ಬತ್ತಲೇಶ್ವರ - ಬತ್ತಲೇಶ್ವರ ರಾಮಾಯಣ ಅಥವಾ ಕೌಶಿಕ ರಾಮಾಯಣದ ಕರ್ತೃ.

ಈತ ಸು. 1430ರಲ್ಲಿದ್ದನೆಂದು ಕವಿಚರಿತೆಕಾರರೂ 1500ಕ್ಕೆ ಪೂರ್ವದಲ್ಲಿದ್ದನೆಂದು ಶಿವರಾಮ ಕಾರಂತರೂ 17ನೆಯ ಶತಮಾನದ ಆದಿಭಾಗದಲ್ಲಿದ್ದನೆಂದು ಕೃಷ್ಣಜೋಯಿಸರೂ ಅಭಿಪ್ರಾಯ ಪಡುತ್ತಾರೆ. ಕವಿಚರಿತೆಕಾರರು ಗುರುರಾಜ ಚಾರಿತ್ರದ ದೇವರಾಯನ (1419-1446) ಆಳ್ವಿಕೆಯಲ್ಲಿ ಪಂಪಾಪುರದಲ್ಲಿದ್ದ ಕರಸ್ಥಲದ ನಾಗಲಿಂಗ, ವೀರಣ್ಣೊಡೆಯ ಮುಂತಾದ 101 ವಿರಕ್ತರ ಗೋಷ್ಠಿಯಲ್ಲಿ ಈತನನ್ನು ಸೇರಿಸಿರುವುದರಿಂದ ಇವನ ಕಾಲ ಸು, 1430 ಆಗಬಹುದು ಎಂದು ಹೇಳಿರುವುದಲ್ಲದೆ ವೀರಶೈವಕವಿ ಎಂದೂ ತಿಳಿಸಿದ್ದಾರೆ.

ಬತ್ತಲೇಶ್ವರ ರಾಮಾಯಣ

ಬದಲಾಯಿಸಿ

ಬತ್ತಲೇಶ್ವರ ರಾಮಾಯಣದಲ್ಲಿ 43 ಸಂಧಿಗಳೂ 2,650 ಪದ್ಯಗಳೂ ಇವೆ. ಒಂದು ಓಲೆಪ್ರತಿಯ ಪ್ರಾರಂಭದಲ್ಲಿ ವಾಲ್ಮೀಕಿ ರಾಮಾಯಣ ಬರೆವುದಕ್ಕೆ ಶುಭಮಸ್ತು ಎಂದೂ ಕೊನೆಯಲ್ಲಿ ಬರೆದು ಮುಗಿಸಿದ ವಾಲ್ಮೀಕಿ ರಾಮಾಯಣಕ್ಕೆ ಮಂಗಳ ಎಂದೂ ಇರುವುದರಿಂದ ಈ ಕಾವ್ಯ ವಾಲ್ಮೀಕಿ ರಾಮಾಯಣವೆಂದೇ ಪ್ರಚಾರದಲ್ಲಿ ಇರುವಂತೆ ಕಂಡು ಬರುತ್ತದೆ. ಹಾಗೆಯೆ ಕಾವ್ಯದಲ್ಲಿಯೂ ಮುನಿ ವಾಲ್ಮೀಕಿಯಿಂದ ಈ ಕೃತಿ ರಚಿತವಾಯಿತು ಎಂಬ ಅರ್ಥ ಬರುವ ಮಾತುಗಳು ಬರುವುದರಿಂದ ಇದನ್ನು ವಾಲ್ಮೀಕಿ ರಾಮಾಯಣವೆಂದೂ ಬತ್ತಲೇಶ್ವರ ಕವಿಯಿಂದ ರಚಿತವಾಗಿರುವುದರಿಂದ ಬತ್ತಲೇಶ್ವರ ರಾಮಾಯಣವೆಂದೂ ಕರೆಯಬಹುದಾದರೂ ಕೌಶಿಕ ರಾಮಾಯಣ ಎಂದು ಕರೆದಿರುವುದಕ್ಕೆ ಆಧಾರಗಳು ದೊರೆಯುವುದಿಲ್ಲ. ಕೆಲವು ಹಸ್ತಪ್ರತಿಗಳಲ್ಲಿ ಆ ಹೆಸರು ಕಂಡುಬಂದುದರಿಂದ ಶಿವರಾಮ ಕಾರಂತರು ಹಾಗೆ ಕರೆದಿದ್ದಾರೆ. ಮೊದಲಿನಿಂದ ಯುದ್ಧಕಾಂಡದ ಕೊನೆಯವರೆಗಿನ ಕಥಾವಸ್ತು ಇದರಲ್ಲಿ ವರ್ಣಿತವಾಗಿದೆ. ಕುಮಾರವಾಲ್ಮೀಕಿ ತನ್ನ ರಾಮಾಯಣದಲ್ಲಿ ಅರ್ಧದಷ್ಟನ್ನು ಯುದ್ಧಕಾಂಡಕ್ಕೆ ಮೀಸಲಾಗಿರಿಸಿದ್ದರೆ ಬತ್ತಲೇಶ್ವರ ಮುಕ್ಕಾಲು ಭಾಗವನ್ನೇ ಇದಕ್ಕಾಗಿ ಮೀಸಲಿಟ್ಟಿದ್ದಾನೆ. ಕೆಲವು ಪದ್ಯಗಳಲ್ಲಿ ಬರುವ ವಾಲ್ಮೀಕಿಯ ಹೆಸರಿನಿಂದ ವಾಲ್ಮೀಕಿಯೇ ಈ ಕಾವ್ಯವನ್ನು ರಚಿಸಿದ್ದಾನೆ ಎಂದು ಹೇಳಬಹುದಾದರೂ ಕಾವ್ಯದಲ್ಲಿ ಬಳಸಿರುವ ವರಕವಿ ಬತ್ತಲೇಶ್ವರ ಮತ್ತು ಬತ್ತಲೇಶ್ವರ ಪದಕ್ಕೆ ಪರ್ಯಾಯವಾಗಿ ಬಳಸಿರುವ ನಿರ್ವಾಣವರ, ಕಾಲಭೈರವ, ವೀರಭೈರವ ಇತ್ಯಾದಿ ಮಾತುಗಳಿಂದ ಈ ಕವಿ ಬತ್ತಲೇಶ್ವರ ಎಂದು ನಿರ್ಣಯಿಸಬಹುದಾಗಿದೆ. ಆದರೆ ವ್ಯಾಸಭಾರತವನ್ನು ಕನ್ನಡಕ್ಕೆ ತಂದ ಕುಮಾರವ್ಯಾಸನಂತೆ. ವಾಲ್ಮೀಕಿ ರಾಮಾಯಣವನ್ನು ಕನ್ನಡದಲ್ಲಿ ನಿರೂಪಿಸಿದ ಕುಮಾರ ವಾಲ್ಮೀಕಿಯಂತೆ, ಮುನಿ ವಾಲ್ಮೀಕಿ ಎಂಬಾತ ತನ್ನ ಆರಾಧ್ಯದೈವನಾದ ಸಹ್ಯಾದ್ರಿಯ ಬತ್ತಲೇಶ್ವರನ ಅಂಕಿತದಲ್ಲಿ ಈ ರಾಮಾಯಣವನ್ನು ರಚಿಸಿರಬಹುದೆಂದು ಊಹಿಸಲೂ ಅವಕಾಶವಿದೆ.

ಕಾವ್ಯದ ಮೊದಲಲ್ಲಿ ಗಣಪತಿ ಮತ್ತು ಸರಸ್ವತಿಯರ ಸ್ತುತಿ ಇದೆ. ಕಾವ್ಯದ ಉದ್ದಕ್ಕೂ ಶಬ್ದಾಲಂಕಾರಪ್ರಿಯತೆ ಎದ್ದು ಕಾಣುತ್ತದೆ. ಕೃತಿಯ ಕಾಂಡವಿಭಾಗ ಹೀಗಿದೆ : ಬಾಲಕಾಂಡ, ಶೋಭನಕಾಂಡ, ಅರಣ್ಯಕಾಂಡ, ಲಂಕಾಕಾಂಡ ಮತ್ತು ಯುದ್ಧಕಾಂಡ.

ಪ್ರತಿಸಂಧಿಯ ಕೊನೆಯ ಪದ್ಯದಲ್ಲಿ ಸಂಧಿಯ ಪದ್ಯಸಂಖ್ಯೆಯನ್ನು ಸೇರಿಸಿರುವುದು ಚಮತ್ಕಾರಯುಕ್ತವಾಗಿದೆ. ವಾಲ್ಮೀಕಿ ರಾಮಾಯಣವನ್ನೆ ಅನುಸರಿಸಿದ್ದರೂ ಕವಿ ಅಲ್ಲಲ್ಲಿ ಆನಂದರಾಮಾಯಣ, ಪಂಪರಾಮಾಯಣ, ತೊರವೆ ರಾಮಾಯಣಗಳ ಕಥಾಸನ್ನಿವೇಶಗಳನ್ನೂ ಸೇರಿಸಿರುವುದು ಕಂಡುಬರುತ್ತದೆ. ಇದನ್ನೇ ಕವಿ ಕಾವ್ಯದ ಪ್ರಾರಂಭದಲ್ಲಿ 'ಕೇಳಿ ರಾಮಾಯಣದ ಕಥೆಗಳನ್ನೊಲಿದು ಬಣ್ಣಿಸುವೆ ಎಂದು ಹೇಳಿಕೊಳ್ಳುತ್ತಾನೆ.

ರನ್ನನ ಗದಾಯುದ್ಧದಲ್ಲಿ ಭೀಮನು ದುರ್ಯೋಧನನನ್ನು ಮೂದಲಿಸಿ ಹಿಂದಣ ಕೃತ್ಯಗಳೊಂದೊಂದನ್ನೂ ನೆನೆಸಿಕೊಂಡು ಹೊಡೆಯುವ ಸನ್ನಿವೇಶವನ್ನು ಬತ್ತಲೇಶ್ವರನು ರಾಮ ರಾವಣರ ಯುದ್ಧಸಂದರ್ಭದಲ್ಲಿ ಬಳಸಿಕೊಂಡಿದ್ದಾನೆ. ಲಂಕೆ ಹನುಮಂತನ ಬಾಲದ ಕಿಚ್ಚಿನಿಂದ ಉರಿಯುತ್ತಿರಲು ಹೇಡಿ ರಾವಣ ಪುಷ್ಪಕವನ್ನೇರುವುದು, ಹನುಮಂತ ಆತನನ್ನು ಹೊಡೆದು ಧರೆಗೆ ಕೆಡಹುವುದು, ರಾವಣನ ಹತ್ತುಮುಖಗಳ ಗಡ್ಡಮೀಸೆಗಳನ್ನು ಸುಡುವುದು ಮೊದಲಾದವು ವಾಲ್ಮೀಕಿ ರಾಮಾಯಣದಲ್ಲಿಲ್ಲ. ಇವನ್ನು ಪಂಪರಾಮಾಯಣದಿಂದ ಸ್ವೀಕರಿಸಲಾಗಿದೆಯೆಂದು ಹೇಳಬಹುದು. ಸೀತಾಸ್ವಯಂವರಕ್ಕೆ ವಿಶ್ವಾಮಿತ್ರ ರಾಮಲಕ್ಷ್ಮಣರೊಡನೆ ಬರಲು ಅಲ್ಲಿ ನೆರೆದಿದ್ದ ರಾಜರೆಲ್ಲರೂ ಎದ್ದು ವಿಶ್ವಾಮಿತ್ರನಿಗೆ ನಮಸ್ಕರಿಸಿದರೂ ರಾವಣ ಕುಳಿತಲ್ಲಿಂದ ಮೇಲೇಳದಿರುವುದನ್ನು ಕಂಡ ವಿಶ್ವಾಮಿತ್ರ ತನ್ನ ಕಾಲಿನ ತುದಿಯಿಂದ ನೆಲವನ್ನು ಒತ್ತಲು ರಾವಣ ಮುಗ್ಗರಿಸಿ ಬಂದು ಮುನಿಯ ಪಾದಗಳಲ್ಲಿ ಬೀಳುತ್ತಾನೆ. ಇಲ್ಲಿ ಕುಮಾರವ್ಯಾಸಭಾರತದ ದುರ್ಯೋಧನ ಕೃಷ್ಣನ ಕಾಲಿಗೆ ಬೀಳುವ ಸಂದರ್ಭದ ಅನುಕರಣೆ ಇದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: