ಪಂ.ಬಸವರಾಜ ಭಜಂತ್ರಿ (ಹೆಡಿಗ್ಗೊಂಡ)

ಯವರು ಕರ್ನಾಟಕದ ಖ್ಯಾತ ಶಹನಾಯಿ ವಾದಕರು


ಪಂಡಿತ ಶ್ರೀ.ಬಸವರಾಜ ಭಜಂತ್ರಿ (ಹೆಡಿಗ್ಗೊಂಡ)

ಪಂ.ಶ್ರೀ.ಬಸವರಾಜ ಭಜಂತ್ರಿ (ಹೆಡಿಗ್ಗೊಂಡ)


'ಶಹನಾಯಿ ರಾಜ' ಎಂದು ಗುರುತಿಸಿಕೊಂಡಿರುವ ಪಂ.ಶ್ರೀ.ಬಸವರಾಜ ಭಜಂತ್ರಿ ಯವರು ಕರ್ನಾಟಕದ ಖ್ಯಾತ ಶಹನಾಯಿ ವಾದಕರು. (ಜನನ: ೦೧-೦೫-೧೯೫೩). ಸುಷಿರವಾದ್ಯ ಶಹನಾಯಿಯನ್ನು ತಮ್ಮ ಬಾಲ್ಯದಿಂದಲೂ ನುಡಿಸುತ್ತ ಬಂದಿರುವ ಇವರು ಈ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಭಾರತೀಯ ಸಂಗೀತಗಾರರಲ್ಲಿ ಒಬ್ಬರು.

 ಹಿನ್ನೆಲೆ ಮಾಹಿತಿ
ಹೆಸರು			: ಬಸವರಾಜ ಭಜಂತ್ರಿ (ಹೆಡಿಗ್ಗೊಂಡ)
ಜನನ			: ೦೧-೦೫-೧೯೫೩
ಊರು			: ಹೆಡಿಗ್ಗೊಂಡ, ಬ್ಯಾಡಗಿ ತಾಲೂಕು ಹಾವೇರಿ ಜಿಲ್ಲೆ
ಪ್ರಕಾರ/ಶೈಲಿ	     : ಭಾರತೀಯ ಶಾಸ್ತ್ರೀಯ ಸಂಗೀತ
ಉದ್ಯೋಗ		     : ಸಂಗೀತಗಾರ
ವಾದ್ಯಗಳು		     : ಶಹನಾಯಿ
ಇತರೆ ವಾದ್ಯಗಳು	     : ಕ್ಲಾರಿಯೋನೆಟ್, ತಬಲ, ಹಾರ್ಮೋನಿಯಂ, ಸುಂದರಿ
ಧರ್ಮ ಪತ್ನಿ		: ರತ್ನಾ
ಸಹೋದರರು		: ಗುರುನಾಥ, ಶಿವಾನಂದ
ಸಹೋದರಿಯರು	     : ನಾಗಮ್ಮ, ಅನಸೂಯ, ಗಿರಿಜವ್ವ


'ಕರ್ನಾಟಕದ ಬಿಸ್ಮಿಲ್ಲಾ', 'ಸನಾದಿ ಅಪ್ಪಣ್ಣ', 'ಶಹನಾಯಿ ಪ್ರವೀಣ' ಹಾಗೂ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವವನ್ನು ಪಡೆದಿರುವ ಇವರು ದೂರದರ್ಶನ ಮತ್ತು ಆಕಾಶವಾಣಿಯ 'ಎ' ಶ್ರೇಣಿಯ ಕಲಾವಿದರಾಗಿದ್ದಾರೆ.

ಜೀವನ ಪಯಣ ಬದಲಾಯಿಸಿ

ಹಾವೇರಿ (ಅಖಂಡ ಧಾರವಾಡ ಜಿಲ್ಲೆ) ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಪಂ.ತಿರಕಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಮಗನಾಗಿ ಬಸವರಾಜ ಅವರು ದಿನಾಂಕ ೦೧-೦೫-೧೯೫೩ ರಂದು ಜನಿಸಿದರು. ಇವರದು ಒಂದು ಸಂಗೀತ ಪರಂಪರೆ. ತಂದೆ ಪಂ.ತಿರಕಪ್ಪನವರು ಶಹನಾಯಿ ವಾದಕರಾಗಿದ್ದರು. ಇವರ ಅಜ್ಜನವರೂ ಕೂಡ ಶಹನಾಯಿ (ಕರ್ನಾಟಕ ಸಂಗೀತ) ನುಡಿಸುತ್ತಿದ್ದರು. ಹೀಗಾಗಿ ಚಿಕ್ಕಂದಿನಲ್ಲೇ ಸಂಗೀತದ ಹುಚ್ಚು ಹತ್ತಿಸಿಕೊಂಡರು. ಇವರಿಗೆ ನಾಲ್ವರು ಅಕ್ಕಂದಿರು (ಒಬ್ಬರು ಚಿಕ್ಕಂದಿನಲ್ಲೇ ತೀರಿಕೊಂಡಿದ್ದಾರೆ) ಹಾಗೂ ಇಬ್ಬರು ತಮ್ಮಂದಿರು. ೧೯೮೪ ರಲ್ಲಿ ಹಾನಗಲ್ಲಿ (ಸಮ್ಮಸಗಿ)ನ ಸಂಗೀತ ಮನೆತನದಿಂದ ಬಂದ ರತ್ನಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ತಮ್ಮಂದಿರಾದ ಗುರುನಾಥ ಮತ್ತು ಶಿವಾನಂದ ಅವರೂ ಕೂಡ ತಬಲ, ಶಹನಾಯಿ, ಹಾರ್ಮೋನಿಯಂ ವಾದಕರಾಗಿದ್ದು, ಇವರ ಮಕ್ಕಳೂ ತಬಲ, ಹಾರ್ಮೋನಿಯಂ ನುಡಿಸುತ್ತಾರೆ. ೨೦೦೭ ರಿಂದ ಧಾರವಾಡದ ಕಲಕೇರಿಸಂಗೀತ ಮಹಾವಿದ್ಯಾಲಯದಲ್ಲಿ ಸ್ಥಳೀಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುತ್ತ ಧಾರವಾಡದಲ್ಲೇ ವಾಸ್ತವ್ಯ. ಇವರಿಗೆ ಅಪಾರ ಶಿ‍ಷ್ಯ ಬಳಗವಿದೆ. ಕರ್ನಾಟಕ, ಕೇರಳ, ಚೆನ್ನೈ, ಗೋವಾ, ಗುಜರಾತ್, ದೆಹಲಿ ಮುಂತಾದ ರಾಜ್ಯಗಳಲ್ಲಿ ಶಹನಾಯಿಯ ನಿನಾದವನ್ನು ಪಸರಿಸಿಬಂದಿರುವ ಇವರಿಗೆ ವಿದೇಶದಿಂದಲೂ ಆಮಂತ್ರಣ ಬಂದಿವೆ.

ಪಂ.ಬಸವರಾಜ ಭಜಂತ್ರಿ ಯವರ ಸಂಗೀತ ಕಛೇರಿಗಳಿಗೆ ಪಂ.ರಘುನಾಥ ನಾಖೋಡ (ತಬಲ), ಪಂ.ಯಾವಗಲ್, ಪಂ.ಕಿರಣ್ ನಾಖೋಡ, ಪಂ.ವಿಶ್ವನಾಥ ನಾಖೋಡ, ಪಂ.ಶಾಂತಲಿಂಗ ಕಲ್ಲೂರಕರ, ಪಂ.ಭೀಮಶಿ ಮರೋಳ, ಗುರುನಾಥ ಭಜಂತ್ರಿ, ಪಂ.ಪಂಚಾಕ್ಷರಿ ಗವಾಯಿ ಮುಂತಾದವರು ಸಾಥ್ ನೀಡಿದ್ದಾರೆ. ಪಂ.ರಫೀಕ್ ಖಾನ್ ಅವರ (ವಾಯಲಿನ್, ಸಿತಾರ್) ಜೊತೆ ಜುಗಲ್ ಬಂಧಿ ಏರ್ಪಡಿಸಿದ್ದಾರೆ.

ಸಹೋದರ ಗುರುನಾಥ್ ಅವರ ಅಕಾಲಿಕ ಅಗಲಿಕೆಯ ನಂತರ ಮನೆಯ ಹಾಗೂ ಕಲೆಯ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಸ್ವಂತ ಊರು ಹೆಡಿಗ್ಗೊಂಡದಲ್ಲಿ ವಾಸಿಸುತ್ತಿದ್ದಾರೆ.

ಸಾಧನೆಯ ಹಾದಿ ಬದಲಾಯಿಸಿ

* ೧೯೮೦ ರಿಂದ ಡಾ.ಪುಟ್ಟರಾಜ ಗವಾಯಿಗಳ ಅವರ ಆಶೀರ್ವಾದದಿಂದ ಸ್ವತಂತ್ರವಾಗಿ ಕಾರ್ಯಕ್ರಮ ನೀಡಲು ಪ್ರಾರಂಭ.
* ೧೯೯೮ ರಲ್ಲಿ ಧರ್ಮಸ್ಥಳಶ್ರೀ.ವೀರೇಂದ್ರ ಹೆಗ್ಗಡೆ ಯವರಿಂದ 'ಬಂಗಾರದ ಪದಕ' ಸ್ವೀಕಾರ.
* ಹಾವೇರಿಯ 'ಗುದ್ಲೆಪ್ಪ ಹಳ್ಳಿಕೇರಿ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 
* ೧೯೯೩ ರಲ್ಲಿ ನವದೆಹಲಿಆಕಾಶವಾಣಿ ಆಯೋಜಿಸಿದ್ದ ರಾಷ್ಟ್ರೀಯಸಂಗೀತ ಹಬ್ಬ'ದಲ್ಲಿ ಭಾಗವಹಿಸಿದ್ದಾರೆ.
* ೧೯೯೯ ರಲ್ಲಿ ಮಹಾರಾಷ್ಟ್ರ ರಾಜ್ಯಪಂಡರಾಪುರ ಕೃಷ್ಣಮಹಾರಾಜರಿಂದ 'ಶಹನಾಯಿ ರಾಜ' ಪ್ರಶಸ್ತಿ.
* ೨೦೦೨ ರಲ್ಲಿ ಕಾರ್ಕಳದಲ್ಲಿ ನಡೆದ 'ರಾಷ್ಟ್ರೀಯ ಸಂಗೀತ ಸಮ್ಮೇಳನ'ದಲ್ಲಿ ಭಾಗವಹಿಸಿದ್ದಾರೆ.
* ಹರನಗಿರಿಯಿಂದ 'Bajapegara' ಪ್ರಶಸ್ತಿ.
* ಧಾರವಾಡ ಜಿಲ್ಲೆ ಕುಂದಗೋಳವಿಶ್ವಸಂಸ್ಥೆಯಿಂದ 'ಸವಾಯಿ ಗಂಧರ್ವ ಪ್ರಶಸ್ತಿ'.
* ೨೦೦೬ ರಲ್ಲಿ ಹುಬ್ಬಳ್ಳಿಯಿಂದ 'ಶಹನಾಯಿ ಪ್ರವೀಣ' ಪ್ರಶಸ್ತಿ.
* ಹಾವೇರಿ ಜಿಲ್ಲೆ ಕಾಗಿನೆಲೆ ಕನಕ ಗುರುಪೀಠದ ಶ್ರೀಗಳಿಂದ 'ಪಂಡಿತ ಬಸವರಾಜ ಪ್ರಶಸ್ತಿ'.
* ೨೦೦೯ ರಲ್ಲಿ 'ಹಾನಗಲ್ಲ ಕುಮಾರಸ್ವಾಮಿ ಪ್ರಶಸ್ತಿ'.
* ೨೦೧೦ ರಲ್ಲಿ 'ಕಾಯಕಯೋಗಿ ನುಲಿಯ ಚಂದಯ್ಯ ಪ್ರಶಸ್ತಿ'.
* ೨೦೧೧ ರಲ್ಲಿ 'ರಾಷ್ಟ್ರೀಯ ಸನಾದಿ ಅಪ್ಪಣ್ಣ ಕಲಾಶ್ರೀ ಪ್ರಶಸ್ತಿ'
* ೨೦೧೩ ರಲ್ಲಿ ಕರ್ನಾಟಕ ಸರಕಾರದಿಂದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೧]'.
* ೨೦೧೪ ರಲ್ಲಿ 'ಕರ್ನಾಟಕದ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ'.
* ೨೦೧೪ ರಲ್ಲಿ ಧಾರವಾಡ ಜಿಲ್ಲೆ 'ಕುಂದಗೋಳ ಸವಾಯಿ ಗಂಧರ್ವ ಪುರಸ್ಕಾರ'.
* ೨೦೧೪ ರಲ್ಲಿ 'ಸನಾದಿ ಅಪ್ಪಣ್ಣ ರಾಷ್ಟ್ರೀಯ ಕಲಾಶ್ರೀ' ಪ್ರಶಸ್ತಿ.
* ೨೦೧೪ ರಲ್ಲಿ 'ಪಂಡಿತ ಅಮರಗೋಳ್ಕರ ಕಲಾಶ್ರೀ' ಪ್ರಶಸ್ತಿ.
* ೨೦೧೬ ರಲ್ಲಿ ದೆಹಲಿಯಲ್ಲಿ ನಡೆದ 'ವಿಶ್ವ ಸಂಗೀತ ಸಮ್ಮೇಳನ'ದಲ್ಲಿ ರವಿಶಂಕರ ಗುರೂಜಿ ಸಮ್ಮುಖದಲ್ಲಿ ಕಾರ್ಯಕ್ರಮ.

ಧಾರವಾಡದಲ್ಲಿ ಸುಮಾರು ೩೫ ವರ್ಷಗಳಿಂದ ಇವರು ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ‌ ಸಹಾಯವಿಲ್ಲದೆ 'ಶ್ರೀ ಶಾರದಾ ಸಂಗೀತ ಪಾಠಶಾಲೆ'ಯನ್ನು ನಡೆಸುತ್ತಿದ್ದಾರೆ. ಇಲ್ಲಿ ಸ್ಥಳೀಯ ಮತ್ತು ವಿದೇಶಿ (ಕೆನಡಾ, ಫ್ರಾನ್ಸ್ ಮತ್ತು ಇತರ ದೇಶಗಳ) ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಉಲ್ಲೇಖಗಳು ಬದಲಾಯಿಸಿ