ಶುಕ್ರ - ಇದು ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹ. ಸೂರ್ಯನನ್ನು ೨೨೪.೭ ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. −4.6 ಗೋಚರ ಪ್ರಮಾಣವಿರುವ ಶುಕ್ರವು, ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. ೪೭.೮° ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ/ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ. ಇದನ್ನು "ಹಗಲು ನಕ್ಷತ್ರ" ಮತ್ತು "ಸಂಜೆ ನಕ್ಷತ್ರ" ಎಂದೂ ಕರೆಯಲಾಗುತ್ತದೆ.

ಶುಕ್ರ ♀
Venus

Click image for description

ಕಕ್ಷೆಯ ಗುಣಗಳು
ದೀರ್ಘಾರ್ಧ ಅಕ್ಷ ೧೦೮,೨೦೮,೯೨೬ ಕಿ.ಮೀ.
೦.೭೨೩ ೩೩೧ ೯೯ AU
ಕಕ್ಷೆಯ ಪರಿಧಿ ೬೮೦,೦೦೦,೦೦೦ ಕಿ.ಮೀ.
೪.೫೪೫ AU
ಕಕ್ಷೀಯ ಕೇಂದ್ರ ಚ್ಯುತಿ ೦.೦೦೬ ೭೭೩ ೨೩
ಪುರರವಿ ೧೦೭,೪೭೬,೦೦೨ ಕಿ.ಮೀ.
೦.೭೧೮ ೪೩೨ ೭೦ AU
ಅಪರವಿ ೧೦೮,೯೪೧,೮೪೯ ಕಿ.ಮೀ.
೦.೭೨೮ ೨೩೧ ೨೮ AU
ಕಕ್ಷೀಯ ಪರಿಭ್ರಮಣ ಕಾಲ ೨೨೪.೭೦೦ ೬೯ ದಿನ
(೦.೬೧೫ ೧೯೭ ೦ a)
ಯುತಿ ಅವಧಿ ೫೮೩.೯೨ d
ಸರಾಸರಿ ಕಕ್ಷಾ ವೇಗ ೩೫.೦೨೦ ಕಿ.ಮೀ./ಕ್ಷಣ
ಗರಿಷ್ಠ ಕಕ್ಷಾ ವೇಗ ೩೫.೨೫೯ ಕಿ.ಮೀ./ಪ್ರತಿ ಕ್ಷಣ
ಕನಿಷ್ಠ ಕಕ್ಷಾ ವೇಗ ೩೪.೭೮೪ ಕಿ.ಮೀ./ಪ್ರತಿ ಕ್ಷಣ
ಓರೆ ೩.೩೯೪ ೭೧°
(ಸೂರ್ಯನ ಸಮಭಾಜಕ ರೇಖೆಗೆ ೩.೮೬°)
ಆರೋಹಣ ಸಂಪಾತದ ರೇಖಾಂಶ ೭೬.೬೮೦ ೬೯°
ಪುರರವಿಯ ಕೋನಭಾಗ ೫೪.೮೫೨ ೨೯°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ
ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ ೧೨,೧೦೩.೭ ಕಿ.ಮೀ.
(ಭೂಮಿಯ ೦.೯೪೯)
ಮೇಲ್ಮೈ ವಿಸ್ತೀರ್ಣ ೪.೬೦×೧೦ ಕಿ.ಮೀ.
(ಭೂಮಿಯ ೦.೯೦೨)
ಗಾತ್ರ ೯.೨೮×೧೦೧೧ ಕಿ.ಮೀ.³
(ಭೂಮಿಯ ೦.೮೫೭)
ದ್ರವ್ಯರಾಶಿ ೪.೮೬೮೫×೧೦೨೪ kg
(ಭೂಮಿಯ ೦.೮೧೫)
ಸರಾಸರಿ ಸಾಂದ್ರತೆ ೫.೨೦೪ ಗ್ರಾಂ/ಸೆ.ಮೀ.
ಸಮಭಾಜಕದ ಬಳಿ ಗುರುತ್ವ ೮.೮೭ ಮೀ./ಕ್ಷಣ
(೦.೯೦೪ ಜೀ)
ಮುಕ್ತಿ ವೇಗ ೧೦.೩೬ ಕಿ.ಮೀ./ಪ್ರತಿ ಕ್ಷಣ
ಅಕ್ಷೀಯ ಪರಿಭ್ರಮಣ ಕಾಲ ೨೪೩.೦೧೮೫ ದಿನ
ಅಕ್ಷೀಯ ಪರಿಭ್ರಮಣ ವೇಗ ೬.೫೨ ಕಿ.ಮೀ./ಘಂ. (ಸಮಭಾಜಕದಲ್ಲಿ)
ಅಕ್ಷದ ಓರೆ ೨.೬೪°
ಉತ್ತರ ಧ್ರುವದ
ವಿಷುವದಂಶ
೨೭೨.೭೬° (೧೮ ಘಂ ೧೧ ನಿ ೨ ಕ್ಷ)
ಘಂಟಾವೃತ್ತಾಂಶ ೬೭.೧೬°
ಪ್ರತಿಫಲನಾಂಶ ೦.೬೫
ಮೇಲ್ಮೈ* ತಾಪಮಾನ
ಕನಿಷ್ಠ ಸರಾಸರಿ ಗರಿಷ್ಠ
೨೨೮ ಕೆ. ೭೩೭ ಕೆ. ೭೭೩ ಕೆ.
Adjective Venusian or (rarely) Cytherean
(*min temperature refers to cloud tops only)
ವಾಯುಮಂಡಲದ ಗುಣಲಕ್ಷಣಗಳು
ವಾತಾವರಣದ ಒತ್ತಡ ೯.೨ MPa
ಇಂಗಾಲದ ಡೈ-ಆಕ್ಸೈಡ್ ~೯೬.೫%
ಸಾರಜನಕ ~೩.೫%
ಗಂಧಕದ ಡೈ-ಆಕ್ಸೈಡ್ .೦೧೫%
ಆರ್ಗಾನ್ .೦೦೭%
ನೀರಾವಿ .೦೦೨%
ಇಂಗಾಲದ ಮಾನಾಕ್ಸೈದ್ .೦೦೧೭%
ಹೀಲಿಯಂ .೦೦೧೨%
ನಿಯಾನ್ .೦೦೦೭%
Carbonyl sulfide
Hydrogen chloride
Hydrogen fluoride
trace

ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ.ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಇದರ ೧ ದಿನ ಭೂಮಿಯ ೨೪೩ ದಿನಕ್ಕೆ ಸಮಾನ.ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ.ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.

ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ "ಸಹೋದರ ಗ್ರಹ"ವೆಂದೂ ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. ೨೦ನೇ ಶತಮಾನದಲ್ಲಿ ಗ್ರಹ ವಿಜ್ಞಾನವು ಶುಕ್ರದ ಕೆಲವು ರಹಸ್ಯಗಳನ್ನು ಬಯಲುಮಾಡುವ ಮುನ್ನ ಅದರ ಬಗ್ಗೆ ಹಲವಾರು ವದಂತಿಗಳು, ಅನುಮಾನಗಳು ಹುಟ್ಟಿಕೊಂಡಿದ್ದವು. ಮುಖ್ಯವಾಗಿ ಇಂಗಾಲದ ಡೈ-ಆಕ್ಸೈಡನ್ನು ಒಳಗೊಂಡ ಶುಕ್ರದ ವಾಯುಮಂಡಲವು ಘನರೂಪಿ ಗ್ರಹಗಳಲ್ಲೇ ಅತಿ ದಟ್ಟವಾಗಿದೆ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.

ಶುಕ್ರದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 20 ವರ್ಷಗಳಲ್ಲಿ ಮಾತ್ರ ತಯಾರಿಸಲಾಗಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು.

ಶುಕ್ರ ಗ್ರಹದ ವ್ಯಾಸ ೧೨,೪೦೦ ಕಿ.ಮೀ ಅಂದರೆ ೭,೭೦೦ ಮೈಲಿಗಳು.ಸೂರ್ಯನ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಕಾಲ ೨೨೪.೭ ದಿನಗಳು.ಸೂರ್ಯನಿಂದ ಸುಮಾರು ೧೦೮,೦೦೦,೦೦೦ ಕಿ.ಮೀ. ಅಂದರೆ ೬೭,೦೦೦,೦೦೦ ಮೈಲಿಗಳ ದೂರದಲ್ಲಿದೆ.

ಶುಕ್ರವು 4 ಘನರೂಪಿ ಗ್ರಹಗಳಲ್ಲೊಂದು; ಅರ್ಥಾತ್, ಭೂಮಿಯಂತೆಯೇ ಶುಕ್ರವು ಶಿಲೆ/ಖನಿಜಗಳಿಂದ ರಚಿತವಾಗಿದೆ. ಗಾತ್ರ ಮತ್ತು ದ್ರವ್ಯರಾಶಿಯಲ್ಲಿ ಭೂಮಿ ಮತ್ತು ಶುಕ್ರ ಇವೆರಡೂ ಒಂದೇ ತೆರನಾಗಿವೆ. ಈ ಕಾರಣದಿಂದ ಶುಕ್ರವನ್ನು ಭೂಮಿಯ 'ಅವಳಿ' ಎಂದೂ ಕರೆಯುತ್ತಾರೆ. ಶುಕ್ರದ ವ್ಯಾಸವು ಭೂಮಿಯದಕ್ಕಿಂತ ಕೇವಲ 650 ಕಿ.ಮೀ. ಕಡಿಮೆಯಿದೆ ಮತ್ತು ಶುಕ್ರದ ದ್ರವ್ಯರಾಶಿಯು ಭೂಮಿಯ 81.5%ರಷ್ಟು ಇದೆ. ಆದರೆ, ಶುಕ್ರದ ವಾಯುಮಂಡಲವು ದಟ್ಟವಾದ ಇಂಗಾಲದ ಡೈ ಆಕ್ಸೈಡ್ ಅನ್ನು ಹೊಂದಿರುವುದರಿಂದ ಶುಕ್ರದ ಮೇಲ್ಮೈಮೇಲೆ ಭೂಮಿಗಿಂತ ಬಹಳ ವಿಭಿನ್ನವಾದ ಪರಿಸ್ಥಿತಿಗಳು ಕಂಡುಬರುತ್ತವೆ.

ಆಂತರಿಕ ರಚನೆ

ಬದಲಾಯಿಸಿ

ಶುಕ್ರದ ಆಂತರಿಕ ರಚನೆಯ ಬಗ್ಗೆ ಹೆಚ್ಚು ನೇರವಾದ ಮಾಹಿತಿ ಇಲ್ಲದಿದ್ದರೂ, ಭೂಮಿ-ಶುಕ್ರಗಳ ಗಾತ್ರ ಮತ್ತು ಸಾಂದ್ರತೆಗಳಲ್ಲಿರುವ ಸಾಮೀಪ್ಯದಿಂದ ನಾವು ಕೆಲವು ವಿಷಯಗಳನ್ನು ತರ್ಕಿಸಬಹುದು. ಭೂಮಿಯಂತೆ ಶುಕ್ರವೂ ಒಂದು ಒಳಭಾಗ, ಒಂದು ನಡುಭಾಗ ಮತ್ತು ಮೇಲ್ಮೈಗಳಿಂದ ಕೂಡಿದೆ. ಭೂಮಿಯಂತೆ ಶುಕ್ರದ ಒಳಭಾಗವು ಕಡೇಪಕ್ಷ ಭಾಗಶಃವಾದರೂ ದ್ರವರೂಪದಲ್ಲಿದೆ. ಶುಕ್ರವು ಭೂಮಿಗಿಂತ ಸ್ವಲ್ಪ ಚಿಕ್ಕದಾಗಿರುವ ಕಾರಣ, ಅದರ ಒಳಭಾಗದಲ್ಲಿ ಭೂಮಿಯಲ್ಲಿರುವುದಕ್ಕಿಂತ ಕಡಿಮೆ ಒತ್ತಡವಿರುವಂತೆ ಕಂಡುಬರುತ್ತದೆ. ಈ ಎರಡು ಗ್ರಹಗಳ ಮಧ್ಯೆ ಒಂದು ಮುಖ್ಯವಾದ ವ್ಯತ್ಯಾಸವೆಂದರೆ ಶುಕ್ರದ ಮೇಲೆ ಭೂಭಾಗಗಳು ಇಲ್ಲದಿರುವುದು. ಬಹುಶಃ ಶುಕ್ರದ ಮೇಲ್ಮೈ ಮತ್ತು ನಡುಭಾಗಗಳು ಆರ್ದ್ರವಾಗಿರುವುದೇ ಇದಕ್ಕೆ ಕಾರಣವಿರಬಹುದು. ಶುಕ್ರದ ಒಳಭಾಗದಲ್ಲಿ ಸಂವಹನೆ ಸುಲಭವಾಗಿ ನಡೆಯದಿರುವುದು ಮತ್ತು ಶುಕ್ರಕ್ಕೆ ತನ್ನದೇ ಆದ ಕಾಂತಕ್ಷೇತ್ರವಿಲ್ಲದಿರುವುದೂ ಈ ಭೂಭಾಗಗಳ ಅನುಪಸ್ಥಿತಿಯ ಪರಿಣಾಮಗಳೇ ಇರಬಹುದು.[]

ಭೂವಿವರಣೆ

ಬದಲಾಯಿಸಿ

ಶುಕ್ರಗ್ರಹ ಸುಮಾರು ಶೇ80%ರಷ್ಟು ಮೇಲ್ಮೈ ವಿಸ್ತೀರ್ಣವು ನುಣುಪಾದ ಜ್ವಾಲಾಮುಖಿ ಸಮತಳಗಳಿಂದ ಕೂಡಿದೆ. ಎರಡು ಎತ್ತರಿಸಿದ 'ಖಂಡಗಳು' ಇನ್ನುಳಿದ ವಿಸ್ತೀರ್ಣವನ್ನು ವ್ಯಾಪಿಸುತ್ತವೆ. ಇವುಗಳಲ್ಲಿ ಒಂದು ಖಂಡವು ಗ್ರಹದ ಉತ್ತರಾರ್ಧ ಗೋಳದಲ್ಲಿ ಮತ್ತು ಇನ್ನೊಂದು ಸಮಭಾಜಕದ ಸ್ವಲ್ಪವೇ ದಕ್ಷಿಣದಲ್ಲಿ ಸ್ಥಿತವಾಗಿವೆ. ಸುಮಾರು ಆಸ್ಟ್ರೇಲಿಯಾದಷ್ಟೇ ದೊಡ್ಡದಾಗಿರುವ ಉತ್ತರದ ಖಂಡಕ್ಕೆ ಬ್ಯಾಬಿಲೋನ್ ದೇವತೆಯಾದ ಇಶ್ತಾರ್ ಳನ್ನು ಆಧರಿಸಿ ಇಶ್ತಾರ್ ಭೂಮಿ ಎಂದು ಹೆಸರಿಡಲಾಗಿದೆ. ಶುಕ್ರದ ಮೇಲೆ ಅತಿ ಎತ್ತರವಾದ ಮ್ಯಾಕ್ಸ್‌ವೆಲ್ ಪರ್ವತವು ಇಶ್ತಾರ್ ಭೂಮಿಯಲ್ಲಿ ಸ್ಥಿತವಾಗಿದೆ. ಈ ಪರ್ವತದ ಶಿಖರವು ಶುಕ್ರದ ಸರಾಸರಿ ಮೇಲ್ಮೈ ಎತ್ತರಕ್ಕಿಂತ 11 ಕಿ.ಮೀ. ಎತ್ತರದಲ್ಲಿದೆ. ಹೋಲಿಕೆಯಲ್ಲಿ, ಭೂಮಿಯಮೇಲೆ ಅತಿ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವು ಸಾಗರದ ಮಟ್ಟದಿಂದ 9ಕಿ.ಮೀ. ಗಿಂತ ಕಡಿಮೆ ಎತ್ತರದಲ್ಲಿದೆ. ಸುಮಾರು ದಕ್ಷಿಣ ಅಮೆರಿಕಾದಷ್ಟು ವಿಸ್ತೀರ್ಣವುಳ್ಳ ದಕ್ಷಿಣದ ಖಂಡಕ್ಕೆ, ಗ್ರೀಕ್ ದೇವತೆಯಾದ ಆಫ್ರೋಡೈಟ್ ಳನ್ನು ಆಧರಿಸಿ ಆಫ್ರೋಡೈಟ್ ಭೂಮಿಯೆಂದು ಹೆಸರಿಡಲಾಗಿದೆ. ಈ ಖಂಡದ ಬಹಳಷ್ಟು ಭಾಗಗಳು ಆಳವಾದ ಬಿರುಕುಗಳಿಂದ ಕೂಡಿವೆ.[]

ಘನರೂಪಿ ಗ್ರಹಗಳ ಮೇಲೆ ಸಾಮಾನ್ಯವಾಗಿ ಕಂಡುಬರುವ ಅಪ್ಪಳಿಕೆ ಕುಳಿಗಳು, ಪರ್ವತಗಳು, ಮತ್ತು ಕಣಿವೆಗಳಲ್ಲದೆ, ಶುಕ್ರಕ್ಕೆ ತನ್ನದೇ ಆದ ಕೆಲವು ವೈಶಿಷ್ಟ್ಯಗಳೂ ಇವೆ. ಇವುಗಳಲ್ಲಿ ಈ ಕೆಳಗಿನವು ಸೇರಿವೆ: ಚಪ್ಪಟೆ ಮೇಲ್ಭಾಗವುಳ್ಳ, ಜ್ವಾಲಮುಖಿಯಿಂದ ನಿರ್ಮಿತವಾದ, farra ಎಂದು ಕರೆಯಲಾಗುವ ವೈಶಿಷ್ಟ್ಯಗಳು (ಇವು ದಪ್ಪನಾದ ದೋಸೆಯಾಕಾರದಲ್ಲಿದ್ದು, ವ್ಯಾಸದಲ್ಲಿ 20-50ಕಿ.ಮೀ. ಮತ್ತು ಎತ್ತರದಲ್ಲಿ 100-1000ಮೀ. ಇರುತ್ತವೆ); novae ಎಂದು ಕರೆಯಲಾಗುವ ನಕ್ಷತ್ರಾಕಾರದ ಬಿರುಕು ವ್ಯವಸ್ಥೆಗಳು; ನಕ್ಷತ್ರಾಕಾರದ ಮತ್ತು ಏಕೆಕೇಂದ್ರೀಯ ಬಿರುಕುಗಳನ್ನು ಹೊಂದು (ಜೇಡನ ಬಲೆಯಂತೆ ಕಾಣುವ) arachnoids ಎಂದು ಕರೆಯಲ್ಪಡುವ ವೈಶಿಷ್ಟ್ಯಗಳು; ಕೆಲವೊಮ್ಮೆ ತಗ್ಗು ಪ್ರದೇಶಗಳಿಂದ ಆವೃತವಾದ ಉಂಗುರಾಕಾರದ ಬಿರುಕುಗಳು (ಇವನ್ನು coronae ಎಂದು ಕರೆಯಲಾಗುತ್ತದೆ). ಈ ಎಲ್ಲಾ ವೈಶಿಷ್ಟ್ಯಗಳೂ ಜ್ವಾಲಾಮುಖಿ ಚಟುವಟಿಕೆಗಳಿಂದ ಉದ್ಭವಿಸಿವೆ.[]

ಶುಕ್ರದ ಮೇಲ್ಮೈ ಮೇಲೆ ಕಂಡುಬರುವ ಬಹುತೇಕ ಎಲ್ಲಾ ವೈಶಿಷ್ಟ್ಯ ಗಳಿಗೂ ಐತಿಹಾಸಿಕ ಅಥವಾ ಪೌರಾಣಿಕ ಸ್ತ್ರೀಯರ ಹೆಸರನ್ನು ಇಡಲಾಗಿದೆ.[] ಇದಕ್ಕಿರುವ ಕೆಲವೇ ಅಪವಾದಗಳೆಂದರೆ, James Clerk Maxwell ಅವರ ಹೆಸರಿಡಲಾದ ಮ್ಯಾಕ್ಸ್ವೆಲ್ ಪರ್ವತ, Alpha Regio, Beta Regio ಎಂದು ಹೆಸರಿಡಲಾದ ಎರಡು ಎತ್ತರದ ವಲಯಗಳು.[]

ಮೇಲ್ಮೈ ಭೂವಿಜ್ಞಾನ

ಬದಲಾಯಿಸಿ
 
ಎತ್ತರದ 'ಖಂಡ'ಗಳನ್ನು ಹಳದಿ ಬಣ್ಣದಲ್ಲಿ ತೋರಿಸುತ್ತಿರುವ ಶುಕ್ರದ ನಕ್ಷೆ: ಮೇಲೆ ಇಶ್ತಾರ್ ಭೂಮಿ ಮತ್ತು ಸಮಭಾಜಕದ ಸ್ವಲ್ಪವೇ ಕೆಳಗೆ ಬಲಗಡೆಯಲ್ಲಿ ಆಫ್ರೊಡೈಟ್ ಭೂಮಿ.

ಶುಕ್ರದ ಮೇಲ್ಮೈನ ಬಹಳಷ್ಟು ಭಾಗಗಳು ಜ್ವಾಲಾಮುಖಿಗಳ ಚಟುವಟಿಕೆಗಳಿಂದ ರೂಪುಗೊಂಡಿವೆ. ಶುಕ್ರನ ಮೇಲೆ ಭೂಮಿಗಿಂತ ಹಲವು ಪಟ್ಟು ಹೆಚ್ಚು ಜ್ವಾಲಾಮುಖಿಗಳಿದ್ದು, ಇವುಗಳಲ್ಲಿ 167 ಜ್ವಾಲಾಮುಖಿಗಳು 100ಕಿ.ಮೀ. ಗಿಂತ ಹೆಚ್ಚು ವ್ಯಾಸವನ್ನು ಹೊಂದಿವೆ. ಭೂಮಿಯ ಮೇಲೆ ಇಷ್ಟು ದೊಡ್ಡದಾದ ಏಕಮಾತ್ರ ಜ್ವಾಲಾಮುಖಿ ವ್ಯವಸ್ಥೆಯೆಂದರೆ ಹವಾಯಿನಲ್ಲಿರುವ BigIsland. ಆದರೆ, ಇದರರ್ಥ ಶುಕ್ರವು ಭೂಮಿಗಿಂತ ಹೆಚ್ಚು ಜ್ವಾಲಾ ಚಟುವಟಿಕೆಯನ್ನು ಹೊಂದಿದೆ ಎಂದಲ್ಲ. ಬದಲಿಗೆ, ಶುಕ್ರದ ಮೇಲ್ಮೈ ಭೂಮಿಯ ಮೇಲ್ಮೈಗಿಂತ ತುಂಬ ಹಳೆಯದಾಗಿರುವುದು ಇದಕ್ಕೆ ಕಾರಣ. ಭೂಮಿಯ ಮೇಲೆ ಭೂಭಾಗಗಳ ನಿರಂತರ ಚಲನೆಯಿಂದ ಭೂಮಿಯ ಮೇಲ್ಮೈಯು ತನ್ನನ್ನು ನವೀಕರಿಸಿಕೊಳ್ಳುತ್ತದೆ. ಆದ್ದರಿಂದ, ಭೂಮಿಯ ಮೇಲ್ಮೈಯ ಸರಾಸರಿ ಆಯಸ್ಸು ಸುಮಾರು 10 ಕೋಟಿ ವರ್ಷಗಳು. ಹೋಲಿಕೆಯಲ್ಲಿ, ಶುಕ್ರನ ಮೇಲ್ಮೈ ೫೦ ಕೋಟಿ ವರ್ಷ ಹಳೆಯದೆಂದು ಅಂದಾಜು ಮಾಡಲಾಗಿದೆ.[]

ಶುಕ್ರದ ಮೇಲೆ ಈಗಲೂ ಜ್ವಾಲಾಮುಖಿಗಳ ಚಟುವಟಿಕೆಗಳು ನಡೆಯುತ್ತಿವೆಯೆಂದು ಹಲವಾರು ಸಾಕ್ಷಿಗಳು ಸೂಚಿಸುತ್ತವೆ. ರಷ್ಯಾದ ವೆನೆರಾ ಕಾರ್ಯಕ್ರಮದ ಮತ್ತು ವೆನೆರಾ ೧೨ ಶೋಧಕಗಳು ಶುಕ್ರದ ಮೇಲೆ ನಿರಂತರವಾಗಿ ಮಿಂಚನ್ನು ಪತ್ತೆಹಚ್ಚಿದವು. ಇದಲ್ಲದೆ, ವೆನೆರಾ ೧೨ ಶುಕ್ರದ ಮೇಲಿಳಿದ ತಕ್ಷಣವೇ ಪ್ರಬಲವಾದ ಸಿಡಿಲ ಸದ್ದನ್ನೂ ದಾಖಲಿಸಿಕೊಂಡಿತು. ಭೂಮಿಯ ಮೇಲೆ ಗುಡುಗು ಮಿಂಚುಗಳು ಮಳೆಯಿಂದುಂಟಾದರೂ, ಶುಕ್ರದ ಮೇಲೆ ಮಳೆ ಬೀಳುವುದಿಲ್ಲ. ಆದ್ದರಿಂದ ಶುಕ್ರದ ಗುಡುಗು/ಮಿಂಚುಗಳು ಯಾವುದೋ ಜ್ವಾಲಾಮುಖಿ ಹೊರಚಿಮ್ಮಿದ ಧೂಳಿನಿಂದ ಉಂಟಾಗಿರಬಹುದೆಂದು ನಾವು ತರ್ಕಿಸಬಹುದು. ಈ ತರ್ಕಕ್ಕೆ ಬೆಂಬಲ ನೀಡುವ ಇನ್ನೊಂದು ಸಾಕ್ಷಿಯೆಂದರೆ ೧೯೭೮ ರಿಂದ ೧೯೮೬ರ ನಡುವೆ ಶುಕ್ರದ ಮೇಲೆ ಗಂಧಕದ ಡೈ-ಆಕ್ಸೈಡ್‌ನ ಪ್ರಬಲತೆಯು ೧೦ ಪಟ್ಟು ಕಡಿಮೆಯಾಯಿತು. ಬಹುಶಃ ಮುಂಚೆ ಯಾವುದೋ ದೊಡ್ಡ ಜ್ವಾಲಾಮುಖಿಯ ಸ್ಫೋಟದಿಂದ ವಾಯುಮಂಡಲದಲ್ಲಿ ಹೆಚ್ಚಾಗಿದ್ದ SO2ನ ಪ್ರಬಲತೆಯು ತದನಂತರ ನಿಧಾನವಾಗಿ ಕಡಿಮೆಯಾಗಿರಬಹುದು.

 
ಶುಕ್ರದ ಮೇಲ್ಮೈ ಮೇಲೆ ಅಪ್ಪಳಿಕೆ ಕುಳಿಗಳು

ವೆನೆರಾ 14 ತೆಗೆದ ಈ ಚಿತ್ರದಲ್ಲಿ ಕಾಣುವಂತೆ ಶುಕ್ರದ ಮೇಲ್ಮೈ ಬಹುತೇಕವಾಗಿ ಕಪ್ಪುಶಿಲೆಯಿಂದ ಆವರಿಸಲ್ಪಟ್ಟಿದೆ. ಮೇಲ್ಮೈ ಮೇಲೆ ಒಂದೇ ಸಮ ಹರಡಿರುವಂಥ ಸುಮಾರು 1,000 ಅಪ್ಪಳಿಕೆ ಕುಳಿಗಳು ಶುಕ್ರನ ಮೇಲೆ ಕಂಡುಬರುತ್ತವೆ. ಭೂಮಿ, ಚಂದ್ರ, ಮತ್ತಿತರ ಕುಳಿಗಳಿರುವ ಗ್ರಹಗಳಲ್ಲಿ ಕುಳಿಗಳು ಸವೆದುಹೋದ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಚಂದ್ರನ ಮೇಲೆ ನಂತರದ ಅಪ್ಪಳಿಕೆಗಳಿಂದ ಹಾಗೂ ಭೂಮಿಯ ಮೇಲೆ ಗಾಳಿ, ಮಳೆಯಿಂದ ಈ ಸವೆಯುವಿಕೆ ಉಂಟಾಗುತ್ತದೆ. ಆದರೆ ಶುಕ್ರದ ಮೇಲೆ ಬಹುತೇಕ ಕುಳಿಗಳು ಯಾವ ಸವೆಯುವಿಕೆಯೂ ಇಲ್ಲದೆ ಹೊಸದರಂತೆ ಕಾಣಿಸುತ್ತವೆ. ಕುಳಿಗಳ ಸಂಖ್ಯೆ ಹಾಗೂ ಅವುಗಳ ಸುಸ್ಥಿತಿಯು, ಸುಮಾರು 50 ಕೋಟಿ ವರ್ಷಗಳ ಹಿಂದೆ, ಶುಕ್ರವು ಸಂಪೂರ್ಣವಾದ ಹೊಸ ಮೇಲ್ಮೈಯನ್ನು ಪಡೆಯಿತು ಎಂದು ಸೂಚಿಸುತ್ತವೆ.[] ಭೂಮಿಯ ಮೇಲ್ಮೈನ ಭೂಭಾಗಗಳು ನಿರಂತರವಾಗಿ ಚಲಿಸುತ್ತಿರುತ್ತವೆ. ಆದರೆ, ಶುಕ್ರದ ಮೇಲೆ ಈ ರೀತಿಯ ಚಲನೆ ಉಂಟಾಗುವುದಿಲ್ಲವೆಂದು ನಂಬಲಾಗಿದೆ. ಚಲನೆಯಿಲ್ಲದೆ ಗ್ರಹದ ನಡುಭಾಗದ ಶಾಖವು ಹೊರಹೋಗಲು ಅಡಚಣೆಯಾಗುತ್ತದೆ. ಬದಲಿಗೆ, ಶುಕ್ರದ ನಡುಭಾಗದ ತಾಪಮಾನವು ಒಂದು ಮಿತಿಯವರೆಗೂ ಏರುತ್ತದೆ. ಏರಿದ ತಾಪವು ಮೇಲ್ಮೈಯನ್ನು ದುರ್ಬಲಗೊಳಿಸುತ್ತದೆ. ನಂತರ, ಸುಮಾರು 10 ಕೋಟಿ ವರ್ಷಗಳವರೆಗೆ ಬೃಹತ್ ಪ್ರಮಾಣದಲ್ಲಿ ಮೇಲ್ಮೈ ನಾಶವಾಗಿ ಪುನಃ ಹೊಸ ಮೇಲ್ಮೈ ರೂಪುಗೊಳ್ಳುತ್ತದೆ.[]

ಶುಕ್ರದ ಕುಳಿಗಳಿಗೆ 3 ರಿಂದ 280 ಕಿ.ಮೀ. ವ್ಯಾಸವಿರುತ್ತದೆ. ಗ್ರಹದತ್ತ ಬರುತ್ತಿರುವ ಆಕಾಶಕಾಯಗಳ ಮೇಲೆ ದಟ್ಟವಾದ ವಾಯುಮಂಡಲದ ಪರಿಣಾಮಗಳಿಂದಾಗಿ 3ಕಿ.ಮೀ.ಗಿಂತ ಕಡಿಮೆ ವ್ಯಾಸದ ಕುಳಿಗಳು ಕಂಡುಬರುವುದಿಲ್ಲ. ಒಂದು ಪ್ರಮಾಣಕ್ಕಿಂತ ಕಡಿಮೆ ಚಲನಶಕ್ತಿಯಿರುವ ಆಕಾಶಕಾಯಗಳನ್ನು ವಾಯುಮಂಡಲವು ಎಷ್ಟು ನಿಧಾನಗೊಳಿಸುತ್ತದೆಂದರೆ, ಈ ಕಾಯಗಳು ಶುಕ್ರವನ್ನಪ್ಪಳಿಸಿದಾಗ ಕುಳಿಗಳು ಉಂಟಾಗುವುದೇ ಇಲ್ಲ.[]

ವಾಯುಮಂಡಲ

ಬದಲಾಯಿಸಿ

ಬಹಳ ದಟ್ಟವಾದ ಶುಕ್ರದ ವಾಯುಮಂಡಲದಲ್ಲಿ ಮುಖ್ಯವಾಗಿ ಇಂಗಾಲದ ಡೈ-ಆಕ್ಸೈಡ್ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸಾರಜನಕಗಳು ಕಂಡುಬರುತ್ತವೆ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯದಕ್ಕಿಂತ 90 ಪಟ್ಟು ಹೆಚ್ಚು. ಇದು ಭೂಮಿಯ ಸಾಗರಗಳಲ್ಲಿ 1ಕಿ.ಮೀ. ಆಳದಲ್ಲಿ ಕಾಣಿಸುವ ಒತ್ತಡದಷ್ಟಿದೆ. CO2 ಅತಿ ಸಮೃದ್ಧವಾದ ವಾಯುಮಂಡಲವು ಪ್ರಬಲವಾದ ಹರಿತ್ಗೃಹ ಪರಿಣಾಮವನ್ನುಂಟುಮಾಡಿ, ಮೇಲ್ಮೈ ತಾಪಮಾನವನ್ನು 400° ಸೆ. ನಷ್ಟು ಹೆಚ್ಚಿಸುತ್ತದೆ. ಇದರಿಂದಾಗಿ, ಶುಕ್ರನಿಗಿಂತ ಬುಧವು ಸೂರ್ಯನ ಸಮೀಪದಲ್ಲಿದ್ದು ಶುಕ್ರನಿಗಿಂತ 4 ಪಟ್ಟು ಹೆಚ್ಚು ಸೌರಶಕ್ತಿಯನ್ನು ಪಡೆದರೂ, ಶುಕ್ರದ ಮೇಲ್ಮೈ ತಾಪಮಾನವು ಬುಧದ ಮೇಲ್ಮೈ ತಾಪಮಾನಕ್ಕಿಂತ ಹೆಚ್ಚಾಗಿದೆ.

 
ಅತಿನೇರಳೆ ಕಿರಣಾವಲೋಕನದಿಂದ ಕಂಡುಬಂದಂತೆ ಶುಕ್ರದ ವಾಯುಮಂಡಲದಲ್ಲಿ ಮೋಡಗಳ ವಿನ್ಯಾಸ

ಶುಕ್ರದ ವಾಯುಮಂಡಲವು ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿಯ ಈಗಿನ ವಾಯುಮಂಡಲದಂತೆಯೇ ಇತ್ತೆಂದೂ, ಅಲ್ಲಿ ಗಮನಾರ್ಹ ಪ್ರಮಾಣದಲ್ಲಿ ದ್ರವರೂಪದಲ್ಲಿ ನೀರಿತ್ತೆಂದೂ, ಆದರೆ ಆ ನೀರು ಇಂಗಿದ್ದರಿಂದ ಅಲ್ಲಿ ಹರಿತ್ಗೃಹ ಪರಿಣಾಮ ಉಂಟಾಯಿತೆಂದೂ, ಮತ್ತು ಆ ಹರಿತ್ಗೃಹ ಪರಿಣಾಮವೇ ಇನ್ನಷ್ಟು ಹರಿತ್ಗೃಹ ವಾಯುವನ್ನು ಉತ್ಪಾದಿಸಿತೆಂದೂ, ಅಧ್ಯಯನಗಳು ಸೂಚಿಸುತ್ತವೆ.[] ಇದರಿಂದ, ತೀವ್ರವಾದ ಹವಾಮಾನ ಬದಲಾವಣೆಗೆ ಶುಕ್ರವು ಒಂದು ಒಳ್ಳೆಯ ಉದಾಹರಣೆಯಾಗಿ, ಹವಾಮಾನ ಬದಲಾವಣೆಯ ಅಧ್ಯಯನಗಳಿಗೆ ಬಹಳ ಉಪಯುಕ್ತವಾಗಿದೆ.

ಉಷ್ಣ ಜಡತ್ವ ಮತ್ತು ವಾಯುಮಂಡಲದ ಕೆಳಭಾಗದಲ್ಲಿ ಸಂವಹನೆಗಳ ಕಾರಣದಿಂದ, ತನ್ನ ಅಕ್ಷೀಯ ಪರಿಭ್ರಮಣ ಬಹಳ ನಿಧಾನವಾಗಿದ್ದರೂ, ಶುಕ್ರದ ದಿನ ಮತ್ತು ರಾತ್ರಿಯ ಗ್ರಹಭಾಗಗಳು ಸುಮಾರು ಒಂದೇ ತಾಪಮಾನದಲ್ಲಿರುತ್ತವೆ. ಮೇಲ್ಮೈನ ಬಳಿ ಮಾರುತಗಳು ನಿಧಾನವಾಗಿ ಕೆಲವೇ ಕಿ.ಮೀ. ಪ್ರತಿ ಘಂಟೆಯ ವೇಗದಲ್ಲಿ ಚಲಿಸಿದರೂ, ವಾಯು ಸಾಂದ್ರತೆ ಅದಿಕವಾಗಿರುವ ಕಾರಣ, ಈ ನಿಧಾನವಾದ ಚಲನೆಯೂ ಅಡಚಣೆಗಳ ವಿರುದ್ಧ ಗಮನಾರ್ಹವಾದ ಬಲವನ್ನು ಹೇರುತ್ತವೆ ಮತ್ತು ಧೂಳು, ಸಣ್ಣ ಕಲ್ಲುಗಳನ್ನು ತಮ್ಮೊಡನೆ ಸಾಗಿಸುತ್ತವೆ.[]

CO2 ನ ದಟ್ಟವಾದ ಪದರದ ಮೇಲೆ ಗಂಧಕದ ಡೈ ಆಕ್ಸೈಡ್ ಮತ್ತು ಗಂಧಕಾಮ್ಲದ ಹನಿಗಳಿಂದ ಕೂಡಿದ ದಪ್ಪನಾದ ಮೋಡಗಳು ಕಂಡುಬರುತ್ತವೆ.[೧೦] ಈ ಮೋಡಗಳು ತಮ್ಮ ಮೇಲೆ ಬೀಳುವ ಬೆಳಕಿನಲ್ಲಿ ಸುಮಾರು 60% ನ್ನು ಮರಳಿ ಆಕಾಶಕ್ಕೆ ಪ್ರತಿಫಲಿಸಿಬಿಡುತ್ತವೆ. ಇದರಿಂದಾಗಿ ಸೂರ್ಯನ ಬೆಳಕಿರುವಾಗ ಶುಕ್ರದ ಮೇಲ್ಮೈನ ನೇರ ವೀಕ್ಷಣೆಯು ಕ್ಲಿಷ್ಟಕರ. ಶುಕ್ರವು ಭೂಮಿಗಿಂತ ಸೂರ್ಯನ ಸಮೀಪದಲ್ಲಿದ್ದರೂ, ಈ ಶಾಶ್ವತ ಮೋಡದ ಹೊದಿಕೆಗಳಿಂದ ಶುಕ್ರದ ಮೇಲ್ಮೈ ಮೇಲೆ ಭೂಮಿಯಷ್ಟು ಚೆನ್ನಾಗಿ ಬೆಳಕು ಮತ್ತು ಶಾಖಗಳು ಬೀಳುವುದಿಲ್ಲ. CO2 ನಿಂದ ಉಂಟಾದ ಹರಿತ್ಗೃಹ ಪರಿಣಾಮವು ಇಲ್ಲದಿದ್ದರೆ, ಶುಕ್ರದ ಮೇಲ್ಮೈ ತಾಪಮಾನವು ಬಹುಶಃ ಭೂಮಿಯ ತಾಪಮಾನದಷ್ಟೇ ಇರುತ್ತಿತ್ತು. 300 ಕಿ.ಮೀ. ಪ್ರತಿ ಘಂಟೆ ವೇಗದ ಪ್ರಬಲ ಮಾರುತಗಳು ಮೋಡದ ಪದರದ ಬಳಿ ಕಾಣಿಸುತ್ತವೆ. ಇವು ಪ್ರತಿ 4-5 ಭೂದಿನಗಳಿಗೊಮ್ಮೆ ಗ್ರಹವನ್ನು ಸುತ್ತುತ್ತವೆ.[೧೧]

ಕಾಂತಕ್ಷೇತ್ರ ಮತ್ತು ಒಳಭಾಗ

ಬದಲಾಯಿಸಿ

ಶುಕ್ರದ ಕಾಂತಕ್ಷೇತ್ರವು ಭೂಮಿಯದಕ್ಕಿಂತ ಬಹಳ ದುರ್ಬಲವೂ ಮತ್ತು ಸಣ್ಣದೂ (ಅರ್ಥಾತ್, ಗ್ರಹಕ್ಕೆ ಹೆಚ್ಚು ಸಮೀಪದಲ್ಲಿ) ಆಗಿರುವುದೆಂದು ಪಯೋನೀರ್ ಶುಕ್ರ ಪರಿಭ್ರಮಕವು 1980ರಲ್ಲಿ ಪತ್ತೆಹಚ್ಚಿತು. ಭೂಮಿಯ ಕಾಂತಕ್ಷೇತ್ರವು ಒಳಭಾಗದ ಆಂತರಿಕ ಉತ್ಪಾದಕದಿಂದ ಪ್ರೇರಿತವಾಗಿದ್ದರೂ, ಶುಕ್ರದ ದುರ್ಬಲವಾದ ಕಾಂತಕ್ಷೇತ್ರವು ಸೌರ ಮಾರುತ ಮತ್ತು ಶುಕ್ರದ ಅಯಾನುಗೋಳದ ಪರಸ್ಪರ ಒಡನಾಟದಿಂದ ಉಂಟಾಗುತ್ತದೆ.[೧೨] ಶುಕ್ರದ ಕಾಂತಗೋಳವು ಗ್ರಹದ ವಾಯುಮಂಡಲವನ್ನು ಬ್ರಹ್ಮಾಂಡ ವಿಕಿರಣಗಳಿಂದ ತಡೆಯಲಾರದಷ್ಟು ದುರ್ಬಲವಾಗಿದೆ.

ಶುಕ್ರವು ಗಾತ್ರದಲ್ಲಿ ಭೂಮಿಯಂತೆಯೇ ಇದ್ದು ಅದರ ಒಳಭಾಗದಲ್ಲಿ ಭೂಮಿಯಂತೆಯೇ ಉತ್ಪಾದಕವಿರುವ ನಿರೀಕ್ಷೆ ಇದ್ದಿದ್ದರಿಂದ, ಶುಕ್ರಕ್ಕೆ ತನ್ನದೇ ಆದ ಕಾಂತಕ್ಷೇತ್ರವಿಲ್ಲದಿರುವುದು ಒಂದು ಆಶ್ಚರ್ಯಕರ ಸಂಗತಿಯಾಗಿತ್ತು. ಉತ್ಪಾದಕದ ಅಸ್ಥಿತ್ವಕ್ಕೆ 3 ಅಂಶಗಳ ಅವಶ್ಯಕತೆ ಇದೆ: ಒಂದು ವಿದ್ಯುತ್‌ ವಾಹಕ ದ್ರವ, ಎರಡನೆಯದಾಗಿ ಪರಿಭ್ರಮಣ, ಮತ್ತು ಮೂರನೆಯದಾಗಿ ಸಂವಹನ. ಶುಕ್ರದ ಒಳಭಾಗವು ವಿದ್ಯುತ್‌ವಾಹಕವೆಂದು ನಂಬಲಾಗಿದೆ. ಗ್ರಹದ ಅಕ್ಷೀಯ ಪರಿಭ್ರಮಣವು ಬಹಳ ನಿಧಾನವಾಗಿದ್ದರೂ, ಇದು ಉತ್ಪಾಕವನ್ನುಂಟುಮಾಡಲು ಸಾಕಾಗುವಷ್ಟು ವೇಗವನ್ನು ಹೊಂದಿದೆಯೆಂದು ಹೇಳಲಾಗಿದೆ.[೧೩] [೧೪] ಈ ವಿಷಯಗಳಿಂದ ತಿಳಿದು ಬರುವುದೇನೆಂದರೆ, ಉತ್ಪಾದಕವಿಲ್ಲದಿರುವುದಕ್ಕೆ ಕಾರಣ ಬಹುಶಃ ಶುಕ್ರದ ಒಳಭಾಗದಲ್ಲಿ ಸಂವಹನ ಉಂಟಾಗದಿರುವುದು. ಭೂಮಿಯ ದ್ರವೀಕೃತ ಒಳಭಾಗದಲ್ಲಿ ಒಳಪದರಗಳಲ್ಲಿರುವ ದ್ರವವು ಹೊರಪದರಗಳಲ್ಲಿರುವ ದ್ರವಕ್ಕಿಂತ ಹೆಚ್ಚು ಬಿಸಿಯಾಗಿರುವುದರಿಂದ ಅಲ್ಲಿ ಸಂವಹನೆಯು ಉಂಟಾಗುತ್ತದೆ. ತನ್ನ ಒಳ ಶಾಖವನ್ನು ಹೊರಸೂಸಲು ಅಗತ್ಯವಾದ ಭೂಭಾಗಗಳೇ ಶುಕ್ರದ ಮೇಲ್ಮೈ ಮೇಲೆ ಇಲ್ಲದಿರುವುದರಿಂದ, ಶುಕ್ರದ ಒಳಭಾಗದ ಎಲ್ಲಾ ಪದರಗಳೂ ಬಹುಶಃ ಒಂದೇ ತಾಪಮಾನದಲ್ಲಿ ಇವೆ. ಇನ್ನೊಂದು ಸಂಭವನೆಯೆಂದರೆ, ಶುಕ್ರದ ಒಳಭಾಗವು ಈಗಾಗಲೇ ಪೂರ್ಣವಾಗಿ ಘನೀಕೃತಗೊಂಡಿದೆ.

ಕಕ್ಷೆ ಮತ್ತು ಪರಿಭ್ರಮಣ

ಬದಲಾಯಿಸಿ

ಶುಕ್ರವು ಸೂರ್ಯನನ್ನು ಸರಾಸರಿ 10.6 ಕೋಟಿ ಕಿ.ಮೀ.ಗಳ ದೂರದಲ್ಲಿ ಸುತ್ತುತ್ತದೆ ಮತ್ತು 224.65 ದಿನಗಳಿಗೊಮ್ಮೆ ಒಂದು ಪರಿಭ್ರಮಣವನ್ನು ಮುಗಿಸುತ್ತದೆ. ಪ್ರತಿಯೊಂದು ಗ್ರಹದ ಕಕ್ಷೆಯೂ ಕೇಂದ್ರ ಚ್ಯುತಿಯನ್ನು ಹೊಂದಿದ್ದರೂ, ಕೇವಲ 1% ಚ್ಯುತಿಯನ್ನು ಹೊಂದಿರುವ ಶುಕ್ರದ ಕಕ್ಷೆಯು ವೃತ್ತಾಕಾರಕ್ಕೆ ಅತ್ಯಂತ ಸಮೀಪವಾಗಿದೆ. ಶುಕ್ರವು ಭೂಮಿ ಮತ್ತು ಸೂರ್ಯನ ನಡುವೆ ಪರಿಭ್ರಮಿಸುತ್ತದೆ. ಸುಮಾರು 4 ಕೋಟಿ ಕಿ.ಮೀ. ಗಳ ಅಂತರದಲ್ಲಿ ಬೇರಾವುದೇ ಗ್ರಹಕ್ಕಿಂತ ಶುಕ್ರವು ಭೂಮಿಗೆ ಅತಿ ಸಮೀಪಕ್ಕೆ ಬರುತ್ತದೆ. ಸರಾಸರಿ 584 ದಿನಗಳಿಗೊಮ್ಮೆ ಶುಕ್ರ-ಭೂಮಿ ಇಷ್ಟು ಸಮೀಪಕ್ಕೆ ಬರುತ್ತವೆ.

ಶುಕ್ರವು ತನ್ನ ಅಕ್ಷದ ಸುತ್ತ 243 ಭೂಮಿ ದಿನಗಳಿಗೊಮ್ಮೆ ಸುತ್ತುತ್ತದೆ. ಇದು ದೊಡ್ಡ ಗ್ರಹಗಳಲ್ಲೇ ಅತಿ ನಿಧಾನವಾಗಿದೆ. ಈ ಕಾರಣದಿಂದ ಶುಕ್ರದ ಮೇಲೆ ಒಂದು ನಾಕ್ಷತ್ರಿಕ ದಿನವು (243 ಭೂಮಿ ದಿನಗಳು) ಶುಕ್ರದ ಒಂದು ವರ್ಷಕ್ಕಿಂತ (224.7 ಭೂಮಿ ದಿನಗಳು) ಹೆಚ್ಚು ಕಾಲವಿರುತ್ತದೆ!! ಆದರೆ, ಶುಕ್ರದ ಒಂದು ಸೌರ ದಿನದ ಅವಧಿಯು ನಾಕ್ಷತ್ರಿಕ ದಿನದ ಅವಧಿಗಿಂತ ಗಮನಾರ್ಹವಾಗಿ ಚಿಕ್ಕದಾಗಿದೆ; ಶುಕ್ರದ ಮೇಲ್ಮೈ ಮೇಲಿರುವ ವೀಕ್ಷಕನೊಬ್ಬನಿಗೆ ಕಾಣಿಸುವಂತೆ ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದ ನಡುವೆ ಇರುವ ಕಾಲಾವಧಿಯು 116.75 ಭೂಮಿ ದಿನಗಳು.[೧೫] ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುವಂತೆ ಕಾಣುತ್ತದೆ. ಸಮಭಾಜಕದಲ್ಲಿ ಶುಕ್ರದ ಮೇಲ್ಮೈ 6.5 ಕಿ.ಮೀ. ಪ್ರತಿ ಘಂಟೆಯ ವೇಗದಲ್ಲಿ ತಿರುಗುತ್ತದೆ. ಹೋಲಿಕೆಯಲ್ಲಿ, ಭೂಮಿಯ ಸಮಭಾಜಕದಲ್ಲಿ ವೇಗವು ಸುಮಾರು 1,600 ಕಿ.ಮೀ. ಪ್ರತಿ ಘಂಟೆ ಇರುತ್ತದೆ.

ಸೂರ್ಯನ ಉತ್ತರ ಧ್ರುವದ ಮೇಲಿನಿಂದ ನೋಡಿದಾಗ ಕಾಣಿಸುವಂತೆ, ಎಲ್ಲಾ ಗ್ರಹಗಳು ಸೂರ್ಯನನ್ನು ಅಪ್ರದಕ್ಷಿಣಾಕಾರವಾಗಿ ಪರಿಭ್ರಮಿಸುತ್ತಿವೆ. ಆದರೆ ಬಹುತೇಕ ಎಲ್ಲ ಗ್ರಹಗಳು ತಮ್ಮ ಅಕ್ಷದ ಸುತ್ತಲೂ ಅಪ್ರದಕ್ಷಿಣಾಕಾರದಲ್ಲೇ ಸುತ್ತುತ್ತಿದ್ದರೂ, ಶುಕ್ರವು ಮಾತ್ರ ಪ್ರದಕ್ಷಿಣಾಕಾರದಲ್ಲಿ ಸುತ್ತುತ್ತದೆ. ಶುಕ್ರದ ಅಕ್ಷೀಯ ಪರಿಭ್ರಮಣ ಕಾಲವನ್ನು ಮೊದಲ ಬಾರಿಗೆ ಮಾಪಿಸಿದಾಗ ಅದರ ಈ ನಿಧಾನವಾದ ಪ್ರತಿಗಾಮಿ ಚಲನೆಯು ಹೇಗೆ ಉಂಟಾಯಿತೆಂಬ ಪ್ರಶ್ನೆಯು ವಿಜ್ಞಾನಿಗಳನ್ನು ತಬ್ಬಿಬ್ಬುಗೊಳಿಸಿತು. ಸೌರ ಜ್ಯೋತಿಪಟಲದಿಂದ ರೂಪುಗೊಂಡ ಕಾಲದಲ್ಲಿ ಶುಕ್ರವು ಪ್ರಾಯಶಃ ಈಗಿಗಿಂತ ಹೆಚ್ಚು ವೇಗವುಳ್ಳ ಮತ್ತು ಪ್ರಾಗತಿಕವಾದ ಚಲನೆಯನ್ನು ಹೊಂದಿತ್ತು. ಆದರೆ, ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ, ಶುಕ್ರದ ದಟ್ಟ ವಾಯುಮಂಡಲದ ಮೇಲಾದ ಉಬ್ಬರ-ಇಳಿತಗಳ ಪರಿಣಾಮಗಳು ಅದರ ಚಲನೆಯನ್ನು ಈಗಿರುವಷ್ಟು ನಿಧಾನಗೊಳಿಸಿರಬಹುದು ಎಂದು ಲೆಕ್ಕಾಚಾರಗಳು ತೋರಿಸುತ್ತವೆ.[೧೬][೧೭]

ಶುಕ್ರದ ವಾರ್ಷಿಕ ಮತ್ತು ದೈನಂದಿನ ಚಲನೆಗಳ ಒಂದು ಕುತೂಹಲಕಾರಿ ಸಂಗತಿಯೆಂದರೆ, ಸರಾಸರಿ 584 ದಿನಗಳಿಗೊಮ್ಮೆ ಶುಕ್ರವು ಭೂಮಿಯ ಸಮೀಪಕ್ಕೆ ಬರುತ್ತದೆ. ಈ ಅವಧಿಯು ಶುಕ್ರದ 5 ಸೌರದಿನಗಳ ಅವಧಿಯಷ್ಟೇ ಇದೆ. ಕಾಲಾವಧಿಗಳ ನಡುವೆಯಿರುವ ಈ ಸಂಬಂಧಗಳು ಕೇವಲ ಕಾಕತಾಳೀಯವೋ ಅಥವಾ ಭೂಮಿ-ಶುಕ್ರಗಳ ನಡುವೆ ಯಾವುದೇ ತರಹದ ಉಬ್ಬರ-ಇಳಿತಗಳಿಂದಾದ ಬದ್ಧತೆಯೋ (tidal locking) ಎಂಬುದು ಇನ್ನೂ ತಿಳಿದುಬಂದಿಲ್ಲ.[೧೮]

ಶುಕ್ರಕ್ಕೆ ಪ್ರಸ್ತುತದಲ್ಲಿ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲದಿದ್ದರೂ, 2002 VE68 ಎಂಬ ಹೆಸರಿನ ನಾಕ್ಷತ್ರಿಕ ಕಾಯವು ಶುಕ್ರನ ಸುತ್ತ ಮೇಲ್ನೋಟಕ್ಕೆ ಪರಿಭ್ರಮಣೆಯಂತೆ ಕಾಣುವ ಚಲನೆಯಲ್ಲಿ ಸುತ್ತುತ್ತಿದೆ.[೧೯] en:California Institute of Technologyಯ ಆಲೆಕ್ಸ್ ಅಲೇಮಿ ಮತ್ತು ಡೇವಿಡ್ ಸ್ಟೀವನ್‌ಸನ್ ಅವರು ಸೌರಮಂಡಲದ ಮೊದಲ ಬೆಳವಣಿಗೆಗಳ ಒಂದು ಮಾದರಿಯನ್ನು ಇತ್ತೀಚೆಗೆ ಅಧ್ಯಯನ ಮಾಡಿದರು. ಅವರ ಅಧ್ಯಯನದ ಪ್ರಕಾರ, ಕೋಟ್ಯಾಂತರ ವರ್ಷಗಳ ಹಿಂದೆ ಶುಕ್ರವು, ದೊಡ್ಡದೊಂದು ಅಪ್ಪಳಿಕೆಯಿಂದ ಉದ್ಭವವಾದಕಡೇಪಕ್ಷ ಒಂದು ಉಪಗ್ರಹವನ್ನು ಹೊಂದಿತ್ತು.[೨೦][೨೧] ಅಲೇಮಿ ಮತ್ತು ಸ್ಟೀವನ್‌ಸನ್ನರ ಪ್ರಕಾರ, ಸುಮಾರು 1 ಕೋಟಿ ವರ್ಷಗಳ ನಂತರ ಇನ್ನೊಂದು ಅಪ್ಪಳಿಕೆಯು ಶುಕ್ರದ ಅಕ್ಷೀಯ ಪರಿಭ್ರಮಣದ ದಿಕ್ಕನ್ನು ಬದಲಾಯಿಸಿತು. ಈ ವ್ಯತಿರಿಕ್ತ ಪರಿಭ್ರಮಣದಿಂದ ಶುಕ್ರದ ಉಪಗ್ರಹವು ನಿಧಾನವಾಗಿ ಸುತ್ತಿಕೊಂಡು ಗ್ರಹದತ್ತ ಬೀಳುತ್ತಾ ಹೋಯಿತು.[೨೨] ಕಡೆಗೆ ಆ ಉಪಗ್ರಹವು ಶುಕ್ರವನ್ನು ಢಿಕ್ಕಿ ಹೊಡೆದು ಅದರಲ್ಲೇ ವಿಲೀನವಾಯಿತು. ತದನಂತರದ ಅಪ್ಪಳಿಕೆಗಳು ಬೇರಾವುದಾದರೂ ಉಪಗ್ರಹಗಳಾನ್ನು ನಿರ್ಮಿಸಿದ್ದರೆ, ಅವುಗಳೂ ಮೊದಲ ಉಪಗ್ರಹದಂತೆಯೇ ಶುಕ್ರದಲ್ಲಿ ವಿಲೀನವಾದವು. ಅಲೇಮಿ ಸ್ಟೀವನ್‌ಸನ್ ಅಧ್ಯಯನವು ಇತ್ತೀಚೆಗೆ ನಡೆದಿರುವುದರಿಂದ, ವೈಜ್ಞಾನಿಕ ಸಮುದಾಯದಲ್ಲಿ ಈ ಅಧ್ಯಯನಕ್ಕೆ ಎಷ್ಟು ಒಪ್ಪಿಗೆ ಸಿಗುತ್ತದೆಂದು ಕಾದು ನೋಡಬೇಕು.

ವೀಕ್ಷಣೆ

ಬದಲಾಯಿಸಿ
 
ಅರ್ಧ ಚಂದ್ರನ ಪಕ್ಕ ಸಂಧ್ಯಾ ನಕ್ಷತ್ರದಂತೆ ಕಾಣಿಸುವ ಶುಕ್ರ

ಗೋಚರ ಪ್ರಮಾಣವು −3.8 ರಿಂದ −4.6ಅ ವ್ಯಾಪ್ತಿಯಲ್ಲಿರುವ ಶುಕ್ರವು ಭೂಮಿಯ ಆಕಾಶದಿಂದ ಎಲ್ಲ ನಕ್ಷತ್ರಗಳಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಇದು ನಡುದಿನದಲ್ಲೂ ಕಾಣಿಸುವಷ್ಟು ಪ್ರಕಾಶಮಾನವಾಗಿದೆ. ಸೂರ್ಯ ದಿಗಂತದ ಬಳಿ ಇದ್ದಾಗಲಂತೂ ಶುಕ್ರವನ್ನು ಬಹು ಸುಲಭವಾಗಿ ನೋಡಬಹುದು.

ಸೂರ್ಯನ ಸುತ್ತ ಪರಿಭ್ರಮಿಸುವಾಗ ಪ್ರತಿ 584 ದಿನಗಳಿಗೊಮ್ಮೆ ಶುಕ್ರವು ಭೂಮಿಯನ್ನು 'ದಾಟಿಕೊಂಡು' ಹೋಗುತ್ತದೆ. ಹೀಗಾದಾಗ, ಶುಕ್ರವು ಸೂರ್ಯಾಸ್ತದ ನಂತರ ಕಾಣುವ 'ಸಂಧ್ಯಾ ನಕ್ಷತ್ರ' ದಿಂದ ಸೂರ್ಯೋದಯಕ್ಕೆ ಮುಂಚೆ ಕಾಣುವ 'ಉಷಾ ನಕ್ಷತ್ರ'ವಾಗಿ ಮಾರ್ಪಡುತ್ತದೆ. ಬುಧವನ್ನು ನಸುಕಿನಲ್ಲಿ ನೋಡಲು ಕಷ್ಟವಾದರೂ, ಶುಕ್ರವು ಪ್ರಕಾಶಮಾನವಾಗಿರುವಾಗ ಎಷ್ಟು ಸುಲಭವಾಗಿ ಕಾಣಿಸುತ್ತದೆಂದರೆ, ಅದನ್ನು ಗುರುತು ಹಿಡಿಯದಿರುವುದೇ ಕಷ್ಟವಾಗುತ್ತದೆ. ತನ್ನ ಕಕ್ಷೆಯ ಆಕಾರದ ಕಾರಣ, ಸೂರ್ಯಾಸ್ತವಾದ ಹಲವು ಘಂಟೆಗಳ ನಂತರವೂ ಶುಕ್ರವು ಕತ್ತಲಾಕಾಶದಲ್ಲಿ ಕಂಡುಬರುತ್ತದೆ. ಬಿಂದುವಿನ ಆಕಾರದಲ್ಲಿರುವ ಬೇರೆಲ್ಲಾ ಆಕಾಶಕಾಯಗಳಿಗಿಂತ ಶುಕ್ರವು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಈ ಕಾರಣದಿಂದ, ಹಲವು ಬಾರಿ ಶುಕ್ರವನ್ನು ಬೇರೆಯಾವುದೋ ವಿಚಿತ್ರ ವಸ್ತುವೆಂದೋ ಅಥವಾ ಹಾರುವ ತಟ್ಟೆಯೆಂದೋ ಅಪಾರ್ಥ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯದ ವಿಷಯವಾಗಿದೆ. 1969ರಲ್ಲಿ , ಮುಂದೆ ಅಮೆರಿಕಾದ ಅಧ್ಯಕ್ಷರಾಗುವವರಿದ್ದ ಜಿಮ್ಮಿ ಕಾರ್ಟರ್ಅವರು ಒಂದು ಹಾರುವ ತಟ್ಟೆಯನ್ನು ನೋಡಿರುವುದಾಗಿ ತಿಳಿಸಿದರು. ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಂತೆ ಬಹುಶಃ ಅವರು ಸಹ ಶುಕ್ರವನ್ನು ನೋಡಿ ಹಾರುವ ತಟ್ಟೆಯೆಂದೇ ಭಾವಿಸಿದ್ದರು.[೨೩]

ಶುಕ್ರವು ತನ್ನ ಕಕ್ಷವನ್ನು ಪರಿಭ್ರಮಿಸುತ್ತ, ಚಂದ್ರನಂತೆಯೇ ಪಕ್ಷಗಳನ್ನು ಪ್ರದರ್ಶಿಸುತ್ತದೆ: ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವಾಗ ಹೊಸಚಂದ್ರನಂತೆ, ಸೂರ್ಯನ ವಿರುದ್ಧ ದಿಕ್ಕಿನಲ್ಲಿದ್ದಾಗ ಪೂರ್ಣಚಂದ್ರನಂತೆ, ಮತ್ತು ಭೂಮಿ-ಸೂರ್ಯವನ್ನು ಸೇರಿಸುವ ರೇಖೆಯಿಂದ ದೂರವಿದ್ದಾಗ ಅರ್ಧಚಂದ್ರನಂತೆ ಕಾಣುತ್ತದೆ. ಸ್ವಲ್ಪವೇ ಕಾಣುವ ಅರ್ಧಚಂದ್ರಾಕಾರದಲ್ಲಿರುವಾಗ ಶುಕ್ರವು ಅತಿ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ; ಪೂರ್ಣಚಂದ್ರಾಕಾರದಲ್ಲಿರುವಾಗ ಭೂಮಿಯಿಂದ ಬಹಳ ದೂರವಿರುತ್ತದೆ.

 
2004 ಜೂನ್ 8ರಂದು ಶುಕ್ರವು ಸೂರ್ಯನ ಮುಂದೆ ಹಾದುಹೋಯಿತು. ಕಪ್ಪು ಹನಿ ಪರಿಣಾಮವನ್ನು ಇಲ್ಲಿ ಕಾಣಬಹುದು.

ಭೂಮಿಯ ಕಕ್ಷೆಯ ಹೋಲಿಕೆಯಲ್ಲಿ ಶುಕ್ರದ ಕಕ್ಷೆಯು ಸ್ವಲ್ಪ ಓರೆಯನ್ನು ಹೊಂದಿದೆ (ಅಂದರೆ, ಭೂಮಿ ಮತ್ತು ಶುಕ್ರಗಳು ಬೇರೆ ಸಮತಳಗಳಲ್ಲಿ ಸೂರ್ಯನನ್ನು ಪರಿಭ್ರಮಿಸುತ್ತವೆ). ಈ ಕಾರಣದಿಂದ, ಶುಕ್ರವು ಭೂಮಿ ಮತ್ತು ಸೂರ್ಯದ ಮಧ್ಯೆ ಹಾದುಹೋದಾಗ ಸೂರ್ಯನ ಬಿಂಬವು ಮರೆಯಾಗುವುದಿಲ್ಲ. ಆದರೆ, ಸುಮಾರು 120 ವರ್ಷಗಳಿಗೊಮ್ಮೆ, 8 ವರ್ಷಗಳ ಬೇರ್ಪಡಿಕೆಯಲ್ಲಿ ಎರಡು ಶುಕ್ರ ಸಂಕ್ರಮಣಗಳು ಜೋಡಿಯಾಗಿ ಉಂಟಾಗುತ್ತವೆ. ಈ ಸಂಕ್ರಮಣ ಕಾಲದಲ್ಲಿ ಶುಕ್ರವು ಭೂಮಿಯ ಕಕ್ಷೆಯ ಸಮತಳದಲ್ಲೇ ಇರುತ್ತದೆ. ಇತ್ತೀಚೆಗಿನ ಸಂಕ್ರಮಣವು 2004ರಲ್ಲಿ ಉಂಟಾಯಿತು. ಇದರ ನಂತರದ ಸಂಕ್ರಮಣವು 2012ರಲ್ಲಿ ಆಗಲಿದೆ. ಹಿಂದಿನ ಕಾಲದಲ್ಲಿ ಶುಕ್ರ ಸಂಕ್ರಮಣವಾದಾಗ ಖಗೋಳಶಾಸ್ತ್ರಜ್ಞರು ಖಗೋಳ ಮಾನದ ಪ್ರಮಾಣವನ್ನು (ಮತ್ತು, ಸೌರಮಂಡಲದ ಗಾತ್ರವನ್ನು) ನಿರ್ಣಯಿಸುತ್ತಿದ್ದರು. ಈ ಕಾರಣದಿಂದ ಐತಿಹಾಸಿಕವಾಗಿ ಶುಕ್ರ ಸಂಕ್ರಮಣವು ಪ್ರಾಮುಖ್ಯತೆಯನ್ನು ಹೊಂದಿತ್ತು. 1768ರಲ್ಲಿ ಕ್ಯಾಪ್ಟನ್ ಕುಕ್ನು ಶುಕ್ರ ಸಂಕ್ರಮಣವನ್ನು ವೀಕ್ಷಿಸಲೆಂದು ತಹೀತಿಗೆ ಹೊರಟ ನಂತರವೇ ಆಸ್ಟ್ರೇಲಿಯಾದ ಪೂರ್ವ ತೀರವನ್ನು ಅನ್ವೇಷಿಸಿದನು.

ನೂರಾರು ವರ್ಷಗಳಿಂದ ಶುಕ್ರದ ವೀಕ್ಷಣೆಯಲ್ಲಿ ಉಳಿದಿರುವ ಒಂದು ನಿಗೂಢತೆಯೆಂದರೆ 'ಆಶನ್' ಎಂದು ಕರೆಯಲಾಗುವ ಬೆಳಕು. ಈ ಬೆಳಕು ಶುಕ್ರವು ಅರ್ಧಚಂದ್ರಾಕಾರದಲ್ಲಿ ಇರುವಾಗ ಅದರ ಕತ್ತಲ ಭಾಗಗಳಲ್ಲಿ ಮಂದವಾಗಿ ಕಾಣುತ್ತದೆಯೆಂದು ಹೇಳಲಾಗಿದೆ. ಆಶನ್ ಬೆಳಕು 1643ರಷ್ಟು ಮುಂಚೆಯೇ ಸುದ್ದಿಯಲ್ಲಿತ್ತಾದರೂ, ಇದರ ಅಸ್ತಿತ್ವವನ್ನು ಇಲ್ಲಿಯವರೆಗೂ ದೃಢಪಡಿಸಿಕೊಳ್ಳಲಾಗಿಲ್ಲ. ಶುಕ್ರದ ವಾಯುಮಂಡಲದಲ್ಲಿ ನಡೆಯುವ ಮಿಂಚಿನ ಚಟುವಟಿಕೆಗಳಿಂದ ಈ ಬೆಳಕು ಉಂಟಾಗಿರಬಹುದೆಂದು ಕೆಲವು ವೀಕ್ಷಕರು ಅನುಮಾನಿಸಿದ್ದಾರೆ. ಆದರೆ, ಹೆಚ್ಚು ಪ್ರಕಾಶಮಾನವಾದ ಅರ್ಧಚಂದ್ರಾಕೃತಿಯ ವಸ್ತುವಿನ ವೀಕ್ಷಣೆಯು ವೀಕ್ಷಕರ ಮೇಲೆ ಪರಿಣಾಮ ಮಾಡಿ ದೃಷ್ಟಿಭ್ರಾಂತಿಯನ್ನೂ ಉಂಟುಮಾಡಿರಬಹುದು.[೨೪]

ಶುಕ್ರದ ಅಧ್ಯಯನಗಳು

ಬದಲಾಯಿಸಿ

ಮುಂಚಿನ ಅಧ್ಯಯನಗಳು

ಬದಲಾಯಿಸಿ
 
Galileo's discovery that Venus showed phases proved that it orbits the Sun and not the Earth

ಭಾರತದ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಿಂದಿನ ಕಾಲದಿಂದಲೂ ಶುಕ್ರವನ್ನು ನವಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ, ಪಾಶ್ಚಾತ್ಯ ದೇಶಗಳಲ್ಲಿ ದೂರದರ್ಶಕದ ಆವಿಶ್ಕಾರಕ್ಕೆ ಮುನ್ನ ಶುಕ್ರವನ್ನು 'ಅಲೆದಾಡುವ ನಕ್ಷತ್ರ' ಎಂದು ಮಾತ್ರ ತಿಳಿಯಲಾಗಿತ್ತು. ಶುಕ್ರವು ಬೆಳಿಗ್ಗೆ ಮತ್ತು ಸಂಜೆ ಗೋಚರಿಸುತ್ತಿದ್ದುದರಿಂದ, ಇವೆರಡೂ ಬೇರೆ ಬೇರೆ ಕಾಯಗಳೆಂದು ಹಲವು ಸಂಸ್ಕೃತಿಗಳಲ್ಲಿ ನಂಬಲಾಗಿತ್ತು. ಶುಕ್ರವು ಭೂಮಿಯ ಸುತ್ತ ಸುತ್ತುತ್ತದೆಯೆಂದು ಪೈಥಾಗೊರಸನು ನಂಬಿದ್ದರೂ, ಕ್ರಿ.ಪೂ.6ನೇ ಶತಮಾನದಲ್ಲಿ ಮೊದಲಬಾರಿಗೆ ಶುಕ್ರವು ಎರಡು ಕಾಯಗಳಲ್ಲದೆ ಒಂದೇ ಗ್ರಹವೆಂದು ಅವನು ಕಂಡುಹಿಡಿದನು. ಕ್ರಿ.ಶ. 17ನೇ ಶತಮಾನದಲ್ಲಿ ಗೆಲಿಲಿಯೋ ಮೊದಲ ಬಾರಿಗೆ ಶುಕ್ರದ ಅವಲೋಕನೆ ಮಾಡಿದಾಗ, ಶುಕ್ರವು ಚಂದ್ರನಂತೆಯೇ ಪಕ್ಷಗಳನ್ನು, ಪ್ರದರ್ಶಿಸಿ, ಸಣ್ಣ ಚಂದ್ರಾಕಾರದಿಂದ ಅರ್ಧ ಚಂದ್ರ, ಪೂರ್ಣಚಂದ್ರನ ಆಕಾರಗಳನ್ನು ತಳೆಯುತ್ತದೆಂದು ತಿಳಿದುಕೊಂಡನು. ಶುಕ್ರವು ಸೂರ್ಯನ ಸುತ್ತ ಪರಿಭ್ರಮಿಸುತ್ತಿದ್ದರೆ ಮಾತ್ರ ಈ ರೀತಿಯ ಪಕ್ಷಗಳು ಉಂಟಾಗಲು ಸಾಧ್ಯ. ಸೂರ್ಯನೂ ಸೇರಿದಂತೆ ಸೌರಮಂಡಲದ ಗ್ರಹಗಳು ಭೂಮಿಯ ಸುತ್ತ ಪರಿಭ್ರಮಿಸುತ್ತವೆ ಎಂದು ಪ್ರತಿಪಾದಿಸಿದ್ದ ಟಾಲೆಮಿಯ ವಾದವನ್ನು ಅಲ್ಲಗಳೆಯಲು ಗೆಲಿಲಿಯೋ ಮಾಡಿದ ಅವಲೋಕನೆಯು ಬಹಳ ಉಪಯುಕ್ತವಾಯಿತು.[೨೫]

1790ರಷ್ಟು ಮುಂಚೆಯೇ ಯೋಹಾನ್ ಶ್ರಾಟರ್ ಶುಕ್ರದ ವಾಯುಮಂಡಲವನ್ನು ಕಂಡುಹಿಡಿದಿದ್ದನು. ಗ್ರಹವು ತೆಳುವಾದ ಅರ್ಧ ಚಂದ್ರಾಕಾರದಲ್ಲಿದ್ದಾಗ ಅದರ ಮೊನೆಗಳು ೧೮೦° ಗೂ ಹೆಚ್ಚು ಕೋನವನ್ನು ವ್ಯಾಪಿಸಿವೆಯೆಂದು ಶ್ರಾಟರ್‌ನು ಕಂಡುಹಿಡಿದನು. ದಟ್ಟವಾದ ವಾಯುಮಂಡಲವು ಸೂರ್ಯನ ಬೆಳಕನ್ನು ಚದುರಿಸುವುದರಿಂದ ಈ ರೀತಿ ಆಗುತ್ತಿದೆ ಎಂದು ಅವನು ಸರಿಯಾಗಿ ತರ್ಕಿಸಿದನು. ಇದಾದ ನಂತರ, ಗ್ರಹವು ಕೆಳ ಗ್ರಹಕೂಟದಲ್ಲಿದ್ದಾಗ ಅದರ ಕತ್ತಲ ಬದಿಯನ್ನು ಅವಲೋಕಿಸಿದ ಚೆಸ್ಟರ್ ಸ್ಮಿತ್ ಲೈಮನ್ನು ಒಂದು ಪೂರ್ಣ ಉಂಗುರವನ್ನು ನೋಡಿದನು. ಇದು ವಾಯುಮಂಡಲದ ಅಸ್ತಿತ್ವಕ್ಕೆ ಇನ್ನೂ ಹೆಚ್ಚಿನ ಸಾಕ್ಷಿಯನ್ನೊದಗಿಸಿತು.[೨೬] ಗ್ರಹದ ಅಕ್ಷೀಯ ಪರಿಭ್ರಮಣ ಕಾಲವನ್ನು ನಿಗದಿಗೊಳಿಸುವ ಪ್ರಯತ್ನಗಳನ್ನು ಈ ವಾಯುಮಂಡಲವು ಕ್ಲಿಷ್ಟಗೊಳಿಸಿತು. ಕ್ಯಾಸಿನಿ ಮತ್ತು ಶ್ರಾಟರ್‌ನಂತಹ ವೀಕ್ಷಕರು ಗ್ರಹದ ಮೇಲ್ಮೈನಂತೆ ಕಂಡ ಪದರದ ಮೇಲಿದ್ದ ಕಲೆಗಳ ಚಲನೆಯನ್ನು ಆಧರಿಸಿ, ಪರಿಭ್ರಮಣ ಕಾಲವನ್ನು ೨೪ ಘಂಟೆಗಳೆಂದು ತಪ್ಪಾಗಿ ಅಂದಾಜು ಮಾಡಿದರು.[೨೭]

ಭೂಮಿಯ ಮೇಲಿನಿಂದ ಶುಕ್ರದ ಸಂಶೋಧನೆ

ಬದಲಾಯಿಸಿ

20ನೇ ಶತಮಾನದವರೆಗೂ ಶುಕ್ರದ ಬಗ್ಗೆ ಬೇರೆ ಹೆಚ್ಚೇನೂ ತಿಳಿದುಬರಲಿಲ್ಲ. ಯಾವುದೇ ರೀತಿ ವೈಶಿಷ್ಟ್ಯತೆ ತೋರದೆ ಸಮವಾದ ಒಂದು ತಟ್ಟೆಯಂತಿದ್ದ ಶುಕ್ರದ ಮೇಲ್ಮೈ ಹೇಗಿರಬಹುದು ಎಂಬುದರ ಬಗ್ಗೆ ಸುಳಿವೇ ಸಿಕ್ಕಿರಲಿಲ್ಲ. ವರ್ಣಪಟಲಮಾಪನ, ರೆಡಾರ್ ಮತ್ತು ಅತಿನೇರಳೆ ಕಿರಣಗಳು ಅಭಿವೃದ್ಧಿಯಾಗಿ ಇವುಗಳಿಂದ ಅವಲೋಕಿಸಿದ ನಂತರವೇ ಶುಕ್ರದ ಹಲವು ರಹಸ್ಯಗಳು ಬಯಲಾದವು. 1920ರ ದಶಕದಲ್ಲಿ Frank E. Ross ಅವರು ಮೊದಲಬಾರಿಗೆ ಅತಿನೇರಳೆ ಕಿರಣಾವಲೋಕನ ಮಾಡಿದರು. ಈ ಅವಲೋಕನದಿಂದ ಹೊರಬಂದ ಛಾಯಾಚಿತ್ರಗಳು ನಸುಗೆಂಪು ಕಿರಣಾವಲೋಕನದಿಂದ ಮತ್ತು ಗೋಚರವಾಗುವ ಬೆಳಕಿನಿಂದ ತಯಾರಿಸಲಾದ ಚಿತ್ರಗಳಿಗಿಂತ ಬಹಳ ಹೆಚ್ಚು ವಿವರಗಳನ್ನು ಬಯಲುಮಾಡಿದವು. ಎತ್ತರದ ಮೋಡಗಳನ್ನು ಹೊಂದಿದ್ದ ದಟ್ಟವಾದ ಹಳದಿ ವಾಯುಮಂಡಲವೇ ಇದಕ್ಕೆ ಕಾರಣ ಎಂದು ಅವರು ಸೂಚಿಸಿದರು.[೨೮]

1900ರ ದಶಕದಲ್ಲಿ ಮಾಡಿದ ವರ್ಣಪಟಲ ಅವಲೋಕನೆಗಳಿಂದ ಶುಕ್ರದ ಅಕ್ಷೀಯ ಪರಿಭ್ರಮಣದ ಬಗ್ಗೆ ಮೊದಲ ಸುಳಿವುಗಳು ದೊರಕಿದವು. en:Vesto Slipherನು ಶುಕ್ರದ ಬೆಳಕಿನಲ್ಲಿ ಡಾಪ್ಲರ್ ಸ್ಥಳಾಂತರವನ್ನು ಮಾಪಿಸಲು ಯತ್ನಿಸಿದನು. ಆದರೆ, ಈ ಯತ್ನದಿಂದ, ಶುಕ್ರದ ಅಕ್ಷೀಯ ಪರಿಭ್ರಮಣವು ಗಮನಾರ್ಹವಾಗಿ ಕಂಡುಬರಲಿಲ್ಲ. ಇದರಿಂದ, ಶುಕ್ರವು ಮುಂಚೆ ತಿಳಿದುಕೊಂಡಿದ್ದಕ್ಕಿಂತ ಬಹಳ ನಿಧಾನವಾಗಿ ಪರಿಭ್ರಮಿಸುತ್ತಿದೆ ಎಂದು ಅವನು ಶಂಕಿಸಿದನು.[೨೯] 1950ರ ದಶಕದಲ್ಲಿ ಮಾಡಿದ ನಂತರದ ಸಂಶೋಧನೆಗಳು ಶುಕ್ರದ ಅಕ್ಷೀಯ ಪರಿಭ್ರಮಣವು ಪ್ರತಿಗಾಮಿಯೆಂದು ದೃಢಪಡಿಸಿದವು. 1960ರ ದಶಕದಲ್ಲಿ ಮೊದಲಬಾರಿಗೆ ನಡೆಸಲಾದ ರೆಡಾರ್ ಅವಲೋಕನದಿಂದ ಶುಕ್ರದ ಅಕ್ಷೀಯ ಪರಿಭ್ರಮಣ ಕಾಲದ ಪ್ರಮಾಣವು ಮೊದಲಬಾರಿಗೆ ತಿಳಿದುಬಂದಿತು. ಈ ಪ್ರಮಾಣವು ಇತ್ತೀಚೆಗೆ ಕಂಡುಹಿಡಿಯಲಾಗಿರುವ ಪರಿಭ್ರಮಣ ಕಾಲದ ಮೌಲ್ಯಕ್ಕೆ ಬಹಳ ಸಮೀಪದಲ್ಲಿದೆ.[೩೦]

1970ರ ದಶಕದಲ್ಲಿ ನಡೆಸಲಾದ ರೆಡಾರ್ ಅವಲೋಕನಗಳಿಂದ ಶುಕ್ರದ ಮೇಲ್ಮೈ ಬಗ್ಗೆ ಹಲವು ವಿವರಗಳು ಮೊದಲಬಾರಿಗೆ ತಿಳಿದುಬಂದವು. ಅರೆಸಿಬೊ ವೀಕ್ಷಣಾಲಯದಿಂದ ಶುಕ್ರದತ್ತ ಮಿಡಿಯುವ ರೇಡಿಯೋ ತರಂಗಗಳನ್ನು ಕಳಿಸಿ, ಅವುಗಳ ಪ್ರತಿಧ್ವನಿಗಳನ್ನು ಪರಿಶೀಲಿಸಿದಾಗ, ಬಹಳ ಹೆಚ್ಚು ಪ್ರತಿಫಲನಾಂಶವುಳ್ಳ ಎರಡು ವಲಯಗಳು ಪತ್ತೆಯಾದವು. ಈ ವಲಯಗಳಿಗೆ ಆಲ್ಫಾ ಮತ್ತು ಬೀಟಾ ಎಂದು ಹೆಸರಿಡಲಾಗಿದೆ. ಈ ಅವಲೋಕನೆಗಳು ಒಂದು ಕಾಂತಿಯುತದವಾದ ಪರ್ವತವಲಯವನ್ನೂ ಹೊರಗೆಡವಿದವು. ಇದನ್ನು ಮ್ಯಾಕ್ಸ್‌ವೆಲ್ ಪರ್ವತವೆಂದು ಕರೆಯಲಾಗುತ್ತದೆ.[೩೧] ಪ್ರಸ್ತುತದಲ್ಲಿ ಈ ವೈಶಿಷ್ಟ್ಯಗಳಿಗೆ ಮಾತ್ರ ಸ್ತ್ರೀ ನಾಮಗಳಿಲ್ಲ.

ಭೂಮಿಯಲ್ಲಿ ನಡೆಸಿದ ಅವಲೋಕನೆಗಳಿಂದ ಹೊರಬಂದ ಅತ್ತ್ಯುತ್ತಮ ರೆಡಾರ್ ಚಿತ್ರಗಳು 5ಕಿ.ಮೀ. ಅಥವಾ ಇನ್ನೂ ದೊಡ್ಡದಾದ ಮೇಲ್ಮೈ ವೈಶಿಷ್ಟ್ಯಗಳನ್ನು ಮಾತ್ರ ತೋರಿಸಿದವು. ಇದಕ್ಕಿಂತ ವಿವರವಾದ ಅನ್ವೇಷಣೆಯನ್ನು ಬಾಹ್ಯಾಕಾಶದಿಂದ ಮಾತ್ರ ಮಾಡಬಹುದಾಗಿತ್ತು.

ಶುಕ್ರದ ಅನ್ವೇಷಣೆ

ಬದಲಾಯಿಸಿ

ಮುಂಚಿನ ಪ್ರಯತ್ನಗಳು

ಬದಲಾಯಿಸಿ
 
೧೯೬೨ರಲ್ಲಿ ಉಡಾಯಿಸಲಾದ ಮ್ಯಾರಿನರ್ ೨

ಶುಕ್ರಕ್ಕೆ ಮೊದಲ ಮಾನವ ರಹಿತ ಗಗನ ಯಾತ್ರೆಯು (ವಾಸ್ತವದಲ್ಲಿ, ಇದು ಯಾವುದೇ ಗ್ರಹಕ್ಕೆ ಪ್ರಪ್ರಥಮ ಮಾನವ ರಹಿತ ಯಾತ್ರೆ) ಫೆಬ್ರವರಿ, ೧೨, ೨೦೦೬ರಂದು ವೆನೆರಾ ೧ ಶೋಧಕದ ಉಡಾವಣೆಯಿಂದ ಶುರುವಾಯಿತು. ಬಾಕಿಯಂತೆ ಬಹು ಯಶಸ್ವಿಯಾದ ಸೋವಿಯತ್ ವೆನೆರಾ ಕಾರ್ಯಕ್ರಮದ ಮೊದಲ ನೌಕೆಯಾದ ವೆನೆರಾ ೧ನ್ನು ಬುಧದತ್ತ ನೇರ ಪಥದಲ್ಲಿ ಉಡಾಯಿಸಲಾಯಿತು. ಆದರೆ, ಉಡಾವಣೆಯ ೭ ದಿನಗಳ ನಂತರ ನೌಕೆಯು ಭೂಮಿಯಿಂದ ೨.೮ ಕೋಟಿ ಮೈಲುಗಳ ದೂರದಲ್ಲಿದ್ದಾಗ, ಅದರ ಜೊತೆ ಸಂಪರ್ಕ ಕಡಿದುಹೋಯಿತು. ನೌಕೆಯು ಶುಕ್ರದಿಂದ ೧೦೦,೦೦೦ ಕಿ.ಮೀ. ಗಳ ಅಂತರದಲ್ಲಿ ಹಾದುಹೋಯಿತೆಂದು ಅಂದಾಜು ಮಾಡಲಾಗಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದ ಶುಕ್ರಾನ್ವೇಷಣೆಯು ಸಹ ಉಡಾವಣೆಯಲ್ಲೇ ಮ್ಯಾರಿನರ್ ೧ರ ನಷ್ಟದಿಂದ ಶುರುವಾಯಿತು. ಇದಕ್ಕಿಂತ ಹೆಚ್ಚು ಯಶಸ್ಸನ್ನು ಸಾಧಿಸಿದ ತದನಂತರದ ಮ್ಯಾರಿನರ್ ೨ ನೌಕೆಯು, ೧೦೯-ದಿನಗಳ ಯ ನಂತರ, ಶುಕ್ರದ ಮೇಲ್ಮೈನಿಂದ ೩೪,೮೩೩ ಕಿ.ಮೀ.ಗಳ ಮೇಲೆ ಹಾರಿಹೋಗಿ, ವಿಶ್ವದ ಮೊಟ್ಟಮೊದಲ ಅಂತರಗ್ರಹ ಯಾತ್ರೆಯಾಯಿತು. ಶುಕ್ರದ ಮೋಡ ಪದರಗಳು ತಣ್ಣಗಿದ್ದರೂ, ಅದರ ಮೇಲ್ಮೈಯು ಕಡೇಪಕ್ಷ ೪೨೫ಸೆ. ತಾಪಮಾನದಲ್ಲಿ ಅತಿ ಬಿಸಿಯಾಗಿದೆಯೆಂದು ಮ್ಯಾರಿನರ್ ೨ರ ಮೈಕ್ರೋತರಂಗ ಮತ್ತು ನಸುಗೆಂಪು ರೇಡಿಯೋಮಾಪಕಗಳು ಕಂಡುಹಿಡಿದವು. ಈ ವಿಷಯವು ಬೆಳಕಿಗೆ ಬಂದ ನಂತರ ಶುಕ್ರದ ಮೇಲ್ಮೈ ಮೇಲೆ ಯಾವುದೇ ಜೀವಿಗಳಿರಬಹುದೆಂಬ ಆಸೆಯನ್ನು ಪೂರ್ತಿಯಾಗಿ ಕೈ ಬಿಡಲಾಯಿತು. ಈ ನೌಕೆಯು ಗ್ರಹದ ದ್ರವ್ಯರಾಶಿ ಮತ್ತು ಖಗೋಳ ಮಾನದ ಸುಧಾರಿತ ಅಂದಾಜುಗಳನ್ನೂ ಪಡೆಯಿತು. ಆದರೆ, ಕಾಂತಕ್ಷೇತ್ರ ಅಥವಾ ವಿಕಿರಣ ಪಟ್ಟಿಯನ್ನು ಕಂಡುಹಿಡಿಯಲಿಲ್ಲ.[೩೨]

ವಾಯುಮಂಡಲಕ್ಕೆ ಪ್ರವೇಶ

ಬದಲಾಯಿಸಿ

ಮಾರ್ಚ್ ೧, ೧೯೬೬ರಂದು ವೆನೆರಾ ೩ ಶೋಧಕವು ಶುಕ್ರದ ಮೇಲೆ ಅಪ್ಪಳಿಸಿತು. ಈ ಶೋಧಕವು ಭೂಮಿಯಲ್ಲದೆ ಇನ್ನೊಂದು ಗ್ರಹದ ಮೇಲ್ಮೈಯನ್ನು ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಆದರೆ, ಶುಕ್ರದ ಬಗ್ಗೆ ಮಾಹಿತಿಯನ್ನು ಕಳುಹಿಸುವುದಕ್ಕೆ ಮುನ್ನವೇ ಅದರ ಸಂಪರ್ಕ ವ್ಯವಸ್ಥೆಯು ಕೆಟ್ಟುಹೋಯಿತು. ಇದರ ನಂತರದ ನೌಕೆಯಾದ ವೆನೆರಾ ೪ ಅಕ್ಟೋಬರ್ ೧೮, ೧೯೬೭ರಂದು ಯಶಸ್ವಿಯಾಗಿ ಶುಕ್ರದ ವಾಯುಮಂಡಲವನ್ನು ಪ್ರವೇಶಿಸಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಆರಂಭಿಸಿತು. ವಾಯುಮಂಡಲವು ೯೦-೯೫% ಇಂಗಾಲದ ಡೈ ಆಕ್ಸೈಡ್ ನಿಂದ ಕೂಡಿದ್ದು, ಸುಮಾರು ೫೦೦ಸೆ. ನಲ್ಲಿ ಮೇಲ್ಮೈ ತಾಪಮಾನವು ಮ್ಯಾರಿನರ್ ೨ ಮಾಪಿಸಿದ್ದಕ್ಕಿಂತ ಬಹಳ ಹೆಚ್ಚೆಂದು ವೆನೆರಾ ೪ ಕಂಡುಹಿಡಿಯಿತು. ಶುಕ್ರದ ವಾಯುಮಂಡಲವು, ವೆನೆರಾ ೪ನ್ನು ರೂಪಿಸಿದ ಅಭಿಯಂತರರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದಟ್ಟವಾಗಿತ್ತು. ಇದರಿಂದಾಗಿ ನಿರೀಕ್ಷೆಗಿಂತ ನಿಧಾನವಾಗಿ ಕೆಳಗಿಳಿದ ಶೋಧಕದ ವಿದ್ಯುತ್ಕೋಶವು ಬಹು ಬೇಗನೆ ನಿಶ್ಶಕ್ತವಾಯಿತು. ೯೩ ನಿಮಿಷಗಳವರೆಗೆ ಮಾಹಿತಿಯನ್ನು ಕಳುಹಿಸಿದ ನಂತರ, ವೆನೆರಾ ೪ರ ಕಟ್ಟ ಕೊನೆಯ ಒತ್ತಡ ಮಾಪನವು ೨೪.೯೬ಕಿ.ಮೀ. ಗಳ ಎತ್ತರದಲ್ಲಿ ೧೮-bar ಗಳನ್ನು ತೋರಿಸುತ್ತಿತ್ತು.

ಒಂದು ದಿನದ ನಂತರ (ಅಕ್ಟೋಬರ್ ೧೯, ೧೯೬೭ರಂದು) ಮ್ಯಾರಿನರ್ ೫ ಶೋಧಕವು ಶುಕ್ರವನ್ನು ತಲುಪಿ, ಅದರ ಮೋಡದ ಪದರದಿಂದ ೪,೦೦೦ ಕಿ.ಮೀ. ಗಳ ಅಂತರದಲ್ಲಿ ಹಾರಿಹೋಯಿತು. ಮಂಗಳದತ್ತ ಹೊರಟಿದ್ದ ಮ್ಯಾರಿನರ್ ೪ ವಿಫಲವಾದರೆ ಉಪಯೋಗಿಸಲೋಸುಗ ಮ್ಯಾರಿನರ್ ೫ನ್ನು ನಿರ್ಮಿಸಲಾಗಿತ್ತು. ಮ್ಯಾರಿನರ್ ೪ ಯಶಸ್ವಿಯಾಗಿದ್ದರಿಂದ, ಮ್ಯಾರಿನರ್ ೫ನ್ನು ಶುಕ್ರಕ್ಕೆ ಹೋಗಲು ಬದಲಾಯಿಸಲಾಯಿತು. ಮ್ಯಾರಿನರ್ ೨ ಹೊಂದಿದ್ದಕ್ಕಿಂತ ಹೆಚ್ಚು ಸೂಕ್ಷ್ಮಗ್ರಾಹಿಯಾದ ಉಪಕರಣಗಳು, ಮತ್ತು ಮುಖ್ಯವಾಗಿ, ಅದರ ರೇಡಿಯೋ ಮರೆಮಾಡುವಿಕೆ ಪ್ರಯೋಗಗಳು ಶುಕ್ರದ ವಾಯುಮಂಡಲದ ರಚನೆ, ಒತ್ತಡ ಮತ್ತು ಸಾಂದ್ರತೆಗಳ ಬಗ್ಗೆ ಮಾಹಿತಿಯನ್ನು ಕಳುಹಿಸಿದವು.[೩೩] ವೆನೆರಾ ೪ ಮತ್ತು ಮ್ಯಾರಿನರ್ ೫ರಿಂದ ಬಂದ ಮಾಹಿತಿಗಳನ್ನು ರಷ್ಯಾ-ಅಮೆರಿಕಾಗಳ ಸಂಯುಕ್ತ ತಂಡವೊಂದು ವಿಶ್ಲೇಷಿಸಿತು. ಇದು ಬಾಹ್ಯಾಕಾಶ ಯತ್ನಗಳಲ್ಲಿ ಬೇರೆ ಬೇರೆ ದೇಶಗಳ ನಡುವೆ ಸಹಕಾರದ ಒಂದು ಉದಾಹರಣೆಯಾಗಿದೆ.

ವೆನೆರಾ ೪ರಿಂದ ಪಾಠಗಳನ್ನು ಕಲಿತುಕೊಂಡ ಸೋವಿಯೆತ್ ಒಕ್ಕೂಟವು ಜನವರಿ ೧೯೬೯ರಲ್ಲಿ ೫ ದಿನಗಳ ಅಂತರದಲ್ಲಿ ವೆನೆರಾ ೫ ಮತ್ತು ವೆನೆರಾ ೬ ಅವಳಿ ಶೋಧಕಗಳನ್ನು ಹಾರಿಸಿತು. ಈ ಶೋಧಕಗಳು ಅದೇ ವರ್ಷದ ಮೇ ೧೬ ಮತ್ತು ೧೭ನೇ ತೇದಿಗಳಂದು ಶುಕ್ರವನ್ನು ತಲುಪಿದವು; ೨೫-ಭೂವಾಯುಮಂಡಲಗಳಷ್ಟು ಒತ್ತಡವನ್ನು ತಡೆದುಕೊಳ್ಳುವಂತೆ ಈ ಶೋಧಕಗಳನ್ನು ಬಲಪಡಿಸಲಾಗಿತ್ತು. ಹೆಚ್ಚು ವೇಗವಾಗಿ ಇಳಿಯಲು ಸಣ್ಣ ಗಾಳಿಕೊಡೆಗಳನ್ನು ಅಳವಡಿಸಲಾಗಿತ್ತು. ಶುಕ್ರದ ವಾಯುಮಂಡಲದ ಆಗಿನ ಮಾದರಿಗಳು ಅದರ ಮೇಲ್ಮೈಯಲ್ಲಿ ೨೫ ರಿಂದ ೭೫-ಭೂವಾಯುಮಂಡಲದಷ್ಟು ಒತ್ತಡವನ್ನು ಸೂಚಿಸಿದ್ದರಿಂದ, ಈ ಎರಡೂ ಶೋಧಕಗಳು ಮೇಲ್ಮೈಯನ್ನು ತಲುಪುತ್ತವೆಯೆಂಬ ನಿರೀಕ್ಷೆಯೇ ಇರಲಿಲ್ಲ. ಸುಮಾರು ೫೦ ನಿಮಿಷಗಳ ಕಾಲ ವಾಯುಮಂಡಲದ ಬಗ್ಗೆ ಮಾಹಿತಯನ್ನು ಕಳುಹಿಸಿದ ನಂತರ, ಇವೆರಡೂ ೨೦ ಕಿ.ಮೀ. ಎತ್ತರದಲ್ಲಿ ನಜ್ಜುಗುಜ್ಜಾಗಿ, ಶುಕ್ರದ ಕತ್ತಲ ಮೇಲ್ಮೈಯನ್ನು ಅಪ್ಪಳಿಸಿದವು.

ಮೇಲ್ಮೈ ಭೂವಿಜ್ಞಾನ

ಬದಲಾಯಿಸಿ

ಗ್ರಹದ ಮೇಲ್ಮೈನಿಂದ ಮಾಹಿತಿಯನ್ನು ಸಂಗ್ರಹಿಸುವ ಸಂಘಟಿತ ಪ್ರಯತ್ನವನ್ನು ಪ್ರತಿನಿಧಿಸಿದ ವೆನೆರಾ ೭ ನೌಕೆಯು ೧೮೦-bar ಒತ್ತಡವನ್ನು ತಡೆದುಕೊಳ್ಳುವಷ್ಟು ಶಕ್ತವಾದ, ಬಲಪಡಿಸಲಾದ ಅವರೋಹಣ ಘಟಕವನ್ನು ಹೊಂದಿತ್ತು. ೩೫-ನಿಮಿಷದ ವೇಗದ ಅವರೋಹಣಕ್ಕೆ ಸಹಾಯವಾಗುವಂತೆ ಅಸಾಮಾನ್ಯವಾದ ಗಾಳಿಕೊಡೆಯನ್ನು ಅಳವಡಿಸಲಾಗಿದ್ದ ಈ ಘಟಕವು ವಾಯುಮಂಡಲವನ್ನು ಪ್ರವೇಶಿಸಿವ ಮುನ್ನ ಅದನ್ನು ತಂಪುಮಾಡಲಾಯಿತು. ಘಟಕವು ಡಿಸೆಂಬರ್ ೧೫, ೧೯೭೦ರಂದು ವಾಯುಮಂಡಲವನ್ನು ಪ್ರವೇಶಿಸಿದಾಗ ಅದರ ಗಾಳಿಕೊಡೆಯು ಸ್ವಲ್ಪ ಹರಿದೊಹೋಗಿತ್ತೆಂದು ನಂಬಲಾಗಿದೆ. ಮೇಲ್ಮೈಯನ್ನು ವೇಗವಾಗಿ ಅಪಳಿಸಿದ ಶೋಧಕವು ೨೩ ನಿಮಿಷಗಳವರೆಗೆ ಶುಕ್ರದ ತಾಪಮಾನದ ಮಾಹಿತಿಯನ್ನು ಕಳುಹಿಸಿತು. ಇದು, ಬೇರೊಂದು ಗ್ರಹದ ಮೇಲ್ಮೈನಿಂದ ಬಂದ ಮೊದಲ ದೂರಮಾಪಿತ (telemetry) ಮಾಹಿತಿಯಾಗಿದೆ.

ವೆನೆರಾ ೮ ಮೇಲ್ಮೈನಿಂದ ೫೦ ನಿಮಿಷಗಳ ವರೆಗೆ ಮಾಹಿತಿಯನ್ನು ಕಳುಹಿಸುವುದರ ಮತ್ತು ವೆನೆರಾ ೯, ವೆನೆರಾ ೧೦ ಶೋಧಕಗಳು ಶುಕ್ರದ ಮೇಲ್ಮೈನ ಚಿತ್ರಗಳನ್ನು ಕಳುಹಿಸುವುದರ ಮೂಲಕ ವೆನೆರಾ ಕಾರ್ಯಕ್ರಮವು ಮುಂದುವರೆಯಿತು. ವೆನೆರಾ ೯ ಮತ್ತು ೧೦ರ ಎರಡು ಇಳಿದಾಣಗಳು ಬೇರೆ ಬೇರೆ ರೀತಿಯ ದೃಶ್ಯಗಳನ್ನು ತೋರಿದವು: ವೆನೆರಾ ೯, ೨೦ ಡಿಗ್ರಿ ಇಳಿಜಾರು ಮತ್ತು ೩೦-೪೦ಸೆ.ಮೀ. ದಪ್ಪವಿರುವ ಬಂಡೆಗಳಿಂದ ಕೂಡಿದೂಂದು ಜಾಗದಲ್ಲಿ ಇಳಿದಿತ್ತು; ವೆನೆರಾ ೧೦ ಕಪ್ಪುಶಿಲೆಯಂತಹ ಚಪ್ಪಡಿ ಕಲ್ಲುಗಳಿದ್ದ ಜಾಗವನ್ನು ತೋರಿಸಿತು.

 
ಪಯೊನೀರ್ ಶುಕ್ರ ಪರಿಭ್ರಮಕ

ಇದೇ ಸಮಯದಲ್ಲಿ, ಗುರುತ್ವ "ಉಯ್ಯಾಲೆ" ಪಥವನ್ನು ಹೊಂದಿ ಬುಧದತ್ತ ಹೊರಟಿದ್ದ ಮ್ಯಾರಿನರ್ ೧೦ ಶೋಧಕವು ಮಾರ್ಗಮಧ್ಯದಲ್ಲಿ ಶುಕ್ರದ ಬಳಿ ಹಾದುಹೋಯಿತು. ಫೆಬ್ರವರಿ ೫, ೧೯೭೪ರಂದು ಮ್ಯಾರಿನರ್ ೧೦ ಶುಕ್ರದ ೫೭೯೦ ಕಿ.ಮೀ.ಗಳ ಅಂತರದಲ್ಲಿ ಹಾದುಹೋದಾಗ, ಸುಮಾರು ೪,೦೦೦ ಚಿತ್ರಗಳನ್ನು ಕಳುಹಿಸಿತು. ಗೋಚರ ಬೆಳಕಿನಲ್ಲಿ ಬಹು ಸೌಮ್ಯವಾಗಿ ಕಂಡರೂ, ಅತಿನೇರಳೆ ಬೆಳಕಿನಲ್ಲಿ ನೋಡಿದಾಗ, ಭೂಮಿಯಿಂದ ಕಾಣದಿದ್ದ ಹಲವು ವಿವರಗಳು ಶುಕ್ರದ ಮೋಡದ ವಿವರಗಳು ಕಂಡುಬಂದವು.[೩೪]

ಅಮೆರಿಕಾದ ಪಯೊನೀರ್ ಶುಕ್ರ ಕಾರ್ಯಕ್ರಮವು ಎರಡು ಯಾತ್ರೆಗಳನ್ನು ಒಳಗೊಂಡಿತ್ತು.[೩೫] ಡಿಸೆಂಬರ್ ೪, ೧೯೭೮ರಂದು ಶುಕ್ರದ ಸುತ್ತ ಅಂಡಾಕಾರದ ಕಕ್ಷೆಯನ್ನು ಪ್ರವೇಶಿಸಿದ ಪಯೊನೀರ್ ಶುಕ್ರ ಪರಿಭ್ರಮಕವು ೧೩ ವರ್ಷಗಳ ಕಾಲ ಅಲ್ಲಿದ್ದು, ಶುಕ್ರಕ ವಾಯುಮಂಡಲವನ್ನು ಅಧ್ಯಯನ ಮಾಡಿದ್ದಲ್ಲದೆ, ರೆಡಾರ್ನಿಂದ ಶುಕ್ರದ ಮೇಲ್ಮೈನ ನಕ್ಷೆಯನ್ನು ತಯಾರಿಸಿತು. ಪಯೊನೀರ್ ಶುಕ್ರ ಬಹುಶೋಧಕವು ಒಟ್ಟು ೫ ಶೋಧಕಗಳನ್ನು ಇಳಿಸಿತು. ಡಿಸೆಂಬರ್ ೯, ೧೯೭೮ರಂದು ವಾಯುಮಂಡಲವನ್ನು ಪ್ರವೇಶಿಸಿದ ಈ ಶೋಧಕಗಳು ಅದರ ರಚನೆ, ಮಾರುತಗಳು ಮತ್ತು ಶಾಖ ಪ್ರವಾಹಗಳ ಬಗ್ಗೆ ಮಾಹಿತಿಯನ್ನು ಕಳುಹಿಸಿದವು.

ಚಿತ್ರ:Venera13Surface.jpg
ವೆನೆರಾ ೧೩ ತೆಗೆದ ಶುಕ್ರದ ಮೇಲ್ಮೈನ ಚಿತ್ರ

ಮುಂದಿನ ೪ ವರ್ಷಗಳಲ್ಲಿ ಇನ್ನೂ ೪ ಯಾತ್ರೆಗಳಾದವು. ವೆನೆರಾ ೧೧ ಮತ್ತು ವೆನೆರಾ ೧೨ ನೌಕೆಗಳು ಶುಕ್ರದ ವಿದ್ಯುನ್ಮಾರುತಗಳನ್ನು ಕಂಡುಹಿಡಿದವು. ೪ ದಿನಗಳ ಅಂತರದಲ್ಲಿ ತಲುಪಿದ ವೆನೆರಾ ೧೩ ಮತ್ತು ವೆನೆರಾ ೧೪ ನೌಕೆಗಳು ಶುಕ್ರದ ಮೇಲ್ಮೈನ ಮೊದಲ ಬಣ್ಣದ ಚಿತ್ರಗಳನ್ನು ಕಳುಹಿಸಿದವು. ಈ ೪ ಯಾತ್ರೆಗಳೂ ಮೇಲಿನ ವಾಯುಮಂಡಲದಲ್ಲಿ ತಡೆಗಾಗಿ ಗಾಳಿಕೊಡೆಗಳನ್ನು ಉಪಯೋಗಿಸಿದರೂ, ಸುಮಾರು ೫೦ ಕಿ.ಮೀ. ಎತ್ತರದಿಂದ ಕೊಡೆಗಳ ಸಹಾಯವಿಲ್ಲದೆಯೇ ಇಳಿದವು. ಶುಕ್ರದ ವಾಯುಮಂಡಲವು ಬಹಳ ದಟ್ಟವಾಗಿರುವುದರಿಂದ, ಗಾಳಿಯ ಘರ್ಷಣೆಯಿಂದಲೇ ಈ ನೌಕೆಗಳು ನಿಧಾನಗೊಂಡು, ಮೇಲ್ಮೈನ ಮೇಲೆ ನಿಧಾನವಾಗಿ ಇಳಿದವು. ನೌಕೆಯಲ್ಲಿದ್ದ ಕ್ಷ-ಕಿರಣ ಪ್ರತಿದೀಪಕ ವರ್ಣಪಟಲಮಾಪಕವನ್ನು (X-Ray fluorescence spectrometer) ಉಪಯೋಗಿಸಿ ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಿದ ವೆನೆರಾ ೧೩ ಮತ್ತು ೧೪ಗಳು ಒಂದು ಶೋಧಕವನ್ನುಪಯೋಗಿಸಿ ಮಣ್ಣಿನ ಸಂಕುಚಿತ್ವವನ್ನು ಮಾಪಿಸಲು ಯತ್ನಿಸಿದವು. ನಂತರದ ದಿನದಲ್ಲಿ, ವೆನೆರಾ ೧೪ ಹೊರಚಿಮ್ಮಿದ ಅದರ ಕ್ಯಾಮೆರಾ ಮಸೂರದ ಮುಚ್ಚಳವು ತಿರುಗಿ ಬಂದು ಅದಕ್ಕೇ ಹೊಡೆದದ್ದರಿಂದ, ಮಣ್ಣಿನ ಜೊತೆ ಅದರ ಸಂಪರ್ಕ ಕಡಿದುಹೋಯಿತು. ಸಂಶ್ಲಿಷ್ಟ ರಂಧ್ರ ರೆಡಾರನ್ನು (Synthetic aperture radar) ಬಳಸಿ ಶುಕ್ರದ ಮೇಲ್ಮೈ ನಕ್ಷೆಯನ್ನು ತಯಾರಿಸಲು ವೆನೆರಾ ೧೫ ಮತ್ತು (ವೆನೆರಾ ೧೬ಗಳನ್ನು ಕಕ್ಷೆಗೆ ಕಳುಹಿಸಿದ ನಂತರ ವೆನೆರಾ ಕಾರ್ಯಕ್ರಮವು ಸಮಾಪ್ತಿಯಾಯಿತು.

೧೯೮೫ರಲ್ಲಿ ಹ್ಯಾಲಿ ಧೂಮಕೇತುವು ಸೌರಮಂಡಲದ ಒಳಭಾಗದಲ್ಲಿ ಹಾದುಹೋದಾಗ, ಶುಕ್ರ ಕಾರ್ಯಕ್ರಮವನ್ನು ಇನ್ನೂ ಮುಗಿಸದ ಸೋವಿಯೆತ್ ಒಕ್ಕೂಟಕ್ಕೆ ಶುಕ್ರ ಮತ್ತು ಈ ಧೂಮಕೇತುವನ್ನು ಒಂದೇ ಯಾತ್ರೆಯಲ್ಲಿ ತಲುಪುವಂಥ ಅವಕಾಶವು ಒದಗಿಬಂತು. ಹ್ಯಾಲಿಗೆ ಹೋಗುವ ಮಾರ್ಗಮಧ್ಯದಲ್ಲಿ ೧೯೮೫ರ ಜೂನ್ ೧೧ ಮತ್ತು ೧೫ರಂದು ವೇಗಾ ಕಾರ್ಯಕ್ರಮದ ಎರಡು ನೌಕೆಗಳು ತಲಾ ಒಂದು ಶೋಧಕವನ್ನು ಶುಕ್ರದ ವಾಯುಮಂಡಲದತ್ತ ಬಿಟ್ಟವು. ವೆನೆರಾ-ಶೈಲಿಯ ಈ ಶೋಧಕಗಳಲ್ಲಿ ವೇಗಾ ೧ರ ಶೋಧಕವು ಭಾಗಶಃ ವಿಫಲವಾಯಿತು. ಈ ನೌಕೆಗಳು, ಬೆಲೂನಿನಿಂದ ಇಳಿಬಿದ್ದಿದ್ದ ಒಂದು ಯಂತ್ರಮಾನವನನ್ನು ವಾಯುಮಂಡಲದ ಮೇಲ್ಭಾಗದಲ್ಲಿ (ಸುಮಾರು ೫೩ ಕಿ.ಮೀ. ಎತ್ತರದಲ್ಲಿ) ಇಳಿಸಿದವು. ಈ ಎತ್ತರದಲ್ಲಿ ಶುಕ್ರದ ವಾಯು ಒತ್ತಡವು ಸುಮಾರು ಭೂಮಿಯ ಮೇಲಿರುವಷ್ಟೇ ಇರುತ್ತದೆ. ಸುಮಾರು ೪೮ ಘಂಟೆಗಳ ಕಾಲ ಕಾರ್ಯ ನಿರ್ವಹಿಸಿದ ಈ ಶೋಧಕಗಳು ಶುಕ್ರದ ವಾಯುಮಂಡಲವು ಮುಂಚೆ ತಿಳಿದಿದ್ದಕ್ಕಿಂತ ಹೆಚ್ಚು ಪ್ರಕ್ಷುಬ್ಧವಾಗಿದೆ ಎಂದೂ, ಮತ್ತು ವಾಯುಮಂಡಲವು ಪ್ರಬಲವಾದ ಸಂವಹನಾ ಮಾರುತಗಳಿಂದ (convection cells) ಕೂಡಿದೆಯೆಂದೂ ಕಂಡುಹಿಡಿದವು.[೩೬][೩೭]

ರೆಡಾರ್ ನಕ್ಷೆ

ಬದಲಾಯಿಸಿ
 
ಶುಕ್ರದ ಮೆಜೆಲನ್ ಸ್ಥಳವರ್ಣನಾ ನಕ್ಷೆ

ಅಮೆರಿಕಾ ಸಂಯುಕ್ತ ಸಂಸ್ಥಾನದ ಮೆಜೆಲನ್ ಶೋಧಕವನ್ನು ೪ ಮೇ ೧೯೮೯ರಂದು ಹಾರಿಸಲಾಯಿತು. ಈ ಯಾತ್ರೆಯು ರೆಡಾರ್‍ ಬಳಕೆಯಿಂದ ಶುಕ್ರದ ಮೇಲ್ಮೈ ನಕ್ಷೆಯನ್ನು ತಯಾರಿಸುವ ಉದ್ದೇಶವನ್ನು ಹೊಂದಿತ್ತು.[] ಇದು ೪ ವರ್ಷಗಳಲ್ಲಿ ತೆಗೆದ ಚಿತ್ರಗಳು ಮುಂಚಿನ ಚಿತ್ರಗಳಿಗಿಂತ ಬಹಳಷ್ಟು ಉತ್ತಮವಾಗಿದ್ದು, ಬೇರೆ ಗ್ರಹಗಳ ಗೋಚರ ಬೆಳಕಿನ ಚಿತ್ರಗಳಿಗೆ ಹೋಲಿಸುವಂತಿದ್ದವು. ಮೆಜೆಲನ್ ನೌಕೆಯು ಶುಕ್ರದ ೯೮% ಮೇಲ್ಮೈಯನ್ನು ರೆಡಾರ್ ನಿಂದ ಚಿತ್ರೀಕರಿಸಿ ೯೫% ಗುರುತ್ವ ವಲಯವನ್ನು ನಕ್ಷಿಸಿತು. ೧೯೯೪ರಲ್ಲಿ ಯಾತ್ರೆಯ ಅಂತಿಮದದಲ್ಲಿ, ಮೆಜೆಲನ್ ನೌಕೆಯನ್ನು ಉದ್ದೇಶಪೂರ್ವಕವಾಗಿ ಶುಕ್ರದ ವಾಯುಮಂಡಲದತ್ತ ಹಾರಿಸಿ ನಾಶಗೊಳಿಸಲಾಯಿತು. ವಾಯುಮಂಡಲದ ಸಾಂದ್ರತೆಯನ್ನು ಮಾಪಿಸುವ ಉದ್ದೇಶದಿಂದ ಈ ಕಾರ್ಯಾಚರಣೆಯು ನಡೆಯಿತು. ಇನ್ನೊಂದು ದಶಕದವರೆಗೆ ಶುಕ್ರಕ್ಕೆಂದೇ ಮುಡಿಪಾಗಿದ್ದ ಬೇರಾವುದೂ ಯಾತ್ರೆಗಳು ಇರಲಿಲ್ಲ. ಆದರೆ, ಸೌರಮಂಡಲದ ಹೊರ ಗ್ರಹಗಳತ್ತ ಹೋಗುವ ಮಾರ್ಗಮಧ್ಯದಲ್ಲಿ ಶುಕ್ರವನ್ನು ಗೆಲಿಲಿಯೊ ಮತ್ತು ಕ್ಯಾಸಿನಿ ಗಗನನೌಕೆಗಳು ಅವಲೋಕಿಸಿದವು.

ಸಧ್ಯದ ಮತ್ತು ಭವಿಷ್ಯದ ಯಾತ್ರೆಗಳು

ಬದಲಾಯಿಸಿ

ಏಪ್ರಿಲ್ ೧೧, ೨೦೦೬ರಂದು ವೀನಸ್ ಎಕ್ಸ್ಪ್ರೆಸ್ ಶೋಧಕವು ಯಶವಿಯಾಗಿ ಶುಕ್ರನ ಸುತ್ತ ಕಕ್ಷೆಯನ್ನು ಪ್ರವೇಶಿಸಿತು. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯಲ್ಲಿ ರೂಪಿತವಾಗಿ ನಿರ್ಮಾಣಗೊಂಡ ಈ ಶೋಧಕವನ್ನು ನವೆಂಬರ್ ೯, ೨೦೦೫ರಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯು ಹಾರಿಸಿತು. ಮುಂದಿನ ವರ್ಷದ ಏಪ್ರಿಲ್ ೧೧ರಂದು ಅದರ ಮುಖ್ಯ ಎಂಜಿನ್ನನ್ನು ಯಶಸ್ವಿಯಾಗಿ ಉರಿಸಿ ಗ್ರಹದ ಸುತ್ತ ಧ್ರುವ ಕಕ್ಷೆಗೆ ತಲುಪಿಸಲಾಯಿತು. ಗ್ರಹದ ವಾಯುಮಂಡಲ ಮತ್ತು ಮೋಡಗಳನ್ನು ವಿವರವಾಗಿ ಅಧ್ಯಯನ ಮಾಡುತ್ತಿರುವ ಶೋಧಕವು ಪ್ಲಾಸ್ಮಾ ಪರಿಸರ ಮತ್ತು ತಾಪಮಾನಗಳನ್ನು ನಕ್ಷಿಸುವ ಉದ್ದೇಶವನ್ನೂ ಹೊಂದಿದೆ. ಈ ಯಾತ್ರೆಯು ೫೦೦ ಭೂದಿನಗಳವರೆಗೆ (ಸುಮಾರು ೨ ಶುಕ್ರ ವರ್ಷಗಳು) ನಡೆಯುವಂತೆ ರೂಪಿಸಲಾಗಿದೆ.[೩೮] ವೀನಸ್ ಎಕ್ಸ್ಪ್ರೆಸ್ ನಿಂದ ಬರುತ್ತಿರುವ ಮೊದಲ ಮಾಹಿತಿಗಳಲ್ಲಿ, ಗ್ರಹದ ದಕ್ಷಿಣಧ್ರುವದಲ್ಲಿ ಒಂದು ದೊಡ್ಡ ಜೋಡಿ ಸುಳಿಯಿದೆ ಎಂಬುದೂ ಒಂದು.

ಜಪಾನ್‌ನ ವಾಂತರಿಕ್ಷ ಸಂಸ್ಥೆಯಾದ JAXAವು 2010ರಲ್ಲಿ PLANET-C ಎಂಬ ಹೆಸರಿನ ಶುಕ್ರ ಹವಾಮಾನ ಪರಿಭ್ರಮಕವನ್ನು ಉಡಾಯಿಸುವ ಯೋಜನೆಯನ್ನಿಟ್ಟುಕೊಂಡಿದೆ. ಬುಧ ಯಾತ್ರೆಗಳಾದ ಮೆಸೆಂಜರ್ ಮತ್ತು ಬೆಪಿಕೊಲಂಬೊಗಳು ಮಾರ್ಗಮಧ್ಯದಲ್ಲಿ ಶುಕ್ರದ ಸಮೀಪ ಹಾದುಹೋಗಲಿವೆ.

ಮಾನವ ಸಂಸ್ಕೃತಿಗಳಲ್ಲಿ ಶುಕ್ರ

ಬದಲಾಯಿಸಿ

ಐತಿಹಾಸಿಕ ಸಂಬಂಧಗಳು

ಬದಲಾಯಿಸಿ

ಆಗಸದಲ್ಲಿ ಅತಿ ಪ್ರಕಾಶಮಾನವಾದ ಕಾಯಗಳಲ್ಲೊಂದಾಗಿರುವುದರಿಂದ, ಶುಕ್ರವು ಇತಿಹಾಸಪೂರ್ವಕಾಲದಿಂದಲೂ ಪರಿಚಿತವಾಗಿದ್ದು, ಮಾನವ ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಕ್ರಿ.ಪೂ. ೧೬೦೦ರಲ್ಲೇ ಬ್ಯಾಬಿಲೋನ್ನ ಶಾಸನಗಳು ಶುಕ್ರವನ್ನು ಉಲ್ಲೇಖಿಸುತ್ತವೆ. ಬ್ಯಾಬಿಲೋನ್ ಸಂಸ್ಕೃತಿಯಲ್ಲಿ ಸ್ತ್ರೀಯ ಮೂರ್ತೀಕರಣವಾದ ಮತ್ತು ಪ್ರೇಮದ ದೇವತೆಯಾದ ಇಶ್ತಾರ್ಳ ಹೆಸರನ್ನು ಈ ಗ್ರಹಕ್ಕೆ ಇಟ್ಟರು. ಶುಕ್ರವನ್ನು ಎರಡು ಬೇರೆ ನಕ್ಷತ್ರಗಳೆಂದು ನಂಬಿದ್ದ ಪ್ರಾಚೀನ ಈಜಿಪ್ಟ್ನ ಜನರು ಉಷಾ ನಕ್ಷತ್ರವನ್ನು ಟಿಯೋಮೋಓತಿರಿ ಮತ್ತು ಸಂಧ್ಯಾ ನಕ್ಷತ್ರವನ್ನು ಉವಾಇತಿ ಎಂದು ಕರೆದರು. ಇದೇ ರೀತಿ, ಶುಕ್ರವು ಎರಡು ನಕ್ಷತ್ರಗಳೆಂದು ತಿಳಿದಿದ್ದ ಪ್ರಾಚೀನ ಗ್ರೀಕ್ನ ಜನರು ಉಷಾ ನಕ್ಷತ್ರವನ್ನು ಫಾಸ್ಫೊರಸ್ (ಅರ್ಥಾತ್: "ಬೆಳಕನ್ನು ತರುವವ") ಎಂದೂ, ಸಂಧ್ಯಾ ನಕ್ಷತ್ರವನ್ನು ಹೆಸ್ಪೊರಸ್ (ಅರ್ಥಾತ್: ಮುಸ್ಸಂಜೆಯ ನಕ್ಷತ್ರ) ವೆಂದೂ ಕರೆದರು. ಸ್ವಲ್ಪ ಸಮಯದ ನಂತರ ಇವೆರಡೂ ಒಂದೇ ಗ್ರಹವೆಂಬುದನ್ನು ಅರಿತುಕೊಂಡ ಗ್ರೀಕರು ಅದನ್ನು ತಮ್ಮ ಪ್ರೇಮದ ದೇವತೆಯಾದ ಆಫ್ರೊಡೈಟ್ಳ ಹೆಸರಿನಿಂದ ಕರೆದರು. ರೋಮನ್ನರು ಗ್ರಹಕ್ಕೆ ತಮ್ಮ ಪ್ರೇಮದ ದೇವತೆಯಾದ ವೀನಸ್ಳ ಹೆಸರನ್ನು ಇಟ್ಟರು.

ಯಹೂದಿಯರು ಇದನ್ನು ನೋಗ ("ಹೊಳೆತ"), ಅಯೆಲೆತ್-ಹ-ಶಖರ್ ("ಮುಂಜಾನೆಯ ಜಿಂಕೆ") ಮತ್ತು ಕೊಚವ್-ಹ-ಎರೆವ್ ("ಸಂಜೆಯ ನಕ್ಷತ್ರ") ಎಂದು ಕರೆಯುತ್ತಿದ್ದರು. ಶುಕ್ರದ ಚಲನೆಯ ಆಧಾರದ ಮೇಲೆ ಪಂಚಾಂಗವನ್ನು ಮಾಡಿದ ಮಾಯ ನಾಗರಿಕತೆಯಲ್ಲಿ ಈ ಗ್ರಹವು ಬಹಳ ಪ್ರಾಮುಖ್ಯತೆಯನ್ನು ಹೊಂದಿತ್ತು. ದೊಡ್ಡ ಕೆಲಸಕಾರ್ಯಗಳ ಮುನ್ನ ಗುಳಿಗ ಕಾಲವನ್ನು ನಿರ್ಧರಿಸಲು ಇವರು ಶುಕ್ರದ ಚಲನವಲನಗಳನ್ನು ನೋಡುತ್ತಿದ್ದರು. ಶುಕ್ರವನ್ನು ಕಿಲೇಕೆನ್ ಎಂದು ಕರೆದ ಮಸಾಯ್ ಜನರು ಗ್ರಹದ ಬಗ್ಗೆ ಅನಾಥ ಹುಡುಗವೆಂದು ಹೆಸರಿರುವ ಒಂದು ವಾಚ್ಯ ಪರಂಪರೆಯನ್ನು ಹೊಂದಿದ್ದಾರೆ. ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ಶುಕ್ರವು ಸ್ತ್ರೀತ್ವ ಮತ್ತು ಪ್ರೀತಿ/ಪ್ರೇಮಗಳ ಮೇಲೆ ಪ್ರಭಾವ ಮಾಡುತ್ತದೆ ಎನ್ನಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಶುಕ್ರವು ಸುಖ, ಸಂಪತ್ತು ಮತ್ತು ಆಕರ್ಷಣೆಯನ್ನು ತರುತ್ತದೆಯನ್ನಲಾಗಿದೆ. ಹಿಂದಿನ ಚೀನೀ ಜ್ಯೋತಿಷ್ಯರು ಶುಕ್ರವನ್ನು ತಾಯ್-ಪೇ (ಶ್ವೇತ ಸುಂದರಿ) ಎಂದು ಕರೆದರು. ಆಧುನಿಕ ಚೈನಾ, ಕೊರಿಯಾ, ಜಪಾನ್ ಮತ್ತು ವಿಯೆತ್ನಾಮ್ ದೇಶಗಳಲ್ಲಿ ಶುಕ್ರವನ್ನು ಪದಶಃ ಲೋಹ ನಕ್ಷತ್ರ ಎಂದು ಕರೆಯಲಾಗುತ್ತದೆ. ಈ ಹೆಸರು ಚೀನೀಯರ ಪಂಚಭೂತಗಳ ತತ್ವದ ಮೇಲೆ ಆಧಾರಿತವಾಗಿದೆ.

 

ಶುಕ್ರದ ಜ್ಯೋತಿಷ್ಯ ಚಿಹ್ನೆಯು ಜೀವಶಾಸ್ತ್ರದಲ್ಲಿ ಸ್ತ್ರೀಗೆ ಉಪಯೋಗಿಸುವ ಚಿಹ್ನೆಯೇ ಆಗಿದೆ. ಈ ಚಿಹ್ನೆಯು ಒಂದು ವೃತ್ತಾಕಾರ ಮತ್ತು ಅದರ ಕೆಳಗೆ ಒಂದು ಶಿಲುಬೆಯಾಕಾರವನ್ನು ಹೊಂದಿದ್ದು, ವೀನಸ್ ದೇವತೆಯ ಕೈಗನ್ನಡಿಯನ್ನು ಸೂಚಿಸುತ್ತದೆ. ಪ್ರಾಚೀನ ರಸವಿದ್ಯೆಯಲ್ಲಿ ಈ ಚಿಹ್ನೆಯು ತಾಮ್ರವನ್ನು ಸೂಚಿಸುತ್ತಿತ್ತು.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Nimmo, F. (2002), Crustal analysis of Venus from Magellan satellite observations at Atalanta Planitia, Beta Regio, and Thetis Regio, Geology, v. 30, p. 987-990
  2. Kaufmann W.J. (೧೯೯೪), ಬ್ರಹ್ಮಾಂಡ, W.H. Freeman, New York, ಪುಟ. ೨೦೪
  3. ೩.೦ ೩.೧ ೩.೨ Frankel C. (೧೯೯೬), ಸೌರಮಂಡದ ಜ್ವಾಲಾಮುಖಿಗಳು, Cambridge University Press, Cambridge, New York
  4. Batson R.M., Russell J.F. (1991), ಶುಕ್ರದ ಮೇಲೆ ಹೊಸದಾಗಿ ಕಂಡುಹಿಡಿಯಲಾದ ವೈಶಿಷ್ಟ್ಯಗಳ ನಾಮಕರಣ, Abstracts of the Lunar and Planetary Science Conference, v. 22, ಪುಟ. 65
  5. ೫.೦ ೫.೧ Young C. (Editor) (ಆಗಸ್ಟ್ ೧೯೯೦). ಮೆಜೆಲನ್ ಶುಕ್ರಾನ್ವೇಷಕದ ಕೈಪಿಡಿ (JPL Publication 90-24 ed.). California: Jet Propulsion Laboratory. {{cite book}}: |last= has generic name (help); Cite has empty unknown parameter: |coauthors= (help)CS1 maint: year (link)
  6. Strom R.G., Schaber G.G., Dawsow D.D. (1995), The global resurfacing of Venus, Journal of Geophysical Research, vol. 99, p. 10,899-10,926
  7. Herrick R.R., Phillips R.J. (1993), Effects of the Venusian atmosphere on incoming meteoroids and the impact crater population, Icarus, v. 112, p. 253-281
  8. Kasting J.F. (1988), ತೇವವಾದ ಹರಿತ್‌ಗೃಹ ವಾಯುಮಂಡಲಗಳು ಮತ್ತು ಭೂಮಿ, ಶುಕ್ರಗಳ ವಿಕಸನ, Icarus, ಸಂಪುಟ. ೭೪, ಪುಟ. ೪೭೨-೪೯೪
  9. Moshkin B.E., Ekonomov A.P., Golovin Iu.M. (1979), ಶುಕ್ರದ ಮೇಲ್ಮೈ ಧೂಳು, Kosmicheskie Issledovaniia (Cosmic Research), ಸಂಪುಟ. ೧೭, ಪುಟ.೨೮೦-೨೮೫
  10. Krasnopolsky V.A., Parshev V.A. (೧೯೮೧), ಶುಕ್ರದ ವಾಯುಮಂಡಲದ ರಸಾಯನಿಕ ರಚನೆ, Nature, ಸಂಪುಟ. 292, ಪುಟ. ೬೧೦-೬೧೩
  11. Rossow W.B., del Genio A.D., Eichler T. (1990), Cloud-tracked winds from Pioneer Venus OCPP images, Journal of the Atmospheric Sciences, v. 47, p. 2053-2084
  12. Kivelson G. M., Russell, C. T. ಅಂತರಿಕ್ಷ ಭೌತಶಾಸ್ತ್ರ: ಒಂದು ಪರಿಚಯ, Cambridge University Press, 1995.
  13. Luhmann J. G., Russell C. T. ಶುಕ್ರ: ಕಾಂತಕ್ಷೇತ್ರ ಮತ್ತು ಕಾಂತಗೋಳ Archived 2010-07-14 ವೇಬ್ಯಾಕ್ ಮೆಷಿನ್ ನಲ್ಲಿ. in Encyclopedia of Planetary Sciences, ed. J. H. Shirley and R. W. Fainbridge,905-907, Chapman and Hall, New York, 1997.
  14. Stevenson, D. J., (2003). ಗ್ರಹಗಳ ಕಾಂತಕ್ಷೇತ್ರಗಳು, Earth and Planetary Science Letters, 208, 1-11.
  15. "ಆರ್ಕೈವ್ ನಕಲು". Archived from the original on 2011-08-21. Retrieved 2006-12-19.
  16. Correia A.C.M., Laskar J., de Surgy O.N. (2003), Long-term evolution of the spin of Venus: I. theory, Icarus, v.163, p.1-23; preprint
  17. Correia A.C.M., Laskar J. (2003), Long-term evolution of the spin of Venus: II. numerical simulations, Icarus, v.163, p.24-45; preprint
  18. Gold T., Soter S. (1969), Atmospheric tides and the resonant rotation of Venus, Icarus, v. 11, p 356-366
  19. Mikkola S., Brasser R., Wiegert P., Innanen K. Asteroid 2002 VE68, a quasi-satellite of Venus, Monthly Notices of the Royal Astronomical Society, Vol 351 p L63. Jul 2004
  20. SCIENTIFIC AMERICAN.com, October 10, 2006, ಜೋಡಿ ಅಪ್ಪಳಿಕೆಗಳು ಶುಕ್ರವು ಉಪಗ್ರಹ ರಹಿತವಾಗಿರುವುದನ್ನು ವಿವರಿಸಬಹುದು - ಜಾರ್ಜ್ ಮಸರ್; [೧]
  21. SkyTonight.com, October 10, 2006, Why Doesn't Venus Have a Moon? by David Tytell; [೨] Archived 2006-10-19 ವೇಬ್ಯಾಕ್ ಮೆಷಿನ್ ನಲ್ಲಿ.
  22. Aerospaceweb.org, ಚಂದ್ರನ ಚಲನೆ ಮತ್ತು ಉಬ್ಬರವಿಳಿತಗಳು; [೩]
  23. Krystek, Lee. "Natural Identified Flying Objects". The Unnatural Museum. Retrieved 2006-06-20.
  24. Baum, R. M. (2000), The enigmatic ashen light of Venus: an overview, Journal of the British Astronomical Association, v.110, p.325
  25. "Galileo: the Telescope & the Laws of Dynamics". Astronomy 161; The Solar System. Dept. Physics & Astronomy, University of Tennessee. Retrieved 2006-06-20.
  26. Russell H.N. (1899). "The Atmosphere of Venus". Astrophysical Journal. 9: 284.
  27. ಶುಕ್ರದ ಪರಿಭ್ರಮಣೆ
  28. Ross F.E. (1928). "Photographs of Venus". Astrophysical Journal. 68: 57. doi:10.1086/143130. ISSN 0004-637X.
  29. Slipher V.M. (1903). "A Spectrographic Investigation of the Rotation Velocity of Venus". Astronomische Nachrichten. 163: 35.
  30. Goldstein R.M., Carpenter R.L. (1963). "Rotation of Venus: Period Estimated from Radar Measurements". Science. 139: 910–911. doi:10.1126/science.139.3558.910.
  31. Campbell D.B., Dyce R.B., Pettengill G.H. (1976)). "New radar image of Venus". Science. 193: 1123. doi:10.1126/science.193.4258.1123. {{cite journal}}: Check date values in: |year= (help)CS1 maint: multiple names: authors list (link) CS1 maint: year (link)
  32. Jet Propulsion Laboratory. "Mariner-Venus 1962". {{cite journal}}: Cite journal requires |journal= (help)
  33. Eshleman V, Fjeldbo G (1969). "The atmosphere of Venus as studied with the Mariner 5 dual radio-frequency occultation experiment" (PDF). SU-SEL-69-003. NASA. {{cite journal}}: Cite journal requires |journal= (help)
  34. Dunne, J & Burgess E (1978). "ಮ್ಯಾರಿನರ್ ೧೦ರ ಯಾತ್ರೆ" (PDF). SP-424. NASA. {{cite journal}}: Cite journal requires |journal= (help)
  35. Colin L, Hall C (1977). "ಪಯೊನೀರ್ ಶುಕ್ರ ಕಾರ್ಯಕ್ರಮ" (PDF). Space Science Reviews. 20. doi:10.1007/BF02186467.
  36. Linkin V, Blamont J, Preston R (1985). "ವೇಗಾ ಶುಕ್ರ ಬೆಲೂನು ಪ್ರಯೋಗ". Bulletin of the American Astronomical Society. 17: 722.{{cite journal}}: CS1 maint: multiple names: authors list (link)
  37. Sagdeev, R. Z.; Linkin, V. M.; Blamont, J. E.; Preston, R. A. (1986). "ವೇಗಾ ಶುಕ್ರ ಬೆಲೂನು ಪ್ರಯೋಗ". Science. 231: 1407–1408. doi:10.1126/science.231.4744.1407.{{cite journal}}: CS1 maint: multiple names: authors list (link)
  38. Venus Express


ಬಾಹ್ಯ ಸಂಪರ್ಕಗಳು

ಬದಲಾಯಿಸಿ


"https://kn.wikipedia.org/w/index.php?title=ಶುಕ್ರ&oldid=1264878" ಇಂದ ಪಡೆಯಲ್ಪಟ್ಟಿದೆ