ಮೆಗಾಸ್ತನೀಸ್
ಮೆಗಾಸ್ತನೀಸ್ - ಚಂದ್ರಗುಪ್ತಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ. ಇವನನ್ನು ಕಳಿಸಿದಾತ ಸೆಲ್ಯೂಕಸ್ ನೀಕೆಟರ್.
ಚಂದ್ರಗುಪ್ತನ ಆಸ್ಥಾನದಲ್ಲಿ ಈತ ಪ್ರತಿಷ್ಠಿತ ರಾಯಭಾರಿಯಾಗಿದ್ದ. ರಾಜನೊಂದಿಗೆ ಆಪ್ತನಾಗಿದ್ದ. ತಾನು ಭಾರತದಲ್ಲಿ ಕಂಡು ಭಾರತದಲ್ಲಿ ಕಂಡು ಕೇಳಿದ ಸಂಗತಿಗಳನ್ನು ಇಂಡಿಕಾ ಎಂಬ ಗ್ರಂಥದಲ್ಲಿ ಬರೆದ. ಈ ಗ್ರಂಥದ ಮೂಲ ಪ್ರತಿ ಈಗ ಲಭ್ಯವಿಲ್ಲದಿದ್ದರೂ ಅನಂತರದ ಇತಿಹಾಸಕಾರರಾದ ಅರಿಯನ್ ಮತ್ತು ಡಿಯೊಡರಸ್ ಮೊದಲದವರು ಈ ಕೃತಿಯ ಕೆಲವು ಭಾಗಗಳನ್ನು ಉಲ್ಲೇಖಿಸಿದ್ದಾರೆ. ಈ ಕೃತಿ ಮೌರ್ಯರ ಕಾಲದ ಜನಜೀವನ ಮತ್ತು ರಾಜಧರ್ಮ ತಿಳಿಯಲು ಮುಖ್ಯ ಆಕರ.
ಮೆಗಾಸ್ತನೀಸ್ ನೀಡಿರುವ ವಿವರಗಳಲ್ಲಿ ಕೆಲವು ಸಂಗತಿಗಳು ಹೀಗಿವೆ: ಯುದ್ಧಕಾಲದಲ್ಲಿ ಸಾಗುವಳಿಯಾದ ಭೂಮಿಯನ್ನು ಶತ್ರು ಸೈನ್ಯಗಳು ಹಾನಿ ಮಾಡುವುದಿಲ್ಲ. ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಂಕಿಯಿಡುವ ಅಥವಾ ಮರಗಳನ್ನು ಕತ್ತರಿಸಿ ಹಾಕುವ ದುಷ್ಕ್ರತ್ಯಕ್ಕೆ ಶತ್ರುಗಳು ಕೈಹಾಕುವುದಿಲ್ಲ. ಹಿಂದೂಸ್ಥಾನದಲ್ಲಿ ಗಜದಳ ಸೈನ್ಯದ ಪ್ರಮುಖ ಅಂಗ. ಈ ದಳಕ್ಕೆ ಅಲೆಕ್ಸಾಂಡರ್ ಸಹ ಹೆದರಿದ್ದ. ಜನರಲ್ಲಿ ಶಿಸ್ತಿದೆ. ಕಳ್ಳತನ ಬಲು ಕಡಿಮೆ. ನ್ಯಾಯಾಲಯಗಳಿಗೆ ಹೋಗುವವರ ಸಂಖ್ಯೆ ವಿರಳ. ಪರಸ್ಪರ ನಂಬಿಕೆಯ ಮೇಲೆ ವ್ಯವಹಾರ ನಡೆಯುವುದು, ಸ್ತ್ರೀಯರೇ ರಾಜನ ಅಂಗರಕ್ಷರು.
ಮೆಗಾಸ್ತನೀಸ್ ಕೊಟ್ಟಿರುವ ವಿವರಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆ ಒದಗಿಸಿವೆ.