ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು. ನದಿಗಳು ಸರೋವರದಲ್ಲಿ, ಬಗ್ಗೆ ಅಥವಾ ಊಟೆ(spring)ಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು ಮಹಾಸಾಗರಗಳಲ್ಲಿ ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.

ಗ್ಯಾಂಬಿಯ ನದಿಯು ನಿಒಕೊಲೊಕೊಬ ರಾಷ್ಟ್ರೀಯ ವನದ ಮೂಲಕ ಹರಿಯುತ್ತಿರುವುದು

ನದಿ - ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು. ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಪೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.

ರಚನೆ ಬದಲಾಯಿಸಿ

 
Melting toe of Athabasca Glacier, Jasper National Park, Alberta, Canada
 
The Loboc River in Bohol, Philippines
 
The Colorado River at Horseshoe Bend, Arizona

ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಇಮರಿ ಇಂಗಿಹೋಗುತ್ತದೆ. ಸಾಕಷ್ಟು ಭಾಗ ಸಸ್ಯಗಳ ಮೂಲಕ ಅಲ್ಲದೇ ನೇರ ಆವಿಯಾಗಿ ಮತ್ತೆ ವಾಯುಮಂಡಲವನ್ನು ಸೇರಿ ಪುನಃ ಮಳೆಯಾಗಿ ನೆಲದ ಮೇಲೆ ಬೀಳುತ್ತದೆ. ಈ ನಿರಂತರ ನೈಸರ್ಗಿಕ ಆಟ ಚಕ್ರದಂತೆ ತಿರುಗುತ್ತಿರುವುದು. ಇಮರಿದ ನೀರಿನ ಬಹು ಭಾಗ ನೆಲಮಟ್ಟದಿಂದ ಸಾಕಷ್ಟು ಆಳದಲ್ಲಿ ಶೇಖರವಾಗಿ ಅಂತರ್ಜಲವೆನಿಸುತ್ತದೆ. ಇದು ಚಿಲುಮೆ ಹಾಗೂ ಬಾವಿಗಳ ಮೂಲಕ ನಮಗೆ ದೊರೆಯುವುದು. ಇನ್ನುಳಿದ ಭಾಗ ಇಳಿಜಾರಿರುವ ಕಡೆ ಪ್ರವಹಿಸಿ ಹೊಳೆ ಅಥವಾ ನದಿ ಎನಿಸುತ್ತದೆ. ಹೀಗೆ ನದಿಗೆ ಜೀವಾಧಾರ ಮಳೆ. ಮಳೆಯಿಲ್ಲದೆ ನದಿಯಿಲ್ಲ. ಮಳೆ ಭೂಮಿಯ ಮೇಲೆ ಒಂದೇ ಸಮವಾಗಿ ಬೀಳುವುದಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. ಚಿಲಿ ದೇಶದ ಆಟಕಾಮ ಮರುಭೂಮಿಯಲ್ಲಿ ನಾಲ್ಕೈದು ವರ್ಷಗಳಿಗೊಮ್ಮೆ ಎಂದೋ ಒಂದು ದಿನ ಹನಿ ಹಾಕುತ್ತದೆ. ಆದರೆ ಅಸ್ಸಾಮಿನ ಚಿರಾಪುಂಜಿಯಲ್ಲಿ ಇಡೀ ವರ್ಷದುದ್ದ ಧಾರಾಕಾರವಾದ ಮಳೆ. ವರ್ಷಕ್ಕೆ ಏನಿಲ್ಲೆಂದರೂ 1500 ಸೆಂ.ಮೀ.ಗಳಷ್ಟು ಮಳೆ. ಇಂಥ ಪ್ರದೇಶದ ನದಿಗಳಲ್ಲಿ ವರ್ಷದ ಉದ್ದಕ್ಕೂ ನೀರು ಹರಿಯುತ್ತಿದ್ದು ಅವು ಜೀವಂತ ನದಿಗಳು ಎನ್ನಿಸಿಕೊಳ್ಳುವುವು. ಪ್ರತಿವರ್ಷವೂ ಬೀಳುವ ಮಳೆಯ ಪ್ರಮಾಣ 91.44 ಸೆಂಮೀ. ಗಳೆನಿಸಿದಲ್ಲಿ ಅದು 13,98,60,000 ಚದರ ಕಿಮೀ ವಿಸ್ತೀರ್ಣದ ಭೂಖಂಡಗಳ ಮೇಲೆ ಬಿದ್ದು ಸುಮಾರು 127.185 ಘನ ಕಿಮೀ.ಗಳಷ್ಟು ಮಳೆಯ ನೀರಿನ ಪ್ರಮಾಣಕ್ಕೆ ಕಾರಣವೆನಿಸುತ್ತದೆ. ಇದರಲ್ಲಿ ಕೇವಲ ಮೂರನೆಯ ಒಂದು ಭಾಗ ಅಂದರೆ ಸುಮಾರು 37,530 ಘನ ಕಿ.ಮೀ ಗಳಷ್ಟು ನದಿಗಳ ರೂಪದಲ್ಲಿ ಹರಿದು ಸಮುದ್ರವನ್ನು ಸೇರುತ್ತದೆ. ಇನ್ನುಳಿದ 89,655 ಘನ ಕಿ.ಮೀ ನೀರು ಇಂಗಿ ಇಮರುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾರ್ಷಿಕ ಮಳೆಯ ಪ್ರಮಾಣ ಸುಮಾರು 380 ಸೆಂಮೀ. ಇದರಲ್ಲಿ 358 ಸೆಂಮೀ.ಗಳಷ್ಟು ಸಸ್ಯಗಳ ಮೂಲಕ ಅಲ್ಲದೇ ಇಮರಿ ಆವಿಯಾಗಿ ಮತ್ತೆ ವಾಯು ಮಂಡಲವನ್ನು ಸೇರುತ್ತದೆ. ಕೇವಲ 22 ಸೆಂಮೀ.ಗಳಷ್ಟು ನೀರು ಮಾತ್ರ ನದಿಗಳಾಗಿ ಹರಿದು ಕಟ್ಟಕಡೆಗೆ ಸಮುದ್ರವನ್ನು ಸೇರುತ್ತದೆ. ಹೀಗೆ ಹರಿವ ನೀರನ್ನು ನದಿ ಎಂದು ಊಹಿಸಿದಲ್ಲಿ ಅದು ಪ್ರತಿದಿನ 6.3644Χ 1011 ಲೀಟರುಗಳಷ್ಟು ನೀರನ್ನು ಸಮುದ್ರಕ್ಕೆ ಒಯ್ಯುವ ನಿತ್ಯನದಿ ಎನಿಸುತ್ತದೆ. ಈ ದೇಶದ ನದಿಗಳ ಒಟ್ಟು ಉದ್ದ 48,27,000 ಕಿಮೀ.

 
Nile River delta, as seen from Earth orbit. The Nile is an example of a wave-dominated delta that has the classic Greek letter delta (Δ) shape after which river deltas were named.
 
A radar image of a 400-kilometre (250 mi) river of methane and ethane near the north pole of Saturn's moon Titan

ನದಿಗಳಿಗೆ ಮಳೆಯ ಪ್ರಮಾಣದ ಜತೆಗೆ ಅವು ಹರಿವ ನೆಲಭಾಗದ ಮೇಲ್ಮೈ ಲಕ್ಷಣವೂ ಅಷ್ಟೆ ಮುಖ್ಯವಾದುದು. ನೆಲದ ಇಳಿಜಾರು ಅತಿಯಾಗಿದ್ದಲ್ಲಿ ನೀರು ಬಲುಬೇಗ ಕೊಚ್ಚಿಹೋಗುತ್ತದೆ. ಹೀಗಾಗಿ ಕಡಿದಾದ ಪರ್ವತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಬಿದ್ದ ಮಳೆಯ ಅಧಿಕಭಾಗ ರಭಸವಾಗಿ ಇಳಿಜಾರಿನಲ್ಲಿ ಹರಿದುಹೋಗುತ್ತದೆ. ಆದರೆ ಸಮತಟ್ಟಾದ ನೆಲದಲ್ಲಿ ನೂರಕ್ಕೆ ಒಂದು ಭಾಗದಷ್ಟೂ ಹರಿಯುವುದಿಲ್ಲ. ಇದರ ಜತೆಗೆ ಭೂರಚನೆಯೂ ಅಷ್ಟೇ ಮುಖ್ಯ. ನೆಲ ಜಾಳುಜಾಳಾಗಿದ್ದರೆ ಇಮರುವ ನೀರಿನ ಪ್ರಮಾಣ ಅಧಿಕ. ಹೀಗಿರದೆ ನೆಲ ಅಡಕವಾಗಿದ್ದಲ್ಲಿ ನೀರಿನ ಇಮರಿಕೆಗೆ ಅಷ್ಟು ಉತ್ತಮವಾಗಿರಲಾರದು. ನೀರಿನ ಅಧಿಕಭಾಗ ಹರಿದು ಹತ್ತಿರದ ಹಳ್ಳವನ್ನೊ ನದಿಯನ್ನೊ ಸೇರುತ್ತದೆ. ಜೇಡು ಭೂಮಿಗಿಂತ ಮರುಭೂಮಿಯಲ್ಲಿ ನೀರು ಬಲುಬೇಗನೆ ಇಮರಿ ಕಾಣದಾಗುತ್ತದೆ. ಅಂತೆಯೇ ಮಳೆ ಹೆಚ್ಚಾಗಿ ಬೀಳುವ ಪ್ರದೇಶದಲ್ಲಿ ನೆಲ ಹೆಚ್ಚು ತೊಯ್ದಿರುವುದರಿಂದ ಅದು ನೀರನ್ನು ಅಷ್ಟಾಗಿ ಹೀರಿಕೊಳ್ಳದೆ ಅಧಿಕಭಾಗ ಹರಿದುಹೋಗುವುದು. ಮಳೆ ಅಲ್ಪವಾಗಿದ್ದಲ್ಲಿ ನೆಲ ಒಣಗಿದ್ದು ಬಿದ್ದ ನೀರಿನ ಅಧಿಕಭಾಗವನ್ನು ಹೀರಿಕೊಳ್ಳುತ್ತದೆ. ಸಸ್ಯನಿಬಿಡ ಪ್ರದೇಶಗಳಿಗಿಂತ, ಅವು ವಿರಳವಾಗಿರುವ ಮೈದಾನ ಭಾಗಗಳಲ್ಲಿ ಮಳೆಯ ನೀರಿನ ಅಧಿಕಭಾಗ ಹರಿದುಹೋಗುವುದು.

ಭೂಮಿಯ ಮೇಲೆ ಹರಿಯುವ ಮಳೆಯ ನೀರು ಕಾಲುವೆಗಳಾಗಿ, ಸಣ್ಣ ಝರಿಗಳಾಗಿ, ಹಲವಾರು ಝರಿಗಳು ಸೇರಿ ತೊರೆಯಾಗಿ, ಈ ಬಗೆಯ ಹತ್ತಾರು ತೊರೆಗಳು ಒಟ್ಟುಗೂಡಿ ನದಿಯಾಗಿ ಪ್ರವಹಿಸುತ್ತವೆ. ಹೀಗೆ ಮಳೆಯ ನೀರೇ ಮೂಲಾಧಾರವಾದರೂ ಹಲವು ಬಾರಿ ಸರೋವರಗಳು, ಚಿಲುಮೆಗಳು ಸಹ ನದಿಗಳಿಗೆ ಮೂಲವಾಗಿರಬಹುದು. ಅಂತೆಯೇ ಹಿಮದ ಹಾಳೆಗಳು ಕರಗಿ ಅವು ಕೂಡ ನದಿಗೆ ಆಸರೆ ಯಾಗಿರಲು ಸಾಧ್ಯ. ಹೀಗೆ ನಾನಾ ಬಗೆಯಲ್ಲಿ ಜನ್ಮತಳೆವ ನದಿಗಳು ಅಪಾರ. ಒಂದೊಂದು ಬಗೆ. ಪ್ರಪಂಚದಲ್ಲಿ ಈ ತೆರನಾದ ಸಾವಿರಾರು ನದಿಗಳಿದ್ದು ಅವುಗಳಲ್ಲಿ ಪ್ರಮುಖವೆನಿಸಿದ ಹದಿನೈದು ನದಿಗಳನ್ನು ಇಲ್ಲಿ ಬರೆದಿದೆ.

ಉಗಮದಿಂದ ತೊಡಗಿ ಸಾಗರಸಂಗಮದವರೆಗೆ ನದಿ ಮಾಡುವ ಕೆಲಸಗಳು ಹಲಬಗೆಯವು. ಭೂವ್ಯಾಪಾರಕಾರಕಗಳ ಪೈಕಿ ನದಿಗೆ ಅಗ್ರಸ್ಥಾನ. ಇದರ ಕಾರ್ಯಾಚರಣೆ ಬಹು ವ್ಯಾಪಕ ಹಾಗೂ ಸತತ. ನದಿ ಹರಿಯುವ ಪ್ರದೇಶದ ದಿಬ್ಬ, ಬೆಟ್ಟ, ಕಣಿವೆ, ಜಲಪಾತ, ಮೈದಾನ ಮೊದಲಾದ ಭೂಸ್ವರೂಪಗಳಲ್ಲೆಲ್ಲ ನದಿಯ ಕೈವಾಡವನ್ನು ಗುರುತಿಸಬಹುದು. ನೆಲಮಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 0.8 ಕಿ.ಮೀ ನಷ್ಟು ಹೆಚ್ಚಾಗಿದೆ ಎಂದು ಅಂದಾಜು. ಈ ಅಂತರವನ್ನು ಭೂಸವೆತದಿಂದ ಆದಷ್ಟು ಕಡಿಮೆ ಮಾಡುವುದೇ ನದಿಯ ಮುಖ್ಯ ಕೆಲಸ.

ನದಿ ಮೂಲ ಬದಲಾಯಿಸಿ

ನದಿ ಹುಟ್ಟುವುದು ಸಾಮಾನ್ಯವಾಗಿ ಬೆಟ್ಟ ಅಥವಾ ಪರ್ವತಪ್ರದೇಶಗಳಲ್ಲಿ. ಇದೇ ನದಿಯ ಮೂಲ. ಇದಕ್ಕೆ ಮಳೆಯ ನೀರು ಅಥವಾ ಹಿಮಗಡ್ಡೆಗಳೇ ಆಶ್ರಯ. ಇಲ್ಲಿ ನದಿಯನ್ನು ಗುರುತಿಸುವುದು ಬಲು ಕಷ್ಟ. ಬೆಟ್ಟದ ಮೇಲೆ ಬಿದ್ದ ಮಳೆಯ ಅಥವಾ ಹಿಮಗಡ್ಡೆ ಕರಗಿ ಉಂಟಾದ ನೀರು ಇಳಿಜಾರಿನ ಕೊರಕಲುಗಳಲ್ಲಿ ಝರಿಗಳಂತೆ ಹರಿದು ಕೆಳಗಿಳಿಯುತ್ತದೆ. ಮುಂದೆ ಹರಿದಂತೆಲ್ಲ ಹಲವಾರು ಝರಿಗಳು ಒಂದರೊಡನೊಂದು ಸೇರಿ ಹಳ್ಳವಾಗಿ, ಸಣ್ಣತೊರೆಯಾಗಿ ಬೆಟ್ಟದ ತಪ್ಪಲನ್ನು ಮುಟ್ಟುವ ವೇಳೆಗೆ ಸಾಕಷ್ಟು ಗುರುತಿಸಲು ಸಾಧ್ಯವಾದ ನದಿಯಾಗುತ್ತದೆ. ಹಿಮಾಲಯದ ನದಿಗಳಿಗೆ ಬಲುಮಟ್ಟಿಗೆ ಹಿಮಗಡ್ಡೆಗಳೇ ಆಶ್ರಯ. ದಕ್ಷಿಣ ಭಾರತದ ನದಿಗಳಿಗೆ ಮಳೆಯ ನೀರೇ ಮೂಲ.

ಹರಿವು ಬದಲಾಯಿಸಿ

ಹೀಗೆ ಜನ್ಮ ತಳೆದ ನದಿಯ ನೀರು ತೀವ್ರ ಇಳಿಜಾರು ಭೂಮಿಯಲ್ಲಿ ಅತಿವೇಗವಾಗಿ ಹಾಗೂ ರಭಸದಿಂದ ಪ್ರವಹಿಸುವ ಕಾರಣ ಅಧಿಕ ತ್ರಾಣಯುತವಾಗಿರುತ್ತದೆ. ಅದು ಹರಿವ ಬೆಟ್ಟದ ನೆಲಭಾಗವನ್ನು ಕೊರೆದು ಕೊರಕಲು, ಕಣಿವೆ, ಕಮರಿಗಳನ್ನು ನಿರ್ಮಿಸಿ ತನ್ನ ಜಾಡನ್ನು ರೂಪಿಸುತ್ತದೆ. ನದಿಯ ವೇಗಕ್ಕೆ ಅದು ಹರಿವ ನೆಲದ ಇಳಿಜಾರೇ ಕಾರಣ. ಬೆಟ್ಟದ ತಳವನ್ನು ನದಿ ತಲುಪಿದಾಗ ಇಳಿಜಾರು ಸಾಕಷ್ಟು ತಗ್ಗಿ ನೆಲ ಹೆಚ್ಚು ಮಟ್ಟಸವಾಗುವುದರಿಂದ ಅಲ್ಲಿ ನೀರಿನ ವೇಗವೂ ಕಡಿಮೆ ಆಗುವುದು. ಮುಂದೆ ಅದು ಹರಿವ ಮೈದಾನ ಪ್ರದೇಶದಲ್ಲಿ ನದಿಯ ಗತಿ ಮಂದವಾಗುತ್ತದೆ. ನದಿ ಹರಿವ ಹಳ್ಳದ ಪ್ರದೇಶವೇ ಅದರ ಪಾತ್ರ. ಇದು ಸಾಮಾನ್ಯವಾಗಿ ಬೆಟ್ಟದ ಪ್ರದೇಶಗಳಲ್ಲಿ ಕಿರಿದಾಗಿಯೂ ಹೆಚ್ಚು ಆಳವಾಗಿಯೂ ಇರುವುದು. ಮೈದಾನಭಾಗದಲ್ಲಿ ಅಗಲ ಹೆಚ್ಚು. ಆಳ ಕಡಿಮೆ. ಇದು ನೆಲಮಟ್ಟಕ್ಕಿಂತ ತಗ್ಗಿನಲ್ಲಿದ್ದು ಇಕ್ಕೆಲಗಳಲ್ಲೂ ದಂಡೆಗಳಿಂದ ಸೀಮಿತಗೊಂಡಿರುತ್ತದೆ. ಇವೇ ನದಿಯ ದಡಗಳು. ಅನೇಕ ನದಿಗಳಲ್ಲಿ ವರ್ಷದ ಉದ್ದಕ್ಕೂ ಪಾತ್ರ ನೀರಿನಿಂದ ತುಂಬಿರುತ್ತದೆ. ಕೆಲವು ನದಿಗಳಲ್ಲಿ ಪಾತ್ರ ಮಾತ್ರ ಮಳೆಗಾಲದಲ್ಲಿ ನೀರಿನಿಂದ ತುಂಬಿದ್ದು ಬೇಸಗೆಯಲ್ಲಿ ಬತ್ತಿಹೋಗಿರುತ್ತದೆ. ಆಗ ನದಿಯ ದಂಡೆಗಳು ಚೆನ್ನಾಗಿ ಗೋಚರವಾಗುವುವು. ಹೆಚ್ಚಾಗಿ ನೀರು ಬಂದಲ್ಲಿ ಪಾತ್ರದ ತುಂಬ ನೀರು ತುಂಬಿ ಪ್ರವಾಹ ಎನ್ನಿಸುವುದು. ಪ್ರವಾಹ ಮಿತಿಮೀರಿದಾಗ ಪಾತ್ರ ಹಿಡಿಸದೆ ನೀರು ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗಿ ಹಾವಳಿ ಉಂಟು ಮಾಡುತ್ತದೆ. ಭಾರತದ ಹಲವಾರು ಕಡೆ ಮಳೆಗಾಲದಲ್ಲಂತೂ ಈ ನೆರೆಯ ಹಾವಳಿ ವಿಪರೀತ. ವಿಪರೀತ ಕಷ್ಟ ನಷ್ಟ. ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಬೆಳೆ ಆಸ್ತಿ ನೀರುಪಾಲು.


ನದಿ ಹರಿಯುತ್ತಿರುವಾಗ ಹಲವಾರು ಕಡೆ ಕಾಲುವೆಗಳು, ತೊರೆಗಳು ಹಾಗೂ ಸಣ್ಣ ನದಿಗಳು ಅದನ್ನು ಕೂಡಿಕೊಳ್ಳುತ್ತವೆ. ಹೀಗೆ ಸೇರುವ ಪ್ರದೇಶವೇ ಸಂಗಮ. ಹಿಂದೂ ಧರ್ಮೀಯರಿಗೆ ಸಂಗಮಗಳು ಪುಣ್ಯಕ್ಷೇತ್ರಗಳೆನಿಸಿವೆ. ಕುಂಭ ಮೇಳ ನಡೆಯುವ ಪ್ರಯಾಗ ಬಲು ಪ್ರಸಿದ್ಧವಾದ ಸಂಗಮ. ಕರ್ನಾಟಕದ ಕಾವೇರಿಗೆ ಹೇಮಾವತಿ, ಲಕ್ಷ್ಮಣತೀರ್ಥ, ಕಪಿಲಾ, ಅರ್ಕಾವತಿ ಹೀಗೆ ಹಲವಾರು ಉಪನದಿಗಳಿದ್ದು ಅವು ಸೇರುವೆಡೆಗಳಲ್ಲೆಲ್ಲ ಸಂಗಮ ಮತ್ತು ಪುಣ್ಯಕ್ಷೇತ್ರಗಳು ನದಿಯ ಪಾತ್ರದುದ್ದಕ್ಕೂ ಹರಡಿವೆ.

ನದಿಯ ಕಾರ್ಯ ಅದು ಹರಿಯುವ ವೇಗ ಮತ್ತು ಅದರ ನೀರಿನ ಪ್ರಮಾಣವನ್ನು ಅವಲಂಬಿಸಿದೆ. ಇವು ಹೆಚ್ಚಿದಷ್ಟೂ ಆದರೆ ಕ್ರಿಯಾಶಕ್ತಿಯೂ ತೀವ್ರಗೊಳ್ಳುವುದು. ವೇಗ ಮುಖ್ಯವಾಗಿ ಅದು ಹರಿವ ನೆಲಭಾಗದ ಇಳಿಜಾರನ್ನು ಅನುಸರಿಸಿದೆ. ನದಿಯ ಮೂಲದಿಂದ ತೊಡಗಿ ಸಮುದ್ರವನ್ನು ಸೇರುವ ಮುಖದವರೆಗೆ ಪಾತ್ರದ ಮಟ್ಟವನ್ನು ಗುರುತಿಸಿದಲ್ಲಿ ಅದು ಕ್ರಮೇಣ ಕಡಿಮೆ ಆಗುತ್ತ ಹೋಗಿ ಮುಖದ ಭಾಗದಲ್ಲಿ ಸಮುದ್ರಮಟ್ಟಕ್ಕೆ ಸಮವಾಗುತ್ತದೆ. ಇದೇ ನದಿಯ ಇಳಿಜಾರು ಅಥವಾ ಓಟ. ನದಿ ಹರಿಯುವ ಪ್ರತಿ ಏಕಮಾನ ಉದ್ದಕ್ಕೂ ಉಂಟಾಗುವ ತಗ್ಗೇ ಇಳಿಜಾರು. ಇದು ಒಂದೇ ತೆರನಾಗಿರುವುದಿಲ್ಲ.

 
Flash flooding caused by a large amount of rain falling in a short amount of time


ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಅತ್ಯಧಿಕವಾಗಿದ್ದು ತಪ್ಪಲಿನಲ್ಲಿ ಸಾಕಷ್ಟು ಕಡಿಮೆಯಾಗಿ ಮೈದಾನಪ್ರದೇಶದಲ್ಲಿ ಬಲುಮಟ್ಟಿಗೆ ಕುಗ್ಗಿ ನದಿಯ ಮುಖದಲ್ಲಿ ಸಮುದ್ರಮಟ್ಟದೊಡನೆ ಒಂದಾಗುತ್ತದೆ. ಕೆಲವು ನದಿಗಳಲ್ಲಿ ಇಳಿಜಾರು ಅತ್ಯಧಿಕ ಪ್ರಮಾಣದಲ್ಲಿರುವುದು. ಉದಾಹರಣೆಗೆ ಉತ್ತರ ಅಮೆರಿಕದ ಯೂಬಾ ನದಿಯಲ್ಲಿ ಇಳಿಜಾರಿನ ಪ್ರಮಾಣ ಪ್ರತಿ ಕಿಲೊಮಿಟರಿಗೆ 11 ಮೀಟರುಗಳಾದರೆ ಕಾಲರ್ಯಾಡೋವಿನ ಅನ್‍ಕಾಂಫ್ರೆ ನದಿಯ ಮೊದಲ 6.5 ಕಿಮೀ ಹರವಿನಲ್ಲಿ ಇದು ಪ್ರತಿ ಕಿಲೋಮೀಟರಿಗೆ 66.3 ಮೀಟರುಗಳಷ್ಟು. ಸಾಮಾನ್ಯವಾಗಿ ಒಂದು ನದಿ ಒಂದು ಪ್ರದೇಶದಲ್ಲಿ ಪ್ರವಹಿಸಿದಂತೆಲ್ಲ ಕ್ರಮೇಣ ಪಾತ್ರದ ಇಳಿಜಾರು ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಲು ಒಂದು ಮಿತಿ ಉಂಟು. ಆ ಮಿತಿಯನ್ನು ನದಿ ಮುಟ್ಟಿದಾಗ ಅದು ಮಂದಗತಿಯಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಇದೇ ಸವೆತದ ಮಿತಿ. ದಕ್ಷಿಣ ಭಾರತದ ಅನೇಕ ನದಿಗಳು ಈ ಮಿತಿಯನ್ನು ಮುಟ್ಟಿವೆ. ನದಿಯ ಕ್ರಿಯಾಶಕ್ತಿಗೆ ಅನುಗುಣವಾಗಿ ಅದರಲ್ಲಿ ಮೂರು ಹಂತಗಳನ್ನು ಗುರುತಿಸಬಹುದು: ಹರೆಯ, ಇಳಿಹರೆಯ, ಮುಪ್ಪು. ಯಾವುದೇ ನದಿ ಒಂದೇ ವೇಳೆ ಈ ಎಲ್ಲ ಹಂತಗಳನ್ನು ಅದರ ಪಾತ್ರದ ವಿವಿಧ ಭಾಗಗಳಲ್ಲಿ ತೋರಿಸುವುದು. ಸವೆತದ ಸಾಮಥ್ರ್ಯ ಹರೆಯದಲ್ಲಿ ಅಧಿಕವಾಗಿದ್ದು ನೀರು ರಭಸದಿಂದ ಪ್ರವಹಿಸಿ ಬೆಟ್ಟಗಳನ್ನೇ ಕೊರೆದು ನುಚ್ಚುನೂರು ಮಾಡಬಲ್ಲದು. ಈ ಹಂತದ ಪಾತ್ರ ಕಿರಿದು ಹಾಗೂ ಆಳವಾಗಿರುತ್ತದೆ. ಕಡಿದಾದ ದಂಡೆ, ಕಂದರ ಮತ್ತು ಜಲಪಾತಗಳು ಸಾಮಾನ್ಯವಾಗಿದ್ದು ನದಿ ಸದಾ ಭೋರ್ಗರೆಯುತ್ತಿರುವುದು. ಅದು ತಾನು ಸವೆಸಿದ ಪಾತ್ರದ ಹಾಗೂ ಇಕ್ಕೆಲಗಳ ಕಲ್ಲುಮಣ್ಣುಗಳನ್ನು ಅಧಿಕಪ್ರಮಾಣದಲ್ಲಿ ಸಾಗಿಸಲು ಶಕ್ತ. ಆದರೆ ಇಳಿಹರೆಯದಲ್ಲಿ ಈ ಸಾಮಥ್ರ್ಯ ಬಲುಮಟ್ಟಿಗೆ ಕುಗ್ಗಿ ನದಿ ಮಂದಗತಿಯಿಂದ ವಿಶಾಲ ಮೈದಾನ ಪ್ರದೇಶದಲ್ಲಿ ಹರಿಯುತ್ತದೆ. ಅಲ್ಲಿ ಪಾತ್ರದ ಅಗಲ ಆಳ ಕಡಿಮೆ. ಇಳಿಜಾರೂ ಕಡಿಮೆ. ಅಲ್ಲದೆ ಹಲವಾರು ಉಪನದಿಗಳು ಅದಕ್ಕೆ ಬಂದುಸೇರುವ ಕಾರಣ ನೀರಿನ ಪ್ರಮಾಣ ಹೆಚ್ಚಾಗಿ ನದಿ ಗಂಭೀರವಾಗಿ ಪ್ರವಹಿಸುತ್ತದೆ.


ಪಾತ್ರವನ್ನು ಕೊಚ್ಚಿ ಕಣಗಳನ್ನು ಒಯ್ಯುವ ಸಾಮಥ್ರ್ಯವಿಲ್ಲದೆ ಅದನ್ನು ಬಳಸಿಕೊಂಡು ಹರಿಯುತ್ತದೆ. ಹೀಗಾಗಿ ನದಿಯ ಪಾತ್ರ ಹಾವು ಹರಿದಂತೆ ಅಂಕುಡೊಂಕಾಗಿರುತ್ತದೆ. ಅದರಲ್ಲಿ ಸಣ್ಣ ಪುಟ್ಟ ದ್ವೀಪಗಳೂ ಉಂಟಾಗಲು ಸಾಧ್ಯ. ಈ ತೆರನಾದ ತಿರುವು ಮುರುವುಗಳನ್ನು ಕಾವೇರಿ ನದಿಯಲ್ಲಿ ಮುಡುಕುತೊರೆಯ ಬಳಿಯೂ ಹೇಮಾವತಿ ನದಿಯಲ್ಲಿ ಹೇಮಗಿರಿಯ ಬಳಿಯೂ ಕಾಣಬಹುದು. ಶ್ರೀರಂಗಪಟ್ಟಣ, ಶಿವಸಮುದ್ರ ಹಾಗೂ ಶ್ರೀರಂಗ ಈ ಮೂರು ಕಾವೇರಿ ನದಿಯ ಪಾತ್ರದಲ್ಲಿರುವ ಪ್ರಸಿದ್ಧ ದ್ವೀಪಗಳು.

ಈ ತಿರುವುಮುರುವುಗಳಿರುವ ಕಡೆ ಹೊರದಡಗಳು ನೀರಿನ ಸೆಳೆತಕ್ಕೆ ಹೆಚ್ಚು ಸವೆದು ಸವೆದ ಭೂಭಾಗ ಒಳದಡಗಳಿರುವಲ್ಲಿ ಶೇಖರವಾಗುತ್ತದೆ. ಹೀಗಾಗಿ ಹೊರದಡಗಳು ಕಡಿದಾಗಿಯೂ ಒಳದಡಗಳು ನಸು ಓರೆಯಾಗಿಯೂ ಇರುತ್ತವೆ. ತಿರುವುಮುರುವುಗಳ ಸ್ವರೂಪವೂ ನೀರಿನ ಮೊತ್ತವನ್ನು ಅವಲಂಬಿಸಿರುತ್ತದೆ.


ಹಲವು ವೇಳೆ ತಿರುವು ಬಹುಬಾಗಿ ಪ್ರವಾಹಕಾಲದಲ್ಲಿ ನಡುವೆ ಇರುವ ಕಿರಿದಾದ ನೆಲಭಾಗ ಕೊಚ್ಚಿಹೋಗಿ ನದಿಯ ಪಾತ್ರ ನೇರವಾಗುತ್ತದೆ. ತಿರುವಿನ ಭಾಗ ಮುಖ್ಯ ನದಿಯಿಂದ ಬೇರ್ಪಟ್ಟು ಅರ್ಧಚಂದ್ರಾಕಾರದ ಸರೋವರಗಳು ಉಂಟಾಗುತ್ತವೆ. ಏಷ್ಯಮೈನರ್ ಪ್ರದೇಶದ ಖಯಾಂಡರ್ ನದಿಯಲ್ಲಿ ಅಸಂಖ್ಯಾತ ತಿರುವುಮುರುವುಗಳಿವೆ. ಕೆಲವು ಪ್ರದೇಶಗಳಲ್ಲಿ ತಿರುವುಮುರುವುಗಳಿಂದ ಆವೃತವಾದ ನೆಲಭಾಗ ಗುಡ್ಡದೋಪಾದಿಯಲ್ಲಿ ಒಂಟಿಯಾಗಿ ಎದ್ದುಕಾಣುತ್ತದೆ. ಈ ತೆರನಾದ ಕಡಿದಾದ ಬೆಟ್ಟಗಳಿಗೆ ಬುಟ್ಟಿಗಳೆಂದು ಹೆಸರು. ಶಿಖರಭಾಗ ಮಟ್ಟಸವಾಗಿರುವುದು ಇವುಗಳ ಮುಖ್ಯ ಲಕ್ಷಣ. ಬೃಹದಾಕಾರದ ಬುಟ್ಟಿಗಳಿಗೆ ಮೀಸಾಗಳೆಂದು ಹೆಸರು.

ಭೂ ಸವೆತ ಬದಲಾಯಿಸಿ

ನದಿಯಿಂದಾದ ಆಗುವ ಸವೆತ ಅತಿ ತೀವ್ರಗತಿಯಲ್ಲಿ ಮುಂದುವರಿಯಲು ಅದು ಹರಿಯುವ ಪ್ರದೇಶದ ಇಳಿಜಾರೇ ಮುಖ್ಯಕಾರಣ. ಇದು ನದಿಯ ವೇಗವನ್ನು ಹೆಚ್ಚಿಸುವುದಲ್ಲದೆ ಅದಕ್ಕೆ ಹೆಚ್ಚಿನ ತ್ರಾಣವನ್ನು ಕೂಡ ಕೊಡುತ್ತದೆ. ವೇಗ ಎರಡರಷ್ಟು ಹೆಚ್ಚಿದಲ್ಲಿ ಸವೆತ ನಾಲ್ಕು ಪಟ್ಟು ಹೆಚ್ಚುತ್ತದೆ. ಹೀಗೆಯೇ ನೀರಿನ ಪ್ರಮಾಣ ಹೆಚ್ಚಿದಂತೆ ಸವೆತದ ಪ್ರಮಾಣವೂ ಅಧಿಕಗೊಳ್ಳುತ್ತ ಹೋಗುವುದು. ಬೇಸಗೆಯಲ್ಲಿ ಬತ್ತಿಹೋದ ನಿರ್ವೀರ್ಯನದಿ ಮಳೆಗಾಲದ ಪ್ರವಾಹಕಾಲದಲ್ಲಿ ಅಷ್ಟೇ ವೀರ್ಯವತ್ತಾಗಿ ವಿನಾಶಕಾರಿಯಾಗುತ್ತದೆ. ಪರ್ವತಪ್ರದೇಶದಲ್ಲಿ ರಭಸವಾಗಿ ದುಮ್ಮಿಕ್ಕುವ ನದಿ ಬೃಹದಾಕಾರದ ಬಂಡೆಗಳನ್ನು ಸಡಿಲಿಸಿ ನುಚ್ಚುನುರಿ ಮಾಡುವುದು. ಈ ಶಿಲಾಛಿದ್ರಗಳನ್ನೇ ಆಯುಧಗಳಂತೆ ಉಪಯೋಗಿಸಿ ತನ್ನ ಪಾತ್ರದ ತಳವನ್ನೂ ದಂಡೆಗಳನ್ನೂ ಕೊರೆದು ಆಳವಾದ ಕಂದರಗಳನ್ನು ನಿರ್ಮಿಸುತ್ತದೆ. ಪಂಜಾಬಿನ ಶತದ್ರು ಕಂದರ ಈ ಬಗೆಯದು. ಇದಲ್ಲದೆ ಅನುಕೂಲಕರವಾದ ಸನ್ನಿವೇಶ ಒದಗಿದಾಗ ಸಹ ನದಿ ಈ ಬಗೆಯ ಕಂದರಗಳನ್ನು ಇತರೆಡೆಗಳಲ್ಲೂ ನಿರ್ಮಿಸುವುದುಂಟು. ಚಂಬಲ್ ಕಂದರ ಹಾಗೂ ಆಂಧ್ರಪ್ರದೇಶದ ಚಿತ್ರಾವತಿ ನದಿ ನಿರ್ಮಿಸಿರುವ ಗುಡಿಕೋಟೆಯ ಕಂದರವನ್ನು ಇಲ್ಲಿ ಸ್ಮರಿಸಬಹುದು. ಅಮೆರಿಕದ ಕಾಲರ್ಯಾಡೋ ಮತ್ತು ಅದರ ಉಪನದಿಗಳು ಬಲುಸುಂದರವಾದ ಗ್ರ್ಯಾಂಡ್ ಕಾನ್ಯಾನ್ ಎಂಬ ಕಂದರವನ್ನು ನಿರ್ಮಿಸಿವೆ. ಇಲ್ಲಿ ಮಟ್ಟಸವಾದ ಬಗೆ ಬಗೆ ಬಣ್ಣದ ಜಲಜ ಶಿಲಾಸ್ತರಗಳಿವೆ. ಇವನ್ನು ಭೇದಿಸಿ ಹರಿಯುವ ನದಿ ಅಷ್ಟು ಗಡಸಾಗಿರದ ಮರಳು ಶಿಲಾಸ್ತರಗಳನ್ನು ಕೊರೆದು 16-20 ಕಿಮೀಗಳಷ್ಟು ಅಗಲವಾದ 300-400 ಮೀ ಅಡಿ ಆಳವಾದ ಕಂದರಗಳನ್ನು ನಿರ್ಮಿಸಿ ಪ್ರವಹಿಸುತ್ತದೆ. ಕೆಲವೆಡೆಯಲ್ಲಿ ಆಳ 1.6 ಕಿಮೀನಷ್ಟು ಮಾತ್ರ ಉಂಟು. ಕಣಿವೆಯ ಅಕ್ಕಪಕ್ಕಗಳು ಅನೇಕ ಕಡೆ ಬಲು ಕಡಿದಾಗಿರುವ ಕಾರಣ ನದಿ ಪಾತಾಳದಲ್ಲಿ ಹರಿಯುತ್ತಿರುವಂತೆ ಭಾಸವಾಗುತದೆ. ಅಲ್ಲದೆ ಇಲ್ಲಿರುವ ಮರಳುಶಿಲಾಸ್ತರಗಳು ಕೆಂಪು, ಹಳದಿ, ಕಂದು ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದು ಅವುಗಳ ಮೇಲೆ ಬೀಳುವ ಸೂರ್ಯನ ಬೆಳಕು ನಿಸರ್ಗಸೌಂದರ್ಯವನ್ನು ಇಮ್ಮಡಿಸಿದೆ. ಈ ರಮ್ಯ ಕಂದರದ ಒಟ್ಟು ಉದ್ದ ಸುಮಾರು 320 ಕಿಮೀಗಳಷ್ಟಿದ್ದು ಅಗಲ ಹಲವೆಡೆ 12 ಕಿಮೀಗಳನ್ನೂ ಮೀರಿದೆ.

ಸುಳಿಗಳು ಬದಲಾಯಿಸಿ

ನದಿಯ ಪ್ರವಾಹದಲ್ಲಿ ತಲೆದೋರುವ ಸುಳಿಗಳು ನದಿಯ ನೀರಿನೊಡನೆ ಇರುವ ಶಿಲಾಛಿದ್ರಗಳನ್ನು ಉಪಯೋಗಿಸಿಕೊಂಡು ಅಲ್ಲಲ್ಲಿ ನದಿಯ ತಳವನ್ನು ಕಡೆಗೋಲಿನಂತೆ ಕಡೆದು ವಿವಿಧಾಕಾರದ ಕುಳಿಗಳನ್ನು ನಿರ್ಮಿಸುತ್ತವೆ. ಇವು ವೃತ್ತಾಕಾರ ಅಥವಾ ಅಂಡಾಕಾರವಾಗಿದ್ದು ಹಲವಾರು ಸೆಂಟಿಮೀಟರುಗಳಿಂದ ಹಿಡಿದು ಕೆಲವು ಮೀಟರುಗಳಷ್ಟು ಅಗಲವಾಗಿಯೂ ಆಳವಾಗಿಯೂ ಇರುವುವು. ಕನಕಪುರದ ಬಳಿಯ ಮೇಕೆದಾಟು ಎಂಬಲ್ಲಿ ಅತ್ಯಂತ ರಮಣೀಯವಾದ ಶಿಲಾಕುಳಿಗಳನ್ನು ಕಾವೇರಿಯ ಪಾತ್ರದಲ್ಲಿ ಕಾಣಬಹುದು.

ಜಲಪಾತಗಳು ಬದಲಾಯಿಸಿ

ನದಿ ತನ್ನ ಪಾತ್ರದಲ್ಲಿ ಹಲವಾರು ಕಡೆ ಎತ್ತರದಿಂದ ರಭಸವಾಗಿ ಆಳಕ್ಕೆ ದುಮುಕುತ್ತದೆ. ಇದೇ ಜಲಪಾತ. ಈ ಜಲಪಾತಗಳು ಪರ್ವತಪ್ರದೇಶದಲ್ಲಿ ಹೆಚ್ಚಾಗಿದ್ದು ಮೈದಾನ ಪ್ರದೇಶದಲ್ಲಿ ವಿರಳ. ಕರ್ನಾಟಕದ ಶರಾವತಿ ನದಿ ಗೇರುಸೊಪ್ಪೆಯ ಬಳಿ ರಾಜ, ರಾಕೆಟ್, ರೋರರ್ ಮತ್ತು ಲೇಡಿ ಎಂದು ನಾಲ್ಕು ಕವಲುಗಳಾಗಿ ಒಡೆದು ಸುಮಾರು 253 ಮೀಟರ್ ಆಳಕ್ಕೆ ದುಮುಕಿ ಸುಂದರವಾದ ಜೋಗ್ ಜಲಪಾತಕ್ಕೆ ಕಾರಣವಾಗಿದೆ. ಕಾವೇರಿನದಿ ತನ್ನ ಪಾತ್ರದಲ್ಲಿ ಶಿವನಸಮುದ್ರದ ಬಳಿ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಲ್ಲೂ ಹೊಗೆನಕಲ್ ಬಳಿ ಜಲಪಾತ ಒಂದರಲ್ಲೂ ದುಮುಕಿ ಪ್ರವಹಿಸುತ್ತದೆ. ಆಫ್ರಿಕಾ ಖಂಡದ ಉಗಾಂಡಾದೇಶದ ಜಾಂಬೆಸಿ ನದಿ ತನ್ನ ಹರಿವಿಗೆ ಅಡ್ಡಬಂದ ಬೆಸಾಲ್ಟಿನ ಲಾವಾಸ್ತರಗಳನ್ನು ಹಾಯ್ದು ಸುಮಾರು 90 ಮೀಟರ್ ಆಳಕ್ಕೆ ದುಮುಕುತ್ತದೆ. ಇದೇ ವಿಕ್ಟೋರಿಯಾ ಜಲಪಾತ. ಅಮೆರಿಕದ ಸುಪ್ರಸಿದ್ಧ ನಯಾಗಾರ ಜಲಪಾತಕ್ಕೆ ವಿಶಿಷ್ಟ ವ್ಯಕ್ತಿತ್ವ ಉಂಟು. ಇಲ್ಲಿ ನದಿ ಜಲಜಶಿಲಾಸ್ತರಗಳ ಮೇಲಿನಿಂದ ಕೆಳಕ್ಕೆ ದುಮುಕುತ್ತದೆ. ಇವು ಮಟ್ಟಸವಾಗಿದ್ದು ಶ್ರೇಣಿಯಲ್ಲಿ ಮೇಲುಗಡೆ ಡಾಲೊಮೈಟ್ ಶಿಲಾಸ್ತರಗಳೂ ಅವುಗಳ ಕೆಳಗೆ ಜೇಡುಶಿಲಾಸ್ತರಗಳೂ ಇವೆ. ಮೇಲಿನಿಂದ ದುಮುಕುತ್ತಿರುವ ನದಿಯ ನೀರಿನ ರಭಸದಿಂದಾಗಿ ಜೇಡುಶಿಲೆ ಸವೆದು ಮೇಲಿರುವ ಡಾಲೊಮೈಟ್ ಶಿಲಾಸ್ತರಕ್ಕೆ ಆಸರೆ ಇಲ್ಲದಂತಾಗಿ ಕೆಳಕ್ಕೆ ಬೀಳುತ್ತದೆ. ಹೀಗಾಗಿ ನದಿಯ ಜಲಪಾತ ಹಿಂದಕ್ಕೆ ಸರಿಯುವುದು. ಇದೇ ಜಲಪಾತದ ಹಿಂಜರಿತ. ಅಲ್ಲದೆ ಕೆಳಕ್ಕೆ ರಭಸದಿಂದ ಬೀಳುವ ಶಿಲಾಛಿದ್ರಗಳು ತಮ್ಮ ಕಾರ್ಯಾಚರಣೆಯಿಂದ ನದಿಯ ಪಾತ್ರದಲ್ಲಿ 11 ಕಿಮೀ. ಉದ್ದದ ಕಂದರವನ್ನು ಆಂಟೇರಿಯೊ ಸರೋವರದವರೆಗೂ ನಿರ್ಮಿಸಿವೆ. ಈ ಹಿಂಜರಿತದಿಂದ ವರ್ಷಂಪ್ರತಿ ಇಲ್ಲಿನ ಅರ್ಧವೃತ್ತಾಕಾರದ ಕೆನೆಡಿಯನ್ ಜಲಪಾತ ಭಾಗ ಸುಮಾರು 120-150 ಸೆಂಮೀಗಳಷ್ಟು ಹಿಂದು ಹಿಂದಕ್ಕೆ ಸರಿಯುತ್ತಿದೆ. ಈ ಆಧಾರದ ಮೇಲೆ ಜಲಪಾತ ಹಿಂದೊಮ್ಮೆ ಬಫೆಲೋ ಎಂಬಲ್ಲಿತ್ತೆಂದು ಹೇಳಲಾಗಿದೆ. ಅಮೆರಿಕ ಯೋಸ್ಮೈಟ್ ನ್ಯಾಷನಲ್ ಪಾರ್ಕಿನಲ್ಲಿರುವ ಯೋಸ್ಮೈಟ್ ಜಲಪಾತ 435 ಮೀಟರ್ ಅಡಿ ಆಳಕ್ಕೆ ದುಮುಕಿ ಅಲ್ಲಿ ಕವಲಾಗಿ ಒಡೆದು ಮತ್ತೆ 30-35 ಮೀಟರ್ ಕೆಳಕ್ಕೆ ದುಮುಕುತ್ತದೆ. ಈ ಜಲಪಾತದ ಒಟ್ಟು ಎತ್ತರ ಸುಮಾರು 780 ಮೀಟರುಗಳು. ಈ ರೀತಿ ನದಿಗಳ ತಮ್ಮ ಭೂಸವೆತದ ಕಾರ್ಯಾಚರಣೆಯಿಂದ ಹಲವಾರು ನಿಸರ್ಗಸೌಂದರ್ಯದ ತಾಣಗಳನ್ನು ನಿರ್ಮಿಸಿವೆ.

ಸಾಗಾಣಿಕೆ ಬದಲಾಯಿಸಿ

ತಾವು ಸವೆಸಿದ ಭೂಭಾಗಗಳನ್ನು ಸಾಗಿಸುವುದರಲ್ಲೂ ನದಿಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಪ್ರತಿ 9,000 ವರ್ಷಗಳಿಗೆ 30 ಸೆಂಮೀಗಳಷ್ಟು ಎತ್ತರದ ಭೂಭಾಗವನ್ನು ಸವೆಸಿ ಸಾಗಿಸುತ್ತವೆ. ಈ ಕಾರ್ಯ ಹೀಗೆಯೇ ಮುಂದುವರಿದಲ್ಲಿ 2,50,00,000 ವರ್ಷಗಳಲ್ಲಿ ಸಮುದ್ರಮಟ್ಟದ ಮೇಲಿರುವ ಇಡೀ ನೆಲಭಾಗವೇ ಸವೆದು ಆ ಮಟ್ಟವನ್ನು ಮುಟ್ಟುವುದೆಂಬ ಅಂದಾಜು. ಪ್ರಪಂಚದ ಮುಖ್ಯ ನದಿಗಳು ಶೇಕಡ ಸುಮಾರು 30ರಷ್ಟು ನೆಲಭಾಗದಲ್ಲಿ ಅಂದರೆ 4,40,00,000 ಚಕಿಮೀ ವಿಸ್ತೀರ್ಣದ ಪ್ರದೇಶದ ಮೂಲಕ ಹರಿದು ತಮ್ಮ ಕಾರ್ಯಾಚರಣೆಯನ್ನು ನಡೆಸುವುವು. ಇವುಗಳಲ್ಲೆಲ್ಲ ಮುಖ್ಯವಾದುದು ಓರಿನೊಕೊ ನದಿ. ಇದು 9,48,000 ಚಕಿಮೀ ವಿಸ್ತೀರ್ಣದ ಭೂಭಾಗದಲ್ಲಿ ಪ್ರವಹಿಸಿ ಪ್ರತಿ ಸೆಕೆಂಡಿಗೆ 19,800 ಘಕಿಮೀನಷ್ಟು ನೀರನ್ನು ಸಮುದ್ರಕ್ಕೆ ಸುರಿಯುತ್ತದೆ. ಪ್ರಪಂಚದಲ್ಲಿ ಪ್ರಧಾನವಾದ ಇಪ್ಪತ್ತು ನದಿಗಳು ಪ್ರತಿದಿನವೂ 92 ಘಕಿಮೀ ಪ್ರಮಾಣದ ನೀರನ್ನು ಅಂದರೆ ವರ್ಷಂಪ್ರತಿ 33,325 ಘಕಿಮೀನಷ್ಟು ನೀರನ್ನು ಸಾಗರಗಳಿಗೆ ಒಯ್ಯುತ್ತಿವೆ. ಈ ಅಗಾಧ ಪ್ರಮಾಣದ ನೀರು ಸಾಗಿಸುವ ಪದಾರ್ಥಗಳ ಒಟ್ಟು ಮೊತ್ತ ಊಹಿಸಲೂ ಸಾಧ್ಯವಿಲ್ಲದಷ್ಟು ಅಪಾರ. ನದಿಗಳಿಂದ ಆಗುವ ಸಾಗಾಣಿಕೆ ನದಿಯ ಹರಿವಿನ ವೇಗ ಹಾಗೂ ಅದರ ನೀರಿನ ಪ್ರಮಾಣವನ್ನು ಅವಲಂಬಿಸಿದೆ. ಪ್ರವಾಹಕಾಲದಲ್ಲಿ ಸಾಗಾಣಿಕೆ ಹೆಚ್ಚು. ನದಿಯ ಈ ಕಾರ್ಯ ಮೂರು ಬಗೆ: 1. ದೊಡ್ಡಗುಂಡು ಕಲ್ಲುಗಳನ್ನು ನುರುಜು ಮತ್ತು ಮರಳಿನ ಕಣಗಳನ್ನು ಪ್ರವಾಹದೊಡನೆ ಎಳೆದು ಸಾಗಿಸುತ್ತದೆ; 2. ಸೂಕ್ಷ್ಮಕಣಗಳು ಹಾಗೂ ಹಗುರ ವಸ್ತುಗಳನ್ನು ತೇಲಿಸಿಕೊಂಡು ಹೋಗುತ್ತದೆ, 3. ಲವಣಗಳೇ ಮುಂತಾದ ವಸ್ತುಗಳನ್ನು ತನ್ನಲ್ಲಿ ತೇಲಿಸಿಕೊಂಡು ಸಾಗಿಸುತ್ತದೆ. ಅಮೆರಿಕದ ಮಿಸಿಸ್ಸಿಪ್ಪಿ ನದಿ ಅಗಾಧ ಪ್ರಮಾಣದಲ್ಲಿ ಈ ಕೆಲಸವನ್ನು ಮಾಡುತ್ತಿದೆ. ಭಾರತದ ಹಾಗೂ ನಮ್ಮ ನೆರೆಯ ದೇಶದ ಗಂಗಾ ಬ್ರಹ್ಮಪುತ್ರಾ ಹ್ವಾಂಗ್ಹೋನದಿಗಳು ಪ್ರತಿವರ್ಷ 4,50,00,00,000 ಟನ್ ತೂಕದ ವಸ್ತುವನ್ನು ಸಾಗಿಸುತ್ತವೆ. ನದಿಯ ಹರಿವಿನ ವೇಗ ಕಡಿಮೆ ಆದಂತೆ ಈ ವಸ್ತುಗಳು ಅನುಕೂಲ ಸ್ಥಳಗಳಲ್ಲಿ ವಿಸರ್ಜಿಸಲ್ಪಡುವುವು. ಹೀಗೆ ಹಗುರಾದ ನದಿ ಮುಂದೆ ಸಾಗರದತ್ತ ಸಾಗುತ್ತದೆ. ಬೆಟ್ಟದಿಂದ ಹರಿಯುವ ನದಿ ತಪ್ಪಲನ್ನು ಮುಟ್ಟುವ ವೇಳೆಗೆ ಅದರ ವೇಗ ಹಾಗೂ ರಭಸ ಸಾಕಷ್ಟು ಕಡಿಮೆಯಾಗಿ ಅದು ಹೊತ್ತು ತರುತ್ತಿದ್ದ ದಪ್ಪ ದಪ್ಪ ಕಲ್ಲುಗಳು ಹಾಗೂ ಮರಳು ಆ ತಪ್ಪಲಿನಲ್ಲಿ ತ್ರಿಕೋನಾಕಾರದ ಮೆಕ್ಕಲು ಬೀಸಣಿಗೆಗಳಂತೆ ಶೇಖರವಾಗುತ್ತದೆ. ಇವು ಬೆಟ್ಟದ ಕಡೆಗೆ ಕಿರಿದಾಗಿದ್ದು ಮೈದಾನದ ಕಡೆಗೆ ಅಗಲವಾಗುತ್ತ ಹೋಗುತ್ತವೆ. ನದಿಯ ಪ್ರವಾಹ ಕುಗ್ಗಿದಾಗಲೂ ಅದು ಒಯ್ಯುತ್ತಿದ್ದ ಅಪಾರ ವಸ್ತುರಾಶಿ ಇಕ್ಕೆಲಗಳಲ್ಲೂ ವಿಸರ್ಜಿತವಾಗಿ ಶೇಖರವಾಗುತ್ತವೆ. ಇವೇ ಪ್ರವಾಹ ಬಯಲುಗಳು. ಇವು ಬೇಸಾಯಕ್ಕೆ ಅತ್ಯಂತ ಫಲವತ್ತಾದ ಪ್ರದೇಶಗಳು. ಉತ್ತರ ಭಾರತದ ಸಿಂಧೂ-ಗಂಗಾ ಬೃಹತ್ ಬಯಲು ಪ್ರದೇಶ ಇದಕ್ಕೊಂದು ಉತ್ತಮ ಉದಾಹರಣೆ. ನದಿಯ ಸಂಗಮಗಳಲ್ಲಿ ಸಹ ಉಪನದಿಯ ವೇಗ ಕುಗ್ಗುವ ಕಾರಣ ಮೆಕ್ಕಲು ಶೇಖರವಾಗುತ್ತದೆ. ಸರೋವರಗಳನ್ನು ಸೇರುವ ನದಿಗಳು ವರ್ಷಂಪ್ರತಿ ಹೀಗೆ ಮೆಕ್ಕಲನ್ನು ತಂದು ತುಂಬುವುದರಿಂದ ಸರೋವರಗಳು ಕ್ರಮೇಣ ಬತ್ತಿ ಹೋಗುವುದೂ ಉಂಟು. ಬಯಲು ಪ್ರದೇಶದಲ್ಲಿ ಹರಿಯುವ ನದಿಯ ತಿರುವುಗಳಲ್ಲೂ ವೇಗ ಕಡಿಮೆ ಆಗುವುದರಿಂದ ಹೀಗೆಯೇ ಮರಳುಮೆಕ್ಕಲು ಅಪಾರವಾಗಿ ಶೇಖರವಾಗುತ್ತದೆ. ಕಡೆಯದಾಗಿ ನದಿ ಸಮುದ್ರವನ್ನು ಸೇರುವೆಡೆ ಅದರ ವೇಗ ಸ್ಥಗಿತಗೊಂಡು ಅದು ಸಾಗಿಸುತ್ತಿದ್ದ ಎಲ್ಲ ವಸ್ತುಗಳೂ ಶೇಖರಗೊಂಡು ಬಲು ವಿಶಾಲವಾದ ಮೆಕ್ಕಲು ಪ್ರದೇಶ ರೂಪುಗೊಳ್ಳುತ್ತದೆ. ಇದೇ ನದಿ ಮುಖಜ ಭೂಮಿ. ನದಿಯ ವೇಗ ಕಡಿಮೆ ಆಗುವ ಕಾರಣ ಅದು ಹಲವಾರು ಶಾಖೆಗಳಾಗಿ ಒಡೆದು ತಾನೇ ನಿರ್ಮಿಸಿದ ಮೆಕ್ಕಲು ಪ್ರದೇಶದ ಮೂಲಕ ಹಾದು ಕಟ್ಟಕಡೆಗೆ ಸಮುದ್ರವನ್ನು ಸೇರುತ್ತದೆ. ನದೀಮುಖಜ ಭೂಮಿ ತ್ರಿಕೋನಾಕಾರವಾಗಿದ್ದು ಸಮುದ್ರದ ಕಡೆ ಸರಿದಂತೆಲ್ಲ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಗಂಗಾ-ಬ್ರಹ್ಮಪುತ್ರ ಮುಖಜಭೂಮಿ, ಕಾವೇರಿ ಮುಖಜ ಭೂಮಿ. ಈಜಿಪ್ಟಿನ ನೈಲ್‍ನದಿಯ ಮುಖಜ ಭೂಮಿ-ಇವನ್ನು ಇಲ್ಲಿ ಉದಾಹರಿಸಬಹುದು.

ಕೆಲವು ಸಂದರ್ಭಗಳಲ್ಲಿ ನದಿಹರಿಯುವ ಪ್ರದೇಶಗಳಲ್ಲಿ ಉಂಟಾಗುವ ಸ್ತರಭಂಗಗಳೇ ಮೊದಲಾದ ಭೂಚಟುವಟಿಕೆಗಳಿಂದ ಅಲ್ಲಿಯ ಭೂಮಟ್ಟ ಏರುತ್ತ ನದಿಯ ಪಾತ್ರ ಕೆಳಮಟ್ಟಕ್ಕೆ ಸಾಗುವುದುಂಟು. ಹಾಗೂ ಅದರ ಪಾತ್ರದ ಇಳಿಜಾರೂ ಅಧಿಕಗೊಂಡು ಮಂದಗತಿಯಲ್ಲಿ ಹರಿಯುತ್ತಿದ್ದ ನದಿ ರಭಸದಿಂದ ಹರಿಯಲು ಪ್ರಾರಂಭಿಸುತ್ತದೆ. ಅದರ ಕಾರ್ಯಾಚರಣೆಯೂ ತೀವ್ರಗೊಳ್ಳುವುದು. ಇದಕ್ಕೆ ನದಿಯ ಕಾಯಕಲ್ಪ ಎಂದು ಹೆಸರು. ಅಲ್ಲದೇ ನದಿಯ ಪಾತ್ರ ಇಕ್ಕೆಲಗಳಲ್ಲೂ ಮೆಟ್ಟಲು ಮೆಟ್ಟಲಾದ ಮೆಕ್ಕಲಿನ ಶೇಖರಣೆಯನ್ನು ಕಾಣಲು ಸಾಧ್ಯ. ಇವೇ ನದಿಯ ಮೆಟ್ಟಲೂ. ಇವು ನದಿಯ ಪ್ರವಾಹ ಮಟ್ಟಕ್ಕೆ ಕೊಂಚ ಮೇಲ್ಭಾಗದಲ್ಲಿದ್ದು ಅದರ ಇಕ್ಕೆಲಗಳಲ್ಲೂ ಬಲು ದೂರದವರೆಗೆ ವ್ಯಾಪಿಸಿರುವುದುಂಟು. ನಿರ್ದಿಷ್ಟ ಪ್ರದೇಶದಲ್ಲಿ ಕಾಲಕ್ರಮೇಣ ಹೀಗೆ ಉಂಟಾದ ಹಲವಾರು ಮೆಟ್ಟಲುಗಳನ್ನು ಗುರುತಿಸಬಹುದು. ಇಂಥ ಪ್ರದೇಶಗಳಲ್ಲಿ ಹಳೆಯ ಮೆಟ್ಟಲುಗಳು ಮೇಲ್ಭಾಗದಲ್ಲೂ ಹೊಸವು ಅಡಿಭಾಗದಲ್ಲಿ ನದಿಗೆ ಬಹು ಸಮೀಪದಲ್ಲೂ ಹರಡಿರುತ್ತವೆ. ಅಂದರೆ ಅಲ್ಲಿಯ ಭೂಭಾಗ ಹಲವಾರು ಬಾರಿಮೇಲು ಮೇಲಕ್ಕೆ ಎತ್ತಲ್ಪಟ್ಟಿರುವುದು ಸ್ಪಷ್ಟ.

ಒಮ್ಮೊಮ್ಮೆ ಅಕ್ಕಪಕ್ಕದಲ್ಲಿ ಹರಿಯುವ ಎರಡು ನದಿಗಳಲ್ಲಿ ಬಲಿಷ್ಠವಾದುದು ಕ್ರಮವಾಗಿ ತನ್ನ ಕಾರ್ಯಾಚರಣೆಯಿಂದ ಭೂಮಿಯನ್ನು ಕೊರೆಯುತ್ತ ಹಿಂದು ಹಿಂದಕ್ಕೆ ಸರಿಯುತ್ತ ಪಕ್ಕದ ನದಿಯ ಪಾತ್ರವನ್ನು ಸೆರೆಹಿಡಿದು ಅಲ್ಲಿ ಹರಿಯುತ್ತಿದ್ದ ನೀರನ್ನೆಲ್ಲ ತನ್ನೆಡೆಗೆ ಬದಲಿಸಿ ಅಪಹರಿಸಿ ಆ ನದಿಯನ್ನು ನಿರ್ನಾಮಗೊಳಿಸುವುದೂ ಉಂಟು. ಹೀಗೆ ಪ್ರಕೃತಿಯಲ್ಲಿ ನಡೆಯುವ ದರೋಡೆಯೇ ನದಿಯ ಚೌರ್ಯ. ಕರ್ನಾಟಕದ ಶರಾವತಿ ಬಲು ಹಿಂದೆ ಹೀಗೆ ದರೋಡೆ ನಡೆಸಿದೆಯೆಂದು ಭಾವಿಸಲಾಗಿದೆ.

ಪ್ರವಾಹ ಬದಲಾಯಿಸಿ

ನದಿಗಳ ಪ್ರವಾಹದಿಂದ ಉಂಟಾಗುವ ಕಷ್ಟನಷ್ಟಗಳು ಅಪಾರ. ಭಾರತದಲ್ಲಿ ಪ್ರತಿವರ್ಷ ಸುಮಾರು 1,400 ಕೋಟಿ ರೂಪಾಯಿ ನಷ್ಟವಾಗುವುದೆಂದು ಅಂದಾಜು. ಅದರಲ್ಲೂ ಉತ್ತರ ಭಾರತದ ಗಂಗಾ, ಬ್ರಹ್ಮಪುತ್ರ ಹಾಗೂ ಇವುಗಳ ಉಪನದಿಗಳಿಂದಾಗುವ ಪ್ರವಾಹಗಳು ಅಪಾರ ಆಸ್ತಿ, ಬೆಳೆಗಳನ್ನು ಆಹುತಿ ತೆಗೆದುಕೊಳ್ಳುತ್ತವೆ. ಇವು ಹರಿಯುವ ಪ್ರದೇಶ ಮೆಕ್ಕಲು ಮಣ್ಣಿನಿಂದ ಕೂಡಿದ್ದು ಗಟ್ಟಿಯಾಗಿರದೆ ತ್ವರಿತವಾಗಿ ನದಿಯ ನೀರಿನ ಕೊರೆತಕ್ಕೆ ಒಳಗಾಗುವುದೇ ಇದರ ಕಾರಣ. ದಡದ ಉದ್ದಕ್ಕೂ ಅಸಂಖ್ಯಾತ ಬಿರುಕು ಕೊರಕಲುಗಳು ಉಂಟಾಗಿ ನೀರು ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗುತ್ತದೆ. ದೆಹಲಿ, ಪಾಟ್ನ, ದಿಬ್ರೂಘರ್ ಈ ನಗರಗಳಂತೂ ಪ್ರತಿ ವರ್ಷವೂ ನೆರೆಯ ಹಾವಳಿಯಿಂದ ಅಪಾರ ಹಾನಿಗೆ ಒಳಗಾಗುತ್ತವೆ. ಇದನ್ನು ತಡೆಗಟ್ಟಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೊದಲನೆಯದಾಗಿ ಅಣೆಕಟ್ಟುಗಳನ್ನು ಯುಕ್ತ ಸ್ಥಳಗಳಲ್ಲಿ ನಿರ್ಮಿಸಿ ಹೆಚ್ಚಿನ ನೀರನ್ನು ವ್ಯವಸಾಯಕ್ಕೆ ಉಪಯುಕ್ತವಾಗಿ ಬಳಸಿಕೊಂಡು ಪ್ರವಾಹದ ಹಾವಳಿಯನ್ನು ತಡೆಗಟ್ಟಬಹುದು. ನದಿಯ ಇಕ್ಕೆಲೆಗಳಲ್ಲೂ ಭಾರಿದಂಡೆಗಳನ್ನು ಕಟ್ಟಿ ಪ್ರವಾಹ ಕಾಲದಲ್ಲಿ ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಯಬಹುದು. ನದಿಯ ಪಾತ್ರದಲ್ಲೇ ಯೋಗ್ಯ ಬದಲಾವಣೆಗಳನ್ನು ಮಾಡುವುದರ ಮೂಲಕವೂ ನೆರೆಯ ಹಾವಳಿಯನ್ನು ನಿಯಂತ್ರಿಸಲು ಸಾಧ್ಯ. ಸುಪ್ರಸಿದ್ಧ ಎಂಜಿನಿಯರ್ ಕೆ.ಎಲ್.ರಾವ್ ಕೆಲವು ವರ್ಷಗಳ ಹಿಂದೆ ಸೂಚಿಸಿದ ಗಂಗಾ-ಕಾವೇರಿ ನದಿಗಳ ವ್ಯೂಹರಚನೆಯೂ ಈ ದಿಶೆಯಲ್ಲೊಂದು ದಿಟ್ಟಮಾರ್ಗ.

ನಾಗರಿಕತೆಗಳು ಬದಲಾಯಿಸಿ

ನದಿಗಳು ಒಂದು ಪ್ರದೇಶದ ನಾಗರಿಕತೆಯ ಬೆಳವಣಿಗೆಯಲ್ಲಿ ಹಾಸುಹೊಕ್ಕಾಗಿದ್ದು ಪ್ರಮುಖ ಪಾತ್ರವನ್ನು ವಹಿಸಿವೆ ಎಂದರೆ ಅತಿಶಯೋಕ್ತಿ ಎನಿಸದು. ಅದರಲ್ಲೂ ಮೆಕ್ಕಲು ಪ್ರದೇಶಗಳಲ್ಲಿ ಹರಿಯುವ ನದಿಗಳ ಇಕ್ಕೆಲಗಳಲ್ಲಿ ಹಲವಾರು ಸುಸಂಸ್ಕøತ ಸಮಾಜಗಳು ಮೈದಳೆದಿರುವುದನ್ನು ಕಾಣಬಹುದು. ಅರಿಹ ನದಿಯ ಪ್ರದೇಶದಲ್ಲಿ 10,000 ವರ್ಷಗಳ ಹಿಂದೆಯೇ ಸುಸಂಸ್ಕøತ ಜನಾಂಗವೊಂದು ನೆಲಸಿದ್ದುದರ ದಾಖಲೆಗಳು ದೊರೆತಿವೆ. ಮಧ್ಯ ಪ್ರಾಚ್ಯದ ಟೈಗ್ರಿಸ್-ಯೂಫ್ರೆಟಿಸ್ ಮತ್ತು ಈಜಿಪ್ಟಿನ ನೈಲ್‍ನದಿಯ ಕಣಿವೆಗಳಲ್ಲಿ 6,000 ವರ್ಷಗಳ ಹಿಂದೆಯೇ ನಾಗರಿಕ ಜನಾಂಗವಿದ್ದುದು ತಿಳಿದು ಬಂದಿದೆ. ಸಿಂಧೂಕಣಿವೆಯ ಮೊಹೆಂಜೊದಾರೊ ಪ್ರದೇಶದ ನಾಗರಿಕತೆ 4,500 ವರ್ಷಗಳಷ್ಟೂ ಗಂಗಾ ಬಯಲು ಸೀಮೆಯ ಆರ್ಯನಾಗರಿಕತೆ 3,000 ವರ್ಷಗಳಷ್ಟೂ ಪ್ರಾಚೀನವಾದುದು. ಹೀಗೆ ನಮ್ಮ ಪುರಾತನರು ನದಿಗಳಿಂದ ಉಪಕೃತರಾಗಿ ಅವುಗಳಲ್ಲಿ ಪೂಜ್ಯಭಾವನೆ ತಳೆದುದರಲ್ಲಿ ಆಶ್ಚರ್ಯವೇನಿಲ್ಲ. ಇಂದಿಗೂ ನಮ್ಮ ಮುತ್ತೈದೆಯರು ಗಂಗಾ ಪೂಜೆಯನ್ನು ಮಾಡುತ್ತಾರೆ. ಕೆಲವು ಪುಣ್ಯನದಿಗಳಲ್ಲಿ ಮಿಂದು ಬಂದರೆ ಸರ್ವಪಾಪಗಳೂ ಪರಿಹಾರವಾಗುತ್ತವೆ ಎನ್ನುವ ಭಾವನೆ ಅನೇಕರಲ್ಲಿ ಬೇರೂರಿದೆ. ನದಿಯ ನೀರು ಬರಿಯ ನೀರಲ್ಲ, ಅದು ತೀರ್ಥ. ಈ ಎಲ್ಲ ಮನೋಧರ್ಮದ ಹಿನ್ನೆಲೆ ನದಿಗಳು ನಮಗೆ ಎಸಗಿರುವ ಅಪಾರ ಉಪಕಾರ. ಆದ್ದರಿಂದಲೇ ನಮಗೆ ಗಂಗಾನದಿ ಪವಿತ್ರ ಗಂಗಾಮಾತೆ.

ಭಾರತದ ಪ್ರಾಚೀನ ಗ್ರಂಥಗಳಾದ ವೇದ, ಪುರಾಣ, ಶಾಸ್ತ್ರ ಮತ್ತ ಸಂಹಿತೆಗಳಲ್ಲಿ ಇಂದಿನ ಅನೇಕ ನದಿಗಳ ಉಲ್ಲೇಖವಿದೆ. ಋಗ್ವೇದದಲ್ಲಿ ಅತಿಪ್ರಾಚೀನವಾದ ಆರ್ಯಾವರ್ತ ಪವಿತ್ರವಾದ ಸಪ್ತನದಿಗಳ ನೀರಿನಿಂದ ಪುನೀತಗೊಂಡಿದೆ ಎಂದು ನಮೂದಿಸಲಾಗಿದೆ. ಇಂದಿನ ಪಂಜಾಬಿನ ಐದು ನದಿಗಳ ಜತೆ, ಸಿಂಧೂ ಮತ್ತು ಸರಸ್ವತಿಯೂ ಸೇರಿದ ಸಪ್ತನದಿಗಳನ್ನು ಉಲ್ಲೇಖಿಸಲಾಗಿದೆ. ಆರ್ಯಾವರ್ತ ದಕ್ಷಿಣದತ್ತ ವಿಸ್ತಾರಗೊಂಡಂತೆ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ ಮತ್ತು ಕಾವೇರಿ ಇವು ಸಪ್ತನದಿಗಳೆಂದು ಹೇಳಲಾಯಿತು. ಗ್ರೀಸ್‍ದೇಶದ ಪ್ರಸಿದ್ಧ ಖಗೋಳವಿಜ್ಞಾನಿ ಹಾಗೂ ಭೂಗೋಳಶಾಸ್ತ್ರ ಪರಿಣತ ಟಾಲೆಮಿಯ ಲೇಖನಗಳಲ್ಲಿ ಸಹ ಈ ನದಿಗಳನ್ನು ನಮೂದಿಸಲಾಗಿದೆ. ಮಹಾಭಾರತದ ತೀರ್ಥಯಾತ್ರೆ ಮತ್ತು ದಿಗ್ವಿಜಯ ಪರ್ವಗಳಲ್ಲೂ ರಾಮಾಯಣದ ಕಿಷ್ಕಿಂಧಾಕಾಂಡ, ಭುವನಕೋಶ, ಪುರಾಣಗಳ ಜಂಬೂದ್ವೀಪವರ್ಣನೆ ಮತ್ತು ಕೂರ್ಮವಿಭಾಗಗಳು, ವರಾಹಮಿಹಿರನ ಬೃಹತ್ ಸಂಹಿತಾ ಈ ಎಲ್ಲ ಉದ್ಗ್ರಂಥಗಳಲ್ಲೂ ಅನೇಕ ನದಿಗಳ ವರ್ಣನೆಯಿದೆ. ಭಾಗವತ ಪುರಾಣದಲ್ಲಿ ಎಲ್ಲ ನದಿಗಳು ಪರ್ವತಗಳ ಶಿಖರಗಳಲ್ಲಿ ಜನ್ಮತಳೆಯುತ್ತವೆಂದು ನಮೂದಿಸಲಾಗಿದೆ. ಇವುಗಳಲ್ಲಿ ಹಿಮವತ್ಪರ್ವತವೇ ಅಗ್ರಮಾನ್ಯ. ಇದು ವರ್ಷಪರ್ವತ.

ರಾಜನಿಘಂಟಿನಲ್ಲಿ ವಿವಿಧ ನದಿಗಳ ನೀರಿನ ಬಗೆಬಗೆಯ ಗುಣಗಳ ವರ್ಣನೆಯಿಂದ ಹಿಮಾಚಲದಲ್ಲಿ ಹುಟ್ಟುವ ನದಿಗಳ ನೀರು ಅಮೃತಸಮಾನ. ವಿಂಧ್ಯಾಚಲದ ಕೆಲವು ನದಿಗಳ ನೀರು ರೋಗಕಾರಕ ಹಾಗೂ ಹಲವು ನದಿಗಳ ನೀರು ರೋಗನಿವಾರಕ. ಕೆಲವು ನದಿಗಳ ನೀರಿನಿಂದ ತಲೆಶೂಲೆ, ಹೃದಯಶೂಲೆ, ಕುಷ್ಠ ಮತ್ತು ಆನೆಕಾಲು ರೋಗಗಳು ಬರುತ್ತವಂತೆ; ಗೋದಾವರಿಯ ನೀರು ದಾಹವನ್ನು ನಿವಾರಿಸುವುದೇ ಅಲ್ಲದೆ ಕುಷ್ಠ, ಕ್ಷಯ ಮತ್ತು ರಕ್ತದ ಒತ್ತಡಗಳನ್ನು ನಿವಾರಿಸಬಲ್ಲದು. ಹೀಗೆ ನಮ್ಮ ಪ್ರಾಚೀನರು ನದಿಗಳನ್ನು ಕುರಿತು ಸಾಕಷ್ಟು ವಿವರವಾದ ಅಧ್ಯಯನಗಳನ್ನು ನಡೆಸಿದ್ದರೆನ್ನುವುದು ನಿರ್ವಿವಾದ. ಆದರೂ ಅವರ ಪೀಳಿಗೆಯವರಾದ ಇಂದಿನ ನಾವು ಈ ದಿಸೆಯಲ್ಲಿ ನಡೆಸಿರುವ ಅಧ್ಯಯನ ಸಾಕಷ್ಟು ತೃಪ್ತಿಕರವಾಗಿಲ್ಲವೆಂದೇ ಹೇಳಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂದರೆ 1948ರಿಂದೀಚೆಗೆ, ಭಾರತದಲ್ಲಿ ನದಿಗಳ ವೈಜ್ಞಾನಿಕ ಅಧ್ಯಯನ ಮೊದಲಾಯಿತೆನ್ನಬಹುದು. ಅವುಗಳ ನೀರಿನ ಬಳಕೆಯ ವಿಧಾನಗಳು, ಪ್ರವಾಹ ನಿಯಂತ್ರಣ, ಅಣೆಕಟ್ಟು ವಿದ್ಯುದಾಗಾರಗಳ ನಿರ್ಮಾಣ ಹೀಗೆ ಹಲವಾರು ಘಟ್ಟಗಳಲ್ಲಿ ವಿವರವಾದ ಅಧ್ಯಯನಗಳನ್ನು ಪ್ರಾರಂಭಿಸಲಾಗಿದೆ.

ಭಾರತದ ನದಿಗಳು ಬದಲಾಯಿಸಿ

ಇವನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದಲ್ಲಿ ಹಿಮಾಲಯದ ನದಿಗಳೂ ಎರಡನೆಯ ವರ್ಗದಲ್ಲಿ ಪರ್ಯಾಯ ದ್ವೀಪ ಭಾಗ ಅಂದರೆ ದಕ್ಷಿಣ ಭಾರತದ ನದಿಗಳೂ ಇವೆ. ಹಿಮಾಲಯದ ನದಿಗಳಲ್ಲಿ ನೀರು ಯಥೇಚ್ಛವಾಗಿ ವರ್ಷದ ಉದ್ದಕ್ಕೂ ಹರಿಯುತ್ತಿರುತ್ತದೆ. ಇವು ಫಲವತ್ತಾದ ಮೈದಾನ ಪ್ರದೇಶದಲ್ಲಿ ಅಗಲವಾದ ಪಾತ್ರಗಳಲ್ಲಿ ಗಂಭೀರವಾಗಿ ಹರಿಯುವ ಜೀವಂತ ನದಿಗಳು. ಆಗಾಗ ತೋರುವ ಭೂಬದಲಾವಣೆಗಳೂ ಹಾಗೂ ಪ್ರವಾಹಗಳಿಂದಾಗಿ ಕೋಸಿ ಮುಂತಾದ ಪಾತ್ರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇವುಗಳಿಂದಾಗುವ ನೆರೆಯ ಹಾವಳಿಯೂ ಅಧಿಕ. ಆದರೆ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯಕ್ಕೆ, ಸಣ್ಣಪುಟ್ಟ ನೌಕೆಗಳು ಮತ್ತು ನಾಡದೋಣಿಗಳ ಯಾನಕ್ಕೆ ಉಪಯುಕ್ತವೆನಿಸಿವೆ. ತದ್ವಿರುದ್ಧವೆನ್ನುವಂತೆ ಪರ್ಯಾಯದ್ವೀಪದ ನದಿಗಳಿಗೆ ಉತ್ತಮ ಪ್ರಮಾಣದಲ್ಲಿ ನೀರಿನ ಸರಬರಾಜಿಲ್ಲ. ಇವು ಹುಟ್ಟುವ ಪರ್ವತಗಳು ಹಿಮಾಚ್ಛಾದಿತವಲ್ಲ. ಮಳೆಗಾಲದಲ್ಲಿ ಭೋರ್ಗರೆದು ಬೇಸಗೆಯಲ್ಲಿ ನೀರಿಲ್ಲದೆ ಕುಗ್ಗಿ ಹರಿಯುತ್ತವೆ. ಕೆಲವು ಬತ್ತಿಹೋಗುವುದೂ ಉಂಟು. ಇನ್ನು ಕೆಲವು ನದಿಗಳಲ್ಲಂತೂ ತುಂಬು ಪ್ರವಾಹ ಅತಿ ಅಪರೂಪ. ಈ ಭಾಗಗಳಲ್ಲಿ ಮಳೆಯೂ ಅಷ್ಟು ಹೆಚ್ಚಾಗಿಲ್ಲ. ಇವು ಪ್ರವಹಿಸುವ ನೆಲವೂ ಗಡುಸಾಗಿದ್ದು ಇವುಗಳ ದಿಕ್ಕಿನಲ್ಲಿ ಬದಲಾವಣೆಗಳಾಗುವುದು ವಿರಳ.

ಹಿಮಾಲಯದ ನದಿಗಳಲ್ಲಿ ಮುಖ್ಯವಾದವು: ಸಿಂಧೂ, ಗಂಗಾ, ಬ್ರಹ್ಮಪುತ್ರ ಹಾಗೂ ಇವುಗಳ ಉಪನದಿಗಳ ಜಾಲ.

ಸಿಂಧೂನದಿ ಟಿಬೆಟ್ ಪ್ರಾಂತದ ಹಿಮಾವೃತ 5,000 ಮೀಟರ್ ಎತ್ತರದ ಪ್ರದೇಶದಲ್ಲಿ ಹುಟ್ಟಿ ಭಾರತದ 17,844 ಚಕಿಮೀ ವಿಸ್ತಾರದ ಪ್ರದೇಶದಲ್ಲಿ 709 ಕಿಮೀ ದೂರ ಹರಿಯುತ್ತದೆ. ಇದರ ಮುಖ್ಯ ಉಪನದಿಗಳು ಜೀಲಮ್, ಚೀನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್. ಸಟ್ಲೆಜ್ (ಶತದ್ರು) ನದಿಗೆ ಅಡ್ಡವಾಗಿ ಭಾಕ್ರಾ ಕಣಿವೆಯಲ್ಲಿ ಕಟ್ಟೆ ಕಟ್ಟಿ ಬೃಹತ್ ಜಲಾಶಯವನ್ನು ನಿರ್ಮಿಸಲಾಗಿದೆ. ಸಿಂಧೂ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣದಲ್ಲಿ ಹೆಚ್ಚಿನ ವೈಪರೀತ್ಯಗಳಿವೆ. ಬೇಸಗೆಯಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಚಳಿಗಾಲದಲ್ಲಿ ಹರಿಯುವ ನೀರು ಕಡಿಮೆ.

ಗಂಗಾನದಿ: ಭಾರತದ ಬಲುಮುಖ್ಯ ನದಿ. ಇದು ಬಲು ಫಲವತ್ತಾದ ಬಯಲು ಪ್ರದೇಶದಲ್ಲಿ ಹರಿಯುತ್ತದೆ. ಹಿಂದೂ ಧರ್ಮೀಯರಿಗೆ ಅತ್ಯಂತ ಪೂಜ್ಯ ಹಾಗೂ ಪವಿತ್ರ. ಇದು ಸಹ ಹಿಮಾಲಯದ ಗಂಗೋತ್ರಿಯಲ್ಲಿ ಜನಿಸಿ 9,51,600 ಚಕಿಮೀ ಪ್ರದೇಶದಲ್ಲಿ 2,071 ಕಿಮೀ ಉದ್ದಕ್ಕೂ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ದೇವಪ್ರಯಾಗದಲ್ಲಿ ಇದರ ಮೂಲ ಶಾಖೆಗಳಾದ ಅಲಕಾನಂದ ಮತ್ತು ಭಾಗೀರಥಿಗಳು ಒಂದುಗೂಡಿ ಮುಂದೆ ಇದು ಗಂಗಾನದಿ ಎನಿಸುತ್ತದೆ. ಅಲಹಾಬಾದಿನ ಪ್ರಯಾಗದ ಬಳಿ ಯಮುನಾ ಮತ್ತು ಅಗೋಚರ ಸರಸ್ವತಿ ನದಿಗಳನ್ನು ಕೂಡಿಕೊಂಡು ಮುಂದೆ ತೋನ್ಸ್, ಗೋಮತಿ, ಘಾಘ್ರಾ, ಶೋಣ ಮತ್ತು ಗಂಡಕಿ ನದಿಗಳನ್ನು ಕೂಡಿಕೊಂಡು ಮಾಂಘೇರ್ ಮತ್ತು ಭಾಗಲ್ಪುರಗಳನ್ನು ದಾಟಿ ಬುಹ್ರಿ ಗಂಡಕಿ ಮತ್ತು ಕೋಸಿ ನದಿಗಳನ್ನು ತನ್ನಲ್ಲಿ ಸೇರಿಸಿಕೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಬ್ರಹ್ಮಪುತ್ರ ನದಿ: ಟಿಬೆಟಿನಲ್ಲಿ ಜನಿಸಿ ಟಿಬೆಟ್, ಬಾಂಗ್ಲಾ ದೇಶ ಮತ್ತು ಭಾರತಗಳಲ್ಲಿ ಪ್ರವಹಿಸುತ್ತದೆ. ಇದು ಪ್ರವಹಿಸುವ ನೆಲಭಾಗದ ವಿಸ್ತೀರ್ಣ 5,80,000 ಚಕಿಮೀ. ಒಟ್ಟು ಉದ್ದ 2,580 ಕಿಮೀನಲ್ಲಿ ಕೇವಲ 885 ಕಿಮೀ ಭಾರತದಲ್ಲಿದೆ. ಇದು ಹರಿವ ಹೆಚ್ಚಿನ ಭಾಗ ಬೆಟ್ಟಗಳಿಂದ ಆವೃತವಾದ ದಟ್ಟಕಾಡುಮೇಡು. ಈ ನದಿಯ ಬಯಲು ಭಾಗದಲ್ಲಿ ಜನಸಾಂದ್ರತೆ ಕಡಿಮೆ. ಪ್ರವಾಹ ಗಂಗೆಯಷ್ಟು ಗಂಭೀರವಾಗಿರುವುದಿಲ್ಲ. ಬ್ರಹ್ಮಪುತ್ರನದಿಯನ್ನು ನಾವು ಸಾಕಷ್ಟು ಬಳಸಿಕೊಂಡೂ ಇಲ್ಲ. ಇದರ ಮುಖ್ಯ ಉಪನದಿಗಳು ರಾಜಾ ಟ್ಸಾಂಗ್ ಪೋ, ಗಾಂಗ್ ಚೂ, ಕ್ಯಿಚೂ, ಗಿಯಾಮ್ಡ ಚೂ. ನದಿ ಅಸ್ಸಾಮ್ ಕಣಿವೆಯಲ್ಲಿ ಅತಿ ವಿಶಾಲ ಪಾತ್ರಗಳಲ್ಲಿ ಹರಿಯುತ್ತಿದ್ದು ಸುಬನ್‍ಸಿಮ್, ಕಾಮೆಂಗ್, ಮಾನಸ, ಬುರ್ಹಿ ದಿಹಿಂಗ್, ಕೊಪಿಲಿ, ಧನಸಿರಿ ಮುಂತಾದ ಇತರ ಮುಖ್ಯ ಉಪನದಿಗಳು ಇದನ್ನು ಬಂದು ಸೇರುತ್ತವೆ. ಮುಂದೆ ಬಾಂಗ್ಲಾ ದೇಶದ ಮೂಲಕ ಹರಿದು ಗೋಲುಂಡೊ ಬಳಿ ಗಂಗಾನದಿಯೊಡನೆ ಸಂಗಮವಾಗುತ್ತದೆ. ಈ ನದಿಯ ಜಲಾನಯನ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಮಳೆ ವರ್ಷಕ್ಕೆ ಸುಮಾರು 2,125 ಮಿಲಿಮೀಟರ್‍ಗಳಷ್ಟು ಸುರಿಯುತ್ತದೆ.

ಪರ್ಯಾಯದ್ವೀಪದ ನದಿಗಳು: ಇವುಗಳಲ್ಲಿ ಎರಡು ಬಗೆ: 1. ಪಶ್ಚಿಮದತ್ತ ಹರಿಯುವ ನದಿಗಳು; 2. ಪೂರ್ವದತ್ತ ಹರಿಯುವ ನದಿಗಳು. ಈ ಎಲ್ಲ ಅಂದರೆ ಸುಮಾರು 600 ನದಿಗಳಿಗೆ ಪಶ್ಚಿಮಘಟ್ಟಗಳೇ ಜನ್ಮಸ್ಥಾನ. ಪಶ್ಚಿಮದತ್ತ ಹರಿವ ನದಿಗಳು ಕೇವಲ 80 ಕಿಮೀಗಳಷ್ಟು ದೂರ ಹರಿದು ಸಮುದ್ರಪಾಲಾಗುತ್ತವೆ. ಹೀಗಾಗಿ ಇವುಗಳ ಉಪಯೋಗ ಬಲು ಸೀಮಿತ. ಅಲ್ಲದೆ ಇವುಗಳ ಬಳಕೆಯನ್ನು ಅಷ್ಟಾಗಿ ರೂಢಿಸಿಕೊಂಡಿಲ್ಲ. ಇಕ್ಕಟ್ಟಾದ ಕರಾವಳಿ ಪ್ರದೇಶವಾದ ಕಾರಣ ನೀರಾವರಿಗೆ ಅಷ್ಟು ಉಪಯುಕ್ತವೆನಿಸಿಲ್ಲ. ಹಲವು ಕಡೆ ವಿದ್ಯುಜ್ಜನಕ ಕೇಂದ್ರಗಳ ಸ್ಥಾಪನೆಗೆ ಅನುಕೂಲವಾದ ವಾತಾವರಣವಿದೆ. ನರ್ಮದಾ ಮತ್ತು ತಾಪಿ ನದಿಗಳು ಮಾತ್ರ ಈ ಗುಂಪಿನಲ್ಲಿ ಸಾಕಷ್ಟು ದೂರ ಹರಿಯುವ ನದಿಗಳು.

ಪೂರ್ವ ದಿಕ್ಕಿನತ್ತ ಪ್ರವಹಿಸುವ ನದಿಗಳ ಪೈಕಿ ಮುಖ್ಯವಾದವು ಮಹಾನದಿ, ಬ್ರಾಹ್ಮಣಿ, ವೈತರಣಿ, ಸುವರ್ಣರೇಖಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ. ಬಹುಶಃ ದಖನ್ ಪ್ರಸ್ಥಭೂಮಿಯಲ್ಲಿ ಉಂಟಾದ ಭೂ ಬದಲಾವಣೆಗಳಿಂದ ಪೂರ್ವ ದಿಕ್ಕಿನತ್ತ ಇಳಿಜಾರು ತಲೆದೋರಿ ಅನೇಕ ನದಿಗಳು ಹರಿಯುವ ದಿಕ್ಕು ರೂಪುಗೊಂಡಿತೆಂದು ಭಾವಿಸಲಾಗಿದೆ. ಈ ನದಿಗಳಿಗೆ ಪೂರ್ವ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಬೀಳುವ ಹೆಚ್ಚಿನ ಮಳೆಯೇ ಮುಖ್ಯ ಆಧಾರ. ನಡುವಿನ ಬಯಲು ಪ್ರದೇಶದಲ್ಲಿ ಅಷ್ಟು ಹೆಚ್ಚಿನ ಮಳೆ ಇಲ್ಲ. ಪಶ್ಚಿಮ ಘಟ್ಟಗಳಲ್ಲಿ ವರ್ಷಕ್ಕೆ 600-800 ಮಿಲಿಮೀಟರುಗಳಷ್ಟೂ ಪೂರ್ವ ಘಟ್ಟಗಳಲ್ಲಿ 1000-1200 ಮಿಲಿಮೀಟರುಗಳಷ್ಟೂ ಮಳೆ ಬೀಳುತ್ತದೆ.

ಪರ್ಯಾಯದ್ವೀಪದ ನದಿಗಳಲ್ಲೆಲ್ಲ ನರ್ಮದಾ ಅತಿ ದೊಡ್ಡದು. ಇದು ಸುಮಾರು 93,180 ಚಕಿಮೀ ವಿಸ್ತೀರ್ಣದ ಜಲಾನಯನ ಪ್ರದೇಶವನ್ನು ಆವರಿಸಿ 1310 ಕಿಮೀ ದೂರ ಹರಿಯುತ್ತದೆ. ಮಧ್ಯಪ್ರದೇಶದ ಅಮರ ಕಂಟಕ್ ಬಳಿ ಹುಟ್ಟಿ ಪಶ್ಚಿಮದ ಕಡೆ ಹರಿಯುತ್ತದೆ. ಇದರ ಮುಖ್ಯ ಉಪನದಿಗಳು ಬುರ್ಹಾನೆರ್, ಬಂಜಾರ್, ಷೇರ್, ಷಕ್ಕರ್, ದೂಧಿ, ಟವಾ, ಹೀರನ್, ತೆಂಡೋನಿ, ಬಾರ್ನಾ ಮತ್ತು ಕೋಲಾರ್. ಗುಜರಾತ್ ಬಯಲನ್ನು ಪ್ರವೇಶಿಸುವ ಮುನ್ನ ಒಂದೆರಡು ಜಲಪಾತಗಳಲ್ಲಿ ದುಮುಕಿ ಮಂದಗತಿಯಲ್ಲಿ ಹರಿಯುತ್ತ ಕರ್ಜನ್, ಅಂಜಲ್, ಮಾಚರ್, ಕೂಂಡಿ, ಗಾಯ್ ಮುಂತಾದ ಉಪನದಿಗಳನ್ನು ಸ್ವೀಕರಿಸಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಮಹಾನದಿ ಮಧ್ಯಪ್ರದೇಶದ ಸಿಹಾವಾ ಎಂಬಲ್ಲಿ ಹುಟ್ಟುತ್ತದೆ. ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 1,32,900 ಚಕಿಮೀ. ಇದು ಪ್ರವಹಿಸುವ ಉದ್ದ 858 ಕಿಮೀ ಬಲುಮಟ್ಟಿಗೆ ಒರಿಸ್ಸಾ ರಾಜ್ಯದ ನದಿಯಿದು. ಇದರ ನದೀಮುಖಜ ಭೂಮಿ ತುಂಬ ಫಲವತ್ತಾಗಿದ್ದು ವಿಸ್ತಾರವಾಗಿದೆ.

ಪೂರ್ವ ದಿಕ್ಕಿನಲ್ಲಿ ಪ್ರವಹಿಸುವ ನದಿಗಳಲ್ಲೆಲ್ಲ ಗೋದಾವರಿಯೇ ಅತ್ಯಂತ ದೊಡ್ಡ ನದಿ. ಮಹಾರಾಷ್ಟ್ರದ ನಾಸಿರ್ ಬಳಿಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಆ ರಾಜ್ಯ ಹಾಗೂ ಆಂಧ್ರಪ್ರದೇಶದಲ್ಲಿ ಪ್ರವಹಿಸಿ ರಾಜಮಹೇಂದ್ರಿಯ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿಗಳು ದಾರ್ಣ, ಪ್ರವರ, ಮೂಲ, ಪ್ರಾಣಹಿತ, ಮಾಂಜ್ರ, ಇಂದ್ರಾವತಿ, ವೇಣುಗಂಗಾ, ವರ್ಧಾ ಮತ್ತು ಶಬರಿ. ಈಚಿನ ವರ್ಷಗಳಲ್ಲಿ ಈ ನದಿಯ ಬಯಲಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು ಅಮೂಲ್ಯ ಸಂಗತಿಗಳು ಬೆಳಕಿಗೆ ಬಂದಿವೆ. ಇವುಗಳ ಆಧಾರದ ಮೇಲೆ ಈ ನದಿ ಸುಮಾರು ಮೂರು ಕೋಟಿ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರಬಹುದು. ಇದು ಹರಿಯುವ ಪ್ರದೇಶ ಅರೆಬೆಂಗಾಡು ಹಾಗೂ ಹುಲ್ಲುಗಾವಲಿನಂತಿದ್ದಿ ತೆಂಬುದಕ್ಕೆ ಪುರಾವೆಗಳು ದೊರೆತಿವೆ. ಈತನಕ ನದಿ ಹಲವಾರು ಬಾರಿ ತನ್ನ ಪಾತ್ರವನ್ನು ಬದಲಾಯಿಸಿದೆ. ಪಾತ್ರದ ಆಳವೂ ಇಳಿದಿರುವುದಕ್ಕೆ ದಾಖಲೆಗಳು ದೊರೆತಿವೆ. ಮುಂದೆ ನದಿಯ ಮೆಕ್ಕಲು ಪ್ರದೇಶಗಳಲ್ಲಿ ಇತಿಹಾಸಪೂರ್ವ ಮಾನವನ ವಲಸೆಯಿದ್ದುದೂ ಬೆಳಕಿಗೆ ಬಂದಿದೆ. ಅವನು ಬಳಸುತ್ತಿದ್ದ ಆಯುಧಗಳ ಆಧಾರದ ಮೇಲೆ ಈ ಸಂಸ್ಕøತಿ ಶಿಲಾಯುಗಕ್ಕೆ ಸೇರಿದ್ದು ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದೂ ಸಂಶೋಧಕರೂ ಭಾವಿಸಿದ್ದಾರೆ. ನದಿಯ ತಳಭಾಗಗಳಿಂದ ಪಳೆಯುಳಿಕೆಗಳನ್ನು ಪಡೆದು ಅವುಗಳ ಕಾಲವನ್ನೂ ನಿರ್ಧರಿಸಲಾಗಿದೆ. ಇದರ ಮೇರೆಗೆ ಮಧ್ಯ ಶಿಲಾಯುಗದ ನಾಗರಿಕತೆ ಇತ್ತೆಂದು ಕಂಡುಬಂದಿದೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಇದ್ದ ನವಶಿಲಾಯುಗದ ಕುರುಹುಗಳು ಸಿಕ್ಕಿವೆ. ಮುಂದೆ ತಾಮ್ರಯುಗದ ಕಾಲದ ನಾಗರಿಕತೆಯೂ ಇಲ್ಲಿ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ಇತ್ತೀಚೆಗೆ ದೊರೆತಿವೆ. ಆ ಯುಗದ ಜನರ ಜೀವನ ವಿಧಾನ ಬಹು ಸುಸಂಸ್ಕøತವಾಗಿತ್ತೆಂಬುದರ ಕುರುಹಾಗಿ ತಾಮ್ರದ ಅಲಗಿನ ಆಯುಧ, ಕಡುಗೆಂಪು ಬಣ್ಣದ ಹಾಗೂ ಚಿತ್ತಾರಗಳಿಂದ ಕೂಡಿದ ಕುಡಿಕೆ ಮಡಿಕೆಗಳ ಚೂರುಗಳೂ ದೊರೆತಿವೆ. ಈ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಮುನ್ನ ಇರುವ ಮೆಕ್ಕಲು ಬಯಲಿನಲ್ಲಿ ನೆರೆಯ ಹಾವಳಿ ಆಗಾಗ ತಲೆದೋರುತ್ತಿರುತ್ತದೆ.

ಕೃಷ್ಣಾ ನದಿ: ಸಹ್ಯಾದ್ರಿ ಶ್ರೇಣಿಯ ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ರಾಜ್ಯಗಳಲ್ಲಿ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 2,59,000 ಚಕಿಮೀ ಮುಖ್ಯ ಉಪನದಿಗಳು ಕೊಯ್ನಾ, ಯೆಲ್ಲಾ, ವರ್ಣಾ, ಪಂಚಗಂಗಾ, ದೂಧ್‍ಗಂಗಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ ಮತ್ತು ಮೂಸಿ. ಇವುಗಳ ಪೈಕಿ ಭೀಮಾ ಮತ್ತು ತುಂಗಭದ್ರಾ ನದಿಗಳು ಪ್ರಮುಖವಾದವು. ನದಿಯ ಪಶ್ಚಿಮ ಘಟ್ಟದ ಜಲಾನಯನ ಪ್ರದೇಶದಲ್ಲಿ ಮಳೆ ಬಹು ಅಧಿಕವಾಗಿದೆ. ಕರ್ನಾಟಕದ ಆಗುಂಬೆಯಲ್ಲಿ ಅತ್ಯಧಿಕ: ವರ್ಷಕ್ಕೆ 8,130 ಮಿಮೀ.ನಷ್ಟು. ಉಪನದಿಗಳಾದ ಘಟಪ್ರಭಾ, ಮಲಪ್ರಭಾ ಮತ್ತು ತುಂಗಭದ್ರಾ ನದಿಗಳಿಗೆ ಅಡ್ಡಕಟ್ಟೆಗಳನ್ನು ನಿರ್ಮಿಸಿ ನೀರನ್ನು ವಿಶೇಷವಾಗಿ ಬೇಸಾಯಕ್ಕೆ ಬಳಸುತ್ತಾರೆ. ನಾಗಾರ್ಜುನಸಾಗರದ ಅಣೆಕಟ್ಟು ಅತ್ಯಂತ ಬೃಹತ್ ಜಲಾಶಯ.

ಕಾವೇರಿ: ಕೊಡಗು ಜಿಲ್ಲೆಯ ಭಾಗಮಂಡಲದ ಬಳಿ ಇರುವ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಜನಿಸಿ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿಗಳು ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಲೋಕಪಾವನಿ, ಕಪಿಲಾ, ಶಿಂಷಾ, ಅರ್ಕಾವತಿ ಮೊದಲಾದವು. ಚುಂಚನಕಟ್ಟೆ, ಶಿವನಸಮುದ್ರ, ಹೊಗೆನಕಲ್ಲು ಬಳಿ ಜಲಪಾತಗಳಿವೆ. ಕಾವೇರಿಯ ಹಾಗೂ ಇದರ ಉಪನದಿಗಳ ನೀರು ಬೇಸಾಯಕ್ಕೆ ಬಲು ಹೆಚ್ಚಾಗಿ ಉಪಯೋಗ. ಮುಖ್ಯ ಜಲಾಶಯಗಳು ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ, ಕಪಿಲಾ ಹಾಗೂ ತಮಿಳುನಾಡಿನ ಮೆಟ್ಟೂರು ಶಿವಸಮುದ್ರದ ಬಳಿ ವಿದ್ಯುಜ್ಜನಕ ಕೇಂದ್ರವಿದೆ.

ಭಾರತದ ನದಿಗಳನ್ನು ಪ್ರಾಚೀನ ಕಾಲದಿಂದಲೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಋಗ್ವೇದ ಹಾಗೂ ಅಥರ್ವವೇದಗಳಲ್ಲಿ ಬಳಕೆಯ ವಿಧಾನಗಳ ವಿವರಗಳಿವೆ. ಗ್ರೀಕ್ ಪ್ರವಾಸಿ ಮೆಗಾಸ್ತನೀಸ್ ತನ್ನ ಪ್ರವಾಸಕಥನದಲ್ಲಿ ಭಾರತದ ನದಿಗಳ ನೀರಿನ ಬಳಕೆಯ ವಿಧಾನಗಳನ್ನು ಮೆಚ್ಚಿ ಪ್ರಸ್ತಾವಿಸಿದ್ದಾನೆ. 14-17ನೆಯ ಶತಮಾನಗಳ ಮೊಗಲ್ ದೊರೆಗಳು ಸಹ ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಸಾಕಷ್ಟು ಪ್ರಗತಿ ಆಯಿತು. ದೇಶ ಸ್ವಾತಂತ್ರ್ಯವನ್ನು ಗಳಿಸಿದ ಬಳಿಕ ಹಲವಾರು ಪಂಚವಾರ್ಷಿಕ ಯೋಜನೆಗಳ ಮೂಲಕ ನದಿಯ ನೀರಿನ ಬಳಕೆ ಹೆಚ್ಚುತ್ತ ಬಂತು. ಹಲವಾರು ಬೃಹತ್ ಯೋಜನೆಗಳು ಪೂರೈಕೆಯ ನಾನಾ ಘಟ್ಟಗಳಲ್ಲಿವೆ. ಬೃಹತ್ ಹಾಗೂ ಮಧ್ಯಮ ದರ್ಜೆಯ ನೀರಾವರಿ ಯೋಜನೆಗಳ ಮೂಲಕ 44.8 ಮಿಲಿಯನ್ ಹೆಕ್ಟೇರ್ ವಿಸ್ತಾರದ ಪ್ರದೇಶ ನೀರಾವರಿ ಸೌಲಭ್ಯಗಳನ್ನು ಪಡೆಯಲಿದೆ. ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳಿಂದ ಸುಮಾರು 30 ಮಿಲಿಯನ್ ಹೆಕ್ಟೇರ್ ಪ್ರದೇಶ ಪ್ರಯೋಜನಕಾರಿಯಾಗುತ್ತದೆ. ಕಳೆದ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ರೂ. 18,500 ಮಿಲಿಯನಿನಷ್ಟು ಹಣವನ್ನು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.

ಜತೆಯಲ್ಲೇ ವಿದ್ಯುದುತ್ಪಾದನ ಕೇಂದ್ರಗಳ ನಿರ್ಮಾಣವನ್ನೂ ಕೈಗೊಳ್ಳಲಾಗಿದ್ದು ಇದರ ಅಂತಿಮ ಗುರಿ 216.000 ಮಿಲಿಯನ್ ಕಿಲೊವಾಟ್ ಶಕ್ತಿಯ ಉತ್ಪಾದನೆ. ಉತ್ತರ ಭಾರತದ ನದಿಗಳಲ್ಲಿ ಒಳನಾಡಿನ ಜಲಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸುವ ಹಲವಾರು ಯೋಜನೆಗಳಿವೆ. ಇವುಗಳ ಪೈಕಿ ಸುಮಾರು 10,600 ಕಿಮೀ ದೂರ ಈ ಸೌಲಭ್ಯವನ್ನು ಕಲ್ಪಿಸಲು ಸಾಧ್ಯ. ಜಹಜು ಮತ್ತು ದೊಡ್ಡ ದೋಣಿಗಳು ಪ್ರಯಾಣಿಸಬಲ್ಲ ಉದ್ದ 2,480 ಕಿಮೀ. ಮಧ್ಯಮ ದರ್ಜೆಯ ದೋಣಿಗಳ ಸಂಚಾರಕ್ಕೆ 3,920 ಕಿಮೀ ಹಾಗೂ ಸಣ್ಣ ನಾಡದೋಣಿಗಳ ಸಂಚಾರಕ್ಕೆ 4,200 ಕಿಮೀಗಳಷ್ಟು ದೂರ ಯೋಗ್ಯವೆನಿಸಿದೆ. ಈ ಬಗೆಯ ನದಿಗಳಲ್ಲಿ ಮುಖ್ಯವಾದವು ಗಂಗಾ, ಯಮುನಾ, ಗಂಡಕಿ, ಬ್ರಹ್ಮಪುತ್ರ ಮತ್ತು ಮಹಾನದಿ. ಗೋದಾವರಿ, ಕೃಷ್ಣಾ, ನರ್ಮದಾ ಮತ್ತು ತಾಪಿ ನದಿಗಳು ಸಮುದ್ರವನ್ನು ಸೇರುವೆಡೆಯಿಂದ ಕೊಂಚ ದೂರ ಒಳನಾಡಿನತ್ತ ಸಂಚಾರ ಸೌಲಭ್ಯಗಳಿಗೆ ಅನುಕೂಲವೆನಿಸಿವೆ. ಕೇರಳ, ಒರಿಸ್ಸ ಮತ್ತು ಬಂಗಾಳ ರಾಜ್ಯಗಳಲ್ಲಿ ನದಿಗಳಲ್ಲಿ ನಾಡದೋಣಿಗಳ ಸಂಚಾರ ಅಧಿಕ


ಪ್ರಪಂಚದ ಹತ್ತು ಅತಿ ಉದ್ದನೆಯ ನದಿಗಳು ಬದಲಾಯಿಸಿ

  1. ನೈಲ್ (೬,೬೯೦ km)
  2. ಅಮೆಜಾನ್ (೬,೪೫೨ km)
  3. ಮಿಸ್ಸಿಸಿಪ್ಪಿ- ಮಿಸ್ಸೂರಿ (೬,೨೭೦ km)[೧]
  4. ಯಾಂಗ್ಟ್‍ಜೆ (ಚಾಂಗ್ ಜಿಯಾಂಗ್) (೬,೨೪೫ km)[೨]
  5. ಯೆನಿಸೆ-ಅಂಗಾರ (೫,೫೫೦ km)
  6. ಹುಆಂಗ್ ಹೆ (ಹಳದಿ ನದಿ) (೫,೪೬೪ km)
  7. ಓಬ್- ಇರ್ತ್ಯಿಶ್ (೫,೪೧೦ km)
  8. ಅಮುರ್ (೪,೪೧೦ km)
  9. ಕಾಂಗೊ (೪,೩೮೦ km)
  10. ಲೆನ (೪,೨೬೦ km)

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ನದಿ&oldid=1203070" ಇಂದ ಪಡೆಯಲ್ಪಟ್ಟಿದೆ