ಎರೆಹುಳು
ಎರೆಹುಳು | |
---|---|
Amynthas sp., a common Asian earthworm often cosmopolitan and introduced around the world | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | |
ವರ್ಗ: | |
Subclass: | |
ಗಣ: | Megadrilacea
|
ಉಪಗಣ: | Lumbricina + Moniligastrida NODC v. 8.0, 1996
|
Families | |
ಎರೆಹುಳು ಮಣ್ಣಿನಲ್ಲಿ ವಾಸಿಸುವ ಒಂದು ಕ್ರಿಮಿ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುತ್ತದೆ. ಅದರ ಜೀರ್ಣಕಾರಿ ವ್ಯವಸ್ಥೆಯು ಅದರ ಶರೀರದ ಉದ್ದಕ್ಕೂ ಹಾದು ಹೋಗುತ್ತದೆ.ರೈತನ ಮಿತ್ರ ನಿಸರ್ಗದ ನೇಗಿಲು ಎಂದೇ ಹೆಸರು ಮಾಡಿರುವ ಎರೆಹುಳ ಜೀವಿ ತಂತ್ರಜ್ಞಾನದ ಯಂತ್ರದಂತೆ ಎರೆಗೊಬ್ಬರ ತಯಾರಿಕೆಯಲ್ಲಿ ಮಹತ್ವದ ಪಾತ್ರವಹಿಸಿದೆ.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಅಕಶೇರುಕದ ಮುಖ್ಯವಂಶಗಳಲ್ಲೊಂದಾದ ವಲಯವಂತ ವಂಶದ (ಅನೀಲಿಡ) ಖೀಟೊಪೋಡ ವರ್ಗದ, ಆಲಿಗೋಕೀಟ ಗಣಕ್ಕೆ ಸೇರಿದೆ. ಖೀಟ ಎಂದರೆ ಈ ಹುಳುವಿನ ಚಲನಾಂಗಗಳಾದ ಸೀಟೆಗಳೆಂದರ್ಥ.
ಪ್ರಭೇದಗಳು
ಬದಲಾಯಿಸಿಎರೆಹುಳುವಿನಲ್ಲಿ ನಾನಾ ಪ್ರಭೇದಗಳಿವೆ. ಲುಂಬ್ರಿಕಸ್ ಟೆರೆಸ್ಟ್ರಿಸ್ ಪ್ರಭೇದ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿದೆ. ಭಾರತದಲ್ಲಿ ಫೆರಿಟೀಮ ಪಾಸ್ತುಮ ಮತ್ತು ಮೆಗಾಸ್ಕೊಲೆಕ್ಸ್ ಎಂಬ ಎರಡು ಪ್ರಭೇದಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಜೀವನ ಕ್ರಮ
ಬದಲಾಯಿಸಿಎರೆಹುಳು ತೇವದ ನೆಲದಲ್ಲಿ ವಾಸಿಸುವುದು. ಏರಿ, ಗದ್ದೆಬದು, ಕೈತೋಟ ಅಡಕೆ ಮತ್ತು ಬಾಳೆತೋಟ ಹಾಗೂ ತೇವವಿರುವ ಎಲ್ಲ ಭೂಮಿಗಳಲ್ಲೂ ಚಿಕ್ಕ ಚಿಕ್ಕ ಬಿಲಗಳನ್ನು ತೋಡಿಕೊಂಡು ಅದರೊಳಗೆ ವಾಸಿಸುತ್ತದೆ. ಎರೆಹುಳು ಪಕ್ಷಿಗಳಿಗೆ ಉತ್ತಮ ಆಹಾರ, ಶತ್ರುಗಳಿಂದ ಪಾರಾಗಲು ಇದು ಹಗಲು ಬಿಲಗಳಲ್ಲಿ ಹುದುಗಿದ್ದು ರಾತ್ರಿಯಲ್ಲಿ ಮಾತ್ರ ಹೊರಬರುತ್ತದೆ. ಕೊಳೆಯುತ್ತಿರುವ ಎಲೆ, ಕಾಂಡ, ಹುಲ್ಲು ಇದರ ಪ್ರೀತಿಯ ಆಹಾರ. ಆಹಾರದೊಡನೆ ಮಣ್ಣನ್ನೂ ಸೇವಿಸುತ್ತದೆ. ಬಿಲಗಳನ್ನು ತೋಡುವುದರಿಂದ ಭೂಮಿ ಟೊಳ್ಳಾಗಿ ಗಾಳಿಯಾಡಲು ಅನುಕೂಲವಾಗುತ್ತದೆ. ವಿಸರ್ಜಿಸಿದ ಮಲ ಕಸ್ತೂರಿಮಾತ್ರೆಗಳಂತೆ ಭೂಮಿಯ ಮೇಲೆ ಕುಪ್ಪೆ ಕುಪ್ಪೆಯಾಗಿ ಬಿದ್ದಿರುತ್ತದೆ. ಇದಕ್ಕೆ ಕುಪ್ಪಲು ಮಣ್ಣು ಎಂದು ಹೆಸರು. ಇದು ಅತಿ ಫಲವತ್ತಾಗಿರುತ್ತದೆ. ಗಿಡಗಳ ಬೆಳೆವಣಿಗೆಗೆ ಬೇಕಾದ ಎಲ್ಲ ಲವಣಾಂಶಗಳು ಈ ಮಣ್ಣಿನಲ್ಲಿವೆ. ಡಾರ್ವಿನ್, ಒಂದು ಎಕರೆಯಲ್ಲಿ ವಾಸಿಸುವ ಎರೆಹುಳುಗಳು ಒಂದು ವರ್ಷದಲ್ಲಿ 18 ಟನ್ ಮಣ್ಣನ್ನು ತಿರುವಿಹಾಕುತ್ತವೆ ಎಂದು ಲೆಕ್ಕಾಚಾರ ಮಾಡಿದ್ದಾನೆ.
ಲಕ್ಷಣಗಳು
ಬದಲಾಯಿಸಿಎರೆಹುಳುವಿನ ಬಣ್ಣ ಕಂದುಗೆಂಪು ಅಥವಾ ಮಣ್ಣಿನ ಬಣ್ಣ. ಇದು ಒಂದು ಅಥವಾ ಸು. 4 ಮೀ. ಉದ್ದ ಬೆಳೆಯುತ್ತದೆ. ಗಾತ್ರ 3/8". ಶರೀರ ದುಂಡಗೆ ದಾರದಂತಿದೆ. ಆಸ್ಟ್ರೇಲಿಯದಲ್ಲಿ ಮೆಗಾಸ್ಕೋಲಿಸೈಡಿಸ್ ಆಸ್ಟ್ರಾಲಿಸ್ ಎಂಬ ಎರೆಹುಳು ಇದೆ. ಇದು ಸು. 3ಮೀ.-3.7ಮೀ. ಉದ್ದವಿದ್ದು ನೂಲಿನ ಹಗ್ಗದಷ್ಟು ಗಾತ್ರವಿರುತ್ತದೆ. ಇದನ್ನು ರಾಕ್ಷಸ ಎರೆಹುಳು ಎನ್ನುತ್ತಾರೆ. ಇದು ಅಗಲವಾದ ಬಿಲಗಳನ್ನು ತೋಡಿಕೊಂಡು ವಾಸಿಸುತ್ತದೆ. ಬಿಲಗಳ ಬಾಯಿ ಅಗ್ನಿಪರ್ವತದ ಬಾಯಿಯಂತೆ ಕಾಣುತ್ತದೆ. ಈ ಹುಳುಗಳನ್ನು ತಿನ್ನುವ ಒಂದೇ ಒಂದು ಪಕ್ಷಿಯೆಂದರೆ ಅಲ್ಲಿನ ಲಾಫಿಂಗ್ ಕಿಂಗ್ ಫಿಷರ್. ಎರೆಹುಳುವಿನ ಮೈ ಸದಾ ತೇವವಾಗಿರುತ್ತದೆ. ಮುಂತುದಿ ಮತ್ತು ಹಿಂತುದಿಗಳು ಸ್ವಲ್ಪ ಮಟ್ಟಿಗೆ ಚೂಪಾಗಿರುತ್ತವೆ. ಇದರ ಶರೀರ ಬಹಳ ವಲಯಗಳನ್ನು (ಖಂಡ) ಹೊಂದಿದೆ. ಶರೀರದಲ್ಲಿ ಇಷ್ಟೇ ಖಂಡಗಳಿರಬೇಕೆಂಬ ನಿಯಮವೇನಿಲ್ಲ. ಸಾಮಾನ್ಯವಾಗಿ 100 ರಿಂದ 150 ಖಂಡಗಳಿರಬಹುದು. ಈ ಖಂಡಗಳು ಉಂಗುರದಂತಿದ್ದು ಒಂದರ ಹಿಂದೆ ಒಂದರಂತೆ ಜೋಡಣೆಗೊಂಡಿವೆ. ಶರೀರದ ಮೇಲೆ ತೆಳುವಾದ ಕ್ಯುಟಿಕಲಿನಿಂದಾದ ಪೊರೆಯಿದೆ. ಮುಂದಿನ ಒಂದೆರಡು ಖಂಡಗಳನ್ನು ಬಿಟ್ಟರೆ ಮಿಕ್ಕೆಲ್ಲ ಖಂಡಗಳಲ್ಲೂ ಸೀಟೆಗಳೆಂಬ ಬಿರುಗೂದಲುಗಳಿವೆ. ಇವು ಖಂಡದ ಸುತ್ತಲೂ ಸಾಲಾಗಿ ಜೋಡಣೆಗೊಂಡಿವೆ. ಪ್ರತಿಯೊಂದು ಸೀಟೆಯೂ S ಆಕಾರಕ್ಕಿದ್ದು ತನ್ನದೇ ಆದ ಚೀಲದಲ್ಲಿ ಹುದುಗಿದೆ. ಸೀಟೆಯ ಬುಡದಲ್ಲಿ ಮಾಂಸಖಂಡಗಳಿವೆ. ಇವುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದಾಗಿ ಸೀಟೆ ಚಲಿಸುತ್ತದೆ. ಸೀಟೆಯನ್ನು ಚೀಲದೊಳಕ್ಕೆ ಎಳೆದುಕೊಳ್ಳಲು ಮತ್ತು ಹೊರನೂಕಲು ಈ ಮಾಂಸಖಂಡಗಳು ಸಹಕರಿಸುತ್ತವೆ. ಸೀಟೆಗಳ ಚಲನೆಯಿಂದ ಹುಳು ಚಲಿಸುತ್ತದೆ. ಆದ್ದರಿಂದ ಸೀಟೆಗಳು ಎರೆಹುಳುವಿನ ಚಲನಾಂಗಗಳು.
ಶರೀರ ಶಾಸ್ತ್ರ
ಬದಲಾಯಿಸಿಎರೆಹುಳುವಿನ ಶರೀರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. 1. ಕ್ಲೈಟೆಲಮ್ ಮುಂಭಾಗ. 2. ಕ್ಲೈಟೆಲಮ್ ಭಾಗ. 3. ಕ್ಲೈಟೆಲಮ್ ಹಿಂಭಾಗ. ಚೆನ್ನಾಗಿ ಬೆಳೆದ ಹುಳುವನ್ನು ನೋಡಿದೊಡನೆ ಗುರುತಿಸಲು ಕ್ಲೈಟೆಲಮ್ ಭಾಗ ಬಹಳ ಸಹಕಾರಿಯಾಗಿದೆ. ಶರೀರದ ಮಿಕ್ಕ ಭಾಗಕ್ಕಿಂತ ಈ ಭಾಗ ಉಬ್ಬಿಕೊಂಡಿರುತ್ತದೆ. ಈ ಭಾಗದ ಖಂಡಗಳು ಒಗ್ಗೂಡಿಕೊಂಡಿವೆ. ಫೆರಿಟೀಮ ಪ್ರಭೇದದಲ್ಲಿ ಕ್ಲೈಟೆಲಮ್ ಮುಂಭಾಗದಲ್ಲಿ 13 ಖಂಡಗಳಿವೆ. 14, 15 ಮತ್ತು 16 ಖಂಡಗಳು ಒಟ್ಟು ಸೇರಿ ಕ್ಲೈಟೆಲಮ್ ಭಾಗವಾಗಿದೆ. ಮೆಗಾಸ್ಕೊಲೆಕ್ಸ್‌ನಲ್ಲಿ ಕ್ಲೈಟೆಲಮ್ ಮುಂಭಾಗದಲ್ಲಿ 14 ಖಂಡಗಳಿವೆ. 15, 16 ಮತ್ತು 17 ಖಂಡಗಳು ಸೇರಿ ಕ್ಲೈಟೆಲಮ್ ಭಾಗವಾಗಿದೆ. ಅಮೆರಿಕದ ಲುಂಬ್ರಿಕಸ್ನಲ್ಲಿ ಕ್ಲೈಟೆಲಮ್ ಮುಂಭಾಗದಲ್ಲಿ 30 ಖಂಡಗಳಿರುತ್ತವೆ. 31 ರಿಂದ 37ನೆಯ ಖಂಡಗಳು ಸೇರಿ ಕ್ಲೈಟೆಲಮ್ ಆಗಿದೆ. ಕ್ಲೈಟೆಲಮ್ ಶರೀರದ ಮಿಕ್ಕ ಭಾಗಕ್ಕಿಂತ ದಪ್ಪನಾಗಿರುವುದಕ್ಕೆ ಅದರಲ್ಲಿರುವ ಹೊರಚರ್ಮದ ಪದರಗಳೇ ಕಾರಣ. ಈ ಪದರಗಳು ಒಂದರ ಮೇಲೊಂದರಂತೆ ಜೋಡಿಸಿಕೊಂಡಿವೆ. ಈ ಭಾಗವನ್ನು ಬಿಟ್ಟರೆ ಶರೀರದ ಮಿಕ್ಕ ಭಾಗದಲ್ಲಿ ಹೊರಚರ್ಮದ ಕೋಶಗಳು ಕೇವಲ ಒಂದೇ ಪದರದಲ್ಲಿದೆ. ಕ್ಲೈಟೆಲಮ್ ಭಾಗದಲ್ಲಿ ಅನೇಕ ಗ್ರ್ರಂಥಿಗಳು ಇವೆ. ಇವು ಸ್ರವಿಸುವ ಲೋಳೆಯಂತಿರುವ ರಸದಿಂದಾಗಿ ಈ ಭಾಗ ಮಿಕ್ಕ ಭಾಗಕ್ಕಿಂತ ಹೆಚ್ಚು ತೇವವಾಗಿರುತ್ತದೆ. ಶರೀರದ ಮೊದಲ ಖಂಡದಲ್ಲಿ ಬಾಯಿ ಇದೆ. ಇದೊಂದು ದುಂಡನೆಯ ರಂಧ್ರ. ಬಾಯಿಯ ಮುಂದೆ ಮಾಂಸದ ಮುದ್ದೆಯಂಥ ಪ್ರೋಸ್ಟೋಮಿಯಮ್ ಎಂಬ ರಚನೆ ಇದೆ. ಶರೀರದ ಕೊನೆಯ ಖಂಡದಲ್ಲಿ ಗುದದ್ವಾರವಿದೆ. ಎರೆಹುಳುವಿನ ಶರೀರದ ಮೇಲೆ ಎರಡು ಖಂಡಗಳು ಸಂಧಿಸುವ ಭಾಗದಲ್ಲಿ ಒಂದೊಂದು ರಂಧ್ರವಿದೆ. ಈ ರಂಧ್ರಗಳು ಬೆನ್ನಿನ ಮಧ್ಯರೇಖೆಯ ಮೇಲಿವೆ. ಫೆರೆಟೀಮದಲ್ಲಿ ಈ ರಂಧ್ರಗಳು 12ನೆಯ ಖಂಡದಿಂದ ಹಿಂದಕ್ಕೆ ಪ್ರತಿ ಖಂಡದಲ್ಲೂ ಇವೆ. ಶರೀರದೊಳಗಿರುವ ಒಂದು ರೀತಿಯ ರಸ ಈ ರಂಧ್ರಗಳಿಂದ ಹೊರಬರುತ್ತದೆ. ಇದು ಈ ಪ್ರಾಣಿಯ ಶರೀರವನ್ನು ಸದಾ ತೇವವಾಗಿಟ್ಟಿರುತ್ತದೆ. ಲುಂಬ್ರಿಕಸ್ನಲ್ಲಿ ಈ ರಂಧ್ರಗಳು 8 ಅಥವಾ 9ನೆಯ ಖಂಡಗಳ ಮಧ್ಯದಿಂದ ಪ್ರಾರಂಭವಾಗುತ್ತದೆ. ಈ ರಂಧ್ರಗಳನ್ನು ಬಿಟ್ಟರೆ ಎರೆಹುಳುವಿನ ಪಕ್ಕೆಗಳಲ್ಲಿ ಸೂಕ್ಷ್ಮವಾದ ಅನೇಕ ರಂಧ್ರಗಳು ಪ್ರತಿ ಖಂಡದಲ್ಲೂ ಇವೆ. ಇವನ್ನು ನೆಫ್ರೀಡಿಯ ರಂಧ್ರಗಳು ಎನ್ನುತ್ತಾರೆ. ಈ ರಂಧ್ರಗಳ ಮೂಲಕ ತ್ಯಾಜ್ಯ ವಸ್ತುಗಳು ಹೊರ ಹೋಗುತ್ತವೆ. ಫೆರಿಟೀಮದ ತಳಭಾಗದಲ್ಲಿ 5/6, 6/7, 7/8, ಮತ್ತು 8/9 ಖಂಡಗಳು, ಸಂಧಿಸುವ ಸ್ಥಳಗಳಲ್ಲಿ ನಾಲ್ಕು ಜೊತೆ ಸ್ಪರ್ಮಥೀಕೆ ರಂಧ್ರಗಳಿವೆ. ಲುಂಬ್ರಿಕಸ್ನಲ್ಲಿ 9/10 ಮತ್ತು 10/11 ಖಂಡಗಳಲ್ಲಿ ಮಾತ್ರ ಈ ರೀತಿಯ ಎರಡು ಜೊತೆ ರಂಧ್ರಗಳಿವೆ. ಫೆರಿಟೀಮದಲ್ಲಿ 14ನೆಯ ಖಂಡದ ತಳಭಾಗದಲ್ಲಿ ಒಂದು ಜೊತೆ ಸ್ತ್ರೀಜನನೇಂದ್ರಿಯ ರಂಧ್ರವೂ, 18ನೆಯ ಖಂಡದಲ್ಲಿ ಒಂದು ಜೊತೆ ಪುರುಷ ಜನನೇಂದ್ರಿಯ ರಂಧ್ರವೂ ಇವೆ. ಲುಂಬ್ರಿಕಸಿನಲ್ಲಿ 14ನೆಯ ಖಂಡದ ತಳಭಾಗದಲ್ಲಿ ಒಂದು ಜೊತೆ ಸ್ತ್ರೀ ಜನನೇಂದ್ರಿಯ ರಂಧ್ರಗಳು, 15ನೆಯ ಖಂಡದ ತಳಭಾಗದಲ್ಲಿ ಒಂದು ಜೊತೆ ಪುರುಷ ಜನನೇಂದ್ರಿಯ ರಂಧ್ರಗಳು ಇವೆ. ಎರೆಹುಳು ಮುಪ್ಪದರಜೀವಿ. ಶರೀರದ ಅಡ್ಡ ಸೀಳನ್ನು ಪರಿಶೀಲಿಸಿದರೆ ಅದರಲ್ಲಿರುವ ಮಾಂಸಖಂಡಗಳು ಮತ್ತು ಅಂಗಗಳ ಜೋಡಣೆ ಅರಿಯಬಹುದು. ಅಡ್ಡಸೀಳು ವೃತ್ತಾಕಾರಕ್ಕಿರುತ್ತದೆ. ಶರೀರದ ಪ್ರಥಮಪದರ ಹೊರಚರ್ಮ. ಇದು ಚಚ್ಚೌಕವಾಗಿರುವ ಕೋಶಗಳಿಂದಾಗಿದೆ. ಈ ಕೋಶಗಳು ಸಾಲಾಗಿ ಒಂದೇ ಪದರದಲ್ಲಿವೆ. ಹೊರಚರ್ಮದ ಮೇಲೆ ಇವುಗಳೇ ಉತ್ಪತ್ತಿಮಾಡಿದ ತೆಳುವಾದ ಕ್ಯುಟಿಕಲ್ ಲೇಪನವಿದೆ. ಹೊರಚರ್ಮದ ತಳಭಾಗದಲ್ಲಿ ಮಾಂಸಖಂಡಗಳ ಪದರಗಳಿವೆ. ಪ್ರಥಮ ಮಾಂಸಖಂಡದ ಪದರ ವೃತ್ತಾಕಾರಕ್ಕಿದೆ. ಎರಡನೆಯ ಪದರ ನೀಳವಾಗಿ ಜೋಡಿಸಿಕೊಂಡಿರುವ ಮಾಂಸಖಂಡಗಳನ್ನೊಳಗೊಂಡಿದೆ. ಹೊರಚರ್ಮ ಮತ್ತು ಮಾಂಸಖಂಡಗಳು ಸೇರಿ ಶರೀರದ ಹೊದಿಕೆಯಾಗಿದೆ. ಶರೀರದ ಹೊದಿಕೆಯಲ್ಲಿ ಅಲ್ಲಲ್ಲಿ ಚಲನಾಂಗಗಳಾದ ಸೀಟೆಗಳು ನಾಟಿಕೊಂಡಂತಿವೆ. ಮಾಂಸಖಂಡಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದಾಗಿ ಸೀಟೆಗಳು ಚಲಿಸುತ್ತವೆ. ಶರೀರದ ಗೋಡೆಯಿಂದ ಒಳಭಾಗದಲ್ಲಿ ದೇಹಾಂತರಾವಕಾಶವಿದೆ (ಸೀಲಾಮ್). ಇದರ ಸುತ್ತಲೂ ಏಕಪದರದ ಅನುಲೇಪಕ ಅಂಗಾಂಶದ ಕೋಶಗಳಿವೆ.
ದೇಹಾಂತರಾವಕಾಶದೊಳಗೆ ಒಂದು ರೀತಿಯ ರಸವಿದೆ. ಈ ರಸದಲ್ಲಿ ವರ್ಣರಹಿತ ಅಮೀಬ ರೀತಿಯ ಕೋಶಗಳಿವೆ. ಶರೀರದ ಮೇಲು ರಂಧ್ರದ ಮೂಲಕ ಈ ರಸ ಕೋಶಗಳ ಸಮೇತ ಹೊರಬರುತ್ತದೆ. ಶರೀರದ ಮೇಲೆ ಕೂರುವ ಬ್ಯಾಕ್ಟೀರಿಯ ಮುಂತಾದ ಜೀವಾಣುಗಳನ್ನು ಈ ಕೋಶಗಳು ತಿಂದು ಹಾಕಿ ಶರೀರವನ್ನು ರಕ್ಷಿಸುತ್ತವೆ. ದೇಹಾಂತರಾವಕಾಶದಲ್ಲಿ ಅನ್ನನಾಳ. ಅದರ ಮೇಲುಭಾಗದಲ್ಲಿ ಹಾಗೂ ತಳಭಾಗದಲ್ಲಿ ರಕ್ತನಾಳಗಳು ಮತ್ತು ನರಹುರಿ, ಜೀರ್ಣಾಂಗದ ಇಕ್ಕೆಲದಲ್ಲಿ ವಿಸರ್ಜನಾಂಗಗಳಾದ ನೆಫ್ರೀಡಿಯಗಳಿವೆ. ಎರೆಹುಳುವಿನ ಜೀರ್ಣಾಂಗ ಅತಿಸರಳವಾಗಿ ನಾಳದಂತಿದೆ. ಜೀರ್ಣಾಂಗದ ಮುಂದಿನ ಭಾಗದಲ್ಲಿ ಆಹಾರವನ್ನು ಶೇಖರಿಸಲು ಫ್ಯಾರಿಂಕ್ಸ್ ಎಂಬ ಚೀಲದೋಪಾದಿಯ ಅಂಗ ಮತ್ತು ಆಹಾರವನ್ನು ಅರೆಯಲು ಗಟ್ಟಿಯಾದ ಸ್ನಾಯುಗಳಿಂದಾದ ಗಿಜರ್ಟ್ ಇವೆ. ಇವುಗಳು ಬರುವ ಖಂಡಗಳು ಪ್ರತಿ ಪ್ರಭೇದದಲ್ಲಿಯೂ ವಿಭಿನ್ನವಾಗಿವೆ. ಈ ಭಾಗಗಳ ಹಿಂದಿರುವುದು ಕರುಳು. ಎರೆಹುಳುವಿನ ರಕ್ತ ಕೆಂಪಗಿದೆ. ಇದು ನಾಳಗಳಲ್ಲಿಯೇ ಹರಿಯುತ್ತದೆ. ಈ ಪ್ರಾಣಿಗೆ ಹೃದಯವಿಲ್ಲ. ರಕ್ತವನ್ನು ಶೇಖರಿಸಲು ಮತ್ತು ವಿತರಣೆ ಮಾಡಲು ಪ್ರತ್ಯೇಕ ರಕ್ತನಾಳಗಳಿವೆ. ಎರೆಹುಳು ತನ್ನ ಚರ್ಮದಿಂದಲೇ ಉಸಿರಾಡುತ್ತದೆ. ಆದ್ದರಿಂದಲೇ ಇದರ ಚರ್ಮ ಸದಾ ತೇವವಾಗಿರುತ್ತದೆ. ರಕ್ತನಾಳಗಳ ಮೂಲಕ ರಕ್ತ ಚರ್ಮಕ್ಕೆ ಪ್ರವಹಿಸುತ್ತದೆ. ಗಾಳಿ ತೇವವಾದ ಚರ್ಮಕ್ಕೆ ಬಡಿದಾಗ ರಕ್ತನಾಳಗಳಲ್ಲಿರುವ ರಕ್ತ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈಆಕ್ಸೈಡನ್ನು ಹೊರ ಹಾಕುತ್ತದೆ. ಸಾಮಾನ್ಯವಾಗಿ ಪ್ರತಿಖಂಡದಲ್ಲೂ ನಾಳದಂತಿರುವ ನೆಫ್ರೀಡಿಯಗಳೆಂಬ ಶುದ್ಧೀಕರಣಾಂಗಗಳಿವೆ. ಇವು ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ನೆಫ್ರೀಡಿಯ ರಂಧ್ರಗಳ ಮೂಲಕ ಹೊರಹಾಕುತ್ತವೆ. ಎರೆಹುಳುವಿನ ನರಮಂಡಲ ಅತಿಸರಳ. ಶರೀರದ ಮುಂತುದಿಯಲ್ಲಿ ಅನ್ನನಾಳದ ಸುತ್ತಲೂ ಉಂಗುರದೋಪಾದಿಯಲ್ಲಿರುವ ಒಂದು ನರಮುಡಿ ಇದೆ. ಈ ನರಮುಡಿಯಿಂದ ಅನ್ನನಾಳದ ತಳಭಾಗದಲ್ಲಿ ಶರೀರದುದ್ದಕ್ಕೂ ಒಂದು ನರಹುರಿ ಹುಟ್ಟಿಬಂದಿದೆ. ಈ ನರಹುರಿ ಪ್ರತಿಯೊಂದು ಖಂಡದಲ್ಲೂ ಗಂಟಿ ನೋಪಾದಿಯಲ್ಲಿದೆ. ಇಲ್ಲಿಂದ ನರಗಳು ಶರೀರದ ವಿವಿಧ ಭಾಗಗಳಿಗೆ ಹೊರಡುತ್ತವೆ.
ಎರೆಹುಳು ದ್ವಿಲಿಂಗಿ. ಪುರುಷ ಹಾಗೂ ಸ್ತ್ರೀ ಜನನೇಂದ್ರಿಯಗಳು ಒಂದೇ ಪ್ರಾಣಿಯಲ್ಲಿವೆ. ಫೆರಿಟೀಮದಲ್ಲಿ ಪುರುಷ ಜನನೇಂದ್ರಿಯಗಳಾದ ವೃಷಣಗಳು ಹತ್ತು ಮತ್ತು ಹನ್ನೊಂದನೆಯ ಖಂಡದ ಮೇಲುಗೋಡೆಗೆ ಅಂಟಿಕೊಂಡಿವೆ. ಒಂದೊಂದು ಖಂಡದಲ್ಲೂ ಒಂದೊಂದು ಜೊತೆ ವೃಷಣಗಳಿದ್ದು ಅವು ವೃಷಣಚೀಲಗಳಿಂದ ರಕ್ಷಿಸಲ್ಪಟ್ಟಿವೆ. ಇವುಗಳಿಂದ ಉತ್ಪತ್ತಿಯಾಗುವ ರೇತಸ್ಸು ಸೆಮೈನಲ್ ವೆಸಿಕಲ್ಗಳೆಂಬ ಚೀಲಗಳಲ್ಲಿ ಶೇಖರಗೊಂಡು ಬಲಿತು ಹೊರಬರುತ್ತವೆ. ಹೊರಬಂದ ರೇತಸ್ಸನ್ನು ಒಂದು ಜೊತೆ ವೃಷಣನಾಳಗಳ ಆಲಿಕೆಗಳು ಸಂಗ್ರಹಿಸಿ ವೃಷಣನಾಳಗಳ ಮೂಲಕ 18ನೆಯ ಖಂಡದಲ್ಲಿರುವ ಪುರುಷ ಜನನೇಂದ್ರಿಯಗಳ ಮೂಲಕ ಹೊರದೂಡುತ್ತವೆ. ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದಂತೆ ಒಂದು ಜೊತೆ ಪ್ರಾಸ್ಟೇಟ್ ಗ್ರ್ರಂಥಿಗಳು ಇವೆ. ಇವು 17,18,19 ಖಂಡಗಳಲ್ಲಿ ಪಸರಿಸಿವೆ. ಇವು ಉತ್ಪತ್ತಿ ಮಾಡುವ ರಸವೂ ಪುರುಷ ಜನನೇಂದ್ರಿಯ ರಂಧ್ರದ ಮೂಲಕ ಹೊರಬರುತ್ತದೆ. ಒಂದು ಜೊತೆ ಸ್ತ್ರೀ ಜನನೇಂದ್ರಿಯಗಳು (ಅಂಡಾಶಯಗಳು) 13ನೇ ಖಂಡದ ಮೇಲುಹೊದಿಕೆಗೆ ಅಂಟಿಕೊಂಡಿವೆ. ಈ ಅಂಡಾಶಯಗಳಲ್ಲಿ ಮೊಟ್ಟೆಗಳು ಬೆಳೆದು ಹೊರಬರುತ್ತವೆ. ಇವನ್ನು ಅಂಡಾಶಯ ನಾಳದ ಆಲಿಕೆಗಳು ಸಂಗ್ರಹಿಸಿ, ಅಂಡಾಶಯ ರಂಧ್ರದ ಮೂಲಕ ಹೊರ ಹಾಕುತ್ತವೆ. ಹೀಗೆ ಹೊರಬಂದ ಮೊಟ್ಟೆಗಳು ಕ್ಲೈಟೆಲಮ್ ಸ್ರವಿಸಿದ ಕೊಳವೆಯೊಳಕ್ಕೆ ಬೀಳುತ್ತವೆ. ಸಂಭೋಗಕ್ರಿಯೆಯ ಕಾಲದಲ್ಲಿ ಎರಡು ಎರೆಹುಳುಗಳು ವಿರುದ್ಧ ದಿಕ್ಕಿನಲ್ಲಿ ಒಂದುಗೂಡುತ್ತವೆ ಹೀಗೆ ಇವು ಒಂದು ಗೂಡಿದಾಗ ಒಂದರ ಪುರುಷ ಜನನೇಂದ್ರಿಯಗಳು ಮತ್ತೊಂದರ ಸ್ಪರ್ಮಥೀಕೆ ರಂಧ್ರಗಳಿಗೆ ಸರಿಯಾಗಿ ಜೋಡಿಸಿ ಕೊಂಡಿರುವಂತೆ ನೋಡಿಕೊಳ್ಳುತ್ತವೆ. ಪುರುಷ ಜನನೇಂದ್ರಿಯ ರಂಧ್ರದಿಂದ ಬರುವ ರೇತಸ್ಸುಗಳು ಮತ್ತೊಂದರ ಸ್ಪರ್ಮಥೀಕೆ ರಂಧ್ರವನ್ನು ಪ್ರವೇಶಿಸಿ ಸ್ಪರ್ಮಥೀಕೆ ಚೀಲದೊಳಗೆ ತುಂಬಿಕೊಳ್ಳುತ್ತವೆ. ಎರಡು ಪ್ರಾಣಿಗಳು ತಮ್ಮ ಸ್ಪರ್ಮಥೀಕೆ ಚೀಲಗಳು ರೇತಸ್ಸಿನಿಂದ ತುಂಬಿಕೊಂಡ ಮೇಲೆ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಜೀವಿಯ ಮೊಟ್ಟೆಯನ್ನುಳ್ಳ ಕ್ಲೈಟಿಲಮ್ ಸ್ರವಿಸಿದ ಕೊಳವೆ ಶರೀರದಿಂದ ಸಡಿಲಗೊಳ್ಳುತ್ತದೆ. ಇದು ಸಡಿಲಗೊಂಡಾಗ ಹುಳು ತನ್ನ ಶರೀರವನ್ನು ಹಿಂದಕ್ಕೆ ಎಳೆದುಕೊಳ್ಳಲಾರಂಭಿಸುತ್ತದೆ. ಇದರಿಂದಾಗಿ ಕ್ಲೈಟೆಲಮ್ ಸ್ರವಿಸುವ ಕೊಳವೆ ಮೊಟ್ಟೆಯ ಸಮೇತ ಜಾರಿಕೊಂಡು ಸ್ಪರ್ಮಥೀಕೆ ರಂಧ್ರದ ಬಳಿಗೆ ಬರುತ್ತದೆ. ಇದರ ಬಳಿಗೆ ಬಂದಾಗ ಸ್ಪರ್ಮಥೀಕೆ ಚೀಲಗಳು ಸಂಕುಚಿಸಿ ರೇತಸ್ಸನ್ನು ಹೊರಹಾಕುತ್ತವೆ. ಹೀಗೆ ಹೊರಬಂದ ರೇತಸ್ಸುಗಳು ಕ್ಲೈಟಿಲಮ್ಕೊಳವೆಯೊಳಕ್ಕೆ ಬಿದ್ದು ಮೊಟ್ಟೆಯೊಡನೆ ಮಿಲನಗೊಳ್ಳುತ್ತವೆ. ಹೀಗೆ ಮೊಟ್ಟೆಗಳು ಕ್ಲೈಟೆಲಮ್ ಕೊಳವೆಯೊಳಗಿದ್ದಾಗಲೇ ಗರ್ಭಧಾರಣೆಯಾಗುತ್ತದೆ. ಫಲಿತಗೊಂಡ ಮೊಟ್ಟೆಗಳ ಸಮೇತ ಕ್ಲೈಟೆಲಮ್ ಸ್ರವಿಸಿದ ಕೊಳವೆ ಬಿದ್ದುಹೋಗುತ್ತದೆ. ಬಿದ್ದುಹೋದ ಈ ಕ್ಲೈಟೆಲಮ್ ಕೊಳವೆಯನ್ನು ಕಕೂನ್ ಎಂದು ಕರೆಯುತ್ತೇವೆ. ಇದರೊಳಗಿರುವ ಮೊಟ್ಟೆಗಳು ಬೆಳೆದು ಮರಿಗಳು ಹೊರಬರುತ್ತವೆ. ಸಾಮಾನ್ಯವಾಗಿ ಒಂದು ಕಕೂನ್ನಿಂದ ಒಂದು ಮರಿಹುಳು ಹುಟ್ಟುವುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿGeneral
ಬದಲಾಯಿಸಿ- WormWatch – Field guide to earthworms Archived 2004-02-02 ವೇಬ್ಯಾಕ್ ಮೆಷಿನ್ ನಲ್ಲಿ.
- Earthworms as pests and otherwise hosted by the UNT Government Documents Department
Academic
ಬದಲಾಯಿಸಿ- Infography about Earthworms Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.
- Earthworm resources
- Opuscula Zoologica Budapest, online papers on earthworm taxonomy
- A Series of Searchable Texts on Earthworm Biodiversity, Ecology and Systematics from Various Regions of the World—maintained by Rob Blakemore, Ph.D., an earthworm taxonomy specialist
Agriculture and ecology
ಬದಲಾಯಿಸಿ- Earthworm Information at University of California, Davis
- Minnesota Invasive Earthworms Minnesota DNR information on the negative impacts of earthworms
Worm farming
ಬದಲಾಯಿಸಿ- A multi-tiered worm farm Archived 2014-10-13 ವೇಬ್ಯಾಕ್ ಮೆಷಿನ್ ನಲ್ಲಿ. A technical guide for constructing a tiered worm farming system
- How to Make a Worm Farm Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. Good for Composting and Fishing