ಆರಿಗಾ
ಆರಿಗಾ ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣುವ ನಕ್ಷತ್ರಪುಂಜ. ಆಕಾಶದ ಉತ್ತರ ವಲಯದಲ್ಲಿ ಪರ್ಸಿಯಸ್ ಪುಂಜ ಮತ್ತು ಮಿಥುನರಾಶಿಗಳ ನಡುವೆ ಇದೆ. ಸುಪ್ರಸಿದ್ಧ ಮಹಾವ್ಯಾಧ ಪುಂಜದಿಂದ (ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಸಂಜೆ ಪೂರ್ವಾಕಾಶದಲ್ಲಿ ಕಾಣುವ ಭವ್ಯ ಚಿತ್ರ) ಉತ್ತರಕ್ಕಿದೆ.
ನಕ್ಷತ್ರಗಳುಸಂಪಾದಿಸಿ
ಆರಿಗಾದಲ್ಲಿರುವ ಅತ್ಯಂತ ಪ್ರಕಾಶಮಾನ ನಕ್ಷತ್ರ ಕಪೆಲ್ಲಾ (α-ಆರಿಗಾ) - ಬ್ರಹ್ಮ ಹೃದಯ. ಇದರ ದೂರ ೪೫ ಜ್ಯೋತಿರ್ವರ್ಷಗಳು. ದೃಗ್ಗೋಚರ ಕಾಂತಿ ಪ್ರಮಾಣದಲ್ಲಿ ಇದರ ಸ್ಥಾನ ೬ (ಸೂರ್ಯ1). ಆರಿಗಾ ಪುಂಜದ ಸ್ವಲ್ಪಾಂಶ ಆಕಾಶಗಂಗೆಯ ಮೇಲೆ ಇದೆ. ಕಪೆಲ್ಲಾದ ಬ್ರಹ್ಮಾಂಡ ರೇಖಾಂಶ (ಗ್ಯಾಲಾಕ್‍ಟಿಕ್ ಲಾಂಗಿಟ್ಯೂಡ್) ಸುಮಾರು ೧೩೦೯. ಆರಿಗಾ ಪುಂಜದ ಪಂಚಮ ನಕ್ಷತ್ರ ಎಪ್ಸಿಲಾನ್ ಆರಿಗಾ ಮಹಾದೈತ್ಯ ನಕ್ಷತ್ರಗಳ (ಸುಪರ್ ಜಯಂಟ್ಸ್) ಸಾಲಿಗೆ ಸೇರಿದೆ. ಇದರ ವ್ಯಾಸ ಸೂರ್ಯವ್ಯಾಸದ ೨,೦೦೦ ಪಟ್ಟು, ಅಂದರೆ ಆರಿಗಾವನ್ನು ಸೂರ್ಯನ ಸ್ಥಾನದಲ್ಲಿಟ್ಟರೆ ಶನಿ, ಯುರೇನಸ್ ಗ್ರಹಗಳ ಕಕ್ಷೆಗಳ ನಡುವಣ ಪ್ರದೇಶದವರೆಗೆ ಈ ನಕ್ಷತ್ರ ವ್ಯಾಪಿಸುತ್ತದೆ. ೧೮೯೧ ರಲ್ಲಿ ಆರಿಗಾಪುಂಜದಲ್ಲಿ ಒಂದು ಹೊಸ ನಕ್ಷತ್ರ ಗೋಚರವಾಯಿತು. ಇಂಥ ನಕ್ಷತ್ರಗಳ ಹೆಸರು ನೋವಾ. ಬರಿಗಣ್ಣಿಂದ ಕಂಡ ಈ ನೋವಾ (ಹೆಸರು ನೋವಾ ಆರಿಗಾ) ಖಗೋಳಜ್ಞರ ವಿಶೇಷ ಕುತೂಹಲವನ್ನು ಆರಿಗಾ ಪುಂಜದೆಡೆಗೆ ಸೆಳೆಯಿತು. ಅಂದು ನೋವಾ ಆರಿಗಾದ ಕಾಂತಿವರ್ಗ (ಮ್ಯಾಗ್ನಿಟ್ಯೂಡ್) ೩.೮; ಇಂದು ೧೫.
ಲ್ಯಾಟಿನ್ ಭಾಷೆಯಲ್ಲಿ ಆರಿಗಾ ಪದದ ಅರ್ಥ ರಥಿಕ. ಆ ರಥಿಕ ತನ್ನ ಬಲಗೈಯಲ್ಲಿ ಲಗಾಮನ್ನೂ, ಎಡಗೈಯಲ್ಲಿ ಆಡು ಮತ್ತು ಅದರ ಮರಿಗಳನ್ನೂ ಹಿಡಿದಿರುವಂತೆ ಬಗೆಗಣ್ಣು ಕಂಡಿದೆ. ಕಪೆಲ್ಲಾ ನಕ್ಷತ್ರ ಆಡಿನ ದೇಹ.