲೆ ಚಲಿಸುತ್ತವೆ. ಅವು ಪರಸ್ಪರ ಒಂದನ್ನೊಂದು ಸಂಘರ್ಷಿಸಿದಾಗ ಪರ್ವತಗಳನ್ನು ನಿರ್ಮಿಸಬಲ್ಲವು.
ಇವಿಷ್ಟು ಭೂಖಂಡಗಳ ಅಲೆತವನ್ನು ಕುರಿತು ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳ ಸಾರಾಂಶ. ಇಂದಿಗೂ ಖಂಡಗಳು ವರ್ಷಕ್ಕೆ ಸರಾಸರಿ ಎರಡು ಅಂಗುಲಗಳಂತೆ ಅಲೆಯುತ್ತಲೇ ಇವೆ. ಮತ್ತು ಅವುಗಳ ಚಲನೆ ಕಡಿಮೆಯಾಗುವ ಚಿಹ್ನೆಗಳೇ ಇಲ್ಲವೆಂಬುದಾಗಿ ಭೂವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
ಟಿಪ್ಪಣಿಗಳು
ಬದಲಾಯಿಸಿ- ↑ ಇಂಗ್ಲೀಶ್ ವಿಕಿಪೀಡಿಯ ಪುಟ “Continental drift” ಭಾಗಶ ಅನುವಾದ. Access date 2016-08-09
ಉಲ್ಲೇಖಗಳು
ಬದಲಾಯಿಸಿ- ↑ Oreskes, Naomi (2002),"Continental Drift", archived from the original(PDF) on Feb 4, 2012
- ↑ Romm, James (February 3, 1994), "A New Forerunner for Continental Drift", Nature, 367 (6462): 407–408, Bibcode:1994Natur.367..407R, doi:10.1038/367407a0.
- ↑ ೩.೦ ೩.೧ Schmeling, Harro (2004). "Geodynamik"(PDF) (in German). University of Frankfurt.
- ↑ Brusatte, Stephen , "Continents Adrift and Sea-Floors Spreading: The Revolution of Plate Tectonics"
- ↑ Eduard Suess, Das Antlitz der Erde (The Face of the Earth), vol. 1 (Leipzig, (Germany): G. Freytag, 1885), page 768. From p. 768: "Wir nennen es Gondwána-Land, nach der gemeinsamen alten Gondwána-Flora, … " (We name it Gondwána-Land, after the common ancient flora of Gondwána … )
- ↑ Edward Suess (March 1893) "Are ocean depths permanent?", Natural Science: A Monthly Review of Scientific Progress (London), 2 : 180- 187. From page 183: "This ocean we designate by the name "Tethys", after the sister and consort of Oceanus. The latest successor of the Tethyan Sea is the present Mediterranean."
- ↑ Wallace, Alfred Russel (1889), "12", Darwinism …, Macmillan, p. 341
- ↑ Lyell, Charles (1872), Principles of Geology … (11 ed.), John Murray, p. 258
- ↑ Mantovani, R. (1889), "Les fractures de l'écorce terrestre et la théorie de Laplace", Bull. Soc. Sc. Et Arts Réunion: 41–53
- ↑ Mantovani, R. (1909), "L'Antarctide", Je m’instruis. La science pour tous, 38: 595–597
- ↑ Scalera, G. (2003), "Roberto Mantovani an Italian defender of the continental drift and planetary expansion", in Scalera, G.; Jacob, K.-H., Why expanding Earth? – A book in honour of O.C. Hilgenberg, Rome: Istituto Nazionale di Geofisica e Vulcanologia, pp. 71–74
- ↑ Powell, James Lawrence (2015). Four Revolutions in the Earth Sciences: From Heresy to Truth. Columbia University Press. pp. 69–70. ISBN 9780231538459
- ↑ William Lowthian Green (1875). Vestiges of the molten globe, as exhibited in the figure of the earth, volcanic action and physiography. London: E. Stanford. Bibcode:1875vmge.book.....G. OCLC 3571917.
- ↑ ೧೪.೦ ೧೪.೧ Wegener, Alfred (6 January 1912), "Die Herausbildung der Grossformen der Erdrinde (Kontinente und Ozeane), auf geophysikalischer Grundlage"(PDF), Petermanns Geographische Mitteilungen, 63: 185–195, 253–256, 305–309.
- ↑ "Wegener and his proofs". Archived from the original on 5 May 2006.
- ↑ Hughes, Patrick (8 February 2001). "Alfred Wegener (1880–1930): The origin of continents and oceans". On the Shoulders of Giants. Earth Observatory, NASA. Retrieved 2007-12-26.
By his third edition (1922), Wegener was citing geological evidence that some 300 million years ago all the continents had been joined in a supercontinent stretching from pole to pole. He called it Pangaea (all lands),...
- ↑ Wegener 1966.
- ↑ English, Joseph M.; Johnston, Stephen T. (2004). "The Laramide Orogeny: What Were the Driving Forces?" (PDF). International Geology Review. 46 (9): 833 838. Bibcode:2004IGRv...46..833E. doi:10.2747/0020-6814.46.9.833. S2CID 129901811. Archived (PDF) from the original on June 7, 2011.
- ↑ Graciansky (2011), 1–2
- ↑ ೨೦.೦ ೨೦.೧ Wegener, A. (1966) [1929], The Origin of Continents and Oceans, Courier Dover Publications, ISBN 0-486-61708-4
- ↑ University of California Museum of Paleontology, Alfred Wegener (1880-1930) (accessed 30 April 2015).
- ↑ Unavco Plate Motion Calculator (accessed 30 April 2015).
- ↑ Hancock, Paul L.; Skinner, Brian J.; Dineley, David L. (2000), The Oxford Companion to The Earth, Oxford University Press, ISBN 0-19-854039-6
- ↑ du Toit, A.L. (1937) Our Wandering Continents; An Hypothesis of Continental Drifting, Oliver & Boyd, London, UK
- ↑ "Rejoined continents [This Dynamic Earth, USGS]". USGS.
- ↑ Chandra, S. & Surange, K.R. 1979. "Revision of the Indian species of Glossopteris". Monograph 2. Birbal Sahni Institute of Palaeobotany, Lucknow. 301 pp.
- ↑ McLoughlin, S (1994). "Late Permian plant megafossils from the Bowen Basin, Queensland, Australia: Part 2". Palaeontographica. 231B: 1–29.
- ↑ McLoughlin, S. 1994. "Late Permian plant megafossils from the Bowen Basin, Queensland, Australia: Part 3. Palaeontographica 231B: 31-62".
- ↑ Appert, O (1977). "Die Glossopterisflora der Sakoa in südwest Madagaskar". Palaeontographica. 162B (1): 50.
- ↑ Pigg, K. B. (1990). "Anatomically preserved Glossopteris foliage from the central Transantarctic Mountains". Review of Palaeobotany and Palynology. 66 (1–2): 105–127. doi:10.1016/0034-6667(90)90030-m.
- ↑ Trewick, Steve (2016). "Plate Tectonics in Biogeography". International Encyclopedia of Geography: People, the Earth, Environment and Technology (in ಇಂಗ್ಲಿಷ್). John Wiley & Sons, Ltd. pp. 1–9. doi:10.1002/9781118786352.wbieg0638. ISBN 9781118786352.
- ↑ Piñeiro, Graciela (2008). D. Perera (ed.). Fósiles de Uruguay. DIRAC, Montevideoy.
- ↑ Trewick, Steve (2016). "Plate Tectonics in Biogeography". International Encyclopedia of Geography: People, the Earth, Environment and Technology (in ಇಂಗ್ಲಿಷ್). John Wiley & Sons, Ltd. pp. 1–9. doi:10.1002/9781118786352.wbieg0638. ISBN 9781118786352.
- ↑ Trewby 2002, p. 124.
- ↑ Rolland, Yann; Bernet, Matthias; van der Beek, Peter; Gautheron, Cécile; Duclaux, Guillaume; Bascou, Jérôme; Balvay, Mélanie; Héraudet, Laura; Sue, Christian; Ménot, René-Pierre (January 2019). "Late Paleozoic Ice Age glaciers shaped East Antarctica landscape" (PDF). Earth and Planetary Science Letters. 506: 123–133. Bibcode:2019E&PSL.506..123R. doi:10.1016/j.epsl.2018.10.044. S2CID 134360219.
- ↑ Surkov, M.V.; Kalandadze, N.N. Of & Benton, M.J. (June 2005). "Lystrosaurus georgi, a dicynodont from the Lower Triassic of Russia" (PDF). Journal of Vertebrate Paleontology. 25 (2): 402–413. doi:10.1671/0272-4634(2005)025[0402:LGADFT]2.0.CO;2. ISSN 0272-4634. S2CID 59028100. Archived from the original (PDF) on 2008-12-19. Retrieved 2008-07-07.
- ↑ Collinson, D. W. (2002). "Stanley Keith Runcorn. 19 November 1922–5 December 1995". Biographical Memoirs of Fellows of the Royal Society. 48: 391–403. doi:10.1098/rsbm.2002.0023. JSTOR 3650268.
- ↑ Hide, Raymond (1996). "Stanley Keith Runcorn F.R.S. (1922–1995)". Quarterly Journal of the Royal Astronomical Society. Royal Astronomical Society. 37 (3): 463–465. Bibcode:1996QJRAS..37..463H.
- ↑ Biography - Newcastle
- ↑ BBC / Open University broadcast series Earth Story, Vine interviewed by Professor Aubrey Manning
ಗ್ರಂಥಸೂಚಿ
ಬದಲಾಯಿಸಿ- Wegener, Alfred (1966). The origin of continents and oceans. Translated by Biram John. Courier Dover. p. 246. ISBN 978-0-486-61708-4.
- De Graciansky, Pierre-Charles et al. (2011). The Western Alps, From Rift to Passive Margin to Orogenic Belt. Amsterdam: Elsevier. ISBN 978-0-444-53724-9
- Trewby, Mary, ed. (2002). Antarctica: An Encyclopedia from Abbott Ice Shelf to Zooplankton. Buffalo, New York: Firefly Books. ISBN 978-1-55297-590-9.
ಹೊರಗಿನ ಕೊಂಡಿಗಳು
ಬದಲಾಯಿಸಿ- Benjamin Franklin (1782) and Ralph Waldo Emerson (1834) noted Continental Drift
- A brief introduction to Plate Tectonics, based on the work of Alfred Wegener
- Animation of continental drift for last 1 billion years
- Maps of continental drift, from the Precambrian to the future
- 3D visualization of what did Earth look like from 750 million years ago to present (at present location of your choice)