ಕೇದಗೆ

(ಕೇದಿಗೆ ಇಂದ ಪುನರ್ನಿರ್ದೇಶಿತ)
ಪ್ಯಾಂಡಾನಸ್ ಓಡರಿಫ಼ರ್
Conservation status
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಏಕದಳ ಸಸ್ಯ
ಗಣ: ಪ್ಯಾಂಡನಾಲೀಸ್
ಕುಟುಂಬ: ಪ್ಯಾಂಡನೇಸೀ
ಕುಲ: ಪ್ಯಾಂಡಾನಸ್
ಪ್ರಜಾತಿ:
ಪ. ಓಡರಿಫ಼ರ್
Binomial name
ಪ್ಯಾಂಡಾನಸ್ ಓಡರಿಫ಼ರ್
(Forssk.) Kuntze
Synonyms[]
  • ಆಥ್ರೊಡ್ಯಾಕ್ಟಿಲಿಸ್ ಸ್ಪಿನೋಸಾ J.R.Forst. & G.Forst. nom. illeg.
  • ಬ್ರೋಮೇಲಿಯಾ ಸಿಲ್ವೆಸ್ಟ್ರಿಸ್ Burm.f.
  • ಐಡೌಕ್ಸಿಯಾ ಡೆಲೆಸೆರ್ಟಿಐ Gaudich.
  • ಹಾಸ್‍ಕಾರ್ಲಿಯಾ ಲ್ಯೂಕಾಕಾಂಥಾ Walp.
  • ಕ್ಯೂರಾ ಓಡೊರಾ Thunb.
  • ಕ್ಯೂರಾ ಓಡರಿಫ಼ೆರಾ Forssk.
  • ಮಾರ್‌ಕ್ವಾರ್ಟಿಯಾ ಲ್ಯೂಕಾಕಾಂಥಾ Hassk.
  • ಪ್ಯಾಂಡಾನಸ್ ಆಡುಯೆನ್ಸಿಸ್ H.St.John
  • ಪ್ಯಾಂಡಾನಸ್ ಆಲ್ಬಿಬ್ರ್ಯಾಕ್ಟಿಯೇಟಸ್ H.St.John
  • ಪ್ಯಾಂಡಾನಸ್ ಅಲೋಯಿಯೋಸ್ H.St.John
  • ಪ್ಯಾಂಡಾನಸ್ ಆಂಬಿಗ್ಲಾಕಸ್ H.St.John
  • ಪ್ಯಾಂಡಾನಸ್ ಬ್ಲ್ಯಾಂಕಾಯ್ Kunth
  • ಪ್ಯಾಂಡಾನಸ್ ಬೋರ್ಯಿ Gaudich.
  • ಪ್ಯಾಂಡಾನಸ್ ಕಾರ್ನೋಸಸ್ H.St.John
  • ಪ್ಯಾಂಡಾನಸ್ ಚೆಲ್ಯಾನ್ H.St.John
  • ಪ್ಯಾಂಡಾನಸ್ ಡೆಲೆಸೆರ್ಟಿಐ (Gaudich.) Warb.
  • ಪ್ಯಾಂಡಾನಸ್ ಫ಼್ಯಾಸಿಕ್ಯುಲಾರಿಸ್ Lam.
  • ಪ್ಯಾಂಡಾನಸ್ ಫ಼ಾಸ್‍ಬರ್ಗಿಐ H.St.John
  • ಪ್ಯಾಂಡಾನಸ್ ಗ್ಲೋಬಾಸಸ್ H.St.John
  • ಪ್ಯಾಂಡಾನಸ್ ಹಾರ್ಟ್‌‌ಮಾನಿಐ H.St.John
  • ಪ್ಯಾಂಡಾನಸ್ ಹೆಂಡೆರ್‌ಸೋನಿಐ H.St.John
  • ಪ್ಯಾಂಡಾನಸ್ ಹ್ಯುಯೆನ್ಸಿಸ್ H.St.John
  • ಪ್ಯಾಂಡಾನಸ್ ಇಂಪಾರ್ H.St.John
  • ಪ್ಯಾಂಡಾನಸ್ ಇನ್‍ಕ್ಲಿನೇಟಸ್ H.St.John
  • ಪ್ಯಾಂಡಾನಸ್ ಇನ್‍ಕ್ರ್ಯಾಸೇಟಸ್ H.St.John
  • ಪ್ಯಾಂಡಾನಸ್ ಇಂಟೆಗ್ರಿಏಪಿಕಿಸ್ H.St.John
  • ಪ್ಯಾಂಡಾನಸ್ ಇಂಟ್ರಾಕೋನಿಕಸ್ H.St.John
  • ಪ್ಯಾಂಡಾನಸ್ ಕಾರಿಕಾಯೊ H.St.John
  • ಪ್ಯಾಂಡಾನಸ್ ಲ್ಯೂಕ್ಯಾಂಥಸ್ Hassk.
  • ಪ್ಯಾಂಡಾನಸ್ ಲಿನೇಯೀ Gaudich.
  • ಪ್ಯಾಂಡಾನಸ್ ಲಿಟೊರ್‍ಯಾಲಿಸ್ Jungh.
  • ಪ್ಯಾಂಡಾನಸ್ ಲೂರೇಯ್ರೋಯಿ Gaudich.
  • ಪ್ಯಾಂಡಾನಸ್ ಮಾಲ್ಡಿವೆಕಸ್ H.St.John
  • ಪ್ಯಾಂಡಾನಸ್ ಮಿಲೋರೆ Roxb.
  • ಪ್ಯಾಂಡಾನಸ್ ಒಬ್‍ಟ್ಯೂಸಸ್ H.St.John
  • ಪ್ಯಾಂಡಾನಸ್ ಓಡರಾಟಿಸಿಮಸ್ L.f.
  • ಪ್ಯಾಂಡಾನಸ್ ಓಡರೇಟಸ್ Salisb.
  • ಪ್ಯಾಂಡಾನಸ್ ಓಡರಿಫ಼ೆರಸ್ (Forssk.)
  • ಪ್ಯಾಂಡಾನಸ್ ಫ಼್ಯಾಮ್‍ಹೋಂಗಿಯೈ H.St.John
  • ಪ್ಯಾಂಡಾನಸ್ ಪ್ರೊಜೆಕ್ಟೆನ್ಸ್ H.St.John
  • ಪ್ಯಾಂಡಾನಸ್ ರಿಮೋಟಸ್ H.St.John
  • ಪ್ಯಾಂಡಾನಸ್ ರಿವರ್ಸಿಸ್ಪೈರ್‍ಯಾಲಿಸ್ H.St.John
  • ಪ್ಯಾಂಡಾನಸ್ ರೀಡೇಯಿ Gaudich.
  • ಪ್ಯಾಂಡಾನಸ್ ರೂಬ್ರಿಕಲರೇಟಸ್ H.St.John
  • ಪ್ಯಾಂಡಾನಸ್ ರುಂಫ಼ಿಯೈ Gaudich.
  • ಪ್ಯಾಂಡಾನಸ್ ಸೆಮಿಆರ್ಬಿಕ್ಯುಲಾರಿಸ್ H.St.John
  • ಪ್ಯಾಂಡಾನಸ್ ಸಿನೆನ್ಸಿಸ್ (Warb.) Martelli
  • ಪ್ಯಾಂಡಾನಸ್ ಸ್ಮಿಟಿನ್ಯಾಂಡಿಯೈ H.St.John
  • ಪ್ಯಾಂಡಾನಸ್ ಸ್ಪೈರಾಲಿಸ್ Blanco nom. illeg.
  • ಪ್ಯಾಂಡಾನಸ್ ಸಬ್‍ಕಾರ್ನೋಸಸ್ H.St.John
  • ಪ್ಯಾಂಡಾನಸ್ ಸಬ್‍ಕ್ಯೂಬಿಕಸ್ H.St.John
  • ಪ್ಯಾಂಡಾನಸ್ ಸಬ್‍ಯುಲೇಟಸ್ H.St.John
  • ಪ್ಯಾಂಡಾನಸ್ ವೀರಸ್ Rumph. ex Kurz nom. illeg.
  • ಪ್ಯಾಂಡಾನಸ್ ವಿಯೆಟ್ನಾಮೆನ್ಸಿಸ್ H.St.John

ಕೇದಗೆಯು ಪ್ಯಾಂಡನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದಕ್ಕೆ ತಾಳೆಗಿಡ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಸ್ಕ್ರೂ ಪೈನ್ ಎನ್ನಲಾಗುತ್ತದೆ.[] ಇದರ ವೈಜ್ಞಾನಿಕ ಹೆಸರು ಪ್ಯಾಂಡಾನಸ್ ಓಡರೇಟಿಸಿಮಸ್. ಸುವಾಸನಾಯುಕ್ತವಾದ ಹೂಗೊಂಚಲಿನಿಂದಾಗಿ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿದೆ.

ಬೇರೆ ಹೆಸರುಗಳು

ಬದಲಾಯಿಸಿ
  • ಸಂಸ್ಕೃತ: ಕೇಥಕಿ
  • ಹಿಂದಿ: ಕೇವುಡ
  • ಮಲಯಾಳಂ: ಕೈಥಾ
  • ಗುಜರಾತಿ:ಕೇಟಕಿ
  • ತೆಲುಗು: ಮೊಗಿಲ್
  • ತಮಿಳು: ತಾಳಮ್ ಪೂ

ಎಲ್ಲೆಲ್ಲಿ ಬೆಳೆಯುವುದು

ಬದಲಾಯಿಸಿ
 
ಕೇದಿಗೆ ಗಿಡ
 
ಕೇದಿಗೆ

ಪ್ರಪಂಚದ ತೇವಪೂರಿತ ಉಷ್ಣಪ್ರದೇಶಗಳಲ್ಲೆಲ್ಲ ಇದು ಸಾಮಾನ್ಯ. ಪಶ್ಚಿಮದಲ್ಲಿ ಆಫ್ರಿಕದಿಂದ ಹಿಡಿದು ಪೂರ್ವದಲ್ಲಿ ಪೆಸಿಫಿಕ್ ದ್ವೀಪಗಳವರೆಗೂ ಇದರ ವ್ಯಾಪ್ತಿ ಇದೆ. ದಕ್ಷಿಣ ಭಾರತ ಮತ್ತು ಬರ್ಮಾದಲ್ಲಿನ ಕಾಡುಗಳಲ್ಲಿಯೂ ಕಂಡುಬರುತ್ತದೆ.[]

ಕೇದಗೆ ಸ್ವಾಭಾವಿಕವಾಗಿ ನದಿ, ಹಳ್ಳ ಹಾಗೂ ಸಮುದ್ರಗಳ ದಂಡೆಗಳಲ್ಲಿ ಬೆಳೆಯುತ್ತದೆ. ಹೊಲಗದ್ದೆಗಳ ಇಕ್ಕೆಲಗಳಲ್ಲೂ ಕಂಡುಬರುವುದುಂಟು.

ಕೇದಗೆ ವಿಸ್ತಾರವಾಗಿ ಹರಡಿಕೊಂಡು ಬೆಳೆಯುವ ಹಾಗೂ ನಿತ್ಯಹಸಿರಾಗಿರುವ ಸಸ್ಯ. ಇದರಲ್ಲಿ ಹಲವಾರು ವಿಭಿನ್ನ ಬಗೆಗಳಿದ್ದು ಕೆಲವು ಪೊದೆಸಸ್ಯಗಳಾಗಿಯೂ ಇನ್ನು ಕೆಲವು ಚಿಕ್ಕ ಮರಗಳಾಗಿಯೂ ಬೆಳೆಯುವುದುಂಟು. ಕೆಲವು ಬಗೆಗಳ ಎಲೆಗಳ ಅಂಚು ಮುಳ್ಳಿನಂತಿದ್ದರೆ ಮತ್ತೆ ಕೆಲವು ಬಗೆಗಳ ಎಲೆಗಳಲ್ಲಿ ಮುಳ್ಳುಗಳೇ ಇಲ್ಲ. ವಿವಿಧ ಬಗೆಗಳಲ್ಲಿನ ವ್ಯತ್ಯಾಸದಿಂದಾಗಿ ಅವನ್ನು ಬೇರೆ ಬೇರೆ ಪ್ರಭೇದಗಳೆಂದು ಭಾವಿಸಿರುವುದಲ್ಲದೆ ಕೇದಗೆಯನ್ನು ಬಹುರೂಪಿ (ಪಾಲಿಮಾರ್ಫಿಕ್) ಸಸ್ಯ ಎಂದು ಸಹ ಕರೆಯಲಾಗುತ್ತದೆ. ಕೇದಗೆಯ ವಿವಿಧ ಬಗೆಗಳಲ್ಲಿನ ವ್ಯತ್ಯಾಸ ಹಾಗೂ ಬಗೆಗಳ ಕ್ರಮಬದ್ಧ ಅಂತಸ್ತಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಕುತೂಹಲಕಾರಿಯಾಗಿ, ಪರಾಗಾಬಿವೃದ್ಧಿಯ ವೇಳೆ ಈ ಸಸ್ಯವು ಸೂಕ್ಷ್ಮ ಬೀಜಾಣು ಚತುಷ್ಕಗಳ ಸುತ್ತ ಸಾಮಾನ್ಯ ಕ್ಯಾಲೋಸ್ ಗೋಡೆಯನ್ನು ಹೊಂದಿರುವುದಿಲ್ಲ.[]

ಪ್ಯಾಂಡಾನಸ್ ಓಡರೇಟಿಸಿಮಸ್

ಬದಲಾಯಿಸಿ

ಕೇದಗೆಯ ಬಲು ಸಾರ್ವತ್ರಿಕ ಹಾಗೂ ಪ್ರಮುಖ ಪ್ರಭೇದವಾದ ಓಡರೇಟಿಸಿಮಸ್ ಸುಮಾರು 6 ಮೀಟರ್ ಎತ್ತರಕ್ಕೆ ಬೆಳೆಯುವ ಚಿಕ್ಕ ಮರ. ಉಸುಕು ಮತ್ತು ಜೌಗುಳ್ಳ ಹಳ್ಳಕೊಳ್ಳಗಳಲ್ಲಿ ಗುಂಪು ಗುಂಪಾಗಿ ಸುತ್ತಲೂ ಕವಲೊಡೆದು ದಪ್ಪನಾದ ಕಾಂಡದ ಸುತ್ತಲೂ ಬೇರೂರಿ ಬೆಳೆಯುವ ದೊಡ್ಡ ಪೊದರು ಇದು. ಮುಖ್ಯ ಕಾಂಡ ನೇರವಾಗಿ ಬೆಳೆಯುವುದಾದರೂ ಕಾಲಕ್ರಮೇಣ ಇದು ಒಂದು ಕಡೆ ಬಾಗುತ್ತದೆ. ಕಾಂಡದುದ್ದಕ್ಕೂ ಅಲ್ಲಲ್ಲೆ ದಪ್ಪನೆಯ ಹಾಗೂ ದೃಢವಾದ ಬೇರುಗಳು ಹುಟ್ಟಿ ಭೂಮಿಯ ಕಡೆಗೆ ಬೆಳೆದು ನೆಲದಲ್ಲಿ ಆಳವಾಗಿ ಇಳಿದು ಮುಖ್ಯ ಕಾಂಡ ನೆಲದ ಮೇಲೆ ಒರಗಿ ಬೀಳದಂತೆ ತಡೆದು ಕಾಂಡಕ್ಕೆ ಆಧಾರವನ್ನೀಯುತ್ತದೆ. ಇದರಿಂದಾಗಿ ಇವಕ್ಕೆ ಆಧಾರ ಬೇರುಗಳೆಂದು (ಸ್ಟಿಲ್ಟ್ ರೂಟ್ಸ್) ಹೆಸರಿದೆ. ಬೇರುಗಳು ಗಿಡಕ್ಕೆ ಆಧಾರವನ್ನು ಕೊಡುವುದು ಮಾತ್ರವಲ್ಲ ಮಣ್ಣು ಸುಲಭವಾಗಿ ಕುಸಿಯದಂತೆಯೂ ತಡೆಯುತ್ತವೆ. ಮುಖ ಕಾಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೆಂಬೆಗಳು ದಟ್ಟವಾಗಿ ಹೆಣೆದುಕೊಂಡು ಬೆಳೆಯುತ್ತವೆ. ಇದರಿಂದಾಗಿ ಇದು ಯಾವ ಪ್ರಾಣಿಯೂ ನುಸುಳಿ ಹೋಗಲಾರದಂಥ ಪೊದೆಯಾಗುತ್ತದೆ. ಕೇದಗೆಯ ಎಲೆಗಳ ಉದ್ದ ಸುಮಾರು 1-1.5 ಮೀ., ಮಧ್ಯದಲ್ಲಿ ದಿಂಡು ಹೊಂದಿದ್ದು ಆಕಾರ ಕತ್ತಿಯಂತೆ. ಇವುಗಳ ಬಣ್ಣ ನೀಲಿಮಿಶ್ರಿತ ಹಸಿರು. ಮೊನಚಾದ ತುದಿ, ಚರ್ಮದಂತೆ ಒರಟಾಗಿರುವ ಮೇಲ್ಮೈ, ಮಧ್ಯನರ ಹಾಗೂ ಅಂಚಿನ ಮೇಲೆ ಚಿಕ್ಕ ಮುಳ್ಳುಗಳಿರುವುದು ಎಲೆಗಳ ವೈಶಿಷ್ಟ್ಯ. ನಡುನರದ ಮುಳ್ಳು ಮುಂದಕ್ಕೆ ಚಾಚಿರುತ್ತವೆ. ಕೆಲವು ಬಗೆಗಳಲ್ಲಿ ಮುಳ್ಳುಗಳಿಲ್ಲ. ಎಲೆಗಳು ಕೊಂಬೆಗಳ ತುದಿಯಲ್ಲಿ ದಳದಂತೆ ಸುತ್ತುವರಿದು ಜೋಡಿಸಲ್ಪಟ್ಟಿರುತ್ತವೆ. ಹೂಗಳು ಏಕಲಿಂಗಿಗಳು. ತೆನೆಗಳಂತೆ ಹೂಗೊಂಚಲನ್ನು ಬೇರೆ ಬೇರೆಯಾಗಿ ಏಕಲಿಂಗ ಮರಗಳಲ್ಲಿ ಬಿಟ್ಟಿರುತ್ತವೆ. ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲು ತಾಳಗುಚ್ಛ ಮಾದರಿಯದು. ಗಂಡು ತಾಳಗುಚ್ಛ 25-50 ಸೆಂಮೀ. ಉದ್ದವಿದ್ದು 5-10 ಸೆಂಮೀ. ಉದ್ದದ ಅನೇಕ ಕದಿರು ಗೊಂಚಲುಗಳನ್ನೊಳಗೊಂಡಿದೆ. ಉದ್ದನೆಯ ಹಾಗೂ ಬಿಳಿಯ ಇಲ್ಲವೆ ತಿಳಿಹಳದಿ ಬಣ್ಣದ ಕವಚವೊಂದು ತಾಳಗುಚ್ಛವನ್ನು ಆವರಿಸಿದೆ. ಈ ಕವಚ ಬಹಳ ಸುಗಂಧಪೂರಿತವಾಗಿದೆ. ಗಂಡು ಹೂಗಳು ಬಲು ಚಿಕ್ಕ ಗಾತ್ರದವು. ಒಂದೊಂದರಲ್ಲೂ ಅನೇಕ ಕೇಸರಗಳಿವೆ. ಹೆಣ್ಣು ತಾಳಗುಚ್ಛ ಸಾಮಾನ್ಯವಾಗಿ ಗಿಡದ ತುದಿಯಲ್ಲಿ ಹುಟ್ಟುತ್ತದೆ. ಒಂದೊಂದು ಗೊಂಚಲಿನಲ್ಲೂ ಅಸಂಖ್ಯಾತ ಹೆಣ್ಣು ಹೂಗಳಿವೆ. ಒಂದು ಹೂಗೊಂಚಲಿನ ಎಲ್ಲ ಅಂಡಾಶಯಗಳೂ ಗರ್ಭಧಾರಣೆಯಾದ ಮೇಲೆ ಒಟ್ಟಿಗೆ ಕೂಡಿಕೊಂಡು ಬೆಳೆದು ಗುಂಡನೆಯ ಇಲ್ಲವೆ ದೀರ್ಘಚತುರಸ್ರಾಕಾರದ ಒಂದೇ ಫಲವಾಗಿ ರೂಪುಗೊಳ್ಳುತ್ತವೆ. ಈ ರೀತಿ ಉತ್ಪತ್ತಿಯಾಗುವ ಫಲಕ್ಕೆ ಸಂಯುಕ್ತ ಫಲ ಎಂದು ಹೆಸರು. ಹಲಸಿನ ಹಣ್ಣಿನಲ್ಲಿರುವಂತೆ ಇದರ ಮೇಲ್ಮೈಯಲ್ಲಿ ಕಾಣುವ ಅನೇಕ ಸಣ್ಣ ಸಣ್ಣ ಗುಬುಟುಗಳಿಂದಾಗಿ ಇದನ್ನು ಸಂಯುಕ್ತಫಲವೆಂದು ಗುರುತಿಸಬಹುದು. ಒಂದೊಂದು ಗುಬುಟೂ ಒಂದೊಂದು ಅಷ್ಟಿಫಲ. ಫಲ ಚಿಕ್ಕದಾಗಿದ್ದಾಗ ಹಸಿರು ಬಣ್ಣದ್ದಾಗಿದ್ದು ಮಾಗಿದಂತೆ ಹಳದಿ ಇಲ್ಲವೆ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಗಂಡು ಹೂವಿನ ತೆನೆ ಉದ್ದವಾಗಿದ್ದು ೩ ಸಾಲಿನಲ್ಲಿ ಸುವಾಸನೆಯುಳ್ಳ ೧ ಮೀ. ಉದ್ದದ ಹಳದಿ ಆಕರ್ಷಕ ಪತ್ರಗಳು ಆವೃತವಾಗಿದ್ದು, ಇದರ ಮಧ್ಯದಲ್ಲಿ ಕೇಸರ ದಂಡಗಳು ಕೂಡಿಕೊಂಡು, ಚಿಕ್ಕ ಕೇಸರ ಕೊಳವೆ ೧ ಸೆಂ.ಮೀ. ಉದ್ದ, ಬಿಳಿ ಮಿಶ್ರಿತ ಬಣ್ಣ ಹಾಗೂ ಸುವಾಸನೆಯುಳ್ಳವು. ಒಂಟಿಯಾದ ಸ್ಪೇಡಿಕ್ಸ್‌ ಹೆಣ್ಣು ಹೂ ಗೊಂಚಲು ೭-೮ ಸೆಂ.ಮೀ. ವ್ಯಾಸ, ೪-೧೦ ಕಾರ್ಪೆಲ್ಲುಗಳಿದ್ದು ೭.೫ ಸೆಂ.ಮೀ. ಉದ್ದವಿರುತ್ತವೆ. ಹೂವುಗಳು ಸುಮಾರು ಹತ್ತು ದಳಗಳನ್ನು ಹೊಂದಿರುತ್ತದೆ. ಬಲಿತಾಗ ಅನಾನಸ್ಸಿನಂತಹ ಸಂಯುಕ್ತ ಫಲ ಬಿಡುತ್ತವೆ ಹಾಗೂ ಅವು ಮುಳ್ಳು ಹೊಂದಿದ್ದು, ೯ ಸೆಂ.ಮೀ.-೨೫ ಸೆಂ.ಮೀ. ಉದ್ದವಿರುತ್ತವೆ. ಅವುಗಳ ತುದಿ ದುಂಡಾಗಿದ್ದು, ತುದಿಯಲ್ಲಿ ತಗ್ಗಾಗಿರುತ್ತದೆ ಮತ್ತು ಬಲಿತಾಗ ಹಳದಿ ಅಥವಾ ಕೆಂಪಾಗಿರುತ್ತದೆ.[] ಕಾಂಡವು ವಾಯು ಬೇರುಗಳು ಆಧಾರದ ಮೇಲೆ ನಿಂತಿರುತ್ತದೆ.  

ಸಂತಾನಾಭಿವೃದ್ಧಿ

ಬದಲಾಯಿಸಿ

ಕೇದಗೆಯ ಸ್ವಾಭಾವಿಕ ಸಂತಾನಾಭಿವೃದ್ಧಿ ಅಬೀಜ ಪುನರುತ್ಪತ್ತಿ ಕ್ರಮದಿಂದ ನಡೆಯುವುದೇ ಹೆಚ್ಚು. ಗಿಡದ ರೆಂಬೆಗಳು ಬೆಳೆಯುತ್ತ ಹೋದಂತೆ ಅಲ್ಲಲ್ಲೆ ಬೇರುಗಳು ಹುಟ್ಟಿಕೊಂಡು ರೆಂಬೆಗಳು ಮೂಲಸಸ್ಯದಿಂದ ಬೇರ್ಪಟ್ಟು ಹೊಸ ಸಸ್ಯಗಳಾಗುತ್ತವೆ. ಇದೇ ಗುಣವನ್ನು ಉಪಯೋಗಿಸಿಕೊಂಡು ಕೇದಗೆಯನ್ನು ಬೆಳೆಸಬಹುದು. ಕಾಂಡವನ್ನು ಒಂದೊಂದೇ ಗೆಣ್ಣುಳ್ಳ ಅನೇಕ ತುಂಡುಗಳನ್ನಾಗಿ ಕತ್ತರಿಸಿ ನೆಟ್ಟು ಹೊಸ ಗಿಡಗಳನ್ನು ಉತ್ಪಾದಿಸಬಹುದು. ಒಳ್ಳೆಯ ಬೆಳೆವಣಿಗೆಗೆ ಫಲವತ್ತಾದ ಹಾಗೂ ನೀರಿನ ಸೌಕರ್ಯ ಚೆನ್ನಾಗಿರುವ ಭೂಮಿ ಅತ್ಯಗತ್ಯ. ಮರಗಳಿಗೆ ಬೇಸಿಗೆಯಲ್ಲಿ ಸಮೃದ್ಧವಾಗಿ ನೀರು ಬೇಕು.[] ತುಂಡುಗಳು ನೆಟ್ಟ 3-4 ವರ್ಷಗಳಲ್ಲಿ ಬೆಳೆದು ಹೂಬಿಡಲು ಪ್ರಾರಂಭಿಸುತ್ತವೆ. ಹೂ ಬಿಡುವ ಕಾಲ ಸಾಮಾನ್ಯವಾಗಿ ಜುಲೈಯಿಂದ ಅಕ್ಟೋಬರ್ ತಿಂಗಳುಗಳ ನಡುವಣ ಕಾಲ. ಪೂರ್ಣ ಬಲಿತ ಗಿಡಗಳು ವರ್ಷಕ್ಕೆ 30-40 ಹೂಗೊಂಚಲುಗಳನ್ನು ಬಿಡುತ್ತವೆ.

ಸಸ್ಯದ ಪುನರುತ್ಪತ್ತಿಯನ್ನು ತೇವವುಳ್ಳ ಸ್ಥಳಗಳಲ್ಲಿ ಕೊನೆಗಳನ್ನು ನೆಡುವುದರಿಂದ, ಬೇರೆಯಾಗಿ ಅಥವಾ ನೀರಿನ ದಂಡೆಗಳಲ್ಲಿ ಬೆಳೆಸುವುದರಿಂದ ಅಭಿವೃದ್ಧಿಪಡಿಸಬಹುದು.

ರೋಗಗಳು

ಬದಲಾಯಿಸಿ

ಕೇದಗೆಗೆ ಸಾಧಾರಣವಾಗಿ ಯಾವ ಬಗೆಯ ರೋಗಗಳಾಗಲಿ, ಕೀಟಗಳಾಗಲಿ ಅಂಟುವುದಿಲ್ಲ. ಆದರೆ ಅಧಿಕ ತೇವ ಮತ್ತು ಉಷ್ಣತೆ ಇರುವ ಋತುಗಳಲ್ಲಿ ಇದರ ಎಲೆಗಳಿಗೆ ಆಲ್ಟರ್ನೇರಿಯ ಎಂಬ ಹಾನಿಕಾರಕವಾದ ಬೂಷ್ಟು ತಗಲುವುದುಂಟು. ಇದರಿಂದ ಎಲೆಗಳ ಮೇಲೆಲ್ಲ ಕಪ್ಪು ಕಲೆಗಳು ಕಾಣಿಸಿಕೊಂಡು ಕ್ರಮೇಣ ಈ ಜಾಗಗಳಲ್ಲಿ ತೂತುಗಳುಂಟಾಗಿ ಎಲೆಗಳು ಬಿದ್ದು ಹೋಗುತ್ತವೆ. ಇದರ ಫಲವಾಗಿ ಹೂಗಳ ಉತ್ಪತ್ತಿಯೂ ಕ್ಷೀಣಿಸುತ್ತದೆ.

ಪ್ರಭೇದಗಳು

ಬದಲಾಯಿಸಿ

ಭಾರತದಲ್ಲಿ ಮೇಲೆ ಹೇಳಿದ ಪ್ರಭೇದವೂ, ಇದನ್ನೇ ಬಹುವಾಗಿ ಹೋಲುವ ಇನ್ನಿತರ 35 ಪ್ರಭೇದಗಳೂ ಬೆಳೆಯುತ್ತವೆ. ಉಳಿದ ಪ್ರಭೇದಗಳಲ್ಲಿ ಮುಖ್ಯವಾದವು-ಪ್ಯಾಂಡೇನಸ್ ಫೀಟಿಡಸ್, ಪ್ಯಾ. ಫರ್ಕೇಟಸ್, ಪ್ಯಾ. ಲಿರಾಮ್ ಮತ್ತು ಪ್ಯಾ. ಅಂಡಮಾನೆನ್ಸಿಯಮ್ ಇವೆಲ್ಲಕ್ಕೂ ರೂಢಿಯಲ್ಲಿ ಕೇದಗೆ ಎಂಬ ಹೆಸರೇ ಇದೆ.

ಉಪಯೋಗಗಳು

ಬದಲಾಯಿಸಿ

ಇದರ ಕೆಲವು ಬಗೆಗಳನ್ನು ಅಲಂಕಾರಕ್ಕಾಗಿ, ಸುವಾಸನಾಯುಕ್ತ ಗುಣಕ್ಕಾಗಿ, ಇವುಗಳಿಂದ ತೆಗೆಯಲಾಗುವ ಸುಗಂಧದ್ರವ್ಯಕ್ಕಾಗಿ ಬೆಳೆಸುವುದೂ ಉಂಟು.

ಕೇದಗೆ ತನ್ನ ಸುಗಂಧಪೂರಿತ ಹೂಗಳಿಂದಾಗಿ ಬಹಳ ಜನಪ್ರಿಯವಾಗಿದೆ. ಭಾರತ ಮತ್ತು ಬರ್ಮಗಳಲ್ಲಿ ಇದರ ಗಂಡು ತಾಳಗುಚ್ಛದ ಕವಚಗಳನ್ನು ಹೆಣ್ಣುಮಕ್ಕಳ ಕೇಶಾಲಂಕಾರಕ್ಕಾಗಿ ಬಳಸುತ್ತಾರೆ. ಅಲ್ಲದೆ ಈ ಹೊದಿಕೆಗಳಿಂದ ಕೆವ್ಡ ಅತ್ತರು ಎಂಬ ಹೆಸರಿನ ಸುಗಂಧ ತೈಲವನ್ನು ತೆಗೆಯುತ್ತಾರೆ.[] ಹೂಗೊಂಚಲಿನ ಹೊದಿಕೆಗಳನ್ನು ಬೇರ್ಪಡಿಸಿ, ಆವಿ ಆಸವೀಕರಣಗೊಳಿಸಿ ಹೊರ ಬರುವ ಹಬೆಯನ್ನು ಶ್ರೀಗಂಧ ತೈಲದಲ್ಲೊ ಇಲ್ಲವೆ ಶುದ್ಧವಾದ ಪ್ಯಾರಫಿನ್ ಎಣ್ಣೆಯಲ್ಲೂ ಕರಗಿಸಿದರೆ ದೊರೆಯುವ ತೈಲವೇ ಕೆವ್ಡ ಅತ್ತರು. ಇದಕ್ಕೆ ಆಹ್ಲಾದಕರ ಸುಗಂಧ ಉಂಟು. ಈ ತೈಲ ಅತ್ಯಂತ ಬೆಲೆಬಾಳುವಂಥದೂ ಆಗಿದೆ. ಆಸವೀಕರಣದಲ್ಲಿ ಬಳಸಲಾಗುವ ಗಂಧದೆಣ್ಣೆಯ ಪರಿಮಾಣ ಹಾಗೂ ಕೇದಗೆಯ ಬಗೆಯನ್ನವಲಂಬಿಸಿ ಕೆವ್ಡ ಅತ್ತರಿನ ಗುಣ ವ್ಯತ್ಯಾಸವಾಗುತ್ತದೆ. ಆಸವೀಕರಣದಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಗಂಧದೆಣ್ಣೆಯಲ್ಲಿ ಕರಗಿಸದೆ ಬರಿಯ ನೀರಿನಲ್ಲಿ ಕರಗಿಸಿದರೆ ಕೆವ್ಡದ್ರವ ದೊರೆಯುತ್ತದೆ. ಕೆವ್ಡ ಅತ್ತರು ನೀರಿನೊಂದಿಗೆ ಸುಲಭವಾಗಿ ಬೆರೆಯಬಲ್ಲದು. ಇದರಲ್ಲಿ ್ನ-ಫೀನೈಲ್ ಈಥೈಲ್ ಆಲ್ಕೊಹಾಲ್, ಮೀಥೈಲ್ ಈಥರ್, ಫೀನೈಲ್ ಈಥರ್, ಅಸಿಟೇಟ್, ಸಿಟ್ರಾಲ್ ಮುಂತಾದ ಅನೇಕ ರಾಸಾಯನಿಕ ಘಟಕಗಳಿವೆ. ಕೆವ್ಡ ಅತ್ತರು ಬಹಳ ಹಿಂದಿನಿಂದಲೂ ಅಲಂಕಾರ ವಸ್ತುವಾಗಿ ಭಾರತದಲ್ಲಿ ಬಳಕೆಯಲ್ಲಿದೆ. ಇದನ್ನು ನೇರವಾಗಿ ಮಾತ್ರವಲ್ಲದೆ ಬೇರೆ ಸುಗಂಧ ದ್ರವ್ಯಗಳೊಂದಿಗೆ ಮಿಶ್ರ ಮಾಡಿಯೂ ಬಳಸಬಹುದು. ಅಗರಬತ್ತಿ ತಯಾರಿಕೆಯಲ್ಲೂ ಸಿಹಿತಿಂಡಿ ಮತ್ತು ಪಾನೀಯಗಳಿಗೆ ಸುವಾಸನೆ ಕೊಡಲು ಇದನ್ನು ಬಳಸುವುದುಂಟು. ಈ ತೈಲವನ್ನು ಅತ್ತರು, ಸುಗಂಧ ತೈಲಗಳಲ್ಲಿ, ಸಾಬೂನು ತಯಾರಿಕೆಯಲ್ಲಿ, ಕೆಲ ಕೇಶಾಲಂಕಾರಕಗಳನ್ನು ಸುವಾಸನೆಗೊಳಿಸಲು ಉಪಯೋಗಿಸುತ್ತಾರೆ.

ಕೇದಗೆಗೆ ಮೇಲೆ ಹೇಳಿದ ಉಪಯೋಗವಲ್ಲದೆ ಇತರ ಉಪಯೋಗಗಳು ಉಂಟು. ಇದರ ತುದಿ ಮೊಗ್ಗನ್ನು ಎಲೆಕೋಸಿನಂತೆ ತರಕಾರಿಯಾಗಿ ಉಪಯೋಗಿಸುತ್ತಾರೆ. ಫಿಲಿಫೀನ್ಸ್ ದ್ವೀಪಗಳ ನಿವಾಸಿಗಳಲ್ಲಿ ಇದರ ಎಲೆಗಳನ್ನು ಆಹಾರವಾಗಿ ಬಳಸುವ ರೂಢಿಯಿದೆ. ಬರಗಾಲದ ಸಂದರ್ಭಗಳಲ್ಲಿ ಇದರ ಕಾಯಿಗಳನ್ನು ತಿನ್ನುತ್ತಾರೆಂದು ಹೇಳಲಾಗಿದೆ. ಪುಷ್ಪ ಪತ್ರಕಗಳನ್ನು ಪೂಜೆಗೆ, ಹೆಂಗಸರು ಮುಡಿದುಕೊಳ್ಳಲು ಉಪಯೋಗಿಸುತ್ತಾರೆ. ಕೇದಿಗೆಯ ಎಲೆಗಳನ್ನು ಗುಡಿಸಲುಗಳ ಚಾವಣಿ, ಮುಸುಕು, ಚಾಪೆ, ಹಗ್ಗ, ಬುಟ್ಟಿ, ಕೊಡೆ ಮತ್ತು ಒಂದು ಬಗೆಯ ಒರಟು ಕಾಗದ ಮುಂತಾದವನ್ನು ಮಾಡಲೂ ಬಳಸುವುದುಂಟು. ಅಲ್ಲದೆ, ಎಲೆಗಳಿಂದ ಒಂದು ಬಗೆಯ ನಾರನ್ನು ತೆಗೆದು ಚೀಲಗಳನ್ನು ಹೆಣೆಯುವ ರೂಢಿ ಕೆಲವೆಡೆ ಇದೆ. ಕೇದಗೆಯ ಬೇರು ಕೂಡ ಇದೇ ತೆರನ ಉಪಯೋಗಕ್ಕೆ ಬರುತ್ತದೆ. ಬೇರುಗಳಿಂದ ಕುಂಚಗಳ ಹಿಡಿಗಳನ್ನೂ ತಯಾರಿಸಬಹುದು.

ಕೇದಗೆಗೆ ಔಷಧೀಯ ಪ್ರಾಮುಖ್ಯವೂ ಉಂಟು. ಎಲೆಗಳನ್ನು ಕುಷ್ಠ, ಸಿಡಿಬು ಮತ್ತು ಕೆಲವು ಚರ್ಮರೋಗಗಳನ್ನು ಗುಣಪಡಿಸಲು ಉಪಯೋಗಿಸುತ್ತಾರೆ. ಹೃದಯ ಮತ್ತು ಮಿದುಳಿನ ಕೆಲವು ರೋಗಗಳನ್ನು ಶಮನಗೊಳಿಸುವ ಶಕ್ತಿಯೂ ಎಲೆಗಳಿಗಿದೆ. ಕೇಸರಗಳಿಂದ ತಯಾರಿಸಲಾಗುವ ಔಷಧಿಯನ್ನು ಕಿವಿ ನೋವು, ತಲೆನೋವು ಮತ್ತು ರಕ್ತ ಸಂಬಂಧವಾದ ಕಾಯಿಲೆಗಳಲ್ಲಿ ಬಳಸುತ್ತಾರೆ. ಹೂಗೊಂಚಲಿನಿಂದ ತೆಗೆದ ಸಾರ ಪ್ರಾಣಿಗಳ ಸಂಧಿವಾತ ರೋಗದ ಉಪಶಮನಕಾರಿ ಎನ್ನಿಸಿದೆ. ನಿದ್ರಾಜನಕವಾಗಿ ಮತ್ತು ಕಫದ ನಿವಾರಣೆಗೆ ಉಪಯೋಗಿಸುತ್ತಾರೆ. ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಉಪಯೋಗಿಸುತ್ತಾರೆ. ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆ ಹೋಗಲಾಡಿಸಲು ಉಪಯೋಗಿಸುತ್ತಾರೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಉಪಯೋಗಿಸುತ್ತಾರೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಕೇದಿಗೆ ಹೂಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ, ಮಂದಾಗ್ನಿಯಿಂದ ಕಾಯಿಸುವುದು. ಎಣ್ಣೆ ತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಸಂಗ್ರಹಿಸುವುದು. ತಲೆನೋವಿನಲ್ಲಿ ಹಣೆಗೆ ಹಚ್ಚುವುದು ಮತ್ತು ಶ್ವಾಸಕೋಶಗಳ ತೊಂದರೆಯಲ್ಲಿ ಎದೆಗೆ ಸವರುವುದು.ಈ ಎಣ್ಣೆಯನ್ನು ಇಡೀ ಶರೀರಕ್ಕೆ ಹಚ್ಚುವುದರಿಂದ ನರಗಳು ಉತ್ತೇಜನಗೊಂಡು ಸೋಮಾರಿತನ ಮತ್ತು ಜಡತ್ವ ಪರಿಹಾರವಾಗುವುದು. ಬೇರನ್ನು ಅರೆದು ಸಿಡುಬು ಮತ್ತು ಕುಷ್ಠವ್ಯಾಧಿಯ ಹುಣ್ಣುಗಳಿಗೆ ಲೇಪಿಸಲು ಬಳಸುತ್ತಾರೆ. ಬೇರನ್ನು ಅರೆದು ಲೇಪಿಸುವುದರಿಂದ ವಾತದಿಂದಾಗುವ ನೋವುಗಳು ಗುಣವಾಗುತ್ತವೆ. ಒಣಗಿದ ಎಲೆಗಳ ಪುಡಿಯನ್ನು ಅಥವಾ ಚಕ್ಕೆಯ ಸುಟ್ಟ ಬೂದಿಯನ್ನು ಗಾಯಗಳಿಗೆ ಲೇಪಿಸುವುದರಿಂದ ಶೀಘ್ರ ಗುಣವಾಗುತ್ತದೆ. ಎಣ್ಣೆಯನ್ನು ಸಂದಿವಾತದ ಉರಿ ಮತ್ತು ನೋವಿನ ಸಮಸ್ಯೆಗಳಿಗೆ ಲೇಪಿಸಬಹುದು. ಬೇರಿನ ಕಷಾಯವನ್ನು ಕಾಮಾಲೆ ರೋಗಕ್ಕೆ ಬಳಸಲಾಗುತ್ತದೆ. ಬೀಜಗಳ ಕಷಾಯವು ಕರುಳಿನ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ.

ಸರ್ಪದ ವಿಷಕ್ಕೆ

ಬದಲಾಯಿಸಿ

ಸರ್ಪ ಕಚ್ಚಿದಾಗ ಪ್ರಥಮಚಿಕಿತ್ಸೆಯಾಗಿ ಈ ಉಪಚಾರ ಪರಿಣಾಮಕಾರಿ. ಬಲಿತ ಬೇರು ತಂದು ನೀರಿನಲ್ಲಿ ತೇದು, ಸರ್ಪ ಕಚ್ಚಿರುವ ಕಡೆ ಪಟ್ಟು ಹಾಕುವುದು ಮತ್ತು ಅರ್ಧ ಟೀ ಚಮಚ ನೀರಿನಲ್ಲಿ ಕದಡಿ ಕುಡಿಯುವುದು.

ಉದರ ಶೂಲೆ

ಬದಲಾಯಿಸಿ

ಕೇದಿಗೆ ಗಿಡದ ಹೂವಿನ ಹಳದಿ ಎಲೆಗಳನ್ನು ತಂದು, ನೆರಳಲ್ಲಿ ಒಣಗಿಸಿ ಸುಟ್ಟು ಬೂದಿ ಮಾಡುವುದು. ಈ ಬೂದಿಯ ಕಾಲು ಟೀ ಚಮಚದಷ್ಟನ್ನು ನೀರಿನಲ್ಲಿ ಕದಡಿ ಜೇನುತುಪ್ಪ ಮತ್ತು ತುಪ್ಪ ಸೇರಿಸಿ ಕುಡಿಸುವುದು[]

ಕೇದಗೆಯ ಇನ್ನಿತರ ಪ್ರಭೇದಗಳನ್ನು ಅಲಂಕಾರ ಸಸ್ಯಗಳಾಗಿ ಕುಂಡದಲ್ಲಿ ಬಳಸುವುದುಂಟು. ಇವುಗಳಲ್ಲಿ ಮುಖ್ಯವಾದುವು ಪ್ಯಾಂಡೇನಸ್ ಯೂಟಲಿಸ್, ಪ್ಯಾ. ವೆಚಿಯೈ, ಪ್ಯಾ. ಗ್ರಾಮಿನಿಫೋಲಿಯಸ್ ಮುಂತಾದುವು.

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of All Plant Species". Retrieved 26 February 2015.
  2. "Kewda". FlowersOfIndia.net. Retrieved 25 July 2016.
  3. Nadaf, A.; Zanan, R. (2012), "Biogeography of Indian Pandanaceae", Indian Pandanaceae - an overview, Springer India, pp. 15–28, doi:10.1007/978-81-322-0753-5_3, ISBN 978-81-322-0752-8
  4. Scott, R. J. (2004-03-12). "Stamen Structure and Function". The Plant Cell Online (in ಇಂಗ್ಲಿಷ್). 16 (suppl_1): S46–S60. doi:10.1105/tpc.017012. ISSN 1040-4651. PMC 2643399. PMID 15131249.
  5. ರೈತರಿಗೆ ಬೇಕಾಗುವ ಪೊದರುಗಳು ಕೇದಿಗೆ
  6. L.H. Bailey, Manual of Gardening (2nd edition), New York 1910, Chapter VIII: The Growing of the Ornamental Plants – Instructions of Particular Kinds, s.v. Pandanus.
  7. Adkar PP, Bhaskar VH (22 December 2014). "Pandanus odoratissimus (Kewda): A Review on Ethnopharmacology, Phytochemistry, and Nutritional Aspects". Adv. Pharmacol. Sci. 2014 (120895): 120895. doi:10.1155/2014/120895. PMC 4408760. PMID 25949238.
  8. .ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೇದಗೆ&oldid=1253871" ಇಂದ ಪಡೆಯಲ್ಪಟ್ಟಿದೆ