ಧರ್ಮ

ಗೊತ್ತುಪಡಿಸಿದ ಭಾವನೆ, ನಡವಳಿಕೆಗಳು ಮತ್ತು ಅಭ್ಯಾಸಗಳ ವ್ಯವಸ್ಥೆ

ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುವನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧವೇ ಧರ್ಮವೆಂಬ (ರಿಲಿಜನ್) ಶಬ್ದದ ವಿಶಾಲಾರ್ಥ. ಪವಿತ್ರವೆನಿಸತಕ್ಕುದು ಅತಿಮಾನುಷವೇ ಇರಬೇಕೆಂಬ ನಿಯಮವಿಲ್ಲ; ಮಾನವಾಕೃತಿಯಲ್ಲಿಯೇ ಇರಬೇಕೆಂದೂ ಇಲ್ಲ; ವೈಯಕ್ತಿಕ ಭಾವನೆ ಮಾತ್ರವೆಂದೂ ಅದರರ್ಥವಲ್ಲ. ದೇವರು ಎಂಬ ಶಬ್ದವನ್ನು ವೈಯಕ್ತಿಕ ಇಲ್ಲವೆ ಅತಿಮಾನುಷವೆಂಬ ಅಭಿಪ್ರಾಯದಲ್ಲಿ ಬಳಸುವುದಾದರೆ, ಅಂಥ ದೇವತಾಸ್ವರೂಪಗಳೊಡನೆ ಮಾನವನ ಸಂಬಂಧ ಧರ್ಮವೆನಿಸುವಂತೆ, ಅಂಥವುಗಳಲ್ಲದ ಪವಿತ್ರ ವಸ್ತುಗಳೊಂದಿಗೆ ಅವನ ಸಂಬಂಧಕ್ಕೂ ಅನ್ವಯಿಸುವಷ್ಟು ಅದು ವಿಶಾಲವಾಗಿದೆ. ಹಾಗೆಯೇ ಪವಿತ್ರವಾದುದರೊಂದಿಗೆ ಸಂಬಂಧವೆಂಬುದು ಕೂಡ ನಾನಾ ಪ್ರಕಾರಗಳಲ್ಲಿರಬಹುದು. ಅವುಗಳಲ್ಲಿ ಅತಿ ಮುಖ್ಯವಾದುದು ಪೂಜೆ. ಆದರೆ ನೀತಿನಿಷ್ಠೆ, ಸದಾಚಾರ, ಸಮ್ಯಗ್ಭಾವನೆ ಅಥವಾ ಸದ್ಭಕ್ತಿ, ಧಾರ್ಮಿಕ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾತ್ರ ವಹಿಸುವಿಕೆ, ಧರ್ಮ ಪ್ರವಾದಿಗಳ ಬೋಧೆಯಲ್ಲಿ ಧರ್ಮಗ್ರಂಥಗಳಲ್ಲಿ ಶ್ರದ್ಧೆ - ಇವನ್ನೆಲ್ಲ ಧಾರ್ಮಿಕ ಮನೋವೃತ್ತಿಯು ಒಳಗೊಳ್ಳುತ್ತದೆ.

ಮಾನವಸಂಸ್ಕೃತಿಯ ಶೈಶವಾವಸ್ಥೆಯಲ್ಲಿ ಧರ್ಮ ಮತ್ತು ಜಾದು (ವಿಚ್‍ಕ್ರ್ಯಾಪ್ಟ್) ಬೇರ್ಪಡಿಸಲಾರದಷ್ಟು ಕೂಡಿಕೊಂಡಿದ್ದುವೆಂದು ವಿಶ್ವಧರ್ಮಗಳ ಇತಿಹಾಸಕಾರರು ತೋರಿಸುತ್ತಾರೆ. ಯಾವ ಉದ್ದೇಶಗಳಿಗಾಗಿ ಧರ್ಮ ಪ್ರವೃತ್ತಿ ಹೊರಟಿದೆಯೋ ಹೆಚ್ಚು ಕಡಿಮೆ ತತ್ಸಮಾನ ಉದ್ದೇಶಗಳಿಗಾಗಿಯೇ ಜಾದುವೂ ಹೊರಟಿರುತ್ತದೆ. ಅವೆರಡನ್ನೂ ವಿಭಾಗಿಸುವ ಅಂಶವೆಂದರೆ ಭಕ್ತಿಭಾವವೇ ಸರಿ. ದೇವತಾದಿಗಳ ವಿಷಯದಲ್ಲಿ ಭಕ್ತಿಭಾವವಿದ್ದಾಗ ಧರ್ಮ. ಭಕ್ತಿಯಿಲ್ಲದೆ ಹೋದಾಗ ಕೇವಲ ತಂತ್ರಮಂತ್ರಾದಿಗಳ ಬಾಹ್ಯಾಚಾರಕ್ಕೆ ಮಾತ್ರ ಪ್ರಾಶಸ್ತ್ಯವೊದಗಿದಾಗ ಜಾದುವಿನ ಮಂತ್ರಮಾಟಗಳಿಗೆ ಆಸ್ಪದವಾಗುತ್ತದೆ. ಇವೇ ತಂತ್ರಮಂತ್ರಾದಿಗಳೇ ಭಕ್ತಿ ಸಮನ್ವಿತವಾದಾಗ ಧರ್ಮಾಚರಣೆಗಳೆನಿಸುತ್ತವೆ.

ಆದುದರಿಂದ ಪೂಜ್ಯವಸ್ತು ಮತ್ತು ಪೂಜಾಕರ್ಮಗಳನ್ನು ಧರ್ಮದ ಪ್ರಧಾನ ಘಟಕಗಳೆನ್ನಬಹುದು. ಇವೆರಡರ ಪರಸ್ಪರ ಪ್ರತಿಕ್ರಿಯೆಯ ಫಲವಾಗಿಯೇ ವಿಶ್ವದಲ್ಲಿ ಪ್ರಸಿದ್ಧವಾಗಿರುವ ನಾನಾಧರ್ಮಗಳು ಉದಯವಾಗಿವೆ. ಹಿಂದೂ ಧರ್ಮ, ಬೌದ್ಧಧರ್ಮ, ಇಸ್ಲಾಂಧರ್ಮ, ಕ್ರಿಶ್ಚನ್‍ಧರ್ಮ ಮುಂತಾದವನ್ನು ಕುರಿತು ಪ್ರತ್ಯೇಕ ಲೇಖನಗಳು ಇರುವುದರಿಂದ ಇಲ್ಲಿ ಧರ್ಮದ ಸಾಮಾನ್ಯಾಂಶಗಳನ್ನು ಮಾತ್ರ ಗಮನಿಸಲಾಗುತ್ತಿದೆ.

ಧಾರ್ಮಿಕ ಪೂಜಾ ವಿಧಿಗಳಿಗೆಲ್ಲ ಹೆಚ್ಚಾಗಿ ಒಬ್ಬ ಪರಮಾತ್ಮ ಅಥವಾ ಭಗವಂತನೇ ವಿಷಯವಾಗಿರುತ್ತಾನೆ; ಅವನ ಅಧೀನದಲ್ಲಿ ಚರಾಚರಗಳೆಲ್ಲ ವರ್ತಿಸುತ್ತವೆ. ಆದರೆ ಏಕದೇವತಾವಾದದಂತೆ ಅನೇಕದೇವತಾವಾದಗಳೂ ಉಂಟು. ಪಿತೃದೇವತೆಗಳು, ಭೂತಾದಿಗಳು, ಪವಿತ್ರ ಪ್ರಾಣಿಗಳು (ಗೋವು ಇತ್ಯಾದಿ) ಮತ್ತು ವೃಕ್ಷಗಳು (ಅಶ್ವತ್ಥ ಇತ್ಯಾದಿ), ಯಕ್ಷ, ರಾಕ್ಷಸ, ನಾಗ ಮುಂತಾದ ಅಗೋಚರ ಸತ್ತ್ವಗಳು - ಇವೆಲ್ಲ ಧರ್ಮಾಚರಣೆಗಳ ಕಕ್ಷೆಯಲ್ಲಿ ಅಂತರ್ಗತವಾಗಬಲ್ಲವು. ಬೌದ್ಧ ಧರ್ಮದಲ್ಲಿ ಭಗವಂತನಿಗೆ ಸ್ಥಾನವೇ ಇಲ್ಲ. ಸಕಲ ಧರ್ಮಗಳಿಗೂ ಅನ್ವಯಿಸಬಲ್ಲ ಸಾಮಾನ್ಯಾಂಶವನ್ನು ಎತ್ತಿತೋರಿಸುವ ಪ್ರಯತ್ನ ಇಪ್ಪತ್ತನೆಯ ಶತಮಾನದಲ್ಲಿ ಆರಂಭವಾಯಿತೆನ್ನಬಹುದು. ಪಾವಿತ್ರ್ಯಭಾವನೆಯೇ ಅದು ಎಂದು 1917ರಲ್ಲಿ ರೂಡಾಲ್ಫ್ ಆಟೊ ಎಂಬ ತತ್ತ್ವಜ್ಞಾನಿ ನಿರ್ಣಯಿಸಿದ. ಯಾವುದೇ ಧರ್ಮವಿರಲಿ ಅದರಲ್ಲಿ ಪವಿತ್ರವೆನಿಸುವ ಕರ್ಮಾಂಗಗಳು, ಜಪಮಂತ್ರಾದಿಗಳು, ಕಥಾನಕಗಳು, ತಂತ್ರಗಳು, ಕ್ಷೇತ್ರತೀರ್ಥಾದಿಗಳು, ಪುಣ್ಯದಿನಗಳು, ಶುಭಾಶುಭ, ಶಕುನಾದಿಗಳು, ಆಚಾರ್ಯ ಪರಂಪರೆ, ನಿತ್ಯತತ್ತ್ವಗಳು, ಧಾರ್ಮಿಕ ಸಾಹಿತ್ಯ, ವಿಧಿನಿಷೇಧಗಳು ಮುಂತಾದುವೆಲ್ಲ ಕೂಡಿಯೇ ಇರುತ್ತವೆ. ಭಿನ್ನ ಭಿನ್ನ ಮತಗಳಲ್ಲಿ ಇವೆಲ್ಲ ವಿಭಿನ್ನವಾಗಿಯೇ ಇದ್ದರೂ ಪವಿತ್ರಭಾವನೆ ಮಾತ್ರ ಸಕಲ ಮತಪ್ರಕ್ರಿಯೆಗಳಿಗೂ ಸಮಾನವಿರುವುದರಿಂದ ಅದು ಧರ್ಮ ಶಬ್ದದಿಂದ ವಾಚ್ಯವಾಗುತ್ತದೆ. ಹೀಗೆ ಮತವೆಂಬುದು ಧಾರ್ಮಿಕ ಆಚಾರವಿಚಾರಗಳಲ್ಲಿನ ವೈಶಿಷ್ಟ್ಯದ ಸೂಚಕವಾಗಿರುವ ಸಂಕುಚಿತವ್ಯಾಪ್ತಿಯ ಶಬ್ದ. ಧರ್ಮ ಎಂಬುದು ಮತೀಯ ಆಚಾರವಿಚಾರಗಳ ಹಿಂದಿರುವ ಸಮಾನ ಮನೋವೃತ್ತಿಯನ್ನು ಸೂಚಿಸುವ ವಿಶಾಲಾರ್ಥಕವಾದ ವ್ಯಾಪಕ ಶಬ್ದ. ವೈಷ್ಣವ, ಶೈವ ಮುಂತಾದ ಪರಂಪರೆಗಳು ಮತಗಳಾದರೆ, ಸನಾತನ ಧರ್ಮ ಎಂಬುದು ಅವುಗಳಿಗೆಲ್ಲ ಅನ್ವಯಿಸುವ ವಿಶಾಲಾರ್ಥಕ ಶಬ್ದ. ಇದಕ್ಕೆ ಪ್ರವರ್ತಕನಾದ ಮಹಾಪುರುಷನೊಬ್ಬನ ಉಲ್ಲೇಖವೂ ಇಲ್ಲವಾದ್ದರಿಂದ ಅದು ಸನಾತನ ಧರ್ಮ. ಅದರ ವಿಧಿವಿಧಾನಗಳಿಗೆಲ್ಲ ಅಪೌರುಷೇಯವಾದ ವೇದಗಳೇ ಆಧಾರ ಅಥವಾ ಪ್ರಮಾಣ. ಶ್ರುತಿಯಲ್ಲಿ ಹೇಳಿದ್ದನ್ನೇ ವಿವರಿಸುವ ಸ್ಮೃತಿಗಳು ಹಾಗೂ ಧರ್ಮಶಾಸ್ತ್ರಗಳ ವಚನಗಳೂ ಈ ಧರ್ಮಕ್ಕೆ ಪ್ರಮಾಣ್ಯಗಳು. ಇಂದ್ರಿಯ ಗೋಚರವಲ್ಲದ ವಿಷಯಗಳಲ್ಲಿ ಅವುಗಳ ಪ್ರಾಮಾಣವನ್ನು ಪ್ರಶ್ನಿಸುವಂತಿಲ್ಲವೆಂಬುದೇ ಸಿದ್ಧಾಂತ. ಅವುಗಳಲ್ಲಿ ಹೇಳಿದಂತೆ ನಡೆಯಲು ಪುರೋಹಿತರ ಅಗತ್ಯವೂ ಜೀವನದ ಮುಖ್ಯ ಸಂಸ್ಕಾರ ಕಾಲಗಳಲ್ಲೆಲ್ಲ ಸಹಜವಾಗಿಯೇ ಒದಗುವುದು. ಜಾತಕರ್ಮ, ಉಪನಯನ, ವಿವಾಹ, ಅಂತ್ಯವಿಧಿ- ಇತ್ಯಾದಿಗಳನ್ನೆಲ್ಲ ಶಾಸ್ತ್ರೀಯವಾಗಿ ನೆರವೇರಿಸಲು ಪುರೋಹಿತರ ನೇತೃತ್ವ ಅವಶ್ಯ. ಹೀಗೆ ಅತಿ ಪ್ರಾಚೀನ ಕಾಲದಲ್ಲಿ ಸರಳ ಪೂಜಾವಿಧಿಗಳಷ್ಟೇ ಇದ್ದುದು ಹೋಗಿ, ಧರ್ಮಗಳ ವಿಕಸಿತರೂಪದಲ್ಲಿ ಅತಿ ಜಟಿಲ ಮತ್ತು ಪುರೋಹಿತರ ನೆರವಿನಿಂದ ಮಾತ್ರ ಶಕ್ಯವಿರುವ ಕಲಾಪಗಳು ಜಟಿಲವಾಗುತ್ತ ಬೆಳೆದುಕೊಂಡಿವೆ.

ಬೌದ್ಧ, ಕ್ರೈಸ್ತ, ಜೈನ ಮುಂತಾದ ಧರ್ಮಗಳಿಗೆ ಸರ್ವಜ್ಞನಾದ ಒಬ್ಬ ಮೂಲ ಪ್ರವರ್ತಕನಿರುವ ಐತಿಹ್ಯವುಂಟು. ಆತನ ವಚನಗಳೇ ಪರಮ ಪ್ರಮಾಣಗಳೆನಿಸುತ್ತವೆ. ಆಯಾ ಧರ್ಮದವರಿಗೆ ಅವನೇ ಮುಖ್ಯ ಕಟ್ಟಳೆಗಳನ್ನೂ ನೀತಿ ನಡೆವಳಿಕೆಗಳನ್ನೂ ಸ್ಪಷ್ಟವಾಗಿ ಕಲ್ಪಿಸುತ್ತಾನೆ. ಹೀಗೆ ಪೂಜಾ ವಿಧಿಯೊಂದಿಗೆ ಧಾರ್ಮಿಕ ಆಚಾರಗಳೂ ಬೆಸೆದುಕೊಂಡೇ ಇರುತ್ತವೆ. ಬೌದ್ಧಧರ್ಮದಲ್ಲಿ ಎಂಟು ಆರ್ಯ ಸತ್ಯಗಳು. ಜೂಡಾಯಿಸಮಿನ ದಶವಿಧಿಗಳು ಮುಂತಾದುವು ಅವಿಭಾಜ್ಯ ಧರ್ಮಾಂಗಗಳೇ ಎನಿಸುತ್ತವೆ. ಕಾಲದಿಂದ ಕಾಲಕ್ಕೆ ಧರ್ಮಗಳ ಇತಿಹಾಸದಲ್ಲಿ ಸಾಮಾನ್ಯ ನೀತಿಗಳನ್ನು ಪರಿಷ್ಕರಿಸಿಕೊಂಡಿರುವುದನ್ನು ಕೂಡ ಕಾಣುತ್ತೇವೆ. ನೂತನ ಪರಿಷ್ಕರ್ತರಿಗೂ ಸಾಂಪ್ರದಾಯಿಕರಿಗೂ ಧರ್ಮ ವಿಷಯಗಳಲ್ಲಿ ಘರ್ಷಣೆಗಳು ಕೂಡ ಎಷ್ಟೋ ಒದಗಿವೆ.

19ನೆಯ ಶತಮಾನದ ಪಾಶ್ಚಾತ್ಯ ವಿದ್ವಾಂಸರು ವಿಶ್ವದ ಎಲ್ಲ ಧರ್ಮಗ್ರಂಥಗಳನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡಿ, ಅವುಗಳ ಮೂಲದಲ್ಲಿರುವ ಏಕಾಭಿಪ್ರಾಯಗಳನ್ನು ನಿರ್ದೇಶಿಸಲು ಯತ್ನಿಸಿದರು. ಅವರಲ್ಲಿ ಮ್ಯಾಕ್ಸ್ ಮ್ಯುಲರ್‍ನ ಸಾಧನೆ ಗಮನಾರ್ಹವಾದುದು. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಮಾನವಿಕ, ಸಮಾಜಶಾಸ್ತ್ರ, ಮನಶ್ಯಾಸ್ತ್ರ, ಮುಂತಾದ ವೈಚಾರಿಕ ದೃಷ್ಟಿಕೋನಗಳಿಂದ ಧರ್ಮದ ಜಿಜ್ಞಾಸೆ ಹಾಗು ವಿಮರ್ಶೆ ಸಾಗಿದೆ. ಸಂಸ್ಕೃತಿಯಲ್ಲಿ, ಸಮಾಜದಲ್ಲಿ, ಧರ್ಮದ ಸ್ಥಾನವನ್ನು ಈ ಶಾಸ್ತ್ರಗಳು ಹಿಂದಿನವರಷ್ಟು ಹೆಚ್ಚಿನದೆಂದು ಭಾವಿಸುವುದಿಲ್ಲ. ಏಕಾಂತದಲ್ಲಿ ಮಾನವ ವ್ಯಕ್ತಿಗಳ ಅನುಭವಗಳೇ ಧರ್ಮವೆಂದು ವಿಲಿಯಂ ಜೇಮ್ಸ್ ಹೇಳಿದರೆ, ಧರ್ಮ ಮೂಲತಃ ಸಾಮಾಜಿಕವೆಂಬುದು ಡರ್ಖೀಮನ ಅಭಿಪ್ರಾಯವಾಗಿದೆ. ಇತಿಹಾಸಜ್ಞರು ಧರ್ಮವನ್ನು ಒಂದು ಹಿಂದಿನ ಕಂದಾಚಾರವೆನ್ನುವವರೆಗೂ ಹೋಗಿದ್ದಾರೆ. ಉದಾಹರಣೆಗೆ ಕಾರ್ಲ್ ಮಾಕ್ರ್ಸ್ - ಧರ್ಮವೊಂದು ಜನರಿಗೆ ಅಮಲೇರಿಸುವ ಅಫೀಮು, ದಲಿತ ಪ್ರಜೆಯ ನಿಟ್ಟುಸಿರು, ನಿಷ್ಕರುಣ ವಿಶ್ವದ ಹೃದಯಾವಿಷ್ಕಾರ ಎಂದು ಮುಂತಾಗಿ ಉದ್ಗರಿಸಿದ್ದಾನೆ. ಮನೋವಿಜ್ಞಾನಿಯಾದ ಫ್ರಾಯ್ಡ್ ದೇವರು ಮೂಢಶಿಶುವಿನ ಮನಸ್ಸಿಗೆ ಕಂಡ ತಂದೆಯ ಕಲ್ಪನೆಯ ವಿಸ್ತೃತಾಕಾರವೆಂದಿದ್ದಾನೆ. ಯೂಂಗ್ ಎಂಬ ಇನ್ನೊಬ್ಬ ಮನೋವಿಜ್ಞಾನಿ ಮಾನವಕುಲದಲ್ಲೆಲ್ಲ ವಂಶಪಾರಂಪರ್ಯಕ್ರಮದಿಂದ ಬೆನ್ನಟ್ಟಿ ಬರುವ ದೇವವಿಷಯಕ ಮೂಲಕಲ್ಪನೆಗಳ ಪ್ರತಿರೂಪವೇ ಉಂಟೆನ್ನುತ್ತಾನೆ. ಹೀಗೆ ಧರ್ಮದಲ್ಲಿ ಶ್ರದ್ಧೆಯಿರುವವರಿಗಷ್ಟೇ ಅಲ್ಲ, ಶ್ರದ್ಧೆಯಿಲ್ಲದಂಥ ವೈಚಾರಿಕ ಶಾಸ್ತ್ರಜ್ಞರಿಗೆ ಕೂಡ ಧರ್ಮ ಇಂದಿಗೂ ಅಭ್ಯಾಸ ಪ್ರಚೋದಕವಾಗಿದೆ.

ಹೆಚ್ಚಿನ ಓದಿಗಾಗಿ ಬದಲಾಯಿಸಿ

  • James, Paul; Mandaville, Peter (2010). Globalization and Culture, Vol. 2: Globalizing Religions. London: Sage Publications. {{cite book}}: Unknown parameter |lastauthoramp= ignored (help)
  • Noss, John B.; Man's Religions, 6th ed.; Macmillan Publishing Co. (1980). N.B.: The first ed. appeared in 1949, ISBN 0-02-388430-4.
  • Lang, Andrew; The Making of Religion, (1898)

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಧರ್ಮ&oldid=1082422" ಇಂದ ಪಡೆಯಲ್ಪಟ್ಟಿದೆ