ಅಲ್ಗಾಲ್ ನಕ್ಷತ್ರ
ಅಲ್ಗಾಲ್ ನಕ್ಷತ್ರ ಪಾರ್ಥ (ಪರ್ಸಿಯಸ್) ಪುಂಜದ ದ್ವಿತೀಯ ನಕ್ಷತ್ರದ ಹೆಸರು. (ಸೈಂಧವ). ಇದರ ಪ್ರಕಾಶ ಅತಿ ಚಂಚಲವಾಗಿದ್ದುದರಿಂದ ಬಲು ಹಿಂದಿನ ಕಾಲದಿಂದಲೂ ಇದು ಮಾನವನ ಗಮನವನ್ನು ಸೆಳೆದಿತ್ತು. ಎರಡು ನಕ್ಷತ್ರಗಳು ಒಂದರ ಸುತ್ತಲೂ ಇನ್ನೊಂದು ಪರಿಭ್ರಮಿಸುತ್ತ ಗ್ರಹಣ ಉಂಟುಮಾಡುವುದೇ ಇಂಥ ಅತಿಚಾಂಚಲ್ಯದ ಕಾರಣ. ಅಲ್ಗಾಲ್ ನಕ್ಷತ್ರ ಮತ್ತು ಅದರ ಜೊತೆ ನಕ್ಷತ್ರಗಳನ್ನು ಗ್ರಹಣಕಾರಕ ಯಮಳ ನಕ್ಷತ್ರಗಳೆಂದು (ಎಕ್ಲಿಪ್ಸಿಂಗ್ ಬೈನರೀಸ್) ಕರೆಯುತ್ತೇವೆ. ಅಲ್ಗಾಲ್ ನಕ್ಷತ್ರದ ಪ್ರಕಾಶ ವ್ಯತ್ಯಯದ ಕಾಲಾವಧಿ ಸುಮಾರು 69 ಗಂಟೆಗಳು. ಪ್ರತಿ ಎರಡು ದಿನಗಳಿಗೊಮ್ಮೆ ನಿಯತಕಾಲಿಕವಾಗಿ ಇದರ ಪ್ರಕಾಶ ಕುಂದಿ ಮತ್ತೆ ಮೊದಲಿನಂತಾಗುತ್ತಿದ್ದುದನ್ನು ಗಮನಿಸಿದ್ದ ಅರಬ್ಬರು ಅಲ್ಗಾಲ್ ಎಂದು ಹೆಸರಿಟ್ಟರು. ಅರ್ಥ ಸೈತಾನನ ಕಣ್ಣು. ಇಂಥ ಅನೇಕ ಯಮಳ ನಕ್ಷತ್ರಗಳನ್ನು ಅಲ್ಗಾಲ್ ಚಂಚಲ ತಾರೆಗಳು ಎಂಬ ಹೆಸರಿನಿಂದಲೇ ವರ್ಗೀಕರಿಸಿದ್ದಾರೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: