ಆರ್ಯಾವರ್ತ
ಆರ್ಯಾವರ್ತ ಅಂದರೆ ಆರ್ಯ ಜನಾಂಗದ ಜನರ ಪ್ರದೇಶ, ಉತ್ತರ ಭಾರತ, ಕಾಣೆಯಾದ ಸರಸ್ವತೀ ನದಿ, ವಿಂಧ್ಯ ಪರ್ವತಗಳು ಮತ್ತು ಹಿಮಾಲಯ ಪರ್ವತಗಳ ನಡುವಿನ ಪ್ರದೇಶ. ಭಾರತಕ್ಕೆ ಬಂದ ಆರ್ಯರು ತಾವು ನೆಲೆಸಿದ ನೆಲವನ್ನು ಈ ಹೆಸರಿನಿಂದ ಕರೆದರು. ವಾಯವ್ಯ ಸರಹದ್ದಿನ ಕಣಿವೆಗಳ ಮೂಲಕ ವಲಸೆ ಬಂದ ಆ ಜನ ಮೊದಲು ಪಂಜಾಬಿನಲ್ಲಿ ನಿಂತರು. ಆ ಕಾಲಕ್ಕೆ ಋಗ್ವೇದ ಕಾಲವೆಂದು ಹೆಸರು. ಕ್ರಮೇಣ ಅವರು ಗಂಗಾನದಿ ಬಯಲಿನಲ್ಲಿ ನೆಲೆನಿಂತು ಅವರ ಸಂಸ್ಕೃತಿಯನ್ನು ಪಸರಿಸಿದರು. ಗಂಗಾ ಮತ್ತು ಯಮುನಾ ನದಿಗಳ ವಿಸ್ತಾರವಾದ ಬಯಲು ಪ್ರದೇಶವನ್ನು ಆರ್ಯಾವರ್ತ ಎಂದು ಕರೆಯಲಾಗಿದೆ. ಅವರು ಪುರ್ವದಲ್ಲಿ ಬಿಹಾರದವರೆಗೂ ದಕ್ಷಿಣದಲ್ಲಿ ವಿಂಧ್ಯ ಪರ್ವತದವರೆಗೂ ಹರಡಿದರು. ಸಿಂಧು, ಗಂಗಾ, ಯಮುನಾ ನದಿಗಳ ಫಲವತ್ತಾದ ಬಯಲುಪ್ರದೇಶವನ್ನು ಅವರು ಪುಣ್ಯಭೂಮಿಯೆಂದು ವರ್ಣಿಸಿದ್ದಾರೆ. ಆರ್ಯಾವರ್ತ ಪುರ್ವಸಮುದ್ರದಿಂದ ಪಶ್ಚಿಮಸಮುದ್ರದವರೆಗೂ ಉತ್ತರದಲ್ಲಿ ಹಿಮಾಲಯ ಪರ್ವತದಿಂದ ದಕ್ಷಿಣದಲ್ಲಿ ವಿಂಧ್ಯಪರ್ವತಗಳವರೆಗೂ ಹಬ್ಬಿವೆ.