ರಾಷ್ಟ್ರಕೂಟ

ಕರ್ನಾಟಕದ ಪ್ರಮುಖ ರಾಜವಂಶ

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

ರಾಷ್ಟ್ರಕೂಟ ಸಾಮ್ರಾಜ್ಯ

ಧ್ರುವ ಧಾರಾವರ್ಷನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦)
ವಂಶ


ಅಧಿಕೃತ ಭಾಷೆಗಳು

ಯಾದವ


ಕನ್ನಡ
ಸಂಸ್ಕೃತ

ರಾಜಧಾನಿಗಳು ಮಯೂರಖಂಡ (ಬೀದರ್ ಜಿಲ್ಲೆ), ಮಾನ್ಯಖೇತ
ಸರಕಾರ ಚಕ್ರಾಧಿಪತ್ಯ
ಮುಂಚಿನ ಆಡಳಿತ ಬಾದಾಮಿ ಚಾಲುಕ್ಯರು
ನಂತರದ ಆಡಳಿತ ಪಶ್ಚಿಮ ಚಾಲುಕ್ಯರು

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.

ರಾಷ್ಟ್ರಕೂಟ ವಂಶ

ರಾಷ್ಟ್ರಕೂಟ ವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುಭಾಗವನ್ನು ಆಳಿದ ರಾಜಮನೆತನ.[], [], [] ಬಾದಾಮಿ ಚಾಳುಕ್ಯರ ರಾಜಕೀಯ ಉತ್ತರಾಧಿಕಾರಿಗಳು ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಉತ್ತರ ಭಾರತದಲ್ಲಿ ಒಂದು ಕಡೆ ಕನೋಜಿನವರೆಗೂ ಇನ್ನೊಂದೆಡೆ ಮಿಥಿಲೆಯವರೆಗೂ ಇವರ ರಾಜಕೀಯ ಪ್ರಭಾವ ಹಬ್ಬಿತ್ತು. ಎಲ್ಲ ರಾಜಮನೆತನಗಳ ಹಾಗೆ ಈ ಮನೆತನದ ಚರಿತ್ರೆಯಲ್ಲೂ ಏಳುಬೀಳುಗಳಿವೆ; ಶಾಖೋಪಶಾಖೆಗಳಿವೆ. ಇವುಗಳಲ್ಲಿ ಮಾನ್ಯಖೇಟದ ಮನೆತನ ಸಾರ್ವಭೌಮ ಪದವಿಯನ್ನು ಹೊಂದಿದ್ದ ಮುಖ್ಯ ಮನೆತನ ಆಗಿತ್ತು; ಮಿಕ್ಕವು ಸಾಮಂತ ಮನೆತನಗಳು. ರಾಷ್ಟ್ರಕೂಟರ ಯಾದವ ವಂಶದ ಬಳ್ಳಿಯ ಮಾನಪುರದ ರಾಷ್ಟ್ರಕೂಟರು, ಮಾನ್ಯಖೇಟದ ರಾಷ್ಟ್ರಕೂಟರು, ಸೌಂದತ್ತಿಯ ರಾಷ್ಟ್ರಕೂಟರು, ಆಮರ್ದಕಪುರದ ರಾಷ್ಟ್ರಕೂಟರು, ರಟ್ಟಮತಗ್ರಂಥದ ರಾಷ್ಟ್ರಕೂಟರು, ಗುಜರಾತಿನ ರಾಷ್ಟ್ರಕೂಟರು, ವಿದರ್ಭದ ರಾಷ್ಟ್ರಕೂಟರು, ವಾಘರಕೊಟ್ಟ, ಕನೋಜ, ಮಾರ್‍ವಾಡ್, ಬದಯೂನ್, ಜೋಧಪುರ, ಮತ್ತು ಬಿಕಾನೇರ್ ಮುಂತಾದ ಉತ್ತರಭಾರತದ ಹಲವು ರಾಠೋಡ ಮನೆತನಗಳು ಅನೇಕ ಕಡೆಗಳಲ್ಲಿ ಹೀಗೆ ಹಬ್ಬಿಬೆಳೆದಿದೆ.[] ಕಾಕತೀಯರೂ ಮೂಲತಃ ರಾಷ್ಟ್ರಕೂಟರು ಎಂಬುದಾಗಿ ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೊರೆತ ಬಯ್ಯಾರಮ್ ಚೆರುವು ಶಾಸನದಿಂದ ತಿಳಿದುಬಂದಿದೆ. ರಾಷ್ಟ್ರಕೂಟರ ಚರಿತ್ರೆಯನ್ನು ಶಾಸನ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಸಂಗ್ರಹಿಸಿಕೊಳ್ಳಬೇಕಾಗಿದೆ. ರಾಷ್ಟ್ರಕೂಟರ ಚರಿತ್ರೆಯ ಬೃಹದ್‍ಗ್ರಂಥ ಇನ್ನೂ ರಚಿಸಲ್ಪಟ್ಟಿಲ್ಲ. ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. ಸಂಸ್ಕೃತದ ರಾಷ್ಟ್ರ (ದೇಶ-ಪ್ರದೇಶ) ಮತ್ತು ಕೂಟ (ಮುಖ್ಯಸ್ಥ) ಎಂಬ ಪದಗಳಿಂದ ಉಂಟಾದ ನಾಮಪದ. ಗ್ರಾಮ, ಕೂಟ, (ಗಾವುಂಡ, ಗೌಡ) ಗ್ರಾಮಾಧಿಪತಿ ಆಗಿದ್ದಂತೆ ರಾಷ್ಟ್ರಕೂಟ ಒಂದು ಪ್ರದೇಶದ ಅಧಿಪತಿ. ರಾಷ್ಟ್ರಕೂಟ ರಾಷ್ಟ್ರಿಕ, ರಾಟ್ರಿಕ, ರಿಷ್ಟಿಕ, ರಥಿಕ, ರಟ್ಟ/ರಾಟ್ಟ < ವೃಷ್ಟಿ < ವರ್ಷ, ರಾಠೋಡ್, ರಾಠೌಂಡಾ ಮುಂತಾದ ಶಬ್ದಗಳಲ್ಲಿ ಈ ಮನೆತನದ ಹೆಸರಿನ ವ್ಯುತ್ಪತ್ತಿಯನ್ನು ಕಾಣಲು - ನಿರೂಪಿಸಲು ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ.

ಮಾನಪುರದ ರಾಷ್ಟ್ರಕೂಟರು

ಅವಿಧೇಯನ ಪಂಡರಂಗಪಲ್ಲಿ ಶಾಸನ ವಿಭುರಾಜನ ಹಿಂಗ್ಣಿಭೇರ್ಡಿ ಶಾಸನ ಮುಂತಾದವುಗಳ ಆಧಾರದಿಂದ ಇವರ ವಂಶಾವಳಿಯನ್ನು ಹೀಗೆ ನಿರೂಪಿಸಲಾಗಿದೆ. ಚಿತ್ರ-ಮಾನಪುರದ-ರಾಷ್ಟ್ರಕೂಟರ-ವಂಶಾವಳಿ. ಸತಾರ ಜಿಲ್ಲೆಯ (ಮಹಾರಾಷ್ಟ್ರದ) ಮಾನ್ ತಾಲ್ಲೂಕಿನ ಮಾನಪುರ ಇವರ ರಾಜಧಾನಿಯಾಗಿತ್ತು. ಮಾನಾಂಕ ಈ ವಂಶದ ಮೂಲ ಪುರುಷ. ಕಾವೇರಿಯಿಂದ ಗೋದಾವರೀ ನದಿಯ ತಟಗಳ ಮಧ್ಯದ ಭೂಭಾಗವೆಲ್ಲ ಆಗ ಕರ್ನಾಟಕವಾಗಿತ್ತು.[]

ಮಾನ್ಯಖೇಟದ ರಾಷ್ಟ್ರಕೂಟರು

 
ಭಾರತದ ರಾಷ್ಟ್ರಕೂಟ ಸಾಮ್ರಾಜ್ಯದ ನಕ್ಷೆ (ಅಂದಾಜು ಪ್ರದೇಶ)

ಮನೆತನದ ಮೂಲಪುರುಷರು ಮೊದಲು ರೇವಾ ಹಾಗೂ ಮಹಾನದಿಗಳ ನಡುವಣ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡುದುದು ದಂತಿದುರ್ಗಸಾಮನಗಢ ಶಾಸನದಿಂದ ಖಚಿತವಾಗಿದೆ. ಇಲ್ಲಿ ಆಳುತ್ತಿದ್ದ ರಾಷ್ಟ್ರಕೂಟರ ವಂಶಕ್ಕೆ ಒರಿಸ್ಸದ ಸಂಭಲಪುರದ ಬಳಿಯ ವಾಘರಕೊಟ್ಟದಿಂದ ಆಳುತ್ತಿದ್ದ ರಾಷ್ಟ್ರಕೂಟರ ವಂಶ ಸಂಬಂಧಪಟ್ಟಿರಬಹುದು. ಮಾನ್ಯಖೇಟ, ವಿದರ್ಭ ರಾಷ್ಟ್ರಕೂಟರ ಶಾಸನಗಳಲ್ಲಿ ವಿಶೇಷತಃ ಸಂಗಲೂಡಾ, ನಾಗರ್ಧನ, ಮುಲ್ತಾಯಿ ಮತ್ತು ತಿವರಖೇಡ ಶಾಸನಗಳಲ್ಲಿ ಬಂದಿರುವ ಸ್ವಾಮಿಕರಾಜ, ದುರ್ಗರಾಜ, ಗೋವಿಂದರಾಜ ಮತ್ತು ನನ್ನರಾಜ ಇವರುಗಳ ಪರಂಪರೆ ಒಂದೇ ವಂಶದ್ದೋ ಅಥವಾ ಭಿನ್ನಭಿನ್ನ ಶಾಖೆಗಳದ್ದೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಗರ್ಧನ, ಅಚಲಪುರ, ಹಾಗೂ ಪದ್ಮನಗರಗಳಿಂದ ಆಳಿದ ಒಂದು ರಾಷ್ಟ್ರಕೂಟ ಶಾಖೆ ಬೇರೆಯೆಂದು ವಿ.ವಿ. ಮಿರಾಶಿಯವರು ಪ್ರತಿಪಾದಿಸಿದ್ದಾರೆ. ಎಂ. ವೆಂಕಟರಾಮಯ್ಯನವರು ಸಂಗಲೂಡಾ ಶಾಸನವನ್ನು ಕುರಿತು ಬರೆಯುತ್ತ ಇವರೆಲ್ಲರೂ ಎ.ಎಸ್. ಅಳ್ತೇಕರರು ನಿರೂಪಿಸಿರುವ ರೀತಿಯಲ್ಲಿ ಮಾನ್ಯಖೇಟದಿಂದ ಆಳಿದ ಮೂಲ ಮನೆತನಕ್ಕೆ ಸಂಬಂಧಪಟ್ಟವರು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಮಸಾದೃಶ್ಯತೆ ಇರುವುದು ಗಮನಾರ್ಹವಾದುದು ನಿಜ: ಆದರೆ ಒಂದೆಂದು ಹೇಳಲು ಬೇರೆಯ ಖಚಿತ ಪ್ರಮಾಣಗಳ ಅಭಾವವಿದೆ. ಸು. 570-590 ರ ಮಧ್ಯೆ ಆಳಿದ ದುರ್ಗರಾಜನಿಂದ ಈ ಮನೆತನದ ಇತಿಹಾಸವನ್ನು ಅಳ್ತೇಕರರ ಸೂಚನೆಯಂತೆ ಪ್ರಾರಂಭಿಸಬಹುದೆಂದು ತೋರುತ್ತದೆ. ಕೆಲವರು ದಂತಿವರ್ಮನಿಂದ ಆರಂಭಿಸುತ್ತಾರೆ. ಇವರ ಮನೆಮಾತು ಕನ್ನಡವಾಗಿತ್ತೆಂಬುದನ್ನು ಅಳ್ತೇಕರರು ಸಾಧಾರವಾಗಿ ಸಿದ್ಧಪಡಿಸಿದ್ದಾರೆ. ನಿರವದ್ಯಾನ್ವಯದ ಶ್ರೀವಿಜಯ ರಚಿಸಿದ ಕವಿರಾಜಮಾರ್ಗ ಕೃತಿಯ ಪ್ರಕಾರ ಕನ್ನಡನಾಡು, ಕನ್ನಡನುಡಿ ಇವು ಕಾವೇರಿ ತೀರದಿಂದ ಗೋದಾವರಿ ತೀರದ ಮಧ್ಯದ ಪ್ರದೇಶದಲ್ಲಿ ಇದ್ದುವೆಂಬುದು ಅದರಲ್ಲಿನ ಒಂದು ಪದ್ಯದಿಂದ ಸ್ಪಷ್ಟ:

ಕಾವ್ಯದಲ್ಲಿ ಬಳಕೆ

ಕಾವೇರಿಯಿಂದಮಾಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36)

ರಾಷ್ಟ್ರಕೂಟರು ಆರಂಭದಲ್ಲಿ ಬಾದಾಮಿಯ ಚಾಳುಕ್ಯರ ಸಾಮಂತರಾಗಿದ್ದರು. ಮಧ್ಯಕಾಲೀನ ದೇಶಮುಖ, ದೇಸಾಯಿ ಶಬ್ದಗಳ ಹಾಗೆ ಗ್ರಾಮಕೂಟ, ರಾಷ್ಟ್ರಕೂಟ ಶಬ್ದಗಳು ಆಡಳಿತದಲ್ಲಿಯ ಅಧಿಕಾರವನ್ನು ಸೂಚಿಸುತ್ತವೆ. ಆದರೆ ಈ ಮಂಡಲಗಳ ವ್ಯಾಪ್ತಿ ಆದಾಗ ಸೀಮಾರೇಖೆಗಳ ವಿಸ್ತಾರತೆ ಇಲ್ಲವೇ ಆಕುಂಚನದಿಂದ ಏಕರೀತಿಯಾಗಿರಲಿಲ್ಲ. ರಾಷ್ಟ್ರಕೂಟರು ತಮ್ಮನ್ನು ಯಾದವರೆಂದು ಹೇಳಿಕೊಂಡಿದ್ದಾರೆ. ಗರುಡ (ವಿಷ್ಣುವಿನ ವಾಹನ), ನೇಗಿಲು ಬಲರಾಮನ ಆಯುಧ ಇವರ ಲಾಂಛನಗಳಾಗಿದ್ದವು. ಗರುಡಧ್ವಜ ಇವರ ಬಾವುಟ ಆಗಿತ್ತು. ದಂತಿದುರ್ಗನ ಕಾಲದವರೆಗಿನ ಇತಿಹಾಸ. ಈ ಮನೆತನದ ಒಂದನೆಯ ಇಂದ್ರರಾಜನ ಚಾಳುಕ್ಯ ಭವನಾಗ ಅಥವಾ ಭವಗಣಾ ಎಂಬುವಳನ್ನು ಕೈರಾ (ಗುಜರಾತ್) ಎಂಬಲ್ಲಿಂದ ಎತ್ತಿಕೊಂಡು ಬಂದು ರಾಕ್ಷಸ ರೀತಿಯಲ್ಲಿ ಮದುವೆಯಾದನೆನ್ನುವುದನ್ನು ಬಿಟ್ಟರೆ, ಇನ್ನೂ ಸಂಪೂರ್ಣ ಕತ್ತಲೆಯಲ್ಲಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಆಸ್ತಿಭಾರವನ್ನು ಹಾಕಿದ ಮೊದಲ ಮಹಾಪುರುಷ ದಂತಿದುರ್ಗ. ಈತನ ಎಲ್ಲೋರ ಶಾಸನದಲ್ಲಿ ಮೊದಲ ಬಾರಿಗೆ ಪೃಥ್ವೀವಲ್ಲಭ ಎಂಬ ಬಿರುದನ್ನು ತಳೆದಿರುವುದು ಮತ್ತು ಸಾಮನಗಡ ಶಾಸನದಿಂದ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಕಂಡು ಬರುತ್ತದೆ. ಅನ್ಯರಿಗೆ ಅಸಾಧ್ಯವಾದ ಅಜೇಯವಾದ ಕರ್ಣಾಟಕ ಬಲವನ್ನು ಸೋಲಿಸಿದುದಾಗಿಯೂ ಹೇಳಿರುವುದರ ಜೊತೆಗೆ ವಲ್ಲಭ ದೊರೆಯನ್ನು ಸೋಲಿಸಿದ ಅನಂತರವೇ ಸಾರ್ವಭೌಮತ್ವವನ್ನು ಸೂಚಿಸುವ ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಹೊಂದಿದ್ದುದಾಗಿಯೂ ಆ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ದಂತಿದುರ್ಗ ಸಾರ್ವಭೌಮರಾದ ಚಾಳುಕ್ಯರನ್ನು ಸೋಲಿಸಿದುದಲ್ಲದೇ ಕಂಚಿ, ಕಳಿಂಗ, ಶ್ರೀಶೈಲ, ಚೋಳ, ಪಾಂಡ್ಯ, ಕೇರಳ, ಕೋಸಲ, ಮಾಲವ, ಲಾಟ, ಸಿಂಹ ಮೊದಲಾದ ದೇಶಗಳನ್ನು ಮತ್ತು ಶ್ರೀಹರ್ಷ, ವಜ್ರಟ ಮೊದಲಾದ ರಾಜರನ್ನೂ ಸೋಲಿಸಿದುದಾಗಿ ತನ್ನ ಪ್ರಶಸ್ತಿಯಲ್ಲಿ ಬರೆಯಿಸಿದ್ದಾನೆ. ದಂತಿದುರ್ಗನ ವಿಸ್ತಾರವಾದ ಪ್ರಶಸ್ತಿ ಎಲ್ಲೋರದ ದಶಾವತಾರ ಗುಹೆಯ ಶಾಸನದಲ್ಲಿ ಬಂದಿದೆ. ದಂತಿದುರ್ಗನಿಂದ ಆರಂಭವಾದ ಆಳ್ವಿಕೆ ಅವಿಚ್ಛಿನ್ನವಾಗಿ ಇಮ್ಮಡಿ ಕರ್ಕನವರೆಗೆ ಸಾಗಿಬಂದಿತು (ಸು. 747 ರಿಂದ 756 ಮಧ್ಯದಲ್ಲಿ ಆರಂಭವಾಗಿ 972-73.) ಒಬ್ಬರಾದ ಮೇಲೆ ಒಬ್ಬರು ಶೂರ ಧೀರ ಪುರುಷರೇ ಆಗಿದ್ದುದರಿಂದ ಸಾಮ್ರಾಜ್ಯದ ಹಿರಿಮೆ ಗರಿಮೆಗಳು ಏರುತ್ತ ನಡೆದವು. ದಂತಿದುರ್ಗನಿಗೆ ಮಕ್ಕಳಿರಲಿಲ್ಲವಾದ ಕಾರಣ ಇವನ ಚಿಕ್ಕಪ್ಪನಾದ ಒಂದನೆಯ ಕೃಷ್ಣ ಪಟ್ಟವನ್ನು ಅಲಂಕರಿಸಿದ. ಈತ ಇನ್ನೂ ಕಿಂಚಿತ್ ಜೀವಹಿಡಿದಿದ್ದ ಬಾದಾಮಿ ಚಾಳುಕ್ಯರ ಸಾಮ್ರಾಜ್ಯತ್ವವನ್ನು 757ರಲ್ಲಿ ಇಮ್ಮಡಿ ಕೀರ್ತಿವರ್ಮನನ್ನು ಮೂಲೋತ್ಪಾಟನೆ ಮಾಡುವುದರ ಸಂಪೂರ್ಣಗೊಳಿಸಿದ. ಶುಭತುಂಗ, ಅಕಾಲವರ್ಷ ಎಂಬ ಬಿರುದುಗಳನ್ನು ಈತ ಧರಿಸಿದ್ದ. ಕೃಷ್ಣನ ಅನಂತರ ಇಮ್ಮಡಿ ಗೋವಿಂದ, ಆತನ ತಮ್ಮ ಧ್ರುವಧಾರಾವರ್ಷ, ಕಲಿವಲ್ಲಭ ಇವರು ಕ್ರಮವಾಗಿ ರಾಜ್ಯವನ್ನಾಳಿದರು. ಧ್ರುವಧಾರಾವರ್ಷನಿಗೆ ಪ್ರಿಯಪುತ್ರನೂ ಅತ್ಯಂತ ಶೂರನೂ ಆದ ಪ್ರಭೂತವರ್ಷ ಮುಮ್ಮಡಿ ಗೋವಿಂದ ಅವನ ಅನಂತರ ಪಟ್ಟಕ್ಕೆ ಬಂದ. ಮುಮ್ಮಡಿ ಗೋವಿಂದನ ಪುತ್ರನೇ ನೃಪತುಂಗ ಅಮೋಘವರ್ಷ. ನೃಪತುಂಗನ ಕಾಲದವರೆಗೆ ರಾಷ್ಟ್ರಕೂಟರ ರಾಜಧಾನಿ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ; ಎಲ್ಲೋರದ ಬಳಿಯ ಸೂಲೂಭಂಜನ ರಾಜಧಾನಿಯಾಗಿದ್ದಿರಬಹುದೆಂಬುದು ಅಳ್ತೇಕರರ ಊಹೆ. ಲಟ್ಟಲೂರ ಪುರವರಾಧೀಶ್ವರ ಎಂಬುದು ಇವರ ಮೂಲ ರಾಜಧಾನಿಯನ್ನು ಸೂಚಿಸಿದರೆ, ಇತ್ತೀಚೆಗೆ ನಾಂದೇಡ ಜಿಲ್ಲೆಯ ಕಂಧಾರದಲ್ಲಿ ದೊರೆತ ಶಾಸನದಿಂದ ಕಂಧಾರ ಮಾನ್ಯಖೇಟಕ್ಕಿಂಥ ಮುಂಚಿನ ರಾಜಧಾನಿಗಳಲ್ಲೊಂದು ಎಂಬುದು ಸುಸ್ಪಷ್ಟವಿದೆ. ನೃಪತುಂಗನ ಕಾಲದಲ್ಲಿ ರಾಜಧಾನಿ ಮಾನ್ಯಖೇಟ ದಿನೇ ದಿನೇ ಪ್ರವರ್ಧಮಾನವಾಗಿ ಬೆಳೆಯಿತು. ತತ್ಪೂರ್ವದಲ್ಲಿ ರಾಜಧಾನಿಯಾದ ಕಂಧಾರ ಪ್ರಾಮುಖ್ಯವನ್ನು ದಿನೇ ದಿನೇ ಕಳೆದುಕೊಂಡಿತು. ವೀರ ನಾರಾಯಣ ಕೃಷ್ಣೇಶ್ವರ, ಜಗತ್ತುಂಗಸಮುದ್ರ, ಮೂರನೆಯ ಗೋವಿಂದ ಹಾಗೂ ಆತನ ಪುತ್ರ ನೃಪತುಂಗನ ದಂಡನಾಯಕನಾಗಿದ್ದ ಬಂಕೆಯನ ಸ್ಮಾರಕ ಬಂಕೇಶ್ವರ ಹಾಗೂ ಚಲ್ಲೇಶ್ವರ, ರಾಜಗೃಹ ಅರ್ಥಾತ್ ಅರಮನೆ ಮತ್ತು ಪ್ರಧಾನ ರಾಜ ವಿಲಾಸಿನಿಪಾಟಕಗಳ ಉಲ್ಲೇಖವಿದ್ದು ಅದು ಒಂದು ರಾಜಧಾನಿಯಾಗಿತ್ತೆನ್ನುವುದರಲ್ಲಿ ಸಂದೇಹವೇ ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ ಇಂದ್ರ ಹಾಗೂ ಮೂರನೆಯ ಕೃಷ್ಣ ಇವರ ಕಾಲದಲ್ಲಿ ರಾಷ್ಟ್ರಕೂಟರ ಸೈನ್ಯ ಭಾರತಾದ್ಯಂತ ಹಿಮವತ್ ಪ್ರದೇಶದಿಂದ ರಾಮೇಶ್ವರದವರೆಗೆ ಚಲಿಸಿತು. ಇವನ ಆನೆ ಕುದುರೆಗಳು ಗಂಗಾ ಯಮುನಾ ತರಂಗಗಳಲ್ಲಿ ಮೈತೊಳೆದವು. ಸೋತ ರಾಜರು ಶರಣಾಗತರಾಗಿ ನಿಂತರು. ಕೆಲವರು ಈ ರಾಜರ ಮೂರ್ತಿಗಳನ್ನೇ ಮಾಡಿಸಿ ಸ್ಥಾಪಿಸಿದರು. ಮೂರನೆಯ ಕೃಷ್ಣನ ಅನಂತರ ಆತನ ಸಹೋದರ ಇಮ್ಮಡಿ ಕರ್ಕ ಪಟ್ಟಕ್ಕೆ ಬಂದ. ಆತ ಅಣ್ಣನಷ್ಟು ಶಕ್ತಿಶಾಲಿಯಾಗಿರಲಿಲ್ಲ. ಕರ್ಕನ ಮಗ ಕೃಷ್ಣ. ಕರ್ಕನ ತಮ್ಮ ನಿರುಪಮದೇವ ಹಾಗೂ ಮೂರನೆಯ ಕೃಷ್ಣನ ಮೊಮ್ಮಗ ನಾಲ್ಕನೆಯ ಇಂದ್ರ, ಗಂಗರ ಇಮ್ಮಡಿ ಮಾರಸಿಂಹ ಹಾಗೂ ಆತನ ಪ್ರಧಾನ ಚಾವುಂಡರಾಯನ ನೇತೃತ್ವದಲ್ಲಿ ಸಿಂಹಾಸನಕ್ಕಾಗಿ ಯುದ್ಧ ಮಾಡಿದರು. ಇಂಥ ಸಂದರ್ಭಕ್ಕಾಗಿ ಕಾದಿದ್ದ ಪರಮಾರ ಸಿಯ್ಯಕ 972ರಲ್ಲಿ ಮಾನ್ಯಖೇಟದ ಮೇಲೆ ದಾಳಿ ಮಾಡಿ ಆ ನಗರವನ್ನು ಕೊಳ್ಳೆ ಹೊಡೆದ; ತನ್ನ ಸೋಲುಗಳ ಸೇಡನ್ನು ತೀರಿಸಿಕೊಂಡ. ಧನಪಾಲನ ಪಾಇಅಲಚ್ಛೀನಾಮ ಮಾಲಾ ಗ್ರಂಥದ ಪ್ರಕಾರ ಸಿಯ್ಯಕ ಮಾನ್ಯಖೇಟವನ್ನು ದಹಿಸಿದ. ರಾಷ್ಟ್ರಕೂಟರ ಆಳ್ವಿಕೆ ಅಂತಃ ಕಲಹದಲ್ಲಿ ಮುಳುಗಿ ಮಾಯವಾಗುತ್ತಿದ್ದುದನ್ನು ಕಂಡ ಸಾಮಂತ ಚಾಳುಕ್ಯ ಕುಲದ ಇಮ್ಮಡಿ ತೈಲಪ ಆಡಳಿತದ ಕಡಿವಾಣವನ್ನು ಹಿಡಿದು ಚಾಳುಕ್ಯರ ಅಧಿಕಾರವನ್ನು ಸಾಮ್ರಾಜ್ಯ ಪಟ್ಟದಲ್ಲಿ ಪುನಃ ಪ್ರತಿಷ್ಠಾಪಿಸಿದ. ಸು. 757-972ರವರೆಗೆ ಅತ್ಯಂತ ವಿಜೃಂಭಣೆಯಿಂದ ಈ ಮನೆತನ ರಾಜ್ಯಭಾರವನ್ನೆಸಗಿತು.

ರಾಷ್ಟ್ರಕೂಟರ ಆಡಳಿತ

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಡಳಿತ ಸುವ್ಯವಸ್ಥಿತ ರೀತಿಯಲ್ಲಿ ಇತ್ತು. ರಾಷ್ಟ್ರಕೂಟರ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಇವರ ಆಡಳಿತ ವ್ಯವಸ್ಥೆ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ರಾಜ, ರಾಣಿ, ಯುವರಾಜ, ಮಂತ್ರಿಮಂಡಲ ಇವುಗಳ ಬಗ್ಗೆಯೂ ವಿವರಗಳು ದೊರೆಯುತ್ತವೆ. ಯುವರಾಜ ಸಾಮಾನ್ಯವಾಗಿ ರಾಜಧಾನಿಯಲ್ಲಿದ್ದು ತಂದೆಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡುತ್ತಿದ್ದ. ಮುಂದೆ ರಾಜನಾಗುವ ವ್ಯಕ್ತಿಗೆ ಇದೊಂದು ಪೂರ್ವಭಾವಿ ತರಬೇತಿಯಾಗಿತ್ತು. ರಾಣಿಯರು ರಾಜಕನ್ಯೆಯರು ಒಮ್ಮೊಮ್ಮೆ ರಾಜ್ಯಾಡಳಿತವನ್ನು ನೋಡಿಕೊಂಡುದುಂಟು. ಧ್ರುವಧಾರಾವರ್ಷನ ಹೆಂಡತಿ ಶೀಲಭಟ್ಟಾರಿಕೆ, ನೃಪತುಂಗನ ಪುತ್ರಿ ಚಂದ್ರೋಬಲಬ್ಬೆ (ರಾಯಚೂರು ದೋಅಬ ಕೃಷ್ಣಾಭೀಮ ಮಧ್ಯದ ಪ್ರದೇಶದಲ್ಲಿ) ಆಡಳಿತ ನಡೆಸಿದುದಕ್ಕೆ ದಾಖಲೆಗಳು ದೊರೆತಿವೆ. ಆದರೂ ಆಡಳಿತದ ವಿಶೇಷಭಾರ ಪುರುಷರ ಮೇಲೆಯೆ ಬೀಳುತ್ತಿತ್ತು. ರಾಜಧಾನಿಯಲ್ಲಿ ಸಾಮಾನ್ಯವಾಗಿ ರಾಜನ ಆಸ್ಥಾನ ಇತ್ತು. ಆದರೆ ವಿಜಯಯಾತ್ರೆ ಅಥವಾ ದಂಡಯಾತ್ರೆ ಹೊರಟಾಗ ರಾಜ ಬೀಡುಬಿಟ್ಟಲ್ಲಿ ಆಸ್ಥಾನ ನಡೆಯುತ್ತಿತ್ತು. ಅದನ್ನು ವಿಜಯಕಟಕ ಎಂದು ಕರೆಯಲಾಗುತ್ತಿತ್ತು. ವಿಶೇಷವಾಗಿ ಮಂತ್ರಿಗಳು ದಂಡನಾಯಕರು ಆಗಿರುತ್ತಿದ್ದರು. ಅವರಲ್ಲಿ ಕೆಲವರು ಧ್ರುವನ ಸಂಧಿವಿಗ್ರಹದಲ್ಲಿನ ಹಾಗೆ ಮಂಡಲೇಶ್ವರರೂ ಆಗಿದ್ದರು. ರಾಜ್ಯವನ್ನು ನೇರ ಆಡಳಿತಕ್ಕೊಳಪಟ್ಟ ಹಾಗೂ ಮಾಂಡಲಿಕರ ಆಡಳಿತಕ್ಕೊಳಪಟ್ಟ ವಿಭಾಗಗಳೆಂದು ವಿಭಜಿಸಲಾಗಿತ್ತು. ಮಾಂಡಲಿಕರು ಕಪ್ಪಕಾಣಿಕೆಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕಾಗಿತ್ತು. ಹಾಗೆ ಸಲ್ಲಿಸದಿದ್ದಾಗ ಇಂತವರನ್ನು ತಹಬಂದಿಗೆ ತರಲು ಯುದ್ಧಗಳಾದುದೂ ಉಂಟು. ಮಾಹಾಮಂಡಲೇಶ್ವರರು ಮಾಂಡಲೀಕರ ಮೇಲೆ ಕೆಲವೊಮ್ಮೆ ಆಧಿಪತ್ಯವನ್ನು ಹೊಂದಿದೂ ಕಂಡುಬರುತ್ತದೆ. ಅವರೆಲ್ಲರೂ ಚಕ್ರವರ್ತಿಯ ಜೊತೆಗೆ ಆಗಾಗ್ಗೆ ಸೇನಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಪಾಲುಗೊಳ್ಳುತ್ತಿದ್ದರು. ರಾಜಾಜ್ಞೆಯನ್ನು ಈಡೇರಿಸಲು ಒಮ್ಮೊಮ್ಮೆ ಸ್ವತಃ ಬಂಕೆಯನ ಹಾಗೆ ದಿಗ್ವಿಜಯಗೆಯ್ದುದೂ ಉಂಟು. ನೇರ ಆಡಳಿತಕ್ಕೆ ಒಳಪಟ್ಟ ಭೂಭಾಗವನ್ನು ರಾಷ್ಟ್ರ, ವಿಷಯ, ಗ್ರಾಮ ಎಂದು ಮೂರು ಭಾಗಗಳಲ್ಲಿ ವಿಭಜಿಸುತ್ತಿದ್ದುದು ಕಂಡುಬಂದಿದೆ. ರಾಷ್ಟ್ರಪತಿ ವಿಷಯಪತಿ, ಗ್ರಾಮಕೂಟ, ಆಯುಕ್ತಕ ಎಂಬ ಅಧಿಕಾರಿಗಳು ಇದ್ದರು. ರಾಷ್ಟ್ರಪತಿಗಳು ಕಂದಾಯವನ್ನು ಸಂಗ್ರಹಿಸುತ್ತಿದ್ದುದು ಸ್ಪಷ್ಟವಾಗಿದೆ. ವಿಷಯ ಎಂಬುದನ್ನು ಮತ್ತೆ ಭುಕ್ತಿ (ಬುಕ್ಕಿ) ಎಂಬ ಕಿರು ಮಂಡಲಗಳಾಗಿ ವಿಭಜಿಸಿ ಆಳುತ್ತಿದ್ದುದೂ ದಾಖಲೆಗಳಲ್ಲಿ ಸ್ಪಷ್ಟವಿದೆ. ಈ ಬಗೆಯ ವಿಭಜನೆ ಹೆಚ್ಚಾಗಿದ್ದುದು ಆ ರಾಜ್ಯದ ಉತ್ತರ ಭಾಗದಲ್ಲಿ. ವಿಷಯಗಳನ್ನು ಪ್ರಾಯಃ 1000 ಹಳ್ಳಿಗಳಿಗೂ ಮಿಕ್ಕಿದಾಗ ಸಾವಿರದ ಪರಿಗಣನೆಯಲ್ಲೀ ಪೂಣಕ 1000 ಕುಹಂಡಿ ( ಕೊಂಡಿ 3000, ಕರಹಾಟ 4000 ಇತ್ಯಾದಿಯಾಗಿ ಘಟಕಗಳನ್ನಾಗಿಸಿ ಹೇಳುತ್ತಿದ್ದರು. ಈ ಒಂದು ರೀತಿಯಲ್ಲಿ ರಟ್ಟಪಾಡಿ ಸಪ್ತಾರ್ಥ ಲಕ್ಷ ಭೂಭಾಗದ ಒಂದು ಘಟಕವಾಗಿ ಏರ್ಪಟ್ಟಿತು. ವಿಷಯಪತಿಗಳು, ಭೋಗಪತಿಗಳು, ನಾಳ್ಗಾವುಂಡರು ನಾಡಿನ ಆಡಳಿತದಲ್ಲಿ ಪಾಲ್ಗೊಂಡರು. ಕಂದಾಯ ಇಲಾಖೆ, ಸೈನ್ಯ ಇಲಾಖೆಗಳು ಜನತೆಯ ಏಳ್ಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಸೈನ್ಯದಲ್ಲಿ ಎಲ್ಲ ಜಾತಿಯ ಜನರಿಗೂ ಪ್ರವೇಶವಿತ್ತು. ಬ್ರಾಹ್ಮಣರು, ಜೈನರು ಸಹ ಸೈನ್ಯದಲ್ಲಿ ಇದ್ದರು. ಅಹಿಂಸೆ ಎಂಬ ತತ್ತ್ವ ಅದರ ಪೂರ್ಣ ಸ್ವರೂಪದಲ್ಲಿ ಜೈನರಲ್ಲಿ ಮುನಿಪಂಗಡಗಳಿಗೆ ಮಾತ್ರ ಮೀಸಲಾಗಿದ್ದು ತೋರುತ್ತದೆ. ಜೈನರಾದ ಬಂಕೆಯ, ಶ್ರೀ ವಿಜಯ ಮೊದಲಾದವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜ್ಯದ ಆದಾಯ ಮುಖ್ಯವಾಗಿ ಕಂದಾಯಗಳನ್ನು ಅವಲಂಬಿಸಿತ್ತು. ಅನೇಕ ವಸ್ತುಗಳ ಮೇಲೆ ಕರಗಳನ್ನು ಹಾಕಿದ್ದರು. ಮಾಂಡಲಿಕರು ಭೂಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸುವುದು ಈ ಕಂದಾಯದ ಭಾಗ ಆಗಿದ್ದಿತು. ಅರಣ್ಯಗಳು, ಗಣಿಗಳು, ಗೋಮಾಳಗಳು, ರಾಜ್ಯದ ಆಸ್ತಿಗಳಾಗಿದ್ದವು. ಗೋಮಾಳಗಳು ಕೆಲವೊಮ್ಮೆ ಖಾಸಗಿ ಸ್ವತ್ತುಗಳಾಗಿದ್ದವು. ಭಾಗಕರ ಅಥವಾ ಉದ್ರಂಗ ಒಂದು ಮುಖ್ಯ ಕರವಾಗಿತ್ತು. ಕರಗಳನ್ನು ಬಾಧಾ ಎಂದೂ ಕರೆಯಲಾಗುತ್ತಿತ್ತು. ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ದಾನದತ್ತಿಗಳನ್ನು ಸರ್ವಬಾಧಾ ಪರಿಹಾರವಾಗಿ ಕೊಡುತ್ತಿದ್ದರು. ಜೈನ, ಬೌದ್ಧ, ಸಾಂಖ್ಯ, ವೈಶೇಷಿಕ, ಲೋಕಾಯುತ (ಚಾರ್ವಾಕ)-ಧರ್ಮಗಳು ವೈದಿಕ ಧರ್ಮದೊಂದಿಗೆ ಪ್ರಚಲಿತವಾಗಿದ್ದವು. ರಾಜರು, ಸರ್ವಧರ್ಮಗಳ ರಕ್ಷಕರೂ ದುಷ್ಟನಿಗ್ರಹ ಶಿಷ್ಟಪಾಲಕರೂ ಆಗಿದ್ದರು. ಅದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು. ಹಿರಣ್ಯಗರ್ಭ ತುಲಾಪುರುಷ- ಇತ್ಯಾದಿಗಳನ್ನು ಅವರು ನೆರವೇರಿಸಿದ್ದರು. ಸಾಮಾಜಿಕ, ಧಾರ್ಮಿಕ ಜೀವನ ಚತುರ್ವಿಧ ಪುರುಷಾರ್ಥಗಳನ್ನು ಆಶ್ರಯಿಸಿತ್ತು. ಆಗ ಅನುಲೋಮ ವಿವಾಹಗಳು ಆಕಸ್ಮಿಕವಾಗಿದ್ದವು. ಇಸ್ಲಾಮ್ ಧರ್ಮ ಅದೇ ಆಗ ಪಾದಾರ್ಪಣ ಮಾಡಿತ್ತು. ಪಾಶ್ಚಾತ್ಯ ದೇಶಗಳೊಡನೆ ಹೆಚ್ಚು ಸಂಪರ್ಕವಿತ್ತು. ಬ್ರೋಚ್, ಕಲ್ಯಾಣ ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು. ಬೆಲೆಬಾಳುವ ರತ್ನ, ವಜ್ರ, ಸುಗಂಧದ್ರವ್ಯ, ನೀಲಿ, ಹತ್ತಿಯ ನೂಲು, ಬಟ್ಟೆ, ಉತ್ತಮ ಮಸ್ಲಿನ್‍ಬಟ್ಟೆ, ಹದಮಾಡಿದಚರ್ಮ, ದಂತದ ವಸ್ತುಗಳು, ಶ್ರೀಗಂಧ, ತೇಗ ಮುಂತಾದ ಮರಗಳ ಗುಡಿಕೈಗಾರಿಕೆಯ ವಸ್ತುಗಳು ರಫ್ತಾಗುತ್ತಿದ್ದವು. ಖರ್ಜೂರ, ದ್ರಾಕ್ಷಾರಸ, ಮದ್ಯ, ಜೇಡ್, ಗಾಜು, ತವರ, ಸೀಸ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ವಸ್ತು ವಿನಿಮಯ ಪದ್ಧತಿಯ ಜೊತೆಗೆ ನಾಣ್ಯಪದ್ಧತಿ ಬಳಕೆಯಲ್ಲಿತ್ತು. ದ್ರಮ್ಮ, ಸುವರ್ಣ, ಪುಷ್ಪ, ಗದ್ಯಾಣ, ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ. ಆದರೆ ಇವುಗಳ ಬಗ್ಗೆ ಹೆಚ್ಚುವಿವರಗಳು ಲಭಿಸಿಲ್ಲ. ಸುವರ್ಣ, ಪುಷ್ಪ, ಗದ್ಯಾಣ ಇವು ಚಿನ್ನದ್ದಾಗಿದ್ದುವೆಂದು ತಿಳಿದುಬಂದಿದೆ.

ರಾಷ್ಟ್ರಕೂಟರ ಸಾಹಿತ್ಯ, ಧರ್ಮ

ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ ಶಿಕ್ಷಣ, ಸಾಹಿತ್ಯ, ವಾಸ್ತುಶಿಲ್ಪ ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. ಕನ್ನಡ, ಸಂಸ್ಕೃತ ಹಾಗೂ ಪ್ರಾಕೃತ ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ ಕವಿಚಕ್ರವರ್ತಿಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು. ವ್ಯಾಕರಣ, ಕಾವ್ಯ, ನಾಟಕ, ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, ಆಂಗಿರಸ, ಯಮ, ರಾಜಶೇಖರ, ತ್ರಿವಿಕ್ರಮ, ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ ಮಹಾರಾಷ್ಟ್ರವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.

ಈ ಕಾಲದಲ್ಲಿ ಜೈನಧರ್ಮ ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ ಜಿನಸೇನ, ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ ಪಉಮಚರಿಉ ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ (ಆದಿಪುರಾಣ) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು. ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತ, ಯಶೋಧರ ಚರಿತ ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ ರುದ್ರಟ (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್‍ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.

ವಾಸ್ತುಶಿಲ್ಪ ಕಲೆ

ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಆ ರಾಜ್ಯದ ವಿಸ್ತಾರವನ್ನು ಪರಿಶೀಲಿಸಿದರೆ ಅದರ ಔನ್ನತ್ಯವನ್ನು ಗುರುತಿಸಲು ಸಾಧ್ಯ. ಇಂಥ ಬೃಹತ್ ವಿಷಯದ ಅಧ್ಯಯನ ಇನ್ನೂ ಸಮರ್ಪಕವಾಗಿ ಪಡೆದಿಲ್ಲ. ಗುಹಾದೇವಾಲಯಗಳು ಈ ಕಾಲದಲ್ಲಿ ಸೃಜನಗೊಂಡುವು. ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಕಣ್ಣಿದ್ದವರು ವೇರೂಳದ (ಎಲ್ಲೋರಾ) ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ. ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತು ಬೆಳೆದು ನಿಂತವು. ಎಲ್ಲೋರ, ಐಹೊಳೆ, ಕಂಧಾರ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು ಜೈನ ಬಸದಿಗಳು, ಬೌದ್ಧಲೇಣಿಗಳು- ಹೀಗೆ ಹಲವು ಕಟ್ಟಡಗಳು ಗಮನಕ್ಕೆ ಬಂದಿವೆ. ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಮತ್ರ್ಯಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ಈ ದೇವಾಲಯಗಳು ಎರಡು ಅಂತಸ್ತಿನಿಂದ ಕೂಡಿದೆ. ಇದು ಪಟ್ಟದಕಲ್ಲಿನಲ್ಲಿರುವ ಲೋಕೇಶ್ವರ ದೇವಾಲಯದ ಪ್ರತಿರೂಪವೇನೊ ಎನ್ನುವಂತಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತಿದಂತಿದೆ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ಆ ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೀಗೆ ಆನಿಸಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಹೀಗೆ ಇಲ್ಲಿಯ ಜೈನ ಲೇಣಿಯೂ ಸುಂದರ ಸ್ತಂಭಗಳಿಂದ, ಇಂದ್ರಸಭೆ ಹಾಗೂ ಜಗನ್ನಾಥ ಸಭೆಗಳಿಂದ- ಅಲ್ಲಿನ ಇಂದ್ರ, ಇಂದ್ರಾಣಿ, ಶಾಂತಿನಾಥ ಹಾಗೂ ಪಾಶ್ರ್ವನಾಥ ತೀರ್ಥಂಕರರು, ಜಗನ್ನಾಥ ಸಭೆಯಲ್ಲಿನ ಮಹಾವೀರನ ಭವ್ಯಮೂರ್ತಿ ಇತ್ಯಾದಿಗಳಿಂದ ಚಿತ್ರವಿಚಿತ್ರ ಕೊರೆದ ಚಿತ್ರಗಳಿಂದ ನೋಡಲು ರಮಣೀಯವಾಗಿದೆ. ಇವಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಧಿಸಿವೆ.

ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ, ಈ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು; ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ಈ ತೋರಣಗಳನ್ನು ಕಟ್ಟಲಾಗಿದೆ. ದೇವಾಲಯಗಳ ಸಂಖ್ಯೆ ವಿಪುಲ. ಅದನ್ನು ಕಟ್ಟುವಲ್ಲಿ ಅನೇಕ ಬಗೆಯ ವಿನ್ಯಾಸಗಳನ್ನು ನಾವು ಕಾಣುತ್ತೇವೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು (ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು) ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು; ನಿಜಾಮಾಬಾದ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್‍ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು. ಜೈನಬದಿಗಳಲ್ಲಿ ಗರ್ಭಗೃಹಕ್ಕೆ ಅನಿಸಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು. ಬನವಾಸಿಯ ರಾಷ್ಟ್ರಕೂಟರು : 897ರಲ್ಲಿ ಬನವಾಸಿ ಮಂಡಲ ಸಂಪೂರ್ಣವಾಗಿ ಚೆಲ್ಲಕೇತನ ವಂಶದ ಅರಸರಿಗೆ ಸೇರಿತ್ತು. ಮುಂದೆ ಅದು 925-26ರಲ್ಲಿ ಬರೆಯಲಾದ ಲಕ್ಷ್ಮೀಪುರದ ಶಾಸನದಲ್ಲಿ (ಧಾರವಾಡ ಜಿಲ್ಲೆ) ಇಬ್ಭಾಗವಾದುದಾಗಿ ಕಂಡುಬರುತ್ತದೆ. ಒಂದು ಭಾಗವನ್ನು ಚೆಲ್ಲಕೇತನ ವಂಶದ ಇಮ್ಮಡಿ ಬಂಕೆಯನಿಗೂ ಇನ್ನೊಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಕೊಟ್ಟುದಾಗಿ ತಿಳಿದುಬಂದಿದೆ. ಈತನಿಗೆ ರಟ್ಟರ ಮೇರು, ಭುವನೈಕರಾಮ, ಜಯಧೀರ ಇತ್ಯಾದಿ ಬಿರುದುಗಳಿದ್ದವು. 964ರಲ್ಲಿ ಈತ ಕೊಪ್ಪಳದಲ್ಲಿ ಜಯಧೀರ ಜಿನಾಲಯವನ್ನು ಕಟ್ಟಿಸಿದ. ಕ್ಯಾಸನೂರು, ಲಕ್ಷ್ಮೀಪುರ, ಹಾವಣಗಿ, ಬಳ್ಳಾರಿ ಜಿಲ್ಲೆಯ ಒಂದು ಶಾಸನ ಮತ್ತು ಇಂದು ಆಂಧ್ರಪ್ರದೇಶದ ಕೊಲನುಪಾದಲ್ಲಿ (ಕೊಲ್ಲಿಪಾಕೆ) ದೊರೆತ ಮೂರು ಶಾಸನಗಳಿಂದ ಒಟ್ಟು ಸದ್ಯ ದೊರೆತ ಎಂಟು ಶಾಸನಗಳಿಂದ, ಈ ಶಾಖೆಯ ವಂಶಾವಳಿಯ ವಿವರ ಹೀಗಿದೆ: ಯಾದವ ವಂಶದ ಪಾಣರಾಜ, ಶಂಕರಗಂಡ, ಅಪ್ಪುವ ರಾಜನ್, ಶಂಖಪ್ಪಯ್ಯನ್, ಗೊಮ್ಮರಸ. ಒಂದನೆಯ ಅಸಗಮರಸ್, ಎರಡನೆಯ ಶಂಕರಗಂಡ, ಅನಂತರ ಸಿಂಗಣದೇವ, ಅಸಗಮರಸ ಮತ್ತು ಶಂಕರಗಂಡ, ಸಿಂಗಣದೇವ 1069ರಲ್ಲಿ ಉಚ್ಚಂಗಿ-30. ಸೂಳುಂಗಲ್-70 (ಚಿತ್ರದುರ್ಗ) ಮಂಡಲಿ-1000 ಮತ್ತು ನಾಲ್ಕುಭಕ್ತ ಗ್ರಾಮಗಳಿಗೆ ಅಧಿಪತಿಯಾಗಿದ್ದ. ಶಂಕರಗಂಡನು ಮೇಲ್ಕಾಣಿಸಿದ ಎಲ್ಲ ಬಿರುದುಗಳೊಂದಿಗೆ ಮಾವನ ಗಂಧವಾರಣ, ಕೊಳ್ಳಿಪಾಕೆಯ ಗೋವ ಮತ್ತು ಪೆಂಜೆ¿õÉ ಗೋವ ಮುಂತಾದ ಇನ್ನೂ ಕೆಲವು ವಿಶಿಷ್ಟ ಬಿರುದುಗಳನ್ನು ಧರಿಸಿದ್ದ.

ಸೌಂದತ್ತಿಯ ರಟ್ಟರು

ರಾಷ್ಟ್ರಕೂಟ ಸಾಮ್ರಾಜ್ಯದ ಪತನಾನಂತರ ಮತ್ತೆ ಅದು ತಲೆಯೆತ್ತಿ ಪೂರ್ವಸ್ಥಿತಿಯಲ್ಲಿ ಮೆರೆಯಲಿಲ್ಲ. ಆದರೆ ಆ ವಂಶದವರು ಅನೇಕ ಕಡೆ ಸಣ್ಣ ಪುಟ್ಟ ಮಾಂಡಲಿಕರಾಗಿ ಬದುಕಿದರು. ಇಂತಹ ಮನೆತನಗಳಲ್ಲಿ ಸುಗಂಧವರ್ತಿ (ಸೌಂದತ್ತಿ) ( ಸೌದತ್ತಿಯ ರಟ್ಟರದೂ ಒಂದು. ಇವರು ಕೊಂಡಿ-3000 ಪ್ರಾಂತ್ಯಕ್ಕೆ ಅಧಿಪತಿಗಳಾಗಿದ್ದರು. ಸುಗಂಧವರ್ತಿ ಇವರ ರಾಜಧಾನಿ. ಕಲ್ಯಾಣದ ಚಾಳುಕ್ಯರು, ಕಳಚುರಿಯರು ಮತ್ತು ಸೇವುಣ (ದೇವಗಿರಿಯಯಾದವ) ಚಕ್ರವರ್ತಿಗಳಿಗೆ ಇವರು ಮಾಂಡಲಿಕರಾಗಿದ್ದರು.

ಈ ಅರಸರಲ್ಲಿಯೂ ಕೆಲವರು ದೊಡ್ಡ ವಿದ್ವಾಂಸರು, ಕಲಾಕಾರರು ಆಗಿದ್ದರು. ಇವರು ಪೋಷಿಸಿದ ಪ್ರಸಿದ್ಧ ವ್ಯಕ್ತಿಗಳಲ್ಲಿ ಲೀಲಾವತಿ ಪ್ರಬಂಧ ಹಾಗೂ ನೇಮಿನಾಥ ಪುರಾಣ ಬರೆದ ಕನ್ನಡ ಕವಿ ನೇಮಿಚಂದ್ರನೂ ಒಬ್ಬ.

ಅಮರ್ದಕಪುರದ ರಾಷ್ಟ್ರಕೂಟರು

ಸೇವುಣರ ಐದನೆಯ ಭಿಲ್ಲಮನ ಕಾಲದ ನಾಂದೇಡ ಜಿಲ್ಲೆಯ ಅರ್ಧಾಪುರದಲ್ಲಿ ದೊರೆತ ಶಾಸನದಿಂದ ಇವರ ವಿವರಗಳನ್ನು ಮೊದಲ ಬಾರಿಗೆ ಬೆಳಕಿಗೆ ಬಂದವು. ಇವರ ಕಾಲ 1192. ರಟ್ಟಬಲ್ಲಾಳ ಭಿಲ್ಲಮನಿಗೆ ಮಾಂಡಲಿಕನಾಗಿದ್ದ. ದೇವಪಾಲ ಇವರ ಅಜ್ಜ ಹಾಗೂ ವಿಕ್ರಮಾರ್ಕ ಇವನ ತಂದೆ ಎಂದು ತಿಳಿದುಬಂದಿದೆ.

ರಟ್ಟಶಾಸ್ತ್ರದ ರಟ್ಟರು

ರಟ್ಟಮತ, ರಟ್ಟಶಾಸ್ತ್ರ ಎಂದು ಪ್ರಸಿದ್ಧವಾಗಿದ್ದು ಮಳೆಯ ಶಾಸ್ತ್ರವನ್ನು ಕುರಿತು ಬರೆದ ಕೃತಿಯಲ್ಲಿ ಅದರ ಕರ್ತೃ ಅರ್ಹದ್ವಾಸ (ಸು.1398) ಜಿನನಗರದಲ್ಲಿ ಇದ್ದು ರಾಜ್ಯವಾಳಿದ ರಟ್ಟಮನೆಯೊಂದರ ವಿವರಣೆಯನ್ನು ಕೊಟ್ಟಿದ್ದಾನೆ. ಇಮ್ಮಡಿ ಮಾರಸಿಂಹ (964) ಗಂಗದೊರೆಯ ಕಾಲಕ್ಕೆ ತಲಕಾಡು ಕೋಟೆಯನ್ನು ರಕ್ಷಿಸಿದ ಮಹಾವ್ಯಕ್ತಿ ಕಾಡಮರಸನೆಂಬ ರಟ್ಟ. ಈತನಿಂದ 19ನೆಯ ತಲೆಯ ವ್ಯಕ್ತಿ ಸುಕವಿ ನಿಧಾನ, ರಟ್ಟವೆಡಂಗ, ಅರ್ಹದ್ದಾಸ ಇತ್ಯಾದಿ ಬಿರುದುಗಳನ್ನು ಹೊಂದಿದ ಸೋಮನಾಥ. ಈತ ಶ್ರವಣಬೆಳಗೊಳದಲ್ಲಿಯ ಸಿದ್ಧರ ಬಸದಿಯ ಶಾಸನವೊಂದನ್ನು ಬರೆದಿದ್ದಾರೆ.

ಇತರರು

ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. 380-93) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. 790 ರಿಂದ 890 ವರೇಗೆ ಸುಮಾರು ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (814) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ.

ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. 1132)-ಇವು ಈ ವಂಶದ ಮೂವರು ರಾಜರ ಹೆಸರುಗಳು. ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. 8-9ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ 11,12ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ 11-13ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು.

8-9ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. 220-810) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. 911-35) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ 3ನೆಯ ವಿಗ್ರಹಪಾಲ (ಸು. 1055-81) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ.

ಇತಿಹಾಸ

ಕರ್ನಾಟಕದ ಇತಿಹಾಸ
 - 
 
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ
ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು
ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ಧ್ರುವ ಧಾರಾವರ್ಷ (780 - 793)
ಮುಮ್ಮಡಿ ಗೋವಿಂದ (793 - 814)
ಮೊದಲನೇ ಅಮೋಘವರ್ಷ (814 - 878)
ಇಮ್ಮಡಿ ಕೃಷ್ಣ (878 - 914)
ಮುಮ್ಮಡಿ ಇಂದ್ರ (914 -929)
ಇಮ್ಮಡಿ ಅಮೋಘವರ್ಷ (929 - 930)
ನಾಲ್ವಡಿ ಗೋವಿಂದ (930 – 936)
ಮುಮ್ಮಡಿ ಅಮೋಘವರ್ಷ (936 – 939)
ಮುಮ್ಮಡಿ ಕೃಷ್ಣ (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಇಮ್ಮಡಿ ಕರ್ಕ (972 – 973)
ನಾಲ್ವಡಿ ಇಂದ್ರ (973 – 982)
ಇಮ್ಮಡಿ ತೈಲಪ
(ಪಶ್ಚಿಮ ಚಾಲುಕ್ಯರು)
(973-997)

ಸಾಹಿತ್ಯ ಮತ್ತು ಸಂಸ್ಕೃತಿ

ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.

== ರಾಷ್ಟ್ರಕೂಟರ ಕೊಡಕೊಡುಗೆಗಳು

  1. ಆಡಳಿತ ವ್ಯವಸ್ಥೆ: ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು.
  2. ಆದಾಯ :ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖ

  1. "ಆರ್ಕೈವ್ ನಕಲು" (PDF). Archived from the original (PDF) on 2019-10-20. Retrieved 2019-10-24.
  2. http://indianhistorypr.blogspot.com/2011/03/blog-post_7591.html
  3. http://kn.vikaspedia.in/education/cb6c95ccdcb7ca3cbfc95-c85ca4ccdcafcc2ca4ccdca4cae-cb0cc2ca2cbfc97cb3cc1-caaca6ccdca7ca4cbfc97cb3cc1/cadcbecb0ca4ca6-c87ca4cbfcb9cbecb8ca6-caacb0cbfc9acafc97cb3cc1
  4. https://mympsc.com/Article.aspx?ArticleID=1465
  5. "ಆರ್ಕೈವ್ ನಕಲು" (PDF). Archived from the original (PDF) on 2019-10-20. Retrieved 2019-10-24.