ಜೋಯ್ಡಾ ಕರ್ನಾಟಕಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ಅದರ ಆಡಳಿತ ಕೇಂದ್ರ. ಇದು ಕಗ್ಗಾಡಿನ ಪ್ರದೇಶ. ಕಾಳಿ ನದಿಗೆ ಸೂಪಾ ಸಮೀಪದಲ್ಲಿ ಸೂಪಾ ಅಣೆಕಟ್ಟನ್ನು ಕಟ್ಟಿದ ನಂತರ, ಸೂಪ ಎಂಬ ತಾಲೂಕು ಕೇಂದ್ರವು ಮುಳುಗಿಹೋಯಿತು. ಆ ಕಾರಣ ೧೯೮೧ ರಲ್ಲಿ ತಾಲೂಕು ಕೇಂದ್ರವನ್ನು ಜೋಯಿಡಾ ಎಂಬ ಹಳ್ಳಿಗೆ ಬದಲಾಯಿಸಲಾಯಿತು. ಆದ್ದರಿಂದ, ಈ ಊರನ್ನು ಕೆಲವೊಮ್ಮೆ ಸೂಪಾ ಎಂದೂ ಕರೆಯುವುದುಂಟು. ಇದು ದಾಂಡೇಲಿಯಿಂದ ಸುಮಾರು ೨೨ ಕಿ.ಮಿ ದೂರದಲ್ಲಿದೆ. ಇದು ತಾಲೂಕು ಕೇಂದ್ರವಾದರೂ ಇನ್ನೂ ಹಿಂದುಳಿದ ಪ್ರದೇಶವಾಗಿದೆ.ಕರ್ನಾಟಕದ ಅತಿ ಹಿಂದುಳಿದ ತಾಲೂಕುಕೇಂದ್ರವೆಂದರೆ ಜೊಯಿಡಾವೇ ಇರಬಹುದು. ಕನ್ನಡ ಮತ್ತು ಕೊಂಕಣಿ ಇಲ್ಲಿನ ಪ್ರಮುಖ ಭಾಷೆಗಳು. ಸುತ್ತಲೂ ಕಾಡು, ಅಲ್ಲಲ್ಲಿ ಹಳ್ಳಿಗಳು, ಬುಡಕಟ್ಟು ಜನಾಂಗಗಳು, ಕಾಡುತ್ಪನ್ನ ನಂಬಿ ಬದುಕುವ ಇತರ ಜನರು ಈ ತಾಲೂಕಿನ ವೈಶಿಷ್ಟ್ಯ.

ಜೋಯ್ಡಾ
ಜೋಯ್ಡಾ
town

ಜೋಯಿಡಾ ಒಂದು ಮುಖ್ಯ ಪಟ್ಟಣವೂ ಆಗಿದೆ. ಕಾರವಾರಕ್ಕೆ ಈಶಾನ್ಯದಲ್ಲಿ ಕಾಳಿ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ಪಟ್ಟಣದ ವಾಯವ್ಯಕ್ಕೆ ಕ್ಯಾಸಲ್‍ರಾಕ್ ರೈಲ್ವೆ ನಿಲ್ದಾಣವೂ ಪೂರ್ವಕ್ಕೆ ದಾಂಡೇಲಿ ರೈಲುನಿಲ್ದಾಣವೂ ಇವೆ.

ಭೌಗೋಲಿಕ ಮಾಹಿತಿ

ಬದಲಾಯಿಸಿ

ಈ ತಾಲ್ಲೂಕಿನ ಪೂರ್ವದಲ್ಲಿ ಹಳಿಯಾಳ, ಆಗ್ನೇಯದಲ್ಲಿ ಯಲ್ಲಾಪುರ, ದಕ್ಷಿಣದಲ್ಲಿ ಕಾರವಾರ ತಾಲ್ಲೂಕುಗಳೂ ಪಶ್ಚಿಮಕ್ಕೆ ಗೋವ ರಾಜ್ಯವೂ ಉತ್ತರದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕೂ ಸುತ್ತುವರಿದಿವೆ. ಕುಂಬಾರವಾಡ, ಸುಪ ಮತ್ತು ಕ್ಯಾಸಲ್‍ರಾಕ್ ಹೋಬಳಿಗಳು. ಒಟ್ಟು 139 ಗ್ರಾಮಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 1,871 ಚ.ಕಿ.ಮೀ. ಜನಸಂಖ್ಯೆ 48,901.

ಇದು ಅರಣ್ಯಸಮೃದ್ಧ ಪ್ರದೇಶ. ತಾಲ್ಲೂಕಿನ ಶೇಕಡಾ 95 ಭಾಗ ಕಾಡುಗಳಿಂದ ಕೂಡಿದೆ. ಈ ಕಾಡುಗಳಲ್ಲಿ ಬೆಲೆ ಬಾಳುವ ಉಪಯುಕ್ತ ಮರಗಳಾದ ತೇಗ, ಮತ್ತಿ, ಕರಿಮರ, ಶ್ರೀಗಂಧ, ಹೊನ್ನೆ ಹಲಸು ಮುಂತಾದವುಗಳಲ್ಲದೆ ಕೆಲವು ಮೃದು ಮರಗಳೂ ಔಷಧೋಪಯೋಗಿ ಗಿಡ ಮೂಲಿಕೆಗಳೂ ಬೆಳೆಯುತ್ತವೆ. ದಾಲಚಿನ್ನಿ, ಅಳಲೇಕಾಯಿ, ಶ್ರೀಗಂಧ, ಜೇನು ಇತರ ಅರಣ್ಯ ಉತ್ಪನ್ನಗಳು. ಅರಣ್ಯಗಳಿಂದ ಉರುವಲಿಗೆ ಸೌದೆ, ಕಟ್ಟಡಗಳಿಗೆ ಮರಮಟ್ಟು, ರೈಲ್ವೆ ಸ್ಲೀಪರುಗಳು, ಬೆಂಕಿಕಡ್ಡಿ ತಯಾರಿಕೆಗೆ ಮೃದುಮರ ದೊರೆಯುತ್ತವೆ. ಈ ಕಾಡುಗಳಲ್ಲಿ ಆನೆ, ಕಾಡೆಮ್ಮೆ, ಹಂದಿ, ಜಿಂಕೆ ಮುಂತಾದ ವನ್ಯಮೃಗಗಳನ್ನು ಕಾಣಬಹುದು.

ಕಾಳಿ ಈ ತಾಲ್ಲೂಕಿನಲ್ಲಿ ಹರಿಯುವ ಮುಖ್ಯ ನದಿ. ಇದು ತಾಲ್ಲೂಕಿನ ಪಶ್ಚಿಮದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಸುಪ, ದಾಂಡೇಲಿ ಮುಖಾಂತರ ಹರಿದು ಹಳಿಯಾಳ ತಾಲ್ಲೂಕಿನಲ್ಲಿ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ಹರಿದು, ಅನಂತರ ದಕ್ಷಿಣ ಮುಖವಾಗಿ ಪ್ರವಹಿಸಿ ಯಲ್ಲಾಪುರ, ಕಾರವಾರ ತಾಲ್ಲೂಕನ್ನು ಸುಪದಿಂದ ಪ್ರತ್ಯೇಕಿಸುವ ಎಲ್ಲೆಯಾಗಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದ ಬಳಿ ಅರಬ್ಬೀಸಮುದ್ರವನ್ನು ಸೇರುವುದು. ಈ ನದಿಗೆ ಪಂಡರಿ, ವಾಕಿ, ಕಾನೇರಿ ಮುಂತಾದ ಉಪನದಿಗಳ ಜೊತೆಗೆ ಅನೇಕ ತೊರೆಗಳು ಸೇರಿಕೊಳ್ಳುತ್ತವೆ. ವಾರ್ಷಿಕ ಸರಾಸರಿ ಮಳೆ 2,667.09 ಮಿಮೀ.

ಈ ತಾಲ್ಲೂಕಿನ ಉತ್ತರ ಮತ್ತು ಪೂರ್ವಭಾಗಗಳಲ್ಲಿ ಫಲವತ್ತಾದ ಕರಿಮಣ್ಣಿನ ಭೂಪ್ರದೇಶವೂ ದಕ್ಷಿಣ ಮತ್ತು ಪಶ್ಚಿಮದಲ್ಲಿ ಅರೆಕೆಂಪು, ಅರೆಬಿಳುಪು ಮಣ್ಣಿನ ಅಷ್ಟೇನೂ ಫಲವತ್ತಲ್ಲದ ಭೂಪ್ರದೇಶವೂ ಇದೆ.

ಐತಿಹ್ಯ, ಇತಿಹಾಸ

ಬದಲಾಯಿಸಿ

ಈ ಪ್ರದೇಶದಲ್ಲಿ ಹಿಂದೆ ರಾವಣನ ತಂಗಿ ಶೂರ್ಪನಖಿ ವಾಸಮಾಡುತ್ತಿದ್ದಳೆಂದೂ ಅದರಿಂದಾಗಿ ಈ ಪಟ್ಟಣಕ್ಕೆ ಸುಪ ಎಂಬ ಹೆಸರು ಬಂತೆಂದೂ ಐತಿಹ್ಯ. ಈ ಪಟ್ಟಣ ಸ್ವಾದಿ ರಾಜರ ಆಳಿಕೆಗೆ ಸೇರಿತ್ತೆಂದು ತಿಳಿದುಬರುತ್ತದೆ.

ಜನ ಜೀವನ

ಬದಲಾಯಿಸಿ

ವಿಶಿಷ್ಟ ಸಂಸ್ಕೃತಿ ಹೊಂದಿರುವ ಕುಣಬಿ (ಅಥವಾ ಕುಡಬಿ) ಜನಾಂಗ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಗೋವಾದಿಂದ ವಲಸೆ ಬಂದಿರುವ ಈ ಜನಾಂಗ ಮತ್ತು ಮರಾಠಿ ಜನಾಂಗದವರು ಇಂದಿಗೂ ತಮ್ಮ ಪುರಾತನ ಪದ್ದತಿಗಳನ್ನು ಉಳಿಸಿಕೊಂಡುಬಂದಿರುವುದು ಕಂಡುಬರುತ್ತದೆ.

ಪ್ರವಾಸಿ ತಾಣಗಳು

ಬದಲಾಯಿಸಿ

ಇಲ್ಲಿನ ದಟ್ಟಕಾಡಿನ ತಾಣಗಳನ್ನು ಪ್ರವಾಸಿ ಸ್ಥಳಗಳಾಗಿ ಉಪಯೋಗಿಸಿಕೊಳ್ಳುವ ಯತ್ನ ಅಷ್ಟೇನೂ ಸಫಲವಾಗಿಲ್ಲವೆಂದೇ ಹೇಳಬೇಕು.

ಈ ತಾಲ್ಲೂಕಿನ ಮುಖ್ಯಸ್ಥಳಗಳಲ್ಲಿ ಉಳುವಿ ಒಂದು ಯಾತ್ರಾಸ್ಥಳ.

ಜೋಯಡಾದಲ್ಲಿ ಉಳವಿ ದೇವಾಲಯ, ಸಿಂಥೇರಿ ರಾಕ್ಸ್, ಡಿಗ್ಗಿ, ಅಣಶಿ ಅಭಯಾರಣ್ಯ ಮೊದಲಾದ ಪ್ರವಾಸಿ ಸ್ಥಳಗಳಿವೆ. ಈ ಪ್ರದೇಶದಲ್ಲಿ ಅಪರೂಪದ ಹಲವು ಪ್ರಾಣಿ ಪಕ್ಷಿಗಳಿವೆ.

ಮಂಗಟ್ಟೆ ಹಕ್ಕಿ, ಕಾಳಿಂಗ ಸರ್ಪ ಮೊದಲಾದ ಅಳಿವಿನಂಚಿನ ಜೀವ ಸಂಕುಲವಿದೆ.ಉಳವಿ ಹತ್ತಿರ ಗುಹೆಗಳಿದ್ದರೂ, ಅವುಗಳನ್ನು ನೋಡಲು ಅನುಕೂಲತೆಗಳು ಅಷ್ಟಕ್ಕಷ್ಟೆ. ಕಾಳಿ ನದಿ ದಡದಲ್ಲಿರುವ ಸಿಂಥೇರಿ ರಾಕ್ಸ್ ಹತ್ತಿರ ವಿಶಿಷ್ಟ ರೂಪದ ಕಲ್ಲುಗಳಿವೆ. ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ವ್ಯವಸ್ಥೆಯನ್ನು ಖಾಸಿಗಿ ರಿಸಾರ್ಟ್ ಸಹಭಾಗಿತ್ವದಲ್ಲಿ ಮಾಡಲಾಗಿದೆ.

ಕ್ಯಾಸಲ್ ರಾಕ್‍ನಲ್ಲಿ ರೈಲ್ವೆನಿಲ್ದಾಣವಿದ್ದು ಇದು ಬೇಸಗೆಯ ವಿಶ್ರಾಂತಿ ಧಾಮವಾಗಿದೆ.

ಇಲ್ಲಿ ರಾಮಲಿಂಗ ದೇವಾಲಯವಿದೆ. ಊರ ಸಮೀಪ ಕೆಲವು ಬೌದ್ಧಗುಹೆಗಳಿವೆ ಎನ್ನಲಾಗಿದೆ

ಸಂಪರ್ಕ

ಬದಲಾಯಿಸಿ

ಜೋಯಿಡಾಕ್ಕೆ ಬೆಳಗಾವಿ ಹುಬ್ಬಳ್ಳಿಯಿಂದ ದಾಂಡೇಲಿ ಮೂಲಕ ರಸ್ತೆ ಸಂಪರ್ಕವಿದೆ. ಅತ್ತ ಕಾರವಾರದಿಂದಲೂ ರಸ್ತೆ ಸಂಪರ್ಕವಿದೆ. ಸರಕಾರಿ ಬಸ್ ವ್ಯವಸ್ಥೆ ಇದ್ದರೂ, ಬಹಳ ಸಮಯದ ಅಂತರವಿರುವುದರಿಂದ, ಖಾಸಗಿ ವಾಹನ ವ್ಯವಸ್ಥೆಇದ್ದರೆ ಉತ್ತಮ.

ಈ ತಾಲ್ಲೂಕಿನ ಉತ್ತರದ ಕೊನೆಯಲ್ಲಿ ಲೋಂಡದಿಂದ ಕ್ಯಾಸಲ್ ರಾಕ್ ಮುಖಾಂತರ ಗೋವವನ್ನು ಪ್ರವೇಶಿಸುವ ಸು. 17 ಕಿಮೀ ರೈಲುಮಾರ್ಗವಿದೆ. ಇಲ್ಲಿಗೆ ಸಮೀಪವಿರುವ ಇನ್ನೊಂದು ರೈಲುನಿಲ್ದಾಣವೆಂದರೆ ಸುಪದ ಪೂರ್ವಕ್ಕಿರುವ ದಾಂಡೇಲಿಯ ರೈಲುನಿಲ್ದಾಣ. ಇಲ್ಲಿಂದ ಹಳಿಯಾಳ, ಕ್ಯಾಸಲ್‍ರಾಕ್, ದಾಂಡೇಲಿ ಮುಂತಾದ ಕಡೆಗಳಿಗೆ ಸಾರಿಗೆ ವ್ಯವಸ್ಥೆಯಿದೆ.

ತಂಗಲು ವ್ಯವಸ್ಥೆ

ಬದಲಾಯಿಸಿ

ಜೋಯಿಡಾದಲ್ಲಿ ಸರಳ ವಸತಿಯು ಸರಕಾರಿ ಅತಿಥಿಗೃಹದಲ್ಲಿ ದೊರೆಯುತ್ತದೆ. ಖಾಸಗಿ ಹೋಟೆಲುಗಳು ಹತ್ತಿರದ ದಾಂಡೇಲಿಯಲ್ಲಿವೆ.

ತಾಲ್ಲೂಕಿನ ಕಣಿವೆ ಮತ್ತು ನದಿ ಪ್ರದೇಶಗಳಲ್ಲಿ ಬತ್ತದ ಬೆಳೆ ಹೆಚ್ಚು. ಕಬ್ಬು ಮತ್ತು ಇತರ ಧಾನ್ಯಗಳ ಜೊತೆಗೆ ತೋಟಗಳಲ್ಲಿ ಅಡಕೆ, ಮೆಣಸು, ತೆಂಗು ಬೆಳೆಯುತ್ತಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೋಯ್ಡಾ&oldid=1107340" ಇಂದ ಪಡೆಯಲ್ಪಟ್ಟಿದೆ