ಉತ್ತರ ಕನ್ನಡ

ಕರ್ನಾಟಕದ ಜಿಲ್ಲೆ

ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಈ ಜಿಲ್ಲೆ ಬುಹುತೇಕ ಅರಣ್ಯಪ್ರದೇಶದಿಂದ ಕೂಡಿದೆ. ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡಿ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೆ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).[]

ದಿನಕರ ದೇಸಾಯಿಯವರು ಉತ್ತರ ಕನ್ನಡವನ್ನು ವರ್ಣಿಸಿ ಬರೆದಿರುವ ಚುಟುಕ:

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ

ಶಿರಸಿ ಜಾತ್ರೆ

ಬದಲಾಯಿಸಿ
Shirasi Fair
ಶಿರಸಿ ಜಾತ್ರೆ
 
ಸ್ಥಿತಿಸಕ್ರಿಯ
ಪ್ರಕಾರಜಾತ್ರೆ
ಆವರ್ತನಪ್ರತಿ 2 ವರ್ಷಕ್ಕೊಮ್ಮೆ
ಸ್ಥಳಸಿರ್ಸಿ
ಸಕ್ರಿಯ ವರ್ಷಗಳು335–336
ಉದ್ಘಾಟನೆ1688 (1688)
Founderಸಿರ್ಸಿ ಗ್ರಾಮಸ್ಥರು
ಇತ್ತೀಚಿನ2022
ಹಿಂದಿನ2020
ಮುಂದಿನ2024
Organised byಸಿರ್ಸಿ ಮಾರಿಕಾಂಬಾ ದೇವಸ್ಥಾನ
  2022
ಭಾರತದ ಅತಿದೊಡ್ಡ ಜಾತ್ರೆ

ಭಾರತದ ಅತಿದೊಡ್ಡ ಜಾತ್ರೆ

ಸುಪ್ರಸಿದ್ಧ ಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ

ಬದಲಾಯಿಸಿ

ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭಾರತದಲ್ಲಿಯೇ ಅತೀದೊಡ್ಡ ಜಾತ್ರೆ. ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಅನೇಕ ಮನರಂಜನಾ ಕಾರ್ಯಕ್ರಮಗಳು, ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ.[]

  • ವಿಧಿ ವಿಧಾನಗಳು

ಶಿರಸಿಯ ಜಾತ್ರೆ ೯ ದಿನಗಳ ಕಾಲ ಜರುಗುವ ಅದ್ದೂರಿ ಜಾತ್ರೆ. ಇಲ್ಲಿ ಜಾತ್ರೆ ಪ್ರಾರಂಭ ಆಗುವ ಎರಡು ತಿಂಗಳು ಮೊದಲಿನಿಂದಲೆ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ಜಾತ್ರೆಯ ಮುಹೂರ್ತ ನಿಶ್ಚಯಿಸಲು ಪುಷ್ಯ ಮಾಸದ ಒಂದು ದಿನ ವಿಶೇಷ ಸಭೆ ಕರೆಯಲಾಗುತ್ತದೆ. ಈ ಸಭೆಯಲ್ಲಿ ಊರಿನ ಗಣ್ಯರು, ಸಾರ್ವಜನಿಕರು,ಬಾಬುದಾರರು, ಧರ್ಮದತ್ತಿ ಗಳು ಭಾಗವಹಿಸಿರುತ್ತಾರೆ. ಜಾತ್ರೆಯ ದಿನ ನಿಗದಿಯಾದ ನಂತರ ಸಂಪ್ರದಾಯದಂತೆ ಜಾತ್ರೆಯ ಪೂರ್ವದ ಮೂರು ಮಂಗಳವಾರ ಎರಡು ಶುಕ್ರವಾರದ ದಿನಗಳಂದು ಐದು ಹೊರಬೀಡುಗಳು ಆಗುತ್ತವೆ.


ಹೊರಬೀಡು ಎಂದರೆ ರಾತ್ರಿ ಗಡಿ ಗದ್ದುಗೆಗಳಿಗೆ ಹೋಗಿ ಜಗನ್ಮಾತೆಯ ಸೇವೆಗೆ ಉಪಯೋಗಿಸುವ ಆಯುಧಗಳು ವಾದ್ಯಗಳು, ಕಹಳೆ, ಹಲಗೆ, ದೀವಟಿಗೆ ಮೊದಲಾದವುಗಳನ್ನು ದೇವಿಯ ಎದುರಿಟ್ಟು ಪೂಜಿಸಿ ಪ್ರಾರ್ಥಿಸುವುದು. ಐದು ಹೊರಬೀಡಿನಲ್ಲಿ ಮೂರು ಮಂಗಳವಾರಗಳಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯೊಂದಿಗೆ ಪೂರ್ವ ದಿಕ್ಕಿನ ಕಡೆಗೆ ಹೋದರೆ, ಉಳಿದೆರಡು ಶುಕ್ರವಾರ ಪಡಲಿಗೆಯು ಉತ್ತರ ದಿಕ್ಕಿನ ಗಡಿಯ ನಿಶ್ಚಿತ ಗದ್ದುಗೆಗೆ ಹೋಗುತ್ತದೆ. ಎಲ್ಲ ಹೊರಬೀಡಿನಲ್ಲಿ ರಾತ್ರಿ ಮೆರವಣಿಗೆಗಳು ಶ್ರೀ ದೇವಿಗೆ ಉಡಿ ತುಂಬಿದ ನಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೊಗುವವು ಅಲ್ಲಿ ದೇವತೆಗಳಿಗೆ ಉಡಿ ಸಮರ್ಪಣೆಯಾದ ನಂತರ ಜಾತ್ರೆಯ ಗದ್ದುಗೆಗೆ ಹೋಗಿ ಅಲ್ಲಿ ಹೊರಬೀಡಿನನುಗುಣವಾಗಿ ಉತ್ಸವ ಮೂರ್ತಿಯನ್ನು ಪಡಲಿಗೆಯನ್ನು ಇಟ್ಟು ಪೂಜಿಸುತ್ತಾರೆ. ಮಂಗಳವಾರದ ಹೋರಬೀಡುಗಳಲ್ಲಿ ಪಲ್ಲಕ್ಕಿಯು ಪುರ್ವ ದಿಕ್ಕಿನ ಕೊನೆಯ ಗದ್ದುಗೆಗೆ ಬರುತ್ತದೆ. ನಂತರ ಮೆರವಣಿಗೆಯು ಪೂನಃ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಮಾರಿಗುಡಿಗೆ ಹೋಗಿ ಪೂಜೆ ನೆರವೇರಿಸಿ ವಿಸರ್ಜನೆಯಾಗುತ್ತದೆ.

ಈ ಜಾತ್ರೆಯಲ್ಲಿ ಅಮ್ಮನವರು ಸವಾರಿ ಮಾಡುವ ರಥವನ್ನು ಕಟ್ಟುವುದು ತುಂಬಾ ವಿಶೇಷ. ನಾಲ್ಕನೆ ಹೊರಬೀಡಿನ ಮರುದಿನ ಮಂಗಳವಾದ್ಯದೊಂದಿಗೆ ಕಾಡಿಗೆ ಹೋಗಿ ಮೊದಲೆ ನಿಶ್ಚಯಿಸಿದ 'ತಾರಿ' ಮರವನ್ನು ಕಡಿಯುತ್ತಾರೆ. ನಂತರ ಐದನೇ ಹೊರಬೀಡಿನ ದಿನ ಮುಂಜಾನೆ ರಷ್ಮಿ ಮೂಡವ ಸಮಯದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮುಕಾಂತರ ಮರವನ್ನು ತಂದು ದೇವಾಲಯದ ಎದರು ಪೂಜೆ ಸಲ್ಲಿಸಲಾಗುತ್ತದೆ. ಜಾತ್ರೆ ಪ್ರಾರಂಭವಾಗುವ ಏಳು ದಿನಗಳ ಮೊದಲೆ ರಥ ಕಟ್ಟಲು ಪ್ರಾರಂಭಿಸುತ್ತಾರೆ ಬಾಬುದಾರರು ಬಡಿಗೆರರು ಆಚಾರಿಗಳು ಉಪ್ಪಾರರು ರಥ ಕಟ್ಟುವ ಕಾರ್ಯ ಮಾಡುತ್ತಾರೆ.

ಹೊರಬೀಡಿನ ನಂತರ ಮಾರಿ ಕೋಣವನ್ನು ಮೆರೆವಣಿಗೆ ಮುಖಾಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಗದ್ದುಗೆಯತ್ತ ಸಾಗುತ್ತದೆ ಅಲ್ಲಿ ಅಸಾದಿಯರು ಮತ್ತು ಮೇತ್ರಿಯರು ರಂಗವಿಧಾನ ನೆರೆವೆರಿಸಿ ಪಟ್ಟದ ಕೋಣಕ್ಕೆ ಕಂಕಣ ಧಾರಣೆ ಮಾಡುತ್ತಾರೆ ಇದನ್ನು ಅಂಕೆ ಹಾಕುವುದು ಎನ್ನುತ್ತಾರೆ. ಅಂಕೆ ಹಾಕಿದ ದಿನ ಅಮ್ಮನವರ ವಿಗ್ರಹ ವಿಸರ್ಜನೆ ಮಾಡಿ ಬಣ್ಣಕ್ಕೆ ಕಳುಹಿಸುವ ಸಂಪ್ರದಾಯ ಇರುತ್ತದೆ.

ಜಾತ್ರೆಯ ಗದ್ದುಗೆಯಲ್ಲಿ ನಾಡಿಗ ಬಾಬುದಾರರಿಂದ ಮಂಗಳಾರತಿ ನಡೆಯುತ್ತದೆ ಈ ಮಂಗಳಾರಾತಿಯಿಂದ ಒಂದು ವಿಶೇಷ ಹಣತೆ ಹಚ್ಚುತ್ತಾರೆ ಈ ಹಣತೆಯನ್ನು ಜಾತ್ರೆ ಮುಗಿಯುವವರೆಗೆ ಶಾಂತವಾಗದಂತೆ ಕಾಯಬೇಕು ಮೇಟಿಯವರು ದೀಪ ಆರದಂತೆ ಕಾಯುವ ಕೆಲಸ ಮಾಡುತ್ತಾರೆ. ಇದನ್ನು ಮೇಟ ದೀಪ ಎನ್ನುತ್ತಾರೆ

ಅಂಕೆ ಹಾಕಿದ ನಂತರ ಬರುವ ಮೊದಲ ಮಂಗಳವಾರ ಶ್ರೀದೇವಿಗೆ ಕಲ್ಯಾಣ ಮಹೋತ್ಸವ ಮಾಡಲಾಗುತ್ತದೆ. ಅದೆ ದಿನ ರಥಕ್ಕೆ ಕಳಸಾರೋಹಣ ನೆರವೇರುತ್ತದೆ. ಶ್ರೀ ದೇವಿಯ ಮದುವೆಯ ಸಮಾರಂಭದಲ್ಲಿ ವಿಶೆಷವಾಗಿ ನಾಡಿಗರು, ಬಾಬುದಾರರು ಊರ ಗಣ್ಯರು ಸಕಲ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ ಶ್ರೀದೇವಿಯು ಸರ್ವಾಲಂಕಾರ ಭುಷಿತಳಾಗಿ ರಾರಜಿಸುತ್ತಿರುತ್ತಾಳೆ. ಶ್ರೀ ದೇವಿಯ ಮದುವೆಯ ಸಂಪ್ರದಾಯಂದತೆ ಶ್ರೀ ದೇವಿಗೆ ಮಂಗಳ ಸೂತ್ರ ಧಾರಣೆ, ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ , ಚಕ್ರಸಾಲಿ ಪೂಜೆ ,ಕೇದಾರಿಮನೆತನದ ಪೂಜೆ ಹಾಗು ಪೂಜಾರರ ಪೂಜೆಗಳು ನೆರವೇರುತ್ತವೆ. ಈ ಕಲ್ಯಾಣೊತ್ಸವದಲ್ಲಿ ಘಟ್ಟದ ಕೆಳಗಿನ ಜನರು ಹಾಗು ಬಯಲು ಸೀಮೆಯ ಲಂಬಾಣಿ ಜನಾಗಂದ ಜನರು ವಿಶೇಷವಾಗಿ ಮಹಿಳೆಯರು ತಮ್ಮ ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡುವುದುದು ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದು ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ.

ಬುಧವಾರ ಮುಂಜಾನೆ ಶ್ರೀದೇವಿಯನ್ನು ರಥದ ಮೆಲೆ ಪ್ರತಿಷ್ಠಾಪನೆ ಮಾಡುವ ಮೊದಲು ದೇವಾಲಯದ ಮುಂಭಾಗದ ಭೂತರಾಜನಿಗೆ ಸಾತ್ವಿಕ ಬಲಿ ಸಮರ್ಪಣೆ ಮಾಡಲಾಗುತ್ತದೆ. ರಥೋತ್ಸವದೊಂದಿಗೆ ಶ್ರೀದೇವಿಯ ಶೋಭಾಯಾತ್ರೆ ಅದ್ದೂರಿಯಾಗಿ ಮಾರಿಗುಡಿಯಿಂದ ಊರ ಮದ್ಯದ ಬಿಡಕಿ ಬೈಲಿನ ಜಾತ್ರಾ ಗದ್ದುಗೆಗೆ ಬಂದು ತಲುಪುತ್ತದೆ. ಶ್ರೀ ದೇವಿಯ ಉ ಶೋಭಾಯಾತ್ರೆಯಲ್ಲಿ ಬರುವಾಗ ಭಕ್ತರ ಭಕ್ತಿಯ ಪರಾಕಾಷ್ಠೆಯ ತುತ್ತತುದಿಯಲ್ಲಿರುತ್ತದೆ ಜೋಗತಿಯರು ನೃತ್ಯ ಮಾಡುತ್ತಿರುತ್ತಿದ್ದರೆ ಅಸಾದಿಯರ ಕೋಲಾಟ, ಡೊಳ್ಳು ಕುಣಿತ, ವಾಲಗ ಕಹಳೆಯ ನಿನಾದ ಝೇಂಕರಿಸುತ್ತಿರುತ್ತದೆ.

ಇತರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಹಾಕುತಿದ್ದರೆ ಇನ್ನೂ ಕೆಲ ಭಕ್ತರು ಹಾರುಗೋಳಿ ಅಂದರೆ ಕೋಳಿಯನ್ನು ಹಾರಿ ಬಿಡುತ್ತರೆ. ಶೋಭಾಯಾತ್ರೆ ಮುಗಿದ ಮೇಲೆ ಅಮ್ಮನವರನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ‌. ೮ ದಿನಗಳ ಕಾಲ ಜಗನ್ಮಾತೆ ಸಕಲ ಸರ್ವಾಲಂಕಾರ ಭುಷಿತಳಾಗಿ ನಗರ ಮದ್ಯಭಾಗದಲ್ಲಿನ ಗದ್ದುಗೆಯ ಮೇಲೆ ಕುಳಿತು ಜನರಿಗೆ ದರ್ಶನ ಭಾಗ್ಯ ಕರುಣಿಸುತ್ತಾಳೆ. ಶ್ರೀದೇವಿಗೆ ಭಕ್ತರು ಸಲ್ಲಿಸಬೇಕಾದ ಸೇವೆಗಳೆಲ್ಲವು ಮರುದಿನ ಗುರುವಾರದಿಂದ ಪ್ರಾರಂಭವಾಗುತ್ತದೆ. ೮ ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಜಾತ್ರೆಗೆ ಪ್ರತಿನಿತ್ಯವು ಲಕ್ಷಾಂತರ ಜನ ಬರುತ್ತಾರೆ.

ಜಾತ್ರೆ ಪ್ರಾರಂಭವಾದ ೮ ದಿನಗಳ ನಂತರ ಬುಧವಾರ ಜಾತ್ರಾ ವಿಸರ್ಜನಾ ವಿಧಿವಿಧಾನಗಳು ನೆರವೇರುತ್ತವೆ ನಾಡಿಗ ಬಾಬುದಾರರಿಂದ ಕೊನೆಯ ಮಂಗಳಾರತಿ, ಶ್ರೀದೇವಿಯನ್ನು ಗದ್ದುಗೆಯಿಂದ ಇಳಿಸಿ ಮಂಟಪದ ಮಧ್ಯಭಾಗದಲ್ಲಿ ಕುಡಿಸಿದಾಗ ಅಸಾದಿಯರು ಹುಲುಸು ಪ್ರಸಾದವನ್ನು ಪೂಜಿಸಿ ರೈತರಿಗೆ ವಿತರಿಸುತ್ತಾರೆ ರೈತರು ಅದನ್ನು ತಮ್ಮ ಹೊಲದಲ್ಲಿ ಬಿತ್ತುತ್ತಾರೆ. ಶ್ರೀ ದೇವಿಯು ಜಾತ್ರೆಯ ಮಂಟಪದಿಂದ ರಥದಲ್ಲಿ ಮರಳುವುದಿಲ್ಲ ಬದಲಾಗಿ ವಿಶೆಷವಾಗಿ ಸಿದ್ದಗೊಳಿಸಿದ ಅಟ್ಟಲಿನಲ್ಲಿ ಮರಳುತ್ತಾಳೆ. ಜಾತ್ರೆ ಕೊನೆಯ ವಿಧಾನಗಳಲ್ಲಿ ಮಾತಂಗಿ ಚಪ್ಪರ ಸುಡುವುದು ಒಂದು, ದೇವಿ ಗದ್ದುಗೆಯಿಂದ ಮೆರವಣಿಗೆಯಲ್ಲಿ ಹೋಗುವಾಗ ಮಹಿಷಾಸುರನ ಸಂಹಾರ ಸಂಕೇತವಾಗಿ ಮಾತಂಗಿ ಚಪ್ಪರ ಸುಡುತ್ತಾರೆ‌. ಜಾತ್ರೆಯ ಕಟ್ಟಕಡೆಯ ವಿಧಾನ ಪೂರ್ವ ದಿಕ್ಕಿನ ಗಡಿಯ ಗದ್ದುಗೆಗೆ ಹೋಗಿ ಮುಕ್ತಾಯದ ವಿಧಿ ನೆರೆವೆರಿಸಲಾಗುತ್ತದೆ ಅಲ್ಲಿ ಶ್ರೀದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಹೀಗೆ ಜಾತ್ರೆ ಸಂಪನ್ನಗೊಳ್ಳುತ್ತದೆ.

ಈ ಜಾತ್ರೆಯಲ್ಲಿ ಜನರಿಗೆ ಮನರಂಜನೆಗೆನು ಕೊರತೆ ಇಲ್ಲ ಮಕ್ಕಳು ಯುವಕರಿಂದ ಹಿಡಿದು ವೃದ್ದರಿಗೆಲ್ಲರಿಗು ಇಲ್ಲಿ ಮನರಂಜನೆಯ ಮಹಾಪೂರವೆ ಇರುತ್ತದೆ. ಕಲಾಸಕ್ತರಿಗೆ ವಿವಿಧ ನಾಟಕ ಕಂಪನಿಗಳಿಂದ ನಾಟಕ, ಯಕ್ಷಗಾನ, ಸರ್ಕಸ್ಸುಗಳು‌ ಇರುತ್ತವೆ , ದೈತ್ಯ ತೊಟ್ಟಿಲು ಜೋಕಾಲಿಗಳು ಮತ್ತು ವಿವಿಧ ಆಟಿಕೆಗಳು , ಜಾದು ಚಮತ್ಕಾರಗಳು, ಶ್ವಾನ ಪ್ರದರ್ಶನ , ಪುಸ್ತಕ ಪ್ರಿಯರಿಗೆ ಪುಸ್ತಕ ಪ್ರದರ್ಶನ, ಕೆರೆಯಲ್ಲಿ ಬೋಟಿಂಗ್ , ತಿಂಡಿ ಪ್ರಿಯರಿಗೆ ವಿವಿಧ ಭಗೆಯ ತಿನುಸುಗಳು, ಮಹಿಳೆಯರ ಪ್ರಿಯ ಸೌಂದರ್ಯ ವರ್ಧಕ ಆಭರಣ ಬೆಳೆಗಳ ಮಳಿಗೆಗಳು, ಬಟ್ಟೆ ಬ್ಯಾಗು ಮಕ್ಕಳ ಆಟಿಕೆಗಳ ಮಳಿಗೆಗಳು, ಮಹಿಳಿಯರಿಗೆ ಗೃಹೊಪಕರಣಗಳ ಮಳಿಗೆಗಳು ಹೀಗೆ ಸಕಲ ರೀತಿಯ ಮನರಂಜನೆ ಈ ಜಾತ್ರೆಯಲ್ಲಿ ಇರುತ್ತದೆ.

 

ವಿಶೆಷವಾಗಿ ಈ ಜಾತ್ರೆಯಲ್ಲಿ ಎಲ್ಲೂ ಪ್ರಾಣಿ ಹಿಂಸೆ ಇಲ್ಲ ,ಬಹುಶಃ ಒಂದು ಗ್ರಾಮ ದೇವತೆ‌ ಈಗ ಇಡಿ ನಾಡಿಗೆ ಅಧಿದೇವತೆ ಆಗಿರೋದನ್ನ ನಾವು ಸಿರ್ಸಿ ಯಲ್ಲಿ ಮಾತ್ರ ಕಾಣಬಹುದು.

ಶಿರಸಿಯ ಪರ ಊರಿನಿಂದ ಬರುವ ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ಸಾರಿಗೆಯ ಸಂಸ್ಥೆಯು ಕುಂದಾಪುರ, ಬೈಂದೂರು, ಕಾರವಾರ, ಶಿವಮೊಗ್ಗ, ಸಾಗರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ ದಾವಣಗೆರೆಗಳಿಂದ ಹೆಚ್ಚಿನ ಬಸ್ ಕಲ್ಪಿಸಿರುತ್ತದೆ, ಬಂದ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ , ಮತ್ತು ನಗರದ ಅಲ್ಲಲ್ಲಿ ಭಕ್ತರಿಂದ ಉಚಿತ ಮಜ್ಜಿಗೆ ಪಾನಕಗಳು ಮತ್ತು ದಾಸೋಹ ಸೇವೆಗಳು ಇರುತ್ತವೆ.

[]

ಇತಿಹಾಸ

ಬದಲಾಯಿಸಿ

ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.೪-೩ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. ೨ ರಿಂದ ಪ್ರ.ಶ.೩ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. ೨ ಮತ್ತು ೩ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. ೪ ರಿಂದ ೬ನೇ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಲುಕ್ಯರು (೬-೮ನೆಯ ಶತಮಾನ), ರಾಷ್ಟ್ರಕೂಟರೂ (೮-೧೦ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ೧೧ ಮತ್ತು ೧೩ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಲುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.೧೬ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. ೧೭-೧೮ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳಯಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. ೧೮ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು.

ನಾಲ್ಕನೆಯ ಮೈಸೂರು ಯುದ್ಧ(೧೭೯೮ – ೧೭೯೯)ದಲ್ಲಿ, ಶ್ರೀರಂಗಪಟ್ಟಣದ ಪತನವಾದ ನಂತರ, ೧೭೯೯ರ ಜುಲೈ ೮ರಂದು ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಉತ್ತರದಲ್ಲಿ ಕಾರವಾರ ಮತ್ತು ದಕ್ಷಿಣದಲ್ಲಿ ಇಂದಿನ ಕಾಂಞಿಂಗಾಡು (ಕೇರಳದ ಕಾಸರಗೋಡು ಜಿಲ್ಲೆ) ಗಳ ನಡುವಿನ ಪ್ರದೇಶವನ್ನು ವಶಪಡಿಸಿಕೊಂಡು, "ಕೆನರಾ" ಜಿಲ್ಲೆಯೆಂದು ಹೆಸರನ್ನಿಟ್ಟಿತು. ಮಂಗಳೂರು ಈ ಜಿಲ್ಲೆಯ ಆಡಳಿತ ಕೇಂದ್ರವಾಗಿತ್ತು.[] ಸರ್ ಥಾಮಸ್ ಮುನ್ರೋ [] ಕೆನರಾ ಜಿಲ್ಲೆಯ ಮೊಟ್ಟಮೊದಲ ಕಲೆಕ್ಟರ್ ಆದರು. ಅಲ್ಲಿಂದ ೧೯೫೭ರವರೆಗೆ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಮುಂದುವರೆಯಿತು. ೧೮೫೭ರ ಸಿಫಾಯಿ ದಂಗೆ ಕೆನರಾ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿದ್ದರಿಂದ, ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟಿತು. ಅದೇ ಕಾರಣಕ್ಕಾಗಿ, ಕೆನರಾ ಜಿಲ್ಲೆಯನ್ನು ನಾರ್ತ್ ಕೆನರಾ ಮತ್ತು ಸೌತ್ ಕೆನರಾ ಎಂಬ ೨ ಜಿಲ್ಲೆಗಳನ್ನಾಗಿ ವಿಭಜಿಸಿ, ನಾರ್ತ್ ಕೆನರಾವನ್ನು ಮುಂಬೈ ಪ್ರಾಂತ್ಯಕ್ಕೂ, ಸೌತ್ ಕೆನರಾವನ್ನು ಮದ್ರಾಸ್ ಪ್ರಾಂತ್ಯಕ್ಕೂ ಸೇರಿಸಲಾಯಿತು. ಮುಂಬೈ ಮೂಲಕ ನಡೆಯುವ ಅಂತರರಾಷ್ಟ್ರೀಯ ಹತ್ತಿ ಉದ್ಯಮಕ್ಕೊಸ್ಕರ, ಉತ್ತರ ಕನ್ನಡವನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಗಿದೆ ಎಂದು ಬ್ರಿಟಿಷರು ಸಮಜಾಯಿಶಿ ನೀಡಿದರು. ಸು.೧೫೦ ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತ್ಯ ರಚನೆಯ ಅನಂತರ (1956) ಕರ್ನಾಟಕ (ಅಂದಿನ ಮೈಸೂರು) ರಾಜ್ಯಕ್ಕೆ ಸೇರಿತು.

ಸ್ವಾತಂತ್ರ್ಯ ಸಮರ

ಬದಲಾಯಿಸಿ

೧೮೯೦ರಲ್ಲಿ ಜಿಲ್ಲೆಯ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಳ್ಳಲಾಯಿತು. ೧೯೧೪-೧೫ರಲ್ಲಿ ರೈತರ ಮೇಲೆ ವಿಪರೀತ ಕರ ಹೇರಲಾಯಿತು. ಮಾರಕ ರೋಗಗಳಾದ ಮಲೇರಿಯ, ಪ್ಲೇಗನಂತಹ ರೋಗ ಹಬ್ಬಿ ಜನಸಂಖ್ಯೆ ಗಣನೀಯವಾಗಿ ಇಳಿಯಿತು. ೧೯೦೧ರಲ್ಲಿ ೫೩,೦೭೧ ಇದ್ದ ಜನಸಂಖ್ಯೆ ೧೯೩೧ರ ವೇಳೆಗೆ ೩೭,೦೦೦ಕ್ಕೆ ಇಳಿದಿತ್ತು. ಬ್ರಿಟಿಷ್ ಆಡಳಿತದಿಂದ ಜನ ಬೇಸರಗೊಂಡಿದ್ದರು.

ಮೂಲತಃ ಲೋಕಮಾನ್ಯ ತಿಲಕರ ಕೇಸರಿಯ ಅಗ್ರಲೇಖನದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. ಕನ್ನಡ ಸುವಾರ್ತೆ (೧೮೮೨), ಹವ್ಯಕ ಸುಬೋಧ (೧೮೯೫), ಸಂಯುಕ್ತ ಕರ್ನಾಟಕ, ಕಾನಡಾವೃತ್ತ (೧೯೧೬), ಕಾನಡಾ ಧುರೀಣ, ಬಾಂಬೆಕ್ರಾನಿಕಲ್ ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. ಮೊದಲು ತಿಲಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ತಿಲಕರ ಮರಣಾನಂತರ (೧೯೨೦) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು. ಸ್ವದೇಶಿ ಚಳವಳಿ (೧೯೦೬), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಸಿರ್ಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಶೇಷಗಿರಿ ನಾರಾಯಣರಾವ್‌ ಕೇಶವೈನ್‌ (ಮೋಟಿನಸರ), ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿಯಿತು. ೧೯೫೪ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು.

೧೯೪೦ರ ಸುಮಾರಿನಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಘೂೕಷಣೆಯೊಂದಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಧುರೀಣತ್ವದಲ್ಲಿ ನಡೆದ ಚಳವಳಿಯಲ್ಲಿ ಜಿಲ್ಲೆಯ ಜನ ಪಾಲ್ಗೊಂಡು ಅದನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿದರು. ಸರ್ಕಾರ ಗಾಬರಿಗೊಂಡು ೧೯೪೦ರಿಂದ ದಿನಕರ ದೇಸಾಯಿಯವರು ಉತ್ತರ ಕನ್ನಡ ಗಡಿಯನ್ನು ಪ್ರವೇಶಿಸದಂತೆ ಆಜ್ಞೆ ಹೊರಡಿಸಿತು. ಆಗ ದಿನಕರ ದೇಸಾಯಿಯವರು ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಮುಂಬಯಿಯಲ್ಲಿದ್ದರು. ಆಗ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತಕೂಟದ ಸೂತ್ರಗಳನ್ನು ಕೈಯಲ್ಲಿ ಹಿಡಿದುಕೊಂಡರು. ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ಚಳವಳಿ ನಡೆಯುತ್ತಿತ್ತು. ರೈತರು ಬಲಿಷ್ಠಗೊಳ್ಳಲೂ ಸ್ವತಂತ್ರ್ಯರಾಗಲೂ ಇದು ಕುಮ್ಮಕ್ಕು ನೀಡಿತು. ಈ ಚಳವಳಿಯಲ್ಲಿ ಉತ್ತರ ಕನ್ನಡದ ಸಾವಿರಾರು ರೈತರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಮ್ಮನಸ್ಸಿನಿಂದ ದುಡಿದು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು

ಭೌಗೋಳಿಕ

ಬದಲಾಯಿಸಿ

ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ.

ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಸಿರ್ಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ ನಲ್ಲಿ ಆರಂಭಗೊಂಡು ಅಕ್ಟೋಬರ್‌ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2,836 ಮಿಮೀ. ಕರಾವಳಿಯಲ್ಲಿ 3,500mm ಸಹ್ಯಾದ್ರಿಯ ಅಂಚಿನಲ್ಲಿ 5,000mm ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10,325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗುವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲೂ, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ.

ವೃತ್ತಿ ಮತ್ತು ವ್ಯಾಪಾರ

ಬದಲಾಯಿಸಿ

ಶಿರಸಿಯು ಜಿಲ್ಲೆಯ ಅತಿದೊಡ್ಡ ವಾಣಿಜ್ಯ ನಗರವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 118996 ಹೆ. ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹೆ. ಗಳಿಗೆ ನೀರಾವರಿ ಸೌಲಭ್ಯವಿದೆ. ಭತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆಗಳು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ ಜೋಳ, ಶೇಂಗಾ ಇತ್ಯಾದಿಗಳನ್ನು ಬೆಳೆಯುತ್ತಾರೆ. ಭತ್ತ 82197 ಹೆ, ಜೋಳ 290 ಹೆ, ಕಬ್ಬು ೮೭೨ ಹೆ, ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ ೭೨೪೫ ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ಕಡಲೆ, ತೊಗರಿ ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ.ಪಶುಪಾಲನೆಯೂ ರೂಢಿಯಲ್ಲಿದೆ.

ಭಟ್ಕಳವು ಮಲ್ಲಿಗೆಗೆ ಹೆಸರುವಾಸಿಯಾಗಿದೆ.ಇಲ್ಲಿ ಮಲ್ಲಿಗೆ ಬೆಳೆಗೆ ಅನುಕೂಲ ವಾತಾವರಣವಿದೆ.ಭಟ್ಕಳ ಮಲ್ಲಿಗೆಯು ದೇಶ ವಿದೇಶಗಳಿಗೂ ರಫ್ತಾಗುತ್ತದೆ.

ಈ ಜಿಲ್ಲೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಒಂದು ಕಾಲದಲ್ಲಿ ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಅಂಬಿಗ, ಮೊಗೇರ, ಆಗೇರ, ಕ್ರಿಶ್ಚಿಯನ್ ದಾಲಜಿಗಳಷ್ಟೇ ಈ ವೃತ್ತಿಯನ್ನವಲಂಬಿಸಿದ್ದರೆ ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಜಾತಿಯವರೂ ಮೀನು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇವರು ಕರಾವಳಿ ಪ್ರದೇಶದ 118 ಹಳ್ಳಿಗಳಲ್ಲಿದ್ದಾರೆ. ಸಮುದ್ರದಿಂದ ಮೀನು ಹಿಡಿಯುವ ಕೇಂದ್ರಗಳೆಂದರೆ ಅರ್ಗಾ, ಭಟ್ಕಳ, ಬಿಣಗಾ, ಚೆಂಡಿಯೆ, ಗಂಗಾವಳಿ, ಕಾರವಾರ, ಹೊನ್ನಾವರ, ಖಾರವಿ, ಕೇಣಿ, ಕೋಡಾರ್, ಕುಮಟ, ಹೊಲನಗದ್ದೆ, ಮಾಜಾಳಿ, ಮಂಕಿ, ಮುರ್ಡೇಶ್ವರ, ಶಿರಾಲಿ,ಮತ್ತು ತದಡಿ. ಸಾಗರ ಮೀನುಗಾರಿಕೆಯಲ್ಲಿ 30094 ಟನ್ ಹಿಡಿದರೆ, ಸಿಹಿನೀರಿನಲ್ಲಿ 249ಟನ್ ಮೀನು ಹಿಡಿಯಲಾಗಿದೆ (2001).

ಮರ ಕೊಯ್ಯುವ ಗಿರಣಿ, ಹಂಚಿನ ಕಾರ್ಖಾನೆ, ನೇಯ್ಗೆ, ಮೇಣದಬತ್ತಿಯ ಉತ್ಪಾದನೆ, ಸಾಬೂನು ತಯಾರಿಕೆ, ವಾಹನ ದುರಸ್ತಿ, ಮುದ್ರಣ, ಕೆತ್ತನೆಯ ಕೆಲಸ, ಚಿನ್ನ ಬೆಳ್ಳಿಯ ಕೆಲಸ, ಬುಟ್ಟಿ, ಚಾಪೆ ಹೆಣೆಯುವಿಕೆ, ಬೆತ್ತದ ಹೆಣಿಗೆ, ಜೇನು ಸಾಕಣೆ, ಕೋಳಿ ಕುರಿ ಸಾಕಣೆ, ರೇಷ್ಮೆ, ಚರ್ಮದ ಉದ್ಯೋಗ, ವ್ಯಾಪಾರ, ಏಜೆನ್ಸಿಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಂಜುಗೆಡ್ಡೆ ತಯಾರಿಕಾ ಕಾರ್ಖಾನೆಗಳು 52 ಇವೆ. ದಾಂಡೇಲಿಯಲ್ಲಿಯೂ ಕಾಗದದ ಕಾರ್ಖಾನೆ ದೊಡ್ಡ ಉದ್ದಿಮೆ. ಅಲ್ಲದೆ ಪ್ಲೈವುಡ್, ಫೆರೋಮ್ಯಾಂಗನೀಸ್ ಉದ್ದಿಮೆಗಳೂ ಇವೆ. ಕಾರವಾರ, ಬೆಲೆಕೇರಿ, ತದಡಿ, ಕುಮಟ, ಹೊನ್ನಾವರ, ಭಟ್ಕಳ-ಇವು ಮುಖ್ಯ ಬಂದರುಗಳು. ಕಾರವಾರದಲ್ಲಿ ಸರ್ವಋತು ಬಂದರನ್ನು ಬೃಹತ್ತಾಗಿ ಕಟ್ಟಲಾಗಿದೆ. ಬಳ್ಳಾರಿ ಪ್ರದೇಶದ ಕಬ್ಬಿಣದ ಅದಿರನ್ನು ಸಾಗಿಸಲು ಕಾರವಾರ ಬಂದರು ಉಪಯುಕ್ತವಾಗುತ್ತದೆ.

ಉದ್ದಿಮೆ

ಬದಲಾಯಿಸಿ

ಎಂಜಿನಿಯರಿಂಗ್ ಉದ್ಯಮ 15, ರಾಸಾಯನಿಕ ಕಾರ್ಖಾನೆಗಳು 3, ಬಟ್ಟೆ ಕಾರ್ಖಾನೆ 2, ಇತರ ಸಣ್ಣ ಪ್ರಮಾಣದ ಕಾರ್ಖಾನೆಗಳು 66, ಈ ಕಾರ್ಖಾನೆಗಳಲ್ಲಿ ಉದ್ಯೋಗಿಗಳು 13,243. ಜಿಲ್ಲೆಯಲ್ಲಿ ಕೆಲವು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್ಸ್‌, ದಾಂಡೇಲಿಯ ಇಂಡಿಯನ್ ಪ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ್ ಸಾಮಿಲ್, ಬಳ್ಳಾಪುರ ಇಂಡಸ್ಟ್ರಿಸ್ ಲಿ., ಬಿಣಗಾದ, ದಾಂಡೇಲಿ ಫೆರೊ ಅಲಾಯ್ಸ್‌ ಪ್ರೈ.ಲಿ. ಇವು ಮುಖ್ಯ ಉದ್ದಿಮೆಗಳು. ಇವಲ್ಲದೆ ಸಣ್ಣ ಕೈಗಾರಿಕಾ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂ ಕೈಮಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಚು ಕಾರ್ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹಾರ ಸಂಸ್ಕರಣ ಘಟಕಗಳು, ರಾಸಾಯನಿಕ ಘಟಕಗಳು ಚರ್ಮ ಮತ್ತು ರಬ್ಬರ್ ಘಟಕಗಳು, ಗಂಧ ಚಂದನ ಕೆತ್ತನೆಯ ಘಟಕಗಳು, ಮುದ್ರಣ ಘಟಕಗಳು, ನೂಲುವ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟಕಗಳು, ಎಣ್ಣೆ ತಯಾರಿಕಾ ಘಟಕಗಳು, ಕುಂಬಾರಿಕೆ ಮುಂತಾದ ಅನೇಕ ಉದ್ಯಮಗಳಿವೆ. ಇವುಗಳಲ್ಲಿ ಕೆಲವು ಗುಡಿ ಕೈಗಾರಿಕೆಗಳು.

ಸಾರಿಗೆ-ಸಂಪರ್ಕ

ಬದಲಾಯಿಸಿ

ಜಿಲ್ಲೆಯಲ್ಲಿ 329 ಕಿ.ಮೀ ಗಳ ರಾಷ್ಟ್ರೀಯ ಹೆದ್ದಾರಿ, 863 ಕಿ.ಮೀ ಗಳ ರಾಜ್ಯ ಹೆದ್ದಾರಿ ಮಾರ್ಗಗಳಿವೆ. ಜಿಲ್ಲಾ ಮುಖ್ಯ ರಸ್ತೆಗಳು 1039 ಕಿ.ಮೀ. 24 ಭಾರೀ ಸೇತುವೆಗಳಿವೆ. ಪಶ್ಚಿಮ ಕರಾವಳಿಯ ಹೆದ್ದಾರಿ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ, ಉತ್ತರಕ್ಕೆ ಕಾಶ್ಮೀರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾರವಾರದಿಂದ ಹುಬ್ಬಳ್ಳಿಯ ಕಡೆಗೆ ಹೋಗುವ ಹೆದ್ದಾರಿ ಅನೇಕ ನಗರಗಳ ಸಂಪರ್ಕ ಕಲ್ಪಿಸುತ್ತದೆ. ನಗರಗಳೊಂದಿಗೆ ಹಳ್ಳಿಗಳ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳೂ ಇವೆ. ಘಟ್ಟದ ಮೇಲೆ ಸಿದ್ದಾಪುರದಿಂದ ಹುಬ್ಬಳ್ಳಿಗೆ, ಕಾರವಾರಕ್ಕೆ, ದಾಂಡೆಲಿಗೆ, ಯಲ್ಲಾಪುರಕ್ಕೆ ಸಂಪರ್ಕ ದೊರಕಿಸುವ ರಸ್ತೆಗಳಿವೆ. ಕೊಚ್ಚಿ ಮುಂಬೈಗಳಿಗೆ ಹೋಗುವ ಕೊಂಕಣ ರೈಲ್ವೆ ಈ ಜಿಲ್ಲೆಯ ಮೂಲಕ ಹೋಗುತ್ತದೆ. ಜಿಲ್ಲೆಯಲ್ಲಿ 179ಕಿಮೀ ಉದ್ದದ ರೈಲು ಮಾರ್ಗವಿದೆ. 16 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಮುಖ್ಯವಾದವು-ಭಟ್ಕಳ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ. ಜಿಲ್ಲೆಯಲ್ಲಿ 497 ಅಂಚೆ ಕಚೇರಿಗಳು 152 ದೂರವಾಣಿ ವಿನಿಮಯ ಕೇಂದ್ರಗಳು ಮತ್ತು 90,234 (2006) ದೂರವಾಣಿ ಸಂಪರ್ಕಗಳಿವೆ. ಇದಲ್ಲದೆ ಜಲಮಾರ್ಗದ ಸಂಪರ್ಕವೂ ಇದೆ.

ಜನಸಂಖ್ಯೆ

ಬದಲಾಯಿಸಿ

ಜಿಲ್ಲೆಯ ಒಟ್ಟು ಜನಸಂಖ್ಯೆ ೧೩,೫೩,೬೪೪ ಇದರಲ್ಲಿ ೯,೬೫,೭೩೧ ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ ೪,೮೯,೯೦೮ ಗಂಡಸರು, ೪,೭೫,೮೨೩ ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ ೧೩೨ ಜನರು, ಲಿಂಗಾನುಪಾತ ಸಾವಿರ ಪುರುಷರಿಗೆ ೯೭೦ ಮಹಿಳೆಯರು ಈ ಜಿಲ್ಲೆಯಲ್ಲಿ ಹಿಂದುಗಳೂ (ಶೇ. 83.6) ಮುಸಲ್ಮಾನರೂ (ಶೇ.11.9) ಕ್ರೈಸ್ತರೂ (ಶೇ.3.3) ಇದ್ದಾರೆ. ಬಹುಸಂಖ್ಯಾತರು ಹಿಂದುಗಳು. ಈ ಜಿಲ್ಲೆಯಲ್ಲಿ ಬೌದ್ಧ, ಜೈನ ಧರ್ಮಗಳೂ ಪ್ರಚಾರವಾದವು. ೧೦-೧೨ನೆಯ ಶತಮಾನಗಳಲ್ಲಿ ನಾಥಪಂಥವೂ ೧೬-೧೮ನೆಯ ಶತಮಾನಗಳಲ್ಲಿ ವೀರಶೈವ ಪಂಥದ ಪ್ರಚಾರವೂ ನಡೆದವು. ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಗಳೂ ಮಸೀದಿಗಳೂ ಸ್ಮಾರ್ತ, ಜೈನ, ವೀರಶೈವ, ವೈಷ್ಣವ ಮಠಗಳೂ ಇವೆ. ಹಿಂದುಧರ್ಮದ ಹಲವು ಪಂಗಡಗಳಿಗೆ ಸೇರಿದ ನೂರಾರು ದೇವಾಲಯಗಳು ಇವೆ. ನಾಥಪಂಥದ ಅವಶೇಷಗಳು ಅಂಕೋಲ, ಬೆಳಂಬರ್, ಹೊನ್ನೆಬೈಲ, ಅಘನಾಶಿನಿ, ಲಿಂಗೆ, ಮಾಜಾಳಿ, ಯಾಣ, ಕವಳೆಯಲ್ಲಿವೆ.

ಶಿಕ್ಷಣ

ಬದಲಾಯಿಸಿ

ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 84.64: ಪುರುಷರು ಶೇ. 89.63, ಮಹಿಳೆಯರು ಶೇ. 78.39. ಜಿಲ್ಲೆಯಲ್ಲಿ ಮೊದಲು ಜೈನ, ವೀರಶೈವ, ಬ್ರಾಹ್ಮಣ ಸಂಪ್ರದಾಯದ ಪಾಠಶಾಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೇಕ ಅಗ್ರಹಾರಗಳು ಪ್ರಚಲಿತವಿದ್ದವು. ಅವುಗಳೆಲ್ಲ ಬ್ರಿಟಿಷರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು ೧೮೬೬ ಸುಮಾರಿಗೆ ಸರ್ಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮಟ, ಶಿರಸಿಗಳಲ್ಲಿ ಆಂಗ್ಲೊವರ್ನಾಕ್ಯುಲರ್ ಶಾಲೆಗಳಿದ್ದವು. ೧೮೬೬ರಲ್ಲಿ ಒಂದು ಉರ್ದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು.

1864ರಲ್ಲಿ ಕಾರವಾರದಲ್ಲಿ ಮೊದಲ ಹೈಸ್ಕೂಲು ಪ್ರಾರಂಭವಾಯಿತು. 1935-36ರಲ್ಲಿ 853 ಪ್ರಾಥಮಿಕ ಶಾಲೆಗಳಿದ್ದವು. 23,465 ಮಂದಿ ಶಿಕ್ಷಣ ಪಡೆಯುತ್ತಿದ್ದರು. ಇವರಲ್ಲಿ 5776 ವಿದ್ಯಾರ್ಥಿನಿಯರು. ಆ ವರ್ಷದಿಂದ ಪರಿಶಿಷ್ಟ ಜಾತಿಯ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ವಿಶೇಷ ಗಮನ ಕೊಡಲಾಯಿತು. ಜಿಲ್ಲಾ ಸ್ಕೂಲ್ ಬೋರ್ಡ್ 1944ರಲ್ಲಿ ಆರಂಭವಾಗಿ ಎಲ್ಲ ಶಾಲೆಗಳು ಸ್ಕೂಲ್ ಬೋರ್ಡ್ ಅಧೀನಕ್ಕೆ ಬಂದು ಶಿಕ್ಷಣದಲ್ಲಿ ಒಂದು ಬಗೆಯ ಶಿಸ್ತು ಬಂತು. ಸ್ಕೂಲ್‌ಬೋರ್ಡಿನಿಂದ ನಿಯಂತ್ರಣಗೊಂಡ ಶಿಕ್ಷಣ ಇಲಾಖೆಯ ಖರ್ಚು ಪುರೈಸಲು ಸ್ಥಳೀಯ ಆಡಳಿತಗಳು ವಿದ್ಯಾ ಕರ ಸಂಗ್ರಹಿಸತೊಡಗಿದವು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾನೂನು (1918) ಜಾರಿಗೆ ಬಂದಾಗ ಹಳಿಯಾಳ ಮತ್ತು ಹೊನ್ನಾವರ ಪುರಸಭೆಗಳು ಈ ಯೋಜನೆಯನ್ನು ಜಾರಿಗೆ ತಂದವು. 1947ರಲ್ಲಿ ಮುಂಬಯಿ ಪ್ರಾಥಮಿಕ ಶಿಕ್ಷಣ ಅಧಿನಿಯಮದಂತೆ 7-11 ವರ್ಷದ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯವಾಯಿತು. ರಾಜ್ಯ ಪುನಾರಚನೆಯ ಕಾಲದಲ್ಲಿ 969 ಪ್ರಾಥಮಿಕ ಶಾಲೆಗಳೂ 71779 ವಿದ್ಯಾರ್ಥಿಗಳೂ 1759 ಶಿಕ್ಷಕರೂ ಇದ್ದರು. 1900ರ ವೇಳೆಗೆ ಘಟ್ಟದ ಕೆಳಗೆ ಐದು ಪ್ರೌಢಶಾಲೆಗಳೂ ಘಟ್ಟದ ಮೇಲೆ ಸಿರ್ಸಿಯಲ್ಲಿ ಒಂದೇ ಒಂದು ಪ್ರೌಢಶಾಲೆಯೂ ಇದ್ದವು. 1947ರ ವರೆಗೂ ಶಿಕ್ಷಣ ಒಂದು ತೀವ್ರ ಆಸಕ್ತಿಯ ವಿಷಯವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದುವರೆಗೆ ಜಿಲ್ಲೆಯಲ್ಲಿ ಪದವಿಯ ಮಟ್ಟದ ಉನ್ನತ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಸರ್ಕಾರದಿಂದ ಎಲ್ಲವನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲವೆಂದು ಮನಗಂಡ ಸಾರ್ವಜನಿಕರು 1947ರಲ್ಲಿ ಕುಮಟದಲ್ಲಿ ಕೆನರಾ ಎಜುಕೇಶನ್ ಸೊಸೈಟಿಯನ್ನು ಆರಂಭಿಸಿದರು. 1919ರಲ್ಲಿ ಭಟ್ಕಳದಲ್ಲಿ ಆರಂಭವಾದ ಅಂಜುಮನ್ ಎಜುಕೇಶನ್ ಟ್ರಸ್ಟ್‌, 1952ರಲ್ಲಿ ಸಿದ್ದಾಪುರದಲ್ಲಿ ಸ್ಥಾಪಿಸಿದ ಸಹಕಾರಿ ಶಿಕ್ಷಣ ಪ್ರಸಾರ ಸಮಿತಿ, 1954ರಲ್ಲಿ ಯಲ್ಲಾಪುರದಲ್ಲಿ ಆರಂಭವಾದ ಶಿವಾಜಿ ಎಜುಕೇಶನ್ ಸೊಸೈಟಿ, 1961ರಲ್ಲಿ ಸಿರ್ಸಿ ಯಲ್ಲಿ ಆರಂಭಿಸಲಾದ ಮಾಡರ್ನ್ ಎಜುಕೇಶನ್ ಸೊಸೈಟಿ, 1962ರಲ್ಲಿ ಅಂಕೋಲದಲ್ಲಿ ಆರಂಭಿಸಲಾದ ನೂತನ ಶಿಕ್ಷಣ ಸಭಾ ಟ್ರಸ್ಟ್‌, 1970ರಲ್ಲಿ ದಾಂಡೇಲಿಯಲ್ಲಿ ಆರಂಭಿಸಿದ ದಾಂಡೇಲಿ ಎಜುಕೇಶನ್ ಸೊಸೈಟಿ, 1964ರಲ್ಲಿ ಹೊನ್ನಾವರದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜುಕೇಶನ್ ಸೊಸೈಟಿ, 1953ರಲ್ಲಿ ದಿನಕರದೇಸಾಯಿ ನೇತೃತ್ವದಲ್ಲಿ ಸ್ಥಾಪಿತವಾದ ಕೆನರ ವೆಲ್ಫೇರ್ ಟ್ರಸ್ಟ್‌ ಮೊದಲಾದ ಅನೇಕ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.

1949ರಲ್ಲಿ ಕುಮಟದಲ್ಲಿ ಕೆನರಾ ಕಾಲೇಜು ಆರಂಭವಾಗಿ ಅನಂತರ ಅದು ಎ.ವಿ.ಬಾಳಿಗಾ ಕಾಲೇಜ್ ಎಂದು ನಾಮಕರಣ ಗೊಂಡಿತು. 1961ರಲ್ಲಿ ಕಾರವಾರದಲ್ಲಿ ಕಾಲೇಜು ಆರಂಭವಾಯಿತು. ಮುಂದಿನ ಹದಿನೈದು ವರ್ಷಗಳಲ್ಲಿ 13 ಪದವಿ ಮಹಾವಿದ್ಯಾಲಯಗಳು, 3 ವೃತ್ತಿಪರ ಮಹಾವಿದ್ಯಾಲಯಗಳು, 3 ಬಿ.ಇಡಿ. ಮಹಾ ವಿದ್ಯಾಲಯಗಳು, ಒಂದು ಕಾನೂನು ಮಹಾವಿದ್ಯಾಲಯ ಆರಂಭವಾದವು. 1984-85ರಿಂದ ಸಿರ್ಸಿ ಕುಮಟ ಮತ್ತು ದಾಂಡೇಲಿಯಲ್ಲಿ ಪಾಲಿಟೆಕ್ನಿಕ್ಗಳು ನಡೆಯುತ್ತಿವೆ. 1958ರಲ್ಲಿ ಕಾರವಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭವಾಯಿತು. ಈಗ ಈ ಜಿಲ್ಲೆಯ ಭಟ್ಕಳದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜ್ ಇದೆ. ಸಿದ್ದಾಪುರದಲ್ಲೊಂದು ಆಯುರ್ವೇದ ಮಹಾವಿದ್ಯಾಲಯವಿದೆ. ಸಿರ್ಸಿಯಲ್ಲಿ ಅರಣ್ಯ ವಿಜ್ಞಾನ ಕಾಲೇಜು ಇದೆ.

1937ರಲ್ಲಿ ಮುಂಬಯಿ ಸರ್ಕಾರದಿಂದ ಅನುದಾನಿತವಾದ ವಯಸ್ಕರ ಶಿಕ್ಷಣ ಸಮಿತಿಯ ರಚನೆಯಾಗಿತ್ತು. 1947-56ರ ಅವಧಿಯಲ್ಲಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ 4 ತಿಂಗಳ ಮತ್ತು ಆರು ತಿಂಗಳ ಅವಧಿಗಳ ಸಾಕ್ಷರತಾ ವರ್ಗಗಳು ಆರಂಭವಾದವು. 1980ರಲ್ಲಿ ಸಿರ್ಸಿಯಲ್ಲಿ ವಯಸ್ಕರ ಶಿಕ್ಷಣಕ್ಕೆ ಯೋಜನಾ ಕಚೇರಿ ತೆರೆದ ಅನಂತರ ವಯಸ್ಕರ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಯಿತು. ಈಗ 150 ವಯಸ್ಕರ ಶಿಕ್ಷಣ ಕೇಂದ್ರಗಳೂ 150 ಸಾಕ್ಷರೋತ್ತರ ತರಬೇತಿ ಕೇಂದ್ರಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರದ ಯೋಜನೆಯಡಿ ನವೋದಯ ಶಾಲೆಯೂ ನಡೆಯುತ್ತಿವೆ.ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಖಾತೆ 1981-82ರಲ್ಲಿ ಪ್ರೌಢಶಾಲೆಯ 65 ಶಿಕ್ಷಕರಿಗೆ ತರಬೇತು ನೀಡಿ ಅವರನ್ನು ಕೆರಿಯರ್ ಮಾಸ್ಟರ್ಸ್‌ ಎಂದು ಕರೆದುದಲ್ಲದೆ ಬಿ.ಎಡ್. ವಿದ್ಯಾರ್ಥಿಗಳಿಗೂ ಈ ವಿಷಯ ಪರಿಚಯಿಸಿತು. ಜಿಲ್ಲೆಯಲ್ಲಿ 2292 ಪ್ರಾಥಮಿಕ ಶಾಲೆಗಳು, 231 ಪ್ರೌಢಶಾಲೆಗಳೂ 63 ಪದವಿಪೂರ್ವ ಕಾಲೇಜುಗಳೂ 28 ಸಾಮಾನ್ಯ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್ಗಳು, 168 ಗ್ರಂಥಾಲಯಗಳು ಇವೆ (2000). ಜಿಲ್ಲೆಯಲ್ಲಿ 11 ಅಲೋಪತಿ ಆಸ್ಪತ್ರೆಗಳು, 3 ಭಾರತೀಯ ವೈದ್ಯ ಪದ್ಧತಿಯ ಆಸ್ಪತ್ರೆಗಳು, 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 120 ಕುಟುಂಬ ಕಲ್ಯಾಣ ಕೇಂದ್ರಗಳು ಇವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಯಕ್ಷಗಾನ ವೇಷ

ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ತುಳು, ರಾಜಸ್ತಾನಿ, ಕೊಡವ, ಹಿಂದಿ, ಗುಜರಾತಿ, ಸಿಂಧಿ, ನೇಪಾಳಿ, ಬಂಗಾಳಿ, ಪಂಜಾಬಿ, ಒರಿಯ, ಪರ್ಷಿಯನ್ ಭಾಷೆ ಮಾತನಾಡುವವರನ್ನೂ ಕಾಣಬಹುದು. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು. ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (೨೦೦೪). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ.

ಸಾಹಿತ್ಯ

ಬದಲಾಯಿಸಿ
 
ಯಶವಂತ ಚಿತ್ತಾಲ

ಸಾಹಿತ್ಯ ಕ್ಷೇತ್ರವನ್ನು ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ, ಜಿ.ಆರ್.ಪಾಂಡೇಶ್ವರ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಬಿ.ಎಚ್.ಶ್ರೀಧರ,ಶಾಂತಿನಾಥ ದೇಸಾಯಿ, ಸು.ರಂ.ಎಕ್ಕುಂಡಿ, ಅರವಿಂದ ನಾಡಕರ್ಣಿ, ಸ.ಪ.ಗಾಂವಕರ್, ಕೃಷ್ಣಾನಂದ ಕಾಮತ್, ಪ.ಸು.ಭಟ್ಟ, ಸುಂದರ ನಾಡಕರ್ಣಿ, ವಿ.ಜಿ.ಭಟ್ಟ, ದಿನಕರ ದೇಸಾಯಿ, ವಿ.ಜಿ.ಶಾನಭಾಗ, ಶಾ.ಮಂ.ಕೃಷ್ಣರಾಯ, ಗಂಗಾಧರ ಚಿತ್ತಾಲ, ಜಿ.ಜಿ.ಹೆಗಡೆ, ಜಿ.ಎಸ್.ಭಟ್ಟ, ಜಯಂತ ಕಾಯ್ಕಿಣಿ, ನಿರಂಜನ ವಾನಳ್ಳಿ, ರಾಜೀವ ಅಜ್ಜಿಬಳ, ವಿಷ್ಣು ನಾಯ್ಕ,ಶಾಂತಾರಾಮ ನಾಯಕ ಹಿಚಕಡ , ರಾಮಕೃಷ್ಣ ಗುಂದಿ ಸಮೃದ್ಧಗೊಳಿಸಿದ್ದಾರೆ. ಹೊಸ ತಲೆಮಾರಿನ ಶಿವಲೀಲಾ ಹುಣಸಗಿ ಯಲ್ಲಾಪುರ ಅನೇಕ ಕವಿಗಳೂ ಲೇಖಕರೂ ಭರವಸೆ ಮೂಡಿಸುತ್ತಿದ್ದಾರೆ ಈ ಜಿಲ್ಲೆಯ ಪತ್ರಿಕೆಗಳಲ್ಲಿ ಹವ್ಯಕ ಸುಬೋಧ (1885), ಕಾರವಾರ ಚಂದ್ರಿಕೆ (1885), ಮಕ್ಕಳ ಪತ್ರಿಕೆ ಹಿತೋಪದೇಶ (1888), ಸರಸ್ವತಿ (1900), ವಿನೋದಿನಿ (1904)- ಇವು ಮಾಸಪತ್ರಿಕೆಗಳು. 1919ರಲ್ಲಿ ಕುಮಟದಿಂದ ಕಾನಡಾ ಧುರೀಣ (1922), ನಂದಿನಿ (1925) ಮಾಸ ಪತ್ರಿಕೆ ಮೊದಲು ಗೋಕರ್ಣದಿಂದ ಪ್ರಕಟಿಸಲಾಗುತ್ತಿದ್ದು ಕೆಲಕಾಲ ನಿಂತು 1937 ರಿಂದ ಸಿರ್ಸಿಯಿಂದ ಪ್ರಕಟವಾಗತೊಡಗಿತು. ಶರಣ ಸಂದೇಶ (1931), ನವಚೇತನ (1941), ಸಾಧನ (1949) ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಮಲಯವಾಣಿ (1955) ವಾರ್ಷಿಕ ಪತ್ರಿಕೆ. 1956ರಲ್ಲಿ ಭಾಮಾ ಮಾಸ ಪತ್ರಿಕೆ ಸಿರ್ಸಿಯಿಂದ ಪ್ರಕಟವಾಗ ತೊಡಗಿತು. 1957ರಲ್ಲಿ ಸಿರ್ಸಿಯಿಂದ ಪ್ರಕಟವಾಗುತ್ತಿದ್ದ ನಗರವಾಣಿ ಅಲ್ಪಾಯುವಾಯಿತು. ಸಹಕಾರಿ ಸಮಾಜ (1979), ಯಕ್ಷಗಾನ (1959), ಗೋಕರ್ಣ ಗೋಷ್ಟಿ (1959), ಸ್ವತಂತ್ರವಾಣಿ (1960), ಮಧುವನ (1960), ಗ್ರಾಮಜೀವನ, ಸಮಾಜ (1965), ಸಂಘಟನೆ, ರಮಣ ಸಂದೇಶ, (1971), ಸಿರ್ಸಿ ಸಮಾಚಾರ, ಸಹಚರ, ಸಮನ್ವಯ (1975) ಇವಲ್ಲದೆ ಕಡಲಧ್ವನಿ (1983), ಆಚಾರ (1980), ಕರಾವಳಿ ಗ್ರಾಮ ವಿಕಾಸ (1987), ಗ್ರಾಮ ಭಾರತಿ ಅಭಯ (1965), ನುಡಿಜೇನು (1968), ಗಿರಿಘರ್ಜನೆ, ಯುಗವಾಣಿ (1964), ಸಮಾಜವಾಣಿ (1965), ಚುನಾವಣೆ, ಆಧ್ಯಾತ್ಮಿಕ ಪತ್ರಿಕೆ ಜೀವೋತ್ತಮ ಉಲ್ಲೇಖನೀಯ. ಮುನ್ನಡೆ (1988) ದಿನಪತ್ರಿಕೆಯಾಗಿ 2000ದಲ್ಲಿ ನಿಂತುಹೊಯಿತು. ಜಿಲ್ಲೆಯ ಮೊದಲ ದೈನಿಕ ಲೋಕಧ್ವನಿ (1983), ಜನಮಾಧ್ಯಮ (1988), ಧ್ಯೇಯನಿಷ್ಠ ಪತ್ರಕರ್ತ (1991), ಕರಾವಳಿಯ ಮುಂಜಾವು (1994) - ಇವು ಇಂದಿನ ಪ್ರಮುಖ ಪತ್ರಿಕೆಗಳು.

ದೀರ್ಘಕಾಲ ನಡೆದ ಪತ್ರಿಕೆಗಳಲ್ಲಿ ಕಾನಡಾವೃತ್ತದ ಸ್ಥಾನ ಅದ್ವಿತೀಯ. ಇದು 1916ರಲ್ಲಿ ಪ್ರಾರಂಭವಾಗಿ ಈಗಲೂ ನಡೆಯುತ್ತಿದೆ. 1946ರಲ್ಲಿ ಆರಂಭವಾದ ನಾಗರಿಕ ಈಗಲೂ ಪ್ರಕಟವಾಗುತ್ತಿದೆ. 1960ರಲ್ಲಿ ಜನತಾ, 1955ರಲ್ಲಿ ದಿನಕರ ದೇಸಾಯಿ ಪ್ರಾರಂಭಿಸಿದ ಜನಸೇವಕ 1972ರ ವರೆಗೆ ನಡೆದು ಅನಂತರ ನಿಂತಿತು. ಶೃಂಗಾರ ಹೊನ್ನಾವರದಿಂದ ಪ್ರಕಟವಾಗುತ್ತಿತ್ತು.

ಪ್ರಮುಖ ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ

ಈ ಜಾಗವು ಪ್ರಶಾ೦ತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳ ರಮ್ಯ ತಾಣವಾಗಿದೆ.
ಮಾರಿಕಾಂಬಾ ದೇವಾಲಯ :ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಸಹ ಇದೆ.ಶ್ರಿ ಮಾರಿಕಾಂಬೆಯ ಜಾತ್ರೆ ಸಿರ್ಸಿ ಮಾರಿಕಾಂಬಾ ಜಾತ್ರೆ ಎರಡು ವರ್ಷಕ್ಕೊಮ್ಮೆ ಎ೦ಟು ದಿನಗಳ ಕಾಲ ನಡೆಯುತ್ತದೆ. ಈ ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಹೊನ್ನಾವರ ಮತ್ತು ಸಿರ್ಸಿಗೆ ಹೊಗುವಾಗ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಪ್ರೇಕ್ಶಣಿಯವಾಗಿದೆ. ಅಲ್ಲಿನ ಸೊಬಗು ಕ೦ದಕದಲ್ಲಿ ಹರಿಯುತ್ತಿರುವ ಶರಾವತಿ ನದಿ,ದಾರಿಯಲ್ಲಿ ಸಿಗುವ ಕಾಡುಪ್ರಾಣಿಗಳು ಅಲ್ಲಲ್ಲಿ ಹರಿಯುವ ಝರಿಗಳು ಮತ್ತು ತ೦ಪನೆಯ ವಾತಾವರಣದಲ್ಲಿ ಹೊಗುತ್ತಿದ್ದರೆ ಸಮಯ ಕಳೆದದ್ದೆ ಗೊತ್ತಾಗುವದಿಲ್ಲ. ಇ೦ತಹ ಒಂದು ಸು೦ದರವಾದ ದ್ರಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ. ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಇಲ್ಲಿ ಬೆಳೆಯುತ್ತಾರೆ. ಸಿರ್ಸಿಯ ಮಾರಿಕಾಂಬಾ ದೇಗುಲವು ಬಹಳ ಪ್ರಸಿದ್ಧಿಯಾಗಿದೆ.

  • ಸಹಸ್ರಲಿಂಗ ಸಿರ್ಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ.

ಸೊಂದಾ ಸಿರ್ಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ.

  • ಉಂಚಳ್ಳಿ ಜಲಪಾತ ೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ.

ಜನಸಂಖ್ಯೆ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ ೭೯ ಶೇಕಡಾ ಜನರು ವಿದ್ಯಾವಂತರು. ಇವರು ಕನ್ನಡ (ಹವ್ಯಕ ಕನ್ನಡ), ಕೊಂಕಣಿ, ಉರ್ದು, ಮರಾಠಿ ಮಾತಾಡುತ್ತಾರೆ. ಇಲ್ಲಿಯ ಜನ ಬಹಳ ಸೌಹಾರ್ದಶೀಲರು.ಇಲ್ಲಿಯ ಜನರ ಮುಖ್ಯ ವ್ಯಾವಹಾರಿಕ ಭಾಷೇ ಕೊ೦ಕಣಿ ಮತ್ತು ಕನ್ನಡ.

  • ಅಪ್ಸರಕೊಂಡ : ಆಪ್ಸರ ಕೊಂಡ ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ. ಅರಬ್ಬಿ ಸಮುದ್ರದ ತಟದಿಂದ ೫೦೦ ಮೀ ಪೊರ್ವಕ್ಕಿರುವ ಈ ಪ್ರದೇಶದಲ್ಲಿ ಸುಮಾರು ೫೦ ಅಡಿಯಿಂದ ಧುಮುಕುವ ಸಣ್ಣದಾದ ಮನಮೋಹಕ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡಿರುವರೆಂಬ ಪ್ರತೀತಿ. ಅದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವದೆ ಒಂದು ವಿಶೇಷ ಅನುಭವ.
  • ಬನವಾಸಿ ಮಧುಕೇಶ್ವರ ದೇವಾಲಯ : ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಸಿರ್ಸಿ ತಾಲೂಕಿನಲ್ಲಿದೆ. ಬನವಾಸಿಯ ಅಕ್ಷಾಂಶ : ೧೪೦ ೩೨’ ೧೦’’ (ಉ) ಹಾಗು ರೇಖಾಂಶ : ೭೫೦ ೦೦’ ೫೮”(ಪಶ್ಚಿಮ) . ಸಮುದ್ರ ಮಟ್ಟದಿಂದ ಎತ್ತರ : ೫೭೦.೮೯ ಮೀಟರುಗಳು. ಬನವಾಸಿಯು ಸಿರ್ಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ. ಪೌರಾಣಿಕಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣುವು ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು. ಧರ್ಮರಾಜನ ಅಶ್ವಮೇಧಯಾಗದ ಸಂದರ್ಭದಲ್ಲಿ ಸಹದೇವನು ದಕ್ಷಿಣ ಭಾರತದ ದಿಗ್ವಿಜಯ ಸಮಯದಲ್ಲಿ ವನವಾಸಿಕಾ ಎಂದರೆ ಬನವಾಸಿ ನಗರವನ್ನು ಗೆದ್ದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.

ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ. ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ. ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ. ಪ್ರೇಕ್ಷಣೀಯ ಮಧುಕೇಶ್ವರ ದೇವಾಲಯಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ. ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ವರ್ಷದ ಕಾಲಕ್ಕೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.

ಕದಂಬೋತ್ಸವಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಸಿರ್ಸಿ ವಿಭಾಗ, ಲೋಕೋಪಯೋಗಿ ಇಲಾಖೆ,ಸಿರ್ಸಿ ಇವರ ಮುಖಾಂತರ ವಸತಿ ಕಾಯ್ದಿರಿಸಬಹುದು. ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ.

  • ಮಾಗೋಡು ಜಲಪಾತ : ಮಾಗೋಡು ಜಲಪಾತ ಯಲ್ಲಾಪುರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ. ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.ಈ ಮಾರ್ಗವಾಗಿ ಬಂದ್ರೆ,೬೦ ಎಕರೆ ವಿಸ್ತೀರ್ಣದ ಅದ್ಭುತ ಕವಡೆಕೆರೆ,ಪ್ರಸಿದ್ಡ ಚಂದಗುಳಿ ವಿನಾಯಕ ದೇವಸ್ತಾನ,ಬೇಡ್ತಿ ಯೊಜನೆಯ ನೋವನ್ನು ಬಿಂಬಿಸುವ ರೆಡ್ಡಿ ಕೆರೆ,ಕುಳಿಮಾಗೋಡು ಜಲಪಾತ,ಜೇನುಕಲ್ಲು ಗುಡ್ಡ.... ಹೀಗೆ ಹತ್ತಾರು ಜಾಗಗಳಿಗೂ ಭೇಟಿ ನೀಡಬಹುದು.
  • ಉಂಚಳ್ಳಿ ಜಲಪಾತ : ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು ೧೧೬ ಮೀಟರ್. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಿಂದ ೩೦ ಕಿಮಿ ದೂರದಲ್ಲಿದೆ. ೧೮೪೫ರಲ್ಲಿ ಈ ಜಲಪಾತವನ್ನು ಪತ್ತೆಹಚ್ಚಿದ ಬ್ರಿಟಿಷ್ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ, ಸ್ಥಳೀಯರು ಇದನ್ನು ಕೆಪ್ಪ ಜೋಗ ಎಂದೂ ಕೂಡ ಕರೆಯುತ್ತಾರೆ.
  • ಯಾಣ : ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ." ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಚಾಲ್ತಿಯಲ್ಲಿದೆ.ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ಬಸ್ಸಿನ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರೀಟಾ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಸಿರ್ಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ.
 
ಯಾಣ

ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ."ನಮನ

  • ಮುರುಡೇಶ್ವರ ಸಮುದ್ರತೀರ, ದೇವಾಲಯ : ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಗಿದ್ದು, ಐತಿಹಾಸಿಕವಗಿ ಪ್ರಖ್ಯಾತಿಯನ್ನು ಹೊಂದಿದೆ. ಅರೇಬಿಯನ್ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರಿವಾಸಿಯಾಗಿದೆ. ಮುರುಡೆಶ್ವರ ಕೆವಲ ಧಾಮಿಱಕ ಕ್ಷೇತ್ರ ಮಾತ್ರ ಻ಲ್ಲ. ಜಗತ್ತಿನ ೊಂದು ಪ್ರಖ್ಯಾತ ಪ್ರವಾಸಿ ತಾಣ ಮುರುಡೇಶ್ವರ ಕನಾಱಟಕದ ಕರಾವಳಿ ಜಿಲ್ಲೆಯಾದ ುತ್ತರ ಕನ್ನಡದ ಭಟ್ಕಳ ತಾಲೂಕಿನ ೊಂದು ಪುಣ್ಯ ಕ್ಷೇತ್ರ. ಹಿಂದೆ ಈ ಕ್ಷೇತ್ರ ಹೆಚ್ಚು ಜನಪ್ರೀಯ ವಾಗಿರಲಿಲ್ಲಾ ಆದರೆ ಇದನ್ನು ಜಾಗತಿಕ ಮಟ್ಟದಲ್ಇ ನಿಲ್ಲಿಸಿದ ಶ್ರೇಯಸ್ಸು ಸನ್ಮಾನ್ಯರಾದ ಶ್ರೀ ಆರ.ಎನ್.ಶೆಟ್ಟಿಯವರಿಗೆ ಸಲ್ಲುತ್ತದೆ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು. ಜೊತೆಗೆ ೆಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಇದೆ. ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವಿದೆ. ಇದು ಧಾಮಿಱಕ ಾಸಕ್ತರನ್ನು ಮಾತ್ರ ತನ್ನತ್ತ ಸೆಲೆಯದೆ ವಿಹಾರಿಗಳನ್ನು ಆಕಷಿ್ಸುತ್ತಿದೆ. ಇತ್ತಿಚೆಗೆ ಇಲ್ಲಿ ರಾಮ,ಲಕ್ಷ್ಮಣ ಮತ್ತು ಸೀತಾ ಪ್ರತಿಮೆ ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿ ಸಮುದ್ದರದಲ್ಲಿ ಜಲಕೀಡೆ ಆಡುವುದೆ ಒಂದು ಅನನ್ಯ ಻ನುಭವ.

ಪುರಾಣದ ಕತೆ : ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಕರನ್ನು ಸ್ವಾಗತಿಸುವವು. ಸಮುದ್ರದಲ್ಲಿ ಒಳಸೇರಿದ ಕಂದುಗಿರಿ ಎಂಬ ಗುಡ್ಡದ ಮೇಲೆ ಮುರುಡೇಶ್ವರನ ದೇವಾಲಯವನ್ನು ಹೊಸದಾಗಿ ದಾಕ್ಷಿಣಾತ್ಯ ಶಿಲ್ಪದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ವಿಸ್ತಾರವಾದ ಚಂದ್ರಶಾಲೆಯಿದ್ದು ಗಣಪತಿ, ಸುಬ್ರಹ್ಮಣ್ಯ, ಹನುಮಂತ, ಪಾರ್ವತಿಯರ ಪೀಠಗಳಿವೆ. ಮುರ್ಡೇಶ್ವರ ದೇವಾಲಯದ ಗೋಪುರ ಹಾಗು ಸುತ್ತಲಿನ ಕಟ್ಟಡಗಳ ಶಿಲ್ಪಗಳು ಉತ್ತಮ ಮಟ್ಟದ್ದಾಗಿದ್ದು ಆಕರ್ಷಕವಾಗಿದೆ. ಸುತ್ತಲಿನ ಸಮುದ್ರ ನಾಡಿನ ಪ್ರವಾಸಿಗಳನ್ನು ತನ್ನಡೆಗೆ ಸೆಳೆಯುತ್ತದೆ. ನೇತ್ರಾಣಿ ದ್ವೀಪ ಹತ್ತಿರವೆ ಇದೆ. ಇಲ್ಲಿಯ ಕಡಲ ಸಂಜೆಯ ಸೊಗಸನ್ನು ಅನುಭವಿಸಿಯೇ ತಿಳಿಯಬೇಕು. ಪ್ರವಾಸಿಗಳಿಗಾಗಿ ಸಮುದ್ರಮಧ್ಯದಲ್ಲಿ ಕಟ್ಟಲಾದ ನವೀನ ಉಪಹಾರ ಗೃಹ, ಗುಡ್ಡದ ಮೇಲಿರುವ ವಸತಿಗೃಹಗಳು, ರಮ್ಯವಾಗಿದೆ. ಪ್ರತಿನಿತ್ಯ ಉಚಿತ ಅನ್ನದಾನಸೇವೆ ದೇವಾಲಯ ನಡೆಸುತ್ತಿದೆ. ತಿರುಪತಿಯನ್ನು ಬಿಟ್ಟರೆ ಇನ್ನೆಲ್ಲೂ ಈ ವರೆಗೆ ಇಲ್ಲದ ೩೫ ಅಡಿ ಎತ್ತರದ ಚಿನ್ನದ ವರ್ಣದ ಭವ್ಯ ಧ್ವಜಸ್ಥಂಬ ಈ ಮಾದರಿಯದ್ದು ಕರ್ನಾಟಕದಲ್ಲಿಯೆ ಅತಿ ಎತ್ತರವಾಗಿದ್ದು ಮನಸೆಳೆಯುತ್ತದೆ. ಇಂದು ರಾಷ್ಟ್ರಖ್ಯಾತಿಯ ಸ್ಥಳವಾಗಿ ಪರಿಗಣಿಸಲ್ಪಟ್ಟ ಮುರ್ಡೇಶ್ವರದ ನಿಸರ್ಗದ ಹಾಗು ಕಲೆಯ ವೈಭವವನ್ನು ಕಂಡೇ ಆನಂದಿಸಬೇಕು,."ನಮನ"

  • ಗೋಕರ್ಣ ಸಮುದ್ರತೀರ, ದೇವಾಲಯ : ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ.

ಮಹಾಗಣಪತಿ ದೇವಾಲಯ, ಶಿವ ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರಗಳಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.

  1. ಅರ್ಧಚಂದ್ರಾಕಾರದ ಸಮುದ್ರ ತೀರ
  2. ಸಮುದ್ರ ತೀರ
  3. ಆಕಾರದ ಸಮುದ್ರ ತೀರ
  • ಕಾರವಾರ ಸಮುದ್ರತೀರ : ಕಾರವಾರ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಮತ್ತು ಜಿಲ್ಲಾ ಕೇಂದ್ರ. ಕಾರವಾರ, ಕರ್ನಾಟಕ ಹಾಗೂ ಗೋವೆಯ ಗಡಿಯಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿದ್ದು, ಅರಬ್ಬೀ ಸಮುದ್ರದಂಚಿನಲ್ಲಿರುವ ನಗರವಾಗಿದೆ. ಕಾರವಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೫೨೦ ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಷ್ಟ್ರಕವಿ ಶ್ರೀ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು."ಕಡಲ ತೀರದ ಕಾಶ್ಮಿರ" ಕಾರವಾರ.ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಕಾರವಾರ ಕರ್ನಾಟಕದ ಎರಡನೆ ಪ್ರಮುಕ ಬಂದರು.ದೇಶದ ಅತೀ ದೊಡ್ಡ ನೌಕಾನೆಲೆ ಕಾರವಾರ.ಕರ್ನಾಟಕದ ಎಕೈಕ ಅಣು ವಿದ್ದುತ ಸ್ತಾವರ ಕೈಗಾ ಕಾರವಾರದ ಸನಿಹದಲ್ಲಿದೆ. ಕಾರವಾರವು ಪ್ರವಾಸಿಗಳಿಗೆ ಒಂದು ಸು೦ದರ ತಾಣ.
  • ದಾಂಡೇಲಿ ಅಭಯಾರಣ್ಯ : ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ಪಟ್ಟಣ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ಉತ್ಪನ್ನಗಳು, ಮೆದು ಮರ ಕಾರ್ಖಾನೆಗಳನ್ನು ಸ್ಥಾಪಿಸಿದರು.

ಜನ ಜೀವನ ಮತ್ತು ಭಾಷೆದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಭಾಷೆಗಳು ಪ್ರಚಲಿತದಲ್ಲಿವೆ.

ಸಂಪರ್ಕ- ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ.

ಪ್ರವಾಸಿ ತಾಣಗಳು- ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ, ಉಳವಿ ಸಿಂಥೇರಿ ರಾಕ್ಸ್ ಅಣಶಿ ಅರಣ್ಯಧಾಮ ಸೂಪಾ ಅಣೆಕಟ್ಟು

ವಸತಿ - ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ.

  • ಇಡಗುಂಜಿ ಮಹಾ ಗಣಪತಿ ದೇವಾಲಯ : ಇಡಗುಂಜಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಹಿಂದೂ ಪುಣ್ಯಕ್ಷೇತ್ರ. ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ಇಲ್ಲಿನ ಗಣೇಶ ದೇವಾಲಯ ಬಹು ಪ್ರಸಿದ್ಧಿ. ಇದು ಹೊನ್ನಾವರದಿಂದ ೧೪ ಕಿ.ಮಿ ದೂರದಲ್ಲಿದ್ದು, ನವಿಲುಗೊಣದಿಂದ ೨೮ ಕಿ.ಮಿ ದೂರದಲ್ಲಿದೆ.
  • ಸೋಂದಾ ಶ್ರೀ ವಾದಿರಾಜ ಬೃಂದಾವನ : ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು. ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯ ಸಮೀಪವಿದೆ. ಇದು ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿದೆ. ಸಿರ್ಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇಲ್ಲಿ ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠಗಳೂ ಇವೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ.

ಭೂತರಾಜರ ಗುಡಿಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ. ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ. ತಪೋವನದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ. ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಸಿರ್ಸಿ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು.

  • ಗೇರಸೊಪ್ಪಾ ಚರ್ತುಮುಖ ಬಸದಿ, ಶರಾವತಿ ಕಣಿವೆ : ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ಹರಿಯುವ ಉದ್ದ ಸುಮಾರು ೧೨೦ ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಶರಾವತಿ ಕಣಿವೆ ನೋಡಲು ಬಹು ಸುಂದರ. ಜೋಗದಲ್ಲಿ ಶರಾವತಿ ೯೦೦ ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ಣಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು
  • ಮುಂಡಗೋಡ ಟಿಬೇಟಿಯನ್ ದೇವಾಲಯಗಳು : ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಿರ್ಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ.

ಪ್ರವಾಸಿ ತಾಣಗಳು - ಟಿಬೆಟಿಯನ್ ವಸಾಹತು ಬಚನಾಕಿ ಅಣೆಕಟ್ಟು ಅತ್ತಿವೇರಿ ಪಕ್ಷಿಧಾಮ

  • ಸಿರ್ಸಿ ಸಹಸ್ರಲಿ೦ಗ : ಇದು ಸಿರ್ಸಿ ತಾಲ್ಲೂಕಿನಲ್ಲಿರುವ ಪ್ರೇಕ್ಷಣಿಯ ಸ್ಟಳವಾಗಿದೆ. ಶಾಲ್ಮಲಾ ನದಿಯಲ್ಲಿ ಕಂಡುಬರುವ ಲಿಂಗಗಳು. ಸಹಸ್ರ ಎಂದರೆ ಸಂಸ್ಸ್ಕತದಲ್ಲಿ ಸಾವಿರ ಎಂದು ಅರ್ಥ. ಸಾವಿರ ಲಿಂಗಗಳು ಕಂದುಬರುತ್ತದೆ.
  • ಶಿವಗಂಗಾ ಪಾಲ್ಸ್ , ಜಡ್ಡಿಗದ್ದೆ, ಸಿರ್ಸಿ : ಸಿರ್ಸಿಯಿಂದ ೪೫ ಕಿ.ಮಿ. ದೂರದಲ್ಲಿದೆ. ಜಲಪಾತದ ಸುತ್ತಲೂ ದಟ್ಟವಾದ ಅರಣ್ಯ ಕಂಡುಬರುತ್ತದೆ. ಸಹ್ಯಾದ್ರಿ ಪರ್ವತದಲ್ಲಿ ಕಾಣುವ ಈ ಜಲಪಾತವು ಸಿರ್ಸಿ, ಯಲ್ಲಾಪುರ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿ ಪ್ರದೇಶದಲ್ಲಿದೆ. ೭೪ ಅಡಿ ಎತ್ತರದಿಂದ ದುಮುಕುತ್ತದೆ. ಈ ನದಿಯ ಮದ್ಯದಲ್ಲಿ ಗಣೇಶ ದೇವಾಲಯವು ಕಾಣ ಬರುತ್ತದೆ. ಆದ್ದರಿಂದ ಈ ಸ್ಟಳಕ್ಕೆ ಗಣೇಶ್ಪಾಲ್ ಎಂದು ಹೆಸರಿಡಿದು ಕರೆಯುತ್ತಾರೆ. ಇಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
  • ಈಶಾನೆ /ಕಲ್ಯಾಣಿ ಗುಡ್ಡ ಕಾನಮುಸ್ಕಿ, ಸಿರ್ಸಿ :
  • ಕೊಂಕಿಕೋಟೆ, ಜಡ್ಡಿಗದ್ದೆ, ಸಿರ್ಸಿ

ಪ್ರಮುಖ ಎಜುಕೇಶನ್ ಸ೦ಸ್ಥೆಗಳು

ಬದಲಾಯಿಸಿ
  1. ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಭಟ್ಕಳ(೧೯೧೯)
  2. ತರಬಿಯತ್ ಎಜ್ಯುಕೇಶನ್ ಸೂಸೈಟಿ ಭಟ್ಕಳ
  3. ಭಟ್ಕಳ ಎಜುಕೇಶನ್ ಟ್ರಸ್ಟ್
  4. ಮುಸ್ಲಿಮ್ ಎಜ್ಯಕೇಶನ್ ಸೂಸೈಟಿ ಮುರುಢೇಶ್ವರ
  5. ಎಮ್.ಇ.ಎಸ್ ಎಜುಕೇಶನ್ ಟ್ರಸ್ಟ್
  6. ಆವೆ ಮರಿಯಾ ಎಜುಕೇಶನ್ ಟ್ರಸ್ಟ್
  7. ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್
  8. ಡೊನ್ ಬೊಸ್ಕೊ ವಎಜುಕೇಶನ್ ಟ್ರಸ್ಟ್
  9. ಆರ್.ನ್.ಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್
  10. ಶ್ರೀ ಮಾತಾ ವಿದ್ಯಾನಿಕೇತನ, ಶಿರ್ಸಿ
  11. ಕೆನರಾ ಎಜುಕೇಶನ ಸೊಸೈಟಿ
  12. ಕೆನರಾ ವೆಲ್ಫ಼ೇರ್ ಟೃಸ್ಟ್, ಅಂಕೋಲಾ
  13. ಎಮ್.ಪಿ.ಇ ಸೊಸೈಟಿ ಯ ಎಸ್.ಡಿ.ಎಮ್ ವಿದ್ಯಾ ಸಂಸ್ಥೆಗಳು.
  14. ಸಿದ್ದಾಪುರ : ಪಶ್ಚಿಮ ಘಟ್ಟಗಳ ಸೆರಗಿನಲ್ಲಿದ್ದು ಮಲೆನಾಡಿನ ಭಾಗವಾಗಿರುವ ಸಿದ್ಧಾಪುರದ ಸುತ್ತ ಮುತ್ತ ಕಾಡುಗಳೂ, ಬೆಟ್ಟ ಗುಡ್ಡಗಳೂ ವಿಪುಲವಾಗಿದ್ದು ಚಾರಣ ಹವ್ಯಾಸಿಗಳಿಗೆ ಪ್ರಿಯವಾಗಿದೆ. ಸಮೀಪದಲ್ಲಿ ಅನೇಕ ಜಲಪಾತಗಳಿದ್ದು ಅವುಗಳಲ್ಲಿ ಕೆಲ ಪ್ರಸಿದ್ಧವಾದವುಗಳೆಂದರೆ
    • ಜೋಗ ಜಲಪಾತ - ಸಿದ್ಧಾಪುರದಿಂದ ೨೦ ಕಿ.ಮೀ ದೂರದಲ್ಲಿದೆ.
    • ಹೊನ್ನೇಮರಡು - ೨೫ ಕಿ.ಮೀ ದೂರದಲ್ಲಿ ತಾಳಗುಪ್ಪಾದ ಸಮೀಪದಲ್ಲಿದೆ.
    • ಬುರುಡೆ ಜಲಪಾತ - ೩೦ ಕಿ.ಮೀ ದೂರದಲ್ಲಿ ಕ್ಯಾದಗಿಯ ಸಮೀಪದಲ್ಲಿದೆ.
    • ಉಂಚಳ್ಳಿ ಜಲಪಾತ (ಕೆಪ್ಪ ಜೋಗ) - ೨೮ ಕಿ.ಮೀ ದೂರ
    • ವಾಟೆಹಳ್ಳ - ೩೪ ಕಿ.ಮೀ. ದೂರ ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು.
    • ಶಂಕರಮಠ,ಭುವನಗಿರಿ , ಇಟಗಿ ಮತ್ತು ಚಂದ್ರಗುತ್ತಿ, ಬಿಳಗಿ ವಿಶೇಷ ಸ್ಥಳ : ದೊಡ್ಮನೆ ದೊಡ್ಮನೆಯು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳಾದ ದಿ.ರಾಮಕೃಷ್ಣ ಹೆಗಡೆಯವರ ಜನ್ಮಸ್ಥಳ.ಇದು ಸಿದ್ಧಾಪುರ ತಾಲೂಕು ಕೇಂದ್ರದಿಂದ ಸುಮಾರು ೩೦ಕೀ.ಮಿ. ದೂರವಿದೆ

ತಾಲೂಕುಗಳು

ಬದಲಾಯಿಸಿ
 
ಕಾರವಾರ ಸಮುದ್ರತೀರ

ಜಿಲ್ಲೆಯ ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ಜಿಲ್ಲೆಯ ಪ್ರಮುಖ ದಿನಪತ್ರಿಕೆಗಳು& ಟಿ.ವಿ ಮಾಧ್ಯಮ

ಬದಲಾಯಿಸಿ

ದಿನಪ್ರತಿಕೆಗಳು

  • ಕರಾವಳಿ ಮುಂಜಾವು
  • ಲೋಕಧ್ವನಿ
  • ಜನಮಾದ್ಯಮ
  • ನುಡಿಜೇನು


ಟಿ.ವಿ ಮಾಧ್ಯಮ

  • ಸುಮುಖ ಟಿವಿ
  • ಶ್ರೀ ಮಾರಿಕಾಂಬಾ ಟಿವಿ
  • ವಿಸ್ಮಯ ಟಿ.ವಿ

ಬಾಹ್ಯಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ
  1. http://www.censusindia.gov.in/pca/default.aspx
  2. "ಮಾರಿಕಾಂಬಾ ಜಾತ್ರೆ". Archived from the original on 2022-11-14. Retrieved 2022-11-15.
  3. "ಮಾರಿಕಾಂಬಾ ಜಾತ್ರೆ".
  4. [೧]
  5. [೨]