ಖಗೋಳಶಾಸ್ತ್ರ

(ಖಗೋಳ ವಿಜ್ಞಾನ ಇಂದ ಪುನರ್ನಿರ್ದೇಶಿತ)

ಖಗೋಳವಿಜ್ಞಾನ ಅಥವಾ ಖಗೋಳಶಾಸ್ತ್ರ ಎನ್ನುವುದು ಆಕಾಶಕಾಯಗಳ ಅಧ್ಯಯನಕ್ಕೆ ಸಂಬಂಧಿಸಿದ ನೈಸರ್ಗಿಕ ವಿಜ್ಞಾನ. ಇದು ವಿಶ್ವದ ಇತರ ಭಾಗಗಳಿಂದ ಭೂಮಿಯೆಡೆಗೆ ಬರುವ ವಿಸರಣೆಯನ್ನು ಭೂಮಿಯ ಪರಿಸರದಲ್ಲಿ ವೀಕ್ಷಿಸಿ ಅರ್ಥವಿಸುವ ವಿಜ್ಞಾನ (ಅಸ್ಟ್ರಾನಮಿ). ಭೂಮಿಯಿಂದ ಹೊರಗಿರುವ ಭೌತವಿಶ್ವಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳೂ ಖಗೋಳಶಾಸ್ತ್ರದ ಅಧ್ಯಯನದಲ್ಲಿ ಅಡಕವಾಗಿವೆ. ಇತಿಹಾಸಪೂರ್ವದ ಅಸ್ಪಷ್ಟ ದಿವಸಗಳಲ್ಲೂ ಈ ಶಾಸ್ತ್ರ ಬಳಕೆಯಲ್ಲಿತ್ತು ಎಂಬುದನ್ನು ಲಕ್ಷಿಸಿ ಇದನ್ನು ವಿಜ್ಞಾನಗಳ ತಾಯಿ ಎಂದು ಕರೆಯುವುದುಂಟು. ಆಕಾಶಕಾಯಗಳು (ನಕ್ಷತ್ರಗಳು, ಬ್ರಹ್ಮಾಂಡಗಳು, ಗ್ರಹಗಳು, ಚಂದ್ರಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು ಮತ್ತು ನೀಹಾರಿಕೆಗಳು) ಖಗೋಳವಿಜ್ಞಾನದ ಆಸಕ್ತಿಯ ಕಾಯಗಳಾಗಿವೆ. ಅವುಗಳ ಮೂಲ ಮತ್ತು ವಿಕಸನವನ್ನು ವಿವರಿಸಲು ಭೌತಶಾಸ್ತ್ರ, ರಸಾಯನಶಾಸ್ತ್ರಗಳನ್ನು ಬಳಸುತ್ತದೆ. ಇದು ಭೂಮಿಯ ವಾತಾವರಣದ ಹೊರಗೆ ಹುಟ್ಟುವ ವಿದ್ಯಮಾನಗಳ ಅಧ್ಯಯನವಾಗಿದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಸೂಪರ್ನೋವಾ ಸ್ಫೋಟಗಳು, ಗಾಮಾ ಕಿರಣ ಸಿಡಿತಗಳು ಮತ್ತು ವಿಶ್ವ ಸೂಕ್ಷ್ಮತರಂಗ ಹಿನ್ನೆಲೆ ವಿಕಿರಣ ಸೇರಿವೆ. ಇನ್ನೂ ಸಂಬಂಧಿತ ಆದರೆ ವಿಭಿನ್ನವಾದ ವಿಷಯಗಳು, ಒಟ್ಟಾರೆಯಾಗಿ ಬ್ರಹ್ಮಾಂಡವನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದೆ.

ಚಂದ್ರನ ಮೇಲಿನ ಡೇಡಲಸ್ ಗುಳಿ.

ಖಗೋಳಶಾಸ್ತ್ರವು ಭೂಮಿಯನ್ನು ಮತ್ತು ವಾಯುಮಂಡಲವನ್ನು ಹೊರತುಪಡಿಸಿ ಬ್ರಹ್ಮಾಂಡದ ಪ್ರಸಂಗಗಳನ್ನು ಗಮನಿಸಿ, ಉಲ್ಲೇಖಿಸಿ, ಸಂಶೋಧನೆಗೊಳಪಡಿಸಿ ನಿರೂಪಿಸಿರುವ ವಿಜ್ಞಾನ. ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. ಹವ್ಯಾಸಿಗಳು ಆಕಸ್ಮಿಕವಾಗಿ, ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ, ಸೂಪರ್‌ನೋವಾಗಳ ಗುರುತಿಸುವಿಕೆ, ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.

ಆರ್ಯಭಟನನ್ನು ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವನ್ನು ಅತ್ಯಂತ ಪ್ರಾಚೀನವಾದ ವಿಜ್ಞಾನವೆಂದು ಕರೆಯುತ್ತಾರೆ. ಗಣಿತದ ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಗಿದೆ.

ಭೂಮಿಗೆ ವಿಶ್ವದ ಇತರ ಭಾಗಗಳಿಂದ ಮಾಹಿತಿ ಒದಗುವುದು ವಿದ್ಯುತ್ಕಾಂತ ವಿಸರಣೆಯ (ಎಲೆಕ್ಟ್ರೊಮ್ಯಾಗ್ನೆಟಿಕ್ ರೇಡಿಯೇಷನ್) ಸಂಪರ್ಕದಿಂದ. ಉದಾಹರಣೆಗೆ ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳ ಅಸ್ತಿತ್ವ ನಮಗೆ ತಿಳಿಯುವುದು ಪ್ರಧಾನವಾಗಿ ಅವುಗಳಿಂದ ನಮ್ಮೆಡೆಗೆ ಬರುವ ಬೆಳಕಿನಿಂದ. ಒಂದು ನಕ್ಷತ್ರ ವಿಸರಿಸುವ ವಿದ್ಯುತ್ಕಾಂತ ವಿಸರಣೆಯಲ್ಲಿ ಬೆಳಕು ಕಿರಿದಾದ ಒಂದು ಅಂಶ ಮಾತ್ರ-ಇದನ್ನು ದೃಗ್ಗೋಚರ ವಿಭಾಗ ಎನ್ನುತ್ತೇವೆ. ಇನ್ನು ದೃಗಗೋಚರ ವಿಭಾಗವೂ ಆ ವಿಸರಣೆಯಲ್ಲಿ ಉಂಟು. ಅಂದಮೇಲೆ ಕಾಣುವ ನಕ್ಷತ್ರಗಳು ಮಾತ್ರವಲ್ಲದೆ, ಕಾಣದಿರುವ ನಕ್ಷತ್ರಗಳು ಸಹ ಇವೆ ಎಂದಾಯಿತು. ವಿದ್ಯುತ್ಕಾಂತ ವಿಸರಣೆಯಲ್ಲಿ ಈ ಎರಡು ವಿಭಾಗಗಳು ಏರ್ಪಡುವುದು ಮನುಷ್ಯನ ನೇತ್ರೇಂದ್ರಿಯದ ರಚನೆಯ ವೈಶಿಷ್ಟ್ಯದಿಂದಲೇ ಹೊರತು ಬೇರಾವ ಕಾರಣದಿಂದಲೂ ಅಲ್ಲ. ಹೀಗಾಗಿ ಖಗೋಳಶಾಸ್ತ್ರದಲ್ಲಿ ಎರಡು ಸಹಜ ಕಾರಣದಿಂದಲೂ ಅಲ್ಲ. ಹೀಗಾಗಿ ಖಗೋಳಶಾಸ್ತ್ರದಲ್ಲಿ ಎರಡು ಸಹಜ ವಿಭಾಗಗಳು ಏರ್ಪಟ್ಟಿವೆ-ದೃಗ್ಗೋಚರ ಖಗೋಳಶಾಸ್ತ್ರ ಮತ್ತು ದೃಗಗೋಚರ ಖಗೋಳಶಾಸ್ತ್ರ. ಪ್ರಕೃತ ಲೇಖನ ದೃಗ್ಗೋಚರ ಖಗೋಳಶಾಸ್ತ್ರವನ್ನು ಕುರಿತು ಮಾತ್ರ.

ಪ್ರಾಚೀನ ಖಗೋಳಶಾಸ್ತ್ರ

ಬದಲಾಯಿಸಿ

ಪ್ರಾಚೀನ ಮಾನವನಿಗೆ ದೈನಂದಿನ ಜೀವನದ ಹೋರಾಟದಲ್ಲಿ ತತ್ತ್ವಗಳನ್ನಾಗಲೀ ಸಿದ್ಧಾಂತಗಳನ್ನಾಗಲೀ ಕುರಿತು ಚಿಂತಿಸಲು ಅವಶ್ಯಕವಾದ ವಿರಾಮವೂ ಇರಲಿಲ್ಲ. ಪರಿಸರದ ಪ್ರತಿಬಲಗಳ ವಿರುದ್ಧ ಜೀವನನಿರ್ವಹಣೆ ಅವನ ಪ್ರಧಾನ ಸಮಸ್ಯೆ. ಆದರೆ ಇಂಥದಲ್ಲಿಯೂ ಅನಿವಾರ್ಯವಾಗಿ ಆಕಾಶದ ವಿದ್ಯಮಾನಗಳ ಕಡೆಗೆ ಲಕ್ಷ್ಯಹರಿಸಬೇಕಾಯಿತು. ಇದೊಂದು ಬೌದ್ಧಿಕ ಕುತೂಹಲದ ಅಂಗವಾಗಿ ಅಲ್ಲ. ಜೀವನಯಾಪನೆಯ ಅವಶ್ಯಕತೆಯಾಗಿ. ಋತುಗಳ ಕ್ರಮಬದ್ಧ ಪುನರಾವರ್ತನೆ, ರಾತ್ರಿ ಆಕಾಶದ ವೈಭವಪೂರ್ಣ ಪೂರ್ವ-ಪಶ್ಚಿಮ ಮುನ್ನಡೆ, ಚಂದ್ರನ ಆಟಗಳು, ಸೂರ್ಯನ ಸಾರ್ವಭೌಮತ್ವ, ಹಗಲು ರಾತ್ರಿಗಳ ನಿರಂತರ ಬದಲಾವಣೆ ಇವೇ ಮನುಷ್ಯ ಗಮನಿಸಿದ ಖಗೋಳಶಾಸ್ತ್ರದ ಮೊದಲ ಪಾಠಗಳು. ಆದರೆ ಇದು ನಡೆದದ್ದು ಎಂದು, ಯಾವ ಜನಾಂಗದಲ್ಲಿ ಎಂಬುದು ಪ್ರಾಯಶಃ ಎಂದೆಂದೂ ನಮಗೆ ತಿಳಿಯಲಾರದು. ಆಕಾಶದ ವಿದ್ಯಾಮಾನಗಳಿಗೂ ತನ್ನ ಜೀವನದ ಆಗುಹೋಗುಗಳಿಗೂ ಎನೋ ಒಂದು ಸಂಬಂಧವಿದ್ದುದು ಪ್ರಾಚೀನ ಮನುಷ್ಯನಿಗೆ ಮನವರಿಕೆಯಾದದ್ದೇ ತಡ ಆಕಾಶವನ್ನು ಕುರಿತ ಅಸಂಖ್ಯಾತ ನಂಬಿಕೆಗಳು, ಕತೆಗಳು, ಕಲ್ಪನೆಗಳು ಹುಟ್ಟಿಕೊಂಡು ಅವೆಲ್ಲವೂ ಅಂದಿನ ಸಂಸ್ಕೃತಿಯ ಅಖಂಡಭಾಗಗಳಾದುವು. ಗ್ರಹಣಕಾಲದಲ್ಲಿ ಚಂದ್ರನನ್ನೊ ಸೂರ್ಯನನ್ನೊ ರಾಕ್ಷಸರು ನುಂಗುತ್ತಿದ್ದರೆಂದೂ, ಇದರಿಂದ ಮನುಷ್ಯನಿಗೆ ಅಪಾರ ಹಾನಿ ಸಂಭವನೀಯವಾದ್ದರಿಂದ ಆ ರಾಕ್ಷಸರನ್ನು ಹೆದರಿಸಿ ಹೊಡೆದೋಡಿಸಿ ಪೂರ್ವಸ್ಥಿತಿಯನ್ನು ಸ್ಥಾಪಿಸುವುದು ಅಗತ್ಯವೆಂದು ಆ ಜನ ನಂಬಿ ಆಚರಿಸುತ್ತಿದ್ದುದು ತಿಳಿದಿದೆ.

ಉಪಲಬ್ಧವಾಗಿರುವ ದಾಖಲೆಗಳ ಆಧಾರದಿಂದ ಶಾಸ್ತ್ರೀಯವಾಗಿ ಪ್ರಾಚೀನ ಖಗೋಳಶಾಸ್ತ್ರದ ಚರಿತ್ರೆಯನ್ನು ಬರೆಯುವ ಪ್ರಯತ್ನ ಪ್ರಸಕ್ತ ಶತಮಾನದಲ್ಲಿ ಮಾಡಲಾಗಿದೆ. ಇದರ ಸೂಕ್ಷ್ಮಾವಲೋಕನೆಯನ್ನು ಮುಂದಿನ ಉಪಶೀರ್ಷಿಕೆಗಳಲ್ಲಿ ಮಾಡಲಾಗಿದೆ.

ಮೆಸೊಪೊಟೇಮಿಯ

ಬದಲಾಯಿಸಿ

ಯುಫ್ರೇಟಿಸ್ ಮತ್ತು ಟೈಗ್ರಿಸ್ ನದಿಗಳ ಕಣಿವೆಯಲ್ಲಿ (ಈಗಿನ ಇರಾಕ್) ಇದ್ದ ಜನ ಪ್ರಾಚೀನ ಖಗೋಳಶಾಸ್ತ್ರದ ವಿಷಯವಾಗಿ ಹೆಚ್ಚಿನ ಜ್ಞಾನ ಸಂಪಾದಿಸಿದ್ದರೆಂದು ನಂಬಲಾಗಿದೆ. ಬ್ಯಾಬಿಲೋನಿಯನ್, ಅಸ್ಸೀರಿಯನ್ ಮತ್ತು ಕಾಲ್ಡೀಯನ್ ಜನರೂ ಇವರಿಗಿಂತ ಮೊದಲು ಸುಮೇರಿಯನ್ನರೂ ಇಲ್ಲಿ ಆಗಿ ಹೋದವರು. ಆದ್ದರಿಂದ ಈ ಜ್ಞಾನದಲ್ಲಿ ಇವರೆಲ್ಲರ ಕೊಡುಗೆಯೂ ಸೇರಿದೆ. ಇವರ ಕಾಲ ಕ್ರಿ. ಪೂ. ಸು. 3000.

ಬ್ಯಾಬಿಲೋನಿಯನ್ ಜನಾಂಗದವರ ಕಲ್ಪನೆಯಲ್ಲಿ ವಿಶ್ವ ಬೋರಲಿಟ್ಟ ಬೋಗುಣಿ. ಆಕಾಶ ಇದರ ಚಾವಣಿ. ಬಿಲ್ಲೆಯ ಆಕಾರದ ಭೂಮಿ ಇದರ ಕೇಂದ್ರ. ಭೂಮಿಯ ಸುತ್ತ ಸಮುದ್ರ ಆವರಿಸಿಕೊಂಡಿದೆ. ಆರಂಭದಲ್ಲಿ ಎಲ್ಲೆಲ್ಲೂ ನೀರಿನ ರಾಶಿ ಇತ್ತು. ಅದರಿಂದ ನೆಲ ಹೊರಗೆ ಬಂದದು ಅತಿಮಾನುಷ ಶಕ್ತಿಗಳಿಂದ. ಮಹಾಪ್ರಳಯದ ವರದಿಯೂ, ಮುಂದೊಂದು ದಿವಸ ನೆಲವೆಲ್ಲ ನೀರಿನ ಅಡಿ ಮುಳುಗಡೆ ಆಗಲಿರುವ ಮಹಾಪ್ರಳಯದ ಉಲ್ಲೇಖವೂ ದೊರೆತಿವೆ. ಆಕಾಶಕಾಯಗಳು ಇಂಥ ವಿಶ್ವದ ಅಂಚಿನಲ್ಲಿ ಮೂಡಿ ಆಕಾಶದಲ್ಲಿ ಸಂಚರಿಸಿ ಇನ್ನೊಂದು ಅಂಚಿನಲ್ಲಿ ಮುಳುಗುತ್ತಿದ್ದುವು. ನಕ್ಷತ್ರ ಚಿತ್ರಗಳು ಸ್ಥಿರವಾಗಿದ್ದರೂ ಏಳು ಕಾಯಗಳು ಮಾತ್ರ ತಮ್ಮ ಪ್ರಾಮುಖ್ಯವನ್ನು ತೋರ್ಪಡಿಸಲೋ ಎಂಬಂತೆ ನಕ್ಷತ್ರಗಳ ನಡುವೆ ಚಲಿಸುತ್ತಿದ್ದವು. ಇವು ಭೂಮಿಯಿಂದ ಏರುತ್ತಿರುವ ದೂರಗಳಲ್ಲಿ ಅನುಕ್ರಮವಾಗಿ ಚಂದ್ರ, ಬುಧ, ಶುಕ್ರ, ಸೂರ್ಯ, ಮಂಗಳ, ಗುರು ಮತ್ತು ಶನಿ. ದೇವರ ಪ್ರತ್ಯಕ್ಷರೂಪಗಳಿವು. ಮನುಷ್ಯರನ್ನು ಮತ್ತು ಭೂಮಿಯನ್ನು ಕುರಿತು ದೇವರ ಅಭಿಪ್ರಾಯವೇನು ಎಂಬುದನ್ನು ಈ ಏಳು ಕಾಯಗಳ ಚಲನೆಯಿಂದ ವ್ಯಕ್ತವಾಗುತ್ತದೆ ಎಂದು ಆ ಜನ ನಂಬಿದ್ದರು. ಇವುಗಳ ಸಮಸ್ತ ವಿವರಗಳನ್ನೂ ಗ್ರಹಿಸಿ ಅರ್ಥವಿಸಿ ದೇವರ ಇಷ್ಟಾನಿಷ್ಟಗಳನ್ನು ಜನರಿಗೆ ತಿಳಿಸಬೇಕಾದದ್ದು ಪುರೋಹಿತರ ಕರ್ತವ್ಯವಾಗಿತ್ತು. ಮೆಸಪೊಟೇಮಿಯದ ಸ್ವಚ್ಛಾಕಾಶದ ವೀಕ್ಷಣೆ ಪುರೋಹಿತವರ್ಗದವರ ವೃತ್ತಿಯಾಗಿ ಬೆಳೆಯಿತು. ನಕ್ಷತ್ರಪುಂಜಗಳ ಪರಿಚಯ ಬೆಳೆದದ್ದು ಇಂಥ ವೀಕ್ಷಣೆಯ ಪರಿಣಾಮವಾಗಿ. ಅದರಲ್ಲೂ ಮುಖ್ಯವಾಗಿ ರಾಶಿಚಕ್ರವನ್ನು ರೂಪಿಸುವ ನಕ್ಷತ್ರರಾಶಿಗಳು, ಉತ್ತರಧ್ರುವ ನಕ್ಷತ್ರ ಮತ್ತು ಅದರ ಸಮೀಪದ ಕೆಲವು ಗಮನಾರ್ಹ ಪುಂಜಗಳು ವಿಶಿಷ್ಟ ವ್ಯಕ್ತಿತ್ವ ಪಡೆದು ಜನ ಜೀವನದ ಅವಿಭಾಜ್ಯ ಘಟಕಗಳಾದುವು. ನಕ್ಷತ್ರಪುಂಜಗಳ ಪರಿಚಯ ಇನ್ನೂ ಒಂದು ಕಾರಣದಿಂದ ಅವಶ್ಯವಾಯಿತು. ಮರಳುಗಾಡುಗಳ ಮಹಾವ್ಯಾಪ್ತಿಯಲ್ಲಿಯೂ, ಸಮುದ್ರದ ಜಲರಾಶಿಯಲ್ಲಿಯೂ ಸಾಗುತ್ತಿದ್ದ ಪಯಣಿಗರ ದಿಕ್ಕು ಹಾಗೂ ಕಾಲವನ್ನು ಸೂಚಿಸಲು ಇದ್ದ ಒಂದೇ ನೈಸರ್ಗಿಕ ಸಹಾಯವೆಂದರೆ ಆಕಾಶದ ನಕ್ಷತ್ರ ಚಿತ್ರಗಳು. ಕ್ರಿ.. ಪೂ. 3000ದಷ್ಟು ಹಿಂದೆಯೇ ಮೆಸೊಪೊಟೇಮಿಯದ ಜನ ರಾಶಿಚಕ್ರದ ಕೆಲವು ಪ್ರಮುಖ ರಾಶಿಗಳನ್ನು ಗುರುತಿಸಿ ಹೆಸರಿಸಿದ್ದರೆಂದು ನಂಬಲಾಗಿದೆ. ಉದಾಹರಣೆಗೆ ಸಿಂಹ ರಾಶಿ. ಸೂರ್ಯ ಈ ರಾಶಿಯಲ್ಲಿದ್ದಾಗ ಜನ ಸಹಿಸಲಾಗದ ಬಿಸಿಲ ಝಳದಿಂದ ತಪಿಸುತ್ತಿದ್ದುದರಿಂದ ಸಿಂಹರಾಶಿ ಎಂಬ ಹೆಸರು ಬಂದಿರಬಹುದು. ಹೀಗೆ ನಿಸರ್ಗದ ಕೆಲವು ಸನ್ನಿವೇಶಗಳನ್ನೂ-ಉದಾಹರಣೆಗೆ ಕುರಿಗಳು ಸಾಮೂಹಿಕವಾಗಿ ಈನುವ ಋತು (ಮೇಷ), ಕೆರೆ ತೊರೆಗಳಲ್ಲಿ ಮೀನುಗಳು ಅಧಿಕವಾಗಿ ತೋರುವ ಋತು (ಮೀನ), ಮಳೆ ಬೆಳೆಗಳ ಏರಿಳಿತಗಳನ್ನು ಪ್ರತಿನಿಧಿಸುವ ಋತುಗಳು ಇವೇ ಮುಂತಾದವು-ಆಕಾಶದಲ್ಲಿ ಸೂರ್ಯ-ನಕ್ಷತ್ರರಾಶಿ ಸ್ಥಾನಸಂಬಂಧವನ್ನೂ ಲಕ್ಷಿಸಿ ರಾಶಿಚಕ್ರಕ್ಕೆ ಖಚಿತಸ್ಥಾನ ನಿರ್ಧರಣೆ ಮಾಡಿದರು ಮತ್ತು ಅದನ್ನು ರೂಪಿಸುವ ನಕ್ಷತ್ರ ಚಿತ್ರಗಳಿಗೆ ನಿರ್ದಿಷ್ಟ ಹೆಸರುಗಳನ್ನು ನೀಡಿದರು. ಬ್ಯಾಬಿಲೋನಿಯನ್ನರು ಇದನ್ನು ಸಾಧಿಸಿದವರೆಂದು ಪ್ರತೀತಿ. ಇಷ್ಟೇ ಅಲ್ಲ, ವಿಷುವದ್ಬಿಂದುಗಳ ಹಿಂಚಲನೆಯನ್ನು, ಎಂದರೆ ಅಯನಾಂಶವನ್ನು (ಪ್ರಿಸೆಷನ್ ಆಫ್ ದಿ ಈಕ್ವಿನಾಕ್ಸಸ್) ಸಹ ಈ ಜನರು ಗುರುತಿಸಿದ್ದರು.

ಈಜಿಪ್ಟ್

ಬದಲಾಯಿಸಿ

ಇಲ್ಲಿಯೂ ನಾಗರಿಕತೆಯ ಆರಂಭವಾದದ್ದು ಮೆಸೊಪೊಟೇಮಿಯದ ನಾಗರಿಕತೆಯ ಆರಂಭದ ಸರಿಸುಮಾರಿಗೇ. ಈ ಜನರ ಪ್ರಧಾನ ಕೊಡುಗೆ ಎಂದರೆ ಸೌರವರ್ಷದ ಉದ್ದದ ನಿರ್ಣಯ. ಮುಂಬೆಳಗಿನ ಮುನ್ನ ಲುಬ್ಧಕ (ಸೀರಿಯಸ್) ನಕ್ಷತ್ರ ಮೊದಲಬಾರಿಗೆ ಕಾಣಿಸುವ ದಿವಸದಿಂದ ತೊಡಗಿ ಪುನಃ ಆ ಘಟನೆ ಸಂಭವಿಸುವವರೆಗಿನ ಅವಧಿ (365) ದಿವಸಗಳ ಒಂದು ಸ್ಥಿರ ಅವಧಿ ಎಂದು ಅವರು ಮೊದಲು ಗಣಿಸಿದರು. ಬಳಿಕ ಇದು (365.25) ದಿವಸಗಳಿಗೆ ಹೆಚ್ಚುಸಮವಾಗಿದೆಯೆಂದು ಕಂಡುಕೊಂಡರು (ಇಂದಿನ ಬೆಲೆ 365.2422 ದಿವಸಗಳು). ಈ ವೈಜ್ಞಾನಿಕ ಕೊಡುಗೆ ಒಂದನ್ನು ಬಿಟ್ಟರೆ ಬಾಕಿ ಯಾವ ವಿಚಾರಗಳಲ್ಲೂ ಪ್ರಾಚೀನ ಈಜಿಪ್ಷಿಯನ್ನರ ಸಿದ್ದಿಸಾಧನೆ ಗಮನಾರ್ಹವಲ್ಲ.

ಗ್ರೀಸ್ ಮತ್ತು ಅಲೆಗ್ಸಾಂಡ್ರಿಯ

ಬದಲಾಯಿಸಿ

ಆಕಾಶದ ವಿದ್ಯಮಾನಗಳನ್ನು ಕುರಿತು ಪ್ರಾಚೀನ ಗ್ರೀಕರ ಪರಿಕಲ್ಪನೆಗಳು ಹೆಚ್ಚು ಶಾಸ್ತ್ರೀಯವಾಗಿದ್ದುವು. ಪೈಥಾಗೊರಸ್‍ನಿಂದ (ಕ್ರಿ. ಪೂ. 6ನೆಯ ಶತಮಾನ) ತೊಡಗಿ ಅರಿಸ್ಟಾಟಲ್ (ಕ್ರಿ.. ಪೂ. 384-322) ವರೆಗೆ ಬೆಳೆದುಬಂದ ಭಾವನೆಗಳಲ್ಲಿ ಕೆಲವಂತೂ ಅತ್ಯಾಧುನಿಕವಾಗಿವೆ. ಭೂಮಿ ಗೋಳಾಕಾರವಾಗಿದೆ ಎಂದು ಅವರು ಸಾಧಿಸಿದ್ದರು. ಅರಿಸ್ಟಾಟಲನ ಪ್ರಕಾರ ಭೂಮಿ ಸ್ಥಿರವಾಗಿದೆ ಎಂದಿತ್ತು. ಆದರೆ ಇತರ ಅನೇಕ ಚಿಂತನಕಾರರು ಭೂಮಿಗೆ ಚಲನೆ ಉಂಟೆಂದು ಭಾವಿಸಿದ್ದರು. ಸಾಮೋಸಿನ ಆರಿಸ್ಟಾರ್ಕಸ್ ಎಂಬಾತ (ಕ್ರಿ. ಪೂ. 3ನೆಯ ಶತಮಾನ) ಭೂಮಿಗೆ ಎರಡು ವಿಧವಾದ ಚಲನೆಗಳಿವೆ-ತನ್ನ ಅಕ್ಷದ ಸುತ್ತ ಆವರ್ತನೆ ಮತ್ತು ಸೂರ್ಯನ ಸುತ್ತ ಪರಿಭ್ರಮಣೆ-ಎಂದು ಸೂಚಿಸಿದ್ದ.[][] ಅಲ್ಲದೆ ಸೌರವ್ಯೂಹದ ಇಂದಿನ ಚಿತ್ರವನ್ನೇ ರಚಿಸಿದ್ದ. ಆದರೆ ಇಂಥ ಕ್ರಾಂತಿಕಾರೀ ಪರಿಕಲ್ಪನೆಗಳನ್ನು ಸ್ವೀಕರಿಸುವ ಮಾನಸಿಕ ಸ್ಥಿತಿಯಲ್ಲಿ ಸಮಕಾಲೀನ ವಿಜ್ಞಾನ ಇರಲಿಲ್ಲ. ಅದೇ ಸುಮಾರಿಗೆ ಎರಟಾಸ್ಥನೀಸ್ ಎಂಬಾತ ಬಲು ಸರಳವೂ, ನಿಷ್ಕೃಷ್ಟವೂ ಆದ ವಿಧಾನದಿಂದ ಭೂಮಿಯ ಪರಿಧಿಯನ್ನು ಖಚಿತವಾಗಿ ನಿರ್ಧರಿಸಿದ.[][] ಗ್ರೀಕರ ಆಕಾಶಜ್ಞಾನ ವರ್ಧಿಸಿದಂತೆ ಅವರು ತಮಗೆ ಕಂಡ ಆಕಾಶ ವಿದ್ಯಮಾನಗಳಿಗೆ ಖಚಿತವಾದ ಒಂದು ಜ್ಯಾಮಿತೀಯ ಪ್ರತಿರೂಪದ ನಿರ್ಮಾಣದ ಕಡೆಗೆ ಲಕ್ಷ್ಯಹರಿಸಿದರು. ಇದರ ಫಲವಾಗಿ ಆಕಾಶವೆಂದರೆ ಖಾಲಿ ಅರ್ಧಗೋಳ; ಅದರ ಕೇಂದ್ರದಲ್ಲಿ ಭೂಮಿ. ಭೂಮಿಯಲ್ಲಿ ಆಧಾರಿತವಾಗಿರುವ ಒಂದು ಅಕ್ಷ ಆಕಾಶವನ್ನು ಎತ್ತಿಹಿಡಿದಿದೆ ಮತ್ತು ಆಕಾಶವನ್ನು ನಿಯತ ದರದಿಂದ ಪೂರ್ವ-ಪಶ್ಚಿಮ ಆವರ್ತನೆಗೆ ಪ್ರೇರಿಸುತ್ತದೆ; ಆಕಾಶದ ಒಳಮುಚ್ಚಿಗೆಗೆ ಅಂಟಿಸಲಾಗಿರುವ ನಕ್ಷತ್ರ ಮುಂತಾದವು ಆಕಾಶದ ಆವರ್ತನ ಚಲನೆಯ ಪರಿಣಾಮವಾಗಿ ಪೂರ್ವ-ಪಶ್ಚಿಮ ದಿಶೆಯ ಸಂಚಾರ ಮಾಡುತ್ತವೆ ಎಂದು ಮುಂತಾಗಿ ತೀರ್ಮಾನಿಸಿದರು. ಸ್ಥಿರನಕ್ಷತ್ರ ಚಿತ್ರಗಳ ಚಲನೆಗೆ ಅನ್ವಯವಾಗುವಂತೆ ಇದೇನೋ ಸಮರ್ಪಕ ವಿವರಣೆ ನೀಡಬಹುದು. ಆದರೆ ಸೂರ್ಯ, ಚಂದ್ರ ಹಾಗೂ ಐದು ಗ್ರಹಗಳ ಅಕ್ರಮ ಚಲನೆಗೆ ಪ್ರತ್ಯೇಕ ವಿವರಣೆ ಕೊಡುವುದು ಅಗತ್ಯ ಎನ್ನಿಸಿತು. ಇಂಥ ವಿವರಣೆ ಭವಿಷ್ಯವನ್ನು-ಎಂದರೆ ಎಂದು ಯಾವ ಗ್ರಹ ಎಲ್ಲಿರುತ್ತದೆ, ಗ್ರಹಣ ಎಂದು ಸಂಭವಿಸುವುದು ಇತ್ಯಾದಿ-ಕರಾರುವಾಕ್ಕಾಗಿ ನುಡಿಯುವ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾದುದ್ದು ಅನಿವಾರ್ಯ. ಕ್ರಿ. ಪೂ. 4ನೆಯ ಶತಮಾನದಲ್ಲಿ ಯೂಡೋಕ್ಸಸ್ ಎಂಬಾತ ಒಂದು ಪರಿಹಾರ ಸೂಚಿಸಿದ. ಇದು ಬಹಳ ಜಟಿಲವಾದ ಪರಿಹಾರ. ಅಲ್ಲದೆ ಇದು ಪರಿಹರಿಸಿದ ಸಮಸ್ಯೆಗಿಂತಲೂ ಸೃಷ್ಟಿಸಿದ ಹೊಸ ಸಮಸ್ಯೆಗಳು ಜಟಿಲತರವಾಗಿದ್ದುವು. ಮುಂದೆ ಪರ್ಗಾದ ಅಪೊಲ್ಲೋನಿಯಸ್ (ಕ್ರಿ. ಪೂ. 3ನೆಯ ಶತಮಾನ) ಸೂಚಿಸಿದ ಪರಿಷ್ಕೃತ ವಿಧಾನವನ್ನು ಹಿಪಾರ್ಕಸ್ (ಕ್ರಿ. ಪೂ. 2ನೆಯ ಶತಮಾನ) ಅನುಸರಿಸಿದ.

ಅದುವರೆಗೆ ಸಂಗೃಹೀತವಾಗಿದ್ದ ಆಕಾಶ ವೀಕ್ಷಣೆಯ ವರದಿಗಳನ್ನು ಆಧರಿಸಿ ಸೂರ್ಯ, ಚಂದ್ರ, ಗ್ರಹಗಳ ಚಲನೆಗೆ ಅರ್ಥ ನೀಡಲು ಈತ ಪ್ರಯತ್ನಿಸಿದ. ಆದರೆ ಲಭ್ಯಮಾಹಿತಿಗಳು ಅಸಂಪೂರ್ಣ ಮಾತ್ರವಲ್ಲ, ಅಸಮರ್ಪಕ ಕೂಡ ಎಂದು ತಿಳಿದುದರಿಂದ ತಾನೇ ಆಕಾಶಕಾಯಗಳ ಕ್ರಮಬದ್ಧ ವೀಕ್ಷಣೆಗಳನ್ನು ಆರಂಭಿಸಿ ಯುಕ್ತ ದತ್ತಾಂಶಗಳ ಸಂಗ್ರಹಣೆಯಲ್ಲಿ ತೊಡಗಿದ. ಇವೆಲ್ಲವನ್ನೂ ಬಳಸಿಕೊಂಡು ಮುಂದೆ ಟಾಲೆಮಿ (ಕ್ರಿ. ಪೂ. 2ನೆಯ ಶತಮಾನ) ಸೌರವ್ಯೂಹವನ್ನು ಕುರಿತ ಒಂದು ಅರ್ಥಪೂರ್ಣ ನಿರೂಪಣೆಯನ್ನು ಮಂಡಿಸಿದ. ಟಾಲೆಮಿ ವ್ಯವಸ್ಥೆಯೆಂದೇ (Ptolemaic system) ಇದರ ಹೆಸರು. ಇದರ ಪ್ರಕಾರ ಭೂಮಿಯೇ ವಿಶ್ವದ ಕೇಂದ್ರ (ಅಂದಿನ ವಿಶ್ವವೆಂದರೆ ಬಲುಮಟ್ಟಿಗೆ ಸೌರವ್ಯೂಹ ಮಾತ್ರ); ಸೂರ್ಯ, ಚಂದ್ರ ಹಾಗೂ ಗ್ರಹಗಳ ತೋರ್ಕೆಯ ದೈನಂದಿನ ಚಲನೆಗಳು ವಾಸ್ತವ ಚಲನೆಗಳೇ; ಸ್ಥಿರಭೂಮಿಯ ಸುತ್ತ ಚಂದ್ರ, ಬುಧ, ಶುಕ್ರ, ಸೂರ್ಯ, ಮಂಗಳ, ಗುರು ಹಾಗೂ ಶನಿ ವೃತ್ತಕಕ್ಷೆಗಳಲ್ಲಿ ಪೂರ್ವ-ಪಶ್ಚಿಮ ದಿಶೆಯಲ್ಲಿ ಸಂಚರಿಸುತ್ತವೆ; ನಕ್ಷತ್ರಗಳು ಶನಿಯಿಂದಲೂ ಆಚೆಗಿದ್ದು ಭೂಮಿಯ ಸುತ್ತ ಪರಿಭ್ರಮಿಸುತ್ತಿರುತ್ತವೆ. ಆಕಾಶಕಾಯಗಳ ಇತರ ವೀಕ್ಷಿತ ಚಲನೆಗಳನ್ನು (ಉದಾಹರಣೆಗೆ ಸೂರ್ಯ ಚಂದ್ರರು ದಿವಸದಿಂದ ದಿವಸಕ್ಕೆ ನಿರಂತರವಾಗಿ ಪಶ್ಚಿಮ-ಪೂರ್ವ ದಿಶೆಯಲ್ಲಿ ಸಂಚರಿಸುತ್ತವೆ; ಗ್ರಹಗಳಿಗೆ ಪಶ್ಚಿಮ-ಪೂರ್ವ, ಪೂರ್ವ-ಪಶ್ಚಿಮ ದಿಶೆಗಳ ಚಲನೆಗಳಿರುವುದು ಮಾತ್ರವಲ್ಲ, ಹಲವೇಳೆ ಅವು ಸ್ತಬ್ದವಾಗಿರುವುದೂ ಉಂಟು). ವಿವರಿಸಲು ಅಧಿಚಕ್ರದ ಪರಿಕಲ್ಪನೆಯನ್ನು ಟಾಲೆಮಿ ಮುಂದಿಟ್ಟ. ಇದರ ಸಾರಾಂಶವಿಷ್ಟೆ: ಒಂದೊಂದು ಕಾಯವೂ ಒಂದು ಚಿಕ್ಕ ವೃತ್ತದ ಕಕ್ಷೆಯ ಮೇಲೆ ಸಂಚರಿಸುತ್ತಿರುವಂತೆಯೇ ಆ ವೃತ್ತದ ಕೇಂದ್ರ ಭೂಮಿ ಕೇಂದ್ರವಾಗಿರುವ ಒಂದು ದೊಡ್ಡ ವೃತ್ತದ ಪರಿಧಿಯ ಮೇಲೆ ಸಂಚರಿಸುತ್ತಿರುತ್ತದೆ.[] ಆರಂಭದಲ್ಲಿ ಈ ವಿವರಣೆ ಸಮರ್ಪಕವಾಗಿ ಏನೋ ತೋರಿತ್ತು. ಆದರೆ ವೀಕ್ಷಿತಾಂಶಗಳು ಹೆಚ್ಚು ಹೆಚ್ಚು ದೊರೆತಂತೆ ಆಕಾಶದಲ್ಲಿ ಕಂಡುಬಂದ ಪೂರ್ಣವಿದ್ಯಮಾನಗಳಿಗೆ ಟಾಲೆಮಿ ವ್ಯವಸ್ಥೆ ಅರ್ಥ ನೀಡುವುದರಲ್ಲಿ ಕುಂಟಿತು. ಪ್ರತಿಯೊಂದು ಸಲವೂ ತಲೆದೋರಿದ ವಿಚಲನೆಗೆ ಹೊಸ ಒಂದು ತಿದ್ದುಪಡಿಯನ್ನು ನೀಡಿ ಟಾಲೆಮಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋದರು. ಮುಂದೆ ಕೊಪರ್ನಿಕಸ್ (1473-1543) ಸೂರ್ಯಕೇಂದ್ರವಾದವನ್ನು ಮಂಡಿಸುವವರೆಗೂ ಟಾಲೆಮಿ ಸಿದ್ದಾಂತ (ಭೂಕೇಂದ್ರವಾದ) ಅದರ ಹಲವಾರು ತಿದ್ದುಪಡಿಗಳ ಸಮೇತ ಅಸ್ತಿತ್ವದಲ್ಲಿತ್ತು. ಕೊಪರ್ನಿಕಸನಾದರೂ ಅಧಿಚಕ್ರಗಳ ಪರಿಕಲ್ಪನೆಯನ್ನು ತೊರೆಯಲು ಸಮರ್ಥನಾಗಲಿಲ್ಲ. ಅದು ನಡೆದದ್ದು ಕೆಪ್ಲರ್‌ನಿಂದ (1571-1630).

ನಂತರದ ಶತಮಾನಗಳಲ್ಲಿ

ಬದಲಾಯಿಸಿ

ಪ್ರಾಚೀನ ಖಗೋಳಶಾಸ್ತ್ರದ ಜೊತೆಗೇ ಹುಟ್ಟಿ ಬೆಳೆದದ್ದು ಫಲಜ್ಯೋತಿಷ್ಯ (ಅಸ್ಟ್ರಾಲಜಿ). ಆಕಾಶಕಾಯಗಳ ಚಲನವಲನಗಳನ್ನೂ, ಮನುಷ್ಯರ ನಡವಳಿಕೆಗಳನ್ನೂ ಗಮನಿಸಿ ಇವುಗಳ ನಡುವೆ ಹೊಂದಾಣಿಕೆ ಏರ್ಪಡಿಸುವ ದಿಶೆಯಲ್ಲಿ ಇದರ ವಿಕಾಸವಾಗಿರಬಹುದು. ಮುಂದೆ, ಆಕಾಶಕಾಯಗಳ ವರ್ತನೆಯ ಭವಿಷ್ಯವನ್ನು ಗಣನೆಗಳ ಆಧಾರದಿಂದ ನುಡಿಯುವುದು ಸಾಧ್ಯವಾದಾಗ ವ್ಯಕ್ತಿಗಳ ಮೇಲೆ ಅಂಥ ವರ್ತನೆಯ ಪರಿಣಾಮಗಳನ್ನು ಮುನ್ನುಡಿಯುವ ಹವ್ಯಾಸ ರೂಢಿಗೆ ಬಂದಿರಬಹುದು. ಇದು ಹೇಗೆಯೇ ಇರಲಿ, ಫಲಜ್ಯೋತಿಷ್ಯದ ಉಗಮ ಆಕಾಶಕಾಯಗಳ ನೇರ ವೀಕ್ಷಣೆ ಮತ್ತು ಅಭ್ಯಾಸಗಳಲ್ಲಿ ಎಂಬುದು ನಿಸ್ಸಂದೇಹ. ಆದರೆ ಶತಮಾನಗಳು ಸಂದಂತೆ ಫಲಜ್ಯೋತಿಷ್ಯ ಸ್ವತಂತ್ರ ಅಸ್ತಿತ್ವ ಪಡೆದಂತೆ ಆಕಾಶಕಾಯಗಳ ವೀಕ್ಷಣೆ ಅಭ್ಯಾಸಗಳು ದೂರವಾದವು. ಇದು ಒಂದು ಬೌದ್ಧಿಕಕ್ರಿಯೆ. ಅನೇಕ ವೇಳೆ ಚಮತ್ಕಾರ ಎನ್ನುವಂತೆ ಬೆಳೆಯಿತು. ಮಧ್ಯಯುಗದಲ್ಲಿ (ಕ್ರಿ.. ಶ. ಸು. 500-1500 ಅವಧಿ) ಫಲಜ್ಯೋತಿಷ್ಯದ ಪ್ರಭಾವ ಹೆಚ್ಚಾಗಿ ಖಗೋಳಶಾಸ್ತ್ರದ ಬೆಳವಣಿಗೆ ಕುಂಠಿತವಾಯಿತು. ಜನ ಮಟ್ಟಸಸ್ಥಿರ ಭೂಮಿಯ ಮೇಲೆ ನಿಶ್ಚಿಂತೆಯಿಂದ ಬಾಳುತ್ತಿದ್ದರು. ವಿಶ್ವಕೇಂದ್ರ ಭೂಮಿ ಎನ್ನುವ ವಿಚಾರದಲ್ಲಿ ಅವರಿಗೆ ಯಾವ ಸಂದೇಹವೂ ಇರಲಿಲ್ಲ.

ಮಧ್ಯಯುಗದ ಕೊನೆಯ ದಿನಗಳು ಬಂದಂತೆ, ಮುಂದುವರಿದಿದ್ದ ಬೇರೆ ಬೇರೆ ರಾಜ್ಯಗಳಿಗೆ ವಿದ್ವಾಂಸರ ವಲಸೆ ವಿನಿಮಯ ಕ್ರಮೇಣ ಹೆಚ್ಚಾಗುತ್ತಿದ್ದವು. ಅದೇ ವೇಳೆ ಭಾರತೀಯ ದಾಶಮಿಕ ಸಂಖ್ಯಾಮಾನ ಪದ್ಧತಿ ಅರ‍್ಯಾಬಿಕ್ ಸಂಖ್ಯೆಗಳು ಇಲ್ಲವೆ ಅರ‍್ಯಾಬಿಕ್ ಸಂಖ್ಯಾಮಾನಪದ್ಧತಿ ಎಂಬ ಹೊಸ ಹೆಸರಿನಿಂದ ಯೂರೋಪ್ ರಾಷ್ಟ್ರಗಳಲ್ಲಿ ಹಬ್ಬಿದುವು.[] ಆಲ್ಮಾಜೆಸ್ಟ್ ಮತ್ತು ಇತರ ಖಗೋಳಶಾಸ್ತ್ರ ಸಂಬಂಧವಾದ ಗ್ರಂಥಗಳು ಮೂಲ ಅರ‍್ಯಾಬಿಕ್ ಭಾಷೆಯಿಂದ ಯೂರೋಪಿನ ಭಾಷೆಗಳಿಗೆ ಆಯಾ ದೇಶಗಳ ರಾಜರ ಪ್ರೇರಣೆ ಪ್ರೋತ್ಸಾಹಗಳಿಂದ ಅನುವಾದಿಸಲ್ಪಟ್ಟವು.[][] ಹೀಗಾಗಿ ಆಕಾಶವನ್ನು ಕುರಿತ ಆಸಕ್ತಿ ಪುನಃ ಕುದುರಿತು. ಕ್ಯಾಸ್ಟೈಲಿನ ಹತ್ತನೆಯ ಆಲ್ಫಾನ್ಸೊ ರಾಜ ಪಂಡಿತರ ಮಂಡಲಿಯನ್ನೇ ನೇಮಕಮಾಡಿ ಗ್ರಹಸ್ಥಾನಗಳನ್ನು ಮುನ್ನುಡಿಯಲು ನೆರವಾಗುವಂಥ ಕೋಷ್ಟಕಗಳ ರಚನೆಗೆ ಕುಮ್ಮಕ್ಕು ನೀಡಿದ. ಇವು ಆಲ್ಫಾನ್ಸೈನ್ ಕೋಷ್ಟಕಗಳೆಂದೇ ಪ್ರಸಿದ್ಧವಾಗಿವೆ (ಕ್ರಿ. ಶ. ಸು. 1270). ಈ ವೇಳೆಗೆ ಟಾಲೆಮಿ ವ್ಯವಸ್ಥೆ ಅಸಂಖ್ಯಾತ ತಿದ್ದುಪಡಿಗಳ ಒಂದು ಮಹಾಗೊಂದಲವೇ ಆಗಿಹೋಗಿತ್ತು. ವಾಸ್ತವಿಕತೆಗೂ, ಸಿದ್ಧಾಂತಕ್ಕೂ ತಾಳೆ ಬೀಳದಿದ್ದಾಗ ಪ್ರತಿ ಸಲವೂ ಸಿದ್ಧಾಂತಕ್ಕೆ ಒತ್ತುಗಂಬಗಳನ್ನು ಕೊಟ್ಟು ತೇಪೆಗಳನ್ನು ಹೊಲಿದು ಸದ್ಯಕ್ಕೆ ಸಾಂಗತ್ಯವನ್ನು ಸಾಧಿಸಿಕೊಳ್ಳುತ್ತಿದ್ದರೇ ವಿನಾ ಸಿದ್ಧಾಂತವನ್ನೇ ಆಮೂಲಾಗ್ರ ತ್ಯಜಿಸುವ ಅಥವಾ ವಿಮರ್ಶಿಸುವ ಯೋಚನೆ ಮಾಡಲಿಲ್ಲ. ಆ ಪಕ್ವ ಕಾಲ ಕೊಪರ್ನಿಕಸ್ ಬರುವವರೆಗೂ ಕಾಯಬೇಕಾಗಿತ್ತು. ಒಂದೊಂದು ಗ್ರಹದ ಚಲನೆಯನ್ನೂ ಮುನ್ನುಡಿಯಲು 40ರಿಂದ 60 ಜಟಿಲ ಅಧಿಚಕ್ರಗಳು, ಅವುಗಳಿಗೆ ಸಂಬಂಧಿಸಿದ ಜಟಿಲ ಗಣನೆಗಳು ಬೇಕಾಗುತ್ತಿದ್ದವು. ಈ ಸಂಕೀರ್ಣ ಜಾಲವನ್ನು ಗಮನಿಸಿದ ಆಲ್ಫಾನ್ಸೋ ರಾಜ ತಾನೇನಾದರೂ ಸೃಷ್ಟಿಕಾಲದಲ್ಲಿ ಇದ್ದುದಾಗಿದ್ದರೆ ಭಗವಂತನಿಗೆ ಸರಿಯಾದ ಹಿತೋಕ್ತಿ ನೀಡುತ್ತಿದ್ದೇನೆಂದು ಉದ್ಗರಿಸಿದುದಾಗಿ ವದಂತಿ. ಅಂದರೆ ಪ್ರಪಂಚ ಇಷ್ಟೊಂದು ಸಂಕೀರ್ಣವಾಗಿರಲಾರದು ಎಂದು ಅವನ ಅಂತರ್ವಾಣಿ ಮಿಡಿಯುತ್ತಿತ್ತು.

ಖಗೋಳಶಾಸ್ತ್ರದಲ್ಲಿ ಕ್ರಾಂತಿ

ಬದಲಾಯಿಸಿ

16ನೆಯ ಶತಮಾನದ ತರುಣದಲ್ಲಿ ವಿಜ್ಞಾನ, ಅದರಂತೆಯೇ ಖಗೋಳಶಾಸ್ತ್ರ, ಒಂದು ಕ್ರಾಂತಿಯ ಅಂಚಿನಲ್ಲಿ ನಿಂತಿತ್ತು. ಯೂರೋಪಿನ ಜನ ಆಗ ಹೆಚ್ಚೆಚ್ಚು ಸಾಹಸಪ್ರಿಯರಾಗುತ್ತಿದ್ದರು. ಕೊಲಂಬಸ್ ನಡೆಸಿದ ನವಪ್ರಪಂಚದ ಅನ್ವೇಷಣೆ ಚಿಂತನಾಕಾರರ ಮುಂದೆ ಹೊಸ ಸವಾಲುಗಳನ್ನು ಒಡ್ಡಿತು: ಹಾಗಾದರೆ ಭೂಮಿ ಚಪ್ಪಟೆ ಆಗಿಲ್ಲ, ಪಶ್ಚಿಮಾಭಿಮುಖವಾಗಿ ತೇಲಿದಾತ ಭೂಮಿಯ ಅಂಚನ್ನು ತಲುಪಿ ಅಲ್ಲಿಂದ ಕೆಳಗೆ ಪಾತಾಳಕ್ಕೆ ಬಿದ್ದುಹೋಗುವುದಿಲ್ಲ ಎಂದು ಖಾತ್ರಿಯಾಯಿತು. 15 ನೆಯ ಶತಮಾನದ ಮಧ್ಯಭಾಗದಲ್ಲಿ ಯೋಹಾನ್ ಗೂಟೆನ್‌ಬರ್ಗ್ ಯಾಂತ್ರಿಕ ಮುದ್ರಣ ವಿಧಾನವನ್ನು ಉಪಜ್ಞಿಸಿದ. ಇದರಿಂದ ಗ್ರಂಥಗಳ ಮುದ್ರಣಕ್ಕೂ, ಜ್ಞಾನವಿನಿಮಯಕ್ಕೂ ಹೊಸ ಸಂವೇಗ ಲಭಿಸಿತು.

ಖಗೋಳಶಾಸ್ತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿ ಅದರ ಇತಿಹಾಸಕ್ಕೆ ಹೊಸ ತಿರುವನ್ನೂ, ಆಯಾಮವನ್ನೂ ನೀಡಿದ ಪ್ರಾರಂಭಕಾರರಲ್ಲಿ ಮುಖ್ಯರು ಕೊಪರ್ನಿಕಸ್ (1473-1543), ಟೈಕೊ ಬ್ರಾಹೆ (1546-1601), ಗೆಲಿಲಿಯೊ (1564-1642), ಕೆಪ್ಲರ್ (1571-1630) ಮತ್ತು ನ್ಯೂಟನ್ (1642-1727). ವಿಜ್ಞಾನವೂ, ಧಾರ್ಮಿಕ ವಿಧಿಗಳೂ ನಿಕಟವಾಗಿ ಹೊಂದಿಕೊಂಡು ಎರಡನೆಯದರ ಅನುಯಾಯಿಯಾಗಿ ಮೊದಲಿನದು ಇದ್ದ ಕಾಲದಲ್ಲಿ ಭೂಮಿಕೇಂದ್ರವಾದದ ವಿರುದ್ಧ ಕನಸಿನಲ್ಲಿ ಚಿಂತಿಸುವುದು ಕೂಡ ಅಪರಾಧವಾಗಿತ್ತು. ಅಂಥ ದಿವಸಗಳಲ್ಲಿ ಧರ್ಮಶಾಸ್ತ್ರ ಏನೇ ಹೇಳಲಿ ಲಭ್ಯ ಪುರಾವೆಗಳ ಭಾರ ತಡೆಯಲಾಗದೆ ಕುಸಿಯುತ್ತಿದ್ದ ಟಾಲೆಮಿ ವ್ಯವಸ್ಥೆಗೆ ಮಂಗಳ ಹಾಡಿದವ ಕೊಪರ್ನಿಕಸ್. ಸೂರ್ಯಕೇಂದ್ರವಾದದ ಸ್ಥಾಪಕನಿವ. ಆದರೆ ಇವನು ಇದನ್ನು ಧೈರ್ಯವಾಗಿ ಪ್ರಚುರ ಮಾಡಲಾರದೆ ಧೃತಿಗುಂದಿ ಅಸುನೀಗಬೇಕಾಯಿತು.

ಇವನಿಂದ ಮುಂದಿನ ಹೆಜ್ಜೆಯನ್ನು ಇಟ್ಟವ ಟೈಕೊ ಬ್ರಾಹೆ. ಆಕಾಶಕಾಯಗಳ ವಿಚಾರವಾಗಿ ಶತಮಾನಗಳ ಕಾಲದಿಂದ ಸಂಗೃಹೀತವಾಗಿದ್ದ ಮಾಹಿತಿಗಳನ್ನು ಕಲೆಹಾಕಿದ. ಮತ್ತು ತನ್ನದೇ ಆದ ಕ್ರಮದಲ್ಲಿ ವ್ಯವಸ್ಥಿತವಾಗಿ, ಒಂದು ಆಧುನಿಕ ವೀಕ್ಷಣಮಂದಿರದಲ್ಲಿ ಕಾರ್ಯ ನಡೆಯುವ ರೀತಿಯಲ್ಲಿ, ದತ್ತಾಂಶಗಳ ಸಂಗ್ರಹಣೆಯಲ್ಲಿ ಉದ್ಯುಕ್ತನಾದ. ಆಕಾಶಕಾಯಗಳ ವೀಕ್ಷಣೆಯಲ್ಲೇ ಮುಳುಗಿ ಹೋಗಿದ್ದ ಟೈಕೊಬ್ರಾಹೆಗೆ ಆ ವರದಿಗಳ ಗೊಂಡಾರಣ್ಯದಿಂದ ಗ್ರಹಗಳ ಚಲನೆಗಳನ್ನು ಕುರಿತ ಗಣಿತ ಸೂತ್ರಗಳನ್ನು ಸಾರೀಕರಿಸಲು ಬೇಕಾದ ವ್ಯವಧಾನವೂ ಇರಲಿಲ್ಲ; ಗಣಿತ ಜ್ಞಾನವೂ ಇರಲಿಲ್ಲ. ಇವನದು ಕ್ಷೇತ್ರಕಾರ್ಯ.

ಅದರಿಂದ ಮುಂದಿನ ಮಟ್ಟದ ಬೌದ್ಧಿಕ ಸೂತ್ರೀಕರಣ ಮಾಡಲು ಅದೇ ಕಾಲದಲ್ಲಿ ಒದಗಿಬಂದಾತ ಕೆಪ್ಲರ್. ಕೆಪ್ಲರನ ನಿಯಮಗಳು ಎಂದು ಪ್ರಸಿದ್ಧವಾಗಿರುವ ಮೂರು ಸಂಗತ ನಿರೂಪಣೆಗಳು ತತ್‌ಕ್ಷಣ ಸೌರವ್ಯೂಹವನ್ನು ಒಂದು ಸುಂದರ ಜ್ಯಾಮಿತೀಯ ಪ್ರರೂಪದಲ್ಲಿ ನೆಲೆನಿಲ್ಲಿಸಿದುವು; ಅವು ಸೌರವ್ಯೂಹಕ್ಕೆ ಸುಭದ್ರವಾದ ಗಣಿತೀಯ ಚೌಕಟ್ಟನ್ನು ಒದಗಿಸಿದುವು. ಆಲ್ಫಾನ್ಸೋ ಹೇಳಿದ ಕೊಂಕು ನುಡಿಗೆ ಇಲ್ಲಿ ಸರಿಯಾದ ಉತ್ತರ ದೊರೆಯಿತು. ಸೌರವ್ಯೂಹ ಸರಳ ರಚನೆಯೇ; ಆದರೆ ಅದನ್ನು ಅರಿಯಲು ಮಾತ್ರ ಅಜ್ಞಾನ, ಮೂಢನಂಬಿಕೆಗಳು, ಮತಾಂಧತೆ ಮುಂತಾದ ಗೊಂಡಾರಣ್ಯಗಳ ಅಪಾಯಗಳನ್ನು ಮಾನವ ಎದುರಿಸಿ ಉತ್ತರಿಸಿ ಎತ್ತರ ಏರಬೇಕಾಯಿತಷ್ಟೆ. ಅದುವರೆಗೆ ಕೇವಲ ವಿವರಣಾತ್ಮಕ ಶಾಸ್ತ್ರವೆಂದು ದ್ವಿತೀಯಕ ಅಂತಸ್ತನ್ನು ಪಡೆದಿದ್ದ (ಗಣಿತ, ವೈದ್ಯ ಮುಂತಾದವು ಪ್ರಾಥಮಿಕ ಅಂತಸ್ತನ್ನು ಪಡೆದಿದ್ದುವು) ಖಗೋಳಶಾಸ್ತ್ರಕ್ಕೆ ನಿಖರ ವಿಜ್ಞಾನವೆಂಬ ಪ್ರಾಥಮಿಕ ಅಂತಸ್ತನ್ನು ಒದಗಿಸಿದವ ಕೆಪ್ಲರ್. ಆಧುನಿಕ ಗಣಿತೀಯ ಖಗೋಳಶಾಸ್ತ್ರದ ಪ್ರವರ್ತಕ ಕೆಪ್ಲರ್. ಗೆಲಿಲಿಯೊ ಮತ್ತು ಕೆಪ್ಲರ್ ಸರಿಸುಮಾರಾಗಿ ಸಮಕಾಲೀನರು.

ಕೆಪ್ಲರ್ ಪ್ರಸಿದ್ಧಿಗೆ ಬರುವ ಮೊದಲೇ ಗೆಲಿಲಿಯೊ ಖ್ಯಾತನಾಮನಾಗಿದ್ದ. ಖಗೋಳಶಾಸ್ತ್ರದ ಕ್ರಾಂತಿಕಾರೀ ಪರಿವರ್ತನೆಗೆ ಗೆಲಿಲಿಯೊ ನೀಡಿದ ಟೆಲಿಸ್ಕೋಪ್ ಉಪಕರಣದ ಕೊಡುಗೆ ಮಹತ್ತರವಾದದ್ದು.[][೧೦] 1610 ನೆಯ ಇಸವಿ ಮನುಷ್ಯನ ಕಣ್ಣುಗಳ ಎದುರು ಹೊಸ ವಿಸ್ತೃತ ಆಕಾಶವನ್ನು ಅನಾವರಣಗೊಳಿಸಿತು. ಅದುವರೆಗೆ ತನ್ನ ಕಣ್ಣುಗಳ ಪರಿಮಿತಿಯನ್ನು ಅವಲಂಬಿಸಿ ಆಕಾಶಕಾಯಗಳ ವೀಕ್ಷಣೆ ಮಾಡುತ್ತಿದ್ದ ಮಾನವನಿಗೆ ಆ ವರ್ಷ ಬಳಕೆಗೆ ಬಂದ ಗೆಲಿಲಿಯೊನ ಟೆಲಿಸ್ಕೋಪ್ ಹೊಸ ಬೆಳಕನ್ನು ಹೊಸ ವಿಸ್ತಾರವನ್ನೂ ಎದುರಿಟ್ಟಿತು. ಶುಕ್ರಗ್ರಹದ ಕಾಂತಿಯಲ್ಲಿ ಏರಿಳಿತಗಳನ್ನು ಕಂಡು ಗುರುತಿಸಿದ್ದರೂ ಅದರ ಆಕಾರ ಸದಾ ಗುಂಡಗೆ ಎಂದು ನಂಬಲಾಗಿತ್ತು. ಆದರೆ ಟೆಲಿಸ್ಕೋಪ್ ಗೆಲಿಲಿಯೊನ ಎದುರಿಟ್ಟ ದೃಶ್ಯವೇ ಬೇರೆ. ಶುಕ್ರ ಸಹ ಚಂದ್ರನಂತೆ ಕಲೆಗಳನ್ನು (ಫೇಸಸ್) ಪ್ರದರ್ಶಿಸುತ್ತದೆ ಎಂದು ತಿಳಿಯಿತು. ಅಂದರೆ ಚೌತಿ ಶುಕ್ರ ದಶಮಿ ಶುಕ್ರ (ಅದೇ ರೀತಿ ಬುಧ ಕೂಡ) ಇತ್ಯಾದಿ ದೃಶ್ಯಗಳು ಅಪೂರ್ವವಲ್ಲ ಎಂದು ವೇದ್ಯವಾಯಿತು. ಇದು ಟಾಲೆಮಿ ತೀರ್ಮಾನಗಳಿಗೆ ತೀರ ವಿರುದ್ಧವಾಗಿದ್ದುವು. ಗುರುಗ್ರಹದ ನಾಲ್ಕು ಉಪಗ್ರಹಗಳನ್ನು (ಎಂದರೆ ಗುರುವಿನ ಚಂದ್ರರನ್ನು) ಮೊದಲು ನೋಡಿದ್ದು ಗೆಲಿಲಿಯೊ. ಆಕಾಶಗಂಗೆಯನ್ನು ಟೆಲಿಸ್ಕೋಪಿನಿಂದ ನೋಡಿ ಆ ಬೆಳಕಿನ ಹೊನಲು ಅಸಂಖ್ಯಾತ ನಿಬಿಡನಕ್ಷತ್ರಗಳಿಂದ ಆಗಿದೆ ಎಂದು ತಿಳಿದಾಗ ನೂತನ ವಿಸ್ಮಯ ಲೋಕವೊಂದು, ಆದ್ದರಿಂದ ಒಂದು ಹೊಸ ಸವಾಲು ಕೂಡಾ ಮಾನವನ ಎದುರು ತೆರೆದಂತಾಯಿತು.

ಹೀಗೆ ಕೊಪರ್ನಿಕಸ್‌ನಿಂದ ತೊಡಗಿ ಕೆಪ್ಲರ್, ಗೆಲಿಲಿಯೊ ವರೆಗೆ ಖಗೋಳಶಾಸ್ತ್ರ ತೀವ್ರವಾದ ಆಂತರಿಕ ಆಂದೋಲನ ಕ್ಷೋಭೆಗಳಿಗೆ ಈಡಾಗಿ ತನ್ನ ವೈಜ್ಞಾನಿಕ ನೆಲೆಯನ್ನು ಭದ್ರಗೊಳಿಸಿಕೊಂಡಿತು. ಆದರೆ ಇವೆಲ್ಲವುಗಳ ಪರಿಣಾಮವಾಗಿ ತಲೆದೋರಿದ್ದು ಎಂದಿಗಿಂತ ತೀವ್ರವಾಗಿ ಇದು ಹೀಗೇಕೆ ಎಂಬ ಪ್ರಶ್ನೆ. ಸೂರ್ಯನ ಸುತ್ತಲೂ ಗ್ರಹಗಳು ಪರಿಭ್ರಮಿಸುವಂತೆ ವಿಧಿಸುವ ಬಲ ಯಾವುದು? ಸೌರವ್ಯೂಹವನ್ನೂ ನಕ್ಷತ್ರಲೋಕವನ್ನೂ ಬಂಧಿಸಿರುವ ಬಲ ಏನು? ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರವಿತ್ತವ ನ್ಯೂಟನ್. ಈತ ಅವಿಷ್ಕರಿಸಿದ ವಿಶ್ವಗುರುತ್ವಾಕರ್ಷಣ ನಿಯಮ (ಯೂನಿವರ್ಸಲ್ ಲಾ ಆಫ್ ಗ್ರ್ಯಾವಿಟೇಷನ್) ವಿಶ್ವಕ್ಕೆ ಗಣಿತೀಯವಾಗಿ ಸರಳ ಸಂಗತ ವಿವರಣೆ ನೀಡುವುದರಲ್ಲಿ ಯಶಸ್ವಿಯಾಯಿತು. ಗುರುತ್ವಾಕರ್ಷಣ ಬಲದ ಪರಿಣಾಮವಾಗಿ ಸೌರವ್ಯೂಹ ನಿಂತಿದೆ, ಸೂರ್ಯನ ಸುತ್ತ ಗ್ರಹಗಳು (ಕೆಪ್ಲರನ ನಿಯಮಾನುಸಾರ) ಪರಿಭ್ರಮಿಸುತ್ತವೆ, ಅದೇ ಪ್ರಕಾರ ಚಂದ್ರ ಭೂಮಿಯ ಸುತ್ತ ಪರಿಭ್ರಮಿಸುತ್ತಿದೆ ಎಂದು ಮುಂತಾಗಿ ವಿವರಿಸುವುದು ಸಾಧ್ಯವಾಯಿತು. ಅಲ್ಲದೇ ಗ್ರಹ, ಉಪಗ್ರಹ, ಧೂಮಕೇತು ಮುಂತಾದವುಗಳ ಚಲನೆಗಳನ್ನು ಕುರಿತು ನಿಖರವಾಗಿ ಭವಿಷ್ಯವನ್ನು ಹೇಳುವುದು ಮತ್ತು ಹಾಗೆ ಹೇಳಿದ್ದನ್ನು ತಾಳೆನೋಡಿ ಸ್ಥಿರೀಕರಿಸುವುದು ಸುಲಭವಾಯಿತು.

ಖಗೋಳಬಲವಿಜ್ಞಾನ

ಬದಲಾಯಿಸಿ

ಖಗೋಳವನ್ನೂ ಖಗೋಳೀಯ ಕಾಯಗಳನ್ನು ಗಣಿತೀಯವಾಗಿ ವಿವರಿಸುವ ಶಾಸ್ತ್ರಕ್ಕೆ ಈ ಹೆಸರುಂಟು (ಸೆಲೆಸ್ಟಿಯಲ್ ಮೆಕ್ಯಾನಿಕ್ಸ್). ಇದರ ಆಧಾರಸೂತ್ರ ನ್ಯೂಟನ್ನನ ವಿಶ್ವಗುರುತ್ವಾಕರ್ಷಣ ನಿಯಮ. ಇದರ ನಿಗಮನಗಳಾಗಿ (ಡಿಡಕ್ಷನ್) ಕೆಪ್ಲರನ ನಿಯಮಗಳು ಉದ್ಭವಿಸುತ್ತವೆ. ಇವುಗಳ ಅನ್ವಯದಿಂದ ಖಗೋಳೀಯ ಕಾಯಗಳ ಚಲನೆಯನ್ನು ಕುರಿತ ಗಣಿತವನ್ನು ಬೆಳೆಸಿದ್ದಾರೆ. ಮುಂದೆ ಈ ಗಣಿತ ಕಾಲಾನುಕಾಲಕ್ಕೆ ಪರಿಷ್ಕರಣಗೊಂಡು ಖಗೋಳದ ಸೂಕ್ಷ್ಮ ವಿವರಣೆಗಳನ್ನು ಸಹ ಅರ್ಥವಿಸಲು ಸಮರ್ಥವಾಯಿತು. ಗಣಿತದ ಜೊತೆಯಲ್ಲೇ ಹೆಜ್ಜೆ ಇಟ್ಟು ಖಗೋಳಶಾಸ್ತ್ರದ ಅಭ್ಯುದಯಕ್ಕೆ ಕೊಡುಗೆ ನೀಡಿದ್ದು ನಾನಾ ವಿಧದ ಪರಿಷ್ಕೃತ ವೀಕ್ಷಣ ಸಾಧನಗಳು ಮತ್ತು ವಿಧಾನಗಳು-ಟೆಲಿಸ್ಕೋಪುಗಳು, ಫೋಟೋಗ್ರಾಫಿ ತಂತ್ರಗಳು, ಸಂಕ್ರಾಂತಿ ಉಪಕರಣ (ಟ್ರಾನ್ಸಿಟ್ ಇನ್‍ಸ್ಟ್ರುಮೆಂಟ್), ರೋಹಿತಗಳು ಇತ್ಯಾದಿ.

ಆಧುನಿಕ ಖಗೋಳಶಾಸ್ತ್ರ

ಬದಲಾಯಿಸಿ

ಆಧುನಿಕ ಖಗೋಳಶಾಸ್ತ್ರ ಖಚಿತವಾಗಿ ಆರಂಭವಾದದ್ದು ನ್ಯೂಟನ್ನಿನ ಕಾಲದಿಂದ. ಇದರ ಅಡಿಪಾಯವನ್ನು ಹಾಕಿದವ ಕೊಪರ್ನಿಕಸ್; ವೇದಿಕೆಯನ್ನು ನಿರ್ಮಿಸಿದವರು ಮುಖ್ಯವಾಗಿ ಗೆಲಿಲಿಯೊ ಹಾಗೂ ಕೆಪ್ಲರ್. ಆಧುನಿಕ ಸಿದ್ಧಾಂತದ ಪ್ರಕಾರ ಸೌರವ್ಯೂಹ ಹಾಗೂ ವಿಶ್ವದ ಚಿತ್ರ ಹೇಗಿದೆಯೆಂಬುದನ್ನು ಮುಂದೆ ಸಂಕ್ಷೇಪವಾಗಿ ಬರೆದಿದೆ.

ಸೌರವ್ಯೂಹ

ಬದಲಾಯಿಸಿ

ಸೂರ್ಯ ಒಂದು ನಕ್ಷತ್ರ. ಇದು ಪ್ರಬಲ ಶಕ್ತಿಯ ಆಕರ. ಸೂರ್ಯ, ಸೂರ್ಯ ನಿಯಂತ್ರಿಸುವ ಒಂಬತ್ತು ಗ್ರಹಗಳು, ಅವುಗಳಲ್ಲಿ ಹಲವು ಗ್ರಹಗಳ ಉಪಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಇವೆಲ್ಲವುಗಳ ಒಟ್ಟು ಹೆಸರು ಸೌರವ್ಯೂಹ (ಸೋಲಾರ್ ಸಿಸ್ಟಂ). ಸೂರ್ಯನಿಂದ ಏರುವ ದೂರಗಳಲ್ಲಿ ಈ ಗ್ರಹಗಳು (ಈಗ ಖಚಿತವಾಗಿರುವಂತೆ) ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೋ. ಮಂಗಳ ಮತ್ತು ಗುರು ಕಕ್ಷೆಗಳ ನಡುವೆ ಕ್ಷುದ್ರಗ್ರಹಗಳು ಇವೆ.[೧೧] ಗ್ರಹಗಳಿಗೆ ಇರುವ ಉಪಗ್ರಹಗಳ ವಿವರಗಳು ಹೀಗಿವೆ: ಭೂಮಿ-1 ಮಂಗಳ-2, ಗುರು-61, ಶನಿ-31, ಯುರೇನಸ್-21, ನೆಪ್ಚೂನ್-11. ಗ್ರಹಗಳು ಸೂರ್ಯನ ಸುತ್ತ, ಉಪಗ್ರಹಗಳು ತಮ್ಮ ಮಾತೃಗ್ರಹಗಳ ಸುತ್ತ, ಕೆಪ್ಲರನ ನಿಯಮಾನುಸಾರ ಪರಿಭ್ರಮಿಸುತ್ತವೆ. ಉಪಗ್ರಹಗಳಲ್ಲಿರುವ ಗ್ರಹಗಳು ಆ ಉಪಗ್ರಹಗಳ ಸಮೇತ ಸೂರ್ಯನ ಸುತ್ತ ಪರಿಭ್ರಮಣೆಯನ್ನು ಮಾಡುವವು. ಸೌರವ್ಯೂಹದ ಎಲ್ಲ ಗ್ರಹೋಪಗ್ರಹಗಳಿಗೂ ಎರಡು ವಿಧವಾದ ಚಲನೆಗಳಿವೆ: ಒಂದು, ಅಕ್ಷದ ಸುತ್ತ ಆವರ್ತನೆ: ಎರಡು, ಮಾತೃಕಾಯದ (ಗ್ರಹಕ್ಕೆ ಮಾತೃಕಾಯ ಸೂರ್ಯ; ಉಪಗ್ರಹಕ್ಕೆ ಮಾತೃಕಾಯ ಗ್ರಹ) ಸುತ್ತ ಪರಿಭ್ರಮಣೆ. ಈ ಚಲನೆಗಳು ಏಕಕಾಲದಲ್ಲಿ ಗೊತ್ತಾದ (ಎಂದರೆ ಗಣಿತನಿಯಮಾನುಸಾರ ಗಣಿಸಬಹುದಾದ) ದರದಲ್ಲಿ, ನಡೆಯುತ್ತವೆ. ಧೂಮಕೇತುಗಳು ಸಹ ಸೌರವ್ಯೂಹದ ಸದಸ್ಯ ಕಾಯಗಳೇ. ಕೆಲವು ಧೂಮಕೇತುಗಳು ನಿಯತಕಾಲಿಕ. ಇನ್ನು ಕೆಲವು ಒಂದೇ ಸಲ ಕಾಣಿಸಿಕೊಳ್ಳುವುದುಂಟು. ಉಲ್ಕೆಗಳು, ಜನಪ್ರಿಯ ಭಾಷೆಯಲ್ಲಿ ಬೀಳುವ ನಕ್ಷತ್ರಗಳು. ಇವು ಸೌರವ್ಯೂಹದಲ್ಲಿ ಯಾದೃಚ್ಛಿಕವಾಗಿ ಸಂಚರಿಸುವ ಹಿರಿ ಕಿರಿ ಕಾಯಗಳು. ಭೂಮಿಯ ಗುರುತ್ವಾಕರ್ಷಣ ವಲಯವನ್ನು ಪ್ರವೇಶಿಸಿದಾಗ ಭೂತಳದೆಡೆಯ ಸೆಳೆಯಲ್ಪಡುತ್ತವೆ. ಆಗ ವಾಯುಮಂಡಲಕ್ಕೂ ಉಲ್ಕೆಗಳಿಗೂ ಒದಗುವ ಘರ್ಷಣೆಯ ಪರಿಣಾಮವಾಗಿ ಉಷ್ಣ ಜನಿಸಿ ಇವು ಉರಿದು ಹೋಗುತ್ತವೆ. ಒಂದು ಉಲ್ಕೆ ನಮಗೆ ಗೋಚರವಾಗುವುದು ಅದರ ಪಥದ ಉರಿಯುವ ಅಂಶದಲ್ಲಿ ಮಾತ್ರ.

ಆಕಾಶಗಂಗೆ

ಬದಲಾಯಿಸಿ

ಚಂದ್ರರಹಿತ ರಾತ್ರಿಯ ಸ್ವಚ್ಛಾಕಾಶದಲ್ಲಿ, ದಕ್ಷಿಣೋತ್ತರ ದಿಶೆಯಲ್ಲಿ ಹಬ್ಬಿದಂತೆ, ತೋರುವ ಬೆಳಕಿನ ಮಂದ ಹೊನಲು (ಮಿಲ್ಕೀವೇ). ಇದರ ದಾರಿಯಲ್ಲಿರುವ ಕೆಲವು ನಕ್ಷತ್ರಪುಂಜಗಳು ಇವು: ಲಘುಶ್ವಾನ, ಮಹಾವ್ಯಾಧ, ಮಿಥುನ, ವೃಷಭ, ಆರಿಗಾ, ಪರ್ಸಿಯಸ್, ಕೆಶ್ಯಿಯೋಪಿಯ, ಆಂಡ್ರೊಮಿಡ, ಸಿಫಿಯಸ್, ಅಕ್ವಿಲಾ, ಧನು, ವೃಶ್ಚಿಕ, ಸೆಂಟಾರಸ್, ತ್ರಿಶಂಕು ಇತ್ಯಾದಿ. ದಕ್ಷಿಣದಿಂದ ಉತ್ತರಕ್ಕೆ ಆಕಾಶವನ್ನು ಬಳಸಿರುವ ಈ ಹಾಲ ಹೊಳೆಯಲ್ಲಿ (ಕ್ಷೀರಪಥ) ಬಗೆಗಣ್ಣು ವಿಷ್ಣುಪಾದೋದ್ಭವೆ ದೇವಗಂಗೆಯನ್ನು ಕಂಡಿತು. ಉತ್ತರದ ಹಿಮವತ್ಪರ್ವತದ ಕಡೆಗೆ ಅದು ವ್ಯಾಪಿಸಿದೆ. ಅಲ್ಲಿ ಅದು ಭೂಮಿಗೆ ಹರನ ಜಡೆಯಿಂದ ಇಳಿದಿದೆ ಎಂದು ಸಹ ಕಲ್ಪನೆ ಕಂಡಿದೆ. ಹಿಮವತ್ಪರ್ವತದ ಬಣ್ಣವೂ ಬಿಳಿ. ಲಕ್ಷೋಪಲಕ್ಷ ನಕ್ಷತ್ರಗಳಿಂದಲೂ ಅಂತರನಕ್ಷತ್ರ ದೂಳು ಮತ್ತು ದೂಳಿನ ಮೋಡಗಳಿಂದಲೂ ಕೂಡಿರುವ ಒಂದು ಮಹಾ ಕಾರ್ಯಾಗಾರ ಆಕಾಶಗಂಗೆ. ನಮ್ಮ ಆಕಾಶಗಂಗೆಯ ಹೊರವಲಯದ ತೀರಾ ಸಾಮಾನ್ಯ ದರ್ಜೆಯ ಸದಸ್ಯ ಸೂರ್ಯ.

ನಕ್ಷತ್ರಗಳು

ಬದಲಾಯಿಸಿ

ಇವೆಲ್ಲವೂ ಉರಿಯುತ್ತಿರುವ ಅನಿಲರಾಶಿಗಳು. ದ್ರವ್ಯ ಇವುಗಳಲ್ಲಿ ಅತ್ಯಂತ ಉದ್ರಿಕ್ತಸ್ಥಿತಿಯಲ್ಲಿ ಇರುವುದು. ನಕ್ಷತ್ರದ ಕಾವು ಏರಿದಂತೆ ಈ ಉದ್ರಿಕ್ತಸ್ಥಿತಿ ಏರಿ ದ್ರವ್ಯ ತನ್ನ ಚತುರ್ಥ ಸ್ಥಿತಿಯಾದ (ಮೊದಲ ಮೂರು ಸ್ಥಿತಿಗಳು ಘನ, ದ್ರವ, ಅನಿಲ) ಪ್ಲಾಸ್ಮಾಸ್ಥಿತಿಯನ್ನೈದಿರುವುದು. ನಕ್ಷತ್ರಗಳ ಸಾಲಿನಲ್ಲಿ ನಮ್ಮ ಸೂರ್ಯ ತೀರಾ ಸಾಮಾನ್ಯವಾದ ಮಧ್ಯಮ ದರ್ಜೆಯ ನಕ್ಷತ್ರ. ನಕ್ಷತ್ರಗಳನ್ನು ಕಾಣುವ ನಕ್ಷತ್ರಗಳು, ಕಾಣದ ನಕ್ಷತ್ರಗಳು ಎಂಬ ಎರಡು ಗುಂಪುಗಳಾಗಿ ವಿಭಾಗಿಸಬಹುದು. ಎಂದರೆ, ಮೊದಲಿನವು ವಿದ್ಯುತ್ಕಾಂತ ರೋಹಿತದ ಕಾಣುವ ಭಾಗವನ್ನು ಸಹ ವಿಸರಿಸುತ್ತವೆ. ಎರಡನೆಯವು ಕಾಣದ ಭಾಗವನ್ನು ಮಾತ್ರ ವಿಸರಿಸುತ್ತವೆ. ಎರಡನೆಯ ಗುಂಪಿನಲ್ಲಿ ರೇಡಿಯೋ ನಕ್ಷತ್ರಗಳು, ಎಕ್ಸ್‌-ಕಿರಣ, ಗ್ಯಾಮ, ನ್ಯೂಟ್ರಿನೋ ಮುಂತಾದ ನಕ್ಷತ್ರಗಳು ಸೇರಿವೆ. ವಾಸ್ತವಿಕವಾಗಿ ವಿಶ್ವದ ಮಹಾಶೂನ್ಯದಲ್ಲಿ ನಕ್ಷತ್ರಗಳು ಅತಿ ವಿರಳವಾಗಿ ಹರಡಿ ಹಂಚಿಹೋಗಿರುವ ವಿದ್ಯುತ್ಕಾಂತ ಶಕ್ತಿಯ ಆಕರಗಳು. ಪ್ರತಿಯೊಂದಕ್ಕೂ (ನಮ್ಮ ಸೂರ್ಯನನ್ನು ಒಳಗೊಂಡಂತೆ) ಚಲನೆ ಉಂಟು. ಆದರೆ ವಿಶ್ವದ ಅನಂತಸೂಕ್ಷ್ಮ ಅಂಶವಾದ ಭೂಮಿಯ ಮೇಲೆ ನಿಂತು ನೋಡುವ ನಮ್ಮ ದೃಷ್ಟಿಯಿಂದ ನಕ್ಷತ್ರಗಳು ಅಚಲವಾಗಿ ತೋರುತ್ತವೆ. ಅವು ತೋರ್ಕೆಯ ಖಗೋಳದ ಮೇಲೆ ಸ್ಥಿರಚಿತ್ರಗಳಾಗಿ ವಿಕ್ಷೇಪಗೊಂಡಂತೆ ಭಾಸವಾಗುತ್ತವೆ. ಈ ಚಿತ್ರಗಳು ಸಾಪೇಕ್ಷವಾಗಿ ಸ್ಥಿರವಾಗಿರುವಂತೆ ಅನ್ನಿಸುತ್ತವೆ. ಹಲವಾರು ಶತಮಾನಗಳು ಉರುಳುವಾಗ ಮಾತ್ರ ನಕ್ಷತ್ರ ಚಿತ್ರಗಳಲ್ಲಿಯೂ ಅವುಗಳ ಸಾಪೇಕ್ಷ ಸ್ಥಾನಗಳಲ್ಲಿಯೂ ಸೂಕ್ಷ್ಮಬದಲಾವಣೆಯನ್ನು ಗುರುತಿಸಬಹುದಷ್ಟೆ.

ನೆಬ್ಯುಲ

ಬದಲಾಯಿಸಿ

ನೀಹಾರಿಕೆ ಎಂದೂ ಕರೆಯುವುದುಂಟು. ಬರಿಗಣ್ಣಿನಿಂದ ನೋಡುವಾಗ ಇಲ್ಲವೇ ಟೆಲಿಸ್ಕೋಪಿನಿಂದ ವೀಕ್ಷಿಸುವಾಗ ಕಾಣುವ ಮೋಡದಂಥ ಅಸ್ಪಷ್ಟ ಹಾಗೂ ಅಚಲ ರಚನೆಗಳೇ ನೆಬ್ಯುಲಗಳು. ಆಂಡ್ರೊಮೀಡದ ಮಹಾನೆಬ್ಯುಲ, ಮಹಾವ್ಯಾಧದ ನೆಬ್ಯುಲ ಮುಂತಾದವು ಸುಪ್ರಸಿದ್ಧವಾದವು. ನೆಬ್ಯುಲಗಳು ನಕ್ಷತ್ರಗಳ ಜನ್ಮಸ್ಥಾನಗಳಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಬ್ರಹ್ಮಾಂಡಗಳು

ಬದಲಾಯಿಸಿ

ಇವು ನಮ್ಮ ಆಕಾಶಗಂಗೆಯಂಥ ಇತರ ನಕ್ಷತ್ರ ವ್ಯವಸ್ಥೆಗಳು (ಗ್ಯಾಲಾಕ್ಸಿಸ್). ಇಂಥ ಒಂದೊಂದು ಬ್ರಹ್ಮಾಂಡವೂ, ಆಕಾಶಗಂಗೆಯಂತೆ ಲೆಕ್ಕಮಾಡಿ ಪೂರೈಸದಷ್ಟು ನಕ್ಷತ್ರಗಳ, ನೆಬ್ಯುಲಗಳ ಮತ್ತು ಇತರ ಕಾಯಗಳ ಸಮುದಾಯಗಳು.[೧೨][೧೩] ಪ್ರತಿಯೊಂದು ವ್ಯವಸ್ಥೆಯೂ ಗುರುತ್ವಾಕರ್ಷಣಬಲದ ಒಂದು ದುರ್ಬಲ ಹಿಡಿತದಿಂದ ಒಂದುಗೂಡಿಕೊಂಡು ಸಮಗ್ರವಾದ ಚಿತ್ರವನ್ನು ಪ್ರದರ್ಶಿಸುತ್ತದೆ ಎಂದು ನಂಬಲಾಗಿದೆ. ಒಂದೊಂದು ಬ್ರಹ್ಮಾಂಡಕ್ಕೂ ಅದರ ಬಿಡಿಕಾಯಗಳ ಚಲನೆಗಳ ಜೊತೆಗೆ, ಸಾಮೂಹಿಕ ಚಲನೆ ಕೂಡ ಉಂಟು.

ವಿಸ್ತರಿಸುತ್ತಿರುವ ವಿಶ್ವ

ಬದಲಾಯಿಸಿ

ಭೂಮಿಯೇ ವಿಶ್ವಕೇಂದ್ರವಾಗಿದ್ದ ಪ್ರಾಚೀನ ಯುಗದಿಂದ ವಿಶ್ವಕ್ಕೆ ಕೇಂದ್ರವಿದೆಯೇ, ವಿಶ್ವದ ವ್ಯಾಪ್ತಿ ಎಷ್ಟು, ವಿಶ್ವ ಎಂದರೇನು ಎಂಬ ಮೂಲಭೂತ ಸಂದೇಹಗಳನ್ನು ಎತ್ತಿರುವ ಆಧುನಿಕ ಯುಗದವರೆಗೆ ಖಗೋಳಶಾಸ್ತ್ರ ನಡೆದು ಬಂದಿರುವ ಹಾದಿಯ ಸಿಂಹಾವಲೋಕನ ಬಲು ರಮ್ಯ. ಇಂದು ವಿಶ್ವವೆಂದರೆ ಬ್ರಹ್ಮಾಂಡಗಳ ಸಮುದಾಯ. ಇದರ ವ್ಯಾಪ್ತಿ ನಮ್ಮ ಎಲ್ಲ ವೀಕ್ಷಣೆಗಳ ಪರಿಮಿತಿಯನ್ನು ಮೀರಿ ಆಕಾಶದಲ್ಲಿ ಕಾಲದಲ್ಲಿ ವಿಸ್ತರಿಸಿಹೋಗಿದೆ. ಇದರ ಬಹ್ವಂಶ ಶೂನ್ಯವಾಗಿಯೇ ಉಳಿದಿದೆ. ಈ ವಿಶ್ವ ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಒಂದು ವಾದ ಉಂಟು. ಇನ್ನೊಂದು ವಾದ ಇದು ಸ್ಥಿರಸ್ಥಿತಿಯಲ್ಲಿಯೇ ಇರುವುದು, ಇಲ್ಲಿ ನಿರಂತರ ಸೃಷ್ಟಿ ನಡೆದೇ ಇದೆ ಎನ್ನುತ್ತದೆ.[೧೪] ಮೂರನೆಯ ವಾದದ ಪ್ರಕಾರ ಇಂದು ವಿಸ್ತರಿಸುತ್ತಿರುವ ವಿಶ್ವ ಯಾವುದೋ ಒಂದು ಪರಿಮಿತಿಯನ್ನು ತಲುಪಿದ ಬಳಿಕ ಸಂಕುಚಿಸಲು ತೊಡಗಿ ಕೊನೆಗೆ ಒಂದು ಸಾಂದ್ರ ಅಖಂಡ ದ್ರವ್ಯ ರಾಶಿ ಆಗುತ್ತದೆ ಎನ್ನುವುದು. ಲಭಿಸಿದ ಮಾಹಿತಿಗಳ ಆಧಾರದ ಮೇಲೆ ಮಂಡಿಸಿರುವ ಊಹೆಗಳಿವು.

ವಿಶ್ವದ ಹುಟ್ಟು ಮತ್ತು ಅದರ ಈಗಿನ ಆಯುಷ್ಯ:

ಬದಲಾಯಿಸಿ

ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ ೧೯೨೦ ರಲ್ಲಿ ಒಂದು ಚಿಕ್ಕ ಕಣದ ಮಹಾ ಸ್ಫೋಟದಿಂದವಿಶ್ವದ ಸೃಷ್ಟಿ ಸುಮಾರು ೧೨ ರಿಂದ ೨೦ ಬಿಲಿಯನ್ ಅಥವಾ ೧೨೦೦-೨೦೦೦ ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು ೧೩.೭೫ ಬಿಲಿಯನ್ ಅಥವಾ ೧೩೭೫ (ಶೇಕಡ ೦.೧೧ ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆದ್ದರಿಂದ ಮಹಾ ಸ್ಪೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು ೧೩೭೫ ಕೋಟಿ ವರ್ಷ (ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.[೧೫]

ವೀಕ್ಷಣಾ ಖಗೋಳಶಾಸ್ತ್ರ

ಬದಲಾಯಿಸಿ
 
I thought of their unfathomable distance, and the slow inevitable drift of their movements out of the unknown past into the unknown future. ~ H. G. Wells

ಎನ್‌ಜಿಸಿ 6397 ಎಂದು ಕರೆಯಲ್ಪಡುವ ಇದು ಹತ್ತಿರದ ಗೋಳಾಕಾರದ ನಕ್ಷತ್ರ ಸಮೂಹಗಳಲ್ಲಿ ಒಂದಾಗಿದೆ. ಈ ಹಬಲ್ ಬಾಹ್ಯಾಕಾಶ ದೂರದರ್ಶಕದ ನೋಟವು ಹೊಳೆಯುವ ಆಭರಣಗಳ ನಿಧಿ ಎದೆಯನ್ನು ಹೋಲುತ್ತದೆ. ಕ್ಲಸ್ಟರ್ 8,200 ಬೆಳಕಿನ ವರ್ಷಗಳ ದೂರದಲ್ಲಿ ಅರಾ ನಕ್ಷತ್ರಪುಂಜದಲ್ಲಿದೆ. ಇಲ್ಲಿ, ನಕ್ಷತ್ರಗಳು ಒಟ್ಟಿಗೆ ತುಂಬಿರುತ್ತವೆ. ನಾಕ್ಷತ್ರಿಕ ಸಾಂದ್ರತೆಯು ನಮ್ಮ ಸೂರ್ಯನ ನಾಕ್ಷತ್ರಿಕ ನೆರೆಹೊರೆಗಿಂತ ಸುಮಾರು ಒಂದು ಮಿಲಿಯನ್ ಪಟ್ಟು ಹೆಚ್ಚಾಗಿದೆ. ಕೋಪಗೊಂಡ ಜೇನುನೊಣಗಳ ಸಮೂಹದಂತೆ ಎನ್‌ಜಿಸಿ 6397 ರಲ್ಲಿನ ನಕ್ಷತ್ರಗಳು ಸಹ ಸ್ಥಿರ ಚಲನೆಯಲ್ಲಿವೆ. ಪ್ರಾಚೀನ ನಕ್ಷತ್ರಗಳು ಒಟ್ಟಿಗೆ ತುಂಬಿರುತ್ತವೆ. ಅವುಗಳಲ್ಲಿ ಕೆಲವು ಅನಿವಾರ್ಯವಾಗಿ ಒಂದಕ್ಕೊಂದು ಘರ್ಷಣೆಗೊಳ್ಳುತ್ತವೆ. ಹತ್ತಿರದಲ್ಲಿ ಗುರಿ ತಪ್ಪುವುದು ಇನ್ನೂ ಹೆಚ್ಚು ಸಾಮಾನ್ಯವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Heath (1913, p. 304). Most modern scholars share Heath's opinion that it is Cleanthes in this passage who is being held as having accused Aristarchus of impiety (see Gent & Godwin 1883, p. 240; Dreyer 1953, p. 138; Prickard 1911, p. 20; Cherniss 1957]], p. 55; for example). The manuscripts of Plutarch's On the Face in the Orb of the Moon that have come down to us are corrupted, however, and the traditional interpretation of the passage has been challenged by Lucio Russo, who insists that it should be interpreted as having Aristarchus rhetorically suggest that Cleanthes was being impious for wanting to shift the Sun from its proper place at the center of the universe (Russo 2013, p. 82; Russo & Medaglia 1996, pp. 113–117).
  2. Dreyer 1953, pp. 135–148; Linton 2004, pp. 38f.. The work of Aristarchus in which he proposed his heliocentric system has not survived. We only know of it now from a brief passage in Archimedes' The Sand Reckoner.
  3. Russo, Lucio (2004). The forgotten revolution : how science was born in 300 BC and why it had to be reborn. Berlin: Springer. pp. 273–277. ISBN 3-540-20396-6. OCLC 52945835.
  4. "Imagine the Universe – The Earth".
  5. Netz 2022, p. 318–319.
  6. Smith & Karpinski 1911, Ch. 7, pp. 99–127.
  7. Toomer 1984, p. 3.
  8. Kunitzsch 1986, p. 89.
  9. "NASA – Telescope History". www.nasa.gov. Archived from the original on 14 February 2021. Retrieved 11 July 2017.
  10. Loker, Aleck (20 November 2017). Profiles in Colonial History. Aleck Loker. ISBN 978-1-928874-16-4. Archived from the original on 27 May 2016. Retrieved 12 December 2015 – via Google Books.
  11. "The Planets". NASA. Retrieved 6 April 2024.
  12. Sparke & Gallagher 2000, p. i
  13. Hupp, Erica; Roy, Steve; Watzke, Megan (August 12, 2006). "NASA Finds Direct Proof of Dark Matter". NASA. Archived from the original on March 28, 2020. Retrieved April 17, 2007.
  14. Friedman, Alexander (December 1922). "Über die Krümmung des Raumes". Zeitschrift für Physik (in ಜರ್ಮನ್). 10 (1): 377–386. Bibcode:1922ZPhy...10..377F. doi:10.1007/BF01332580. S2CID 125190902.
  15. Planck Collaboration (October 2016). "Planck 2015 results. XIII. Cosmological parameters". Astronomy & Astrophysics. 594: Article A13. arXiv:1502.01589. Bibcode:2016A&A...594A..13P. doi:10.1051/0004-6361/201525830. S2CID 119262962. (See Table 4, Age/Gyr, last column.)

ಗ್ರಂಥಸೂಚಿ

ಬದಲಾಯಿಸಿ
ನೈಸರ್ಗಿಕ ವಿಜ್ಞಾನದ ಸಾಮಾನ್ಯ ಉಪವಿಭಾಗಗಳು
ಖಗೋಳಶಾಸ್ತ್ರ | ಜೀವಶಾಸ್ತ್ರ | ರಸಾಯನಶಾಸ್ತ್ರ | ಭೂಶಾಸ್ತ್ರ | ಭೌತಶಾಸ್ತ್ರ