ಕೆರೆಮನೆ ಶಂಭು ಹೆಗಡೆ

ಕೆರೆಮನೆ ಶಂಭು ಹೆಗಡೆ (ಅಕ್ಟೋಬರ್ ೬, ೧೯೩೮ - ಫೆಬ್ರುವರಿ ೩, ೨೦೦೯) ಯಕ್ಷಗಾನ ಲೋಕದ ಮಹಾನ್ ವಿದ್ವಾಂಸರಾಗಿ, ಕಲಾವಿದರಾಗಿ ವಿಶ್ವದಾದಯಮ್ತ ಪ್ರಸಿದ್ಧರಾಗಿದ್ದಾರೆ.

ಕೆರೆಮನೆ ಶಂಭು ಹೆಗಡೆ
Bornಅಕ್ಟೋಬರ್ ೬, ೧೯೩೮
ಉತ್ತರ ಕನ್ನಡ ಜಿಲ್ಲೆಯಲ್ಲಿ
Diedಫೆಬ್ರುವರಿ ೩, ೨೦೦೯
Occupationಯಕ್ಷಗಾನ ವಿದ್ವಾಂಸರು ಮತ್ತು ಕಲಾವಿದರು

ಶಂಭು ಹೆಗಡೆ ಅವರು ಅಕ್ಟೋಬರ್ ೬, ೧೯೩೮ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಹಾಗು ಮುಕಾಂಬೆ ದಂಪತಿಗಳ ಪುತ್ರರಾಗಿ ಜನಿಸಿದರು.

ಮಹಾನ್ ಪ್ರತಿಭೆ

ಬದಲಾಯಿಸಿ

ಹಳ್ಳಿಯಲ್ಲಿಯೇ ಹುಟ್ಟಿ, ಹಳ್ಳಿಯಲ್ಲಿಯೇ ಬೆಳೆದು, ಹಳ್ಳಿಗನಾಗಿಯೇ ಬದುಕಿ, ಕೆರೆಮನೆಯೆಂಬ ಪುಟ್ಟ ಹಳ್ಳಿಯನ್ನು ಜಗದ್ವಿಖ್ಯಾತ ಮಾಡಿದ ಯಕ್ಷ ರಂಗ ಕಂಡ ಸರ್ವೋತ್ಕೃಷ್ಟ ಕಲಾವಿದ ಕೆರೆಮನೆ ಶಂಭು ಹೆಗಡೆ. ಕಲೆಯ ಅಭ್ಯುದಯಕ್ಕೆ ದುಡಿದು, ಜಾಗತಿಕವಾಗಿ ಯಕ್ಷಗಾನವನ್ನು ಪರಿಚಯಿಸಿದ ಯಕ್ಷ ಲೋಕದ ಸವ್ಯಸಾಚಿ. ಅವರೊಬ್ಬ ನಟ, ಸಂಘಟಕ ಮಾತ್ರವಲ್ಲ; ಕಲಾವ್ರತಿ, ಕಲಾ ತತ್ವದ ಪರಿಜ್ಞಾನ, ರಂಗ ಸಾಮರ್ಥ್ಯ, ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲತೆ, ವಿಮರ್ಷಕ ದೃಷ್ಠಿಕೋನಗಳನ್ನು ಹೊಂದಿದ್ದ ಅಪಾರ ಜೀವನ ಪ್ರೀತಿ ಮತ್ತು ಮಮತೆಯ ಸೆಲೆ. ಕಾರ್ಯಶೀಲ ಚಿಂತಕ. ನೃತ್ಯ , ಮಾತು, ಚಲನೆ, ಅಭಿವ್ಯಕ್ತಿ ಎಲ್ಲದರಲ್ಲೂ ಅವರೊಂದು ಪ್ರತಿಮೆ. ಅವರು ಪುರುಷ ಸ್ತ್ರೀ ವೇಷಗಳೂ ಸೇರಿದಂತೆ ಸುಮಾರು ೧೭೫ ಪಾತ್ರಗಳಲ್ಲಿ, ೫೦೦೦ಕ್ಕೂ ಹೆಚ್ಚು ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡಿದವರು. ಇವರ ಪ್ರಸಂಗ ಪಾತ್ರ ಮತ್ತು ಇಡಗುಂಜಿ ಮೇಳದ ಇತಿಹಾಸದ ಬಗ್ಗೆ ಸಂಶೋಧನಾ ಪ್ರಬಂಧಗಳೂ ರಚಿತವಾಗಿವೆ.

ಪ್ರಯೋಗಶೀಲತೆ

ಬದಲಾಯಿಸಿ

ಪರಂಪರೆಯೊಂದಿಗೆ ಹಲವು ಹೊಸ ಸ್ಪರ್ಶಗಳನ್ನಿತ್ತ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಹೊಸ ಪ್ರಯೋಗ ಮಾಡಿ ರಂಗದಲ್ಲಿ ಅನೇಕ ಸುಧಾರಣೆ, ಸೀಮೋಲ್ಲಂಘನ ಮಾಡಿದವರು ಶಂಭು ಹೆಗಡೆ. ಕುರಿಯ ವಿಠಲ ಶಾಸ್ತ್ರಿಗಳಂತೆಯೇ ಯಕ್ಷಗಾನಕ್ಕೆ ನಾಟ್ಯದ ಸಮರ್ಥ ಹೊಂದಾಣಿಕೆ ನೀಡಿದವರು. ‘ನೃತ್ಯ ಬೇಡ’ ಅಂದುಕೊಂಡ ಪಾತ್ರಗಳಿಗೂ ಸಮಯೋಚಿತ ನೃತ್ಯ ಮಾರ್ಗದರ್ಶಿಸಿ ರಂಗ ಸೂಕ್ಷ್ಮಗಳನ್ನು ಅಳವಡಿಸಿದವರು. ತಮ್ಮ ಪರಿಸರ, ಪರಂಪರೆಯಿಂದಷ್ಟೇ ಕಲಿತು ಜೋತು ಬೀಳದೆ, ಅವಲಂಬಿತರಾಗದೆ ಕಲಿತದ್ದನ್ನು ರಂಗವಿಜ್ಞಾನದ ಬೆಳಕಿನಲ್ಲಿ ಸಂಯೋಜನೆ ಮಾಡಿದವರು. ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳ ಕಲಿಕೆಯನ್ನು ಕಲಿತ ಅವರು ಅರ್ಧ ಚಂದ್ರಾಕೃತಿಯ ರಂಗಮಂಚವನ್ನು ಪರಿಚಯಿಸಿ ಅದರ ಮೇಲೆ ಸಧಬಿರುಚಿಯ ಪ್ರಸಂಗಗಳನ್ನು ಪ್ರಸಿದ್ಧಿಗೊಳಿಸಿದರು. ಅವರ ಈ ಅರ್ಧ ಚಂದ್ರಾಕೃತಿಯ ರಂಗಮಂಚದ ಕಲ್ಪನೆ ಮತ್ತು ಆಯೋಜನೆ ಯಕ್ಷ ಪ್ರದರ್ಶನಕ್ಕೆ ಇಟ್ಟ ಕಳಶ ಎಂದೆನಿಸಿದೆ.

ಮಹಾನ್ ಸಂಘಟನೆಕಾರ

ಬದಲಾಯಿಸಿ

ವೃತ್ತಿ ಮೇಳದ ಕಲಾವಿದರಾಗಿ ನಂತರ, ತಂದೆ ೧೯೭೪ರಲ್ಲಿ ಸ್ಥಾಪಿಸಿದ ಮೇಳವನ್ನು ಪುನಃಸ್ಸಂಘಟನೆ ಮಾಡುವಲ್ಲಿ ಅವರ ಶ್ರಮ ನಿಜಕ್ಕೂ ಇತಿಹಾಸ. ಸ್ಥಾಪಿಸಿದ್ದ ಮೇಳವನ್ನು ಸಂಘಟಿಸಿ ನಿರ್ಮಿಸಿ, ಅಪಾರ ಪ್ರೇಕ್ಷಕವರ್ಗವನ್ನು ಸಂಪಾದಿಸಿಕೊಳ್ಳುತ್ತಾ, ದೇಶ-ಹೊರದೇಶಗಳಲ್ಲೂ ಶುದ್ಧ ಯಕ್ಷಗಾನದ ಪರಿಚಯವನ್ನೀಯುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿಯೇ ಅವರ ಇಡಗುಂಜಿ ಮೇಳ ಯಕ್ಷಗಾನದ ಒಂದು ಚಳುವಳಿ ಇದ್ದಂತೆ.

ಗುಣವಂತೆಯಲ್ಲಿ ತಂದೆ ಶಿವರಾಮ ಹೆಗಡೆ ಹೆಸರಿನಲ್ಲಿ ರಂಗಮದಿರ ಮತ್ತು ಯಕ್ಷ ಶಿಕ್ಷಣ ನೀಡುವ ಶ್ರೀಮಯ ಕಲಾಕೇಂದ್ರ ಸ್ಥಾಪಿಸಿದರು.

ಯಕ್ಷಗಾನ ಅಕಾಡೆಮಿಗಾಗಿ ಕಾಯಕ

ಬದಲಾಯಿಸಿ

ಇಂದು ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚನೆ ಆಗಿದ್ದರೆ ಅದರ ಹಿಂದೆ ಶಂಭು ಹೆಗಡೆಯವರ ಸಾತ್ವಿಕ ಹೋರಾಟದ ಪಾಲು ಇದೆ. ಯಕ್ಷಗಾನಕ್ಕೊಂದು ಅಕಾಡೆಮಿ ಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಎರಡು ದಶಕಗಳ ಹಿಂದೆಯೇ ಸಮರ್ಥವಾಗಿ ಪ್ರತಿಪಾದಿಸಿದ ಧೀಮಂತ ಮೂರ್ತಿ ಅವರು. ಅವರ ಶ್ರಮಕ್ಕೆ ಪ್ರತಿಫಲವೋ ಎಂಬಂತೆ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಿ ಅದರ ವತಿಯಿಂದ ಹಮ್ಮಿಕೊಂಡ ಮೊದಲ ಕಾರ್ಯಕ್ರಮವೇ ಅವರು ಪಾಲ್ಗೊಂಡ ಕೊನೆಯ ಸಭಾ ಕಾರ್ಯಕ್ರಮವಾಗಿತ್ತು.

ಸೌಹಾರ್ದ ವ್ಯಕ್ತಿತ್ವ

ಬದಲಾಯಿಸಿ

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅದೆಷ್ಟೋ ಪ್ರತಿಭಾನ್ವಿತ, ತೆರೆಮರೆಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಬೆಳಕಿಗೆ ತಂದಿದ್ದರು. ವಾದ-ಭಿನ್ನಾಭಿಪ್ರಾಯ ಹೊಂದಿದವರೊಂದಿಗೂ ಸ್ನೇಹಪರರಾಗಿ ಇದ್ದರು. ಯಕ್ಷಗಾನದ ತಿಟ್ಟುಗಳ ನಡುವಿನ ಕಂಡೂ ಕಾಣದ ವಾದ-ಜಗಳಗಳಿಗೆ ತಮ್ಮದೇ ನಿಟ್ಟಿನಲ್ಲಿ ಉತ್ತರವನಿತ್ತು ಸೌಹಾರ್ದ ಬೆಸೆದರು.

‘ಕಲಾವಿದನಾದವನಿಗೆ ಎಂಥಹ ಜೀವನ ಇರಬೇಕು’ ಎಂದು ಸಾಧಿಸಿ ತೋರಿಸಿದ , ಕಲೆಯ ಎಲ್ಲಾ ವಿಭಾಗಗಳ ಕುರಿತೂ ಚಿಂತನೆ ನಡೆಸಿದ ಸಮತೋಲನ ನಡೆ-ನುಡಿ-ಅಭಿವ್ಯಕ್ತಿಯ ಸಚ್ಚಾರಿತ್ರ್ಯದ ಜೀವನ ಅವರದು. ಅವರಿಗಿದ್ದ ಚಟವೆಂದರೆ ಅದೊಂದೇ-‘ಕಲೆ’.

ಸಿದ್ಧಿ ಪುರುಷ

ಬದಲಾಯಿಸಿ

ಅವರು ಕರುಣಾರಸದ ಸಿದ್ಧಿ ಪುರುಷ. ಉತ್ಕೃಷ್ಟ ಮಟ್ಟದ ವಿಸ್ತಾರವಾದ ಹರಹುವುಳ್ಳ ಅವರ ಚಿಂತನೆ ಪಾತ್ರಗಳಲ್ಲಿ ಸ್ಪಷ್ಟವಾಗುತ್ತಿತ್ತು. ಅನುಕರಿಸಲೇಬೇಕೆನ್ನುವ ಪಾತ್ರಗಳು ಅವು. ಆದರೆ ಅದಷ್ಟು ಸುಲಭವಲ್ಲ. ಸುಭದ್ರಾ ಕಲ್ಯಾಣದ ಕೃಷ್ಣ, ಚತುರ ರಾಜಕಾರಣಿ ಸಂಧಾನ ಕೃಷ್ಣ, ರಾಮ ನಿರ್ಯಾಣದ ರಾಮ, ಸತ್ಯ ಹರಿಶ್ಚಂದ್ರ, ಕರ್ಣಪರ್ವದ ಕರ್ಣ, ಗಧಾಪರ್ವದ ಕೌರವ, ಬಾಹುಕ, ಸಾಲ್ವ, ಅರ್ಜುನ, ಕಾರ್ತವೀರ್ಯ, ಕೀಚಕ, ಮಾಗಧ…ಹೀಗೆ ಪ್ರತೀ ಪಾತ್ರಕ್ಕೂ ತಮ್ಮದೇ ಛಾಪು ಒತ್ತಿ ಎಷ್ಟೋ ಬಾರಿ ವೇಷ ಹಾಕಿ, ಗೆಜ್ಜೆ ಕಟ್ಟಿದವರು ಕಡೆಗೆ ಗೆಜ್ಜೆ ಕಳಚದೆಯೇ ಸ್ಥಬ್ದವಾಗಿಬಿಟ್ಟರು.

ರಂಗದಲ್ಲೇ ಬದುಕಿಗೆ ವಿದಾಯ

ಬದಲಾಯಿಸಿ

ಯಕ್ಷ ರಂಗದ ಈ ಅಭಿಜಾತ ಕಲಾವಿದ ಶಂಭು ಹೆಗಡೆ ಫೆಬ್ರುವರಿ ೩, ೨೦೦೯ರಂದು ಇಡಗುಂಜಿಯ ರಂಗಸ್ಥಳದಲ್ಲಿ ‘ಕುಶ-ಲವ’ದ ರಾಮನ ಪಾತ್ರ ನಿರ್ವಹಿಸುತ್ತಿದಾಗಲೇ ನಿಧನರಾದರು. ರಥಸಪ್ತಮಿಯಂದು ನಡೆಯುವ ಇಡಗುಂಜಿ ತೇರಿನಲ್ಲಿ ಕೆರೆಮನೆ ಮೇಳದ ಆಟ ಕಳೆದ ೫ ದಶಕದಿಂದ ಅವಿಚ್ಚಿನ್ನವಾಗಿ ನಡೆದು ಬಂದಿತ್ತು. ಈ ಸಂದರ್ಭದಲ್ಲಿ ಶಂಭು ಹೆಗಡೆಯವರು ತಪ್ಪದೇ ಪಾತ್ರ ವಹಿಸುತ್ತಿದ್ದರು. ಶಂಭು ಹೆಗಡೆ ಅವರ ಯಕ್ಷ ಬದುಕಿನ ರಂಗಪ್ರವೇಶವಾದದ್ದು ಕೂಡಾ ಇಡಗುಂಜಿಯಲ್ಲೇ! ಮೊದಲು ಯಕ್ಷ ಹೆಜ್ಜೆ ಇಟ್ಟು ಬಂದಲ್ಲೇ ಅವರು ತಮ್ಮ ಕೊನೆಯ ಹೆಜ್ಜೆಯನ್ನು ಹಾಕಿದರು. ಬಣ್ಣ ಹಚ್ಚಿಕೊಂಡೇ ಬಣ್ಣದ ಬದುಕಿಗೆ ವಿದಾಯ ಹೇಳಿದರು. ಪರಂಧಾಮಕ್ಕೆ ಸಾಗುವ ಹಾದಿಗೆ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡದ್ದು ಕೂಡಾ ಹಾಗೆಯೇ ಇತ್ತು! ಅವರು ಹಚ್ಚಿದ ಸೂರ್ಯವಂಶದ ತಿಲಕ ಹಣೆಯಲಿತ್ತು !