ಪರ್ಸಿಯಸ್ ಎನ್ನುವುದು ಉತ್ತರಾಕಾಶದ ಪ್ರಧಾನ ನಕ್ಷತ್ರಪುಂಜಗಳ ಪೈಕಿ ಒಂದು. ವಿಷುವದಂಶ 3 ಗಂ. ಘಂಟಾವೃತ್ತಾಂಶ 450 ಉ. ಆಕಾಶಗಂಗೆಯ (ಮಿಲ್ಕಿವೇ) ಹಾದಿಯಲ್ಲಿ ಆರೀಗ ಮತ್ತು ಆಂಡ್ರೊಮಿಡ ಪುಂಜಗಳ ನಡುವೆ ಇದೆ. ಈ ಪುಂಜದ 130ಕ್ಕೂ ಹೆಚ್ಚಿನ ನಕ್ಷತ್ರಗಳು ಬರಿ ಕಣ್ಣಿಗೆ ಕಾಣಿಸುತ್ತವೆ. ಗ್ರೀಕರ ಪುರಾಣದ ರೀತ್ಯ ಹಾವುಗೂದಲಿನ ಮೂವರು ರಾಕ್ಷಸಸ್ತ್ರೀಯರ ಪೈಕಿ ಮಿಡ್ಯೂಸ ಎಂಬಾಕೆಯನ್ನು ಸಂಹರಿಸಿದ ಪರ್ಷಿಯಸ್ ಎಂಬಾತನನ್ನು[೧] ಈ ಪುಂಜ ಪ್ರತಿನಿಧಿಸುತ್ತದೆ. ಮಿಡ್ಯೂಸಳನ್ನು ಸಂಹರಿಸಿ ಪರ್ಸಿಯಸ್ ಹಿಂದಿರುಗುತ್ತಿದ್ದಾಗ ಕಡಲದೈತ್ಯವೊಂದರ (ಪೆಗಸಸ್) ಅಪಾಯದಿಂದ ಆಂಡ್ರೊಮಿಡ ರಾಜಕುಮಾರಿಯನ್ನು ಪಾರುಮಾಡಿದ ಎಂಬ ಕಥೆಯೂ ಉಂಟು.[೨] ಈ ಪುಂಜದ ಎರಡು ನಕ್ಷತ್ರಗಳು ಎರಡನೆಯ ಕಾಂತಿ ವರ್ಗದ ನಕ್ಷತ್ರದಷ್ಟು ಪ್ರಕಾಶಬೀರುತ್ತವೆ. ಇವುಗಳಲ್ಲಿ ಒಂದು ಮಿಡ್ಯೂಸಳ ಶಿರವನ್ನು ಪ್ರತಿನಿಧಿಸುತ್ತದೆ. ಇದೇ ಚರಕಾಂತಿಯ ಅಲ್ಗಾಲ್ ನಕ್ಷತ್ರ. ಇನ್ನೊಂದು ಮಿರ್‌ಫಾಕ್. ಪರ್ಸಿಯಸ್ ಪುಂಜದ ಹೆಚ್ಚಿನ ಪ್ರಕಾಶಮಯ ನಕ್ಷತ್ರಗಳ ಪ್ರದೇಶವನ್ನು ದೂರದರ್ಶಕದ ಮೂಲಕ ವೀಕ್ಷಿಸಿದರೆ ದೃಶ್ಯ ಆಕರ್ಷಕವಾಗಿರುತ್ತದೆ. ಈ ಪುಂಜದ ಪ್ರಧಾನ ನಕ್ಷತ್ರಗಳಿಗೂ ಕೆಶಿಯೋಪಿಯ ನಕ್ಷತ್ರಪುಂಜಕ್ಕೂ ನಡುವೆ ಇರುವ ಯಮಳಗುಚ್ಛ ಬರಿಯ ಕಣ್ಣಿಗೆ ಮಸುಕುಬಿಂದುವಾಗಿ ಕಾಣಿಸಿವುದಾದರು ದೂರದರ್ಶಕ ಮೂಲಕ ಅಲ್ಲಿ ನೂರಾರು ಕಿರಿಯ ನಕ್ಷತ್ರಗಳು ಕಾಣಿಸುತ್ತವೆ. 1901ರಲ್ಲಿ ಅಲ್ಗಾಲ್ ನಕ್ಷತ್ರದ ಬಳಿ ನವತಾರೆ (ನೋವಾ) ಕಾಣಿಸಿಕೊಂಡು ಕೆಲವು ತಿಂಗಳುಗಳಲ್ಲೇ ಅದೃಶ್ಯವಾಯಿತೆನ್ನಲಾಗಿದೆ.

ಪರ್ಸಿಯಸ್‍ನಲ್ಲಿರುವ ನಕ್ಷತ್ರಗಳ ಪಟ್ಟಿ

ಉಲ್ಲೇಖಗಳು

ಬದಲಾಯಿಸಿ
  1. Ridpath, I. "Star Tales – Perseus". Retrieved 28 July 2013.
  2. Ridpath, I. "Star Tales – Andromeda". Retrieved 28 July 2013.

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: