ಲೋಥಲ್

(ಲೋಥಾಲ್ ಇಂದ ಪುನರ್ನಿರ್ದೇಶಿತ)

ಲೋಥಲ್ ಪ್ರಾಚೀನ ಸಿಂಧೂತಟದ ನಾಗರೀಕತೆಯ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದು ಮತ್ತು ಗುಜರಾತ್‍ನ ಭಾಲ್ ಪ್ರದೇಶದಲ್ಲಿ ನೆಲೆಗೊಂಡಿದ್ದು ಕ್ರಿ.ಪೂ. ೩೭೦೦ ಕಾಲಮಾನದ್ದೆಂದು ಖಚಿತಪಡಿಸಿಕೊಳ್ಳಲಾಗಿದೆ. ೧೯೫೪ರಲ್ಲಿ ಪತ್ತೆಹಚ್ಚಲಾದ ಲೋಥಲ್ ಅನ್ನು ೧೯೫೫ರಿಂದ ೧೯೬೦ ರ ವರೆಗೆ ಭಾರತದ ಪುರಾತತ್ವ ಸರ್ವೇಕ್ಷಣೆಯು ಉತ್ಖನನ ಮಾಡಿತು. ಲೋಥಲ್‍ನ ಹಡಗುಕಟ್ಟೆಯು ಇಲ್ಲಿಯವರೆಗೆ ತಿಳಿಯಲಾಗಿರುವ ವಿಶ್ವದ ಅತ್ಯಂತ ಮುಂಚಿನದ್ದು ಮತ್ತು ನಗರವನ್ನು ಸಾಬರಮತಿ ನದಿಯ ಒಂದು ಪ್ರಾಚೀನ ಪಾತ್ರಕ್ಕೆ ಸಂಪರ್ಕಿಸುತ್ತಿತ್ತು. ಇದು ಸಿಂಧ್‍ನ ಹರಪ್ಪನ್ ನಗರಗಳು ಮತ್ತು ಸೌರಾಷ್ಟ್ರದ ಪರ್ಯಾಯದ್ವೀಪದ ನಡುವಿನ ವ್ಯಾಪಾರ ಮಾರ್ಗದ ಮೇಲಿತ್ತು. ಪ್ರಾಚೀನ ಕಾಲದಲ್ಲಿ ಇದು ಒಂದು ಪ್ರಮುಖ ಹಾಗೂ ಸಂಪನ್ನ ವ್ಯಾಪಾರ ಕೆಂದ್ರವಾಗಿತ್ತು, ಮತ್ತು ಮಣಿಗಳು, ರತ್ನಗಳು ಹಾಗೂ ಅಮೂಲ್ಯ ಆಭರಣಗಳ ಇದರ ವ್ಯಾಪಾರ ಪಶ್ಚಿಮ ಏಷ್ಯಾ ಹಾಗೂ ಆಫ಼್ರಿಕಾದ ದೂರದ ಮೂಲೆಗಳನ್ನು ಮುಟ್ಟುತ್ತಿತ್ತು. ಮಣಿ ತಯಾರಿಕೆ ಹಾಗೂ ಲೋಹಶಾಸ್ತ್ರದಲ್ಲಿ ಅವರು ಆರಂಭಿಸಿದ ತಂತ್ರಗಳು ಹಾಗೂ ಉಪಕರಣಗಳು ೪೦೦೦ ವರ್ಷಗಳಿಗಿಂತ ಹೆಚ್ಚು ದೀರ್ಘ ಕಾಲದವರೆಗೆ ನಡೆದಿವೆ.[]

ಲೋಥಲ್‍ನಲ್ಲಿನ ಮಾರ್ಜನ ಕೋಣೆಯ ಒಳಚರಂಡಿ ವ್ಯವಸ್ಥೆಯ ಪುರಾತತ್ವ ಅವಶೇಷಗಳು

೧೯೬೧ ರಲ್ಲಿ ಉತ್ಖನನವನ್ನು ಪುನರಾರಂಭಿಸಿದ ಪುರಾತತ್ವಶಾಸ್ತ್ರಜ್ಞರು ಕಂದಕಗಳನ್ನು ಬಹಿರಂಗಗೊಳಿಸಿದರು, ಹಾಗೂ ಹಡಗುಕಟ್ಟೆಯನ್ನು ನದಿಗೆ ಸಂಪರ್ಕಿಸುವ ಪ್ರವೇಶ ಕಾಲುವೆಗಳು ಮತ್ತು ನಾಲೆಗಳನ್ನು ಬೆಳಕಿಗೆ ತಂದರು. ಶೋಧನೆಗಳಲ್ಲಿ ದಿಬ್ಬ, ಒಂದು ಪಟ್ಟಣ, ಒಂದು ಮಾರುಕಟ್ಟೆ, ಮತ್ತು ಹಡಗುಕಟ್ಟೆ ಸೇರಿವೆ. ಸಿಂಧೂತಟದ ನಾಗರೀಕತೆಯ ತಿರುಳಾದ ಹರಪ್ಪ ಹಾಗೂ ಮೊಹೆಂಜೊ-ದಾರೋಗಳು ನಶಿಸಿದಾಗ, ಲೋಥಲ್ ಉಳಿದುಕೊಂಡಿತು ಜೊತೆಗೆ ಅನೇಕ ವರ್ಷಗಳವರೆಗೆ ಬೆಳೆಯಿತು ಎಂದು ತೋರುತ್ತದೆ. ಅದರ ನಿತ್ಯ ಅಪಾಯಗಳಾದ ಉಷ್ಣವಲಯದ ಬಿರುಗಾಳಿಗಳು ಹಾಗೂ ಪ್ರವಾಹಗಳು ಅಗಾಧ ವಿನಾಶ ಉಂಟುಮಾಡಿದವು, ಮತ್ತು ಇದರಿಂದ ಸಂಸ್ಕೃತಿ ಅಸ್ಥಿರಗೊಂಡು ಅಂತಿಮವಾಗಿ ಅದರ ಕೊನೆಯಾಯಿತು.

ಒಂದು ಪ್ರವಾಹವು ಕ್ರಿ.ಪೂ. ೨೩೫೦ರಲ್ಲಿ ಹಳ್ಳಿಯ ಅಡಿಪಾಯಗಳು ಮತ್ತು ನೆಲಸುಸ್ಥಳಗಳನ್ನು ನಾಶಮಾಡಿತು. ಲೋಥಲ್‍ನ ಸುತ್ತಲಿನ ಮತ್ತು ಸಿಂಧ್‍ನ ಹರಪ್ಪನ್ನರು ತಮ್ಮ ನೆಲಸುಪ್ರದೇಶವನ್ನು ವಿಸ್ತರಿಸಲು ಮತ್ತು ಸ್ಥೂಲವಾಗಿ ಸಿಂಧೂ ಕಣಿವೆಯಲ್ಲಿನ ದೊಡ್ಡ ನಗರಗಳನ್ನು ಹೋಲುವ ಒಂದು ಯೋಜಿತ ಪಟ್ಟಣವನ್ನು ನಿರ್ಮಿಸಲು ಈ ಅವಕಾಶವನ್ನು ಬಳಸಿಕೊಂಡರು. ಲೋಥಲ್‍ನ ಯೋಜಕರು ಈ ಪ್ರದೇಶವನ್ನು ಸತತ ಪ್ರವಾಹಗಳಿಂದ ರಕ್ಷಿಸಲು ತಮ್ಮನ್ನು ತೊಡಗಿಸಿಕೊಂಡರು. ಪಟ್ಟಣವನ್ನು ೧-೨ ಮೀಟರ್ ಎತ್ತರದ ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳ ವೇದಿಕೆಗಳ ಖಂಡಗಳಾಗಿ ವಿಭಜಿಸಲಾಗಿತ್ತು, ಪ್ರತಿಯೊಂದು ವೇದಿಕೆಯಲ್ಲಿ ದಪ್ಪ ಮಣ್ಣು ಹಾಗೂ ಇಟ್ಟಿಗೆ ಗೋಡೆಗಳ ೨೦-೩೦ ಮನೆಗಳಿದ್ದವು. ನಗರವನ್ನು ದುರ್ಗ ಹಾಗೂ ಕೆಳ ಪಟ್ಟಣವಾಗಿ ವಿಭಜಿಸಲಾಗಿತ್ತು. ಪಟ್ಟಣದ ಆಡಳಿತಗಾರರು ದುರ್ಗದಲ್ಲಿ ನೆಲೆಸುತ್ತಿದ್ದರು. ದುರ್ಗದಲ್ಲಿ ಸುಸಜ್ಜಿತ ಸ್ನಾನಮನೆಗಳು, ಭೂಗತ ಹಾಗೂ ಮೇಲ್ಮೈ ಚರಂಡಿಗಳು (ಗೂಡಿನಲ್ಲಿ ಬೇಯಿಸಿದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು) ಮತ್ತು ಕುಡಿಯುವ ನೀರಿನ ಬಾವಿ ಇತ್ತು. ಕೆಳ ಪಟ್ಟಣವನ್ನು ಎರಡು ವಲಯಗಳಾಗಿ ವಿಭಜಿಸಲಾಗಿತ್ತು. ಒಂದು ಉತ್ತರ-ದಕ್ಷಿಣ ಪ್ರಧಾನ ರಸ್ತೆ ಮುಖ್ಯ ವಾಣಿಜ್ಯ ಪ್ರದೇಶವಾಗಿತ್ತು. ಅದರ ಎರಡೂ ಬದಿಗೆ ಶ್ರೀಮಂತ ಹಾಗೂ ಸಾಮಾನ್ಯ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳ ಅಂಗಡಿಗಳಿದ್ದವು. ವಸತಿ ಪ್ರದೇಶ ಮಾರುಕಟ್ಟೆಯ ಎರಡೂ ಕಡೆಗೆ ಸ್ಥಿತವಾಗಿತ್ತು. ಲೋಥಲ್‍ನ ಸಂಪನ್ನತೆಯ ವರ್ಷಗಳಲ್ಲಿ ಕೆಳ ಪಟ್ಟಣವನ್ನು ನಿಯತಕಾಲಿಕವಾಗಿ ಹಿಗ್ಗಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. "Excavations – Important – Gujarat". Archaeological Survey of India. Archived from the original on 11 ಅಕ್ಟೋಬರ್ 2011. Retrieved 25 October 2011.
"https://kn.wikipedia.org/w/index.php?title=ಲೋಥಲ್&oldid=1059576" ಇಂದ ಪಡೆಯಲ್ಪಟ್ಟಿದೆ