(ಕಾಲ ಸು. 1170.) ನು ೧೨ನೆಯ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಜೈನ ಕವಿ. ಜೈನ ಪಂಡಿತ ಕವಿ. ಲೀಲಾವತೀ ಮಹಾ ಪ್ರಬಂಧಂ ಮತ್ತು ನೇಮಿನಾಥ ಪುರಣಂ ಎಂಬ ಎರಡು ಚಂಪೂ ಕಾವ್ಯಗಳ ಕರ್ತೃ.

ಕಾಲ ಬದಲಾಯಿಸಿ

ಈತ ಲೀಲಾವತಿ ಕಾವ್ಯದಲ್ಲಿ ಸೌಂದತ್ತಿಯ ರಟ್ಟವಂಶದ ಒಂದನೆಯ ಲಕ್ಷ್ಮಣರಾಜ (ಸು. ೧೧೭೦ರ) ಮತ್ತು ಚಂದಲದೇವಿಯರನ್ನು ಕೊಂಡಾಡಿರುವುದರಿಂದ ಕವಿ ಆ ಕಾಲದವನೇ ಅಗಿರಬೇಕು. ಅಲ್ಲದೆ ಈತ ತನ್ನ ಇನ್ನೊಂದು ಕೃತಿಯಾದ ನೇಮಿನಾಥ ಪುರಾಣದಲ್ಲಿ ವೀರಬಲ್ಲಾಳನ (೧೧೭೩-೧೨೨೦) ಮಂತ್ರಿ ಸಜ್ಜೆವಳ್ಳ ಪದ್ಮನಾಭನನ್ನು ಹೊಗಳಿ ಈತನ ಆಶ್ರಯದಲ್ಲಿದ್ದಂತೆ ಹೇಳಿಕೊಂಡಿದ್ದಾನೆ. ಮಂತ್ರಿ ಸೆಜ್ಜೆವಳ್ಳ ಪದ್ಮನಾಭ. ಕವಿ ನೇಮಿಚಂದ್ರ, ವೀರಬಲ್ಲಾಳ, ಸೌಂದತ್ತಿಯ ರಟ್ಟರಾಜ ಲಕ್ಷ್ಮಣ ರಾಜ-ಇವರೆಲ್ಲ ಸಮಕಾಲೀನರು. ಆದ್ದರಿಂದ ನೇಮಿಚಂದ್ರ ಸು. ೧೧೭೦ರ ವೇಳೆಯಲ್ಲಿ ಲಕ್ಷ್ಮಣರಾಜನ ಆಶ್ರಿತನಾಗಿದ್ದುಕೊಂಡು ತನ್ನ ಮಹಾಪ್ರೌಢ ಕಾವ್ಯವಾದ ಲೀಲಾವತೀ ಪ್ರಬಂಧವನ್ನೂ ವೀರಬಲ್ಲಾಳ ೧೧೮೯ರಲ್ಲಿ ಚಕ್ರವರ್ತಿಯೆಂಬ ಬಿರುದು ಧರಿಸಿದ ಮೇಲೆ ಅವನ ಸಜ್ಜೆವಳ್ಳನಾದ ಪದ್ಮನಾಭನ ಆಶ್ರಯದಲ್ಲಿದ್ದು ನೇಮಿನಾಥ ಪುರಾಣವನ್ನೂ ರಚಿಸಿದನೆಂದು ತಿಳಿಯಬಹುದು. ನೇಮಿಚಂದ್ರ ತನಗಿಂತ ಮುಂಚೆ ಕೃತಿರಚನೆ ಮಾಡಿದ ಯಾವ ಕನ್ನಡ ಕವಿಯನ್ನೂ ಸ್ಮರಿಸಿಲ್ಲ. ಮಧುರ ಕವಿ ನೇಮಿಚಂದ್ರನನ್ನು ಹೊಗಳುತ್ತ "ನೇಮಿಜನ್ನರಿರ್ವರ ಕರ್ಣಾಟಕೃತಿಗೆ ಸೀಮಾ ಪುರುಷರ್ "ಎಂದು ನುಡಿದಿದ್ದಾನೆ.

ಕೃತಿಗಳು ಬದಲಾಯಿಸಿ

ಲೀಲಾವತೀ ಪ್ರಬಂಧ ಬದಲಾಯಿಸಿ

ಲೀಲಾವತೀ ಪ್ರಬಂಧ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂಕಾವ್ಯ. ಇದನ್ನು ಒಂದೇ ವರ್ಷದಲ್ಲಿ ಬರೆದು ಮುಗಿಸಿ ಕಾವ್ಯದಲ್ಲಿ ಶೃಂಗಾರವನ್ನು ಸೆರೆಹಿಡಿದಿಟ್ಟಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಅದ್ದರಿಂದಲೇ ಈತನಿಗೆ "'ಶೃಂಗಾರಕಾರಾಗೃಹ"' ಎಂಬ ಬಿರುದು. ಈ ಕಾವ್ಯದಲ್ಲಿ ಕಥೆ ಬಹಳ ಸ್ವಲ್ಪ. ವರ್ಣನೆಯೇ ಅಪಾರ. ಕಂದರ್ಪದೇವನೆಂಬ ಒಬ್ಬ ರಾಜಕುಮಾರ ಒಂದು ರಾತ್ರಿ ಕನಸಿನಲ್ಲಿ ಮಹಾಸುಂದರಿಯಾದ ತರುಣಿಯೊಬ್ಬಳನ್ನು ಕಂಡು ಅವಳನ್ನು ಮೆಚ್ಚಿ ಮೋಹಿಸಿದ. ಮಾರನೆಯ ದಿನ ಬೆಳಗ್ಗೆ ತನ್ನ ಕನಸಿನ ಸುಂದರಿ ಎಲ್ಲಿರುವಳೋ ಎಂದು ಹುಡುಕಲು ನಿರ್ಧರಿಸಿದ. ತನ್ನ ಸ್ನೇಹಿತನಾದ ಮಂತ್ರಿಪುತ್ರ ಮಕರಂದವನ್ನೂ ಜತೆಯಲ್ಲಿ ಕರೆದುಕೊಂಡು ಪ್ರಯಾಣ ಹೊರಟ. ಕುಸುಮಪುರದ ಅರಸ ಶೃಂಗಾರಶೇಖರನ ಮಗಳು ಲೀಲಾವತಿ ತನ್ನ ಕನಸಿನಲ್ಲಿ ಸುಂದರ ಪುರುಷನೊಬ್ಬನನ್ನು ಕಂಡು ಮೋಹಿಸಿ ಅವನನ್ನು ಹುಡುಕಲು ಜನರನ್ನು ಅಟ್ಟಿದಳು. ಕೊನೆಗೆ ಇವರಿಬ್ಬರೂ ಸಂಧಿಸಿ ಪರಸ್ಪರ ಒಲಿದು ಮದುವೆಯಾದರು. ಕಂದರ್ಪದೇವ ಲೀಲಾವತೀ ಸಮೇತನಾಗಿ ಬನವಾಸಿಗೆ ಬಂದು ಸುಖವಾಗಿ ರಾಜ್ಯವಳಿದ. ಈ ಕಥೆಯ ಹಂದರದ ಮೇಲೆ ಕವಿ ಅನೇಕ ಸನ್ನಿವೇಶಗಳನ್ನು ಸೃಷ್ಟಿಸಿ ಶೃಂಗಾರರಸ ಪ್ರತಿಪಾದನೆಗೆ ಬೇಕಾದಷ್ಟು ಅವಕಾಶವನ್ನು ಕಲ್ಪಿಸಿ ಕೊಂಡಿದ್ದಾನೆ. ಸ್ವಪ್ನ ಸಂದರ್ಶನದಿಂದಲೇ ಮನಸ್ಸಿನಲ್ಲಿ ಮೊಳೆತೆ ಮೆಚ್ಚಿಗೆಯ ಮೋಹಬಲಿತು ಪ್ರೇಮಿಗಳು ಪರಸ್ಪರ ಸಂದರ್ಶನಕ್ಕೆ ಹಂಬಲಿಸಿ ಅನ್ವೇಷಣೆ ನಡೆಸಿದ ವೃತ್ತಾಂತ. ನಾಯಕ ನಾಯಕಿಯರ ಪರಸ್ಪರ ಸಂದರ್ಶನ. ಸಮ್ಮೋಹ ಸಮಾಗಮಗಳ ಕಥೆ ಶೃಂಗಾರರಸ ಪ್ರತಿಪಾದನೆಗೆ ಹಲವು ಸಂದರ್ಭಗಳನ್ನು ಒದಗಿಸಿದೆ. ಅದರೆ ಕವಿ ಪ್ರೇಮಿಗಳ ಮನೋವೃತ್ತಿಯ ನಾನಾ ಅವಸ್ಥೆಗಳನ್ನು ಬಣ್ಣಿಸುವ ಭರದಲ್ಲಿ ಅನೇಕ ಕಡೆ ಲಜ್ಜೆ. ಸಂಕೋಚ ಮತ್ತು ಗಾಂಭೀರ್ಯಗಳನ್ನು ಮರೆತಿದ್ದಾನೆ. ಈತನ ಒಲವು ಆಂಗಿಕ ಶೃಂಗಾರ ನಿರೂಪಣೆಯ ಕಡೆಗೇ ಇದೆಯೆಂದು ಹೇಳಿದರೆ ತಪ್ಪಾಗಲಾರದು. ಲೀಲಾವತೀ ಪ್ರಬಂಧ ಬಹಳ ಮಟ್ಟಿಗೆ ಸುಬಂಧು ಕವಿಯ ವಾಸವದತ್ತಾ ಎಂಬ ಕಥೆಯನ್ನು ಹೋಲುತ್ತದೆ. ಅದರ ಅಧಾರದ ಮೇಲೆಯೇ ನೇಮಿಚಂದ್ರ ಈ ಕೃತಿಯನ್ನು ಕಟ್ಟಿರುವಂತೆ ತೋರುತ್ತದೆ. ಕವಿ ಕಥೆಯಲ್ಲಿ ಒಂದೆರಡು ಮಾರ್ಪಾಟುಗಳನ್ನು ಮಾಡಿದ್ದಾನೆ. ಪಾತ್ರಗಳ ಹೆಸರುಗಳನ್ನು ಕೆಲವು ಕಡೆ ವ್ಯತ್ಯಾಸ ಮಾಡಿದ್ದಾನೆ. ಅಲ್ಲದೆ ಸುಬಂಧುವಿನ ಕೃತಿಯಲ್ಲಿ ಇಲ್ಲದ ಜೈನಮತದ ಆವರಣವನ್ನು ಕಲ್ಪಿಸಿದ್ದಾನೆ.

ನೇಮಿನಾಥ ಪುರಾಣ ಬದಲಾಯಿಸಿ

ಈತನ ಇನ್ನೊಂದು ಕಾವ್ಯ ನೇಮಿನಾಥ ಪುರಾಣ. ಇದು ಇಪ್ಪತ್ತರಡನೆಯ ತೀರ್ಥಂಕರನಾದ ನೇಮಿಜಿನೇಶ್ವರನ ಪುಣ್ಯಚರಿತ್ರೆ. ಇದನ್ನು ಸಜ್ಜೆವಳ್ಳ ಪದ್ಮನಾಭನ ಪ್ರಾರ್ಥನೆಗನುಸಾರವಾಗಿ ಕವಿ ತನ್ನ ಪರಿಣತ ವಯಸ್ಸಿನಲ್ಲಿ ಬರೆದ. ಲೀಲಾವತೀಯಂತೆ ಇದೂ ಚಂಪೂ ಕಾವ್ಯ. ನೇಮಿಜಿನೇಶ್ವರನ ಕಾಲದಲ್ಲಿಯೇ ಮಹಾಭಾರತ ವೃತ್ತಾಂತ ನಡೆದಂತೆ ಜಿನ ಪುರಾಣಗಳಲ್ಲಿ ಹೇಳಿವೆ. ಈ ಕಾವ್ಯದಲ್ಲಿ ಕೌರವ ಪಾಂಡವರ ಕಥೆ, ಶ್ರೀಕೃಷ್ಣ ಚರಿತ್ರೆ ಮತ್ತು ನೇಮಿಜಿನೇಶ್ವರನ ಕಥೆ-ಈ ಮೂರನ್ನೂ ಸೇರಿಸಿ ಹೇಳಲು ಹೊರಟ ಕವಿ ಕೃಷ್ಣ ಕಂಸನನ್ನು ಕೊಂದ ವೃತ್ತಾಂತವನ್ನು ಹೇಳಿ ಮುಗಿಸುವ ವೇಳೆಗೆ ಕಾವ್ಯ ನಿಂತು ಹೋಗಿದೆ. ಇದರಲ್ಲಿ ಈತ ಹೇಳಬಯಸಿದ ಮೂರು ಕಥೆಗಳಲ್ಲಿ ಯಾವುದೂ ಪೂರ್ಣವಾಗಿಲ್ಲ. ಆ ಕಾರಣದಿಂದಲೇ ಈ ಕೃತ್ತಿಗೆ ಅರ್ಧನೆ ಮಿಪುರಾಣವೆಂಬ ಹೆಸರು ಪ್ರಚಾರದಲ್ಲಿದೆ. ಇದರಲ್ಲಿ ಎಂಟು ಆಶ್ವಾಸಗಳು ಮಾತ್ರ ಇದ್ದು ಸೂಕ್ತಿ ಸುಧಾರ್ಣವ, ಕಾವ್ಯಸಾರ ಎಂಬ ಸಂಕಲನ ಗ್ರಂಥಗಳಲ್ಲಿ ಉದಾಹರಿಸಿರುವ ನೇಮಿನಾಥ ಪುರಾಣದ ಪದ್ಯಗಳೆಲ್ಲ ಈ ಎಂಟು ಆಶ್ವಾಸಗಳೊಳಗಿನವೇ ಆಗಿವೆ. ಆದ್ದರಿಂದ ಬಹುಶಃ ನೇಮಿಚಂದ್ರ ಈ ಕೃತಿಯನ್ನು ಪೂರ್ಣ ಮಾಡದೆಯೇ ಗತಿಸಿರಬಹುದೆಂದು ತೋರುತ್ತದೆ.

ಸಾಧಾರಣವಾಗಿ ಜೈನ ಪುರಾಣಗಳಲ್ಲಿ ಕಥಾನಾಯಕನ ಪೂರ್ವಜನ್ಮಗಳ ಕಥೆಗಳು ಬರುತ್ತವೆ. ಅನೇಕ ವೇಳೆ ಈ ಭವಾಳಿಯ ಕಥನ ಬಹಳ ದೀರ್ಘವಾಗಿರುವುದೂ ಉಂಟು. ಅರ್ಧನೇಮಿಯಲ್ಲಿ ಈ ಭಾಗ ಬಹಳ ಸಂಕ್ಷೇಪವೂ ರಮ್ಯವೂ ಅಗಿದೆ. ವಿಂಧ್ಯಕವಾಗುರೆಯರ ವೃತ್ತಾಂತ. ಇಭ್ಯಕೇತುವಿನ ಕಥೆ-ಇವು ನೇಮಿಚಂದ್ರನಿಗೆ ಆಧಾರವಾದ ಜಿನಸೇನ ಗುಣಭದ್ರರ ಕೃತಿಯಲ್ಲಿಯೂ ಕಾಣಿಸುವುದಿಲ್ಲ. ನೇಮಿಚಂದ್ರ ಮೂಲಕಥೆಯನ್ನು ಸಂಗ್ರಹಿಸಿ ಹೇಳುತ್ತ ಕೆಲವು ಹೊಸ ಕಥೆಗಳನ್ನೂ ಸೇರಿಸಿದ್ದಾನೆ. ಇವನ್ನು ಕವಿ ಬೇರೆ ಯಾವ ಗ್ರಂಥದಿಂದ ಅರಿಸಿಕೊಂಡನೋ ತಿಳಿಯದು.

ನೇಮಿನಾಥ ಪುರಾಣದಲ್ಲಿ ಹಲವಾರು ಕಥೆಗಳನ್ನು ಜೋಡಿಸಿರುವುದರಿಂದ ಇಲ್ಲಿ ವಸ್ತುವಿನಲ್ಲಿ ಐಕ್ಯವಿಲ್ಲ; ಕಥಾರಚನೆಯಲ್ಲಿ ಏಕಸೂತ್ರತೆ ಇಲ್ಲ. ಅದರೆ ಈತ ಹೇಳಿರುವ ಬಿಡಿಕಥೆಗಳು, ವರ್ಣಿಸಿರುವ ಹಲವು ಸನ್ನಿವೇಶಗಳು ಬಹಳ ಸುಂದರವಾಗಿವೆ. ಈತ ಅವನ್ನು ಜೋಡಿಸಿರುವುದರಲ್ಲಿ ತನ್ನ ಕಲಾವಂತಿಕೆಯನ್ನು ತೋರಿಸಿದ್ದಾನೆ. ಶ್ರೀಕೃಷ್ಣನ ವಿಶ್ವರೂಪ ಸಂದರ್ಶನ ವೃತ್ತಾಂತವನ್ನು ಪಂಪ ಬಹಳ ಸೂಕ್ಷ್ಮವಾಗಿ ಹೇಳಿ ಮುಗಿಸಿದ್ದರೆ ನೇಮೀಚಂದ್ರ ಅದನ್ನು ವಾಮನಾವತಾರ ಕಥೆಯಲ್ಲಿ ವಿಸ್ತಾರವಾಗಿ ಹೇಳಿದ್ದಾನೆ. ಭೀಮ ಜರಾಸುಧರ ಯುದ್ಧ, ಭೀಮ-ಕೀಚಕರ ಮಲ್ಲಯುದ್ಧದ ವರ್ಣನೆ, ಚಾಣೂರ ಕೃಷ್ಣರ ಮಲ್ಲ ಯುದ್ಧ-ಈ ಸನ್ನಿವೇಶಗಳ ನಿರೂಪಣೆಯಲ್ಲಿ ಕವಿ ತನ್ನ ಪಾಂಡಿತ್ಯವನ್ನು ಮರೆತು ಕವಿತಾಪ್ರತಿಭೆಯನ್ನೇ ಮರೆದಿದ್ದಾನೆ. ಇವು ಮಾತಿನಲ್ಲಿ ಮೂಡಿಬಂದ ಉತ್ತಮ ವರ್ಣಚಿತ್ರಗಳಂತೆ ಶೋಭಿಸುತ್ತವೆ.ನೇಮಿಚಂದ್ರ ಈ ಕೃತಿಯಲ್ಲಿ ತನ್ನ ಮೃದುಪಾದ ಬಂಧುರತೆಯನ್ನು ತಕ್ಕಮಟ್ಟಿಗೆ ತೋರಿದ್ದಾನೆ. ಕನ್ನಡ ಕವಿಗಳು ನೇಮಿನಾಥ ಪುರಾಣವನ್ನು ಹಾರ್ದಿಕವಾಗಿ ಮೆಚ್ಚಿಕೊಂಡು ರಸೋರಸಾಯನಮೋ ಕೃತಿವಸಂತಮೋ ಕಿವಿಗಳ್ಗಮೃತಮೋ ಎಂದು ಬಹುವಾಗಿ ಹೊಗಳಿದ್ದಾರೆ.

ಬಿರುದುಗಳು ಬದಲಾಯಿಸಿ

ಈತ ಬಹು ಆತ್ಮಾಭಿಮಾನದ ಕವಿ. ಈತ ಧರಿಸಿದ ಬಿರುದುಗಳಿಗೆ ಲೆಕ್ಕವಿಲ್ಲ. ಭಾರತೀ ಚಿತ್ರಚೋರ, ಸಾಹಿತ್ಯ ವಿದ್ಯಾಧರ, ಚತುರ್ಭಾಷಾ ಚಕ್ರವರ್ತಿ, ಕವಿರಾಜ ಕುಂಜರ, ಸುಕರಕವಿಶೇಖರ, ಕವಿರಾಜಮಲ್ಲ, ಕವಿಧವಳ-ಎಂಬೀ ಹೆಸರುಗಳೇ ಕವಿಗೆ ಪಾಂಡಿತ್ಯದ ಪ್ರತಿಭೆಯ ಹೆಮ್ಮೆ ವಿಶೇಷವಾಗಿದ್ದಿತೆಂಬುದನ್ನು ಸೂಚಿಸುತ್ತವೆ. ಈತ ತನ್ನ ಕವಿತೆಯ ಮೇಲ್ಮೆಯನ್ನೂ ಪಾಂಡಿತ್ಯ ಪ್ರತಾಪವನ್ನೂ ಯಾವ ಬಗೆಯ ಸಂಕೋಚವೂ ಇಲ್ಲದೆ ಹೊಗಳಿಕೊಂಡಿದ್ದಾನೆ.

ನೇಮಿಚಂದ್ರ ಮಹಾಪಾಂಡಿತ. ಈತನಿಗೆ ಸಂಸ್ಕøತ, ಪ್ರಾಕೃತ ಮತ್ತು ಕನ್ನಡಗಳಲ್ಲಿ ಅಳವಾದ ಪಾಂಡಿತ್ಯವಿತ್ತು. ಕನ್ನಡ ಭಾಷೆ ಈತನಿಗೆ ವಶವಾಗಿತ್ತು. ಈತನ ಭಾಷಾ ಪ್ರಭುತ್ವ ಯಾರನ್ನಾದರೂ ಬೆರಗುಗೊಳಿಸುತ್ತದೆ. ಈತನ ಶಬ್ಧಭಂಡಾರ ವಿಪುಲವಾದದ್ದು. ನಿಘಂಟುಗಳಲ್ಲಿ ದೊರೆಯದ ಅನೇಕ ಅಪರೂಪ ಶಬ್ದಗಳು ಈತನ ಕೃತಿಯಲ್ಲಿ ಹೇರಳವಾಗಿವೆ.ಪಾಂಡಿತ್ಯ, ಪ್ರತಿಭೆ, ಶೈಲಿ, ವರ್ಣನಾನೈಪುಣ್ಯ. ಅಭಿರುಚಿ, ಕಥನಕೌಶಲ-ಎಲ್ಲವನ್ನೂ ಗಮನಿಸಿದರೆ ಇವನನ್ನು ಪಂಪ, ಕುಮಾರವ್ಯಾಸರ ಅಗ್ರಪಂಕ್ತಿಗೆ ಸೇರಿಸಲಾಗದಿದ್ದರೂ ದ್ವಿತೀಯ ಸ್ತರದ ಕವಿಗಳ ಸಾಲಿನಲ್ಲಿ ಸೇರಿಸಬಹುದಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಕನ್ನಡ ಕವಿ