ಗಂಧಕ

ಪರಮಾಣು ಸಂಖ್ಯೆ 16 ರ ರಾಸಾಯನಿಕ ಅಂಶ


೧೬ ರಂಜಕಗಂಧಕಕ್ಲೋರೀನ್
O

S

Se
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಗಂಧಕ, S, ೧೬
ರಾಸಾಯನಿಕ ಸರಣಿಆಲೋಹಗಳು
ಗುಂಪು, ಆವರ್ತ, ಖಂಡ 16, 3, p
ಸ್ವರೂಪನಿಂಬೆ ಹಳದಿ ಸ್ಪಟಿಕ
ಅಣುವಿನ ತೂಕ 32.065(5) g·mol−1
ಋಣವಿದ್ಯುತ್ಕಣ ಜೋಡಣೆ [Ne] 3s2 3p4
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 6
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)(alpha) 2.07 g·cm−3
ಸಾಂದ್ರತೆ (ಕೋ.ತಾ. ಹತ್ತಿರ)(beta) 1.96 g·cm−3
ಸಾಂದ್ರತೆ (ಕೋ.ತಾ. ಹತ್ತಿರ)(gamma) 1.92 g·cm−3
ದ್ರವಸಾಂದ್ರತೆ at ಕ.ಬಿ.1.819 g·cm−3
ಕರಗುವ ತಾಪಮಾನ388.36 K
(115.21 °C, 239.38 °ಎಫ್)
ಕುದಿಯುವ ತಾಪಮಾನ717.8 K
(444.6 °C, 832.3 °F)
ಕ್ರಾಂತಿಬಿಂದು1314 K, 20.7 MPa
ಸಮ್ಮಿಲನದ ಉಷ್ಣಾಂಶ(mono) 1.727 kJ·mol−1
ಭಾಷ್ಪೀಕರಣ ಉಷ್ಣಾಂಶ(mono) 45 kJ·mol−1
ಉಷ್ಣ ಸಾಮರ್ಥ್ಯ(25 °C) 22.75 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 375 408 449 508 591 717
ಅಣುವಿನ ಗುಣಗಳು
ಸ್ಪಟಿಕ ಸ್ವರೂಪorthorhombic
ಆಕ್ಸಿಡೀಕರಣ ಸ್ಥಿತಿಗಳು6, 4, 2, 1 [೧], -2
(strongly acidic oxide)
ವಿದ್ಯುದೃಣತ್ವ2.58 (Pauling scale)
ಅಣುವಿನ ತ್ರಿಜ್ಯ100 pm
ಅಣುವಿನ ತ್ರಿಜ್ಯ (ಲೆಖ್ಕಿತ)88 pm
ತ್ರಿಜ್ಯ ಸಹಾಂಕ102 pm
ವಾನ್ ಡೆರ್ ವಾಲ್ಸ್ ತ್ರಿಜ್ಯ180 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆno data
ವಿದ್ಯುತ್ ರೋಧಶೀಲತೆ(20 °C) (amorphous)
2×1015Ω·m
ಉಷ್ಣ ವಾಹಕತೆ(300 K) (amorphous)
0.205 W·m−1·K−1
ಸಗಟು ಮಾಪನಾಂಕ7.7 GPa
ಮೋಸ್ ಗಡಸುತನ2.0
ಸಿಎಎಸ್ ನೋಂದಾವಣೆ ಸಂಖ್ಯೆ7704-34-9
ಉಲ್ಲೇಖನೆಗಳು

ಗಂಧಕ (Sulfur) ಒಂದು ಮೂಲವಸ್ತು. ಇದು ಭೂಮಿ ಯಲ್ಲಿ ಸ್ವತಂತ್ರವಾಗಿಯೂ, ಕಬ್ಬಿಣ ಮತ್ತು ಗಂಧಕದ ಮಿಶ್ರಣವಾದ ಪೈರೇಟ್ನ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿದೆ. ವಾಸನೆಯಾಗಲೀ, ರುಚಿಯಾಗಲೀ ಇಲ್ಲ. ಗಂಧಕದ ಪರಿಚಯ ಮಾನವನಿಗೆ ಪುರಾತನ ಕಾಲದಿಂದಲೂ ಇದೆ. ಪ್ರಾಚೀನ ಗ್ರೀಕರಿಗೆ ಮತ್ತು ರೋಮನ್ರಿಗೆ ತಿಳಿದಿದ್ದ ಇದು ಮಾರ್ಜಕವಾಗಿಯೂ, ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗವಾಗುತ್ತಿತ್ತು. ಆಧುನಿಕ ಕಾಲದಲ್ಲಿ ಕೈಗಾರಿಕೆಗಳಲ್ಲಿ ಹಾಗೂ ಮದ್ದುಗುಂಡುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

ಧಾತುರೂಪದಲ್ಲಿ ಗಂಧಕ ನಿಸರ್ಗದಲ್ಲಿ ಕಂಡುಬರುವ ಅಂಶ (ಸ್ಥಳೀಯ ಗಂಧಕ) ಆಗಿರುತ್ತದೆ. ಆದರೆ ಸಲ್ಫೈಡ್ ಮತ್ತು ಸಲ್ಫೇಟ್ ಖನಿಜಗಳಾಗಿ ಸಂಯೋಜಿತ ರೂಪಗಳಲ್ಲಿ ಸಾಮಾನ್ಯವಾಗಿ ಮತ್ತು ಹೆಚ್ಚಾಗಿ ಸಂಭವಿಸುತ್ತದೆ. ಸ್ಥಳೀಯ ರೂಪದಲ್ಲಿ ಹೇರಳವಾಗಿ ಇದ್ದು ಈ ಗಂಧಕ ಪ್ರಾಚೀನ ಭಾರತ, ಪ್ರಾಚೀನ ಗ್ರೀಸ್, ಚೀನಾ ಮತ್ತು ಈಜಿಪ್ಟ್‍ನಲ್ಲಿ ಪ್ರಾಚೀನ ಕಾಲದಲ್ಲಿ ಅದರ ಉಪಯೋಗಗಳಾನ್ನು ನಮೂದಿಸಲಾಯಿತು. ಬೈಬಲ್‍ನಲ್ಲಿ, ಗಂಧಕವನ್ನು ಬ್ರಿಮ್‍ಸ್ಟೋನೆ ಎಂದು ಕರೆಯಲಾಗಿದೆ.

ಗಂಧಕ ಆವರ್ತಕೋಷ್ಟಕದ ೬ನೆಯ ಪ್ರಧಾನ ಗುಂಪಿನ ಧಾತು ; ಪರಮಾಣು ಸಂಖ್ಯೆ ೧೬ ; ಪರಮಾಣು ತೂಕ ೩೨.೦೬೬ ± ೦.೦೦೩ ; ರಾಸಾಯನಿಕ ಸಂಕೇತ S (ಸಲ್ಫರ್). ನೈಸರ್ಗಿಕವಾಗಿ ಲಭಿಸುವ ಐಸೊಟೋಪುಗಳು ೩೨,೩೩,೩೪,೩೬. ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p4. ಬೈಬಲ್ಲಿನಲ್ಲಿ ಮತ್ತು ಹೋಮರನ ಒಡಿಸ್ಸಿಯಲ್ಲಿ ಗಂಧಕದ ಉಲ್ಲೇಖವುಂಟು. ಸಂಸ್ಕೃತದಲ್ಲಿ ಸಲ್ಫಾರಿ ಎಂದರೆ ತಾಮ್ರದ ಶತ್ರು ಎಂದರ್ಥ. ತಾಮ್ರ ಮತ್ತು ಗಂಧಕಗಳನ್ನು ಒಟ್ಟಿಗೆ ಕಾಯಿಸಿದಾಗ ತಾಮ್ರ ನಾಶವಾಗುವುದೆಂದು ಬಗೆದು (ವಾಸ್ತವವಾಗಿ ತಾಮ್ರದ ಸಲ್ಫೈಡ್ ಆಗುವುದು) ಅದನ್ನು ಹೀಗೆ ಕರೆದಿರಲು ಸಾಕು. ಈ ಪದವೇ ರೂಪಾಂತರವಾಗಿ ಸಲ್ಫರ್ ಆಗಿದೆಯೆಂದು ಭಾವಿಸಲಾಗಿದೆ. ಗ್ರೀಕರು ಮತ್ತು ರೋಮನರು ಗಂಧಕದ ಹೊಗೆಯನ್ನು ಕ್ರಿಮಿನಾಶಕವಾಗಿ ಮತ್ತು ಬಟ್ಟೆಗಳನ್ನು ಚಲುವೆ ಮಾಡಲು ಬಳಸುತ್ತಿದ್ದರೆಂದು ವರದಿ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಗಂಧಕದ ಉಪಯೋಗ ಪ್ರಾಚೀನವಾದುದು. ಅದೊಂದು ಧಾತುವೆಂದು ಖಚಿತಪಡಿಸಿದವನು ಲೆವಾಸಿಯೆ (೧೭೭೭). ಧಾತುವಿನ ರೂಪದಲ್ಲಿ ಮತ್ತು ಸಂಯುಕ್ತ ಸ್ಥಿತಿಯಲ್ಲಿ ದೊರೆಯುವುದು ಇದರ ವೈಶಿಷ್ಟ್ಯ, ಸಕ್ರಿಯವಾದ ಜ್ವಾಲಾಮುಖಿಗಳು ಇರುವ ಎಡೆಗಳಲ್ಲೆಲ್ಲ ಗಂಧಕ ಸಿಕ್ಕುತ್ತವೆ. ಇವೇನೂ ಆಕಸ್ಮಿಕವಲ್ಲ ; ಜ್ವಾಲಾಮುಖಿಗಳು ಹೊರಹಾಕುವ ಅನಿಲಗಳೊಡನೆ ಭೂಗತಗಂಧಕ ಮತ್ತು ಅದರ ಸಂಯುಕ್ತಗಳ ದಹನದಿಂದ ಹುಟ್ಟುವ ಹೈಡ್ರೊಜನ್ ಸಲ್ಫೈಡ್ ಮತ್ತು ಗಂಧಕದ ಡೈಆಕ್ಸೈಡುಗಳು ಸೇರಿಕೊಂಡಿರುತ್ತವೆ. ಇವು ವಾಯುಮಂಡಲದ ಸಂಪರ್ಕದಲ್ಲಿ ತಣಿದು ವರ್ತಿಸಿದಾಗ ಗಂಧಕ ಉಂಟಾಗುವುದು.

2H2S  + SO2 → 2H2O + 3S ↓

ಈ ದೂಳು ಜ್ವಾಲಾಮುಖಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರವಾಗಿ ಗಂಧಕದ ನಿಕ್ಷೇಪ ಮೈದಳೆದಿರುವುದು ಸಂಭವನೀಯ. ಗಂಧಕನಿಕ್ಷೇಪಗಳಿರುವ ದೇಶಗಳೆಂದರೆ ಇಟಲಿ, ಸಿಸಿಲಿ, ಜಪಾನ್, ಗ್ರೀಸ್, ರಷ್ಯ, ಆಸ್ಟ್ರಿಯ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು. ಅಮೆರಿಕದ ಲೂಸಿಯಾನ ಮತ್ತು ಟೆಕ್ಸಾಸ್ ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ಗಂಧಕದ ನಿಕ್ಷೇಪ ಪ್ರಪಂಚದಲ್ಲೇ ಅತಿ ದೊಡ್ಡದೆಂದು ಒಂದು ಅಂದಾಜು. ಗಂಧಕದ ಈ ಸ್ತರ ಭೂಮಟ್ಟಕ್ಕಿಂತ ಸುಮಾರು ೨೧೦-೨೭೫ ಮೀಟರುಗಳಷ್ಟು ಕೆಳಗಿದೆ. ಸಂಯುಕ್ತಸ್ಥಿತಿಯಲ್ಲಿ ಲೋಹದ ಸಲ್ಫೈಡುಗಳು ಮತ್ತು ಸಲ್ಫೇಟುಗಳಾಗಿ ನಮಗೆ ಪರಿಚಿತ. ನೈಸರ್ಗಿಕ ಸಲ್ಫೈಡುಗಳಲ್ಲಿ ಮುಖ್ಯವಾದವುಗಳೆಂದರೆ ಗೆಲಿನ (PbS), ಸತುವಿನ ಬ್ಲೆಂಡ್ (ZnS), ಕಬ್ಬಿಣದ ಪಿರೈಟೀಸ್ (FeS2),  ತಾಮ್ರದ ಪಿರೈಟೀಸ್ (CuFeS2), ಸಿನಬಾರ್ (HgS) ಮತ್ತು ಸ್ಟಿಬ್ನೈಟ್ (Sb2S3). ಸಲ್ಫೇಟುಗಳ ಪೈಕಿ ಜಿಪ್ಸಂ (CaSO4.2H2O), ಗ್ಲಾಬರ್ ಲವಣ (Na2SO4.10H2O), ಎಪ್ಸಂ ಲವಣ (MgSO4.7H2O)  ಮತ್ತು ಬೆರೈಟಿಸುಗಳನ್ನು (BaSO4) ಹೆಸರಿಸಬಹುದು. ಗಂಧಕದ ಅಂಶವುಳ್ಳ ಕಾರ್ಬನಿಕ ವಸ್ತುಗಳೆಂದರೆ ಮೊಟ್ಟೆ, ನೀರುಳ್ಳಿ, ಸಾಸುವೆ, ಕೂದಲು, ಉಣ್ಣೆ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ.

ಉತ್ಪಾದನೆ

ಬದಲಾಯಿಸಿ

ಗಂಧಕದ ಬಹುಪಾಲನ್ನು ಉತ್ಪಾದಿಸುವುದು ಸಿಸಿಲಿ ಮತ್ತು ಲೂಸಿಯಾನ ನಿಕ್ಷೇಪಗಳಿಂದ. ಈ ಉತ್ಪಾದನ ಕ್ರಮಗಳ ಕಾರ್ಯಚರಣೆಯಲ್ಲಿ ತಮ್ಮದೇ ಆದ ವೈಶಿಷ್ಟ್ಯಗಳಿವೆ. ಹೀಗಾಗಿ ಅವುಗಳಿಗೆ ಸಿಸಿಲಿಯನ್ ವಿಧಾನ ಮತ್ತು ಲೂಸಿಯಾನ ವಿಧಾನಗಳೆಂದೇ ಹೆಸರಾಗಿದೆ.

ಸಿಸಿಲಿಯನ್ ವಿಧಾನ

ಬದಲಾಯಿಸಿ

ಸಿಸಿಲಿಯ ನಿಕ್ಷೇಪದಲ್ಲಿರುವುದು ಕೇವಲ ೨೪% ಗಂಧಕ. ಉಳಿದದ್ದು ಜೇಡಿಮಣ್ಣು, ಮತ್ತು ಜಿಪ್ಸಂ. ಕಚ್ಚಾ ಗಂಧಕವನ್ನು ಅದರಲ್ಲಿರುವ ಕಶ್ಮಲಗಳಿಂದ ಪ್ರತ್ಯೇಕಿಸಲು ಒಂದು ಗೂಡಿನಲ್ಲಿ ಕರಗಿಸಲಾಗುವುದು. ಸಿಸಿಲಿಯಲ್ಲಿ ಕಟ್ಟಿಗೆ ದುಬಾರಿ. ಆದ್ದರಿಂದ ಸ್ವಲ್ಪ ಗಂಧಕವನ್ನೇ ಉರಿಸಿ ಆಗ ಹುಟ್ಟುವ ಉಷ್ಣದಿಂದ ಉಳಿದ ಗಂಧಕವನ್ನು ಕರಗಿಸುವ ವ್ಯವಸ್ಥೆ ಮಾಡಿರುತ್ತಾರೆ. ಪ್ರತಿನಿತ್ಯ ದ್ರವ ಗಂಧಕವನ್ನು ತೇವವಾದ ಮರದ ಎರಕಗಳಿಗೆ ಹರಿಸಿ ತಣಿಯಲು ಬಿಡಲಾಗುವುದು. ಅದು ಗಟ್ಟಿಯಾಗಲು ೩-೪ ದಿವಸಗಳು ಬೇಕು. ಹೀಗೆ ತಯಾರಿಸಿದ ಗಂಧಕದಲ್ಲಿ ೫% ವರೆಗೆ ಕಶ್ಮಲಗಳಿರುವುದುಂಟು. ಶುದ್ಧೀಕರಣಕ್ಕಾಗಿ ಅಶುದ್ಧ ಗಂಧಕವನ್ನು ಮಾರ್ಸೆಲ್ಸ್ ಮತ್ತು ಆಂಟ್‌ವರ್ಪ್ ನಗರಗಳಿಗೆ ರಫ್ತು ಮಾಡುವುದು ರೂಢಿ. ಅಗ್ಗದ ಉರುವಲಿನ ಅಭಾವದಿಂದಾಗಿ ಗಂಧಕವನ್ನು ಸ್ಥಳದಲ್ಲೇ ಶುದ್ಧಿ ಮಾಡುವಂತಿಲ್ಲ. ಶುದ್ಧೀಕರಣ ವಿಧಾನ ವಿರಳ. ಒಂದು ಕಬ್ಬಿಣದ ತೊಟ್ಟಿಯಲ್ಲಿ ಅಶುದ್ಧ ಗಂಧಕವನ್ನು ಕರಗಿಸಲಾಗುವುದು. ದ್ರವ ಗಂಧಕ ಒಂದು ರಿಟಾರ್ಟಿಗೆ ಇಳಿಯುತ್ತದೆ. ಇದೂ ಕಬ್ಬಿಣದ್ದೇ. ಅಲ್ಲಿ ಗಂಧಕ ಕುದಿಯುವುದು. ಗಂಧಕ ಆವಿ ವಿಶಾಲವಾದ ಒಂದು ಇಟ್ಟಿಗೆ ಗೂಡನ್ನು ಪ್ರವೇಶಿಸುತ್ತದೆ. ಪ್ರಾರಂಭದಲ್ಲಿ ಗಂಧಕದ ಆವಿ ಗೂಡಿನ ಗೋಡೆಗಳ ಮೇಲೆ ನುಣ್ಣನೆಯ ಪುಡಿಯಾಗಿ ಶೇಖರವಾಗುತ್ತದೆ. ಇದನ್ನು ಕೆರೆದು ತೆಗೆಯಬಹುದು. ಇದೇ ಗಂಧಕದ ಅರಳು (ಫ್ಲವರ್ಸ್ ಆಫ್ ಸಲ್ಫರ್). ಕ್ರಮೇಣ ಗೂಡಿನ ಗೋಡೆಗಳು ಬಿಸಿಯಾಗುವುದರಿಂದ ಗಂಧಕ ಕರಗಿ ಗೂಡಿನ ತಳ ಸೇರುವುದು. ಆಗಿಂದಾಗ್ಗೆ ಇದನ್ನು ನಿಯೋಜಿತ ದ್ವಾರದ ಮೂಲಕ ಒದ್ದೆಯಾದ ಮರದ ಎರಕಗಳಿಗೆ ಹರಿಯಗೊಟ್ಟರೆ ತಣಿದ ಅನಂತರದ ಗಂಧಕದ ಕಡ್ಡಿಗಳಾಗುವುವು. ಇದೇ ಗಂಧಕ ಉರುಳೆ (ರೋಲ್ ಸಲ್ಫರ್).

ಲೂಸಿಯಾನ ಅಥವಾ ಫ್ರ್ಯಾಷ್ ವಿಧಾನ

ಬದಲಾಯಿಸಿ

ಅಮೆರಿಕದ ನಿಕ್ಷೇಪದಲ್ಲಿರುವ ಗಂಧಕದ ಪ್ರಮಾಣ ೬೦%-೭೦%. ಈ ನಿಕ್ಷೇಪ ಭೂಮಟ್ಟಕ್ಕಿಂತ ೨೧೦-೨೭೫ ಮೀಟರುಗಳಷ್ಟು ಕೆಳಗಿರುವುದಷ್ಟೆ. ಇಷ್ಟು ಆಳದಲ್ಲಿರುವ ಗಂಧಕದ ಸ್ತರದ ಮೇಲೆ ಸುಮಾರು ೧೫೦ ಮೀಟರುಗಳಷ್ಟು ದಪ್ಪ ಉಸುಬು ಮತ್ತು ಜೇಡಿಮಣ್ಣು ಮತ್ತು ೩೦ ಮೀಟರುಗಳಷ್ಟು ದಪ್ಪ ಸುಣ್ಣಕಲ್ಲಿನ ಪದರ. ಅಗಾಧ ಗಾತ್ರ ನೀರು, ಹೈಡ್ರೋಜನ್ ಸಲ್ಫೈಡ್ ಮತ್ತು ಗಂಧಕದ ಡೈಆಕ್ಸೈಡುಗಳಂಥ ವಿಷವಾಯುಗಳು ಸಂಗ್ರಹವಾಗಿರುವುವು. ಈ ಪರಿಸ್ಥಿತಿಯಲ್ಲಿ ಗಂಧಕವನ್ನು ಮೇಲೆತ್ತುವುದು ಒಂದು ಸಮಸ್ಯೆಯಾಗಿತ್ತು. ಇದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನವನ್ನು ರೂಪಿಸಿದಾತ ಹೆರ್ಮಾನ್ ಫ್ರ್ಯಾಷ್ (೧೯೦೨). ಇದೊಂದು ಎಂಜಿನಿಯರಿಂಗ್ ಸಾಹಸ ಎನ್ನಬಹುದು. ಇದರ ವಿವರ ಹೀಗಿದೆ.

ಗಂಧಕದ ನಿಕ್ಷೇಪವಿರುವ ಪ್ರದೇಶದಲ್ಲಿ ಯಾಂತ್ರಿಕವಾಗಿ ಗಂಧಕದ ಸ್ತರವನ್ನು ಮುಟ್ಟುವಷ್ಟು ಆಳದ ಒಂದು ದೊಡ್ಡ ರಂಧ್ರವನ್ನು ಕೊರೆಯಲಾಗುವುದು. ಅದರಲ್ಲಿ ಸುಮಾರು ೩೦ ಸೆಂಟಿಮೀಟರ್ ವ್ಯಾಸವುಳ್ಳ ಒಂದು ಕೊಳವೆಯನ್ನು ನೆಡುತ್ತಾರೆ. ಇದು ರಕ್ಷಾ ಕವಚದಂತೆ. ಇದರೊಳಕ್ಕೆ ಫ್ರ್ಯಾಷ್ ಗಂಧಕದ ಪಂಪನ್ನು ಇಳಿಬಿಡುವರು. ಈ ಪಂಪಿನಲ್ಲಿ ಸಮಾನಾಕ್ಷವುಳ್ಳ ಕ್ರಮವಾಗಿ ೧೫,೭.೫ ಮತ್ತು ೨.೫ ಸೆಂಟಿಮೀಟರ್ ವ್ಯಾಸದ ಮೂರು ಕಬ್ಬಿಣದ ಕೊಳವೆಗಳಿರುತ್ತವೆ.  ಚದರಂಗುಲಕ್ಕೆ ೧೪೦ ಪೌಂಡುಗಳಷ್ಟು ಒತ್ತಡದಲ್ಲಿ ೧೭೦ ಸೆಂ.ಗೆ ಕಾಯಿಸಿರುವ ನೀರನ್ನು ಹೊರ ಕೊಳವೆಯ ಮೂಲಕ ಹಾಯಿಸಲಾಗುತ್ತದೆ. ಇದು ಗಂಧಕದ ಸ್ತರವನ್ನು ಮುಟ್ಟಿದ ತತ್‌ಕ್ಷಣ ಅದನ್ನು ಕರಗಿಸುವುದು. (ಗಂಧಕದ ದ್ರವನ ಬಿಂದು ೧೧೨.೮ ಸೆಂ.) ದ್ರವ ಗಂಧಕ ಭಾರವಾದದ್ದರಿಂದ ಪಂಪಿನ ಸುತ್ತ ಶೇಖರಗೊಳ್ಳುತ್ತದೆ. ಒಳಕೊಳವೆಯ ಮೂಲಕ ಹೊಕ್ಕ ಒತ್ತಡದ ಬಿಸಿಗಾಳಿ ದ್ರವ ಗಂಧಕ ಮತ್ತು ನೀರಿನ ಮಿಶ್ರಣವನ್ನು ನೊರೆಗೂಡಿಸುವುದು. ನೊರೆಗೂಡಿದ ಗಂಧಕ ಹಗುರ. ಆದ್ದರಿಂದ ಗಾಳಿಯ ಒತ್ತಡದಿಂದ ಅದು ಮಧ್ಯದ ಕೊಳವೆಯಲ್ಲಿ ಏರಿ ಹೊರಬೀಳುತ್ತದೆ. ಇದನ್ನು ಮರದ ತೊಟ್ಟಿಗಳಲ್ಲಿ ತಣಿಯಲು ಬಿಡುವರು. ಆಗ ಗಂಧಕ ಮಾತ್ರ ಘನೀಭವಿಸುವುದು. ಆನಂತರ ತೊಟ್ಟಿಯನ್ನು ಒಡೆದು ಹಾಕಿದರೆ ಗಂಧಕದ ದೊಡ್ಡ ಹೆಪ್ಪೇ ಕಳಚಿ ಬೀಳುತ್ತದೆ. ಇದನ್ನು ಚೂರುಮಾಡಿ ಅಥವಾ ಪುಡಿ ಮಾಡಿ ಮಾರುಕಟ್ಟೆಗೆ ರವಾನಿಸುವುದು ವಾಡಿಕೆ. ಹೀಗೆ ತಯಾರಿಸಿದ ಗಂಧಕ ೯೯.೯೫% ಶುದ್ಧವಾಗಿರುವುದು ಗಮನಾರ್ಹ.

ಉಪೋತ್ಪನ್ನ ಗಂಧಕ

ಬದಲಾಯಿಸಿ

ಕಲ್ಲಿದ್ದಲ್ಲನ್ನು ಶುಷ್ಕ ಆಸವನಕ್ಕೆ ಗುರಿಪಡಿಸಿದಾಗ ಅದರಲ್ಲಿದ್ದ ಗಂಧಕ ಸಂಯುಕ್ತಗಳು ಹೈಡ್ರೊಜನ್ ಸಲ್ಫೈಡಿನ ರೂಪದಲ್ಲಿ ಹೊರಬೀಳುತ್ತವೆ, ಆದ್ದರಿಂದ ಕಲ್ಲಿದ್ದಲ ಅನಿಲವನ್ನು ಜಲಯುಕ್ತ ಫೆರಿಕ್ ಆಕ್ಸೈಡಿನ ಮೇಲೆ ಹಾಯಿಸಿದರೆ ಅದು ಫೆರಿಕ್ ಹೈಡ್ರಾಕ್ಸೈಡಿನಂತೆ ವರ್ತಿಸಿ ಹೈಡ್ರೊಜನ್ ಸಲ್ಫೈಡನ್ನು ಹೀರುವುದು, ಫೆರಿಕ್ ಹೈಡ್ರಾಕ್ಸೈಡ್ ಎಲ್ಲ ತೀರಿದ ಮೇಲೆ ಅದನ್ನು ತೇವವಾದ ಗಾಳಿಯ ಸಂಪರ್ಕದಲ್ಲಿ ಬಿಟ್ಟರೆ ಪುನಃ ಜಲಯುಕ್ತ ಫೆರಿಕ್ ಆಕ್ಸೈಡಾಗಿ ಗಂಧಕವನ್ನು ಬಿಡುಗಡೆ ಮಾಡುವುದು. ಉತ್ಪತ್ತಿಯಾದ ಗಂಧಕವನ್ನು ಆಸವಿಸಿ ಅಥವಾ ಕಾರ್ಬನ್ ಡೈ ಸಲ್ಫೈಡಿನಲ್ಲಿ ವಿಲೀನಗೊಳಿಸಿ ಸಂಪಾದಿಸಬಹುದು. ಆದರೆ ತೀರಿದ ಫೆರಿಕ್ ಆಕ್ಸೈಡನ್ನು ಹುರಿದು ಗಂಧಕದ ಡೈಆಕ್ಸೈಡ್ ಮಾಡಿಕೊಂಡು ಅದನ್ನು ಸಲ್ಫ್ಯೂರಿಕ್ ಆಮ್ಲಕ್ಕೆ ಪರಿವರ್ತಿಸುವುದೇ ಸಾಮಾನ್ಯ.

ಸಲ್ಫೈಡ್ ಅದುರುಗಳಿಂದ ಲೋಹಗಳನ್ನು ಉತ್ಪಾದಿಸುವಾಗ ಕುಲುಮೆಯಿಂದ ಹೊರಬೀಳುವ ಅನಿಲಗಳೊಡನೆ ಗಂಧಕದ ಡೈ ಆಕ್ಸೈಡ್ ಇರುತ್ತದೆ. ಇದನ್ನು ಕೋಕಿನಿಂದ ಅಪಕರ್ಷಿಸಿ ಗಂಧಕವನ್ನು ತಯಾರಿಸಬಹುದು.

SO2 + C → CO2 + S

ಈ ಕ್ರಿಯೆ ಪೂರ್ತಿಯಾಗಿ ನೆಡೆಯಲು ೧೧೦೦ ಸೆಂ. ಉಷ್ಣತೆ ಅಗತ್ಯ. ಇದು ಉಷ್ಣಜನಕ ಕ್ರಿಯೆ. ಆದ್ದರಿಂದ ಒಮ್ಮೆ ಪ್ರಾರಂಭಿಸಿದರೆ ಸಾಕು. ಅನಂತರ ತನ್ನ ಪಾಡಿಗೆ ತಾನೇ ಮುಂದುವರಿಯುತ್ತದೆ. ಉರುವಲಿಗಾಗಿ ಏನೂ ವೆಚ್ಚ ತಗಲದು. ಆದರೆ ಉಪೋತ್ಪನ್ನ ಗಂಧಕದ ಡೈಆಕ್ಸೈಡನ್ನು ಹೀಗೆ ಸದ್ವಿನಿಯೋಗ ಮಾಡದೆ ವಾತಾವರಣಕ್ಕೆ ಬಿಟ್ಟುಬಿಡುವುದು ಮೊದಲಿನ ಪದ್ಧತಿಯಾಗಿತ್ತು. ಏಕೆಂದರೆ ಒಂದು ವೇಳೆ ಅದರಿಂದ ಸಲ್ಫ್ಯೂರಿಕ್ ಆಮ್ಲವನ್ನು ತಯಾರಿಸಿದರೂ ಅದರ ಸಾಗಣೆ ಕಷ್ಟ ಮತ್ತು ದುಬಾರಿ. ಅದೇ ಗಂಧಕದ ಡೈಆಕ್ಸೈಡಿನಿಂದ ಗಂಧಕ ತಯಾರಿಸಿಕೊಂಡರೆ ಈ ತೊಂದರೆಯಿಲ್ಲ. ಗಂಧಕವನ್ನು ಸಾಗಿಸುವುದು ಬಲು ಸುಲಭ. ಆದರೆ ಇಲ್ಲಿ ಬೇರೊಂದು ಸಮಸ್ಯೆ ಏಳುತ್ತದೆ. ಲೋಹೋತ್ಪಾದಕ ಕುಲುಮೆಗಳು ವಿಸರ್ಜಿಸುವ ಅನಿಲದಲ್ಲಿ ೫%ಕ್ಕಿಂತ ಹೆಚ್ಚು ಮೊತ್ತದ ಗಂಧಕದ ಡೈಆಕ್ಸೈಡ್ ಇರುವುದು ಅಪರೂಪ. ಇದನ್ನು ಸಾರೀಕರಿಸಿದ ಹೊರತು ಅದರಿಂದ ಗಂಧಕದ ತಯಾರಿಕೆ ವ್ಯವಹಾರಿಕವಲ್ಲ. ಅದಕ್ಕಾಗಿ ಅನಿಲ ಮಿಶ್ರಣವನ್ನು ಪ್ರತ್ಯಾಮ್ಲೀಯ ಅಲ್ಯೂಮಿನಿಯಂ ಸಲ್ಫೇಟ್ ದ್ರಾವಣದ ಮೂಲಕ ಹಾಯಿಸುವರು. ಆಗ ಗಂಧಕದ ಡೈಆಕ್ಸೈಡನ್ನು ಹೀರುತ್ತದೆ. ದ್ರಾವಣವನ್ನು ಕಾಯಿಸಿದರೆ ಗಂಧಕದ ಡೈಆಕ್ಸೈಡ್ ಬಿಡುಗಡೆಯಾಗುವುದು. ಇದನ್ನು ಹಿಂದೆ ಹೇಳಿದಂತೆ ಅಪಕರ್ಷಿಸಿ ಗಂಧಕವನ್ನು ಪಡೆಯಬಹುದು. ಈ ವಿಧಾನದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ.

ಭೌತ ಲಕ್ಷಣಗಳು

ಬದಲಾಯಿಸಿ

ಅಪರೂಪತೆಗೆ (ಅಲ್ಲಾಟ್ರೊಪಿ) ಹೆಸರಾದ ಧಾತು ಗಂಧಕ. ಅಷ್ಟಮುಖಿ ಗಂಧಕ, ಸೂಜಿ ಗಂಧಕ ಮತ್ತು ಮೆದು ಗಂಧಕ ಇದರ ಮುಖ್ಯ ಅಪರೂಪಗಳು. ಅವನ್ನು ತಯಾರಿಸುವ ಬಗೆ ಈ ಮುಂದಿನಂತಿದೆ. ಅಷ್ಟಮುಖಿ ಗಂಧಕಕ್ಕೆ ರಾಂಬಿಕ್ ಇಲ್ಲವೇ ಆಲ್ಫ ಗಂಧಕ ಎಂಬ ಹೆಸರುಗಳಿವೆ. ಗಂಧಕದ ಅರಳನ್ನು ಕಾರ್ಬನ್ ಡೈ ಸಲ್ಫೈಡಿನಲ್ಲಿ ವಿಲೀನ ಮಾಡಿ ಆ ದ್ರಾವಣವನ್ನು ಒಣಗಿದ ಒಂದು ಸೋಸು ಕಾಗದದ ಮೂಲಕ ಸೋಸಿ ಬಂದ ದ್ರಾವಣವನ್ನು ಒಂದು ಗಾಜಿನ ತಟ್ಟೆಯಲ್ಲಿಟ್ಟು ಸ್ವಲ್ಪ ಹೊತ್ತು ಗಾಳಿಯಲ್ಲಿ ಬಿಟ್ಟರೆ ಆಗ ಕಾರ್ಬನ್ ಡೈ ಸಲ್ಫೈಡ್ ಪೂರ್ಣವಾಗಿ ಆವಿಯಾಗಿ ಹೋಗುತ್ತದೆ. ಉಳಿಯುವುದೇ ಅಷ್ಟಮುಖಿ ಗಂಧಕದ ಹರಳುಗಳು.

ಸೂಜಿ ಗಂಧಕಕ್ಕೆ ಮಾನೊಕ್ಲಿನಿಕ್ ಇಲ್ಲವೆ ಪ್ರಿಸ್ಮ್ಯಾಟಿಕ್ ಇಲ್ಲವೇ ಬೀಟ ಗಂಧಕ ಎಂಬ ಹೆಸರುಗಳಿವೆ. ಒಂದು ಪಿಂಗಾಣಿ ಮೂಸೆಯಲ್ಲಿ ಗಂಧಕದ ಅರಳನ್ನು ಕರಗುವಷ್ಟು ಮಾತ್ರ ಕಾಯಿಸಿ ತಣಿಯಲು ಬಿಟ್ಟಾಗ ಅದರ ಮೇಲ್ಮೈ ಹೆಪ್ಪುಗಟ್ಟುತ್ತದೆ. ಅದರ ಅಡಿಯಲ್ಲಿರುವ ಗಂಧಕ ಇನ್ನೂ ದ್ರವಸ್ಥಿತಿಯಲ್ಲೇ ಇರುವುದು. ಈ ಪದರವನ್ನು ಎರಡು ಕಡೆ ಗಾಜಿನ ಕಡ್ಡಿಯಿಂದ ತಿವಿದು ರಂಧ್ರಮಾಡಿ ಮೂಸೆಯನ್ನು ಬೋರಲಾಗಿ ಹಿಡಿದುಕೊಂಡರೆ ಒಂದು ಕಿಂಡಿಯ ಮೂಲಕ ಗಾಳಿ ಒಳಹೊಕ್ಕು ಮತ್ತೊಂದರ ಮೂಲಕ ದ್ರವಗಂಧಕವನ್ನು ಹೊರಡಿಸುತ್ತದೆ. ಅನಂತರ ಮೇಲ್ಮೈಯನ್ನು ಕೆರೆದು ಹಾಕಿದರೆ ಸೂಜಿಯಾಕಾರದ ಗಂಧಕದ ಹರುಳುಗಳು ಮೂಸೆಯ ಒಳಪಾರ್ಶ್ವಕ್ಕೆ ಅಂಟಿಕೊಂಡಿರುತ್ತವೆ.

ಮೆದು ಗಂಧಕವನ್ನು ಗ್ಯಾಮ ಅಥವಾ ಪ್ಲಾಸ್ಟಿಕ್ ಗಂಧಕ ಎನ್ನುವುದುಂಟು. ಒಂದು ಪ್ರನಾಳದಲ್ಲಿ ಸ್ವಲ್ಪ ಗಂಧಕವನ್ನು ಕುದಿಸಿ ಆ ದ್ರವವನ್ನು ಸಣ್ಣ ಧಾರೆಯ ರೂಪದಲ್ಲಿ ತಣ್ಣೀರಿಗೆ ಸುರಿದಾಗ ರಬ್ಬರಿನಂಥ ಘನ ಉಂಟಾಗುವುದು. ಇದೇ ಮೆದು ಗಂಧಕ. ಇದು ಸಹ ಗಾಜಿನಂತೆ ತನ್ನ ಘನೀಭವನ ಬಿಂದುವನ್ನು ದಾಟಿರುವ ದ್ರವ.

ಒಂದೇ ಧಾತುವಿನ ಅಪರೂಪಗಳ ಭೌತ ಲಕ್ಷಣಗಳಲ್ಲಿ ವ್ಯತ್ಯಾಸವಿರಬೇಕಷ್ಟೆ. ಇದು ಕೆಳಗಿನ ಪಟ್ಟಿಯಿಂದ ವೇದ್ಯ.

ಗಂಧಕದ ಇತರ ರೂಪಗಳೆಂದರೆ ಅಸ್ಫಟಿಕ ಗಂಧಕ ಮತ್ತು ಕಲಿಲ ಗಂಧಕ. ಗಂಧಕದ ಅರಳನ್ನು ಕಾರ್ಬನ್ ಡೈ ಸಲ್ಫೈಡಿನಲ್ಲಿ ವಿಲೀನಿಸಿದಾಗ ದ್ರಾವಣವಾಗದೆ ಉಳಿಯುವ ವಸ್ತುವೇ ಅಸ್ಫಟಿಕ ಗಂಧಕ. ಇದು ಸಾಮಾನ್ಯ ಗಂಧಕದ ಅರಳಿನ ೫%-೬% ಭಾಗವಾಗಿರುತ್ತದೆ.

ಗುಣ ಅಷ್ಟಮುಖಿ ಗಂಧಕ ಸೂಜಿ ಗಂಧಕ ಮೆದು ಗಂಧಕ
೧ ಹರಳುರೂಪ ರಾಂಬಿಕ್ ಪ್ರಿಸ್ಮ್ಯಾಟಿಕ್ ಇಲ್ಲ
೨ ಬಣ್ಣ ತಿಳಿ ಹಳದಿ ಹಳದಿ ಕಂದು
೩ ಸಾಪೇಕ್ಷಸಾಂದ್ರತೆ ೨.೦೬ ೧.೯೬ ೧.೯೫
೪ ದ್ರವನ ಬಿಂದು ೧೧೨.೮ ಸೆಂ. ೧೧೮.೭ ಸೆಂ. ದ್ರವನ ಬಿಂದುವೆಂಬುವುದಿಲ್ಲ
೫ ಕಾರ್ಬನ್ ಡೈಸಲ್ಫೈಡಿನಲ್ಲಿ ದ್ರಾವ್ಯತೆ ದ್ರಾವ್ಯ ದ್ರಾವ್ಯ ಅದ್ರಾವ್ಯ
೬ ಸ್ಥಿರತೆ ೯೫.೬ ಸೆಂ.ಗಿಂತ ಕೆಳಗಿನ ಉಷ್ಣತೆಯಲ್ಲಿ ಸ್ಥಿರ. ಇದೇ ನಮಗೆ ಪರಿಚಿತವಾದ ಗಂಧಕದ ರೂಪ. ೯೫.೬-೧೨೦ ಸೆಂ. ಉಷ್ಣತಾಮಿತಿಯಲ್ಲಿ ಮಾತ್ರ ಸ್ಥಿರ. ಅಸ್ಥಿರ. ಕ್ರಮೇಣ ಅಷ್ಟಮುಖಿ ಗಂಧಕವಾಗಿ ಬಿಡುತ್ತದೆ.

ಬಿಳಿಯ ಪುಡಿ. ಗಂಧಕದ ಅರಳು, ಅರಳಿದ ಸುಣ್ಣ ಮತ್ತು ನೀರುಗಳನ್ನು ಅನುಕ್ರಮವಾಗಿ ೨,೧,೧೩ ಪ್ರಮಾಣದಲ್ಲಿ ಬೆರಸಿ ಕುದಿಸಿದರೆ ಕ್ಯಾಲ್ಸಿಯಂ ಪೆಂಟಸಲ್ಫೈಡಿನ ದ್ರಾವಣವಾಗುತ್ತದೆ. ಇದಕ್ಕೆ ಹೈಡ್ರೊಕ್ಲೋರಿಕ್ ಆಮ್ಲವನ್ನು ಸೇರಿಸಿದರೆ ಹಾಲು ಬಿಳಪು ಒತ್ತರ ಬರುವುದು. ಇದೇ ಹಾಲು ಗಂಧಕ. ಇದು ಕೂಡ ಗಂಧಕದ ಅಸ್ಫಟಿಕ ರೂಪವೇ. ಕಾರ್ಬನ್ ಡೈ ಸಲ್ಫೈಡಿನಲ್ಲಿ ದ್ರಾವ್ಯ. ವೈದ್ಯಕೀಯದಲ್ಲೂ ಚರ್ಮ ರೋಗಗಳ ಚಿಕಿತ್ಸೆಯಲ್ಲೂ ಇದರ ಉಪಯೋಗ ಉಂಟು. ಸಾಪೇಕ್ಷ ಸಾಂದ್ರತೆ ೧.೮೨. ಹಳದಿ ಬಣ್ಣದ ಅಮೋನಿಯಂ ಪಾಲಿ ಸಲ್ಫೈಡು ಹೈಡ್ರೋಕ್ಲೋರಿಕ್ ಆಮ್ಲದೊಡನೆ ವರ್ತಿಸಿದಾಗಲೂ ಇದು ಉಂಟಾಗುವುದು. ಸೋಡಿಯಂ ಥಯೊಸಲ್ಫೇಟಿನ ದ್ರಾವಣಕ್ಕೆ ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲವನ್ನು ಸೇರಿಸಿ ಕಲಿಲ ಗಂಧಕವನ್ನು ಪಡೆಯಬಹುದು. ಇದನ್ನು ಕೂಡಿಟ್ಟರೆ ಅಥವಾ ಕಾಯಿಸಿದರೆ ಸಾಮಾನ್ಯ ಗಂಧಕವಾಗಿ ಬಿಡುತ್ತದೆ. ವೈದ್ಯಕೀಯದಲ್ಲಿ ಇದರ ಉಪಯೋಗವಿದೆ.

ಈ ಅಪರೂಪಗಳಲ್ಲಿರುವುದು ಗಂಧಕ ಮಾತ್ರ ಎಂಬುದನ್ನು ಒಂದು ಸರಳ ಪ್ರಯೋಗದಿಂದ ಸಮರ್ಥಿಸಬಹುದು. ಸರದಿಯ ಪ್ರಕಾರ ಪ್ರತಿಯೊಂದು ಅಪರೂಪದ ನಿರ್ದಿಷ್ಟ ತೂಕವನ್ನು ಒಂದು ನಾಳದಲ್ಲಿಟ್ಟು ಪರಿಶುದ್ಧ ಆಕ್ಸಿಜನ್ನಿನಲ್ಲಿ ಉರಿಸಬೇಕು. ಉತ್ಪತ್ತಿಯಾದ ಗಂಧಕದ ಡೈ ಆಕ್ಸೈಡನ್ನು ಮುಂಚೆಯೇ ತೂಗಿರುವ ಬಲ್ಬುಗಳಲ್ಲಿರುವ ಪೊಟ್ಯಾಷ್ ದ್ರಾವಣ ಹೀರುತ್ತದೆ. ಪರಿಣಾಮವಾಗಿ ಬಲ್ಬುಗಳ ತೂಕ ಹೆಚ್ಚುವುದು. ಈ ತೂಕ ವ್ಯತ್ಯಾಸ ಉತ್ಪತ್ತಿಯಾದ ಗಂಧಕದ ಡೈ ಆಕ್ಸೈಡಿನ ತೂಕವನ್ನು ಸೂಚಿಸುತ್ತದೆ. ಪ್ರತಿಯೊಂದು ಸಂದರ್ಭದಲ್ಲೂ ಬಿಡುಗಡೆಯಾದ ಗಂಧಕದ ಡೈ ಆಕ್ಸೈಡಿನ ತೂಕ ನಿಯತವಾಗಿರುವುದು. ಆದ್ದರಿಂದ ಈ ಅಪರೂಪಗಳಲ್ಲಿ ಗಂಧಕದ ವಿನಾ ಮತ್ತೇನೂ ಇಲ್ಲ.

ಗಂಧಕವನ್ನು ಕಾಯಿಸಿದಾಗ ಸ್ವಾರಸ್ಯವಾದ ಬದಲಾವಣೆಗಳಾಗುತ್ತವೆ. ನಿಧಾನವಾಗಿ ಕಾಯಿಸುತ್ತ ಹೋದರೆ ೯೫.೬  ಸೆಂ. ಮೀರಿದ ಉಷ್ಣತೆಯಲ್ಲಿ ಬೀಟ ಗಂಧಕವಾಗಿ ತಣಿಸಿದಾಗ ಮತ್ತೆ ಆಲ್ಫ ಗಂಧಕವಾಗುವುದು. ಆದ್ದರಿಂದ ಈ ಉಷ್ಣತೆಗೆ ಆಲ್ಫ ಬೀಟ ರೂಪಗಳ ಸಂಕ್ರಾಂತಿ ಉಷ್ಣತೆ (ಟ್ರಾನ್ಸಿಷನ್ ಟೆಂಪರೇಚರ್) ಎಂದು ಹೆಸರು. ಆದರೆ ಆಲ್ಫ ಗಂಧಕವನ್ನು ತೀವ್ರಗತಿಯಲ್ಲಿ ಕಾಯಿಸಿದರೆ ಬೀಟ ರೂಪ ತಳೆಯದೆ ೧೧೨.೮ ಸೆಂ.ನಲ್ಲಿ ಕರಗಿ ನಸು ಕಂದು ಬಣ್ಣದ ಪಾರದರ್ಶಕ ದ್ರವವಾಗುತ್ತದೆ. ಕಾಯಿಸುವುದನ್ನು ಮುಂದುವರಿಸಿದರೆ ದ್ರವದ ಸ್ನಿಗ್ಧತೆ ಹೆಚ್ಚುವುದು. ಕಪ್ಪು ಛಾಯೆ ಮಾಡುವುದು. ೧೬೦ ಸೆಂ. ಸನಿಹದಲ್ಲಿ ದ್ರವ ಎಷ್ಟು ಗಟ್ಟಿಯಾಗಿರುವುದೆಂದರೆ ಅದು ಇರುವ ಪ್ರನಾಳವನ್ನು ಬೋರಲು ಹಾಕಿದರೂ ದ್ರವ ಬೀಳುವುದಿಲ್ಲ. ಉಷ್ಣತೆ ಏರಿದಂತೆ ೨೩೦ ಸೆಂ. ನಲ್ಲಿ ಅತಿ ಸ್ನಿಗ್ಧವಾದ ಕಪ್ಪುದ್ರವ ಉಂಟಾಗುತ್ತದೆ. ಅಂತಿಮವಾಗಿ ೪೪೪.೬ ಸೆಂ. ನಲ್ಲಿ ಕುದ್ದು ತಿಳಿಕಂದು ಬಣ್ಣದ ಧೂಮವಾಗಿ ಹೋಗುತ್ತದೆ. ಹಂತ ಹಂತವಾಗಿ ನಡೆಯುವ ಈ ಬದಲಾವಣೆಗಳಿಗೆ ಗಂಧಕ ಈ ಕೆಳಗಿನಂತೆ ತನ್ನ ಅಪರ ರೂಪಗಳಿಗೆ ಪರಿವರ್ತಿತವಾಗುವುದೇ ಕಾರಣವೆಂದು ಭಾವಿಸಲಾಗಿದೆ:

95.60  ಸೆಂ. 120° ಸೆಂ. 160° ಸೆಂ.

a-S ↔       β-S             ↔      λ-S     ↔   u-S   ↔  S

ಘನ ಘನ ದ್ರವ ದ್ರವ ಆವಿ

ಕುದಿಯುತ್ತಿರುವ ಗಂಧಕವನ್ನು ತಣಿಸಿದಾಗ ಈ ಬದಲಾವಣೆಗಳು ಇದೇ ಕ್ರಮದಲ್ಲಿ ಹಿಮ್ಮರಳುತ್ತವೆ. λ ಮತ್ತು μ ಗಂಧಕಗಳ ಅಸ್ತಿತ್ವಕ್ಕೆ ಅಲೆಕ್ಸ್ಯಾಂಡರ್ ಸ್ಮಿತ್‌ನ ಪ್ರಯೋಗಗಳು ಆಧಾರ.

ರಾಸಾಯನಿಕ ಗುಣಗಳು

ಬದಲಾಯಿಸಿ

ಅತ್ಯಂತ ಪಟುವಾದ ಧಾತುಗಳ ಪೈಕಿ ಗಂಧಕವೂ ಒಂದು. ಇದರ ಸರ್ವತೋಮುಖವಾದ ಕ್ರಿಯಾಶೀಲತೆಗೆ ಈ ಕೆಳಗಿನ ಸಂಧರ್ಭಗಳು ನಿದರ್ಶನ. ಸೂಕ್ಷ್ಮಕಣಗಳ ರೂಪದಲ್ಲಿರುವ ಗಂಧಕ ಸಾಮಾನ್ಯ ಉಷ್ಣತೆಯಲ್ಲೂ ತೇವವಾದ ಗಾಳಿಯಿಂದ ಸಲ್ಫ್ಯೂರಿಕ್ ಆಮ್ಲವಾಗಿ ಉತ್ಕರ್ಷಿತವಾಗಬಲ್ಲದು. ಗಾಳಿಯಲ್ಲಿ ತಿಳಿನೀಲಿ ಬಣ್ಣದ ಜ್ವಾಲೆಯಿಂದ ಉರಿದು ಗಂಧಕದ ಡೈ ಆಕ್ಸೈಡನ್ನು ಕೂಡುತ್ತದೆ. ಕುದಿಯುತ್ತಿರುವ ಗಂಧಕದೊಡನೆ ಹಬೆ ವರ್ತಿಸಿದಾಗ ಹೈಡ್ರೊಜನ್ ಸಲ್ಫೈಡ್ ಮತ್ತು ಗಂಧಕದ ಡೈ ಆಕ್ಸೈಡುಗಳು ಉತ್ಪನ್ನಗಳು. ಅಗ್ನಿ ಪರ್ವತಗಳು ಉಗುಳುವ ಧೂಮದಲ್ಲಿ ಈ ಅನಿಲಗಳು ಇರಲು ಇದೇ ಕ್ರಿಯೆ ಕಾರಣವಾಗಬಹುದು. ಉತ್ಕರ್ಷಣ ಗುಣವಿರುವ ಸಾರಯುತ ಸಲ್ಫ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳೊಡನೆ ಮಾತ್ರ ವರ್ತಿಸುವುದು. ಆದ್ದರಿಂದಲೇ ಉತ್ಕರ್ಷಣಕಾರಿಯಲ್ಲದ ಹೈಡ್ರೊಕ್ಲೋರಿಕ್ ಆಮ್ಲದಿಂದ ಇದು ಪ್ರಭಾವಿತವಾಗುವುದಿಲ್ಲ. ಸಾರಯುತ ಸಲ್ಫ್ಯೂರಿಕ್ ಆಮ್ಲ ದೊಡನೆ ಕುದಿಸಿದಾಗ ಗಂಧಕದ ಡೈ ಆಕ್ಸೈಡಿಗೆ ಉತ್ಕರ್ಷಿತವಾಗುತ್ತದೆ. ಉತ್ಕರ್ಷಣ ಗುಣದಲ್ಲಿ ಸಲ್ಫ್ಯೂರಿಕ್ ಆಮ್ಲಕ್ಕಿಂತ ನೈಟ್ರಿಕ್ ಆಮ್ಲ ಮೇಲು. ಆದ್ದರಿಂದ ಇದರೊಡನೆ ಕುದಿಸಿದಾಗ ಗಂಧಕ ಸಲ್ಫ್ಯೂರಿಕ್ ಆಮ್ಲವಾಗಿ ಉತ್ಕರ್ಷಿತವಾಗುವುದು ಅನಿರೀಕ್ಷಿತವೇನಲ್ಲ. ಸಾರಯುತ ಕ್ಷಾರೀಯ ದ್ರಾವಣಗಳಲ್ಲಿ ಗಂಧಕ ವಿಲೀನವಾಗಿ ಆಯಾ ಸಲ್ಫೈಡ್, ಸಲ್ಫೈಟ್ ಮತ್ತು ಥಯೊಸಲ್ಫೇಟುಗಳ ಮಿಶ್ರಣವನ್ನು ಉಂಟುಮಾಡುತ್ತದೆ. ಉನ್ನತ ಉಷ್ಣತೆಯಲ್ಲಿ ಗಂಧಕದೊಡನೆ ಸಂಯೋಜಿಸದಿರುವ ಲೋಹಗಳು ಅಪರೂಪ. ಆಗ ಉಷ್ಣ ಮತ್ತು ಬೆಳಕು ಹುಟ್ಟಿ ಆಯಾ ಲೋಹದ ಸಲ್ಫೈಡುಗಳಾಗುತ್ತವೆ. ತಾಮ್ರ ಮತ್ತು ಬೆಳ್ಳಿಗಳು ವರ್ತಿಸಲು ಸಾಮಾನ್ಯ ಉಷ್ಣತೆಯೇ ಸಾಕು. ದ್ರವ ವಾಯುವಿನ ಶೈತ್ಯದಲ್ಲೂ ವರ್ತಿಸುವುದು ಪಾದರಸದ ವೈಶಿಷ್ಟ್ಯ. ಗಂಧಕದೊಡನೆ ಕಾಯಿಸಿದಾಗ ಆರ್ಸೇನಿಕ್, ಆಂಟಿಮೊನಿ ಮೊದಲಾದ ಲೋಹಾಭಗಳು ಸಹ ಹೀಗೆಯೇ ತಮ್ಮ ಸಲ್ಫೈಡುಗಳನ್ನು ಕೊಡುತ್ತವೆ. ಕುದಿಯುತ್ತಿರುವ ಗಂಧಕಕ್ಕೆ ಹೈಡ್ರೋಜನ್ ಅಥವಾ ಕ್ಲೋರಿನನ್ನು ಹಾಯಿಸಿದಾಗ ಅನುಕ್ರಮವಾಗಿ ಹೈಡ್ರೊಜನ್ ಸಲ್ಫಡ್ ಮತ್ತು ಗಂಧಕ ಮಾನೊಕ್ಲೋರೈಡುಗಳಾಗುತ್ತವೆ. ಕೆಂಗಾವಿನಲ್ಲಿರುವ ಕಾರ್ಬನಿನ ಮೇಲೆ ಗಂಧಕದ ಆವಿಯನ್ನು ಹಾಯಿಸಿ ಕಾರ್ಬನ್ ಡ್ಯೆ ಸಲ್ಫೈಡನ್ನು ಪಡೆಯಬಹುದು. ಫ್ಲೊರೀನ್, ಬ್ರೋಮೀನ್, ರಂಜಕ, ಬೋರಾನ್ ಮತ್ತು ಸಿಲಿಕಾನುಗಳ ಕೂಡ ಗಂಧಕದೊಡನೆ ಸಂಯೋಜಿಸುತ್ತವೆ. ಅಯೊಡೀನು ಗಂಧಕದೊಡನೆ ಸಂಯೋಜಿಸುವುದಾದರೂ ಗಂಧಕದ ಅಯೊಡೈಡುಗಳು ಅಸ್ಥಿರ ವಸ್ತುಗಳು. ಕರಗಿಸಿದ ಪೊಟ್ಯಾಸಿಯಂ ಕಾರ್ಬೋನೇಟಿನಲ್ಲಿ ಗಂಧಕ ವಿಲೀನವಾದಾಗ ಉಂಟಾಗುವ ಕಂದು ಬಣ್ಣದ ಉತ್ಪನ್ನಕ್ಕೆ ಲಿವರ್ ಆಫ್ ಸಲ್ಫರ್ ಎಂದು ಹೆಸರು. ಇದು ಪೊಟ್ಯಾಸಿಯಂ ಡೈ ಸಲ್ಫೈಡ್ ಮತ್ತು ಥಯೋಸಲ್ಫೇಟುಗಳ ಮಿಶ್ರಣ. ಗಂಧಕವನ್ನು ಪೊಟ್ಯಾಸಿಯಂ ಕ್ಲೋರೇಟ್ ಅಥವಾ ಪೊಟ್ಯಾಸಿಯಂ ನೈಟ್ರೇಟುಗಳಂಥ ಉತ್ಕರ್ಷಣಕಾರಿಗಳೊಡನೆ ಬೆರೆಸಿ ಮಿಶ್ರಣವನ್ನು ಹೊತ್ತಿಸಿದರೆ ಅದು ಸಿಡಿಯುವುದು. ಈ ಮಿಶ್ರಣಕ್ಕೆ ಇದ್ದಲು ಪುಡಿಯನ್ನು ಸೇರಿಸಿದರೆ ತುಪಾಕಿ ಮದ್ದು ಆಗುತ್ತದೆ. ಗಂಧಕದ ಯಾವುದೇ ಅಪರೂಪವಾಗಲಿ ಪಿಪರಿಡಿನ್ನಿನಲ್ಲಿ ವಿಲೀನವಾದಾಗ ಕೆಂಪು ದ್ರಾವಣ ಉಂಟಾಗುವುದು. ಗಂಧಕವನ್ನು ಗುರುತಿಸಲು ಇದೊಂದು ಸೂಕ್ಷ್ಮ ಪರೀಕ್ಷಾ ಪ್ರಯೋಗ.

ಉಪಯೋಗಗಳು

ಬದಲಾಯಿಸಿ

ಗಂಧಕ ಮತ್ತು ಅದರ ಸಂಯುಕ್ತಗಳು ಉಪಯುಕ್ತ ವಸ್ತುಗಳು. ದ್ರಾಕ್ಷಿ ಬಳ್ಳಿಗಳಿಗೆ ಮಾರಕವಾದ ಬೂಷ್ಟು ಮತ್ತು ಅಣಬೆಗಳನ್ನು ಗಂಧಕ ನಾಶ ಮಾಡಬಲ್ಲದು. ಗಂಧಕದ ಅರಳು ಕೀಟನಾಶಕ, ಗಂಧಕದ ಡೈ ಆಕ್ಸೈಡ್, ಸಲ್ಫ್ಯೂರಿಕ್ ಆಮ್ಲ, ಕಾರ್ಬನ್ ಡೈ ಸಲ್ಫೈಡ್, ತುಪಾಕಿಮದ್ದು ಮತ್ತು ಬೆಂಕಿಕಡ್ಡಿಗಳ ತಯಾರಿಕೆಗೆ ಇದು ಬೇಕು. ರಬ್ಬರಿನ ಬಾಳಿಕೆಯನ್ನು ಹೆಚ್ಚಿಸಲು ಅದಕ್ಕೆ ಗಂಧಕದ ಮಾನೊಕ್ಲೋರೈಡನ್ನು ಸೇರಿಸುತ್ತಾರೆ. ಕಲಿಲ ಗಂಧಕ ಮತ್ತು ಹಾಲು ಗಂಧಕಗಳು ಉಪಯೋಗ ವೈದ್ಯಕೀಯದಲ್ಲಿ ಇದೆ. ಕೆಲವು ಅಗ್ಗವಾದ ಮತ್ತು ಶಾಶ್ವತವಾದ ವರ್ಣದ್ರವ್ಯಗಳ ಸಂಶ್ಲೇಷಣೆಯಲ್ಲಿ ಗಂಧಕದ ಪಾತ್ರ ಉಂಟು. ಗಂಧಕ ಸಂಯುಕ್ತಗಳ ಉಪಯೋಗ ವ್ಯಾಪಕ. ಸೋಡಿಯಂ ಥಯೊಸಲ್ಫೇಟ್ ಇಲ್ಲದೆ ಫೋಟೊಗ್ರಫಿ ನಡಯದು. ಬಟ್ಟೆ ಮತ್ತು ಕಾಗದಗಳನ್ನು ಚಲುವೆ ಮಾಡಿದಾಗ ಅವುಗಳ ಮೇಲೆ ಉಳಿಯಬಹುದಾದ ಕ್ಲೋರಿನನ್ನು ತೊಡೆದು ಹಾಕದಿದ್ದರೆ ಅವು ಗಾಸಿಗೊಳ್ಳುತ್ತವೆ. ಅದಕ್ಕಾಗಿ ಸೋಡಿಯಂ ಥಯೋಸಲ್ಫೇಟನ್ನು ಕ್ಲೋರಿನ್‌ಹಾರಕವಾಗಿ ಬಳಸುತ್ತಾರೆ. ಚರ್ಮ ಹದ ಮಾಡಲು ಕ್ಯಾಲ್ಸಿಯಂ ಪಾಲಿಸಲ್ಫೈಡ್ ಉಪಯುಕ್ತ. ವ್ಯವಸಾಯದಲ್ಲಿ ಅಮೋನಿಯಂ ಸಲ್ಫೇಟ್ ಗೊಬ್ಬರದ ಬಳಕೆ ವ್ಯಾಪಕ. ಗಂಧಕದ ಹೆಕ್ಲಫ್ಲೊರೈಡು (SF6)  ಉತ್ತಮ ವಿದ್ಯುನ್ನಿರೋಧಕ. ಸಲ್ಫಾಮಿಕ್ ಆಮ್ಲವನ್ನು ಬಣ್ಣಗಳ ತಯಾರಿಕೆಯಲ್ಲೂ ಅದರ ಲವಣಗಳನ್ನು ಕಾಗದ ಮತ್ತು ಬಟ್ಟೆಗಳಿಗೆ ಅಗ್ನಿನಿರೋಧಕ ಗುಣ ನೀಡುವಲ್ಲೂ ಬಳಸುತ್ತಿದ್ದಾರೆ. ಅನೇಕ ಸಂಶ್ಲೇಷಿತ ಮಾರ್ಜಕಗಳ ಉತ್ಪಾದನೆಗೆ ಸಲ್ಪಾನಿಕ್ ಆಮ್ಲಗಳು ಅಗತ್ಯ. ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಥಯೋಯೂರಿಯ ಬಳಕೆಯಾಗುತ್ತದೆ. ವಿಮಾನಗಳ ಮತ್ತು ಪೆಟ್ರೋಲ್ ಟ್ಯಾಂಕುಗಳ ಒಳಹೊದಿಕೆಗಳಲ್ಲಿ ಕಾರ್ಬನಿಕ ಪಾಲಿಸಲ್ಫೈಡುಗಳಿರುತ್ತವೆ. ಅನಿಲ ಉರುವಲನ್ನು ಬಳಸುವ ಯಂತ್ರ ವ್ಯವಸ್ಥೆಯಲ್ಲಿ ಮರ್ ಕ್ಯಾಪ್ಟನ್ನುಗಳನ್ನು (ಗಂಧಕಯುಕ್ತ ಆಲ್ಕೋಹಾಲುಗಳು) ಬಳಸಿದರೆ ಅವು ಅಗ್ನಿ ಪ್ರಕರಣಗಳ ಮುನ್ಸೂಚನೆ ನೀಡುತ್ತವೆ. ವೈದ್ಯಕೀಯದಲ್ಲಿ ಪ್ರಸಿದ್ಧವಾದ ಔಷಧಿಗಳು ಎನಿಸಿಕೊಂಡಿರುವ ಸಲ್ಫ ಮದ್ದುಗಳು ಮತ್ತು ಪೆನಿಸಿಲಿನ್ ಸಹ ಗಂಧಕಯುಕ್ತ ವಸ್ತಗಳೇ. ಮಾನವ ದೇಹಪೋಷಣೆಗೆ ಅಗತ್ಯವಾದ ಮಿಥಯೊನೈನ್, ಸಿಸ್ಟೈನ್ ಮುಂತಾದ ಅಮೈನೊ ಆಮ್ಲಗಳ ಕೂಡ ಗಂಧಕಾನ್ವಿತ ಸಂಯುಕ್ತಗಳೇ ಎಂದಲ್ಲಿ ಗಂಧಕದ ಮಹತ್ತ್ವದ ಅರಿವಾದೀತು.

ಇದನ್ನೂ ನೋಡಿ

ಬದಲಾಯಿಸಿ

ಹೆಚ್ಚಿನ ಓದಿಗೆ

ಬದಲಾಯಿಸಿ

Sigel, Astrid; Freisinger, Eva; Sigel, Roland K.O., eds. (2020). Transition Metals and Sulfur: A Strong Relationship for Life. Guest Editors Martha E Sosa Torres and Peter M.H.Kroneck. Berlin/Boston: de Gruyter. pp. xlv+455. ISBN 978-3-11-058889-7.

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಗಂಧಕ&oldid=1241056" ಇಂದ ಪಡೆಯಲ್ಪಟ್ಟಿದೆ