ಋಗ್ವೇದ

ನಾಲ್ಕು ವೇದಗಳಲ್ಲಿ ಮೊದಲನೆಯದು

ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು. ಜಗತ್ತಿನಲ್ಲೇ ಅತಿ ಪ್ರಾಚೀನವಾದ ಸಾಹಿತ್ಯ. ಇಂಡೋ-ಯೂರೋಪಿಯನ್ ಭಾಷೆಗಳಲ್ಲೆಲ್ಲ ಪ್ರಾಚೀನತಮವಾದ ಜ್ಞಾನರಾಶಿ. ಛಂದೋಬದ್ಧವಾಗಿದ್ದರೂ ಐತಿಹಾಸಿಕ ಕವಿತೆಯಲ್ಲ. ಮಹಾಕಾವ್ಯವೂ ಅಲ್ಲ. ಋಷಿಗಳೂ ಋಷಿವಂಶದವರೂ ತಮ್ಮ ಮನೆತನಗಳಲ್ಲಿ ಅನೂಚಾನವಾಗಿ ಬಂದ ಮಂತ್ರಸೂಕ್ತಗಳನ್ನು ಒಟ್ಟುಗೂಡಿಸಿರುವ ಒಂದು ಸಂಕಲನ ಅಥವಾ ಸಂಹಿತೆ. ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ. ಈ ವೇದದ ಮಂತ್ರಗಳನ್ನು ಯಜ್ಞ, ಯಾಗಾದಿಗಳನ್ನು ಮಾಡುವಾಗ, ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ. ದೇವತೆಗಳ ತೃಪ್ತ್ಯರ್ಥವಾಗಿ ಯಜ್ಞಕಾಲದಲ್ಲಿ ಉಚ್ಚರಿಸಲಾಗುತ್ತಿದ್ದ ಪ್ರಾರ್ಥನೆಗಳೇ ಮಂತ್ರಗಳು. ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ.ಆಯುರ್ವೇದ ಇದರ ಉಪವೇದ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ


Rigveda

ಋಕ್ ಎಂದರೆ ದೇವತಾಸ್ತುತಿರೂಪವಾದ ಪದ್ಯ; ವೇದವೆಂದರೆ ಶ್ರುತಿ, ಛಂದಸ್ಸು, ಜ್ಞಾನ. ಆದ್ದರಿಂದ ಪ್ರಧಾನವಾಗಿ ಋಗ್ವೇದ ದೇವತಾಸ್ತುತಿರೂಪವಾದ ಜ್ಞಾನ. ಭಾರತದ ಧಾರ್ಮಿಕ ಸಂಸ್ಕೃತಿಗೆಲ್ಲ ಋಗ್ವೇದವೇ ಬುನಾದಿ.

ಸ್ತೋತ್ರಪ್ರಧಾನವಾಗಿರುವ ಋಗ್ವೇದದಲ್ಲಿ ಎಂಟು ಅಷ್ಟಕಗಳು, ಮತ್ತು ಹತ್ತು ಮಂಡಲಗಳು ಇವೆ. "ಅಕ್ಷೈಃ ಮಾ ದೀವ್ಯ ಕೃಷಿಮಿತ್ ಕೃಷಸ್ವ", ಅಂದರೆ, "ಜೂಜಾಡಬೇಡ, ಬೇಸಾಯವನ್ನು ಮಾಡು" ಎನ್ನುವ ಸಾಮಾಜಿಕ ನೀತಿಯನ್ನು ಬೋಧಿಸುವ ಮಂತ್ರಗಳೂ ಇದರಲ್ಲಿವೆ.

ಋಗ್ವೇದ ಅನಾದಿನಿತ್ಯ ಮತ್ತು ಅಪೌರುಷೇಯವೆಂದು ಭಾವಿಸುವುದು ವೈದಿಕಸಂಪ್ರದಾಯ. ಆದರೆ ಆಧುನಿಕ ವಿದ್ವಾಂಸರೂ ಸಂಶೋಧಕರೂ ಒಂದೂವರೆ ಶತಮಾನಗಳ ಕಾಲ ಋಗ್ವೇದ ಸಂಸ್ಕೃತಿಯ ಅಧ್ಯಯನ ಮಾಡಿ ಮಾನವನ ಇತಿಹಾಸದಲ್ಲಿ ಋಗ್ವೇದದ ಸ್ಥಾನವನ್ನೂ ಕಾಲವನ್ನೂ ನಿರ್ದೇಶಿಸಲು ಯತ್ನಿಸಿದ್ದಾರೆ. ಇವರಲ್ಲಿ ರೋಟ್, ಮ್ಯಾಕ್ಸ್‍ಮ್ಯುಲರ್, ಓಲ್ಡೆನ್‍ಬರ್ಗ್, ಲುಡ್ವಿಗ್, ಗ್ರಾಸ್‍ಮಾನ್, ಗೆಲ್ಡನರ್, ಪಿಷೆಲ್ ಮುಂತಾದ ಜರ್ಮನ್ ವಿದ್ವಾಂಸರು ಅಗ್ರಗಣ್ಯರೆನ್ನಬಹುದು. ತುಲನಾತ್ಮಕ ಭಾಷಾಶಾಸ್ತ್ರದ ಆಧಾರದ ಮೇಲೆ ಇವರು ಋಗ್ವೇದ ಭಾಷೆಗೂ ಪ್ರಾಚೀನ ಇರಾನ್ ದೇಶದ ಅವೆಸ್ತ ಎಂಬ ಧರ್ಮಗ್ರಂಥದ ಭಾಷೆಗೂ, ಇನ್ನೂ ಆಚೆಗೆ ಗ್ರೀಕ್, ಲ್ಯಾಟಿನ್ ಮತ್ತು ತಜ್ಜನ್ಯ ಐರೋಪ್ಯ ಭಾಷೆಗಳಿಗೂ ಇರುವ ಗಾಢವಾದ ಶಬ್ದಾರ್ಥಸಾಮ್ಯಗಳನ್ನು ಅನುಲಕ್ಷಿಸಿ, ವೇದರಚನೆ ಮಾಡಿದವರು ಇವೆಲ್ಲ ಭಾಷೆಗಳಿಗೂ ಮೂಲವಾದ ಭಾಷೆಯೊಂದನ್ನಾಡುತ್ತಿದ್ದಿರಬೇಕೆಂದೂ ಅದನ್ನು ಇಂಡೋ-ಯೂರೋಪಿಯನ್ ಭಾಷೆಯೆನ್ನಬಹುದೆಂದೂ ಊಹಿಸಿದ್ದಾರೆ. ಆರ್ಯರ ಮೂಲನಿವಾಸ ಮಧ್ಯ ಏಷ್ಯ ಇಲ್ಲವೇ ಮಧ್ಯ ಯೂರೋಪ್ ಇದ್ದಿರಬೇಕೆಂದೂ ಅವರು ಕ್ರಮಕ್ರಮವಾಗಿ ದಿಕ್ಕುದಿಕ್ಕಿಗೆ ವಲಸೆ ಹೋಗುತ್ತ ಒಂದು ಕವಲಾಗಿ ಇರಾನಿನಲ್ಲೂ ಇನ್ನೊಂದು ಕವಲಾಗಿ ಭಾರತದ ಪಂಜಾಬ್ ಪ್ರಾಂತ್ಯದಲ್ಲೂ ಮೊದಲು ನೆಲೆಸಿರಬೇಕೆಂದು ತೀರ್ಮಾನಿಸಿದ್ದಾರೆ. ಹೀಗೆ ಅವರು ಕವಲೊಡೆದ ಕಾಲ ಕ್ರಿ.ಪೂ.1300 ಕ್ಕಿಂತ ಈಚಿನದಾಗಿರಲಾರದೆಂದು ಎಲ್ಲರೂ ಒಪ್ಪುತ್ತಾರೆ. ಆದರೆ ಎಷ್ಟು ಪ್ರಾಚೀನವಿದ್ದಿರಬಹುದೆನ್ನುವ ಬಗೆಗೆ ಮತಭೇದಗಳಿವೆ. ಯಾಕೊಬಿ, ತಿಲಕ್ ಮುಂತಾದವರು ಕ್ರಿ.ಪೂ.4500ಕ್ಕಿಂತ ಹಿಂದೆ ಆಗಿರಬೇಕೆನ್ನಲು ಜ್ಯೋತಿಶ್ಯಾಸ್ತ್ರದ ಆಧಾರವನ್ನು ಕೊಡುತ್ತಾರೆ. ಆದರೆ ಇರಾನಿ ಭಾಷೆಯೂ ಋಗ್ವೇದ ಭಾಷೆಯೂ ಮೂರು ನಾಲ್ಕು ಸಾವಿರಗಳಷ್ಟು ದೀರ್ಘಾವಧಿಯವರೆಗೆ ಹಾಗೆಯೇ ಬೆಳೆಯದೆ ಉಳಿದು ಶಬ್ದಾರ್ಥಸಾಮ್ಯಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆಂದು ನಂಬಲು ಭಾಷಾಶಾಸ್ತ್ರದ ಪ್ರವೀಣರು ಸಿದ್ಧರಿಲ್ಲ.

ಹೀಗೆ ಋಗ್ವೇದಮಂತ್ರಗಳನ್ನು ಭಾರತದಲ್ಲಿ ಸಂಹಿತೆಯಾಗಿ ಒಟ್ಟುಮಾಡಿದ ಕಾಲ ಕ್ರಿ.ಪೂ.700ಕ್ಕಿಂತ ಈಚೆಗಲ್ಲವೆಂದೂ ಆದರೆ ಮಂತ್ರಗಳ ರಚನಾ ಕಾಲ ಅದಕ್ಕೂ ಕನಿಷ್ಠಪಕ್ಷ 800 ವರ್ಷಗಳ ಮುಂಚೆ ಎಂದರೆ ಕ್ರಿ.ಪೂ.1500 ಎಂದೂ ಪ್ರಾಯೋಗಿಕವಾಗಿ ಒಪ್ಪುತ್ತಾರೆ. ವಿಂಟರ್‍ನಿಟ್ಸ್ ಮುಂತಾದವರು ಇದನ್ನು ಧಾರಾಳವಾಗಿ ಕ್ರಿ.ಪೂ.2000 ಅಥವಾ 2500ರ ವರೆಗೂ ಒಯ್ಯಬಹುದೆನ್ನುತ್ತಾರೆ. ಏನೇ ಇರಲಿ, ಈ ಸಂಶೋಧನೆಗಳ ಪ್ರಕಾರ ಋಗ್ವೇದ ಮಂತ್ರಗಳಲ್ಲಿ ಕೆಲವಾದರೂ ಭಾರತದ ಹೊರಗೆ, ಎಂದರೆ, ಆರ್ಯರು ಭಾರತವರ್ಷದಲ್ಲಿ ಕಾಲಿಡುವ ಮುನ್ನವೇ ರಚಿತವಾಗಿದ್ದಿರಬೇಕೆಂದು ಸ್ಪಷ್ಟವಾಗುತ್ತದೆ. ಮುಂದೆ ವಿಕಾಸಗೊಂಡ ಮಿಕ್ಕ ವೇದಸಂಹಿತೆಗಳು, ಬ್ರಾಹ್ಮಣಗಳು, ಉಪನಿಷತ್ತುಗಳು- ಇವೆಲ್ಲ ಒಂದು ವಿಸ್ತಾರ ಭಂಡಾರವೇ ಸರಿ- ಎಲ್ಲವೂ ಕ್ರಿ.ಪೂ.500ರಲ್ಲಿ ಪ್ರಚಾರಕ್ಕೆ ಬಂದ ಬೌದ್ಧಧರ್ಮಕ್ಕಿಂತ ಪ್ರಾಚೀನವೆಂಬುದು ನಿರ್ವಿವಾದ. ಆದ್ದರಿಂದ ವೇದ ಸಾಹಿತ್ಯದ ಈ ವಿಪುಲ ವಿಕಾಸವನ್ನು ಸಮರ್ಥಿಸಲು ಒಂದೆರಡು ಸಾವಿರ ವರ್ಷಗಳ ಅವಧಿಯೇನೂ ಹೆಚ್ಚಲ್ಲವೆಂದು ತಿಳಿದುಬರುತ್ತದೆ. ಋಗ್ವೇದದ ಕಾಲದ ಇತಿಮಿತಿಗಳ ಬಗೆಗೆ ಹೀಗೆ ವಿದ್ವಾಂಸರು ಮಾಡಿರುವ ಈ ಊಹೆಗಳೇ ಹೊರತು ಆ ಪ್ರಾಚೀನಯುಗದಲ್ಲಿ ನಿರ್ಣಾಯಕವೆನಿಸಬಲ್ಲ ಪ್ರಬಲತರ ಪ್ರಮಾಣಗಳು. ಇನ್ನೂ ದುರ್ಲಭವೆನಿಸಿವೆ. ಹರಪ್ಪ, ಮಹೆಂಜೊದಾರೊ ಮುಂತಾದೆಡೆಗಳಲ್ಲಿ ಮಾಡಿದ ಉತ್ಪನನಗಳು ಸಿಂಧೂ ಸಂಸ್ಕೃತಿ ವೇದಪೂರ್ವವೆಂಬ ಅಭಿಪ್ರಾಯಕ್ಕೇ ಪುಷ್ಟಿಯಿತ್ತಿದೆ. ಇಷ್ಟಾದರೂ ಭಾರತೀಯ ಸಂಪ್ರದಾಯನಿಷ್ಠರು ಈ ಊಹೆಗಳೆಲ್ಲ ನಿರಾಧಾರವೆಂದೂ ಭಾರತವೇ ಆರ್ಯಸಂಸ್ಕøತಿಯ ಉದ್ಗಮ ಸ್ಥಾನವೆಂದೂ ಇಲ್ಲಿಂದಲೇ ಆರ್ಯರು ದೇಶಾಂತರಗಳಿಗೆ ವಲಸೆಹೋಗಿರಬಹುದೆಂದೂ ವೇದಕಾಲ ಸೃಷ್ಟಿಯಷ್ಟೇ ಪ್ರಾಚೀನವೆಂದೂ ವಾದಿಸುವುದುಂಟು.

ಋಗ್ವೇದ ಸಂಹಿತೆಯ ಉದಯ ಮತ್ತು ವಿಕಾಸ

ಬದಲಾಯಿಸಿ

ಆರ್ಯರು ಭಾರತದಲ್ಲಿ ಕಾಲಿಟ್ಟಾಗ ಅವರು ತಮ್ಮೊಡನೆ ತಂದ ಧರ್ಮದಲ್ಲಿ ಅನೇಕ ದೇವತೆಗಳಿದ್ದರು; ದೇವತೆಗಳೆಲ್ಲ ಪ್ರಾಯೋಗಿಕವಾಗಿ ಮನುಷ್ಯ ತನ್ನಂತೆ ಕಲ್ಪಿಸಿದ ನಿಸರ್ಗ ಶಕ್ತಿಗಳು. ಅವರಲ್ಲಿ ದ್ಯೌಸ್ ಎಂಬ ದೇವತೆ ತನ್ನಂತೆ ಪ್ರಾಚೀನವಾದ ಇಂಡೋ-ಯೂರೋಪಿಯನ್ ಕಾಲಕ್ಕೆ ಸೇರಿದವನಾದರೆ; ಮಿತ್ರ, ವರುಣ, ಇಂದ್ರ ಮುಂತಾದ ದೇವತೆಗಳೂ ಇಂಡೋ-ಇರಾನಿಯನ್ ಕಾಲಕ್ಕೆ ಸೇರಿದವರು. ಅಗ್ನಿಯಲ್ಲಿ ಹವಿಸ್ಸನ್ನು ಅರ್ಪಿಸುವುದೂ ಸೋಮರಸಗಳನ್ನು ಬಳಸಿ ಯಜ್ಞ ಮಾಡುವುದೂ ಆರ್ಯರ ಧರ್ಮ ವಿಧಿಗಳಾಗಿದ್ದುವು. ದೇವತೆಗಳ ಸ್ತೋತ್ರಗಳನ್ನು ಛಂದೋಬದ್ಧವಾಗಿ ರಚಿಸುವ ಕಲೆಯೂ ಅವರಿಗಾಗಲೇ ಸಿದ್ಧಿಸಿತ್ತು; ಏಕೆಂದರೆ ಅವೆಸ್ತದಲ್ಲೂ ಋಗ್ವೇದಕ್ಕೆ ಸಂವಾದಿಯಾದ ಸೂಕ್ತಗಳು ಕಾಣಸಿಗುತ್ತವೆ. ಅಗ್ನಿಯಲ್ಲಿ ಆಹುತಿಗೈದ ಆಜ್ಯಾದಿ ಹವಿಸ್ಸು, ಅರ್ಪಿಸಿದ ಸೋಮರಸ-ಇವುಗಳ ನಿವೇದನಕಾಲದಲ್ಲಿ ಅಂಗವಾಗಿ ದೇವತಾಸೂಕ್ತಗಳಿಗೆ ಸ್ಥಾನವಿತ್ತು. ಋಗ್ವೇದದಲ್ಲಿ ಉಳಿದು ಬಂದಿರುವ ಅತಿ ಪ್ರಾಚೀನ ಸೂಕ್ತಗಳೆಲ್ಲ ಕೆಲವೇ ಋಷಿ ಕುಲಗಳ ರಚನೆಗಳೆನ್ನಬಹುದು. ಇವು ಪುರೋಹಿತ ಮನೆತನಗಳಲ್ಲಿ ಪರಂಪರಾ ಪ್ರಾಪ್ತವಾಗುತ್ತಿದ್ದವು. ಬೇರೆ ಬೇರೆ ಪುರೋಹಿತ ಮನೆಗಳು ತಂತಮ್ಮ ರೀತಿಯಿಂದ ಸೂಕ್ತಪಾಠದ ಪರಂಪರೆಯನ್ನು ಬಾಯಿಂದಲೇ ಬಾಯಿಗೆ ನಡೆಸಿಕೊಂಡು ಬರುತ್ತಿದ್ದ ಕಾರಣ ಎಷ್ಟೋ ಪಾಠಭೇದಗಳಿಗೂ ಶಾಖಾಂತರಗಳಿಗೂ ಅವಕಾಶವಾಯಿತು. ಬೇರೆ ಬೇರೆ ಋಷಿ ಕುಲಗಳ ಆಸ್ತಿಯಾಗಿದ್ದ ಸೂಕ್ತಗಳನ್ನೆಲ್ಲ ಒಂದೆಡೆ ಸಂಗ್ರಹಿಸಿದಾಗ ಋಗ್ವೇದ ಸಂಹಿತೆಯ ಮೂಲ ಸಿದ್ಧವಾಯಿತೆನ್ನಬಹುದು. ಈ ಮೂಲಕ್ಕೆ ಹಿಂದೂ ಮುಂದೂ ಮತ್ತಷ್ಟು ಸಂಗ್ರಹಗಳು ಸೇರಿಕೊಂಡಮೇಲೆ ನಮಗಿಂದು ಉಪಲಬ್ಧವಿರುವ ಋಗ್ವೇದ ಸಂಹಿತೆಯ ಆಕಾರ ಬಂದಿದೆ. ಈ ಸಂಹಿತೆಯ ಕಾಲ ಬ್ರಾಹ್ಮಣಗಳ ರಚನಾಕಾಲದ ಅನಂತರ ಮತ್ತು ಉಪನಿಷತ್ತುಗಳ ಕಾಲಕ್ಕೆ ಮುಂಚೆ ಎಂದು ವಿದ್ವಾಂಸರ ತರ್ಕ. ಆದ್ದರಿಂದ ಸುಮಾರು ಕ್ರಿ.ಪೂ.700 ಎಂದು ಮೆಕ್ಡೊನೆಲ್ ಅವರು ನಿರ್ಣಯಿಸುತ್ತಾರೆ.

ಸಂಹಿತಾಕಾರರು ಕರ್ಣಪರಂಪರೆಯಿಂದ ಬಂದ ವೇದಸೂಕ್ತಗಳನ್ನು ಅಳವಡಿಸುವಾಗ ಕೆಲವೊಂದು ಉತ್ತರಕಾಲೀನ ಸಂಧಿನಿಯಮಗಳನ್ನು ಅನುಸರಿಸಿದ್ದು ಕಾಣುತ್ತದೆ. ಉದಾಹರಣೆಗೆ ಏ ಓ ಕಾರಗಳ ಮುಂದೆ ಬರುವ ಆಕಾರಕ್ಕೆ ಲೋಪ ಬರುತ್ತದೆ. ಒಮ್ಮೊಮ್ಮೆ ಈ ಹೊಸ ಸಂಧಿಗಳ ಒತ್ತಾಯದಿಂದ ಮೂಲದ ಛಂದಸ್ಸಿನ ಓಟಕ್ಕೆ ಹಾನಿಬರುವುದೂ ಉಂಟು. ಹೀಗೆ ಒಮ್ಮೆ ಸಂಹಿತಾ ಪಾಠವನ್ನು ಗೊತ್ತುಪಡಿಸಿದ ಮೇಲೆ, ಆ ಪಾಠದ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡರು. ಇಡಿಯ ಋಗ್ವೇದ ಸಂಹಿತೆಯನ್ನೆಲ್ಲ ಪದಚ್ಛೇದ ಮಾಡಿ, ಸಂಧಿ ಪೂರ್ವದಲ್ಲಿದ್ದ ರೂಪಗಳನ್ನು ಮಾತ್ರ ತೋರಿಸುವ ಹಾಗೂ ಸಮಾಸ, ಪ್ರತ್ಯಯಾದಿಗಳನ್ನು ವಿಂಗಡಿಸುವ ಪಾಠವೇ ಪದಪಾಠ. ಇದನ್ನು ಶಾಕಲ್ಯ ರಚಿಸಿದ. ಒಂದು ದೃಷ್ಟಿಯಿಂದ ಇದನ್ನು ಋಗ್ವೇದದ ಮೇಲಿನ ಮೊದಲ ಭಾಷ್ಯವೆನ್ನಬಹುದು. ಇದರಂತೆ ಹಿಂದಕ್ಕೂ ಮುಂದಕ್ಕೂ ನಿಯತವಾಗಿ ಪುನರಾವೃತ್ತಿ ಮಾಡುವ ಕ್ರಮ, ಜಟಾ, ಘನ ಮುಂತಾದ ಪಾಠಗಳೂ ಅಧ್ಯಯನಕ್ರಮದಲ್ಲಿ ಉಂಟು. ಇವೇ ಮುಂತಾದ ವಿವರಗಳೆಲ್ಲ ಅನುಕ್ರಮಣಿಯೆಂಬ ವೇದಾಂತ ಗ್ರಂಥಗಳಲ್ಲಿ ಬರುತ್ತವೆ. ಋಗ್ವೇದದ ಪ್ರತಿ ಸೂಕ್ತದಲ್ಲಿ ಇಂತಿಷ್ಟೇ ಋಕ್ಕುಗಳಿವೆಯೆಂಬ ನಿರ್ಣಯ ಕೂಡ ಅಲ್ಲಿಯೇ ಇದೆ. ಈ ರಕ್ಷಣೋಪಾಯಗಳ ಫಲವಾಗಿ ಋಗ್ವೇದಪಾಠ ಇಂದಿನವರೆಗೆ ಅಸ್ಖಲಿತವಾಗಿ ಮೂರು ಸಾವಿರ ವರ್ಷಗಳ ಕಾಲವಾದರೂ ಹಾಗೆಯೇ ಅಧ್ಯಯನ ಪರಂಪರೆಯಲ್ಲಿ ಉಳಿದು ಬಂದಿದೆ. ವಿಶ್ವದ ಇತಿಹಾಸದಲ್ಲಿಯೇ ಇದೊಂದು ಅದ್ಭುತವೆನ್ನಬಹುದು.

ಋಗ್ವೇದಸೂಕ್ತಗಳ ಭಾಷೆ ಸಂಸ್ಕøತ ಭಾಷೆಯ ಅತ್ಯಂತ ಪ್ರಾಚೀನ ರೂಪವೆನ್ನಬಹುದು. ಈ ಭಾಷೆಯ ಉತ್ತರಕಾಲೀನ ಸ್ವರೂಪವನ್ನೇ ಪರಿಷ್ಕøತ ಸಂಸ್ಕøತವೆನ್ನುತ್ತಾರೆ. ಕ್ರಿ.ಪೂ. ನಾಲ್ಕನೆಯ ಶತಮಾನದ ಕಡೆಗೆ ಪಾಣಿನಿಯ ವ್ಯಾಕರಣ ಪರಿಷ್ಕರಿಸಿದ ಅನಂತರ ಬಂದ ಸ್ವರೂಪ ಅದು. ಪಾಣಿನಿಯ ಸಂಸ್ಕøತಕ್ಕೂ ಋಗ್ವೇದದ ಸಂಸ್ಕøತಕ್ಕೂ ಇರುವ ವ್ಯತ್ಯಾಸವನ್ನು ಪ್ರಾಕೃತ ಹಾಗೂ ಸಂಸ್ಕøತ ಭಾಷೆಗಳ ವ್ಯತ್ಯಾಸದೊಡನೆ ಹೋಲಿಸಬಹುದು. ಮುಂದಿನ ಸಂಸ್ಕøತದಲ್ಲಿ ಇಲ್ಲದ ಎಷ್ಟೊ ಶಬ್ದರೂಪಗಳು ವೈದಿಕಭಾಷೆಯಲ್ಲಿವೆ. ನಾಮ ಹಾಗೂ ಸರ್ವನಾಮಗಳ ವಿಭಕ್ತಿಪ್ರತ್ಯಯಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿವೆ. ಧಾತುಸಾಧಿತ ಅವ್ಯಯಗಳ ಸಂಖ್ಯೆಯೂ ಅಧಿಕತರ. ಧಾತುರೂಪಗಳಲ್ಲಂತೂ ಸಂಸ್ಕøತಕ್ಕಿಂತ ಹೆಚ್ಚಿನ ಸಮೃದ್ಧಿಯನ್ನು ಕಾಣುತ್ತೇವೆ. ಉದಾಹರಣೆಗೆ-ಸಂಸ್ಕøತದಲ್ಲಿ ಅದೃಶ್ಯವಾದ ಲೇಟ್ ಲಕಾರವು (ಭವಾತಿ ಇತ್ಯಾದಿ) ವೇದಭಾಷೆಯಲ್ಲಿ ಹೇರಳವಾಗಿ ಪ್ರಯುಕ್ತವಾಗಿದೆ. ಸಂಸ್ಕøತದಲ್ಲಿ ತುಮ್ ಎಂಬ ಒಂದು ಪ್ರತ್ಯಯದ ಬದಲು ವೇದದಲ್ಲಿ ಹನ್ನೆರಡು ರೀತಿಯ ಪ್ರತ್ಯಯಗಳಿವೆ. ಸಂಸ್ಕøತಭಾಷೆಯಲ್ಲಿ ಊರ್ಜಿತವಿಲ್ಲದ ಉದಾತ್ತ, ಅನುದಾತ್ತ, ಸ್ವರಿತ, ಎಂಬ ಸ್ವರೋಚ್ಚಾರ ವೈಶಿಷ್ಟ್ಯಗಳು ವೇದಭಾಷೆಯ ವೈಚಿತ್ರ್ಯವಾಗಿವೆ. ವೇದದ ಸಂಧಿನಿಯಮಗಳು ಕೂಡ ಸಂಸ್ಕøತಕ್ಕಿಂತ ಕೆಲವೊಮ್ಮೆ ಭಿನ್ನವಾಗಿವೆ. ಋಗ್ವೇದದಲ್ಲಿ ಏ, ಓ ಕಾರಗಳಿಗೆ ಪರವಾಗುವ ಆಕಾರ ಉಚ್ಚರಿಸಲ್ಪಡುತ್ತದೆ; ಸಂಸ್ಕøತದಲ್ಲಿ ಲುಪ್ತವಾಗುತ್ತದೆ. ಆದ್ದರಿಂದ ಸಂಸ್ಕøತಭಾಷೆಯ ಐತಿಹಾಸಿಕ ಅಧ್ಯಯನಕ್ಕೆ ಋಗ್ವೇದ ಭಾಷೆಯ ಅಭ್ಯಾಸ ಅಗತ್ಯವೆನ್ನಬೇಕು.

ವಿಷಯ ಸಂಗ್ರಹ

ಬದಲಾಯಿಸಿ

ಋಗ್ವೇದದಲ್ಲಿ 1,028 ಸೂಕ್ತಗಳಿವೆ; ಸಂಕ್ಷಿಪ್ತವೆನ್ನಲಾದ 11 ವಾಲಖಿಲ್ಯ ಸೂಕ್ತಗಳನ್ನೂ ಹಿಡಿದರೆ 1,028. ಒಟ್ಟು ಎಲ್ಲ ಸೂಕ್ತಗಳಲ್ಲಿ ಬರುವ ಋಕ್ಕುಗಳ ಸಂಖ್ಯೆ ಸುಮಾರು 10,600 ಎಂದರೆ ಒಂದು ಸೂಕ್ತಕ್ಕೆ ಸರಾಸರಿ ಹತ್ತು ಋಕ್ಕುಗಳೆನ್ನಬಹುದು. ಎಲ್ಲಕ್ಕಿಂತ ಚಿಕ್ಕ ಸೂಕ್ತದಲ್ಲಿ ಒಂದೇ ಋಕ್ಕಿದ್ದರೆ, ಎಲ್ಲಕ್ಕಿಂತ ದೊಡ್ಡ ಸೂಕ್ತದಲ್ಲಿ 58 ಋಕ್ಕುಗಳಿವೆ. ಗ್ರೀಸ್‍ದೇಶದ ಹೋಮರನ ಎರಡೂ ಮಹಾಕಾವ್ಯಗಳಷ್ಟು ಋಗ್ವೇದದ ಗಾತ್ರವೆಂದು ಲೆಕ್ಕಮಾಡಿದ್ದಾರೆ.

ಋಗ್ವೇದವನ್ನು ಎರಡು ಕ್ರಮಗಳಿಂದ ವಿಭಾಗಿಸುವುದುಂಟು. ಒಂದು ಅಷ್ಟಕ ಅಧ್ಯಾಯ, ವರ್ಗವೆಂಬ ವಿಂಗಡಣೆ. ಇಡಿಯ ಋಗ್ವೇದದ ಅಷ್ಟಮಾಂಶ ಒಂದಷ್ಟಕ. ಪ್ರತಿ ಅಷ್ಟಕದಲ್ಲೂ ಎಂಟು ಅಧ್ಯಾಯಗಳು. ಒಂದೊಂದು ಅಧ್ಯಾಯದಲ್ಲೂ ಐದಾರು ಋಕ್ಕುಗಳು ಸೇರಿ ಆದ ವರ್ಗಗಳಿರುತ್ತವೆ. ಈ ಯಾಂತ್ರಿಕ ಕ್ರಮಕ್ಕಿಂತ ವಿದ್ವಾಂಸರು ಹೆಚ್ಚಾಗಿ ಬಳಸುವ ವಿಭಾಗಕ್ರಮವೆಂದರೆ ಮಂಡಲ ಮತ್ತು ಸೂಕ್ತವೆಂಬುದು. ಋಗ್ವೇದದಲ್ಲಿ ಒಟ್ಟು ಹತ್ತು ಮಂಡಲಗಳಿವೆ.

ಈ ಹತ್ತು ಮಂಡಲಗಳಲ್ಲಿ 2 ರಿಂದ 7 ಎಂದರೆ ಒಟ್ಟು ಆರು ಮಂಡಲಗಳು ಒಂದು ನಿಯಮಕ್ಕೆ ಅನುಗುಣವಾಗಿವೆ. ಒಂದೇ ಋಷಿಕುಲದವರ ಪರಂಪರೆಯಲ್ಲಿ ಬಂದ ಸೂಕ್ತಗಳು ಸೇರಿ ಒಂದು ಮಂಡಲವೆನಿಸಿವೆ. ಆದ್ದರಿಂದ ಇವಕ್ಕೆ ಮನೆತನದ ಮಂಡಲವೆನ್ನುವರು (ಫ್ಯಾಮಿಲಿ ಬುಕ್). ಉದಾಹರಣೆಗೆ ಮೂರನೆಯ ಮಂಡಲ ವಿಶ್ವಾಮಿತ್ರ ಋಷಿಯ ಮತ್ತು ಅವನ ವಂಶೀಯರದು. ಇವುಗಳಲ್ಲಿ ಸೂಕ್ತಗಳನ್ನು ಒಂದೇ ಅನುಕ್ರಮದಲ್ಲಿ ಜೋಡಿಸಿದೆ. ಮೊದಲು ಅಗ್ನಿಸೂಕ್ತಗಳು, ಆಮೇಲೆ ಇಂದ್ರಸೂಕ್ತಗಳು, ಬಳಿಕ ಮಿಕ್ಕ ದೇವತಾಸೂಕ್ತಗಳು- ಎಂಬುದೇ ಈ ಅನುಕ್ರಮ. ಈ ದೇವತಾ ಸೂಕ್ತಗಳಲ್ಲಿ ಕೂಡ ಋಕ್ಸಂಖ್ಯೆಯ ಇಳಿಕೆಯ ಕ್ರಮಾನುಸಾರ ಅವನ್ನು ಜೋಡಿಸಿರುವುದು ಕಾಣುತ್ತದೆ. ಎರಡನೆಯ ಮಂಡಲ ಆರಂಭವಾಗುವುದು ಹತ್ತು ಅಗ್ನಿಸೂಕ್ತಗಳಿಂದ. ಮೊದಲ ಅಗ್ನಿಸೂಕ್ತದಲ್ಲಿ 16 ಋಕ್ಕುಗಳಾದರೆ ಕಡೆಯದರಲ್ಲಿ ಆರೇ ಋಕ್ಕುಗಳು. ಅಲ್ಲದೆ ಮಂಡಲದಿಂದ ಮಂಡಲಕ್ಕೆ ಒಟ್ಟು ಸೂಕ್ತಸಂಖ್ಯೆ ಏರಿಕೆಯ ಕ್ರಮದಲ್ಲಿದೆ. 2ನೆಯ ಮಂಡಲದಲ್ಲಿ 43 ಸೂಕ್ತಗಳು, 3ರಲ್ಲಿ 62, ಆರರಲ್ಲಿ 75, ಏಳರಲ್ಲಿ 104. ಈ ಆರು ಮಂಡಲಗಳೇ ಋಗ್ವೇದ ಸಂಹಿತೆಯ ಮೂಲಕೇಂದ್ರವೆನ್ನಬಹುದು.

ಈ ಮನೆತನದ ಮಂಡಲಗಳ ಹಿಂದಕ್ಕೆ ಮೊದಲನೆ ಮಂಡಲವನ್ನೂ, ಮುಂದಕ್ಕೆ ಕಾಣ್ವವಂಶದವರ ಮಂಡಲವಾದರೂ ಅಗ್ನಿ, ಇಂದ್ರಾದಿ ಸೂಕ್ತಾನುಕ್ರಮವಿಲ್ಲದ 8ನೆಯ ಮಂಡಲವನ್ನೂ ಕೇವಲ ಸೋಮ ಅಥವಾ ಪವಮಾನ ಸೂಕ್ತಗಳನ್ನುಳ್ಳ 9ನೆಯ ಮಂಡಲವನ್ನು ಅದರ ಅನಂತರವೂ ಎಲ್ಲಕ್ಕಿಂತ ಕಡೆಗೆ ಹತ್ತನೆಯ ಮಂಡಲವನ್ನೂ ಸೇರಿಸಿ ಇಂದಿನ ಋಗ್ವೇದಸಂಹಿತೆಯ ಸ್ವರೂಪ ಬಂದಿದೆಯೆಂದು ಸಂಶೋಧಕರ ಸಿದ್ಧಾಂತ.

ಋಗ್ವೇದ ಸೂಕ್ತಗಳಿಗೆಲ್ಲ ಮುಖ್ಯವಾದ ವಿಷಯವೆಂದರೆ ದೇವತಾಸ್ತುತಿ. ಅಗ್ನಿ, ಇಂದ್ರ, ವರುಣ, ಸವಿತೃ, ರುದ್ರ, ಮಿತ್ರ, ಸೂರ್ಯ, ವಿಶ್ವದೇವತೆಗಳು-ಮುಂತಾದ ಪ್ರಸಿದ್ಧ ದೇವತೆಗಳಲ್ಲದೆ ದ್ಯಾವಾಪೃಥಿವೀ, ಮಿತ್ರಾವರುಣಾ, ಉಪಾಸಾನಕ್ತಾ ಮುಂತಾದ ದ್ವಂದ್ವದೇವತೆಗಳೂ ಇಲ್ಲಿ ಸ್ತುತರಾಗಿದ್ದಾರೆ. ಅದಿತಿ, ವಾಕ್, ರಾತ್ರಿ, ಅರಣ್ಯಾನೀ ಮುಂತಾದ ಸ್ತ್ರೀದೇವತೆಯರೂ ಇದ್ದಾರೆ; ಶ್ರದ್ಧಾ, ಮನ್ಯು ಮುಂತಾದ ಅಮೂರ್ತ ದೇವತೆಗಳೂ ಇದ್ದಾರೆ. ದೇವತಾಸ್ತೋತ್ರಕ್ಕೆ ಋಗ್ವೇದ ಮೀಸಲಾಗಿದ್ದರೂ ಅಲ್ಲಲ್ಲಿ ಲೌಕಿಕಜೀವನಕ್ಕೆ ಸಂಬಂಧಿಸಿದ ಸೂಕ್ತಗಳೂ ಒಂದೊಂದು ಕಾಣಬರುತ್ತವೆ. ದ್ಯೂತಕರನ ಪ್ರಲಾಪಸೂತ್ರ ಇದಕ್ಕೆ ಉತ್ತಮ ನಿದರ್ಶನ. ಅಸ್ಯವಾಮೀಯ ಮುಂತಾದ ಸಮಸ್ಯಾತ್ಮಕ ಸೂಕ್ತಗಳೂ ಉಂಟು. ದೇವತೆಗಳು ಬಂದು ಮಾತಾಡುವ ಸಂವಾದಸೂಕ್ತಗಳೂ ಉಂಟು. ಪಿತೃಕರ್ಮವನ್ನು ಕುರಿತ ಸೂಕ್ತಗಳೂ ಉಂಟು. ವಿಶ್ವದ ಸೃಷ್ಟಿಯನ್ನು ಕುರಿತ ಸೂಕ್ತಗಳೂ ಉಂಟು. ವೈಯಕ್ತಿಕ ದಾನಶೂರರನ್ನು ಹೊಗಳುವ ದಾನಸ್ತುತಿಗಳುಂಟು. ಪ್ರತಿಯೊಂದು ಮಂಡಲದಲ್ಲೂ ವಿಶಿಷ್ಟ ಯe್ಞÁಂಗವಾದ ಅಪ್ರೀಸೂಕ್ತವೂ ಉಂಟು.

ಛಂದಸ್ಸು

ಬದಲಾಯಿಸಿ

ಒಂದೂ ಅಪವಾದವಿಲ್ಲದೆ ಋಗ್ವೇದಸೂಕ್ತಗಳೆಲ್ಲ ಛಂದೋಬದ್ಧವಾಗಿವೆ. ಒಂದು ಸೂಕ್ತದಲ್ಲಿ ಸಾಮಾನ್ಯವಾಗಿ ನಾಲ್ಕು ಪಾದಗಳಿರುವ ಹತ್ತು ಋಕ್ಕುಗಳು ಅಥವಾ ಮಂತ್ರಗಳಿರುತ್ತವೆ. ಒಮ್ಮೊಮ್ಮೆ ಒಂದು ಋಕ್ಕಿನಲ್ಲಿ ಮೂರು ಪಾದಗಳಿರಬಹುದು; ಅಥವಾ ಐದು ಪಾದಗಳಿರಬಹುದು. ಋಕ್ಕಿನ ಒಂದು ಪಾದದಲ್ಲಿ ಎಂಟು ಇಲ್ಲವೆ ಹನ್ನೊಂದು ಇಲ್ಲವೆ ಹನ್ನೆರಡು ಅಕ್ಷರಗಳಿರುವುದು ಹೆಚ್ಚು. ಸಮಾನ ಅಕ್ಷರ ಸಂಖ್ಯೆಯ ಪಾದಗಳಿಂದಲೇ ಒಂದು ಋಕ್ಕು ಬದ್ಧವಾಗಿರುವುದು ವಾಡಿಕೆ. ಕೆಲವೊಂದು ಅಪ್ರಸಿದ್ಧ ಛಂದಸ್ಸುಗಳಲ್ಲಿ ಮಾತ್ರ ಅನಿಯತ ಅಕ್ಷರಸಂಖ್ಯೆಯ ಪಾದಗಳು ಇರಬಹುದು. ಒಟ್ಟು ಋಗ್ವೇದದಲ್ಲಿ ಬಳಕೆಯಾಗಿರುವ ಛಂದಸ್ಸುಗಳ ಸಂಖ್ಯೆ 15; ಆದರೂ ಇವುಗಳಲ್ಲಿ ಏಳು ಮಾತ್ರ ಪ್ರಚುರವೆನ್ನಬಹುದು. ಎಲ್ಲಕ್ಕಿಂತ ಹೆಚ್ಚು ಪ್ರಯುಕ್ತವಾಗಿರುವ ಛಂದಸ್ಸುಗಳೆಂದರೆ ತ್ರಿಷ್ಟುಭ್ (4 ( 11 ಅಕ್ಷರಗಳು), ಗಾಯತ್ರೀ (3 ( 8) ಮತ್ತು ಜಗತೀ (4 ( 12). ಋಗ್ವೇದದ ಮೂರನೆಯ ಎರಡು ಭಾಗ ಇವುಗಳಿಂದಲೇ ಆಗಿದೆ. ಮುಂದಿನ ಸಂಸ್ಕøತ ಛಂದಸ್ಸುಗಳಿಗೂ ವೈದಿಕ ಛಂದಸ್ಸುಗಳೇ ಮೂಲ. ಆದರೆ ವೈದಿಕ ಛಂದಸ್ಸಿನಲ್ಲಿ ಪಾದದ ಕಡೆಯ ನಾಲ್ಕೈದು ಅಕ್ಷರಗಳಿಗೆ ಮಾತ್ರ ಗುರುಲಘುನಿಯಮವಿದೆಯೇ ವಿನಾ: ಮಿಕ್ಕ ಅಕ್ಷರಗಳಿಗೆ ಇಲ್ಲ. ಮೂರು ಋಕ್ಕುಗಳು ಸೇರಿದ್ದಕ್ಕೆ ತೃಚವೆನ್ನುವರು. ಸಂಮಿಶ್ರ ಛಂದೋಬಂಧಗಳಿಗೆ ಪ್ರಗಾಥವೆಂದು ಹೆಸರು.

ಕಾವ್ಯಗುಣ

ಬದಲಾಯಿಸಿ

ಸೂಕ್ತಗಳ ಪದಶಯ್ಯೆ ಲಾಲಿತ್ಯ ಹಾಗು ಸರಳ ಸೌಕುಮಾರ್ಯಗಳಿಂದ ತುಂಬಿದೆ. ಎರಡಕ್ಕಿಂತ ಹೆಚ್ಚು ಪದಗಳು ಕೂಡಿ ಆಗುವ ಸಮಾಸಗಳಿಲ್ಲ. ಈ ಕೃತಿಗಳ ಪ್ರಾಚೀನತೆಯನ್ನು ಲಕ್ಷ್ಯದಲ್ಲಿಟ್ಟಾಗ ಅಲ್ಲಿ ಕಾಣಬರುವ ಛಂದೋ ನೈಪುಣ್ಯ ಹಾಗೂ ಭಾಷಾಪ್ರಭುತ್ವ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಆದರೆ ವಿಶೇಷತಃ ಇವು ಪುರೋಹಿತ ವರ್ಗದವರ ರಚನೆಗಳಾಗಿದ್ದು, ಆಗಲೇ ಪರಿಷ್ಕøತವಾಗಿದ್ದ ಯಾಗವಿಧಿಗೆ ಅಂಗವಾಗಿ ಉದ್ದಿಷ್ಟವಾಗಿರುವುದರಿಂದ, ಇಲ್ಲಿಯ ಕಾವ್ಯ ನೈರ್ಮಲ್ಯಕ್ಕೆ ಚ್ಯುತಿಬರುವಷ್ಟು ಮಟ್ಟಿಗೆ ಯಜ್ಞ ವಿವರಗಳ ಉಲ್ಲೇಖ ಬಂದು ಬಿಡುತ್ತದೆ. ಮುಖ್ಯವಾಗಿ ಯಜ್ಞದ ದೇವತೆಗಳಾದ ಅಗ್ನಿ ಹಾಗೂ ಸೋಮರನ್ನು ಕುರಿತ ಸೂಕ್ತಗಳಲ್ಲಿ ಈ ಮಾತು ಒಡೆದು ಕಾಣುತ್ತದೆ. ಇಲ್ಲೆಲ್ಲ ಕಾವ್ಯಧಾರೆ ಯಜ್ಞಕಲ್ಪನೆಗಳ ಮರೆಯಲ್ಲಿ ಹಿಂಜರಿಯುತ್ತದೆ, ಧಾರ್ಮಿಕ ಭಾವನೆಯೇ ಮುಂದಾಗುತ್ತದೆ.

ಇಷ್ಟಾದರೂ ದೇವತೆಗಳೇ ಸಾಧಾರಣವಾಗಿ ನಿಸರ್ಗ ಶಕ್ತಿಗಳ ಸಾಕ್ಷಾತ್ ಸಂಪರ್ಕವುಳ್ಳವರಾಗಿರುವುದರಿಂದ, ದೇವತಾಸ್ತೋತ್ರಗಳು ಸಹಜವಾಗಿಯೇ ಬಹು ಮನೋಹರ ಹಾಗೂ ಭವ್ಯೋಜ್ವಲ ಚಿತ್ರಗಳಿಂದ ಸುಂದರವಾಗಿ ಕಂಗೊಳಿಸುತ್ತವೆ. ಎಲ್ಲ ಸೂಕ್ತಗಳಲ್ಲೂ ಒಂದೇ ರೀತಿಯ ಕಾವ್ಯಗುಣವೆನ್ನುವಂತಿಲ್ಲವಾದರೂ ವಿಶಿಷ್ಟ ಸೂಕ್ತಗಳಲ್ಲಿಯ ಕಾವ್ಯಗುಣ ಮಾತ್ರ ಉಚ್ಚ ಶ್ರೇಣಿಯದಾಗಿದ್ದು ಎಂಥವರನ್ನಾದರೂ ತಲೆದೂಗಿಸುವಂತಿದೆ. ಋಗ್ವೇದದಲ್ಲೆಲ್ಲ ಕಾವ್ಯಗುಣದಲ್ಲಿ ಉತ್ಕøಷ್ಟವಾದ ಸೂಕ್ತಗಳೆಂದರೆ ಉಷಸ್ ದೇವತೆಯ ಸೂಕ್ತಗಳೆನ್ನಬಹುದು. ವಿಶ್ವದ ಯಾವುದೇ ಸಾಹಿತ್ಯದಲ್ಲಿ ಇದಕ್ಕಿಂತ ಉನ್ನತದರ್ಜೆಯ ಭಾವಲಹರಿಗಳು ದುರ್ಲಭವೆಂದು ಬಲ್ಲವರು ಉದ್ಗರಿಸಿದ್ದಾರೆ. ಹಾಗೆಯೇ, ಇಂದ್ರವೃತರ ಕಾಳಗದ ವರ್ಣನೆಗೆ ಹೊರಟ ಕೆಲವು ಸೂಕ್ತಗಳು ವೀರರಸ ಪ್ರತಿಪಾದನೆಯಲ್ಲಿ ಗಣನೀಯವಾದ ಯಶಸ್ಸನ್ನು ಸಾಧಿಸಿವೆ. ಮರುದ್ದೇವತೆಗಳನ್ನು ಕುರಿತ ಸೂಕ್ತಗಳಲ್ಲಿ ಗುಡುಗು ಸಿಡಿಲುಗಳ ಆರ್ಭಟವನ್ನು ಶಬ್ದಚಿತ್ರಗಳಲ್ಲಿ ಅಮರವಾಗಿ ಸೆರೆಹಿಡಿಯುವ ಕಲೆಯಿದೆ. ಪರ್ಜನ್ಯ ಸೂಕ್ತದಲ್ಲಿ ಜಲಪ್ರಳಯದ ರಮ್ಯ ಅವಿಷ್ಕಾರವಿದೆ. ಋತುಧರ್ಮಗಳ ಪ್ರವರ್ತಕನೂ ನಿಯಾಮಕನೂ ಆದ ವರುಣದೇವನ ಸ್ತೋತ್ರಗಳಲ್ಲಿ ಉನ್ನತಮಟ್ಟದ ಕಾವ್ಯಧಾರೆ ನೀತಿವ್ಯವಸ್ಥೆಯ ಯಶೋಗಾನಕ್ಕೆ ಮೀಸಲಾಗಿದೆ. ಅದರಂತೆ ದೇವತಾಕಥೆಗಳ ಅಂಗವಾಗಿ ಬರುವ ಸಂವಾದಸೂಕ್ತಗಳು ನಾಟಕೀಯ ಸ್ವಾರಸ್ಯವನ್ನೂ ಭಾಷಾ ಚಮತ್ಕಾರವನ್ನೂ ಹೊರಸೂಸುತ್ತವೆ. ಮುಂದಿನ ನಾಟಕಗಳ ಉಗಮವನ್ನು ಇಲ್ಲಿಯೇ ವಿದ್ವಾಂಸರು ಸೂಚಿಸುತ್ತಾರೆ. ಗೋವುಗಳನ್ನು ಅಪಹರಿಸಿದ ಪಣಿಗಳಿಗೂ ಸರಮೆಗೂ ನಡೆಯುವ ಸಂವಾದ ಹಾಗು ಯಮ-ಯಮಿಯರ ಸಂವಾದಗಳನ್ನು ಉದಾಹರಣೆಯಾಗಿ ಹೇಳಬಹುದು. ಜೂಜುಗಾರನ ಪ್ರಲಾಪವಂತೂ ಕರುಣಾಜನಕವಾದ ಲೌಕಿಕಕಾವ್ಯದ ಕಕ್ಷೆಯಲ್ಲಿಯೇ ಸೇರುವಂತಿದೆ. ಮೃತ್ಯುವನ್ನು ಕುರಿತ ವಿಚಾರಗಳು ರುದ್ರಗಂಭೀರ ವಾತಾವರಣವನ್ನು ಹೇಗೆ ನಿರ್ಮಿಸಬಲ್ಲವೆನ್ನಲು ಪಿತೃಸೂಕ್ತವನ್ನು ಉದಾಹರಿಸಬಹುದು. ಸೃಷ್ಟಿವಿಚಾರವನ್ನು ಕುರಿತ ಸೂಕ್ತ ಗಂಭೀರ ತಾತ್ತ್ವಿಕ ಚಿಂತನೆಗಳು ಹೇಗೆ ರಮಣೀಯ ಕಾವ್ಯರೂಪದಲ್ಲಿ ಮೈದಾಳಬಹುದೆಂಬುದನ್ನು ನಿದರ್ಶಿಸುವ ಸಾಕ್ಷಿಯಾಗಿದೆ. ಅರ್ಥನಿರ್ಣಯ : ಇಷ್ಟೊಂದು ಪ್ರಾಚೀನ ಕಾಲದ ರಚನೆಯಾದ ಋಗ್ವೇದಕ್ಕೆ ಅರ್ಥಮಾಡುವುದರಲ್ಲಿ ನಾವೆಷ್ಟು ಕೃತಕೃತ್ಯರಾದೇವೆಂಬ ಪ್ರಶ್ನೆಯೇಳುವುದು ಸಹಜ. ಈ ಸಮಸ್ಯೆ ಎಷ್ಟೇ ಜಟಿಲವಾಗಿ ಕಂಡರೂ ಈ ವೇದದ ಬಹಳಷ್ಟು ಅಂಶ ಇಂದು ಸಮರ್ಪಕವಾಗಿ ಅರ್ಥವಿಸಲ್ಟಟ್ಟಿದೆಯೆನ್ನಬಹುದು. ಇದಕ್ಕೆ ವಿಶ್ವದ ಅನೇಕ ವಿದ್ವಾಂಸರ ಅವಿಶ್ರಾಂತ ಸಂಶೋಧನ ಪ್ರಯತ್ನಗಳೇ ಕಾರಣ. ಇಂದು ಕೂಡ ಇನ್ನೂ ತೃಪ್ತಿಕರವಾಗಿ ಅರ್ಥ ಬಗೆಹರಿಯದ ಕೆಲವೊಂದು ಅಂಶಗಳಿರುವುದು ನಿಜವೇ. ಆದರೆ ಪ್ರಥಮ ವೇದಾರ್ಥಯತ್ನವಾದ ನಿರುಕ್ತವನ್ನು ಬರೆದ ಯಾಸ್ಕನ ಕಾಲಕ್ಕೇ (ಕ್ರಿ.ಪೂ.500) ಈ ರೀತಿಯ ಸಂಶಯ ತಪ್ಪಿರಲಿಲ್ಲ. ನಿರರ್ಥಕಾ ಹಿ ಮಂತ್ರಾಃ - ಎಂದು ವಾದಿಸಿದ ಕಾತ್ಸನ ಅಭಿಪ್ರಾಯವನ್ನು ಯಾಸ್ಕನೇ ಪೂರ್ವಪಕ್ಷವಾಗಿ ಉಲ್ಲೇಖಿಸಿದ್ದಾನೆ.

ಕ್ರಿ.ಶ.19ನೆಯ ಶತಮಾನದ ವರೆಗೆ ಋಗ್ವೇದದ ಅರ್ಥಗ್ರಹಣೆಗೆ ಕ್ರಿ.ಶ.14ನೆಯ ಶತಮಾನದಲ್ಲಿ ಸಾಯಣಾಚಾರ್ಯರು ಬರೆದ ವೇದಭಾಷ್ಯವೊಂದೇ ಸಮರ್ಪಕ ಆಧಾರವೆಂದು ಸಂಪ್ರದಾಯವಾದಿಗಳೂ ವಿದ್ವಾಂಸರೂ ತಿಳಿಯುತ್ತಿದ್ದರು. ಆದರೆ ಸಾಯಣರು ಎಷ್ಟೋ ವೇಳೆ ತಮ್ಮ ಕಾಲದ ಯಜ್ಞಪ್ರಕ್ರಿಯೆಯ ಆರ್ಥಗಳನ್ನು ಆ ವಿವರಗಳೇ ಆಸ್ತಿತ್ವದಲ್ಲಿಲ್ಲದ ಕಾಲದ ಮಂತ್ರಗಳಿಗೂ ಅನ್ವಯಿಸಿರುವರೆಂಬುದನ್ನು ಜರ್ಮನ್ ಸಂಶೋಧಕರು ಎತ್ತಿ ತೋರಿಸಿದ್ದಾರೆ. ಅಸುರ ಶಬ್ದಕ್ಕೆ ಸಾಯಣರು ಒಮ್ಮೆ ಅಸುರಕ್ಷಕನಾದ ದೇವ ಎಂದರೆ ಇನ್ನೊಮ್ಮೆ ಅಸುನಾಶಕನಾದ ರಾಕ್ಷಸನೆನ್ನುತ್ತಾರೆ. ಒಮ್ಮೆ ಪರ್ಜನ್ಯನೆನ್ನುತ್ತಾರೆ. ಇನ್ನೊಮ್ಮೆ ಹೋತೃವೆನ್ನುತ್ತಾರೆ. ಮತ್ತೊಮ್ಮೆ ಮಳೆ ನೀರೆನ್ನುತ್ತಾರೆ. ಹೀಗೆ ಒಂದೇ ಶಬ್ದಕ್ಕೆ ಮನಬಂದಂತೆ ನಾನಾರ್ಥಗಳನ್ನು ಬರೆಯುತ್ತ ಹೋಗುವ ಸಾಯಣರಿಗೆ ವೇದಾರ್ಥಸಂಪ್ರದಾಯದ ಖಚಿತ e್ಞÁನವಿರಲಿಲ್ಲವೆಂದೇ ಅನುಮಾನಿಸುವವರಿದ್ದಾರೆ. ಮೂಲಸಂಪ್ರದಾಯ ಯಾಸ್ಕಾನಿಗೂ ಹಿಂದೆಯೇ ಭಾರತದಲ್ಲಿ ಲುಪ್ತವಾಗಿದ್ದಿರಬೇಕೆಂದು ಆಧುನಿಕ ವಿದ್ವಾಂಸರ ತರ್ಕ. ಅದು ಎರಡು ಸಾವಿರ ವರ್ಷಗಳ ಬಳಿಕ ಬಂದ ಸಾಯಣರಿಗೆ ಪರಿಚಿತವಾಗಿರುವುದು ಅಸಂಭವ. ಆದ್ದರಿಂದ ಆಧುನಿಕ ವಿದ್ವಾಂಸರು ಋಗ್ವೇದದಿಂದಲೇ ಋಗ್ವೇದವನ್ನು ಅರ್ಥೈಸಬೇಕೆಂಬ ಹೊಸ ದೃಷ್ಟಿಕೋನದಿಂದ ಹೊರಟು ಋಗ್ವೇದದ ಪದಸೂಚಿಗಳನ್ನೂ ಅನುಕ್ರಮಣಿಗಳನ್ನೂ ನಿರ್ಮಿಸಿದ್ದಾರೆ. ಹೊಸದಾಗಿ ತುಲನಾತ್ಮಕ ಭಾಷಾವ್ಯಾಕರಣಗಳನ್ನೂ ಬರೆದಿದ್ದಾರೆ. ತಾವೇ ಅರ್ಥವನ್ನು ಸಮೀಚೀನವೆಂದೂಹಿಸಿ ಶಬ್ದಕೋಶಗಳನ್ನು ರಚಿಸಿದ್ದಾರೆ. ತುಲನಾತ್ಮಕ ದೇವತಾಕಥೆಗಳ ಅಭ್ಯಾಸ. ತುಲನಾತ್ಮಕ ಧರ್ಮಗಳ ಅಭ್ಯಾಸ, ಮುಂತಾದವುಗಳ ನೆರವಿನಿಂದ ಎಷ್ಟೋ ಅe್ಞÁತ ವಿವರಗಳ ಮೇಲೆ ಹೊಸ ಸಂಶೋಧನೆಯ ಬೆಳಕು ಬೀರಿ ಕತ್ತಲೆಯನ್ನು ಕಳೆದಿದ್ದಾರೆ. ವಿದ್ವಾಂಸರ ಲೇಖನಗಳ ಪಟ್ಟಿಯೇ ಮೂರು ಸಂಪುಟಗಳನ್ನು ಮೀರುವಷ್ಟು ಇಂದು ಬೆಳೆದಿದೆ. ಇನ್ನೂ ಬೆಳೆಯುತ್ತಿದೆ.

ಋಗ್ವೇದದಲ್ಲಿ ಧಾರ್ಮಿಕ ಭಾವನೆ

ಬದಲಾಯಿಸಿ

ಋಗ್ವೇದೀಯ ಆರ್ಯರು ಪ್ರಕೃತಿಯ ಅದ್ಭುತಗಳ ಹಿಂದೆ ಪ್ರಚ್ಛನ್ನ ಶಕ್ತಿಯೊಂದಿದೆ ಎಂದು ಅರಿತು ಇಂಥ ಪ್ರಾಕೃತಿಕ ಶಕ್ತಿಗಳ ಅಭಿಮಾನಿ ದೇವತೆಗಳನ್ನು ಕೃತಜ್ಞತೆಯಿಂದ ಸ್ತುತಿಗೈದರು. ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ಗೆದ್ದುಕೊಡುವ, ಮೋಡಗಳಲ್ಲಿ ಸ್ಥಗಿತವಾಗಿರುವ ಮಳೆಯನ್ನು ಬಿಡಿಸಿ ವರ್ಷಿಸುವಂತೆ ಮಾಡುವ ಶಕ್ತಿಗೆ ಇಂದ್ರನೆಂದರು. ತಮಗೆ ಅತ್ಯುಪಯುಕ್ತವಾದ ಅಂತೆಯೇ ತಾವು ಅರ್ಪಿಸಿದ ತುಪ್ಪ ಇತ್ಯಾದಿ ಆಹುತ ವಸ್ತುಗಳನ್ನು ದೇವತೆಗಳಿಗೆ ಮುಟ್ಟಿಸುವ ಶಕ್ತಿಗೆ ಅಗ್ನಿಯೆಂದೂ ಗಾಳಿಗೆ ವಾಯುವೆಂದೂ ಇದೇ ರೀತಿ ಮಿತ್ರ, ಬೃಹಸ್ಪತಿ, ಸವಿತೃ, ಪರ್ಜನ್ಯ ಮುಂತಾಗಿ ಅನೇಕ ಶಕ್ತಿಗಳನ್ನು ಭಾವಿಸಿಕೊಂಡು, ಕೆಲವು ವೇಳೆ ಅವುಗಳಿಗೆ ಮಾನವತ್ವಾರೋಪಣೆಯನ್ನೂ ಮಾಡಿ, ಅರ್ಚಿಸಿ ಸ್ತುತಿಸಿದರು. ಹೀಗೆ ಋಗ್ವೇದವೆಲ್ಲವೂ ಇಂಥ ಅಭಿಮಾನಿ ದೇವತೆಗಳ ಸ್ತೋತ್ರ ಸಮುಚ್ಚಯ.

ಇಂಥ ದೇವತೆಗಳ ಸಮೂಹವನ್ನು ಸ್ವರ್ಗ, ಅಂತರಿಕ್ಷ ಮತ್ತು ಭೂಮಿ- ಇವುಗಳಿಗೆ ತಕ್ಕಂತೆ ಸ್ವರ್ಗೀಯ ದೇವತೆಗಳು, ಅಂತರಿಕ್ಷ ದೇವತೆಗಳು ಮತ್ತು ಭೂಮಿ ದೇವತೆಗಳೆಂದು ವಿಂಗಡಿಸಬಹುದು. ದ್ಯೌಃ, ವರುಣ, ಮಿತ್ರ, ಸೂರ್ಯ, ಸವಿತೃ, ಪೂಷನ್, ಅಶ್ವಿನಿಗಳು, ಉಷಸ್, ರಾತ್ರಿ - ಇವು ಸ್ವರ್ಗೀಯ ದೇವತೆಗಳು. ಇಂದ್ರ, ಅಪಾಂನಪಾತ್, ರುದ್ರ, ಮರುತ್ತುಗಳು, ವಾಯು, ಪರ್ಜನ್ಯ ಮತ್ತು ಅಪಃ (ಜಲಾಭಿಮಾನಿ ದೇವತೆ)- ಇವು ಅಂತರಿಕ್ಷ ದೇವತೆಗಳು. ಪೃಥಿವಿ, ಅಗ್ನಿ ಮತ್ತು ಸೋಮ ಇವು ಭೌಮದೇವತೆಗಳು. ಕೆಲವು ಸತ್ಯಭಿಮಾನಿ ದೇವತೆಗಳೂ ಈ ಕೊನೆಯ ಗುಂಪಿಗೆ ಸೇರಿರುತ್ತಾರೆ.

ಮುಖ್ಯವಾದ ದೇವತೆಗಳು ಮೂವತ್ತುಮೂರು; ಮೇಲೆ ಹೇಳಿದ ಒಂದೊಂದು ಗುಂಪಿಗೆ ಹನ್ನೊಂದು. ಮೂಲತಃ ಇವೆಲ್ಲವೂ ಪ್ರಕೃತಿಯ ನಾನಾ ಶಕ್ತಿಗಳ ಅಭಿಮಾನಿ ದೇವತೆಗಳು ಎಂದು ಮೇಲೆಯೇ ಹೇಳಿದೆ. ಆದ್ದರಿಂದ ಈ ದೇವತಾಭಾವನೆ ಕೇವಲ ಸಾಂಕೇತಿಕವಾದುದು. ಉದಾಹರಣೆಗೆ, ಅಗ್ನಿಯ ಜ್ವಾಲೆಗಳು ಅಗ್ನಿದೇವತೆಯ ನಾಲಗೆಗಳು ಅಥವಾ ಜಟೆಗಳು. ಸೂರ್ಯಕಿರಣಗಳು ಆತನ ಕರಗಳು. ದೇವತೆಗಳಲ್ಲಿ ಕೆಲವರು ಮೊದಲು ಉತ್ಪತ್ತಿಯಾದವರು. ಕೆಲವರು ಆಮೇಲೆ. ಅವರಲ್ಲಿ ಕೆಲವರು ಮಕ್ಕಳು. ಅವರೂ ಮೊದಲು "ಮರ"ರೇ. ಅನಂತರ ಸೋಮರಸವನ್ನು ಕುಡಿದು ಅಮರರಾದರು. ಅವರ ಸ್ಥಾನ ಸ್ವರ್ಗ. ತ್ರಿದಿವ ವಿಷ್ಣುವಿನ ಅತ್ಯುಚ್ಚಪದ(ಪರಮಪದ).

ಯಜ್ಞದಲ್ಲಿ ದೇವತೆಗಳಿಗೆ, ಹಾಲು, ಬೆಣ್ಣೆ ಅಥವಾ ತುಪ್ಪ, ಧಾನ್ಯಗಳು, ಇತ್ಯಾದಿಗಳನ್ನು ಆರ್ಯರು ಅರ್ಪಿಸುತ್ತಿದ್ದರು. ದೇವತೆಗಳು ಅಶ್ವಗಳನ್ನು ಹೂಡಿದ ರಥಾರೂಢರಾಗಿ ಬಂದು ಅಗ್ನಿಯ ಮೂಲಕ ಅದನ್ನು ಸ್ವೀಕರಿಸುವರೆಂಬ ನಂಬಿಕೆ ಬೆಳೆದಿತ್ತು. ಸೋಮರಸ ದೇವತೆಗಳ ಅಚ್ಚುಮೆಚ್ಚಿನ ಪಾನೀಯ. ಅದನ್ನು ಕುಡಿದು ಅವರು ತೃಪ್ತರಾಗಿ ಯಜ್ಞ ಮಾಡಿದವರಿಗೆ ಅಶ್ವಗಳು, ಗೋವುಗಳು, ವೀರರಾದ ಪುತ್ರರು, ದೀರ್ಘಾಯಸ್ಸು-ಇತ್ಯಾದಿಗಳನ್ನು ಹರಸುತ್ತಿದ್ದರು. ಅನಾರ್ಯರ ಮೇಲೆ ಆರ್ಯರು ಮಾಡುತ್ತಿದ್ದ ಯುದ್ಧದಲ್ಲಿ ದೇವತೆಗಳ, ಅದರಲ್ಲೂ ಅತಿ ಮುಖ್ಯನಾದ ಇಂದ್ರನ ಸಹಾಯ ಅಪಾರವಾದುದು.

ದೇವತೆಗಳಿಗೆ ಕೆಲವು ವಿಶಿಷ್ಟ ಗುಣಗಳಿವೆ. ಅವರ ಶಕ್ತಿ (ಕ್ರತು) ಮಹತ್ತರವಾದುದು. ಪ್ರಕೃತಿಯ ಕ್ರಿಯೆಗಳು ನಿಯಮಬದ್ಧವಾಗಿ ನಡೆಯುವಂತೆ ಮಾಡುವವರು ಅವರು. ವಿಶ್ವದ ಆಗುಹೋಗುಗಳ, ಚಲನವಲನಗಳ ಹಿನ್ನೆಲೆಯಲ್ಲಿ, ಮೂಲದಲ್ಲಿ, ಋತವೆಂಬ ಶಕ್ತಿಯಿದೆ (ನೋಡಿ- ಋತ). ಆ ಋತಶಕ್ತಿಯನ್ನು ಪಾಲಿಸಿ ಪೋಷಿಸಿ ನಡೆಸಿಕೊಂಡು ಬರುವವರು ಋತ-ಗೋಪ್ತರಾದ ದೇವತೆಗಳು. ದೇವತೆಗಳಿಗೂ ಋತಕ್ಕೂ ಇರುವ ಸಂಬಂಧ ತುಂಬ ಮುಖ್ಯವಾದದ್ದು. ಋತವನ್ನು ಮೂರು ರೀತಿಯಲ್ಲಿ ಭಾವಿಸಲಾಗಿದೆ. ವಿಶ್ವದಲ್ಲಿ ಕಾಣುವ ಕ್ರಮ, ನಿಯಮವೆಂಬುದು ಋತದ ಒಂದು ಮುಖ. ಸರಿಯಾದ ನಿಯಮಬದ್ಧವಾದ ನಡೆವಳಿಕೆ ಎಂಬುದು ಋತದ ಇನ್ನೊಂದು ಮುಖ. ದೇವತೆಗಳು ಈ ಎರಡೂ ಬಗೆಯ ನಿಯಮಪಾಲಕರು. ವಿಶ್ವದ ಕ್ರಿಯೆಯೂ ಮಾನವನ ನಡೆವಳಿಕೆಯೂ ತಪ್ಪದಂತೆ ಅದನ್ನೂ ಕಾಯುತ್ತಾರೆ. ಋತ ಎಂದರೆ ಧರ್ಮ ಎಂಬುದು ಅದರ ಮೂರನೆಯ ಮುಖ. ಇದು ವೇದದ ಆಚಿನ ಕಾಲದ್ದಾದರೂ ತುಂಬ ಪ್ರಾಮುಖ್ಯ ಪಡೆಯಿತು. ದುಷ್ಟಶಕ್ತಿಗಳನ್ನು ದಮನ ಮಾಡಿ, ಸಕಲ ಚರಾಚರವಸ್ತುಗಳನ್ನೂ ತಮ್ಮ ಅಧೀನಪಡಿಸಿಕೊಂಡು ವಿಶ್ವಕಲ್ಯಾಣವನ್ನು ಆಗಮಾಡುವುದು ದೇವತೆಗಳ ವೈಶಿಷ್ಟ್ಯ. ಅನೃತ, ಪಾಪ, ಅವರ ಶಿಕ್ಷೆಗೊಳಗಾಗುತ್ತವೆ.

ಏಕದೇವತಾ ಭಾವನ

ಬದಲಾಯಿಸಿ

ಶಕ್ತಿ, ಜ್ಞಾನ, ಕಾಂತಿ, ದಯೆ ಮುಂತಾದ ಸುಗುಣಗಳು ಎಲ್ಲ ದೇವತೆಗಳಿಗೂ ಸಮಾನವಾಗಿರುವುದರಿಂದ ಇಬ್ಬಿಬ್ಬರು ದೇವತೆಗಳು ಒಟ್ಟಿಗೆ ಸ್ತುತರಾಗುತ್ತಾರೆ. ಮಿತ್ರಾವರುಣ, ಇಂದ್ರಾಗ್ನಿ, ದ್ಯಾವಾಪೃಥಿವೀ- ಹೀಗೆ. ಕ್ರಮೇಣ ಎಲ್ಲ ಗುಣಗಳು ಎಲ್ಲ ದೇವತೆಗಳಲ್ಲೂ ಇರುವುದರಿಂದ ಎಲ್ಲ ಒಂದೇ ಎಂದು ಭಾವಿಸುವುದೂ ಸಹಜ. ಹೀಗೆ ಅದಿತಿ, ಪ್ರಜಾಪತಿಗಳಲ್ಲಿ ಎಲ್ಲ ದೇವತೆಗಳೂ ಅಡಗಿದ್ದಾರೆ ಎಂಬುದರಿಂದ ದೇವರು ಒಬ್ಬನೇ, ನಾಮ ಹಲವು ಎಂಬ ಭಾವನೆ ಮೂಡಿಬರುತ್ತದೆ. ಋಗ್ವೇದದ ಮಂತ್ರವೊಂದು ಒಬ್ಬನೇ ಆದ ಆದಿತ್ಯನನ್ನು ಇಂದ್ರನೆಂದೂ ಮಿತ್ರನೆಂದೂ ವರುಣನೆಂದೂ ಅಗ್ನಿಯೆಂದೂ ಕರೆಯುತ್ತದೆ. ಇವನೇ ದಿವ್ಯಾತ್ಮನೂ ಶ್ರೇಷ್ಠವಾದ ಪತನವುಳ್ಳವನೂ ಆದ ಗುರುತ್ಮಂತನಾಗಿದ್ದಾನೆ. ಮೇಧಾವಿಗಳಾದ ವಿಪ್ರರು ಏಕಾತ್ಮನಾದ ಒಬ್ಬ ಪರಮಾತ್ಮನನ್ನೇ ಅಗ್ನಿಯೆಂದೂ ಯಮನೆಂದೂ ಮಾತರಿಶ್ವನೆಂದೂ ನಾನಾ ವಿಧವಾಗಿ ಕರೆಯುತ್ತಾರೆ- ಎಂದು ವೇದ ಘೋಷಿಸುತ್ತದೆ. ಹೀಗೆ ಒಬ್ಬನೇ ಪರದೇವತೆ ಎಂಬ ಭಾವದಿಂದ ಪ್ರಕೃತಿಯೇ ವಿಶ್ವವೇ ದೇವರು ಎಂಬ ಭಾವನೆ ಉತ್ಪನ್ನವಾಗಿ, ಮುಂದೆ ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗುವ ಪರಬ್ರಹ್ಮತತ್ತ್ವದ ಆರಂಭ ಇಲ್ಲಿಯೇ ಕಂಡುಬರುತ್ತದೆ. ಅನೇಕ ದೇವತಾತತ್ತ್ವದಿಂದ ಏಕದೇವತ್ವಭಾವ ತಾನಾಗಿಯೇ ಬೆಳೆದು ಕೊನೆಗೆ ವಿಶ್ವದೇವತ್ವತತ್ತ್ವದಲ್ಲಿ ಅಂತರ್ಗತವಾಗುತ್ತದೆ.

ಲೌಕಿಕ ವಿಚಾರಗಳು

ಬದಲಾಯಿಸಿ

ಋಗ್ವೇದ ದೇವತಾಸ್ತುತಿ ರೂಪದ ಮಂತ್ರಗಳನ್ನು ಬಹುಮಟ್ಟಿಗೆ ಒಳಗೊಂಡಿದ್ದರೂ ಅದರಲ್ಲಿ ಆರ್ಯರ ಸಂಸ್ಕøತಿಯನ್ನು ಪರೋಕ್ಷವಾಗಿ ಸೂಚಿಸುವ ಅನೇಕ ಸೂಕ್ತಗಳಿವೆ. ಒಂದು ಮತ್ತು ಹತ್ತನೆಯ ಮಂಡಲಗಳಲ್ಲಿ ಇಂಥ ಸೂಕ್ತಗಳು ಹೆಚ್ಚು. ಈ ಮಂಡಲಗಳು ಆಮೇಲೆ ಋಗ್ವೇದ ಸಂಹಿತೆಗೆ ಸೇರಿಸಲ್ಪಟ್ಟುವೆಂಬುದಕ್ಕೆ ಇದೂ ಒಂದು ಕಾರಣ.

ಹತ್ತನೆಯ ಮಂಡಲದ 85ನೆಯ ಸೂಕ್ತ ವೈವಾಹಿಕ ವಿಧಿಗೆ ಸಂಬಂಧಿಸಿದ್ದು. ಹದಿನಾಲ್ಕರಿಂದ ಹದಿನೆಂಟನೆಯ ಸೂಕ್ತ ಪೂರ್ತಾ ಐದು ಸೂಕ್ತಗಳು ಉತ್ತರಕ್ರಿಯೆಗೆ ಸಂಬಂಧಿಸಿದವು. ಕಡೆಯದಂತೂ ವೈದಿಕ ಆರ್ಯರ ಉತ್ತರಕ್ರಿಯೆಗೆ ಸಂಬಂಧಿಸಿದ ಕಟ್ಟುಪಾಡುಗಳ ವಿಚಾರದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ.

ಭಾರತೀಯ ಸಂಸ್ಕøತ ನಾಟಕದ ಹುಟ್ಟನ್ನೂ ಸಹ ಋಗ್ವೇದದಲ್ಲಿ ಗುರುತಿಸಬಹುದು. ಮತ್ರ್ಯಲೋಕದ ಪ್ರೇಮಿ ಪುರೂರವನಿಗೂ ಅಮತ್ರ್ಯ ಲೋಕದ ಸುಂದರಿ ಅಪ್ಸರೆ ಊರ್ವಶಿಗೂ ಪ್ರೇಮ ಅಂಕುರವಾಗಿ ಫಲಿಸಿತೆನ್ನುವಾಗ ಆಕೆ ಆತನನ್ನು ಕೈಬಿಡುವ ಸಂದರ್ಭವನ್ನೂ ಸೂಚಿಸುವ ಸಂವಾದ ಸೂಕ್ತವೊಂದು ಮುಂದೆ-ಸಹಸ್ರ ವರ್ಷಗಳಿಗಿಂತಲೂ ಮುಂದೆ-ಮಹಾಕವಿ ಕಾಳಿದಾಸನ ವಿಕ್ರಮೋರ್ವಶೀಯ ನಾಟಕದ ವಸ್ತುಬೀಜ. ಹೀಗೆಯೇ ತಂಗಿ ಯಮಿ ಋತವನ್ನು (ಧರ್ಮ) ತಿಳಿದ ತನ್ನ ಅಣ್ಣ ಯಮನಲ್ಲಿ ಕಾಮಾತುರಳಾಗಿ, ಬೇಡಿ ತಿರಸ್ಕøತಳಾಗುವ ಯಮ-ಯಮೀ ಸಂವಾದ ಸೂಕ್ತ ಮತ್ತೊಂದು. ನಾಲ್ಕು ಸೂಕ್ತಗಳು ನೀತಿಬೋಧಕವಾದವು. ಇವುಗಳಲ್ಲಿ ಜೂಜುಗಾರನ ಅಳಲು ಕಾವ್ಯದೃಷ್ಟಿಯಿಂದಲೂ ಸ್ವಾರಸ್ಯವಾಗಿದೆ. ಸತ್ಕಾರ್ಯ ಮಾಡಿದರೆ ಸಿಗುವ ಸತ್ಫಲ, ಸುಸಂಸ್ಕøತ ಪ್ರe್ಞÁಯುಕ್ತ ವಾಕ್ ತತ್ತ್ವದ ಮಹತ್ತ್ವ, ಮಾನವರು ಸಂಪದನ್ವೇಷಣೆ ಮಾಡುವ ವಿವಿಧ ಮಾರ್ಗಗಳು- ಮುಂತಾದವನ್ನು ಹೇಳುವ ಸೂಕ್ತಗಳು ಉಳಿದ ಮೂರು.

ಒಗಟುಗಳು, ಸಮಸ್ಯೆಗಳನ್ನೊಡ್ಡುವ ಸೂಕ್ತಗಳು ಎರಡು. ಹೆಸರು ಹೇಳದೆ ಕೃತಿಗಳನ್ನು ಇಲ್ಲವೇ ಮಹಿಮೆಯನ್ನು ವರ್ಣಿಸಿ ಹೆಸರನ್ನು ಊಹಿಸಲು ಬಿಡುವ ಸೂಕ್ತ ಒಂದು. ಸಾಂಕೇತಿಕವಾದ ಮತ್ತು ಗೂಢವಾದ ಭಾಷೆಯಲ್ಲಿ ಆದಿತ್ಯ ಕಾಲ ಮುಂತಾದ ದೇವತಾವಿಶೇಷಗಳಿಗೆ ಸಂಬಂಧಿಸಿದ ಒಗಟುಗಳನ್ನೊಳಗೊಂಡ ಐವತ್ತೆರಡು ಮಂತ್ರಗಳ ದೀರ್ಘಸೂಕ್ತ ಮತ್ತೊಂದು. ಎರಡೂ ಮನೋರಂಜಕವಾಗಿವೆ.

ವಿಶ್ವಸೃಷ್ಟಿಗೆ ಸಂಬಂಧಿಸಿದಂತೆ ಬಹು ವಿಧವಾಗಿ ಚರ್ಚೆ ನಡೆದು ವಿಧವಿಧವಾದ ಉತ್ತರಗಳು ಅನೇಕ ಸೂಕ್ತಗಳಲ್ಲಿ ಕಂಡುಬರುತ್ತವೆ. ಮೊದಲು ಈ ಎಲ್ಲ ಏನಾಗಿತ್ತು? ಮೊದಲು ಇದ್ದುದೇನು? ಎಂಬ ಪ್ರಶ್ನೆ ಆ ಪುರಾತನ ಕಾಲದಲ್ಲೇ ಹುಟ್ಟಿ, ಋಷಿ ಕವಿಗಳು ಮನೀಷೆಯಿಂದ ಹೃದಯದಲ್ಲಿ ಹುಡುಕಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ದಾನಸ್ತುತಿಗಳೆಂಬ ಕೆಲವು ಸೂಕ್ತಗಳು ಹಲವು ಋಷಿಕುಲಗಳ, ಯಜ್ಞಗಳನ್ನು ಮಾಡಿಸಿ ಉದಾರಬುದ್ಧಿಯಿಂದ ಭೂದಾನಗಳನ್ನಿತ್ತ ರಾಜರುಗಳ ಕುಲಗೋತ್ರಗಳು, ವೈದಿಕ ಆರ್ಯಕುಲ ನೆಲೆಸಿದ್ದ ಸ್ಥಳವಿಶೇಷಗಳು ಮುಂತಾದ ಚಾರಿತ್ರಿಕ ಅಂಶಗಳನ್ನೊಳಗೊಂಡಿದೆ.

ಇಷ್ಟೇ ಅಲ್ಲದೆ ಋಗ್ವೇದದ ಸೂಕ್ತಗಳಿಂದ ಆರ್ಯರು ನೆಲೆಸಿದ್ದ ಪ್ರದೇಶಗಳ ನದಿಗಳು ಸಸ್ಯ ಮತ್ತು ಪ್ರಾಣಿವರ್ಗ, ಮೂಲ ನಿವಾಸಿಗಳಿಗೂ ಅವರಿಗೂ ನಡೆಯುತ್ತಿದ್ದ ನಿರಂತರ ಯುದ್ಧಗಳು, ಆರ್ಯರ ಸಾಮಾಜಿಕ ಜೀವನ, ಸ್ತ್ರೀಯರ ಸ್ಥಿತಿಗತಿಗಳು, ಅವರ ಉಡುಗೆ ತೊಡಿಗೆ, ಆಭರಣಗಳು, ಆಹಾರ ಪಾನೀಯಗಳು ಅವರ ಕಸಬುಗಳು, ದ್ಯೂತ, ನೃತ್ಯ ಸಂಗೀತ ಇತ್ಯಾದಿ ವಿನೋದಗಳು- ಮುಂತಾದ ಅನೇಕ ವಿಷಯಗಳು ಗೊತ್ತಾಗುತ್ತವೆ.

ವೇದಭಾಷ್ಯ ಮತ್ತು ವೇದ ಸಂರಕ್ಷಣೆ

ಬದಲಾಯಿಸಿ

ಇಷ್ಟು ಮಹತ್ತರವೂ ಕಾಲದ ದೃಷ್ಟಿಯಿಂದ ಅತಿ ಪುರಾತನವೂ ಆದ ವೇದವನ್ನು ಇಂದಿನವರು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ವೇದದ ಮಂತ್ರಗಳು ಅನರ್ಥಕ, ಅನುಪನ್ನಾರ್ಥಕ, ವಿಪ್ರತಿಷಿದ್ಧಾರ್ಥಕ, ಆವಿಷ್ಪಷ್ಟಾರ್ಥಕ ಎಂಬುದಾಗಿ ತನಗಿಂತ ಹಿಂದಿನವನಾದ ಕಾಶ್ಯನೆಂಬುವನ ಅಭಿಪ್ರಾಯವೆಂದು ನಿರುಕ್ತಕಾರ ಯಾಸ್ಕ ಕ್ರಿಸ್ತಪೂರ್ವ ಐದಾರು ಶತಮಾನಗಳ ಹಿಂದೆಯೇ ಹೇಳುತ್ತಾನೆ.

ಆದ್ದರಿಂದ ವೇದಾರ್ಥವನ್ನು ಸುಸ್ಪಷ್ಟ ಮಾಡಿಕೊಳ್ಳುವ ಪ್ರಯತ್ನ ಮೊಟ್ಟಮೊದಲು ಬ್ರಾಹ್ಮಣಗಳಲ್ಲಿ ಪ್ರಾರಂಭವಾಗಿ ಆಯಾ ವೇದದ ಪ್ರಾತಿಶಾಖ್ಯಗಳು ಮೇಲೆ ಹೇಳಿದ ಯಾಸ್ಕನ ನಿಘಂಟು ಮತ್ತು ನಿರುಕ್ತ, ಕಾತ್ಯಾಯನ ಎಂಬುವನಿಂದ ರಚಿತವಾದ ಸರ್ವಾನುಕ್ರಮಣಿ ಮತ್ತು ಬೃಹದ್ದೇವತಾ ಗ್ರಂಥಗಳು, ಕ್ರಿಸ್ತಶಕದಿಂದೀಚೆಗೆ ಬಂದ ಪೂರ್ವಮೀಮಾಂಸಾ ಮತ್ತು ವೇದಾಂತದರ್ಶನಕಾರರು, ಸ್ಕಂದಸ್ವಾಮಿ, ವೆಂಕಟಮಾಧವ- ಇವರ ಭಾಷ್ಯ ಮತ್ತು ಈ ಎಲ್ಲ ಪ್ರಯತ್ನಗಳಿಗೂ ಕಿರೀಟಪ್ರಾಯವಾಗಿ ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರ ಸಂಸ್ಥಾನ ಸ್ಥಾಪನೆಯಾದ ತರುವಾಯ ಶ್ರೀವಿದ್ಯಾರಣ್ಯರ ಸಹೋದರನೂ ಅಚ್ಚ ಕನ್ನಡಿಗನೂ ಆದ ಸಾಯಣಾಚಾರ್ಯನ ವೇದಾರ್ಥ ಪ್ರಕಾಶವೆಂಬ ಜಗದ್ವಿಖ್ಯಾತ ಪ್ರಯತ್ನ-ಮೊದಲಾದವಲ್ಲಿ ಮೈತುಂಬಿಕೊಂಡು ಪರಿಪೂರ್ಣವಾಗಿದೆ. ಸಂಪ್ರದಾಯಬದ್ಧವಾದ ಈ ಪೌರಸ್ತ್ಯ ಪ್ರಯತ್ನಕ್ಕೆ ಜರ್ಮನಿಯ ಪ್ರಸಿದ್ಧ ಸಂಸ್ಕøತಜ್ಞರಾದ ರಡಾಲ್ಫ್ ರಾಥ್, ಆಟೋ ಬೋಟ್ಲಿಂಗ್, ಆಲ್‍ಬರ್ಟ್ ವೀಬರ್, ಮ್ಯಾಕ್ಸ್‍ಮುಲರ್, ಥಿಯೋಡರ್ ಜೌಫ್ರೆಕ್ಟ್ ಅವರೂ ಮೂಯಿರ್ ಪಿಷೆಲ್ ಗೆಲ್ಡ್‍ನರ್ ಹಾಗೂ ಮಾರಿಸ್ ಬ್ಲೂಮ್ ಫೀಲ್ಡ್, ಗ್ರಾಸ್‍ಮನ್, ಬ್ಯೂಲರ್, ಬೆನ್ಫೆ, ಯಾಕೊಬಿ- ಮುಂತಾದವರೂ ಭಾರತೀಯರೇ ಆದ ಸ್ವಾಮಿ ದಯಾನಂದ ಮಹರ್ಷಿ, ಲೋಕಮಾನ್ಯ ಬಾಲಗಂಗಾಧರ ತಿಲಕ್, ರಾಮಕೃಷ್ಣ ಗೋಪಾಲ ಭಂಡಾರಕರ್, ಕನ್ನಡಿಗರಾದ ಡಾ.ಎ.ವೆಂಕಟಸುಬ್ಬಯ್ಯ, ಡಾ.ಆರ್.ಶಾಮಶಾಸ್ತ್ರಿ-ಮೊದಲಾದವರೂ ನವೀನವೂ ವೈe್ಞÁನಿಕವೂ ಆದ ದೃಷ್ಟಿಯಲ್ಲಿ ವೇದಾರ್ಥ ಪರಿಶೀಲನೆಗೆ ತೊಡಗಿ ಬಹಳ ಉಪಯುಕ್ತವಾದ ಸಂಶೋಧನೆಗಳನ್ನು ನಡೆಸಿದ್ದಾರೆ.

ಅನಾದಿಕಾಲದಿಂದ ಗುರುವಿನಿಂದ ಶಿಷ್ಯನಿಗೆ ಬಾಯಿಪಾಠದ ಮೂಲಕ ಶ್ರುತವಾಗಿ ಬಂದ ವೇದದಲ್ಲಿ ಇದ್ದದ್ದು ಬಿಟ್ಟುಹೋಗಿ, ಇಲ್ಲದ್ದು ಬಂದು ಸೇರಿಕೊಳ್ಳಬಹುದಾಗಿತ್ತು. ಆದರೆ ಋಗ್ವೇದ-ಬಹುಮಟ್ಟಿಗೆ ಇತರ ವೇದಗಳೂ ಕೂಡ-ಪ್ರಾಯಶಃ ಮೊದಲು ಹೇಗಿತ್ತೋ ಇಂದಿಗೂ ಹಾಗೆಯೇ ಸಾಧ್ಯವಾದುದಕ್ಕೆ ವೇದದ ಪದ, ಅಕ್ಷರ, ಮಾತ್ರೆ, ಸ್ವರ-ಇವುಗಳಾವುದರಲ್ಲೂ ಎಳ್ಳಷ್ಟು ವ್ಯತ್ಯಾಸವಾದರೂ ಕಗ್ಗತ್ತಲೆಯ ನರಕವಾಸ ಸಿದ್ಧ ಎಂಬ ನಂಬಿಕೆಯೇ ಕಾರಣ. ಮಂತ್ರವನ್ನು ಅಪಸ್ವರದಲ್ಲಿ ಹಾಡಿದರೆ ಹಾಗೆ ಹಾಡಿದವನ ಪಿತೃಗಳಿಗೆಲ್ಲರಿಗೂ ದುರ್ಗತಿ ಎಂಬ ಭಯ, ಪವಿತ್ರವೂ ಋಷಿ ಕುಲಪ್ರದತ್ತವೂ ಆದ ವೇದ ಐಹಿಕಾಮುಷ್ಮಿಕ ಸೌಖ್ಯವೆರಡಕ್ಕೂ ವರಪ್ರಾಯವಾದುದೆಂಬ ಸಾತ್ತ್ವಿಕ ಭಾವನೆ-ಮುಂತಾದವು ವೇದದ ಪದಗಳೂ ಸ್ವರಗಳೂ ಇಂದೂ ಶುದ್ಧವಾಗಿಯೇ ಉಳಿಯಲು ಕಾರಣ.

ಇಷ್ಟಲ್ಲದೆ ಋಗ್ವೇದದಲ್ಲಿ ಇರುವ ಮಂತ್ರಗಳ, ಪಾದಗಳ, ಪದಗಳ, ಅಕ್ಷರಗಳ, ಋಷಿಗಳ, ದೇವತೆಗಳ, ಛಂದಸ್ಸುಗಳ ಸಂಖ್ಯೆ, ಹೆಸರು ಇತ್ಯಾದಿಗಳನ್ನು ಸೂಚಿಸುವ ಅನುಕ್ರಮಣಿಗಳೆಂಬ ಅತ್ಯಮೂಲ್ಯ ಗ್ರಂಥಗಳು ಮತ್ತು ಪಠನ ಕ್ರಮದಲ್ಲಿಯ ಪದಪಾಠ, ಕ್ರಮಪಾಠ, ಜಟಾಪಾಠ ಮತ್ತು ಘನಪಾಠ ವಿಧಾನಗಳು ವೇದರಕ್ಷಣೆಗಾಗಿ ನಿರ್ಮಾಣವಾದವು.

ಸಾಮಾಜಿಕ ಅಂಶಗಳು

ಬದಲಾಯಿಸಿ

ವೇದದಲ್ಲಿ ಹೇರಳವಾಗಿ ಕಾಣುವುದು ಮತ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟ ವಿಷಯಗಳು. ಆದರೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ರೀತಿನೀತಿಗಳನ್ನು ಕುಟುಂಬ ಜೀವನದ ವಿವರಗಳನ್ನು ತಿಳಿಯಲು ಸಾಕಷ್ಟು ಆಧಾರಗಳು ಅಲ್ಲಿ ದೊರಯುತ್ತವೆ. ಮತೀಯ ಭಾವನೆಗಳು ಆರ್ಯರ ಬೆನ್ನಲ್ಲಿ ಬಂದುವಾದ್ದರಿಂದ ಅವು ಪ್ರಮುಖವಾಗಿರುವುದು ಸಹಜವೇ. ವೇದದ ಕಾಲದ ಆರ್ಯರು ಸಿಂಧೂ ಮತ್ತು ಗಂಗಾನದಿಗಳ ಬಯಲಿನಲ್ಲಿ ಸುರಕ್ಷಿತವಾಗಿ ನೆಲೆಸುತ್ತಿದ್ದ ಕಾಲವಾದ್ದರಿಂದ ರಾಜಕೀಯಕ್ಕೂ ಯುದ್ಧಕ್ಕೂ ಪ್ರಮುಖತೆ ದೊರೆತಿರುವುದು ಸಹಜವೇ. ಆ ಕಾರ್ಯದಲ್ಲಿ ಯುದ್ಧದ ದೇವತೆಯಾದ ಇಂದ್ರನಿಗೆ ಪ್ರಾಶಸ್ತ್ಯ ಬಂದಿರುವುದೂ ಸಹಜವೇ. ಆದರೆ ಎಲ್ಲರೂ ಯುದ್ಧದೇವತೆಗಳಲ್ಲ. ಅನೇಕ ದೇವತೆಗಳು ಜನರ ಧರ್ಮ, ಕುಶಲವಿದ್ಯೆಗಳು, ಗೃಹಜೀವನ, ಕಲೆಗಳು, ವಿನೋದಗಳು ಇತ್ಯಾದಿಗಳಿಗೆ ಹೆಚ್ಚು ಸಂಬಂಧ ಪಟ್ಟವರು. ಈ ವಿಷಯಗಳಿಗೆ ಮೀಸಲಾದ ಮಂತ್ರಗಳಿಲ್ಲವಾದ್ದರಿಂದ ಈ ದೇವತೆಗಳನ್ನು ಕುರಿತ ಸೂಕ್ತಗಳಿಂದ ಈ ವಿಚಾರಗಳನ್ನು ಕುರಿತು ಬರುವ ಒಂದೊಂದು ಮಾತಿನಿಂದ ಆ ಕಾಲದ ಜೀವನದ ಅಂಶಗಳನ್ನು ಊಹಿಸಬೇಕಾಗಿದೆ.

ವೇದದ ಕಾಲದಲ್ಲಿ ಕುಟುಂಬ ಜೀವನಕ್ಕೆ ತುಂಬ ಮನ್ನಣೆ ಇತ್ತು. ಅಗ್ನಿಯನ್ನು ಪೂಜಿಸುವುದು ಪ್ರತಿಯೊಂದು ಕುಟುಂಬದ ಆದ್ಯ ಕರ್ತವ್ಯವಾಗಿತ್ತು. ಇದಲ್ಲದೆ ಪಕ್ಷಗಳಲ್ಲಿ, ಮಾಸಗಳಲ್ಲಿ, ವರ್ಷದ ಆರಂಭದಲ್ಲಿ ಮಾಡುವ ಕರ್ಮಗಳೂ ಉಂಟು. ಅತಿಥಿ ಸತ್ಕಾರ ಒಂದು ಮುಖ್ಯ ಕರ್ಮ. ಅತಿಥಿ ಮನೆಗೆ ಬಂದಾಗ ಅವನಿಗೆ ಅಘ್ರ್ಯವನ್ನು ಕೊಡಬೇಕು. ಅತಿಥಿಯ ಕಾಲು ತೊಳೆದು ಕೈಗೆ ಅಘ್ರ್ಯವನ್ನರ್ಪಿಸಿದ ತರುವಾಯ ಅವನಿಗೆ ಹಾಲು, ಮೊಸರು, ಹಣ್ಣು, ಜೇನುತುಪ್ಪ ಮತ್ತು ತುಪ್ಪ ಬೆರೆಸಿದ ಮಧುಪರ್ಕವನ್ನು ಅರ್ಪಿಸಬೇಕು. ಅನಂತರ ಅವನಿಗಾಗಿ ಒಂದು ಹಸುವಿನ ಕರುವನ್ನು ಕೊಂದು ಅದರಿಂದ ಮಾಡಿದ ಭಕ್ಷ್ಯವನ್ನು ಬಡಿಸುತ್ತಿದ್ದರು. ಅತಿಥಿ ಕರುವನ್ನು ಕೊಲ್ಲುವುದು ಬೇಡವೆಂದರೆ ಬೇರೆಯ ಮಾಂಸದಿಂದ ಮಾಡಿದ ಭಕ್ಷ್ಯಗಳನ್ನು ಬಡಿಸುತ್ತಿದ್ದರು.

ಕುಟುಂಬದವರು ಆಚರಿಸುವ ಕರ್ಮಗಳಲ್ಲಿ ಮನೆ ಕಟ್ಟುವ ಮೊದಲಲ್ಲಿ ಮತ್ತು ಗೃಹಪ್ರವೇಶದ ಕಾಲದಲ್ಲಿ ಮಾಡುವ ಕರ್ಮಗಳು ಬಹುಮುಖ್ಯವಾದುವು. ಮನೆಕಟ್ಟುವ ಸ್ಥಳದ ಸುತ್ತಿನಲ್ಲಿ ಅಶ್ವತ್ಥ, ಬೇವು ಮುಂತಾದ ಗಿಡಗಳಿರಕೂಡದು. ಮನೆಯ ಸುತ್ತ ನೀರು ಹರಿಸಲು ಅನುಕೂಲವಿರಬೇಕು. ಪಾಯವನ್ನು ತೆಗೆಯುವಾಗ ಭೂ ದೇವತೆಗೆ ಪೂಜೆ ಸಲ್ಲಿಸಬೇಕು. ಗೋಡೆಗಳನ್ನು ಕಟ್ಟುವ ಮುಂಚೆ ಒಂದು ಕಲ್ಲಿಗೆ ಅಭಿಷೇಕ ಮಾಡಿ, ಅದನ್ನು ಪಾಯದಲ್ಲಿ ಹುದುಗಿಸಬೇಕು. ಮನೆಯ ಭಾಗಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಬೇಕು. ಅಡುಗೆಯ ಮನೆಯಿಂದ, ನೀರುಮನೆಯಿಂದ ನೀರು ಹೊರಕ್ಕೆ ಹೋಗಲು ಅನುಕೂಲವಿರಬೇಕು. ನಡುಮನೆ ಉತ್ತರ ದಿಕ್ಕಿಗಿರಬೇಕು. ತಲೆ ಬಾಗಿಲು ಪಶ್ಚಿಮಕ್ಕಿರಬೇಕು. ಅಗ್ನಿಹೋತ್ರ ಮುಂತಾದ ಕರ್ಮಗಳನ್ನು ಮಾಡಲು, ಊಟ ಮಾಡಲು ಒಂದು ಮರೆಯಾದ ಕೋಣೆ ಇರಬೇಕು.

ಮನೆಯನ್ನು ಕಟ್ಟಿ ಮುಗಿಸಿದ ಮೇಲೆ ದೇವತೆಯಾದ ವಾಸ್ತೋಪ್ಪತಿಗೂ ಹತ್ತು ದಿಕ್ಕುಗಳಿಗೂ ಬಲಿ ಅರ್ಪಿಸಬೇಕು. ಗೃಹಪ್ರವೇಶ ಮಾಡಿದ ಮೇಲೆ ಪ್ರತಿವರ್ಷವೂ ಆ ದೇವತೆಗೆ ಬಲಿ ಕೊಡುವುದುಂಟು. ಗೃಹ ಪ್ರವೇಶದ ಕಾಲದಲ್ಲಿ ಸಂತರ್ಪಣೆ ನಡೆಸುವುದು ಅತ್ಯಗತ್ಯ. ಮನೆ ಕಟ್ಟಿದಾಗ ನಡೆಸಿದಂತೆಯೇ ಒಂದು ತೋಪನ್ನು ನಿರ್ಮಿಸಿದಾಗಲೂ ಬಾವಿ, ಕೊಳ, ಕಟ್ಟೆ, ಕೆರೆಗಳನ್ನು ಕಟ್ಟಿದಾಗಲೂ ವರುಣ ದೇವತೆಗೆ ಬಲಿಯನ್ನು ಅರ್ಪಿಸಬೇಕು.

ಉಳುಮೆಯ ಕಾಲದಲ್ಲೂ ಬಿತ್ತನೆಯ ಕಾಲದಲ್ಲೂ ಫಸಲನ್ನು ಕಣ ಮಾಡುವ ಕಾಲದಲ್ಲೂ ಬಲಿ ಅರ್ಪಿಸುತ್ತಿದ್ದುದು ಸಾಮಾನ್ಯ. ಇಲಿಗಳ ದೇವತೆಗಳಿಗೂ ತಪ್ಪದೆ ಬಲಿ ಅರ್ಪಿಸುತ್ತಿದ್ದರು. ದನಗಳಿಗೆ ರಕ್ಷಣೆ ದೊರೆಯಲೆಂದು ಅವುಗಳ ಸಂತಾನ ವರ್ಧಿಸಲೆಂದು ವರ್ಷವರ್ಷವೂ ದೇವತೆಗಳಿಗೆ ಬಲಿ ಅರ್ಪಿಸುತ್ತಿದ್ದರು. ಕಾರ್ತೀಕ ಮಾಸದಲ್ಲಿ ಊರಿಗೊಂದು ಗೂಳಿಯನ್ನು ಬಿಡುವ ಸಂಪ್ರದಾಯವಿತ್ತು. ಪ್ರಸಿದ್ಧರಾದ ಗುರುಗಳಿಗೆ ಮತ್ತು ಹಿರಿಯರಿಗಾಗಿ ಏರ್ಪಡಿಸಿದ್ದ ಸ್ಮಾರಕ ಪ್ರದೇಶಗಳಲ್ಲಿ ವರ್ಷವರ್ಷವೂ ಬಲಿಯನ್ನರ್ಪಿಸುವುದು ರೂಢಿಯಲ್ಲಿತ್ತು.

ಗೃಹಸ್ಥರು ನಡೆಸಬೇಕಾದ ಕರ್ಮಗಳಲ್ಲಿ ಜಾತಕರ್ಮ, ನಾಮಕರಣ, ಚೌಲ, ಉಪನಯನ, ವಿವಾಹ ಮತ್ತು ಅಂತ್ಯಕ್ರಿಯೆಗಳು ಮುಖ್ಯವಾದುವು. ನಾಮಕರಣದ ಕಾಲದಲ್ಲಿ ಪ್ರತಿಯೊಂದು ಮಗುವಿಗೂ ಎರಡು ಹೆಸರುಗಳನ್ನು ಕೊಡುತ್ತಿದ್ದರು. ಒಂದು ಹೆಸರು ತಂದೆ ತಾಯಿಗೆ ಮಾತ್ರ ತಿಳಿದ ಹೆಸರು. ಇದನ್ನು ಬಹುಗೋಪ್ಯವಾಗಿ ಕಾದಿಟ್ಟುಕೊಂಡಿರುತ್ತಿದ್ದರು. ಇದೇ ಮಗುವಿನ ನಿಜವಾದ ಹೆಸರು. ಈ ಹೆಸರಿನಲ್ಲಿ ಮಾಟ ಮುಂತಾದವುಗಳನ್ನು ಮಾಡಿದಾಗಲೇ ಆ ಮಗುವಿಗೆ ಅಪಾಯ ಉಂಟಾಗುತ್ತಿತ್ತಾದ ಕಾರಣ ಅವರು ಅದನ್ನು ಬಹಿರಂಗಪಡಿಸುತ್ತಿರಲಿಲ್ಲ. ಎರಡನೆಯ ಹೆಸರು ವ್ಯಾವಹಾರಿಕವಾದದ್ದು.

ಚೌಲವನ್ನು ಬ್ರಾಹ್ಮಣರು ಮಗುವಿನ ಮೂರನೆಯ ವರ್ಷದಲ್ಲೂ ಕ್ಷತ್ರಿಯರು ಐದನೆಯ ವಯಸ್ಸಿನಲ್ಲೂ ವೈಶ್ಯರು ಏಳನೆಯ ವಯಸ್ಸಿನಲ್ಲೂ ನಡೆಸುತ್ತಿದ್ದರು. ಅವರವರ ಮನೆತನದ ಸಂಪ್ರದಾಯಕ್ಕನುಗುಣವಾಗಿ ಕೂದಲನ್ನು ಬಿಡಿಸುತ್ತಿದ್ದರು. ತಮ್ಮ ಪ್ರವರದಲ್ಲಿ ಎಷ್ಟು ಋಷಿಗಳನ್ನು ಸೇರಿಸಿಕೊಂಡಿದ್ದಾರೋ ಆ ಸಂಖ್ಯೆಗೆ ಅನುಗುಣವಾಗಿ ಕೂದಲನ್ನು ಬಿಡಿಸಿ ಗಂಟು ಹಾಕುತ್ತಿದ್ದರು. ಬ್ರಾಹ್ಮಣರು ಬಾಲಕನ ಎಂಟನೆಯ ವಯಸ್ಸಿನಲ್ಲೂ ಕ್ಷತ್ರಿಯರು ಹನ್ನೊಂದನೆಯ ವಯಸ್ಸಿನಲ್ಲೂ ವೈಶ್ಯರು ಹನ್ನೆರಡನೆಯ ವಯಸ್ಸಿನಲ್ಲೂ ಉಪನಯನವನ್ನು ನಡೆಸುತ್ತಿದ್ದರು. ಬ್ರಾಹ್ಮಣರು ಹದಿನಾರು ವರ್ಷಗಳೊಳಗೆ, ಕ್ಷತ್ರಿಯರು ಇಪ್ಪತ್ತೈದು ವರ್ಷಗಳೊಳಗೆ, ವೈಶ್ಯರು ಇಪ್ಪತ್ತುನಾಲ್ಕನೆಯ ವರ್ಷಗಳೊಳಗೆ ಉಪನಯನ ಮಾಡಬೇಕು. ಹಾಗೆ ಉಪನಯನವಾಗದವ ಕರ್ಮಭ್ರಷ್ಟನಾಗಿ ಕುಲದಲ್ಲಿನ ತನ್ನ ದರ್ಜೆಯನ್ನು ಕಳೆದುಕೊಳ್ಳುತ್ತಿದ್ದ. ಉಪನಯನ ಪ್ರತಿಯೊಬ್ಬನ ಹೊಸ ಹುಟ್ಟಿಗೆ ದಾರಿ. ಒಬ್ಬೊಬ್ಬನೂ ವಿದ್ಯೆಯ ಮೂಲಕ ರೂಪಿಸಿಕೊಂಡ ಆತ್ಮನೇ ಅವನ ನಿಜವಾದ ಆತ್ಮ. ವಿದ್ಯಾಭ್ಯಾಸ ಮುಗಿಸಿದ ಮೇಲೆ ಸ್ನಾತಕನಾಗಿ ಹೊಸ ರೀತಿಯ ಉಡುಪನ್ನು ತೊಡುತ್ತಿದ್ದ. ದೇಹವನ್ನು ಅಲಂಕರಿಸಿಕೊಳ್ಳುತ್ತಿದ್ದ. ದೇಹಕಾಂತಿ ಕೆಡದಂತೆ ಅದನ್ನು ಮಳೆಬಿಸಿಲುಗಳಿಂದ ರಕ್ಷಿಸಿಕೊಳ್ಳುತ್ತಿದ್ದ. ಕಾಲಿಗೆ ಅಪಾಯವಾಗದಂತೆ ಪಾದರಕ್ಷೆಯನ್ನು ಮೆಟ್ಟುತ್ತಿದ್ದ.

ಇಂಥವ ಗೃಹಸ್ಥನಾಗಲು ತನ್ನ ಗುರುಹಿರಿಯರು ಮಾತಾಪಿತೃಗಳ ಒಪ್ಪಿಗೆ ಪಡೆದು ಅವರ ನೆರವಿನಿಂದ ಕನ್ಯೆಯನ್ನು ಪಡೆಯಬಹುದಾಗಿತ್ತು. ಕ್ಷತ್ರಿಯನಿಗೆ ಗಂಧರ್ವ ಅಥವಾ ಸ್ವಯಂವರ ರೀತಿಯ ವಿವಾಹ ಶ್ರೇಷ್ಠ. ವೈಶ್ಯ ತನ್ನ ಐಶ್ವರ್ಯದಿಂದ ಕನ್ಯೆಯನ್ನು ಪಡೆಯಬಹುದು. ಇದು ಎಲ್ಲಕ್ಕಿಂತಲೂ ಕೆಳದರ್ಜೆಯ ವಿವಾಹ ಕ್ರಮ. ಬ್ರಾಹ್ಮಣ ತನ್ನ ವರ್ಣದ ಕನ್ಯೆಯನ್ನಲ್ಲದೆ ಕ್ಷತ್ರಿಯ, ವೈಶ್ಯ ಅಥವಾ ಶೂದ್ರ ಕನ್ಯೆಯೊಬ್ಬಳನ್ನು ಮದುವೆಯಾಗಲೂ ಅವಕಾಶವಿತ್ತು. ಕ್ಷತ್ರಿಯ ತನ್ನ ವರ್ಣದವಳ ಜೊತೆಗೆ, ವೈಶ್ಯ ಅಥವಾ ಶೂದ್ರ ವರ್ಣದ ಕನ್ಯೆಯನ್ನು ಪಡೆಯಬಹುದಾಗಿತ್ತು. ವೈಶ್ಯ ತನ್ನ ವರ್ಣದ ಕನ್ಯೆಯನ್ನಲ್ಲದೆ ಶೂದ್ರ ಕನ್ಯೆಯೊಬ್ಬಳನ್ನು ಪಡೆಯಬಹುದಾಗಿತ್ತು.

ವಿವಾಹ ಹೆಣ್ಣಿನ ಮನೆಯಲ್ಲಿ ನಡೆಯುವ ಸಂಪ್ರದಾಯವಿತ್ತು. ಈ ಸಂದರ್ಭದಲ್ಲಿ ಹೆಣ್ಣಿನ ಮನೆಯ ನಾಲ್ಕು ಅಥವಾ ಎಂಟು ಸುಮಂಗಲಿಯರು ಹೆಣ್ಣು ಗಂಡುಗಳ ಸುತ್ತ ನರ್ತನ ಮಾಡುತ್ತಿದ್ದುದು ಗಮನಾರ್ಹ ವಿಷಯ. ಅವರಿಗೆ ವರನ ಕಡೆಯವರು ಉಡುಗೊರೆ ಅಥವಾ ಸುವರ್ಣವನ್ನು ಕೊಡುತ್ತಿದ್ದರು. ಮದುವೆಯಾದ ಅನಂತರ ಹೆಣ್ಣನ್ನು ಗಂಡನ ಮನೆಗೆ ಕರೆದುಕೊಂಡು ಬಂದು ಮದುವೆಯಾದ ನಾಲ್ಕನೆಯ ದಿನ ನಿಷೇಕವನ್ನು ಏರ್ಪಡಿಸುತ್ತಿದ್ದರು.

ಮದುವೆಯಾದ ಹೆಣ್ಣು ತನ್ನ ಮಾವನ ಮತ್ತು ಗಂಡನ ಮನೆಯನ್ನು ಸೇರಿದಾಗ ಆ ಮನೆಯ ಯಜಮಾನಿಯಾಗುತ್ತಿದ್ದಳು; ಮಾನವಿಗೂ ನಾದಿನಿಗೂ ಮೈದುನನಿಗೂ ಒಡತಿಯಾಗುತ್ತಿದ್ದಳು. ಮುದಿತನದವರೆಗೂ ಗಂಡನೊಡನೆ ಬಾಳಬೇಕೆಂಬುದು ಅವಳ ಮಹದಾಶಯ. ಹತ್ತು ಗಂಡುಮಕ್ಕಳನ್ನು ಪಡೆದ ಮೇಲೆ ಅವಳು ತನ್ನ ಗಂಡನನ್ನು ಹನ್ನೊಂದನೆಯ ಮಗುವಿನಂತೆ ಪಾಲಿಸಿ ಪೋಷಿಸುವಂತಾಗಲೆಂದು ಇಂದ್ರನನ್ನು ಪ್ರಾರ್ಥಿಸುವ ಒಂದು ಮಂತ್ರವಿದೆ. ಒಟ್ಟಿನಲ್ಲಿ ಋಗ್ವೇದ ಕಾಲದ ಕುಟುಂಬ ಜೀವನ ಆಶಾಪೂರ್ಣವಾದದ್ದು. ಒಂದು ರೀತಿಯಲ್ಲಿ ಅದು ತುಂಬುಜೀವನ; ಹಾಡು, ನೃತ್ಯದಿಂದ ತುಂಬಿದ ಜೀವನ. ಮದುವೆಯ ಕಾಲದಲ್ಲಿ ನೃತ್ಯ ಅದರ ಒಂದು ಮುಖ್ಯ ಅಂಗವಾಗಿತ್ತೆಂಬುದನ್ನು ಗಮನಿಸಿದ್ದೇವೆ. ಈ ಕಲೆಗಳು ಕುಟುಂಬದ ಹೆಣ್ಣುಮಕ್ಕಳ ದಿನಚರಿಯ ವಿನೋದಗಳಾಗಿದ್ದವು. ಕವನಗಳನ್ನು ಕಟ್ಟುವುದು, ಹಾಡುಗಳನ್ನು ಹಾಡುವುದು ತನ್ನ ಮನೆಯ ಒಂದು ಕಸುಬೆಂದು ಋಗ್ವೇದದ ಒಂದು ಸೂಕ್ತದಲ್ಲಿ ಒಬ್ಬ ಹೇಳಿಕೊಂಡಿದ್ದಾನೆ. ನೃತ್ಯ ಕೇವಲ ಹೆಣ್ಣುಮಕ್ಕಳ ವಿನೋದ ಮಾತ್ರವಾಗಿರಲಿಲ್ಲ. ಗಂಡಸರೂ ಕೋಲಿನ ನೃತ್ಯದಲ್ಲಿ ಭಾಗವಹಿಸುತ್ತಿದ್ದರು. ನಾಟ್ಯಮಾಡುವ ಗಂಡಸನ್ನು "ನೃತ"ನೆಂದೂ ಹೆಣ್ಣನ್ನೂ "ನೃತು"ವೆಂದೂ ಕರೆಯುತ್ತಿದ್ದರು. ಹೆಂಗಸರು ಜರಿಯ ಸೀರೆಯನ್ನುಟ್ಟು ಕಂಚುಕವನ್ನು ಧರಿಸದೆ ನರ್ತಿಸುತ್ತಿದ್ದರು. ಹಾಸ್ಯರೂಪವಾದ ನೃತ್ಯವೂ ರೂಢಿಯಲ್ಲಿತ್ತು.

ಋಗ್ವೇದ ಪದ್ಯಗಳು ಬಹುತೇಕ ದೇವತೆಗಳ ಸ್ತೋತ್ರಕ್ಕೆ ಮೀಸಲಾಗಿದ್ದರೂ ಕೆಲವು ಸ್ತೋತ್ರಗಳು ಕೇವಲ ವಿವರಣೆಗಳಾಗಿರದೆ, ಭಾವಪ್ರದವಾಗಿಯೂ ವರ್ಣಯುಕ್ತವಾಗಿಯೂ ಇವೆ. ಉಪಸ್ಸನ್ನು ವರ್ಣಿಸುವ ಸ್ತೋತ್ರಗಳು ಕಾವ್ಯದಂತೆ ರಮ್ಯವಾಗಿವೆ. ಜೂಜುಗಾರನ ಅಳಲು ಎಂಬ ಒಂದು ಮಂತ್ರ ಇಂದಿನ ಭಾವಗೀತೆಯನ್ನು ಹೋಲುತ್ತದೆ. ಇವುಗಳ ಛಂದಸ್ಸಿನಲ್ಲಿ ಇರುವ ಕಾವ್ಯಬಲ ಅದ್ಭುತವಾದದ್ದು. ಕೇವಲ ಶಬ್ದದಿಂದಲೇ ಅತಿಶಯ ಭಾವಪ್ರಕಾಶನ ಮಾಡುವ ಶಕ್ತಿ ಬಹುಶಃ ಅನೇಕ ಕಾವ್ಯಗಳಲ್ಲಿ ಕೂಡ ಇರುವುದಿಲ್ಲ. ಇವುಗಳಲ್ಲದೆ ಲೋಕಾನುಭವಗರ್ಭಿತವಾದ ಪದ್ಯಗಳೂ ಹಾಡುಗಳೂ ವೇದದ ಕಾಲದಲ್ಲಿ ಯಥೇಚ್ಫವಾಗಿ ಇವೆ. ವಿವಾಹ ಕಾಲದಲ್ಲಿ ಹೆಂಗಸರು ಹಾಡುಗಳನ್ನು ಹೇಳುತ್ತಿದ್ದರು. ಅಶ್ವಮೇಧದ ಕಾಲದಲ್ಲಿ ಪುರೋಹಿತರು ನಾಲ್ಕು ದಿವಸಗಳ ಕಾಲ ಕೆಲವು ವೇಳೆ ಒಂದು ವರ್ಷದ ಪರ್ಯಂತ ಹಿಂದಿನ ರಾಜರ ಕಥೆಗಳನ್ನು ಹೇಳುತ್ತಿದ್ದರು. ಇವಕ್ಕೆ ಪರಿಪಾಲ್ಯ ಅಖ್ಯಾಯನಗಳೆಂದು ಹೆಸರು. ರಾಜವಂಶದವನೊಬ್ಬ ತಾನೇ ಕಟ್ಟಿದ ಮೂರು ಗಾಥೆಗಳನ್ನು ತಂತಿ ವಾದ್ಯದ ಶ್ರುತಿಗೆ ಸೇರಿದಂತೆ ಹಾಡುತ್ತಿದ್ದ. ಅಂಥ ಸಾಹಿತ್ಯ ಜನರ ಬಾಯಿಯಲ್ಲಿ ಮಾತ್ರ ಜೀವಂತವಾಗಿದ್ದ ಸಾಹಿತ್ಯ. ಅವುಗಳ ಆಯಸ್ಸು ಒಂದೆರಡು ತಲೆಮಾರುಗಳಿಗೆ ನಿಗದಿಯಾದದ್ದು. ಬರೆವಣಿಗೆ ಮತ್ತು ಅಚ್ಚಿನ ಸೌಕರ್ಯವಿರುವ ಈಗಿನ ಕಾಲದಲ್ಲೂ ಜನ ಕಟ್ಟಿದ ಕಥೆಗಳಲ್ಲಿ ಹಾಡುಗಳಲ್ಲಿ ಮತ್ತು ಕವನಗಳಲ್ಲಿ ಉಳಿಯುವವು ಬಹು ಸ್ವಲ್ಪ.

ಋಗ್ವೇದದಲ್ಲಿ ಕೆಲವು ಸಂಭಾಷಣಾ ರೂಪದ ಸೂಕ್ತಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುದು ಊರ್ವಶಿ-ಪುರೂರವಸರದು. ಇದೇ ನಾಟಕಪ್ರಕಾರದ ಮೂಲವಾಗಿ ತೋರುತ್ತದೆ. ಯಜುರ್ವೇದದ ಕಾಲಕ್ಕಾಗಲೆ ನಾಟಕ, ನಾಟ್ಯಗಳನ್ನು ವೃತ್ತಿಯಾಗುಳ್ಳ ನಟರ ವರ್ಗವೊಂದು ಸೃಷ್ಟಿಯಾಗಿತ್ತು.

ಋಗ್ವೇದದಲ್ಲಿ ಹೆಸರಿಸಿರುವ ಮೂವತ್ತು ಕಲೆಗಳಲ್ಲಿ ಹಾಡು, ಕವಿತೆ, ನೃತ್ಯ, ಗೀತ, ವೇಣುವಾದನ, ಶಂಖನಾದ, ಕೊಂಬನ್ನು ಊದುವುದು, ನಗಾರಿ ಬಾರಿಸುವುದು, ಕೋಲಾಟ, ವಾಸ್ತುಶಿಲ್ಪ- ಇವು ಮುಖ್ಯವಾದುವು. ಇವುಗಳಲ್ಲದೆ ರತ್ನ ಮತ್ತು ಚಿನ್ನದ ಒಡೆವೆಗಳನ್ನು ಮಾಡುವುದು, ಜರತಾರಿ ಬಟ್ಟೆಗಳನ್ನು ನೇಯುವುದು, ಕಸೂತಿ ಕೆಲಸ, ಹೂ ಕಟ್ಟುವುದು, ಕಾಡಿಗೆ ಮಾಡುವುದು, ರಥಗಳ ನಿರ್ಮಾಣ, ಹಗ್ಗ ಹೊಸೆಯುವುದು, ಚರ್ಮವನ್ನು ಹದ ಮಾಡಿ ಹೊಲೆಯುವುದು, ಕಮ್ಮಾರನ ಮತ್ತು ಕುಂಬಾರನ ಕಲೆ, ಬಿಲ್ಲನ್ನು ತಯಾರಿಸುವುದು, ಕುದುರೆಯನ್ನು ಪಳಗಿಸುವುದು ಮುಂತಾದ ಉಪಯುಕ್ತ ಕಲೆಗಳು ವಿಶೇಷವಾಗಿ ಪ್ರಚಾರದಲ್ಲಿದ್ದವು. ಸಂಗೀತಕ್ಕಾಗಿ ಉಪಯೋಗಿಸುತ್ತಿದ್ದ ವಾದ್ಯಗಳು ಮೂರು-ಮೃದಂಗ, ಕೊಳಲು ಕರ್ಕರಿ ಎಂಬ ತಂತಿ ವಾದ್ಯ. ಆಗಿನ ಕಾಲದವರೆಗೆ ಏಳು ಸ್ವರಗಳೂ ಮತ್ತು ಅವುಗಳ ಆರೋಹಣ ಅವರೋಹಣ ವಿಧಾನವೂ ತಿಳಿದಿತ್ತೆಂದು ಹೇಳಬಹುದು.

ರಾಜ, ರಾಜ್ಯವ್ಯವಸ್ಥೆ

ಬದಲಾಯಿಸಿ

ವೇದಕಾಲದಲ್ಲಿ ರಾಜಕೀಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಿರ್ದಿಷ್ಟವಾಗಿ ತಿಳಿಯುವುದು ಕಷ್ಟ. ಏಕೆಂದರೆ ಇದನ್ನು ಉಲ್ಲೇಖಿಸಬೇಕೆಂಬುದು ವೇದಕರ್ತೃಗಳ ಉದ್ದೇಶವಾಗಿರಲಿಲ್ಲ. ಆದ್ದರಿಂದ ಅಲ್ಲಲ್ಲಿ ಪ್ರಾಸಂಗಿಕವಾಗಿ ಬರುವ ಕೆಲವು ಸೂಚನೆಗಳಿಂದ ಈ ವಿಷಯಗಳನ್ನು ತಿಳಿಯಬಹುದಾಗಿದೆ. ಜನ, ವಿಶಃ, ಗ್ರಾಮ- ಈ ಮೂರು ಅಂದಿನ ರಾಜ್ಯದ ಮುಖ್ಯ ವಿಭಾಗಗಳಾಗಿದ್ದುವು. ಜನ ಎಂದರೆ ಇಡೀ ರಾಜ್ಯದ ಪ್ರಜೆಗಳು. ಬೇರೆ ಬೇರೆ ಸಜಾತರ ಗುಂಪಿಗೆ ವಿಶಃ ಎಂಬ ಹೆಸರಿದ್ದಿರಬಹುದು. ವಿಶರು ಎಂದರೆ ಯೋಧಪತಿಗಳು, ವಿಶಃಪತಿ ಎಂದರೆ ಸೈನ್ಯಾಧಿಪತಿ ಎಂದು ಅರ್ಥೈಸುವವರೂ ಇದ್ದಾರೆ. ವಿಶರ ಗುಂಪಿಗಿಂತ ಸಣ್ಣದು ಗ್ರಾಮ, ಹಲವು ಸಂಸಾರಗಳಿಂದ ಕೂಡಿದ್ದು. ಇವರೆಲ್ಲರೂ ಸಜಾತರೋ ಅಲ್ಲವೋ ಎಂಬುದು ಖಚಿತವಾಗಿ ತಿಳಿಯದು. ಗ್ರಾಮಣಿಗಳು ಎಂದರೆ ಗ್ರಾಮನಾಯಕರ ಸಜಾತರು. ಸಮಾನದ ಒಪ್ಪಿಗೆಯಿಂದ ಆಯ್ದು ಬಂದವರು ಎಂದು ಕೆಲವು ಕಡೆ ಹೇಳಿದೆ. ಸಂಸಾರದ ಮುಖ್ಯಸ್ಥನೇ ಕುಲಪ. ಜನರನ್ನು ಉಲ್ಲೇಖಿಸುವಾಗ ಅನು, ಪುರು, ದ್ರುಹ್ಯು, ಯದು, ತುರ್ವಶ, ಭರತರು, ಮದ್ರರು, ಯಾದವರು- ಮುಂತಾದ ಪುರಾಣ ಪ್ರಸಿದ್ಧರ ಹೆಸರುಗಳು ಬರುತ್ತವೆ.

ಸಾಮಾನ್ಯವಾಗಿ ಒಂದೊಂದೂ ಜನಕ್ಕೂ ಒಬ್ಬೊಬ್ಬ ರಾಜನಿದ್ದ. ಅಲ್ಲಲ್ಲಿ ಅನೇಕ ರಾಜಮನೆತನಗಳನ್ನು ಹೆಸರಿಸಲಾಗಿದೆ. ರಾಜರಲ್ಲಿ ಮೊದಲನೆಯವ ಮನು. ಅನಂತರ ಇಕ್ಷ್ವಾಕು, ಪುರೂರವ, ಇಲಾ, ಪುರು-ಹೀಗೆ ಮನುವಂಶಪರಂಪರೆ ಬೆಳೆದಿದೆ. ರಾಜತ್ವ ಹೇಗೆ ಹುಟ್ಟಿತು ಎಂಬ ಪ್ರಶ್ನೆಗಳಿಗೆ ಸೂಕ್ತಗಳಲ್ಲಿ ಸ್ಪಷ್ಟ ಉತ್ತರ ದೊರೆಯುತ್ತದೆ. ದೇವತೆಗಳು ನಾಯಕನಿಲ್ಲದೆ ತಮಗೆ ಮತ್ತೆ ಮತ್ತೆ ಸೋಲಾಗುತ್ತಿದೆಯೆಂದು ತಿಳಿದಮೇಲೆ ಇಂದ್ರನನ್ನು ತಮ್ಮ ರಾಜನನ್ನಾಗಿ ಮಾಡಿಕೊಂಡು ವಿಜಯಿಗಳಾದರು. ಆರ್ಯರು ಮನುವನ್ನು ತಮ್ಮ ರಾಜನನ್ನಾಗಿ ಪಡೆದಾಗ ಅವರಿಗೆ ಯುದ್ಧದಲ್ಲಿ ಜಯ ಲಭಿಸಿತು. ಹೀಗೆ ಯುದ್ಧದ ಫಲವಾಗಿ ರಾಜತ್ವ ಹುಟ್ಟಿತೆಂದು ತೋರುತ್ತದೆ. ರಾಜತ್ವ ವಂಶಪಾರಂಪರ್ಯವೇ ಎಂಬ ವಿಷಯದಲ್ಲಿ ಎರಡು ಅಭಿಪ್ರಾಯಗಳಿವೆ. ಅವನು ಜನರಿಂದ ಆಯ್ಕೆಯಾಗಿ ರಾಜನಾಗುತ್ತಿದ್ದನೆಂದೂ ವಂಶಪಾರಂಪರ್ಯವಾಗಿ ಅವನಿಗೆ ಪಟ್ಟ ಲಭಿಸುತ್ತಿತ್ತೆಂದೂ ಹೇಳಲಾಗಿದೆ. ಋಗ್ವೇದ ಕಾಲದಲ್ಲಿ ರಾಜನ ಆಯ್ಕೆ ಬಳಕೆಯಲ್ಲಿತ್ತೆಂದು ಕಾಣುತ್ತದೆ. ರಾಜನಾದ ಮೇಲೆ ಆತ ತನ್ನ ಕೆಲಸವನ್ನು ನೆರವೇರಿಸಲು ಸಭೆ ಮತ್ತು ಸಮಿತಿಗಳ ನೆರವನ್ನು ಪಡೆಯುತ್ತಿದ್ದಂತೆ ಕೆಲವು ಸೂಕ್ತಗಳಲ್ಲಿ ಸೂಚನೆಯಿದೆ. ಇಲ್ಲಿ ಸಭೆಯೆಂದರೆ ಹಳ್ಳಿಯ ಜನರ ಸಭೆಯೆಂದು ಜಿûಮ್ಮರ್ ಎಂಬ ಪಂಡಿತ ಅಭಿಪ್ರಾಯಪಡುತ್ತಾನಾದರೂ ಲಡ್ವಿಗ್ ಎಂಬ ಇನ್ನೊಬ್ಬ ಪಂಡಿತ ಅದು ಶ್ರೀಮಂತರ ಸಭೆ ಎಂದು ಹೇಳಿರುವ ಅಭಿಪ್ರಾಯ ಗ್ರಾಹ್ಯವಾಗಿದೆ. ಅದು ಋಗ್ವೇದ ಕಾಲದಲ್ಲಿ ಗೌರವಸ್ಥರ, ಪ್ರಮುಖರ ಸಭೆಯಾಗಿದ್ದಿರಬೇಕು. ಬಹುಶಃ ರಾಜ್ಯಾಭಿಷೇಕ ಕಾಲದಲ್ಲಿ, ದೇಶಕ್ಕೆ ವಿಪತ್ತು ಉಂಟಾದ ಕಾಲದಲ್ಲಿ ಇಡೀ ಜನರ ಯೋಗಕ್ಷೇಮವನ್ನು ಕುರಿತು ಮಂತ್ರಾಲೋಚನೆ ನಡೆಸಬೇಕಾದ ಸಮಯದಲ್ಲಿ ಸಮಿತಿ ಸೇರುತ್ತಿತ್ತೆಂದು ತೋರುತ್ತದೆ. ಯುದ್ಧಕಾಲದಲ್ಲಂತೂ ಇದು ಅತಿ ಮುಖ್ಯವಾಗುತ್ತಿತ್ತು. ರಾಜನ ಪ್ರಾಬಲ್ಯ ಹೆಚ್ಚಿದಂತೆಲ್ಲ ಸಮಿತಿಯ ಪ್ರಾಮುಖ್ಯ ಕಡಿಮೆಯಾಗಿರಬೇಕು. ಮೊದಮೊದಲು ದಸ್ಯುಗಳೊಡನೆ ಹೋರಾಟ ತೀವ್ರವಾಗಿದ್ದ ಕಾಲದಲ್ಲಿ ಆರ್ಯರಲ್ಲಿ ಅಂತಃಕಲಹವಿರಲಿಲ್ಲವೆಂದು ತೋರುತ್ತದೆ. ಶತ್ರುದಮನ ಪೂರ್ಣವಾಗಿ, ಶಾಂತಿ ಏರ್ಪಟ್ಟಾಗ ಮುಖಂಡತ್ವದ ವಿಚಾರದಲ್ಲಿ ಒಳಜಗಳಗಳು ಪ್ರಾರಂಭವಾಗಿರಬೇಕು. ಆಗ ರಾಜನನ್ನು ಆಯ್ಕೆ ಮಾಡುವ ವಿಧಾನವನ್ನು ಕೈಬಿಟ್ಟು ವಂಶಪಾರಂಪರ್ಯವಾಗಿ ಅದನ್ನು ನಡೆಸಿಕೊಂಡು ಬರುವ ಕ್ರಮ ಏರ್ಪಟ್ಟಿರಬೇಕು. ಹಾಗಾದಾಗ ರಾಜನ ಮಹಿಮೆಗೆ ಮತ್ತು ಅಧಿಕಾರಕ್ಕೆ ಜನರ ಬೆಂಬಲಕ್ಕಿಂತಲೂ ದೇವತೆಗಳ ಆಶೀರ್ವಾದ ಮುಖ್ಯವಾಗುತ್ತ ಬಂದಿರಬೇಕು. ಆಗ ಪುರೋಹಿತ ವರ್ಗ ಪ್ರಾಮುಖ್ಯವನ್ನು ಪಡೆಯಿತೆಂದು ಕಾಣುತ್ತದೆ. ಪುರೋಹಿತ ರಾಜರಲ್ಲಿ ಅಗ್ನಿ, ಸೋಮ, ವನಸ್ಪತಿ, ಬೃಹಸ್ಪತಿ, ರುದ್ರ, ವರುಣ, ಮಿತ್ರಾವರುಣ ಮುಂತಾದ ದೇವತೆಗಳ ಶಕ್ತಿಗಳನ್ನೆಲ್ಲ ಅವಾಹನೆ ಮಾಡುತ್ತಾನೆ. ಆಗ ರಾಜ ಇಂದ್ರ ಸಮಾನನಾಗುತ್ತಾನೆ. ಮುಂದೆ ಪುರೋಹಿತನ ಬೆಂಬಲದಿಂದಲೂ ಯಜ್ಞಯಾಗಾದಿಗಳಿಂದಲೂ ಪೂತನಾಗಿ ದೇವತೆಯೇ ಆಗುತ್ತಾನೆ. ಸಾಮ್ರಾಜ್ಯದಾಹ ಮತ್ತು ನಿರಂಕುಶ ಪ್ರಭುತ್ವದ ಪ್ರತಿಷ್ಠೆಗಳು ಅವನಲ್ಲಿ ಹುಟ್ಟಿಕೊಳ್ಳುತ್ತವೆ. ಹಾಗಾದರೂ ಬ್ರಾಹ್ಮಣರು ರಾಜನ ಅಧೀನರಾಗದೆ ಸೋಮದೇವತೆಯನ್ನು ತಮ್ಮ ಪ್ರಭುವನ್ನಾಗಿ ಮಾಡಿಕೊಳ್ಳುತ್ತಾರೆ. ಈ ಪರಿಸ್ಥಿತಿ ಬಹುಕಾಲ ಮುಂದುವರಿಯಿತೆಂದು ಕಾಣುತ್ತದೆ. ಹೀಗೆ ವೇದಗಳಲ್ಲಿ ಅಲ್ಲಲ್ಲಿ ಬರುವ ಸೂಚನೆಗಳಿಂದ ಅಂದಿನ ರಾಜಕೀಯ ಜೀವನ ಹೇಗಿತ್ತೆಂಬುದನ್ನು ಸ್ವಲ್ಪಮಟ್ಟಿಗೆ ತಿಳಿಯಬಹುದು.

 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಋಗ್ವೇದ]]
Text
Translation
Interpretation
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಋಗ್ವೇದ&oldid=1210285" ಇಂದ ಪಡೆಯಲ್ಪಟ್ಟಿದೆ