(ಸೂಚನೆ : ನಮ್ಮ ನುಡಿಯಲ್ಲಿ ಜ್ವಾಲಾಮುಖಿ ಮತ್ತು ಅಗ್ನಿಪರ್ವತ ಈ ಎರಡೂ ಪದಗಳು ಸಮಾನಾರ್ಥಕವಾಗಿ ಬಳಸಲ್ಪಡುತ್ತವೆ. ಈ ಲೇಖನದಲ್ಲಿ ಎರಡೂ ಪದಗಳನ್ನು ಬಳಸಲಾಗಿದೆ)

ಅಲಾಸ್ಕಾದ ಕ್ಲೀವ್‌ಲ್ಯಾಂಡ್ ಜ್ವಾಲಾಮುಖಿಯ ಒಂದು ನೋಟ

ಉರಿಬೆಟ್ಟ (ಜ್ವಾಲಾಮುಖಿ) ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ.

ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸಾರಿದಾಗ ಇಲ್ಲವೇ ಪರಸ್ಪರರಿಂದ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್ ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ನಲ್ಲಿ ತಟ್ಟೆಗಳು ಪರಸ್ಪರರ ಬಳಿ ಸಾರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಗಮನಿಸಬೇಕಾದ ಅಂಶವೆಂದರೆ ಟೆಕ್ಟಾನಿಕ್ ತಟ್ಟೆಗಳು ಒಂದರ ಮೇಲೆ ಇನ್ನೊಂದು ಸರಿದಾಗ ಜ್ವಾಲಾಮುಖಿಗಳು ಉಂಟಾಗುವುದಿಲ್ಲ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು. ಇಂತಹ ಜ್ವಾಲಾಮುಖಿಗಳು ಆಫ್ರಿಕದ ಬಿರುಕು ಕಣಿವೆ ಮತ್ತು ಅಮೆರಿಕದ ರಿಯೊ ಗ್ರಾಂಡ್ ಬಿರುಕಿನಲ್ಲಿ ಕಾಣಬರುತ್ತವೆ. ಇನ್ನು ಕೆಲವೇಳೆ ಟೆಕ್ಟಾನಿಕ್ ತಟ್ಟೆಗಳ ಅಂಚಿನಿಂದ ಬಲುದೂರದಲ್ಲಿ ಸಹ ಜ್ವಾಲಾಮುಖಿಗಳು ಇರುತ್ತವೆ. ಹವಾಯ್ ದ್ವೀಪದ ಜ್ವಾಲಾಮುಖಿಗಳು ಇದಕ್ಕೆ ಉದಾಹರಣೆ. ಇಂತಹವನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಇಂತಹ ಬಿಸಿ ಸ್ಥಾನಗಳು ಭೂಮಿ ಮಾತ್ರವಲ್ಲದೆ ಸೌರಮಂಡಲದ ಇತರ ಗ್ರಹಗಳಲ್ಲಿ ಮತ್ತು ಉಪಗ್ರಹಗಳಲ್ಲಿ ಸಹ ಇರುವುವು.

ಇತಿಹಾಸ ಬದಲಾಯಿಸಿ

ಇವನ್ನು ಜ್ವಾಲಾಮುಖಿಗಳೆಂದೂ ವಲ್ಕೆನೋಗಳೆಂದೂ ಕರೆಯುತ್ತಾರೆ. ವಲ್ಕೆನೊ ಎಂಬ ಹೆಸರು ಬಂದ್ದು ಸಿಸಿಲಿ ದ್ವೀಪದ ಉತ್ತರಕ್ಕಿರುವ ವಲ್ಕೆನೋ ಎಂಬ ದ್ವೀಪದಿಂದ. ಪ್ಲೇಟೊ, ಅರಿಸ್ಟಾಟಲ್, ಸ್ಟ್ರಾಬೊ ಮೊದಲಾದವರು ಇವುಗಳ ಚಟುವಟಿಕೆಗಳನ್ನು ವರ್ಣಿಸಿದ್ದಾರೆ. ಆದರೆ ಮೊಟ್ಟಮೊದಲ ವೈಜ್ಞಾನಿಕ ವರ್ಣನೆ ಸಿಕ್ಕಿರುವುದು ಕ್ರಿ.ಶ. 79 ರಲ್ಲಿದ್ದ ಇಟಲಿಯ ಕಿರಿಯ ಪ್ಲಿನಿಯ ಗ್ರಂಥದಲ್ಲಿ. ಆತ ಪ್ರಕೃತಿಯ ಉಪಾಸಕ. ಇಟಲಿ ದೇಶದ ಹರ್ಕುಲೇನಿಯಂ ಮತ್ತು ಪಾಂಪೆ ನಗರಗಳನ್ನು ನೆಲಸಮ ಮಾಡಿದ ವಸೂವಿಯಸ್ ಅಗ್ನಿಪರ್ವತ ಕಾದ ಪದಾರ್ಥಗಳನ್ನು ಕಾರುತ್ತಿರುವಾಗ ಬಹು ಸಮೀಪದ ದೃಶ್ಯವನ್ನು ನೋಡಲು ಹೋಗಿ ಅದರಿಂದ ಹೊರಹೊರಟ ವಿಷವಾಯುವಿನಿಂದ ಮೃತಪಟ್ಟ. ವಸೂವಿಯಸ್ ಪರ್ವತದ ಚಟುವಟಿಕೆ, ಹೊರಬಂದ ಪದಾರ್ಥಗಳ ವಿವರ ಇತ್ಯಾದಿಗಳನ್ನು ಈತ ಶಾಸ್ತ್ರೀಯವಾಗಿ ವರ್ಣಿಸಿದ್ದಾನೆ. ಅನಂತರ, ದೀರ್ಘಕಾಲ ಈ ಶಾಸ್ತ್ರಭಾಗ ಬೆಳೆಯಲಿಲ್ಲ. 1774ರಲ್ಲಿ ಸರ್ ವಿಲಿಯಂ ಹಾಮಿಲ್ಟನ್ ಕಣ್ಣಾರೆ ಕಂಡು ಅನುಭವಿಸಿದ ವಸೂವಿಯಸ್ ಮತ್ತು ಎಟ್ನಾ ಅಗ್ನಿ ಪರ್ವತಗಳ ದೃಶ್ಯಗಳನ್ನು ಚಿತ್ರಿಸಿದ್ದಾನೆ. ಅಲ್ಲಿಂದ ಈಚೆಗೆ 1820ರವರೆಗೆ ಹಲವು ಶಾಸ್ತ್ರಜ್ಞರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ.

ಭೌಗೋಳಿಕ ಸಂಶೋಧನೆ ಬದಲಾಯಿಸಿ

ಭೂಗೋಳದ ಮೂರರಲ್ಲೊಂದು ಪಾಲು ಭೂಭಾಗ, ಮಿಕ್ಕಪಾಲು ಜಲಭಾಗ. ಸಾಮಾನ್ಯವಾಗಿ ಭೂಭಾಗವೆಲ್ಲ ಮಣ್ಣು ಕಲ್ಲುಗಳಿಂದ ಕೂಡಿ ಶಿಲಾಮಂಡಲವೆಂದು ಹೆಸರು ಪಡೆದಿದೆ. ಇದರ ಮೇಲುಭಾಗದಿಂದ ತಳಭಾಗಕ್ಕೆ ಹೋದಂತೆಲ್ಲ ಉಷ್ಣಾಂಶ ಸಾಧಾರಣವಾಗಿ 32 ಅಡಿಗೆ 1º ಯಂತೆ ಹೆಚ್ಚುತ್ತ ಹೋಗಿ, ತಳಭಾಗದಲ್ಲಿ ವಿಶೇಷವಾದ ಉಷ್ಣತೆ ಕಂಡುಬರುತ್ತದೆ. ಹೀಗೆ ಹೆಚ್ಚುವ ಉಷ್ಣತೆಗೆ ಎರಡು ಕಾರಣಗಳುಂಟು. ಭೂಮಿ ಅನಿಲರೂಪದಿಂದ ದ್ರವರೂಪಕ್ಕೆ ಕುಗ್ಗಿ, ಅನಂತರ ಘನೀಭೂತವಾಗಿ, ಗೋಲವಾಗಿರುವುದರಿಂದ ವಿಶೇಷವಾದ ಉಷ್ಣ ಅದರ ಅಂತರಾಳದಲ್ಲಿ ಅಡಗಿದೆ. ಇದೇ ಮೂಲೋಷ್ಣ. ಜೊತೆಗೆ ಅಂತರಾಳದಲ್ಲಿ ಶಿಲಾಸಮೂಹಗಳೊಡನೆ ಥೋರಿಯಂ, ಯುರೇನಿಯಂ, ಹೀಲಿಯಂ ಇತ್ಯಾದಿ ವಿದ್ಯುತ್ ವಿಕಿರಣಶಕ್ತಿಯುಳ್ಳ ಖನಿಜಗಳು ಸಂಗ್ರಹವಾಗಿರುತ್ತವೆ. ಇವುಗಳ ಶಾಖ ಮೂಲೋಷ್ಣದ ಜೊತೆಗೆ ಸೇರಿ, ಭೂಮಿಯ ಅಂತರಾಳದಲ್ಲಿ ಹುದುಗಿರುವ ವಿಶೇಷವಾದ ಉಷ್ಣತೆಗೆ ಪೂರಕವಾಗುತ್ತದೆ. ಘನೀಭೂತವಾದ ಶಿಲಾಸಮೂಹ, ಸಂಗ್ರಹವಾದ ಉಷ್ಣತೆಯಿಂದ ದ್ರವರೂಪಕ್ಕೆ ಪರಿವರ್ತನೆಯಾಗಿ, ಒತ್ತಡದ ಅಧಿಕ್ಯ ಮಿತಿಮೀರಿದಾಗ ಭೂಮಿಯನ್ನು ಭೇದಿಸಿಕೊಂಡು ಹೊರಗೆ ಬರುತ್ತದೆ. ಇದೇ ಶಿಲಾರಸ (ಲಾವಾ), ಜೊತೆಗೆ ಕಲ್ಲು, ಮಣ್ಣು, ಅನಿಲಗಳು ಸಹ ಹೊರಬರುತ್ತವೆ. ಹೀಗೆ ಭೂಮಿಯ ತಳಭಾಗದಿಂದ ದೊಡ್ಡ ಬಿರುಕುಗಳ ಮೂಲಕ, ಕಾದು ಕರಗಿರುವ ಪದಾರ್ಥಗಳನ್ನು ಉಗುಳುವ ಪರ್ವತಗಳೇ ಅಗ್ನಿಪರ್ವತಗಳು.[೧]

ಪ್ಲೇಟ್ ಟೆಕ್ಟಾನಿಕ್ಸ್ ಮತ್ತು ಹಾಟ್ ಸ್ಪಾಟ್ ಗಳು ಬದಲಾಯಿಸಿ

 
ಹವಾಯ್‌ನ ಬಿಗ್ ಐಲೆಂಡ್‌ನಲ್ಲಿ ಸೆಪ್ಟೆಂಬರ್ ೨೦೦೭ರಲ್ಲಿ ಅಗ್ನಿಪರ್ವತ ಸಿಡಿದಾಗ ಹರಿದ ಲಾವಾದ ನೋಟ

ದೂರಸರಿವ ತಟ್ಟೆಗಳು ಬದಲಾಯಿಸಿ

ಸಾಗರಮಧ್ಯ ರಿಡ್ಜ್ ಗಳಲ್ಲಿ ತಟ್ಟೆಗಳು ಪರಸ್ಪರರಿಂದ ದೂರ ಸರಿಯುತ್ತವೆ. ಸಾಗರದಾಳದ ನೆಲದ ಅಡಿಯಲ್ಲಿ ಕುದಿಯುವ ಶಿಲೆಗಳು ಕ್ರಮೇಣ ತಣ್ಣಗಾಗಿ ಘನವಾಗುತ್ತಿರುವುದರಿಂದ ಹೊಸದೊಂದು ಚಿಪ್ಪು ನಿರ್ಮಾಣಗೊಳ್ಳುತ್ತಿದೆ. ಇಂತಹ ಚಿಪ್ಪು ಬಲು ತೆಳುವಾಗಿರುತ್ತದೆ. ಭೂಗರ್ಭದ ಒತ್ತಡವು ಅತಿಯಾದಾಗ ಇಂತಹ ಪ್ರದೇಶಗಳಲ್ಲಿ ಚಿಪ್ಪಿನಲ್ಲಿ ಬಿರುಕು ಕಾಣಿಸಿ ಜ್ವಾಲಾಮುಖಿ ಚಟುವಟಿಕೆ ಆರಂಭವಾಗುವುದು. ಇಲ್ಲಿ ಭೂಗರ್ಭದಿಂದ ಚಿಮ್ಮಿದ ಶಿಲಾರಸವು ನೀರಿನೊಳಗೆಯೆ ಹೆಚ್ಚಿನಂಶ ತಣ್ಣಗಾಗಿ ಗಟ್ಟಿಯಾಗಿ ಹೊಸದೊಂದು ಚಿಪ್ಪಿನ ರಚನೆಯಾಗುವುದು. ಬಹಳಷ್ಟು ಟೆಕ್ಟಾನಿಕ್ ತಟ್ಟೆಗಳ ಅಂಚುಗಳು ಸಾಗರದಾಳದಲ್ಲಿಯೆ ಇರುವುದರಿಂದ ಬಹುತೇಕ ಜ್ವಾಲಾಮುಖಿ ಚಟುವಟಿಕೆಗಳು ಸಹ ನೀರಿನಡಿಯಲ್ಲಿಯೇ ನಡೆಯುತ್ತಿರುತ್ತವೆ. ಯಾವ ಪ್ರದೇಶದಲ್ಲಿ ರಿಡ್ಜ್ ಗಳು ನೀರಿನ ಮಟ್ಟಕ್ಕಿಂತ ಮೇಲೆ ಇರುವವೋ ಅಲ್ಲಿ ಜ್ವಾಲಾಮುಖಿ ಚಟುವಟಿಕೆಗಳು ದ್ವೀಪಗಳನ್ನು ನಿರ್ಮಿಸುತ್ತವೆ. ಐಸ್‍ಲ್ಯಾಂಡ್ ಇದಕ್ಕೊಂದು ಉದಾಹರಣೆ.

ಬಳಿಸಾರುವ ತಟ್ಟೆಗಳು ಬದಲಾಯಿಸಿ

ಎರಡು ಟೆಕ್ಟಾನಿಕ್ ತಟ್ಟೆಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಸಬ್ಡಕ್ಷನ್ ವಲಯವುಂಟಾಗುತ್ತದೆ. ಸಾಮಾನ್ಯವಾಗಿ ಸಾಗರದಾಳದ ಟೆಕ್ಟಾನಿಕ್ ತಟ್ಟೆಯು ಭೂಖಂಡದ ಟೆಕ್ಟಾನಿಕ್ ತಟ್ಟೆಗೆ ಡಿಕ್ಕಿ ಹೊಡೆದಾಗ ಸಾಗರದ ಟೆಕ್ಟಾನಿಕ್ ತಟ್ಟೆಯು ಭೂಖಂಡದ ಟೆಕ್ಟಾನಿಕ್ ತಟ್ಟೆಯ ಅಡಿಗೆ ಸರಿಯುವುದು. ಹೀಗಾದಾಗ ಸಾಗರತೀರದ ಸಮೀಪದಲ್ಲಿ ತೀವ್ರ ಆಳವಾದ ಕಂದಕವೊಂದು ಸಾಗರದಲ್ಲಿ ಉಂಟಾಗುತ್ತದೆ. ಇದರ ಮೇಲ್ಪರೆಯು ಭೂಗರ್ಭದ ತೀವ್ರ ತಾಪಮಾನದಿಂದಾಗಿ ಕರಗಿ ಮ್ಯಾಗ್ಮಾ ರೂಪ ತಳೆಯುತ್ತದೆ. ಈ ಮ್ಯಾಗ್ಮಾ ಅತಿ ಮಂದ ದ್ರವವಾಗಿದ್ದು ಸಾಗರದಾಳದಿಂದ ಪೂರ್ಣವಾಗಿ ಹೊರಬರದೆ ನೀರಿನೊಳಗೆ ತಣ್ಣಗಾಗಿ ಗಟ್ಟಿಗೂಡುತ್ತದೆ. ಎಲ್ಲಿ ಈ ಮಾಗ್ಮಾ ನೀರಿನಿಂದ ಹೊರಬರಲು ಶಕ್ತವಾಗುವುದೋ ಅಂತಹ ಸ್ಥಳಗಳಲ್ಲಿ ಜ್ವಾಲಾಮುಖಿ ರೂಪುಗೊಳ್ಳುತ್ತದೆ. ಇಂತಹ ಜ್ವಾಲಾಮುಖಿಗೆ ಉದಾಹರಣೆಯೆಂದರೆ ಮೌಂಟ್ ಎಟ್ನಾ ಮತ್ತು ಪೆಸಿಫಿಕ್ ಅಗ್ನಿ ವಲಯದ ಜ್ವಾಲಾಮುಖಿಗಳು.

ಜ್ವಾಲಾಮುಖಿಯ ಲಕ್ಷಣಗಳು ಬದಲಾಯಿಸಿ

 
೧೯೯೪ರಲ್ಲಿ ಇಂಡೋನೇಷ್ಯಾದ ರಿಂಜಾನಿ ಅಗ್ನಿಪರ್ವತ ಸ್ಫೋಟಿಸಿದಾಗಿನ ನೋಟ

ಸಾಮಾನ್ಯವಾಗಿ ನಮ್ಮ ಪರಿಕಲ್ಪನೆಯಲ್ಲಿ ಜ್ವಾಲಾಮುಖಿಯೆಂದರೆ ಬೆಂಕಿ, ಲಾವಾ ಮತ್ತು ಹೊಗೆಯುಗುಳುವ ಶಂಕುವಿನಾಕಾರದ ಪರ್ವತ. ಆದರೆ ಇದು ಜ್ವಾಲಾಮುಖಿಯ ಒಂದು ಬಗೆ ಮಾತ್ರ. ಜ್ವಾಲಾಮುಖಿಯ ರೂಪುರೇಷೆಗಳು ಹಲವು ವಿಷಯಗಳನ್ನು ಆಧರಿಸಿರುತ್ತವೆ. ಕೆಲ ಜ್ವಾಲಾಮುಖಿಗಳು ಒರಟಾದ ಶಿಖರವನ್ನು ಹೊಂದಿದ್ದು ಬಾಯಿಯ ಸ್ಥಾನದಲ್ಲಿ ಲಾವಾದ ಗುಮ್ಮಟವನ್ನು ಹೊಂದಿರುತ್ತವೆ. ಇನ್ನು ಕೆಲವು ಜ್ವಾಲಾಮುಖಿಗಳ ಮೇಲ್ಭಾಗದಲ್ಲಿ ಬೃಹತ್ ಪೀಠಭೂಮಿಯನ್ನು ಹೊಂದಿರುತ್ತವೆ. ಬೆಂಕಿ, ಲಾವಾ ಮತ್ತು ಹೊಗೆಯುಗುಳುವ ಬಾಯಿಯು ಜ್ವಾಲಾಮುಖಿಯ ಶಿಖರದಲ್ಲಿಯೇ ಇರಬೇಕೆಂದೇನೂ ಇಲ್ಲ. ಅಗ್ನಿಪರ್ವತದ ಮೈಯ ಯಾವುದೇ ಭಾಗದಲ್ಲಿ ಸಹ ಇದು ಇರಬಹುದಾಗಿದೆ. ಹವಾಯ್ ದ್ವೀಪದ ಹಲವು ಅಗ್ನಿಪರ್ವತಗಳಲ್ಲಿ ಇಂತಹ ರಚನೆ ಕಾಣಬಹುದು.

ಇತರ ಜ್ವಾಲಾಮುಖಿಯ ವಿಧಗಳೆಂದರೆ ಕ್ರಯೊಜ್ವಾಲಾಮುಖಿಗಳು ಮತ್ತು ಕೆಸರು ಜ್ವಾಲಾಮುಖಿಗಳು. ಕ್ರಯೊಜ್ವಾಲಾಮುಖಿಗಳು (ಅಥವಾ ಹಿಮಜ್ವಾಲಾಮುಖಿಗಳು) ಗುರು, ಶನಿ ಮತ್ತು ನೆಪ್ಚೂನ್ ಗ್ರಹಗಳ ಚಂದ್ರರಲ್ಲಿ ಕಾಣಬರುತ್ತವೆ. ಕೆಸರು ಜ್ವಾಲಾಮುಖಿಗಳಲ್ಲಿ ಮ್ಯಾಗ್ಮಾ ಚಟುವಟಿಕೆಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಸಕ್ರಿಯವಾಗಿರುವ ಕೆಸರು ಜ್ವಾಲಾಮುಖಿಗಳಲ್ಲಿ ತಾಪಮಾನ ಅಗ್ನಿಮುಖಗಳಲ್ಲಿಯದಕ್ಕಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಿರುವುದು.

ಅಗ್ನಿಪರ್ವತ ಕೇವಲ ಕೆಲವು ಅಡಿಗಳ ಅಡ್ಡಳತೆಯುಳ್ಳ ಒಂದು ಸಣ್ಣ ದಿಬ್ಬವಾಗಿರಬಹುದು ಅಥವಾ ಸಮುದ್ರಮಟ್ಟಕ್ಕೆ 20,000` ಮೇಲ್ಮಟ್ಟದಲ್ಲಿರುವ ದೊಡ್ಡ ಪರ್ವತವಾಗಿರಬಹುದು (ಆಫ್ರಿಕದ ಕಿಲಿಮಂಜಾರೊ). ಸಾಮಾನ್ಯವಾಗಿ ಇದು ಬುಗುರಿಯಾಕೃತಿಯಾಗಿರುತ್ತದೆ. ಶಿಖರದಲ್ಲಿ ಕಂಡುಬರುವ ಹಳ್ಳ ಪ್ರದೇಶವೇ ಅಗ್ನಿಪರ್ವತದ ಬಾಯಿ ಅಥವಾ ಕುಂಡ (ಕ್ರೇಟರ್). ಭೂಗರ್ಭದಿಂದ ಪದಾರ್ಥಗಳೆಲ್ಲವೂ ಹೊರಬರುವುದು ಮುಖ್ಯವಾಗಿ ಈ ಕುಂಡದ ಮೂಲಕವೇ. ಒತ್ತಡ ಬಲು ಹೆಚ್ಚಾದಾಗ, ದ್ರವಪದಾರ್ಥಗಳು ಪ್ರಧಾನದ್ವಾರದಿಂದ ಹೊರಬರುತ್ತವೆ. ಇದಲ್ಲದೆ ಶಿಲಾರಸ ಅಂತಸ್ಸರಣವಾಗಿ ನೇರವಾಗಿಯೋ (ಡೈಕ್) ಸಮತಲವಾಗಿಯೋ (ಸಿಲ್) ಮರದ ಕೊಂಬೆಗಳೋಪಾದಿಯಲ್ಲಿ ಅನೇಕ ಬೀಳುಬಿರುಕುಗಳಲ್ಲಿ ಹರಡಿಕೊಳ್ಳುತ್ತದೆ.ಚಟುವಟಿಕೆಯ ದೃಷ್ಟಿಯಿಂದ ಅಗ್ನಿಪರ್ವತಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಶಿಲಾರಸಾದಿಗಳನ್ನು ಉಗುಳಿ, ಹಾವಳಿ ಮಾಡುತ್ತ ಸದಾ ಚಟುವಟಿಕೆಯಿಂದಿರುವುವು ಜಾಗೃತ ಜ್ವಾಲಾಮುಖಿಗಳು (ಆ್ಯಕ್ಟಿವ್). ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುವು ಸುಪ್ತಜ್ವಾಲಾಮುಖಿಗಳು (ಡೋರ್ಮೆಂಟ್). ಚಟುವಟಿಕೆಗಳೆಲ್ಲವನ್ನೂ ಮುಗಿಸಿಕೊಂಡು, ಪೂರ್ಣವಾಗಿ ನಿಶ್ಯಬ್ಧವಾಗಿರುವುವು ಲುಪ್ತ ಜ್ವಾಲಾಮುಖಿಗಳು (ಎಕ್ಸ್ಟಿಂಗ್ಟ್). ಸಾಮಾನ್ಯವಾಗಿ ಅಗ್ನಿಪರ್ವತಗಳು ಕೇವಲ ಶಿಲಾರಸಾದಿಗಳನ್ನೇ ಹೊರಸೂಸದೆ, ಬಿಸಿನೀರನ್ನೋ ಅಥವಾ ಕಾದ ನುಣುಪಾದ ಬರಿಯ ಮಣ್ಣನ್ನೋ ಹೊರ ಚಿಮ್ಮಬಹುದು. ಅಂಥವನ್ನು ಬಿಸಿನೀರಿನ ಊಟೆ (ಗೈಸóರ್) ಗಳೆಂದೂ ಮೃತ್ತಿಕಾಗ್ನಿಪರ್ವತಗಳೆಂದೂ ಕರೆಯುತ್ತಾರೆ. ಕೆಲವು ಪರ್ವತಗಳು ಆವಿ, ಇಂಗಾಲಾಮ್ಲ, ಜಲಜನಕ ಮುಂತಾದ ಬರಿಯ ಅನಿಲಗಳನ್ನು ಹೊರಸೂಸುವುದುಂಟು. ಅಂಥವು ಅನಿಲರೂಪದ ಅಗ್ನಿಪರ್ವತಗಳು. ಬಿಸಿನೀರಿನ ಊಟೆಗಳಿಗೂ ಅನಿಲರೂಪದ ಅಗ್ನಿಪರ್ವತಗಳಿಗೂ ನಿಕಟವೂ ಸಹಜವೂ ಆದ ಸಂಬಂಧವಿರುತ್ತದೆ. ಬೇಸಗೆ ಕಾಲದಲ್ಲಿ ಜಲಾಂಶ ಕಡಿಮೆಯಾಗುವುದರಿಂದ, ಬಿಸಿ ನೀರಿನ ಊಟೆಗಳು ಅನಿಲರೂಪದ ಅಗ್ನಿಪರ್ವತಗಳಾಗಿಯೂ ಚಳಿಗಾಲ ಅಥವಾ ಮಳೆಗಾಲಗಳಲ್ಲಿ ಜಲಾಂಶ ಹೆಚ್ಚಾಗುವುದರಿಂದ ಅನಿಲರೂಪದ ಅಗ್ನಿಪರ್ವತಗಳು ಬಿಸಿ ನೀರಿನ ಊಟೆಗಳಾಗಿಯೂ ಪರಿವರ್ತನೆ ಹೊಂದುತ್ತವೆ. ಊಟೆಗಳು ಭೂಮಿಯ ಅಂತರಾಳದ ವಿಶೇಷವಾದ ಒತ್ತಡದಿಂದ ನೀರನ್ನು ನೂರಾರು ಅಡಿಗಳ ಎತ್ತರಕ್ಕೆ ಚಿಮ್ಮುತ್ತವೆ. ಅಮೆರಿಕದ ಎಲ್ಲೊ ಸ್ಟೋನ್ ನ್ಯಾಷನಲ್ ಪಾರ್ಕ್ನಲ್ಲಿಯೂ ಐಎಸ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿಯೂ ಇವನ್ನು ಹೆಚ್ಚು ಕಾಣಬಹುದು. ನೀರನ್ನು ಚಿಮ್ಮುವ ಕಾಲ ಎಡೆಬಿಡದೆ ಐದು ಮಿನಿಟ್ಗಳಾದರೂ ಆಗಬಹುದು ಅಥವಾ ಐದು ವರ್ಷಗಳೇ ಆಗಬಹುದು. ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿರುವ ಓಲ್ಡ್ ಫೇತ್ ಎಂಬುದು 66 ಮಿನಿಟ್ಗಳಿಗೊಮ್ಮೆ ನೀರನ್ನು 110`-160` ಎತ್ತರಕ್ಕೆ ಹೊರಚಿಮ್ಮುತ್ತದೆ.ಮೃತ್ತಿಕಾಗ್ನಿಪರ್ವತಗಳು ಭೂಮಂಡಲದಲ್ಲಿ ದ್ವಾರಗಳನ್ನು ಕಲ್ಪಿಸಿಕೊಂಡು, ಕೆಸರು ಮಣ್ಣುಗಳನ್ನು ಹೊರಕ್ಕೆ ಎರಚುತ್ತವೆ. ಈ ಕೆಸರುಮಣ್ಣು ಒಂದೇ ಕಡೆ ರಾಶಿಯಾಗಿ ಸಣ್ಣಗುಡ್ಡಗಳಾಗಿಯೋ ಬೆಟ್ಟಗಳಾಗಿಯೋ ಪರಿಣಮಿಸುತ್ತದೆ. ಒಂದು ವೇಳೆ ಗಾಳಿಯ ಹೊಡೆತ ಜಾಸ್ತಿಯಾಗಿದ್ದಲ್ಲಿ ಧೂಳು ಬಹು ದೂರಕ್ಕೆ ಒಯ್ಯಲ್ಪಡುತ್ತದೆ. 79ರಲ್ಲಿ ವಸೂವಿಯಸ್ ಅಗ್ನಿಪರ್ವತದಿಂದ ಹೊರಬಂದ ಧೂಳು ಪಾಂಪೆ ನಗರದಲ್ಲಿ 20`-25` ಎತ್ತರದಷ್ಟು ಭರ್ತಿಯಾಗಿ, ಪೂರ್ತಿ ನಗರವೇ ಮುಚ್ಚಿಹೋಯಿತು. ಹೀಗೆ ಹೊರಬೀಳುವ ಧೂಳು ಸಾಮಾನ್ಯವಾಗಿ ಇತರ ಲವಣಗಳೊಡನೆ ಸಂಯೋಜಿತವಾಗಿರುವುದರಿಂದ ವಿವಿಧಬಣ್ಣಗಳ ಮಣ್ಣಾಗಿ ಹೊರಬೀಳುತ್ತದೆ. ಇದರಿಂದಲೇ ಅಂಥ ಕಡೆ ಮೃತ್ತಿಕಾಗ್ನಿಪರ್ವತಗಳನ್ನು ಭೂತದ ಬಣ್ಣದ ಪೆಟ್ಟಿಗೆ ಎಂಬುದಾಗಿ ಕರೆಯುವ ವಾಡಿಕೆಯಿದೆ. ಬರ್ಮ, ಬಲೂಚಿಸ್ತಾನಗಳಲ್ಲಿ ಇವು ಕಂಡುಬರುತ್ತವೆ.ಅಗ್ನಿಪರ್ವತಗಳಿಂದ ಹೊರಬೀಳುವ ವಸ್ತುಗಳನ್ನು ಅನಿಲಾಂಶ, ಜಲಾಂಶ, ಘನಾಂಶಗಳೆಂದು ಮೂರು ಭಾಗಗಳಾಗಿ ಪ್ರತ್ಯೇಕಿಸಬಹುದು. ಇವು ಸಾಮಾನ್ಯವಾಗಿ ಒಂದಾದ ಮೇಲೊಂದು ಕ್ರಮವಾಗಿ ಹೊರ ಹೊಮ್ಮುತ್ತವೆ. ಅನಿಲಗಳಲ್ಲಿ ನೀರಿನ ಆವಿಯೇ ಹೆಚ್ಚು. ಈ ಆವಿ ಕೆಲವು ಕಡೆ ಮಳೆಯ ರೂಪದಲ್ಲಿ ಬೀಳುತ್ತದೆ. ಅನಿಲಗಳ ಜೊತೆಗೆ ಕಾರ್ಬನ್ ಮಾನಾಕ್ಸೈಡ್, ಕ್ಲೋರಿನ್, ಸಾರಜನಕ, ಅಮೋನಿಯ ಮತ್ತು ಗಂಧಕದ ವಿವಿಧ ಸಂಯುಕ್ತ ಅನಿಲಗಳು ಇರುತ್ತವೆ.

ಷೀಲ್ಡ್ ಜ್ವಾಲಾಮುಖಿಗಳು ಬದಲಾಯಿಸಿ

 
ಷೀಲ್ಡ್ ಜ್ವಾಲಾಮುಖಿಯ ಚಿತ್ರ

ಹವಾಯ್ ಮತ್ತು ಐಸ್‍ಲ್ಯಾಂಡ್‍ಗಳಲ್ಲಿ ಜ್ವಾಲಾಮುಖಿಗಳು ಕಲ್ಲಿನಂಶ ಹೆಚ್ಚಾಗಿರುವ ಲಾವಾವನ್ನು ಉಗುಳುತ್ತವೆ. ಈ ಕಲ್ಲುಮಣ್ಣಿನಂಶ ಕ್ರಮೇಣ ಸಂಗ್ರಹವಾಗುತ್ತ ಪರ್ವತದ ರೂಪವನ್ನು ತಾಳುತ್ತದೆ. ಈ ಜ್ವಾಲಾಮುಖಿಗಳ ಲಾವಾ ಅತಿ ಬಿಸಿಯಾಗಿದ್ದು ದ್ರವದ ಅಂಶವನ್ನು ಹೆಚ್ಚಾಗಿ ಒಳಗೊಂಡಿರುತ್ತದೆ ಅಲ್ಲದೆ ಈ ಲಾವಾದ ಹರಿವು ಕೂಡ ದೀರ್ಘವಾಗಿರುವುದು. ಇಂತಹ ಜ್ವಾಲಾಮುಖಿಗಳನ್ನು ಷೀಲ್ಡ್ ಜ್ವಾಲಾಮುಖಿಗಳೆಂದು ಕರೆಯಲಾಗುತ್ತದೆ. ಸೌರಮಂಡಲದಲ್ಲಿ ಕುಜಗ್ರಹದ ಮೇಲಿರುವ ಒಲಿಂಪಸ್ ಮಾನ್ಸ್ ಅತಿ ದೊಡ್ಡ ಷೀಲ್ಡ್ ಜ್ವಾಲಾಮುಖಿಯಾಗಿದ್ದರೆ ಭೂಮಿಯ ಮೇಲೆ ಹವಾಯ್ ದ್ವೀಪದ ಮೌನಾ ಲೋವಾ ಅತಿ ಎತ್ತರವುಳ್ಳದ್ದಾಗಿದೆ.

ಸಿಂಡರ್ ಕೋನ್ಸ್ ಬದಲಾಯಿಸಿ

ಕೆಲವು ಜ್ವಾಲಾಮುಖಿಗಳು ಮಂದ ದ್ರವದ ರೂಪದ ಮ್ಯಾಗ್ಮಾ ಮತ್ತು ಲಾವಾಗಳಿಗಿಂತ ಹೆಚ್ಚಾಗಿ ಅತಿಯಾಗಿ ಕಾದ ಕಬ್ಬಿಣದ ಮತ್ತು ಕಲ್ಲಿನ ಸಣ್ಣಸಣ್ಣ ತುಣುಕುಗಳನ್ನು ಹೊರಗೆಸೆಯುತ್ತವೆ. ಈ ತುಣುಕುಗಳು ಕೆಂಡದಂತಿರುವುದರಿಂದ ಇಂತಹ ಜ್ವಾಲಾಮುಖಿಗಳಿಗೆ ಸಿಂಡರ್ ಕೋನ್ಸ್ ಅಥವಾ ಕೆಂಡದ ಶಂಕುಗಳೆನ್ನುವರು. ಈ ತುಣುಕುಗಳು ಜ್ವಾಲಾಮುಖಿಯ ಬಾಯಿಯ ಸುತ್ತ ಸಂಗ್ರಹವಾಗತೊಡಗಿ ೩೦ ರಿಂದ ೪೦೦ ಮೀಟರ್‍ಗಳಷ್ಟು ಎತ್ತರದ ಸಣ್ಣ ಗುಡ್ಡಗಳನ್ನು ಸೃಷ್ಟಿಸುವುದಿದೆ. ಹೆಚ್ಚಿನ ಸಿಂಡರ್ ಕೋನ್ ಗಳು ಒಮ್ಮೆ ಮಾತ್ರ ಸಿಡಿಯುತ್ತವೆ. ಇವು ಕೆಲವೊಮ್ಮೆ ದೊಡ್ಡ ಜ್ವಾಲಾಮುಖಿಯ ಪಾರ್ಶ್ವದಲ್ಲಿ ಇನ್ನೊಂದು ಬಾಯಿಯಂತೆ ಸಹ ಇರುವುದಿದೆ. ಮೆಕ್ಸಿಕೋದ ಪರಿಕ್ಯುಟಿನ್ ಜ್ವಾಲಾಮುಖಿ ಮತ್ತು ಅರಿಜೋನಾದ ಸನ್‍ಸೆಟ್ ಜ್ವಾಲಾಮುಖಿ ಇಂತಹ ಸಿಂಡರ್ ಕೋನ್ ಗೆ ಉದಾಹರಣೆಗಳು.

ಸ್ಟ್ರಾಟೋ ಜ್ವಾಲಾಮುಖಿಗಳು ಬದಲಾಯಿಸಿ

 
ಮೇಯನ್ ಜ್ವಾಲಾಮುಖಿಯು ಒಂದು ಸ್ಟ್ರಾಟೋ ಜ್ವಾಲಾಮುಖಿ

ಇವಕ್ಕೆ ಕಾಂಪೊಸಿಟ್ ಜ್ವಾಲಾಮುಖಿಗಳೆಂದು ಇನ್ನೊಂದು ಹೆಸರು. ಇವುಗಳಲ್ಲಿ ಲಾವಾ, ಕೆಂಡ ಮತ್ತು ಬೂದಿಗಳು ಬೇರೆಬೇರೆ ಹಂತದಲ್ಲಿ ಹೊರಬೀಳುವುವು. ಮೊದಲು ಬೂದಿ ಮತ್ತು ಕೆಂಡಗಳು ಉಗಿಯಲ್ಪಟ್ಟು ಒಂದು ಪದರವನ್ನು ರಚಿಸುವುವು. ಈ ಪದರದ ಮೇಲೆ ಲಾವಾ ಹರಿಯುತ್ತದೆ. ಈ ಲಾವಾ ಒಣಗಿ ಮತ್ತು ತಣ್ಣಗಾಗಿ ಮತ್ತೊಂದು ಪದರ ಸೃಷ್ಟಿಸುವುದು. ಈ ಚಕ್ರ ಮತ್ತೆಮತ್ತೆ ಪುನರಾವರ್ತಿಯಾಗುವುದು. ಜಪಾನ್ ದೇಶದ ಫ್ಯೂಜಿ ಪರ್ವತ, ಫಿಲಿಪ್ಪೀನ್ಸ್ ನ ಮೇಯನ್ ಪರ್ವತ ಮತ್ತು ಇಟಲಿವೆಸೂವಿಯಸ್ ಪರ್ವತಗಳು ಇಂತಹ ಜ್ವಾಲಾಮುಖಿಗಳಿಗೆ ಉದಾಹರಣೆಗಳು.

ಸೂಪರ್ ಜ್ವಾಲಾಮುಖಿಗಳು ಬದಲಾಯಿಸಿ

 
ಲೇಕ್ ಟೋಬಾ ಜ್ವಾಲಾಮುಖಿಯಿಂದ ಸೃಷ್ಟಿಯಾದ ೧೦೦ ಕಿ.ಮೀ. ಅಳತೆಯ ಕ್ಯಾಲ್ಡೆರಾ

ಅತ್ಯಂತ ದೊಡ್ಡದಾಗಿದ್ದು ಬೃಹತ್ ಬಾಯುಳ್ಳ ಜ್ವಾಲಾಮುಖಿಗಳು ಸ್ಫೋಟಿಸಿದಾಗ ಭಾರಿ ಪ್ರಮಾಣದ ಅನಾಹುತವಾಗುವುದಿದೆ. ಕೆಲವೊಮ್ಮೆ ಇಡಿ ಭೂಖಂಡವೇ ಇದರಿಂದ ಪ್ರಭಾವಿತವಾಗಬಹುದು. ಇಂತಹ ಮಹಾಜ್ವಾಲಾಮುಖಿಗಳನ್ನು ಸೂಪರ್ ಜ್ವಾಲಾಮುಖಿಗಳೆಂದು ಕರೆಯುವರು. ಇವು ಒಮ್ಮೆ ಸ್ಫೋಟಿಸಿದ ನಂತರ ಜಾಗತಿಕ ತಾಪಮಾನವು ಹಲವು ವರ್ಷಗಳವರೆಗೆ ಕುಸಿತ ಕಾಣುವುದಿದೆ. ಬೃಹತ್ ಪ್ರಮಾಣದಲ್ಲಿ ಬೂದಿ ಮತ್ತು ಗಂಧಕಗಳು ಹೊರಗೆಸೆಯಲ್ಪಡುವುದರಿಂದ ಹೀಗಾಗುತ್ತದೆ. ಇಂತಹ ಜ್ವಾಲಾಮುಖಿಗಳು ಜಗತ್ತಿಗೆ ಅತಿ ಅಪಾಯಕಾರಿಯಾಗಿರುವುವು. ಇವಕ್ಕೆ ಉದಾಹರಣೆಗಳೆಂದರೆ ಯು.ಎಸ್.ಎಯೆಲ್ಲೋಸ್ಟೋನ್ ಅಗ್ನಿಪರ್ವತ, ನ್ಯೂಜಿಲೆಂಡ್ ನ ಲೇಕ್ ಟೌಪೋ, ಇಂಡೋನೇಷ್ಯಾದ ಲೇಕ್ ಟೋಬಾ.

ಸಾಗರದಾಳದ ಜ್ವಾಲಾಮುಖಿಗಳು ಬದಲಾಯಿಸಿ

 
ಪಿಲ್ಲೋ ಲಾವಾ

ನೆಲದ ಮೇಲಿರುವುದಕ್ಕಿಂತ ಅತಿ ಹೆಚ್ಚಿನ ಸಂಖ್ಯೆಯ ಜ್ವಾಲಾಮುಖಿಗಳು ಸಾಗರದಾಳದಲ್ಲಿವೆ. ಇವುಗಳಲ್ಲಿ ಹಲವಷ್ಟು ಸಕ್ರಿಯವಾಗಿವೆ. ನೀರಿನಾಳ ಕಡಿಮೆಯಿರುವಲ್ಲಿ ಈ ಜ್ವಾಲಾಮುಖಿಗಳು ಹಬೆ ಮತ್ತು ಕಲ್ಲುಮಣ್ಣುಗಳನ್ನು ನೀರಿನಿಂದ ಮೇಲಕ್ಕೆ ಉಗಿಯುತ್ತಿರುತ್ತವೆ. ಇನ್ನು ಕೆಲವು ನೀರಿನಲ್ಲಿ ಬಲು ಆಳದಲ್ಲಿರುತ್ತವೆ. ನೀರಿನ ಅತಿಯಾದ ಭಾರದಿಂದಾಗಿ ಈ ಜ್ವಾಲಾಮುಖಿಗಳು ಹೊರಗೆಸೆಯುವ ಹಬೆ, ಅನಿಲಗಳು ಮತ್ತು ಕಲ್ಲುಮಣ್ಣುಗಳ ವೇಗ ಸಾಕಷ್ಟು ಕುಂಠಿತವಾಗಿ ನೀರಿನಿಂದ ಮೇಲಕ್ಕೆ ಬಹಳ ಸಂದರ್ಭಗಳಲ್ಲಿ ತಲುಪುವುದಿಲ್ಲ.

ಹಿಮನದಿಯ ಅಡಿಯಲ್ಲಿ ಜ್ವಾಲಾಮುಖಿಗಳು ಬದಲಾಯಿಸಿ

 
ಐಸ್‌ಲ್ಯಾಂಡ್‌ನ ಹೆರೋಬ್ರಿಯೋ ಅಗ್ನಿಪರ್ವತ

ಇವು ಹಿಮದ ಹೊದಿಕೆಯಡಿಯಲ್ಲಿ ರಚನೆಯಾಗುತ್ತವೆ. ಹಿಮದ ಅಡಿಯಲ್ಲಿ ಸ್ಫೋಟ ಸಂಭವಿಸಿ ಮಟ್ಟಸವಾದ ಲಾವಾದ ಹರಿವಿನಿಂದಾಗಿ ಈ ಜ್ವಾಲಾಮುಖಿಗಳು ರಚನೆಯಾಗುತ್ತವೆ. ಮೇಲ್ಭಾಗದ ಹಿಮದ ಹೊದಿಕೆ ಕರಗಿದಾಗ ಲಾವಾ ಸಹ ಕುಸಿದು ಸಮತಟ್ಟಾದ ಶಿಖರವುಳ್ಳ ಅಗ್ನಿಪರ್ವತ ಸೃಷ್ಟಿಯಾಗುತ್ತದೆ. ಐಸ್‍ಲ್ಯಾಂಡ್ ಮತ್ತು ಬ್ರಿಟಿಷ್ ಕೊಲಂಬಿಯಗಳಲ್ಲಿ ಇಂತಹ ಜ್ವಾಲಾಮುಖಿಗಳು ಕಾಣಬರುತ್ತವೆ.

ಹೊರಗೆಸೆಯಲ್ಪಡುವ ವಸ್ತುಗಳು ಬದಲಾಯಿಸಿ

ಲಾವಾದ ಸಂಯೋಜನೆ ಬದಲಾಯಿಸಿ

 
ಹವಾಯ್‌ನ ಜ್ವಾಲಾಮುಖಿಯೊಂದರಿಂದ ೧೦ ಮೀ. ಎತ್ತರದ ಲಾವಾದ ಚಿಲುಮೆ

ಲಾವಾದಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ.

  • ಹೊರಬಿದ್ದ ಮ್ಯಾಗ್ಮಾದಲ್ಲಿ ೬೩% ಗಿಂತ ಹೆಚ್ಚಿನ ಪ್ರಮಾಣದ ಸಿಲಿಕ ಇದ್ದಲ್ಲಿ ಇಂತಹ ಲಾವಾವನ್ನು ಫೆಲ್ಸಿಕ್ ಎನ್ನಲಾಗುವುದು.
    • ಫೆಲ್ಸಿಕ್ ಲಾವಾ ಅತಿ ಮಂದವಾಗಿದ್ದು ಇದರ ಹರಿವು ಸಣ್ಣ ಪ್ರಮಾಣದಲ್ಲಿರುತ್ತದೆ. ಈ ಲಾವಾದಿಂದಾಗಿ ಲಾವಾ ಗುಮ್ಮಟಗಳ ಅಥವಾ ಸ್ಟ್ರಾಟೋ ಜ್ವಾಲಾಮುಖಿಗಳ ರಚನೆಯಾಗುವುದು. ಕ್ಯಾಲಿಫೋರ್ನಿಯಾದ ಲಾಸೆನ್ ಶಿಖರ ಇದಕ್ಕೊಂದು ಉದಾಹರಣೆ.
    • ಸಿಲಿಕ ಹೆಚ್ಚಾಗಿರುವ ಮ್ಯಾಗ್ಮಾಗಳು ಅತಿ ಮಂದವಾಗಿರುವುದರಿಂದ ಇವು ಜ್ವಾಲಾಮುಖಿಯಿಂದ ಹೊರಬೀಳುವ ಅನಿಲಗಳನ್ನು ತಡೆಯುತ್ತವೆ. ಇದರಿಂದಾಗಿ ಜ್ವಾಲಾಮುಖಿಯ ಒಳಗೆ ಒತ್ತಡ ಅತಿ ಹೆಚ್ಚಾಗಿ ಕೆಲವೊಮ್ಮೆ ಜ್ವಾಲಾಮುಖಿಯು ಅತಿ ಭೀಷಣರೂಪದಲ್ಲಿ ಸ್ಫೋಟಿಸುವುದಿದೆ. ಇಂತಹ ಸ್ಫೋಟದ ಪರಿಣಾಮವಾಗಿ ಸ್ಟ್ರಾಟೋ ಜ್ವಾಲಾಮುಖಿಗಳು ರೂಪುಗೊಳ್ಳುತ್ತವೆ. ಇವುಗಳಿಂದ ಹೊರಹರಿಯುವ ಲಾವಾ/ಮ್ಯಾಗ್ಮಾದಲ್ಲಿ ಅತಿ ಹೆಚ್ಚಿನ ತಾಪಮಾನದ ದ್ರವ್ಯಗಳು ಸೇರಿದ್ದು ಹರಿವಿನ ಹಾದಿಯಲ್ಲೆದುರಾಗುವ ಎಲ್ಲ ವಸ್ತುಗಳನ್ನು ಇದು ಸುಟ್ಟುಹಾಕುವುದು.
  • ಜ್ವಾಲಾಮುಖಿಯಿಂದ ಹೊರಬಿದ್ದ ಮ್ಯಾಗ್ಮಾದಲ್ಲಿ ಸಿಲಿಕದ ಅಂಶವು ೫೨ ರಿಂದ ೬೩% ಇದ್ದಲ್ಲಿ ಅಂತಹ ಲಾವಾದ ಸಂಯೋಜನೆ ಮಧ್ಯಮಮಟ್ಟದ್ದೆನಿಸಿಕೊಳ್ಳುವುದು. ಇಂಡೋನೇಷ್ಯಾದ ಮೌಂಟ್ ಮೆರಾಪಿ ಇದಕ್ಕೊಂದು ಉದಾಹರಣೆ.
  • ಜ್ವಾಲಾಮುಖಿಯಿಂದ ಹೊರಬಿದ್ದ ಮ್ಯಾಗ್ಮಾದಲ್ಲಿ ಸಿಲಿಕದ ಅಂಶವು ೪೫ ರಿಂದ ೫೨% ಇದ್ದಲ್ಲಿ ಅಂತಹ ಲಾವಾವನ್ನು ಮ್ಯಾಫಿಕ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಮ್ಯಾಗ್ನೀಸಿಯಮ್ ಮತ್ತು ಕಬ್ಬಿಣದ ಅಂಶಗಳು ಹೆಚ್ಚಾಗಿರುವುವು.
  • ಕೆಲವೊಮ್ಮೆ ಮ್ಯಾಗ್ಮಾದಲ್ಲಿ ೪೫% ಗಿಂತ ಕಡಿಮೆ ಸಿಲಿಕದ ಅಂಶವಿದ್ದು ಕೋಮಾಟೈಟ್ ಎಂದೆನಿಸಿಕೊಳ್ಳುತ್ತದೆ. ಆದರೆ ಇಂತಹ ಮ್ಯಾಗ್ಮಾ ಬಲು ಅಪರೂಪದ ವಿದ್ಯಮಾನ. ಎಲ್ಲ ಲಾವಾಗಳ ಪೈಕಿ ಇದು ಅತಿ ಹೆಚ್ಚಿನ ಉಷ್ಣತೆಯುಳ್ಳದ್ದಾಗಿರುತ್ತದೆ.
 
ಹವಾಯ್ ದ್ವೀಪದ ಜ್ವಾಲಾಮುಖಿಯೊಂದರಿಂದ ಪಾಹೋಹೋ ಲಾವಾದ ಹರಿವಿನ ನೋಟ

ಲಾವಾದ ಹೊರರೂಪ ಬದಲಾಯಿಸಿ

ಹೊರನೋಟಕ್ಕೆ ಕಾಣಬರುವ ರೂಪಕ್ಕೆ ಅನುಗುಣವಾಗಿ ಲಾವಾವನ್ನು ಎರಡು ಬಗೆಯವಾಗಿ ವಿಂಗಡಿಸಲಾಗುತ್ತದೆ. "ಆ‌ಆ" ಮತ್ತು "ಪಾಹೋಹೋ". ಈ ಎರಡೂ ಪದಗಳು ಹವಾಯ್ ಭಾಷೆಯವು. "ಆ‌ಆ" ಲಾವಾದ ಹೊರ ಮೇಲ್ಮೈ ಒರಟಾಗಿದ್ದು ಲಾವಾ ಅತಿ ಮಂದದ್ರವವಾಗಿರುತ್ತದೆ. ಪಾಹೋಹೋ ಲಾವಾ ನುಣುಪಾದ ಮೇಲ್ಮೈ ಮತ್ತು ಬಹಳಬಾರಿ ಮಡಿಕೆಗಳನ್ನು ಯಾ ಹಗ್ಗದ ರಚನೆಯನ್ನು ತೋರುತ್ತವೆ. ಈ ಬಗೆಯ ಲಾವಾ ಕೊಂಚ ತೆಳುವಾಗಿದ್ದು ಸರಾಗವಾಗಿ ಹರಿಯುತ್ತದೆ.

ಜ್ವಾಲಾಮುಖಿಗಳ ಚಟುವಟಿಕೆ ಬದಲಾಯಿಸಿ

 
ಜ್ವಾಲಾಮುಖಿಯ ಬಿರುಕು ಬಾಯಿಯಿಂದ ಲಾವಾದ ಚಿಮ್ಮುವಿಕೆಯ ಅದ್ಭುತ ದೃಶ್ಯ
 
ಮೇ ೧೯೮೦ರಲ್ಲಿ ಸೈಂಟ್ ಹೆಲೆನ್ಸ್ ಅಗ್ನಿಪರ್ವತ ಸಿಡಿದಾಗಿನ ಒಂದು ದೃಶ್ಯ

ಜ್ವಾಲಾಮುಖಿಗಳನ್ನು ಸಾಮಾನ್ಯವಾಗಿ ಅವು ಸ್ಫೋಟಗೊಳ್ಳುವ ಆವರ್ತನದ ಅನುಗುಣವಾಗಿ ವರ್ಗೀಕರಿಸಲಾಗುವುದು. ಪದೇಪದೇ ಸ್ಫೋಟಿಸುವ ಜ್ವಾಲಾಮುಖಿಗಳನ್ನು "ಸಕ್ರಿಯ" ಜ್ವಾಲಾಮುಖಿಗಳು, ಇತಿಹಾಸಕಾಲದಿಂದೀಚೆಗೆ ಸ್ಫೋಟಿಸದೆ ಇರುವುವನ್ನು "ತಠಸ್ಥ" ಜ್ವಾಲಾಮುಖಿಗಳು ಮತ್ತು ಇತಿಹಾಸಕಾಲದಲ್ಲಿ ಸಹ ಸ್ಫೋಟಿಸದೆ ಇದ್ದುವನ್ನು "ಮೃತ" ಜ್ವಾಲಾಮುಖಿಗಳೆಂದು ಕರೆಯಲಾಗುತ್ತದೆ. ಆದರೆ ಈ ಬಗೆಯ ವರ್ಗೀಕರಣ ಜನಪ್ರಿಯವಾಗಿದ್ದರೂ ಸಹ ವಿಜ್ಞಾನಿಗಳಿಂದ ಸಹಮತ ಪಡೆದಿಲ್ಲ. ವೈಜ್ಞಾನಿಕವಾಗಿ ಜ್ವಾಲಾಮುಖಿಗಳನ್ನು ಅವುಗಳ ರೂಪುಗೊಳ್ಳುವಿಕೆಯ ಬಗೆ ಮತ್ತು ಸ್ಫೋಟಿಸುವ ಪ್ರಕ್ರಿಯೆಗಳ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. (ಈ ವಿವರಗಳನ್ನು ಮೇಲ್ಕಾಣಿಸಲಾಗಿದೆ.) ಸಕ್ರಿಯ ಜ್ವಾಲಾಮುಖಿಯ ನಿಖರವಾದ ವ್ಯಾಖ್ಯಾನದ ಬಗ್ಗೆ ತಜ್ಞರಲ್ಲಿ ಪೂರ್ಣ ಸಹಮತವಿಲ್ಲ. ಒಂದು ಜ್ವಾಲಾಮುಖಿಯ ಜೀವಿತಾವಧಿಯು ಹಲವು ತಿಂಗಳಿಂದ ಹಿಡಿದು ಮಿಲಿಯಾಂತರ ವರ್ಷಗಳವರೆಗೆ ಇರಬಹುದು. ಇಂತಹ ಸನ್ನಿವೇಶದಲ್ಲಿ ಆ ಜ್ವಾಲಾಮುಖಿಯು "ಸಕ್ರಿಯ"ವೋ ಅಥವಾ "ತಠಸ್ಥ"ವೋ ಎಂದು ಗುರುತಿಸುವುದು ವಾಸ್ತವದಲ್ಲಿ ಅಸಾಧ್ಯ.

ಒಂದು ಜ್ವಾಲಾಮುಖಿಯು ಸ್ಫೋಟಗೊಳ್ಳುವ ಹಂತದಲ್ಲಿದ್ದರೆ ಅಥವಾ ಆಂತರಿಕ ಚಟುವಟಿಕೆಗಳನ್ನು ತೋರುತ್ತಿದ್ದರೆ ಅದನ್ನು ವಿಜ್ಞಾನಿಗಳು "ಸಕ್ರಿಯ"ವೆಂದು ಗುರುತಿಸುವರು. ಸದ್ಯಕ್ಕೆ ಯಾವುದೇ ಚಟುವಟಿಕೆಯಿಲ್ಲದಿದ್ದರೂ ಮುಂದೊಂದು ದಿನ ಸ್ಫೋಟಿಸುವ ಲಕ್ಷಣಗಳನ್ನು ಹೊಂದಿರುವ ಜ್ವಾಲಾಮುಖಿಗಳನ್ನು "ತಠಸ್ಥ" ಜ್ವಾಲಾಮುಖಿಯೆಂದು ಗುರುತಿಸಲಾಗುವುದು. ಮುಂದೆಂದಿಗೂ ಕ್ರಿಯಾಶೀಲವಾಗದೆ ಉಳಿಯುವ ಲಕ್ಷಣಗಳನ್ನು ಹೊಂದಿರುವ ಜ್ವಾಲಾಮುಖಿಗಳನ್ನು "ಮೃತ" ಜ್ವಾಲಾಮುಖಿಗಳೆಂದು ಗುರುತಿಸಲಾಗುವುದು.

ಜ್ವಾಲಾಮುಖಿಗಳ ಪರಿಣಾಮ ಬದಲಾಯಿಸಿ

ಜ್ವಾಲಾಮುಖಿಗಳ ಚಟುವಟಿಕೆಗಳು ಹಲವು ಬಗೆಯವು. ತನ್ನ ಗುಣಕ್ಕನುಸಾರವಾಗಿ ಒಂದು ಜ್ವಾಲಾಮುಖಿಯು ಹಬೆಯ ರಾಶಿ, ಸಿಲಿಕ ಹೆಚ್ಚಾಗಿರುವ ಲಾವಾ, ಸಿಲಿಕ ಕಡಿಮೆಯಿದ್ದು ಕಲ್ಲು ಹೆಚ್ಚಿರುವ ಲಾವಾ, ಪೈರೋಕ್ಲಾಸ್ಟಿಕ್ ಲಾವಾ ಮತ್ತು ಕಾರ್ಬನ್ ಡೈ ಆಕ್ಸೈಡ್ ಇವುಗಳಲ್ಲಿ ಒಂದನ್ನು ಅತಿ ದೊಡ್ಡ ಪ್ರಮಾಣದಲ್ಲಿ ಹೊರಗೆ ಎಸೆಯುತ್ತದೆ. ಇವೆಲ್ಲವೂ ಮಾನವ ಪರಿಸರಕ್ಕೆ ತೀವ್ರ ಹಾನಿಕಾರಕವಾಗಿವೆ. ಅಲ್ಲದೆ ಕೆಲವೊಮ್ಮೆ ಭೂಕಂಪ, ಬಿಸಿನೀರಿನ ಬುಗ್ಗೆಗಳು ಮತ್ತು ಬೃಹತ್ ಕೆಸರುಗುಂಡಿಗಳು ಸಹ ಜ್ವಾಲಾಮುಖಿಯ ಚಟುವಟಿಕೆಯಿಂದ ಉಂಟಾಗುವುದಿದೆ.

ಜ್ವಾಲಾಮುಖಿಯಿಂದ ಹೊರಬೀಳುವ ಅನಿಲಗಳ ಬಗೆ ಮತ್ತು ಪ್ರಮಾಣ ಒಂದು ಜ್ವಾಲಾಮುಖಿಯಿಂದ ಇನ್ನೊಂದರಲ್ಲಿ ಭಿನ್ನವಾಗಿರುತ್ತವೆ. ನೀರಾವಿ ಸಾಮಾನ್ಯವಾಗಿ ಎಲ್ಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು. ಅಲ್ಲದೆ ಅಂಗಾರಾಮ್ಲ ಮತ್ತು ಸಲ್ಫರ್ ಡೈ ಆಕ್ಸೈಡ್ ಸಹ ಗಣನೀಯವಾಗಿರುತ್ತವೆ. ಉಳಿದಂತೆ ಹೈಡ್ರೋಜನ್ ಸಲ್ಫೈಡ್, ಹೈಡ್ರೋಜನ್ ಕ್ಲೋರೈಡ್ ಮತ್ತು ಹೈಡ್ರೋಜನ್ ಫ್ಲೂರೈಡ್ ಗಳು ಸಹ ಇರುತ್ತವೆ. ಇವುಗಳಲ್ಲಿ ಕೆಲವು ಅನಿಲಗಳು ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಮಾಡುವಂತಹವಾಗಿವೆ.

ಜ್ವಾಲಾಮುಖಿಯ ಸ್ಫೋಟದಿಂದ ಹೊರಬೀಳುವ ಅನಿಲಗಳು ಆಮ್ಲಮಳೆಗೆ ಮುಖ್ಯ ಕಾರಣಗಳಲ್ಲಿ ಒಂದು. ಜ್ವಾಲಾಮುಖಿಗಳ ಚಟುವಟಿಕೆಯಿಂದಾಗಿ ಪ್ರತಿ ವರ್ಷ ಸುಮಾರು ೧೪೫ ರಿಂದ ೨೫೫ ಮಿಲಿಯನ್ ಟನ್ನುಗಳಷ್ಟು ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಸೇರ್ಪಡೆಯಾಗುವುದೆಂದು ಅಂದಾಜು ಮಾಡಲಾಗಿದೆ. ಜಾಗತಿಕ ತಾಪಮಾನವು ಕೊಂಚಮಟ್ಟಿಗೆ ಇದರಿಂದ ಕಡಿಮೆಯಾಗುತ್ತದೆ. ಜೊತೆಗೆ ಆಸುಪಾಸಿನ ನೆಲವನ್ನು ಫಲವತ್ತಾಗಿಸುವಲ್ಲಿ ಸಹ ಜ್ವಾಲಾಮುಖಿಯ ಸ್ಫೋಟ ನೆರವಾಗುವುದಿದೆ. ಕೆಲವೊಮ್ಮೆ ಹೊಸ ದ್ವೀಪಗಳ ರಚನೆ ಉಂಟಾಗುತ್ತವೆ.

ಸೌರಮಂಡಲದ ಇತರ ಕಾಯಗಳಲ್ಲಿ ಜ್ವಾಲಾಮುಖಿಗಳು ಬದಲಾಯಿಸಿ

 
ಸೌರಮಂಡಲದ ಅತ್ಯಂತ ಎತ್ತರವಾದ ಪರ್ವತ - ಮಂಗಳಗ್ರಹದ ಒಲಿಂಪಸ್ ಮೊನ್ಸ್

ಚಂದ್ರನ ಮೇಲೆ ಯಾವುದೇ ದೊಡ್ಡ ಜ್ವಾಲಾಮುಖಿಗಳಿಲ್ಲ ಹಾಗೂ ಜ್ವಾಲಾಮುಖಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ಕಾಣಬರುತ್ತಿಲ್ಲ.

ಶುಕ್ರಗ್ರಹದ ಮೇಲ್ಮೈ ೯೦% ರಷ್ಟು ಕಲ್ಲಿನಿಂದ ಕೂಡಿದ್ದು ಇದು ಜ್ವಾಲಾಮುಖಿಗಳ ಇರುವಿಕೆಗೆ ಪುಷ್ಟಿ ನೀಡುತ್ತದೆ. ಸದ್ಯಕ್ಕೆ ಶುಕ್ರಗ್ರಹದ ಅತಿ ಎತ್ತರದ ಅಗ್ನಿಪರ್ವತವೆಂದು ಮಾಟ್ ಮೊನ್ಸ್ ಅನ್ನು ಗುರುತಿಸಲಾಗಿದೆ. ಈ ಜ್ವಾಲಾಮುಖಿಯಲ್ಲಿ ಈಚೆಗೆ ಚಟುವಟಿಕೆಯಿತ್ತೆಂದು ಕಂಡುಕೊಳ್ಳಲಾಗಿದೆ.

ಮಂಗಳಗ್ರಹದಲ್ಲಿ ಭಾರೀ ಗಾತ್ರದ ಹಲವು ಮೃತ ಜ್ವಾಲಾಮುಖಿಗಳನ್ನು ಕಂಡುಹಿಡಿಯಲಾಗಿದೆ. ಈಚಿನ ಅಧ್ಯಯನಗಳಿಂದ ಈ ಗ್ರಹದಲ್ಲಿ ನಿಕಟಪೂರ್ವಕಾಲದಲ್ಲಿ ಜ್ವಾಲಾಮುಖಿಗಳ ಚಟುವಟಿಕೆ ಇತ್ತೆಂಬುದನ್ನು ತಿಳಿಯಲಾಗಿದೆ.

ಇವಲ್ಲದೆ ಹೊರಗಿನ ಗ್ರಹಗಳ ಹಲವು ಉಪಗ್ರಹಗಳಲ್ಲಿ ಜ್ವಾಲಾಮುಖಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಗುರುತಿಸಲಾಗಿದೆ.

ಅಗ್ನಿಪರ್ವತದ ಒಂದು ವಿಹಂಗಮ ನೋಟ ಬದಲಾಯಿಸಿ

 
ಕೋಸ್ಟ ರಿಕದ ಇರಾಜು ಅಗ್ನಿಪರ್ವತ

ಉಲ್ಲೇಖಗಳು ಬದಲಾಯಿಸಿ

  1. http://www.prajavani.net/news/article/2013/05/24/170831.html[ಶಾಶ್ವತವಾಗಿ ಮಡಿದ ಕೊಂಡಿ]

ಪೂರಕ ಓದಿಗೆ ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ