ಪಂಪ (ಕ್ರಿ.ಶ. (902-955 CE) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು.

[] ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪನ ಎರಡು ಮೇರು ಕೃತಿಗಳು.

ಹಿನ್ನೆಲೆ

ಬದಲಾಯಿಸಿ
  • ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ.
  • ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು.[] ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ.
  • ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ.
  • ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ.
  • ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು.
  • ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ.
  • ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ.
  • ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ.
  • ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ.
  • ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ.
  • ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ.
  • ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು.

ಕೃತಿಗಳು

ಬದಲಾಯಿಸಿ

ಬನವಾಸಿ ವರ್ಣನೆಯ ಪದ್ಯ

ಬದಲಾಯಿಸಿ

ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು

ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ-
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ-
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ)

ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ-
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ (ಉತ್ಪಲಮಾಲೆ)

ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ-
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ-
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ (ಉತ್ಪಲಮಾಲೆ)

ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.[] ಗದ್ಯಾನುವಾದ []

ಹೊರಗಿನ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2022-10-09. Retrieved 2020-03-26.
  2. ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭
  3. https://www.kendasampige.com/ಈ-ಭೋಗದ-ಜಗತ್ತೇ-ಬೇರೆ-ಆದಿಪುರ/
  4. ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ ಪದ್ಯ ೪೩-೫೨
  5. name="ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ">"ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ".
"https://kn.wikipedia.org/w/index.php?title=ಪಂಪ&oldid=1251198" ಇಂದ ಪಡೆಯಲ್ಪಟ್ಟಿದೆ