ಚಾಲುಕ್ಯ
ಚಾಲುಕ್ಯ ರಾಜವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ.
ಬೆಳವಣಿಗೆ
ಬದಲಾಯಿಸಿಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ) ನಗರವನ್ನು ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ, ಮಹಾರಾಷ್ಟ್ರ , ಗೋವಾ, ಆಂಧ್ರಪ್ರದೇಶ, ತೆಲಂಗಾಣ ಅಲ್ಲದೆ ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಕೇರಳದ ಕೆಲಭಾಗಗಳಿಗು ವಿಸ್ತರಿಸಿದರು.
ಪುನರುತ್ಥಾನ ಮತ್ತು ಅವಸಾನ
ಬದಲಾಯಿಸಿಚಾಲುಕ್ಯ ಸಾಮ್ರಾಜ್ಯ ಮತ್ತೆ ಕ್ರಿ.ಶ. ೬೫೫ ರಲ್ಲಿ ಮೊದಲನೆಯ ವಿಕ್ರಮಾದಿತ್ಯನ ಮೂಲಕ ಮೇಲೆದ್ದಿತು. ಪಲ್ಲವರೊಂದಿಗಿನ ಸರಣಿ ಯುದ್ಧಗಳು ಕ್ರಿ.ಶ. ೭೪೦ ರಲ್ಲಿ ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯನ ವಿಜಯದೊಂದಿಗೆ ಕೊನೆಗೊಂಡವು. ಆದರೆ ಮತ್ತೆ ೭೫೦ ರಲ್ಲಿ ರಾಷ್ಟ್ರಕೂಟರ ಮೇಲೆ ಯುದ್ಧದಲ್ಲಿ ಸೋತ ನಂತರ ಆ ಕಾಲಕ್ಕೆ ಚಾಲುಕ್ಯ ಸಾಮ್ರಾಜ್ಯ ಪತನವಾಯಿತು.
೯೭೦ ರ ದಶಕದಲ್ಲಿ ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಗುಜರಾತ್ ಪ್ರದೇಶವನ್ನು ಬಿಟ್ಟು ಚಾಲುಕ್ಯ ಸಾಮ್ರಾಜ್ಯದ ಉಳಿದ ಭಾಗಗಳನ್ನೆಲ್ಲ ಹಿಂದಕ್ಕೆ ಪಡೆದನು. ಈತನ ರಾಜಧಾನಿ ಕಲ್ಯಾಣಿ, ಮತ್ತು ಈ ಕಾಲದ ಚಾಲುಕ್ಯ ವಂಶಕ್ಕೆ ಕಲ್ಯಾಣಿ ಚಾಲುಕ್ಯರು ಎಂದೂ ಸಹ ಹೆಸರು. ಈ ಬಾರಿ ಚಾಲುಕ್ಯರು ನಡುನಡುವೆ ಚೋಳ ಸಾಮ್ರಾಜ್ಯದ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮೊದಲನೆಯ ಸೋಮೇಶ್ವರ ಎಂಬ ಚಾಲುಕ್ಯ ಅರಸು (ಈತನಿಗೆ ಆಹವಮಲ್ಲ ಎಂದೂ ಹೆಸರು) ರಾಜಾಧಿರಾಜ ಚೋಳ ನನ್ನು ಕ್ರಿ.ಶ. ೧೦೫೨ ರಲ್ಲಿ ಸೋಲಿಸಿದನು. ಚಾಲುಕ್ಯ ವಂಶದ ಮುಂದಿನ ಪ್ರಸಿದ್ಧ ಅರಸು ಆರನೇ ವಿಕ್ರಮಾದಿತ್ಯ (ಕ್ರಿ.ಶ ೧೦೭೬-೧೧೨೬, ವಿಕ್ರಮಾಂಕ ಎಂದೂ ಹೆಸರು).
ವಿಕ್ರಮಾಂಕನ ಮರಣದ ನಂತರ ಚಾಲುಕ್ಯ ಸಾಮ್ರಾಜ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ೧೧೯೦ ರಲ್ಲಿ ದ್ವಾರಸಮುದ್ರದ ಹೊಯ್ಸಳರು ಮತ್ತು ಯದುಗಿರಿಯ ಯಾದವರು ಚಾಲುಕ್ಯ ವಂಶವನ್ನು ಸೋಲಿಸಿದರು.
ಐತಿಹ್ಯಗಳು
ಬದಲಾಯಿಸಿಕಲ್ಯಾಣದ ಚಾಲುಕ್ಯರ ರಾಜ ನಾಲ್ಕನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ವಿದ್ಯಾಪತಿ ಬಿಲ್ಹಣ, ತನ್ನ ಕೃತಿ ವಿಕ್ರಮಾಂಕದೇವ ಚರಿತದಲ್ಲಿ, ಈ ಕಥೆಯನ್ನು ಹೇಳುತ್ತಾನೆ. ಇಂದ್ರ ಜಗತ್ತಿನಲ್ಲೆಲ್ಲಾ ಹೆಚ್ಚುತ್ತಿದ್ದ ಅಧರ್ಮವನ್ನು ಹತ್ತಿಕ್ಕಿ ,ದುರುಳರನ್ನು ಸದೆಬಡಿಯಲು ಸಮರ್ಥನಾದ ವೀರನೊಬ್ಬನ್ನು ಸೃಷ್ಟಿಸುವಂತೆ ಬ್ರಹ್ಮನನ್ನು ಬೇಡಿಕೊಂಡ. ಇದಕ್ಕೊಪ್ಪಿದ ಬ್ರಹ್ಮ ಸಂಧ್ಯಾವಂದನೆ ಮಾಡುವಾಗ ಅವನ ಬೊಗಸೆಯಿಂದ (ಚುಲುಕ??) ವೀರನೊಬ್ಬ ಹೊರಬಂದ. ಅವನೇ ಚಾಲುಕ್ಯವಂಶದ ಮೂಲಪುರುಷ. ಇದೇ ವಂಶದಲ್ಲಿ ಮುಂದೆ ಆಗಿಹೋದ ಹರಿತ ಮತ್ತು ಮಾನವ್ಯ ಎಂಬ ಮಹಾವೀರರು ವಂಶದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದರು.ವೆಂಗಿಯ ಚಾಲುಕ್ಯರ ವಿಮಲಾದಿತ್ಯನ ಉಂಬಳಿ ರಾಮಸ್ತಿಪುಂಡಿಯಲ್ಲಿಯೂ ಇದೇ ಐತಿಹ್ಯವನ್ನು ಪ್ರಸ್ತಾಪಿಸಿ, ವಿವರಿಸಲಾಗಿದೆ.
ಇದೇ ಕಥೆಯ ಇನ್ನೊಂದು ಆವೃತ್ತಿ , ಆರನೆಯ ವಿಕ್ರಮಾದಿತ್ಯನ ಕಾಲದ ನಿಲಗುಂದ ದಾಖಲೆಯಲ್ಲಿದ್ದು, ಬಿಲ್ಹಣ ಇದನ್ನು ಪುನಃ ವಿವರಿಸುತ್ತಾನೆ. ಈ ಐತಿಹ್ಯದ ಪ್ರಕಾರ ಚಾಲುಕ್ಯರ ಪೂರ್ವಜರು ಅಯೋಧ್ಯೆಯವರೆಂದೂ, ಅಲ್ಲಿ ಐವತ್ತೊಂಭತ್ತು ತಲೆಮಾರು ರಾಜ್ಯವಾಳಿ, ನಂತರ ದಕ್ಷಿಣಾಪಥಕ್ಕೆ ಬಂದು ನೆಲೆಸಿ ಅಲ್ಲಿ ಹದಿನಾರು ತಲೆಮಾರು ರಾಜ್ಯಭಾರ ಮಾಡಿದರಂತೆ. ಅದರ ನಂತರ ಮರೆಯಾದ ಈ ಮನೆತನವನ್ನು ಪುನಃ ಮುಂದೆ ತಂದವನು ಜಯಸಿಂಹ. ಆರನೆಯ ವಿಕ್ರಮಾದಿತ್ಯನ ಹಂಡರಿಕೆ ಶಾಸನದ ಪ್ರಕಾರ , ಹರಿತಿಪಂಚಶಿಖಿ ಎಂಬ ಋಷಿಯು ಅರ್ಘ್ಯಪ್ರದಾನ ಮಾಡುತ್ತಿರುವಾಗ, ಅವನ ಬೊಗಸೆಯಿಂದ ಉತ್ಪತ್ತಿಯಾದವರು ಚಾಲುಕ್ಯರು. ಅಷ್ಟೇ ಅಲ್ಲ, ಚಾಲುಕ್ಯರು ತಮ್ಮನ್ನು ಸಪ್ತಮಾತೃಕೆಯರು ಸಲಹಿದರು ಎಂದೂ ಹೇಳಿಕೊಳ್ಳುತ್ತಾರೆ.
ಚಾಲುಕ್ಯ ಇತಿಹಾಸದ ಮೂರು ಕಾಲಮಾನಗಳು
ಬದಲಾಯಿಸಿಚಾಲುಕ್ಯರು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ೬೦೦ ವರ್ಷಗಳಷ್ಟು ದೀರ್ಘ ಕಾಲ ಆಳಿದರು. ಈ ಅವಧಿಯಲ್ಲಿ ಮೂರು, ಸ್ವತಂತ್ರ ಆದರೆ ನಿಕಟ ಸಂಬಂಧದ, ರಾಜ್ಯಗಳಾಗಿ ಮೆರೆದಿದ್ದವು. ಇವು ಬಾದಾಮಿಯ ಚಾಲುಕ್ಯರು, (ಕ್ರಿ.ಶ. ೬ - ೮ನೆಯ ಶತಮಾನ) ಮತ್ತು ಅವರದೇ ಸೋದರ ಸಾಮ್ರಾಜ್ಯಗಳಾದ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರು ಮತ್ತು ವೆಂಗಿಯ (ಪೂರ್ವ) ಚಾಲುಕ್ಯರು
ಬಾದಾಮಿಯ ಚಾಲುಕ್ಯರು
ಬದಲಾಯಿಸಿಚಾಲುಕ್ಯ ಸಾಮ್ರಾಜ್ಯವನ್ನು ಕಟ್ಟಿದವನು ಒಂದನೆಯ ಪುಲಿಕೇಶಿ (ಕ್ರಿ.ಶ. ೫೫೦). ವಾತಾಪಿ ( ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಈಗಿನ ಬಾದಾಮಿ) ಯನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಈ ಚಾಲುಕ್ಯರು ಮುಂದೆ ಬಾದಾಮಿಯ ಚಾಲುಕ್ಯರು ಎಂದು ಪ್ರಸಿದ್ಧರಾದರು. ಪುಲಿಕೇಶಿ ಹಾಗೂ ಆತನ ವಂಶಸ್ಥರು ಆಳಿದ ರಾಜ್ಯ ಇಂದಿನ ಸಂಪೂರ್ಣ ಕರ್ನಾಟಕ ರಾಜ್ಯ,ಮಹಾರಾಷ್ಟ್ರ,ಗೋವಾ ,ಮಧ್ಯಪ್ರದೇಶ ,ಗುಜರಾತ್ ಮತ್ತು ಆಂಧ್ರ ಪ್ರದೇಶದ ಬಹುತೇಕ ಭಾಗಗಳನ್ನೊಳಗೊಂಡಿತ್ತು. ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯರ ಅತಿ ದೊಡ್ಡ ಚಕ್ರವರ್ತಿ ಎನ್ನಲು ಅಡ್ಡಿಯಿಲ್ಲ.
- ಒಂದನೆಯ ಪುಲಿಕೇಶಿ (ಕ್ರಿ.ಶ. ೫೪೩ – ೫೬೬ )
- ಒಂದನೆಯ ಕೀರ್ತಿವರ್ಮ (ಕ್ರಿ.ಶ. ೫೬ ೬ – ೫೯೭ )
- ಮಂಗಳೇಶ (ಕ್ರಿ.ಶ. ೫೯ ೭ – ೬ ೦೯ )
- ಇಮ್ಮಡಿ ಪುಲಿಕೇಶಿ (ಕ್ರಿ.ಶ. ೬ ೦೯ – ೬ ೪೨ )
- ಒಂದನೆಯ ವಿಕ್ರಮಾದಿತ್ಯ (ಕ್ರಿ.ಶ. ೬ ೫೫ – ೬ ೮೦ )
- ವಿನಯಾದಿತ್ಯ (ಕ್ರಿ.ಶ. ೬ ೮೦ – ೬ ೯ ೬ )
- ವಿಜಯಾದಿತ್ಯ (ಕ್ರಿ.ಶ. ೬ ೯ ೬ – ೭೩೩ )
- ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩ – ೭೪೬ )
- ಎರಡನೆಯ ಕೀರ್ತಿವರ್ಮ (ಕ್ರಿ.ಶ. ೭೪೬ – ೭೫೩ )
ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.
ಕಲ್ಯಾಣಿಯ ಚಾಲುಕ್ಯರು
ಬದಲಾಯಿಸಿರಾಷ್ಟ್ರಕೂಟರ ಕಾಲದಲ್ಲಿ ಹಿಮ್ಮೆಟ್ಟಿದ ಚಾಲುಕ್ಯ ಸಾಮ್ರಾಜ್ಯ ,ಎರಡನೆಯ ತೈಲಪನು ರಾಷ್ಟ್ರಕೂಟರ ಮೂರನೆಯ ಕೃಷ್ಣನನ್ನು ಪದಚ್ಯುತಮಾಡಿ , ಚಾಲುಕ್ಯ ರಾಜ್ಯದ ಬಹುತೇಕ ಪ್ರದೇಶಗಳನ್ನು ಮತ್ತೆ ಕೈವಶಮಾಡಿಕೊಳ್ಳುವುದರೊಂದಿಗೆ, ತನ್ನ ವೈಭವವನ್ನು ಮರಳಿ ಪಡೆಯಿತು. ಚಾಲುಕ್ಯರ ಈ ಶಾಖೆ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರೆಂದು ಹೆಸರಾಯಿತು. ಮುಂದೆ ಸುಮಾರು ೨೫೦ ವರ್ಷ ಆಳಿದ ಈ ರಾಜವಂಶವು , ಚೋಳರೊಂದಿಗೂ , ವೆಂಗಿಯ ಚಾಲುಕ್ಯರೊಂದಿಗೂ ನಿರಂತರ ಹೋರಾಟದಲ್ಲಿ ತೊಡಗಿತ್ತು. ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮), ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮) ಮತ್ತು ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬ – ೧೧೨೬ ) ಈ ವಂಶದ ಕೆಲವು ಪ್ರಸಿದ್ಧ ರಾಜರುಗಳು.
- ಎರಡನೆಯ ತೈಲಪ (ಕ್ರಿ.ಶ. ೯ ೭೩-೯ ೯ ೭ )
- ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮)
- ಐದನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೦೮-೧೦೧೫)
- ಎರಡನೆಯ ಜಯಸಿಂಹ (ಕ್ರಿ.ಶ. ೧೦೧೫-೧೦೪೨)
- ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮)
- ಎರಡನೆಯ ಸೋಮೇಶ್ವರ (ಕ್ರಿ.ಶ. ೧೦೬ ೮-೧೦೭೬ )
- ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬ – ೧೧೨೬ )
- ಮೂರನೆಯ ಸೋಮೇಶ್ವರ (ಕ್ರಿ.ಶ. ೧೧೨೬ – ೧೧೩೮)
- ಎರಡನೆಯ ಜಗದೇಕಮಲ್ಲ (ಕ್ರಿ.ಶ. ೧೧೩೮ – ೧೧೫೧ )
- ಮೂರನೆಯ ತೈಲಪ (ಕ್ರಿ.ಶ. ೧೧೫೧ – ೧೧೬ ೪ )
- ಮೂರನೆಯ ಜಗದೇಕಮಲ್ಲ (ಕ್ರಿ.ಶ. ೧೧೬ ೩ – ೧೧೮೩)
- ನಾಲ್ಕನೆಯ ಸೋಮೇಶ್ವರ (ಕ್ರಿ.ಶ. ೧೧೮೪ – ೧೨೦೦)
ಹೊಯ್ಸಳರು, ಕಾಕತೀಯರು ಮತ್ತು ಯಾದವರು ಈ ರಾಜಮನೆತನಗಳ ಉತ್ಕರ್ಷದೊಂದಿಗೆ ,೧೧೮೦ರಲ್ಲಿ, ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯವು ಅಸ್ತಂಗತವಾಯಿತು.
ವೆಂಗಿಯ (ಪೂರ್ವ) ಚಾಲುಕ್ಯರು
ಬದಲಾಯಿಸಿಇಂದಿನ ಆಂಧ್ರ ಪ್ರದೇಶದ ಕರಾವಳಿಯ ಭಾಗವಾಗಿದ್ದ , ವಿಷ್ಣುಕುಂಡಿನ ಸಾಮ್ರಾಜ್ಯದ ಅಳಿದುಳಿದ ಭಾಗಗಳನ್ನು ಸೋಲಿಸಿ, ಇಮ್ಮಡಿ ಪುಲಿಕೇಶಿಯು , ಅಲ್ಲಿಗೆ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಪುಲಿಕೇಶಿಯ ಮರಣದ ನಂತರ , ಈ ಶಾಖೆಯು ಸ್ವತಂತ್ರವಾಗಿ, ಮುಖ್ಯ ವಾತಾಪಿ ಸಾಮ್ರಾಜ್ಯಕ್ಕಿಂತ ಮುಂದೆ ,ಅನೇಕ ಪೀಳಿಗೆಗಳವರೆಗೆ ಸ್ವತಂತ್ರ ರಾಜ್ಯಭಾರ ಮಾಡಿತು. ಈ ರಾಜರು ೯ ನೆಯ ಶತಮಾನದ ಮಧ್ಯದವರೆಗೂ , ವೆಂಗಿ ಪ್ರಾಂತ್ಯದಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟರು. ಅಲ್ಲಿಂದ ಮುಂದಿನ ಶಾಸನಗಳಲ್ಲಿ ಕ್ರಮೇಣ ಕನ್ನಡಲಿಪಿಯಲ್ಲಿ ಬರೆದ ತೆಲುಗು ಭಾಷೆ ಕಾಣಬರುತ್ತದೆ.
- ಕುಬ್ಜ ವಿಷ್ಣುವರ್ಧನ (ಕ್ರಿ.ಶ. ೬೨೪ – ೬೪೧ )
- ಒಂದನೆಯ ಜಯಸಿಂಹ (ಕ್ರಿ.ಶ. ೬೪೧-೬೭೩)
- ಇಂದ್ರ ಭಟ್ಟಾರಕ (ಕ್ರಿ.ಶ. ೬೭೩)
- ಎರಡನೆಯ ವಿಷ್ಣುವರ್ಧನ (ಕ್ರಿ.ಶ.೬೭೩-೬೮೨)
- ಮಂಗಿ ಯುವರಾಜ (ಕ್ರಿ.ಶ.೬೮೨ – ೭೦೬ )
- ಎರಡನೆಯ ಜಯಸಿಂಹ (ಕ್ರಿ.ಶ.೭೦೬ -೭೧೮)
- ಮೂರನೆಯ ವಿಷ್ಣುವರ್ಧನ (ಕ್ರಿ.ಶ.೭೧೯ -೭೫೫)
- ಒಂದನೆಯ ವಿಜಯಾದಿತ್ಯ (ಕ್ರಿ.ಶ.೭೫೫ – ೭೭೨)
- ನಾಲ್ಕನೆಯ ವಿಷ್ಣುವರ್ಧನ (ಕ್ರಿ.ಶ.೭೭೨ – ೮೦೮)
- ಎರಡನೆಯ ವಿಜಯಾದಿತ್ಯ (ಕ್ರಿ.ಶ.೮೦೮ – ೮೪೭)
- ಐದನೆಯ ವಿಷ್ಣುವರ್ಧನ (ಕ್ರಿ.ಶ.೮೪೭ – ೮೪೯)
- ಮೂರನೆಯ ವಿಜಯಾದಿತ್ಯ (ಕ್ರಿ.ಶ.೮೪೮ – ೮೯೨)
- ಒಂದನೆಯ ಭೀಮ (ಕ್ರಿ.ಶ. ೮೯ ೨-೯೨೧)
- ನಾಲ್ಕನೆಯ ವಿಜಯಾದಿತ್ಯ (ಕ್ರಿ.ಶ.೯೨೧)
- ಒಂದನೆಯ ಅಮ್ಮ (ಕ್ರಿ.ಶ.೯೨೧ – ೯೨೭)
- ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ.೯೨೭ – ೯೨೮ .)
- ಎರಡನೆಯ ಯುದ್ಧಮಲ್ಲ (ಕ್ರಿ.ಶ.೯೨೮ – ೯೩೫ .)
- ಎರಡನೆಯ ಚಾಲುಕ್ಯ ಭೀಮ (ಕ್ರಿ.ಶ.೯೩೫ – ೯೪೭ .)
- ಎರಡನೆಯ ಅಮ್ಮ (ಕ್ರಿ.ಶ.೯೪೭ – ೯೭೦ .)
- ದಾನಮವ (ಕ್ರಿ.ಶ.೯೭೦ – ೯೭೩ .)
- ಜಟ ಚೋಡ ಭೀಮ (ಕ್ರಿ.ಶ.೯೭೩ - ೧೦೦೦).
- ಒಂದನೆಯ ಶಕ್ತಿವರ್ಮ (ಕ್ರಿ.ಶ.೧೦೦೦ - ೧೦೧೧ .
- ವಿಮಲಾದಿತ್ಯ (ಕ್ರಿ.ಶ.೧೦೧೧ – ೧೦೧೮ )
- ರಾಜರಾಜ ನರೇಂದ್ರ (ಕ್ರಿ.ಶ.೧೦೧೮ – ೧೦೬೧)
- ಎರಡನೆಯ ಶಕ್ತಿವರ್ಮ
- ಏಳನೆಯ ವಿಜಯಾದಿತ್ಯ (ಕ್ರಿ.ಶ.೧೦೬೩ – ೧೦೬೮. , ೧೦೭೨ – ೧೦೭೫ .)
ಲಾಟ ಚಾಲುಕ್ಯರು
ಬದಲಾಯಿಸಿಸೋಲಂಕಿಗಳು (ಪಶ್ಚಿಮ ) ಚಾಲುಕ್ಯರು
ಬದಲಾಯಿಸಿಚಾಲುಕ್ಯರ ಮೂಲ
ಬದಲಾಯಿಸಿಚಾಲುಕ್ಯರ ಮೂಲದ ಬಗ್ಯೆ ಅನೇಕ ಅಭಿಪ್ರಾಯಗಳಿದ್ದರೂ ಅವರು ಕರ್ನಾಟಕದವರು ಎಂಬ ಬಗ್ಯೆ ಸಾಕಷ್ಟು ಒಮ್ಮತವಿದೆ. ಚಾಲುಕ್ಯರ ಶಾಸನಗಳ ಭಾಷೆ ಕನ್ನಡ ಮತ್ತು ಸಂಸ್ಕೃತ. ಕೆಲವು ಚಾಲುಕ್ಯ ದೊರೆಗಳ ಹೆಸರು ಅಂತ್ಯವಾಗುವುದು ‘ಅರಸ’ ಎಂಬ ಕನ್ನಡ ಶಬ್ದದಿಂದ. ರಾಷ್ಟ್ರಕೂಟರ ಶಾಸನಗಳಲ್ಲಿ ಬಾದಾಮಿಯ ಚಾಲುಕ್ಯರನ್ನು ‘ಕರ್ನಾಟಕ ಬಲ’ ಎಂದು ಸಂಭೋದಿಸಲಾಗಿದೆ. ಅವರ ಪ್ರಕಾರ, ಚಾಲುಕ್ಯರು, ಬನವಾಸಿಯ ಕದಂಬರ ಪೀಳಿಗೆಯವರೋ ಅಥವಾ ಸಂಬಂಧಿಕರೋ ಆಗಿದ್ದರು. ಬನವಾಸಿಯ ಕದಂಬರ ಅಧೀನದಲ್ಲಿದ್ದ ಪ್ರದೇಶಗಳು ಮುಂದೆ ಚಾಲುಕ್ಯರ ವಶವಾದವು. ಮಂಗಳೇಶನ ಪ್ರಸಿದ್ಧ ಬಾದಾಮಿ ಗುಹಾ ಶಾಸನಗಳು ( ಕ್ರಿ.ಶ ೫೭೮) , ಅವನದೇ ಆದ ಮಹಾಕೂಟದ ಕಂಬದ ಮೇಲಿನ ಬರವಣಿಗೆ (ಕ್ರಿ.ಶ ೬೦೨) ಮತ್ತು ಕ್ರಿ.ಶ ೭೦೦ರ ಕಪ್ಪೆ ಅರಭಟ್ಟನ ಕನ್ನಡದಲ್ಲಿಯ ದಾಖಲೆಗಳು ಚಾಲುಕ್ಯರ ಭಾಷೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಬಾದಾಮಿ ಕೋಡಿನ ಒಂದನೆಯ ಪುಲಿಕೇಶಿಯ ಕ್ರಿ.ಶ ೫೪೩ರ ಮೊಟ್ಟಮೊದಲ ಶಾಸನ ಮತ್ತು ಎರಡನೆಯ ಪುಲಿಕೇಶಿಯ ಐಹೊಳೆಯ ಶಾಸನ (ಕ್ರಿ.ಶ ೬೩೪) ಕನ್ನಡಲಿಪಿಯಲ್ಲಿರುವ ಸಂಸ್ಕೃತ ಶಾಸನಗಳ ಉದಾಹರಣೆಗಳಾಗಿವೆ.
ಐಹೊಳೆಯ ಶಾಸನ ಪುಲಿಕೇಶಿಯನ್ನು ೯೯,೦೦೦ ಗ್ರಾಮಗಳ ಮೂರು ಮಹಾರಾಷ್ಟ್ರಗಳ ಅಧಿಪತಿ ಎಂದು ವರ್ಣಿಸುತ್ತದೆ. ಪುಲಿಕೇಶಿ ಆ ಮೂರು ಮಹಾರಾಷ್ಟ್ರಗಳ ಅಧಿಪತಿ ಆಗಿದ್ದು ಉತ್ತರ ಭಾರತದ ಅರಸ ಹರ್ಷವರ್ಧನನ್ನು ಸೋಲಿಸಿದ ನಂತರ.
ಬಾದಾಮಿ ಚಾಲುಕ್ಯರ ಕೊಡುಗೆಗಳು
ಬದಲಾಯಿಸಿವಾಸ್ತುಶಿಲ್ಪ ಮತ್ತು ಕಲೆ ಚಾಲುಕ್ಯ ಸಾಮ್ರಾಜ್ಯದ ಶಾಶ್ವತ ಕೊಡುಗೆಗಳು. ಪಟ್ಟದಕಲ್ಲು (|UNESCO heritage site), ಬಾದಾಮಿ,ಐಹೊಳೆಗಳಲ್ಲಿನ ಬಂಡೆಗಳಲ್ಲಿ ಕಡೆದ ದೇವಾಲಯಗಳು, ಅಜಂತಾ, ಎಲ್ಲೋರಾಗಳಲ್ಲಿನ ಸುಪ್ರಸಿದ್ಧ ಶಿಲ್ಪಕೃತಿಗಳು ಮತ್ತು ಭಿತ್ತಿಚಿತ್ರಗಳು ಚಾಲುಕ್ಯರ ಕಲಾಭಿರುಚಿಗೆ ಸಾಕ್ಷಿಯಾಗಿವೆ. ಈ ಕಾಲವನ್ನು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಆರಂಭಕಾಲವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಶ. ೪೫೦ - ೭೫೦ ರ ನಡುವೆ ಬರಿಯ ಐಹೊಳೆ ಒಂದರಲ್ಲಿಯೇ ನೂರೈವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ಕಟ್ಟಿಸಿದರು. ಈ ಆರಂಭ ಕಾಲದ ಕಲೆಯ ಉದಾಹರಣೆಯಾಗಿ ಐಹೊಳೆಯ ದುರ್ಗಾ (ಕ್ರಿ.ಶ.೬ ನೆಯ ಶತಮಾನ),ಲಾಡ್ ಖಾನ್ (ಕ್ರಿ.ಶ. ೪೫೦),ಮೇಗುತಿ (ಕ್ರಿ.ಶ.೬೩೪),ಹುಚ್ಚಿಮಲ್ಲಿ ಮತ್ತು ಹುಚ್ಚಪ್ಪಯ್ಯ (ಕ್ರಿ.ಶ. ೫ನೆಯ ಶತಮಾನ) ದೇವಾಲಯಗಳು, ಬಾದಾಮಿಯ ಗುಹಾ ದೇವಾಲಯಗಳನ್ನು ನೋಡಬಹುದು.ಪಟ್ಟದಕಲ್ಲಿನ ಅದ್ಭುತ ದೇವಾಲಯಗಳನ್ನು ಕಟ್ಟಿಸಿದವನು ಎರಡನೆಯ ವಿಕ್ರಮಾದಿತ್ಯ. (ಕ್ರಿ.ಶ.೭೪೦) ಇಲ್ಲಿನ ವಿರೂಪಾಕ್ಷ,ಮಲ್ಲಿಕಾರ್ಜುನ,ಸಂಗಮೇಶ್ವರ ಮತ್ತು ಒಂದು ಜೈನ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದರೆ, ಜಂಬುಲಿಂಗ,ಕಾಶಿವಿಶ್ವೇಶ್ವರ ಮತ್ತು ಗಳಗನಾಥ ದೇವಾಲಯಗಳು ಉತ್ತರ ಭಾರತೀಯ ನಾಗರ ಶೈಲಿಯಲ್ಲಿವೆ.ಪಾಪನಾಥ ದೇವಾಲಯದಲ್ಲಿ ದಕ್ಷಿಣ ಮತ್ತು ಉತ್ತರದ ಶೈಲಿಗಳ ಸಮ್ಮಿಶ್ರಣದ ಪ್ರಯತ್ನ ಕಾಣುತ್ತದೆ.
ಕಲ್ಯಾಣಿ ಚಾಲುಕ್ಯರ ಕಾಲದ ಕಲೆ ಮತ್ತು ಸಾಹಿತ್ಯ
ಬದಲಾಯಿಸಿಕನ್ನಡ ಸಾಹಿತ್ಯ
ರನ್ನನಂತಹ ಶ್ರೇಷ್ಠ ಕನ್ನಡ ಕವಿಗಳಿಗೆ ಕಲ್ಯಾಣಿಯ ಚಾಲುಕ್ಯರು ಆಶ್ರಯ ಮತ್ತು ಪ್ರೋತ್ಸಾಹ ಕೊಟ್ಟರು. ರನ್ನನು ಎರಡನೆಯ ತೈಲಪನ ಮತ್ತು ಸತ್ಯಾಶ್ರಯನ ಆಸ್ಥಾನಕವಿಯಾಗಿದ್ದು, ಕಲ್ಯಾಣಿಯ ಚಾಲುಕ್ಯರ ಕಾಲದ ಮೊದಲ ಕವಿ. ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ, ಪರಶುರಾಮಚರಿತ ಮತ್ತು ರನ್ನಕಂದ ಇವನ ಪ್ರಸಿದ್ಧ ಕೃತಿಗಳು.. ಆ ಕಾಲದಲ್ಲಿ ಇನ್ನೂ ಅನೇಕ ಕನ್ನಡ ವಿದ್ವಾಂಸರು ಆಗಿಹೋದರು. ಅವರಲ್ಲಿ ಕೆಲವರು, ಶೃಂಗಾರಶಾಸ್ತ್ರದ ಬಗೆಗಿನ ಮದನತಿಲಕ ಎಂಬ ಕೃತಿ ರಚಿಸಿದ ಚಂದ್ರರಾಜ, ಜಾತಕತಿಲಕ ( ಜ್ಯೋತಿಶ್ಶಾಸ್ತ್ರ) ಬರೆದ ಶ್ರೀಧರಾಚಾರ್ಯ, ಗೋವೈದ್ಯ ( ಪಶುವೈದ್ಯ ಶಾಸ್ತ್ರ) ಬರೆದ ಕೀರ್ತಿವರ್ಮ, ನಯಸೇನ (ಧರ್ಮಾಮೃತ), ನಾಗವರ್ಮ(ಕಾವ್ಯಾವಲೋಕನ) , ಬ್ರಹ್ಮಶಿವ (ಸಮಯಪರೀಕ್ಷೆ) , ರಾಜಾದಿತ್ಯ (ಕ್ಷೇತ್ರ ಗಣಿತ,ವ್ಯವಹಾರ ಗಣಿತ, ಲೀಲಾವತಿ) , ಜಗದ್ದಾಲ ಸೋಮನಾಥ (ಕರ್ನಾಟಕ ಕಲ್ಯಾಣಕಾರಕ - ಔಷಧಗಳ ಬಗ್ಯೆ). ವಚನಗಳನ್ನು ಬರೆದು ಪ್ರಸಿದ್ಧನಾದ ದೇವರ ದಾಸಿಮಯ್ಯರೂ ಹಾಗೂ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರು ಈ ಕಾಲದವರೇ. ಅಷ್ಟೇ ಏಕೆ, ಮಂತ್ರಿಯಾಗಿದ್ದ ದುರ್ಗಸಿಂಹ (ಪಂಚತಂತ್ರ) ಹಾಗೂ ದಂಡನಾಯಕ ಎರಡನೆಯ ಚಾವುಂಡರಾಯ (ಲೋಕೋಪಕಾರ) ಸಹ ಸಾಹಿತ್ಯ ಕೃತಿಗಳನ್ನು ರಚಿಸಿದರು. ಇದು ಕನ್ನಡ ಸಾಹಿತ್ಯದ ಸುವರ್ಣ ಕಾಲವಾಗಿತ್ತು.
ಸಂಸ್ಕೃತ ಸಾಹಿತ್ಯ
ಕಲ್ಯಾಣಿಯ ಚಾಲುಕ್ಯರು ವಾದಿರಾಜ ( ಯಶೋಧರ ಚರಿತಮ್, ಪಾರ್ಶ್ವನಾಥ ಚರಿತಮ್)ರಂತಹ ಸಂಸ್ಕೃತ ವಿದ್ವಾಂಸರಿಗೆ ಪ್ರೋತ್ಸಾಹ ಕೊಟ್ಟರು. ತನಗೆ ಆಶ್ರಯ ಕೊಟ್ಟ ಆರನೆಯ ವಿಕ್ರಮಾದಿತ್ಯನನ್ನು ಬಿಲ್ಹಣನು ವಿಕ್ರಮಾಂಕದೇವ ಚರಿತೆಯ ಮೂಲಕ ಅಜರಾಮರವಾಗಿಸಿದ್ದಾನೆ. ಸುಪ್ರಸಿದ್ಧ ಮಿತಾಕ್ಷರ ಸಂಹಿತೆ ಬರೆದವನು ವಿಜ್ಞಾನೇಶ್ವರ(ಮರತೂರು). ಸ್ವತಃ ಮೂರನೆಯ ಸೋಮೇಶ್ವರನೇ ಕಲೆ ಮತ್ತು ವಿಜ್ಞಾನದ ಬಗೆಗೆ ವಿಶ್ವಕೋಶವನ್ನು ರಚಿಸಿದನು. ಜಗದೇಕಮಲ್ಲನು ಸಂಗೀತಚೂಡಾಮಣಿಯನ್ನು ರಚಿಸಿದನು.
ವಾಸ್ತು ಶಿಲ್ಪ
ಬದಲಾಯಿಸಿಬಳ್ಳಾರಿ, ಧಾರವಾಡ ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಕಂಡುಬರುವ ಉತ್ತರಾರ್ಧ ಚಾಲುಕ್ಯ ಶೈಲಿಯ ಕಟ್ಟಡಗಳು ಚಾಲುಕ್ಯರ ಪೂರ್ವಾರ್ಧದ ಶೈಲಿಗೂ, ಹೊಯ್ಸಳರ ಶೈಲಿಗೂ ಮಧ್ಯದ ಕೊಂಡಿಯಾಗಿವೆ. ದಕ್ಷಿಣದಲ್ಲಿ ನೂರಾರು, ಅದರಲ್ಲಿ ಅರ್ಧಕ್ಕೂ ಹೆಚ್ಚು ಕರ್ನಾಟಕದಲ್ಲಿ, ಕಟ್ಟಲ್ಪಟ್ಟ ದೇವಾಲಯಗಳೊಂದಿಗೆ ೧೨ನೆಯ ಶತಮಾನದಲ್ಲಿ ಕಲ್ಯಾಣಿ ಶೈಲಿಯ ವಾಸ್ತುಶಿಲ್ಪ ತನ್ನ ಉತ್ತುಂಗ ಸ್ಥಿತಿಯನ್ನು ಮುಟ್ಟಿತು. ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪದ ಮತ್ತೊಂದು ವೈಶಿಷ್ಟ್ಯವೆಂದರೆ , ಬಹು ಮಜಲಿನ ಸೋಪಾನಗಳ ಪುಷ್ಕರಣಿಗಳು. ಗದಗ ಜಿಲ್ಲೆಯ ಲಕ್ಕುಂಡಿಯ ಕಾಶಿವಿಶ್ವೇಶ್ವರ, ದಾವಣಗೆರೆ ಜಿಲ್ಲೆಯ ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಕೊಪ್ಪಳ ಜಿಲ್ಲೆಯ ಮಹಾದೇವ ದೇವಾಲಯಗಳು ಚಾಲುಕ್ಯರ ಉತ್ತರಾರ್ಧ ವಾಸ್ತುಶಿಲ್ಪ ಶೈಲಿಯ ಉತ್ಕೃಷ್ಟ ಉದಾಹರಣೆಗಳಾಗಿವೆ. ಅದರಲ್ಲಿಯೂ ಮಹಾದೇವ ದೇವಾಲಯವು , ತನ್ನ ಬೃಹದಾಕಾರ ಮತ್ತು ಸೂಕ್ಷ್ಮ ವಿವರಗಳಿಂದ , ಭಾರತದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಹೇಳಲಾಗಿದೆ.ಗೋಡೆಯ, ಕಂಬದ ಹಾಗೂ ಗೋಪುರಗಳ ಮೇಲಿನ ಕೆತ್ತನೆಗಳು ಚಾಲುಕ್ಯರ ಅತ್ಯುನ್ನತ ಮಟ್ಟದ ಕಲಾಭಿರುಚಿ ಹಾಗೂ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಅಲ್ಲಿಯ ಕ್ರಿ.ಶ. ೧೧೧೨ರ ಶಾಸನವೊಂದು ಆ ದೇವಾಲಯವನ್ನು ಆರನೆಯ ವಿಕ್ರಮಾದಿತ್ಯನ ದಂಡನಾಯಕ ಮಹದೇವನು ಕಟ್ಟಿಸುತ್ತಿದ್ದಾನೆಂದು ವಿವರಿಸಿ, ಅದು ದೇವಾಲಯಗಳಲ್ಲೇ ಚಕ್ರವರ್ತಿ ಎಂದು ಬಣ್ಣಿಸುತ್ತದೆ. ಹೊಯ್ಸಳರ ರಾಜರು ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿಗೆ ಬೇಲೂರಿನಲ್ಲಿನ ಸುಪ್ರಸಿದ್ಧ ದೇವಾಲಯ ಕಟ್ಟಲು ಹೇಳಿದಾಗ, ಆತ ಮಹಾದೇವ ದೇವಾಲಯಕ್ಕೆ ದರ್ಶನವಿತ್ತು ಪ್ರೇರಣೆ ಪಡೆದುಕೊಂಡ ಎಂದು ಒಂದು ಐತಿಹ್ಯವಿದೆ. ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪವು ಸೂಕ್ಷ್ಮ ಕುಸುರಿ ಕೆಲಸದ ಕಂಬಗಳು , ಮತ್ತು ಪುಷ್ಕರಣಿ (ಕಲ್ಯಾಣಿ)ಗೆ ಒತ್ತು ಕೊಟ್ಟಿದೆ.
ಕಲ್ಯಾಣಿಯ ಚಾಲುಕ್ಯರು ಕರ್ನಾಟಕದ ಧಾರವಾಡ, ಗದಗ ಮತ್ತು ಹಾವೇರಿ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿದರು. ಬಾದಾಮಿ, ಐಹೊಳೆಗಳಲ್ಲಿಯೂ, ದೇವಾಲಯ ನಿರ್ಮಾಣದ ಎರಡನೆಯ ಹಂತದ ಕಾರ್ಯದಲ್ಲಿ , ಮಲ್ಲಿಕಾರ್ಜುನ ಮತ್ತು ಯಲ್ಲಮ್ಮ ಮೊದಲಾದ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಗದಗ ವಾಸ್ತುಶಿಲ್ಪ ಶೈಲಿ ಎಂದೇ ಹೆಸರಾದ ಹೊಸ ಶೈಲಿಯೊಂದು ಈ ಕಾಲದಲ್ಲಿ ಅಭಿವೃದ್ಧಿಯಾಯಿತು. ಇದು ದಕ್ಷಿಣ ( ದ್ರಾವಿಡ) ಮತ್ತು ಉತ್ತರ ( ನಾಗರ) ಶೈಲಿಯ ಸಮ್ಮಿಶ್ರಣವಾಗಿದ್ದು ವೇಸರ ಶೈಲಿಯದಾಗಿದೆ ಎನ್ನಲಾಗುತ್ತದೆ.
ಡಾ. ಜ್ಯೋತ್ಸ್ನಾ ಕಾಮತರು ಹೇಳುತ್ತಾರೆ “ ಕರ್ನಾಟಕದ ಇತಿಹಾಸದಲ್ಲಿ , ಚಾಲುಕ್ಯರ ಕಾಲವನ್ನು ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ರಾಜ್ಯವಿಸ್ತಾರ ಅಷ್ಟೇ ಅಲ್ಲದೆ, ಈ ಕಾಲವು ದಕ್ಷ ಆಡಳಿತ ಕ್ರಮ, ಸಾಮಾಜಿಕ ಸುರಕ್ಷತೆ, ವಿದ್ಯಾಪ್ರಸಾರ , ಇತರ ಸಾಂಸ್ಕೃತಿಕ ಚಟುವಟಿಕೆಗಳು, ವ್ಯಾಪಾರ , ವಾಣಿಜ್ಯಗಳಲ್ಲಿ ವಿಕಾಸ , ಸಾಹಿತ್ಯ, ಕಲೆಮತ್ತು ವಾಸ್ತುಶಿಲ್ಪಗಳಲ್ಲಿ ಅಭಿವೃದ್ಧಿ ಇವುಗಳನ್ನೂ ಪ್ರತಿನಿಧಿಸುತ್ತದೆ. ಈ ಕಾಲವು ಸಾಮಾಜಿಕ ಸುಧಾರಣೆಗಳಿಗೂ ಇಂಬು ಕೊಟ್ಟು ಬಸವೇಶ್ವರರಂತಹ ವಿಶಿಷ್ಟ ಸುಧಾರಕರಿಂದ ವೀರಶೈವಪಂಥದ ಹುಟ್ಟಿಗೂ ಕಾರಣವಾಯಿತು"
ಪ್ರತಿ ವರ್ಷ ಕರ್ನಾಟಕ ಸರ್ಕಾರವು ಪಟ್ಟದಕಲ್ಲು , ಬಾದಾಮಿ,ಐಹೊಳೆಗಳಲ್ಲಿ ಮೂರು ದಿನಗಳ ಚಾಲುಕ್ಯ ಉತ್ಸವ ಎಂಬ ಸಂಗೀತ, ನೃತ್ಯ ಕಾರ್ಯಕ್ರಮವನ್ನು ನಡೆಸುತ್ತದೆ. ಅರವತ್ತರ ದಶಕದಲ್ಲಿ ತಯಾರಾದ ಇಮ್ಮಡಿ ಪುಲಿಕೇಶಿ ಚಲನಚಿತ್ರವು ಆ ಮಹಾನ್ ರಾಜನ ಜೀವನ ,ಸಾಧನೆಗಳನ್ನು ಕೊಂಡಾಡುತ್ತದೆ.
ಇವನ್ನೂ ನೋಡಿ
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- ಚಾಲುಕ್ಯರ ಕಲೆ
- ಕಲ್ಯಾಣಿ ಚಾಲುಕ್ಯರು Archived 2012-02-24 ವೇಬ್ಯಾಕ್ ಮೆಷಿನ್ ನಲ್ಲಿ.