ಗುಹೆ
ಗುಹೆಭೂಮಿಯ ಮೇಲ್ಪದರದ ಶಿಲೆಯಲ್ಲಿನ ಪೊಳ್ಳುಭಾಗ (ಕೇವ್). ಗುಹೆಗಳ ವೈಶಾಲ್ಯ ಮತ್ತು ದ್ವಾರದ ಅಗಲ ಎತ್ತರಗಳಲ್ಲಿ ಬಹಳ ವ್ಯತ್ಯಾಸ ಉಂಟು. ತೆವಳಿ ಹೋಗುವಷ್ಟು ಕಿರಿದಾದ ದ್ವಾರ ಉಳ್ಳವು ಕೆಲವಾದರೆ ಮತ್ತೆ ಕೆಲವು ಎತ್ತರವಾದ ಆಳು ಸರಾಗವಾಗಿ ನಡೆದು ಹೋಗುವಷ್ಟು ದೊಡ್ಡದಾಗಿರುತ್ತವೆ. ಗುಹೆಗಳನ್ನು ಮಾನವನಿರ್ಮಿತ ಮತ್ತು ಪ್ರಕೃತಿನಿರ್ಮಿತ ಎಂಬುದಾಗಿ ವರ್ಗೀಕರಿಸಬಹುದು. ಪ್ರಕೃತಿಯಲ್ಲಿ ಭೌತ ಮತ್ತು ರಾಸಾಯನಿಕ ಶಿಥಿಲೀಕರಣದಿಂದಲೂ ಜ್ವಾಲಾಮುಖಿಗಳ ಕ್ರಿಯಾವಿಧಿಗಳಿಂದಲೂ ಗುಹೆಗಳು ರೂಪುಗೊಳ್ಳುತ್ತವೆ.
ಇತಿವೃತ್ತ
ಬದಲಾಯಿಸಿ- ಸಮುದ್ರ ತೀರದ ಕಡಿದಾದ ಭಾಗಗಳಲ್ಲಿ ಅನೇಕ ಗುಹೆಗಳಿರುತ್ತವೆ. ಇವು ಸಮುದ್ರಮಟ್ಟಕ್ಕಿಂತ ಕೇವಲ ಕೆಲವೇ ಅಡಿಗಳಷ್ಟು ಎತ್ತರದಲ್ಲಿರುವುವು. ಈ ಗುಹೆಗಳ ನೆಲ ಮಟ್ಟವಾಗಿದ್ದು ಮರಳು ಅಥವಾ ನೊರಜುಗಲ್ಲುಗಳ ಹೊದಿಕೆಯಿಂದ ಕೂಡಿರುವುದು. ಇವನ್ನು ಹಲವು ಕಡೆ ಗಳಿಂದ ಪ್ರವೇಶಿಸಬಹುದು. ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುವಾಗ ಅವುಗಳಲ್ಲಿರುವ ನೊರಜುಗಲ್ಲುಗಳು ತೀರವನ್ನು ಉಜ್ಜುತ್ತವೆ. ಇದರಿಂದ ತೀರದಾದ್ಯಂತ ಪೊಟರೆಗಳಾಗುತ್ತವೆ. ಕೆಲವು ಕಡೆಗಳಲ್ಲಿ ಮೃದು ಶಿಲೆಗಳಿದ್ದರೆ, ಸ್ತರಭಂಗವಾಗಿದ್ದರೆ ಇಲ್ಲವೇ ಚಿಲುಮೆಗಳಿದ್ದರೆ ಪೊಟರೆಗಳು ವಿಸ್ತರಿಸಿ ಗುಹೆಗಳಾಗುತ್ತವೆ.
- ಇಟಲಿಯಲ್ಲಿರುವ ನೇಪಲ್ಸ್‌ಕೊಲ್ಲಿಯ ಭ್ಲೂಗ್ರೊಟೊ ಗುಹೆ ಈ ಬಗೆಯ ಗುಹೆಗಳಿಗೆ ಉತ್ತಮ ಉದಾಹರಣೆ. ಇದರ ಉದ್ದ 175' ಅಗಲ 90' ಮತ್ತು ಎತ್ತರ 50' ಪ್ರವೇಶದ್ವಾರ ಸಮುದ್ರಮಟ್ಟಕ್ಕಿಂತ ಕೇವಲ 3' ಮಾತ್ರ ಎತ್ತರವಿರುವುದರಿಂದ ವೀಕ್ಷಕರು ದೋಣಿಗಳಲ್ಲಿ ಅಲ್ಲಿಗೆ ಹೋಗುತ್ತಾರೆ. ಈ ಮಾದರಿ ಗುಹೆಗಳನ್ನು ಪ್ರಪಂಚದ ನಾನಾ ಭಾಗಗಳಲ್ಲಿ ತೀರಪ್ರದೇಶಗಳಲ್ಲಿ ಕಾಣಬಹುದು.
ಗುಹೆಗಳ ರಚನೆ
ಬದಲಾಯಿಸಿ- ಪದರ ಶಿಲೆಗಳಲ್ಲಿ ಗಡಸು ಮತ್ತು ಮೃದು ಶಿಲೆಗಳು ಪರ್ಯಾಯವಾಗಿದ್ದರೆ, ಮಾರುತ ಶಿಥಿಲೀಕರಣದಿಂದ ಮೃದುಶಿಲೆಗಳು ಬೇಗ ಸವೆದು ಗುಹೆಗಳಾಗುವುದುಂಟು. ಇಂಥ ಪ್ರದೇಶಗಳಲ್ಲಿ ನದಿ ಇದ್ದರೆ, ಅದರ ನೀರು ಚಾಚುಭಾಗಗಳಿಂದ ದುಮುಕುತ್ತದೆ. ಬಳಿಕ ಅದು ಹಿಮ್ಮೊಗವಾಗಿ ಹೊರಳಿ ಶಿಲೆಗಳಿಗೆ ಅಪ್ಪಳಿಸುತ್ತದೆ. ಇದರಿಂದ ಕೆಳಭಾಗ ಹೆಚ್ಚು ಸವೆದು ಗುಹೆ ನಿರ್ಮಿತವಾಗುವುದು. ಘಟಪ್ರಭಾನದಿ ಬೆಳಗಾಂವಿ ಜಿಲ್ಲೆಯ ಗೋಕಾಕ್ ಎಂಬಲ್ಲಿ 180' ಎತ್ತರದಿಂದ ದುಮುಕುತ್ತದೆ. ಬೆಣಚುಶಿಲೆ ಇಲ್ಲಿ ಚಾಚುಭಾಗವಾಗಿದೆ.
- ಇದರ ತಳದಲ್ಲಿ ಹಿಮ್ಮೊಗ ಶಿಥಿಲೀಕರಣವಾಗಿ ಜಲಪಾತದ ಹಿಂದೆ ಸರಾಗವಾಗಿ ಓಡಾಡಬಹುದಾದ ಗುಹೆ ನಿರ್ಮಿತವಾಗಿದೆ. ಉತ್ತರ ಅಮೆರಿಕದ ನಯಾಗರ ಜಲಪಾತ ಲಾಳದ ಆಕಾರದಲ್ಲಿದೆ. ನೀರಿನ ಹಿಂದೆ ಇರುವ ಗುಹೆಗಳಲ್ಲಿ ಕುಳಿತು ಜಲಪಾತದ ರಮ್ಯ ದೃಶ್ಯವನ್ನು ನೋಡಲು ಅನುಕೂಲ ಮಾಡಿರುತ್ತಾರೆ. ಇವೆಲ್ಲ ಭೌತ ಶಿಥಿಲೀಕರಣದಿಂದಾದ ಗುಹೆಗಳು. ಪ್ರಪಂಚದ ಬಹುಪಾಲು ಗುಹೆಗಳು ಸುಣ್ಣಶಿಲಾಪ್ರದೇಶಗಳಲ್ಲಿವೆ. ಇಂಗಾಲದ ಡೈ ಆಕ್ಸೈಡ್ ವಿಲೀನವಾಗಿರುವ ನೀರು ಸುಣ್ಣಶಿಲೆಗಳಲ್ಲಿರುವ ಸೀಳುಗಳ ಮೂಲಕ ಒಳಗಿಳಿಯುತ್ತದೆ.
- ಈ ಅಂತರ್ಜಲ ಸುಣ್ಣಶಿಲೆಗಳನ್ನು ಸುಣ್ಣದ ಬೈಕಾರ್ಬೊನೇಟಾಗಿ ಪರಿವರ್ತಿಸುತ್ತದೆ. ಇದು ನೀರಿನಲ್ಲಿ ಸುಲಭವಾಗಿ ವಿಲೀನವಾಗುವುದರಿಂದ ಪೊಟರೆಗಳಾಗುತ್ತವೆ. ಸುಣ್ಣಶಿಲಾಪ್ರದೇಶಗಳಲ್ಲಿ ನದಿಗಳು ಬಹಳ ವಿರಳ. ಇಲ್ಲಿ ಕಾಣಬರುವ ನೀರಿಲ್ಲದ ಕಣಿವೆಗಳು, ಕಂದರಗಳು ಮತ್ತು ಜಲಪಾತಗಳನ್ನು ಪ್ರತಿನಿಧಿಸುವ ಕಣಿವೆ ಭಾಗಗಳು ಇಲ್ಲಿ ಮೊದಲು ನದಿಗಳಿದ್ದುದನ್ನು ಸೂಚಿಸುತ್ತವೆ. ಇದಕ್ಕೆ ಇಂಗ್ಲೆಡಿನಲ್ಲಿರುವ ಚಕ್ಕರ್ ಕಣಿವೆ ಒಂದು ಉದಾಹರಣೆ. ನೀರೆಲ್ಲ ಸುಣ್ಣಶಿಲೆಗಳ ಬಿರುಕುಗಳ ಮೂಲಕ ಕೆಳಗಿಳಿದಿರುತ್ತದೆ.
- ಈ ಪ್ರದೇಶದ ನದಿಗಳೆಲ್ಲ ಅಂತರಾಳದಲ್ಲಿ ಗುಪ್ತಗಾಮಿಗಳಾಗಿ ಹರಿಯುತ್ತವೆ. ರಷ್ಯದ ಅನೇಕ ನದಿಗಳು ಇದಕ್ಕೆ ಉದಾಹರಣೆಗಳು. ನೆರೆ ಪ್ರದೇಶಗಳಿಂದ ಹರಿದುಬರುವ ನದಿಗಳು ಸುಣ್ಣಶಿಲಾಪ್ರದೇಶವನ್ನು ತಲಪಿದ ಬಳಿಕ ರಂಧ್ರಗಳ ಮೂಲಕ ಒಳಹೋಗುವುದನ್ನು ಕಾಣಬಹುದು. ಇವು ಗಳಿಗೆ ಮುಳುಗುರಂಧ್ರಗಳೆಂದು ಹೆಸರು. ಈ ರಂಧ್ರಗಳ ಒಳಭಾಗದಲ್ಲಿ ದೊಡ್ಡ ಗುಹೆಗಳಿರುವುವು. ಅವುಗಳ ತಳದಲ್ಲಿ ನದಿಗಳು ಹರಿದು, ಸುಣ್ಣಶಿಲಾಪ್ರದೇಶವನ್ನು ಬಿಟ್ಟ ತರುವಾಯ ಹೊರಬರುತ್ತವೆ.
- ಇಂಗ್ಲೆಂಡಿನ ಇಂಗಲ್ಬರೊ ಪ್ರದೇಶದಲ್ಲಿರುವ ಗೇಪಿಂಗ್ ಘಿಲ್ ಎಂಬ ದೊಡ್ಡ ಗುಹೆ 365' ಆಳದಲ್ಲಿದೆ. ಇಲ್ಲಿ ಮುಳುಗುರಂಧ್ರದ ಮೂಲಕ ನೀರು 365' ಕೆಳಗೆ ದುಮುಕುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಕೆಂಟುಕಿ ಪ್ರದೇಶದಲ್ಲಿ 60,000 ಮುಳುಗುರಂಧ್ರಗಳಿವೆ ಹಾಗೂ ನೂರಾರು ಗುಹೆಗಳಿವೆ. ಇವುಗಳಲ್ಲಿ ದಿ ಗ್ರೇಟ್ ಮ್ಯಾಮತ್ ಕೇವ್ ಎಂಬುದು 48 ಕಿಮೀ ಉದ್ದವಿದೆ. ನ್ಯೂ ಮೆಕ್ಸಿಕೊ ಪ್ರಾಂತದ ಕಾರಲ್ಸ್‌ಬಾಡ್ ಗುಹೆಯಲ್ಲಿ 4,000' ಉದ್ದ, 600' ಅಗಲ ಮತ್ತು 300' ಎತ್ತರದ ವಿಶಾಲ ಅಂಗಣ ಉಂಟು.
- ಇವೆಲ್ಲ ರಾಸಾಯನಿಕ ಶಿಥಿಲೀಕರಣದಿಂದಾದವು. ಈ ಬಗೆಯ ಗುಹೆಗಳ ನೆಲ ಮಟ್ಟಸವಾಗಿರುವುದಿಲ್ಲ. ಇವುಗಳ ಮಾಳಿಗೆಗಳು ಸದಾ ತೇವವಾಗಿರುತ್ತವೆ. ಸಣ್ಣ ಬಿರುಕುಗಳ ಮೂಲಕ ಅಂತರ್ಜಲ ತೊಟ್ಟು ತೊಟ್ಟಾಗಿ ಹೊರಬೀಳುವುದು. ಇವು ಚಿಕ್ಕವಾಗಿದ್ದರೆ ಮಾಳಿಗೆಗಳಲ್ಲಿಯೇ ನೇತಾಡುತ್ತಿರುವುವು. ಕೊನೆಗೆ ಆವಿಯಾಗಿ ವಿಲೀನವಸ್ತು ತೆಳುಪೊರೆಯಾಗಿ ಮಾಳಿಗೆಗೆ ಅಂಟಿಕೊಂಡು ಉಳಿಯುತ್ತದೆ. ಈ ಕ್ರಿಯೆ ಸಾಕಷ್ಟು ಕಾಲ ನಡೆದು ಮಾಳಿಗೆಗಳಿಂದ ಕೆಳಮುಖವಾಗಿ ಸ್ತಂಭಾಕೃತಿಯ ರಚನೆಗಳು ಬೆಳೆಯುವುವು.
- ಇವಕ್ಕೆ ತೂಗು ತೊಂಗಲುಗಳು (ಸ್ಟಾಲಕ್ಟೈಟ್ಸ್) ಎಂದು ಹೆಸರು. ಇವು ನೆಲಮುಟ್ಟುವವರೆಗೂ ಬೆಳೆಯುವುದುಂಟು. ಮಾಳಿಗೆಯಲ್ಲಿ ಹೊರಬೀಳುವ ನೀರಿನ ತೊಟ್ಟುಗಳ ಗಾತ್ರ ದೊಡ್ಡದಾಗಿದ್ದರೆ, ಅವು ಕೆಳಕ್ಕೆ ಬಿದ್ದು, ಆವಿಯಾಗಿ, ನೆಲದ ಮೇಲೆ ತೆಳು ಖನಿಜದ ಪೊರೆ ಉಳಿಯುವುದು. ಈ ಕ್ರಿಯೆಯಿಂದ ಮೇಲ್ಮೊಗವಾಗಿ ಬೆಳೆಯುವ ಸ್ತಂಭಾಕೃತಿ ರಚನೆಗಳಾಗುವುವು. ಇವುಗಳಿಗೆ ನೆಲ ತೊಂಗಲುಗಳು (ಸ್ಟಾಲಕ್ಟ್ಯ್‌ಟ್ಸ್) ಎಂದು ಹೆಸರು.
- ಸುಣ್ಣಶಿಲಾಪ್ರದೇಶದಲ್ಲಿ ಅಂತರ್ಜಲದ ರಾಸಾಯನಿಕ ಶಿಥಿಲೀಕರಣ ಮುಂದು ವರಿದು ಆ ಪ್ರದೇಶದ ಪ್ರಸ್ಥಭೂಮಿಯೆಲ್ಲ ಮಾಯವಾಗಿ ಬೆಟ್ಟಗಳಾಗುತ್ತವೆ. ಇವುಗಳ ಕೆಲವು ಭಾಗಗಳಲ್ಲಿ ಜೇನುಗೂಡಿನ ಹಾಗೆ ಅನೇಕ ಚಿಕ್ಕ ಗವಿಗಳನ್ನು ಕಾಣಬಹುದು. ಈ ಪ್ರರೂಪದ ಬೆಟ್ಟಗಳನ್ನು ದಕ್ಷಿಣ ಅಮೆರಿಕದ ಪೋರ್ಟೊರಿಕೊದಲ್ಲಿ ಪಿಪಿನೊ ಬೆಟ್ಟಗಳೆಂದು ಕರೆಯುವರು. ಇವನ್ನು ಕ್ಯೂಬ ಮತ್ತು ಜಮೈಕಗಳಲ್ಲೂ ಕಾಣಬಹುದು. ಚೀನದ ಯೂನಾನ್ ಪ್ರದೇಶದಲ್ಲಿರುವ ಬೆಟ್ಟಗಳು ಕಂಬಗಳಂತೆ ಕಾಣುವುದರಿಂದ ಅವನ್ನು ಶಿಲಾಕಾಡುಗಳೆಂದು ವರ್ಣಿಸಲಾಗಿದೆ.
- ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೇತಂಚರ್ಲದ ಹತ್ತಿರ ಸುಣ್ಣಶಿಲೆಗಳಲ್ಲಿ ಹಲವು ಗುಹೆಗಳಿವೆ. ಇವನ್ನು ಬ್ರೂಸ್ಫುಟ್ ಮತ್ತು ಆತನ ಮಗ ಅನ್ವೇಷಿಸಿದ್ದಾರೆ. ಇಲ್ಲಿನ ಸುಣ್ಣಮಿಶ್ರ ಕೆಂಪು ಜೇಡು ಶಿಲೆಯಲ್ಲಿ ಪ್ಲೀಸ್ಟೋಸೀನ್ ಯುಗದ ಸಸ್ತನಿಗಳು, ಸರೀಸೃಪಗಳು ಮತ್ತು ದ್ವಿಚರ ಪ್ರಾಣಿಗಳ ಅವಶೇಷಗಳನ್ನು ಕಾಣಲಾಗಿದೆ. ಅವೆಲ್ಲ ಹಾಲಿ ಜೀವಂತ ಪ್ರಾಣಿ ಜಾತಿಗಳಿಗೆ ಸೇರಿದವು.
- ಭಾರತದಲ್ಲಿ ಗತವಂಶಿಗಳಾದ ಕೆಲವು ಜಾತಿಗಳೂ ಇವೆ: ಕುದುರೆ ಅಸಿನಸ್, ಕತ್ತೆಕಿರುಬ ಕ್ರೊಕುಟ ಮತ್ತು ಮ್ಯಾನಿಸ್ ಜೈಗ್ಯಾಂಟ. ಆದರೆ ಇವು ಆಫ್ರಿಕದಲ್ಲಿ ಇನ್ನೂ ಜೀವಂತವಾಗಿ ಉಳಿದಿವೆ.ಜ್ವಾಲಾಮುಖಿಗಳಿಂದ ಹೊರಬಂದ ಶಿಲಾರಸದಿಂದ ನಿರ್ಮಿತವಾದ ಗುಹೆಗಳೂ ಉಂಟು. ಇವು ಹವಾಯ್ ದ್ವೀಪದಲ್ಲಿದೆ. ಶಿಲಾರಸ ಹೊರಹರಿದು ಪದರಗಳಾಗುವುದು ಸರಿಯಷ್ಟೆ. ಪದರದ ತಳ, ಪಕ್ಕಗಳು ಮತ್ತು ಮೇಲ್ಭಾಗಗಳು ಬೇಗ ಆರಿ ಘನೀಭವಿಸುತ್ತವೆ. ಆದರೆ ಒಳಭಾಗದ ಶಿಲಾರಸ ದ್ರವರೂಪದಲ್ಲೇ ಇದ್ದು, ಹರಿದು ಹೋಗಿ ಸುರಂಗ ಪ್ರರೂಪದ ಗುಹೆಗಳಾಗುತ್ತವೆ.
ಮಾನವ ನಿರ್ಮಿತ ಗುಹೆಗಳು
ಬದಲಾಯಿಸಿ- ಕೊನೆಯದಾಗಿ ಮಾನವನಿರ್ಮಿತ ಗುಹೆಗಳೂ ಇವೆ. ಭಾರತದ ಎಲ್ಲೋರ, ಅಜಂತ, ಭಾಜ, ಬೇಡ್ಸ, ಕಾರ್ಲ ಮೊದಲಾದ ಕಡೆ ಪ್ರಸಕ್ತಶಕಪುರ್ವದಲ್ಲಿ ನಿರ್ಮಿತವಾದ ಅನೇಕ ಏಕಶಿಲಾ ಗುಹಾಂತರ್ದೇವಾಲಯಗಳಿವೆ. ಗುಹೆಗಳು ಆದಿಮಾನವನಿಗೆ ವಸತಿಗಳಾಗಿದ್ದುವೆಂಬುದು ಈಗ ತಿಳಿದಿರುವ ವಿಚಾರ. ಅನೇಕ ಗುಹೆಗಳಲ್ಲಿ ಮಾನವನ ಅಸ್ಥಿ ಮತ್ತು ಅವನ ಶಿಲೋಪಕರಣಗಳು. ಅವನು ಸಾಕಿದ ಮತ್ತು ಬೇಟೆಯಾಡಿದ ಪ್ರಾಣಿಗಳ ಅಸ್ಥಿಗಳೊಡನೆ ದೊರೆತಿವೆ.
- ಕರಡಿ, ಸಿಂಹ, ಕುಡುಗೋಲಾಕಾರದ ಹಲ್ಲುಳ್ಳ ಹುಲಿ, ಕತ್ತೆಕಿರುಬ, ಬೃಹದ್ಗಜ ಮುಂತಾದ ಪ್ರಾಣಿಗಳನ್ನು ಮಾನವ ಬೇಟೆಯಾಡಿದ್ದಾನೆ. ಇವುಗಳ ಅಸ್ಥಿಗಳು ದೊರೆತಿವೆ. ಅಲ್ಲದೆ ಇವುಗಳ ಚಿತ್ರ. ವರ್ಣಚಿತ್ರ ಮತ್ತು ಕೆತ್ತನೆಗಳನ್ನು ಗುಹೆಗಳ ಗೋಡೆಗಳ ಮೇಲೆ ಕಾಣಲಾಗಿದೆ. ಇವೆಲ್ಲ ಹಳೆ ಶಿಲಾಯುಗ, ನವಶಿಲಾಯುಗ, ಹಿತ್ತಾಳೆ ಮತ್ತು ಕಬ್ಬಿಣದ ಯುಗಗಳಿಗೆ ಸೇರಿದವು. ಸ್ಪೇನ್ ದೇಶದ ಆಲ್ಟಮೀರ ಗುಹೆಗಳಲ್ಲಿ ಡಾನ್ ಮಾರ್ಸಿಲಿನೊ ಡಿ. ಸೌಟೊಲೊ ಎಂಬಾತ ವರದಿ ಮಾಡಿ ಇವು ಹಳೆಶಿಲಾಯುಗದ ಮಾನವನಿರ್ಮಿತಗಳೆಂದು ಸಾರಿದ. ಈ ಹೇಳಿಕೆಯನ್ನು ತೀವ್ರವಾಗಿ ಅಲ್ಲಗಳೆಯಲಾಯಿತು. ಆದರೆ ಲೆ ಐಜೀಸಿನಲ್ಲಿ ಲಾ ಮೌತ್ ಗುಹೆಯಲ್ಲಿ ವರ್ಣಚಿತ್ರಗಳಿರುವುದನ್ನು ಎಮಿಲಿ ರಿವೆರಿ ಎಂಬಾತ ವರದಿಮಾಡಿದ (1895).
- ಅನಂತರ ಲೆ ಕಂಬರೆಲ್ಲೆಸ್ ಮತ್ತು ಪಾಂಟ್ ಡಿ. ಗಾಮೆಗಳಲ್ಲಿಯೂ ಇವಿರುವುದು ವರದಿಯಾಯಿತು. ಭೂವಿಜ್ಞಾನ, ಪ್ರಾಚೀನ ಇತಿಹಾಸ ಮತ್ತು ಮಾನವಶಾಸ್ತ್ರಗಳ ವಿಧಾನಗಳನ್ನು ಅನುಸರಿಸಿ ಸಂಶೋಧನೆ ನಡೆಸಿದುದರ ಫಲವಾಗಿ ಈ ವರ್ಣಚಿತ್ರಗಳು ಆದಿಮಾನವನಿಂದ ರಚಿತವಾದ ವುಗಳೆಂದು ನಿರ್ವಿವಾದವಾಗಿ ಸ್ಥಾಪನೆಯಾಯಿತು. ಇದರ ಕೀರ್ತಿ ಇ. ಪಿ. ಬ್ರೆಯುಲ್ ಎಂಬಾತನಿಗೆ ಸಲ್ಲುತ್ತದೆ. ಸಂಶೋಧನೆ ಸತತವಾಗಿ ಮುಂದುವರಿಯಿತು. ಫ್ರಾನ್ಸಿನ ಲಾಸೆಕ್ಸ್ ಗುಹೆಗಳಲ್ಲಿ ವರ್ಣಚಿತ್ರ ಭಂಡಾರವನ್ನೇ ಶೋಧಿಸಿದ್ದು ಇತ್ತೀಚಿನ ಸಂಶೋಧನೆಗಳಲ್ಲಿ ಪ್ರಮುಖವಾದುದು. *ಈ ವರ್ಣರಂಜಿತ ಚಿತ್ರಗಳು ಒಂದು ಬುಡಕಟ್ಟಿನ ಜನ ಅಥವಾ ಒಂದು ಕಾಲದ ಜನಗಳ ರಚನೆಯಲ್ಲ. ಇವು ಆರಿಗ್ನೇಸಿಯನ್, ಸಲ್ಯೂಟ್ರಿಯನ್ ಮತ್ತು ಮ್ಯಾಗ್ಡಲೇನಿಯನ್ ಕಾಲದವು. ಹಳೆ ಶಿಲಾಯುಗದ ಆದಿಮಾನವ ರಚಿತ ಚಿತ್ರ ಮತ್ತು ವರ್ಣಚಿತ್ರಗಳು ರಷ್ಯದ ಉಜ್ಜೆಕಿಸ್ತಾನ ಮತ್ತು ಲೇನಾ ಕಣಿವೆ ಪ್ರದೇಶಗಳನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಇದ್ದಂತೆ ಕಾಣುವುದಿಲ್ಲ. ಗುಹೆಗಳು ಸಮರ ನಿರಾಶ್ರಿತರ ಬೀಡುಗಳೂ ಆಗಿದ್ದುದುಂಟು. ಭಾರತದಲ್ಲಿ ಗುಹೆಗಳು ಸನ್ಯಾಸಿಮಠಗಳಾಗಿದ್ದುವು.
- ಮಧ್ಯ ಮತ್ತು ದಕ್ಷಿಣ ಯುರೋಪಿನ ಆಲ್ಪ್ಸ್ ಪರ್ವತಗಳಲ್ಲಿ ಪ್ರಸಿದ್ಧ ಗುಹೆಗಳಿವೆ. ಫ್ರಾನ್ಸಿನ ಗ್ರೆನೊಬಲ್ ಹತ್ತಿರದ ಜಿ. ಬರ್ಜರ್ ಗುಹೆ ನಮಗೆ ತಿಳಿದಿರುವ ಗುಹೆಗಳಲ್ಲೆಲ್ಲ ಅತ್ಯಂತ ಆಳವಾದದ್ದು (3680'). ಸ್ವಿಟ್ಜರ್ಲೆಂಡಿನ ಹಾಲೊಜ್ ಗುಹೆ ಅತಿ ಉದ್ದವಾದದ್ದು (ಸು. 51 ಕಿಮೀ). ಇದೇ ಪ್ರದೇಶದಲ್ಲಿರುವ ಎಲಿಜಬೆತ್ ಗುಹೆಯ ಉದ್ದ 1300'. ಅಗಲ 5,000' ಮತ್ತು ಎತ್ತರ 150'. ಹಿಮಾಲಯದಲ್ಲೂ ಗುಹೆಗಳಿವೆ. ಭಾರತದಲ್ಲಿ ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆಯ ಗುಹೆಗಳು ಪ್ರಸಿದ್ಧವಾದವು. ಇವುಗಳಲ್ಲಿ ಕೆಲವು 300' ಉದ್ದ 40' ಎತ್ತರ ಇವೆ.
ಗುಹಾಶಾಸ್ತ್ರ
ಬದಲಾಯಿಸಿ- ಗುಹೆಗಳ ವೈಜ್ಞಾನಿಕ ಅಧ್ಯಯನ ಈ ಶಾಸ್ತ್ರದ ವಸ್ತು (ಸ್ಟೀಲಿಯಾಲಜಿ). ಗುಹೆಗಳನ್ನು ಅಳೆಯುವ ವಿಧಾನ, ಅವುಗಳಲ್ಲಿ ವಾಸಿಸುವ ಸಸ್ಯ ಮತ್ತು ಪ್ರಾಣಿವರ್ಗಗಳ ಪರಿಶೋಧನೆ, ನೀರಿನ ಗುಣ, ವಾತಾವರಣದ ವರ್ತನೆ ಮುಂತಾದವನ್ನು ಇದರಲ್ಲಿ ಅಭ್ಯಸಿಸಲಾಗುವುದು. ಗುಹೆಗಳಲ್ಲಿನ ವಾತಾವರಣ ವಿಶಿಷ್ಟವಾದದ್ದು. ಅಲ್ಲಿಗೆ ಸೂರ್ಯನ ರಶ್ಮಿ ತಲಪುವುದಿಲ್ಲವಾದ್ದರಿಂದ ಅಲ್ಲಿ ಸದಾ ಕತ್ತಲೆ. ಗವಿಗಳ ಮಾಳಿಗೆಗಳು ಸಾಧಾರಣವಾಗಿ ಸದಾ ತೇವಭರಿತವಾಗಿರುತ್ತವೆ ಮತ್ತು ಅಲ್ಲಿ ನೀರು ತೊಟ್ಟಿಕ್ಕುತ್ತಿರುತ್ತದೆ.
- ಆದ್ದರಿಂದ ಅಲ್ಲಿನ ವಾಯು ಹೆಚ್ಚು ತೇವಾಂಶದಿಂದ ಕೂಡಿರುವುದು. ಅಲ್ಲಿ ಹಸಿರುಗಿಡಗಳು ಬೆಳೆಯಲಾರವು. ಅಣಬೆ ಜಾತಿಯ ಸಸ್ಯಗಳಿರುವುದುಂಟು. ಗುಹೆಗಳಲ್ಲಿಯೆ ಕಾಯಂ ವಾಸಿಸುವ ಪ್ರಾಣಿಗಳು, ಗುಹೆಗಳ ಒಳಗೆ ಮತ್ತು ಹೊರಗೆ ಎರಡು ಕಡೆಗಳಲ್ಲಿಯೂ ವಾಸಮಾಡುವಂಥವು ಮತ್ತು ಅಕಸ್ಮಾತ್ ಗುಹೆ ಪ್ರವೇಶಮಾಡಿದಂಥವು ಅಥವಾ ಅತ್ಯಲ್ಪ ಕಾಲ ಗುಹೆಗಳಲ್ಲಿ ಕಾಲ ಕಳೆಯುವ ಪ್ರಾಣಿಗಳು ಎಂದು ಗುಹಾಪ್ರಾಣಿಗಳನ್ನು ವರ್ಗೀಕರಿಸಬಹುದು. ಗುಹೆಗಳಲ್ಲಿ ಕಾಯಂ ವಾಸಮಾಡುವ ಪ್ರಾಣಿಗಳು ನಿರ್ವರ್ಣ ಹಾಗೂ ಸಂಪೂರ್ಣ ದೃಷ್ಟಿಹೀನವಾಗಿರುತ್ತವೆ.
- ಸಂಪೂರ್ಣ ದೃಷ್ಟಿಹೀನ ಮತ್ತು ಸಂಪೂರ್ಣ ದೃಷ್ಟಿ ಸಾಮರ್ಥ್ಯವಿರುವವುಗಳ ನಡುವಣ ಅನೇಕ ಮಧ್ಯಾಂತರ ಅವಸ್ಥೆಗಳನ್ನು ಪ್ರತಿನಿಧಿಸುವ ಪ್ರಾಣಿಗಳನ್ನು ಕಾಣಬಹುದು. ಎಲ್ಲರ ಗಮನವನ್ನು ಸೆಳೆಯುವ ಗುಹಾಪ್ರಾಣಿ ಎಂದರೆ ಬಿಳಿಮೀನು. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟುಕಿ ಗುಹೆಗಳಲ್ಲಿ ವಾಸಿಸುತ್ತದೆ. ನ್ಯೂಮೆಕ್ಸಿಕೊ ಗುಹೆಗಳಲ್ಲಿ ವಾಸಿಸುವ ಚಾರಾಸಿನಿಡ್ ಮೀನುಗಳಲ್ಲಿ ದೃಷ್ಟಿಹೀನತೆಯ ವಿವಿಧ ಮಟ್ಟಗಳನ್ನು ಕಾಣಬಹುದು. ಗುಹಾ ವಾಸಿಗಳಲ್ಲಿ ಸಂಧಿಪದಿಗಳು, ಅದರಲ್ಲೂ ಕಠಿಣಚರ್ಮಿಗಳು ಪ್ರಮುಖವಾದವು.
- ಉತ್ತರ ಅಮೆರಿಕದಲ್ಲಿ ಸ್ಯಾಲಮ್ಯಾಂಡರ್ ಎಂಬ ದ್ವಿಚರಪ್ರಾಣಿ ಮತ್ತು ಇತರ ಪ್ರಾಣಿಗಳು ಗುಹಾವಾಸಿಗಳಾಗಿವೆ. ಬಾವಲಿಗಳು ಮತ್ತು ಗೂಬೆಗಳು ಹಗಲನ್ನು ಗುಹೆಗಳಲ್ಲಿ ಕಳೆಯುತ್ತವೆ. ಟ್ರಿನಿಡಾಡಿನಲ್ಲಿ ತೈಲಪಕ್ಷಿ (ಆಯಿಲ್ ಬರ್ಡ್) ಗುಹೆಗಳಲ್ಲಿ ಗೂಡು ಕಟ್ಟುತ್ತದೆ. ವೆನಿಜೂಲದ ಗುಹೆಗಳಲ್ಲಿ ವಾಸಿಸುವ ಒಂದು ಜಾತಿಯ ಪಕ್ಷಿಯ ರೆಕ್ಕೆಗಳು 1.2 ಮೀ ಉದ್ದ ಇವೆಯಂತೆ. ಅನೇಕ ಪ್ರಾಣಿಗಳಿಗೆ ಗುಹೆಗಳು ಚಳಿಗಾಲದ ಆಶ್ರಯಸ್ಥಾನಗಳು.
- ಗುಹೆಯಲ್ಲಿ ವಾಸಿಸುವ ಪ್ರಾಣಿಗಳು ನೀರಿನ ಮೂಲಕ ಹೊರಗಿನಿಂದ ಬರುವ ಆಹಾರವನ್ನು ಅವಲಂಬಿಸಿವೆ. ಆದ್ದರಿಂದ ಇವುಗಳ ಸಂಖ್ಯೆ ಅತ್ಯಲ್ಪ. ಕೆಲವು ವೇಳೆ ಒಂದು ಇನ್ನೊಂದನ್ನು ಕೊಂದು ತಿನ್ನುವುದುಂಟು. ಸಸ್ಯಾಹಾರಿಗಳು ಅಣಬೆ ಮುಂತಾದವನ್ನು ತಿಂದು ಜೀವಿಸುತ್ತವೆ. ಆಹಾರಾಭಾವದಿಂದ ಗುಹಾವಾಸಿಗಳ ದೇಹಗಾತ್ರವೂ ಕಡಿಮೆ. ಒಂದು ಅಡಿ ಉದ್ದವಿರುವ ಓಮ್ ಪ್ರಾಣಿಯೇ ಅತ್ಯಂತ ದೊಡ್ಡದು. ಗುಹಾವಾಸಿಗಳಲ್ಲಿ ದೃಷ್ಟಿಹೀನತೆಯ ಪರಿಹಾರವಾಗಿ ಸ್ಪರ್ಶೇಂದ್ರಿಯಗಳು ವಿಶೇಷ ಬೆಳೆವಣಿಗೆ ಹೊಂದಿರುವುವು.
- ಸಂಧಿಪದಿಗಳ ಕುಡಿಮೀಸೆ ಮತ್ತು ಕಾಲುಗಳು ಬಹು ಉದ್ದವಾಗಿರುತ್ತವೆ. ಶರೀರಾದ್ಯಂತ ಸ್ವರ್ಶ ಗ್ರಾಹಕ ಕೂದಲುಗಳೂ ಇರುವುದುಂಟು. ಋತು ವೈಪರೀತ್ಯವಿಲ್ಲದಿರುವುದರಿಂದ ಈ ಪ್ರಾಣಿಗಳಿಗೆ ಬೆದೆಕಾಲವಿರುವುದಿಲ್ಲ. ನ್ಯೂಜಿಲ್ಯಾಂಡ್‍ನಲ್ಲಿ ಮೈಸಿಟೊಫಿಲ್ಲಿಡ್ ನೊಣಗಳ ಮರಿಗಳು ಮಶಕ ಪ್ರಾಣಿಗಳನ್ನು ಹಿಡಿಯಲು ಗುಹೆಗಳ ಮಾಳಿಗೆಗಳಲ್ಲಿ ಅಂಟುದಾರದ ಬಲೆಯನ್ನು ರಚಿಸುತ್ತವೆ. ಇವು ಮಿನುಗುತ್ತವೆ. ಆಗ ನೀಲಿ ಬೆಳಕಾಗುತ್ತದೆ. ಇದು ರಮ್ಯ ದೃಶ್ಯವಾಗುವುದರಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿCaves ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- The Virtual Cave Large educational site about caves and speleothems
- Norwegian Cave Federation Archived 2016-10-05 ವೇಬ್ಯಾಕ್ ಮೆಷಿನ್ ನಲ್ಲಿ. NO
- Australian Speleological Federation (ASF), AU
- British Caving Association (BCA), UK
- National Cave Research and Protection Organization, India
- The Mulu Caves Project, A British-Malaysian collaboration to explore the caves of the Gunung Mulu National Park, Sarawak
- The Caves and Karst of Malaysian Borneo Archived 2021-03-06 ವೇಬ್ಯಾಕ್ ಮೆಷಿನ್ ನಲ್ಲಿ.
- Classification of Caves A list of cave types with links to further information
- Journal of Cave and Karst Studies
- National Speleological Society (NSS), US
- International Union of Speleology (UIS).
- cave-biology.org Cave biology (biospeleology) in India.
- Biospeleology; The Biology of Caves, Karst, and Groundwater, by Texas Natural Science Center, The University of Texas at Austin and the Missouri Department of Conservation.
- French Caves List of Commercial Caves in France.
- Caves of Croatia Archived 2008-12-20 ವೇಬ್ಯಾಕ್ ಮೆಷಿನ್ ನಲ್ಲಿ. List and details about longest and deepest caves and pits in Croatia.
- Kirschbaum Cave in Germany, Three burials, three millennia.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: