ಬಾಹುಬಲಿ ಅಥವಾ ಗೊಮ್ಮಟೇಶ್ವರ, ಜೈನ ಧರ್ಮದಲ್ಲಿ ಮೂಡಿ ಬರುವ ಪ್ರಸಿದ್ಧ ಹೆಸರು. ಶ್ರವಣಬೆಳಗೊಳದಲ್ಲಿ ಚಾಮುಂಡರಾಯ ಕೆತ್ತಿಸಿದ ೫೮ ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆ ಇರುವುದು. ಸುಮಾರು ೧೨ ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ. ಗೊಮ್ಮಟೇಶ್ವರ- ಆದಿ ತೀರ್ಥಂಕರನಾದ ವೃಷಭನಾಥನ (ಪುರುದೇವ) ಕಿರಿಯ ಮಗ. ದೋರ್ಬಲಿ, ಬಾಹುಬಲಿ, ಕುಕ್ಕಟೇಶ್ವರ-ಇವು ಬಾಹುಬಲಿಗೆ ಇರುವ ಪರ್ಯಾಯನಾಮಗಳು.

ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ
ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿರುವ ಭರತನ ಪ್ರತಿಮೆ. ಹಿನ್ನೆಲೆಯಲ್ಲಿ ಇಂದ್ರಗಿರಿ.

ಹಿನ್ನೆಲೆ

ಬದಲಾಯಿಸಿ

ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಥಂಕರರು ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಹೆಸರಿನ ಇಬ್ಬರು ಪತ್ನಿಯರು. ನಂದಾ ನೂರು ಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಹೆಣ್ಣು ಮಕ್ಕಳಿಗೆ ಜನ್ಮವೀಯುತ್ತಾಳೆ. ಬಾಹುಬಲಿಯು ಸುನಂದೆಯ ಮಗ. ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು.

ಪ್ರಥಮ ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು.

ಬಾಹುಬಲಿಯು ತ೦ದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ ದೂತರಿಗೆ ಹೇಳಿಕಳಿಸಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ಮಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆ ಬಂದು ನಿಂತಿತು.

ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉಂಟಾಗಿ ರಾಜ್ಯವನ್ನು ತೊರೆದು ತಂದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.

ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು.

ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.

ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಬಾಹುಬಲಿಯ ಬೃಹತ್ ವಿಗ್ರಹಗಳು ಕಾಣಲುಸಿಗುತ್ತದೆ. ಶ್ರವಣಬೆಳಗೊಳ, ಧರ್ಮಸ್ಥಳ, ವೇಣೂರು, ಕಾರ್ಕಳ, ಮೈಸೂರು ಬಳಿಯ ಗೋಮಟಗಿರಿಯಲ್ಲಿ ಬಾಹುಬಲಿಯ ಬೃಹತ್ ವಿಗ್ರಹಗಳಿವೆ. ಪ್ರತಿಯೊಂದಕ್ಕೂ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರುತ್ತದೆ. ಆದರೆ ಉಳಿದೆಲ್ಲ ವಿಗ್ರಹಗಳಿಗೆ ಹೋಲಿಸಿದರೆ ಚಿಕ್ಕದಾಗಿರುವ, ಮೈಸೂರಿನ ಗೋಮಟಗಿರಿಯ ಬಾಹುಬಲಿ ಸ್ವಾಮಿಗೆ ಪ್ರತಿ ವರ್ಷವೂ ಮಸ್ತಕಾಭಿಷೇಕ ನಡೆಯುತ್ತದೆ.

ಸಾಹಿತ್ಯದಲ್ಲಿ ಬಾಹುಬಲಿ

ಬದಲಾಯಿಸಿ

ಬೊಪ್ಪಣ ಕವಿ ಬಾಹುಬಲಿಯ ಗುಣಾತಿಶಯಗಳನ್ನು ಹೀಗೆ ಹೊಗಳಿದ್ದಾನೆ:

 ಅನುಪಮ ರೂಪನೇ ಸ್ಮರನುದಗ್ರನೇ
ನಿರ್ಜಿತಚಕ್ರಿ ಮತ್ತುದಾ

ರನೆ ನೆರೆಗೆಲ್ದು ಮಿತ್ತ ನಖಿಲೋರ್ವಿಯ
ನತ್ಯಭಿಮಾನಿಯೇ ತಪಃ

ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದ
ಪುದೆಂಬನನೂನಬೋಧನೇ

ವಿನಿಹತಕರ್ಮಬಂಧನೆನೆ ಬಾಹುಬಲೀಶ
ನಿದೇನುದಾತ್ತನೋ

ವೈರಾಗ್ಯನಿಧಿಯಾಗಿ ಪ್ರತಿಮಾಯೋಗದಲ್ಲಿ ತಪಸ್ಸಿಗೆ ನಿಂತು ಮುಕ್ತಿಯನ್ನು ಸಾಧಿಸಿದ ಬಾಹುಬಲಿಯ ಪ್ರತಿಮೆ ಪಂಚಪರ ಮೇಷ್ಠಿಗಳ ಪ್ರತಿಮೆಯಂತೆ ಪೂಜನೀಯವಾಗಿದೆ. ಬಾಹುಬಲಿಯ ಪೂಜೆ ದಕ್ಷಿಣ ದೇಶದಲ್ಲಿ ಬಹುಕಾಲದಿಂದ ನಡೆಯುತ್ತ ಬಂದಿದೆ. ಸ್ವಯಂ ಭರತನೇ ಬಾಹುಬಲಿಯ 525 ಧನುಷ್ಯ ಎತ್ತದ ಮೂರ್ತಿಯನ್ನು ಸ್ಥಾಪಿಸಿದನೆಂಬ ಆಖ್ಯಾನಕವಿದೆ. ಬಾಹುಬಲಿಯ ಪ್ರತಿಮೆಗಳು ಬಾದಾಮಿ ಮೊದಲಾದ ಸ್ಥಳಗಳಲ್ಲಿ ದೊರೆಯುತ್ತದೆ.

ಶ್ರವಣಬೆಳಗೊಳ

ಬದಲಾಯಿಸಿ

ಬೆಂಗಳೂರಿನಿಂದ ಸುಮಾರು 160 ಕಿ.ಮೀ. ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ. ಅಂತರದಲ್ಲಿ [ಹಾಸನ] ಜಿಲ್ಲೆಯ [ಚೆನ್ನರಾಯಪಟ್ಟಣ] ತಾಲ್ಲೂಕಿನಲ್ಲಿ ಶ್ರವಣಬೆಳ್ಗೊಳವೆಂಬ ಪ್ರಸಿದ್ಧ ಜೈನ ತೀರ್ಥಕ್ಷೇತ್ರವಿದೆ. ಅಲ್ಲಿಯ ಶಿಲಾಲೇಖಗಳ ಮೇಲಿಂದ ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನ ಸಂಗಡ ಅಲ್ಲಿಗೆ ಬಂದು ಸಲ್ಲೇಖನ ವ್ರತವನ್ನು ಹಿಡಿದು ಮರಣವನ್ನು ಅಪ್ಪಿದನೆಂದು ತಿಳಿದುಬರುತ್ತದೆ. ಊರು ಚಿಕ್ಕದು. ಒಂದು ಪ್ರಶಾಂತವಾದ ಸರೋವರ ಸಮೀಪದಲ್ಲಿದೆ. ಎರಡೂ ಕಡೆ ವಿಂಧ್ಯಗಿರಿ (ದೊಡ್ಡ ಬೆಟ್ಟ) ಮತ್ತು ಚಂದ್ರಗಿರಿ (ಚಿಕ್ಕಬೆಟ್ಟ) ಎಂಬ ಎರಡು ಕಲ್ಲಿನ ದಿಬ್ಬಗಳಿವೆ. ದೊಡ್ಡ ಬೆಟ್ಟದ ತುದಿಯಲ್ಲಿ ಕಲ್ಲಿನ ಸುತ್ತಾಲಯದ ನಡುವೆ ಅಖಂಡ ಶಿಲೆಯಲ್ಲಿ ಕೆತ್ತಿದ ಬಾಹುಬಲಿಯ 58' ಎತ್ತರದ ಭವ್ಯಮೂರ್ತಿ ಉತ್ತರಾಭಿಮುಖವಾಗಿ ನಿಂತಿದೆ. ಈ ಮೂರ್ತಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಬಾಹುಬಲಿ ಪ್ರತಿಮಾಯೋಗವನ್ನು ಧಾರಣಮಾಡಿ, ಧ್ಯಾನ ಮಾಡುತ್ತಿರುವ ಸನ್ನಿವೇಶವನ್ನಿದು ತೋರಿಸುತ್ತದೆ. ಮುಖಮುದ್ರೆ ಪ್ರಶಾಂತವೀರಾಗಭಾವವನ್ನು ಸೂಸುತ್ತದೆ. ಕಾಲುಗಳ ಕೆಳಗೆ ಕಮಲವಿದೆ. ಎರಡೂ ಬದಿಗೆ ಹಾವಿನ ಹುತ್ತಗಳಿವೆ. ಮಾಧವೀಲತೆ ಕೈಕಾಲುಗಳ ಮೇಲೆ ಹಬ್ಬಿದೆ.

ಗೊಮ್ಮಟೇಶ್ವರ ವಿಗ್ರಹ ವಿಷಯವಾಗಿ ಹಲವು ಕಥೆಗಳು ಪ್ರಚಲಿತವಿವೆ. ಪ್ರತಿಮೆಯ ಮೇಲೆ ದೊರೆಯುವ ಶಿಲಾಲೇಖನದಿಂದ ಚಾವುಂಡರಾಯ ಇದನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಈತ ಗಂಗವಂಶದ ರಾಚಮಲ್ಲನ (924-984) ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ಸುಮಾರು 982ರಲ್ಲಿ ಈ ವಿಗ್ರಹವನ್ನು ಕೆತ್ತಿಸಿ ಮುಗಿಸಿರಬೇಕೆಂದು ತೋರುತ್ತದೆ. ವಿಗ್ರಹದ ಸುರಕ್ಷಣೆಗಾಗಿ ಹೊಯ್ಸಳ ವಿಷ್ಣುವರ್ಧನನ ದಂಡಾಧಿಪತಿಯಾದ ಗಂಗರಾಜ ಸುತ್ತಲಯವನ್ನು ಕಟ್ಟಿಸಿದ (ಸುಮಾರು 1117). ಇದರ ಮಾಹಿತಿ ವಿಗ್ರಹದ ಮೇಲೆನ ಶಿಲಾಲೇಖನಗಳಿಂದ ಗೊತ್ತಾಗುತ್ತದೆ.

ಪೌದನಪುರದಲ್ಲಿಯ ಪ್ರತಿಮೆ ಆಗಮ್ಯವೆನಿಸಿದ್ದರಿಂದ ತನ್ನ ತಾಯಿ ದರ್ಶಿಸಲೆಂದು ಚಾವುಂಡರಾಯ ಈ ಮೂರ್ತಿಯನ್ನು ಕೆತ್ತಿಸಿದಂತೆ ಆಖ್ಯಾನಕವಿದೆ. ಈ ವಿಗ್ರಹಕ್ಕೆ ಗೊಮ್ಮಟೇಶ್ವರ ಎಂಬ ಹೆಸರು ಬಂದದ್ದು ಚಾವುಂಡರಾಯನಿಂದಲೇ. ನೇಮಿಚಂದ್ರಸಿದ್ಧಾಂತ ಚಕ್ರವರ್ತಿಯಿಂದ ರಚಿತವಾದ ಗೊಮ್ಮಟಸಾರವೆಂಬ ಗ್ರಂಥದಿಂದ ಚಾವುಂಡರಾಯನಿಗೆ ಗೊಮ್ಮಟರಾಯನೆಂಬ ಹೆಸರಿದ್ದುದೂ ಆತ ಬೆಳ್ಗೊಳದಲ್ಲಿ ಕಟ್ಟಿಸಿದ ಬಸದಿಯ ಮತ್ತು ಕೆತ್ತಿಸಿದ ಈ ವಿಗ್ರಹ ವಿಷಯವೂ ತಿಳಿಯುತ್ತದೆ. ಗೊಮ್ಮಟ ಅಂದರೆ ಸುಂದರ, ಚೆಲುವ ಮನ್ಮಥ ಎಂದರ್ಥ. ಇದು ಅವನ ಮನೆಯ ಹೆಸರಾಗಿರಬೇಕು. ಆತ ಕೆತ್ತಿಸಿದ ಈಶ್ವರ ಅಂದರೆ ಆರಾಧ್ಯ ದೇವತೆಯ ಹೆಸರು ಗೊಮ್ಮಟೇಶ್ವರ. ಇದರಿಂದ ಮುಂದಿನ ಕಾಲದಲ್ಲಿ ಬಾಹುಬಲಿಯ ಮೂರ್ತಿಗಳು, ಕಾರ್ಕಳ, ವೇಣೂರು ಮೊದಲಾದ ಸ್ಥಳಗಳಲ್ಲಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಧವಲಾದಿಸಿದ್ಧಾಂತ ಗ್ರಂಥಗಳ ಸಾರವಾಗಿ ನೇಮಿಚಂದ್ರ ಚಾವುಂಡರಾಯ ಅಥವಾ ಗೊಮ್ಮಟರಾಯನ್ನು ಕುರಿತು ಬರೆದ ಗ್ರಂಥದ ಹೆಸರು ಗೊಮ್ಮಟಸಾರ.

ಗೊಮ್ಮಟೇಶ್ವರನ ಈ ವಿಶಾಲಕಾರ ಮತ್ತು ಅದ್ವಿತೀಯ ಪ್ರತಿಮೆಯಿಂದ ಶ್ರವಣಬೆಳ್ಗೊಳ ತೀರ್ಥಕ್ಷೇತ್ರ ಮತ್ತು ಯಾತ್ರಾಸ್ಥಳವಾಗಿದೆ. ವಿಂಧ್ಯಗಿರಿಯ ಮೇಲಿನ ಬೃಹತ್ಕಾಯದ ಬಾಹುಬಲಿಯ ಪೂಜೆಯೆಂದರೆ ಒಂದು ಮಹೋತ್ಸವವೇ ಅಲ್ಲದೆ ಧಾರ್ಮಿಕ ಜನರಿಗೆ ಪುಣ್ಯಕಾರಿ ಪ್ರಯೋಜನವೂ ಹೌದು. ಈ ರೀತಿಯ ಮಹಾಮಸ್ತಕಾಭಿಷೇಕ ಪೂಜೆಯನ್ನು ಪ್ರತಿ ಹನ್ನೆರಡು ವರ್ಷಕ್ಕೆ ಒಮ್ಮೆ ಒಂದು ವಿಶೇಷ ಮುಹೂರ್ತವನ್ನು ನೋಡಿ, ನಡೆಸುವ ಪರಂಪರೆಯುಂಟು. ಶ್ರವಣಬೆಳಗೋಳ 1398ರ ಶಿಲಾಲೇಖನದಿಂದ ಪಂಡಿತಾರ್ಯ ಏಳುಸಾರಿ ಮಸ್ತಕಾಭಿಷೇಕ ಮಾಡಿಸಿದ ಸಂಗತಿಗೊತ್ತಾಗುತ್ತದೆ. ಅದರಂತೆ 1500ರಲ್ಲಿ 1612ರಲ್ಲಿಯೂ ಮಸ್ತಕಾಭಿಷೇಕವಾಗಿರಬೇಕು. 1612ರಲ್ಲಿ ಶಾಂತವರ್ಣೀ, 1677ರಲ್ಲಿ ಚಿಕ್ಕದೇವರಾಜ ಒಡೆಯರ ಮಂತ್ರಿಯಾದ ವಿಶಾಲಾಕ್ಷ ಪಂಡಿತ 1825ರಲ್ಲಿ ಮೈಸೂರು ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರು ಮಾಡಿಸಿದ ಮಸ್ತಕಾಭಿಷೇಕಗಳ ಉಲ್ಲೇಖ ಉಂಟು. ಇತ್ತೀಚಿಗೆ 1827,1871, 1887, 1909 ಮತ್ತು 1925-(ಅನಂತರ ಸಾಧಾರಣ ಹನ್ನೆರಡು ವರ್ಷಕ್ಕೊಮ್ಮೆ) ಮಸ್ತಕಾಭಿಷೇಕಗಳು ನಡೆಯುತ್ತ ಬಂದಿದೆ. ಈ ಸಮಯದಲ್ಲಿ ಭಾರತದ ಎಲ್ಲ ಭಾಗಗಳಿಂದ ವಿಶೇಷವಾಗಿ ಜೈನ ಯಾಂತ್ರಿಕರು ಶ್ರವಣಬೆಳಗೊಳಕ್ಕೆ ಬರುತ್ತಾರೆ. ಮಸ್ತಕಾಭಿಷೇಕದಿಂದಾಗಿ ಶ್ರವಣಬೆಳಗೊಳ ಜೈನರಿಗೆ ದಕ್ಷಿಣಕಾಶಿಯಾಗಿದೆ.

ಶ್ರವಣಬೆಳಗೊಳ ವಿಗ್ರಹದ ಅದ್ವಿತೀಯತೆ, ಸೌಂದರ್ಯ, ಶಿಲ್ಪಸಾಹಸ, ಭವ್ಯತೆ, ಪಾವಿತ್ರ್ಯ ಮತ್ತು ವೀತರಾಗತೆಯನ್ನು ಪಾಶ್ಚಾತ್ಯ ಮತ್ತು ಪೌರಸ್ತ್ಯ ಪ್ರವಾಸಿಗಳು, ವಿದ್ವಾಂಸರು, ಲೇಖಕರು ಮತ್ತು ಕವಿಗಳು ಮುಕ್ತಕಂಠದಿಂದ ಬಣ್ಣಿಸಿದ್ದಾರೆ. 58` ಎತ್ತರವುಳ್ಳ ಈ ಬೃಹನ್ಮೂರ್ತಿಯಲ್ಲಿ ಶಿಲ್ಪಿ ಬಾಹುಬಲಿಯ ರೂಪ ಗುಣ ಸ್ವಭಾವಗಳನ್ನು ಸಹಜವೆಂಬಂತೆ ಹೊಮ್ಮಿಸಿದ್ದಾನೆ. ಆ ಮುಖದಲ್ಲಿ ತೋರುವ ಉದಾತ್ತವಾದ ಮನೋಭಾವ, ಸಂಪೂರ್ಣವಾದ ತ್ಯಾಗ, ಅತೀವ ವೈರಾಗ್ಯ, ಆತ್ಮ ಸಂಯಮಗಳೂ ಕಷ್ಟಕಾರ್ಪಣ್ಯಗಳಲ್ಲಿ ತೊಳಲುತ್ತಿರುವ ಪ್ರಪಂಚದ ಮೇಲಿನ ಮರುಕವನ್ನು ವ್ಯಕ್ತಪಡಿಸುವ ಆ ಕಿರುನಗೆಯೂ ವರ್ಣನಾತೀತವಾಗವೆ. ವಿಸ್ತಾರವಾದ ಆ ಎದೆ, ನೇರವಾದ ಆ ನಿಲುವು, ಯಾವುದಕ್ಕೂ ಹೆದರದ, ಚಕ್ರವರ್ತಿಯನ್ನು ಸೋಲಿಸಿದ ಒಂದು ಕೆಚ್ಚು-ಇವು ಆತ್ಮಾಭಿಮಾನವನ್ನು ಸೂಚಿಸುತ್ತವೆ. ಇಷ್ಟು ಉನ್ನತವಾದ ಮೂರ್ತಿಯಲ್ಲಿ ಇಂಥ ಸೌಂದರ್ಯವೂ ಇಂಥ ಅತಿಶಯವೂ ಮೇಳೈಸಿರುವುದನ್ನು ಬೇರೆಡೆ ಕಾಣುವುದು ಅಸಾಧ್ಯವೆಂದು ಬೊಪ್ಪಣಕವಿ ಹಾಡಿ ಹೊಗಳಿದ್ದಾನೆ.

ಇತರೆಡೆಗಳಲ್ಲಿ

ಬದಲಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ಗೊಮ್ಮಟೇಶ್ವರ ಮೂರ್ತಿಗಳಿವೆ. ಕ್ರಿ.ಶ. 1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ.ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ. 1604ರಲ್ಲಿ 35`ಎತ್ತರವಿರುವ ಇನ್ನೊಂದು ಮೂರ್ತಿಯನ್ನು ನಿಲ್ಲಿಸಿದ.

ಎತ್ತರದಲ್ಲಿ ಚಿಕ್ಕದಾದರೂ ಭವ್ಯವಾಗಿರುವ ಮತ್ತೆರಡು ಮೂರ್ತಿಗಳು ಮೈಸೂರು ಜಿಲ್ಲೆಯಲ್ಲಿವೆ. ಕೃಷ್ಣರಾಜನಗರ ತಾಲ್ಲೂಕಿನ ಬಸ್ತಿ ಹಳ್ಳಿ ಎಂಬಲ್ಲಿರುವ ಸುಮಾರು 20` ಎತ್ತರವಿರುವ ಬಳಪದ ಕಲ್ಲಿನ ಒಂದು ಮೂರ್ತಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ ಪುಣಿಸಮಯ್ಯ ಪ್ರತಿಷ್ಠಿಸಿದುದಾಗಿ ತೋರುತ್ತದೆ. ಮೈಸೂರು ತಾಲ್ಲೂಕಿನ ಗೊಮ್ಮಟಗಿರಿಯ ಮೇಲೆ ನಿಂತಿರುವ ಇನ್ನೊಂದು ಮೂರ್ತಿಯನ್ನು ಯಾರು ಯಾವಾಗ ಸ್ಥಾಪಿಸಿದರು ಎಂಬುದು ತಿಳಿಯದು. ಮದ್ದೂರು ತಾಲ್ಲೂಕಿನಲ್ಲಿ ಬಸ್ತಿತಿಪ್ಟೂರಿನ ಬಳಿ ಗುಡ್ಡ ಒಂದರ ಮೇಲೆ ನಿಂತಿರುವ ಮತ್ತೊಂದು ಗೊಮ್ಮಟೇಶ್ವರನ ಮೂರ್ತಿ ಈಚೆಗೆ ಪತ್ತೆಯಾಗಿದೆ.

ಇತ್ತೀಚೆಗೆ ಗೊಮ್ಮಟೇಶ್ವರನ ಮತ್ತೊಂದು ಬೃಹನ್ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.. ಈ ಮೂರ್ತಿ ಸುಮಾರು 48'ಗಳಷ್ಟು ಎತ್ತರವಿದ್ದು ಅದನ್ನು ಪೀಠದ ಮೇಲೆ ನಿಲ್ಲಿಸಿದಾಗ 60`ಗಳಷ್ಟು ಎತ್ತರದ ಅದ್ಭುತ ಶಿಲಾಪ್ರತಿಮೆಯಾಗಿದ್ದು ಕಂಗೊಳಿಸುತ್ತಿದೆ. ಈ ವಿಗ್ರಹವನ್ನು ರೂಪಿಸಿದ ಶಿಲ್ಪಿ ರಂಜಾಳ ಗೋಪಾಲ ಶೆಣೈ. ಕಾರ್ಕಳದಲ್ಲಿ ಸಿದ್ಧವಾದ ಈ ಮೂರ್ತಿಯನ್ನು ಧರ್ಮಸ್ಥಳಕ್ಕೆ ಸಕಲ ವೈಭವದೊಡನೆ ತಂದು ನಿಲ್ಲಿಸಲಾಗಿದೆ.

"https://kn.wikipedia.org/w/index.php?title=ಬಾಹುಬಲಿ&oldid=1227801" ಇಂದ ಪಡೆಯಲ್ಪಟ್ಟಿದೆ