ಅಂತರ್ಜಲ

ಭೂಮಿಯ ಆಳದಲ್ಲಿ ಇರುವ ಜಲ

ಅಂತರ್ಜಲ ಭೂಮಿಯ ಒಳಗೆ ಶೇಖರವಾಗಿರುವ ಜಲ. ಈ ವಲಯದಲ್ಲಿ ಶಿಲೆಗಳು ಮತ್ತು ಮಣ್ಣು ಸಂತೃಪ್ತವಾಗಿರುತ್ತವೆ. ಇದರ ಮೇಲ್ಭಾಗವೇ ಅಂತರ್ಜಲ ಮಟ್ಟ. ಸಂತೃಪ್ತ ವಲಯದಲ್ಲಿರುವ ನೀರೇ ಬಾವಿಗಳಿಗೆ ನೀರಿನ ಆಕರ. ಮಳೆಯಿಂದ ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ. ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ವಾಯುಗೋಳವನ್ನು ಸೇರುತ್ತದೆ. ಅತ್ಯಲ್ಪ ಪ್ರಮಾಣದ ನೀರನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಮಳೆ ನೀರಿನ ಒಂದು ಭಾಗ ಜಿನುಗಿ ಸ್ಥಳೀಯ ಶಿಲೆಗಳಲ್ಲಿರುವ ರಚನೆಗಳನ್ನು ಆಧರಿಸಿ ಅಂತರ್ಜಲವಾಗಿ ಶೇಖರಣೆಯಾಗುತ್ತ ಹೋಗುತ್ತದೆ. ಎಲ್ಲ ಪ್ರದೇಶಗಳಲ್ಲೂ ಅಂತರ್ಜಲದ ಪ್ರಮಾಣ ಒಂದೇ ಬಗೆಯದಾಗಿರುವುದಿಲ್ಲ. ಮರಳಿನ ನೆಲವಾಗಿದ್ದರೆ ನೀರು ಬಹುಬೇಗ ಇಂಗಿಹೋಗುತ್ತದೆ, ಜೇಡು ಮಣ್ಣಿನ ನೆಲವಾಗಿದ್ದರೆ ಇಂಗುವ ದರ ಅತ್ಯಂತ ಕಡಿಮೆ. ಶಿಲೆಗಳು ರಂಧ್ರಮಯವಾಗಿದ್ದರೆ ನೀರು ಜಿನುಗುವುದು ಸುಲಭ. ಗಟ್ಟಿ ಶಿಲೆಗಳಾದ ಗ್ರನೈಟ್, ಬಸಾಲ್ಟ್ ಮುಂತಾದ ಶಿಲೆಗಳಲ್ಲಿ ನೀರು ಸುಲಭವಾಗಿ ಆಳಕ್ಕೆ ಇಳಿಯದು. ಆದರೆ ಇಂಥ ಶಿಲೆಗಳಲ್ಲಿ ಹೆಚ್ಚಿನ ವೇಳೆ ಬಿರುಕುಗಳಿರುವುದರಿಂದ ಅವುಗಳ ಮೂಲಕ ನೀರು ನೆಲದಾಳಕ್ಕೆ ಇಳಿಯುತ್ತದೆ. ವಿಶೇಷವಾಗಿ ಜಲಜ ಶಿಲೆಗಳಲ್ಲಿ ಹೆಚ್ಚಿನ ರಂಧ್ರ ಅಥವಾ ತೆರಪುಗಳಿರುವುದರಿಂದ ಅಂತರ್ಜಲ ಹರಿಯುವುದು ಸುಲಭ. ಯಾವ ಶಿಲೆ ನೀರನ್ನು

ಅಂತರ್ಜಲ ಮಟ್ಟ

ಬದಲಾಯಿಸಿ

ಭೂಮಿಯೊಳಗೆ ಅಂತರ್ಜಲವಿರುವ ಮಟ್ಟವೇ ಸಂತೃಪ್ತವಲಯ. ಇದರ ಮೇಲ್ಭಾಗ ಜಲಮಟ್ಟ. ಜಲಮಟ್ಟದ ಮೇಲ್ಭಾಗದಲ್ಲಿ ಸದಾ ವಾಯುಚಲನೆ ಇರುತ್ತದೆ. ಈ ವಲಯದ ಮೂಲಕವೇ ನೆಲದ ಮೇಲೆ ಬಿದ್ದ ನೀರು ನಿಧಾನ ಗತಿಯಲ್ಲಿ ಜಿನುಗಿ ಅಂತರ್ಜಲ ಭಂಡಾರವಾಗುತ್ತದೆ. ಜಲವಿಜ್ಞಾನದಲ್ಲಿ ಇದನ್ನು ಜಿನುಗುನೀರು ಎಂದೇ ಕರೆಯುತ್ತಾರೆ. ಅಂತರ್ಜಲ ಎಲ್ಲ ಕಾಲದಲ್ಲೂ ಒಂದೇ ಮಟ್ಟವನ್ನು ಉಳಿಸಿಕೊಳ್ಳುವುದಿಲ್ಲ. ಆಯಾ ಪ್ರದೇಶದಲ್ಲಿ ಬೀಳುವ ಮಳೆ ಕೂಡ ಅಂತರ್ಜಲ ಮಟ್ಟವನ್ನು ನಿರ್ಧರಿಸುತ್ತದೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಅಂತರ್ಜಲ ಮಟ್ಟ ನೆಲಕ್ಕೆ ಕೆಲವೇ ಮೀಟರುಗಳಷ್ಟು ಸಮೀಪದಲ್ಲಿರುತ್ತವೆ. ಮರುಭೂಮಿಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಅಂತರ್ಜಲದ ಮಟ್ಟ ತುಂಬ ಆಳದಲ್ಲಿರುತ್ತದೆ.[]

ಜಲ ಚಕ್ರ

ಬದಲಾಯಿಸಿ
 
ಅಂತರ್ಜಲ ಚಲನೆಯ ಸಮಯಗಳ ಹೋಲಿಕೆ.

ನೀರಿನ ಪ್ರಮುಖ ಗುಣವೆಂದರೆ ಅದು ಘನ, ದ್ರವ, ಮತ್ತು ಅನಿಲ ಸ್ಥಿತಿಯಲ್ಲಿರುವುದು. ಇದರಲ್ಲಿ ಪ್ರಮುಖವಾಗಿ ಕಾಣುವುದು ದ್ರವ ರೂಪದಲ್ಲಿರುವ ನೀರು. ಭೂಮೇಲ್ಮೈ ಮೇಲೆ ಇದು ನದಿ, ಸಾಗರ, ಸರೋವರಗಳಲ್ಲೂ, ಕೆರೆಕಟ್ಟೆಗಳಲ್ಲೂ ಲಭ್ಯ. ಹಿಮದ ರೂಪದಲ್ಲಿರುವ ನೀರು ಪ್ರಮುಖವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುತ್ತದೆ. ಈ ಹಿಮರೂಪಿ ನೀರು ಪರಿಶುದ್ಧವಾದುದು. ಸಮುದ್ರದ ನೀರು ಬಾಷ್ಫೀಕರಣವಾಗಿ ಅನಂತರ ಸಾಂದ್ರೀಕರಣವಾಗಿ ಮೋಡಗಳು ಮೈದಳೆದು ಮಳೆರೂಪದಲ್ಲಿ ಮತ್ತೆ ಭೂಮಿಗೆ ಹಿಂತಿರುಗುವುದೇ ಜಲಚಕ್ರ.ಇದೊಂದು ನಿರಂತರವಾದ ಪ್ರಕ್ರಿಯೆ. ಇದರಲ್ಲಿ ಉಷ್ಣತೆ, ಗಾಳಿಯ ಗುಣ, ಒತ್ತಡ, ಗಾಳಿಯಲ್ಲಿ ತೇಲುವ ಸಣ್ಣ ಕಣಗಳು ಪ್ರಮುಖ ಪಾತ್ರ ವಹಿಸುತ್ತವೆ.ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿವರ್ಷ 370 ಮಿಲಿಯನ್ ಹೆಕ್ಟೇರು ಮೀಟರು ಮಳೆ ಬೀಳುತ್ತದೆ. ಇದರಲ್ಲಿ 120 ಮಿಲಿಯನ್ ಹೆಕ್ಟೇರು ಮೀಟರು ನದಿಯಾಗಿ ಹರಿಯುತ್ತದೆ. 120 ಮಿಲಿಯನ್ ಹೆಕ್ಟೇರು ಮೀಟರು ಬಾಷ್ಪೀಕರಣವಾಗಿ ವಾತಾವರಣ ಸೇರುತ್ತದೆ. 80 ಮಿಲಿಯನ್ ಹೆಕ್ಟೇರು ಮೀಟರು ಮಣ್ಣಿನಲ್ಲಿ ಜಿನುಗುತ್ತದೆ. ಅಂದಾಜು 26 ಮಿಲಿಯನ್ ಹೆಕ್ಟೇರು ಮೀಟರು ನೀರು ಅಂತರ್ಜಲ ಭಂಡಾರವಾಗಿ ನೆಲದಲ್ಲಿ ಸಂಗ್ರಹವಾಗುತ್ತದೆ.

ಶಿಲಾ ರಚನೆಗಳು

ಬದಲಾಯಿಸಿ

ಜಲ ಭೂವಿಜ್ಞಾನದ ಅಧ್ಯಯನದ ಮೇರೆಗೆ ಅಂತರ್ಜಲಕ್ಕೆ ಸಂಬಂಧಪಟ್ಟಂತೆ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಗುರುತಿಸಬಹುದು. ಒಂದು ಪೂರಕ ಪ್ರದೇಶಗಳು, ಮತ್ತೊಂದು ವಿಸರ್ಜಕ ಪ್ರದೇಶಗಳು. ಜಲಧರ ಶಿಲೆಗಳು ಎಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಪ್ರದೇಶಗಳು. ಇಲ್ಲಿ ಶಿಲೆಗಳಲ್ಲಿ ಇರುವ ರಂಧ್ರಗಳು ಒಂದರೊಡನೊಂದು ಕೂಡಿಕೊಂಡಿರುತ್ತದೆ. ಮತ್ತೊಂದು ಪ್ರದೇಶ ವಿಸರ್ಜಕ ಪ್ರದೇಶ. ಇಲ್ಲಿ ನೀರು ಒಂದೆಡೆ ನಿಲ್ಲದೆ ತಗ್ಗಿನ ಕಡೆಗೆ ಹರಿಯುತ್ತದೆ. ವೈಜ್ಞಾನಿಕವಾಗಿ ಪೂರಕ ಪ್ರದೇಶದಿಂದ ವಿಸರ್ಜಕ ಪ್ರದೇಶಗಳೆಡೆಗೆ ಹರಿಯುತ್ತದೆ. ಬಯಲು ಪ್ರದೇಶ ಪೂರಕ ಪ್ರದೇಶ ಎನ್ನಿಸಿಕೊಂಡರೆ, ಕಣಿವೆಗಳು ವಿಸರ್ಜಕ ಪ್ರದೇಶ ಎನ್ನಿಸಿಕೊಳ್ಳುತ್ತದೆ. ಅನೇಕ ಕಡೆಗಳಲ್ಲಿ ನೀರು ಚಿಲುಮೆಯ ರೂಪದಲ್ಲಿ ಹೊರಹರಿಯುವುದನ್ನು ಕಾಣಬಹುದು. ಇಂಥ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ನೆಲದ ಮಟ್ಟವನ್ನು ಛೇದಿಸಿದಾಗ ಅಲ್ಲಿ ಚಿಲುಮೆಯ ರೂಪದಲ್ಲಿ ನೀರು ಉಕ್ಕುತ್ತದೆ. ಪೂರಕ ಪ್ರದೇಶಕ್ಕೂ ವಿಸರ್ಜಕ ಪ್ರದೇಶಕ್ಕೂ ಪ್ರಮುಖ ವ್ಯತ್ಯಾಸವಿದೆ. ಮಳೆ ಬಿದ್ದ ನಂತರ ನೀರು ಒಳಗಿಳಿಯುತ್ತದೆ. ಅಲ್ಲಿಗೆ ಈ ಪ್ರಕ್ರಿಯೆಗೆ ನಿಲುಗಡೆ ಬರುತ್ತದೆ. ಆದರೆ ವಿಸರ್ಜಕ ಪ್ರದೇಶದಲ್ಲಿ ನೆಲದ ನೀರು ಸದಾ ಹರಿಯುತ್ತಲೇ ಇರುತ್ತದೆ.[]

ಸಚ್ಛಿದ್ರತೆ

ಬದಲಾಯಿಸಿ

ಶಿಥಿಲವಾದ ಶಿಲೆಗಳಲ್ಲಿ ರಂಧ್ರಗಳಿರುತ್ತವೆ. ಇದರ ಪ್ರಮಾಣ ಹೆಚ್ಚಿ\ದಷ್ಟೂ ನೀರು ಹೆಚ್ಚು ಹೀರಿಕೆಯಾಗುತ್ತದೆ. ರಂಧ್ರಮಯ ಲಕ್ಷಣವೇ ಸಚ್ಛಿದ್ರತೆ. ಉದಾ : ಒಂದು ಘನ ಮೀಟರು ಶಿಲೆ ಕಾಲು ಘನ ಮೀಟರಿನಷ್ಟು ನೀರನ್ನು ಹೀರಿ ಹಿಡಿದಿಟ್ಟುಕೊಂಡರೆ, ಆ ಶಿಲೆಯ ಸಚ್ಛಿದ್ರತೆ ಶೇ. 25 ಎಂದು ಗಣನೆ ಮಾಡಬಹುದು.

ವ್ಯಾಪಕತೆ

ಬದಲಾಯಿಸಿ

ಶಿಲೆಯಲ್ಲಿ ಸಂಗ್ರಹವಾದ ನೀರು ಎಷ್ಟು ಬಳಕೆಗೆ ಲಭ್ಯ ಎನ್ನುವುದು ಶಿಲೆಯ ವ್ಯಾಪಕತೆ. ಉದಾ : ಮರಳುಮಿಶ್ರಿತ ನೊರಜಿಗೆ ಸಚ್ಛಿದ್ರತೆಯೂ ಉಂಟು, ವ್ಯಾಪಕತೆಯೂ ಉಂಟು. ಅಂದರೆ ಅದು ನೀರನ್ನು ಹೀರಿ ಹಿಡಿದಿಟ್ಟುಕೊಳ್ಳಲೂ ಬಹುದು, ಅಷ್ಟೇ ಸುಲಭವಾಗಿ ಬಿಟ್ಟುಕೊಡಲೂಬಹುದು.

ಸ್ರವಣಗುಣ

ಬದಲಾಯಿಸಿ

ಶಿಲೆಯಲ್ಲಿ ಸಂಗ್ರಹವಾಗಿರುವ ನೀರು ಎಷ್ಟರಮಟ್ಟಿಗೆ ಬಿಟ್ಟುಕೊಡುತ್ತದೆ ಎನ್ನುವ ಲಕ್ಷಣವೇ ಸ್ರವಣಗುಣ. ಉದಾ : ಶಿಲೆಯಲ್ಲಿ ಶೇ. 25ರಷ್ಟು ಭಾಗ ರಂಧ್ರಗಳಿದ್ದು ಅವೆಲ್ಲವೂ ನೀರಿನಿಂದ ತುಂಬಿಕೊಂಡಿದ್ದರೆ ಅಷ್ಟೂ ಪ್ರಮಾಣದ ನೀರೂ ಸೋರಿಬರದಿರಬಹುದು. ಶೇ. 10ರಷ್ಟು ಮಾತ್ರ ನೀರು ಲಭ್ಯವಾಗಬಹುದು. ಉಳಿದ ನೀರು ವಸ್ತುವಿನ ಕಣಗಳ ಆಕರ್ಷಣೆಯಿಂದ ಅಲ್ಲೇ ಬಂಧಿತವಾಗಿರುತ್ತದೆ. ಆದ್ದರಿಂದ ಆ ಶಿಲೆಯ ಸ್ರವಣಗುಣ ಶೇ. 10 ಎಂದಾಯಿತು.

ನಿಮ್ನ ಕೋನ

ಬದಲಾಯಿಸಿ

ಅಂತರ್ಜಲದ ಆಕರದಿಂದ ಉದಾ : ಬಾವಿಯಿಂದ ನೀರನ್ನು ಪಂಪು ಮಾಡಿದಾಗ ನೀರಿನ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಆಗ ಜಲಮಟ್ಟ ಕೋನಾಕಾರವನ್ನು ತಾಳುತ್ತದೆ. ಇದೇ ನಿಮ್ನ ಕೋನ. ಶಿಲೆಯ ಸ್ರವಣಗುಣ ಕಡಿಮೆಯಾದಷ್ಟೂ ನಿಮ್ನ ಕೋನ ಹೆಚ್ಚಾಗುತ್ತ ಹೋಗುತ್ತದೆ. ಅಂದರೆ ತಗ್ಗು ಕಡಿದಾಗುತ್ತದೆ.

ಅಂತರ್ಜಲದ ರೂಪಗಳು ಮತ್ತು ಸಮಸ್ಯೆ

ಬದಲಾಯಿಸಿ

ಅಂತರ್ಜಲ ಚಿಲುಮೆ ರೂಪದಲ್ಲಿ ಪ್ರಕಟವಾಗಬಹುದು. ಎರಡು ಅವ್ಯಾಪ್ಯ ಪದರಗಳ ನಡುವೆ ವ್ಯಾಪ್ಯಶೀಲ ಪದರವಿದ್ದು ಅದರಲ್ಲಿನ ನೀರುಆರ್ಟೀಸಿಯನ್ ಚಿಲುಮೆಯಾಗಿ ಉಕ್ಕಬಹುದು. ಈ ಬಗೆಯ ಚಿಲುಮೆಗಳು ತಮಿಳುನಾಡಿನ ನೈವೇಲಿಯ ಸುತ್ತಮುತ್ತ ಹೆಚ್ಚು ಕಂಡುಬರುತ್ತದೆ. ಕುಡಿಯುವ ನೀರಿನ ಆಕರವಾಗಿ ತೆಗೆಯುವ ಸೇದು ಬಾವಿಗಳು ಹೆಚ್ಚಿನ ಕೃಷಿಗಾಗಿ ತೆಗೆಯುವ ತೋಡು ಬಾವಿಗಳು, ಕೊಳವೆ ಬಾವಿಗಳು, ಕಲ್ಯಾಣಿಗಳು, ಕೊಳಗಳು, ತಲಪರಿಗೆಗಳು ಇವೆಲ್ಲವೂ ಅಂತರ್ಜಲದ ಆಸರೆಯನ್ನೇ ಹೊಂದಿವೆ. ಅಂತರ್ಜಲದ ಬಳಕೆ ಕೆಲವು ಪ್ರದೇಶಗಳಲ್ಲಿ ಮಿತಿಮೀರಿರುವುದರಿಂದ ಅಂತರ್ಜಲದ ಮಟ್ಟವೂ ಕಡಿಮೆಯಾಗುತ್ತಿದೆ. ವಿಶೇಷವಾಗಿ ಹೆಚ್ಚು ನೀರು ಬೇಡುವ ಕಬ್ಬು ಮತ್ತು ಬತ್ತ ಮುಂತಾದ ಬೆಳೆಗಳಿಗೆ ಅಂತರ್ಜಲ ಹೆಚ್ಚು ಬಳಕೆಯಾಗುತ್ತದೆ. ಭೂವಿಜ್ಞಾನಿಗಳ ಅಂದಾಜಿನ ಪ್ರಕಾರ ಹತ್ತು ಎಕರೆ ಜಮೀನಿಗೆ ಒಂದು ಬಾವಿ ಇದ್ದರೆ, ಅವುಗಳ ನಡುವಿನ ಅಂತರ 250 ಮೀಟರಿಗಿಂತಲೂ ಹೆಚ್ಚಿದ್ದರೆ ಅಂತರ್ಜಲವನ್ನು ಯುಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯ.[] ನಗರಗಳಲ್ಲಿ ಬಹುಮಹಡಿ ಕಟ್ಟಡಗಳ ನೀರಿನ ಪೂರೈಕೆಯನ್ನು ಮಾಡಲು ನೂರಾರು ಮೀಟರ್ ಆಳಕ್ಕೆ ಬೈರಿಗೆ ಕೊರೆಯುವುದುಂಟು. ಉದಾ : ಬೆಂಗಳೂರು ನಗರದಲ್ಲೇ ಸರ್ಕಾರಿ ಮತ್ತು ಖಾಸಗಿ ಕೊಳವೆ ಬಾವಿಗಳು ಸಾವಿರಾರು ಇವೆ. ನಿರಂತರ ನೀರೆತ್ತುವುದರಿಂದಾಗಿ ಅಂತರ್ಜಲ ಮಟ್ಟ ಕುಸಿದು ಈಗ ಸುಮಾರು ಮುನ್ನೂರು ಮೀಟರುವರೆಗೆ ಕೊಳವೆ ಬಾವಿಯನ್ನು ಕೊರೆಯುವ ಸಂದರ್ಭ ಎದುರಾಗಿದೆ. ಇದಲ್ಲದೆ ಕೈಗಾರಿಕೆಗಳಿಗೆ ವ್ಯಾಪಕವಾಗಿ ಅಂತರ್ಜಲ ಬಳಸುವುದು ಬಹು ದೊಡ್ಡ ಸಮಸ್ಯೆಯಾಗಿ ಅಮೂಲ್ಯವಾದ ಅಂತರ್ಜಲ ಭಂಡಾರ ಕರಗುತ್ತಿದೆ. ಇದರ ಜೊತೆಗೆ ನೀರಿನ ಮರುಪೂರಣೆ ಸಮರ್ಪಕವಾಗಿ ಆಗುತ್ತಿಲ್ಲ. ವಿಶೇಷವಾಗಿ ನಗರಗಳಲ್ಲೆವೂ ಕಾಂಕ್ರೀಟ್ ಕಾಡುಗಳಾಗಿರುವುದರಿಂದ ಟಾರು ರಸ್ತೆಗಳು ಮಳೆ ನೀರನ್ನು ಒಳಕ್ಕೆ ಇಳಿದು ಅಂತರ್ಜಲ ಭಂಡಾರವಾಗದಂತೆ ಪ್ರತಿಬಂಧಿಸುತ್ತಿವೆ. ಹಿಂದೆ ಯಥೇಚ್ಛವಾಗಿದ್ದ ಕೆರೆಗಳು ನಗರೀಕರಣದಿಂದಾಗಿ ಕಣ್ಮರೆಯಾಗುತ್ತಿವೆ. ಇದರ ಪರಿಣಾಮವಾಗಿ ಅಂತರ್ಜಲ ಭಂಡಾರಕ್ಕೆ ಸೇರುತ್ತಿದ್ದ ನೀರೂ ಕೂಡ ಅಲಭ್ಯವಾಗಿದೆ. ಇತ್ತೀಚೆಗೆ ಮಳೆ ನೀರು ಕೊಯ್ಲು ಎಂಬ ಪರಿಕಲ್ಪನೆ ಹೆಚ್ಚು ಪ್ರಜ್ಞಾವಂತರನ್ನು ಆಕರ್ಷಿಸಿದೆ. ಪ್ರತಿ ಮನೆಯಲ್ಲೂ ಇಂಗು ಬಾವಿಗಳನ್ನು ತೋಡಿ ನೀರನ್ನು ಇಂಗಿಸಿ ಅಂತರ್ಜಲ ಭಂಡಾರವನ್ನು ವೃದ್ಧಿಸುವ ಕೆಲಸ ಹೆಚ್ಚು ಚಾಲನೆ ಪಡೆಯುತ್ತಿದೆ.

ಅಂತರ್ಜಲ ಮಾಲಿನ್ಯ

ಬದಲಾಯಿಸಿ

ಅಂತರ್ಜಲ ಭಂಡಾರವೂ ಕೂಡ ಮಾಲಿನ್ಯದಿಂದ ಮುಕ್ತವಾಗಿಲ್ಲ. ವಿಶೇಷವಾಗಿ ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ಹೆಚ್ಚು ವಿಷಯುಕ್ತ ರಾಸಾಯನಿಕಗಳಿಂದ ಕೂಡಿದ್ದರೆ, ನಿಧಾನ ಗತಿಯಲ್ಲಿ ಅದು ಅಂತರ್ಜಲ ಭಂಡಾರವನ್ನು ಸೇರಬಲ್ಲದು. ನೀರನ್ನು ಮೀರೆಳೆದರೆ ಹೆಚ್ಚಿನ ಪ್ರಮಾಣದ ಲವಣಗಳು ಸಾರೀಕರಣವಾಗುವುದುಂಟು. ಗ್ರನೈಟ್ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಅದರಲ್ಲಿ ಸಹಜವಾಗಿರುವ ಫ್ಲೂರೈಡ್ ಖನಿಜ ನೀರಿನಲ್ಲಿ ವಿಲೀನವಾಗಿ ಅದನ್ನು ಬಳಸಿದವರಿಗೆ ಪ್ಲೂರೋಸಿಸ್ ಎಂಬ ಕಾಯಿಲೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮುಂತಾದ ಕಡೆಗಳಲ್ಲಿ ಮೆಕ್ಕಲು ಮಣ್ಣಿನಲ್ಲಿ ಆರ್ಸೆನಿಕ್ ಬೆರೆತು ತೀರ ವಿಷಕಾರಿಯಾಗಿ ಅನೇಕ ಚರ್ಮ ಕಾಯಿಲೆಗೆ ಕಾರಣವಾಗಿರುವುದುಂಟು. ಸೀಸ, ಪಾದರಸ ಮತ್ತು ಆರ್ಸೆನಿಕ್ ಖನಿಜಗಳು ಸುಲಭವಾಗಿ ನೀರಿನಲ್ಲಿ ವಿಲೀನವಾಗುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಅಂತರ್ಜಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಲಿಕ, ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನಿಸಿಯಮ್ , ಸೋಡಿಯಮ್, ಕಾರ್ಬೋನೇಟ್, ಬೈ ಕಾರ್ಬೋನೇಟ್, ಸಲ್ಫೇಟ್, ಕ್ಲೋರೈಡ್ ಮತ್ತು ನೈಟ್ರೇಟ್ ಗಳು ವಿಲೀನ ಸ್ಥಿತಿಯಲ್ಲಿರಬಹುದು. ಇವುಗಳ ಪ್ರಮಾಣ ಇಂತಿಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಪ್ರದೇಶದ ನಾಡಶಿಲೆಯ ರಾಸಾಯನಿಕ ಸಂಯೋಜನೆಯ ಮೇಲೆ ಅವಲಂಬಿಸಿರುತ್ತದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದಲೂ ಅವು ನೀರಿನಲ್ಲಿ ಕರಗಿ ನೆಲದೊಳಗೆ ಜಿನುಗಿ ಅಂತರ್ಜಲ ಭಂಡಾರವನ್ನು ಸೇರಿ ಕಲುಷಿತಗೊಳಿಸಬಹುದು.

ನೆಲದೊಳಗೆ ಶೇಖರವಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರತೆಗೆದರೆ ಅದು ಮೀರೆಳೆತ ಎನ್ನಿಸುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಇದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮೀರೆಳೆತದಿಂದ ಅಂತರ್ಜಲದ ಮಟ್ಟ ಕುಸಿದಾಗ ಸಾಗರದ ಉಪ್ಪು ನೀರು ಜಿನುಗಿ ಅಂತಿಮವಾಗಿ ಅಂತರ್ಜಲ ಭಂಡಾರವನ್ನು ಉಪ್ಪಾಗಿಸುತ್ತದೆ. ಇದೂ ಕೂಡ ಮಾಲಿನ್ಯದ ಒಂದು ಮುಖವೇ.

ಅಂತರ್ಜಲ ನಿಯಂತ್ರಣ ಮತ್ತು ನಿರ್ವಹಣೆಯತ್ತ ಸರ್ಕಾರ

ಬದಲಾಯಿಸಿ

ಕಾಯ್ದೆಗಳು

ಬದಲಾಯಿಸಿ
  • ಕರ್ನಾಟಕ ಅಂತರ್ಜಲ ಕಾಯ್ದೆ ( ನಿಯಂತ್ರಣ ಹಾಗೂ ನಿರ್ವಹಣೆ) (೨೦೧೧)

ಸಂಘ ಸಂಸ್ಥೆಗಳು

ಬದಲಾಯಿಸಿ

ಇದನ್ನೂ ನೋಡಿ

ಬದಲಾಯಿಸಿ

ಮೈಸೂರು ವಿಶ್ವವಿದ್ಯಾನಿಲದ ವಿಶ್ವಕೋಶದಲ್ಲಿ ಅಂತರ್ಜಲ ಕುರಿತಾದ ಲೇಖನ

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಅಂತರ್ಜಲ&oldid=1135296" ಇಂದ ಪಡೆಯಲ್ಪಟ್ಟಿದೆ