ಬೈಂದೂರು

ಭಾರತ ದೇಶದ ಗ್ರಾಮಗಳು

ಬೈಂದೂರು ಉಡುಪಿ ಜಿಲ್ಲೆಯ ಒಂದು ನಗರ ಮತ್ತು ತಾಲೂಕು ಕೇಂದ್ರ. ಇದು ರಾಷ್ಟ್ರೀಯ ಹೆದ್ದಾರಿ ೬೬(ಈಗ೬೮) ರಲ್ಲಿ ಬರುವ ಮಂಗಳೂರು ಮತ್ತು ಮುಂಬಯಿ ಮಧ್ಯದಲ್ಲಿ ಚಲಿಸುವ ಕೊಂಕಣ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿದೆ.

ಬೈಂದೂರು ನಕ್ಷೆ

ಕರ್ನಾಟಕದ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿ ಹೊದೆದು ಮಲಗಿದ ನಯನ ಮನೋಹರ ಭೂ ಪ್ರದೇಶವೇ ಬೈಂದೂರು.

ಬೈಂದೂರು ತಾಲೂಕು ಉಡುಪಿ ಯಿಂದ ೫೯ ಕಿ.ಮೀ ದೂರದಲ್ಲಿದೆ.ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರವು ಒಂದು. ಅಲ್ಲದೆ ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲಿ ಬೈಂದೂರು ಒಂದು. ಇಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ "ಶ್ರೀ ಸೇನೆಶ್ವರ ದೇವಸ್ಥಾನ"ವು ಬಹಳ ಪ್ರಸಿದ್ದಿಯನ್ನು ಪಡೆದಿದೆ. ಬೈಂದೂರು ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಸೋಮೇಶ್ವರ ಕಡಲ ತೀರ, ಕೋಸಳ್ಳಿ ಜಲಪಾತ, ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್, ಕ್ಷಿತಿಜ ನೇಸರ ದಾಮ ಮುಂತಾದವುಗಳು ಹೆಸರುವಾಸಿಗಳಾಗಿದೆ.ಅಲ್ಲದೆ ಬೈಂದೂರು ಇತರ ಪ್ರವಾಸಿ ತಾಣಗಳಿಗೆ ಸನಿಹವಾಗಿದೆ, ಇಲ್ಲಿಂದ ಕೆಲವೇ ಕಿ.ಮೀ ದೂರದಲ್ಲಿ ಕೊಲ್ಲೂರು, ಮುರ್ಡೇಶ್ವರ, ಕೊಡಚಾದ್ರಿ, ಉಡುಪಿ, ಮರವಂತೆ, ಜೋಗ ಮುಂತಾದ ಪ್ರವಾಸಿ ತಾಣಗಳಿವೆ.

ಬೈಂದೂರು

ಇತಿಹಾಸ

ಬದಲಾಯಿಸಿ

ಮೊದಲು ಇಲ್ಲಿ ’ಬಿಂದುಋಷಿ’ ಎನ್ನುವ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಿಂದ ಬಿಂದುನಾಡು, ಬಿಂದುಪುರ, ಬಿಂದೂರು ಕ್ರಮೇಣ ಬೈಂದೂರು ಆಗಿ ಪರಿವರ್ತನೆ ಆಯಿತು ಎಂಬುವುದು ಕೆಲವು ತಜ್ಞರ ಅಭಿಪ್ರಾಯ.

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ

ಬದಲಾಯಿಸಿ

ದೇವಾಲಯದ ಇತಿಹಾಸ

ಬದಲಾಯಿಸಿ
 
ಶ್ರೀ ಸೇನೇಶ್ವರ ದೇವಸ್ಥಾನ
 
ಶ್ರೀ ಸೇನೇಶ್ವರ ದೇವಸ್ಥಾನ

ರಾಮಾಯಣ ಕಾಲದಲ್ಲಿ ಭಗವಾನ ರಾಮ ತನ್ನ ಕಪಿಸೇನೆ ಸಮೇತನಾಗಿ ಸೀತಾನ್ವೇಷಣೆಗೆ ರಾಮೇಶ್ವರಕ್ಕೆ ಹೋಗುವ ದಾರಿಯಾಗಿ ಇಲ್ಲಿಗೆ ಬಂದು ಬಿಂದುಋಷಿಗಳ ಕೋರಿಕೆಯಂತೆ ಒಂದು ರಾತ್ರಿ ಬೆಳಗಾಗುವುದರೊಳಗೆ ತನ್ನ ಕಪಿಸೇನೆಯಿಂದ ನಿರ್ಮಿಸಿದ ಈ ದೇವಾಲಯಕ್ಕೆ ಶ್ರೀ ಸೇನೇಶ್ವರ ಎಂಬ ಹೆಸರು ಬಂದಿತು ಎಂಬುವುದು ಒಂದು ಹೇಳಿಕೆ. ಆದರೆ ಇದಕ್ಕೆ ನಿರ್ದಿಷ್ಟವಾದ ಆಧಾರವಿಲ್ಲದ ಕಾರಣ ಪುರಾಣ ಕಥೆಯಾಗಿಯೇ ಉಳಿದಿದೆ.

ಇತಿಹಾಸ ಸಂಶೋಧಕರ ಅಭಿಪಾಯದಂತೆ ೧೧ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತನಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ರಚಿಸಿದ್ದು ಅದರಿಂದಾಗಿ ಇದು ಶ್ರೀ ಸೇನೇಶ್ವರ ಎಂದು ಪ್ರಸಿದ್ದವಾಯಿತು. ಇದು ಹೆಚ್ಚು ತರ್ಕಬದ್ಧವಾಗಿ ಕಂಡುಬರುತ್ತದೆ.

ದೇವಾಲಯದ ಸಂಕ್ಷಿಪ್ತ ಕ್ಷೇತ್ರ ಪರಿಚಯ ಹಾಗೂ ವಿವರ

ಬದಲಾಯಿಸಿ

ಬೈಂದೂರು ಅತ್ಯಂತ ಶ್ರದ್ಧಾ ಕೇಂದ್ರ. ಊರಿನ ಹೃದಯ ಭಾಗದಲ್ಲಿರುವ ಶ್ರೀ ಸೇನೇಶ್ವರ ದೇವಾಲಯ ಒಂದು ಸುಂದರವೆನ್ನಬಹುದಾದ ಕಲಾಕೃತಿ. ಗರ್ಭಗುಡಿ, ಸುಕನಾಸಿ ಮತ್ತು ಬಸವ ಮಂಟಪಗಳನ್ನು ಸಂಪೂರ್ಣ ಶಿಲೆಯಿಂದಲೇ ನಿರ್ಮಿಸಿದ್ದಾರೆ. ಸುಕನಾಸಿಯಲ್ಲಿರುವ ಪ್ರತಿಯೊಂದು ಕಂಬದ ಕೆತ್ತನೆ ಚಿತ್ತಾಕರ್ಷಕ. ಇಲ್ಲಿರುವ ಮೂರ್ತಿಗಳು ಮತ್ತು ಬೆಳಕಿನ ಕಿಂಡಿಗಳು ಮನಮೋಹಕ. ಇನ್ನು ನಂದಿ ಮಂಟಪದ ಸೊಬಗೇ ಬೇರೆ. ಕತ್ತೆತ್ತಿ ಮೇಲೆ ನೋಡಿದರೆ ಚಿತ್ತಾರಕಗಳು ಕೆತ್ತಲ್ಪಟ್ಟ ಸಂಪೂರ್ಣ ಶಿಲಾಮಯವಾದ ಮುಚ್ಚಿಗೆ. ಕಂಬಗಳು ಹಾಗೂ ಮಾಡಿನ ರಚನೆ ಕೂಡ ಸುಂದರ. ಇಲ್ಲಿರುವ ನಂದಿಲೋಕ ಮನಮೋಹಕ. ದೊಡ್ಡ ಶಿಲೆಯ ಬೆಟ್ಟವನ್ನೇ ಕಡಿದು ಮಾಡಿದ ಲೇಪಾಕ್ಷಿಯ ಬ್ರಹತ್ ಗಾತ್ರದ ನಂದಿಗೆ ಕೆಳದಿ, ಇಕ್ಕೇರಿ, ಹಳೆಬೀಡುಗಳ ಬಸವಗಳು ಸೊಬಗಿನಲ್ಲಿ ಸರಿಸಾಟಿಯಾಗಲಾರವು. ಇದನ್ನು ಪ್ರತಿಯೊಬ್ಬರು ನೋಡಿಯೇ ತಿಳಿಯಬೇಕು.

ಸುಕನಾಸಿಯ ಜಾಲಂದ್ರಗಳ ಮಧ್ಯದಲ್ಲಿರುವ ಬಾಗಿಲಿನ ಮೇಲ್ಗಡೆ ಅಲಂಕರಿಕವಾದ ಮಕರ ತೋರಣದ ಕೆತ್ತನೆ ಇದೆ. ಇಲ್ಲಿರುವ ದ್ವಾರಪಾಲಕರ ಎರಡೂ ಮೂರ್ತಿಗಳ ಕೈಯಲ್ಲಿ ಬೇರೆ ಬೇರೆ ಆಯುಧಗಳು ಇರುವುದು ಕುತೂಹಲಕಾರಿಯಾಗಿದೆ.

ಸುಕನಾಸಿಯ ಆಕರ್ಷಕ ಕಂಬಗಳ ಬಳಿಯ ಗಮನಿಸಬೇಕಾದ ಇನ್ನಿತರ ಸುಂದರ ದೇವತಾ ವಿಗ್ರಹಗಳು ಗಣೇಶ, ಮಹಿಷಮರ್ದಿನಿ (ಬಲಗೈ ಹಾಗೂ ವಾಣಿಯನ್ನು ಈಗ ಕಳೆದುಕೊಂಡಿರುವ) ಕಣ್ಣಿನ ದೃಷ್ಟಿಯನ್ನೇ ಕೆತ್ತದೆ ಇರುವ ಚತುರ್ಭುಜೆಯಾದ ಸರಸ್ವತಿ,ಮಯೂರವಾಹನ ಸಾರಸ್ಕಂದ ದಶಾವತಾರದ ಸುಂದರ ಕೆತ್ತನೆಯ ಪ್ರಭಾವಳಿಯನ್ನು ಹೊಂದಿದ ಶಂಖ ಚಕ್ರ ಗಧಾ ಪದ್ಮಧಾರಿಯಾದ ಕೇಶವನಾರಾಯಣ ಗರುಡ ವಾಹನನಾದ ಲಕ್ಷ್ಮೀನಾರಾಯಣ, ಬಲಭಾಗ ಶಿವ, ಎಡಭಾಗ ಹರಿಯಾಗಿರುವ ಶಂಕರನಾರಾಯಣ (ಹರಿಹರ). ಈ ಎಲ್ಲಾ ಮೂರ್ತಿಗಳು ಇಡಲ್ಪಟ್ಟಿರುವ ಸುಕನಾಸಿ ಒಂದರ್ಥದಲ್ಲಿ ದೇವ ಸಭೆ ಎಂದರೂ ತಪ್ಪಾಗಲಾರದು. ದಕ್ಷಿಣ ಗೋಡೆಯ ಪಶ್ಚಿಮ ಭಾಗದಲ್ಲಿ ಸಾಲಾಗಿ ಮೂರ್ತಿಗಳನ್ನು ಒಳಗೊಂಡ ರಚನೆಯೊಂದನ್ನು ಕಾಣಬಹುದು. ಮೊದಲಿಗೆ ವೀರಭದ್ರ ಆ ಬಳಿಕ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಎಂಬ ಸಪ್ತ ಮಾತೃಕೆಯರು ಹಾಗೂ ಕೊನೆಯಲ್ಲಿ ಗಣಪತಿಯನ್ನು ಒಳಗೊಂಡ ೯ ದೇವತಾ ಚಿತ್ರಗಳಿರುವ ಸುಮಾರು ೧ ಅಡಿ ಎತ್ತರ ೨ ಅಡಿ ಉದ್ದದ ಶಿಲಾಫಲಕವಿದೆ. ಸುಕನಾಸಿಯ ನಾಲ್ಕು ಕಂಬಗಳಲ್ಲಿ ಎಡಭಾಗದ ಸೂಕ್ಷ್ಮ ಕೆತ್ತನೆಗಳು ಒಂದು ರೀತಿಯಲ್ಲಿದ್ದರೆ ಬಲಭಾಗದ ಇನ್ನೆರಡು ಕಂಬಗಳ ಸೂಕ್ಷ್ಮ ಕೆತ್ತನೆಗಳು ಇನ್ನೊಂದು ತೆರನಾಗಿವೆ.

ಹೊಯ್ಸಳ ಶಿಲ್ಪಗಳಲ್ಲಿ ತಪ್ಪದೆ ಹೊಯ್ಸಳ ಲಾಂಛನವು ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿ ಅದಿಲ್ಲ. ಅದರ ಸ್ಥಾನದಲ್ಲಿ ಮಕರ ತೋರಣ ಕೆತ್ತಲ್ಪಟ್ಟಿರುವುದು ಚಿಂತಕರಿಗೆ ಗಮನಾರ್ಹವಾದುದಾಗಿದೆ ಅಲ್ಲದೇ ಸುಕನಾಸಿಯ ಗೋಡೆಗಳಲ್ಲಿ ಅಲ್ಲಲ್ಲಿ ಕೆಳಮುಖವಾಗಿಡಲ್ಪಟ್ಟ ಇಂಗ್ಲೀಷ್ V ಅಕ್ಷರದಂತೆ ಕಂಡುಬರುವ ಕೆತ್ತನೆ ಹೊಂದಿದ ಶಿಲಾರಚನೆಗಳು ಕಂಡುಬರುತ್ತವೆ. ನಾಲ್ಕು ಕಂಬಗಳ ಮೇಲೆ ನಿಂತಿರುವ ಸುಕನಾಸಿಯಲ್ಲಿ ಕಮಲದಂತಹ ಆಕೃತಿಗಳಿವೆ. ನಾಲ್ಕು ಕಂಬಗಳ ನಡುವಿರುವ ಮುಚ್ಚಿಗೆಯ ಭಾಗದಲ್ಲಿ ಅಷ್ಠದಿಕ್ಪಾಲಕರ ಮೂರ್ತಿಗಳನ್ನು ಶಾಸ್ತ್ರ ಬದ್ಧವಾಗಿ ಕೆತ್ತಿದ್ದನ್ನು ಕಾಣಬಹುದು. ಈ ಶಿಲೆಯ ದಕ್ಶಿಣೋತ್ತರಕ್ಕೆ ಉದ್ದಕ್ಕೂ ಸೀಳಾಗಿರುವುದು ದುಃಖಕರ ಸಂಗತಿಯಾಗಿದೆ. ಈ ರಚನೆಯ ಮಧ್ಯದಲ್ಲಿ ಇನ್ನೊಂದು ಮೂರ್ತಿ ಶಿಲ್ಪವಿದೆ. ಆದರೆ ಅದು ಕಾರಣಾಂತರಗಳಿಂದ ಭಿನ್ನವಾಗಿದೆ.

ದೇವಕೋಷ್ಟದಲ್ಲಿರುವ ಚತುರ್ಮುಖ ಬ್ರಹ್ಮ, ಕಾಳಭೈರವ, ಚಾಮುಂಡೇಶ್ವರಿಯ ಮೂರ್ತಿಗಳ ಕೆತ್ತನೆಯೊ ಆಕರ್ಷಕವಾಗಿದೆ. ಇಲ್ಲಿರುವ ಇನ್ನೆರಡು ದೇವತೆಗಳು ಗುರುನರಸಿಂಹ ಮತ್ತು ವೀರಭದ್ರ. ಪಾಣಿಪೀಠದ ಮೇಲೆ ಲಿಂಗರೂಪಿಯಾಗಿ ವಿರಾಜಿಸಿರುವ ಸ್ವಾಮಿ ಸೇನೇಶ್ವರನು ಭಕ್ತಾಭೀಷ್ಠಪ್ರದಾಯಕನಾಗಿ ಆಕರ್ಷಣೆಯ ಕೇಂದ್ರವಾಗಿರುತ್ತಾನೆ. ಪ್ರತಿ ಸೋಮವಾರವು ಭಕ್ತರು ಬಹು ಸಂಖ್ಯೆಯಲ್ಲಿ ದೇವಾಲಯವನ್ನು ಸಂದರ್ಶಿಸಿ ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಹಲವಾರು ವರ್ಷಗಳ ಹಿಂದೆ ನಿರ್ಮಿಸಲಾದ ದೇವಾಲಯದ ಮರದ ತೇರು ಕಾಷ್ಠಶಿಲ್ಪದ ಸುಂದರ ಮಾದರಿಯಾಗಿ ಕಣ್ಮನ ಸೆಳೆಯುತ್ತದೆ. ಮುಜರಾಯಿ ಇಲಾಖೆಯ ಯಜಮಾನ್ಯಕ್ಕೆ ಒಳಪಟ್ಟ ಈ ದೇವಾಲಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಜನರಿಂದ ಆಯ್ಕೆಹೊಂದಿದ ಆಡಳಿತ ಮಂಡಳಿ ಇದೆ. ದೇವಾಲಯದ ಆಡಳಿತಕ್ಕೊಳಪಟ್ಟ ಶಾರದಾ ವೇದಿಕೆಯು ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸುವ ಮೂಲಕ ಸಾರಸ್ವತ ಲೋಕಕ್ಕೆ ಅನುಪಮ ಸೇವೆ ಸಲ್ಲಿಸುತ್ತಿದೆ.

ಈ ದೇವಾಲಯದ ಆಡಳಿತಕ್ಕೊಳಪಟ್ಟ ಇನ್ನು ಎರಡು ದೇವಾಲಯಗಳಿವೆ. ಅವು ಬಂಕೇಶ್ವರದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮತ್ತು ಸುಂದರ ಕಡಲತೀರದಲ್ಲಿ ರಮಣೀಯವಾದ ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ತಲೆಯೆತ್ತಿ ನಿಂತಿರುವ ಶ್ರೀ ಸೋಮೇಶ್ವರ ದೇವಾಲಯ. ಸೋಮೇಶ್ವರವು ಕ್ಷೇತ್ರವಾಗಿರುವುದರ ಜೊತೆಗೆ ಅಪೂರ್ವ ಪ್ರವಾಸಿ ತಾಣವು ಆಗಿದೆ. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷ ವೈಶಾಖ ಶುಕ್ಲ ಆದ್ರಾ ನಕ್ಷತ್ರದಂದು ಅತೀ ವಿಜೃಂಭಣೆಯಿಂದ ವಾರ್ಷಿಕ ರಥೋತ್ಸವವು ಜರಗುತ್ತದೆ.

ಒಟ್ಟಾರೆ ಹೇಳುವುದಾದರೆ ಈ ಬಿಂದುಪುರವು ಭಕ್ತರಿಗೂ ಕಲಾ ರಸಿಕರಿಗೂ ರಮಣೀಯವಾಗಿ ಗೋಚರಿಸುವುದರಲ್ಲಿ ಸಂದೇಹವೇ ಇಲ್ಲ.

ದೇವಾಲಯದ ಬಗ್ಗೆ ತಜ್ಞರ ಅಭಿಪ್ರಾಯಗಳು

ಬದಲಾಯಿಸಿ

ಬೇಲೂರು ಹಳೆಬೀಡಿನ ಶಿಲ್ಪ ಕಲೆಯನ್ನೇ ಹೋಲುವ ಈ ದೇವಾಲಯವನ್ನು ಡಾ| ಗುರುರಾಜ ಭಟ್ಟ ರ೦ತಹ ಹಿರಿಯ ವಿದ್ವಾಂಸರು ’ದಕ್ಷಿಣ ಕನ್ನಡದ ಬೇಲೂರು’ ಎಂದು ಬಣ್ಣಿಸಿದ್ದಾರೆ. ಹಾಗಾಗಿ ಇಲ್ಲಿಯ ಶಿಲ್ಪ ಕಲೆಯ ಚೆಲುವಿಗೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಾಗಿಲ್ಲ.

ದೇವಾಲಯದ ಹೊರಸುತ್ತಿನ ಉತ್ತರಭಾಗದ ದೇವಕೋಷ್ಟ (ಗೂಡು)ದಲ್ಲಿರುವ ಚಾಮುಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತೃ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಈ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬಂತೆ ಈ ಭೀಕರ ರೂಪದಲ್ಲಿ ಸೇನರು ನಿರ್ಮಿಸಿದ್ದಾರೆ ಎಂಬುವುದು ಇತಿಹಾಸ ಪ್ರಾಧ್ಯಾಪಕ ವೈ. ಉಮಾನಾಥ ಶೆಣೈ ಅವರ ಅಭಿಪ್ರಾಯ.

ಭೌಗೋಳಿಕ ನೆಲೆ

ಬದಲಾಯಿಸಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ

ವಿಕಿಮೇಪಿಯಾದಲ್ಲಿ ಬೈಂದೂರನ್ನು ವಿಕ್ಷಿಸಿ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಗ್ಗೆ Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ.

ಹೆಸರಾಂತ ಕಲಾ ಸಂಸ್ಥೆ "ಲಾವಣ್ಯ (ರಿ)ಬೈಂದೂರು" ಇದರ ಬಗ್ಗೆ

ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್ ಬೈಂದೂರು

ಬೈಂದೂರು ಕೋಸಳ್ಳಿ ಜಲಪಾತದ ಬಗ್ಗೆ ಪ್ರವಾಸಿಗರೊಬ್ಬರ ಅನುಭವ ಮತ್ತು ವಿವರಣೆ

ಬೈಂದೂರು ಕೋಸಳ್ಳಿ ಜಲಪಾತದ ಇನ್ನಷ್ಥು ಚಿತ್ರಗಳು

ಬೈಂದೂರು ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಬೈಂದೂರು&oldid=1216403" ಇಂದ ಪಡೆಯಲ್ಪಟ್ಟಿದೆ