ಕಾರ್ಕಳ

ಉಡುಪಿ ಜಿಲ್ಲೆಯ ಒಂದು ತಾಲ್ಲೂಕು
ಕಾರ್ಕಳ
India-locator-map-blank.svg
Red pog.svg
ಕಾರ್ಕಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಉಡುಪಿ
ನಿರ್ದೇಶಾಂಕಗಳು 13.2° N 74.983° E
ವಿಸ್ತಾರ
 - ಎತ್ತರ
೨೩.೦೬ km²
 - 80 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೨೫೧೧೮
 - ೧೦೮೯.೧೬/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೪ ೧೦೪
 - +೦೮೨೫೮
 - ಕೆಎ-೨೦
ಅಂತರ್ಜಾಲ ತಾಣ: Karkala Municipal Office
ಕಾರ್ಕಳದ ಗೊಮ್ಮಟೇಶ್ವರ ಮೂರ್ತಿ

ಪೀಠಿಕೆಸಂಪಾದಿಸಿ

ಕಾರ್ಕಳ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸುಮಾರು ೩೬೦ ಕಿ. ಮೀ ದೂರದಲ್ಲಿದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾಲಕ್ರಮೇಣ ಇಲ್ಲಿರುವ ಕರಿ ಬಂಡೆಗಳಿಂದ "ಕರಿಕಲ್ಲು" ಎಂದು ಪ್ರಸಿದ್ಧವಾಗಿತ್ತು. ಮುಂದೆ 'ಕರಿಕಲ್ಲು' ತುಳುವಿನಲ್ಲಿ 'ಕಾರ್ಲ'ವೆಂದು ಮಾರ್ಪಟ್ಟು ಕನ್ನಡದಲ್ಲಿ 'ಕಾರ್ಕಳ' ಎಂದು ಹೆಸರಾಗಿದೆ. ೪೨ ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳವು ಪ್ರವಾಸಿ ಸ್ಥಳವಾಗಿ ಛಾಪು ಮೂಡಿಸಿದೆ.[೧]

ಇತಿಹಾಸಸಂಪಾದಿಸಿ

ಕಾರ್ಕಳದ ಇತಿಹಾಸದ ಬಗ್ಗೆ ೧೦ನೇ ಶತಮಾನದ ಆದಿಯಿಂದ ಹಲವು ಮಾಹಿತಿಗಳು ಲಭ್ಯವಾಗಿವೆ

ಪದಗಳ ಮೂಲಸಂಪಾದಿಸಿ

  • ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾರ್ಕಳದ ಆಸುಪಾಸಿನ ಪ್ರದೇಶದಲ್ಲಿ ಬಂಡೆಕಲ್ಲು ಹೇರಳವಾಗಿರುವುದರಿಂದ "ಕರಿಕಲ್ಲು" ಎಂದು ಜನಜನಿತವಾಗಿತ್ತು. ಇನ್ನೂ ಕೆಲವು ಮೂಲಗಳ ಪ್ರಕಾರ ಕಾರ್ಕಳದ ಮಧ್ಯಭಾಗದಲ್ಲಿರುವ 'ಆನೆಕರೆ'ಯು ಹಿಂದೆ 'ಕರಿ-ಕೊಳ' ಎಂದು ಹೆಸರಾಗಿತ್ತೆಂದೂ, ಅದರಿಂದ ಕಾರ್ಕಳದ ಹೆಸರು ಊರಿಗೆ ಬಂತೆಂದೂ ತಿಳಿದುಬರುತ್ತದೆ.
  • ಕಾರ್ಕಳದಲ್ಲಿ ಬಹುಸಂಖ್ಯೆಯಲ್ಲಿರುವ ತುಳುವರು "ಕಾರ್ಲ" ಎಂದು ಕರೆಯುತ್ತಾರೆ ಹಾಗೆಯೇ, ಕೊಂಕಣಿ ಮಾತನಾಡುವ ಜನರು "ಕಾರ್ಕೊಳ್" ಎಂದು ಕರೆಯುತ್ತಾರೆ. ಕಾರ್ಕಳವು ಇಲ್ಲಿರುವ ಜೈನ ಬಸದಿಗಳು ಮತ್ತು ಗೊಮ್ಮಟೇಶ್ವರ ಮೂರ್ತಿಯಿಂದ "ಜೈನ ತೀರ್ಥ" ಎಂದೂ ಪ್ರಸಿದ್ದವಾಗಿದೆ.

ಪ್ರಾಚೀನ ಕಾರ್ಕಳಸಂಪಾದಿಸಿ

  • ಕಾರ್ಕಳದಲ್ಲಿ ಜನಜೀವನ ಎಂದು ಆರಂಭವಾಯಿತು ಎಂಬುದಕ್ಕೆ ಅನಾದಿಕಾಲದ ಆಧಾರಗಳು ನಮಗೆ ಸಿಗುತ್ತಿಲ್ಲವಾದರೂ ಬೃಹತ್ ಶಿಲಾಯುಗಕ್ಕೆ ಕಾಲಿಟ್ಟಾಗ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ. ಇಲ್ಲಿ ಹೆಸರಿಸಬಹುದಾವು ಗಳೆಂದರೆ ಗವಿಗಳು ಮತ್ತು ಸಮಾಧಿಗಳು. ಇಲ್ಲಿನ ಹಿರಿಯಂಗಡಿ ಬಳಿ ಇರುವ ಪರ್ಪಲೆ ಬೆಟ್ಟದ ಮಧ್ಯಭಾಗದಲ್ಲಿ ಒಂದು ಗವಿ ಇದೆ. ಪೂರ್ವಕ್ಕೆ ಮುಖವಿರುವ ಈ ಮುರಕಲ್ಲು ಗವಿ ಬೃಹತ್ ಶಿಲಾಯುಗದ್ದು.
  • ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು. ಗವಿಯ ಮುಂದೆ ಕಿರಿದಾದ ಸಣ್ಣ ಕಣಿವೆ, ಇಲ್ಲೊಂದು ಅಷ್ಟೇ ಸಣ್ಣದಾದ ಝರಿ. ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈ ಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ. ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ (Rock Shelters) ಕುರುಹುಗಳಿವೆ.
  • ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ. ರೆಂಜಾಳದ ಸಮೀಪ ಇರುವ ಬೋರುಕಟ್ಟೆ ಎಂಬ ಹಳ್ಳಿಯಲ್ಲಿ ಒಂದು ಬೃಹತ್ ಶಿಲಾ ಸಮಾಧಿ ಇದೆ. ಇದನ್ನು ಅಲ್ಲಿನ ಜನ “ಪಾಂಡವರಕಲ್ಲು” ಎಂದು ಕರೆಯುತ್ತಾರೆ. ಈ ಹೆಸರು ಸಮಾಧಿಯ ಪ್ರಾಚೀನತೆಯನ್ನು ಸೂಚಿಸುತ್ತದೆ ಅಷ್ಟೇ. ಜಿಲ್ಲೆಯ ಇತರೆಡೆಗಳಲ್ಲೂ ಪಾಂಡವರಕಲ್ಲು ಎಂದು ಕರೆಸಿಕೊಳ್ಳುವ ಸ್ಥಳಗಳಿವೆ.
  • ಬೋರುಕಟ್ಟೆ ಸಮಾಧಿಯು ಸಣ್ಣ ರಂಧ್ರದ (Pot-hole) ಸಮಾಧಿ. ಇದರ ಮೇಲೆ ತೆಳುವಾದ ಕಲ್ಲು ಚಪ್ಪಡಿಗಳ ಒಂದು ಚಪ್ಪರ ಇದೆ. ಮಾನವ ಆ ವೇಳೆಗೆ ಲೋಹದ ಮುಖ್ಯವಾಗಿ, ಕಬ್ಬಿಣದ ಉಪಯೋಗ ಪಡೆದಿದ್ದನೆಂಬುದಕ್ಕೆ ಇದು ಸಾಕ್ಷಿ. ಇಲ್ಲಿನ ಬೃಹತ್ ಶಿಲಾಯುಗದ ಸ್ಮಾರಕಗಳು ಸುಮಾರು ಕ್ರಿ. ಪೂ. 4ನೇಯ ಶತಮಾನ ಮತ್ತು ಅನಂತರದ ಕಾಲವೆಂದು ಅಂದಾಜಿಸಬಹುದು. ಆದರೆ ವೈಜ್ಞಾನಿಕವಾಗಿ ಉತ್ಖನನ ಕಾರ್ಯ ನಡೆಯುವವರೆಗೆ ಈ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಕಾರ್ಕಳದ ಇತಿಹಾಸಸಂಪಾದಿಸಿ

  • ಅಲುಪರು ಕಾರ್ಕಳವನ್ನಾಳಿದವರಲ್ಲಿ ಮೊದಲಿಗರು. ತದನಂತರ ಸಂತರು ಆಳ್ವಿಕೆಯನ್ನು ಮುಂದುವರೆಸಿದರು. ಕಾರ್ಕಳ ಅಥವಾ ಪ್ರಾಚೀನ ಪಾಂಡ್ಯನಗರಿ, ಭೈರರಸ ಒಡೆಯರಿಂದ ಕ್ರಿ. ಶ. ೧೩-೧೬ನೇ ಶತಮಾನದಲ್ಲಿದ್ದ ಕಳಸ-ಕಾರ್ಕಳ ಸಾಮ್ರಾಜ್ಯದ ಕಾಲದಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆಯಿತು. ಕಾರ್ಕಳದ ರಾಜಮನೆತನ ಹೊಯ್ಸಳರ ಕಾಲದಲ್ಲಿ ಪ್ರಾಧಾನ್ಯ ಪಡೆದುಕೊಂಡಿತು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ವೈಭವವನ್ನು ಇನ್ನೂ ವಿಸ್ತರಿಸಿಕೊಂಡಿತು.
  • ರಾಜ್ಯವು ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಈಗಿನ ಕಾರ್ಕಳ ತಾಲೂಕನ್ನೊಳಗೊಂಡು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ರಾಜಮನೆತನವು ಬಹಳ ಶ್ರೀಮಂತವಾಗಿದ್ದು ಸಾಕಷ್ಟು ದೊಡ್ಡದಾದ ಸೈನ್ಯವನ್ನು ಹೊಂದಿತ್ತು. ಭೈರರಸರ ಕಾಲದಲ್ಲಿ ಕಾರ್ಕಳವು ಜೈನಕ್ಷೇತ್ರವಾಗಿ ಮಾರ್ಪಟ್ಟಿತು. ಅರಸರು ಸಾಕಷ್ಟು ಬಸದಿಗಳನ್ನೂ ಕೆರೆಗಳನ್ನೂ ಕಟ್ಟಿಸಿದರು. ಅರಸರು ಕಟ್ಟಿಸಿದ ಬಸದಿಗಳು ಸುಮಾರು ೧೮ರಷ್ಟಿವೆ.


ಕಾರ್ಕಳದ ಬಾಹುಬಲಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಬೀರ ಕಲ್ಕುಡ- ಪ್ರಸ್ತುತ ಕಲ್ಕುಡ ಎಂಬ ನಾಮದೇಯದಿಂದ ದೈವಗಳಾಗಿ ತುಳುನಾಡಿನಲ್ಲಿ ಪೂಜಿಸಲ್ಪಡುತ್ತದೆ. ಇವರ ತಂದೆ ಶಂಬು ಕಲ್ಕುಡ ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ಕೆತ್ತಿದ್ದಾರೆ ಎಂದು ತುಳುನಾಡಿನ ಶಾಸನಗಳು ತಿಳಿಸುತ್ತವೆ.


ಬಾಹುಬಲಿಗೆ ಮಹಾಮಜ್ಜನಸಂಪಾದಿಸಿ

ಐದು ಅಡಿ ಎತ್ತರದ ವಿಶಾಲ ಕರಿಕಲ್ಲು ಬಂಡೆಯ ಮೇಲೆ 180 ಮೆಟ್ಟಿಲುಗಳ ತುತ್ತ ತುದಿಯಲ್ಲಿ 42 ಅಡಿ ಆಳೆತ್ತರದಲಿ ನಿಂತಿರುವ ಬಾಹುಬಲಿಮಹಾಮಸ್ತಾಭಿಷೇಕಕ್ಕೆ ಕಾರ್ಕಳ ಸಜ್ಜಾಗಿ ನಿಂತಿದೆ.

ತಪಸ್ಸು ಮಾಡುತ್ತಿರುವಂತೆ ಗೋಚರಿಸುವ ಈ ಮೂರ್ತಿಯದ್ದು ‘ಕಾಯೋತ್ಸರ್ಗ’ ಅಥವಾ ‘ಪ್ರತಿಮಾ ಯೋಗ ಭಂಗಿ’ ಎನ್ನಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಇದೇ 21-1-2015ರಿಂದ 31-1-2015ರವರೆಗೆ ಕಾರ್ಕಳ ಸಾಕ್ಷಿಯಾಗಲಿದೆ. ಈ ಮೊದಲು 2002 ರಲ್ಲಿ ಮಹಾ ಮಜ್ಜನ ನಡೆದಿತ್ತು. 12 ವರ್ಷದ ಲೆಕ್ಕದಲ್ಲಿ ನೋಡಿದರೆ ಕಳೆದ ವರ್ಷವೇ ಮಸ್ತಕಾಭಿಷೇಕ ನಡೆಯಬೇಕಿತ್ತು. ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲಾಯಿತು. ಚತುರ್ವಿಂಶತಿ ತೀರ್ಥಂಕರರ ಆರಾಧನೆ ದಕ್ಷಿಣ ಕನ್ನಡ ಜಿಲ್ಲೆ -ಕಾರ್ಕಳದಲ್ಲಿ (ಹೆಬ್ರಿ), 29/01/2015 ರಂದು ಕಾರ್ಕಳ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಗೊಮ್ಮಟ ಬೆಟ್ಟದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ರಾಜಪುರೋಹಿತರ ನೇತೃತ್ವದಲ್ಲಿ ನಡೆಯುತ್ತಿದ್ದರೆ ಮಹಾಮಸ್ತಕಾಭಿಷೇಕ ಮಹೋತ್ಸವದ 9ನೇ ದಿನ ಪಟ್ಟಣ ಶೆಟ್ಟಿ ಮೈದಾನದ ಭೈರವರಸು ಸಭಾಮಂಟಪದ ವೀರಪಾಂಡ್ಯ ವೇದಿಕೆಯಲ್ಲಿ ಚತುರ್ವಿಂಶತಿ ತೀರ್ಥಂಕರರ ಆರಾಧನೆಯ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಧ್ವಜಪೂಜೆ, ನೇಮಿನಾಥ ಮುನಿಮಹಾರಾಜರು ಬಾಹುಬಲಿ ಬೆಟ್ಟಕ್ಕೆ ಹೊರಡುವುದು. ನಿತ್ಯವಿಧಿ ಸಹಿತ ಗಂಧ ಯಂತ್ರಾರಾಧನೆ, ಮಂತ್ರನ್ಯಾಸ ಕಲಾರೋಪಣ ಪೂರ್ವಕ ಕೇವಲಜ್ಞಾನ ಕಲ್ಯಾಣದ ಬಳಿಕ ಮಧ್ಯಾಹ್ನ 12.06ರ ವೇಳೆಗೆ ನಯನೋನ್ಮಿಲನ ಕಾರ್ಯಕ್ರಮ ನಡೆಯಿತು. ವೀರ ಪಾಂಡ್ಯ ವೇದಿಕೆಯಲ್ಲಿ ಅಷ್ಟವಿಧ್ಯಾರ್ಚನೆ ಪೂಜಾ ವಿಧಾನದಲ್ಲಿ ಚತುರ್ವಿಂಶತಿ ತೀರ್ಥಂಕರರ ಆರಾಧನೆಯನ್ನು ರಾಜಪುರೋಹಿತರು ನಡೆಸಿ ಕೊಟ್ಟರು. ಭಗೀರಥ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು. ನವರತ್ನ ದೋಣಿ ಸಹಿತ ಆವರಣ, ವಜ್ರ ಮುತ್ತು ರತ್ನಗಳ ತೋರಣ ಬಂಗಾರದ ಮಾನಸ್ತಂಭ, ಜಿನಾಲಯ, ಚೈತ್ಯಭೂಮಿ, ನಾಟ್ಯ ಸೇವೆ, ಉಪವನ, ಧ್ವಜಭೂಮಿ, ಬೆಳ್ಳಿಕೋಟೆ, ಉನ್ನತ ಕೇಂದ್ರವಾದ ಎರಡು ಬಂಗಾರದ ಪೀಠ, ರತ್ನ ಪೀಠ, ಸುವರ್ಣ ಕಮಲ ಸಹಿತ ಪೀಠದಲ್ಲಿ ವಿರಾಜಮಾನ ನೇಮಿನಾಥ ಸ್ವಾಮಿಯ ಸಮವಸರಣ ಭಕ್ತಿಗಾನ ನೃತ್ಯ ವೈಭವ ನಡೆಯಿತು. ಸರ್ವಯಕ್ಷ ಧರ್ಮಚಕ್ರ ಹೊತ್ತು ವೀರ ಪಾಂಡ್ಯ ವೇದಿಕೆ ಸಮವಸರಣ ಮಂಟಪಕ್ಕೆ ಕೊಂಬು ಕಹಳೆ ವಾಧ್ಯ ಘೋಷದೊಂದಿಗೆ ಬಂದಿರುವುದು ಭಕ್ತಿ, ರಾಜವೈಭವದ ಕಳೆ ನೀಡಿತು. 11 ಮಂದಿ ಗಣಾ ಧಾರಿಗಳು ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ಅಷ್ಟವಿಧ ಅರ್ಚನೆಗಳು ನಡೆದವು. ಕಾರ್ಕಳ ಜೈನಮಠಲಲಿತಾಕೀರ್ತಿ ಭಟ್ಟಾರಕ ಸ್ವಾಮೀಜಿ, ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, 108 ಏಲಾಚಾರ್ಯ ನಿಜಾನಂದ ಮುನಿ ಮಹಾರಾಜರು, 108 ಚಿನ್ಮಯ ಸಾಗರ ಮುನಿ ಮಹಾರಾಜರು, ಪಾವನ ಕೀರ್ತಿ ಮುನಿಮಹಾರಾಜರು, ಪ್ರಸಂಗ ಸಾಗರ ಮುನಿ ಮಹಾರಾಜರು, ಶ್ರಾವಕ ಶ್ರಾವಕಿಯರು ಮತ್ತು ಭೈರವರಸು ಸಭಾಮಂಟಪದಲ್ಲಿ ಜೈನ ಧರ್ಮ ಮತ್ತು ಸರ್ವಧರ್ಮದ ಸಾವಿರಾರು ಭಕ್ತ ಸಮೂಹ ಭಗವಾನ್ ನೇಮಿನಾಥ ಸ್ವಾಮಿಯ ಸಮವಸರಣ ಮತ್ತು ತೀರ್ಥಂಕರರ ಆರಾಧನೆಗೆ ಸಾಕ್ಷಿಯಾದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಶ್ರದ್ಧಾ, ಅಮೀತ್, ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ನಿರಂಜನ್ ಕುಮಾರ್, ಪದ್ಮಪ್ರಿಯ, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಮತ್ತು ಕುಟುಂಬಸ್ಥರು ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು. ಬೆಂಗಳೂರಿನ ದಿವ್ಯಾಕುಮಾರ್ ಬಳಗದವರು ವಿಧಿಗಳನ್ನು ನೆರವೇರಿಸಿದರೆ ಅಜಿತ್ ಕುಮಾರ್ ಕೊಕ್ರಾಡಿ, ಮುನಿರಾಜ ರೆಂಜಾಳ ನಿರೂಪಿಸಿದರು.(ಆಧಾರ:ಪ್ರಜಾವಾಣಿ-೩೦-೧-೨೦೧೫)

ಹನ್ನೆರಡು ವರ್ಷದ ನಿಯಮಸಂಪಾದಿಸಿ

ದಿ.21-1-2015 ರಿಂದ 10 ದಿನ ಬಾಹುಬಲಿ 12 ವರ್ಷಗಳ ಕಾಲ ತಪಸ್ಸು ಮಾಡಿದ ಕಾರಣ ಅಷ್ಟೇ ವರ್ಷಕ್ಕೆ ಮಸ್ತಕಾಭಿಷೇಕ ಮಾಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಒಂದು ಹೊಸ ಮನೆಯನ್ನು ಕಟ್ಟಿ ಪೂಜಾ ಕೈಂಕರ್ಯಗಳನ್ನು ಪೂರೈಸಿ ಗೃಹ ಪ್ರವೇಶ ಮಾಡಿದ ನಂತರ ಮತ್ತೆ 12 ವರ್ಷದ ನಂತರ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಅದೇ ರೀತಿ ಇಲ್ಲಿಯೂ 12 ವರ್ಷಗಳಿಗೊಮ್ಮೆ ಮಹಾ ಮಜ್ಜನ, ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ ಎನ್ನಲಾಗುತ್ತದೆ. ಬೃಹತ್‌ ಗಾತ್ರದ ಮೂರ್ತಿಗೆ ಪ್ರತಿ ನಿತ್ಯವೂ ಅಭಿಷೇಕ ಮಾಡುವುದು ಅಸಾಧ್ಯ ಮತ್ತು ಅತಿ ವೆಚ್ಚದಾಯಕವಾದ್ದರಿಂದ 12 ವರ್ಷಗಳಿಗೊಮ್ಮೆ ಅಭಿಷೇಕ ಮಾಡಲಾಗುತ್ತದೆ. ಆ ನೆಪದಲ್ಲಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ಸರ್ಕಾರ 15 ಕೋಟಿ ಬಿಡುಗಡೆ ಮಾಡಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ. ಮಹಾಮಸ್ತಕಾಭಿಷೇಕ ಮಾಡಲು ಬೃಹತ್‌ ಅಟ್ಟಣಿಗೆಯನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 500 ಜನರು ಇದರಲ್ಲಿ ನಿಲ್ಲಬಹುದು. ನೀರು, ಎಳನೀರು, ಹಾಲು, ಕಬ್ಬಿನ ಹಾಲು, ಅಕ್ಕಿಹಿಟ್ಟು, ಅರಿಶಿಣ, ಅಷ್ಟಗಂಧ ಮತ್ತು ವನಸ್ಪತಿಗಳಿಂದ ತಯಾರಿಸಿದ ಕಷಾಯದಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲ ದಿನ 108 ಕಲಶಗಳನ್ನು ಇಟ್ಟರೆ ಕೊನೆಯ ದಿನ 1008 ಕಲಶಗಳನ್ನಿಡಲಾಗುತ್ತದೆ. 31ರಂದು ಪೂಜಾ ಕೈಂಕರ್ಯದ ವಿಸರ್ಜನೆ ಮತ್ತು ಮಹಾಪ್ರಸಾದ ವಿತರಣೆ ನಡೆಯುತ್ತದೆ.(ಪ್ರಜಾವಾಣಿ-ಎಂ.ನವೀನ್‌ ಕುಮಾರ್‌-Tue, 13/01/2015-ಆಧಾರ)

ಧಾರ್ಮಿಕ ವಿಧಿಗಳಿಗೆ ಚಾಲನೆಸಂಪಾದಿಸಿ

ಕಾರ್ಕಳದಲ್ಲಿ ಬುಧವಾರ ದಿ.21-1-2015 ರಂದು ಬಾಹುಬಲಿ ಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಧಾರ್ಮಿಕ ವಿಧಿಗಳಿಗೆ ಸಂಭ್ರಮದ ಚಾಲನೆ ದೊರಕಿತು. ಇಲ್ಲಿನ ಹಿರಿಯಂಗಡಿ ನೇಮಿನಾಥ ಬಸದಿಯಿಂದ ಬೆಳಿಗ್ಗೆ ನೇಮಿನಾಥ ಸ್ವಾಮಿ ಹಾಗೂ ಕೂಷ್ಮಾಂಡಿನಿ ದೇವಿಯ ವಿಹಾರ ಹೊರಟಿತು.

ದೇವರ ಹೊತ್ತ ಮೆರವಣಿಗೆಯ ಎರಡೂ ಸಾಲುಗಳಲ್ಲಿ ಸಮವಸ್ತ್ರ ಧರಿಸಿ ಪೂರ್ಣಕುಂಭಗಳನ್ನು ಹಿಡಿದ ಸ್ತ್ರೀಯರು, ಚಂಡೆಮದ್ದಲೆ, ನಾಗಸ್ವರ ವಾದನ, ಧ್ವಜಪತಾಕೆಗಳ ಬಿರುದು ಬಾವಲಿಗಳು, ಜೈನಮಠಾಧೀಶ ಲಲಿತಕೀರ್ತಿ ಭಟ್ಟಾರಕ ಸ್ವಾಮಿ, ೧೦೮ ಪ್ರಸಂಗ ಸಾಗರ ಮುನಿಮಹಾರಾಜ, ೧೦೮ ಶ್ರೀ ಪಾವನಕೀರ್ತಿ ಮುನಿಗಳು ಹಾಗೂ ಅಸಂಖ್ಯ ಜನ ಶ್ರಾವಕರು ಭಾಗವಹಿಸಿದರು.

ಬಾಹುಬಲಿ ಬೆಟ್ಟಕ್ಕೆ ವಿಹಾರ ತಲುಪಿದ ಬಳಿಕ ಮಸ್ತಕಾ­ಭಿಷೇಕದ ಧಾರ್ಮಿಕ ವಿಧಿ ವಿಧಾನ­ಗಳು ಆರಂಭಗೊಂಡವು. ಬೆಟ್ಟದಲ್ಲಿ ಮೊದಲು ಇಂದ್ರ ಪ್ರತಿಷ್ಠೆಯ ವಿಧಿಯಂತೆ ೧೧ ದಿನಗಳ ಧಾರ್ಮಿಕ ಮಹೋತ್ಸವದ ಪುರೋಹಿತರನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯಿತು. ತೋರಣ ಮುಹೂರ್ತ ನಡೆದ ನಂತರ ವಿಮಾನ ಶುದ್ಧಿ(ಪರಿಸರ ಶುದ್ಧಿಗೊಳಿಸುವಿಕೆ) ನಡೆಯಿತು.

ಮಧ್ಯಾಹ್ನ ಚೈತ್ಯಾಲಯಕ್ಕೆ ಹೊದಿಸಿದ ಮುಖವಸ್ತ್ರ ಉದ್ಘಾಟನೆ ನಡೆದ ಬಳಿಕ ನಾಂದಿಮಂಗಲ ಪೂಜೆ, ವಾಸ್ತು­ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣ ಮೊದಲಾವು ಕ್ರಮವಾಗಿ ನಡೆದವು. ಬೆಟ್ಟದ ಎಡಭಾಗದಲ್ಲಿರುವ ಯಜ್ಞಶಾಲೆಯಲ್ಲಿ ಸ್ಥಾಪಿಸಲಾದ ಶ್ರೀಪೀಠದಲ್ಲಿರುವ ದೇವರ ಮೂರ್ತಿಗೆ, ಯಕ್ಷ ಪೀಠದಲ್ಲಿರುವ ಸರ್ವಾಹ್ಣ ಯಕ್ಷಮೂರ್ತಿಗೆ, ನಾಂದಿಪೀಠದಲ್ಲಿ ಸ್ಥಾಪಿಸಲಾದ ೯ ಕಲಶಗಳಿಗೆ, ಪಾಂಡುಕ ಶಿಲೆಯಲ್ಲಿರುವ ಜಿನಬಿಂಬಕ್ಕೆ ಅಭಿಷೇಕ ನಡೆದವು.

ಅಂಕುರಾರ್ಪಣ ವಿಧಿಯಂತೆ ಕಡಲೆ, ಹೆಸರು, ಹುರುಳಿ, ತೊಗರಿ, ಗೋಧಿ, ಭತ್ತ ಹಾಗೂ ಅವರೆ ಮುಂತಾದ ೯ಬಗೆಯ ಧಾನ್ಯಗಳನ್ನು ಮೊಳಕೆಗೆ ಹಾಕಲಾಯಿತು. ತೀರ್ಥಂಕರ ಕುಂಡ, ಮುನಿ ಕುಂಡ, ಗಣಧರ ಕುಂಡ ಹಾಗೂ ಪಾಂಡುಕ ಶಿಲೆಗಳಲ್ಲಿ ಪೂಜಾವಿಧಿ ನಡೆದವು. ಸಮಸ್ತ ಭಕ್ತಜನರ ಸಂಭ್ರಮದ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರತಿಷ್ಠಾ ಪುರೋಹಿತ ಹಿರಿಯಂಗಡಿಯ ನಾಗಕುಮಾರ ಇಂದ್ರ ಅವರ ನೇತೃತ್ವದಲ್ಲಿ ಆರಂಭಗೊಂಡವು. ಪ್ರಧಾನ ಪುರೋಹಿತರ ಜೊತೆಗೆ ಬೆಟ್ಟದ ಪುರೋಹಿತ ನಾಗರಾಜ ಇಂದ್ರ ಹಾಗೂ ಇತರ ೨೧ ಮಂದಿ ಇಂದ್ರರು ಪೂಜಾ ವಿಧಾನಗಳಲ್ಲಿ ಭಾಗವಹಿಸಿದರು.[೧]

ಸಂಸ್ಕೃತಿಸಂಪಾದಿಸಿ

ಮತ-ಧರ್ಮಗಳುಸಂಪಾದಿಸಿ

ಕಾರ್ಕಳವು ಜೈನಕಾಶಿ ಎಂದೇ ಖ್ಯಾತಿ ಪಡೆದಿದ್ದು ಇಲ್ಲಿ ಜೈನಧರ್ಮೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸುಮಾರು ೧೮ ಜೈನ ಬಸದಿಗಳು ಕಾರ್ಕಳದಲ್ಲಿವೆ. ಅವುಗಳಲ್ಲಿ ಚತುರ್ಮುಖ ಬಸದಿಯು ತನ್ನ ವಾಸ್ತುಶಿಲ್ಪದ ಹಿರಿಮೆಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕಾರ್ಕಳದಲ್ಲಿರುವ ೪೨ ಅಡಿ ಎತ್ತರದ ಬಾಹುಬಲಿ ಪ್ರತಿಮೆಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಏಕಶಿಲಾ ಪ್ರತಿಮೆಯಾಗಿದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಕಾರ್ಕಳ ತಾಲೂಕಿನಲ್ಲಿ ಹಿಂದೂ-ಕ್ರೈಸ್ತ-ಮುಸಲ್ಮಾನ-ಜೈನ ಧರ್ಮಗಳು ಪಾಲಿಸಲ್ಪಡುತ್ತವೆ. ಕಾರ್ಕಳದ ಅನಂತಪದ್ಮನಾಭ ದೇವಸ್ಥಾನ, ಪಡುತಿರುಪತಿ ಎಂದೇ ಖ್ಯಾತವಾದ ವೆಂಕಟರಮಣ ದೇವಳ ಕಾರ್ಕಳ ಪೇಟೆಯ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದವು. ಕಾರ್ಕಳದ ಅತ್ತೂರಿನ ಚರ್ಚ್(ಇಗರ್ಜಿ) ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಕ್ರೈಸ್ತರಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ಭಾಷೆಸಂಪಾದಿಸಿ

ತುಳುನಾಡಿನ ಉತ್ತರ ದಿಕ್ಕಿನಲ್ಲಿ ಕಾರ್ಕಳ ತಾಲೂಕು ಗಡಿಯಾಗಿದ್ದು ತುಳುವೇ ಇಲ್ಲಿನ ಪ್ರಮುಖ ಆಡುಭಾಷೆಯಾಗಿದೆ. ಸಂಖ್ಯೆಯಲ್ಲಿ ಹೆಚ್ಚಿರುವ ತುಳುವರು ಕನ್ನಡವನ್ನೂ ಬಲ್ಲವರಾಗಿದ್ದು ಕನ್ನಡವು ಇಲ್ಲಿ ಪ್ರಮುಖ ಭಾಷೆಯಾಗಿದೆ. ಕಾರ್ಕಳ ಪಟ್ಟಣದಲ್ಲಿ ಕೊಂಕಣಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿ ವಾಸವಾಗಿರುತ್ತಾರೆ. ಇತರ ಭಾಷೆಗಳಲ್ಲಿ ಮರಾಠಿ, ಉರ್ದು, ಬ್ಯಾರಿ ಭಾಷೆಗಳು ಪ್ರಮುಖವಾಗಿರುತ್ತವೆ.

ಆಚರಣೆಗಳುಸಂಪಾದಿಸಿ

ಹುಲಿವೇಷವು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದ್ದು ದಸರಾ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಸಮಯದಲ್ಲಿ ಇಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಹುಪ್ರಮುಖ ಆಚರಣೆಯಾದಂತಹ ಭೂತ ಕೋಲ-ನೇಮಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಕಂಬಳ (ಕೋಣಗಳನ್ನು ಓಡಿಸುವ ಸ್ಪರ್ಧೆ) ತುಂಬ ಜನಪ್ರಿಯ.

ಆಧಾರಸಂಪಾದಿಸಿ

  ವಿಕಿಟ್ರಾವೆಲ್ ನಲ್ಲಿ ಕಾರ್ಕಳ ಪ್ರವಾಸ ಕೈಪಿಡಿ (ಆಂಗ್ಲ)

  • ೧.ವಿಜಯ ಕರ್ನಾಟಕ >>21-1-2015
"https://kn.wikipedia.org/w/index.php?title=ಕಾರ್ಕಳ&oldid=1027649" ಇಂದ ಪಡೆಯಲ್ಪಟ್ಟಿದೆ