ಒಹಾಯೊ: ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ಉ.ಅ, 380 27' ನಿಂದ 410 57' ವರೆಗೂ ಪ.ರೇ. 800 34' ನಿಂದ 840 49' ವರೆಗೂ ಇರುವ ಇದರ ಉತ್ತರದಲ್ಲಿ ಮಿಷಿಗನ್ ಮತ್ತು ಈರಿ ಸರೋವರವೂ ಪುರ್ವದಲ್ಲಿ ಪೆನ್ಸಿಲ್ವೇನಿಯ ಮತ್ತು ಒಹಾಯೊ ನದಿಯೂ[೧]ಪಶ್ಚಿಮದಲ್ಲಿ ಇಂಡಿಯಾನವೂ ಇವೆ. ಇದರ ದಕ್ಷಿಣದ ಅಂಚಿನ ಉದ್ದಕ್ಕೂ ಒಹಾಯೊ ನದಿಯೇ ಗಡಿರೇಖೆಯಂತೆ ಹರಿಯುತ್ತದೆ. ಈ ನದಿಯಿಂದಾಚೆಗೆ ಹಬ್ಬಿರುವ ರಾಜ್ಯಗಳು ಪಶ್ಚಿಮ ವರ್ಜಿನಿಯ ಮತ್ತು ಕೆಂಟಕಿ. ಇದು ಹೆಚ್ಚು ಕಡಿಮೆ ಚೌಕಾಕಾರ, ವಿಸ್ತೀರ್ಣದಲ್ಲಿ ಇದು ಸಂಯುಕ್ತಸಂಸ್ಥಾನದಲ್ಲಿ 35ನೆಯ ರಾಜ್ಯ. (1.15998 ಚಕಿಮೀ) ಆದರೆ ಜನಸಂಖ್ಯೆಯಲ್ಲಿ ಇದಕ್ಕೆ ಐದನೆಯ ಸ್ಥಾನ (11,570,808 [2013]) ರಾಜಧಾನಿ ಕೊಲಂಬಸ್. (ಸಿ.ಎಂ.)

The Ohio coast of Lake Erie.

ಮೇಲ್ಮೈಲಕ್ಷಣ ಬದಲಾಯಿಸಿ

ಭೌಗೋಳಿಕವಾಗಿ ಒಹಾಯೊ ರಾಜ್ಯವನ್ನು ಮೂರು ಮುಖ್ಯ ಪ್ರದೇಶಗಳಾಗಿ ವಿಂಗಡಿಸಬಹುದು; 1 ಸರೋವರ ಸಮೀಪದ ಬಯಲು; 2 ಮಧ್ಯದ ತಗ್ಗು ನೆಲ; ಮತ್ತು 3 ಅಲೆಘನಿ ಪ್ರಸ್ಥಭೂಮಿ. ಈ ಮೂರು ಪ್ರದೇಶಗಳೂ ಕೀವ್ಲೆಂಡ್ ಬಳಿಯಲ್ಲಿ ಕೂಡುತ್ತವೆ. ಇಡೀ ರಾಜ್ಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 850ದಿ. (ಅತ್ಯಂತ ಎತ್ತರದ ನೆಲ 1550ಶಿ ಅತಿ ತಗ್ಗಿನ ಪ್ರದೇಶ 433ದಿ) ಒಹಾಯೊವಿನ ನೀರ ನೆತ್ತಿ (ವಾಟರ್ಷೆಡ್) ಈ ರಾಜ್ಯದ ಪಶ್ಚಿಮದ ಅಂಚಿನ ನಡುವಿನಿಂದ ಆರಂಭವಾಗಿ ಈಶಾನ್ಯದ ಮೂಲೆಯವರೆಗೆ ಹೆಂಗಸಿನ ಬೈತಲೆಯಂತೆ ಸಾಗಿದೆ. ನೆತ್ತಿಯ ಉತ್ತರಪಾಶರ್ವ್‌ದ ನದಿಗಳು ಹರಿಯುವುದು ಉತ್ತರಾಭಿಮುಖವಾಗಿ. ಅವು ಸಣ್ಣ; ಅಂಕುಡೊಂಕು. ದಕ್ಷಿಣಕ್ಕೆ ಹರಿಯುವ ನದಿಗಳು ಹೆಚ್ಚು ಉದ್ದ. ರಾಜ್ಯದ ಶೇ. 70ರಷ್ಟು ನೆಲದ ನೀರನ್ನು ಈ ನದಿಗಳು ಸಾಗಿಸುತ್ತವೆ. ಒಹಾಯೊ ನದಿ ಈ ರಾಜ್ಯಕ್ಕೆ ಸೇರಿದ್ದಲ್ಲ. ಒಹಾಯೊ ಮತ್ತು ಇತರ ನದಿಗಳು ಕೆಲವೇಳೆ ದಡಮೀರಿ ಹರಿದು ಅನಾಹುತ ಮಾಡುವುದುಂಟು. 1913ರಲ್ಲಿ ಸಂಭವಿಸಿದ ಪ್ರವಾಹ ಭೀಕರವಾದದ್ದು.[೨] ಪ್ರವಾಹಗಳನ್ನು ನಿಯಂತ್ರಿಸುವ ಉದ್ದೇಶದಿಂದ ನದಿಗಳ ಮೇಲ್ಭಾಗಗಳಲ್ಲಿ ಕಟ್ಟೆಗಳನ್ನು ಕಟ್ಟಲು 1914ರಲ್ಲಿ ಸೂಕ್ತ ಕಾಯಿದೆ ಮಾಡಲಾಯಿತು. ಸಂಯುಕ್ತಸಂಸ್ಥಾನದಲ್ಲಿ ಈ ಬಗೆಯ ಕ್ರಮ ಇದೇ ಪ್ರಥಮ, ಒಹಾಯೊ ನದಿಗೆ ಅಡ್ಡಲಾಗಿ ಸಂಯುಕ್ತ ಸಂಸ್ಥಾನ ಸರ್ಕಾರ ನಿರ್ಮಿಸಿರುವ 19 ಕಟ್ಟೆಗಳಿಂದಾಗಿ ಈ ನದಿಯ ಹಾವಳಿ ಬಹಳ ಮಟ್ಟಿಗೆ ಕಡಿಮೆಯಾಗಿದೆ.

ವಾಯುಗುಣ ಬದಲಾಯಿಸಿ

ಒಹಾಯೊವಿನ ಸರಾಸರಿ ವಾರ್ಷಿಕ ಉಷ್ಣತೆ 51.20 ಫ್ಯಾ. (ಉತ್ತರದಲ್ಲಿ 490 ಫ್ಯಾ. ಮತ್ತು ದಕ್ಷಿಣದಲ್ಲಿ 540 ಫ್ಯಾ) ಬೇಸಗೆಯ ಸರಾಸರಿ ಉಷ್ಣತೆ 71.60 ಫ್ಯಾ,; ಚಳಿಗಾಲದಲ್ಲಿ 29.80 ಫ್ಯಾ. ವರ್ಷವೆಲ್ಲ ಮಳೆಯುಂಟು. ಆದರೆ ಏಪ್ರಿಲ್ ಆದಿಯಿಂದ ಸೆಪ್ಟೆಂಬರ್ ಅಂತ್ಯದ ವರೆಗಿನ ಆರು ತಿಂಗಳುಗಳಲ್ಲಿ (ಸರಾಸರಿ 21') ಉಳಿದ ಆರು ತಿಂಗಳುಗಳಲ್ಲಿ ಆಗುವುದಕ್ಕಿಂತ ಸ್ವಲ್ಪ (4") ಹೆಚ್ಚು. ಕೊರೆಯುವ ಮಂಜು ಬೀಳದ ದಿವಸಗಳ ಸಂಖ್ಯೆಯ ಸರಾಸರಿ: ಉತ್ತರದ ತುದಿಯಲ್ಲಿ 140, ಆದರೆ ದಕ್ಷಿಣದ ಅಂಚಿನಲ್ಲಿ 180.

ಸ್ವಾಭಾವಿಕ ಸಸ್ಯ, ಕೃಷಿ, ಖನಿಜ, ಕೈಗಾರಿಕೆ ಬದಲಾಯಿಸಿ

ಒಹಾಯೊವಿನ ಪುರ್ವದಲ್ಲಿ ಚೆಸ್ನಟ್, ಚೆಸ್ನಟ್ ಓಕ್ ಮತ್ತು ಎಲ್ಲೊ ಪಾಪ್ಲರ್ಗಳಿಂದ ಕೂಡಿದ ಕಾಡುಗಳೂ ಪಶ್ಚಿಮಾರ್ಧದಲ್ಲಿ ಓಕ್ ಮತ್ತು ಹಿಕರಿಗಳ ಕಾಡುಗಳೂ ಇದ್ದುವು. ಬೆಟ್ಟಗುಡ್ಡಗಳಿಲ್ಲದ ಫಲವತ್ತಾದ ನೆಲದ ಕಾಡು ಕಡಿದು ಬೇಸಾಯ ಮಾಡಲಾಗುತ್ತಿದೆ. ಪುರ್ವದ ಬೆಟ್ಟಗಾಡುಗಳ ಬೆಲೆಬಾಳುವ ಮರಗಳನ್ನು ಕಡಿದಿರುವುದರಿಂದ ಕಡಿಮೆ ಫಲವತ್ತಿನ ಈ ನೆಲಗಳು ಹಾಗೆಯೇ ಉಳಿದಿವೆ. ಇವುಗಳಲ್ಲಿ ಸ್ವಲ್ಪ ಭಾಗ ಮೇವು ನೆಲ. ಇಲ್ಲಿಯ ಮುಖ್ಯ ಬೆಳೆಗಳು. ಮುಸುಕಿನ ಜೋಳ ಮತ್ತು ಗೋದಿ, ಒಹಾಯೊವಿನ ಕೆಲವು ಭಾಗಗಳು ಆಲೂಗೆಡ್ಡೆಯನ್ನೂ ಇನ್ನು ಕೆಲವು ಸಕ್ಕರೆ ಬೀಟನ್ನೂ ಮತ್ತೆ ಕೆಲವು ಹಣ್ಣುಗಳನ್ನೂ ವಿಶೇಷವಾಗಿ ಬೆಳೆಯುತ್ತವೆ, ಹೈನು ಇನ್ನೊಂದು ಮುಖ್ಯ ಉತ್ಪನ್ನ, ಭೂಸವೆತ ಇಲ್ಲಿಯ ಒಂದು ಸಮಸ್ಯೆ.

ರಾಜ್ಯದಲ್ಲಿ ಖನಿಜಸಂಪತ್ತು ಹೇರಳವಾಗಿದೆ. ಇದರಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನಿಸರ್ಗ ಅನಿಲ ಮುಖ್ಯವಾದವು. ಸುಣ್ಣಕಲ್ಲು ಮತ್ತು ಉಪ್ಪು ದೊರಕುತ್ತವೆ.

ಒಹಾಯೊ ಅಮೆರಿಕದ ಮುಖ್ಯ ಕೈಗಾರಿಕಾ ರಾಜ್ಯಗಳಲ್ಲೊಂದು. ಇದಕ್ಕೆ ರಾಜ್ಯದಲ್ಲಿ ದೊರಕುವ ಕಲ್ಲಿದ್ದಲು, ಎಣ್ಣೆ ಮತ್ತು ಅನಿಲ ಮುಖ್ಯ ಕಾರಣ. ಸುಪೀರಿಯರ್ ಸರೋವರಪ್ರದೇಶದಿಂದ ಕಬ್ಬಿಣದ ಅದುರನ್ನು ಇಲ್ಲಿಗೆ ಸುಲಭವಾಗಿ ತರಿಸಿಕೊಳ್ಳಬಹುದಾಗಿದೆ. ಕಲ್ಲಿದ್ದಲ ಕಿಟ್ಟ, ಬೀಡುಕಬ್ಬಿಣ ಮತ್ತು ಉಕ್ಕು ವಸ್ತುಗಳು ಹೆಚ್ಚಾಗಿ ತಯಾರಾಗುತ್ತವೆ. ನಿಸರ್ಗ ಅನಿಲ ಧಾರಾಳವಾಗಿ ಸಿಗುವುದರಿಂದ ಹಲವಾರು ಕಡೆಗಳಲ್ಲಿ (ಉದಾ: ಜ್ಯಾóನ್ಸ್óವಿಲ್) ಗಾಜು ಮತ್ತು ಮೃತ್ಪಾತ್ರ ಕೈಗಾರಿಕೆಗಳು ಬೆಳೆದಿವೆ, ತೈಲ ಪರಿಷ್ಕರಣ ಇನ್ನೊಂದು ಮುಖ್ಯ ಕೈಗಾರಿಕೆ. ಸಂಚಾರಮಾರ್ಗ, ಜನಸಂಖ್ಯೆ, ಶಿಕ್ಷಣ: ರಾಜ್ಯದ ಸಂಚಾರ ಸೌಲಭ್ಯ ಚೆನ್ನಾಗಿದೆ. ನಿಸರ್ಗದತ್ತವಾದ ಜಲಮಾರ್ಗಗಳೊಂದಿಗೆ (ಉದಾ: ಒಹಾಯೊ ನದಿ: 688 ಕಿಮೀ, ಸರೋವರ 368 ಕಿಮೀ) ರಸ್ತೆ ಮತ್ತು ರೈಲುಮಾರ್ಗಗಳನ್ನು ಸಮರ್ಪಕವಾಗಿ ಹೊಂದಿಸಲಾಗಿದೆ. ಅಮೆರಿಕ ಸಂಯುಕ್ತಸಂಸ್ಥಾನದ ಜನಭರಿತ ಈಶಾನ್ಯಭಾಗಕ್ಕೆ ಈ ರಾಜ್ಯ ಹತ್ತಿರದಲ್ಲಿರುವುದು ಇನ್ನೊಂದು ಅನುಕೂಲ. ಈ ರಾಜ್ಯದ ವ್ಯಾಪಾರ ವರ್ಧಿಸಲು ಇವೆಲ್ಲ ಕಾರಣಗಳು.

ರಾಜ್ಯದಲ್ಲಿಯ ಜನರ ಸಂಖ್ಯೆಯಲ್ಲಿ 70% ನಗರವಾಸಿಗಳು. ನೀಗ್ರೋಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ರಾಜ್ಯದಲ್ಲಿ ಕಾಲೇಜುಗಳೂ ವಿಶ್ವವಿದ್ಯಾನಿಲಯಗಳೂ ಹೇರಳವಾಗಿದೆ. ವಿಶ್ವವಿದ್ಯಾನಿಲಯಗಳೇ ಐವತ್ತಕ್ಕೂ ಹೆಚ್ಚಾಗಿವೆ. ಒಹಾಯೊ ರಾಜ್ಯ ವಿಶ್ವವಿದ್ಯಾನಿಲಯ (ಕೊಲಂಬಸ್) ಇಲ್ಲಿಯ ಮುಖ್ಯ ವಿಶ್ವವಿದ್ಯಾನಿಲಯಗಳಲ್ಲೊಂದು, ಒಹಾಯೊ ವಿಶ್ವವಿದ್ಯಾನಿಲಯ (ಅಥೆನ್ಸ್‌), ಮಿಯಾಮಿ ವಿಶ್ವವಿದ್ಯಾನಿಲಯ (ಆಕ್ಸ್‌ಫರ್ಡ್), ಕೆಂಟ್ ರಾಜ್ಯ ವಿಶ್ವವಿದ್ಯಾನಿಲಯ, ಬೌಲಿಂಗ್ ಗ್ರೀನ್ ಸ್ಟೇಟ್ ವಿಶ್ವವಿದ್ಯಾನಿಲಯ-ಇವು ಇತರ ಕೆಲವು ಪ್ರಸಿದ್ಧ ಹೆಸರುಗಳು.

ಒಹಾಯೊ ರಾಜ್ಯದ ಮುಖ್ಯ ನಗರಗಳು ಬದಲಾಯಿಸಿ

ಇವು (2010ರಲ್ಲಿದ್ದಂತೆ ಇವುಗಳ ಜನಸಂಖ್ಯೆಗಳನ್ನು ಆವರಣಗಳೊಳಗೆ ಕೊಟ್ಟಿದೆ); ಕ್ಲೀವ್ಲೆಂಡ್ (396,815), ಸಿನ್ಸಿನ್ಯಾಟಿ (296,943), ಕೊಲಂಬಸ್ (787,033), ಟೊಲೀಡೋ (287,208), ಆಕ್ರನ್ (199,110). ಡೇಟನ್ (141,527), ಯಂಗ್ಸ್‌ಟೌನ್ (66,982), ಕ್ಯಾಂಟನ್ (73,007), ಸ್ಪ್ರಿಂಗ್ಫೀಲ್ಡ್‌ (60,608), ಲೇಕ್ವುಡ್ (52,131). ಹ್ಯಾಮಿಲ್ಟನ್ (62,477), ರಾಜಧಾನಿ ಕೊಲಂಬಸ್.

ಚರಿತ್ರೆ ಬದಲಾಯಿಸಿ

ಈಗ ಒಹಾಯೊ ಎನಿಸಿಕೊಂಡಿರುವ ಪ್ರದೇಶದಲ್ಲಿ ಇತಿಹಾಸಪುರ್ವ ಕಾಲದಲ್ಲೇ ಜನ ಇದ್ದರೆಂಬುದರ ಕುರುಹುಗಳು ಸೈಯೋಟೋ ಮತ್ತು ಮೈಯಾಮಿ ಕಣಿವೆಗಳಲ್ಲಿರುವ ಅನೇಕ ಮಣ್ಣುಗುಪ್ಪೆಗಳಡಿಯಲ್ಲಿ ದೊರಕಿವೆ. ಈ ಗುಪ್ಪೆಗಳಲ್ಲಿ ಸಮಾಧಿಗಳೇ ಹೆಚ್ಚು. ಇಲ್ಲಿ ಮೂರು ಸಂಸ್ಕೃತಿಗಳನ್ನು ಗುರುತಿಸಬಹುದಾಗಿದೆ (ಹೋಪ್ನೆಲ್, ಪೋರ್ಟ್ ಏನ್ಷೆಂಟ್ ಮತ್ತು ಅಡೀನ). ಈ ಜನಕ್ಕೆ ಏನಾಯಿತೆಂಬುದು ಗೊತ್ತಿಲ್ಲ. ಬಹುಶಃ ಇವರು ನಾಶವಾಗಿರಬೇಕು; ಅಥವಾ ಹೆಚ್ಚು ಬಲಿಷ್ಠವೂ ಅಲೆಮಾರಿಯೂ ಆದ ಇಂಡಿಯನ್ ಪಂಗಡಗಳಲ್ಲಿ ಲೀನವಾಗಿರಬೇಕು. ಅಂತೂ ಬಿಳೆಯರನ್ನೆದುರಿಸಿದ ಇಂಡಿಯನರು ಈ ಪ್ರದೇಶಕ್ಕೆ ಬರಲು ಬಹಳ ಹಿಂದೆಯೇ ಹಿಂದಿನ ಜನ ಕಣ್ಮರೆಯಾಗಿದ್ದರು.

18ನೆಯ ಶತಮಾನದ ಮಧ್ಯಭಾಗದಲ್ಲಿ ಫ್ರೆಂಚರೂ ಇಂಗ್ಲಿಷರೂ ಒಹಾಯೊವಿನ ಒಡೆತನಕ್ಕಾಗಿ ಬಡಿದಾಡಲಾರಂಭಿಸಿದಾಗ ಇಲ್ಲಿ ಹಲವಾರು ಇಂಡಿಯನ್ ಪಂಗಡಗಳಿದ್ದುವು. ಅವುಗಳ ಪೈಕಿ ಕೆಲವು ಈಚೆಗೆ ಬಂದಿದ್ದವು. ಅಂತೂ ಇಲ್ಲಿ ಇಂಡಿಯನರ ಒಟ್ಟು ಸಂಖ್ಯೆ ಬಹುಶಃ 15,000ಕ್ಕೂ ಹೆಚ್ಚಾಗಿರಲಿಲ್ಲ.

18ನೆಯ ಶತಮಾನದಲ್ಲಿ ಇಲ್ಲಿಗೆ ಬಂದ ಫ್ರೆಂಚರೂ ಬ್ರಿಟಿಷರೂ ಒಂದು ಕೈಯಿಂದ ಇಂಡಿಯನರೊಂದಿಗೆ ಹೋರಾಡುತ್ತ ಇನ್ನೊಂದು ಕೈಯಿಂದ ತಂತಮ್ಮಲ್ಲೆ ಯುದ್ಧ ಮಾಡುತ್ತಿದ್ದರು. ಆ ಶತಮಾನದ ಅಂತ್ಯದ ವೇಳೆಗೆ ಹೊಸದಾಗಿ ರಚಿತವಾದ ಸಂಯುಕ್ತಸಂಸ್ಥಾನದ ಜನಸಂಖ್ಯೆ ಅಲೆಘನಿಯನ್ನು ದಾಟಿ ಹರಿಯಲಾರಂಭಿಸಿತು. ಒಹಾಯೊ ನದಿಯ ವಾಯವ್ಯಕ್ಕಿದ್ದ ಪ್ರದೇಶ ಎಲ್ಲ ರಾಜ್ಯಗಳಿಗೂ ಸೇರಿತ್ತು. ಅಮೆರಿಕದ ಕಾಂಗ್ರೆಸ್ 1785ರಲ್ಲಿ ಈ ಪ್ರದೇಶದ ಸಮೀಕ್ಷೆ ನಡೆಸಿ, ಕೆಲವು ಭಾಗಗಳನ್ನು ಕಂಪನಿಗಳಿಗೆ ಮಾರಿತು. ಜನ ಇಲ್ಲಿಗೆ ಹೆಚ್ಚಾಗಿ ವಲಸೆ ಬಂದರು. 1795ರಲ್ಲಿ ಇಂಡಿಯನರೊಂದಿಗೆ ಮಾಡಿಕೊಂಡ ಒಂದು ಕೌಲಿನಿಂದಾಗಿ ಶಾಂತಿ ಭದ್ರವಾಯಿತು. ಹೊಸ ನಗರಗಳು ಎದ್ದುವು.

1787ರಲ್ಲಿ ಅಮೆರಿಕದ ಕಾಂಗ್ರೆಸ್ ಈ ಪ್ರದೇಶದ ಆಡಳಿತಕ್ಕೆ ಸೂಕ್ತ ಆದೇಶವೊಂದನ್ನು ತಂದಿತು. ಕಾಂಗ್ರೆಸಿನ ಅಧ್ಯಕ್ಷ, ಜನರಲ್ ಆರ್ಥರ್ ಸೇಂಟ್ ಕ್ಲೇರನನ್ನು ಗವರ್ನರಾಗಿ ನಿಯೋಜಿಸಲಾಯಿತು. ಮೇರಿಯೆಟ್ಟವೇ ಆಗಿನ ಸರ್ಕಾರದ ಪೀಠ, ಮೂರು ಹಂತಗಳಲ್ಲಿ ಈ ಪ್ರದೇಶ ರಾಜ್ಯತ್ವ ಪಡೆಯಬೇಕೆಂಬುದು ಕಾಂಗ್ರೆಸ್ ಆದೇಶದ ಉದ್ದೇಶವಾಗಿತ್ತು. 1802ರ ನವೆಂಬರ್ 29ರಂದು ಸ್ವೀಕೃತವಾದ ಸಂವಿಧಾನಕ್ಕೆ ಅನುಗುಣವಾಗಿ ಮರುವರ್ಷದ ಮಾರ್ಚ್ 1ರಂದು ಒಹಾಯೊವೂ ಸಂಯುಕ್ತ ಸಂಸ್ಥಾನದ ಒಂದು ರಾಜ್ಯವಾಗಿ ಪರಿವರ್ತನೆ ಹೊಂದಿತು.

ಉಲ್ಲೇಖಗಳು ಬದಲಾಯಿಸಿ

  1. http://www.ohiohistorycentral.org/w/Welcome_To_Ohio_History_Central
  2. "ಆರ್ಕೈವ್ ನಕಲು". Archived from the original on 2007-03-14. Retrieved 2016-10-19.
"https://kn.wikipedia.org/w/index.php?title=ಒಹಾಯೊ&oldid=1053967" ಇಂದ ಪಡೆಯಲ್ಪಟ್ಟಿದೆ