ಮರಳು

(ಉಸುಕು ಇಂದ ಪುನರ್ನಿರ್ದೇಶಿತ)

ಮರಳು ನಿಸರ್ಗದಲ್ಲಿ ಸಣ್ಣ ಸಣ್ಣ ಚೂರುಗಳಾಗಿ ಒಡೆದ ಕಲ್ಲು ಮತ್ತು ಖನಿಜಗಳ ಹರಳು.

ಮರಳಿನ ಕಣಗಳ ಹತ್ತಿರದ ನೋಟ.
ಗ್ರೀಸ್ ನ ಸಾಂಟೋರಿನಿ ಬಳಿ ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಪ್ಪು ಮರಳು.

ಸಾಮಾನ್ಯವಾಗಿ ಮರಳು ೦.೦೬೨೫ ರಿಂದ ೨ ಮಿಲಿಮೀಟರ್ ಗಳ ವ್ಯಾಸದಲ್ಲಿರುತ್ತದೆ. ಇದಕ್ಕಿಂತ ಸಣ್ಣ ಗಾತ್ರದವುಗಳನ್ನು ಕೆಸರು ಕಣಗಳು ಮತ್ತು ದೊಡ್ಡವನ್ನು ಸಣ್ಣ ಕಲ್ಲುಗಳೆಂದು ಭೂವಿಜ್ಞಾನವು ವಿಂಗಡಿಸುತ್ತದೆ. ತನ್ನ ಗಾತ್ರಕ್ಕೆ ಅನುಗುಣವಾಗಿ ಮರಳು ೫ ಉಪವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.

ಮರಳಿನ ಕಣಗಳ ಎಲೆಕ್ಟ್ರಾನ್ ಮೈಕ್ರೋಗ್ರಾಫ್

೧/೧೬ ರಿಂದ ೧/೮ ಮಿ.ಮಿ. ಗಾತ್ರದವು ಅತಿ ಸಣ್ಣ ಮರಳಾದರೆ, ೧/೮ ರಿಂದ ೧/೪ ಮಿ.ಮೀ. ಗಾತ್ರದವು ಸಣ್ಣ ಮರಳು ಎಂದು ಕರೆಸಿಕೊಳ್ಳುತ್ತವೆ. ಮಧ್ಯಮ ಗಾತ್ರದ ಮರಳು ೧/೪ ರಿಂದ ೧/೨ ಮಿ.ಮೀ. ಗಾತ್ರದ್ದು. ದಪ್ಪ ಮರಳು ೧/೨ ರಿಂದ ೧ ಮಿ.ಮೀ. ಗಾತ್ರದಲ್ಲಿಯೂ ಮತ್ತು ಅತಿ ದಪ್ಪ ಮರಳು ೧ ರಿಂದ ೨ ಮಿ.ಮೀ. ಗಾತ್ರದಲ್ಲಿ ಇರುತ್ತವೆ.

ಮರಳಿನ ರಚನೆ

ಬದಲಾಯಿಸಿ
 
ಗಂಟೆಗೆ ೩೦೦ ಕಿ.ಮೀ.ವೇಗದಲ್ಲಿ ಚಲಿಸುವ ICE ರೈಲು (DB class 403)ಸುಗಮಸಂಚಾರಕ್ಕಾಗಿ ಹಲವು ಬೋಗಿಗಳಿಂದ ಹಳಿಗಳ ಮೇಲೆ ಮರಳನ್ನು ಉದುರಿಸುತ್ತಾ ಸಾಗುವುದು.

ಮರಳು ಸಾಮಾನ್ಯವಾಗಿ ಸಿಲಿಕಾ ( ಸಿಲಿಕಾನ್ ಡೈ ಆಕ್ಸೈಡ್ ) ದಿಂದ ಮಾಡಲ್ಪಟ್ಟಿರುತ್ತದೆ. ಈ ಸಿಲಿಕಾದ ಹರಳುಗಳು ಕ್ವಾರ್ಟ್ಜ್ ರೂಪದಲ್ಲಿದ್ದು ಗಡುಸಾಗಿಯೂ ಮತ್ತು ರಾಸಾಯನಿಕವಾಗಿ ನಿರ್ಲಿಪ್ತವಾಗಿಯೂ ಇರುವುದು. ಇದರಿಂದಾಗಿ ಮರಳಿನ ಮೇಲೆ ವಾತಾವರಣದ ಪರಿಣಾಮ ಬಲು ಕಡಿಮೆ. ಆದರೆ ಮರಳಿನಲ್ಲಿರುವ ವಸ್ತುವು ಸ್ಥಳೀಯ ಶಿಲಾಮೂಲಗಳು ಮತ್ತು ಸ್ಥಳೀಯ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ.

ಉಷ್ಣವಲಯದ ಸಾಗರತೀರದಲ್ಲಿ ಕಂಡುಬರುವ ಅಚ್ಚ ಬಿಳಿಯ ಮರಳು ಸಾಮಾನ್ಯವಾಗಿ ಸವೆದಿರುವ ಸುಣ್ಣದ ಕಲ್ಲಿನ ಕಣಗಳು.

ಕೆಲವೊಮ್ಮೆ ಈ ಮರಳಿನಲ್ಲಿ ಹವಳ ಮತ್ತು ಕಪ್ಪೆಚಿಪ್ಪಿನ ತುಣುಕುಗಳು ಮತ್ತು ಕೆಲ ಸಾವಯವ ವಸ್ತುಗಳನ್ನು ಸಹ ಒಳಗೊಂಡಿರುವುದು. ಇನ್ನು ಕೆಲಪ್ರದೇಶಗಳ ಮರಳು ಮ್ಯಾಗ್ನೆಟೈಟ್, ಕ್ಲೋರೈಟ್, ಗ್ಲೌಕೊನೈಟ್ ಅಥವಾ ಜಿಪ್ಸಮ್ ಗಳನ್ನು ಒಳಗೊಂಡಿರುತ್ತದೆ.

ಮ್ಯಾಗ್ನೆಟೈಟ್ ಅಂಶ ಹೆಚ್ಚಾಗಿರುವ ಮರಳು ಗಾಢವರ್ಣ ಅಥವಾ ಕಪ್ಪು ಬಣ್ಣದ್ದಾಗಿದೆ. ಕ್ಲೋರೈಟ್ ಯಾ ಗ್ಲೌಕೊನೈಟ್ ಅನ್ನು ಹೆಚ್ಚಾಗಿ ಹೊಂದಿರುವ ಮರಳು ಸಾಮಾನ್ಯವಾಗಿ ಹಸಿರು ಬಣ್ಣದ್ದಾಗಿರುತ್ತದೆ. ದಕ್ಷಿಣ ಯುರೋಪಿನಲ್ಲಿ ಎಲ್ಲೆಡೆ ಕಾಣುವ ದಟ್ಟ ಹಳದಿ ಬಣ್ಣದ ಮರಳಿನಲ್ಲಿ ಕಬ್ಬಿಣದ ಅಂಶವು ಸೇರಿರುತ್ತದೆ. ಮರಳು ಗಾಳಿ ಮತ್ತು ನೀರಿನ ಮೂಲಕ ಒಯ್ಯಲ್ಪಟ್ಟು ಸಮುದ್ರ ತೀರ, ಮರಳ ದಿಣ್ಣೆ ಮತ್ತು ಮರಳುಗುಂಡಿಗಳ ರೂಪದಲ್ಲಿ ಶೇಖರವಾಗುತ್ತದೆ.

ಮರಳಿನ ಅಧ್ಯಯನ

ಬದಲಾಯಿಸಿ

ಮರಳಿನ ಸೂಕ್ಷ್ಮ ಅಧ್ಯಯನವು ಅದರ ಐತಿಹಾಸಿಕ ಮೂಲನೆಲೆ ಮತ್ತು ಸಾಗಾಣಿಕೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ. ನಿಕಟಪೂರ್ವದಲ್ಲಿ ಗ್ರಾನೈಟ್ ಶಿಲೆಯಿಂದ ರೂಪುಗೊಂಡ ಮರಳು ಮೊನಚಾಗಿಯೂ ಮತ್ತು ಕೋನಾಕೃತಿಯವಾಗಿರುವುದು. ಇಂತಹ ಮರಳನ್ನು ಕಟ್ಟಡ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲದೆ ಜೇಡಿಮಣ್ಣು ಹೆಚ್ಚಾಗಿರುವ ಉದ್ಯಾನಪ್ರದೇಶಗಳಲ್ಲಿ ಅದನ್ನು ಸಡಿಲಿಸುವುದಕ್ಕಾಗಿ ಸಹ ಈ ಮರಳನ್ನು ಉಪಯೋಗಿಸುವರು. ಗಾಳಿ ಯಾ ನೀರಿನ ಮೂಲಕ ಬಹುದೂರ ಸಾಗಿ ಬಂದ ಮರಳು ಸಾಮಾನ್ಯವಾಗಿ ದುಂಡನೆಯ ಆಕಾರದಲ್ಲಿರುವುದು. ಮರುಭೂಮಿಯಲ್ಲಿನ ಮರಳು ಇದಕ್ಕೊಂದು ಉದಾಹರಣೆ. ವಿವಿಧ ರೀತಿಯ ಮರಳನ್ನು ಸಂಗ್ರಹಿಸುವ ಹವ್ಯಾಸಿಗಳಿಗೆ ಆರ್ನಿಯೋಫೈಲ್ಸ್ ಅಥವಾ ಸಾಮ್ಮೋಫೈಲ್ಸ್ ಎಂದು ಹೆಸರು.

 
ಮರಳಿನಲ್ಲಿ ಹುದುಗಿಕೊಳ್ಳುತ್ತಿರುವ ಒಂದು ಸ್ಟಿಂಗ್ ರೇ.
 
ಇರಾಖಿನಲ್ಲಿ ಮರುಭೂಮಿಯಲ್ಲೆದ್ದಿರುವ ಬಿರುಗಾಳಿ.

ಮರಳಿನ ಉಪಯೋಗಗಳು

ಬದಲಾಯಿಸಿ
  • ಮರಳು ಕಾಂಕ್ರೀಟಿನ ಮುಖ್ಯ ಅಂಗ.
  • ಸಣ್ಣ ಹರಳಿನ ಅಚ್ಚಿನ ಮರಳನ್ನು ನೀರಿನಿಂದ ಅಥವಾ ಎಣ್ಣೆಯಿಂದ ತೇವಗೊಳಿಸಿ ಅಚ್ಚುಗಳನ್ನು ತಯಾರಿಸಲು ಉಪಯೋಗಿಸುವರು.
  • ಗಾಜಿನ ತಯಾರಿಕೆಯಲ್ಲಿ ಮರಳು ಪ್ರಧಾನ ಕಚ್ಚಾ ವಸ್ತು.
  • ಇಟ್ಟಿಗೆಯ ತಯಾರಿಕೆಯಲ್ಲಿ ಮಣ್ಣಿನೊಂದಿಗೆ ಸಣ್ಣ ಪ್ರಮಾಣದ ಮರಳನ್ನು ಸಹ ಬಳಸಲಾಗುವುದು.
  • ಮರಳನ್ನು ಪೈಂಟಿನೊಂದಿಗೆ ಮಿಶ್ರಮಾಡಿ ಗೋಡೆ ಮತ್ತು ಸೂರುಗಳಿಗೆ ವಿಶಿಷ್ಟ ರೂಪ ಬರಿಸಲು ಹಾಗೂ ಜಾರುವಿಕೆರಹಿತವಾದ ಮೇಲ್ಮೈ ಪಡೆಯಲು ಉಪಯೋಗಿಸುವರು.
  • ಮರಳು ಮಿಶ್ರಿತ ನೆಲವು ಕಲ್ಲಂಗಡಿ, ಕಡಲೆಕಾಯಿಯಂತಹ ಬೆಳೆಗಳಿಗೆ ಸಹಕಾರಿ ಮತ್ತು ಅವಶ್ಯಕ ಕೂಡ.
  • ನೀರಿನ ಪ್ರವಾಹ ಮತ್ತು ಗುಂಡಿನ ದಾಳಿಯನ್ನು ನಿರೋಧಿಸಲು ಮರಳಿನ ಚೀಲಗಳ ಬಳಕೆ ವ್ಯಾಪಕ.
  • ಕೆಲ ರೈಲ್ವೆ ಗಳು ಹಳಿಯ ಮೇಲೆ ಗಾಲಿಯ ಓಟ ಹೆಚ್ಚು ಸುಗಮವಾಗಿರಲು ಮರಳನ್ನು ಬಳಸುತ್ತವೆ.

ಅವಗುಣಗಳು

ಬದಲಾಯಿಸಿ

ಸಾಮಾನ್ಯವಾಗಿ ಮರಳು ಮಾನವನಿಗೆ ನಿರಪಾಯಕಾರಿಯಾಗಿದ್ದರೂ ಕಲ್ಲು ಗಣಿ ಮತ್ತು ಮರಳು ಉದ್ಯಮವಿರುವಲ್ಲಿ ಸಿಲಿಕಾದ ಸೂಕ್ಷ್ಮಕಣಗಳು ಮಾನವರಲ್ಲಿ ಉಸಿರಾಟದ ತೊಂದರೆಯನ್ನುಂಟುಮಾಡುತ್ತವೆ. ಇಂತಹ ಧೂಳನ್ನು ದೀರ್ಘಕಾಲ ಉಸಿರಾಟದ ಮೂಲಕ ಒಳತೆಗೆದುಕೊಂಡಲ್ಲಿ ಸಿಲಿಕಾಸಿಸ್ ಎಂಬ ಹೆಸರಿನ ಶ್ವಾಸಕೋಶದ ಖಾಯಿಲೆ ಉಂಟಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಮರಳು&oldid=1128448" ಇಂದ ಪಡೆಯಲ್ಪಟ್ಟಿದೆ