ಟೀತಿಸ್ ಸಮುದ್ರ

ಟೀತಿಸ್ ಸಮುದ್ರ -ಪುರಾತನ ಕಾಲದ ಸಮುದ್ರ..

ಟೇತಿಸ್ ಸಮುದ್ರದ ರಚನೆಯ ಮೊದಲ ಹಂತ

ಟೀತಿಸ್ ಸಮುದ್ರದ ರಚನೆಸಂಪಾದಿಸಿ

ಆಧುನಿಕ ಮೆಡಿಟರೇನಿಯನ್ ಸಮುದ್ರದ ಪೂರ್ವಜ. ಪರ್ಮಿಯನ್ ಕಲ್ಪದ ತರುಣದಲ್ಲಿ ಅಂದರೆ ಸುಮಾರು 280 ದಶಲಕ್ಷ ವರ್ಷಗಳಷ್ಟು ಪ್ರಾಚೀನದಲ್ಲಿ ಅಸ್ತಿತ್ವಕ್ಕೆ ಬಂತು. ಪೆಸಿಫಿಕ್ ಹಾಗೂ ಆರ್ಕ್‍ಟಿಕ್ ಸಾಗರಗಳ ನಡುವಿನ ಸಂಯೋಜಕವಾಗಿಯೂ ಉತ್ತರದಲ್ಲಿ ಅಂಗಾರ ಮತ್ತು ದಕ್ಷಿಣದಲ್ಲಿ ಗೊಂಡವಾನ ಭೂಖಂಡಗಳನ್ನು ಪ್ರತ್ಯೇಕಿಸುವ ಜಲರಾಶಿಯಾಗಿಯೂ ಇತ್ತು. ಕಾರ್ಬಾನಿಫೆರಸ್ ಕಲ್ಪದ (350 ದ.ಲ.ವ.ಪ್ರಾ. -280 ದ.ಲ.ವ.ಪ್ರಾ.) ಅಂತ್ಯಕಾಲದಲ್ಲಿ ಮಹತ್ತರ ಬದಲಾವಣೆಗಳಾದವು. ನೆಲಜಲಗಳ ಪುನರ್ವರ್ಗೀಕರಣವಾಯಿತು. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಪರ್ವತ ರಚನಾ ಕಾರ್ಯವೂ ನಡೆಯಿತು. ಆಗ ಉದಯಿಸಿದ ಪರ್ವತಗಳಲ್ಲಿ ಹರ್ಷೀನಿಯನ್ ಪರ್ವತ ಮುಖ್ಯವಾದದ್ದು. ಆದ್ದರಿಂದ ಈ ಪರ್ವಕಾಲಕ್ಕೆ ಹರ್ಷೀಯನ್ ಪ್ರಳಯವೆಂಬ ಹೆಸರು ಬಂದಿದೆ. ಇದರ ತರುವಾಯ ಪ್ರಪಂಚದ ಭೂಭಾಗಗಳು ಎರಡು ದೊಡ್ಡ ಖಂಡಗಳಾಗಿದ್ದುವು. ಇವೆರಡರ ಮಧ್ಯೆ, ಹೆಚ್ಚು ಕಡಿಮೆ ಭೂಮಧ್ಯ ಭಾಗದಲ್ಲಿ, ಇದ್ದ ಜಲರಾಶಿಯೇ ಟೀತಿಸ್ ಸಮುದ್ರ.

ಟೀತಿಸ್ ಸಮುದ್ರದಲ್ಲಿ ಶಿಲಾನಿಕ್ಷೇಪಸಂಪಾದಿಸಿ

ಟೀತಿಸ್ ಸಮುದ್ರದಲ್ಲಿ ಶಿಲಾನಿಕ್ಷೇಪ ಕಾರ್ಯವು ಕಾರ್ಬಾನಿಫೆರಸ್ ಯುಗದ ಅಂತ್ಯಕಾಲದಿಂದ ಇಯೊಸೀನ್ ಕಲ್ಪದ ವರೆಗೆ (280 ದ.ಲ.ವ. ಪ್ರಾ.-60 ದ.ಲ.ವ. ಪ್ರಾ) ನಡೆಯಿತು. ಇಷ್ಟು ಅಗಾಧವಾದ ಶಿಲಾರಾಶಿ ನಿಕ್ಷೇಪಗೊಳ್ಳುತ್ತಿದ್ದಾಗ ಸಾಗರದ ತಳ ಕ್ರಮೇಣ ಕುಸಿಯುತ್ತ ಹೋಗಿರಬೇಕು. ಈ ಕುಸಿತದ ಪ್ರಮಾಣ ಶಿಲಾನಿಕ್ಷೇಪದ ಪ್ರಮಾಣಕ್ಕೆ ಹೆಚ್ಚು ಕಡಿಮೆ ಸಮವಾಗಿರಬೇಕೆಂದು ಭೂವಿಜ್ಞಾನಿಗಳ ಅಭಿಪ್ರಾಯ. ಇಂಥ ವಿಶಾಲವಾದ ಮತ್ತು ಯುಗಯುಗಾಂತರಗಳ ವರೆಗೆ ನೆಲೆಸಿದ್ದ ಸಾಗರ ತಗ್ಗು ಪ್ರದೇಶಗಳಿಗೆ ಭೂಅಭಿನತಿಗಳು (ಜಿಯೊಸಿಂಕ್ಲೈನ್ಸ್) ಎಂದು ಹೆಸರು. ಟೀತಿಸ್ ಸಮುದ್ರವು ಆಲ್ಪ್ಸ್, ಕಾರ್ಪೇತಿಯ ಕಾಕಸಸ್, ಎಲ್ ಬುರ್ಜ್, ಝಗ್ರೋಸ್ ಮತ್ತು ಹಿಮಾಲಯ ಪ್ರದೇಶಗಳನ್ನೆಲ್ಲ ಆವರಿಸಿಕೊಂಡು ಪಶ್ಷಿಮಕ್ಕೆ ಸ್ಪೇನ್ ಮತ್ತು ಆಫ್ರಿಕದ ವಾಯವ್ಯ ಭಾಗಗಳಿಗೂ ಪೂರ್ವದಲ್ಲಿ ಬರ್ಮ, ಇಂಡೊನೇಷ್ಯಗಳ ಮೂಲಕ ನ್ಯೂಗಿನಿಯವರೆಗೂ ವಿಸ್ತರಿಸಿತ್ತು. ಭಾರತದಲ್ಲಿ ಈ ಸಾಗರ ಹಿಮಭರಿತವಾದ ಹಿಮಾಲಯ ಪರ್ವತಪ್ರದೇಶವನ್ನು ಆಕ್ರಮಿಸಿಕೊಂಡಿದ್ದುದಲ್ಲದೆ ಪಶ್ಚಿಮದಲ್ಲಿ ಇದರ ಒಂದು ಶಾಖೆ ಬಲೂಚಿಸ್ತಾನ ಮತ್ತು ಸಾಲ್ಟ್ ರೇಂಜ್ ಪ್ರದೇಶಗಳಿಗೂ ಪೂರ್ವದಲ್ಲಿ ಮತ್ತೊಂದು ಶಾಖೆ ಬರ್ಮದ ಕೆಲವು ಭಾಗಗಳಿಗೂ ವಿಸ್ತರಿಸಿದ್ದುವು.

ಟೀತಿಸ್ ನಿಕ್ಷೇಪಗಳು ಭಾರತದಲ್ಲಿಸಂಪಾದಿಸಿ

ಟೀತಿಸ್ ನಿಕ್ಷೇಪಗಳು ಭಾರತದಲ್ಲಿ ಕಾಶ್ಮೀರದಿಂದ ಎವರೆಸ್ಟ್ ಪ್ರದೇಶವರೆಗಿನ ಟಿಬೆಟ್ ಪ್ರಾಂತ್ಯದಲ್ಲಿ ಚೆನ್ನಾಗಿ ರೂಪುಗೊಂಡಿವೆ. ಸ್ಫಿಟಿ ಮತ್ತು ಕಾಶ್ಮೀರ ಪ್ರದೇಶಗಳ ಶಿಲಾಸ್ತೋಮಗಳು ಅತ್ಯುತ್ತಮವಾದವು. ಕಾಶ್ಮೀರ ಪ್ರದೇಶ ಕಾರ್ಬಾನಿಫೆರಸ್ ಕಲ್ಪದ ಮಧ್ಯಕಾಲದ ವರೆಗೂ (ಸು.305 ದ.ಲ.ವ.ಪ್ರಾ.) ಜಲಪ್ರದೇಶವಾಗಿದ್ದು ಪ್ರಶಾಂತ ವಾತಾವರಣವನ್ನು ಹೊಂದಿತ್ತು. ಕಾರ್ಬಾನಿಫೆರಸ್ ಅಂತ್ಯದಲ್ಲಿ (280 ದ.ಲ.ವ.ಪ್ರಾ.) ಈ ವಾತಾವರಣ ಅತಿ ಉಗ್ರಜ್ವಾಲಾಮುಖಿಗಳ ಆಸ್ಫೋಟನೆಯಿಂದ ಕಲಕಲ್ಪಟ್ಟಿತು. ಹೀಗೆ ಕಾಶ್ಮೀರವು ಗೊಂಡವಾನ ಖಂಡದ ವಾಯುವ್ಯ ಎಲ್ಲೆಯೆನಿಸಿದೆ. ಇಲ್ಲಿ ಗೊಂಡವಾನ ಖಂಡ ಮತ್ತು ಅಂಗಾರ ಖಂಡಗಳೆರಡರ ಸಸ್ಯವರ್ಗಗಳ ಮಿಶ್ರಣ ಇರುವುದರಿಂದ ಈ ಭಾಗ ಇವೆರಡು ಖಂಡಗಳ ಸಂಪರ್ಕ ಸೇತುವೆ ಎನಿಸಿರಬೇಕು.

ಟೀತಿಸ್ ಸಮುದ್ರದ ಕೊನೆಸಂಪಾದಿಸಿ

ಕ್ರಿಟೇಷಿಯಸ್ ಕಲ್ಪದ ಕೊನೆಯಲ್ಲಿ (65 ದ.ಲ.ವ.ಪ್ರಾ.) ಮಹತ್ತರ ಬದಲಾವಣೆಗಳಾದವು. ಆಧುನಿಕ ಕಾಲದ ಮೇಲ್ಮೈ ಲಕ್ಷಣಗಳು ಮೈದಳೆದದ್ದು ಆಗಲೇ. ಅದುವರೆಗೂ ಒಂದಾಗಿದ್ದ ಗೊಂಡವಾನ ಭೂಭಾಗ ಆಧುನಿಕ ಇಂಡಿಯ, ಆಸ್ಟ್ರೇಲಿಯ, ಆಫ್ರಿಕ ಮತ್ತು ದಕ್ಷಿಣ ಅಮೆರಿಕ ಮುಂತಾದ ಖಂಡಗಳಾಗಿ ಬೇರ್ಪಟ್ಟಿತು. ಹೀಗೆ ಬೇರ್ಪಟ್ಟ ಖಂಡಗಳ ಚಲನೆಯಿಂದ ಆ ಕಾಲದಲ್ಲಿ ಭೂ ಮಧ್ಯ ಪ್ರದೇಶದಲ್ಲಿ ಬಹುಕಾಲದಿಂದಿದ್ದ ಟೀತಿಸ್ ಸಮುದ್ರ ನಿರ್ಗಮಿಸಬೇಕಾಯಿತು. ಇದರಲ್ಲಿ ನಿಕ್ಷೇಪವಾಗಿದ್ದ ಜಲಜಶಿಲೆಗಳು ಭೂಚಲನೆಗಳ ಒತ್ತಡಕ್ಕೆ ಸಿಕ್ಕಿ ಅಟ್ಲಾಸ್, ಪೈರನೀಸ್, ಆಲ್ಪ್ಸ್ ಮತ್ತು ಹಿಮಾಲಯ ಪರ್ವತಗಳಾಗಿ ಮೇಲಕ್ಕೆದ್ದುವು. ಈ ಕಾರ್ಯ ಕ್ರಿಟೇಷಸ್ ಕಲ್ಪದಲ್ಲಿ (135 ದ.ಲ.ವ. ಪ್ರಾ.- 65 ದ.ಲ.ವ. ಪ್ರಾ.) ಪ್ರಾರಂಭವಾಗಿ ಸಾಗರ ಪ್ರದೇಶಗಳಲ್ಲೆಲ್ಲ ಆಳ ಕಡಿಮೆಯಾಗಿ ಪ್ಲಿಸ್ಟ್ ನಿಕ್ಷೇಪವಾಗಿದೆ. ಇಲ್ಲೆಲ್ಲ ನಮ್ಮುಲಿಟಿಕ್ ಸಣ್ಣಶಿಲೆ ನಿಕ್ಷೇಪಗೊಂಡಿರುವುದು. ನಿಜವಾದ ಆರಂಭ ಇಯೊಸೀನ್ ಕಲ್ಪದ ಮಧ್ಯ ಭಾಗದಲ್ಲಿ (ಸು. 50 ದ.ಲ.ವ.ಪ್ರಾ.) ಆಯಿತು. ಇದೇ ಹಿಮಾಲಯ ಪರ್ವತೋದಯದ ಮೊದಲನೆಯ ಹಂತ. ಈ ಕಾರ್ಯ ಆಲಿಗೊಸೀನ್ ಕಲ್ಪದಲ್ಲಿ (40 ದ.ಲ.ವ. ಪ್ರಾ.-25 ದ.ಲ.ವ.ಪ್ರಾ) ತೀವ್ರಗೊಂಡಿತು. ಈ ಕಲ್ಪದಲ್ಲಿ ಟೀತಿಸ್ ಸಮುದ್ರ ಮುಕ್ಕಾಲು ಭಾಗ ನಿರ್ಗಮಿಸಿ ಅಲ್ಲಲ್ಲಿ ಕ್ಯಾಸ್ಪಿಯನ್ ಸಮುದ್ರದ ಹಾಗೆ ಲಡಕ್, ಹುಂಡೆಸ್ ಮತ್ತು ಕುಮಾಯುನ್ ಪ್ರದೇಶಗಳಲ್ಲಿ ವಿಶಾಲವಾದ ಸರೋವರಗಳಾಗಿ ಉಳಿಯಿತು. ಟೀತಿಸ್ ಸಮುದ್ರದ ನೀರು ದಕ್ಷಿಣ ಸಮುದ್ರಕ್ಕೆ ಎರಡು ಖಾರಿಗಳ ಮೂಲಕವಾಗಿ ತಳ್ಳಲ್ಪಟ್ಟಿತು. ಪೂರ್ವದಲ್ಲಿ ಬಲೂಚಿಸ್ತಾನ್-ಸಿಂದ್ ಖಾರಿ, ಪಶ್ವಿಮದಲ್ಲಿ ಅಸ್ಸಾಮ್-ಬರ್ಮ ಖಾರಿ ಇವೇ ಈ ಎರಡು ಖಾರಿಗಳು. ಮಧ್ಯಮಯೋಸೀನ್ ಕಲ್ಪದ (ಸು.18 ದ.ಲ.ವ. ಪ್ರಾ) ಚಲನೆಯಿಂದ ಟೀತಿಸ್ ಸಮುದ್ರದ ಈ ಅವಶೇಷಗಳೆಲ್ಲ ಇಲ್ಲವಾದವು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: