ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ನಗರ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ಉತ್ಪನ್ನಗಳು, ಮೆದು ಮರ ಕಾರ್ಖಾನೆಗಳನ್ನು ಸ್ಥಾಪಿಸಿದರು.ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ನಗರ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ದಾಂಡೇಲಿ ನಗರವು ಪ್ರವಾಸಿ ಸ್ಥಾನಗಳಲ್ಲಿ ಆಕರ್ಷಕ ಹಾಗು ಸಾಹಸಮಯ ತಾಣವಾಗಿದೆ.ಈ ಆಕರ್ಷಕ ನಗರವು ವಿದ್ಯಾಭ್ಯಾಸಕ್ಕಾಗಿ ಮತ್ತು ಔದ್ಯೋಗಿಕವಾಗಿಯೂ ರಾಜ್ಯದಲ್ಲಿ ಹೆಸರಾಗಿದೆ. ಇಲ್ಲಿರುವ ಕಾಗದ ಕಾರ್ಖಾನೆ (The West Coast Paper Mills) ದಾಂಡೇಲಿಯ ನಗರವನ್ನು ಆವರಿಸಿಕೊಂಡಿದೆ. ಬಿಳಿ ನೀರಿನಲ್ಲಿ ಮಾಡುವ ಸಾಹಸ ಜಲಕ್ರೀಡೆ ರಾಫ್ಟಿಂಗ್ ಗಾಗಿ ಭಾರತದಲ್ಲೇ ದಾಂಡೇಲಿ ಪ್ರಸಿದ್ಧಿ ಹೊಂದಿದೆ.

ದಾಂಡೇಲಿ
ನಗರ
ಕಾಳಿ ನದಿಯ ಹರಿವು
ಕಾಳಿ ನದಿಯ ಹರಿವು
ದೇಶ India
ರಾಜ್ಯಕರ್ನಾಟಕ
ಜಿಲ್ಲೆಉತ್ತರಕನ್ನಡ
ತಾಲೂಕುದಾಂಡೇಲಿ
Area
 • Total೮.೫ km (೩.೩ sq mi)
Elevation
೪೭೨ m (೧,೫೪೯ ft)
Population
 (2001)
 • Total೫೩,೨೮೭ [೧]
 • Density೬,೨೬೯.೦೬/km (೧೬,೨೩೬.೮/sq mi)
ಭಾಷೆ
 • ಅಧಿಕೃತಕನ್ನಡ
 • ಪ್ರಾದೇಶಿಕಸಿರ್ಸಿ ಕನ್ನಡ
Time zoneUTC+5:30 (IST)
PIN
581 325,581 362
Telephone code+91 8284
Vehicle registrationKA 65
Websitewww.dandelicity.gov.in

ಹೆಸರಿನ ಹಿಂದಿನ ಕಥೆ

ಬದಲಾಯಿಸಿ

ಇಲ್ಲಿ ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ನಗರವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆ ಇದೆ. ದಂಡಕನಾಯಕ ಎಂಬ ರಾಜನು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಿ ಈ ಅರಣ್ಯಕ್ಕೆ ತನ್ನದೇ ಹೆಸರು ಇರಲಿ ಎಂದು ಇಟ್ಟನೆಂದು ನಂತರ ಕ್ರಮೇಣ ದಾಂಡೇಲಿ ಎಂದಾಯಿತು ಎಂಬುದಾಗಿ ಮತ್ತೊಂದು ಹಿನ್ನೆಲೆಯಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಜನ ಜೀವನ ಮತ್ತು ಭಾಷೆ

ಬದಲಾಯಿಸಿ

ದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಮರಾಠಿ ಭಾಷೆಗಳು ಪ್ರಚಲಿತದಲ್ಲಿವೆ.

ಪ್ರವಾಸಿಗರು ಬರಲು ಕಾರಣ

ಬದಲಾಯಿಸಿ

ದಾಂಡೇಲಿಯು ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವೆಂದು ಹೆಸರಾಗಿದೆ. ಅದಕ್ಕೆಂದೇ ಭಾರೀ ಸಂಖ್ಯೆಯ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ದಾಂಡೇಲಿ ವನ್ಯಜೀವಿಧಾಮವು ಕಾಳಿ ನದಿಯ ಉಪನದಿಗಳಾದ ಕನೇರಿ ಮತ್ತು ನಾಗಝರಿಯೊಂದಿಗೆ ದಟ್ಟವಾದ ಅರಣ್ಯದಿಂದ ಕೂಡಿದೆ. ಈ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ಕರಡಿ, ನರಿ, ಜೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಪಕ್ಷಿಗಳಿಗೆ ಆಶ್ರಯ ನೀಡಿದೆ. ಇಲ್ಲಿನ ಕಾಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ, ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಪಕ್ಷಿ ವೀಕ್ಷಣೆ ಈ ವನ್ಯಜೀವಿ ಧಾಮದಲ್ಲಿ ಪ್ರವಾಸಿಗರು ಆನಂದಿಸಬಹುದು. ಪ್ರಖ್ಯಾತ ಧಾರ್ಮಿಕ ಸ್ಥಳ ಉಳವಿ, ಸೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ದಾಂಡೇಲಿಗೆ ಹತ್ತಿರದಲ್ಲಿರುವ ಇತರೆ ಪ್ರೇಕ್ಷಣೀಯ ಸ್ಥಳಗಳು. ಪಶ್ಚಿಮ ಘಟ್ಟಗಳ ಸರಹದ್ದಿನ ಕಾಳಿ ನದಿ ದಂಡೆಯಲ್ಲಿರುವ ದಾಂಡೇಲಿ ನಗರವು ಸಮುದ್ರ ಮಟ್ಟದಿಂದ 1551 ಅಡಿಗಳಷ್ಟು ಎತ್ತರವಿದೆ. ಗೋವಾದಿಂದ 125 ಕಿ.ಮೀ. ದೂರದಲ್ಲಿರುವು ದಾಂಡೇಲಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ರಸ್ತೆ ಮೂಲಕ ಬರಬಹುದಾಗಿದೆ.

ಸಂಪರ್ಕ

ಬದಲಾಯಿಸಿ

ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ.

ಪ್ರವಾಸಿ ತಾಣಗಳು

ಬದಲಾಯಿಸಿ

ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ,

  • ಉಳವಿ
  • ಸಿಂಥೇರಿ ರಾಕ್ಸ್
  • ಅಣಶಿ ಅರಣ್ಯಧಾಮ
  • ಸೂಪಾ ಅಣೆಕಟ್ಟು

ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ.

'ದಾಂಡೇಲಿ ವನ್ಯಜೀವಿ ನಿಸರ್ಗಧಾಮ, ದಾಂಡೇಲಿ

ಬದಲಾಯಿಸಿ

ದಾಂಡೇಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯೆಂದರೆ ದಾಂಡೇಲಿ ವನ್ಯಜೀವಿ ನಿಸರ್ಗಧಾಮ. ಇಲ್ಲಿನ ನಿರ್ದಿಷ್ಟ ಪ್ರದೇಶವನ್ನು ದಾಂಡೇಲಿ ವನ್ಯಜೀವಿ ಧಾಮವೆಂದು 1956 ಮೇ 10 ರಂದು ಘೋಷಿಸಲಾಯಿತು. ನಂತರ 2006 ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಇಲ್ಲಿನ ವನ್ಯಜೀವಿ ನಿಸರ್ಗಧಾಮದಲ್ಲಿ ಪ್ರವಾಸಿಗರು ರುದ್ರ ರಮಣೀಯ ಪ್ರಪಾತಗಳು, ಆಳವಾದ ನದಿ ನೀರಿನ ಹರಿವು ಮತ್ತು ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಸವಿಯಬಹುದು. ಸುಮಾರು 834.16 ಸ್ಕೇ.ಕಿ.ಮೀ. ವ್ಯಾಪ್ತಿ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಅರಣ್ಯವು 100 ರಿಂದ 970 ಮೀಟರಗಳಷ್ಟು ಎತ್ತರ ಹೊಂದಿದೆ. ಬಹಳಷ್ಟು ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಈ ಅರಣ್ಯ ಪ್ರದೇಶವು ನೆಲೆ ನೀಡಿದೆ. ಕಪ್ಪು ಚಿರತೆ, ಜಿಂಕೆ, ಸಂಬಾರ, ಚಿಗರಿ, ಹಳದಿ ಕಾಲುಗಳ ನವಿಲು, ಹಾರ್ನಬಿಲ್, ಗೂಗೆ, ಕಾಡುಕೋಳಿ ಮುಂತಾದವುಗಳನ್ನು ಇಲ್ಲಿ ಕಾಣಬಹುದು.ಸುಮಾರು 200 ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಸಂಕುಲವನ್ನು ಈ ಅರಣ್ಯಧಾಮದಲ್ಲಿ ವೀಕ್ಷಿಸಬಹುದಾಗಿದೆ. ಈ ನಿಸರ್ಗಧಾಮದ ದಟ್ಟಾರಣ್ಯದಲ್ಲಿ ಚಾರಣ, ಸಾಹಸದ ಬೋಟಿಂಗ್ ಕ್ರೀಡೆಗಳಲ್ಲಿ ಪ್ರವಾಸಿಗರು ಭಾಗವಹಿಸಬಹುದು. ಈ ನಿಸರ್ಗಧಾಮಕ್ಕೆ ಅಕ್ಟೋಬರ್ ನಿಂದ ಜೂನ್ ತಿಂಗಳುಗಳಲ್ಲಿ ಭೇಟಿ ನೀಡಲು ಪ್ರವಾಸಿಗರಿಗೆ ಒಳ್ಳೆಯ ಸಮಯ. ಇಡೀ ಅರಣ್ಯವನ್ನು ತೆರೆದ ಜೀಪಿನಲ್ಲಿ ಪ್ರವಾಸಿಗರು ನೋಡಬಹುದು. ಅರಣ್ಯದ ಮಾಹಿತಿಗಾಗಿ ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ಗೈಡ್ಸ್ ಗಳು ಇಲ್ಲಿದ್ದಾರೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮದ ಹತ್ತಿರವೇ ಇರುವ ಅಣಶಿ ರಾಷ್ಟ್ರೀಯ ಉದ್ಯಾನವನ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ.

"https://kn.wikipedia.org/w/index.php?title=ದಾಂಡೇಲಿ&oldid=1135097" ಇಂದ ಪಡೆಯಲ್ಪಟ್ಟಿದೆ