ಇದು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡದ ಬಗ್ಗೆ ಇದೇ ಹೆಸರಿನ ಕನ್ನಡ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ

ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನ ಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ.

ಕೇರಳಾದ ಒಂದು ಹೊಸ ಮನೆ
ನೀಲಗಿರಿ ಬೆಟ್ಟಗಳಲ್ಲಿನ ತೋಡ ಜನಾಂಗದವರ ಒಂದು ಗುಡಿಸಲು

ಪ್ರಾಚೀನತೆ

ಬದಲಾಯಿಸಿ

ಅತಿಪ್ರಾಚೀನವೆನ್ನಬಹುದಾದ ಗುಡಿಸಲುಗಳು ಅಸ್ಸೀರಿಯದ ಉಬೈದನ್ ಗ್ರಾಮಗಳಲ್ಲಿ ದೊರೆತಿವೆ (ಪ್ರ.ಶ.ಪು. 3000). ಇವುಗಳ ರಚನೆ ಜೊಂಡಿನಿಂದ. ಇವನ್ನು ಮಣ್ಣುಮೆತ್ತಿ ನಿಲ್ಲಿಸುತ್ತಿದ್ದರೆಂದು ತೋರುತ್ತದೆ. ಸುಮರನ ಎರಿದು ಎಂಬಲ್ಲಿ ಬೇರೆ ಭಾಗಗಳುಳ್ಳ ಇಂಥ ಜೊಂಡಿನ ಗುಡಿಸಲಿನ ಅವಶೇಷ ದೊರೆತಿದೆ. ಆದರೆ ಇದು ಮಣ್ಣಿನ ಗೋಡೆಗಳಿಂದ ಮಾಡಿದ ಮನೆಯೊಂದಕ್ಕೆ ಸೇರಿದಂತಿದೆ. ಪಶ್ಚಿಮ ಇರಾನಿನ ಸಿಯಾಲ್ಕ್‌ನ ಉತ್ಖನನದಲ್ಲಿ ಕೆಳಗಿನ ಪದರಗಳಲ್ಲಿ ವಾಸಸ್ಥಾನದ ಕುರುಹುಗಳೇನೂ ಕಾಣದಿದ್ದರೂ ಜೊಂಡಿನ ಗುಡಿಸಲುಗಳ ಉಪಯೋಗ ಅಲ್ಲಿನ ಜನರಿಗೆ ತಿಳಿದಿತ್ತೆಂದು ಊಹಿಸಲಾಗಿದೆ. ಆದರೆ ಗಟ್ಟಿಸಿದ ಮಣ್ಣಿನ ಗೋಡೆಗಳಿಂದ ಕಟ್ಟಿದ ಮನೆಗಳ ಅವಶೇಷಗಳು ಸು. 4 ಮೀ ಮೇಲಿನ ಪದರದಲ್ಲಿ ಕಂಡುಬಂದಿವೆ. ಗೋಡೆಹಾಕುವ ಸ್ಥಳದಲ್ಲಿ ಗರಸುಬೆರೆಸಿದ ಮಣ್ಣು ಅಥವಾ ಜೇಡಿಯನ್ನು ಹಲಗೆಗಳ ಮಧ್ಯೆ ಚೆನ್ನಾಗಿ ಗಟ್ಟಿಸಿ ಅದು ಗಡಸಾದ ಮೇಲೆ ಹಲಗೆಗಳನ್ನು ತೆಗೆದು ಬಿಡುವುದರ ಮೂಲಕ ಇಂಥ ಜೋಡಿಗೋಡೆಗಳನ್ನು ಕಟ್ಟುತ್ತಿದ್ದಿರಬೇಕು.

ಮನೆ ಎಂಬ ಇಂದಿನ ಅರ್ಥದ ನೆಲೆಗಳನ್ನು ನಾವು ಮೊದಲು ಕಾಣುವುದು ಈಜಿಪ್ಟಿನಲ್ಲಿ. ನೈಲ್ ನದಿಯ ರೊಸೆಟ್ಟಾ ಶಾಖೆಯ ಬಳಿ ಮೆರಿಂದೆ ಎಂಬಲ್ಲಿ (ಪ್ರ.ಶ.ಪು. 4000-3000) ಮೊತ್ತಮೊದಲು ನೆಲೆನಿಂತ ಜನರು ನಿರ್ಬಲವಾದ ಗೂಡುಗಳನ್ನು ಕಟ್ಟಿ ಕೊಂಡರು. ಇವು ಹೊನಲಿನ ಸೆಳೆತಕ್ಕೆ ಸಿಕ್ಕು ಮರಳಿನಲ್ಲಿ ಹುಗಿದುಹೋಗುತ್ತಿದ್ದುವು. ಆದರೆ ಕ್ರಮೇಣ ಹೆಚ್ಚು ಬಲಶಾಲಿಯಾದ ಆಸರೆ ಗಳನ್ನು ಇವರು ಕಟ್ಟಲು ಶಕ್ತರಾದರು. ಹೊನಲಿಗೆ ಅಡ್ಡವಾಗಿ ಜೊಂಡಿನ ಚಾಪೆಗಳನ್ನು ಅಂಡಾಕಾರವಾಗಿ ಅಥವಾ ಲಾಳಾಕಾರವಾಗಿ, ನೆಲದೊಳಗೆ ಹುಗಿದ ಕಂಬ ಗಳಿಗೆ, ಜೋತುಬಿಟ್ಟರು. ಕೆಲಕಾಲದ ಬಳಿಕ ಇಂಥ ಆಸರೆಗಳಿಗೆ ಚಾಪೆಗಳ ಬದಲಾಗಿ ಮಣ್ಣಿನ ಗೋಡೆಗಳನ್ನು ಉಪಯೋಗಿಸತೊಡಗಿದರು. ಈ ಗೋಡೆಗಳನ್ನು ದಪ್ಪವಾದ ಕೆಲವು 1.5 ಮೀಟರ್ ದಪ್ಪ ಮಣ್ಣಿನ ಮುದ್ದೆಗಳಿಂದ ಮಾಡಲಾಗಿತ್ತು. ಇಂಥ ಮನೆಗಳಾದರೂ ಒತ್ತೊತ್ತಾಗಿರದೆ ದೂರದೂರವಾಗಿದ್ದುವು: ಆದರೆ ಕ್ರಮಬದ್ಧವಾದ ಸಾಲಿನಲ್ಲಿ ಇದ್ದುವು.

ಎಲ್ಅಮ್ರದಲ್ಲಿ (ಪ್ರ.ಶ.ಪು.3000) ಮನೆಯೊಂದರ ಮಣ್ಣಿನಮಾದರಿ ದೊರೆತಿದೆ. ಇದು ಅಂದಿನ ಮನೆಗಳಿರುತ್ತಿದ್ದ ಬಗೆಯನ್ನು ಸೂಚಿಸುತ್ತದೆ. ಅವು ಆಯತಾಕಾರದ ಮನೆಗಳು. ಉದ್ದವಾದ ಭಾಗದಲ್ಲಿ ಮನೆಯೊಳಗೆ ಹೋಗಲು ಪ್ರವೇಶವಿದ್ದು ಅಲ್ಲಿ ಮಣ್ಣಿನ ಚೌಕಟ್ಟಿನ ದ್ವಾರವಿತ್ತು. ಇಂಥ ಮನೆಗಳು ಸುಮಾರು 7.5 - 5.5 ಚದರ ಮೀಟರುಗಳಷ್ಟು ವಿಶಾಲವಾಗಿದ್ದುವು.

 
ಸೆರ್ಬಿಯಾದಲ್ಲಿನ ಸಾಂಪ್ರದಾಯಿಕ ಕಲ್ಲಿನ ಮನೆಗಳು

ಮೆಸಪೊಟೇಮಿಯದ ಖಲತ್ ಜರ್ಮೊ ಎಂಬಲ್ಲಿ ಆಹಾರವನ್ನು ಬೆಳೆಸಲು ಕಲಿಯಲಾರಂಭಿಸಿದ ಜನ ಸಣ್ಣ ಮನೆಗಳನ್ನು ಕಟ್ಟಿರುವುದು ಉತ್ಖನನದಿಂದ ಬೆಳಕಿಗೆ ಬಂದಿದೆ. ಅಲ್ಲಿನ ರೈತರು ಗಟ್ಟಿಸಿದ ಜೇಡಿಮಣ್ಣಿನ ಗೋಡೆಗಳುಳ್ಳ ಸರಳವಾದ ಮನೆಗಳನ್ನು ಕಟ್ಟುತ್ತಿದ್ದರು. ಮನೆಗೆ ಜೊಂಡಿನ ನೆಲಗಟ್ಟು ಇತ್ತು. ಟೈಗ್ರಿಸ್ ನದಿಯ ಪಶ್ಚಿಮಕ್ಕಿರುವ ಹಸ್ಸುನ ಎಂಬಲ್ಲಿ ನವಶಿಲಾಯುಗದ ಜನರು ವಾಸಿಸಿದ್ದುದಕ್ಕೆ ಕುರುಹುಗಳು ದೊರೆತಿವೆ. ಅತಿ ಕೆಳಗಿನ ಪದರಗಳಲ್ಲಿ ಮನೆಗಳ ಅವಶೇಷಗಳು ಇಲ್ಲವಾದರೂ ಮೇಲಿನ ಪದರಗಳಲ್ಲಿ ಇವು ಸ್ಪಷ್ಟವಾಗಿವೆ. ಅತಿಪ್ರಾಚೀನ ಗ್ರಾಮದಲ್ಲಿ ವಕ್ರವಾದ ಗೋಡೆಗಳ ಅವಶೇಷಗಳಿವೆ. ಇದರ ಬಳಿಕ ಈ ಮನೆಗಳು ಹೆಚ್ಚು ಸಜ್ಜುಗೊಂಡಿವೆ. ಹಲವಾರು ಕೊಠಡಿಗಳಿಂದ ಕೂಡಿದ ಇವುಗಳಿಗೆ ಆಯತಾಕಾರವಿತ್ತು. ಮನೆಯ ಆವರಣದೊಳಗೆ ಒಂದು ಅಂಗಳವೂ ಇತ್ತು. ಮನೆಗಳಿಗೆ ಕಲ್ಲಿನ ಕುಳಿಯ ಸುತ್ತಲೂ ತಿರುಗುವ ತಿರುಗು ಗೂಟಗಳುಳ್ಳ ಮರದ ಬಾಗಿಲುಗಳಿದ್ದುವು. ಅಂಗಳದಲ್ಲಿ ಆಹಾರಬೇಯಿಸಲು ಮಣ್ಣಿನ ಗುಂಡಾದ ಒಲೆಗಳಿದ್ದವು. ಇವು ಕೆಲವೊಮ್ಮೆ ಕೊಠಡಿಗಳೊಳಗೆ ಇದ್ದುದೂ ಕಂಡುಬಂದಿದೆ. ಇವೆಲ್ಲ ಪ್ರ.ಶ.ಪು. ಸುಮಾರು 3000 ವರ್ಷಗಳಿಗೂ ಹಿಂದೆ ಪ್ರಚಲಿತವಿದ್ದ ನಾಗರಿಕತೆಗಳು.

ಸುಮೇರಿಯದ ಮೊದಲ ಅರಸು ಮನೆತನಗಳ ಕಾಲದಲ್ಲಿ (ಪ್ರ.ಶ.ಪು. ಸುಮಾರು 2000). ಆ ಜನರು ಒಂದು ಮಹಡಿಯನ್ನುಳ್ಳ ಇಟ್ಟಿಗೆಯ ಮನೆಗಳಲ್ಲಿ ವಾಸಿಸುತ್ತಿದ್ದರು. ಖಫಜೆ ಎಂಬಲ್ಲಿ ಒಂದುಕಡೆ 10-6.5 ಚದರ ಮೀಟರಿನಷ್ಟು ಕಿರಿದಾದ ಸ್ಥಳಗಳಲ್ಲಿ ಐದು ಕೊಠಡಿಗಳ ಮನೆಯೂ 30-20 ಚದರ ಮೀಟರಿನ ಸುತ್ತಳತೆಯ ವಿಶಾಲಪ್ರದೇಶದಲ್ಲಿ ಹತ್ತು ಕೊಠಡಿಗಳುಳ್ಳ ದೊಡ್ಡಮನೆಯೂ ಇವೆ. ಈ ದೊಡ್ಡ ಮನೆಯ ಕೆಲವು ಬಾಗಿಲುಗಳ ಮೇಲೆ ಕಮಾನಿನ ನೆತ್ತಿಗಲ್ಲುಗಳು ಇವೆ. ಆದರೆ ಇವು ಕೇವಲ 1.5 ಮೀ. ಎತ್ತರವಾಗಿದ್ದುವು. ಕೊಠಡಿಗಳಿಗೆ ಬೆಳಕು ಸಣ್ಣ ಕಿಟಕಿಗಳಿಂದ ಬರುತ್ತಿತ್ತು. ಈ ಮನೆಗಳಲ್ಲಿ ಪ್ರತ್ಯೇಕವಾದ ಅಡುಗೆಯ ಕೊಠಡಿಗಳು ಕೂಡ ಇದ್ದುವು. ಮನೆಗಳು ಅಡಕವಾದ ವಠಾರಗಳಲ್ಲಿ ವಿಂಗಡಿಸಲ್ಪಟ್ಟು ಇವುಗಳ ನಡುವೆ ಬೀದಿಗಳೂ ಗಲ್ಲಿಗಳೂ ಹಾದುಹೋಗಿದ್ದುವು.

ಭಾರತದಲ್ಲಿ ಗೃಹ

ಬದಲಾಯಿಸಿ

ಭಾರತದಲ್ಲಿ ಕೂಡ ಆದಿ ಶಿಲಾಯುಗದಲ್ಲಿ ಮಾನವ ಆಹಾರವನ್ನು ಬೇಟೆಯಾಡಿ ಅಥವಾ ಸಂಚಯಿಸಿ ಜೀವಿಸುತ್ತಿದ್ದ. ಒಂದುಕಡೆ ನೆಲೆಯಾಗಿ ನಿಲ್ಲಲು ಈ ಸ್ಥಿತಿ ಅನುಕೂಲವಾಗಿರಲಿಲ್ಲ. ಹಲವಾರು ಶತಮಾನಗಳು ಕಳೆದ ಬಳಿಕ ಮನುಷ್ಯ ದವಸಧಾನ್ಯಗಳನ್ನು ಬೆಳೆಸಲು ಕಲಿತ. ಆಗ ಸಾಮಾಜಿಕ ಜೀವನ ಆರಂಭಗೊಂಡು ಆತ ತನ್ನ ಸಂಸಾರದೊಡನೆ ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವುದು ಅವಶ್ಯಕವಾಯಿತು. ಇದಕ್ಕಾಗಿ ಮೊದಲು ಇವನು ನೈಸರ್ಗಿಕ ತಾಣಗಳನ್ನು ಅರಸಿದ. ಮಧ್ಯಭಾರತದ ಬಾಘೈಖೋರ್ನಲ್ಲಿರುವ ಮುಂಚಾಚಿದ ಬಂಡೆ ಇಂಥ ಒಂದು ಆಸರೆ. ಕ್ರಮೇಣ ಗುಡಿಸಲುಗಳ ರಚನೆ ಪ್ರಾರಂಭವಾಯಿತು.

ಈವರೆಗೆ ತಿಳಿದಂತೆ ಭಾರತದಲ್ಲಿ ಅತಿ ಪ್ರಾಚೀನ ಗೃಹಾವಶೇಷಗಳು ಲಭ್ಯವಾಗಿರುವುದು ಗಂಗಾನದಿ ಬಯಲಿನಲ್ಲಿರುವ ಸೂಕ್ಷ್ಮ ಶಿಲಾಯುಗದ ನೆಲೆಗಳಲ್ಲಿ (ಪ್ರ.ಶ.ಪು. 8000-5000). ಸರಾಯ್ ನಹರ್ರಾಯ್, ದಮ್ದಮ್ (ಉತ್ತರ ಪ್ರದೇಶ) ಮುಂತಾದ ನೆಲೆಗಳಲ್ಲಿ ಮಣ್ಣಿನ ನೆಲಗಟ್ಟುಗಳು ತೋರಿಬಂದಿವೆ. ಇವು ಆಯತ ಅಥವಾ ವೃತ್ತಾಕಾರದ ತಡಿಕೆ ಮನೆಗಳಾಗಿದ್ದುವು. ರಾಜಸ್ತಾನದಲ್ಲಿನ ಬಾಗೋರ್ನಲ್ಲಿಯೂ (ಪ್ರ.ಶ.ಪು. 5000) ಇದೇ ಬಗೆಯ ಅವಶೇಷಗಳು ಪ್ರಾಪ್ತವಾಗಿವೆ. ಹರಪ್ಪ ಮೊಹೆಂಜೊದಾರೊಗಳಲ್ಲಿ ಮತ್ತು ಅದೇ ಸಂಸ್ಕೃತಿಗೆ ಸೇರಿದ ಕಾಲಿಬಂಗನ್, ಲೋಥಾಲ್ ಮತ್ತಿತರ ನೆಲೆಗಳಲ್ಲಿ ನಾವು ಕಾಣುವುದು ಹೆಚ್ಚು ನಾಗರಿಕ ಜನರ ವಸತಿಗಳು (ಪ್ರ.ಶ.ಪು. 3000-2000) ಈ ವೇಳೆಗೆ ಅಲ್ಲಿನ ಜನರು ನಗರವಾಸಿಗಳಾಗಿದ್ದರು. ಜನಸಂಖ್ಯೆ ಹೆಚ್ಚಿ, ವ್ಯವಸ್ಥಿತ ಆಡಳಿತವೊಂದು ಮನೆಗಳನ್ನು ಕಟ್ಟುವುದರಲ್ಲಿಯೂ ಒಂದು ಯೋಜನೆಯನ್ನು ಅನುಸರಿಸಿದಂತೆ ಕಂಡುಬರುತ್ತದೆ.

ನಗರವನ್ನು ರಕ್ಷಿಸಲು ಭದ್ರವಾದ ಮತ್ತು ಎತ್ತರವಾದ ಕೋಟೆಯ ಪ್ರಾಕಾರವಿತ್ತು. ನಗರದಲ್ಲಿ ಅಚ್ಚುಕಟ್ಟಾದ ಕೇರಿಗಳನ್ನೂ ವಸತಿಗಳನ್ನೂ ಏರ್ಪಡಿಸಿದ್ದರು. ಮುಖ್ಯಬೀದಿಗಳು ಉದ್ದಕ್ಕೆ ಪೂರ್ವ ಪಶ್ಚಿಮ, ದಕ್ಷಿಣೋತ್ತರವಾಗಿ ಸರಳರೇಖೆಯಲ್ಲಿ ಹಬ್ಬಿದ್ದುವು. ಒಂದೊಂದು ಬೀದಿಗೂ ಒಂದೊಂದು ಸಾರ್ವಜನಿಕ ಬಾವಿ ಇತ್ತು. ಬಾವಿಯ ಸುತ್ತಲೂ ನೀರು ನಿಲ್ಲದೆ ಹರಿದುಹೋಗುವಂತೆ ಇಳಿಜಾರಾದ ನೆಲಗಟ್ಟು ಮಾಡಲಾಗಿತ್ತು. ಈ ಬೀದಿಯ ಪಕ್ಕಕ್ಕೆ ಓರಣವಾದ ಮನೆಗಳ ಸಾಲುಗಳಿದ್ದುವು. ಮನೆಮನೆಗೂ ಸಾಮಾನ್ಯವಾಗಿ ಒಂದು ಅಂಗಳ, ಮೂರು ನಾಲ್ಕು ಕೋಣೆಗಳು, ಒಂದು ಬಾವಿ, ಬಚ್ಚಲುಮನೆ ಮತ್ತು ಚರಂಡಿಯ ಸೌಕರ್ಯ ಇದ್ದುವು. ಸಾಮಾನ್ಯವಾಗಿ ಸಣ್ಣಮನೆಯ ವಿಸ್ತೀರ್ಣ 24x11 ಚ.ಮೀ. ಸಿರಿವಂತರ ಕೆಲವು ಮನೆಗಳಲ್ಲಿ ಎರಡು ಅಂತಸ್ತುಗಳೂ ಹಲವು ಕೋಣೆಗಳೂ ಇದ್ದುವು. ಮೇಲಿನ ಅಂತಸ್ತಿನಲ್ಲೂ ಸ್ನಾನದ ಕೋಣೆಗಳಿದ್ದು ಅಲ್ಲಿಂದ ನೀರು ಕೆಳಗೆ ಹರಿದುಹೋಗಲು ಮಣ್ಣಿನ ಕೊಳವೆಗಳನ್ನು ಜೋಡಿಸಲಾಗಿತ್ತು. ಕಟ್ಟಡಗಳು ಮುಂದಕ್ಕೆ ಚಾಚಿಬಂದು ಬೀದಿ ಗಳನ್ನು ಆಕ್ರಮಿಸುವಂತೆ ಇರಲಿಲ್ಲ. ಮನೆಗಳು ಸರಳವೂ ಪ್ರಯೋಜನಾತ್ಮಕವೂ ಆಗಿದ್ದುವು. ಇವುಗಳ ಹೊರ ಭಾಗ ಬೋಳು ಬೋಳಾಗಿತ್ತು. ಈ ಮನೆಗಳಿಗೆ ಬಾಗಿಲು ಮುಖ್ಯ ರಸ್ತೆಯಿಂದಿರಲಿಲ್ಲ, ಪಕ್ಕದ ಓಣಿಯಿಂದ ಇದ್ದುವು. ಹೊರಭಾಗದಲ್ಲಿ ಕಿಟಕಿಗಳು ಇರಲಿಲ್ಲ. ಕೊಠಡಿಗಳ ಮಾಳಿಗೆಗಳ ಮೇಲೆ ಜಾಲಂದರದ ಕಿಟಕಿಗಳಿದ್ದುವು. ಇವುಗಳ ಮೂಲಕವೂ ಮನೆಗೆ ಸಾಕಷ್ಟು ಗಾಳಿ, ಬೆಳಕು ದೊರೆಯುತ್ತಿದ್ದುವು. ಮನೆಗೆ ದೃಢವಾದ ನೆಲಗಟ್ಟು ಇದ್ದು ಕೊಳಚೆನೀರು ನೆಲದಲ್ಲಿ ಜಿನುಗದಂತೆ ಮಡಕೆಯ ತುಂಡುಗಳಿಂದ ಬೆಸೆಯಲಾಗಿತ್ತು. ಮನೆಯ ಚರಂಡಿಗಳು ಬೀದಿಯ ಚರಂಡಿಗಳಿಗೆ ಕೂಡುತ್ತಿದ್ದುವು. ಇಂಥ ಹಲವು ಬೀದಿಯ ಚರಂಡಿಗಳ ನೀರು ಮಹಾಚರಂಡಿಯಲ್ಲಿ ಪ್ರವೇಶಿಸಿ ನದಿಗೆ ಸೇರುತ್ತಿತ್ತು.

ಸಾರ್ವಜನಿಕ ಬಾವಿಗಳಂತೆ ಅಲ್ಲಲ್ಲಿ ಸಾರ್ವಜನಿಕ ಸ್ನಾನಗೃಹಗಳು ಕೂಡ ಇದ್ದುವು. ಮುಖ್ಯವಾಗಿ 54.9 ಮೀ ಉದ್ದ ಮತ್ತು 32.9 ಮೀ ಅಗಲವಿರುವ ಒಂದು ವಿಶಾಲವಾದ ಸ್ನಾನಗೃಹ ಮೊಹೆಂಜೊದಾರೊದಲ್ಲಿ ಕಂಡುಬಂದಿದೆ. ಇದರ ನಡುವೆ 11.9 x 7 ಚ.ಮೀ.ಗಳ ಮತ್ತು 2.4 ಮೀ ಆಳದ ಸ್ನಾನದ ಕೊಳವಿತ್ತು. ಅದಕ್ಕೆ ಸುತ್ತಲೂ ಪಡಸಾಲೆಗಳು, ಬರಹೋಗಲು ಸಾಲುಮೆಟ್ಟಲುಗಳು, ಆರು ಬಾಗಿಲುಗಳು ಇದ್ದುವು. ಸುತ್ತಲಿನ ಕೋಣೆಗಳಲ್ಲೂ ಹಲವಕ್ಕೆ ಕೊಳವೆಗಳ ಮೂಲಕ ಹವೆ ಬರುವಂತೆ ಮಾಡಿದ ಆವಿಸ್ನಾನದ ಅನುಕೂಲತೆ ಮಾಡಲಾಗಿತ್ತು. ಹರಪ್ಪದಲ್ಲಿ ಒಂದೇ ಅಳತೆಯಲ್ಲಿ ಕಟ್ಟಲಾದ ನೀಳಚೌಕದ ಏಳುಮನೆಗಳು, ಎರಡು ವಠಾರಗಳು ಗೋಚರವಾಗಿವೆ. ಒಂದೊಂದು ಮನೆಯಲ್ಲೂ ಎರಡು ಕೊಠಡಿಗಳು ಮತ್ತು ಒಂದು ಅಂಗಳ ಇವೆ. ಇವು ಕೆಲಸಗಾರರಿಗಾಗಿ ಕಟ್ಟಿದ ವಾಸಗೃಹಗಳಾಗಿರಬಹುದು. ಈ ನಾಗರಿಕತೆ ಪ್ರ.ಶ.ಪು. ಸುಮಾರು 2700 ವರ್ಷಗಳ ಹಿಂದೆ ಉಚ್ಛಯಿಸಲು ಪ್ರಾರಂಭವಾಗಿ ಸಾವಿರ ವರ್ಷಗಳ ಕಾಲ ಉತ್ಕರ್ಷಸ್ಥಿತಿಯಲ್ಲಿದ್ದು ಪ್ರ.ಶ.ಪು. 1500ರ ವೇಳೆಗೆ ಅವನತಿ ಹೊಂದಿತೆಂದು ಊಹಿಸಲಾಗಿದೆ. ಈ ನಾಗರಿಕತೆಗೂ ಬಲೂಚಿಸ್ತಾನದಲ್ಲಿ ಕಂಡು ಬಂದ ಹರಪ್ಪಪೂರ್ವ ಸಂಸ್ಕೃತಿಗೂ ಸಂಬಂಧವಿಲ್ಲದಂಥ ನವಶಿಲಾಯುಗದ ವಸತಿಗಳನ್ನು ಕೆಲವು ಇಲ್ಲಿ ನಿರೂಪಿಸಬಹುದು. ಕಾಶ್ಮೀರದ ಬೂರ್ಜಹೋಮ್ನಲ್ಲಿ ಜನರು ಆಳವಾಗಿ ಅಗೆದ ಗುಂಡಿಗಳಲ್ಲಿ ವಾಸಿಸುತ್ತಿದ್ದರೆಂಬುದು ಈಗ ತಿಳಿದಿದೆ. ಮೇಲುಭಾಗದಲ್ಲಿ ಕಿರಿದಾಗಿದ್ದು ಒಳಹೋದಂತೆಲ್ಲ ವಿಶಾಲವಾಗುವಂತೆ ಅವನ್ನು ತೋಡಲಾಗಿದೆ. ಕೆಲವೊಮ್ಮೆ ಈ ಗುಂಡಿಗಳಲ್ಲಿ ಇಳಿಯಲು ಒಂದು ಮೀಟರಿನ ಆಳದ ವರೆಗೂ ಅಲ್ಲಲ್ಲಿ ಮೆಟ್ಟಿಲುಗಳಿದ್ದುವು. ಅನಂತರ ಏಣಿಯ ಮೂಲಕ ಇಳಿಯುತ್ತಿದ್ದಿರಬಹುದು. ಗುಂಡಿಯ ಸುತ್ತಲಿನ ಗೋಡೆಯನ್ನೂ ನೆಲವನ್ನೂ ಮಣ್ಣಿನಿಂದ ಗಿಲಾವು ಮಾಡಲಾಗಿದೆ. ಗುಂಡಿಯ ಹೊರ ಎಲ್ಲೆಯ ಸುತ್ತಲೂ ಅಲ್ಲಲ್ಲಿ ಕಂಬಗಳನ್ನು ನೆಡಲು ಸಣ್ಣ ರಂಧ್ರಗಳನ್ನು ಮಾಡಿರುವುದನ್ನು ಗಮನಿಸಿದರೆ ಇದಕ್ಕೆ ಶಂಕುವಿನ ಆಕಾರದ ಮೇಲ್ಛಾವಣಿ ಇದ್ದಿರಬಹುದೆನಿಸುತ್ತದೆ. ಇಂಥ ಗುಂಡಿಗಳ ತಳದಲ್ಲಿ ಮತ್ತು ಗುಂಡಿಗಳ ಪಕ್ಕದಲ್ಲಿ ಬೂದಿಯ ಅವಶೇಷಗಳು ದೊರೆತಿದ್ದು ಅಲ್ಲಿ ಒಲೆಗಳನ್ನು ಹೂಡಿರಬಹುದಾದ ಕುರುಹುಗಳೂ ಇವೆ. ಅತಿದೊಡ್ಡ ಗುಂಡಿಯ ಗೃಹದ ಆಳ 3.96 ಮೀ ವ್ಯಾಸ 4.57 ಮೀ ಇದರ ಮುಖ ಮಾತ್ರ 2.74 ಮೀ ಈ ಗೃಹಗಳು ಆ ಪ್ರದೇಶದ ವಾತಾವರಣವನ್ನು ಅನುಸರಿಸಿ ಜನರಿಗೆ ಚಳಿಯಿಂದ ರಕ್ಷಣೆಯನ್ನು ಕೊಡಲು ಯೋಗ್ಯವಾಗಿದ್ದಿರಬೇಕು. ಆದರೆ ನವಶಿಲಾಯುಗಕ್ಕೆ ಸೇರಿದ ದಖನ್ ಪ್ರದೇಶದ ಜನ ವಾಸಿಸಲು ಆರಿಸಿದ್ದು ಎತ್ತರದ ಗುಡ್ಡಗಳು. ಅವರ ಆವಶ್ಯಕತೆಗಳನ್ನು ಪೂರೈಸಲು ಬೇಕಾದ ಸೌಲಭ್ಯಗಳನ್ನು ಇವು ಪಡೆದಿದ್ದುವು. ಬೇಸಾಯಕ್ಕೆ ಅಗತ್ಯವಾದ ಅತಿವಿಸ್ತಾರವಾಗಿಲ್ಲದ ಸಣ್ಣ ಪರಿಮಾಣದ ಭೂಮಿ, ಪಶುಪಾಲನೆಗೆ ತಕ್ಕ ಅನುಕೂಲತೆ, ಹೆಚ್ಚು ಮಳೆಯಿಲ್ಲದ ತಮಗೆ ಸಾಕಷ್ಟು ನೀರಿನ ಪೂರೈಕೆ ಆಗುವಂಥ ಭೂಸನ್ನಿವೇಶ-ಇವು ಈ ಜನ ತಮ್ಮ ವಸತಿಗೆ ಸ್ಥಳವನ್ನು ಆಯ್ದುಕೊಳ್ಳುವ ಮುನ್ನ ಗಮನಿಸುತ್ತಿದ್ದ ಅಂಶಗಳು. ಕರ್ನಾಟಕಕ್ಕೇ ಸೀಮಿತವಾದಂತೆ ಇದುವರೆಗೆ ದೊರೆತಿರುವ ಇಂಥ ನೆಲೆಗಳಲ್ಲಿ ಗುಡ್ಡಗಳ ಮೇಲಿನವೇ ಸಂಖ್ಯೆಯಲ್ಲಿ ಹೆಚ್ಚಾಗಿವೆ. ಆದರೆ ಕೆಲವು ನೆಲೆಗಳು ನದೀತೀರದಲ್ಲಿ ಸಿಕ್ಕಿವೆ. ಫಲವತ್ತಾದ ಭೂಮಿ ಹಾಗೂ ಜಲಸೌಕರ್ಯ ಮತ್ತು ಸುಲಭವಾಗಿ ದೊರೆಯುವ ಮೀನು ಮುಂತಾದ ಆಹಾರ ಸಾಮಗ್ರಿಗಳು ಇದಕ್ಕೆ ಕಾರಣ. ಹಲವಾರು ನೆಲೆಗಳಲ್ಲಿ ಗುಡಿಸಲಿನ ಅವಶೇಷಗಳು ಕಾಣಸಿಕ್ಕಿವೆ. ಭೂಮಿಯನ್ನು ಅಗೆದ ಬಳಿಕವೇ ಇಂಥ ಕಟ್ಟಡದ ಅವಶೇಷಗಳು ಕಂಡಿವೆ. ಬ್ರಹ್ಮಗಿರಿಯಲ್ಲಿ ಕಂಡುಬಂದಿರುವ ಕಂಬಗಳನ್ನು ನಿಲ್ಲಿಸಲು ಮಾಡಿದ ನೆಲದಲ್ಲಿನ ಗುಳಿಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರೆ ಮನೆಗಳನ್ನು ಮರದ ಕಂಬ ಮತ್ತು ಸೊಪ್ಪಿನ ತಡಿಕೆ ಗೋಡೆಗಳಿಂದ ಕಟ್ಟಿ ಸುತ್ತಲೂ ಒರಟಾದ ಕಲ್ಲುಗಳನ್ನು ಜೋಡಿಸುತ್ತಿದ್ದರೆಂದು ತಿಳಿದುಬರುತ್ತದೆ. ಒಂದು ಕಡೆ ಇಂಥ ಗುಳಿಗಳು ಒಂದು ನೀಳವಾದ ಸಾಲಿನಲ್ಲಿ ಕಂಡುಬಂದುವು. ಬಹುಶಃ ಇದು ಕೆಲವು ಮನೆಗಳು ಆಯತಾಕಾರದಲ್ಲಿದ್ದುವೆಂಬುದನ್ನು ಸೂಚಿಸುತ್ತದೆ. ಮಸ್ಕಿಯಲ್ಲಿ ತೋರಿಬಂದ ದಮ್ಮಸ್ಸು ಮಾಡಿದ ಮಣ್ಣಿನ ನೆಲಗಟ್ಟು ಹಾಗೂ ಗುಳಿಗಳು ಅಲ್ಲಿನ ಮನೆಗಳನ್ನು ಸಹ ಮರದ ಕಂಬಗಳ ಸಹಾಯದಿಂದ ಕಟ್ಟಿದ್ದರೆಂಬುದನ್ನು ಸೂಚಿಸುತ್ತವೆ. ತೆಕ್ಕಲಕೋಟದಲ್ಲಿ ಮನೆಗಳ ನೆಲಗಟ್ಟಿಗೆ ಕಲ್ಲಿನ ಚೂರುಗಳನ್ನು ತುಂಬಿಸಿ ಮಣ್ಣಿನ ಹೊದಿಕೆಯಿಂದ ನೆಲವನ್ನು ದಮ್ಮಸ್ಸು ಮಾಡಿದುದು ಕಂಡುಬಂದಿದೆ. 6.09 ಮೀ ವ್ಯಾಸದ ಈ ಮನೆ ಆಕಾರದಲ್ಲಿ ದುಂಡಾಗಿತ್ತು. ಸಂಗನಕಲ್ಲಿನಲ್ಲಿನ ಉತ್ಖನನದಲ್ಲಿ ಬೊಂಬು-ಬಿದಿರಿನ ಪಡಿಯಚ್ಚನ್ನೊಳಗೊಂಡ ಮಣ್ಣಿನ ಭಾಗಗಳು ದೊರೆತಿವೆ. ಸೀಳಿದ ಬೊಂಬಿನ ಜಾಳಿಗೆಗಳನ್ನು 1.2-1.8 ಮೀ ಎತ್ತರದ ಗೋಡೆಗಳ ಮೇಲೆ ನಿಲ್ಲಿಸಿ ಆ ಜಾಳಿಗೆಗಳಿಗೆ ಮಣ್ಣನ್ನು ಮೆತ್ತುತ್ತಿದ್ದರೆಂದು ಇದರಿಂದ ಸ್ಪಷ್ಟವಾಗುತ್ತದೆ. ಮೇಲ್ಛಾವಣಿ ವೃತ್ತಾಕಾರದಲ್ಲಿತ್ತು. ಈ ನೆಲೆಗಳ ಕಾಲ ಪ್ರ.ಶ.ಪು. ಸುಮಾರು 1700 - 1500 ವರ್ಷ ಗಳೆಂದು ನಿರ್ಣಯಿಸಲಾಗಿದೆ. ಇದು ಪೂರ್ವಭಾವೀ ಇತಿಹಾಸಕಾಲದ ಗೃಹದ ಕತೆ.

ಆರ್ಯರ ಕಾಲದ ಭಾರತದಲ್ಲಿ ನಾವು ಕಾಣುವುದು ಗ್ರಾಮ್ಯಜೀವನವನ್ನು. ಆರ್ಯರನ್ನು ಕುರಿತು ನಮಗೆ ತಿಳಿದಿರುವುದೆಲ್ಲ ಅವರು ರಚಿಸಿದ ವೇದ ಮತ್ತು ತತ್ಸಂಬಂಧವಾದ ಇತರ ಸಾಹಿತ್ಯಗಳಿಂದ ಮಾತ್ರವೆ. ಋಗ್ವೇದದಲ್ಲಿ (ಪ್ರ.ಶ.ಪು. 1500-1000) ಪುರ ಎಂಬ ಪದದ ಪ್ರಯೋಗವಿದ್ದರೂ ಅದಕ್ಕೆ ಆ ಕಾಲದಲ್ಲಿ ನಗರವೆಂಬ ಅರ್ಥವಿದ್ದಂತೆ ತೋರುವುದಿಲ್ಲ. ಆ ಪದ ಗ್ರಾಮದ ಹೊರಗೆ ಕಟ್ಟಲಾದ ಮಣ್ಣಿನ ಕೋಟೆಯ ಗೋಡೆಗೆ ಅನ್ವಯಿಸುವಂತೆ ಕಾಣುತ್ತದೆ. ಅಂದು ಗ್ರಾಮಗಳಲ್ಲಿ ಮನೆಗಳನ್ನು ಮರದಿಂದ ಕಟ್ಟುತ್ತಿದ್ದರು. ತೊಲೆಗಳಿಗೆ ಬಿದಿರನ್ನು ಉಪಯೋಗಿಸುತ್ತಿದ್ದರು. ಸಂಹಿತೆಗಳ ಕಾಲದಲ್ಲಿ (ಪ್ರ.ಶ.ಪು. 1000-700) ಹಮರ್ಯ್‌ವೆಂಬುದು ಹಲವಾರು ಕೊಠಡಿಗಳುಳ್ಳ ದೊಡ್ಡಮನೆಯನ್ನು ಸೂಚಿಸುವುದಕ್ಕಾಗಿ ಉಪಯೋಗವಾದ ಪದ. ವೇಶ್ಮ ಎಂಬುದು ಸಾಮಾನ್ಯ ಜನರ ಉಪಯೋಗಕ್ಕಾಗಿ ಕಟ್ಟಿದ ಸಣ್ಣಮನೆ. ಹಮರ್ಯ್‌ದಲ್ಲಿ ಮನುಷ್ಯರ ವಾಸಕ್ಕೆ ಕೋಣೆಗಳಲ್ಲದೆ, ಮನೆಯೊಡೆಯನಿಗೆ ಸೇರಿದ ದನಕರುಗಳ, ಪ್ರಾಣಿಗಳ ವಾಸಕ್ಕೆ ಯೋಗ್ಯವಾದ ದೊಡ್ಡಿಗಳೂ ಇರುತ್ತಿದ್ದುವು. ಆಗಲೂ ಮನೆಗಳನ್ನು ಮರದಿಂದಲೇ ಕಟ್ಟುತ್ತಿದ್ದರು. ನಾಲ್ಕು ಕಂಬಗಳನ್ನು ನಿಲ್ಲಿಸಿ ಒಂದು ಕೋನದಲ್ಲಿ ಅವುಗಳ ತೊಲೆಗಳನ್ನು ಬಿಗಿದು ಬಿದಿರಿನ ಅಡ್ಡಪಟ್ಟಿಗಳಿಗೆ ಸೇರಿದಂತೆ ಒಂದು ಮೇಲ್ಛಾವಣಿಯನ್ನು ಎಬ್ಬಿಸುತ್ತಿದ್ದರು. ಹುಲ್ಲಿನ ಮೆದೆಗಳನ್ನು ಬಿದಿರು ಸೀಳುಗಳೊಡನೆ ಸೇರಿಸಿ ಗೋಡೆಗಳನ್ನು ಕಟ್ಟುತ್ತಿದ್ದರು. ತೈತ್ತಿರೀಯ ಅರಣ್ಯಕದಲ್ಲಿ ಧನಧಾನೀ ಎಂಬ ಪದ ಉಲ್ಲೇಖವಾಗಿದೆ. ಇದು ಉಗ್ರಾಣಕ್ಕೆ ಕೊಟ್ಟ ಹೆಸರಾಗಿರಬಹುದು. ಅಥರ್ವವೇದದಲ್ಲಿ ಹೇಳಲಾದ ಪತ್ನೀಸದನ (ಸ್ತ್ರೀಯರ ವಾಸಗೃಹ) ಎಂಬುದು ಸ್ತ್ರೀಯರಿಗಾಗಿಯೇ ಪ್ರತ್ಯೇಕವಾದ ವಾಸಸ್ಥಾನವಿದ್ದಿತೆಂಬುದನ್ನು ಸೂಚಿಸುತ್ತದೆ.


ಬೌದ್ಧರ ಸಾಹಿತ್ಯ ಗ್ರಂಥಗಳಾದ ಚುಲ್ಲವಗ್ಗ, ಮಹಾವಗ್ಗ ಮುಂತಾದವುಗಳಲ್ಲಿ ಆ ಕಾಲದ (ಪ್ರ.ಶ.ಪು. 6ನೆಯ ಶತಮಾನ ಮತ್ತು ತರುವಾಯ) ನಿವಾಸಿಗಳಿಗೆ ಸಂಬಂಧಿಸಿದ ಹೇಳಿಕೆಗಳಿವೆ. ಇವುಗಳಿಂದ ಆಗಲೂ ಗೃಹಗಳಲ್ಲಿ ಸಾಮಾನ್ಯವಾಗಿ ಹಲವಾರು ಕೋಣೆಗಳು ಇದ್ದು ಒಂದೊಂದನ್ನೂ ಒಂದೊಂದು ಪ್ರತ್ಯೇಕ ಕೆಲಸಕ್ಕಾಗಿ, ಮಲಗುವ ಕೋಣೆ, ಪೂಜಾಗೃಹ, ಉಗ್ರಾಣ, ಪಡಸಾಲೆ, ಊಟದ ಕೋಣೆ ಇತ್ಯಾದಿ, ಉಪಯೋಗಿಸುತ್ತಿದ್ದರೆಂಬ ಅಂಶ ಗೊತ್ತಾಗುತ್ತದೆ. ಅಲ್ಲದೆ 2-3 ಉಪ್ಪರಿಗೆಗಳುಳ್ಳ ಗೃಹಗಳನ್ನೂ ಅಂದು ಕಟ್ಟುತ್ತಿದ್ದರು. ಆದರೆ ಅವುಗಳಿಗಾಗಿ ಮರವನ್ನಷ್ಟೇ ಉಪಯೋಗಿಸಿದ್ದ ಕಾರಣ ಅವುಗಳ ಅವಶೇಷಗಳಾವುವೂ ಕಂಡುಬಂದಿಲ್ಲ. ಆದರೆ ಬಾರ್ಹುತ್, ಸಾಂಚಿ, ಅಮರಾವತಿ, ಮಥುರ ಮುಂತಾದ ಸ್ಥಳಗಳಲ್ಲಿ ಸ್ತೂಪಗಳಲ್ಲಿನ ಉಬ್ಬುಚಿತ್ರಗಳಲ್ಲಿ ಆ ಕಾಲದ ಕಟ್ಟಡಗಳ ಮಾದರಿಗಳನ್ನು ಕಾಣಬಹುದು. ಬಂಡಿಯ ಕಮಾನಿನ ಚಾವಣಿಗಳು ಕಟ್ಟಡಗಳ ಮೇಲೆ ಚಿತ್ರಿತವಾಗಿವೆ. ಕಮಾನಿನ ಎರಡು ತುದಿಗಳಲ್ಲೂ ತ್ರಿಕೋನಾಕಾರಗಳಿದ್ದು ಮಧ್ಯದಲ್ಲಿ ಚೂಪಾದ ಕಳಶ ಮೇಲಕ್ಕೆ ಎದ್ದಿದೆ. ಇದು ಅಂಗಳದ ಮುಂದಿನ ದ್ವಾರವಾಗಿರಬಹುದು. ಕೆಲವು ಕಡೆಗಳಲ್ಲಿ ಚಿತ್ರಾಲಂಕರಣವಿರುವ ಕಂಬಗಳ ಮೇಲೆ ನಿಲ್ಲಿಸಲ್ಪಟ್ಟ ತೋರಣಗಳು ಇಂಥ ದ್ವಾರಗಳಾಗಿದ್ದುವು. ಉಪ್ಪರಿಗೆಗಳಲ್ಲಿ ಕಟಾಂಜನವಿರುವ ಆಲಿಂದಗಳಿದ್ದುವು.


ಗೃಹರಚನೆಯಲ್ಲಿ ಇಷ್ಟೆಲ್ಲ ಪ್ರಗತಿ ಆಗಿದ್ದರೂ ಭಾರತದಲ್ಲಿ ಸಾರ್ವಜನಿಕ ಕಟ್ಟಡಗಳು ಮತ್ತು ದೇವಾಲಯಗಳನ್ನು ಹೊರತುಪಡಿಸಿ ವಾಸಗೃಹ ಮುಂತಾದ ಇತರ ಕಟ್ಟಡಗಳಿಗೆ ಮರಮುಟ್ಟುಗಳೇ ಮೊದಲಾದ ನಾಶವಾಗುವಂಥ ಸಾಮಗ್ರಿಗಳನ್ನು ಬಳಸಿದುದರ ಪರಿಣಾಮವಾಗಿ ಅವುಗಳ ಅವಶೇಷಗಳು ಇಂದು ಉಳಿದಿಲ್ಲ. ಸಾಹಿತ್ಯದಲ್ಲಿಯೂ ಪರದೇಶ ಯಾತ್ರಿಕರ ಬರೆವಣಿಗೆಗಳಲ್ಲಿಯೂ ರಾಜಧಾನಿಗಳ ಮತ್ತು ಇತರ ಪಟ್ಟಣಗಳ ವಿವರಣೆಗಳು ಕಂಡುಬರುತ್ತವೆ. ಆದರೆ ಅವುಗಳಿಂದ ಆ ಕಾಲದ ವಾಸಸ್ಥಾನಗಳ ಮತ್ತು ಅರಮನೆಗಳ ಸ್ಪಷ್ಟಚಿತ್ರ ಮೂಡುವುದು ಕಠಿಣ. ಕೆಲವು ಇತಿಹಾಸಪ್ರಸಿದ್ಧ ನಗರಗಳು ಪುರಾತತ್ತ್ವಶೋಧಕನ ಗುದ್ದಲಿಗೆ ದೊರೆತಿವೆ. ಪಾಟಲೀಪುತ್ರ, ಹಸ್ತಿನಾಪುರ, ತಕ್ಷಶಿಲ ಮುಂತಾದವು ಇವುಗಳಲ್ಲಿ ಕೆಲವು. ಆದರೆ ಇಲ್ಲಿಯೂ ಕೇವಲ ಅವಶೇಷಗಳು ಉಳಿದಿದ್ದು ಅಂದಿನ ನಗರಯೋಜನೆ, ಒಳಚರಂಡಿ ವ್ಯವಸ್ಥೆ ಇತ್ಯಾದಿಗಳನ್ನು ಕುರಿತು ಮಾತ್ರ ಹೆಚ್ಚಿಗೆ ತಿಳಿಯಬಹುದಾಗಿದೆ. ಗೃಹವಾಸ್ತುವಿಗೆ ಸಂಬಂಧಿಸಿದ ಹಲವಾರು ವೈಜ್ಞಾನಿಕಮಟ್ಟದ ಗ್ರಂಥಗಳು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇವೆ. ಸಮರಾಂಗಣಸೂತ್ರಧಾರ, ಅಪರಾಜಿತಪೃಚ್ಛಾ, ಶಿಲ್ಪರತ್ನ, ಮಾನಸಾರ, ವಿಶ್ವಕರ್ಮ ವಾಸ್ತುಶಾಸ್ತ್ರ, ಮಯಮತ-ಇವು ಅಂಥ ಕೆಲವು ಗ್ರಂಥಗಳು. ಇವುಗಳಲ್ಲಿ ಗೃಹನಿರ್ಮಾಣಕ್ಕೆ ಮತ್ತು ಗೃಹವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನು ನೋಡಬಹುದು. ಸಮರಾಂಗಣಸೂತ್ರಧಾರ ಸು. 11-12ನೆಯ ಶತಮಾನಗಳಲ್ಲಿ ರಚಿತವಾದ ಗ್ರಂಥ. ಇದರಲ್ಲಿ ಕಟ್ಟಡಗಳನ್ನು ಶಾಲಾ, ರಾಜವೇಶ್ಮ, ಪ್ರಾಸಾದ, ಸಭಾ ಮತ್ತು ವಾಜಿಗಜಗೋ ಶಾಲಾ ಎಂದು ವಿಭಾಗಮಾಡಲಾಗಿದೆ. ಇವುಗಳಲ್ಲಿ ಶಾಲಾ ಎಂಬುದು ಸಮಾಜದ ಸಾಮಾನ್ಯ ತರಗತಿಯ ಪ್ರಜೆ ವಾಸಿಸುತ್ತಿದ್ದ ಮನೆ. ಇದನ್ನು ಮರದಿಂದಲೇ ಕಟ್ಟಲಾಗುತ್ತಿತ್ತೆಂದು ಹೇಳಿದೆ. ಎಂದರೆ 11-12ನೆಯ ಶತಮಾನಗಳಲ್ಲಿಯೂ ಗೃಹಗಳಿಗಾಗಿ ಬಳಸುತ್ತಿದ್ದ ವಸ್ತುವಿನಲ್ಲಿ ಬದಲಾವಣೆಯಾಗಿರಲಿಲ್ಲ. ಹಾಗೆಂದೇ ಕರ್ನಾಟಕದಲ್ಲಿಯೂ ಸುಪ್ರಸಿದ್ಧ ರಾಜಧಾನಿಗಳಾಗಿದ್ದ ಬಾದಾಮಿ, ಮಳಖೇಡ, ಕಲ್ಯಾಣ, ಬೇಲೂರು, ಹಳೇಬೀಡು, ಹಂಪೆ ಮುಂತಾದ ಪಟ್ಟಣಗಳು ಇಂದು ಹಾಳುಬಿದ್ದ ಕೊಂಪೆಗಳಾಗಿವೆ.

17-18ನೆಯ ಶತಮಾನದ ತರುವಾಯವೇ ಭಾರತದಲ್ಲಿ ಸಾರ್ವಜನಿಕ ಕಟ್ಟಡಗಳು, ಕಚೇರಿಗಳು ಮತ್ತು ಮನೆಗಳಿಗೆ ಕಲ್ಲು, ಕಬ್ಬಿಣ ಮುಂತಾದ ಹೆಚ್ಚು ಶಾಶ್ವತವಾದ ವಸ್ತುಗಳನ್ನು ಉಪಯೋಗಿಸತೊಡಗಿದರೆನ್ನಬಹುದು.

ಮನೆಯ ಯೋಜನೆ

ಬದಲಾಯಿಸಿ

ವರ್ತಮಾನ ಕಾಲದಲ್ಲಿ ಮನೆಯ ಪರಿಕಲ್ಪನೆ ಉಪಯುಕ್ತತೆ, ಸೌಂದರ್ಯ ಹಾಗೂ ಭದ್ರತೆ ಎಂಬ ಮೂರು ಮುಖ್ಯ ಗುಣಗಳಿಂದ ರೂಪಿತವಾಗಿದೆ. ಅದೇ ವೇಳೆ ನಿವೇಶನ, ಸಾಮಗ್ರಿಗಳು ಹಾಗೂ ಆರ್ಥಿಕತೆ ಎಂಬ ಮೂರು ಮುಖ್ಯ ಪರಿಕರಗಳಿಂದ ಮನೆಯ ರಚನೆ ಪ್ರಭಾವಿತವಾಗಿದೆ. ಇವೆರಡರ ಯುಕ್ತ ಮೇಳವೇ ಆಧುನಿಕ ಮನೆ ಎನ್ನಬಹುದು. ಗುಡ್ಡಗಾಡುಗಳಲ್ಲಿ ದೂರ ದೂರಕ್ಕೆ ಹರಡಿ ಹೋಗಿರುವ ಒಂಟಿ ಬೀಡುಗಳು, ಹಳ್ಳಿಗಳಲ್ಲೂ ಪೇಟೆ ಪಟ್ಟಣಗಳಲ್ಲೂ ಹಿಂಡುಹಿಂಡಾಗಿ ಮೈ ತಳೆದಿರುವ ಮನೆಗಳು, ನಗರಗಳಲ್ಲಿನ ಒಂದು ಅಥವಾ ಎರಡು ಕೋಣೆಗಳಿರುವ ಒಂಟಿ ಮನೆಗಳ ಸಾಲುಗಳು, ಇಂಥ ಅನೇಕ ಮನೆಗಳನ್ನೇ ಒಳಗೊಂಡಿರುವ ಹಲವಾರು ಉಪ್ಪರಿಗೆಗಳ ವಠಾರಗಳು (ಫ್ಲ್ಯಾಟ್ಸ್‌), ಶ್ರೀಮಂತರ ಭವ್ಯಸೌಧಗಳು, ಅರಮನೆಗಳು-ಇವೇ ಮುಂತಾದವು ಮನೆಯ ಭಿನ್ನ ಪ್ರರೂಪಗಳು.

ನಿವೇಶನ

ಬದಲಾಯಿಸಿ

ಒಂದು ಆವರಣದ ಇಲ್ಲವೇ ಕಕ್ಕಟ್ಟು ಗೋಡೆಯ ಒಳಗಿರುವ ಮತ್ತು ಕಾನೂನು ರೀತ್ಯ ಒಬ್ಬನ ಯಾಜಮಾನ್ಯಕ್ಕೆ ಒಳಗಾಗಿರುವ ಪ್ರದೇಶ. ಇದರ ಮೇಲೆ ಮನೆಯನ್ನು ಕಟ್ಟುತ್ತಾರೆ. ಆದ್ದರಿಂದ ಮನೆಕಟ್ಟುವ ಮೊದಲು ಇಡಬೇಕಾದ ಹೆಜ್ಜೆ ಎಂದರೆ ನಿವೇಶನದ ಆಯ್ಕೆ. ಒಬ್ಬ ವ್ಯಕ್ತಿ ಒಂದು ನಿವೇಶನವನ್ನು ಆಯುವ ಮೊದಲು ಈ ಕೆಳಗಿನ ಅಂಶಗಳನ್ನು ಪ್ರಧಾನವಾಗಿ ಗಮನಿಸಲಾಗುತ್ತದೆ. ಉದ್ಯೋಗ ಸ್ಥಳದ ಸಾಮೀಪ್ಯ: ನೀರು, ಬೆಳಕು, ಮಾರುಕಟ್ಟೆ, ಸಾರಿಗೆ, ಶಾಲೆ, ವೈದ್ಯ ಇವೇ ಮುಂತಾದ ಸೌಕರ್ಯಗಳು: ಮತ್ತು ಪರಿಸರ. ಇವೆಲ್ಲವೂ ಆರ್ಥಿಕವಾಗಿ ವ್ಯಕ್ತಿಯ ಪರಿಮಿತಿಯೊಳಗೆ ಒದಗಿ ಬಂದರೆ ಅಂಥ ನಿವೇಶನ ಅವನಿಗೆ ಒಪ್ಪಿಗೆ ಆಗುತ್ತದೆ.

ಸಾಮಗ್ರಿಗಳು

ಬದಲಾಯಿಸಿ

ಮೊದಲ ಕಾಲದಲ್ಲಿ ಮನೆಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳು ಕಲ್ಲು, ಮಣ್ಣು, ಮರಳು, ಇಟ್ಟಿಗೆ, ಜೇಡಿ, ಸುಣ್ಣ, ಮರ, ಬಿದಿರು, ಸೋಗೆ, ಹುಲ್ಲು, ಹಂಚು ಇತ್ಯಾದಿ. ಆದರೆ ಇಂದಿನ ಮನೆಗಳಿಗೆ ಬೇಕಾಗುವ ಮುಖ್ಯ ಸಾಮಗ್ರಿಗಳೆಂದರೆ ಕಲ್ಲು, ಇಟ್ಟಿಗೆ, ಮರಳು, ಸಿಮೆಂಟ್, ಕಬ್ಬಿಣ, ಸುಣ್ಣ ಇತ್ಯಾದಿ. ಇವುಗಳ ಬಳಕೆಯಿಂದ ಮನೆಯನ್ನು ಭದ್ರವಾಗಿಯೂ ಶೀಘ್ರವಾಗಿಯೂ ನಾಜೂಕಾಗಿಯೂ ಕಟ್ಟಬಹುದು. ಈ ಸಾಮಗ್ರಿಗಳು ಭೂರಿಗಾತ್ರದಲ್ಲಿ ತಯಾರಾಗಿ ಸಾಕಷ್ಟು ಮೊತ್ತದಲ್ಲಿ ದೊರೆಯುತ್ತವೆ ಕೂಡ. ಹೀಗಾಗಿ ಮನೆಗಳ ಆಲೇಖ್ಯ ಹಾಗೂ ರಚನೆಗಳಲ್ಲಿ ಒಂದು ಆಂದೋಳನವೇ ಉಂಟಾಯಿತು. ಪ್ರಸಕ್ತ ಶತಮಾನದ ಅವಧಿಯಲ್ಲಿ ಕಟ್ಟಲಾದ ಭಿನ್ನಪ್ರರೂಪಗಳ ಮನೆಗಳನ್ನು ಹೋಲಿಸಿ ನೋಡಿದಾಗ ಆಧುನಿಕ ಮನೆಯೊಂದು ತನ್ನ ಪೂರ್ವಜನಿಂದ ಹೇಗೆ ಪೂರ್ಣವಾಗಿ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಮಣ್ಣಿನ ಗೋಡೆಗಳು, ಗಾರೆ ಇಲ್ಲವೇ ಜೇಡಿಸಾರಣೆಗಳು, ಕರಿಮೆತ್ತಿದ ನೆಲ, ಹುಲ್ಲು ಮಡಲು ಇಲ್ಲವೇ ಹಂಚು ಹೊದೆಸಿದ ಮಾಡು ಇವೆ ಮುಂತಾದವು ಇಂದು ಅಚ್ಚುಕಟ್ಟಾದ ತಾರ್ಸಿ ಮಾಡಿನ ಸಿಮೆಂಟ್ ಕಾಂಕ್ರೀಟ್ ಮನೆಗಳಿಗೆ ಎಡೆಮಾಡಿಕೊಟ್ಟಿವೆ. ಮರಮುಟ್ಟುಗಳು ವ್ಯಾಪಕವಾಗಿ ಬಳಕೆ ಆಗುತ್ತಿದ್ದ ಮೊದಲಿನ ಮನೆಗಳು ಈಗ ಅಪರೂಪ. ಕಟ್ಟಡದ ಸಾಮಗ್ರಿಗಳ ಬಳಕೆಯಲ್ಲೂ ಕಟ್ಟಡದ ಒಟ್ಟು ವಿನ್ಯಾಸದಲ್ಲೂ ಅಂದಿನ ಭವ್ಯಗೃಹಗಳಲ್ಲಿ ತೋರಿಬರುವ ಭೂರಿ ವೈಪುಲ್ಯ-ಇದು ಸಾಮಗ್ರಿಗಳ ಮತ್ತು ಸ್ಥಳಾವಕಾಶದ ಅಪವ್ಯಯ ಎನ್ನಿಸುವ ಮಟ್ಟದ್ದು-ಇಂದು ಮಾಯವಾಗಿದೆ. ಆದರೆ ಅದೇ ರೀತಿ ಅಂದಿನ ಬಡವರ ಗುಹೆಗಳಂಥ ಗೂಡುಗಳೂ ಬಿಡಾರಗಳೂ ಇಂದು ಒಂದು ನಿರ್ದಿಷ್ಟ ರೂಪ ಮತ್ತು ಉಪಯುಕ್ತತೆ ಇರುವ ಮನೆಗಳಾಗಿವೆ. ದೇಶದ ಆರ್ಥಿಕ ಹವೆ ಬದಲಾದಂತೆ ಇವೆಲ್ಲ ಸಹಜವಾಗಿ ಒಡಮೂಡಿದ ವಿಕಾಸಗಳು. ಇಂದಿನ ಮನೆಗಳಲ್ಲಿ ಮರದ ಉಪಯೋಗ ಬಲು ಕಡಿಮೆ. ಬಾಗಿಲು ಕಿಟಕಿಗಳಲ್ಲಿ ಕೂಡ ಸಾಧ್ಯವಾದರೆ ಮರದ ಉಪಯೋಗವನ್ನು ಕಡಿಮೆ ಮಾಡುತ್ತಿರುವುದು ಇಂದಿನ ಪ್ರವೃತ್ತಿ. ಕಲ್ಲು, ಮಣ್ಣು, ಮರಳು ಮತ್ತು ಇಟ್ಟಿಗೆ ಸಾಮಾನ್ಯವಾಗಿ ಸ್ಥಳೀಯವಾಗಿ ಸರಿಸುಮಾರು ಅನಿರ್ಬಂಧಿತವಾಗಿ ದೊರೆಯುವ ವಸ್ತುಗಳು. ಆದರೆ ಸಿಮೆಂಟ್ ಮತ್ತು ಕಬ್ಬಿಣ ಹೀಗಲ್ಲ. ಅವು ವಿವಿಧ ಕಾರ್ಖಾನೆಗಳಲ್ಲಿ ತಯಾರಾಗಿ ದೇಶದ ಬೇರೆ ಬೇರೆ ಕಡೆಗಳಿಗೆ ಪೂರೈಕೆ ಆಗಬೇಕಾದ ಸಾಮಗ್ರಿಗಳು. ಮನೆ, ರಸ್ತೆ, ಸಾರ್ವಜನಿಕ ಕಟ್ಟಡಗಳು, ಕಟ್ಟೆ, ಕಾಲುವೆಗಳು ಇವೇ ಮುಂತಾದ ಕಾಮಗಾರಿಗಳು ದೇಶಾದ್ಯಂತ ರಭಸದಿಂದ ಸಾಗುತ್ತಿರುವಾಗ ಸಿಮೆಂಟ್ ಮತ್ತು ಕಬ್ಬಿಣದ ಪೂರೈಕೆಯಲ್ಲಿ ಕೊರತೆ ಮತ್ತು ಅಸಮರ್ಪಕತೆ ಪದೇ ಪದೇ ಕಾಣಿಸಿಕೊಂಡು ಮನೆ ಕಟ್ಟಲು ಅಡ್ಡಿಯಾಗುತ್ತಿರುವುದು ಸಾಮಾನ್ಯ ಎಲ್ಲರ ಅನುಭವ. ಹೀಗಾಗಿ ಆಯಾ ಸ್ಥಳಗಳಲ್ಲೇ ಸುಲಭವಾಗಿಯೂ ಆರ್ಥಿಕವಾಗಿಯೂ ದೊರೆಯುವ ಮಣ್ಣು, ಕಲ್ಲು, ಇಟ್ಟಿಗೆ, ಮರಳು ಸುಣ್ಣ ಮುಂತಾದವನ್ನೇ ಪ್ರಧಾನವಾಗಿ ಅವಲಂಬಿಸಿ ಸುಭದ್ರ ಮನೆಗಳನ್ನು ಏಕೆ ರಚಿಸಬಾರದು ಎಂಬ ದಿಶೆಯಲ್ಲಿ ಗೃಹರಚನಕಾರರ ಚಿಂತನೆ ಹರಿಯುತ್ತಿದೆ. ಮನೆಗೆ ಸಂಬಂಧಿಸಿದ ಗೋಡೆ ಮಾಡು ಮುಂತಾದವನ್ನು ಮೊದಲೇ ಒಂದು ಆಲೇಖ್ಯಾನುಸಾರ ತಯಾರಿಸಿಕೊಂಡು ನಿವೇಶನದ ಮೇಲೆ ಕಟ್ಟುವ ಪೂರ್ವರಚಿತ (ಫ್ರೀಫ್ಯಾಬ್ರಿಕೇಟೆಡ್) ಮನೆಗಳು, ಆಧಾರಸ್ತಂಭಗಳನ್ನು ಅಡ್ಡ ತೊಲೆ ರಿಕಾಪು ದ್ವಾರಬಂಧ ಮುಂತಾದವನ್ನು ನಿಲ್ಲಿಸಿ ಮನೆಯ ಕಂಕಾಲವನ್ನು ರಚಿಸಿ ಬಳಿಕ ಗೋಡೆಗಳನ್ನು ಲಘುವಾಗಿ ಕಟ್ಟಿ ಮಾಡಿದ ಮನೆಗಳು ಇವೇ ಮುಂತಾದವು ಇಂದಿನ ನೂತನ ವಿಧಾನಗಳು.

ಉಪಯುಕ್ತತೆ

ಬದಲಾಯಿಸಿ

ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ತಕ್ಕಷ್ಟು ಮಟ್ಟಿನ ಏಕಾಂತವನ್ನು ಒದಗಿಸುವ ನೆಲೆಯೇ ಮನೆ. ಹಜಾರ, ನಡುಮನೆ, ಕೋಣೆಗಳು, ಅಡುಗೆಮನೆ, ಶೌಚಗೃಹಗಳು, ಗೆರಾಜ್, ಕೊಟ್ಟಿಗೆ ಇವೆಲ್ಲವೂ ನಿವೇಶನದ ವಿನ್ಯಾಸವನ್ನೂ ಯಜಮಾನನ ಆವಶ್ಯಕತೆಯನ್ನೂ ಅವಲಂಬಿಸಿ ಮನೆ ಆಲೇಖ್ಯದಲ್ಲಿ ಅಡಕವಾಗಿ ಅಳವಡಿಕೆ ಗೊಂಡಿರಬೇಕು. ವಾಯುಸಂಚಾರ ಸಲೀಸಾಗಿರುವಂತೆ, ಎಲ್ಲ ಕೊಠಡಿಗಳಿಗೂ ಬೆಳಕು ಸರಿಯಾಗಿ ಬೀಳುವಂತೆ ಮತ್ತು ಮನೆಯೊಳಗೆ ಪರಸ್ಪರ ಸಂಪರ್ಕ ಸುಲಭವಾಗಿರುವಂತೆ ಕಿಟಕಿ ಬಾಗಿಲುಗಳನ್ನು ನಿಲ್ಲಿಸಬೇಕು. ಮಿತವ್ಯಯ ಸಾಧಿಸುವ ಉದ್ದೇಶದಿಂದ ಒಳಮುಚ್ಚಿಗೆಯ ಎತ್ತರವನ್ನು ಕಡಿಮೆ ಮಾಡುವ ಪ್ರವೃತ್ತಿ ಕೆಲವು ಕಡೆ ಕಂಡುಬರುತ್ತಿದೆ. ತೀರ ಚಳಿಯೂರುಗಳಲ್ಲಿ ಪ್ರಾಯಶಃ ಇದು ಸರಿ ಎನ್ನಿಸಬಹುದು. ಆದರೆ ಉಷ್ಣವಲಯದಲ್ಲಿ ಇರುವ, ಹೆಚ್ಚಾಗಿ ಸೆಕೆಗೇ ಪ್ರಸಿದ್ಧವಾಗಿರುವ ಊರುಗಳಲ್ಲಿ ಒಳಮುಚ್ಚಿಗೆಯನ್ನು ಬಲು ಕೆಳಗಿರುವಂತೆ ಕಟ್ಟಿದರೆ ಕೊಠಡಿಯೊಳಗಿನ ವಾಯು ಗಾತ್ರ ಅಷ್ಟು ಕಡಿಮೆಯಾಗಿ ಸೆಕೆ ಅಸಹನೀಯವಾಗುತ್ತದೆ. ಮನೆಯೊಳಗೆ ವಾಸಕ್ಕೆ ಆದಷ್ಟು ಹೆಚ್ಚು ಸ್ಥಳವೂ ನಡಿಗೆಗೆ ಆದಷ್ಟು ಕಡಿಮೆ ಸ್ಥಳವೂ ಒದಗುವಂತೆ ಮನೆಯ ಆಲೇಖ್ಯವನ್ನು ರಚಿಸುವುದೊಂದು ಕೌಶಲ. ಗೋಡೆಗಳಿಗೆ ಗೂಡುಗಳನ್ನು ಜೋಡಿಸು ವಾಗ, ವಿಶಾಲವಾದ ನಡುಮನೆಯನ್ನು ವಿಭಾಗಿಸಬೇಕೆಂದು ಉದ್ದೇಶಿಸಿ ಮರದ ತಡಿಕೆಗಳನ್ನು ಅಳವಡಿಸುವಾಗ, ಮೇಜುಗಳನ್ನೂ ಆಸನಗಳನ್ನೂ ಹೊಂದಿಸುವಾಗ ಉಪಯುಕ್ತತೆಯನ್ನೂ ಸೌಂದರ್ಯಪ್ರಜ್ಞೆಯನ್ನೂ ಉಳಿಸಿಕೊಂಡಿರುವುದು ಸಾಧ್ಯ. ಉದಾಹರಣೆಗೆ, ಒಂದು ಗೂಡಿನ ಬಾಗಿಲನ್ನು ತೆರೆದು ಅದನ್ನು ಮೇಜಿನಂತೆ ಉಪಯೋಗಿಸಬಹುದು. ಮಡಿಕೆ ಮಡಿಕೆಯಾಗಿರುವ ತಡಿಕೆಯನ್ನು ನಡುಕೋಣೆಯ ವಿಭಾಗೀಕರಣಕ್ಕೆ ಬಳಸಿದರೆ ಅದರ ಉಪಯೋಗ ಬೇಡವಾದಾಗ ಇದನ್ನು ಮಡಿಸಿ ಅಡಕವಾಗಿ ಒಂದು ಮೂಲೆಯಲ್ಲಿ ಪೇರಿಡಬಹುದು. ಸಾರಾಂಶವಿಷ್ಟೆ. ಒಂದು ಆಧುನಿಕ ಮನೆಯ ಒಂದೊಂದು ಬಿಡಿರಚನೆಯೂ ಉಪಯುಕ್ತತೆಯನ್ನು ಅವಲಂಬಿಸಿ ಇರುತ್ತದೆ.

ಸೌಂದರ್ಯ

ಬದಲಾಯಿಸಿ

ಮನೆ ಯಜಮಾನನ ಕಲಾದೃಷ್ಟಿಯ ಪ್ರಕಟಿತರೂಪ ಮನೆ ಆಗಿರಬೇಕು. ಉಪಯುಕ್ತತೆಯೊಂದಿಗೆ ಸೌಂದರ್ಯವನ್ನು ಸಮರಸವಾಗಿ ಹೊಂದಿಸಿ ಸಾಕಷ್ಟು ಮಿತವ್ಯಯದಿಂದಲೇ ಮನೆಯನ್ನು ಕಟ್ಟುವುದು ಸಾಧ್ಯ. ಆದರೆ ಇಲ್ಲೆಲ್ಲ ಅನೇಕ ವೇಳೆ ಮನೆಯ ಯಜಮಾನನಿಗೆ ಉಪಯುಕ್ತತೆಯನ್ನು ಕುರಿತಾಗಲೀ ಸೌಂದರ್ಯವನ್ನು ಕುರಿತಾಗಲೀ ಸ್ಪಷ್ಟಭಾವನೆ ಇರುವುದಿಲ್ಲ. ನೋಡಿದ ಹತ್ತು ಮನೆಗಳಲ್ಲಿ ಅವನು ಹತ್ತು ಗುಣಗಳ ಜೊತೆಗೆ ಹತ್ತು ದೋಷಗಳನ್ನು ಕಂಡಿರುತ್ತಾನೆ. ಈ ದೋಷಗಳನ್ನು ಕಳೆದು ಗುಣಗಳನ್ನು ಸುಸಂಗತವಾಗಿ ಮೇಳೈಸಿ ತನ್ನ ದೃಷ್ಟಿಗೆ ಅನುಸಾರವಾದ ಮನೆ ಹೇಗಿರಬೇಕು ಎಂಬ ಖಚಿತ ನಿರ್ದೇಶನ ನೀಡುವಲ್ಲಿ ಆತ ಸೋಲುತ್ತಾನೆ. ಇಂಥ ಪರಿಸ್ಥಿತಿಗಳಲ್ಲಿ ತಜ್ಞ ವಾಸ್ತುಶಿಲ್ಪಿಯ ಹಾಗೂ ಎಂಜಿನಿಯರನ ಮೊರೆ ಹೋಗುವುದೇ ಸರ್ವ ಶ್ರೇಯಸ್ಕರ. ಮೇಲುನೋಟಕ್ಕೆ ಇದು ದುಬಾರಿಯ ದಾರಿ ಅನ್ನಿಸಬಹುದು. ಆದರೆ ಮನೆ ಕಟ್ಟಿ ಮುಗಿಯುವ ವೇಳೆಗೆ ದಕ್ಷ ವಾಸ್ತುಶಿಲ್ಪಿಯ ಆಲೇಖ್ಯದಿಂದ ಸಾಧಿತವಾಗುವ ಮಿತವ್ಯಯ, ಉಪಯುಕ್ತತೆ ಹಾಗೂ ಸೌಂದರ್ಯ ವರ್ಧನೆ ಈ ನಿರ್ಧಾರ ಎಷ್ಟು ಸಮರ್ಪಕ ಎಂಬುದನ್ನು ಸಮರ್ಥಿಸದಿರವು. ಒಂದು ಉಪಯುಕ್ತ ಮನೆ ಸೌಂದರ್ಯಪೂರಿತವಾಗಿಯೂ ಇರಬಲ್ಲದು. ಮತ್ತು ವಿಲೋಮವಾಗಿ, ಒಂದು ಸುಂದರ ಮನೆ ಉಪಯುಕ್ತವಾಗಿಯೂ ಇರಬಲ್ಲುದು ಎಂಬುದನ್ನು ಮನೆ ಮಾಲೀಕರು ಮನಗಾಣಬೇಕು. ಮನೆಯ ಸುತ್ತಲೂ ಇರುವ ಜಾಗದಲ್ಲಿ ಹೂ ಮತ್ತು ತರಕಾರಿ ತೋಟಗಳನ್ನು ಬೆಳೆಸುವುದರಿಂದ ಮನೆಯ ಒಟ್ಟಂದ ವೃದ್ಧಿ ಆಗುತ್ತದೆ; ಅಲ್ಲದೆ ಈ ಹವ್ಯಾಸ ಆರ್ಥಿಕವಾಗಿ ಸ್ವಯಂಪೂರ್ಣವಾಗಿಯೂ ಇರುತ್ತದೆ.

ಕುಂಡಸಸ್ಯಗಳು

ಬದಲಾಯಿಸಿ

ಪೆಟ್ಟಿಗೆ ತರಕಾರಿಗಳು ಮುಂತಾದವು ಲಭ್ಯಜಾಗವನ್ನು ಯಜಮಾನನ ಅಭಿರುಚಿಯನ್ನು ಅವಲಂಬಿಸಿ ಬೆಳೆಸಬಹುದಾದ ಉಪಯುಕ್ತ ಪರಿಕರಗಳು.

ಭದ್ರತೆ

ಬದಲಾಯಿಸಿ

ಪರಿಸರದ ಭೌತಸನ್ನಿವೇಶದ ಜೊತೆಗೆ ಯಜಮಾನನ ವಿಶಿಷ್ಟವೃತ್ತಿ ಇಲ್ಲವೇ ಅಂತಸ್ತು ಸಹ ಭದ್ರತೆಯ ಮೇಲೆ ಪ್ರಭಾವಿಗಳು. ಜವುಗು ಪ್ರದೇಶಗಳು, ಮಳೆಗಾಲದಲ್ಲಿ ನೆರೆನೀರು ಮಗಚುವ ಸಂಭಾವ್ಯತೆಯ ನಿವೇಶನಗಳು, ಭೂಕಂಪ ಪೀಡಿತ ಪ್ರದೇಶಗಳು, ನೆಲ ನಡುಗಿಸುವ ರೈಲು ಮುಂತಾದ ಭಾರೀ ವಾಹನ ಮಾರ್ಗಗಳ ಸಮೀಪದ ಜಾಗಗಳು, ನೆಲದ ವಿನ್ಯಾಸ (ಏರಿಳಿತಗಳು, ಕಮರಿಗಳು ಇತ್ಯಾದಿ), ಮಳೆಗಾಲ ಬಿಸಿಲು ತೀವ್ರವಾಗಿರುವ ನಗರಗಳು ಇವೇ ಮುಂತಾದವು ಪರಿಸರದ ಭೌತಸನ್ನಿವೇಶಗಳನ್ನು ರಚಿಸುತ್ತವೆ. ಇಂಥಲ್ಲಿ ಮನೆಯ ಪಾಯ ಗೋಡೆಗಳ ಗಾತ್ರ, ಕಕ್ಕಟ್ಟುಗಳ ಭದ್ರತೆ ಮುಂತಾದವನ್ನು ಯೋಗ್ಯವಾಗಿ ನಿರ್ಧರಿಸಬೇಕಾಗುತ್ತದೆ.

ಗೃಹನಿರ್ಮಾಣ ಸಂಸ್ಥೆಗಳು

ಬದಲಾಯಿಸಿ

ಮನೆಗಳನ್ನೋ ಹಲವಾರು ಉಪ್ಪರಿಗೆಗಳ ವಠಾರಗಳನ್ನೋ ಸಾಮೂಹಿಕವಾಗಿ ಒಂದು ನಿರ್ದಿಷ್ಟ ಆಲೇಖ್ಯಾನುಸಾರ ಕೇಂದ್ರೀಯ ಮೇಲ್ವಿಚಾರಣೆಯಲ್ಲಿ ಕಟ್ಟಿಸಿ ಬೇರೆ ಬೇರೆ ಆರ್ಥಿಕವರ್ಗಗಳ ವ್ಯಕ್ತಿಗಳಿಗೆ ಅವನ್ನು ಮಾರಲು ಏರ್ಪಾಡುಗೊಂಡ ಸಂಸ್ಥೆಗಳಿವು. ಇವುಗಳಲ್ಲಿ ಸಹಕಾರ ಸಂಘಗಳಿವೆ, ಖಾಸಗಿ ಸಂಘಗಳಿವೆ, ಅಲ್ಲದೆ ಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟ ನಗರಾಭಿವೃದ್ಧಿ ಮಂಡಳಿಗಳು (ಟ್ರಸ್ಟ್‌ ಬೋರ್ಡ್) ಸಹ ಇವೆ. ಇಂಥವುಗಳ ಜೊತೆಗೆ ಗೃಹನಿರ್ಮಾಣ ಮಾಡಲು ಬಯಸುವ ಮಾಲೀಕರಿಗೆ ಸಾಲವನ್ನು ಒದಗಿಸುವ ಈ ಸಂಸ್ಥೆಗಳನ್ನು ಹೆಸರಿಸಬಹುದು. ಇವುಗಳ ಉದ್ದೇಶವೆಂದರೆ ಜನರಿಗೆ ಮಿತಬೆಲೆಯಲ್ಲಿ ಯೋಗ್ಯ ಮನೆಗಳನ್ನು ಒದಗಿಸುವುದು; ಮತ್ತು ಅದರೊಂದಿಗೆ ನಗರದ ವಿಸ್ತರಣೆಯನ್ನು ಕ್ರಮಬದ್ಧವಾಗಿ ಮಾಡುವುದು. ಸಾಮಾನ್ಯವಾಗಿ ಹಳ್ಳಿ ಪಟ್ಟಣಗಳಿಂದ ತೊಡಗಿ ಮಹಾನಗರಗಳ ವರೆಗೂ ಈ ರೀತಿ ತಯಾರಾದ ಗೃಹಸಮುದಾಯಗಳನ್ನು ಭಾರತದಲ್ಲಿ ನೋಡಬಹುದು. ಚಂಡೀಗಡದಲ್ಲಿ ಆಧುನಿಕ ನಗರವೊಂದನ್ನೇ ಕೇಂದ್ರೀಯವಾಗಿ ಕಲ್ಪಿಸಿಕೊಂಡು ಆಲೇಖ್ಯವನ್ನು ತಯಾರಿಸಿ ರಚಿಸಲಾಗಿದೆ. ಮನೆಯ ಪರಿಕಲ್ಪನೆ ಮತ್ತು ರಚನೆ ನಿರಂತರ ವಿಮರ್ಶೆ, ಪ್ರಯೋಗ ಮತ್ತು ಬದಲಾವಣೆಗಳಿಗೆ ಒಳಗಾಗಿರುವ ಅಂಶಗಳು. [[Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೃಹ}}

"https://kn.wikipedia.org/w/index.php?title=ಮನೆ&oldid=1021439" ಇಂದ ಪಡೆಯಲ್ಪಟ್ಟಿದೆ